०३७ सभा-प्रवेशः

[ಮೂವತ್ತೇಳನೆಯ ಸರ್ಗ]

ಭಾಗಸೂಚನಾ

ಶ್ರೀರಾಮನು ಸಭಾಸದರೊಂದಿಗೆ ರಾಜಸಭೆಯಲ್ಲಿ ಸಮಾಲೋಚನೆ

ಮೂಲಮ್ - 1

ಅಭಿಷಿಕ್ತೇ ತು ಕಾಕುತ್ಸ್ಥೇ ಧರ್ಮೇಣ ವಿದಿತಾತ್ಮನಿ ।
ವ್ಯತೀತಾ ಯಾ ನಿಶಾ ಪೂರ್ವಾ ಪೌರಾಣಾಂ ಹರ್ಷವರ್ಧಿನೀ ॥

ಅನುವಾದ

ಕಾಕುತ್ಸ್ಥಕುಲಭೂಷಣ ಆತ್ಮಜ್ಞಾನೀ ಶ್ರೀರಾಮಚಂದ್ರನು ವಿಧಿವತ್ತಾಗಿ ಪಟ್ಟಾಭಿಷಿಕ್ತನಾದ ಬಳಿಕ ಪೌರರ ಹರ್ಷವನ್ನು ಹೆಚ್ಚಿಸಿದ ಮೊದಲನೆಯ ರಾತ್ರಿಯು ಕಳೆಯಿತು.॥1॥

ಮೂಲಮ್ - 2

ತಸ್ಯಾಂ ರಜನ್ಯಾಂ ವ್ಯಷ್ಟಾಯಾಂ ಪ್ರಾತರ್ನೃಪತಿಬೋಧಕಾಃ ।
ವಂದಿನಃ ಸಮುಪಾತಿಷ್ಠನ್ಸೌಮ್ಯಾ ನೃಪತಿವೇಶ್ಮನಿ ॥

ಅನುವಾದ

ರಾತ್ರೆ ಕಳೆದು ಬೆಳಗಾದಾಗ ಪ್ರಾತಃಕಾಲ ಮಹಾರಾಜಾ ಶ್ರೀರಾಮನನ್ನು ಎಬ್ಬಿಸುವ ಸೌಮ್ಯವಂದೀ ಜನರು ಅರಮನೆಗೆ ಬಂದರು.॥2॥

ಮೂಲಮ್ - 3

ತೇ ರಕ್ತಕಂಠಿನಃ ಸರ್ವೇ ಕಿನ್ನರಾ ಇವ ಶಿಕ್ಷಿತಾಃ ।
ತುಷ್ಟುವುರ್ನೃಪತಿಂ ವೀರಂ ಯಥಾವತ್ಸಂಪ್ರಹರ್ಷಿಣಃ ॥

ಅನುವಾದ

ಅವರ ಕಂಠ ಮಧುರವಾಗಿದ್ದು, ಸಂಗೀತ ಕಲೆಯಲ್ಲಿ ಕಿನ್ನರರಂತೆ ಶಿಕ್ಷಿತರಾಗಿದ್ದರು. ಅವರು ಬಹಳ ಹರ್ಷದಿಂದ ಯಥಾವತ್ತಾಗಿ ವೀರ ನರೇಶ ಶ್ರೀರಘುನಾಥನನ್ನು ಸ್ತುತಿಸಲು ಪ್ರಾರಂಭಿಸಿದರು.॥3॥

ಮೂಲಮ್ - 4

ವೀರ ಸೌಮ್ಯ ಪ್ರಬುಧ್ಯಸ್ಯ ಕೌಸಲ್ಯಾಪ್ರೀತಿವರ್ಧನ ।
ಜಗದ್ಧಿ ಸರ್ವಂ ಸ್ವಪಿತಿ ತ್ವಯಿ ಸುಪ್ತೇ ನರಾಧಿಪ ॥

ಅನುವಾದ

ಕೌಸಲ್ಯಾ ನಂದವರ್ಧನ ಸೌಮ್ಯರೂಪ ವೀರ ರಘುವೀರನೇ! ಏಳಯ್ಯ, ಮಹಾರಾಜ ಏಳಿ. ನೀವು ಮಲಗಿದ್ದರೆ ಇಡೀ ಜಗತ್ತು ಮಲಗಿದ್ದೀತು. (ಬ್ರಾಹ್ಮಮುಹೂರ್ತದಲ್ಲಿ ಎದ್ದು ಧರ್ಮಾನುಷ್ಠಾನ ಮಾಡಲಾರರು..॥4॥

ಮೂಲಮ್ - 5

ವಿಕ್ರಮಸ್ತೇ ಯಥಾ ವಿಷ್ಣೋ ರೂಪಂ ಚೈವಾಶ್ವಿನೋರಿವ ।
ಬುದ್ಧ್ಯಾ ಬೃಹಸ್ಪತೇಸ್ತುಲ್ಯಃ ಪ್ರಜಾಪತಿಸಮೋ ಹ್ಯಸಿ ॥

ಅನುವಾದ

ನಿಮ್ಮ ಪರಾಕ್ರಮ ವಿಷ್ಣುವಿನಂತೆ ಇದ್ದು, ರೂಪವು ಅಶ್ವಿನೀಕುಮಾರರಂತೆ ಇದೆ. ಬುದ್ಧಿಯಲ್ಲಿ ನೀವು ಬೃಹಸ್ಪತಿಗೆ ತುಲ್ಯರಾಗಿದ್ದೀರಿ. ಪ್ರಜಾಪಾಲನೆಯಲ್ಲಿ ಸಾಕ್ಷಾತ್ ಪ್ರಜಾಪತಿಯಂತೆ ಇರುವಿರಿ.॥5॥

ಮೂಲಮ್ - 6

ಕ್ಷಮಾ ತೇ ಪೃಥಿವೀತುಲ್ಯಾ ತೇಜಸಾ ಭಾಸ್ಕರೋಪಮಃ ।
ವೇಗಸ್ತೇ ವಾಯುನಾ ತುಲ್ಯೋ ಗಾಂಭೀರ್ಯಮುದಧೇರಿವ ॥

ಅನುವಾದ

ನಿಮ್ಮ ಕ್ಷಮೆ ಪೃಥಿವಿಯಂತೆ ಇದೆ, ತೇಜ ಭಗವಾನ್ ಭಾಸ್ಕರನಂತೆ ಇದೆ. ವೇಗವಾಯುವಿನಂತೆ ಇದ್ದು, ಗಂಭೀರತೆಯಲ್ಲಿ ಸಮುದ್ರದಂತೆ ಇರುವೆ.॥6॥

ಮೂಲಮ್ - 7

ಅಪ್ರಕಂಪ್ಯೋ ಯಥಾ ಸ್ಥಾಣುಶ್ಚಂದ್ರೇ ಸೌಮ್ಯತ್ವಮೀದೃಶಮ್ ।
ನೇದೃಶಾಃ ಪಾರ್ಥಿವಾಃ ಪೂರ್ವಂ ಭವಿತಾರೋ ನರಾಧಿಪ ॥

ಅನುವಾದ

ನರೇಶ್ವರನೇ! ನೀವು ಭಗವಾನ್ ಶಂಕರನಂತೆ ಯುದ್ಧದಲ್ಲಿ ಅವಿಚಲರಾಗಿರುವಿರಿ. ನಿಮ್ಮಲ್ಲಿರುವ ಸೌಮ್ಯತೆಯು ಚಂದ್ರನಲ್ಲೇ ಸಿಗುವುದು. ನಿಮ್ಮಂತಹ ರಾಜನು ನ ಭೂತೋ ನ ಭವಿಷ್ಯತಿ.॥7॥

ಮೂಲಮ್ - 8

ಯಥಾ ತ್ವಮಸಿ ದುರ್ಧಷೋ ಧರ್ಮನಿತ್ಯಃ ಪ್ರಜಾಹಿತಃ ।
ನ ತ್ವಾಂ ಜಹಾತಿ ಕೀರ್ತಿಶ್ಚ ಲಕ್ಷ್ಮೀಶ್ಚ ಪುರುಷರ್ಷಭ ॥

ಅನುವಾದ

ಪುರುಷೋತ್ತಮನೇ! ನಿಮ್ಮನ್ನು ಸೋಲಿಸುವುದು ಅಸಂಭವವೇ ಆಗಿದೆ. ನೀವು ಸದಾ ಧರ್ಮದಲ್ಲೇ ಸಂಲಗ್ನರಾಗಿದ್ದು, ಪ್ರಜೆಗಳ ಹಿತದಲ್ಲಿ ತತ್ಪರ ನಾಗಿರುವಿರಿ. ಅದರಿಂದ ಕೀರ್ತಿ ಮತ್ತು ಲಕ್ಷ್ಮೀ ನಿಮ್ಮನ್ನು ಎಂದೂ ಬಿಟ್ಟಿಲ್ಲ.॥8॥

ಮೂಲಮ್ - 9

ಶ್ರೀಶ್ಚ ಧರ್ಮಶ್ಚ ಕಾಕುತ್ಸ್ಥ ತ್ವಯಿ ನಿತ್ಯಂ ಪ್ರತಿಷ್ಠಿತೌ ।
ಏತಾಶ್ಚಾನ್ಯಾಶ್ಚ ಮಧುರಾ ವಂದಿಭಿಃ ಪರಿಕೀರ್ತತಾಃ ॥

ಅನುವಾದ

ಕಕುತ್ಸ್ಥಕುಲನಂದನ! ಐಶ್ವರ್ಯ ಮತ್ತು ಧರ್ಮ ನಿಮ್ಮಲ್ಲಿ ನಿತ್ಯ ಪ್ರತಿಷ್ಠಿತವಾಗಿವೆ. ವಂದೀಜನರು ಹೀಗೆ ಇನ್ನೂ ಅನೇಕ ಸ್ತುತಿಗಳನ್ನು ಹಾಡಿದರು.॥9॥

ಮೂಲಮ್ - 10

ಸೂತಾಶ್ಚ ಸಂಸ್ತವೈರ್ದಿವ್ಯೈರ್ಬೋಧಯಂತಿ ಸ್ಮ ರಾಘವಮ್ ।
ಸ್ತುತಿಭಿಃ ಸ್ತೂಯಮಾನಾಭಿಃ ಪ್ರತ್ಯಬುಧ್ಯತ ರಾಘವಃ ॥

ಅನುವಾದ

ಸೂತರೂ ಕೂಡ ದಿವ್ಯಸ್ತುತಿಗಳಿಂದ ಶ್ರೀರಘುನಾಥನನ್ನು ಎಬ್ಬಿಸುತ್ತಿದ್ದರು. ಹೀಗೆ ಕೇಳಿದ ಸ್ತುತಿಗಳಿಂದ ಭಗವಾನ್ ಶ್ರೀರಾಮನು ಎಚ್ಚರಗೊಂಡನು.॥10॥

ಮೂಲಮ್ - 11

ಸ ತದ್ವಿಹಾಯ ಶಯನಂ ಪಾಂಡುರಾಚ್ಛಾದನಾಸ್ತೃತಮ್ ।
ಉತ್ತಸ್ಥೌ ನಾಗಶಯನಾದ್ಧರಿರ್ನಾರಾಯಣೋ ಯಥಾ ॥

ಅನುವಾದ

ಪಾಪಹಾರಿ ಭಗವಾನ್ ನಾರಾಯಣನು ಸರ್ಪಶಯ್ಯೆಯಿಂದ ಏಳುವಂತೆಯೇ ರಾಮನೂ ಬಿಳಿಯ ಮೇಲುಹಾಸಿನಿಂದ ಮುಚ್ಚಿದ್ದ ಶಯ್ಯೆಯನ್ನು ಬಿಟ್ಟು ಎದ್ದು ಕುಳಿತನು.॥11॥

ಮೂಲಮ್ - 12

ತಮುತ್ಥಿತಂ ಮಹಾತ್ಮಾನಂ ಪ್ರಹ್ವಾಃ ಪ್ರಾಂಜಲಯೋ ನರಾಃ ।
ಸಲೀಲಂ ಭಾಜನೈಃ ಶುಭ್ರೈರುಪತಸ್ಥುಃ ಸಹಸ್ರಶಃ ॥

ಅನುವಾದ

ಮಹಾರಾಜರು ಶಯ್ಯೆಯಿಂದ ಏಳುತ್ತಲೇ ಸಾವಿರಾರು ಸೇವಕರು ವಿನಯಪೂರ್ವಕ ಕೈಮುಗಿದುಕೊಂಡು ಉಜ್ವಲ ಪಾತ್ರೆಗಳಲ್ಲಿ ನೀರು ಹಿಡಿದುಕೊಂಡು ಅವನ ಸೇವೆಯಲ್ಲಿ ಉಪಸ್ಥಿತರಾದರು.॥12॥

ಮೂಲಮ್ - 13

ಕೃತೋದಕಃ ಶುಚಿರ್ಭೂತ್ವಾ ಕಾಲೇ ಹುತಹುತಾಶನಃ ।
ದೇವಾಗಾರಂ ಜಗಾಮಾತು ಪುಣ್ಯಮಿಕ್ಷ್ವಾಕುಸೇವಿತಮ್ ॥

ಅನುವಾದ

ಸ್ನಾನಾದಿಗಳನ್ನು ಮುಗಿಸಿ ಶುದ್ಧನಾಗಿ ಅವನು ಸರಿಯಾದ ಸಮಯಕ್ಕೆ ಅಗ್ನಿಯಲ್ಲಿ ಆಹುತಿ ಕೊಟ್ಟು, ಬೇಗನೇ ಇಕ್ಷ್ವಾಕು ವಂಶೀಯರಿಂದ ಸೇವಿತ ಪವಿತ್ರ ದೇವಮಂದಿರಕ್ಕೆ ಆಗಮಿಸಿದನು.॥13॥

ಮೂಲಮ್ - 14

ತತ್ರ ದೇವಾನ್ಪಿತೃನ್ವಿಪ್ರಾನರ್ಚಯಿತ್ವಾ ಯಥಾವಿಧಿ ।
ಬಾಹ್ಯಕಕ್ಷ್ಯಾಂತರಂ ರಾಮೋ ನಿರ್ಜಗಾಮ ಜನೈರ್ವೃತಃ ॥

ಅನುವಾದ

ಅಲ್ಲಿ ದೇವತೆಗಳನ್ನು, ಪಿತೃಗಳನ್ನು, ಬ್ರಾಹ್ಮಣರನ್ನು ವಿಧಿವತ್ತಾಗಿ ಪೂಜಿಸಿ ಅವನು ಅನೇಕ ಕರ್ಮಚಾರಿಗಳೊಂದಿಗೆ ಹೊರಗಿನ ಕಕ್ಷೆಗೆ ಬಂದನು.॥14॥

ಮೂಲಮ್ - 15

ಉಪತಸ್ಥುರ್ಮಹಾತ್ಮಾನೋ ಮಂತ್ರಿಣಃ ಸಪುರೋಹಿತಾಃ ।
ವಸಿಷ್ಠಪ್ರಮುಖಾಃ ಸರ್ವೇ ದೀಪ್ಯಮಾನಾ ಇವಾಗ್ನಯಃ ॥

ಅನುವಾದ

ಆಗ ಪ್ರಜ್ವಲಿತ ಅಗ್ನಿಯಂತೆ ತೇಜಸ್ವೀ ವಸಿಷ್ಠಾದಿ ಎಲ್ಲ ಮಹಾತ್ಮಾ ಮಂತ್ರಿಗಳು ಮತ್ತು ಪುರೋಹಿತರು ಅಲ್ಲಿ ಉಪಸ್ಥಿತರಾದರು.॥15॥

ಮೂಲಮ್ - 16

ಕ್ಷತ್ರಿಯಾಶ್ಚ ಮಹಾತ್ಮಾನೋ ನಾನಾಜನಪದೇಶ್ವರಾಃ ।
ರಾಮಸ್ಯೋಪಾವಿಶನ್ಪಾರ್ಶ್ವೇ ಶಕ್ರಸ್ಯೇವ ಯಥಾಮರಾಃ ॥

ಅನುವಾದ

ಅನಂತರ ಅನೇಕಾನೇಕ ಜನ ಪದಗಳ ಒಡೆಯರು, ಮಹಾಮನಸ್ವೀ ಕ್ಷತ್ರಿಯರು, ಶ್ರೀರಾಮನ ಬಳಿಗೆ ಬಂದು ಇಂದ್ರನ ಬಳಿ ದೇವತೆಗಳು ಬಂದು ಕುಳಿತುಕೊಳ್ಳುವಂತೆ ಕುಳಿತರು.॥16॥

ಮೂಲಮ್ - 17

ಭರತೋ ಲಕ್ಷ್ಮಣಶ್ಚಾತ್ರ ಶತ್ರುಘ್ನಶ್ಚ ಮಹಾಯಶಾಃ ।
ಉಪಾಸಾಂಚಕ್ರೀರೇ ಹೃಷ್ಟಾ ವೇದಾಸ್ತ್ರಯ ಇವಾಧ್ವರಮ್ ॥

ಅನುವಾದ

ಮಹಾ ಯಶಸ್ವೀ ಭರತ, ಲಕ್ಷ್ಮಣ, ಶತ್ರುಘ್ನ ಮೂವರೂ ಸಹೋದರರೂ ಬಹಳ ಹರ್ಷದಿಂದ ಮೂರು ವೇದಗಳು ಯಜ್ಞದ ಬಳಿ ಇರುವಂತೆ ಶ್ರೀರಾಮನ ಸೇವೆಯಲ್ಲಿ ಉಪಸ್ಥಿತರಾದರು.॥17॥

ಮೂಲಮ್ - 18

ಯಾತಾಃ ಪ್ರಾಂಜಲಯೋ ಭೂತ್ವಾ ಕಿಂಕರಾ ಮುದಿತಾನನಾಃ ।
ಮುದಿತಾ ನಾಮ ಪಾರ್ಶ್ವಸ್ಥಾ ಬಹವಃ ಸಮುಪಾವಿಶನ್ ॥

ಅನುವಾದ

ಆಗಲೇ ಮುದಿತರೆಂಬ ಪ್ರಸಿದ್ಧ ಪ್ರಸನ್ನಮುಖವುಳ್ಳ ಅನೇಕ ಸೇವಕರು ಕೈಮುಗಿದುಕೊಂಡು ಸಭಾಭವನಕ್ಕೆ ಬಂದರು ಹಾಗೂ ಶ್ರೀರಘುನಾಥನ ಬಳಿಯಲ್ಲಿ ಕುಳಿತರು.॥18॥

ಮೂಲಮ್ - 19

ವಾನರಾಶ್ಚ ಮಹಾವೀರ್ಯಾ ವಿಂಶತಿಃ ಕಾಮರೂಪಿಣಃ ।
ಸುಗ್ರೀವಪ್ರಮುಖಾರಾಮಮುಪಾಸಂತೇ ಮಹೌಜಸಃ ॥

ಅನುವಾದ

ಮತ್ತೆ ಮಹಾಪರಾಕ್ರಮಿ, ಮಹಾತೇಜಸ್ವೀ ಹಾಗೂ ಕಾಮರೂಪಿಗಳಾದ ಸುಗ್ರೀವಾದಿ ಇಪ್ಪತ್ತು1 ವಾನರರು ಭಗವಾನ್ ಶ್ರೀರಾಮನ ಸಮೀಪ ಬಂದು ಮಂಡಿಸಿದರು.॥19॥

ಟಿಪ್ಪನೀ
  1. ಸುಗ್ರೀವ, ಅಂಗದ, ಹನುಮಂತ, ಜಾಂಬವಂತ, ಸುಷೇಣ, ತಾರ, ನೀಲ, ನಳ, ಮೈಂದ, ದ್ವಿವಿದ, ಕುಮುದ, ಶರಭ, ಶತಬಲಿ, ಗಂಧಮಾದನ, ಗಜ, ಗವಾಕ್ಷ, ಗವಯ, ಧೂಮ್ರ, ರಂಭ, ಜ್ಯೋತಿಮುಖ, ಹೀಗೆ ಮುಖ್ಯ ಮುಖ್ಯ ಇಪ್ಪತ್ತು ವಾನರ ವೀರರು ಅಲ್ಲಿ ಉಪಸ್ಥಿತರಾಗಿದ್ದರು.
ಮೂಲಮ್ - 20

ವಿಭೀಷಣಶ್ಚ ರಕ್ಷತೋಭಿಶ್ಚತುರ್ಭಿಃ ಪರಿವಾರಿತಃ ।
ಉಪಾಸತೇ ಮಹಾತ್ಮಾನಂ ಧನೇಶಮಿವ ಗುಹ್ಯಕಾಃ ॥

ಅನುವಾದ

ತನ್ನ ನಾಲ್ವರು ಮಂತ್ರಿಗಳೊಂದಿಗೆ ವಿಭೀಷಣನೂ ಕೂಡ, ಗುಹ್ಯಕರು ಧನಪತಿ ಕುಬೇರನ ಸೇವೆಯಲ್ಲಿ ಉಪಸ್ಥಿತರಾದಂತೆಯೇ ಮಹಾತ್ಮಾ ಶ್ರೀರಾಮನ ಸೇವೆಯಲ್ಲಿ ಉಪಸ್ಥಿತರಾದರು.॥20॥

ಮೂಲಮ್ - 21

ತಥಾ ನಿಗಮವೃದ್ಧಾಶ್ಚಕುಲೀನಾ ಯೇ ಚ ಮಾನವಾಃ ।
ಶಿರಸಾ ವಂದ್ಯ ರಾಜಾನಮುಪಾಸಂತೇ ವಿಚಕ್ಷಣಾಃ ॥

ಅನುವಾದ

ಶಾಸ್ತ್ರಜ್ಞಾನದಲ್ಲಿ ಪಾರಂಗತರಾದ, ಕುಲೀನರಾದ, ಚತುರ ಮನುಷ್ಯರೂ ಕೂಡ ಮಹಾರಾಜನಿಗೆ ತಲೆಬಾಗಿ ಪ್ರಣಾಮ ಮಾಡಿ ಅಲ್ಲಿ ಬಂದು ಕುಳಿತು ಕೊಂಡರು.॥21॥

ಮೂಲಮ್ - 22

ತಥಾ ಪರಿವೃತೋ ರಾಜಾ ಶ್ರೀಮದ್ಭಿರ್ಋಷಿಭಿರ್ವರೈಃ ।
ರಾಜಭಿಶ್ಚ ಮಹಾವೀರ್ಯೈರ್ವಾನರೈಶ್ಚ ಸರಾಕ್ಷಸೈಃ ॥

ಅನುವಾದ

ಹೀಗೆ ಬಹಳ ಶ್ರೇಷ್ಠ ಹಾಗೂ ತೇಜಸ್ವೀ ಮಹರ್ಷಿಗಳು, ಮಹಾಪರಾಕ್ರಮಿ ರಾಜರು, ವಾನರರು ಮತ್ತು ರಾಕ್ಷಸರಿಂದ ಪರಿವೃತನಾಗಿ ರಾಜಸಭೆಯಲ್ಲಿ ಕುಳಿತಿರುವ ಶ್ರೀರಾಮನು ಬಹಳ ಶೋಭಿಸುತ್ತಿದ್ದನು.॥22॥

ಮೂಲಮ್ - 23

ಯಥಾ ದೇವೇಶ್ವರೋ ನಿತ್ಯಮೃಷಿಭಿಃ ಸಮುಪಾಸ್ಯತೇ ।
ಅಧಿಕಸ್ತೇನ ರೂಪೇಣ ಸಹಸ್ರಾಕ್ಷಾದ್ವಿರೋಚತೇ ॥

ಅನುವಾದ

ದೇವೇಂದ್ರನು ಸದಾ ಋಷಿಗಳಿಂದ ಸೇವಿತನಾದಂತೆಯೇ ಮಹರ್ಷಿಗಳಿಂದ ಸುತ್ತುವರೆದ ಶ್ರೀರಾಮಚಂದ್ರನು ಆಗ ಸಹಸ್ರಾಕ್ಷನಿಗಿಂತಲೂ ಹೆಚ್ಚು ಶೋಭಿಸುತ್ತಿದ್ದನು.॥23॥

ಮೂಲಮ್ - 24

ತೇಷಾಂ ಸಮುಪವಿಷ್ಟಾನಾಂ ತಾಸ್ತಾಃ ಸುಮಧುರಾಃ ಕಥಾಃ ।
ಕಥ್ಯಂತೇ ಧರ್ಮಸಂಯುಕ್ತಾಃ ಪುರಾಣಜ್ಞೈರ್ಮಹಾತ್ಮಭಿಃ ॥

ಅನುವಾದ

ಎಲ್ಲರೂ ಯಥಾಸ್ಥಾನದಲ್ಲಿ ಕುಳಿತಾಗ ಪುರಾಣವೇತ್ತರಾದ ಮಹಾತ್ಮರು ಬೇರೆ-ಬೇರೆ ಧರ್ಮಕಥೆಯನ್ನು ಹೇಳತೊಡಗಿದರು..॥24॥

ಟಿಪ್ಪನೀ
  1. ಈ ಸರ್ಗದ ಬಳಿಕ ಕೆಲವು ಪ್ರತಿಗಳಲ್ಲಿ ಐದು ಸರ್ಗಗಳು ದೊರೆಯುತ್ತವೆ. ಅವುಗಳಲ್ಲಿ ವಾಲಿ, ಸುಗ್ರೀವರ ಉತ್ಪತ್ತಿಯ ಕಥೆ, ರಾವಣನು ಶ್ವೇತದ್ವೀಪಕ್ಕೆ ಹೋದ ವರ್ಣನೆ ಇದೆ. ಈ ಇತಿಹಾಸವನ್ನು ಅಗಸ್ತ್ಯರೇ ಹೇಳಿದ್ದರು. ಆದರೆ ಇದರ ಮೊದಲ ಸರ್ಗದಲ್ಲೇ ಅಗಸ್ತ್ಯರು ಬೀಳ್ಕೊಂಡ ವರ್ಣನೆ ಬಂದಿದೆ. ಆದ್ದರಿಂದ ಇಲ್ಲಿ ಈ ಸರ್ಗ ಉಲ್ಲೇಖ ಅಸಂಗತವಾಗಿ ಕಾಣುತ್ತದೆ. ಅದಕ್ಕಾಗಿ ಈ ಸರ್ಗಗಳನ್ನು ಇಲ್ಲಿ ಕೊಟ್ಟಿಲ್ಲ.
ಮೂಲಮ್ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತೇಳನೆಯ ಸರ್ಗ ಪೂರ್ಣವಾಯಿತು. ॥37॥

ಅನುವಾದ