०४५ सीता-विसर्जनादेशः

[ನಲವತ್ತೈದನೆಯ ಸರ್ಗ]

ಭಾಗಸೂಚನಾ

ಶ್ರೀರಾಮನು ಸಹೋದರರಲ್ಲಿ ಲೋಕಾಪವಾದದ ವಿಷಯವನ್ನು ಚರ್ಚಿಸಿ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಲಕ್ಷ್ಮಣನಿಗೆ ಆಜ್ಞಾಪಿಸಿದುದು

ಮೂಲಮ್ - 1

ತೇಷಾಂ ಸಮುಪವಿಷ್ಟಾನಾಂ ಸರ್ವೇಷಾಂ ದೀನಚೇತಸಾಮ್ ।
ಉವಾಚ ವಾಕ್ಯಂ ಕಾಕುತ್ಸ್ಥೋ ಮುಖೇನ ಪರಿಶುಷ್ಯತಾ ॥

ಅನುವಾದ

ಈ ಪ್ರಕಾರ ಎಲ್ಲ ತಮ್ಮಂದಿರು ದೀನಮನಸ್ಕರಾಗಿ ಅಲ್ಲಿ ಕುಳಿತ್ತಿದ್ದರು. ಆಗ ಶ್ರೀರಾಮನು ಬಾಡಿದ ಮುಖದಿಂದ ಅವರ ಮುಂದೆ ಈ ಮಾತನ್ನು ಹೇಳಿದರು.॥1॥

ಮೂಲಮ್ - 2

ಸರ್ವೇ ಶ್ರುಣುತ ಭದ್ರಂ ವೋ ಮಾ ಕುರುಧ್ವಂ ಮನೋಽನ್ಯಥಾ ।
ಪೌರಾಣಾಂ ಮಮ ಸೀತಾಯಾಂ ಯಾದೃಶೀ ವರ್ತತೇ ಕಥಾ ॥

ಅನುವಾದ

ಸಹೋದರರೇ! ನಿಮಗೆ ಮಂಗಳವಾಗಲೀ. ನೀವೆಲ್ಲರೂ ಏಕಾಗ್ರಚಿತ್ತರಾಗಿ ನನ್ನ ಮಾತನ್ನು ಆಲಿಸಿರಿ. ಪುರವಾಸಿಗಳಲ್ಲಿ ನನ್ನ ಮತ್ತು ಸೀತೆಯ ವಿಷಯದಲ್ಲಿ ನಡೆದ ಚರ್ಚೆಯನ್ನು ನಿಮಗೆ ತಿಳಿಸುವೆನು.॥2॥

ಮೂಲಮ್ - 3

ಪೌರಾಪವಾದಃ ಸುಮಹಾಂಸ್ತಥಾ ಜನಪದಸ್ಯ ಚ ।
ವರ್ತತೇ ಮಯೀ ಬೀಭತ್ಸಾ ಸಾ ಮೇ ಮರ್ಮಾಣಿ ಕೃಂತತಿ ॥

ಅನುವಾದ

ಈಗ ಪುರವಾಸಿಗಳು ಮತ್ತು ದೇಶದ ಜನರಲ್ಲಿ ಸೀತೆಯ ಸಂಬಂಧದಲ್ಲಿ ಮಹಾ ಅಪವಾದ ಹರಡಿದೆ. ನನ್ನ ಕುರಿತೂ ಕೂಡ ಅವರಿಗೆ ತಿರಸ್ಕೃತಭಾವವಿದೆ. ಅವರೆಲ್ಲರ ತಿರಸ್ಕಾರವು ನನ್ನ ಮರ್ಮಸ್ಥಾನವನ್ನು ಸೀಳಿಬಿಟ್ಟಿದೆ.॥3॥

ಮೂಲಮ್ - 4

ಅಹಂ ಕಿಲ ಕುಲೇ ಜಾತ ಇಕ್ಷ್ವಾಕೂಣಾಂ ಮಹಾತ್ಮನಾಮ್ ।
ಸೀತಾಪಿ ಸತ್ಕುಲೇ ಜಾತಾ ಜನಕಾನಾಂ ಮಹಾತ್ಮನಾಮ್ ॥

ಅನುವಾದ

ನಾನು ಇಕ್ಷ್ವಾಕುವಂಶೀ ಮಹಾತ್ಮಾ ರಾಜರ ಕುಲದಲ್ಲಿ ಹುಟ್ಟಿರುವೆನು. ಸೀತೆಯೂ ಕೂಡ ಮಹಾತ್ಮಾ ಜನಕರ ಉತ್ತಮ ಕುಲದಲ್ಲಿ ಜನ್ಮವೆತ್ತಿರುವಳು.॥4॥

ಮೂಲಮ್ - 5

ಜಾನಾಸಿ ತ್ವಂ ಯಥಾ ಸೌಮ್ಯ ದಂಡಕೇ ವಿಜನೇ ವನೇ ।
ರಾವಣೇನ ಹೃತಾ ಸೀತಾ ಸ ಚ ವಿಧ್ವಂಸಿತೋ ಮಯಾ ॥

ಅನುವಾದ

ಸೌಮ್ಯ ಲಕ್ಷ್ಮಣ! ರಾವಣನು ನಿರ್ಜನ ದಂಡಕಾರಣ್ಯದಿಂದ ಸೀತೆಯನ್ನು ಅಪಹರಿಸಿದುದು ನಿನಗೆ ತಿಳಿದೇ ಇದೆ ಮತ್ತು ನಾನು ಅವನನ್ನು ವಿಧ್ವಂಸಗೊಳಿಸಿದುದೂ ತಿಳಿದಿರುವೆ.॥5॥

ಮೂಲಮ್ - 6

ತತ್ರ ಮೇ ಬುದ್ಧಿ ರುತ್ಪನ್ನಾ ಜನಕಸ್ಯ ಸುತಾಂ ಪ್ರತಿ ।
ಅತ್ರೋಷಿತಾಮಿಮಾಂ ಸೀತಾಮಾನಯೇಯಂ ಕಥಂ ಪುರೀಮ್ ॥

ಅನುವಾದ

ಅನಂತರ ಲಂಕೆಯಿಂದ ಹೊರಡುವಾಗ ಇವಳು ಇಷ್ಟು ದಿನಗಳವರೆಗೆ ಇಲ್ಲಿ ಇದ್ದ ಮೇಲೆಯೂ ಈಕೆಯನ್ನು ರಾಜಧಾನಿಗೆ ಹೇಗೆ ಕೊಂಡುಹೋಗಲಿ ಎಂಬ ಸೀತೆಯ ಕುರಿತು ನನ್ನ ಮನಸ್ಸಿನಲ್ಲಿ ವಿಚಾರ ಉಂಟಾಗಿತ್ತು.॥6॥

ಮೂಲಮ್ - 7

ಪ್ರತ್ಯಯಾರ್ಥಂ ತತಃ ಸೀತಾವಿವೇಶ ಜ್ವಲನಂ ತದಾ ।
ಪ್ರತ್ಯಕ್ಷಂ ತವ ಸೌಮಿತ್ರೇ ದೇವಾನಾಂ ಹವ್ಯವಾಹನಃ ॥

ಮೂಲಮ್ - 8½

ಅಪಾಪಾಂ ಮೈಥಿಲೀಮಾಹ ವಾಯುಶ್ಚಾಕಾಶಗೋಚರಃ ।
ಚಂದ್ರಾದಿತ್ಯೌ ಚ ಶಂಸೇತೇ ಸುರಾಣಾಂ ಸಂನಿಧೌ ಪುರಾ ॥
ಋಷೀಣಾಂ ಚೈವ ಸರ್ವೇಷಾಮಪಾಪಾಂ ಜನಕಾತ್ಮಜಾಮ್ ।

ಅನುವಾದ

ಸುಮಿತ್ರಾಕುಮಾರ! ಆಗ ತನ್ನ ಪವಿತ್ರತೆಯ ವಿಶ್ವಾಸ ಕೊಡಿಸಲು ಸೀತೆಯು ನಿನ್ನ ಮುಂದೆಯೇ ಅಗ್ನಿಪ್ರವೇಶ ಮಾಡಿದ್ದಳು ಹಾಗೂ ದೇವತೆಗಳ ಸಮಕ್ಷಮದಲ್ಲಿ ಅಗ್ನಿದೇವನು ಆಕೆಯನ್ನು ನಿರ್ದೋಷಿ ಎಂದು ತಿಳಿಸಿದ್ದನು. ಆಕಾಶಚಾರೀ ವಾಯು, ಚಂದ್ರ, ಸೂರ್ಯರೂ ಕೂಡ ಮೊದಲು ದೇವತೆಗಳಲ್ಲಿ, ಸಮಸ್ತ ಋಷಿಗಳಲ್ಲಿ ಜನಕನಂದಿನಿಯು ನಿಷ್ಪಾಪಳೆಂದು ಘೋಷಿಸಿದ್ದರು.॥7-8½॥

ಮೂಲಮ್ - 9½

ಏವಂ ಶುದ್ಧ ಸಮಾಚಾರಾ ದೇವಗಂಧರ್ವಸಂನಿಧೌ ॥
ಲಂಕಾದ್ವೀಪೇ ಮಹೇಂದ್ರೇಣ ಮಮ ಹಸ್ತೇ ನಿವೇಶಿತಾ ।

ಅನುವಾದ

ಈ ಪ್ರಕಾರ ವಿಶುದ್ಧ ಆಚಾರವುಳ್ಳ ಸೀತೆಯನ್ನು ದೇವತೆಗಳು ಮತ್ತು ಗಂಧರ್ವರ ಸಮಕ್ಷಮ ಸಾಕ್ಷಾತ್ ದೇವೇಂದ್ರನು ಲಂಕಾದ್ವೀಪದಲ್ಲಿ ನನ್ನ ಕೈಗೆ ಒಪ್ಪಿಸಿದ್ದನು.॥9½॥

ಮೂಲಮ್ - 10½

ಅಂತರಾತ್ಮಾ ಚ ಮೇ ವೇತ್ತಿ ಸೀತಾಂ ಶುದ್ಧಾಂ ಯಶಸ್ವಿನೀಮ್ ॥
ತತೋ ಗೃಹೀತ್ವಾ ವೈದೇಹೀಮಯೋಧ್ಯಾಮಹಮಾಗತಃ ।

ಅನುವಾದ

ನನ್ನ ಅಂತರಾತ್ಮವೂ ಯಶಸ್ವಿನೀ ಸೀತೆ ಶುದ್ಧಳೆಂದೇ ತಿಳಿಯುತ್ತಿದೆ. ಅದಕ್ಕಾಗಿ ನಾನು ಈ ವಿದೇಹ ನಂದಿನೀಯನ್ನು ಜೊತೆಗೆ ಕರೆದುಕೊಂಡು ಅಯೋಧ್ಯೆಗೆ ಬಂದಿದ್ದೆ.॥10½॥

ಮೂಲಮ್ - 11½

ಅಯಂ ತು ಮೇ ಮಹಾನ್ವಾದಃ ಶೋಕಶ್ಚ ಹೃದಿ ವರ್ತತೇ ॥
ಪೌರಾಪವಾದಃ ಸುಮಹಾಂಸ್ತಥಾ ಜನಪದಸ್ಯ ಚ ।

ಅನುವಾದ

ಆದರೆ ಈಗ ಈ ಮಹಾ ಅಪವಾದ ಹರಡಿದೆ. ಪುರವಾಸಿಯರಲ್ಲಿ, ದೇಶವಾಸಿಗಳಲ್ಲಿ ನನ್ನ ನಿಂದೆ ಬಹಳ ಆಗುತ್ತಿದೆ. ಇದರಿಂದ ನನ್ನ ಮನಸ್ಸಿಗೆ ಭಾರೀ ಶೋಕವಾಗುತ್ತಿದೆ.॥11½॥

ಮೂಲಮ್ - 12½

ಅಕೀರ್ತಿರ್ಯಸ್ಯ ಗೀಯೇತ ಲೋಕೇ ಭೂತಸ್ಯ ಕಸ್ಯಚಿತ್ ॥
ಪತತ್ಯೇವಾಧಮಾಂಲ್ಲೋಕಾನ್ಯಾವಚ್ಛಬ್ದಃ ಪ್ರಕೀರ್ತ್ಯತೇ ।

ಅನುವಾದ

ಯಾವುದೇ ಪ್ರಾಣಿಯ ಅಪಕೀರ್ತಿಯು ಲೋಕದಲ್ಲಿ ಎಲ್ಲರ ಚರ್ಚೆಯ ವಿಷಯವಾದಾಗ ಅವನು ಅಧಮಲೋಕಕ್ಕ.॥ನರಕಕ್ಕೆ॥ಹೋಗುತ್ತಾನೆ. ಆ ಅಪಯಶದ ಚರ್ಚೆ ಆಗುತ್ತಿರುವರೆಗೆ ಅವನು ಅಲ್ಲೇ ಬಿದ್ದಿರುತ್ತಾನೆ.॥12½॥

ಮೂಲಮ್ - 13½

ಅಕೀರ್ತಿರ್ನಿಂದ್ಯತೇ ದೇವೈಃ ಕೀರ್ತಿರ್ಲೋಕೇಷು ಪೂಜ್ಯತೇ ॥
ಕೀರ್ತ್ಯರ್ಥಂ ತು ಸಮಾರಂಭಃ ಸರ್ವೇಷಾಂ ಸುಮಹಾತ್ಮನಾಮ್ ।

ಅನುವಾದ

ದೇವತೆಗಳು ಲೋಕ ಗಳಲ್ಲಿನ ಅಪಕೀರ್ತಿಯ ನಿಂದೆ ಮತ್ತು ಕೀರ್ತಿಯ ಪ್ರಶಂಸೆ ಮಾಡುತ್ತಾರೆ. ಎಲ್ಲ ಶ್ರೇಷ್ಠ ಮಹಾತ್ಮರ ಶುಭ ಆಯೋಜನ ಉತ್ತಮ ಕೀರ್ತಿಯ ಸ್ಥಾಪನೆಗಾಗಿಯೇ ಆಗುತ್ತದೆ.॥13½॥

ಮೂಲಮ್ - 14½

ಅಪ್ಯಹಂ ಜೀವಿತಂ ಜಹ್ಯಾಂ ಯುಷ್ಮಾನ್ವಾ ಪುರುಷರ್ಷಭಾಃ ॥
ಅಪವಾದಭಯಾದ್ಭೀತಃ ಕಿಂ ಪುನರ್ಜನಕಾತ್ಮಜಾಮ್ ।

ಅನುವಾದ

ನರಶ್ರೇಷ್ಠ ಬಂಧುಗಳೇ! ನಾನು ಲೋಕನಿಂದೆಯ ಭಯದಿಂದ ತನ್ನ ಪ್ರಾಣಗಳನ್ನು ಮತ್ತು ನೀವೆಲ್ಲರನ್ನು ಕೂಡ ತ್ಯಜಿಸಬಲ್ಲೆನು. ಹಾಗಿರುವಾಗ ಸೀತೆಯನ್ನು ತ್ಯಜಿಸುವುದು ಯಾವ ದೊಡ್ಡ ಮಾತು.॥14½॥

ಮೂಲಮ್ - 15½

ತಸ್ಮಾದ್ಭವಂತಃ ಪಶ್ಯಂತು ಪತಿತಂ ಶೋಕಸಾಗರೇ ॥
ನ ಹಿ ಪಶ್ಯಾಮ್ಯಹಂ ಭೂತಂ ಕಿಂಚಿದ್ದುಃಖಮತೋಧಿಕಮ್ ।

ಅನುವಾದ

ಆದ್ದರಿಂದ ನೀವು ನನ್ನ ಕಡೆಗೆ ನೋಡಿರಿ. ನಾನು ಶೋಕಸಮುದ್ರದಲ್ಲಿ ಬಿದ್ದಿರುವೆನು. ಇದಕ್ಕಿಂತ ಮಿಗಿಲಾದ ದುಃಖವನ್ನು ನಾನು ಅನುಭವಿಸಿದುದು ನನಗೆ ನೆನಪಿಲ್ಲ.॥15½॥

ಮೂಲಮ್ - 16½

ಶ್ವಸ್ತ್ವಂ ಪ್ರಭಾತೇ ಸೌಮಿತ್ರೇ ಸಮಂತ್ರಾಧಿಷ್ಠಿತಂ ರಥಮ್ ॥
ಆರುಹ್ಯ ಸೀತಾಮಾರೋಪ್ಯ ವಿಷಯಾಂತೇ ಸಮುತ್ಸೃಜ ।

ಅನುವಾದ

ಆದ್ದರಿಂದ ಸುಮಿತ್ರಾಕುಮಾರ! ನಾಳೆ ಬೆಳಿಗ್ಗೆ ನೀನು ಸಾರಥಿ ಸುಮಂತ್ರನಿಂದ ಸಂಚಾಲಿತ ರಥವನ್ನೇರಿ ಸೀತೆಯನ್ನು ಅದರಲ್ಲೇ ಕುಳ್ಳಿರಿಸಿಕೊಂಡು ಈ ರಾಜ್ಯದ ಸೀಮೆಯ ಹೊರಗೆ ಬಿಟ್ಟುಬಿಡು.॥16½॥

ಮೂಲಮ್ - 17½

ಗಂಗಾಯಾಸ್ತು ಪರೇ ಪಾರೇ ವಾಲ್ಮೀಕೇಸ್ತು ಮಹಾತ್ಮನಃ ॥
ಆಶ್ರಮೋ ದಿವ್ಯಸಂಕಾಶಸ್ತಮಸಾತೀರಮಾಶ್ರಿತಃ ।

ಅನುವಾದ

ಗಂಗೆಯ ಆಚೆ ತಮಸಾ ತಟದಲ್ಲಿ ಮಹಾತ್ಮಾ ವಾಲ್ಮೀಕಿ ಮುನಿಗಳ ಆಶ್ರಮವಿದೆ.॥17½॥

ಮೂಲಮ್ - 18

ತತ್ರೈತಾಂ ವಿಜನೇ ದೇಶೇ ವಿಸೃಜ್ಯ ರಘುನಂದನ ॥

ಮೂಲಮ್ - 19

ಶೀಘ್ರಮಾಗಚ್ಛ ಸೌಮಿತ್ರೇ ಕುರುಷ್ವ ವಚನಂ ಮಮ ।
ನ ಚಾಸ್ಮಿ ಪ್ರತಿವಕ್ತವ್ಯಂ ಸೀತಾಂ ಪ್ರತಿ ಕಥಂಚನ ॥

ಅನುವಾದ

ರಘುನಂದನ! ಆ ಆಶ್ರಮದ ಹತ್ತಿರ ನಿರ್ಜನ ವನದಲ್ಲಿ ನೀನು ಸೀತೆಯನ್ನು ಬಿಟ್ಟು ಶೀಘ್ರವಾಗಿ ಹಿಂದಿರುಗಿ ಬಾ. ಸುಮಿತ್ರಾನಂದನ! ನನ್ನ ಈ ಆಜ್ಞೆಯನ್ನು ಪಾಲಿಸು. ಸೀತೆಯ ವಿಷಯದಲ್ಲಿ ನನ್ನಲ್ಲಿ ಯಾವುದೇ ಇತರ ಮಾತನ್ನು ಹೇಳಬಾರದು.॥18-19॥

ಮೂಲಮ್ - 20

ತಸ್ಮಾತ್ತ್ವಂ ಗಚ್ಛ ಸೌಮಿತ್ರೇ ನಾತ್ರ ಕಾರ್ಯಾ ವಿಚಾರಣಾ ।
ಅಪ್ರೀತಿರ್ಹಿ ಪರಾ ಮಹ್ಯಂ ತ್ವಯೈತತ್ಪ್ರತಿವಾರಿತೇ ॥

ಅನುವಾದ

ಅದಕ್ಕಾಗಿ ಲಕ್ಷ್ಮಣ! ಈಗ ನೀನು ಹೋಗು. ಈ ವಿಷಯದಲ್ಲಿ ಯಾವುದೇ ವಿಚಾರ ಮಾಡಬೇಡ. ನನ್ನ ಈ ನಿಶ್ಚಯದಲ್ಲಿ ಯಾವುದೇ ರೀತಿಯ ಅಡ್ಡಿಪಡಿಸಿದರೆ ನನಗೆ ಬಹಳ ಕಷ್ಟವಾದೀತು.॥20॥

ಮೂಲಮ್ - 21½

ಶಾಪಿತಾ ಹಿ ಮಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ ।
ಯೇ ಮಾಂ ವಾಕ್ಯಾಂತರೇ ಬ್ರೂಯುರನುನೇತುಂಕಥಂಚನ ॥
ಅಹಿತಾ ಮಮ ತೇ ನಿತ್ಯಂ ಮದಭೀಷ್ಟವಿಘಾತನಾತ್ ।

ಅನುವಾದ

ನಾನು ನಿನಗೆ ನನ್ನ ಪಾದದ ಮತ್ತು ಜೀವನದ ಆಣೆ ಹಾಕುತ್ತೇನೆ. ನನ್ನ ನಿರ್ಣಯದ ವಿರುದ್ಧ ಏನನ್ನೂ ಹೇಳಬೇಡ. ನನ್ನ ಈ ಮಾತಿನ ನಡುವೆ ಪ್ರವೇಶಿಸಿ ಯಾವುದೇ ರೀತಿಯಿಂದ ನನ್ನಲ್ಲಿ ಅನುನಯ-ವಿನಯದಿಂದ ಏನಾದರೂ ಹೇಳಿದರೆ, ಅವರು ನನ್ನ ಅಭೀಷ್ಟ ಕಾರ್ಯದಲ್ಲಿ ಬಾಧೆಪಡಿಸಿದ್ದರಿಂದ ಸದಾ ನನ್ನ ಶತ್ರುಗಳಾಗುವರು.॥21½॥

ಮೂಲಮ್ - 22½

ಮಾನಯಂತು ಭವಂತೋ ಮಾಂ ಯದಿ ಮಚ್ಛಾಸನೇ ಸ್ಥಿತಾಃ ॥
ಇತೋಽದ್ಯ ನೀಯತಾಂ ಸೀತಾ ಕುರುಷ್ವ ವಚನಂ ಮಮ ।

ಅನುವಾದ

ನೀವು ನನ್ನನ್ನು ಸಮಾನಿಸುತ್ತಿದ್ದರೆ, ನನ್ನ ಆಜ್ಞೆಯಲ್ಲಿ ಇರಲು ಬಯಸುವಿರಾದರೆ, ಈಗ ಸೀತೆಯನ್ನು ಇಲ್ಲಿಂದ ಕಾಡಿಗೆ ಕೊಂಡುಹೋಗು. ನನ್ನ ಈ ಆಜ್ಞೆಯನ್ನು ಪಾಲಿಸು.॥22½॥

ಮೂಲಮ್ - 23½

ಪೂರ್ವಮುಕ್ತೋಽಹಮನಯಾ ಗಂಗಾತೀರೇಽಹಮಾಶ್ರಮಾನ್ ॥
ಪಶ್ಯೇಯಮಿತಿ ತಸ್ಯಾಶ್ಚ ಕಾಮಃ ಸಂವರ್ತ್ಯತಾಮಯಮ್ ।

ಅನುವಾದ

ನಾನು ಗಂಗಾತೀರದಲ್ಲಿ ಋಷಿಗಳ ಆಶ್ರಮಗಳನ್ನು ನೋಡಬಯಸುತ್ತೇನೆ ಎಂದು ಸೀತೆಯು ಮೊದಲು ನನ್ನಲ್ಲಿ ಹೇಳಿದ್ದಳು. ಆದ್ದರಿಂದ ಆಕೆಯ ಇಚ್ಛೆಯೂ ಪೂರ್ಣವಾಗುವುದು.॥23½॥

ಮೂಲಮ್ - 24

ಏವಮುಕ್ತ್ವಾ ತು ಕಾಕುತ್ಸ್ಥೋ ಬಾಷ್ಪೇಣ ಪಿಹಿತೇಕ್ಷಣಃ ॥

ಮೂಲಮ್ - 25

ಸಂವಿವೇಶ ಸ ಧರ್ಮಾತ್ಮಾ ಭ್ರಾತೃಭಿಃ ಪರಿವಾರಿತಃ ।
ಶೋಕಸಂವಿಗ್ನಹೃದಯೋ ನಿಶಶ್ವಾಸ ಯಥಾ ದ್ವಿಪಃ ॥

ಅನುವಾದ

ಹೀಗೆ ಹೇಳುತ್ತಾ-ಹೇಳುತ್ತಾ ಶ್ರೀರಾಮನ ಎರಡೂ ಕಣ್ಣುಗಳಲ್ಲಿ ನೀರು ತುಂಬಿಬಂತು ಮತ್ತೆ ಆ ಧರ್ಮಾತ್ಮಾ ಶ್ರೀರಾಮನು ತನ್ನ ಸಹೋದರರೊಂದಿಗೆ ಅರಮನೆಯೊಳಗೆ ಹೊರಟು ಹೋದನು. ಆಗ ಅವನ ಹೃದಯ ಶೋಕದಿಂದ ವ್ಯಾಕುಲವಾಗಿದ್ದು, ಆನೆಯಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಿದ್ದನು.॥24-25॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೈದನೆಯ ಸರ್ಗ ಪೂರ್ಣವಾಯಿತು. ॥45॥