[ನಲವತ್ತೆಂಟನೆಯ ಸರ್ಗ]
ಭಾಗಸೂಚನಾ
ಶ್ರೀರಾಮನಿಗೆ ಸೀತೆಯ ಸಂದೇಶ, ಲಕ್ಷ್ಮಣನ ಪ್ರಯಾಣ
ಮೂಲಮ್ - 1
ಲಕ್ಷ್ಮಣಸ್ಯ ವಚಃ ಶ್ರುತ್ವಾ ದಾರುಣಂ ಜನಕಾತ್ಮಜಾ ।
ಪರಂ ವಿಷಾದಮಾಗಮ್ಯ ವೈದೇಹೀ ನಿಪಪಾತ ಹ ॥
ಅನುವಾದ
ಲಕ್ಷ್ಮಣನು ಹೇಳಿದ ದಾರುಣವಾದ ಮಾತನ್ನು ಕೇಳಿ ವೈದೇಹಿಯು ಅತ್ಯಂತ ವಿಷಣ್ಣಳಾಗಿ ನೆಲಕ್ಕೆ ಬಿದ್ದುಬಿಟ್ಟಳು.॥1॥
ಮೂಲಮ್ - 2
ಸಾ ಮುಹೂರ್ತಮಿವಾಸಂಜ್ಞಾ ಬಾಷ್ಪಪರ್ಯಾಕುಲೇಕ್ಷಣಾ ।
ಲಕ್ಷ್ಮಣಂ ದೀನಯಾ ವಾಚಾ ಉವಾಚಜನಕಾತ್ಮಜಾ ॥
ಅನುವಾದ
ಕಂಬನಿ ತುಂಬಿದ ಕಣ್ಣುಗಳಿಂದ ಕೂಡಿದ್ದ ಸೀತಾದೇವಿಯು ಸ್ವಲ್ಪ ಹೊತ್ತಿನ ಬಳಿಕ ಎಚ್ಚರಗೊಂಡು ಲಕ್ಷ್ಮಣನಲ್ಲಿ ದೈನ್ಯ ತುಂಬಿದ ಈ ಮಾತನ್ನು ಹೇಳಿದಳು.॥2॥
ಮೂಲಮ್ - 3
ಮಾಮಿಕೇಯಂ ತನುರ್ನೂನಂ ಸೃಷ್ಟಾ ದುಃಖಾಯ ಲಕ್ಷ್ಮಣ ।
ಧಾತ್ರಾ ಯಸ್ಯಾಸ್ತಥಾ ಮೇಽದ್ಯ ದುಃಖಮೂರ್ತಿಃಪ್ರದೃಶ್ಯತೇ ॥
ಅನುವಾದ
ಲಕ್ಷ್ಮಣ! ನಿಶ್ಚಯವಾಗಿಯೂ ವಿಧಾತನು ನನ್ನ ಶರೀರವನ್ನು ಕೇವಲ ದುಃಖ ಅನುಭವಿಸಲೆಂದೇ ಸೃಷ್ಟಿಸಿರುವನು. ಅದರಿಂದ ಇಂದು ಎಲ್ಲ ದುಃಖಗಳು ಮೂರ್ತಿಮಂತರಾಗಿ ನನಗೆ ಕಂಡು ಬರುತ್ತಿವೆ.॥3॥
ಮೂಲಮ್ - 4
ಕಿಂ ನು ಪಾಪಂ ಕೃತಂ ಪೂರ್ವಂ ಕೋ ವಾ ದಾರೈರ್ವಿಯೋಜಿತಃ ।
ಯಾಹಂಶುದ್ಧಸಮಾಚಾರಾ ತ್ಯಕ್ತಾ ನೃಪತಿನಾ ಸತೀ ॥
ಅನುವಾದ
ನಾನು ಹಿಂದಿನ ಜನ್ಮದಲ್ಲಿ ಯಾವ ಪಾಪ ಮಾಡಿದ್ದೇನೋ, ಅಥವಾ ಯಾರನ್ನು ಪತ್ನಿಯಿಂದ ಬೇರ್ಪಡಿಸಿದ್ದೇನೋ, ನಾನು ಶುದ್ಧ ಆಚರಣವುಳ್ಳವಳಾಗಿದ್ದರೂ ಮಹಾರಾಜರು ನನ್ನನ್ನು ತ್ಯಜಿಸಿಬಿಟ್ಟಿರುವರು.॥4॥
ಮೂಲಮ್ - 5
ಪುರಾಹಮಾಶ್ರಮೇ ವಾಸಂರಾಮಪಾದಾನುವರ್ತಿನೀ ।
ಅನುರುಧ್ಯಾಪಿ ಸೌಮಿತ್ರೇ ದುಃಖೇ ಚಪರಿವರ್ತಿನೀ ॥
ಅನುವಾದ
ಸುಮಿತ್ರಾನಂದನ! ಮೊದಲು ನಾನು ವನವಾಸದ ದುಃಖದಲ್ಲಿ ಬಿದ್ದರೂ ಅದನ್ನು ಸಹಿಸಿ ಶ್ರೀರಾಮನ ಚರಣಗಳನ್ನು ಅನುಸರಿಸುತ್ತಾ ಆಶ್ರಮದಲ್ಲಿ ಇರಲು ಇಚ್ಛಿಸುತ್ತಿದ್ದೆ.॥5॥
ಮೂಲಮ್ - 6
ಸಾ ಕಥಂ ಹ್ಯಾಶ್ರಮೇ ಸೌಮ್ಯ ವತ್ಸ್ಯಾಮಿ ವಿಜನೀಕೃತಾ ।
ಆಖ್ಯಾಸ್ಯಾಮಿ ಚ ಕಸ್ಯಾಹಂ ದುಃಖಂ ದುಃಖಪರಾಯಣಾ ॥
ಅನುವಾದ
ಆದರೆ ಸೌಮ್ಯ! ಈಗ ನಾನು ಒಬ್ಬಂಟಿಗಳಾಗಿ ಪ್ರಿಯಜನರಿಂದ ಅಗಲಿ ಹೇಗೆ ಆಶ್ರಮದಲ್ಲಿ ವಾಸಿಸಲಿ? ನನ್ನ ದುಃಖವನ್ನು ಯಾರಲ್ಲಿ ಹೇಳಿಕೊಳ್ಳಲಿ.॥6॥
ಮೂಲಮ್ - 7
ಕಿಂ ನು ವಕ್ಷ್ಯಾಮಿ ಮುನಿಷು ಕರ್ಮಚಾಸತ್ಕೃತಂ ಪ್ರಭೋ ।
ಕಸ್ಮಿನ್ವಾ ಕಾರಣೇತ್ಯಕ್ತಾ ರಾಘವೇಣ ಮಹಾತ್ಮನಾ ॥
ಅನುವಾದ
ಪ್ರಭೋ! ಮಹಾತ್ಮಾ ರಘುನಾಥನು ಯಾವ ಅಪರಾಧಕ್ಕಾಗಿ ನಿನ್ನನ್ನು ತ್ಯಜಿಸಿರುವನು ಎಂದು ಮುನಿಗಳು ನನ್ನನ್ನು ಕೇಳಿದರೆ ನಾನು ನಿಮ್ಮ ಯಾವ ಅಪರಾಧವನ್ನು ತಿಳಿಸಲೀ.॥7॥
ಮೂಲಮ್ - 8
ನ ಖಲ್ವದ್ಯೈವ ಸೌಮಿತ್ರೇ ಜೀವಿತಂ ಜಾಹ್ನವೀಜಲೇ ।
ತ್ಯಜೇಯಂ ರಾಜವಂಶಸ್ತು ಭರ್ತುರ್ಮೇ ಪರಿಹಾಸ್ಯತೇ ॥
ಅನುವಾದ
ಸುಮಿತ್ರಾ ಕುಮಾರ! ನಾನು ನನ್ನ ಶರೀರವನ್ನು ಗಂಗೆಯಲ್ಲಿ ವಿಸರ್ಜಿಸಿಬಿಡುವೆನು; ಆದರೆ ಈಗ ಹಾಗೆ ಮಾಡಲಾರೆ; ಏಕೆಂದರೆ ಹೀಗೆ ಮಾಡಿದರೆ ನನ್ನ ಪತಿದೇವನ ರಾಜವಂಶ ನಾಶವಾಗಿ ಹೋದೀತು.॥8॥
ಮೂಲಮ್ - 9
ಯಥಾಜ್ಞಂ ಕುರು ಸೌಮಿತ್ರೇ ತ್ಯಜ ಮಾಂ ದುಃಖಭಾಗಿನೀಮ್ ।
ನಿದೇಶೇ ಸ್ಥೀಯತಾಂ ರಾಜ್ಞಃ ಶೃಣು ಚೇದಂ ವಚೋ ಮಮ ॥
ಅನುವಾದ
ಆದರೆ ಸುಮಿತ್ರಾನಂದನ! ಮಹಾ ರಾಜರು ಆಜ್ಞಾಪಿಸಿದಂತೆ ನೀನು ಮಾಡು. ದುಃಖಿತೆಯಾದ ನನ್ನನ್ನು ಇಲ್ಲೇ ಬಿಟ್ಟು ನೀನು ಮಹಾರಾಜರ ಆಜ್ಞಾಪಾಲನೆ ಯಲ್ಲಿ ಸ್ಥಿರವಾಗಿರು ಹಾಗೂ ನನ್ನ ಈ ಮಾತನ್ನು ಕೇಳು.॥9॥
ಮೂಲಮ್ - 10
ಶ್ವಶ್ರೂಣಾಮವಿಶೇಷೇಣ ಪ್ರಾಂಜಲಿಪ್ರಗ್ರಹೇಣ ಚ ।
ಶಿರಸಾ ವಂದ್ಯ ಚರಣೌ ಕುಶಲಂ ಬ್ರೂಹಿಪಾರ್ಥಿವಮ್ ॥
ಅನುವಾದ
ನನ್ನ ಎಲ್ಲ ಅತ್ತೆಯರಿಗೆ ಕೈಮುಗಿದು ನನ್ನ ಪರವಾಗಿ ಅವರ ಚರಣಗಳಲ್ಲಿ ವಂದಿಸು. ಜೊತೆಗೆ ಮಹಾರಾಜರ ಚರಣಗಳಲ್ಲಿ ಮಸ್ತಕ ಚಾಚಿ ನನ್ನ ಕಡೆಯಿಂದ ಅವರ ಕುಶಲ ವಿಚಾರಿಸು.॥10॥
ಮೂಲಮ್ - 11
ಶಿರಸಾಭಿನತೋ ಬ್ರೂಯಾಃ ಸರ್ವಾಸಾಮೇವ ಲಕ್ಷ್ಮಣ ।
ವಕ್ತವ್ಯಶ್ಚಾಪಿ ನೃಪತಿಧರ್ಮೇಷು ಸುಸಮಾಹಿತಃ ॥
ಅನುವಾದ
ಲಕ್ಷ್ಮಣ! ನೀನು ಅಂತಃಪುರದ ಎಲ್ಲ ವಂದನೀಯ ಸ್ತ್ರೀಯರಿಗೆ ನನ್ನ ಕಡೆಯಿಂದ ಪ್ರಣಾಮ ಮಾಡಿ ನನ್ನ ಸಮಾಚಾರ ಅವರಿಗೆ ತಿಳಿಸು ಹಾಗೂ ಸದಾ ಧರ್ಮಪಾಲನೆಯಲ್ಲಿ ತತ್ಪರರಾದ ಮಹಾರಾಜರಿಗೆ ನನ್ನ ಈ ಸಂದೇಶವನ್ನು ತಿಳಿಸು.॥11॥
ಮೂಲಮ್ - 12
ಜಾನಾಸಿ ಚ ಯಥಾ ಶುದ್ಧಾ ಸೀತಾ ತತ್ತ್ವೇನ ರಾಘವ ।
ಭಕ್ತ್ಯಾ ಚ ಪರಯಾ ಯುಕ್ತಾ ಹಿತಾ ಚ ತವ ನಿತ್ಯಶಃ ॥
ಅನುವಾದ
ರಘುನಂದನ! ಸೀತೆಯು ಶುದ್ಧಚರಿತ್ರಾ ಆಗಿರುವುದು ನೀವು ವಾಸ್ತವವಾಗಿ ತಿಳಿದಿರುವರು. ಸರ್ವದಾ ನಿಮ್ಮ ಹಿತದಲ್ಲೇ ತತ್ಪರಳಾಗಿದ್ದು, ನಿಮ್ಮ ಕುರಿತು ಪರಮ ಪ್ರೇಮ ಭಕ್ತಿ ಇರಿಸುವವಳು ನಾನು.॥12॥
ಮೂಲಮ್ - 13½
ಅಹಂ ತ್ಯಕ್ತಾ ತ್ವಯಾ ವೀರ ಅಯಶೋಭೀರುಣಾ ಜನೇ ।
ಯಚ್ಚ ತೇ ವಚನೀಯಂ ಸ್ಯಾದಪವಾದಃ ಸಮುತ್ಥಿತಃ ॥
ಮಯಾ ಚ ಪರಿಹರ್ತವ್ಯಂ ತ್ವಂ ಹಿ ಮೇ ಪರಮಾ ಗತಿಃ ।
ಅನುವಾದ
ವೀರ! ನೀವು ಅಪಯಶಕ್ಕೆ ಹೆದರಿಯೇ ನನ್ನನ್ನು ತ್ಯಜಿಸಿರುವಿರಿ; ಆದ್ದರಿಂದ ಲೋಕದಲ್ಲಿ ಆಗುತ್ತಿರುವ ನಿಮ್ಮ ನಿಂದೆ ಅಥವಾ ನನ್ನ ಕಾರಣದಿಂದಾಗಿ ಹರಡಿದ ಅಪವಾದವನ್ನು ದೂರಗೊಳಿಸುವುದು ನನ್ನ ಕರ್ತವ್ಯವೂ ಆಗಿದೆ; ಏಕೆಂದರೆ ನೀವು ನನಗೆ ಪರಮಾಶ್ರಯರಾಗಿರುವಿರಿ.॥13½॥
ಮೂಲಮ್ - 14
ವಕ್ತವ್ಯಶ್ಚೈವ ನೃಪತಿಧರ್ಮೇಣ ಸುಸಮಾಹಿತಃ ॥
ಮೂಲಮ್ - 15
ಯಥಾ ಭ್ರಾತೃಷು ವರ್ತೇಥಾಸ್ತಥಾ ಪೌರೇಷುನಿತ್ಯದಾ ।
ಪರಮೋ ಹ್ಯೇಷಧರ್ಮಸ್ತೇ ತಸ್ಮಾತ್ಕೀರ್ತಿರನುತ್ತಮಾ ॥
ಅನುವಾದ
ಲಕ್ಷ್ಮಣ! ನೀನು ಮಹಾರಾಜರಲ್ಲಿ ಹೇಳು - ನೀವು ಧರ್ಮದಿಂದ ಎಚ್ಚರವಾಗಿ ಇದ್ದು ಪುರವಾಸಿಗಳೊಂದಿಗೆ ತಮ್ಮ ಸಹೋದರರಂತೆ ವರ್ತಿಸಿರಿ. ಇದೇ ನಿಮ್ಮ ಪರಮ ಧರ್ಮವಾಗಿದ್ದು, ಇದರಿಂದಲೇ ನಿಮ್ಮ ಪರಮೋತ್ತಮ ಯಶದ ಪ್ರಾಪ್ತಿಯಾಗಬಲ್ಲದು.॥14-15॥
ಮೂಲಮ್ - 16
ಯತ್ತು ಪೌರಜನೇ ರಾಜನ್ಧರ್ಮೇಣ ಸಮವಾಪ್ನುಯಾತ್ ।
ಅಹಂ ತುನಾನುಶೋಚಾಮಿ ಸ್ವಶರೀರಂ ನರರ್ಷಭ ॥
ಅನುವಾದ
ರಾಜನ್! ಪುರವಾಸಿಗಳ ಕುರಿತು ಧರ್ಮಾನುಕೂಲ ಆಚರಣ ಮಾಡುವುದರಿಂದ ಪ್ರಾಪ್ತವಾಗುವ ಪುಣ್ಯವೇ ನಿಮಗೆ ಉತ್ತಮ ಧರ್ಮ ಮತ್ತು ಕೀರ್ತಿಯಾಗಿದೆ. ಪುರುಷೋತ್ತಮ! ನನಗೆ ನನ್ನ ಶರೀರದ ಬಗ್ಗೆ ಕೊಂಚವೂ ಚಿಂತೆ ಇಲ್ಲ.॥16॥
ಮೂಲಮ್ - 17½
ಯಥಾಪವಾದಂ ಪೌರಾಣಾಂ ತಥೈವ ರಘುನಂದನ ।
ಪತಿರ್ಹಿ ದೇವತಾ ನಾರ್ಯಾಃ ಪತಿರ್ಬಂಧುಃ ಪತಿರ್ಗುರುಃ ॥
ಪ್ರಾಣೈರಪಿ ಪ್ರಿಯಂ ತಸ್ಮಾದ್ಭರ್ತುಃ ಕಾರ್ಯಂ ವಿಶೇಷತಃ ।
ಅನುವಾದ
ರಘುನಂದನ! ಪುರವಾಸಿಗಳು ಅಪವಾದಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ನೀವು ವ್ಯವಹರಿಸಿರಿ. ಸ್ತ್ರೀಯಳಿಗಾಗಿ ಪತಿಯೇ ದೇವತೆ, ಬಂಧು, ಗುರು ಆಗಿರುವನು ಇದಕ್ಕಾಗಿ ಪ್ರಾಣ ಪಣವಾಗಿಟ್ಟುಕೊಂಡು ನಾನು ವಿಶೇಷವಾಗಿ ಪತಿಯ ಪ್ರಿಯವನ್ನೇ ಮಾಡಲು ಬಯಸುತ್ತೇನೆ.॥17½॥
ಮೂಲಮ್ - 18½
ಇತಿ ಮದ್ವಚನಾದ್ರಾಮೋ ವಕ್ತವ್ಯೋ ಮಮ ಸಂಗ್ರಹಃ ॥
ನಿರೀಕ್ಷ್ಯ ಮಾದ್ಯ ಗಚ್ಛ ತ್ವಮೃತುಕಾಲಾತಿವರ್ತಿನೀಮ್ ।
ಅನುವಾದ
ನನ್ನ ಪರವಾಗಿ ಎಲ್ಲ ಮಾತುಗಳನ್ನು ನೀನು ಶ್ರೀರಾಮನಿಗೆ ತಿಳಿಸು ಹಾಗೂ ಇಂದು ನೀನೂ ನನ್ನನ್ನು ನೋಡಿಕೊಂಡು ಹೋಗು. ನಾನೀಗ ಋತುಕಾಲವನ್ನು ದಾಟಿ ಗರ್ಭಿಣಿಯಾಗಿರುವೆನು.॥18½॥
ಮೂಲಮ್ - 19½
ಏವಂ ಬ್ರುವತ್ಯಾಂ ಸೀತಾಯಾಂ ಲಕ್ಷ್ಮಣೋ ದೀನಚೇತನಃ ॥
ಶಿರಸಾ ವಂದ್ಯ ಧರಣೀಂ ವ್ಯಾಹರ್ತುಂ ನ ಶಶಾಕ ಹ ।
ಅನುವಾದ
ಸೀತೆಯು ಹೀಗೆ ಹೇಳಿದಾಗ ಲಕ್ಷ್ಮಣನ ಮನಸ್ಸಿಗೆ ಬಹಳ ದುಃಖವಾಯಿತು. ಅವನು ದಂಡವತ್ ಸೀತೆಗೆ ನಮಸ್ಕರಿಸಿದನು. ಆಗ ಅವನ ಬಾಯಿಯಿಂದ ಯಾವ ಮಾತೂ ಹೊರಡಲಿಲ್ಲ.॥19½॥
ಮೂಲಮ್ - 20½
ಪ್ರದಕ್ಷಿಣಂ ಚ ತಾಂ ಕೃತ್ವಾ ರುದನ್ನೇವ ಮಹಾಸ್ವನಃ ॥
ಧ್ಯಾತ್ವಾ ಮುಹೂರ್ತಂ ತಾಮಾಹ ಕಿಂ ಮಾಂ ವಕ್ಷ್ಯಸಿ ಶೋಭನೇ ।
ಅನುವಾದ
ಅವನು ಗಟ್ಟಿಯಾಗಿ ಅಳುತ್ತಾ ಸೀತಾಮಾತೆಗೆ ಪ್ರದಕ್ಷಿಣೆ ಮಾಡಿ ಎರಡು ಗಳಿಗೆ ವಿಚಾರ ಮಾಡಿ ಹೇಳಿದನು - ಶೋಭನೇ! ನೀವು ಇದನ್ನು ನನ್ನಲ್ಲಿ ಏಕೆ ಹೇಳುತ್ತಿರುವಿ.॥20½॥
ಮೂಲಮ್ - 21½
ದೃಷ್ಟಪೂರ್ವಂ ನ ತೇ ರೂಪಂ ಪಾದೌ ದೃಷ್ಟೌ ತವಾನಘೇ ॥
ಕಥಮತ್ರ ಹಿ ಪಶ್ಯಾಮಿ ರಾಮೇಣ ರಹಿತಾಂ ವನೇ ।
ಅನುವಾದ
ಪುಣ್ಯಾತ್ಮ ಪತಿವ್ರತೆಯೇ! ನಾನು ಮೊದಲೂ ನಿಮ್ಮ ಸಂಪೂರ್ಣರೂಪ ಎಂದೂ ನೋಡಿಲ್ಲ. ಕೇವಲ ನಿಮ್ಮ ಚರಣಗಳನ್ನೇ ದರ್ಶಿಸಿದ್ದೆ. ಮತ್ತೆ ಇಂದು ವನದೊಳಗೆ ಶ್ರೀರಾಮನ ಅನುಪಸ್ಥಿತಿಯಲ್ಲಿ ನಿಮ್ಮ ಕಡೆ ಹೇಗೆ ನೋಡಲಿ.॥21½॥
ಮೂಲಮ್ - 22½
ಇತ್ಯುಕ್ತ್ವಾ ತಾಂ ನಮಸ್ಕೃತ್ಯ ಪುನರ್ನಾವಮುಪಾರುಹತ್ ॥
ಆರುರೋಹ ಪುನರ್ನಾವಂ ನಾವಿಕಂ ಚಾಭ್ಯಚೋದಯತ್ ।
ಅನುವಾದ
ಹೀಗೆ ಹೇಳಿ ಸೀತೆಗೆ ಪುನಃ ನಮಸ್ಕಾರ ಮಾಡಿದನು ಹಾಗೂ ದೋಣಿಯನ್ನು ಹತ್ತಿದನು. ದೋಣಿಯನ್ನೇರಿ ಬೆಸ್ತನಿಗೆ ನಡೆಸುವಂತೆ ಹೇಳಿದನು.॥22½॥
ಮೂಲಮ್ - 23½
ಸ ಗತ್ವಾ ಚೋತ್ತರಂ ತೀರಂ ಶೋಕಭಾರಸಮನ್ವಿತಃ ॥
ಸಮ್ಮೂಢ ಇವ ದುಃಖೇನ ರಥಮಧ್ಯಾರುಹದ್ದ್ರುತಮ್ ।
ಅನುವಾದ
ಶೋಕಭಾರದಿಂದ ಕುಗ್ಗಿದ ಲಕ್ಷ್ಮಣನು ಗಂಗೆಯನ್ನು ದಾಟಿ ದುಃಖದಿಂದಾಗಿ ನಿಶ್ಚೇಷ್ಟಿತನಂತಾಗಿ, ಅದೇ ಸ್ಥಿತಿಯಲ್ಲಿ ಅವಸರವಾಗಿ ರಥವನ್ನೇರಿದನು.॥23½॥
ಮೂಲಮ್ - 24½
ಮುಹುರ್ಮುಹುಃ ಪರಾವೃತ್ಯದೃಷ್ಟ್ವಾ ಸೀತಾಮನಾಥವತ್ ॥
ಚೇಷ್ಟಂತೀಂಪರತೀರಸ್ಥಾಂ ಲಕ್ಷ್ಮಣಃ ಪ್ರಯಯಾವಥ ।
ಅನುವಾದ
ಸೀತೆಯು ಗಂಗಾತೀರದಲ್ಲಿ ಅನಾಥಳಂತೆ ಅಳುತ್ತಾ ನೆಲದಲ್ಲಿ ಮಲಗಿದ್ದಳು. ಲಕ್ಷ್ಮಣನು ಪದೇ-ಪದೇ ಹಿಂತಿರುಗಿ ನೋಡುತ್ತಾ ಹೊರಟುಹೋದನು.॥24½॥
ಮೂಲಮ್ - 25
ದೂರಸ್ಥಂ ರಥಮಾಲೋಕ್ಯ ಲಕ್ಷ್ಮಣಂ ಚ ಮುಹುರ್ಮುಹುಃ ।
ನಿರೀಕ್ಷ್ಯಮಾಣಾಂ ತೂದ್ವಿಗ್ನಾಂ ಸೀತಾಂ ಶೋಕಃ ಸಮಾವಿಶತ್ ॥
ಅನುವಾದ
ರಥ ಮತ್ತು ಲಕ್ಷ್ಮಣ ಕ್ರಮವಾಗಿ ದೂರವಾಗುತ್ತಿರುವಂತೆ, ಸೀತೆಯು ಅವನ ಕಡೆಗೆ ಮತ್ತೆ-ಮತ್ತೆ ನೋಡುತ್ತಾ ಉದ್ವಿಗ್ನಳಾದಳು. ಅವನು ಕಣ್ಣಿಗೆ ಕಾಣದಾದಾಗ ಗಾಢಶೋಕಕ್ಕೆ ಒಳಗಾದಳು.॥25॥
ಮೂಲಮ್ - 26
ಸಾ ದುಃಖಭಾರಾವನತಾ ಯಶಸ್ವಿನೀ
ಯಶೋಧರಾ ನಾಥಮಪಶ್ಯತೀಸತೀ ।
ರುರೋದ ಸಾ ಬರ್ಹಿಣನಾದಿತೇ ವನೇ
ಮಹಾಸ್ವನಂ ದುಃಖಪರಾಯಣಾ ಸತೀ ॥
ಅನುವಾದ
ಈಗ ಆಕೆಗೆ ಯಾರೂ ರಕ್ಷಕರು ಕಾಣುತ್ತಿರಲಿಲ್ಲ. ಆದ್ದರಿಂದ ಯಶಸ್ವಿನೀ ಸತೀ ಸೀತೆಯು ದುಃಖಭಾರದಿಂದ ಅದುಮಲ್ಪಟ್ಟು ಚಿಂತಾಮಗ್ನಳಾಗಿ ಮಯೂರ ಕೂಜನದಿಂದ ಪ್ರತಿಧ್ವನಿತವಾದ ಆ ವನದಲ್ಲಿ ಜೋರಾಗಿ ಅಳತೊಡಗಿದಳು.॥26॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥48॥