[ನಲವತ್ತನೆಯ ಸರ್ಗ]
ಭಾಗಸೂಚನಾ
ವಾನರರ, ಕರಡಿಗಳ, ರಾಕ್ಷಸರ ಬೀಳ್ಕೊಡಿಗೆ
ಮೂಲಮ್ - 1
ತಥಾ ಸ್ಮ ತೇಷಾಂ ವಸತಾಮೃಕ್ಷವಾನರರಕ್ಷಸಾಮ್ ।
ರಾಘವಸ್ತು ಮಹಾತೇಜಾಃ ಸುಗ್ರೀವಮಿದಮಬ್ರವೀತ್ ॥
ಅನುವಾದ
ಹೀಗೆ ಅಲ್ಲಿ ಸುಖವಾಗಿ ವಾಸಿಸುವ ಕರಡಿ, ವಾನರರು, ರಾಕ್ಷಸರಲ್ಲಿ ಸುಗ್ರೀವನನ್ನು ಸಂಬೋಧಿಸಿ ಮಹಾತೇಜಸ್ವೀ ಶ್ರೀರಘುನಾಥನು ಹೀಗೆ ಹೇಳಿದನು.॥1॥
ಮೂಲಮ್ - 2
ಗಮ್ಯತಾಂ ಸೌಮ್ಯ ಕಿಷ್ಕಿಂಧಾಂದುರಾಧರ್ಷಾಂ ಸುರಾಸುರೈಃ ।
ಪಾಲಯಸ್ವ ಸಹಾಮಾತ್ಯೈ ರಾಜ್ಯಂ ನಿಹತಕಂಟಕಮ್ ॥
ಅನುವಾದ
ಸೌಮ್ಯ! ಈಗ ನೀನು ದೇವತೆಗಳಿಗೆ ಮತ್ತು ಅಸುರರಿಗೂ ದುರ್ಜಯ ವಾದ ಕಿಷ್ಕಿಂಧೆಗೆ ಹೋಗು ಮತ್ತು ಅಲ್ಲಿ ಮಂತ್ರಿಗಳೊಂದಿಗೆ ಇದ್ದು, ತನ್ನ ನಿಷ್ಕಂಟಕ ರಾಜ್ಯವನ್ನು ಪಾಲಿಸು.॥2॥
ಮೂಲಮ್ - 3
ಅಂಗದಂ ಚ ಮಹಾಬಾಹೋ ಪ್ರೀತ್ಯಾ ಪರಮಯಾ ಯುತಃ ।
ಪಶ್ಯ ತ್ವಂ ಹನುಮಂತಂ ಚ ನಲಂ ಚ ಸುಮಹಾಬಲಮ್ ॥
ಮೂಲಮ್ - 4
ಸುಷೇಣಂ ಶ್ವಶುರಂ ವೀರಂ ತಾರಂ ಚ ಬಲಿನಾಂ ವರಮ್ ।
ಕುಮುದಂ ಚೈವ ದುರ್ಧರ್ಷಂ ನೀಲಂ ಚೈವ ಮಹಾಬಲಮ್ ॥
ಮೂಲಮ್ - 5
ವೀರಂಶತಬಲಿಂ ಚೈವ ಮೈಂದಂ ದ್ವಿವಿದಮೇವ ಚ ।
ಗಜಂ ಗವಾಕ್ಷಂ ಗವಯಂ ಶರಭಂ ಚ ಮಹಾಬಲಮ್ ॥
ಮೂಲಮ್ - 6
ಋಕ್ಷರಾಜಂ ಚ ದುರ್ಧರ್ಷಂ ಜಾಂಬವಂತಂ ಮಹಾಬಲಮ್ ।
ಪಶ್ಯ ಪ್ರೀತಿಸಮಾಯುಕ್ತೋ ಗಂಧಮಾದನಮೇವ ಚ ॥
ಅನುವಾದ
ಮಹಾಬಾಹೋ! ಅಂಗದ ಮತ್ತು ಹನುಮಂತನನ್ನು ನೀನು ಅತ್ಯಂತ ಪ್ರೇಮಪೂರ್ಣ ದೃಷ್ಟಿಯಿಂದ ನೋಡು. ಮಹಾಬಲಿ ನಳ, ನಿನ್ನ ಮಾವ ವೀರಸುಷೇಣ, ಬಲಿಷ್ಠರಲ್ಲಿ ಶ್ರೇಷ್ಠತಾರ, ದುರ್ದರ್ಷವೀರ ಕುಮುದ, ಮಹಾಬಲಿ ನೀಲ, ವೀರ ಶತಬಲಿ, ಮೈಂದ, ದ್ವಿವಿದ, ಗಜ, ಗವಾಕ್ಷ, ಗವಯ, ಮಹಾಬಲಿ ಶರಭ, ಮಹಾ ಬಲ-ಪರಾಕ್ರಮದಿಂದ ಕೂಡಿದ ದುರ್ಜಯ ವೀರ ಋಕ್ಷರಾಜ ಜಾಂಬವಂತ ಹಾಗೂ ಗಂಧಮಾದನನ ಇವರೆಲ್ಲರ ಮೇಲೆ ನೀನು ಪ್ರೇಮ ದೃಷ್ಟಿ ಇರಿಸು.॥3-6॥
ಮೂಲಮ್ - 7
ಋಷಭಂ ಚ ಸುವಿಕ್ರಾಂತಂ ಪ್ಲವಂಗಂ ಚ ಸುಪಾಟಲಮ್ ।
ಕೇಸರಿಂ ಶರಭಂ ಶುಂಭಂ ಶಂಖಚೂಡಂ ಮಹಾಬಲಮ್ ॥
ಅನುವಾದ
ಪರಮ ಪರಾಕ್ರಮಿ ಋಷಭ, ವಾನರ, ಸುಪಾಟಲ, ಕೇಸರೀ, ಶರಭ, ಶುಂಭ ಹಾಗೂ ಮಹಾಬಲೀ ಶಂಖಚೂಡ ಇವರನ್ನು ಪ್ರೇಮಪೂರ್ಣ ದೃಷ್ಟಿಯಿಂದ ನೋಡು.॥7॥
ಮೂಲಮ್ - 8
ಯೇ ಯೇ ಮೇ ಸುಮಹಾತ್ಮಾನೋ ಮದರ್ಥೇ ತ್ಯಕ್ತಜೀವಿತಾಃ ।
ಪಶ್ಯ ತ್ವಂ ಪ್ರೀತಿಸಂಯುಕ್ತೋ ಮಾ ಚೈಷಾಂ ವಿಪ್ರಿಯಂ ಕೃಥಾಃ ॥
ಅನುವಾದ
ಇವರಲ್ಲದೆ ಯಾವ - ಯಾವ ಮಹಾಮನಸ್ವೀ ವಾನರರು ನನಗಾಗಿ ತಮ್ಮ ಪ್ರಾಣಗಳನ್ನು ಪಣಕ್ಕಿಟ್ಟಿದ್ದರೋ, ಅವರೆಲ್ಲರ ಮೇಲೆ ನೀನು ಪ್ರೇಮದೃಷ್ಟಿ ಇರಿಸು. ಎಂದಿಗೂ ಅವರ ಅಪ್ರಿಯ ಮಾಡಬೇಡ.॥8॥
ಮೂಲಮ್ - 9
ಏವಮುಕ್ತ್ವಾ ಚ ಸುಗ್ರೀವಮಾಶ್ಲಿಷ್ಯ ಚ ಪುನಃ ಪುನಃ ।
ವಿಭೀಷಣಮುವಾಚಾಥ ರಾಮೋ ಮಧುರಯಾ ಗಿರಾ ॥
ಅನುವಾದ
ಹೀಗೆ ಹೇಳಿ ಶ್ರೀರಾಮನು ಸುಗ್ರೀವನನ್ನು ಪುನಃ ಪುನಃ ಆಲಿಂಗಿಸಿಕೊಂಡು, ಮತ್ತೆ ಮಧುರ ವಾಣಿಯಲ್ಲಿ ವಿಭೀಷಣನಲ್ಲಿ ಹೇಳಿದನು.॥9॥
ಮೂಲಮ್ - 10
ಲಂಕಾಂ ಪ್ರಶಾಧಿ ಧರ್ಮೇಣ ಧರ್ಮಜ್ಞಸ್ತ್ವಂ ಮತೋ ಮಮ ।
ಪುರಸ್ಯ ರಾಕ್ಷಸಾನಾಂ ಚ ಭ್ರಾತುರ್ವೈಶ್ರವಣಸ್ಯ ಚ ॥
ಅನುವಾದ
ರಾಕ್ಷಸರಾಜನೇ! ನೀನು ಧರ್ಮದಿಂದ ಲಂಕೆಯ ರಾಜ್ಯವಾಳು. ನೀನು ಧರ್ಮಜ್ಞನೆಂದು ನಾನು ತಿಳಿಯುತ್ತೇನೆ. ನಿನ್ನ ನಗರದ ಎಲ್ಲ ರಾಕ್ಷಸರು ಹಾಗೂ ನಿನ್ನ ಅಣ್ಣ ಕುಬೇರನೂ ನಿನ್ನನ್ನು ಧರ್ಮಜ್ಞನೆಂದೇ ತಿಳಿಯುತ್ತಾರೆ.॥10॥
ಮೂಲಮ್ - 11
ಮಾ ಚ ಬುದ್ಧಿಮಧರ್ಮೇ ತ್ವಂ ಕುರ್ಯಾರಾಜನ್ಕಥಂಚನ ।
ಬುದ್ಧಿಮಂತೋ ಹಿ ರಾಜಾನೋ ಧ್ರುವಮಶ್ನಂತಿ ಮೇದಿನೀಮ್ ॥
ಅನುವಾದ
ರಾಜನೇ! ನೀನು ಯಾವ ರೀತಿಯಲ್ಲಿ ಅಧರ್ಮಕ್ಕೆ ಮನಕೊಡಬೇಡ. ಸರಿಯಾದ ಬುದ್ಧಿ ಇರುವ ರಾಜನೇ ನಿಶ್ಚಯವಾಗಿ ದೀರ್ಘಕಾಲದ ವರೆಗೆ ರಾಜ್ಯವಾಳುವನು.॥11॥
ಮೂಲಮ್ - 12
ಅಹಂಚ ನಿತ್ಯಶೋ ರಾಜನ್ಸುಗ್ರೀವಸಹಿತಸ್ತ್ವಯಾ ।
ಸ್ಮರ್ತವ್ಯಃ ಪರಯಾ ಪ್ರೀತ್ಯಾ ಗಚ್ಛ ತ್ವಂ ವಿಗತಜ್ವರಃ ॥
ಅನುವಾದ
ರಾಜನೇ! ನೀನು ಸುಗ್ರೀವನ ಸಹಿತ ನನ್ನನ್ನು ಸದಾ ಸ್ಮರಿಸುತ್ತಿರು. ಈಗ ನಿಶ್ಚಿಂತನಾಗಿ ಸಂತೋಷದಿಂದ ಇಲ್ಲಿಂದ ದಯಮಾಡಿಸು.॥12॥
ಮೂಲಮ್ - 13
ರಾಮಸ್ಯ ಭಾಷಿತಂ ಶ್ರುತ್ವಾ ಋಕ್ಷವಾನರರಾಕ್ಷಸಾಃ ।
ಸಾಧುಸಾಧ್ವಿತಿ ಕಾಕುತ್ಸ್ಥಂ ಪ್ರಶಶಂಸುಃ ಪುನಃ ಪುನಃ ॥
ಅನುವಾದ
ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಕರಡಿಗಳು, ವಾನರರು, ರಾಕ್ಷಸರು ಧನ್ಯ-ಧನ್ಯ ಎಂದು ಹೇಳುತ್ತಾ ಶ್ರೀರಾಮನನ್ನು ಪದೇ-ಪದೇ ಪ್ರಶಂಸಿಸಿದರು.॥13॥
ಮೂಲಮ್ - 14
ತವ ಬುದ್ಧಿ ರ್ಮಹಾಬಾಹೋ ವೀರ್ಯಮದ್ಭುತಮೇವ ಚ ।
ಮಾಧುರ್ಯಂ ಪರಮಂ ರಾಮ ಸ್ವಯಂಭೋರಿವ ನಿತ್ಯದಾ ॥
ಅನುವಾದ
ಅವರು ಹೇಳಿದರು - ಮಹಾಬಾಹು ಶ್ರೀರಾಮಾ! ಸ್ವಯಂಭೂ ಬ್ರಹ್ಮನಂತೆ ನಿನ್ನ ಸ್ವಭಾವದಲ್ಲಿ ಸದಾ ಮಧುರತೆಯೇ ಇರುತ್ತದೆ. ನಿನ್ನ ಬುದ್ಧಿ ಮತ್ತು ಪರಾಕ್ರಮ ಅದ್ಭುತವಾಗಿದೆ.॥14॥
ಮೂಲಮ್ - 15
ತೇಷಾಮೇವಂ ಬ್ರುವಾಣಾನಾಂ ವಾನರಾಣಾಂ ಚ ರಕ್ಷಸಾಮ್ ।
ಹನೂಮಾನ್ಪ್ರಣತೋ ಭೂತ್ವಾ ರಾಘವಂ ವಾಕ್ಯಮಬ್ರವೀತ್ ॥
ಅನುವಾದ
ವಾನರರು, ರಾಕ್ಷಸರು ಹೀಗೆ ಹೇಳುತ್ತಿದ್ದಾಗಲೇ ಹನುಮಂತನು ವಿನಮ್ರನಾಗಿ ಶ್ರೀರಾಮನಲ್ಲಿ ಹೇಳಿದನು.॥15॥
ಮೂಲಮ್ - 16
ಸ್ನೇಹೋ ಮೇ ಪರಮೋ ರಾಜಂಸ್ತ್ವಯಿ ತಿಷ್ಠತುನಿತ್ಯದಾ ।
ಭಕ್ತಿಶ್ಚ ನಿಯತಾ ವೀರ ಭಾವೋ ನಾನ್ಯತ್ರ ಗಚ್ಛತು ॥
ಅನುವಾದ
ಮಹಾರಾಜಾ! ನಿನ್ನ ಕುರಿತು ನನ್ನ ಮಹಾಸ್ನೇಹ ಸದಾ ಇರಲಿ. ವೀರನೇ! ನಿನ್ನಲ್ಲೇ ನನಗೆ ನಿಶ್ಚಲಭಕ್ತಿ ಇರಲಿ. ನೀನಲ್ಲದೆ ಬೇರೆ ಯಾವುದರಲ್ಲಿಯೂ ನನ್ನ ಆಂತರಿಕ ಅನುರಾಗ ಇಲ್ಲದಿರಲಿ.॥16॥
ಮೂಲಮ್ - 17
ಯಾವದ್ರಾಮಕಥಾ ವೀರ ಚರಿಷ್ಯತಿ ಮಹೀತಲೇ ।
ತಾವಚ್ಛರೀರೇ ವತ್ಸ್ಯಂತು ಪ್ರಾಣಾ ಮಮ ನ ಸಂಶಯಃ ॥
ಅನುವಾದ
ವೀರ ರಾಘವ! ಈ ಪೃಥಿವಿಯಲ್ಲಿ ರಾಮಕಥೆ ಪ್ರಚಲಿತವಿರುವ ತನಕ ನಿಃಸಂದೇಹವಾಗಿ ನನ್ನ ಪ್ರಾಣ ಈ ಶರೀರದಲ್ಲಿರಲಿ.॥17॥
ಮೂಲಮ್ - 18
ಯಚ್ಚೈತಚ್ಚರಿತಂ ದಿವ್ಯಂ ಕಥಾ ತೇ ರಘುನಂದನ ।
ತನ್ಮಮಾಪ್ಸರಸೋ ರಾಮ ಶ್ರಾವಯೇಯುರ್ನರರ್ಷಭ ॥
ಅನುವಾದ
ರಘುಕುಲನಂದನ ವರಶ್ರೇಷ್ಠ ರಾಮಾ! ನಿನ್ನ ಈ ದಿವ್ಯ ಚರಿತ್ರೆ ಮತ್ತು ಕಥೆಯನ್ನು ಅಪ್ಸರೆಯರು ನನಗೆ ಹಾಡಿ ಕೇಳಿಸಲಿ.॥18॥
ಮೂಲಮ್ - 19
ತಚ್ಛ್ರುತ್ವಾಹಂ ತತೋ ವೀರ ತವ ಚರ್ಯಾಮೃತಂ ಪ್ರಭೋ ।
ಉತ್ಕಂಠಾಂ ತಾಂ ಹರಿಷ್ಯಾಮಿ ಮೇಘಲೇಖಾಮಿವಾನಿಲಃ ॥
ಅನುವಾದ
ವೀರ ಪ್ರಭೋ! ನಿನ್ನ ಈ ಚರಿತ್ರೆಯನ್ನು ಕೇಳಿ ವಾಯು ಮೋಡಗಳನ್ನು ಹಾರಿಸಿಕೊಂಡು ದೂರ ಒಯ್ಯುವಂತೆ ನಾನು ನನ್ನ ಉತ್ಕಂಠತೆಯನ್ನು ದೂರಗೊಳಿಸುತ್ತಾ ಇರುವೆನು.॥19॥
ಮೂಲಮ್ - 20
ಏವಂ ಬ್ರುವಾಣಂ ರಾಮಸ್ತು ಹನೂಮಂತಂ ವರಾಸನಾತ್ ।
ಉತ್ಥಾಯ ಸಸ್ವಜೇಸ್ನೇಹಾದ್ವಾಕ್ಯಮೇತದುವಾಚ ಹ ॥
ಅನುವಾದ
ಹನುಮಂತನು ಹೀಗೆ ಹೇಳಿದಾಗ ಶ್ರೀರಘುನಾಥನು ಶ್ರೇಷ್ಠ ಸಿಂಹಾಸನದಿಂದ ಎದ್ದು ಅವನನ್ನು ಬಿಗಿದಪ್ಪಿಕೊಂಡು ಸ್ನೇಹಪೂರ್ವಕ ಹೀಗೆ ಹೇಳಿದನು.॥20॥
ಮೂಲಮ್ - 21
ಏವಮೇತತ್ಕಪಿಶ್ರೇಷ್ಠ ಭವಿತಾ ನಾತ್ರ ಸಂಶಯಃ ।
ಚರಿಷ್ಯತಿ ಕಥಾ ಯಾವದೇಷಾ ಲೋಕೇ ಚ ಮಾಮಿಕಾ ॥
ಮೂಲಮ್ - 22
ತಾವತ್ತೇ ಭವಿತಾ ಕೀರ್ತಿಃ ಶರೀರೇಽಪ್ಯಸವಸ್ತಥಾ ।
ಲೋಕಾ ಹಿ ಯಾವತ್ಸ್ಥಾಸ್ಯಂತಿ ತಾವತ್ಸ್ಥಾಸ್ಯಂತಿ ಮೇ ಕಥಾಃ ॥
ಅನುವಾದ
ಕಪಿಶ್ರೇಷ್ಠನೇ! ಹಾಗೆಯೇ ಆಗುವುದು, ಇದರಲ್ಲಿ ಸಂಶಯವೇ ಇಲ್ಲ. ಪ್ರಪಂಚದಲ್ಲಿ ನನ್ನ ಕಥೆ ಪ್ರಚಲಿತ ವಿರುವ ತನಕ ನಿನ್ನ ಕೀರ್ತಿ ಸ್ಥಿರವಾಗಿರುವುದು ಮತ್ತು ನಿನ್ನ ಶರೀರದಲ್ಲಿ ಪ್ರಾಣಗಳು ಇರುವವು. ಈ ಜಗತ್ತು ಇರುವ ತನಕ ನನ್ನ ಕಥೆಗಳೂ ಸ್ಥಿರವಾಗಿರುವವು.॥21-22॥
ಮೂಲಮ್ - 23
ಏಕೈಕಸ್ಯೋಪಕಾರಸ್ಯ ಪ್ರಾಣಾನ್ದಾಸ್ಯಾಮಿ ತೇ ಕಪೇ ।
ಶೇಷಸ್ಯೇಹೋಪಕಾರಾಣಾಂ ಭವಾಮ ಋಣಿನೋ ವಯಮ್ ॥
ಅನುವಾದ
ಕಪಿಯೇ! ನೀನು ಮಾಡಿದ ಒಂದೊಂದು ಉಪಕಾರಗಳನ್ನು ಪ್ರಾಣದ ಹಂಗನ್ನು ತೊರೆದು ತೀರಿಸಬೇಕಾಗಿದೆ. ಎಲ್ಲ ಉಪಕಾರಗಳನ್ನು ತೀರಿಸುವುದೆಂತು? ಉಳಿದ ನಿನ್ನ ಉಪಕಾರಗಳಿಗೆ ಋಣಿ ಗಳಾಗಿಯೇ ಇರುತ್ತವೆ.॥23॥
ಮೂಲಮ್ - 24
ಮದಂಗೇ ಜೀರ್ಣತಾಂ ಯಾತು ಯತ್ತ್ವಯೋಪಕೃತಂ ಕಪೇ ।
ನರಃ ಪ್ರತ್ಯುಪಕಾರಾಣಾಮಾಪತ್ಸ್ವಾಯಾತಿ ಪಾತ್ರತಾಮ್ ॥
ಅನುವಾದ
ಕಪಿಶ್ರೇಷ್ಠನೇ! ನೀನು ಮಾಡಿದ ಉಪಕಾರಗಳೆಲ್ಲ ನನ್ನ ಶರೀರದಲ್ಲೇ ಜೀರ್ಣವಾಗಿ ಹೋಗಲೆಂದೇ ನಾನು ಬಯಸುವೆನು. ಅದನ್ನು ತೀರಿಸುವ ಅವಕಾಶವೇ ನನಗೆ ಬಾರದಿರಲಿ; ಏಕೆಂದರೆ ಪುರುಷನಲ್ಲಿ ಉಪಕಾರದ ಲಾಭ ಪಡೆಯುವ ಯೋಗ್ಯತೆ ಆಪತ್ಕಾಲದಲ್ಲೇ ಬರುತ್ತದೆ. (ನೀನು ಸಂಕಟದಲ್ಲಿ ಬಿದ್ದು, ನಾನು ನಿನ್ನ ಉಪಕಾರ ತೀರಿಸುವುದನ್ನು ನಾನು ಬಯಸುವುದಿಲ್ಲ..॥24॥
ಮೂಲಮ್ - 25
ತತೋಽಸ್ಯ ಹಾರಂ ಚಂದ್ರಾಭಂ ಮುಚ್ಯ ಕಂಠಾತ್ಸ ರಾಘವಃ ।
ವೈದೂರ್ಯತರಲಂ ಕಂಠೇ ಬಬಂಧಚ ಹನೂಮತಃ ॥
ಅನುವಾದ
ಇಷ್ಟು ಹೇಳಿ ಶ್ರೀರಘುನಾಥನು ತನ್ನ ಕೊರಳಿನಲ್ಲಿದ್ದ ಚಂದ್ರನಂತೆ ಉಜ್ವಲವಾದ ನಡುವಿನಲ್ಲಿ ವೈಡೂರ್ಯವಿದ್ದ ಒಂದು ಹಾರವನ್ನು ತೆಗೆದು ಹನುಮಂತನ ಕೊರಳಿಗೆ ಕಟ್ಟಿದನು.॥25॥
ಮೂಲಮ್ - 26
ತೇನೋರಸಿ ನಿಬದ್ಧೇನ ಹಾರೇಣ ಮಹತಾ ಕಪಿಃ ।
ರರಾಜ ಹೇಮಶೈಲೇಂದ್ರಶ್ಚಂದ್ರೇಣಾಕ್ರಾಂತಮಸ್ತಕಃ ॥
ಅನುವಾದ
ವಕ್ಷಃಸ್ಥಳಕ್ಕೆ ಅಂಟಿಕೊಂಡ ಆ ವಿಶಾಲಹಾರದಿಂದ ಸುವರ್ಣಮಯ ಸುಮೇರುವಿನ ಶಿಖರದಲ್ಲಿ ಚಂದ್ರನ ಉದಯವಾದಂತೆ ಹನುಮಂತನು ಶೋಭಿಸಿದನು.॥26॥
ಮೂಲಮ್ - 27
ಶ್ರುತ್ವಾ ತು ರಾಘವಸ್ಯೈತದುತ್ಥಾಯೋತ್ಥಾಯ ವಾನರಾಃ ।
ಪ್ರಣಮ್ಯ ಶಿರಸಾ ಪಾದೌ ನಿರ್ಜಗ್ಮುಸ್ತೇ ಮಹಾಬಲಾಃ ॥
ಅನುವಾದ
ಶ್ರೀರಘುನಾಥನ ಈ ಬೀಳ್ಕೊಡಿಗೆಯ ಮಾತನ್ನು ಕೇಳಿ ಆ ಮಹಾಬಲಿ ವಾನರರು ಒಬ್ಬೊಬ್ಬರಾಗಿ ಎದ್ದು, ಶ್ರೀರಾಮನ ಚರಣಗಳಿಗೆ ಶಿರಬಾಗಿ ವಂದಿಸಿ ಅಲ್ಲಿಂದ ಹೊರಟರು.॥27॥
ಮೂಲಮ್ - 28
ಸುಗ್ರೀವಃಸ ಚ ರಾಮೇಣ ನಿರಂತರಮುರೋಗತಃ ।
ವಿಭೀಷಣಶ್ಚ ಧರ್ಮಾತ್ಮಾ ಸರ್ವೇ ತೇ ಬಾಷ್ಪವಿಕ್ಲವಾಃ ॥
ಅನುವಾದ
ಸುಗ್ರೀವ ಮತ್ತು ಧರ್ಮಾತ್ಮಾ ವಿಭೀಷಣರೂ ಬಹಳ ಹೊತ್ತು ಶ್ರೀರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡಿದ್ದು, ಬೀಳ್ಕೊಂಡರು. ಆಗ ಅವರೆಲ್ಲರೂ ಕಣ್ಣುಗಳಿಂದ ಕಂಬನಿ ಹರಿಸುತ್ತಾ, ಶ್ರೀರಾಮನ ಭಾವೀ ವಿರಹದಿಂದ ವ್ಯಥಿತರಾಗಿದ್ದರು.॥28॥
ಮೂಲಮ್ - 29
ಸರ್ವೇ ಚ ತೇ ಬಾಷ್ಪಕಲಾಃ ಸಾಶ್ರುನೇತ್ರಾ ವಿಚೇತಸಃ ।
ಸಮ್ಮೂಢಾ ಇವ ದುಃಖೇನ ತ್ಯಜಂತೋ ರಾಘವಂತದಾ ॥
ಅನುವಾದ
ಶ್ರೀರಾಮನನ್ನು ಬಿಟ್ಟು ಹೋಗುವಾಗ ಅವರೆಲ್ಲರೂ ದುಃಖದಿಂದ ಕಿಂಕರ್ತವ್ಯ ವಿಮೂಢರಾಗಿ ಎಚ್ಚರವಿಲ್ಲದಂತಾದರು. ಯಾರ ಬಾಯಿಂದಲೂ ಶಬ್ದ ಹೊರಡುತ್ತಿರಲಿಲ್ಲ, ಎಲ್ಲರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು.॥29॥
ಮೂಲಮ್ - 30
ಕೃತಪ್ರಸಾದಾಸ್ತೇನೈವಂ ರಾಘವೇಣ ಮಹಾತ್ಮನಾ ।
ಜಗ್ಮುಃ ಸ್ವಂ ಸ್ವಂ ಗೃಹಂ ಸರ್ವೇ ದೇಹೀ ದೇಹಮಿವ ತ್ಯಜನ್ ॥
ಅನುವಾದ
ಮಹಾತ್ಮಾ ಶ್ರೀರಘುನಾಥನು ಹೀಗೆ ಕೃಪಾಪೂರ್ವಕ, ಸಂತೋಷದಿಂದ ಬೀಳ್ಕೊಟ್ಟಾಗ ಆ ವಾನರರೆಲ್ಲರೂ, ಜೀವಾತ್ಮನು ವಿವಶತೆಯಿಂದ ಶರೀರ ಬಿಟ್ಟು ಪರಲೋಕಕ್ಕೆ ಹೋಗುವಂತೆ ತಮ್ಮ-ತಮ್ಮ ಮನೆಗಳಿಗೆ ತೆರಳಿದರು.॥30॥
ಮೂಲಮ್ - 31
ತತಸ್ತು ತೇ ರಾಕ್ಷಸಋಕ್ಷವಾನರಾಃ
ಪ್ರಣಮ್ಯ ರಾಮಂ ರಘುವಂಶವರ್ಧನಮ್ ।
ವಿಯೋಗಜಾಶ್ರುಪ್ರತಿಪೂರ್ಣಲೋಚನಾಃ
ಪ್ರತಿಪ್ರಯಾತಾಸ್ತು ಯಥಾನಿವಾಸಿನಃ ॥
ಅನುವಾದ
ಆ ರಾಕ್ಷಸರು ಕರಡಿಗಳು, ವಾನರರು ರಘುವಂಶವರ್ಧನ ಶ್ರೀರಾಮನಿಗೆ ಪ್ರಣಾಮಮಾಡಿ, ಕಣ್ಣುಗಳಲ್ಲಿ ವಿಯೋಗದ ಕಂಬನಿ ತುಂಬಿಕೊಂಡು ತಮ್ಮ-ತಮ್ಮ ನಿವಾಸಗಳಿಗೆ ಮರಳಿ ಹೊರಟುಹೋದರು.॥31॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಲವತ್ತನೆಯ ಸರ್ಗ ಪೂರ್ಣವಾಯಿತು. ॥40॥