[ಪ್ರಕ್ಷಿಪ್ತ ಸರ್ಗ 2]
ಭಾಗಸೂಚನಾ
ನಾಯಿಯ ಪರವಾಗಿ ಶ್ರೀರಾಮನ ನ್ಯಾಯನಿರ್ಣಯ, ಅದರ ಇಚ್ಛೆಯಂತೆ ಅದನ್ನು ಹೊಡೆದ ಬ್ರಾಹ್ಮಣನಿಗೆ ಮಠಾಧಿಪತ್ಯವನ್ನಿತ್ತುದು, ಮಠಾಧಿಪತ್ಯದಲ್ಲಿರುವ ದೋಷಗಳನ್ನು ವಿವರಿಸಿ ಹೇಳಿದುದು
ಮೂಲಮ್ - 1
ಶ್ರುತ್ವಾ ರಾಮಸ್ಯ ವಚನಂ ಲಕ್ಷ್ಮಣಸ್ತ್ವರಿತಸ್ತದಾ ।
ಶ್ವಾನಮಾಹೂಯ ಮತಿಮಾನ್ರಾಘವಾಯ ನ್ಯವೇದಯತ್ ॥
ಅನುವಾದ
ಶ್ರೀರಾಮನ ಮಾತನ್ನು ಕೇಳಿ ಬುದ್ಧಿವಂತ ಲಕ್ಷ್ಮಣನು ಕೂಡಲೇ ಆ ನಾಯಿಯನ್ನು ಕರೆದು, ಶ್ರೀರಾಮನಿಗೆ ಅದು ಬಂದಿರುವ ಸೂಚನೆ ಕೊಟ್ಟನು.॥1॥
ಮೂಲಮ್ - 2
ದೃಷ್ಟ್ವಾ ಸಮಾಗತಂ ಶ್ವಾನಂ ರಾಮೋ ವಚನಮಬ್ರವೀತ್ ।
ವಿವಕ್ಷಿತಾರ್ಥಂ ಮೇ ಬ್ರೂಹಿ ಸಾರಮೇಯ ನ ತೇ ಭಯಮ್ ॥
ಅನುವಾದ
ಅಲ್ಲಿಗೆ ಬಂದಿರುವ ನಾಯಿಯನ್ನು ನೋಡಿ ಶ್ರೀರಾಮನು ಹೇಳಿದನು - ಸಾರಮೇಯ! ನಿನಗೆ ಏನು ಬೇಕೆಂದಿರುವೆಯೋ ಅದನ್ನು ನನ್ನ ಮುಂದೆ ಹೇಳು. ಇಲ್ಲಿ ನಿನಗೆ ಯಾವುದೇ ಭಯವಿಲ್ಲ.॥2॥
ಮೂಲಮ್ - 3
ಅಥಾಪಶ್ಯತ ತತ್ರಸ್ಥಂ ರಾಮಂ ಶ್ವಾ ಭಿನ್ನಮಸ್ತಕಃ ।
ತತೋ ದೃಷ್ಟ್ವಾ ಸ ರಾಜಾನಂ ಸಾರಮೇಯೋಽಬ್ರವೀದ್ವಚಃ ॥
ಅನುವಾದ
ನಾಯಿಯ ತಲೆ ಒಡೆದುಹೋಗಿತ್ತು. ಅದು ರಾಜ ಸಭೆಯಲ್ಲಿ ಕುಳಿತಿರುವ ಮಹಾರಾಜಾ ಶ್ರೀರಾಮನ ಕಡೆಗೆ ನೋಡಿ ಹೀಗೆ ಹೇಳಿತು.॥3॥
ಮೂಲಮ್ - 4
ರಾಜೈವ ಕರ್ತಾ ಭೂತಾನಾಂ ರಾಜಾ ಚೈವ ವಿನಾಯಕಃ ।
ರಾಜಾ ಸುಪ್ತೇಷು ಜಾಗರ್ತಿ ರಾಜಾ ಪಾಲಯತಿ ಪ್ರಜಾಃ ॥
ಅನುವಾದ
ರಾಜನೇ ಸಮಸ್ತ ಪ್ರಾಣಿಗಳ ಉತ್ಪಾದಕ ಮತ್ತು ನಾಯಕನಾಗಿದ್ದಾನೆ. ಎಲ್ಲರೂ ಮಲಗಿದ್ದರೂ ರಾಜನು ಎಚ್ಚರವಾಗಿದ್ದು ಪ್ರಜೆಗಳನ್ನು ಪಾಲಿಸುತ್ತಾನೆ.॥4॥
ಮೂಲಮ್ - 5
ನೀತ್ಯಾ ಸುನೀತಯಾ ರಾಜಾ ಧರ್ಮಂ ರಕ್ಷತಿ ರಕ್ಷಿತಾ ।
ಯದಾ ನ ಪಾಲಯೇದ್ರಾಜಾ ಕ್ಷಿಪ್ರಂ ನಶ್ಯಂತಿವೈ ಪ್ರಜಾಃ ॥
ಅನುವಾದ
ರಾಜನು ಎಲ್ಲರ ರಕ್ಷಕನಾಗಿದ್ದಾನೆ. ಅವನು ಉತ್ತಮ ನೀತಿಯನ್ನು ಪ್ರಯೋಗಿಸಿ ಎಲ್ಲರನ್ನು ರಕ್ಷಿಸುತ್ತಾನೆ. ರಾಜನು ಪಾಲಿಸದಿದ್ದರೆ ಸಮಸ್ತ ಪ್ರಜೆಗಳು ಶೀಘ್ರವಾಗಿ ನಾಶವಾಗಿ ಹೋಗುವುದು.॥5॥
ಮೂಲಮ್ - 6
ರಾಜಾ ಕರ್ತಾ ಚ ಗೋಪ್ತಾ ಚ ಸರ್ವಸ್ಯ ಜಗತಃ ಪಿತಾ ।
ರಾಜಾ ಕಾಲೋ ಯುಗಂ ಚೈವ ರಾಜಾ ಸರ್ವಮಿದಂ ಜಗತ್ ॥
ಅನುವಾದ
ರಾಜನು ಕರ್ತಾ, ರಕ್ಷಕ, ಸಮಸ್ತ ಜಗತ್ತಿನ ಪಿತಾಮಹನಾಗಿದ್ದಾನೆ. ರಾಜನು ಕಾಲ, ಯುಗ ಹಾಗೂ ಸಂಪೂರ್ಣ ಜಗತ್ತೂ ಅವನೇ ಆಗಿದ್ದಾನೆ.॥6॥
ಮೂಲಮ್ - 7
ಧಾರಣಾದ್ಧರ್ಮಮಿತ್ಯಾಹುರ್ಧರ್ಮೇಣ ವಿಧೃತಾಃ ಪ್ರಜಾಃ ।
ಯಸ್ಮಾದ್ಧಾರಯತೇ ಸರ್ವಂ ತ್ರೈಲೋಕ್ಯಂ ಸಚರಾಚರಮ್ ॥
ಅನುವಾದ
ಧರ್ಮವು ಸಮಸ್ತ ಜಗತ್ತನ್ನು ಧರಿಸುತ್ತದೆ. ಅದಕ್ಕಾಗಿ ಅದರ ಹೆಸರು ಧರ್ಮವಾಗಿದೆ. ಧರ್ಮವೇ ಪ್ರಜೆಯನ್ನು ಧರಿಸಿಟ್ಟಿದೆ; ಏಕೆಂದರೆ ಅದೇ ಚರಾಚರ ಪ್ರಾಣಿಗಳ ಸಹಿತ ತ್ರಿಲೋಕಗಳ ಆಧಾರವಾಗಿದೆ.॥7॥
ಮೂಲಮ್ - 8
ಧಾರಣಾದ್ವಿದ್ವಿಷಾಂ ಚೈವ ಧರ್ಮೇಣಾರಂಜಯನ್ಪ್ರಜಾಃ ।
ತಸ್ಮಾದ್ಧಾರಣಮಿತ್ಯುಕ್ತಂ ಸ ಧರ್ಮ ಇತಿ ನಿಶ್ಚಯಃ ॥
ಅನುವಾದ
ರಾಜನು ತನ್ನ ದ್ರೋಹಿಗಳನ್ನು ಧರಿಸುತ್ತಾನೆ. (ಅಥವಾ ಅವನು ದುಷ್ಟರನ್ನು ಮೇರೆಯಲ್ಲಿ ಇಡುತ್ತಾನೆ) ಅವನು ಧರ್ಮದಿಂದ ಪ್ರಜೆಗಳನ್ನು ಸಂತೋಷದಲ್ಲಿರಿಸುತ್ತಾನೆ. ಅದಕ್ಕಾಗಿ ಅವನ ಶಾಸನರೂಪೀ ಕರ್ಮವನ್ನು ಧಾರಣ ಎಂದು ಹೇಳಿದೆ. ಧಾರಣವೇ ಧರ್ಮವಾಗಿದೆ, ಇದು ಶಾಸ್ತ್ರದ ಸಿದ್ಧಾಂತವಾಗಿದೆ.॥8॥
ಮೂಲಮ್ - 9
ಏಷ ರಾಜನ್ಪರೋ ಧರ್ಮಃ ಲವಾನ್ಪ್ರೇತ್ಯ ರಾಘವ ।
ನ ಹಿ ಧರ್ಮಾದ್ಭವೇತ್ಕಿಂಚಿದ್ದುಷ್ಪ್ರಾಪಮಿತಿ ಮೇ ಮತಿಃ ॥
ಅನುವಾದ
ರಘುನಂದನ! ಈ ಪ್ರಜಾಪಾಲನರೂಪೀ ಪರಮ ಧರ್ಮವು ರಾಜನಿಗೆ ಪರಲೋಕದಲ್ಲಿ ಉತ್ತಮ ಫಲ ಕೊಡುವಂತಹುದಾಗಿದೆ. ಧರ್ಮದಿಂದ ಯಾವುದೂ ದುರ್ಲಭವಿಲ್ಲ ಎಂಬುದು ನನ್ನ ದೃಢವಿಶ್ವಾಸವಾಗಿದೆ.॥9॥
ಮೂಲಮ್ - 10
ದಾನಂ ದಯಾ ಸತಾಂ ಪೂಜಾ ವ್ಯವಹಾರೇಷುಚಾರ್ಜವಮ್ ।
ಏಷ ರಾಮ ಪರೋ ಧರ್ಮೋ ರಕ್ಷಣಾತ್ಪ್ರೇತ್ಯ ಚೇಹ ಚ ॥
ಅನುವಾದ
ಶ್ರೀರಾಮಾ! ದಾನ, ದಯೆ, ಸತ್ಪುರುಷರ ಸಮ್ಮಾನ, ವ್ಯವಹಾರದಲ್ಲಿ ಸರಳದೆ ಇದೇ ಪರಮ ಧರ್ಮವಾಗಿದೆ. ಪ್ರಜಾಜನರ ರಕ್ಷಣೆಯಿಂದ ಆಗುವ ಉತ್ಕೃಷ್ಟಧರ್ಮವು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿಯೂ ಸುಖ ಕೊಡುವುದಾಗಿದೆ.॥10॥
ಮೂಲಮ್ - 11
ತ್ವಂ ಪ್ರಮಾಣಂ ಪ್ರಮಾಣಾನಾಮಸಿ ರಾಘವಸುವ್ರತ ।
ವಿದಿತಶ್ಚೈವ ತೇ ಧರ್ಮಃ ಸದ್ಭಿರಾಚರಿತಸ್ತು ವೈ ॥
ಅನುವಾದ
ಉತ್ತಮ ವ್ರತವನ್ನು ಪಾಲಿಸುವ ರಘುನಂದನ! ನೀನು ಸಮಸ್ತ ಪ್ರಮಾಣಗಳ ಪ್ರಮಾಣವಾಗಿರುವೆ. ಸತ್ಪುರುಷರು ಆಚರಿಸಿದ ಧರ್ಮವು ನಿನಗೆ ಚೆನ್ನಾಗಿ ತಿಳಿದಿದೆ.॥11॥
ಮೂಲಮ್ - 12
ಧರ್ಮಾಣಾಂ ತ್ವಂ ಪರಂ ಧಾಮ ಗುಣಾನಾಂಸಾಗರೋಪಮಃ ।
ಅಜ್ಞಾನಾಚ್ಚ ಮಯಾ ರಾಜನ್ನುಕ್ತಸ್ತ್ವಂ ರಾಜಸತ್ತಮ ॥
ಅನುವಾದ
ರಾಜನೇ! ನೀವು ಧರ್ಮಗಳ ಪರಮಧಾಮ ಮತ್ತು ಗುಣಗಳ ಸಾಗರವಾಗಿರುವೆ. ನಾನು ಅಜ್ಞಾನವಶವಾಗಿಯೇ ನಿಮ್ಮ ಮುಂದೆ ಧರ್ಮದ ವ್ಯಾಖ್ಯೆಮಾಡಿದೆ.॥12॥
ಮೂಲಮ್ - 13
ಪ್ರಸಾದಯಾಮಿ ಶಿರಸಾ ನ ತ್ವಂ ಕ್ರೋದ್ಧುಮಿಹಾರ್ಹಸಿ ।
ಶುನಃ ಸ ವಚನಂ ಶ್ರುತ್ವಾ ರಾಘವೋ ವಾಕ್ಯಮಬ್ರವೀತ್ ॥
ಅನುವಾದ
ಇದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ತಲೆಯನ್ನಿಟ್ಟು ಕ್ಷಮೆ ಇಚ್ಛಿಸುತ್ತೇನೆ, ನಿಮ್ಮನ್ನು ಪ್ರಸನ್ನಗೊಳಿಸಲು ಪ್ರಾರ್ಥಿಸುತ್ತೇನೆ. ನೀವು ನನ್ನ ಮೇಲೆ ಕುಪಿತರಾಗಬೇಡಿ. ನಾಯಿಯ ಮಾತನ್ನು ಕೇಳಿ ಶ್ರೀರಾಮನು ಹೇಳಿದನು.॥13॥
ಮೂಲಮ್ - 14
ಕಿಂ ತೇ ಕಾರ್ಯಂ ಕರೋಮ್ಯದ್ಯ ಬ್ರೂಹಿ ವಿಸ್ರಬ್ಧ ಮಾ ಚಿರಮ್ ।
ರಾಮಸ್ಯ ವಚನಂ ಶ್ರುತ್ವಾ ಸಾರಮೇಯೋಽಬ್ರವೀದಿದಮ್ ॥
ಅನುವಾದ
ನೀನು ನಿರ್ಭಯವಾಗಿ ತಿಳಿಸು. ಇಂದು ನಾನು ನಿನ್ನ ಯಾವ ಕಾರ್ಯವನ್ನು ಸಿದ್ಧಗೊಳಿಸಲಿ? ತನ್ನ ಕಾರ್ಯವನ್ನು ತಿಳಿಸಲು ವಿಳಂಬ ಮಾಡಬೇಡ. ಶ್ರೀರಾಮನ ಮಾತನ್ನು ಕೇಳಿ ನಾಯಿಯು ಹೇಳಿತು.॥14॥
ಮೂಲಮ್ - 15½
ಧರ್ಮೇಣ ರಾಷ್ಟ್ರಂ ವಿಂದೇತ ಧರ್ಮೇಣೈವಾನುಪಾಲಯೇತ್ ।
ಧರ್ಮಾಚ್ಛರಣ್ಯತಾಂ ಯಾತಿ ರಾಜಾ ಸರ್ವಭಯಾಪಹಃ ॥
ಇದಂ ವಿಜ್ಞಾಯ ಯತ್ಕೃತ್ಯಂ ಶ್ರೂಯತಾಂ ಮಮ ರಾಘವ ।
ಅನುವಾದ
ರಘುನಂದನ! ರಾಜನು ಧರ್ಮದಿಂದಲೇ ರಾಜ್ಯ ಪಡೆಯಲಿ ಹಾಗೂ ಧರ್ಮದಿಂದಲೇ ನಿರಂತರ ಅದನ್ನು ಪಾಲಿಸಲಿ. ಧರ್ಮದಿಂದಲೇ ರಾಜನು ಎಲ್ಲರಿಗೆ ಶರಣುಕೊಡುತ್ತಾನೆ ಮತ್ತು ಎಲ್ಲರ ಭಯದೂರ ಮಾಡುವವನಾಗುತ್ತಾನೆ. ಹೀಗೆ ತಿಳಿದು ನನ್ನ ಕಾರ್ಯವನ್ನು ಕೇಳಿರಿ.॥15½॥
ಮೂಲಮ್ - 16½
ಭಿಕ್ಷುಃ ಸರ್ವಾರ್ಥಸಿದ್ಧಶ್ಚ ಬ್ರಾಹ್ಮಣಾವಸಥೇ ವಸನ್ ॥
ತೇನ ದತ್ತಃ ಪ್ರಹಾರೋ ಮೇ ನಿಷ್ಕಾರಣಮನಾಗಸಃ ।
ಅನುವಾದ
ಪ್ರಭೋ! ಸರ್ವಾರ್ಥಸಿದ್ಧ ಎಂಬ ಒಂಬ ಪ್ರಸಿದ್ಧ ಭಿಕ್ಷು ಇದ್ದಾನೆ. ಅವನು ಬ್ರಾಹ್ಮಣರ ಮನೆಯಲ್ಲಿ ಇರುತ್ತಾನೆ. ಅವನು ಇಂದು ಕಾರಣವಿಲ್ಲದೆ ನನಗೆ ಹೊಡೆದನು. ನಾನು ಅವನ ಯಾವ ಅಪರಾಧವನ್ನು ಮಾಡಲಿಲ್ಲ.॥16½॥
ಮೂಲಮ್ - 17½
ಏತಚ್ಛ್ರುತ್ವಾ ತು ರಾಮೇಣ ದ್ವಾಃಸ್ಥಃ ಸಂಪ್ರೇಷಿತಸ್ತದಾ ॥
ಆನೀತಶ್ಚ ದ್ವಿಜಸ್ತೇನ ಸರ್ವಸಿದ್ಧಾರ್ಥಕೋವಿದಃ ।
ಅನುವಾದ
ನಾಯಿಯ ಈ ಮಾತನ್ನು ಕೇಳಿ ಶ್ರೀರಾಮನು ಕೂಡಲೇ ಓರ್ವ ದ್ವಾರಪಾಲಕನನ್ನು ಕಳಿಸಿ, ಆ ಸರ್ವಾರ್ಥಸಿದ್ಧನೆಂಬ ವಿದ್ವಾನ್ ಭಿಕ್ಷುವನ್ನು ಕರೆಸಿದನು.॥17½॥
ಮೂಲಮ್ - 18½
ಅಥ ದ್ವಿಜವರಸ್ತತ್ರ ರಾಮಂ ದೃಷ್ಟ್ವಾ ಮಹಾದ್ಯುತಿಃ ॥
ಕಿಂ ತೇ ಕಾರ್ಯಂ ಮಯಾ ರಾಮ ತದ್ಬ್ರೂಹಿ ತ್ವಂ ಮಮಾನಘ ।
ಅನುವಾದ
ಶ್ರೀರಾಮನನ್ನು ನೋಡಿ ಆ ಮಹಾತೇಜಸ್ವೀ ಶ್ರೇಷ್ಠ ಬ್ರಾಹ್ಮಣನು ಕೇಳಿದನು - ನಿಷ್ಪಾಪ ರಘುನಂದನ! ನನ್ನಲ್ಲಿ ನಿನಗೆ ಯಾವ ಕಾರ್ಯವಿದೆ.॥18½॥
ಮೂಲಮ್ - 19
ಏವಮುಕ್ತಸ್ತುನಿಪ್ರೇಣ ರಾಮೋ ವಚನಮಬ್ರವೀತ್ ॥
ಮೂಲಮ್ - 20
ತ್ವಯಾ ದತ್ತಃ ಪ್ರಹಾರೋಽಯಂ ಸಾರಮೇಯಸ್ಯ ವೈ ದ್ವಿಜ ।
ಕಿಂ ತವಾಪಕೃತಂ ವಿಪ್ರ ದಂಡೇನಾಭಿಹತೋ ಯತಃ ॥
ಅನುವಾದ
ಬ್ರಾಹ್ಮಣನು ಹೀಗೆ ಕೇಳಿದಾಗ ಶ್ರೀರಾಮನು ಹೇಳಿದನು- ಬ್ರಹ್ಮನ್! ನೀನು ಈ ನಾಯಿಯ ತಲೆಗೆ ಹೊಡೆದ ಕಾರಣ ವೇನು? ವಿಪ್ರವರ! ನೀನು ದೊಣ್ಣೆಯಿಂದ ಹೊಡೆಯಲು ಇದು ಏನು ಅಪರಾಧ ಮಾಡಿತ್ತು.॥19-20॥
ಮೂಲಮ್ - 21
ಕ್ರೋಧಃ ಪ್ರಾಣಹರಃ ಶತ್ರುಃ ಕ್ರೋಧೋ ಮಿತ್ರಮುಖೋ ರಿಪುಃ ।
ಕ್ರೋಧೋ ಹ್ಯಸಿರ್ಮಹಾತೀಕ್ಷ್ಣಃ ಸರ್ವಂಕ್ರೋಧೋಽಪಕರ್ಷತಿ ॥
ಅನುವಾದ
ಕ್ರೋಧವು ಪ್ರಾಣಾಹಾರೀ ಶತ್ರುವಾಗಿದೆ. ಕ್ರೋಧವನ್ನು ಮಿತ್ರಮುಖ ಶತ್ರು* ಎಂದು ಹೇಳಿದೆ. ಕ್ರೋಧವು ಅತ್ಯಂತ ಹರಿತವಾದ ಖಡ್ಗವಾಗಿದೆ. ಕ್ರೋಧವು ಎಲ್ಲ ಸದ್ಗುಣಗಳನ್ನು ಎಳೆದುಕೊಳ್ಳುತ್ತದೆ.॥21॥
ಟಿಪ್ಪನೀ
- ಮೇಲಿನಿಂದ ಮಿತ್ರನಂತೆ ಕಂಡುಬಂದು ಪರಿಣಾಮದಲ್ಲಿ ಶತ್ರುವಾದವನು ‘ಮಿತ್ರಮುಖ’ನಾಗಿದ್ದಾನೆ. ಕ್ರೋಧವು ತನ್ನ ಪ್ರತಿದ್ವಂದ್ವಿಯನ್ನು ಸತಾಯಿಸಲು ಸಹಾಯಕವಾಗಿ ಬರುತ್ತದೆ. ಆದ್ದರಿಂದ ಅದನ್ನು ‘ಮಿತ್ರಮುಖ’ ಎಂದು ಹೇಳಿದೆ.
ಮೂಲಮ್ - 22
ತಪತೇಯಜತೇ ಚೈವ ಯಚ್ಚ ದಾನಂ ಪ್ರಯಚ್ಛತಿ ।
ಕ್ರೋಧೇನ ಸರ್ವಂ ಹರತಿ ತಸ್ಮಾತ್ಕ್ರೋಧಂ ವಿಸರ್ಜಯೇತ್ ॥
ಅನುವಾದ
ಮನುಷ್ಯನು ಮಾಡುವ ತಪಸ್ಸು, ಯಜ್ಞ, ದಾನ ಮುಂತಾದವುಗಳ ಪುಣ್ಯವನ್ನು ಕ್ರೋಧವು ನಾಶಮಾಡಿಬಿಡುತ್ತದೆ. ಅದರಿಂದ ಕ್ರೋಧವನ್ನು ತ್ಯಜಿಸಬೇಕು.॥22॥
ಮೂಲಮ್ - 23
ಇಂದ್ರಿಯಾಣಾಂ ಪ್ರದುಷ್ಟಾನಾಂ ಹಯಾನಾಮಿವ ಧಾವತಾಮ್ ।
ಕುರ್ವೀತ ಧೃತ್ಯಾ ಸಾರಥ್ಯಂ ಸಂಹೃತ್ಯೇಂದ್ರಿಯಗೋಚರಮ್ ॥
ಅನುವಾದ
ದುಷ್ಟವಾದ ಕುದುರೆಗಳಂತೆ ವಿಷಯಗಳ ಓಡುತ್ತಿರುವ ಇಂದ್ರಿಯಗಳನ್ನು ಆ ವಿಷಯಗಳಿಂದ ಹಿಮ್ಮೆಟ್ಟಿಸಿ ಧೈರ್ಯದಿಂದ ಹತೋಟಿಯಲ್ಲಿರಿಸಿಕೊಳ್ಳಬೇಕು.॥23॥
ಮೂಲಮ್ - 24
ಮನಸಾ ಕರ್ಮಣಾ ವಾಚಾ ಚಕ್ಷುಷಾ ಚ ಸಮಾಚರೇತ್ ।
ಶ್ರೇಯೋ ಲೋಕಸ್ಯ ಚರತೋ ನ ದ್ವೇಷ್ಟಿ ನ ಚ ಲಿಪ್ಯತೇ ॥
ಅನುವಾದ
ಮನುಷ್ಯನು ತನ್ನ ಬಳಿ ಸುಳಿಯುವ ಜನರಿಗೆ ಮನ, ವಾಣಿ, ಕ್ರಿಯೆ, ದೃಷ್ಟಿಯಿಂದ ಒಳ್ಳೆಯದನ್ನೇ ಮಾಡಬೇಕು. ಯಾರನ್ನೂ ದ್ವೇಷಿಸಬಾರದು. ಹೀಗೆ ಮಾಡುವುದರಿಂದ ಅವನು ಪಾಪದಿಂದ ಲಿಪ್ತನಾಗುವುದಿಲ್ಲ.॥24॥
ಮೂಲಮ್ - 25
ನ ತತ್ಕುರ್ಯಾದಸಿಸ್ತೀಕ್ಷ್ಣಃ ಸರ್ಪೋ ವಾವ್ಯಾಹತಃ ಪದಾ ।
ಅರಿರ್ವಾ ನಿತ್ಯಸಂಕ್ರುದ್ಧೋ ಯಥಾತ್ಮಾ ದುರನುಷ್ಠಿತಃ ॥
ಅನುವಾದ
ನಮ್ಮ ದುಷ್ಟ ಮನಸ್ಸು ಅನಿಷ್ಟ ಅಥವಾ ಅನರ್ಥಮಾಡುತ್ತದೋ, ಹಾಗೆ ಹರಿತವಾದ ಖಡ್ಗ, ಕಾಲ ಕೆಳಗೆ ತುಳಿದ ಹಾವು, ಸದಾಕ್ರೋಧ ತುಂಬಿದ ಶತ್ರುವೂ ಕೂಡ ಮಾಡಲಾರನು.॥25॥
ಮೂಲಮ್ - 26
ವಿನೀತವಿನಯಸ್ಯಾಪಿ ಪ್ರಕೃತಿರ್ನ ವಿಧೀಯತೇ ।
ಪ್ರಕೃತಿಂ ಗೂಹಮಾನಸ್ಯ ನಿಶ್ಚಯೇನ ಕೃತಿರ್ಧ್ರುವಾ ॥
ಅನುವಾದ
ವಿನಯದ ಶಿಕ್ಷಣ ದೊರಕಿದವನ ಪ್ರಕೃತಿಯೂ ಹೊಸದಾಗಿ ಆಗುವುದಿಲ್ಲ. ಯಾರೇ ತನ್ನ ದುಷ್ಟ ಪ್ರಕೃತಿಯನ್ನು ಎಷ್ಟೇ ಅಡಗಿಸಿಟ್ಟಿದ್ದರೂ, ಅವನ ಕಾರ್ಯದಲ್ಲಿ ಆ ದುಷ್ಟತೆ ಖಂಡಿತವಾಗಿ ಪ್ರಕಟವಾಗುತ್ತದೆ.॥26॥
ಮೂಲಮ್ - 27
ಏವಮುಕ್ತಃ ಸ ವಿಪ್ರೋ ವೈ ರಾಮೇಣಾಕ್ಲಿಷ್ಟಕರ್ಮಣಾ ।
ದ್ವಿಜಃ ಸರ್ವಾರ್ಥಸಿದ್ಧಸ್ತು ಅಬ್ರವೀದ್ರಾಮಸಂನಿಧೌ ॥
ಅನುವಾದ
ಕ್ಲೇಶರಹಿತ ಕರ್ಮಮಾಡುವ ಶ್ರೀರಾಮನು ಹೀಗೆ ಹೇಳಿದಾಗ ಸರ್ವಾರ್ಥಸಿದ್ಧ ಎಂಬ ಬ್ರಾಹ್ಮಣನು ಅವನಲ್ಲಿ ಹೀಗೆ ಹೇಳಿದನು.॥27॥
ಮೂಲಮ್ - 28
ಮಯಾ ದತ್ತಪ್ರಹಾರೋಽಯಂ ಕ್ರೋಧೇನಾವಿಷ್ಟಚೇತಸಾ ।
ಭಿಕ್ಷಾರ್ಥಮಟಮಾನೇನ ಕಾಲೇ ವಿಗತಭೈಕ್ಷಕೇ ॥
ಮೂಲಮ್ - 29
ರಥ್ಯಾಸ್ಥಿತಸ್ತ್ವಯಂ ಶ್ವಾ ವೈ ಗಚ್ಛ ಗಚ್ಛೇತಿ ಭಾಷಿತಃ ।
ಅಥ ಸ್ವೈರೇಣ ಗಚ್ಛಂಸ್ತು ರಥಾಂತೇ ವಿಷಮಂ ಸ್ಥಿತಃ ॥
ಅನುವಾದ
ಪ್ರಭೋ ! ನನ್ನ ಮನಸ್ಸಿನಲ್ಲಿ ಕ್ರೋಧ ತುಂಬಿತ್ತು, ಅದರಿಂದ ನಾನು ಇದನ್ನು ದೊಣ್ಣೆಯಿಂದ ಹೊಡೆದೆ. ಭಿಕ್ಷೆಯ ಸಮಯ ಮೀರಿ ಹೋಗಿತ್ತು, ಹಸಿವೆಯಿಂದ ಭಿಕ್ಷೆ ಬೇಡಲು ನಾನು ಮನೆ-ಮನೆ ತಿರುಗುತ್ತಿದ್ದೆ. ಈ ನಾಯಿ ನಡುದಾರಿಯಲ್ಲಿ ನಿಂತಿತ್ತು. ನಾನು ಪದೇ-ಪದೇ ‘ದಾರಿ ಬಿಡು’ ಎಂದು ಹೇಳಿದರೂ ಸ್ವೇಚ್ಛೆಯಿಂದ ನಡುದಾರಿಯಲ್ಲೇ ನಿಂತಿತ್ತು.॥28-29॥
ಮೂಲಮ್ - 30½
ಕ್ರೋಧೇನ ಕ್ಷುಧಯಾವಿಷ್ಟಸ್ತತೋ ದತ್ತೋಽಸ್ಯ ರಾಘವ ।
ಪ್ರಹಾರೋ ರಾಜರಾಜೇಂದ್ರ ಶಾಧಿ ಮಾಮಪರಾಧಿನಮ್ ॥
ತ್ವಯಾ ಶಸ್ತಸ್ಯ ರಾಜೇಂದ್ರ ನಾಸ್ತಿ ಮೇನರಕಾದ್ಭಯಮ್ ।
ಅನುವಾದ
ನಾನು ಹಸಿದಿದ್ದೆ, ಕ್ರೋಧವೂ ಬಂದಿತ್ತು. ಶ್ರೀರಾಮಾ! ಆ ಕ್ರೋಧದಿಂದ ಪ್ರೇರಿತನಾಗಿ ಇದರ ತಲೆಗೆ ದೊಣ್ಣೆಯಿಂದ ಹೊಡೆದೆ. ನಾನು ಅಪರಾಧಿಯಾಗಿದ್ದೇನೆ. ನೀನು ನನಗೆ ಶಿಕ್ಷೆ ಕೊಡು. ನಿನ್ನ ಶಿಕ್ಷೆಯಿಂದ ನನಗೆ ನರಕದ ಭಯವಿರುವುದಿಲ್ಲ.॥30½॥
ಮೂಲಮ್ - 31
ಅಥ ರಾಮೇಣ ಸಂಸೃಷ್ಟಾಃ ಸರ್ವ ಏವ ಸಭಾಸದಃ ॥
ಮೂಲಮ್ - 32
ಕಿಂ ಕಾರ್ಯಮಸ್ಯ ವೈ ಬ್ರೂತ ದಂಡೋ ವೈ ಕೋಽಸ್ಯ ಪಾತ್ಯತಾಮ್ ।
ಸಮ್ಯಕ್ಪ್ರಣಿಹಿತೇ ದಂಡೇ ಪ್ರಜಾ ಭವತಿ ರಕ್ಷಿತಾ ॥
ಅನುವಾದ
ಆಗ ಶ್ರೀರಾಮನು ಎಲ್ಲ ಸಭಾಸದರಲ್ಲಿ ಕೇಳಿದನು - ಇದಕ್ಕಾಗಿ ಏನು ಮಾಡಬೇಕೆಂಬುದನ್ನು ನೀವು ತಿಳಿಸಿರಿ. ಇವನಿಗೆ ಯಾವ ಶಿಕ್ಷೆ ಕೊಡಲಾಗುವುದು? ಏಕೆಂದರೆ ಸರಿಯಾದ ಶಿಕ್ಷೆಯ ಪ್ರಯೋಗವಾದಾಗ ಪ್ರಜೆ ಸುರಕ್ಷಿತವಾಗಿರುತ್ತದೆ. ॥31-32॥
ಮೂಲಮ್ - 33
ಭೃಗ್ವಂಗಿರಸಕುತ್ಸಾದ್ಯಾ ವಸಿಷ್ಠಶ್ಚ ಸಕಾಶ್ಯಪಃ ।
ಧರ್ಮಪಾಠಕಮುಖ್ಯಾಶ್ಚ ಸಚಿವಾ ನೈಗಮಾಸ್ತಥಾ ॥
ಮೂಲಮ್ - 34½
ಏತೇ ಚಾನ್ಯೇ ಚ ಬಹವಃ ಪಂಡಿತಾಸ್ತತ್ರ ಸಂಗತಾಃ ।
ಅವಧ್ಯೋ ಬ್ರಾಹ್ಮಣೋ ದಂಡೈರಿತಿ ಶಾಸ್ತ್ರ ವಿದೋ ವಿದುಃ ॥
ಬ್ರುವತೇ ರಾಘವಂ ಸರ್ವೇ ರಾಜಧರ್ಮೇಷು ನಿಷ್ಠಿತಾಃ ।
ಅನುವಾದ
ಆ ಸಭೆಯಲ್ಲಿ ಭೃಗು, ಅಂಗಿರಾ, ಕುತ್ಸ, ವಸಿಷ್ಠ, ಕಾಶ್ಯಪ ಮೊದಲಾದ ಮುನಿಗಳಿದ್ದರು. ಧರ್ಮಶಾಸ್ತ್ರವನ್ನು ಬಲ್ಲ ಮುಖ್ಯ-ಮುಖ್ಯ ವಿದ್ವಾಂಸರು ಉಪಸ್ಥಿತರಾಗಿದ್ದರು. ಮಂತ್ರಿಗಳೂ ಮಹಾಜನರೂ ಇದ್ದರು. ಇನ್ನು ಅನೇಕ ಪಂಡಿತರು ಅಲ್ಲಿ ಸೇರಿದ್ದರು. ರಾಜಧರ್ಮಗಳ ಪರಿನಿಷ್ಠಿತರಾದ ಆ ಎಲ್ಲ ವಿದ್ವಾಂಸರು ಶ್ರೀರಾಮನಲ್ಲಿ ಹೇಳಿದರು- ಭಗವಂತಾ! ಬ್ರಾಹ್ಮಣನು ದಂಡನೆಯಿಂದ ಅವಧ್ಯನಾಗಿದ್ದಾನೆ. ಅವನಿಗೆ ಶಾರೀರಿಕ ದಂಡನೆ ಸಿಗಬಾರದು. ಇದೆ ಸಮಸ್ತ ಶಾಸ್ತ್ರಜ್ಞರ ಮತವಾಗಿದೆ.॥33-34½॥
ಮೂಲಮ್ - 35
ಅಥ ತೇ ಮುನಯಃ ಸರ್ವೇ ರಾಮಮೇವಾಬ್ರುವಂಸ್ತದಾ ॥
ಮೂಲಮ್ - 36
ರಾಜಾ ಶಾಸ್ತಾ ಹಿ ಸರ್ವಸ್ಯ ತ್ವಂವಿಶೇಷೇಣ ರಾಘವ ।
ತ್ರೈಲೋಕ್ಯಸ್ಯ ಭವಾನ್ ಶಾಸ್ತಾ ದೇವೋ ವಿಷ್ಣುಃ ಸನಾತನಃ ॥
ಅನುವಾದ
ಅನಂತರ ಆ ಮುನಿಗಳು ಶ್ರೀರಾಮನಲ್ಲಿ ಹೇಳಿದರು - ರಘುನಂದನ! ರಾಜನು ಎಲ್ಲರ ಶಾಸಕನಾಗಿರುತ್ತಾನೆ. ವಿಶೇಷ ವಾಗಿ ನೀನಾದರೋ ಮೂರುಲೋಕಗಳ ಮೇಲೆ ಶಾಸನ ಮಾಡುವ ಸಾಕ್ಷಾತ್ ಸನಾತನ ವಿಷ್ಣುವೇ ಆಗಿರುವೆ.॥35-36॥
ಮೂಲಮ್ - 37
ಏವಮುಕ್ತೇ ತು ತೈಃ ಸರ್ವೈಃ ಶ್ವಾ ವೈ ವಚನಮಬ್ರವೀತ್ ।
ಯದಿ ತುಷ್ಟೋಽಸಿ ಮೇ ರಾಮ ಯದಿ ದೇಯೋ ವರೋ ಮಮ ॥
ಅನುವಾದ
ಅವರೆಲ್ಲರೂ ಹೇಳಿದಾಗ ನಾಯಿ ನುಡಿಯಿತು - ಶ್ರೀರಾಮಾ! ನೀನು ನನ್ನ ಮೇಲೆ ಸಂತುಷ್ಟನಾಗಿದ್ದರೆ, ನಿನಗೆ ನನ್ನ ಇಚ್ಛಾನುಸಾರ ವರ ಕೊಡಬೇಕೆಂದಿದ್ದರೆ, ನನ್ನ ಮಾತನ್ನು ಕೇಳು.॥37॥
ಮೂಲಮ್ - 38½
ಪ್ರತಿಜ್ಞಾಂತಂ ತ್ವಯಾ ವೀರ ಕಿಂ ಕರೋಮೀತಿವಿಶ್ರುತಮ್ ।
ಪ್ರಯಚ್ಛ ಬ್ರಾಹ್ಮಣಸ್ಯಾಸ್ಯ ಕೌಲಪತ್ಯಂ ನರಾಧಿಪ ॥
ಕಾಲಂಜರೇ ಮಹಾರಾಜ ಕೌಲಪತ್ಯಂ ಪ್ರದೀಯತಾಮ್ ।
ಅನುವಾದ
ವೀರ ನರೇಶ್ವರ! ನಾನು ನಿನ್ನ ಯಾವ ಕಾರ್ಯ ಸಿದ್ಧಗೊಳಿಸಲಿ ಎಂದು ನೀನು ಪ್ರತಿಜ್ಞಾಪೂರ್ವಕ ಹೇಳಿದ್ದೆ. ಹೀಗೆ ನೀನು ನನ್ನ ಇಚ್ಛೆ ಪೂರ್ಣಗೊಳಿಸಲು ಪ್ರತಿಜ್ಞಾ ಬದ್ಧರಾಗಿದ್ದೀಯೆ. ಆದ್ದರಿಂದ ನಾನು ಹೇಳುತ್ತೇನೆ - ಈ ಬ್ರಾಹ್ಮಣನನ್ನು ಒಂದು ಮಠದ ಕುಲಪತಿಯಾಗಿಸು. ಕಾಲಂಜರ ನಗರದಲ್ಲಿ ಇವನಿಗೆ ಮಠಾಧಿಪತ್ಯ ವಹಿಸಿಕೊಡು.॥38½॥
ಮೂಲಮ್ - 39½
ಏತಚ್ಛ್ರುತ್ವಾ ತು ರಾಮೇಣ ಕೌಲಪತ್ಯೇಽಭಿಶೇಚಿತಃ ॥
ಪ್ರಯಯೌ ಬ್ರಾಹ್ಮಣೋ ಹೃಷ್ಟೋ ಗಜಸ್ಕಂಧೇನ ಸೋಽರ್ಚಿತಃ ।
ಅನುವಾದ
ಇದನ್ನು ಕೇಳಿ ಶ್ರೀರಾಮನು ಅವನನ್ನು ಮಠದ ಕುಲಪತಿ ಯಾಗಿ ನೇಮಿಸಿದನು. ಹೀಗೆ ಪೂಜಿತನಾದ ಆ ಬ್ರಾಹ್ಮಣನು ಆನೆಯ ಮೇಲೆ ಕುಳಿತು ಅಲ್ಲಿಂದ ಹೊರಟು ಹೋದನು.॥39½॥
ಮೂಲಮ್ - 40½
ಅಥ ತೇ ರಾಮಸಚಿವಾಃ ಸ್ಮಯಮಾನಾ ವಚೋಽಬ್ರುವನ್ ॥
ವರೋಽಯಂ ದತ್ತ ಏತಸ್ಯ ನಾಯಂ ಶಾಪೋ ಮಹಾದ್ಯುತೇ ।
ಅನುವಾದ
ಆಗ ಶ್ರೀರಾಮನ ಮಂತ್ರಿಗಳು ಮುಗುಳ್ನಗುತ್ತಾ ಹೇಳಿದರು - ಮಹಾತೇಜಸ್ವೀ ಮಹಾರಾಜಾ! ಇದಾದರೋ ಇವನಿಗೆ ವರವೇ ಕೊಡಲಾಯಿತು. ಶಾಪ ಅಥವಾ ಶಿಕ್ಷೆಯಲ್ಲಿ.॥40½॥
ಮೂಲಮ್ - 41½
ಏವಮುಕ್ತಸ್ತು ಸಚಿವೈ ರಾಮೋ ವಚನಮಬ್ರವೀತ್ ॥
ನ ಯೂಯಂ ಗತಿತತ್ತ್ವಜ್ಞಾಃ ಶ್ವಾ ವೈ ಜಾನಾತಿ ಕಾರಣಮ್ ।
ಅನುವಾದ
ಮಂತ್ರಿಗಳು ಹೀಗೆ ಹೇಳಿದಾಗ ಶ್ರೀರಾಮನೆಂದ - ಯಾವ ಕರ್ಮದ ಯಾವ ಪರಿಣಾಮವಾಗುತ್ತದೆ, ಅಥವಾ ಅದರಿಂದ ಜೀವಿಯ ಗತಿ ಎಂತಹದಾಗುತ್ತದೆ ಇದರ ತತ್ತ್ವ ನೀವು ತಿಳಿದಿಲ್ಲ. ಬ್ರಾಹ್ಮಣನಿಗೆ ಮಠಾಧಿಪತ್ಯ ಏಕೆ ಕೊಡಲಾಗಿದೆ? ಇದರ ಕಾರಣ ಈ ನಾಯಿ ತಿಳಿದಿದೆ.॥41½॥
ಮೂಲಮ್ - 42
ಅಥ ಪೃಷ್ಟಸ್ತು ರಾಮೇಣಸಾರಮೇಯೋಽಬ್ರವೀದಿದಮ್ ॥
ಮೂಲಮ್ - 43
ಅಹಂ ಕುಲಪತಿಸ್ತತ್ರ ಆಸಂ ಶಿಷ್ಟಾನ್ನ ಭೋಜನಃ ।
ದೇವದ್ವಿಜಾತಿಪೂಜಾಯಾಂದಾಸೀದಾಸೇಷು ರಾಘವ ॥
ಮೂಲಮ್ - 44
ಸಂವಿಭಾಗೀ ಶುಭರತಿರ್ದೇವದ್ರವ್ಯಸ್ಯ ರಕ್ಷಿತಾ ।
ವಿನೀತಃ ಶೀಲಸಂಪನ್ನಃ ಸರ್ವಸತ್ತ್ವಹಿತೇ ರತಃ ॥
ಅನುವಾದ
ಬಳಿಕ ಶ್ರೀರಾಮನು ಕೇಳಿದಾಗ ನಾಯಿಯು ಹೇಳಿತು - ರಘುನಂದನ! ನಾನು ಹಿಂದಿನ ಜಮ್ಮದಲ್ಲಿ ಕಾಲಂಜರದ ಮಠದಲ್ಲಿ ಮಠಾಧೀಶನಾಗಿದ್ದೆ. ಅಲ್ಲಿ ಯಜ್ಞಶಿಷ್ಟ ಅನ್ನವನ್ನು ತಿನ್ನುತ್ತಾ, ದೇವ ಬ್ರಾಹ್ಮಣರ ಪೂಜೆಯಲ್ಲಿ ತತ್ಪರನಾಗಿದ್ದೆ, ದಾಸ-ದಾಸಿಯರಿಗೆ ಅದನ್ನು ನ್ಯಾಯವಾಗಿ ಹಂಚುತ್ತಿದ್ದೆ. ಶುಭಕರ್ಮಗಳಲ್ಲಿ ಅನುರಕ್ತನಾಗಿದ್ದು, ದೇವ ಸಂಪತ್ತನ್ನು ರಕ್ಷಿಸುತ್ತಾ, ವಿನಯ, ಶೀಲಸಂಪನ್ನನಾಗಿ ಸಮಸ್ತ ಪ್ರಾಣಿಗಳ ಹಿತ ಸಾಧನೆಯಲ್ಲಿ ಆಸಕ್ತನಾಗಿದ್ದೆ.॥42-44॥
ಮೂಲಮ್ - 45
ಸೋಽಹಂ ಪ್ರಾಪ್ತ ಇಮಾಂ ಘೋರಾಮವಸ್ಥಾಮಧಮಾಂ ಗತಿಮ್ ।
ಏವಂ ಕ್ರೋಧಾನ್ವಿತೋ ವಿಪ್ರಸ್ತ್ಯಕ್ತಧರ್ಮಾಹಿತೇ ರತಃ ॥
ಮೂಲಮ್ - 46
ಕ್ರುದ್ಧೋ ನೃಶಂಸಃ ಪರುಷ ಅವಿದ್ವಾಂಶ್ಚಾಪ್ಯಧಾರ್ಮಿಕಃ ।
ಕುಲಾನಿ ಪಾತಯತ್ಯೇವ ಸಪ್ತ ಸಪ್ತ ಚ ರಾಘವ ॥
ಅನುವಾದ
ಹೀಗಿದ್ದರೂ ನನಗೆ ಈ ಘೋರ ಸ್ಥಿತಿ ಹಾಗೂ ಅಧಮಗತಿ ಪ್ರಾಪ್ತವಾಯಿತು. ಹೀಗಿರುವಾಗ ಇಂತಹ ಕ್ರುದ್ಧನಾದ, ಧರ್ಮಬಾಹಿರನಾದ, ಇತರರ ಅಹಿತದಲ್ಲಿ ತೊಡಗಿರುವ, ಕ್ರೂರ, ಕಠೋರ, ಮೂರ್ಖ ಮತ್ತು ಅಧರ್ಮಿ, ಆ ಬ್ರಾಹ್ಮಣನು ಮಠಾಧೀಶನಾಗಿ ತನ್ನೊಂದಿಗೆ ಹಿಂದಿನ - ಮುಂದಿನ ಏಳೇಳು ತಲೆಮಾರುಗಳನ್ನು ನರಕದಲ್ಲಿ ಕೆಡಹುತ್ತಾನೆ, ಇದು ನಿಶ್ಚಯ.॥45-46॥
ಮೂಲಮ್ - 47½
ತಸ್ಮಾತ್ಸರ್ವಾಸ್ವವಸ್ಥಾಸು ಕೌಲಪತ್ಯಂ ನ ಕಾರಯೇತ್ ।
ಯಮಿಚ್ಛೇನ್ನರಕಂ ನೇತುಂ ಸಪುತ್ರಪಶುಬಾಂಧವಮ್ ॥
ದೇವೇಷ್ವಧಿಷ್ಠಿತಂ ಕುರ್ಯಾದ್ಗೋಷು ಚ ಬ್ರಾಹ್ಮಣೇಷು ಚ ।
ಅನುವಾದ
ಇದಿರಂದ ಯಾವುದೇ ಸ್ಥಿತಿಯಲ್ಲಿ ಮಠಾಧೀಶನಾಗಬಾರದು. ಯಾರನ್ನಾದರೂ, ಪುತ್ರ, ಪಶು, ಬಂಧು-ಬಾಂಧವರೊಂದಿಗೆ ನರಕಕ್ಕೆ ಕಳಿಸುವ ಇಚ್ಛೆ ಇದ್ದರೆ ಅವನನ್ನು ದೇವತಾ, ಗೋವು, ಬ್ರಾಹ್ಮಣರ ಅಧಿಪತಿಯನ್ನಾಗಿ ಮಾಡು.॥47½॥
ಮೂಲಮ್ - 48½
ಬ್ರಹ್ಮಸ್ವಂ ದೇವತಾದ್ರವ್ಯಂ ಸ್ತ್ರೀಣಾಂ ಬಾಲಧನಂ ಚ ಯತ್ ॥
ದತ್ತಂ ಹರತಿ ಯೋ ಭೂಯ ಇಷ್ಟಃ ಸಹ ವಿನಶ್ಯತಿ ।
ಅನುವಾದ
ಯಾರು ಬ್ರಾಹ್ಮಣರ, ದೇವತೆಯ, ಸ್ತ್ರೀಯರ, ಬಾಲಕರ ಧನವನ್ನು ಅಪಹರಿಸುವನೋ, ಯಾರು ತಾನ ದಾನ ಕೊಟ್ಟ ಸಂಪತ್ತನ್ನು ಹಿಂದಕ್ಕೆ ಪಡೆಯುತ್ತಾನೋ, ಅವನು ಇಷ್ಟ ಜನರ ಸಹಿತ ನಾಶವಾಗಿ ಹೋಗುತ್ತಾನೆ.॥48½॥
ಮೂಲಮ್ - 49½
ಬ್ರಾಹ್ಮಣದ್ರವ್ಯಮಾದತ್ತೇ ದೇವಾನಾಂ ಚೈವ ರಾಘವ ॥
ಸದ್ಯಃ ಪತತಿ ಘೋರೇ ವೈ ನರಕೇಽವೀಚಿಸಂಜ್ಞಕೇ ।
ಅನುವಾದ
ರಘುನಂದನ! ಬ್ರಾಹ್ಮಣರ, ದೇವತೆಗಳ ದ್ರವ್ಯವನ್ನು ನುಂಗಿ ಹಾಕುವವನು ಬೇಗನೇ ಅವೀಚಿ ಎಂಬ ಘೋರ ನರಕದಲ್ಲಿ ಬೀಳುತ್ತಾನೆ.॥49½॥
ಮೂಲಮ್ - 50½
ಮನಸಾಪಿ ಹಿ ದೇವಸ್ವಂ ಬ್ರಹ್ಮಸ್ವಂ ಚಹರೇತ್ತು ಯಃ ॥
ನಿರಯಾನ್ನಿರಯಂ ಚೈವ ಪತತ್ಯೇವ ನರಾಧಮಃ ।
ಅನುವಾದ
ದೇವತಾ, ಬ್ರಾಹ್ಮಣರ ಸಂಪತ್ತನ್ನು ಅಪಹರಿಸುವ ವಿಚಾರ ಮನಸ್ಸಿನಲ್ಲಿ ಮಾಡಿದರೂ, ಆ ನರಾಧಮನು ನಿಶ್ಚಯವಾಗಿ ಒಂದು ನರಕದಿಂದ ಇನ್ನೊಂದು ನರಕಕ್ಕೆ ಬೀಳುತ್ತಾ ಇರುತ್ತಾನೆ.॥50½॥
ಮೂಲಮ್ - 51½
ತಚ್ಛ್ರುತ್ವಾ ವಚನಂ ರಾಮೋ ವಿಸ್ಮಯಾತ್ಫುಲ್ಲಲೋಚನಃ ॥
ಶ್ವಾಪ್ಯಗಚ್ಛನ್ಮಹಾತೇಜಾ ಯತ ಏವಾಗತಸ್ತತಃ ।
ಅನುವಾದ
ನಾಯಿಯ ಈ ಮಾತನ್ನು ಕೇಳಿ ಶ್ರೀರಾಮಚಂದ್ರನು ಆಶ್ಚರ್ಯಚಕಿತ ನಾದನು ಹಾಗೂ ಆ ಮಹಾತೇಜಸ್ವೀ ನಾಯಿಯೂ ತಾನು ಬಂದದ್ದಲ್ಲಿಗೆ ಹೊರಟು ಹೋಯಿತು.॥51½॥
ಮೂಲಮ್ - 52
ಮನಸ್ವೀ ಪೂರ್ವಜಾತ್ಯಾ ಸ ಜಾತಿಮಾತ್ರೋಪದೂಷಿತಃ ।
ವಾರಾಣಸ್ಯಾಂ ಮಹಾಭಾಗಃ ಪ್ರಾಯಂ ಚೋಪವಿವೇಶ ಹ ॥
ಅನುವಾದ
ಅದು ಹಿಂದಿನ ಜನ್ಮದಲ್ಲಿ ಮಹಾತ್ಮನಾಗಿತ್ತು, ಆದರೂ ಅದು ನಾಯಿಯ ಯೋನಿಯಲ್ಲಿ ಹುಟ್ಟಿದ ಕಾರಣ ದೂಷಿತ ವಾಗಿತ್ತು. ಆ ಮಹಾಭಾಗ ನಾಯಿಯು ಕಾಶಿಗೆ ಹೋಗಿ ಪ್ರಾಯೋಪವೇಶಮಾಡಿ ಪ್ರಾಣತ್ಯಜಿಸಿತು.॥52॥
ಮೂಲಮ್ (ಸಮಾಪ್ತಿಃ)
ಪ್ರಕ್ಷಿಪ್ತ ಎರಡನೆಯ ಸರ್ಗ ಸಂಪೂರ್ಣವಾಯಿತು.