[ನಲವತ್ತೆರಡನೆಯ ಸರ್ಗ]
ಭಾಗಸೂಚನಾ
ಅಶೋಕವನದಲ್ಲಿ ಶ್ರೀರಾಮ ಮತ್ತು ಸೀತಾದೇವಿಯರ ವಿಹಾರ, ಗರ್ಭಿಣಿಯಾಗಿದ್ದ ಸೀತಾದೇವಿಯು ತಪೋವನಗಳನ್ನು ಸಂದರ್ಶಿಸಲು ಬಯಸಿದುದು, ಶ್ರೀರಾಮ ಒಪ್ಪಿಗೆ
ಮೂಲಮ್ - 1
ಸ ವಿಸೃಜ್ಯ ತತೋ ರಾಮಃ ಪುಷ್ಪಕಂ ಹೇಮಭೂಷಿತಮ್ ।
ಪ್ರವಿವೇಶ ಮಹಾಬಾಹುರಶೋಕವನಿಕಾಂ ತದಾ ॥
ಅನುವಾದ
ಸುವರ್ಣಭೂಷಿತ ಪುಷ್ಪಕ ವಿಮಾನವನ್ನು ಬೀಳ್ಕೊಟ್ಟು ಮಹಾಬಾಹು ಶ್ರೀರಾಮನು ಅಶೋಕಾ ವನವನ್ನು (ಅಂತಃಪುರದ ಸಮೀಪದಲ್ಲಿದ್ದ ವಿಹಾರ ಯೋಗ್ಯವಾದ ಉಪವನ) ಪ್ರವೇಶಿಸಿದನು.॥1॥
ಮೂಲಮ್ - 2
ಚಂದನಾಗುರುಚೂತೈಶ್ಚ ತುಂಗಕಾಲೇಯಕೈರಪಿ ।
ದೇವದಾರುವನೈಶ್ಚಾಪಿ ಸಮಂತಾದುಪಶೋಭಿತಾಮ್ ॥
ಅನುವಾದ
ಚಂದನ, ಅಗರು, ಮಾವು, ತೆಂಗು, ರಕ್ತಚಂದನ ಹಾಗೂ ದೇವದಾರು ಮುಂತಾದ ವೃಕ್ಷಗಳಿಂದ ಆ ಅಶೋಕವನದ ಶೋಭೆಯನ್ನು ಹೆಚ್ಚಿಸಿದ್ದವು.॥2॥
ಮೂಲಮ್ - 3
ಚಂಪಕಾಶೋಕಪುನ್ನಾಗಮಧೂಕಪನಸಾಸನೈಃ ।
ಶೋಭಿತಾಂ ಪಾರಿಜಾತೈಶ್ಚ ವಿಧೂಮಜ್ವಲನಪ್ರಭೈಃ ॥
ಅನುವಾದ
ಸಂಪಿಗೆ, ಅಶೋಕ, ಪುನ್ನಾಗ, ಹಿಪ್ಪೆ, ಹಲಸು, ಹೊನ್ನೆ, ಹೊಗೆಯಿಲ್ಲದ ಅಗ್ನಿಯಂತೆ ಪ್ರಕಾಶಿಸುತ್ತಿದ್ದ ಪಾರಿಜಾತದಿಂದ ಆ ವಾಟಿಕಾ ಸುಶೋಭಿತವಾಗಿತ್ತು.॥3॥
ಮೂಲಮ್ - 4
ಲೋಧ್ರನೀಪಾರ್ಜುನೈರ್ನಾಗೈಃ ಸಪ್ತಪರ್ಣಾತಿಮುಕ್ತಕೈಃ ।
ಮಂದಾರಕದಲೀಗುಲ್ಮಲತಾಜಾಲಸಮಾವೃತಾಮ್ ॥
ಅನುವಾದ
ಲೋಧ್ರ, ನೀಪ, ಮತ್ತಿ, ನಾಗಕೇಸರ, ಎಳೆಲೆ ಬಾಳೆ, ತಾಳೆ, ಮಂದಾರ, ಕದಳಿ ಮುಂತಾದ ಮರ-ಗಿಡಗಳು ಹಾಗೂ ಲತಾ ಸಮೂಹಗಳು ಅದರಲ್ಲಿ ಎಲ್ಲೆಡೆ ಹರಡಿದ್ದವು.॥4॥
ಮೂಲಮ್ - 5
ಪ್ರಿಯಂಗುಭಿಃ ಕದಂಬೈಶ್ಚ ತಥಾ ಚ ವಕುಲೈರಪಿ ।
ಜಂಬೂಭಿರ್ದಾಡಿಮೈಶ್ಚೈವ ಕೋವಿದಾರೈಶ್ಚ ಶೋಭಿತಾಮ್ ॥
ಅನುವಾದ
ಪ್ರಿಯಂಗು, ಕದಂಬ, ವಕುಲ, ನೇರಳೆ, ದಾಳಿಂಬೆ, ಕೋವಿದಾರ ಮುಂತಾದ ವೃಕ್ಷಗಳು ಆ ಉಪವನವನ್ನು ಸುಶೋಭಿತ ಗೊಳಿಸುತ್ತಿದ್ದವು.॥5॥
ಮೂಲಮ್ - 6
ಸರ್ವದಾ ಕುಸುಮೈ ರಮ್ಯೈಃ ಫಲವದ್ಭಿರ್ಮನೋರಮೈಃ ।
ದಿವ್ಯಗಂಧರಸೋಪೈತೈಸ್ತರುಣಾಂಕುರಪಲ್ಲವೈಃ ॥
ಅನುವಾದ
ಸದಾಕಾಲ ಹೂವು -ಹಣ್ಣು ಕೊಡುವ ರಮಣೀಯ, ಮನೋರಮ, ದಿವ್ಯರಸ ಮತ್ತು ಸುಗಂಧಯುಕ್ತ ಹಾಗೂ ನವ ಪಲ್ಲವಗಳಿಂದ ಅಲಂಕೃತ ವೃಕ್ಷಗಳೂ ಆ ಅಶೋಕ ವನದ ಶೋಭೆಯನ್ನು ಹೆಚ್ಚಿಸಿದ್ದವು.॥6॥
ಮೂಲಮ್ - 7
ತಥೈವ ತರುಭಿರ್ದಿವ್ಯೈಃ ಶಿಲ್ಪಿಭಿಃ ಪರಿಕಲ್ಪಿತೈಃ ।
ಚಾರುಪಲ್ಲವಪುಷ್ಪಾಢ್ಯೈರ್ಮತ್ತಭ್ರಮರಸಂಕುಲೈಃ ॥
ಅನುವಾದ
ವೃಕ್ಷಗಳನ್ನು ನೆಡುವುದರಲ್ಲಿ ಕುಶಲ ಮಾಲಿಗಳಿಂದ ಬೆಳೆಸಲ್ಪಟ್ಟ ದಿವ್ಯ ವೃಕ್ಷಗಳಲ್ಲಿ ಮನೋಹರ ಪಲ್ಲವ ಹಾಗೂ ಪುಷ್ಪಗಳಿಂದ ಶೋಭಿಸುವ, ಮತ್ತು ಭೃಂಗಗಳು ಹಾರಾಡುತ್ತಿದ್ದ ಮರಗಳು ಆ ಉಪವನದ ಶೋಭೆಯನ್ನು ವೃದ್ಧಿಗೊಳಿಸುತ್ತಿದ್ದವು.॥7॥
ಮೂಲಮ್ - 8
ಕೋಕಿಲೈರ್ಭೃಂಗರಾಜೈಶ್ಚ ನಾನಾವರ್ಣೈಶ್ಚ ಪಕ್ಷಿಭಿಃ ।
ಶೋಭಿತಾಂ ಶತಶಶ್ಚಿತ್ರಾಂ ಚೂತವೃಕ್ಷಾವತಂಸಕೈಃ ॥
ಅನುವಾದ
ಕೋಗಿಲೆ, ಭೃಂಗರಾಜ ಮುಂತಾದ ಬಣ್ಣ-ಬಣ್ಣದ ನೂರಾರು ಪಕ್ಷಿಗಳು ಆ ವಾಟಿಕೆಯ ಶೋಭೆಯಾಗಿತ್ತು. ಅವು ಮಾವಿನ ಚಿಗುರುಗಳಲ್ಲಿ ಕುಳಿತು ಚಿತ್ರ-ವಿಚಿತ್ರವಾಗಿ ಶೋಭಿಸುತ್ತಾ ವಾಟಿಕೆಯ ಅಂದವನ್ನು ಹೆಚ್ಚಿಸಿದ್ದವು.॥8॥
ಮೂಲಮ್ - 9
ಶಾತಕುಂಭನಿಭಾಃ ಕೇಚಿತ್ಕೇಚಿದಗ್ನಿಶಿಖೋಪಮಾಃ ।
ನೀಲಾಂಜನನಿಭಾಶ್ಚಾನ್ಯೇ ಭಾಂತಿ ತತ್ರ ಸ್ಮ ಪಾದಪಾಃ ॥
ಅನುವಾದ
ಕೆಲವು ವೃಕ್ಷಗಳು ಸುವರ್ಣದಂತೆ ಹಳದಿಯಾಗಿ, ಕೆಲವು ಅಗ್ನಿಶಿಖೆ ಯಂತೆ ಉಜ್ವಲ ಮತ್ತು ಕೆಲವು ನೀಲವಾದ ಕಾಡಿಗೆಯಂತೆ ಶ್ಯಾಮಲವರ್ಣದಿಂದ ಸುಶೋಭಿತವಾಗಿದ್ದು, ಆ ಉಪ ವನವನ್ನು ಬೆಳಗುತ್ತಿದ್ದವು.॥9॥
ಮೂಲಮ್ - 10
ಸುರಭೀಣಿ ಚ ಪುಷ್ಪಾಣಿ ಮಾಲ್ಯಾನಿ ವಿವಿಧಾನಿ ಚ ।
ದೀರ್ಘಿಕಾ ವಿವಿಧಾಕಾರಾಃ ಪೂರ್ಣಾಃ ಪರಮವಾರಿಣಾ ॥
ಅನುವಾದ
ಅಲ್ಲಿ ಅನೇಕ ಪ್ರಕಾರದ ಸುಗಂಧಿತ ಪುಷ್ಪಗುಚ್ಛಗಳು ಕಂಡುಬರುತ್ತಿದ್ದ ಹಾಗೂ ಸ್ವಚ್ಛವಾದ ನೀರಿನಿಂದ ತುಂಬಿದ, ವಿಧ-ವಿಧವಾದ ಆಕಾರದ ಪುಷ್ಕರಿಣಿಗಳು ಶೋಭಿಸುತ್ತಿದ್ದವು.॥10॥
ಮೂಲಮ್ - 11
ಮಾಣಿಕ್ಯಕೃತಸೋಪಾನಾಃ ಸ್ಫಾಟಿಕಾಂತರಕುಟ್ಟಿಮಾಃ ।
ಫುಲ್ಲಪದ್ಮೋತ್ಪಲವನಾಶ್ಚಕ್ರವಾಕೋಪಶೋಭಿತಾಃ ॥
ಅನುವಾದ
ಅವುಗಳಲ್ಲಿ ಮಾಣಿಕ್ಯದ ಮೆಟ್ಟಲುಗಳಿದ್ದು, ನೀರೊಳಗಿನ ನೆಲ ಸ್ಫಟಿಕಮಣಿಗಳಿಂದ ನಿರ್ಮಿಸಿದ್ದರು. ಆ ಕೊಳಗಳಲ್ಲಿ ಅರಳಿದ ಕಮಲ, ನೈದಿಲೆಗಳಿಂದ ಶೋಭಿಸುತ್ತಿದ್ದವು. ಚಕ್ರವಾಕಗಳೂ ಅದರಲ್ಲಿ ವಿಹರಿಸುತ್ತಿದ್ದವು.॥11॥
ಮೂಲಮ್ - 12
ದಾತ್ಯೂಹಶುಕಸಂಘುಷ್ಟಾ ಹಂಸಸಾರಸನಾದಿತಾಃ ।
ತರುಭಿಃ ಪುಷ್ಪಶಬಲೈಸ್ತೀರಜೈರುಪಶೋಭಿತಾಃ ॥
ಅನುವಾದ
ಕೋಗಿಲೆಗಳೂ, ಗಿಳಿಗಳು, ಹಂಸ, ಸಾರಸಗಳ ಕಲರವವು ಪ್ರತಿಧ್ವನಿಸುತ್ತಿತ್ತು. ಹೂವುಗಳ ಬಣ್ಣ-ಬಣ್ಣಗಳಿಂದ ಕಂಡುಬರುವ ತಟದ ವೃಕ್ಷಗಳಿಂದ ಆ ಸರೋವರಗಳು ಶೋಭಿಸುತ್ತಿದ್ದವು.॥12॥
ಮೂಲಮ್ - 13½
ಪ್ರಾಕಾರೈರ್ವಿವಿಧಾಕಾರೈಃ ಶೋಭಿತಾಶ್ಚ ಶಿಲಾತಲೈಃ ।
ತತ್ರೈವ ಚ ವನೋದ್ದೇಶೇ ವೈಡೂರ್ಯಮಣಿಸಂನಿಭೈಃ ॥
ಶಾದ್ವಲೈಃ ಪರಮೋಪೇತಾಂ ಪುಷ್ಪಿತದ್ರುಮಕಾನನಾಮ್ ।
ಅನುವಾದ
ವಾಟಿಕೆಯು ಬಗೆ-ಬಗೆ ಪ್ರಾಕಾರಗಳಿಂದಲೂ, ಶಿಲೆಗಳಿಂದಲೂ ಸುಶೋಭಿತವಾಗಿತ್ತು. ಆ ವನಪ್ರಾಂತವು ವೈಡೂರ್ಯಮಣಿಗಳಂತಿ ರುವ ಹರಿಸು ಹುಲ್ಲಿನಿಂದ ಶೃಂಗರಿಸಲ್ಪಟ್ಟಿತ್ತು. ಅಲ್ಲಿಯ ವೃಕ್ಷಗಳು ಹೂವುಗಳ ಭಾರದಿಂದ ಬಾಗಿಹೋಗಿದ್ದವು.॥13½॥
ಮೂಲಮ್ - 14½
ತತ್ರ ಸಂಘರ್ಷಜಾತಾನಾಂ ವೃಕ್ಷಾಣಾಂ ಪುಷ್ಪಶಾಲಿನಾಮ್ ॥
ಪ್ರಸ್ತರಾಃ ಪುಷ್ಪಶಬಲಾ ನಭಸ್ತಾರಾಗಣೈರಿವ ।
ಅನುವಾದ
ಪುಷ್ಪಭರಿತವಾದ ವೃಕ್ಷಗಳು ಆಗಾಗ ಗಾಳಿಯ ಬಡಿತಕ್ಕೆ ಸಂಘರ್ಷಿಸುತ್ತಿದ್ದು, ಕೆಳಕ್ಕೆ ಬೀಳುತ್ತಿದ್ದ ಪುಷ್ಪಗಳಿಂದ ಮುಚ್ಚಲ್ಪಟ್ಟ ಕಲ್ಲು ಬಂಡೆಗಳು, ನಕ್ಷತ್ರಗಳಿಂದ ನಿಬಿಡವಾದ ಆಕಾಶದಂತೆ ಕಾಣುತ್ತಿತ್ತು.॥14½॥
ಮೂಲಮ್ - 15½
ನಂದನಂ ಹಿ ಯಥೇಂದ್ರಸ್ಯ ಬ್ರಾಹ್ಮಂ ಚೈತ್ರರಥಂ ಯಥಾ ॥
ತಥಾಭೂತಂ ಹಿ ರಾಮಸ್ಯ ಕಾನನಂ ಸಂನಿವೇಶನಮ್ ।
ಅನುವಾದ
ಇಂದ್ರನ ನಂದನವನದಂತೆ, ಬ್ರಹ್ಮನು ನಿರ್ಮಿಸಿದ ಕುಬೇರನ ಚೈತ್ರರಥದಂತೆ ಅದು ಶೋಭಿಸುತ್ತಿತ್ತು. ಸುಂದರ ಭವನಗಳಿಂದ ವಿಭೂಷಿತವಾಗಿ ಶ್ರೀರಾಮನ ಕ್ರೀಡಾಕಾನನವು ಶೋಭಾ ಸಂಪನ್ನವಾಗಿತ್ತು.॥15½॥
ಮೂಲಮ್ - 16½
ಬಹ್ವಾಸನಗೃಹೋಪೇತಾಂ ಲತಾಗೃಹಸಮಾವೃತಾಮ್ ॥
ಅಶೋಕವನಿಕಾಂ ಸ್ಫೀತಾಂ ಪ್ರವಿಶ್ಯ ರಘುನಂದನಃ ।
ಮೂಲಮ್ - 17½
ಆಸನೇ ಚ ಶುಭಾಕಾರೇ ಪುಷ್ಪಪ್ರಕರಭೂಷಿತೇ ॥
ಕುಥಾಸ್ತರಣಸಂಸ್ತೀರ್ಣೇ ರಾಮಃ ಸಂನಿಷಸಾದ ಹ ।
ಅನುವಾದ
ಅಲ್ಲಿ ಒಳಗೆ ಕುಳಿತುಕೊಳ್ಳಲು ಅನೇಕ ಆಸನಗಳಿದ್ದ ಭವನಗಳು ಬಹಳಷ್ಟು ಇದ್ದವು. ಆ ವಾಟಿಕೆಯು ಅನೇಕ ಲತಾಮಂಟಪಗಳಿಂದ ಸುಂದರವಾಗಿ ಕಾಣುತ್ತಿತ್ತು. ಆ ಸಮೃದ್ಧಶಾಲೀ ಅಶೋಕವನದಲ್ಲಿ ಪ್ರವೇಶಿಸಿದ ಶ್ರೀರಾಮನು ಪುಷ್ಪರಾಶಿಗಳಿಂದ ವಿಭೂಷಿಕತ ರತ್ನಗಂಬಳಿ ಹಾಸಿದ ಒಂದು ಸುಂದರ ಆಸನದಲ್ಲಿ ಕುಳಿತನು.॥16½-17½॥
ಮೂಲಮ್ - 18½
ಸೀತಾಮಾದಾಯ ಹಸ್ತೇನ ಮಧು ಮೈರೇಯಕಂ ಶುಚಿ ॥
ಪಾಯಯಾಮಾಸ ಕಾಕುತ್ಸ್ಥಃ ಶಚೀಮಿವ ಪುರಂದರಃ ।
ಅನುವಾದ
ದೇವೇಂದ್ರನು ಶಚಿಗೆ ಸುಧಾಪಾನ ಮಾಡಿಸಿದಂತೆಯೇ ಕಾಕುತ್ಸ್ಥಕುಲಭೂಷಣ ಶ್ರೀರಾಮನು ತನ್ನ ಕೈಯಿಂದ ಪವಿತ್ರ ಮಧುಪೇಯವನ್ನು ಎತ್ತಿಕೊಂಡು ಸೀತೆಗೆ ಕುಡಿಸಿದನು.॥18½॥
ಮೂಲಮ್ - 19½
ಮಾಂಸಾನಿ ಚಸುಮೃಷ್ಟಾನಿ ಫಲಾನಿ ವಿವಿಧಾನಿ ಚ ॥
ರಾಮಸ್ಯಾಭ್ಯವಹಾರಾರ್ಥಂ ಕಿಂಕರಾಸ್ತೂರ್ಣಮಾಹರನ್ ।
ಅನುವಾದ
ಸೇವಕರು ಶ್ರೀರಾಮನ ಭೋಜನಾರ್ಥ ರಾಜೋಚಿತ ಭೋಜ್ಯ ಪದಾರ್ಥ (ಬಗೆ-ಬಗೆಯ ಅಡಿಗೆ) ಹಾಗೂ ನಾನಾ ಪ್ರಕಾರದ ಫಲಗಳನ್ನು ಕೂಡಲೇ ತಂದಿರಿಸಿದರು.॥19½॥
ಮೂಲಮ್ - 20½
ಉಪಾನೃತ್ಯಂಶ್ಚ ರಾಜಾನಂ ನೃತ್ಯಗೀತವಿಶಾರದಾಃ ॥
ಅಪ್ಸರೋರಗಸಂಘಾಶ್ಚ ಕಿಂನರೀಪರಿವಾರಿತಾಃ ।
ಅನುವಾದ
ಆಗ ರಾಜಾರಾಮನ ಎದುರಿಗೆ ಗೀತ-ನೃತ್ಯದಲ್ಲಿ ಪರಿಣಿತ ಅಪ್ಸರೆಯರು, ನಾಗಕನ್ಯೆಯರು, ಕಿನ್ನರಿಯರೊಂದಿಗೆ ಸೇರಿ ನೃತ್ಯ ಮಾಡತೊಡಗಿದರು.॥20½॥
ಮೂಲಮ್ - 21½
ದಕ್ಷಿಣಾ ರೂಪವತ್ಯಶ್ಚ ಸ್ತ್ರಿಯಃ ಪಾನವಶಂ ಗತಾಃ ॥
ಉಪನೃತ್ಯಂತ ಕಾಕುತ್ಸ್ಥಂ ನೃತ್ಯಗೀತವಿಶಾರದಾಃ ।
ಅನುವಾದ
ನೃತ್ಯ-ಗೀತದಲ್ಲಿ ಕುಶಲ ಮತ್ತು ಚತುರರಾದ ಅನೇಕ ರೂಪವತೀ ಸ್ತ್ರೀಯರು ಮಧುಪಾನದಿಂದ ಉನ್ಮತ್ತರಾಗಿ ಶ್ರೀರಾಮಚಂದ್ರನ ಬಳಿಯಲ್ಲಿ ತಮ್ಮ ನೃತ್ಯಕಲೆಯನ್ನು ಪ್ರದರ್ಶಿಸಿದರು.॥21½॥
ಮೂಲಮ್ - 22½
ಮನೋಽಭಿರಾಮಾ ರಾಮಾಸ್ತಾ ರಾಮೋ ರಮಯತಾಂ ವರಃ ॥
ರಮಯಾಮಾಸ ಧರ್ಮಾತ್ಮಾ ನಿತ್ಯಂ ಪರಮಭೂಷಿತಾಃ ।
ಅನುವಾದ
ಬೇರೆಯವರ ಮನಸ್ಸನ್ನು ರಮಿಸುವ ಪುರುಷಶ್ರೇಷ್ಠ ಧರ್ಮಾತ್ಮಾ ಶ್ರೀರಾಮನು ಸದಾ ಉತ್ತಮ ವಸ್ತ್ರಾಭೂಷಣಗಳಿಂದ ಅಲಂಕೃತರಾದ ಆ ಮನೋಭಿರಾಮ ರಮಣಿಯರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುತ್ತಿದ್ದನು.॥22½॥
ಮೂಲಮ್ - 23½
ಸ ತಯಾ ಸೀತಯಾ ಸಾರ್ಧಮಾಸೀನೋ ವಿರರಾಜ ಹ ॥
ಅರುಂಧತ್ಯಾ ಇವಾಸೀನೋ ವಸಿಷ್ಠ ಇವ ತೇಜಸಾ ।
ಅನುವಾದ
ಆಗ ಭಗವಾನ್ ಶ್ರೀರಾಮನು ಸೀತಾದೇವಿಯೊಂದಿಗೆ ಸಿಂಹಾಸನದಲ್ಲಿ ವಿರಾಜಿಸುತ್ತಾ, ತನ್ನ ತೇಜದಿಂದ ಅರುಂಧತಿಯೊಂದಿಗೆ ಕುಳಿತಿರುವ ವಸಿಷ್ಠರಂತೆ ಶೋಭಿಸುತ್ತಿದ್ದನು.॥23½॥
ಮೂಲಮ್ - 24½
ಏವಂ ರಾಮೋ ಮುದಾಯುಕ್ತಃ ಸೀತಾಂ ಸುರಸುತೋಪಮಾಮ್ ॥
ರಮಯಾಮಾಸ ವೈದೇಹೀಮಹನ್ಯಹನಿ ದೇವವತ್ ।
ಅನುವಾದ
ಹೀಗೆ ಶ್ರೀರಾಮನು ಪ್ರತಿದಿನ ದೇವತೆಗಳಂತೆ ಆನಂದಿತನಾಗಿದ್ದು, ದೇವಕನ್ಯೆಯಂತಿರುವ ಸುಂದರಿ ವೈದೇಹಿ ಸೀತೆಯೊಂದಿಗೆ ರಮಿಸುತ್ತಿದ್ದನು.॥24½॥
ಮೂಲಮ್ - 25
ತಥಾ ತಯೋರ್ವಿಹರತೋಃ ಸೀತಾರಾಘವಯೋಶ್ಚಿರಮ್ ॥
ಮೂಲಮ್ - 26
ಅತ್ಯಕ್ರಾಮಚ್ಛುಭಃ ಕಾಲಃ ಶೈಶಿರೋ ಭೋಗದಃ ಸದಾ ।
ಪ್ರಾಪ್ತಯೋರ್ವಿವಿಧಾನ್ಭೋಗಾನತೀತಃ ಶಿಶಿರಾಗಮಃ ॥
ಅನುವಾದ
ಈ ಪ್ರಕಾರ ಸೀತಾರಾಮರು ಚಿರಕಾಲ ವಿಹರಿಸುತ್ತಿದ್ದರು. ಅಷ್ಟರಲ್ಲಿ ಸದಾ ಭೋಗಪ್ರದಾನ ಮಾಡುವ ಶಿಶಿರ ಋತುವಿನ ಸುಂದರ ಸಮಯ ಕಳೆದುಹೋಯಿತು. ಬಗೆ-ಬಗೆಯ ಭೋಗಗಳನ್ನು ಅನುಭವಿ ಸುತ್ತಾ ರಾಜದಂಪತಿಗಳ ಆ ಶಿಶಿರಕಾಲ ಮುಗಿದು ಹೋಯಿತು.॥25-26॥
ಮೂಲಮ್ - 27
ಪೂರ್ವಾಹ್ಣೇ ಧರ್ಮಕಾರ್ಯಾಣಿ ಕೃತ್ವಾ ಧರ್ಮೇಣ ಧರ್ಮವಿತ್ ।
ಶೇಷಂ ದಿವಸಭಾಗಾರ್ಧಮಂತಃಪುರಗತೋಽಭವತ್ ॥
ಅನುವಾದ
ಧರ್ಮಜ್ಞ ಶ್ರೀರಾಮ ಪೂರ್ವಾಹ್ಣದಲ್ಲಿ ಧರ್ಮಕ್ಕನುಸಾರ ಧಾರ್ಮಿಕ ಕೃತ್ಯ ಮಾಡುತ್ತಿದ್ದನು ಮತ್ತು ಉಳಿದ ಅರ್ಧದಿನ ಅಂತಃಪುರದಲ್ಲಿ ಇರುತ್ತಿದ್ದನು.॥27॥
ಮೂಲಮ್ - 28
ಸೀತಾಪಿ ದೇವಕಾರ್ಯಾಣಿ ಕೃತ್ವಾ ಪೌರ್ವಾಹ್ಣಿಕಾನಿ ವೈ ।
ಶ್ವಶ್ರೂಣಾಮಕರೋತ್ಪೂಜಾಂ ಸರ್ವಾಸಾಮವಿಶೇಷತಃ ॥
ಅನುವಾದ
ಸೀತೆಯೂ ಕೂಡ ಪೂರ್ವಾಹ್ಣದಲ್ಲಿ ದೇವಪೂಜಾದಿಗಳನ್ನು ಮಾಡಿ, ಎಲ್ಲ ಅತ್ತೆಯರಿಗೆ ಸಮಾನರೂಪದಿಂದ ಸೇವೆ-ಪೂಜೆ ಮಾಡುತ್ತಿದ್ದಳು.॥28॥
ಮೂಲಮ್ - 29
ಅಭ್ಯಗಚ್ಛತ್ತತೋ ರಾಮಂ ವಿಚಿತ್ರಾಭರಣಾಂಬರಾ ।
ತ್ರಿವಿಷ್ಟಪೇ ಸಹಸ್ರಾಕ್ಷಮುಪವಿಷ್ಟಂ ಯಥಾ ಶಚೀ ॥
ಅನುವಾದ
ಅನಂತರ ಸ್ವರ್ಗದಲ್ಲಿ ಶಚಿಯು ಸಹಸ್ರಾಕ್ಷ ಇಂದ್ರನ ಸೇವೆಯಲ್ಲಿ ಉಪಸ್ಥಿತಳಾಗುವಂತೆ, ಸೀತೆಯು ಚಿತ್ರಿತ ವಸ್ತ್ರಭೂಷಣಗಳಿಂದ ಅಲಂಕೃತಳಾಗಿ ಶ್ರೀರಾಮಚಂದ್ರನ ಬಳಿಗೆ ಬರುತ್ತಿದ್ದಳು.॥29॥
ಮೂಲಮ್ - 30
ದೃಷ್ಟ್ವಾತು ರಾಘವಃ ಪತ್ನೀಂ ಕಲ್ಯಾಣೇನ ಸಮನ್ವಿತಾಮ್ ।
ಪ್ರಹರ್ಷಮತುಲಂ ಲೇಭೇ ಸಾಧು ಸಾಧ್ವಿತಿಚಾಬ್ರವೀತ್ ॥
ಅನುವಾದ
ಆಗಲೇ ಶ್ರೀರಾಮಚಂದ್ರನು ತನ್ನ ಪತ್ನಿಯ ಗರ್ಭಿಣಿಯ ಮಂಗಲಮಯ ಚಿಹ್ನೆಗಳನ್ನು ನೋಡಿ, ಅನುಪಮ ಹರ್ಷಿತನಾಗಿ - ‘ಬಹಳ ಒಳ್ಳೆಯದು, ಬಹಳ ಉತ್ತಮ’ ಎಂದು ನುಡಿದನು.॥30॥
ಮೂಲಮ್ - 31½
ಅಬ್ರವೀಚ್ಚ ವರಾರೋಹಾಂ ಸೀತಾಂ ಸುರಸುತೋಪಮಾಮ್ ।
ಅಪತ್ಯಲಾಭೋ ವೈದೇಹಿ ತ್ವಯ್ಯಯಂ ಸಮುಪಸ್ಥಿತಃ ॥
ಕಿಮಿಚ್ಛಸಿ ವರಾರೋಹೇ ಕಾಮಃ ಕಿಂ ಕ್ರಿಯತಾಂ ತವ ।
ಅನುವಾದ
ಮತ್ತೆ ಅವನು ದೇವಕನ್ಯೆಯಂತೆ ಸುಂದರೀ ಸೀತೆಯಲ್ಲಿ ಹೇಳಿದನು - ವೈದೇಹಿ! ನಿನ್ನ ಗರ್ಭದಿಂದ ಪುತ್ರಪ್ರಾಪ್ತವಾಗುವ ಸಮಯ ಈಗ ಉಪಸ್ಥಿತವಾಗಿದೆ. ವರಾರೋಹೇ! ನಿನಗೇನು ಇಚ್ಛೆ ಇದೆ? ತಿಳಿಸು. ನಾನು ನಿನ್ನ ಯಾವ ಮನೋರಥ ಪೂರ್ಣಗೊಳಿಸಲಿ.॥31½॥
ಮೂಲಮ್ - 32
ಸ್ಮಿತಂ ಕೃತ್ವಾ ತು ವೈದೇಹೀ ರಾಮಂ ವಾಕ್ಯಮಥಾಬ್ರವೀತ್ ॥
ಮೂಲಮ್ - 33
ತಪೋವನಾನಿ ಪುಣ್ಯಾನಿ ದ್ರಷ್ಟುಮಿಚ್ಛಾಮಿ ರಾಘವ ।
ಗಂಗಾತೀರೋಪವಿಷ್ಟಾನಾಮೃಷೀಣಾಮುಗ್ರತೇಜಸಾಮ್ ॥
ಮೂಲಮ್ - 34½
ಲಮೂಲಾಶಿನಾಂ ದೇವ ಪಾದಮೂಲೇಷು ವರ್ತಿತುಮ್ ।
ಏಷ ಮೇ ಪರಮಃ ಕಾಮೋ ಯನ್ಮೂಲಲಭೋಜಿನಾಮ್ ॥
ಅಪ್ಯೇಕರಾತ್ರಿಂ ಕಾಕುತ್ಸ್ಥ ನಿವಸೇಯಂ ತಪೋವನೇ ।
ಅನುವಾದ
ಅದಕ್ಕೆ ಸೀತೆಯು ಮುಗುಳ್ನಕ್ಕು ಶ್ರೀರಾಮನಲ್ಲಿ ಹೇಳಿದಳು- ರಘುನಂದನ ! ನನಗೆ ಒಮ್ಮೆ ಆ ಪವಿತ್ರ ತಪೋವನಗಳನ್ನು ನೋಡಬೇಕೆಂಬ ಬಯಕೆ ಇದೆ. ದೇವ! ಗಂಗಾತೀರದಲ್ಲಿ ಇದ್ದು ಫಲ-ಮೂಲ ತಿನ್ನುವ ಉಗ್ರ ತೇಜಸ್ವೀ ಮಹರ್ಷಿಗಳ ಬಳಿಯಲ್ಲಿ ಕೆಲ ದಿನ ಇರಲು ಬಯಸುತ್ತಿರುವೆನು. ಕಾಕುತ್ಸ್ಥನೇ ! ಫಲ-ಮೂಲ ಭುಂಜಿಸುವ ಮಹಾತ್ಮರ ತಪೋವನದಲ್ಲಿ ಒಂದು ರಾತ್ರೆ ಕಳೆಯಬೇಕೆಂಬುದೇ ಈಗ ನನ್ನ ಅಭಿಲಾಷೆಯಾಗಿದೆ.॥32-34½॥
ಮೂಲಮ್ - 35
ತಥೇತಿ ಚ ಪ್ರತಿಜ್ಞಾತಂ ರಾಮೇಣಾಕ್ಲಿಷ್ಟಕರ್ಮಣಾ ।
ವಿಸ್ರಬ್ಧಾ ಭವ ವೈದೇಹಿ ಶ್ವೋ ಗಮಿಷ್ಯಸ್ಯಸಂಶಯಮ್ ॥
ಅನುವಾದ
ಆಯಾಸವಿಲ್ಲದೆ ಮಹಾಕಾರ್ಯ ಮಾಡುವ ಶ್ರೀರಾಮನು ಸೀತೆಯ ಈ ಇಚ್ಛೆಯನ್ನು ಪೂರ್ಣಗೊಳಿಸಲು ಪ್ರತಿಜ್ಞೆ ಮಾಡಿ ಹೇಳಿದನು - ವಿದೇಹನಂದಿನೀ! ನಿಶ್ಚಿಂತಳಾಗಿರು. ನಾಳೆಯೇ ಅಲ್ಲಿಗೆ ಹೋಗುವೆ. ಇದರಲ್ಲಿ ಸಂಶಯವೇ ಇಲ್ಲ.॥35॥
ಮೂಲಮ್ - 36
ಏವಮುಕ್ತ್ವಾತು ಕಾಕುತ್ಸ್ಥೋ ಮೈಥಿಲೀಂ ಜನಕಾತ್ಮಜಾಮ್ ।
ಮಧ್ಯಕಕ್ಷಾಂತರಂ ರಾಮೋ ನಿರ್ಜಗಾಮ ಸುಹೃದ್ವತಃ ॥
ಅನುವಾದ
ಮಿಥಿಲೇಶ ಕುಮಾರಿ ಜಾನಕಿಯಲ್ಲಿ ಹೀಗೆ ಹೇಳಿ ಶ್ರೀರಾಮನು ತನ್ನ ಮಿತ್ರರೊಂದಿಗೆ ವಾಟಿಕೆಯ ನಡುವಿನ ಸ್ಥಳಕ್ಕೆ ಹೊರಟುಹೋದನು.॥36॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೆರಡನೆಯ ಸರ್ಗ ಪೂರ್ಣವಾಯಿತು. ॥42॥