०४३ सीता-प्रतिग्रह-दूषणम्

[ನಲವತ್ತಮೂರನೆಯ ಸರ್ಗ]

ಭಾಗಸೂಚನಾ

ಭದ್ರನ ಮುಖದಿಂದ ಸೀತೆಯ ಜನಾಪವಾದದ ಶ್ರವಣ

ಮೂಲಮ್ - 1

ಭದ್ರನ ಮುಖದಿಂದ ಸೀತೆಯ ಜನಾಪವಾದದ ಶ್ರವಣ ।
ತತ್ರೋಪವಿಷ್ಟಂ ರಾಜಾನಮುಪಾಸಂತೇ ವಿಚಕ್ಷಣಾಃ ।
ಕಥಾನಾಂ ಬಹುರೂಪಾಣಾಂ ಹಾಸ್ಯಕಾರಾಃಸಮಂತಃ ॥

ಅನುವಾದ

ಪುಷ್ಪವಾಟಿಕೆಯಲ್ಲಿ ಕುಳಿತಿರುವ ಮಹಾರಾಜಾ ಶ್ರೀರಾಮನ ಬಳಿಯಲ್ಲಿ ಅನೇಕ ಪ್ರಕಾರದ ಕಥೆಗಳನ್ನು ಹೇಳುವುದರಲ್ಲಿ ಕುಶಲರಾದ, ಹಾಸ್ಯ ವಿನೋದ ಮಾಡುವ ಸ್ನೇಹಿತರು ಬಂದು ಕುಳಿತರು.॥1॥

ಮೂಲಮ್ - 2

ವಿಜಯೋ ಮಧುಮತ್ತಶ್ಚ ಕಾಶ್ಯಪೋ ಮಂಗಲಃ ಕುಲಃ ।
ಸುರಾಜಿಃ ಕಾಲಿಯೋ ಭದ್ರೋ ದಂತವಕ್ತ್ರಃ ಸುಮಾಗಧಃ ॥

ಅನುವಾದ

ವಿಜಯ, ಮಧುಮತ್ತ, ಕಾಶ್ಯಪ, ಮಂಗಲ, ಕುಲ, ಸುರಾಜಿ, ಕಾಲಿಯ, ಭದ್ರ, ದಂತವಕ್ತ್ರ ಮತ್ತು ಸುಮಾಗಧ ಎಂದು ಆ ಸ್ನೇಹಿತರ ಹೆಸರಿತ್ತು.॥2॥

ಮೂಲಮ್ - 3

ಏತೇ ಕಥಾ ಬಹುವಿಧಾಃ ಪರಿಹಾಸಸಮನ್ವಿತಾಃ ।
ಕಥಯಂತಿ ಸ್ಮ ಸಂಹೃಷ್ಟಾ ರಾಘವಸ್ಯ ಮಹಾತ್ಮನಃ ॥

ಅನುವಾದ

ಇವರೆಲ್ಲರೂ ಬಹಳ ಹರ್ಷದಿಂದ ಶ್ರೀರಘುನಾಥನ ಮುಂದೆ ಅನೇಕ ಪ್ರಕಾರದ ಹಾಸ್ಯ ವಿನೋದಪೂರ್ಣ ಕಥೆಗಳನ್ನು ಹೇಳುತ್ತಿದ್ದರು.॥3॥

ಮೂಲಮ್ - 4

ತತಃ ಕಥಾಯಾಂ ಕಸ್ಯಾಂಚಿದ್ ರಾಘವಃ ಸಮಭಾಷತ ।
ಕಾಃ ಕಥಾ ನಗರೇ ಭದ್ರ ವರ್ತಂತೇ ವಿಷಯೇಷು ಚ ॥

ಅನುವಾದ

ಆಗಲೇ ಯಾವುದೋ ಕಥಾ ಪ್ರಸಂಗದಲ್ಲಿ ಶ್ರೀರಾಮನು ಕೇಳಿದನು-ಭದ್ರ! ಇಂದಿನ ದಿನಗಳಲ್ಲಿ ನಗರ ಮತ್ತು ರಾಜ್ಯ ದಲ್ಲಿ ಯಾವ ಮಾತಿನ ಚರ್ಚೆ ವಿಶೇಷವಾಗಿ ನಡೆಯುತ್ತದೆ.॥4॥

ಮೂಲಮ್ - 5

ಮಾಮಾಶ್ರಿತಾನಿ ಕಾನ್ಯಾಹುಃಪೌರಜಾನಪದಾ ಜನಾಃ ।
ಕಿಂ ಚ ಸೀತಾಂ ಸಮಾಶ್ರಿತ್ಯ ಭರತಂ ಕಿಂ ಚ ಲಕ್ಷ್ಮಣಮ್ ॥

ಮೂಲಮ್ - 6

ಕಿಂ ನು ಶತ್ರುಘ್ನಮುದ್ದಿಶ್ಯ ಕೈಕೇಯೀಂ ಕಿಂ ನು ಮಾತರಮ್ ।
ವಕ್ತವ್ಯತಾಂ ಚ ರಾಜಾನೋ ವನೇ ರಾಜ್ಯೇ ವ್ರಜಂತಿ ಚ ॥

ಅನುವಾದ

ನಗರ ಮತ್ತು ರಾಷ್ಟ್ರದ ಜನರು ನನ್ನ, ಸೀತೆಯ, ಭರತನ, ಲಕ್ಷ್ಮಣನ, ಶತ್ರುಘ್ನನ ಹಾಗೂ ತಾಯಿ ಕೈಕೇಯಿಯ ವಿಷಯದಲ್ಲಿ ಏನೇನು ಹೇಳುತ್ತಿರುವರು? ಏಕೆಂದರೆ ರಾಜನು ಆಚಾರ-ವಿಚಾರದಿಂದ ಹೀನನಾದರೆ ತನ್ನ ರಾಜ್ಯದಲ್ಲಿ, ವನದಲ್ಲಿಯೂ (ಋಷಿ-ಮುನಿಗಳ ಆಶ್ರಮಗಳಲ್ಲಿ) ನಿಂದೆಯ ವಿಷಯನಾಗುತ್ತಾನೆ. ಎಲ್ಲೆಡೆ ಅವನ ಕೆಟ್ಟತನದ್ದೇ ಚರ್ಚೆ ನಡೆಯುತ್ತದೆ.॥5-6॥

ಮೂಲಮ್ - 7

ಏವಮುಕ್ತೇ ತು ರಾಮೇಣ ಭದ್ರಃ ಪ್ರಾಂಜಲಿರಬ್ರವೀತ್ ।
ಸ್ಥಿತಾಃ ಶುಭಾಃ ಕಥಾ ರಾಜನ್ವರ್ತಂತೇ ಪುರವಾಸಿನಾಮ್ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಕೇಳಿದಾಗ ಭದ್ರನು ಕೈಮುಗಿದು ನುಡಿದನು - ಮಹಾರಾಜ! ಇಂದಿನ ದಿನಗಳಲ್ಲಿ ಪುರವಾಸಿಗಳಲ್ಲಿ ನಿನ್ನ ಕುರಿತು ಸದಾ ಒಳ್ಳೆಯ ಚರ್ಚೆಯೇ ನಡೆಯುತ್ತಿದೆ.॥7॥

ಮೂಲಮ್ - 8

ಅಮುಂ ತು ವಿಜಯಂ ಸೌಮ್ಯ ದಶಗ್ರೀವವಧಾರ್ಜಿತಮ್ ।
ಭೂಯಿಷ್ಠಂ ಸ್ವಪುರೇ ಪೌರೈಃ ಕಥ್ಯಂತೇ ಪುರುಷರ್ಷಭ ॥

ಅನುವಾದ

ಸೌಮ್ಯ! ಪುರುಷೋತ್ತಮ! ದಶಗ್ರೀವ ವಧೆಯ ಸಂಬಂಧೀ ನಿನ್ನ ವಿಜಯದ ಕುರಿತಾಗಿಯೇ ನಗರದಲ್ಲಿ ಎಲ್ಲ ಜನರು ಹೆಚ್ಚಾಗಿ ಮಾತುಗಳನ್ನಾಡುತ್ತಾರೆ.॥8॥

ಮೂಲಮ್ - 9

ಏವಮುಕ್ತಸ್ತು ಭದ್ರೇಣ ರಾಘವೋ ವಾಕ್ಯಮಬ್ರವೀತ್ ।
ಕಥಯಸ್ವ ಯಥಾತತ್ತ್ವಂ ಸರ್ವಂ ನಿರವಶೇಷತಃ ॥

ಮೂಲಮ್ - 10

ಶುಭಾಶುಭಾನಿ ವಾಕ್ಯಾನಿ ಕಾನ್ಯಾಹುಃ ಪುರವಾಸಿನಃ ।
ಶ್ರುತ್ವೇದಾನೀಂ ಶುಭಂ ಕುರ್ಯಾಂ ನ ಕುರ್ಯಾಮಶುಭಾನಿ ಚ ॥

ಅನುವಾದ

ಭದ್ರನು ಹೀಗೆ ಹೇಳಿದಾಗ ಶ್ರೀರಾಮ ಕೇಳಿದನು - ಪುರವಾಸಿಗಳು ನನ್ನ ವಿಷಯದಲ್ಲಿ ಯಾವ-ಯಾವ ಶುಭ ಅಥವಾ ಅಶುಭ ಮಾತುಗಳನ್ನಾಡುತ್ತಾರೆ? ಅದೆಲ್ಲವನ್ನು ಯಥಾರ್ಥವಾಗಿ ಎಲ್ಲವನ್ನು ತಿಳಿಸು. ಈಗ ಅವರ ಶುಭ ಮಾತುಗಳನ್ನು ಕೇಳಿ ಅದನ್ನು ಶುಭವೆಂದು ತಿಳಿಯುತ್ತಾರೋ ಅದನ್ನು ನಾನು ಆಚರಿಸುವೆನು. ಅಶುಭ ಮಾತುಗಳನ್ನು ಕೇಳಿ ಅದು ಅಶುಭವೆಂದು ತಿಳಿಯುತ್ತಾರೋ, ಅದನ್ನು ತ್ಯಜಿಸಿ ಬಿಡುವೆ.॥9-10॥

ಮೂಲಮ್ - 11

ಕಥಯಸ್ವ ಚ ವಿಸ್ರಬ್ಧೋ ನಿರ್ಭಯಂ ವಿಗತಜ್ವರಃ ।
ಕಥಯಂತಿ ಯಥಾ ಪೌರಾಃ ಪಾಪಾ ಜನಪದೇಷು ಚ ॥

ಅನುವಾದ

ನಿಶ್ಚಿಂತನಾಗಿ, ನಿರ್ಭಯನಾಗಿ, ಯಾವುದೇ ಆತಂಕ ಇಲ್ಲದೆ ಎಲ್ಲವನ್ನು ಹೇಳು. ಪುರಜನರು, ದೇಶದ ಪ್ರಜೆಗಳು ನನ್ನ ವಿಷಯದಲ್ಲಿ ಯಾವ ರೀತಿಯ ಅಶುಭ ಚರ್ಚೆಮಾಡುವರೋ ಅದನ್ನು ತಿಳಿಸು.॥11॥

ಮೂಲಮ್ - 12

ರಾಘವೇಣೈವಮುಕ್ತಸ್ತು ಭದ್ರಃ ಸುರುಚಿರಂ ವಚಃ ।
ಪ್ರತ್ಯುವಾಚ ಮಹಾಬಾಹುಂ ಪ್ರಾಂಜಲಿಃ ಸುಸಮಾಹಿತಃ ॥

ಅನುವಾದ

ಶ್ರೀರಘುನಾಥನು ಹೀಗೆ ಹೇಳಿದಾಗ ಭದ್ರನು ಕೈಮುಗಿದು ಏಕಾಗ್ರಚಿತ್ತನಾಗಿ ಮಹಾಬಾಹು ಶ್ರೀರಾಮನಲ್ಲಿ ಸುರುಚಿರವಾದ ಮಾತುಗಳನ್ನು ಹೇಳತೊಡಗಿದನು.॥12॥

ಮೂಲಮ್ - 13

ಶೃಣು ರಾಜನ್ಯಥಾ ಪೌರಾಃ ಕಥಯಂತಿ ಶುಭಾಶುಭಮ್ ।
ಚತ್ವರಾಪಣರಥ್ಯಾಸು ವನೇಷೂಪವನೇಷು ಚ ॥

ಅನುವಾದ

ರಾಜನೇ! ಚೌಕಗಳಲ್ಲಿಯೂ, ಬೀದಿ-ಬೀದಿಗಳಲ್ಲಿಯೂ, ಅಂಗಡಿಗಳಲ್ಲಿಯೂ, ಉದ್ಯಾನ-ಉಪವನಗಳಲ್ಲಿಯೂ ಜನರು ನಿನ್ನ ವಿಷಯವಾಗಿ ಶುಭ-ಅಶುಭವಾದ ಯಾವ ಮಾತುಗಳನಾಡುವರೋ ಅದನ್ನು ಕೇಳು.॥13॥

ಮೂಲಮ್ - 14

ದುಷ್ಕರಂ ಕೃತವಾನ್ರಾಮಃ ಸಮುದ್ರೇ ಸೇತುಬಂಧನಮ್ ।
ಅಶ್ರುತಂ ಪೂರ್ವಕೈಃ ಕೈಶ್ಚಿದ್ದೇವೈರಪಿ ಸದಾನವೈಃ ॥

ಅನುವಾದ

ಅವರು ಹೇಳುತ್ತಾರೆ - ಶ್ರೀರಾಮನು ಸಮುದ್ರಕ್ಕೆ ಸೇತುವೆ ಕಟ್ಟಿ ದುಷ್ಕರ ಕರ್ಮ ಮಾಡಿದನು. ಇಂತಹ ಕಾರ್ಯ ಮೊದಲು ಯಾವುದೇ ದೇವ-ದಾನವರು ಮಾಡಿದುದು ನಾವು ಕೇಳಿಲ್ಲ.॥14॥

ಮೂಲಮ್ - 15

ರಾವಣಶ್ಚ ದುರಾಧರ್ಷೋ ಹತಃ ಸಬಲವಾಹನಃ ।
ವಾನರಾಶ್ಚ ವಶಂ ನೀತಾ ಋಕ್ಷಾಶ್ಚ ಸಹ ರಾಕ್ಷಸೈಃ ॥

ಅನುವಾದ

ಶ್ರೀರಾಮನು ದುರ್ಧರ್ಷ ರಾವಣನನ್ನು ಸೈನ್ಯ ಪರಿವಾರದೊಂದಿಗೆ ವಧಿಸಿದನು ಹಾಗೂ ರಾಕ್ಷಸರ ಸಹಿತ ಕರಡಿ, ವಾನರರನ್ನು ಅವನಿಗೆ ಅಧೀನರಾದರು.॥15॥

ಮೂಲಮ್ - 16

ಹತ್ವಾ ಚ ರಾವಣಂ ಸಂಖ್ಯೇ ಸೀತಾಮಾಹೃತ್ಯ ರಾಘವಃ ।
ಅಮರ್ಷಂ ಪೃಷ್ಠತಃ ಕೃತ್ವಾಸ್ವವೇಶ್ಮ ಪುನರಾನಯತ್ ॥

ಅನುವಾದ

ಆದರೆ ಇಲ್ಲೊಂದು ದೋಷವಿದೆ, ಯುದ್ಧದಲ್ಲಿ ರಾವಣನನ್ನು ಕೊಂದು ಶ್ರೀರಾಮನು ಸೀತೆಯನ್ನು ಅರಮನೆಗೆ ಕರೆತಂದನು. ಆದರೆ ಅವನ ಮನಸ್ಸಿನಲ್ಲಿ ಸೀತೆಯ ಚಾರಿತ್ರ್ಯದ ಕುರಿತು ಕೋಪವಾಗಲೀ, ಸಂಶಯವಾಗಲೀ ಉಂಟಾಗಲೇ ಇಲ್ಲ.॥16॥

ಮೂಲಮ್ - 17

ಕೀದೃಶಂ ಹೃದಯೇ ತಸ್ಯ ಸೀತಾಸಂಭೋಗಜಂ ಸುಖಮ್ ।
ಅಂಕಮಾರೋಪ್ಯ ತು ಪುರಾ ರಾವಣೇನ ಬಲಾದ್ಧೃತಾಮ್ ॥

ಮೂಲಮ್ - 18

ಲಂಕಾಮಪಿ ಪುರಾ ನೀತಾಮಶೋಕವನಿಕಾಂ ಗತಾಮ್ ।
ರಕ್ಷಸಾಂ ವಶಮಾಪನ್ನಾಂ ಕಥಂ ರಾಮೋ ನ ಕುತ್ಸ್ಯತಿ ॥

ಮೂಲಮ್ - 19

ಅಸ್ಮಾಕಮಪಿ ದಾರೇಷು ಸಹನೀಯಂ ಭವಿಷ್ಯತಿ ।
ಯಥಾ ಹಿ ಕುರುತೇ ರಾಜಾ ಪ್ರಜಾಸ್ತಮನುವರ್ತತೇ ॥

ಅನುವಾದ

ಸೀತಾ ಸಮಾಗಮದಿಂದ ಅವನಿಗೆ ಎಂತಹ ಸುಖವು ತಾನೇ ಸಿಗುತ್ತದೆ? ರಾವಣನಾದರೋ ಸೀತೆಯನ್ನು ಬಲಾತ್ಕಾರವಾಗಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅಪಹರಿಸಿ ಲಂಕೆಗೆ ಕರೆದುಕೊಂಡು ಹೋದನು. ಅಲ್ಲಿ ಅವನು ಅಂತಃಪುರದ ಕ್ರೀಡಾಕಾನನವಾದ ಅಶೋಕವನದಲ್ಲಿ ಆಕೆಯನ್ನು ಇರಿಸಿದನು. ಹೀಗೆ ರಾಕ್ಷಸರ ವಶದಲ್ಲಿ ಅನೇಕ ದಿನಗಳಿದ್ದರೂ ಕೂಡ ಶ್ರೀರಾಮನಿಗೆ ಆಕೆಯ ಕುರಿತು ತಿರಸ್ಕಾರ ಏಕೆ ಉಂಟಾಗಲಿಲ್ಲ? ಈಗ ನಮಗೂ ಪತ್ನಿಯರ ಇಂತಹ ಮಾತನ್ನು ಸಹಿಸ ಬೇಕಾದೀತು; ಏಕೆಂದರೆ ರಾಜನು ಮಾಡಿದಂತೆ ಪ್ರಜೆಯು ಅದನ್ನು ಅನುಕರಣ ಮಾಡತೊಡಗುವರು.॥17-19॥

ಮೂಲಮ್ - 20

ಏವಂ ಬಹುವಿಧಾ ವಾಚೋ ವದಂತಿ ಪುರವಾಸಿನಃ ।
ನಗರೇಷು ಚ ಸರ್ವೇಷು ರಾಜನ್ ಜನಪದೇಷು ಚ ॥

ಅನುವಾದ

ರಾಜನೇ! ಹೀಗೆ ಇಡೀ ನಗರ ಮತ್ತು ದೇಶದ ಜನರು ಅನೇಕ ಮಾತುಗಳನ್ನಾಡುವರು.॥20॥

ಮೂಲಮ್ - 21

ತಸ್ಯೈವಂ ಭಾಷಿತಂ ಶ್ರುತ್ವಾ ರಾಘವಃ ಪರಮಾರ್ತವತ್ ।
ಉವಾಚ ಸುಹೃದಃ ಸರ್ವಾನ್ಕಥಮೇತದ್ ವದಂತು ಮಾಮ್ ॥

ಅನುವಾದ

ಭದ್ರನ ಈ ಮಾತನ್ನು ಕೇಳಿ ಶ್ರೀರಾಮನು ಅತ್ಯಂತ ದುಃಖಿತನಾಗಿ ಸಮಸ್ತ ಸುಹೃದಯರಲ್ಲಿ ಕೇಳಿದನು - ಈ ಮಾತು ಎಷ್ಟು ಸತ್ಯವಾಗಿದೆ? ಎಂಬುದನ್ನು ನೀವು ತಿಳಿಸಿರಿ.॥21॥

ಮೂಲಮ್ - 22

ಸರ್ವೇ ತು ಶಿರಸಾ ಭೂಮಾವಭಿವಾದ್ಯ ಪ್ರಣಮ್ಯ ಚ ।
ಪ್ರತ್ಯೂಚೂ ರಾಘವಂ ದೀನಮೇವಮೇತನ್ನ ಸಂಶಯಃ ॥

ಅನುವಾದ

ಆಗ ಎಲ್ಲರೂ ದೀರ್ಘದಂಡ ನಮಸ್ಕಾರ ಮಾಡಿ ಶ್ರೀರಾಮನಿಗೆ ದೀನವಾಣಿಯಲ್ಲಿ ಹೇಳಿದರು-ಪ್ರಭೋ! ಭದ್ರನ ಈ ಮಾತು ವಾಸ್ತವವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ.॥22॥

ಮೂಲಮ್ - 23

ಶ್ರುತ್ವಾ ತು ವಾಕ್ಯಂ ಕಾಕುತ್ಸ್ಥಃ ಸರ್ವೇಷಾಂ ಸಮುದೀರಿತಮ್ ।
ವಿಸರ್ಜಯಾಮಾಸ ತದಾ ವಯಸ್ಯಾನ್ ಶತ್ರುಸೂದನಃ ॥

ಅನುವಾದ

ಎಲ್ಲರಿಂದ ಈ ಮಾತನ್ನು ಕೇಳಿ ಶತ್ರುಸೂದನ ಶ್ರೀರಾಮನು ತತ್ಕಾಲ ಆ ಎಲ್ಲ ಸುಹೃದರನ್ನು ಬೀಳ್ಕೊಟ್ಟನು.॥23॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತಮೂರನೆಯ ಸರ್ಗ ಪೂರ್ಣವಾಯಿತು.॥43॥