[ನಲವತ್ತೇಳನೆಯ ಸರ್ಗ]
ಭಾಗಸೂಚನಾ
ಲಕ್ಷ್ಮಣನು ಸೀತಾದೇವಿಯನ್ನು ಗಂಗಾನದಿಯನ್ನು ದಾಟಿಸಿ, ಶ್ರೀರಾಮನ ಆಜ್ಞೆಯನ್ನು ಮೈಥಿಲಿಗೆ ತಿಳಿಸಿದುದು
ಮೂಲಮ್ - 1
ಅಥ ನಾವಂ ಸುವಿಸ್ತೀರ್ಣಾಂ ನೈಷಾದೀಂ ರಾಘವಾನುಜಃ ।
ಆರುರೋಹ ಸಮಾಯುಕ್ತಾಂ ಪೂರ್ವಮಾರೋಪ್ಯ ಮೈಥಿಲೀಮ್ ॥
ಅನುವಾದ
ಬೆಸ್ತರ ಆ ದೋಣಿಯು ವಿಸ್ತೃತ ಮತ್ತು ಸುಸಜ್ಜಿತವಾಗಿತ್ತು. ಲಕ್ಷ್ಮಣನು ಮೊದಲು ಸೀತೆಯನ್ನು ಅದರಲ್ಲಿ ಹತ್ತಿಸಿ, ಮತ್ತೆ ತಾನೂ ಹತ್ತಿದನು.॥1॥
ಮೂಲಮ್ - 2
ಸುಮಂತ್ರಂ ಚೈವ ಸರಥಂ ಸ್ಥೀಯತಾಮಿತಿ ಲಕ್ಷ್ಮಣಃ ।
ಉವಾಚ ಶೋಕಸಂತಪ್ತಃ ಪ್ರಯಾಹೀತಿ ಚ ನಾವಿಕಮ್ ॥
ಅನುವಾದ
ಅವನು ರಥಸಹಿತ ಸುಮಂತ್ರನಿಗೆ ಅಲ್ಲೇ ನಿಲ್ಲುವಂತೆ ಹೇಳಿ, ಶೋಕ ಸಂತಪ್ತ ನಾಗಿ ಅಂಬಿಗನಲ್ಲಿ ನಡಿ ಎಂದು ಹೇಳಿದನು.॥2॥
ಮೂಲಮ್ - 3
ತತಸ್ತೀರಮುಪಾಗಮ್ಯ ಭಾಗೀರಥ್ಯಾಃ ಸ ಲಕ್ಷ್ಮಣಃ ।
ಉವಾಚ ಮೈಥಿಲೀಂ ವಾಕ್ಯಂಪ್ರಾಂಜಲಿರ್ಬಾಷ್ಪಸಂವೃತಃ ॥
ಅನುವಾದ
ಬಳಿಕ ಭಾಗೀರಥಿಯ ಆಚೆಯ ದಡಕ್ಕೆ ಹೋದಾಗ ಲಕ್ಷ್ಮಣನ ಕಣ್ಣುಗಳಲ್ಲಿ ಕಂಬನಿ ತುಂಬಿಬಂತು. ಅವನು ಮಿಥಿಲೇಶಕುಮಾರಿ ಸೀತೆಗೆ ಕೈಮುಗಿದುಕೊಂಡು ಹೇಳಿದನು.॥3॥
ಮೂಲಮ್ - 4
ಹೃದ್ಗತಂ ಮೇ ಮಹಚ್ಛಲ್ಯಂ ಯಸ್ಮಾದಾರ್ಯೇಣ ಧೀಮತಾ ।
ಅಸ್ಮನ್ನಿಮಿತ್ತೇ ವೈದೇಹಿ ಲೋಕಸ್ಯ ವಚನೀಕೃತಃ ॥
ಅನುವಾದ
ವಿದೇಹನಂದಿನಿ! ಇಂದು ರಘುನಾಥನು ಧೀಮಂತನಾಗಿದ್ದರೂ ಲೋಕದಲ್ಲಿ ನನ್ನ ಬಹಳ ನಿಂದೆಯಾಗುವ ಕಾರ್ಯವನ್ನು ನನಗೆ ಒಪ್ಪಿಸಿರುವನಲ್ಲ ಎಂಬ ಶೂಲವು ನನ್ನ ಮನಸ್ಸಿಗೆ ಬಹಳ ನಾಟುತ್ತಿದೆ.॥4॥
ಮೂಲಮ್ - 5
ಶ್ರೇಯೋ ಹಿ ಮರಣಂ ಮೇದ್ಯ ಮೃತ್ಯುರ್ವಾ ಯತ್ಪರಂ ಭವೇತ್ ।
ನ ಚಾಸ್ಮಿನ್ನೀದೃಶೇ ಕಾರ್ಯೇ ನಿಯೋಜ್ಯೋ ಲೋಕನಿಂದಿತೇ ॥
ಅನುವಾದ
ನನಗೆ ಈಗ ಮರಣವೇ ಶ್ರೇಯಸ್ಕರವಾದೀತು. ಮೃತ್ಯು ವಿಗಿಂತಲೂ ಹೆಚ್ಚಿನದು ಬೇರೆ ಯಾವುದಾದರೂ ಇದ್ದರೆ ಅದು ನನಗೆ ಶ್ರೇಯಸ್ಕರವೇ. ಆದರೆ ಅಣ್ಣನು ಈ ಲೋಕನಿಂದಿತ ಕಾರ್ಯದಲ್ಲಿ ನನ್ನನ್ನು ನೇಮಿಸಬಾರದಿತ್ತು.॥5॥
ಮೂಲಮ್ - 6
ಪ್ರಸೀದ ಚ ನ ಮೇ ಪಾಪಂ ಕರ್ತುಮರ್ಹಸಿ ಶೋಭನೇ ।
ಇತ್ಯಂಜಲಿಕೃತೋ ಭೂವೌ ನಿಪಪಾತ ಸ ಲಕ್ಷ್ಮಣಃ ॥
ಅನುವಾದ
ದೇವೀ ಪ್ರಸನ್ನಳಾಗು. ನನ್ನಲ್ಲಿ ಯಾವ ದೋಷವನ್ನೂ ಎಣಿಸಬೇಡ. ಎಂದು ಹೇಳಿ ಕೈಮುಗಿದುಕೊಂಡು ಲಕ್ಷ್ಮಣನು ನೆಲಕ್ಕೆ ಕುಸಿದುಬಿದ್ದನು.॥6॥
ಮೂಲಮ್ - 7
ರುದಂತಂ ಪ್ರಾಂಜಲಿಂ ದೃಷ್ಟ್ವಾ ಕಾಂಕ್ಷಂತಂ ಮೃತ್ಯುಮಾತ್ಮನಃ ।
ಮೈಥಿಲೀಭೃಶಸಂವಿಗ್ನಾ ಲಕ್ಷ್ಮಣಂ ವಾಕ್ಯಮಬ್ರವೀತ್ ॥
ಅನುವಾದ
ಲಕ್ಷ್ಮಣನು ಕೈಮುಗಿದುಕೊಂಡು ಅಳುತ್ತಿರುವನು ಮತ್ತು ತನ್ನ ಮೃತ್ಯುವನ್ನು ಬಯಸುತ್ತಿರುವನು. ಇದನ್ನು ನೋಡಿ ಮಿಥಿಲೇಶಕುಮಾರಿ ಸೀತೆಯು ಅತ್ಯಂತ ಉದ್ವಿಗ್ನಳಾಗಿ ಲಕ್ಷ್ಮಣನಲ್ಲಿ ಕೇಳಿದಳ.॥7॥
ಮೂಲಮ್ - 8
ಕಿಮಿದಂ ನಾವಗಚ್ಛಾಮಿಬ್ರೂಹಿ ತತ್ತ್ವೇನ ಲಕ್ಷ್ಮಣ ।
ಪಶ್ಯಾಮಿ ತ್ವಾಂ ನ ಚ ಸ್ವಸ್ಥಮಪಿ ಕ್ಷೇಮಂ ಮಹೀಪತೇಃ ॥
ಅನುವಾದ
ಲಕ್ಷ್ಮಣ! ನೀನು ಹೇಳುವುದು ಒಂದೂ ನನಗೆ ಅರ್ಥವಾಗುತ್ತಿಲ್ಲ. ಯಥಾವತ್ತಾಗಿ ತಿಳಿಸಿ. ಮಹಾರಾಜರು ಕ್ಷೇಮದಿಂದ ಇರುವರಲ್ಲ? ನಿನ್ನ ಮನಸ್ಸು ಸ್ವಸ್ಥವಾಗಿಲ್ಲ ಎಂದು ನಾನು ನೋಡುತ್ತಿದ್ದೇನ.॥8॥
ಮೂಲಮ್ - 9
ಶಾಪಿತೋಽಸಿ ನರೇಂದ್ರೇಣ ಯತ್ತ್ವಂ ಸಂತಾಪಮಾಗತಃ ।
ತದ್ಬ್ರೂಯಾಃ ಸಂನಿಧೌ ಮಹ್ಯಮಹಮಾಜ್ಞಾಪಯಾಮಿ ತೇ ॥
ಅನುವಾದ
ನಾನು ಮಹಾರಾಜರ ಆಣೆಯಿಟ್ಟು ಕೇಳುತ್ತಿದ್ದೇನೆ - ನಿನಗೆ ಇಷ್ಟು ಸಂತಾಪವಾಗುವ ಆ ಮಾತನ್ನು ನನ್ನ ಬಳಿ ನಿಜವಾಗಿ ತಿಳಿಸು. ಇದಕ್ಕಾಗಿ ನಾನು ನಿನಗೆ ಆಜ್ಞಾಪಿಸುತ್ತಿದ್ದೇನೆ.॥9॥
ಮೂಲಮ್ - 10
ವೈದೇಹ್ಯಾ ಚೋದ್ಯಮಾನಸ್ತು ಲಕ್ಷ್ಮಣೋ ದೀನಚೇತನಃ ।
ಅವಾಙ್ಮುಖೋ ಬಾಷ್ಪಗಲೋ ವಾಕ್ಯಮೇತದುವಾಚ ಹ ॥
ಅನುವಾದ
ವಿದೇಹ ನಂದಿನಿಯು ಹೀಗೆ ಪ್ರೇರೇಪಿಸಿದಾಗ ಲಕ್ಷ್ಮಣನು ದುಃಖಿತನಾಗಿ ತಲೆತಗ್ಗಿಸಿಕೊಂಡು, ಅಶ್ರುಗದ್ಗದನಾಗಿ ಈ ಪ್ರಕಾರ ಹೇಳಿದನು.॥10॥
ಮೂಲಮ್ - 11½
ಶ್ರುತ್ವಾ ಪರಿಷದೋ ಮಧ್ಯೇ ಹ್ಯಪವಾದಂ ಸುದಾರುಣಮ್ ।
ಪುರೇ ಜನಪದೇ ಚೈವ ತ್ವತ್ಕೃತೇ ಜನಕಾತ್ಮಜೇ ॥
ರಾಮಃ ಸಂತಪ್ತಹೃದಯೋ ಮಾಂ ನಿವೇದ್ಯ ಗೃಹಂ ಗತಃ ।
ಅನುವಾದ
ಜನಕನಂದಿನಿ! ನಗರ ಮತ್ತು ದೇಶದಲ್ಲಿ ನಿನ್ನ ವಿಷಯದಲ್ಲಿ ಹರಡಿರುವ ಅತ್ಯಂತ ಭಯಂಕರ ಅಪವಾದವನ್ನು ರಾಜಸಭೆಯಲ್ಲಿ ಕೇಳಿ ಶ್ರೀರಾಮನ ಹೃದಯ ಸಂತಪ್ತವಾಗಿ, ನನ್ನಲ್ಲಿ ಎಲ್ಲವನ್ನು ತಿಳಿಸಿ ಭವನದೊಳಗೆ ನಡೆದನು.॥11½॥
ಮೂಲಮ್ - 12½
ನ ತಾನಿವಚನೀಯಾನಿ ಮಯಾ ದೇವಿ ತವಾಗ್ರತಃ ॥
ಯಾನಿ ರಾಜ್ಞಾ ಹೃದಿ ನ್ಯಸ್ತಾನ್ಯಮರ್ಷಾತ್ಪೃಷ್ಠತಃ ಕೃತಃ ।
ಅನುವಾದ
ದೇವಿ! ರಾಜಾರಾಮನು ಯಾವ ಅಪವಾದ ವಚನಗಳ ದುಃಖವನ್ನು ಸಹಿಸದೆ ತನ್ನ ಹೃದಯದಲ್ಲಿ ಇರಿಸಿಕೊಂಡಿರುವನೋ ಅದನ್ನು ನಾನು ನಿಮ್ಮ ಮುಂದೆ ತಿಳಿಸಲಾರೆ. ಅದಕ್ಕಾಗಿ ನಾನು ಅದರ ಚರ್ಚೆ ಬಿಟ್ಟುಬಿಟ್ಟಿರುವೆನು.॥12½॥
ಮೂಲಮ್ - 13
ಸಾ ತ್ವಂ ತ್ಯಕ್ತಾ ನೃಪತಿನಾ ನಿರ್ದೋಷಾ ಮಮ ಸಂನಿಧೌ ॥
ಮೂಲಮ್ - 14½
ಪೌರಾಪವಾದಭೀತೇನ ಗ್ರಾಹ್ಯಂ ದೇವಿ ನ ತೇಽನ್ಯಥಾ ।
ಆಶ್ರಮಾಂತೇಷು ಚ ಮಯಾ ತ್ಯಕ್ತವ್ಯಾ ತ್ವಂ ಭವಿಷ್ಯಸಿ ॥
ರಾಜ್ಞಃ ಶಾಸನಮಾದಾಯ ತಥೈವ ಕಿಲ ದೌರ್ಹೃದಮ್ ।
ಅನುವಾದ
ನೀವು ನನ್ನ ಮುಂದೆ ನಿರ್ದೋಷಳೆಂದು ಸಿದ್ಧವಾಗಿತ್ತು. ಆದರೂ ಮಹಾರಾಜರು ಲೋಕಾಪವಾದಕ್ಕೆ ಹೆದರಿ ನಿಮ್ಮನ್ನು ತ್ಯಜಿಸಿರುವರು. ದೇವಿ! ನೀವು ಅನ್ಯಥಾ ಏನನ್ನು ಭಾವಿಸಬೇಡಿ. ಈಗ ಮಹಾರಾಜರ ಆಜ್ಞೆಯನ್ನು ಮನ್ನಿಸಿ, ನಿಮ್ಮ ಇಚ್ಛೆಯೂ ಹೀಗೆ ಎಂದು ತಿಳಿದು ನಾನು ಆಶ್ರಮಗಳ ಬಳಿಗೆ ಕರೆದುಕೊಂಡು ಹೋಗಿ ನಿಮ್ಮನ್ನು ಅಲ್ಲೇ ಬಿಟ್ಟುಬಿಡುವೆನು.॥13-14½॥
ಮೂಲಮ್ - 15½
ತದೇತಜ್ಜಾಹ್ನವೀತೀರೇ ಬ್ರಹ್ಮರ್ಷೀಣಾಂ ತಪೋವನಮ್ ॥
ಪುಣ್ಯಂ ಚ ರಮಣೀಯಂ ಚ ಮಾ ವಿಷಾದಂ ಕೃಥಾಃಶುಭೇ ।
ಅನುವಾದ
ಶುಭಾಂಗಿಯೇ! ಇದೋ ಗಂಗೆಯ ತೀರದಲ್ಲಿರುವ ಬ್ರಹ್ಮರ್ಷಿಗಳ ಪವಿತ್ರ ಹಾಗೂ ರಮಣೀಯ ತಪೋವನವಾಗಿದೆ. ನೀವು ವಿಷಾದಪಡ ಬೇಡಿರಿ.॥15½॥
ಮೂಲಮ್ - 16
ರಾಜ್ಞೋ ದಶರಥಸ್ಯೈವ ಪಿತುರ್ಮೇ ಮುನಿಪುಂಗವಃ ॥
ಮೂಲಮ್ - 17
ಸಖಾ ಪರಮಕೋ ವಿಪ್ರೋ ವಾಲ್ಮೀಕಿಃ ಸುಮಹಾಯಶಾಃ ।
ಪಾದಚ್ಛಾಯಾಮುಪಾಗಮ್ಯ ಸುಖಮಸ್ಯ ಮಹಾತ್ಮನಃ ।
ಉಪವಾಸಪರೈಕಾಗ್ರಾ ವಸ ತ್ವಂ ಜನಕಾತ್ಮಜೇ ॥
ಅನುವಾದ
ಇಲ್ಲಿ ನಮ್ಮ ತಂದೆ ದಶರಥರಾಜರ ಘನಿಷ್ಠ ಮಿತ್ರರಾದ ಮಹಾಯಶಸ್ವೀ ಬ್ರಹ್ಮರ್ಷಿ ವಾಲ್ಮೀಕಿಗಳು ಇರುತ್ತಾರೆ. ನೀವು ಆ ಮಹಾತ್ಮರ ಚರಣಛಾಯೆಯನ್ನು ಆಶ್ರಯಿಸಿ ಇಲ್ಲಿ ಸುಖವಾಗಿ ಇರಿ. ಜನಕಾತ್ಮಜೆ! ನೀವು ಇಲ್ಲಿ ಉಪವಾಸ ಪರಾಯಣ ಹಾಗೂ ಏಕಾಗ್ರಚಿತ್ತರಾಗಿ ವಾಸಿಸಿರಿ.॥16-17॥
ಮೂಲಮ್ - 18
ಪತಿವ್ರತಾತ್ವಮಾಸ್ಥಾಯ ರಾಮಂ ಕೃತ್ವಾ ಸದಾ ಹೃದಿ ।
ಶ್ರೇಯಸ್ತೇ ಪರಮಂ ದೇವಿ ತಥಾ ಕೃತ್ವಾ ಭವಿಷ್ಯತಿ ॥
ಅನುವಾದ
ದೇವಿ! ನೀವು ಸದಾ ಶ್ರೀರಘುನಾಥನನ್ನು ಹೃದಯದಲ್ಲಿ ಇಟ್ಟುಕೊಂಡು ಪಾತಿವ್ರತ್ಯವನ್ನು ಅವಲಂಬಿಸಿರಿ. ಇದರಿಂದ ನಿಮ್ಮ ಪರಮ ಶ್ರೇಯಸ್ಸಾಗಬಹುದು.॥18॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೇಳನೆಯ ಸರ್ಗ ಪೂರ್ಣವಾಯಿತು. ॥47॥