[ಮೂವತ್ತೆಂಟನೆಯ ಸರ್ಗ]
ಭಾಗಸೂಚನಾ
ಶ್ರೀರಾಮನು ಜನಕರಾಜ, ಯುಧಾಜಿತ್ತು, ಪ್ರತರ್ದನರೇ ಮೊದಲಾದ ರಾಜರ ಬೀಳ್ಕೊಡಿಗೆ
ಮೂಲಮ್ - 1
ಏವಮಾಸ್ತೇ ಮಹಾಬಾಹುರಹನ್ಯಹನಿ ರಾಘವಃ ।
ಪ್ರಶಾಸತ್ಸರ್ವಕಾರ್ಯಾಣಿ ಪೌರಜಾನಪದೇಷುಚ ॥
ಅನುವಾದ
ಮಹಾಬಾಹು ಶ್ರೀರಘುನಾಥನು ಹೀಗೆ ಪ್ರತಿದಿನವೂ ರಾಜಸಭೆಯಲ್ಲಿ ಪುರಜನರ ಮತ್ತು ದೇಶವಾಸಿಗಳ ಎಲ್ಲ ಕಾರ್ಯಗಳನ್ನು ಪರಾಮರ್ಶಿಸುತ್ತಾ ರಾಜ್ಯಶಾಸನ ಮಾಡುತ್ತಿದ್ದನು.॥1॥
ಮೂಲಮ್ - 2
ತತಃ ಕತಿಪಯಾಹಃಸು ವೈದೇಹಂ ಮಿಥಿಲಾಧಿಪಮ್ ।
ರಾಘವಃ ಪ್ರಾಂಜಲಿರ್ಭೂತ್ವಾ ವಾಕ್ಯಮೇತದುವಾಚ ಹ ॥
ಅನುವಾದ
ಅನಂತರ ಕೆಲವು ದಿನ ಕಳೆದಾಗ ಶ್ರೀರಾಮನ ಮಿಥಿಲೇಶರಾಜಾ ಜನಕನಿಗೆ ಕೈಮುಗಿದು ಹೀಗೆ ಹೇಳಿದನು.॥2॥
ಮೂಲಮ್ - 3
ಭವಾನ್ಹಿ ಗತಿರವ್ಯಗ್ರಾ ಭವತಾ ಪಾಲಿತಾವಯಮ್ ।
ಭವತಸ್ತೇಜಸೋಗ್ರೇಣ ರಾವಣೋನಿಹತೋಮಯಾ ॥
ಅನುವಾದ
ಮಹಾರಾಜರೇ! ನೀವು ನನಗೆ ಏಕಮಾತ್ರ ಆಶ್ರಯರಾಗಿದ್ದೀರಿ. ನೀವು ಸದಾ ನಮ್ಮ ಲಾಲನೆ-ಪಾಲನೆ ಮಾಡಿರುವಿರಿ. ನಿಮ್ಮ ಹೆಚ್ಚಿದ ತೇಜದಿಂದಲೇ ನಾನು ರಾವಣನನ್ನು ವಧಿಸಿದೆ.॥3॥
ಮೂಲಮ್ - 4
ಇಕ್ಷ್ವಾಕೂಣಾಂ ಚ ಸರ್ವೇಷಾಂ ಮೈಥಿಲಾನಾಂ ಚ ಸರ್ವಶಃ ।
ಅತುಲಾಃ ಪ್ರೀತಯೋ ರಾಜನ್ಸಂಬಂಧಕಪುರೋಗಮಾಃ ॥
ಅನುವಾದ
ರಾಜರೇ! ಸಮಸ್ತ ಇಕ್ಷ್ವಾಕುವಂಶೀ ಮತ್ತು ಮೈಥಿಲರಾಜರ ಪರಸ್ಪರ ಸಂಬಂಧದಿಂದ ಎಲ್ಲ ಪ್ರಕಾರ ದಿಂದ ಬೆಳೆದ ಪ್ರೇಮಕ್ಕೆ ಎಣೆಯೇ ಇಲ್ಲ.॥4॥
ಮೂಲಮ್ - 5
ತದ್ಭವಾನ್ಸ್ವ್ವಪುರಂ ಯಾತು ರತ್ನಾನ್ಯಾದಾಯ ಪಾರ್ಥಿವ ।
ಭರತಶ್ಚ ಸಹಾಯಾರ್ಥೇ ಪೃಷ್ಠತಶ್ಚಾನುಯಾಸ್ಯತಿ ॥
ಅನುವಾದ
ಪಾರ್ಥಿವನೇ! ಇನ್ನು ನಾವು ನೀಡಿದ ಉಡುಗೊರೆಯಾಗಿ ಅರ್ಪಿಸಿದ ಮಣಿ-ರತ್ನಾದಿಗಳನ್ನು ಸ್ವೀಕರಿಸಿ, ನಿಮ್ಮ ರಾಜಧಾನಿಗೆ ನಿಮ್ಮ ರಾಜಧಾನಿಗೆ ಪ್ರಯಾಣ ಬೆಳೆಸಬಹುದು. ಭರತ-ಶತ್ರುಘ್ನರೂ ನಿಮ್ಮ ಸಹಾಯಕರಾಗಿ ನಿಮ್ಮೊಂದಿಗೆ ಬರುವರು.॥5॥
ಮೂಲಮ್ - 6
ಸತಥೇತಿ ತತಃ ಕೃತ್ವಾ ರಾಘವಂ ವಾಕ್ಯಮಬ್ರವೀತ್ ।
ಪ್ರೀತೋಽಸ್ಮಿ ಭವತಾ ರಾಜನ್ದರ್ಶನೇನ ನಯೇನ ಚ ॥
ಅನುವಾದ
ಆಗ ಜನಕನು ಹಾಗೆಯೇ ಆಗಲಿ ಎಂದು ಹೇಳಿ ಶ್ರೀರಾಮನಲ್ಲಿ ಹೇಳಿದನು - ರಾಜಾ ! ನಾನು ನಿನ್ನ ದರ್ಶನ ಹಾಗೂ ನ್ಯಾಯಯುಕ್ತ ವ್ಯವಹಾರದಿಂದ ಬಹಳ ಸಂತಸಗೊಂಡಿರುವೆ.॥6॥
ಮೂಲಮ್ - 7
ಯಾನ್ಯೇತಾನಿ ತು ರತ್ನಾನಿ ಮದರ್ಥಂ ಸಂಚಿತಾನಿ ವೈ ।
ದುಹಿತ್ರೇ ತಾನ್ಯಹಂ ರಾಜನ್ಸರ್ವಾಣ್ಯೇವದದಾಮಿ ವೈ ॥
ಅನುವಾದ
ನೀನು ನನಗಾಗಿ ಕೊಟ್ಟಿರುವ ರತ್ನಾದಿಗಳನ್ನು ನಾನು ನಿಮ್ಮ ಸೀತೆಯೇ ಆದಿ ಪುತ್ರಿಯರಿಗೆ ಕೊಡುವೆನು.॥7॥
ಮೂಲಮ್ - 8
ಏವಮುಕ್ತ್ವಾತು ಕಾಕುತ್ಸ್ಥಂ ಜನಕೋ ಹೃಷ್ಟಮಾನಸಃ ।
ಪ್ರಯಯೌ ಮಿಥಿಲಾಂ ಶ್ರೀಮಾಂಸ್ತಮನುಜ್ಞಾಯ ರಾಘವಮ್ ॥
ಅನುವಾದ
ಶ್ರೀರಾಮನಲ್ಲಿ ಹೀಗೆ ಹೇಳಿ ಶ್ರೀಮಾನ್ ಜನಕನು ಆನಂದದಿಂದ ಅವನ ಅನುಮತಿ ಪಡೆದು ಮಿಥಿಲೆಗೆ ಪ್ರಯಾಣ ಮಾಡಿದನು.॥8॥
ಮೂಲಮ್ - 9
ತತಃ ಪ್ರಯಾತೇ ಜನಕೇ ಕೇಕಯಂ ಮಾತುಲಂ ಪ್ರಭುಮ್ ।
ರಾಘವಃ ಪ್ರಾಂಜಲಿರ್ಭೂತ್ವಾ ವಿನಯಾದ್ವಾಕ್ಯಮಬ್ರವೀತ್ ॥
ಅನುವಾದ
ಜನಕನು ತೆರಳಿದ ಬಳಿಕ ಶ್ರೀರಘುನಾಥನು ತನ್ನ ಮಾವ ಮಹಾಸಾಮರ್ಥ್ಯಶಾಲಿ ಕೇಕೇಯ ನರೇಶ ಯುಧಾ ಜಿತ್ತುವಿನಲ್ಲಿ ಕೈಮುಗಿದು ವಿನಯದಿಂದ ಹೇಳಿದನು.॥9॥
ಮೂಲಮ್ - 10
ಇದಂ ರಾಜ್ಯಮಹಂ ಚೈವ ಭರತಶ್ಚ ಸಲಕ್ಷಣಃ ।
ಆಯತ್ತಸ್ತ್ವಂ ಹಿ ನೋ ರಾಜನ್ಗತಿಶ್ಚ ಪುರುಷರ್ಷಭ ॥
ಅನುವಾದ
ರಾಜರೇ! ಪುರುಷಪ್ರವರ! ಈ ರಾಜ್ಯ, ನಾನು, ಭರತ, ಲಕ್ಷ್ಮಣ, ಶತ್ರುಘ್ನ ಎಲ್ಲರೂ ನಿಮ್ಮ ಅಧೀನರಾಗಿದ್ದೇವೆ. ನೀವೇ ನಮ್ಮ ಆಶ್ರಯನಾಗಿರುವಿರಿ.॥10॥
ಮೂಲಮ್ - 11
ರಾಜಾ ಹಿ ವೃದ್ಧಃಸಂತಾಪಂ ತ್ವದರ್ಥಮುಪಯಾಸ್ಯತಿ ।
ತಸ್ಮಾದ್ಗಮನಮದ್ಯೈವ ರೋಚತೇ ತವ ಪಾರ್ಥಿವ ॥
ಅನುವಾದ
ಮಹಾರಾಜ ಕೇಕೇಯನರೇಶ ವೃದ್ಧರಾಗಿದ್ದಾರೆ. ಅವರು ನಿಮ್ಮ ಕುರಿತು ಚಿಂತಿತರಾಗಿರಬಹುದು. ಅದರಿಂದ ಪೃಥಿವಿನಾಥನೇ! ನೀವು ಇಂದೇ ಹೊರಡುವುದು ನನಗೆ ಒಳ್ಳೆಯದೆನಿಸುತ್ತದೆ.॥11॥
ಮೂಲಮ್ - 12
ಲಕ್ಷ್ಮಣೇನಾನುಯಾತ್ರೇಣ ಪೃಷ್ಠತೋಽನುಗಮಿಷ್ಯತೇ ।
ಧನಮಾದಾಯ ಬಹುಲಂ ರತ್ನಾನಿ ವಿವಿಧಾನಿ ಚ ॥
ಅನುವಾದ
ತಾವು ಹೇರಳ ಧನ-ರತ್ನಾದಿಗಳನ್ನು ತೆಗೆದುಕೊಂಡು ಹೊರಡಿರಿ. ಮಾರ್ಗದಲ್ಲಿ ಸಹಾಯಕ್ಕಾಗಿ ಲಕ್ಷ್ಮಣನು ನಿಮ್ಮ ಜೊತೆಗೆ ಬರುವನು.॥12॥
ಮೂಲಮ್ - 13
ಯುಧಾಜಿತ್ತು ತಥೇತ್ಯಾಹ ಗಮನಂ ಪ್ರತಿ ರಾಘವ ।
ರತ್ನಾನಿ ಚ ಧನಂ ಚೈವ ತ್ವಯ್ಯೇವಾಕ್ಷಯ್ಯಮಸ್ತ್ವಿತಿ ॥
ಅನುವಾದ
ಆಗ ಯುಧಾಜಿತ್ತು ‘ತಥಾಸ್ತು’ ಎಂದು ಹೇಳಿ ರಾಮಚಂದ್ರನ ಮಾತನ್ನು ಮನ್ನಿಸಿ. ರಘುನಂದನ! ಈ ರತ್ನ, ಧನವೆಲ್ಲ ನಿನ್ನ ಬಳಿಯಲ್ಲೇ ಅಕ್ಷಯರೂಪವಾಗಿ ಇರಲಿ.॥13॥
ಮೂಲಮ್ - 14
ಪ್ರದಕ್ಷಿಣಂ ಚ ರಾಜಾನಂ ಕೃತ್ವಾ ಕೇಕಯವರ್ಧನಃ ।
ರಾಮೇಣ ಚ ಕೃತಃ ಪೂರ್ವಮಭಿವಾದ್ಯ ಪ್ರದಕ್ಷಿಣಮ್ ॥
ಅನುವಾದ
ಮತ್ತೆ ಮೊದಲಿಗೆ ಶ್ರೀರಘುನಾಥನು ಪ್ರೇಮದಿಂದ ತನ್ನ ಮಾವನಿಗೆ ಪ್ರದಕ್ಷಿಣೆ ಮಾಡಿದನು, ಬಳಿಕ ಕೇಕೆಯ ಕುಲವರ್ಧನ ರಾಜಕುಮಾರ ಯುಧಾಜಿತೂ ಕೂಡ ಶ್ರೀರಾಮನ ಪ್ರದಕ್ಷಿಣೆ ಮಾಡಿದನು.॥14॥
ಮೂಲಮ್ - 15
ಲಕ್ಷ್ಮಣೇನ ಸಹಾಯೇನ ಪ್ರಯಾತಃ ಕೇಕಯೇಶ್ವರಃ ।
ಹತೇಽಸುರೇ ಯಥಾ ವೃತ್ರೇ ವಿಷ್ಣುನಾ ಸಹ ವಾಸವಃ ॥
ಅನುವಾದ
ಬಳಿಕ ಕೇಕೆಯರಾಜನು ಲಕ್ಷ್ಮಣನೊಂದಿಗೆ, ವೃತ್ರಾಸುರನನ್ನು ವಧಿಸಿ ಇಂದ್ರನು ಭಗವಾನ್ ವಿಷ್ಣುವಿನೊಂದಿಗೆ ಅಮರಾವತಿಯ ಯಾತ್ರೆ ಮಾಡಿದಂತೆ, ತನ್ನ ದೇಶಕ್ಕೆ ಹೊರಟನು.॥15॥
ಮೂಲಮ್ - 16
ತಂ ವಿಸೃಜ್ಯ ತತೋ ರಾಮೋ ವಯಸ್ಯಮಕುತೋಭಯಮ್ ।
ಪ್ರತರ್ದನಂ ಕಾಶಿಪತಿಂ ಪರಿಷ್ವಜ್ಯೇದಮಬ್ರವೀತ್ ॥
ಅನುವಾದ
ಮಾವನನ್ನು ಬೀಳ್ಕೊಟ್ಟು ಶ್ರೀರಾಮನು ಯಾರಿಗೂ ಹೆದರದೇ ಇರುವ ತನ್ನ ಮಿತ್ರ ಕಾಶೀರಾಜ ಪ್ರತರ್ದನನನ್ನು ಆಲಿಂಗಿಸಿಕೊಂಡು ಹೇಳಿದನು.॥16॥
ಮೂಲಮ್ - 17
ದರ್ಶಿತಾ ಭವತಾ ಪ್ರೀತಿರ್ದರ್ಶಿತಂ ಸೌಹೃದಂ ಪರಮ್ ।
ಉದ್ಯೋಗಶ್ಚ ತ್ವಯಾ ರಾಜನ್ಭರತೇನ ಕೃತಃ ಸಹ ॥
ಅನುವಾದ
ರಾಜಾ! ನೀವು ಪಟ್ಟಾಭಿಷೇಕದ ಕಾರ್ಯದಲ್ಲಿ ಭರತನೊಂದಿಗೆ ಪೂರ್ಣ ಸಹಕಾರ ಕೊಟ್ಟಿರುವಿ. ಹೀಗೆ ಮಾಡಿ ತಮ್ಮಲ್ಲಿರುವ ಮಹಾಪ್ರೇಮ - ಸೌಹಾರ್ದದ ಪರಿಚಯ ಕೊಟ್ಟಿರುವಿ.॥17॥
ಮೂಲಮ್ - 18
ತದ್ಭವಾನದ್ಯ ಕಾಶೇಯ ಪುರೀಂವಾರಾಣಸೀಂ ವ್ರಜ ।
ರಮಣೀಯಾಂ ತ್ವಯಾ ಗುಪ್ತಾಂ ಸುಪ್ರಾಕಾರಾಂ ಸುತೋರಣಾಮ್ ॥
ಅನುವಾದ
ಕಾಶಿರಾಜನೇ! ಈಗ ನೀನು ಸುಂದರ ಪ್ರಾಕಾರ ಹಾಗೂ ಮನೋಹರ ದ್ವಾರಗಳಿಂದ ಸುಶೋಭಿತವಾದ, ನಿನ್ನಿಂದಲೇ ರಕ್ಷಿತವಾದ ರಮಣೀಯ ವಾರಾಣಾಸೀ ಪುರಿಗೆ ದಯಮಾಡಿಸಿರಿ.॥18॥
ಮೂಲಮ್ - 19
ಏತಾವದುಕ್ತ್ವಾ ಚೋತ್ಥಾಯ ಕಾಕುತ್ಸ್ಥಃ ಪರಮಾಸನಾತ್ ।
ಪರ್ಯಷ್ವಜತ ಧರ್ಮಾತ್ಮಾ ನಿರಂತರಮುರೋಗತಮ್ ॥
ಅನುವಾದ
ಹೀಗೆ ಹೇಳಿ ಧರ್ಮಾತ್ಮಾ ಶ್ರೀರಾಮನು ತನ್ನ ಆಸನದಿಂದ ಎದ್ದು ಪ್ರತರ್ದನನನ್ನು ಪುನಃ ಗಾಢವಾಗಿ ಆಲಿಂಗಿಸಿಕೊಂಡನು.॥19॥
ಮೂಲಮ್ - 20½
ವಿಸರ್ಜಯಾಮಾಸ ತದಾ ಕೌಸಲ್ಯಾಪ್ರೀತಿವರ್ಧನಃ ।
ರಾಘವೇಣ ಕೃತಾನುಜ್ಞಃ ಕಾಶೇಯೋ ಹ್ಯಕುತೋಭಯಃ ॥
ವಾರಾಣಸೀಂ ಯಯೌ ತೂರ್ಣಂ ರಾಘವೇಣ ವಿಸರ್ಜಿತಃ ।
ಅನುವಾದ
ಹೀಗೆ ಕೌಸಲ್ಯಾನಂದವರ್ಧನ ಶ್ರೀರಾಮನು ಆಗ ಕಾಶೀರಾಜನನ್ನು ಬೀಳ್ಕೊಟ್ಟನು. ಶ್ರೀರಘುನಾಥನ ಅನುಮತಿ ಪಡೆದು ನಿರ್ಭಯ ನಾದ ಕಾಶಿರಾಜನು ಕೂಡಲೇ ವಾರಣಾಸಿಗೆ ತೆರಳಿದನು.॥20½॥
ಮೂಲಮ್ - 21½
ವಿಸೃಜ್ಯ ತಂ ಕಾಶಿಪತಿಂ ತ್ರಿಶತಂ ಪೃಥಿವೀಪತೀನ್ ॥
ಪ್ರಹಸನ್ರಾಘವೋವಾಕ್ಯಮುವಾಚ ಮಧುರಾಕ್ಷರಮ್ ।
ಅನುವಾದ
ಕಾಶಿರಾಜನನ್ನು ಕಳಿಸಿಕೊಟ್ಟು ಶ್ರೀರಘುನಾಥನು ನಗುತ್ತಾ ಇತರ ಮುನ್ನೂರು ರಾಜರಲ್ಲಿ ಮಧುರವಾಗಿ ನುಡಿದನು.॥21½॥
ಮೂಲಮ್ - 22½
ಭವತಾಂ ಪ್ರೀತಿರವ್ಯಗ್ರಾ ತೇಜಸಾ ಪರಿರಕ್ಷಿತಾ ॥
ಧರ್ಮಶ್ಚ ನಿಯತೋನಿತ್ಯಂ ಸತ್ಯಂಚ ಭವತಾಂ ಸದಾ ।
ಅನುವಾದ
ನನ್ನ ಮೇಲೆ ನಿಮ್ಮ ಪ್ರೀತಿಯು ಅವಿಚಲವಾಗಿದೆ. ನಿಮ್ಮ ತೇಜಸ್ಸಿನಿಂದಲೇ ಅದು ರಕ್ಷಿಸಲ್ಪಟ್ಟಿದೆ. ಧರ್ಮ ಮತ್ತು ಸತ್ಯಗಳು ನಿಮ್ಮಲ್ಲಿ ನಿತ್ಯನಿರಂತರವಾಗಿ ವಾಸಮಾಡಿಕೊಂಡಿವೆ.॥22½॥
ಮೂಲಮ್ - 23½
ಯುಷ್ಮಾಕಂ ಚಾನುಭಾವೇನ ತೇಜಸಾ ಚ ಮಹಾತ್ಮನಾಮ್ ॥
ಹತೋ ದುರಾತ್ಮಾ ದುರ್ಬುದ್ಧೀ ರಾವಣೋ ರಾಕ್ಷಸಾಧಮಃ ।
ಅನುವಾದ
ನಿಮ್ಮಂತಹ ಮಹಾ ಪುರುಷರ ಪ್ರಭಾವ, ತೇಜದಿಂದಲೇ, ದುರ್ಬುದ್ಧಿ, ದುರಾತ್ಮಾ ರಾಕ್ಷಸಾಧಮ ರಾವಣನನ್ನು ನಾನು ವಧಿಸುವಂತಾಯಿತು.॥23½॥
ಮೂಲಮ್ - 24½
ಹೇತುಮಾತ್ರಮಹಂ ತತ್ರ ಭವತಾಂ ತೇಜಸಾಹತಃ ॥
ರಾವಣಃ ಸಗಣೋ ಯುದ್ಧೇ ಸಪುತ್ರಾಮಾತ್ಯಬಾಂಧವಃ ।
ಅನುವಾದ
ನಾನಾದರೋ ಅವನ ವಧೆಯಲ್ಲಿ ನಿಮಿತ್ತಮಾತ್ರನಾಗಿದ್ದೇನೆ. ನಿಜವಾಗಿ ನಿಮ್ಮ ತೇಜದಿಂದಲೇ ಮಂತ್ರಿ, ಪುತ್ರ, ಬಂಧು-ಬಾಂಧವರೊಂದಿಗೆ ರಾವಣನು ಯುದ್ಧದಲ್ಲಿ ಮಡಿದನು.॥24½॥
ಮೂಲಮ್ - 25½
ಭವಂತಶ್ಚ ಸಮಾನೀತಾ ಭರತೇನ ಮಹಾತ್ಮನಾ ॥
ಶ್ರುತ್ವಾ ಜನಕರಾಜಸ್ಯ ಕಾನನಾತ್ತನಯಾಂ ಹೃತಾಮ್ ।
ಅನುವಾದ
ಕಾಡಿನಲ್ಲಿ ಜನಕನಂದಿನೀ ಸೀತೆಯ ಅಪಹರಣದ ಸಮಾಚಾರ ಕೇಳಿ ಮಹಾತ್ಮಾ ಭರತನು ನಿಮ್ಮನ್ನು ಇಲ್ಲಿಗೆ ಕರೆಸಿದ್ದನು.॥25½॥
ಮೂಲಮ್ - 26½
ಉದ್ಯುಕ್ತಾನಾಂ ಚ ಸರ್ವೇಷಾಂ ಪಾರ್ಥಿವಾನಾಂ ಮಹಾತ್ಮನಾಮ್ ॥
ಕಾಲೋಽಪ್ಯತೀತಃ ಸುಮಹಾನ್ಗಮನಂ ರೋಚಯಾಮ್ಯತಃ ।
ಅನುವಾದ
ಮಹಾಮನಾ ಭೂಪಾಲರಾದ ನೀವೆಲ್ಲರೂ ರಾಕ್ಷಸರ ಮೇಲೆ ಆಕ್ರಮಣ ಮಾಡಲು ಸಿದ್ಧರಾಗಿದ್ದಿರಿ. ಅಂದಿನಿಂದ ಇಂದಿನವರೆಗೆ ನಿಮ್ಮ ಬಹಳ ಸಮಯ ಕಳೆದುಹೋಗಿದೆ. ಆದ್ದರಿಂದ ಈಗ ನೀವು ತಮ್ಮ ನಗರಗಳಿಗೆ ಮರಳಿ ಹೋಗುವುದು ಉಚಿತವೆಂದು ನನಗೆ ತೋರುತ್ತದೆ.॥26½॥
ಮೂಲಮ್ - 27½
ಪ್ರತ್ಯೂಚುಸ್ತಂ ಚ ರಾಜಾನೋ ಹರ್ಷೇಣ ಮಹತಾ ವೃತಾಃ ॥
ದಿಷ್ಟ್ಯಾ ತ್ವಂ ವಿಜಯೀ ರಾಮಸ್ವರಾಜ್ಯೇಽಪಿ ಪ್ರತಿಷ್ಠಿತಃ ।
ಅನುವಾದ
ಆಗ ರಾಜರು ಅತ್ಯಂತ ಹರ್ಷಗೊಂಡು ಶ್ರೀರಾಮಾ! ನೀನು ವಿಜಯಿಯಾಗಿ, ತನ್ನ ರಾಜ್ಯದಲ್ಲಿ ಪ್ರತಿಷ್ಠಿತವಾದುದು ದೊಡ್ಡ ಸೌಭಾಗ್ಯದ ಮಾತಾಗಿದೆ ಎಂದು ಹೇಳಿದರು.॥27½॥
ಮೂಲಮ್ - 28
ದಿಷ್ಟ್ಯಾ ಪ್ರತ್ಯಾಹೃತಾ ಸೀತಾ ದಿಷ್ಟ್ಯಾ ಶತ್ರುಃ ಪರಾಜಿತಃ ॥
ಮೂಲಮ್ - 29
ಏಷ ನಃ ಪರಮಃ ಕಾಮ ಏಷಾ ನಃ ಪ್ರೀತಿರುತ್ತಮಾ ।
ಯತ್ತ್ವಾಂ ವಿಜಯಿನಂ ರಾಮ ಪಶ್ಯಾಮೋ ಹತಶಾತ್ರವಮ್ ॥
ಅನುವಾದ
ನಮ್ಮ ಸೌಭಾಗ್ಯದಿಂದಲೇ ನೀನು ಸೀತೆಯನ್ನು ಮರಳಿ ತಂದು, ಆ ಪ್ರಬಲಶತ್ರುವನ್ನು ಸೋಲಿಸಿದೆ. ಶ್ರೀರಾಮಾ! ಇದೇ ನಮ್ಮ ದೊಡ್ಡ ಮನೋರಥವಾಗಿದೆ ಹಾಗೂ ಇದೇ ನಮಗೆ ಎಲ್ಲಕ್ಕಿಂತ ಮಿಗಿಲಾದ ಸಂತೋಷದ ಮಾತಾಗಿದೆ. ಇಂದು ನಾವು ವಿಜಯಿಯಾದ ನಿನ್ನನ್ನು ನೋಡುತ್ತಿದ್ದೇವೆ ಹಾಗೂ ನಿನ್ನ ಶತ್ರುಗಳೆಲ್ಲ ಕೊಲ್ಲಲ್ಪಟ್ಟಿರುವರು.॥28-29॥
ಮೂಲಮ್ - 30
ಏತತ್ತ್ವಯ್ಯುಪಪನ್ನಂ ಚ ಯದಸ್ಮಾಂಸ್ತ್ವಂ ಪ್ರಶಂಸಸೇ ।
ಪ್ರಶಂಸಾರ್ಹ ನ ಜಾನೀಮಃ ಪ್ರಶಂಸಾಂ ವಕ್ತುಮಾದೃಶೀಮ್ ॥
ಅನುವಾದ
ಪ್ರಶಂಸನೀಯ ಶ್ರೀರಾಮಾ! ನೀನು ನಮ್ಮನ್ನು ಪ್ರಶಂಸಿಸುತ್ತಿರುವೆ, ಇದು ನಿನಗೆ ಯೋಗ್ಯವೇ ಆಗಿದೆ. ಹೀಗೆ ಪ್ರಶಂಸೆ ಮಾಡುವ ಕಲೆಯನ್ನು ನಾವು ತಿಳಿಯೆವು.॥30॥
ಮೂಲಮ್ - 31
ಆಪೃಚ್ಛಾಮೋ ಗಮಿಷ್ಯಾಮೋ ಹೃದಿಸ್ಥೋ ನಃ ಸದಾ ಭವಾನ್ ।
ವರ್ತಾಮಹೇ ಮಹಾಬಾಹೋ ಪ್ರೀತ್ಯಾತ್ರ ಮಹತಾ ವೃತಾಃ ॥
ಮೂಲಮ್ - 32
ಭವೇಚ್ಚ ತೇ ಮಹಾರಾಜ ಪ್ರೀತಿರಸ್ಮಾಸು ನಿತ್ಯದಾ ।
ಬಾಢಮಿತ್ಯೇವ ರಾಜಾನೋ ಹರ್ಷೇಣ ಪರಮಾನ್ವಿತಾಃ ॥
ಅನುವಾದ
ಹೇ ಮಹಾಬಾಹೋ! ಈಗ ನಾವು ನಮ್ಮ ಪುರಗಳಿಗೆ ಹೋಗಲು ಅಪ್ಪಣೆ ಬಯಸುತ್ತೇವೆ. ನೀನು ಸದಾ ನಮ್ಮ ಹೃದಯಗಳಲ್ಲಿ ವಿರಾಜಮಾನರಾಗಿದ್ದಿಯೋ ಹಾಗೆಯೇ ನಮ್ಮನ್ನು ಪ್ರೇಮದಿಂದ ಹೃದಯದಲ್ಲಿ ಇರಿಸಿಕೋ. ಆಗ ರಘುನಾಥನು ಹರ್ಷಗೊಂಡು ರಾಜರಲ್ಲಿ ‘ಖಂಡಿತವಾಗಿ ಹಾಗೇ ಆಗಲಿ’ ಎಂದು ಹೇಳಿದನು.॥31-32॥
ಮೂಲಮ್ - 33
ಊಚುಃ ಪ್ರಾಂಜಲಯಃ ಸರ್ವೇ ರಾಘವಂ ಗಮನೋತ್ಸುಕಾಃ ।
ಪೂಜಿತಾಸ್ತೇ ಚ ರಾಮೇಣ ಜಗ್ಮುರ್ದೇಶಾನ್ ಸ್ವಕಾನ್ ಸ್ವಕಾನ್ ॥
ಅನುವಾದ
ಅನಂತರ ಊರಿಗೆ ಹೋಗಲು ಉತ್ಸುಕರಾದ ರಾಜರೆಲ್ಲರೂ ಕೈಮುಗಿದುಕೊಂಡು ಶ್ರೀರಾಮನಲ್ಲಿ ಹೇಳಿದರು - ಭಗವಂತಾ! ಈಗ ನಾವು ಹೋಗುತ್ತಿದ್ದೇವೆ. ಹೀಗೆ ಶ್ರೀರಾಮನಿಂದ ಸಮ್ಮತಿ ಪಡೆದು ಅವರೆಲ್ಲರೂ ತಮ್ಮ-ತಮ್ಮ ದೇಶಗಳಿಗೆ ತೆರಳಿದರು.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತೆಂಟನೆಯ ಸರ್ಗ ಪೂರ್ಣವಾಯಿತು. ॥38॥