[ನಲವತ್ತಾರನೆಯ ಸರ್ಗ]
ಭಾಗಸೂಚನಾ
ಲಕ್ಷ್ಮಣನು ಸೀತೆಯನ್ನು ಗಂಗಾತೀರಕ್ಕೆ ಕರೆದೊಯ್ದುದು
ಮೂಲಮ್ - 1
ತತೋ ರಜನ್ಯಾಂ ವ್ಯಷ್ಟಾಯಾಂ ಲಕ್ಷ್ಮಣೋ ದೀನಚೇತನಃ ।
ಸುಮಂತ್ರಮಬ್ರವೀದ್ವಾಕ್ಯಂ ಮುಖೇನ ಪರಿಶುಷ್ಯತಾ ॥
ಅನುವಾದ
ಅನಂತರ ರಾತ್ರೆ ಕಳೆದ್ಢು ಬೆಳಗಾದಾಗ ಲಕ್ಷ್ಮಣನು ಮನಸ್ಸಿನಲ್ಲಿ ದುಃಖಿತನಾಗಿ ಬಾಡಿದ ಮುಖದಿಂದ ಸುಮಂತ್ರ ನಲ್ಲಿ ಹೇಳಿದನು.॥1॥
ಮೂಲಮ್ - 2
ಸಾರಥೇ ತುರಗಾನ್ ಶೀಘ್ರಾನ್ಯೋಜಯಸ್ವ ರಥೋತ್ತಮೇ ।
ಸ್ವಾಸ್ತೀರ್ಣಂ ರಾಜವಚನಾತ್ಸೀತಾಯಾಶ್ಚಾಸನಂ ಶುಭಮ್ ॥
ಮೂಲಮ್ - 3
ಸೀತಾ ಹಿ ರಾಜವಚನಾದಾಶ್ರಮಂ ಪುಣ್ಯಕರ್ಮಣಾಮ್ ।
ಮಯಾ ನೇಯಾ ಮಹರ್ಷೀಣಾಂ ಶೀಘ್ರಮಾನೀಯತಾಂ ರಥಃ ॥
ಅನುವಾದ
ಸಾರಥಿಯೇ! ಒಂದು ಉತ್ತಮ ರಥದಲ್ಲಿ ಶೀಘ್ರಗಾಮಿ ಕುದುರೆಗಳನ್ನು ಹೂಡಿ, ಆ ರಥದಲ್ಲಿ ಸೀತೆಗಾಗಿ ಸುಂದರ ಆಸನವನ್ನು ಇರಿಸು. ನಾನು ಮಹಾರಾಜರ ಆಜ್ಞೆಯಂತೆ ಸೀತಾದೇವಿಯನ್ನು ಪುಣ್ಯಕರ್ಮಾ ಮಹರ್ಷಿಗಳ ಆಶ್ರಮಕ್ಕೆ ಕರೆದೊಯ್ಯಬೇಕಾಗಿದೆ. ನೀನು ಬೇಗನೇ ರಥವನ್ನು ತೆಗೆದುಕೊಂಡು ಬಾ.॥2-3॥
ಮೂಲಮ್ - 4
ಸುಮಂತ್ರಸ್ತು ತಥೇತ್ಯುಕ್ತ್ವಾ ಯುಕ್ತಂ ಪರಮವಾಜಿಭಿಃ ।
ರಥಂ ಸುರುಚಿರಪ್ರಖ್ಯಂ ಸ್ವಾಸ್ತೀರ್ಣಂಸುಖಶಯ್ಯಯಾ ॥
ಅನುವಾದ
ಆಗ ಸುಮಂತ್ರನು ಹಾಗೆಯೇ ಆಗಲೀ ಎಂದು ಹೇಳಿ ಕೂಡಲೇ ಉತ್ತಮ ಕುದುರೆಗಳನ್ನು ಹೂಡಿದ ಒಂದು ಸುಂದರ ರಥವನ್ನು ತಂದನು. ಅದರಲ್ಲಿ ಸುಖಮಯ ಶಯ್ಯೆಯಿಂದ ಕೂಡಿದ್ದು ಸುಂದರ ಮೇಲ್ಹೊದಿಕೆ ಹಾಸಿತ್ತು.॥4॥
ಮೂಲಮ್ - 5
ಆನೀಯೋವಾಚ ಸೌಮಿತ್ರಿಂ ಮಿತ್ರಾಣಾಂ ಮಾನವರ್ಧನಮ್ ।
ರಥೋಽಯಂ ಸಮನುಪ್ರಾಪ್ತೋ ಯತ್ಕಾರ್ಯಂ ಕ್ರಿಯತಾಂ ಪ್ರಭೋ ॥
ಅನುವಾದ
ಅದನ್ನು ತಂದು ಮಿತ್ರರ ಮಾನವನ್ನು ಹೆಚ್ಚಿಸುವ ಸುಮಿತ್ರಾಕುಮಾರನಲ್ಲಿ ಹೇಳಿದನು - ಪ್ರಭೋ! ಇದೋ ರಥ ಬಂದಿದೆ. ಮುಂದಿನ ಕಾರ್ಯವನ್ನು ಮಾಡು.॥5॥
ಮೂಲಮ್ - 6
ಏವಮುಕ್ತಃ ಸುಮಂತ್ರೇಣ ರಾಜವೇಶ್ಮನಿ ಲಕ್ಷ್ಮಣಃ ।
ಪ್ರವಿಶ್ಯ ಸೀತಾಮಾಸಾದ್ಯ ವ್ಯಾಜಹಾರ ನರರ್ಷಭಃ ॥
ಅನುವಾದ
ಸುಮಂತ್ರನು ಹೀಗೆ ಹೇಳಿದಾಗ ನರಶ್ರೇಷ್ಠ ಲಕ್ಷ್ಮಣನು ಅರಮನೆಯೊಳಗೆ ಹೋಗಿ ಸೀತೆಯ ಬಳಿಯಲ್ಲಿ ಇಂತೆಂದನು-॥6॥
ಮೂಲಮ್ - 7
ತ್ವಯಾ ಕಿಲೈಷ ನೃಪತಿರ್ವರಂ ವೈ ಯಾಚಿತಃ ಪ್ರಭುಃ ।
ನೃಪೇಣ ಚ ಪ್ರತಿಜ್ಞಾತಮಾಜ್ಞಪ್ತಶ್ಚಾಶ್ರಮಂ ಪ್ರತಿ ॥
ಅನುವಾದ
ದೇವಿ! ನೀವು ಮಹಾರಾಜರಲ್ಲಿ ಮುನಿಗಳ ಆಶ್ರಮಗಳಿಗೆ ಹೋಗುವ ವರ ಕೇಳಿದ್ದೀರಲ್ಲ. ಮಹಾರಾಜರು ನಿಮ್ಮನ್ನು ಆಶ್ರಮಕ್ಕೆ ಕಳುಹಿಸಿಕೊಡಲು ಒಪ್ಪಿಗೆಯನ್ನು ನೀಡಿದ್ದರು.॥7॥
ಮೂಲಮ್ - 8½
ಗಂಗಾ ತೀರೇ ಮಯಾ ದೇವಿ ಋಷೀಣಾಮಾಶ್ರಮಾನ್ ಶುಭಾನ್ ।
ಶೀಘ್ರಂ ಗತ್ವಾ ತು ವೈದೇಹಿಶಾಸನಾತ್ ಪಾರ್ಥಿವಸ್ಯ ನಃ ॥
ಅರಣ್ಯೇ ಮುನಿಭಿರ್ಜುಷ್ಟೇ ಅವನೇಯಾ ಭವಿಷ್ಯಸಿ ।
ಅನುವಾದ
ವಿದೇಹನಂದಿನಿ! ದೇವಿ ! ಆ ಮಾತಿಗನುಸಾರ ನಾನು ರಾಜರ ಆಜ್ಞೆಯಂತೆ ಶೀಘ್ರವಾಗಿ ಗಂಗಾತೀರದ ಋಷಿಗಳ ಸುಂದರ ಆಶ್ರಮಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುವೆನು.॥8½॥
ಮೂಲಮ್ - 9½
ಏವಮುಕ್ತಾತು ವೈದೇಹೀ ಲಕ್ಷ್ಮಣೇನ ಮಹಾತ್ಮನಾ ॥
ಪ್ರಹರ್ಷಮತುಲಂ ಲೇಭೇ ಗಮನಂ ಚಾಪ್ಯರೋಚಯತ್ ।
ಅನುವಾದ
ಮಹಾತ್ಮಾ ಲಕ್ಷ್ಮಣನು ಹೀಗೆ ಹೇಳಿದಾಗ ವೈದೇಹಿ ಸೀತೆಗೆ ಅಪಾರ ಹರ್ಷವಾಯಿತು. ಅವಳು ಹೋಗಲು ಸಿದ್ಧಳಾದಳು.॥9½॥
ಮೂಲಮ್ - 10
ವಾಸಾಂಸಿ ಚ ಮಹಾರ್ಹಾಣಿ ರತ್ನಾ ನಿ ವಿವಿಧಾನಿ ಚ ॥
ಮೂಲಮ್ - 11½
ಗೃಹೀತ್ವಾ ತಾನಿ ವೈದೇಹೀ ಗಮನಾಯೋಪಚಕ್ರಮೇ ।
ಇಮಾನಿ ಮುನಿಪತ್ನೀನಾಂ ದಾಸ್ಯಾಮ್ಯಾಭರಣಾನ್ಯಹಮ್ ॥
ವಸ್ತ್ರಾಣಿ ಚ ಮಹಾರ್ಹಾಣಿ ಧನಾನಿ ವಿವಿಧಾನಿ ಚ ।
ಅನುವಾದ
ಬಹುಮೂಲ್ಯ ವಸ್ತ್ರ ಮತ್ತು ನಾನಾ ಪ್ರಕಾರದ ರತ್ನಗಳನ್ನು ಎತ್ತಿಕೊಂಡು ಸೀತೆಯು ವನದ ಯಾತ್ರೆಗಾಗಿ ಉದ್ಯುಕ್ತಳಾಗಿ ಲಕ್ಷ್ಮಣನಲ್ಲಿ ಹೇಳಿದಳು - ಇವೆಲ್ಲ ಬಹುಮೂಲ್ಯ ವಸ್ತ್ರಾಭೂಣಗಳನ್ನು, ನಾನಾ ರೀತಿಯ ರತ್ನ, ಧನಗಳನ್ನು ನಾನು ಮುನಿಪತ್ನಿಯರಿಗೆ ಕೊಡುವೆನು.॥10-11½॥
ಮೂಲಮ್ - 12½
ಸೌಮಿತ್ರಿಸ್ತು ತಥೇತ್ಯುಕ್ತ್ವಾ ರಥಮಾರೋಪ್ಯ ಮೈಥಿಲೀಮ್ ॥
ಪ್ರಯಯೌ ಶೀಘ್ರತುರಗಂ ರಾಮಸ್ಯಾಜ್ಞಾಮನುಸ್ಮರನ್ ।
ಅನುವಾದ
‘ಹಾಗೆಯೇ ಆಗಲಿ’ ಎಂದು ಹೇಳಿ ಲಕ್ಷ್ಮಣನು ಮಿಥಿಲೇಶ ಕುಮಾರಿ ಸೀತೆಯನ್ನು ರಥದಲ್ಲಿ ಕುಳ್ಳಿರಿಸಿ ಶ್ರೀರಾಮನ ಆಜ್ಞೆಯನ್ನು ಗಮನದಲ್ಲಿಟ್ಟು, ವೇಗವಾಗಿ ಓಡುವ ಕುದುರೆಗಳುಳ್ಳ ರಥದಲ್ಲಿ ಹತ್ತಿ ವನದ ಕಡೆಗೆ ಹೊರಟನು.॥12½॥
ಮೂಲಮ್ - 13
ಅಬ್ರವೀಚ್ಚ ತದಾ ಸೀತಾ ಲಕ್ಷ್ಮಣಂ ಲಕ್ಷ್ಮಿವರ್ಧನಮ್ ॥
ಮೂಲಮ್ - 14
ಅಶುಭಾನಿ ಬಹೂನ್ಯೇವ ಪಶ್ಯಾಮಿ ರಘುನಂದನ ।
ನಯನಂ ಮೇ ಸ್ಫುರತ್ಯದ್ಯ ಗಾತ್ರೋತ್ಕಂಪಶ್ಚ ಜಾಯತೇ ॥
ಅನುವಾದ
ಆಗ ಸೀತೆಯು ಲಕ್ಷ್ಮೀವರ್ಧನ ಲಕ್ಷ್ಮಣನಲ್ಲಿ ಹೇಳಿದಳು - ರಘುನಂದನ! ನನಗೆ ಅನೇಕ ಅಪಶಕುನಗಳು ಕಂಡು ಬರುತ್ತಿವೆ. ಇಂದು ನನ್ನ ಬಲಗಣ್ಣು ಹಾರುತ್ತಿದೆ. ಶರೀರ ನಡುಗುತ್ತಿದೆ.॥13-14॥
ಮೂಲಮ್ - 15
ಹೃದಯಂ ಚೈವ ಸೌಮಿತ್ರೇ ಅಸ್ವಸ್ಥಮಿವ ಲಕ್ಷಯೇ ।
ಔತ್ಸುಕ್ಯಂ ಪರಮಂ ಚಾಪಿ ಅಧೃತಿಶ್ಚ ಪರಾ ಮಮ ॥
ಅನುವಾದ
ಸುಮಿತ್ರಾ ಕುಮಾರ! ನನ್ನ ಮನಸ್ಸು ಅಸ್ವಸ್ಥದಂತಾಗಿದೆ. ಮನಸ್ಸಿನಲ್ಲಿ ಭಾರೀ ಉತ್ಕಂಠತೆ ಉಂಟಾಗಿದೆ. ನನ್ನ ಅಧೀರತೆ ಪರಾಕಾಷ್ಠೆಗೆ ಮುಟ್ಟಿದೆ.॥15॥
ಮೂಲಮ್ - 16
ಶೂನ್ಯಾಮೇವ ಚ ಪಶ್ಯಾಮಿ ಪೃಥಿವೀಂ ಪೃಥುಲೋಚನ ।
ಅಪಿ ಸ್ವಸ್ತಿ ಭವೇತ್ತಸ್ಯ ಭ್ರಾತುಸ್ತೇ ಭ್ರಾತೃವತ್ಸಲ ॥
ಅನುವಾದ
ವಿಶಾಲಲೋಚನ ಲಕ್ಷ್ಮಣ! ಭೂಮಿಯು ಬರಿದಾಗಿರುವಂತೆ ನನಗೆ ತೋರುತ್ತದೆ. ಭ್ರಾತೃವತ್ಸಲ! ನಿನ್ನ ಅಣ್ಣ ಕುಶಲರಾಗಿ ಇರಲಿ.॥16॥
ಮೂಲಮ್ - 17
ಶ್ವಶ್ರೂಣಾಂ ಚೈವ ಮೇ ವೀರಸರ್ವಾಸಾಮವಿಶೇಷತಃ ।
ಪುರೇ ಜನಪದೇ ಚೈವ ಕುಶಲಂ ಪ್ರಾಣಿನಾಮಪಿ ॥
ಅನುವಾದ
ವೀರನೇ! ನನ್ನ ಎಲ್ಲ ಅತ್ತೆಯಂದಿರು ಆನಂದವಾಗಿರಲಿ. ನಗರ ಮತ್ತು ದೇಶದ ಎಲ್ಲ ಪ್ರಾಣಿಗಳು ಕ್ಷೇಮದಿಂದ ಇರಲಿ.॥17॥
ಮೂಲಮ್ - 18½
ಇತ್ಯಂಜಲಿಕೃತಾ ಸೀತಾ ದೇವತಾ ಅಭ್ಯಯಾಚತ ।
ಲಕ್ಷ್ಮಣೋಽರ್ಥಂ ತತಃ ಶ್ರುತ್ವಾ ಶಿರಸಾ ವಂದ್ಯ ಮೈಥಿಲೀಮ್ ॥
ಶಿವಮಿತ್ಯಬ್ರವೀದ್ಧೃಷ್ಟೋ ಹೃದಯೇನ ವಿಶುಷ್ಯತಾ ।
ಅನುವಾದ
ಹೀಗೆ ಹೇಳುತ್ತಾ ಸೀತೆಯು ಕೈಮುಗಿದು ದೇವತೆಗಳಲ್ಲಿ ಪ್ರಾರ್ಥಿಸಿದಳು. ಸೀತೆಯ ಮಾತನ್ನು ಕೇಳಿ ಲಕ್ಷ್ಮಣನು ತಲೆಬಾಗಿ ಆಕೆಗೆ ನಮಸ್ಕರಿಸಿ, ಹೊರಗಿನಿಂದ ಪ್ರಸನ್ನನಾಗಿ, ಕಮರಿದ ಹೃದಯದಿಂದ ಹೇಳಿದನು - ಎಲ್ಲರ ಕಲ್ಯಾಣವಾಗಲಿ.॥18½॥
ಮೂಲಮ್ - 19½
ತತೋ ವಾಸಮುಪಾಗಮ್ಯ ಗೋಮತೀತೀರ ಆಶ್ರಮೇ ॥
ಪ್ರಭಾತೇ ಪುನರುತ್ಥಾಯ ಸೌಮಿತ್ರಿಃ ಸೂತಮಬ್ರವೀತ್ ।
ಅನುವಾದ
ಅನಂತರ ಗೋಮತಿಯ ತೀರಕ್ಕೆ ಹೋಗಿ ಒಂದು ಆಶ್ರಮದಲ್ಲಿ ಇರುಳನ್ನು ಕಳೆದು, ಮತ್ತೆ ಪ್ರಾತಃಕಾಲ ಎದ್ದು ಸುಮಿತ್ರಾ ಕುಮಾರನು ಸಾರಥಿಯಲ್ಲಿ ಹೇಳಿದನು.॥19½॥
ಮೂಲಮ್ - 20½
ಯೋಜಯಸ್ವ ರಥಂ ಶೀಘ್ರಮದ್ಯ ಭಾಗೀರಥೀಜಲಮ್ ॥
ಶಿರಸಾ ಧಾರಯಿಷ್ಯಾಮಿ ತ್ರಿಯಂಬಕ ಇವೌಜಸಾ ।
ಅನುವಾದ
ಸಾರಥಿಯೇ! ಬೇಗನೇ ರಥ ಸಿದ್ಧಗೊಳಿಸು. ಭಾಗೀರಥಿಯನ್ನು ಭಗವಾನ್ ಶಂಕರನು ತನ್ನ ತೇಜದಿಂದ ಮಸ್ತಕದಲ್ಲಿ ಧರಿಸಿದಂತೆಯೇ, ಇಂದು ನಾನೂ ಗಂಗೆಯನ್ನು ತಲೆಯಲ್ಲಿ ಧರಿಸುವೆನು.॥20½॥
ಮೂಲಮ್ - 21½
ಸೋಽಶ್ವಾನ್ವಿಚಾರಯಿತ್ವಾ ತು ರಥೇ ಯುಕ್ತಾನ್ಮನೋಜವಾನ್ ॥
ಆರೋಹಸ್ವೇತಿ ವೈದೇಹೀಂ ಸೂತಃ ಪ್ರಾಂಜಲಿರಬ್ರವೀತ್ ।
ಅನುವಾದ
ಸಾರಥಿಯು ಮನೋವೇಗದಂತೆ ವೇಗಶಾಲಿ ಕುದುರೆಗಳನ್ನು ರಥಕ್ಕೆ ಹೂಡಿದನು ಮತ್ತೆ ವಿದೇಹನಂದಿನೀ ಸೀತೆಯಲ್ಲಿ ಕೈಮುಗಿದು ಹೇಳಿದನು-ದೇವಿ! ರಥಾರೂಢರಾಗಿರಿ.॥21½॥
ಮೂಲಮ್ - 22
ಸಾ ತು ಸೂತಸ್ಯ ವಚನಾದಾರುರೋಹ ರಥೋತ್ತಮಮ್ ॥
ಮೂಲಮ್ - 23
ಸೀತಾ ಸೌಮಿತ್ರಿಣಾ ಸಾರ್ಧಂ ಸುಮಂತ್ರೇಣ ಚ ಧೀಮತಾ ।
ಆಸಸಾದ ವಿಶಾಲಾಕ್ಷೀಗಂಗಾಂ ಪಾಪವಿನಾಶಿನೀಮ್ ॥
ಅನುವಾದ
ಸೂತನು ಹೇಳಿದಾಗ ದೇವೀ ಸೀತೆಯು ಆ ಉತ್ತಮ ರಥವನ್ನು ಹತ್ತಿದಳು. ಹೀಗೆ ಲಕ್ಷ್ಮಣ ಮತ್ತು ಬುದ್ಧಿವಂತ ಸುಮಂತ್ರರೊಂದಿಗೆ ವಿಶಾಲಲೋಚನೆ ಸೀತಾದೇವಿಯು ಪಾಪನಾಶಿನೀ ಗಂಗಾತೀರಕ್ಕೆ ತಲುಪಿದಳು.॥22-23॥
ಮೂಲಮ್ - 24
ಅಥಾರ್ಧದಿವಸೇ ಗತ್ವಾ ಭಾಗೀರಥ್ಯಾ ಜಲಾಶಯಮ್ ।
ನಿರೀಕ್ಷ್ಯ ಲಕ್ಷ್ಮಣೋ ದೀನಃ ಪ್ರರುರೋದಮಹಾಸ್ವನಃ ॥
ಅನುವಾದ
ಮಧ್ಯಾಹ್ನ ಭಾಗೀರಥಿಯ ಪ್ರವಾಹದವರೆಗೆ ತಲುಪಿ ಲಕ್ಷ್ಮಣನು ಅದನ್ನು ನೋಡುತ್ತಾ ದುಃಖಿತನಾಗಿ ಗಟ್ಟಿಯಾಗಿ ಬಿಕ್ಕಿ-ಬಿಕ್ಕಿ ಅಳತೊಡಗಿದನು.॥24॥
ಮೂಲಮ್ - 25
ಸೀತಾ ತು ಪರಮಾಯತ್ತಾ ದೃಷ್ಟ್ವಾ ಲಕ್ಷ್ಮಣಮಾತುರಮ್ ।
ಉವಾಚ ವಾಕ್ಯಂ ಧರ್ಮಜ್ಞಾ ಕಿಮಿದಂ ರುದ್ಯತೇತ್ವಯಾ ॥
ಮೂಲಮ್ - 26
ಜಾಹ್ನವೀತೀರಮಾಸಾದ್ಯ ಚಿರಾಭಿಲಷಿತಂ ಮಮ ।
ಹರ್ಷಕಾಲೇ ಕಿಮರ್ಥಂ ಮಾಂ ವಿಷಾದಯಸಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣನು ಶೋಕಾತುರನಾದುದನ್ನು ನೋಡಿ ಧರ್ಮಜ್ಞಾ ಸೀತೆಯು ಅತ್ಯಂತ ಚಿಂತಿತಳಾಗಿ ಆತನಲ್ಲಿ ಹೇಳಿದಳು - ಲಕ್ಷ್ಮಣ! ಇದೇನು? ನೀನು ಅಳುತ್ತಿರುವೆ. ಗಂಗಾತೀರಕ್ಕೆ ಬಂದು ನನ್ನ ಚಿರಕಾಲದ ಅಭಿಲಾಷೆ ಪೂರ್ಣವಾಗಿದೆ. ಈ ಹರ್ಷದ ಸಮಯದಲ್ಲಿ ನೀನು ಅಳುತ್ತಾ ನನ್ನನ್ನು ದುಃಖಿತೆಯನ್ನಾಗಿ ಏಕೆ ಮಾಡುತ್ತಿರುವೆ.॥25-26॥
ಮೂಲಮ್ - 27
ನಿತ್ಯಂ ತ್ವಂ ರಾಮಪಾರ್ಶ್ವೇಷು ವರ್ತಸೇ ಪುರುಷರ್ಷಭ ।
ಕಚ್ಚಿದ್ವಿನಾಕೃತಸ್ತೇನ ದ್ವಿರಾತ್ರಂ ಶೋಕಮಾಗತಃ ॥
ಅನುವಾದ
ಪುರುಷಪ್ರವರ! ಶ್ರೀರಾಮನ ಬಳಿಯಲ್ಲೇ ನೀನು ಸದಾ ಇರುತ್ತೀಯೆ. ಎರಡು ದಿನ ಅವನಿಂದ ಅಗಲಿದುದಕ್ಕೆ ನೀನು ಇಷ್ಟು ಶೋಕಾಕುಲನಾದೆಯೇನು.॥27॥
ಮೂಲಮ್ - 28
ಮಮಾಪಿ ದಯಿತೋ ರಾಮೋ ಜೀವಿತಾದಪಿ ಲಕ್ಷ್ಮಣ ।
ನ ಚಾಹಮೇವಂ ಶೋಚಾಮಿ ಮೈವಂ ತ್ವಂ ಬಾಲಿಶೋಭವ ॥
ಅನುವಾದ
ಲಕ್ಷ್ಮಣ! ಶ್ರೀರಾಮನಾದರೋ ನನಗೂ ಪ್ರಾಣಕ್ಕಿಂತ ಹೆಚ್ಚು ಪ್ರಿಯನಾಗಿದ್ದಾನೆ; ಆದರೆ ನಾನು ಹೀಗೆ ಶೋಕಿಸುವುದಿಲ್ಲ. ನೀನು ಹೀಗೆ ಏಕೆ ಬೇಸರಗೊಂಡಿರುವೆ.॥28॥
ಮೂಲಮ್ - 29
ತಾರಯಸ್ವ ಚ ಮಾಂ ಗಂಗಾಂ ದರ್ಶಯಸ್ವ ಚ ತಾಪಸಾನ್ ।
ತತೋ ಮುನಿಭ್ಯೋ ವಾಸಾಂಸಿ ದಾಸ್ಯಾಮ್ಯಾಭರಣಾನಿ ಚ ॥
ಅನುವಾದ
ನನ್ನನ್ನು ಗಂಗೆಯ ಆಚೆ ದಂಡಕ್ಕೆ ಕೊಂಡು ಹೋಗು ಹಾಗೂ ತಪಸ್ವೀ ಮುನಿಗಳ ದರ್ಶನ ಮಾಡಿಸು. ನಾನು ಅವರಿಗೆ ವಸಾ ಭೂಷಣಗಳನ್ನು ಕೊಡುವೆನು.॥29॥
ಮೂಲಮ್ - 30
ತತಃ ಕೃತ್ವಾ ಮಹರ್ಷೀಣಾಂ ಯಥಾರ್ಹಮಭಿವಾದನಮ್ ।
ತತ್ರ ಚೈಕಾಂ ನಿಶಾಮುಷ್ಯ ಯಾಸ್ಯಾಮಸ್ತಾಂ ಪುರೀಂ ಪುನಃ ॥
ಅನುವಾದ
ಅನಂತರ ಆ ಮಹರ್ಷಿಗಳಿಗೆ ಯಥಾಯೋಗ್ಯ ಅಭಿವಾದನ ಮಾಡಿ, ಅಲ್ಲಿ ಒಂದು ರಾತ್ರೆ ಉಳಿದು, ನಾವು ಪುನಃ ಅಯೋಧ್ಯಾಪುರಿಗೆ ಮರಳಿ ಹೋಗುವ.॥30॥
ಮೂಲಮ್ - 31
ಮಮಾಪಿ ಪದ್ಮಪತ್ರಾಕ್ಷಂ ಸಿಂಹೋರಸ್ಕಂ ಕೃಶೋದರಮ್ ।
ತ್ವರತೇ ಹಿ ಮನೋ ದ್ರಷ್ಟುಂ ರಾಮಂ ರಮಯತಾಂವರಮ್ ॥
ಅನುವಾದ
ಸಿಂಹದಂತೆ ವಕ್ಷಃಸ್ಥಳವುಳ್ಳ, ಕೃಶ ಉದಾರ ಮತ್ತು ಕಮಲದಂತೆ ನೇತ್ರವುಳ್ಳ, ಮನಸ್ಸನ್ನು ರಮಿಸುವುದರಲ್ಲಿ ಎಲ್ಲರಿಗಿಂತ ಶ್ರೇಷ್ಠನಾದ ಶ್ರೀರಾಮನನ್ನು ನೋಡ ಬೇಕೆಂದು ನನ್ನ ಮನಸ್ಸೂ ಕೂಡ ಆತುರವಾಗಿದೆ.॥31॥
ಮೂಲಮ್ - 32
ತಸ್ಯಾಸ್ತದ್ವಚನಂಶ್ರುತ್ವಾ ಪ್ರಮೃಜ್ಯ ನಯನೇ ಶುಭೇ ।
ನಾವಿಕಾನಾಹ್ವಯಾಮಾಸ ಲಕ್ಷ್ಮಣಃ ಪರವೀರಹಾ ।
ಇಯಂ ಚ ಸಜ್ಜಾ ನೌಶ್ಚೇತಿ ದಾಶಾಃ ಪ್ರಾಂಜಲಯೋಬ್ರುವನ್ ॥
ಅನುವಾದ
ಸೀತೆಯ ಮಾತನ್ನು ಕೇಳಿ ಶತ್ರುವೀರರನ್ನು ಸಂಹರಿಸುವ ಲಕ್ಷ್ಮಣನು ತನ್ನ ಎರಡೂ ಸುಂದರ ಕಣ್ಣುಗಳನ್ನು ಒರೆಸಿಕೊಂಡು, ಅಂಬಿಗರನ್ನು ಕರೆದು ಕೈಮುಗಿದು ನಾವೆ ಸಿದ್ಧಗೊಳಿಸುವಂತೆ ಹೇಳಿದನು. ಸ್ವಾಮಿ! ದೋಣಿ ಸಿದ್ಧವಾಗಿದೆ ಎಂದು ಹೇಳಿದರು.॥32॥
ಮೂಲಮ್ - 33
ತಿತೀರ್ಷುರ್ಲಕ್ಷ್ಮಣೋ ಗಂಗಾಂ ಶುಭಾಂನಾವಮುಪಾರುಹತ್ ।
ಗಂಗಾಂ ಸಂತಾರಯಾಮಾಸ ಲಕ್ಷ್ಮಣಸ್ತಾಂ ಸಮಾಹಿತಃ ॥
ಅನುವಾದ
ಲಕ್ಷ್ಮಣನು ಗಂಗೆಯನ್ನು ದಾಟಲು ಸೀತೆಯೊಂದಿಗೆ ಆ ಸುಂದರ ದೋಣಿಯಲ್ಲಿ ಕುಳಿತು, ಬಹಳ ಎಚ್ಚರಿಕೆಯಿಂದ ಅವನು ಸೀತೆಯನ್ನು ಗಂಗೆ ದಾಟಿಸಿದನು.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತಾರನೆಯ ಸರ್ಗ ಪೂರ್ಣವಾಯಿತು. ॥46॥