०३९ सुग्रीव-विभीषणादि-माननम्

[ಮೂವತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ರಾಜರೆಲ್ಲರೂ ಶ್ರೀರಾಮನಿಗೆ ಕಪ್ಪ-ಕಾಣಿಗೆ ಅರ್ಪಿಸಿದುದು, ಶ್ರೀರಾಮನು ಅವೆಲ್ಲವನ್ನು ಮಿತ್ರರಿಗೂ, ವಾನರರಿಗೂ, ಕರಡಿಗಳಿಗೂ, ರಾಕ್ಷಸರಿಗೂ ಹಂಚಿಕೊಟ್ಟಿದ್ದು

ಮೂಲಮ್ - 1

ತೇ ಪ್ರಯಾತಾ ಮಹಾತ್ಮಾನಃ ಪಾರ್ಥಿವಾಸ್ತೇ ಪ್ರಹೃಷ್ಟವತ್ ।
ಗಜವಾಜಿಸಹಸ್ರೌಘೈಃ ಕಂಪಯಂತೋ ವಸುಂಧರಾಮ್ ॥

ಅನುವಾದ

ಮಹಾತ್ಮನಾದ ಆ ರಾಜರೆಲ್ಲರೂ ಸಾವಿರಾರು ಆನೆ-ಕುದುರೆ-ಕಾಲಾಳುಗಳಿಂದ ಸಮಾವೃತರಾಗಿ ಪರಮ ಹರ್ಷ ದಿಂದ ಭೂಮಿಯನ್ನು ನಡುಗಿಸುತ್ತಾ ಅಯೋಧ್ಯೆಯಿಂದ ಹೊರಟರು.॥1॥

ಮೂಲಮ್ - 2

ಅಕ್ಷೌಹಿಣ್ಯೋ ಹಿ ತತ್ರಾಸನ್ರಾಘವಾರ್ಥೇ ಸಮುದ್ಯತಾಃ ।
ಭರತಸ್ಯಾಜ್ಞಯಾನೇಕಾಃ ಪ್ರಹೃಷ್ಟಬಲವಾಹನಾಃ ॥

ಅನುವಾದ

ಭರತನ ಆಜ್ಞೆಯಂತೆ ಶ್ರೀರಾಮನ ಸಹಾಯಕ್ಕಾಗಿ ಅನೇಕ ಅಕ್ಷೌಹಿಣಿ ಸೈನ್ಯಗಳು ಯುದ್ಧಕ್ಕಾಗಿ ಬಂದಿದ್ದವು. ಆ ಎಲ್ಲ ಸೈನಿಕರು ಮತ್ತು ವಾಹನಗಳು ಹರ್ಷೋತ್ಸಾಹ ಗೊಂಡಿದ್ದವು.॥2॥

ಮೂಲಮ್ - 3

ಊಚುಸ್ತೇ ಚ ಮಹೀಪಾಲಾ ಬಲದರ್ಪಸಮನ್ವಿತಾಃ ।
ನ ರಾಮ ರಾವಣಂ ಯುದ್ಧೇ ಪಶ್ಯಾಮಃ ಪುರತಃ ಸ್ಥಿತಮ್ ॥

ಅನುವಾದ

ಆ ಎಲ್ಲ ಭೂಪಾಲರು ದರ್ಪದಿಂದ ಪರಸ್ಪರ ಹೀಗೆ ಮಾತನಾಡುತ್ತಿದ್ದರು - ನಾವು ಯುದ್ಧದಲ್ಲಿ ಶ್ರೀರಾಮ ಮತ್ತು ರಾವಣರು ಎದುರುಬದಿರಾಗಿ ನಿಂತಿರುವುದನ್ನು ನೋಡಲಾಗಲಿಲ್ಲ.॥3॥

ಮೂಲಮ್ - 4

ಭರತೇನ ವಯಂ ಪಶ್ಚಾತ್ಸಮಾನೀತಾ ನಿರರ್ಥಕಮ್ ।
ಹತಾ ಹಿ ರಾಕ್ಷಸಾಃ ಕ್ಷಿಪ್ರಂ ಪಾರ್ಥಿವೈಃ ಸ್ಯುರ್ನಸಂಶಯಃ ॥

ಅನುವಾದ

ಭರತನು ಮೊದಲೇ ನಮಗೆ ಸೂಚಿಸದೆ, ಯುದ್ಧ ಮುಗಿದ ಮೇಲೆ ನಮ್ಮನ್ನು ವ್ಯರ್ಥವಾಗಿ ಕರೆಸಿಕೊಂಡನು. ಎಲ್ಲ ರಾಜರು ಅಲ್ಲಿಗೆ ಹೋಗಿದ್ದರೆ, ಅವರಿಂದ ಸಮಸ್ತ ರಾಕ್ಷಸರ ಸಂಹಾರವು ಬೇಗನೇ ಅಗುತ್ತಿತ್ತು, ಇದರಲ್ಲಿ ಸಂಶಯವೇ ಇಲ್ಲ.॥4॥

ಮೂಲಮ್ - 5

ರಾಮಸ್ಯ ಬಾಹುವೀರ್ಯೇಣ ರಕ್ಷಿತಾ ಲಕ್ಷ್ಮಣಸ್ಯ ಚ ।
ಸುಖಂ ಪಾರೇ ಸಮುದ್ರಸ್ಯ ಯುಧ್ಯೇಮ ವಿಗತಜ್ವರಾಃ ॥

ಅನುವಾದ

ಶ್ರೀರಾಮ ಮತ್ತು ಲಕ್ಷ್ಮಣರ ಬಾಹುಬಲದಿಂದ ಸುರಕ್ಷಿತ ಮತ್ತು ನಿಶ್ಚಿಂತರಾಗಿ ನಾವು ಸಮುದ್ರದ ಆಚೆಗೆ ಸುಖಪೂರ್ವಕವಾಗಿ ಯುದ್ಧ ಮಾಡುತ್ತಿದ್ದೆವು.॥5॥

ಮೂಲಮ್ - 6

ಏತಾಶ್ಚಾನ್ಯಾಶ್ಚ ರಾಜಾನಃ ಕಥಾಸ್ತತ್ರ ಸಹಸ್ರಶಃ ।
ಕಥಯಂತಃ ಸ್ವರಾಜ್ಯಾನಿ ಜಗ್ಮುರ್ಹರ್ಷಸಮನ್ವಿತಾಃ ॥

ಅನುವಾದ

ಇವರು ಇನ್ನೂ ಬಹಳಷ್ಟು ಮಾತುಗಳನ್ನಾಡುತ್ತಾ ಸಾವಿರಾರು ರಾಜರು ಬಹಳ ಹರ್ಷದಿಂದ ತಮ್ಮ-ತಮ್ಮ ರಾಜ್ಯಗಳಿಗೆ ತೆರಳಿದರು.॥6॥

ಮೂಲಮ್ - 7

ಸ್ವಾನಿ ರಾಜ್ಯಾನಿ ಮುಖ್ಯಾನಿ ಋದ್ಧಾನಿ ಮುದಿತಾನಿ ಚ ।
ಸಮೃದ್ಧಧನಧಾನ್ಯಾನಿ ಪೂರ್ಣಾನಿ ವಸುಮಂತಿ ಚ ॥

ಮೂಲಮ್ - 8

ಯಥಾಪುರಾಣಿ ತೇ ಗತ್ವಾರತ್ನಾನಿ ವಿವಿಧಾನ್ಯಥ ।
ರಾಮಸ್ಯ ಪ್ರಿಯಕಾಮಾರ್ಥಮುಪಹಾರಂ ನೃಪಾ ದದುಃ ॥

ಮೂಲಮ್ - 9

ಅಶ್ವಾನ್ಯಾನಾನಿ ರತ್ನಾನಿ ಹಸ್ತಿನಶ್ಚ ಮದೋತ್ಕಟಾನ್ ।
ಚಂದನಾನಿಚ ಮುಖ್ಯಾನಿ ದಿವ್ಯಾನ್ಯಾಭರಣಾನಿ ಚ ॥

ಮೂಲಮ್ - 10

ಮಣಿಮುಕ್ತಾಪ್ರವಾಲಾಂಸ್ತು ದಾಸ್ಯೋ ರೂಪಸಮನ್ವಿತಾಃ ।
ಅಜಾವಿಕಂ ಚ ವಿವಿಧಂ ರಥಾಂಸ್ತುವಿವಿಧಾನ್ ಬಹೂನ್ ॥

ಅನುವಾದ

ಅವರ ಪ್ರಸಿದ್ಧ ರಾಜ್ಯಗಳು ಸಮೃದ್ಧಿಶಾಲಿ, ಸುಖ-ಆನಂದದಿಂದ ಪರಿಪೂರ್ಣ, ಧನ-ಧಾನ್ಯಗಳಿಂದ ಸಂಪನ್ನ ಹಾಗೂ ರತ್ನಾದಿಗಳಿಂದ ತುಂಬಿ ತುಳುಕುತ್ತಿದ್ದವು. ಆ ರಾಜ್ಯ, ನಗರಗಳಿಗೆ ಹೋಗಿ ಆ ರಾಜರು ಶ್ರೀರಾಮನ ಪ್ರಿಯಮಾಡುವ ಇಚ್ಛೆಯಿಂದ ನಾನಾ ರೀತಿಯ ರತ್ನಾದಿಗಳನ್ನು ಉಡುಗೊರೆಯಾಗಿ ಅವನಿಗೆ ಕಳಿಸಿದರು. ಕುದುರೆ, ವಾಹನಗಳು, ರತ್ನಗಳು, ಮತ್ತಗಜ, ಉತ್ತಮ ಚಂದನ, ದಿವ್ಯ ಆಭೂಷಣ, ಮಣಿ, ಮುತ್ತು, ಹವಳ, ಸುಂದರ ದಾಸಿಯರು, ನಾನಾ ಪ್ರಕಾರದ ಆಡು-ಕುರಿಗಳನ್ನು, ಹಾಗೂ ಬಗೆ-ಬಗೆಯ ಅನೇಕ ರಥಗಳನ್ನು ಕಾಣಿಕೆಯಾಗಿ ಕಳಿಸಿಕೊಟ್ಟರು.॥7-10॥

ಮೂಲಮ್ - 11

ಭರತೋ ಲಕ್ಷ್ಮಣಶ್ಚೈವ ಶತ್ರುಘ್ನಶ್ಚ ಮಹಾಬಲಃ ।
ಆದಾಯ ತಾನಿ ರತ್ನಾನಿ ಸ್ವಾಂ ಪುರೀಂ ಪುನರಾಗತಾಃ ॥

ಮೂಲಮ್ - 12

ಆಗಮ್ಯ ಚ ಪುರೀಂ ರಮ್ಯಾಮಯೋಧ್ಯಾಂ ಪುರುಷರ್ಷಭಾಃ ।
ತಾನಿ ರತ್ನಾನಿ ಚಿತ್ರಾಣಿ ರಾಮಾಯಸಮುಪಾನಯನ್ ॥

ಅನುವಾದ

ಮಹಾಬಲಿ ಭರತ, ಲಕ್ಷ್ಮಣ, ಶತ್ರುಘ್ನರು ಆ ರತ್ನಗಳನ್ನು ಎತ್ತಿಕೊಂಡು ಅಯೋಧ್ಯೆಗೆ ಬಂದರು. ರಮಣೀಯ ಅಯೋಧ್ಯಾಪುರಿಗೆ ಬಂದು ಆ ಮೂವರೂ ಸಹೋದರರು ಆ ವಿಚಿತ್ರ ರತ್ನಗಳನ್ನು ಶ್ರೀರಾಮನಿಗೆ ಅರ್ಪಿಸಿದರು.॥11-12॥

ಮೂಲಮ್ - 13

ಪ್ರತಿಗೃಹ್ಯ ಚ ತತ್ಸರ್ವಂ ರಾಮಃ ಪ್ರೀತಿಸಮನ್ವಿತಃ ।
ಸುಗ್ರೀವಾಯ ದದೌ ರಾಜ್ಞೇಮಹಾತ್ಮಾ ಕೃತಕರ್ಮಣೇ ॥

ಮೂಲಮ್ - 14

ವಿಭೀಷಣಾಯ ಚ ದದೌ ತಥಾನ್ಯೇಭ್ಯೋಽಪಿ ರಾಘವಃ ।
ರಾಕ್ಷಸೇಭ್ಯಃ ಕಪಿಭ್ಯಶ್ಚ ಯೈರ್ವೃತೋ ಜಯಮಾಪ್ತವಾನ್ ॥

ಅನುವಾದ

ಅದೆಲ್ಲವನ್ನು ಸ್ವೀಕರಿಸಿ ಮಹಾತ್ಮಾ ಶ್ರೀರಾಮನು ಬಹಳ ಸಂತೋಷದಿಂದ ಉಪಕಾರೀ ವಾನರರಾಜ ಸುಗ್ರೀವ ಮತ್ತು ವಿಭೀಷಣರನ್ನು ಹಾಗೂ ಇತರ ರಾಕ್ಷಸರಿಗೆ, ವಾನರರಿಗೆ ಅದನ್ನು ಹಂಚಿಬಿಟ್ಟನು; ಏಕೆಂದರೆ ಅವರಿಂದ ಸುತ್ತುವರೆದು ಶ್ರೀರಾಮನು ಯುದ್ಧದಲ್ಲಿ ವಿಜಯ ಪ್ರಾಪ್ತಿ ಮಾಡಿ ಕೊಂಡಿದ್ದನು.॥13-14॥

ಮೂಲಮ್ - 15

ತೇ ಸರ್ವೇ ರಾಮದತ್ತಾನಿ ರತ್ನಾನಿ ಕಪಿರಾಕ್ಷಸಾಃ ।
ಶಿರೋಭಿರ್ಧಾರಯಾಮಾಸುರ್ಭುಜೇಷು ಚ ಮಹಾಬಲಾಃ ॥

ಅನುವಾದ

ಆ ಎಲ್ಲ ಮಹಾಬಲೀ ವಾನರರು ಮತ್ತು ರಾಕ್ಷಸರು ಶ್ರೀರಾಮಚಂದ್ರನು ಕೊಟ್ಟಿರುವ ಆ ರತ್ನಗಳನ್ನು ತಮ್ಮ ಮಸ್ತಕ ಮತ್ತು ಭುಜಗಳಲ್ಲಿ ಧರಿಸಿಕೊಂಡರು.॥15॥

ಮೂಲಮ್ - 16

ಹನೂಮಂತಂ ಚ ನೃಪತಿರಿಕ್ಷ್ವಾಕೂಣಾಂ ಮಹಾರಥಃ ।
ಅಂಗದಂ ಚ ಮಹಾಬಾಹುಮಂಕಮಾರೋಪ್ಯವೀರ್ಯವಾನ್ ॥

ಮೂಲಮ್ - 17

ರಾಮಃ ಕಮಲಪತ್ರಾಕ್ಷಃ ಸುಗ್ರೀವಮಿದಮಬ್ರವೀತ್ ।
ಅಂಗದಸ್ತೇ ಸುಪುತ್ರೋಽಯಂ ಮಂತ್ರೀ ಚಾಪ್ಯನಿಲಾತ್ಮಜಃ ॥

ಮೂಲಮ್ - 18

ಸುಗ್ರೀವಮಂತ್ರಿತೇ ಯುಕ್ತೌ ಮಮ ಚಾಪಿ ಹಿತೇ ರತೌ ।
ಅರ್ಹತೋ ವಿವಿಧಾಂ ಪೂಜಾಂ ತ್ವತ್ಕೃತೇ ವೈ ಹರೀಶ್ವರ ॥

ಅನುವಾದ

ಅನಂತರ ಇಕ್ಷ್ವಾಕು ನರೇಶ ಮಹಾಪರಾಕ್ರಮಿ, ಮಹಾರಥಿ ಕಮಲನಯನ ಶ್ರೀರಾಮನು ಮಹಾಬಾಹು ಹನುಮಾನ್ ಹಾಗೂ ಅಂಗದರನ್ನು ತೊಡೆಯಲ್ಲಿ ಕುಳ್ಳಿರಿಸಿಕೊಂಡು ಸುಗ್ರೀವನಲ್ಲಿ ಹೀಗೆ ಹೇಳಿದನು- ಸುಗ್ರೀವನೇ! ಅಂಗದನು ನಿನ್ನ ಸುಪುತ್ರನಾಗಿದ್ದಾನೆ. ಪವನಕುಮಾರ ಹನುಮಂತನು ಮಂತ್ರಿ. ವಾನರರಾಜನೇ! ಇವರಿಬ್ಬರೂ ನನಗೆ ಮಂತ್ರಿಗಳ ಕೆಲಸ ಮಾಡುತ್ತಿದ್ದರು ಹಾಗೂ ಸದಾ ನನ್ನ ಹಿತಸಾಧನೆಯಲ್ಲೇ ತೊಡಗಿರುತ್ತಿದ್ದರು. ಅದಕ್ಕಾಗಿ ವಿಶೇಷವಾಗಿ ನಿನ್ನಿಂದಾಗಿ ಇವರು ನನ್ನಿಂದ ವಿವಿಧ ಆದರ ಸತ್ಕಾರ ಹಾಗೂ ಉಡುಗೊರೆ ಪಡೆಯಲು ಯೋಗ್ಯರಾಗಿದ್ದಾರೆ.॥16-18॥

ಮೂಲಮ್ - 19

ಇತ್ಯುಕ್ತ್ವಾವ್ಯಪಮುಚ್ಯಾಂಗಾದ್ಭೂಷಣಾನಿ ಮಹಾಯಶಾಃ ।
ಸ ಬಂಧ ಮಹಾರ್ಹಾಣಿ ತದಾಂಗದಹನೂಮತೋಃ ॥

ಅನುವಾದ

ಹೀಗೆ ಹೇಳಿ ಮಹಾಯಶಸ್ವೀ ಶ್ರೀರಾಮನು ತನ್ನ ಮೈಮೇಲಿಂದ ಬಹುಮೂಲ್ಯ ಆಭೂಷಣ ತೆಗೆದು ಅದನ್ನು ಅಂಗದ ಹಾಗೂ ಹನುಮಂತರಿಗೆ ತೊಡಿಸಿದನು.॥19॥

ಮೂಲಮ್ - 20

ಆಭಾಷ್ಯ ಚ ಮಹಾವೀರ್ಯಾನ್ರಾಘವೋ ಯೂಥಪರ್ಷಭಾನ್ ।
ನೀಲಂ ನಲಂ ಕೇಸರಿಣಂ ಕುಮುದಂ ಗಂಧಮಾದನಮ್ ॥

ಮೂಲಮ್ - 21

ಸುಷೇಣಂ ಪನಸಂ ವೀರಂ ಮೈಂದಂ ದ್ವಿವಿದಮೇವ ಚ ।
ಜಾಂಬವಂತಂ ಗವಾಕ್ಷಂ ಚ ವಿನತಂ ಧೂಮ್ರಮೇವ ಚ ॥

ಮೂಲಮ್ - 22

ವಲೀಮುಖಂ ಪ್ರಜಂಘಂ ಚ ಸಂನಾದಂ ಚ ಮಹಾಬಲಮ್ ।
ದರೀಮುಖಂ ದಧಿಮುಖಮಿಂದ್ರಜಾನುಂ ಚ ಯೂಥಪಮ್ ॥(ಶ್ಲೋಕ - 23)
ಮಧುರಂ ಶ್ಲಕ್ಷ್ಣಯಾ ವಾಚಾ ನೇತ್ರಾಭ್ಯಾಮಪಿಬನ್ನಿವ ।
ಸುಹೃದೋಮೇ ಭವಂತಶ್ಚ ಶರೀರಂ ಭ್ರಾತರಸ್ತಥಾ ॥

ಮೂಲಮ್ - 24

ಯುಷ್ಮಾಭಿರುದ್ಧೃತಶ್ಚಾಹಂ ವ್ಯಸನಾತ್ಕಾನನೌಕಸಃ ।
ಧನ್ಯೋ ರಾಜಾ ಚ ಸುಗ್ರೀವೋ ಭವದ್ಭಿಃ ಸುಹೃದಾಂ ವರೈಃ ॥

ಅನುವಾದ

ಬಳಿಕ ಶ್ರೀರಘುನಾಥನು ಮಹಾಪರಾಕ್ರಮಿ ವಾನರ ಸೇನಾಪತಿಗಳಾದ ನೀಲ, ನಳ, ಕೇಸರೀ, ಕುಮುದ, ಗಂಧಮಾದನ, ಸುಷೇಣ, ಪನಸ, ವೀರಮೈಂದ, ದ್ವಿವಿದ, ಜಾಂಬವಂತ, ಗವಾಕ್ಷ, ವಿನತ, ಧೂಮ್ರ, ಬಲಿಮುಖ, ಪ್ರಜಂಘ, ಮಹಾಬಲಿ ಸಂನಾದ, ದಧಿಮುಖ, ದರೀಮುಖ ಮತ್ತು ಇಂದ್ರಜಾನು ಇವರನ್ನು ಕರೆದು ಅವರನ್ನು ಕಣ್ಣುಗಳಿಂದಲೇ ಕುಡಿದುಬಿಡುವನೋ ಎಂಬಂತೆ ನೋಡಿದನು. ಅವನು ಸ್ನೇಹಯುಕ್ತ ಮಧುರ ವಾಣಿಯಿಂದ ಅವರಲ್ಲಿ ಹೇಳಿದನು - ವಾನರ ವೀರರೇ! ನೀವು ನನಗೆ ಸುಹೃದ, ಶರೀರ ಮತ್ತು ಸಹೋದರರಾಗಿದ್ದೀರಿ. ನೀವೇ ನನ್ನನ್ನು ಸಂಕಟದಿಂದ ಎತ್ತಿರುವಿರಿ. ನಿಮ್ಮಂತಹ ಶ್ರೇಷ್ಠ ಸುಹೃದರನ್ನು ಪಡೆದು ಸುಗ್ರೀವರಾಜನು ಧನ್ಯನಾಗಿದ್ದಾನೆ.॥20-24॥

ಮೂಲಮ್ - 25

ಏವಮುಕ್ತ್ವಾ ದದೌ ತೇಭ್ಯೋ ಭೂಷಣಾನಿ ಯಥಾರ್ಹತಃ ।
ವಜ್ರಾಣಿ ಚಮಹಾರ್ಹಾಣಿ ಸಸ್ವಜೇ ಚ ನರರ್ಷಭಃ ॥

ಅನುವಾದ

ಹೀಗೆ ಹೇಳಿ ನರಶ್ರೇಷ್ಠ ಶ್ರೀರಾಮನು ಅವರಿಗೆ ಯಥಾಯೋಗ್ಯ ಆಭೂಷಣ ಮತ್ತು ಬಹುಮೂಲ್ಯ ರತ್ನಾದಿಗಳನ್ನು ಕೊಟ್ಟು, ಅವರನ್ನು ಅಪ್ಪಿಕೊಂಡನು.॥25॥

ಮೂಲಮ್ - 26

ತೇ ಪಿಬಂತಃ ಸುಗಂಧೀನಿ ಮಧೂನಿ ಮಧುಪಿಂಗಲಾಃ ।
ಮಾಂಸಾನಿ ಚ ಸುಮೃಷ್ಟಾನಿ ಮೂಲಾನಿ ಚ ಲಾನಿ ಚ ॥

ಅನುವಾದ

ಜೇನಿನಂತಹ ಪಿಂಗಳ ವರ್ಣವುಳ್ಳ ಆ ವಾನರರು ಅಲ್ಲಿ ಮಧು ಸೇವಿಸುತ್ತಾ, ರಾಜಭೋಗ ವಸ್ತುಗಳನ್ನು ಅನುಭವಿಸುತ್ತಾ, ಸ್ವಾದಿಷ್ಟ ಫಲ-ಮೂಲಗಳನ್ನು ತಿನ್ನುತ್ತಿದ್ದರು.॥26॥

ಮೂಲಮ್ - 27

ಏವಂ ತೇಷಾಂ ನಿವಸತಾಂ ಮಾಸಃ ಸಾಗ್ರೋಯಯೌ ತದಾ ।
ಮುಹೂರ್ತಮಿವ ತೇ ಸರ್ವೇ ರಾಮಭಕ್ತ್ಯಾ ಚ ಮೇನಿರೇ ॥

ಅನುವಾದ

ಹೀಗೆ ವಾಸಿಸುತ್ತಾ ವಾನರರು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಕಳೆಯಿತು. ಆದರೂ ಶ್ರೀರಾಮನ ಕುರಿತು ಇರುವ ಭಕ್ತಿಯಿಂದಾಗಿ ಅಷ್ಟು ಸಮಯ ಒಂದು ಮುಹೂರ್ತದಂತೆ ಕಂಡಿತು.॥27॥

ಮೂಲಮ್ - 28

ರಾಮೋಪಿ ರೇಮೇ ತೈಃ ಸಾರ್ಧಂ ವಾನರೈಃ ಕಾಮರೂಪಿಭಿಃ ।
ರಾಕ್ಷಸೈಶ್ಚ ಮಹಾವೀರ್ಯೈರ್ಋಕ್ಷೈಶ್ಚೈವ ಮಹಾಬಲೈಃ ॥

ಅನುವಾದ

ಶ್ರೀರಾಮನೂ ಕೂಡ ಕಾಮರೂಪಿಗಳಾದ ವಾನರರೊಂದಿಗೆ, ಮಹಾಪರಾಕ್ರಮಿ ರಾಕ್ಷಸರೊಂದಿಗೆ ಹಾಗೂ ಮಹಾಬಲೀ ಕರಡಿಗಳೊಂದಿಗೆ ಆನಂದದಿಂದ ಸಮಯ ಕಳೆಯುತ್ತಿದ್ದನು.॥28॥

ಮೂಲಮ್ - 29

ಏವಂ ತೇಷಾಂ ಯಯೌ ಮಾಸೋ ದ್ವಿತೀಯಃ ಶಿಶಿರಃ ಸುಖಮ್ ।
ವಾನರಾಣಾಂ ಪ್ರಹೃಷ್ಟಾನಾಂ ರಾಕ್ಷಸಾನಾಂ ಚ ಸರ್ವಶಃ ॥

ಮೂಲಮ್ - 30

ಇಕ್ಷ್ವಾಕುನಗರೇ ರಮ್ಯೇ ಪರಾಂ ಪ್ರೀತಿಮುಪಾಸತಾಮ್ ।
ರಾಮಸ್ಯ ಪ್ರೀತಿಕರಣೈಃ ಕಾಲಸ್ತೇಷಾಂ ಸುಖಂ ಯಯೌ ॥

ಅನುವಾದ

ಹೀಗೆ ಅವರ ಶಿಶಿರಋತುವಿನ ಇನ್ನೊಂದು ತಿಂಗಳೂ ಸುಖವಾಗಿ ಕಳೆಯಿತು. ಇಕ್ಷ್ವಾಕುವಂಶೀ ರಾಜರ ಆ ಸುರಮ್ಯ ರಾಜಧಾನಿಯಲ್ಲಿ ಆ ವಾನರ, ರಾಕ್ಷಸರು ಬಹಳ ಹರ್ಷ ಮತ್ತು ಪ್ರೇಮದಿಂದ ಇರುತ್ತಿದ್ದರು. ಶ್ರೀರಾಮನ ಪ್ರೇಮಪೂರ್ವಕ ಸತ್ಕಾರದಿಂದ ಅವರ ಆ ಸಮಯ ಸುಖವಾಗಿ ಕಳೆಯುತ್ತಿತ್ತು.॥29-30॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಮೂವತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥39॥