०४१ पुष्पक-प्रेषणम्

[ನಲವತ್ತೊಂದನೆಯ ಸರ್ಗ]

ಭಾಗಸೂಚನಾ

ಕುಬೇರನ ಆಜ್ಞೆಯಂತೆ ಪುಷ್ಪಕ ವಿಮಾನದ ಆಗಮನ, ಶ್ರೀರಾಮನಿಂದ ಪೂಜಿಸಲ್ಪಟ್ಟ ವಿಮಾನದ ನಿರ್ಗಮನ, ಭರತನಿಂದ ಶ್ರೀರಾಮರಾಜ್ಯದ ವರ್ಣನೆ

ಮೂಲಮ್ - 1

ವಿಸೃಜ್ಯ ಚ ಮಹಾಬಾಹುರ್ಋಕ್ಷವಾನರರಾಕ್ಷಸಾನ್ ।
ಭ್ರಾತೃಭಿಃ ಸಹಿತೋ ರಾಮಃ ಪ್ರಮುಮೋದ ಸುಖಂ ಸುಖೀ ॥

ಅನುವಾದ

ಕರಡಿಗಳನ್ನು, ವಾನರರನ್ನು, ರಾಕ್ಷಸರನ್ನು ಬೀಳ್ಕೊಟ್ಟು ಸಹೋದರರೊಂದಿಗೆ ಸುಖಸ್ವರೂಪ ಮಹಾಬಾಹು ಶ್ರೀರಾಮನು ಸುಖ ಮತ್ತು ಆನಂದವಾಗಿ ಅಯೋಧ್ಯೆಯಲ್ಲಿ ಇರತೊಡಗಿದನು.॥1॥

ಮೂಲಮ್ - 2

ಅಥಾಪರಾಹ್ಣಸಮಯೇ ಭ್ರಾತೃಭಿಃ ಸಹ ರಾಘವಃ ।
ಶುಶ್ರಾವ ಮಧುರಾಂ ವಾಣೀಮಂತರಿಕ್ಷಾನ್ಮಹಾಪ್ರಭುಃ ॥

ಅನುವಾದ

ಒಂದು ದಿನ ಅಪರಾಹ್ಣದಲ್ಲಿ ತನ್ನ ಸಹೋದರರೊಂದಿಗೆ ಕುಳಿತಿರುವ ಮಹಾಪ್ರಭು ಶ್ರೀರಘುನಾಥನು ಆಕಾಶದಿಂದ ಈ ಮಧುರ ವಾಣಿ ಕೇಳಿದನು.॥2॥

ಮೂಲಮ್ - 3

ಸೌಮ್ಯ ರಾಮ ನಿರೀಕ್ಷಸ್ವ ಸೌಮ್ಯೇನ ವದನೇನ ಮಾಮ್ ।
ಕುಬೇರಭವನಾತ್ಪ್ರಾಪ್ತಂ ವಿದ್ಧಿ ಮಾಂ ಪುಷ್ಪಕಂ ಪ್ರಭೋ ॥

ಅನುವಾದ

ಸೌಮ್ಯ ಶ್ರೀರಾಮಾ! ನೀನು ನನ್ನ ಕಡೆಗೆ ಸಂತೋಷದಿಂದ ದೃಷ್ಟಿ ಬೀರುವ ಕೃಪೆ ಮಾಡು. ನಾನು ಕುಬೇರನ ಭವನದಿಂದ ಮರಳಿದ ಪುಷ್ಪಕವಿಮಾನವೆಂದು ನಿನಗೆ ತಿಳಿದಿರಬಹುದು.॥3॥

ಮೂಲಮ್ - 4

ತವ ಶಾಸನಮಾಜ್ಞಾಯ ಗತೋಽಸ್ಮಿ ಭವನಂ ಪ್ರತಿ ।
ಉಪಸ್ಥಾತುಂ ನರಶ್ರೇಷ್ಠ ಸ ಚ ಮಾಂ ಪ್ರತ್ಯಭಾಷತ ॥

ಅನುವಾದ

ನರಶ್ರೇಷ್ಠನೇ! ನಿನ್ನ ಅಪ್ಪಣೆಯಂತೆ ನಾನು ಕುಬೇರನ ಸೇವೆಗಾಗಿ ಅವನ ಭವನಕ್ಕೆ ಹೋಗಿದ್ದೆ. ಆದರೆ ಅವನು ನನಗೆ ಹೇಳಿದನು.॥4॥

ಮೂಲಮ್ - 5

ನಿರ್ಜಿತಸ್ತ್ವಂನರೇಂದ್ರೇಣ ರಾಘವೇಣ ಮಹಾತ್ಮನಾ ।
ನಿಹತ್ಯ ಯುಧಿ ದುರ್ಧರ್ಷಂ ರಾವಣಂ ರಾಕ್ಷಸೇಶ್ವರಮ್ ॥

ಅನುವಾದ

ಎಲೈ ವಿಮಾನವೇ! ಮಹಾತ್ಮಾ ಮಹಾರಾಜ ಶ್ರೀರಾಮನು ಯುದ್ಧದಲ್ಲಿ ದುರ್ಧರ್ಷ ರಾಕ್ಷಸರಾಜ ರಾವಣನನ್ನು ವಧಿಸಿ ನಿನ್ನನ್ನು ಗೆದ್ದುಕೊಂಡಿರುವನು.॥5॥

ಮೂಲಮ್ - 6

ಮಮಾಪಿ ಪರಮಾ ಪ್ರೀತಿರ್ಹತೇ ತಸ್ಮಿನ್ದುರಾತ್ಮನಿ ।
ರಾವಣೇ ಸಗಣೇ ಚೈವ ಸಪುತ್ರೇ ಸಹಬಾಂಧವೇ ॥

ಅನುವಾದ

ಪುತ್ರ, ಬಂಧು-ಬಾಂಧವ, ಸೇವಕರೊಂದಿಗೆ ಆ ದುರಾತ್ಮಾ ರಾವಣನು ಹತನಾದ್ದರಿಂದ ನನಗೆ ಬಹಳ ಸಂತೋಷವಾಗಿದೆ.॥6॥

ಮೂಲಮ್ - 7

ಸ ತ್ವಂ ರಾಮೇಣ ಲಂಕಾಯಾಂ ನಿರ್ಜಿತಃ ಪರಮಾತ್ಮನಾ ।
ವಹ ಸೌಮ್ಯ ತಮೇವ ತ್ವಮಹಮಾಜ್ಞಾಪಯಾಮಿ ತೇ ॥

ಅನುವಾದ

ಸೌಮ್ಯ! ಹೀಗೆ ಪರಮಾತ್ಮಾ ಶ್ರೀರಾಮನು ಲಂಕೆಯಲ್ಲಿ ರಾವಣನೊಂದಿಗೆ ನಿನ್ನನ್ನು ಗೆದ್ದುಕೊಂಡಿರುವನು. ಆದ್ದರಿಂದ ನೀನು ಅವನ ಸೇವೆಯಲ್ಲೇ ಇರು ಎಂದು ನಾನು ಆಜ್ಞಾಪಿಸುತ್ತೇನೆ.॥7॥

ಮೂಲಮ್ - 8

ಪರಮೋ ಹ್ಯೇಷ ಮೇ ಕಾಮೋ ಯತ್ತ್ವಂ ರಾಘವನಂದನಮ್ ।
ವಹೇರ್ಲೋಕಸ್ಯ ಸಂಯಾನಂ ಗಚ್ಛಸ್ವ ವಿಗತಜ್ವರಃ ॥

ಅನುವಾದ

ರಘುಕುಲವನ್ನು ಆನಂದಿತಗೊಳಿಸುವ ಶ್ರೀರಾಮನು ಸಂಪೂರ್ಣ ಜಗತ್ತಿನ ಆಶ್ರಯದಾತನಾಗಿದ್ದಾನೆ. ನೀನು ಅವನ ವಾಹನವಾಗಿರು. ಇದು ನನ್ನ ಬಹುದೊಡ್ಡ ಕಾಮನೆಯಾಗಿದೆ. ಅದಕ್ಕಾಗಿ ನೀನು ನಿಶ್ಚಿಂತವಾಗಿ ಹೋಗು.॥8॥

ಮೂಲಮ್ - 9

ಸೋಽಹಂ ಶಾಸನಮಾಜ್ಞಾಯ ಧನದಸ್ಯ ಮಹಾತ್ಮನಃ ।
ತ್ವತ್ಸಕಾಶಮನುಪ್ರಾಪ್ತೋ ನಿರ್ವಿಶಂಕಃ ಪ್ರತೀಚ್ಛ ಮಾಮ್ ॥

ಅನುವಾದ

ಹೀಗೆ ನಾನು ಕುಬೇರನ ಆಜ್ಞೆ ಪಡೆದೇ ನಿನ್ನ ಬಳಿಗೆ ಬಂದಿರುವೆನು. ಆದ್ದರಿಂದ ನೀನು ನನ್ನನ್ನು ನಿಃಶಂಕನಾಗಿ ಸ್ವೀಕರಿಸು.॥9॥

ಮೂಲಮ್ - 10

ಅಧೃಷ್ಯಃ ಸರ್ವಭೂತಾನಾಂ ಸರ್ವೇಷಾಂ ಧನದಾಜ್ಞಯಾ ।
ಚರಾಮ್ಯಹಂ ಪ್ರಭಾವೇಣ ತವಾಜ್ಞಾಂ ಪರಿಪಾಲಯನ್ ॥

ಅನುವಾದ

ನಾನು ಎಲ್ಲ ಪ್ರಾಣಿಗಳಿಗೆ ಅಜೇಯನಾಗಿದ್ದೇನೆ. ಕುಬೇರನ ಆಜ್ಞೆಯಂತೆ ನಾನು ನಿನ್ನ ಆದೇಶವನ್ನು ಪಾಲಿಸುತ್ತಾ, ತನ್ನ ಪ್ರಭಾವದಿಂದ ಸಮಸ್ತ ಲೋಕಗಳಲ್ಲಿ ಸಂಚರಿಸುವೆನು.॥10॥

ಮೂಲಮ್ - 11

ಏವಮುಕ್ತಸ್ತದಾ ರಾಮಃ ಪುಷ್ಪಕೇಣ ಮಹಾಬಲಃ ।
ಉವಾಚ ಪುಷ್ಪಕಂ ದೃಷ್ಟ್ವಾ ವಿಮಾನಂ ಪುನರಾಗತಮ್ ॥

ಅನುವಾದ

ಪುಷ್ಪಕವು ಹೀಗೆ ಹೇಳಿದಾಗ ಮಹಾಬಲಿ ಶ್ರೀರಾಮನು ಆ ವಿಮಾನ ಪುನಃ ಬಂದಿರುವುದನ್ನು ನೋಡಿ ಅದರ ಬಳಿ ಹೇಳಿದನು.॥11॥

ಮೂಲಮ್ - 12

ಯದ್ಯೇವಂಸ್ವಾಗತಂ ತೇಽಸ್ತು ವಿಮಾನವರ ಪುಷ್ಪಕ ।
ಅನುಕೂಲ್ಯಾದ್ಧನೇಶಸ್ಯ ವೃತ್ತದೋಷೋ ನ ನೋಭವೇತ್ ॥

ಅನುವಾದ

ವಿಮಾನರಾಜ ಪುಷ್ಪಕವೇ! ಮಾತು ಹೀಗಿದ್ದರೆ ನಾನು ನಿನ್ನನ್ನು ಸ್ವಾಗತಿಸುತ್ತೇನೆ. ಕುಬೇರನ ಅನುಕೂಲತೆಯಿಂದಾಗಿ ನಮಗೆ ಮೇರೆ ಮೀರಿದ ದೋಷ ತಟ್ಟಲಾರದು.॥12॥

ಮೂಲಮ್ - 13

ಲಾಜೈಶ್ಚೈವ ತಥಾ ಪುಷ್ಪೈರ್ಧೂಪೈಶ್ಚೈವ ಸುಗಂಧಿಭಿಃ ।
ಪೂಜಯಿತ್ವಾ ಮಹಾಬಾಹೂರಾಘವಃ ಪುಷ್ಪಕಂ ತದಾ ॥

ಅನುವಾದ

ಹೀಗೆ ಹೇಳಿ ಮಹಾಬಾಹು ಶ್ರೀರಾಮನು ಅರಳು, ಪುಷ್ಪ, ಧೂಪ, ಚಂದನಾದಿಗಳಿಂದ ಪುಷ್ಪಕವಿಮಾನವನ್ನು ಪೂಜಿಸಿದನು ಹಾಗೂ ಹೇಳಿದನು.॥13॥

ಮೂಲಮ್ - 14½

ಗಂತವ್ಯಮಿತಿ ಚೋವಾಚ ಆಗಚ್ಛ ತ್ವಂ ಸ್ಮರೇ ಯದಾ ।
ಸಿದ್ಧಾನಾಂ ಚ ಗತೌ ಸೌಮ್ಯ ಮಾ ವಿಷಾದೇನ ಯೋಜಯ ॥
ಪ್ರತಿಘಾತಶ್ಚ ತೇ ಮಾ ಭೂದ್ಯಥೇಷ್ಟಂ ಗಚ್ಛತೋ ದಿಶಃ ।

ಅನುವಾದ

ಈಗ ನೀನು ಹೊರಟು ಹೋಗು, ನಾನು ಸ್ಮರಿಸಿದಾಗ ಬಂದು ಬಿಡು. ಆಕಾಶದಲ್ಲಿ ಇರುತ್ತಾ, ನಿನಗೆ ನನ್ನ ವಿಯೋಗದ ದುಃಖವಾಗಬಾರದು. (ಸಮಯ ಬಂದಾಗ ನಿನ್ನನ್ನು ಉಪಯೋಗಿಸುವೆನು.) ಸ್ವೇಚ್ಛೆಯಿಂದ ಸಮಸ್ತ ದಿಕ್ಕುಗಳಿಗೆ ಹೋಗುವಾಗ ಎಲ್ಲಿಯೂ ಢಿಕ್ಕಿ ಹೊಡೆಯದಿರಲಿ, ಅಥವಾ ನಿನ್ನ ಗತಿ ಕುಂಠಿತವಾಗದಿರಲಿ.॥14½॥

ಮೂಲಮ್ - 15½

ಏವಮಸ್ತ್ವಿತಿ ರಾಮೇಣ ಪೂಜಯಿತ್ವಾ ವಿಸರ್ಜಿತಮ್ ॥
ಅಭಿಪ್ರೇತಾಂ ದಿಶಂ ತಸ್ಮಾತ್ಪ್ರಾಯಾತ್ತತ್ಪುಷ್ಪಕಂ ತದಾ ।

ಅನುವಾದ

ಪುಷ್ಪಕವು ಹಾಗೆಯೇ ಆಗಲಿ ಎಂದು ಹೇಳಿ ಅವನ ಆಜ್ಞೆಯನ್ನು ಶಿರಸಾವಹಿಸಿಕೊಂಡನು. ಹೀಗೆ ಶ್ರೀರಾಮ ಅದನ್ನು ಪೂಜಿಸಿ ಹೋಗಲು ಅಪ್ಪಣೆ ಮಾಡಿದಾಗ ಆ ಪುಷ್ಪಕವು ತನಗೆ ಬೇಕಾದಲ್ಲಿಗೆ ಹೊರಟುಹೋಯಿತು.॥15½॥

ಮೂಲಮ್ - 16½

ಏವಮಂತರ್ಹಿತೇ ತಸ್ಮಿನ್ಪುಷ್ಪಕೇ ಸುಕೃತಾತ್ಮನಿ ॥
ಭರತಃ ಪ್ರಾಂಜಲಿರ್ವಾಕ್ಯಮುವಾಚ ರಘುನಂದನಮ್ ।

ಅನುವಾದ

ಹೀಗೆ ಪುಣ್ಯಮಯ ಪುಷ್ಪಕವಿಮಾನವು ಅದೃಶ್ಯವಾದಾಗ ಭರತನು ಕೈಮುಗಿದುಕೊಂಡು ಶ್ರೀರಘುನಾಥನಲ್ಲಿ ಇಂತೆಂದನು.॥16½॥

ಮೂಲಮ್ - 17½

ವಿಬುಧಾತ್ಮನಿ ದೃಶ್ಯಂತೇ ತ್ವಯಿ ವೀರ ಪ್ರಶಾಸತಿ ॥
ಅಮಾನುಷಾಣಿ ಸತ್ತ್ವಾನಿ ವ್ಯಾಹೃತಾನಿ ಮುಹುರ್ಮುಹುಃ ।

ಅನುವಾದ

ವೀರವರನೇ! ನೀನು ದೇವಸ್ವರೂಪನಾಗಿರುವೆ. ಇದರಿಂದ ನಿನ್ನ ಶಾಸನ ಕಾಲದಲ್ಲಿ ಮನುಷ್ಯೇತರ ಪ್ರಾಣಿಗಳೂ ಕೂಡ ಪದೇ-ಪದೇ ಮನುಷ್ಯರಂತೆ ಸಂಭಾಷಣ ಮಾಡುವುದು ಕಂಡುಬರುತ್ತದೆ.॥17½॥

ಮೂಲಮ್ - 18

ಅನಾಮಯಶ್ಚ ಮರ್ತ್ಯಾನಾಂ ಸಾಗ್ರೋ ಮಾಸೋ ಗತೋ ಹ್ಯಯಮ್ ॥

ಮೂಲಮ್ - 19

ಜೀರ್ಣಾನಾಮಪಿ ಸತ್ತ್ವಾನಾಂ ಮೃತ್ಯುರ್ನಾಯಾತಿ ರಾಘವ ।
ಅರೋಗಪ್ರಸವಾ ನಾರ್ಯೋ ವಪುಷ್ಮಂತೋ ಹಿ ಮಾನವಾಃ ॥

ಅನುವಾದ

ರಾಘವ! ನೀನು ಪಟ್ಟಾಭಿಷಿಕ್ತನಾಗಿ ಒಂದು ತಿಂಗಳಿಗಿಂತ ಹೆಚ್ಚಾಯಿತು ಅಂದಿನಿಂದ ಎಲ್ಲ ಜನರು ನಿರೋಗಿಯಾಗಿದ್ದಾರೆ. ಮುದಿಪ್ರಾಣಿಯ ಬಳಿಯೂ ಮೃತ್ಯು ಸುಳಿಯುವುದಿಲ್ಲ. ಸ್ತ್ರೀಯರು ಕಷ್ಟವಿಲ್ಲದೆ ಮಕ್ಕಳನ್ನು ಹಡೆಯುತ್ತಾರೆ. ಎಲ್ಲ ಮನುಷ್ಯರು ಹೃಷ್ಟ-ಪುಷ್ಟರಾಗಿ ಕಂಡುಬರುತ್ತಾರೆ.॥18-19॥

ಮೂಲಮ್ - 20

ಹರ್ಷಶ್ಚಾಭ್ಯಧಿಕೋ ರಾಜನ್ಜನಸ್ಯ ಪುರವಾಸಿನಃ ।
ಕಾಲೇ ವರ್ಷತಿ ಪರ್ಜನ್ಯಃ ಪಾತಯನ್ನಮೃತಂ ಪಯಃ ॥

ಅನುವಾದ

ರಾಜನೇ! ಪ್ರಜಾಜನರಲ್ಲಿ ಹರ್ಷ ಹೆಚ್ಚಾಗಿದೆ. ಮೇಘಗಳು ಅಮೃತದಂತಹ ನೀರನ್ನು ಸುರಿಸುತ್ತಾ ಸಮಯಕ್ಕೆ ಸರಿಯಾಗಿ ಮಳೆಗರೆಯುತ್ತಿವೆ.॥20॥

ಮೂಲಮ್ - 21½

ವಾತಾಶ್ಚಾಪಿ ಪ್ರವಾಂತ್ಯೇತೇ ಸ್ಪರ್ಶಯುಕ್ತಾಃ ಸುಖಾಃ ಶಿವಾಃ ।
ಈದೃಶೋ ನಶ್ಚಿರಂ ರಾಜಾ ಭವೇದಿತಿ ನರೇಶ್ವರ ॥
ಕಥಯಂತಿ ಪುರೇ ರಾಜನ್ ಪೌರಜಾನಪದಾಸ್ತಥಾ ।

ಅನುವಾದ

ವಾಯುವು ಶೀತಲ ಮತ್ತು ಸುಖಸ್ಪರ್ಶವಾಗಿ ಬೀಸುತ್ತಿದೆ. ರಾಜನೇ! ನಗರ ಮತ್ತು ರಾಷ್ಟ್ರದ ಜನರು - ನಮಗೆ ಚಿರಕಾಲ ಇಂತಹ ಪ್ರಭಾವೀ ರಾಜನೇ ಇರಲಿ ಎಂದು ಈ ಪುರಿಯಲ್ಲಿ ಹೇಳುತ್ತಾರೆ.॥21½॥

ಮೂಲಮ್ - 22

ಏತಾ ವಾಚಃ ಸುಮಧುರಾ ಭರತೇನ ಸಮೀರಿತಾಃ ।
ಶ್ರುತ್ವಾ ರಾಮೋ ಮುದಾ ಯುಕ್ತೋ ಬಭೂವನೃಪಸತ್ತಮಃ ॥

ಅನುವಾದ

ಭರತನು ಹೇಳಿದ ಇಂತಹ ಸುಮಧುರ ಮಾತನ್ನು ಕೇಳಿ ನೃಪಶ್ರೇಷ್ಠ ಶ್ರೀರಾಮಚಂದ್ರನಿಗೆ ಬಹಳ ಸಂತೋಷವುಂಟಾಯಿತು.॥22॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತೊಂದನೆಯ ಸರ್ಗ ಪೂರ್ಣವಾಯಿತು. ॥41॥