[ಮೂವತ್ತೈದನೆಯ ಸರ್ಗ]
ಭಾಗಸೂಚನಾ
ಹನುಮಂತನ ಜನ್ಮ ವೃತ್ತಾಂತ, ಹುಟ್ಟಿದೊಡನೆಯೇ ಅವನು ಸೂರ್ಯ - ರಾಹು - ಐರಾವತವನ್ನು ಆಕ್ರಮಿಸಿದುದು, ಇಂದ್ರನಿಂದ ವಜ್ರಾಯುಧ ಪ್ರಹಾರ, ಹನುಮಂತನ ಮೂರ್ಛೆ, ವಾಯುವಿನ ಕೋಪ, ವಾಯುವನ್ನು ಪ್ರಸನ್ನಗೊಳಿಸಲು ದೇವತೆಗಳೊಡನೆ ಬ್ರಹ್ಮನ ಆಗಮನ
ಮೂಲಮ್ - 1
ಅಪೃಚ್ಛತ ತದಾ ರಾಮೋ ದಕ್ಷಿಣಾಶಾಶ್ರಯಂ ಮುನಿಮ್ ।
ಪ್ರಾಂಜಲಿರ್ವಿನಯೋಪೇತ ಇದಮಾಹ ವಚೋಽರ್ಥವತ್ ॥
ಅನುವಾದ
ಭಗವಾನ್ ಶ್ರೀರಾಮನು ಕೈಮುಗಿದುಕೊಂಡು ದಕ್ಷಿಣ ದಿಕ್ಕಿನಲ್ಲಿ ವಾಸಿಸುವ ಅಗಸ್ತ್ಯಮುನಿಗಳಲ್ಲಿ ವಿನಯಪೂರ್ವಕ ಅರ್ಥಯುಕ್ತ ಈ ಮಾತನ್ನು ಹೇಳಿದನು.॥1॥
ಮೂಲಮ್ - 2
ಅತುಲಂ ಬಲಮೇತದ್ವೈ ವಾಲಿನೋ ರಾವಣಸ್ಯ ಚ ।
ನ ತ್ವೇತಾಭ್ಯಾಂ ಹನುಮತಾ ಸಮಂ ತ್ವಿತಿ ಮತಿರ್ಮಮ ॥
ಅನುವಾದ
ಮಹರ್ಷಿಯೇ! ವಾಲಿ ಮತ್ತು ರಾವಣರ ಬಲಕ್ಕೆ ತುಲನೆಯೇ ಇರಲಿಲ್ಲ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಅವರಿಬ್ಬರ ಬಲವೂ ಹನುಮಂತನ ಬಲಕ್ಕೆ ಸರಿಯಾಗಲಾರದು ಎಂಬುದೇ ನನ್ನ ವಿಚಾರ.॥2॥
ಮೂಲಮ್ - 3
ಶೌರ್ಯಂ ದಾಕ್ಷ್ಯಂ ಬಲಂ ಧೈರ್ಯಂ ಪ್ರಾಜ್ಞತಾ ನಯಸಾಧನಮ್ ।
ವಿಕ್ರಮಶ್ಚ ಪ್ರಭಾವಶ್ಚ ಹನೂಮತಿ ಕೃತಾಲಯಾಃ ॥
ಅನುವಾದ
ಶೌರ್ಯ, ದಕ್ಷತೆ, ಬಲ, ಧೈರ್ಯ, ಬುದ್ಧಿವಂತಿಕೆ, ನೀತಿ, ಪರಾಕ್ರಮ, ಪ್ರಭಾವ ಇವೆಲ್ಲ ಸದ್ಗುಣಗಳು ಹನುಮಂತನಲ್ಲಿ ಮನೆ ಮಾಡಿವೆ.॥3॥
ಮೂಲಮ್ - 4
ದೃಷ್ಟ್ವೈವ ಸಾಗರಂ ವೀಕ್ಷ್ಯಸೀದಂತೀಂ ಕಪಿವಾಹಿನೀಮ್ ।
ಸಮಾಶ್ಚಾಸ್ಯ ಮಹಾಬಾಹುರ್ಯೋಜನಾನಾಂ ಶತಂ ಪ್ಲುತಃ ॥
ಅನುವಾದ
ಸಮುದ್ರವನ್ನು ನೋಡಿಯೇ ವಾನರ ಸೈನ್ಯವು ಗಾಬರಿಗೊಂಡಾಗ, ಈ ಮಹಾಬಾಹು ವೀರನು ಅವರಿಗೆ ಧೈರ್ಯತುಂಬಿ ಒಂದೇ ನೆಗೆತಕ್ಕೆ ನೂರು ಯೋಜನ ಸಮುದ್ರವನ್ನು ಹಾರಿದನು.॥4॥
ಮೂಲಮ್ - 5
ಧರ್ಷಯಿತ್ವಾ ಪುರೀಂ ಲಂಕಾಂ ರಾವಣಾಂತಃಪುರಂ ತದಾ ।
ದೃಷ್ಟಾ ಸಂಭಾಷಿತಾ ಚಾಪಿ ಸೀತಾ ಹ್ಯಾಶ್ವಾಸಿತಾ ತಥಾ ॥
ಅನುವಾದ
ಮತ್ತೆ ಲಂಕಾಪುರಿಯ ಆಧಿದೈವಿಕ ರೂಪವನ್ನು ಗೆದ್ದು, ರಾವಣನ ಅಂತಃಪುರಕ್ಕೆ ಹೋಗಿ, ಸೀತೆಯನ್ನು ಕಂಡು ಆಕೆಯಲ್ಲಿ ಮಾತುಕತೆಯಾಡಿ ಆಕೆಗೆ ಧೈರ್ಯ ತುಂಬಿದನು.॥5॥
ಮೂಲಮ್ - 6
ಸೇನಾಗ್ರಗಾ ಮಂತ್ರಿಸುತಾಃ ಕಿಂಕರಾ ರಾವಣಾತ್ಮಜಃ ।
ಏತೇ ಹನುಮತಾ ತತ್ರ ಏಕೇನ ವಿನಿಪಾತಿತಾಃ ॥
ಅನುವಾದ
ಅಲ್ಲಿ ಅಶೋಕವನದಲ್ಲಿ ಇವನೊಬ್ಬನೇ ರಾವಣನ ಸೇನಾಪತಿಗಳನ್ನು, ಮಂತ್ರಿಕುಮಾರರನ್ನು, ಕಿಂಕರರನ್ನು ಹಾಗೂ ರಾವಣಪುತ್ರ ಅಕ್ಷಕುಮಾರನನ್ನು ಕೊಂದುಹಾಕಿದನು.॥6॥
ಮೂಲಮ್ - 7
ಭೂಯೋ ಬಂಧಾದ್ವಿಮುಕ್ತೇನ ಭಾಷಯಿತ್ವಾ ದಶಾನನಮ್ ।
ಲಂಕಾ ಭಸ್ಮೀಕೃತಾ ಯೇನ ಪಾವಕೇನೇವ ಮೇದಿನೀ ॥
ಅನುವಾದ
ಮತ್ತೆ ಅವನು ಮೇಘನಾದನ ಬ್ರಹ್ಮಾಸ್ತ್ರ ದಿಂದ ಬಂಧಿತನಾಗಿ ತಾನೇ ಮುಕ್ತನಾದನು. ಬಳಿಕ ರಾವಣನೊಡನೆ ವಾರ್ತಾಲಾಪಗೈದು, ಪ್ರಳಯಾಗ್ನಿಯು ಇಡೀ ಪೃಥಿವಿಯನ್ನು ಸುಡುವಂತೆ, ಲಂಕೆಯನ್ನು ಸುಟ್ಟು ಬೂದಿಮಾಡಿದನು.॥7॥
ಮೂಲಮ್ - 8
ನ ಕಾಲಸ್ಯ ನ ಶಕ್ರಸ್ಯ ನ ವಿಷ್ಣೋರ್ವಿತ್ತಪಸ್ಯ ಚ ।
ಕರ್ಮಾಣಿ ತಾನು ಶ್ರೂಯಂತೇ ಯಾನಿ ಯುದ್ಧೇ ಹನೂಮತಃ ॥
ಅನುವಾದ
ಯುದ್ಧದಲ್ಲಿ ಹನುಮಂತನು ತೋರಿದ ಪರಾಕ್ರಮ, ಶೌರ್ಯದಂತೆ, ಕಾಲ-ಶಕ್ರ-ವಿಷ್ಣು-ವರುಣ ಇವರೂ ಯುದ್ಧದಲ್ಲಿ ತೋರಿರುವರೆಂದು ನಾವು ಕೇಳಿಲ್ಲ.॥8॥
ಮೂಲಮ್ - 9
ಏತಸ್ಯ ಬಾಹುವೀರ್ಯೇಣ ಲಂಕಾ ಸೀತಾ ಚ ಲಕ್ಷ್ಮಣಃ ।
ಪ್ರಾಪ್ತಾ ಮಯಾ ಜಯಶ್ಚೈವ ರಾಜ್ಯಂ ಮಿತ್ರಾಣಿ ಬಾಂಧವಾಃ ॥
ಅನುವಾದ
ಮುನೀಶ್ವರರೇ! ನಾನಾದರೋ ಇವನ ಬಾಹುಬಲದಿಂದಲೇ ವಿಭಿಷಣನಿಗಾಗಿ ಲಂಕೆಯನ್ನು, ಶತ್ರುಗಳ ಮೇಲೆ ವಿಜಯ, ಅಯೋಧ್ಯೆಯ ರಾಜ್ಯ ಹಾಗೂ ಸೀತಾ-ಲಕ್ಷ್ಮಣ, ಮಿತ್ರ-ಬಾಂಧವರನ್ನು ಪಡೆದಿರುವೆನು.॥9॥
ಮೂಲಮ್ - 10
ಹನೂಮಾನ್ಯದಿ ಮೇ ನ ಸ್ಯಾದ್ ವಾನರಾಧಿಪತೇಃ ಸಖಾ ।
ಪ್ರವೃತ್ತಿಮಪಿ ಕೋ ವೇತ್ತುಂ ಜಾನಕ್ಯಾಃ ಶಕ್ತಿಮಾನ್ ಭವೇತ್ ॥
ಅನುವಾದ
ವಾನರರಾಜ ಸುಗ್ರೀವನ ಸಖ್ಯ, ಹನುಮಂತನು ನನಗೆ ಸಿಗುತ್ತಿರದಿದ್ದರೆ, ಜಾನಕಿಯನ್ನು ಹುಡುಕಲು ಯಾರು ಸಮರ್ಥರು ಇರುತ್ತಿದ್ದರು.॥10॥
ಮೂಲಮ್ - 11
ಕಿಮರ್ಥಂ ವಾಲೀ ಚೈತೇನ ಸುಗ್ರೀವ ಪ್ರಿಯಕಾಮ್ಯಯಾ ।
ತದಾ ವೈರೇ ಸಮುತ್ಪನ್ನೇ ನ ದಗ್ಧೋ ವೀರುಧೋ ಯಥಾ ॥
ಅನುವಾದ
ವಾಲಿ-ಸುಗ್ರೀವರಿಗೆ ವಿರೋಧ ಉಂಟಾದಾಗ ಸುಗ್ರೀವನ ಪ್ರಿಯ ಮಾಡುವುದಕ್ಕಾಗಿ ಇವನು ದಾವಾನಲವು ವೃಕ್ಷಗಳನ್ನು ಸುಟ್ಟುಬಿಡುವಂತೆ ವಾಲಿಯನ್ನು ಏಕೆ ಭಸ್ಮ ಮಾಡಲಿಲ್ಲ? ಎಂಬುದು ತಿಳಿಯುವುದಿಲ್ಲ.॥11॥
ಮೂಲಮ್ - 12
ನ ಹಿ ವೇದಿತವಾನ್ಮನ್ಯೇ ಹನೂಮಾನಾತ್ಮನೋ ಬಲಮ್ ।
ಯದ್ದೃಷ್ಟವಾಂ ಜೀವಿತೇಷ್ಟಂ ಕ್ಲಿಶ್ಯಂತಂ ವಾನರಾಧಿಪಮ್ ॥
ಅನುವಾದ
ಆಗ ಹನುಮಂತನಿಗೆ ತನ್ನ ಬಲದ ಪರಿಚಯವಿರಲಿಲ್ಲ ಎಂದೇ ನಾನು ತಿಳಿಯುತ್ತೇನೆ. ಇದರಿಂದ ಇವನು ತನ್ನ ಪ್ರಾಣಪ್ರಿಯ ವಾನರರಾಜ ಸುಗ್ರೀವನು ಕಷ್ಟಪಡುತ್ತಿರುವುದನ್ನು ನೋಡುತ್ತಾ ಇದ್ದನು.॥12॥
ಮೂಲಮ್ - 13
ಏತನ್ಮೇ ಭಗವನ್ಸರ್ವಂ ಹನೂಮತಿ ಮಹಾಮುನೇ ।
ವಿಸ್ತರೇಣ ಯಥಾತತ್ತ್ವಂ ಕಥಯಾಮರಪೂಜಿತ ॥
ಅನುವಾದ
ದೇವವಂದ್ಯ ಮಹಾಮುನೇ! ಪೂಜ್ಯರೇ! ನೀವು ಹನುಮಂತನ ವಿಷಯದಲ್ಲಿ ಎಲ್ಲವನ್ನು ಯಥಾರ್ಥವಾಗಿ ವಿಸ್ತಾರವಾಗಿ ತಿಳಿಸಿರಿ.॥13॥
ಮೂಲಮ್ - 14
ರಾಘವಸ್ಯ ವಚಃ ಶ್ರುತ್ವಾ ಹೇತುಯುಕ್ತಮೃಷಿಸ್ತತಃ ।
ಹನೂಮತಃ ಸಮಕ್ಷಂ ತಮಿದಂ ವಚನಮಬ್ರವೀತ್ ॥
ಅನುವಾದ
ಶ್ರೀರಾಮಚಂದ್ರನ ಯುಕ್ತಿಯುಕ್ತ ಮಾತನ್ನು ಕೇಳಿ ಮಹರ್ಷಿ ಅಗಸ್ತ್ಯರು ಹನುಮಂತನ ಎದುರಿಗೇ ಹೀಗೆ ಹೇಳಿದರು.॥14॥
ಮೂಲಮ್ - 15
ಸತ್ಯಮೇತದ್ ರಘುಶ್ರೇಷ್ಠ ಯದ್ಬ್ರವೀಷಿ ಹನೂಮತಿ ।
ನ ಬಲೇ ವಿದ್ಯತೇ ತುಲ್ಯೋ ನ ಗತೌ ನ ಮತೌ ಪರಃ ॥
ಅನುವಾದ
ರಘುಕುಲತಿಲಕ ಶ್ರೀರಾಮ! ಹನುಮಂತನ ಕುರಿತು ನೀನು ಹೇಳಿದುದೆಲ್ಲ ಸತ್ಯವಾಗಿದೆ. ಬಲ, ಬುದ್ಧಿ, ವೇಗ ಇವುಗಳನ್ನು ಸರಿಗಟ್ಟುವವನು ಬೇರೆ ಯಾರೂ ಇಲ್ಲ.॥15॥
ಮೂಲಮ್ - 16
ಅಮೋಘಶಾಪೈಃ ಶಾಪಸ್ತು ದತ್ತೋಽಸ್ಯ ಮುನಿಭಿಃ ಪುರಾ ।
ನ ವೇತ್ತಾ ಹಿ ಬಲಂ ಸರ್ವಂ ಬಲೀ ಸನ್ನರಿಮರ್ದನ ॥
ಅನುವಾದ
ಶತ್ರುಸೂದನ ರಘುನಂದನ! ಯಾರ ಶಾಪವು ಎಂದೂ ವ್ಯರ್ಥವಾಗುವುದಿಲ್ಲವೋ ಅಂತಹ ಮುನಿಗಳು- ‘ಬಲವಿದ್ದರೂ ಇವನಿಗೆ ತನ್ನ ಬಲದ ಪೂರ್ಣ ಪರಿಚಯವಿರಲಾರದು’ ಎಂದು ಹಿಂದೆ ಶಪಿಸಿದ್ದರು.॥16॥
ಮೂಲಮ್ - 17
ಬಾಲ್ಯೇಽಪ್ಯೇತೇನ ಯತ್ಕರ್ಮ ಕೃತಂ ರಾಮ ಮಹಾಬಲ ।
ತನ್ನ ವರ್ಣಯಿತುಂ ಶಕ್ಯಮಿತಿ ಬಾಲ್ಯತಯಾಸ್ಯತೇ ॥
ಅನುವಾದ
ಮಹಾಬಲಿ ಶ್ರೀರಾಮಾ! ಇವನು ಬಾಲ್ಯದಲ್ಲೇ ಮಾಡಿದ ಮಹಾಕಾರ್ಯಗಳನ್ನೂ ವರ್ಣಿಸಲಾಗುವುದಿಲ್ಲ. ಆಗ ಇವನು ಬಾಲಭಾವದಿಂದ ತಿಳಿಯದವನಂತೇ ಇದ್ದನು.॥17॥
ಮೂಲಮ್ - 18
ಯದಿ ವಾಸ್ತಿ ತ್ವಭಿಪ್ರಾಯಃ ಸಂಶ್ರೋತುಂ ತವ ರಾಘವ ।
ಸಮಾಧಾಯ ಮತಿಂ ರಾಮ ನಿಶಾಮಯ ವದಾಮ್ಯಹಮ್ ॥
ಅನುವಾದ
ರಘುನಂದನ! ಹನುಮಂತನ ಚರಿತ್ರೆಯನ್ನು ಕೇಳುವ ಹಾರ್ದಿಕ ಇಚ್ಛೆ ನಿನಗಿದ್ದರೆ, ಏಕಾಗ್ರಚಿತ್ತನಾಗಿ ಕೇಳು; ನಾನು ಎಲ್ಲವನ್ನು ತಿಳಿಸುತ್ತೇನೆ.॥18॥
ಮೂಲಮ್ - 19
ಸೂರ್ಯದತ್ತವರ ಸ್ವರ್ಣಃ ಸುಮೇರುರ್ನಾಮ ಪರ್ವತಃ ।
ಯತ್ರ ರಾಜ್ಯಂ ಪ್ರಶಾಸ್ಥಸ್ಯ ಕೇಸರೀನಾಮ ವೈ ಪಿತಾ ॥
ಅನುವಾದ
ಭಗವಾನ್ ಸೂರ್ಯನ ವರದಾನದಿಂದ ಸುವರ್ಣಮಯ ಸ್ವರೂಪವಾದ ಸುಮೇರು ಎಂಬ ಒಂದು ಪ್ರಸಿದ್ಧ ಪರ್ವತವಿತ್ತು. ಅಲ್ಲಿ ಹನುಮಂತನ ಪಿತಾ ಕೇಸರೀ ರಾಜ್ಯವಾಳುತ್ತಿದ್ದನು.॥19॥
ಮೂಲಮ್ - 20
ತಸ್ಯ ಭಾರ್ಯಾ ಬಭೂವೇಷ್ಟಾ ಅಂಜನೇತಿ ಪರಿಶ್ರುತಾ ।
ಜನಯಾಮಾಸ ತಸ್ಯಾಂ ವೈ ವಾಯುರಾತ್ಮಜಮುತ್ತಮಮ್ ॥
ಅನುವಾದ
ಅವನ ಪತ್ನೀ ಅಂಜನಾದೇವಿಯು ಖ್ಯಾತಳಾಗಿದ್ದಳು. ಆಕೆಯ ಗರ್ಭದಿಂದ ವಾಯುದೇವರ ಕೃಪೆಯಿಂದ ಉತ್ತಮ ಪುತ್ರನು ಹುಟ್ಟಿದನು.॥20॥
ಮೂಲಮ್ - 21
ಶಾಲಿಶೂಕನಿಭಾಭಾಸಂ ಪ್ರಸೂತೇಮಂ ತದಾಂಜನಾ ।
ಫಲಾನ್ಯಾಹರ್ತುಕಾಮಾ ವೈ ನಿಷ್ಕ್ರಾಂತಾ ಗಹನೇ ವರಾ ॥
ಅನುವಾದ
ಅಂಜನೆಯು ಇವನನ್ನು ಜನ್ಮವಿತ್ತಾಗ ಇವನ ಅಂಗಕಾಂತಿಯು ಭತ್ತದ ಅಗ್ರಭಾಗ ದಂತೆ ಪಿಂಗಳ ವರ್ಣದಿಂದ ಶೋಭಿಸುತ್ತಿತ್ತು. ಒಂದು ದಿನ ತಾಯಿ ಅಂಜನೆಯು ಫಲಗಳನ್ನು ತರಲು ಗಹನವನಕ್ಕೆ ಹೋದಳು.॥21॥
ಮೂಲಮ್ - 22
ಏಷ ಮಾತುರ್ವಿಯೋಗಾಚ್ಚ ಕ್ಷುಧಯಾ ಚ ಭೃಶಾರ್ದಿತಃ ।
ರುರೋದ ಶಿಶುರತ್ಯರ್ಥಂ ಶಿಶುಃ ಶರವಣೇ ಯಥಾ ॥
ಅನುವಾದ
ಆಗ ತಾಯಿಯಿಂದ ಅಗಲಿದ ಶಿಶು ಹನುಮಂತನು ಹಸಿವೆಯಿಂದ ಪೀಡಿತನಾಗಿ ಹಿಂದೆ ಜಂಬು ಹುಲ್ಲಿನ ನಡುವೆ ಕುಮಾರ ಕಾರ್ತಿಕೇಯನು ಅಳುವಂತೆ ಗಟ್ಟಿಯಾಗಿ ಅಳತೊಡಗಿದನು.॥22॥
ಮೂಲಮ್ - 23
ತದೋದ್ಯಂತಂ ವಿವಸ್ವಂತಂ ಜಪಾಪುಷ್ಪೋತ್ಕರೋಪಮಮ್ ।
ದದರ್ಶ ಫಲಲೋಭಾಚ್ಚ ಹ್ಯುತ್ಪಪಾತ ರವಿಂ ಪ್ರತಿ ॥
ಅನುವಾದ
ಅಷ್ಟರಲ್ಲಿ ದಾಸವಾಳದಂತೆ ಕೆಂಪಾದ ಸೂರ್ಯನು ಉದಯಿಸುತ್ತಿರುವುದು ಕಾಣಿಸಿತು. ಹನುಮಂತನು ಸೂರ್ಯನನ್ನು ಇದೊಂದು ಹಣ್ಣೆಂದು ಭಾವಿಸಿ, ಫಲದ ಆಸೆಯಿಂದ ಸೂರ್ಯನ ಕಡೆಗೆ ಹಾರಿದನು.॥23॥
ಮೂಲಮ್ - 24
ಬಾಲಾರ್ಕಾಭಿಮುಖೋ ಬಾಲೋ ಬಾಲಾರ್ಕ ಇವ ಮೂರ್ತಿಮಾನ್ ।
ಗ್ರಹೀತುಕಾಮೋ ಬಾಲಾರ್ಕಂ ಪ್ಲವತೇಂಽಬರಮಧ್ಯಗಃ ॥
ಅನುವಾದ
ಮೂರ್ತಿಮಂತ ಬಾಲಸೂರ್ಯನಂತೆಯೇ ಇದ್ದ ಹನುಮಂತನು ಬಾಲಸೂರ್ಯನ ಅಭಿಮುಖನಾಗಿ ಅವನನ್ನು ಹಿಡಿಯುವ ಇಚ್ಛೆಯಿಂದ ಆಕಾಶದಲ್ಲಿ ಹಾರುತ್ತಾ ಹೋಗುತ್ತಿದ್ದನು.॥24॥
ಮೂಲಮ್ - 25
ಏತಸ್ಮಿನ್ಪ್ಲವಮಾನೇ ತು ಶಿಶುಭಾವೇ ಹನೂಮತಿ ।
ದೇವದಾನವಯಕ್ಷಾಣಾಂ ವಿಸ್ಮಯಃ ಸುಮಹಾನಭೂತ್ ॥
ಅನುವಾದ
ಶೈಶವಾವಸ್ಥೆಯಲ್ಲೇ ಹನುಮಂತನು ಹೀಗೆ ಹಾರುತ್ತಿರುವುದನ್ನು ನೋಡಿ ದೇವತೆಗಳಿಗೆ, ದಾನವರಿಗೆ ಹಾಗೂ ಯಕ್ಷರಿಗೆ ಪರಮಾಶ್ಚರ್ಯವಾಯಿತು.॥25॥
ಮೂಲಮ್ - 26
ನಾಪ್ಯೇವಂ ವೇಗವಾನ್ವಾಯುರ್ಗರುಡೋ ನ ಮನಸ್ತಥಾ ।
ಯಥಾಯಂ ವಾಯುಪುತ್ರಸ್ತು ಕ್ರಮತೇಂಽಬರಮುತ್ತಮಮ್ ॥
ಅನುವಾದ
ಈ ವಾಯುಪುತ್ರನು ಹೇಗೆ ಎತ್ತರ ಆಕಾಶದಲ್ಲಿ ವೇಗವಾಗಿ ಹಾರುತ್ತಿರುವನೋ, ಅಂತಹ ವೇಗ ವಾಯು, ಗರುಡ, ಮನಕ್ಕೂ ಇಲ್ಲ.॥26॥
ಮೂಲಮ್ - 27
ಯದಿ ತಾವಚ್ಛಿಶೋರಸ್ಯ ಈದೃಶೋ ಗತಿವಿಕ್ರಮಃ ।
ಯೌವನಂ ಬಲಮಾಸಾದ್ಯ ಕಥಂ ವೇಗೋ ಭವಿಷ್ಯತಿ ॥
ಅನುವಾದ
ಬಾಲ್ಯಾವಸ್ಥೆಯಲ್ಲೇ ಈ ಶಿಶುವಿನ ಇಂತಹ ವೇಗ, ಪರಾಕ್ರಮವಿದ್ದರೆ ಯೌವನದ ಬಲ ಪಡೆದಾಗ ಇವನ ವೇಗ ಹೇಗಿದ್ದೀತು? ಎಂದು ದೇವತೆಗಳು ಯೋಚಿಸುತ್ತಿದ್ದರು.॥27॥
ಮೂಲಮ್ - 28
ತಮನುಪ್ಲವತೇ ವಾಯುಃ ಪ್ಲವಂತಂ ಪುತ್ರಮಾತ್ಮನಃ ।
ಸೂರ್ಯದಾಹಭಯಾದ್ ರಕ್ಷಂ ಸ್ತುಷಾರಚಯ ಶೀತಲಃ ॥
ಅನುವಾದ
ತನ್ನ ಮಗನು ಸೂರ್ಯನ ಕಡೆಗೆ ಹೋಗುತ್ತಿರುವುದನ್ನು ಕಂಡು, ಅವನಿಗೆ ಆಗುವ ತಾಪದ ಭಯದಿಂದ ಅವನನ್ನು ರಕ್ಷಿಸಲು ವಾಯುದೇವರು ಹಿಮಗಡ್ಡೆಯಂತೆ ಶೀತಲನಾಗಿ ಅವನ ಹಿಂದೆ-ಹಿಂದೆಯೇ ಹೋಗುತ್ತಿದ್ದನು.॥28॥
ಮೂಲಮ್ - 29
ಬಹುಯೋಜನ ಸಾಹಸ್ರಂ ಕ್ರಾಮನ್ನೇವ ಗತೋಂಬರಮ್ ।
ಪಿತುರ್ಬಲಾಚ್ಚ ಬಾಲ್ಯಾಚ್ಚ ಭಾಸ್ಕರಾಭ್ಯಾಶಮಾಗತಃ ॥
ಅನುವಾದ
ಹೀಗೆ ಬಾಲಕ ಹನುಮಂತನು ತನ್ನ ಮತ್ತು ತಂದೆಯ ಬಲದಿಂದ ಅನೇಕ ಸಾವಿರ ಯೋಜನ ದೂರ ಆಕಾಶದಲ್ಲಿ ಕ್ರಮಿಸಿ ಸೂರ್ಯದೇವನ ಸಮೀಪಕ್ಕೆ ಹೋದನು.॥29॥
ಮೂಲಮ್ - 30
ಶಿಶುರೇಷ ತ್ವದೋಷಜ್ಞ ಇತಿ ಮತ್ವಾ ದಿವಾಕರಃ ।
ಕಾರ್ಯಂ ಚಾಸ್ಮಿನ್ಸಮಾಯತ್ತಮಿತ್ಯೇವಂ ನ ದದಾಹ ಸಃ ॥
ಅನುವಾದ
ಇವನು ಇನ್ನೂ ಶಿಶು, ಗುಣದೋಷಗಳನ್ನು ತಿಳಿದವನಲ್ಲ, ಮೇಲಾಗಿ ಇವನಲ್ಲಿ ದೇವತೆಗಳ ಮುಂದಿನ ಕಾರ್ಯ ಅಡಗಿದೆ ಎಂದು ಸೂರ್ಯನು ಯೋಚಿಸಿ, ಬಾಲಕನನ್ನು ಸುಡಲಿಲ್ಲ.॥30॥
ಮೂಲಮ್ - 31
ಯಮೇವ ದಿವಸಂ ಹ್ಯೇಷ ಗ್ರಹೀತುಂ ಭಾಸ್ಕರಂ ಪ್ಲುತಃ ।
ತಮೇವ ದಿವಸಂ ರಾಹುರ್ಜಿಘೃಕ್ಷತಿ ದಿವಾಕರಮ್ ॥
ಅನುವಾದ
ಹನುಮಂತನು ಸೂರ್ಯನನ್ನು ಹಿಡಿಯಲು ಹಾರಿದ ದಿನವೇ ರಾಹುವು ಸೂರ್ಯದೇವನನ್ನು ಕಬಳಿಸಲು ಬಯಸುತ್ತಿದ್ದನು.॥31॥
ಮೂಲಮ್ - 32
ಅನೇನ ಚ ಪರಾಮೃಷ್ಟೋ ರಾಹುಃ ಸೂರ್ಯರಥೋಪರಿ ।
ಅಪಕ್ರಾಂತಸ್ತ ತಸ್ತ್ರಸ್ತೋ ರಾಹುಶ್ಚಂದ್ರಾರ್ಕಮರ್ದನಃ ॥
ಅನುವಾದ
ಸೂರ್ಯನ ರಥದ ಮೇಲಿದ್ದ ರಾಹುವನ್ನು ಹನುಮಂತನು ಮುಟ್ಟಿದೊಡನೆ ಚಂದ್ರಾರ್ಕಮರ್ದನನಾದ ರಾಹುವು ಭಯಗೊಂಡು ಅಲ್ಲಿಂದ ಓಡಿಹೋದನು.॥32॥
ಮೂಲಮ್ - 33
ಇಂದ್ರಸ್ಯ ಭವನಂ ಗತ್ವಾ ಸರೋಷಃ ಸಿಂಹಿಕಾಸುತಃ ।
ಅಬ್ರವೀದ್ಭ್ರುಕುಟಿಂ ಕೃತ್ವಾ ದೇವಂ ದೇವಗಣೈರ್ವೃತಮ್ ॥
ಅನುವಾದ
ಸಿಂಹಿಕಾಪುತ್ರ ರಾಹುವು ರೋಷಗೊಂಡು ಇಂದ್ರಭವನಕ್ಕೆ ಹೋಗಿ ದೇವತೆಗಳಿಂದ ಪರಿವೃತನಾದ ಇಂದ್ರನನ್ನು ಹುಬ್ಬು ಗಂಟಿಕ್ಕಿ ನೋಡುತ್ತಾ ಹೇಳಿದನು.॥33॥
ಮೂಲಮ್ - 34
ಬುಭುಕ್ಷಾಪನಯಂ ದತ್ವಾ ಚಂದ್ರಾರ್ಕೌ ಮಮ ವಾಸವ ।
ಕಿಮಿದಂ ತತ್ತ್ವಯಾ ದತ್ತಮನ್ಯಸ್ಯ ಬಲವೃತ್ರಹನ್ ॥
ಅನುವಾದ
ಬಲವೃತ್ರ ಹಂತಕ ವಾಸವನೇ! ಸೂರ್ಯ-ಚಂದ್ರನನ್ನು ನನ್ನ ಹಸಿವನ್ನು ಇಂಗಲು ನೀನು ನನಗೆ ಕೊಟ್ಟಿರುವಿ, ಆದರೆ ಈಗ ನೀನೇ ಅವರನ್ನು ಬೇರೆಯವರ ವಶಕ್ಕೆ ಕೊಟ್ಟಿರುವೆ. ಹೀಗೇಕಾಯಿತು.॥34॥
ಮೂಲಮ್ - 35
ಅದ್ಯಾಹಂ ಪರ್ವಕಾಲೇ ತು ಜಿಘೃಕ್ಷುಃ ಸೂರ್ಯಮಾಗತಃ ।
ಅಥಾನ್ಯೋ ರಾಹುರಾಸಾದ್ಯ ಜಗ್ರಾಹ ಸಹಸಾ ರವಿಮ್ ॥
ಅನುವಾದ
ಇಂದು ಅಮಾವಾಸ್ಯೆ ಪರ್ವದಂದು ನಾನು ಸೂರ್ಯನನ್ನು ನುಂಗಲು ಹೋಗಿದ್ದೆ. ಅಷ್ಟರಲ್ಲಿ ಮತ್ತೊಬ್ಬ ರಾಹುವು ಬಂದು ಸೂರ್ಯನನ್ನು ಹಿಡಿದುಬಿಟ್ಟಿರುವನು.॥35॥
ಮೂಲಮ್ - 36
ಸ ರಾಹೋರ್ವಚನಂ ಶ್ರುತ್ವಾ ವಾಸವಃ ಸಂಭ್ರಮಾನ್ವಿತಃ ।
ಉತ್ಪಪಾತಾಸನಂ ಹಿತ್ವಾ ಉದ್ವಹನ್ಕಾಂಚನೀಂ ಸ್ರಜಮ್ ॥
ಅನುವಾದ
ರಾಹುವಿನ ಈ ಮಾತನ್ನು ಕೇಳಿ ದೇವೇಂದ್ರನು ಗಾಬರಿಗೊಂಡು, ಸುವರ್ಣಮಾಲೆಯನ್ನು ಧರಿಸಿದ ಅವನು ಸಿಂಹಾಸನವನ್ನು ಬಿಟ್ಟು ಮೇಲಕ್ಕೆದ್ದನು.॥36॥
ಮೂಲಮ್ - 37
ತತಃ ಕೈಲಾಸಕೂಟಾಭಂ ಚತುರ್ದಂತಂ ಮದಸ್ರವಮ್ ।
ಶೃಂಗಾರಧಾರಿಣಂ ಪ್ರಾಂಶುಂ ಸ್ವರ್ಣಘಂಘಾಟ್ಟಹಾಸಿನಮ್ ॥
ಮೂಲಮ್ - 38
ಇಂದ್ರಃ ಕರೀಂದ್ರಮಾರುಹ್ಯರಾಹುಂ ಕೃತ್ವಾ ಪುರಃಸರಮ್ ।
ಪ್ರಾಯಾದ್ಯತ್ರಾಭವತ್ ಸೂರ್ಯಃ ಸಹಾನೇನ ಹನೂಮತಾ ॥
ಅನುವಾದ
ಮತ್ತೆ ಕೈಲಾಸ ಶಿಖರದಂತೆ ಉಜ್ವಲವಾದ, ನಾಲ್ಕು ದಂತಗಳಿಂದ ವಿಭೂಷಿತ, ಮದೋದಕವನ್ನು ಹರಿಸುತ್ತಿರುವ, ಬಗೆ-ಬಗೆಯ ಶೃಂಗಾರದಿಂದ ಕೂಡಿದ, ಅತಿ ಎತ್ತರವಾದ, ಸುವರ್ಣಮಯ ಗಂಟಾನಾದದಂತೆ ಅಟ್ಟಹಾಸ ಮಾಡುವ ಗಜರಾಜ ಐರಾವತವನ್ನು ಹತ್ತಿ ದೇವೇಂದ್ರನು ರಾಹುವನ್ನು ಮುಂದಿರಿಸಿಕೊಂಡು, ಹನುಮಂತನೊಡನೆ ಸೂರ್ಯನು ವಿರಾಜಿಸುತ್ತಿದ್ದಲ್ಲಿಗೆ ಬಂದನು. ॥37-38॥
ಮೂಲಮ್ - 39
ಅಥಾತಿರಭಸೇನಾಗಾದ್ ರಾಹುರುತ್ಸೃಜ್ಯ ವಾಸವಮ್ ।
ಅನೇನ ಚ ಸ ವೈ ದೃಷ್ಟಃ ಪ್ರಧಾವನ್ ಶೈಲಕೂಟವತ್ ॥
ಅನುವಾದ
ಇತ್ತ ರಾಹು ಇಂದ್ರನನ್ನು ಬಿಟ್ಟು ವೇಗವಾಗಿ ಮುಂದರಿದನು. ಆಗ ಪರ್ವತಶಿಖರದಂತೆ ಆಕಾರವುಳ್ಳ ರಾಹುವು ಓಡಿ ಬರುತ್ತಿರುವುದನ್ನು ಹನುಮಂತನು ನೋಡಿದನು.॥39॥
ಮೂಲಮ್ - 40
ತತಃ ಸೂರ್ಯಂ ಸಮುತ್ಸೃಜ್ಯ ರಾಹುಂ ಫಲಮವೇಕ್ಷ್ಯ ಚ ।
ಉತ್ಪಪಾತ ಪುನರ್ವ್ಯೋಮ ಗ್ರಹೀತುಂ ಸಿಂಹಿಕಾಸುತಮ್ ॥
ಅನುವಾದ
ಆಗ ರಾಹುವನ್ನು ಫಲವೆಂದು ನೋಡಿ ಬಾಲಕ ಹನುಮಂತನು ಸೂರ್ಯನನ್ನು ಬಿಟ್ಟು ಆ ಸಿಂಹಿಕಾ ಪುತ್ರನನ್ನೇ ಹಿಡಿಯಲು ಆಕಾಶದಲ್ಲಿ ಹಾರಿದನು.॥40॥
ಮೂಲಮ್ - 41
ಉತ್ಸೃರ್ಜ್ಯಾರ್ಕಮಿಮಂ ರಾಮ ಪ್ರಧಾವಂತಂ ಪ್ಲವಂಗಮಮ್ ।
ಅವೇಕ್ಷ್ಯೈವಂ ಪರಾವೃತ್ತೋ ಮುಖಶೇಷಃ ಪರಾಙ್ಮುಖಃ ॥
ಅನುವಾದ
ಶ್ರೀರಾಮಾ! ಸೂರ್ಯನನ್ನು ಬಿಟ್ಟು ತನ್ನ ಕಡೆಗೆ ಬರುತ್ತಿರುವ ವಾನರ ಹನುಮಂತನನ್ನು ನೋಡಿ, ಮುಖಮಾತ್ರವುಳ್ಳ ರಾಹು ಹಿಮ್ಮುಖವಾಗಿ ಓಡಿದನು.॥41॥
ಮೂಲಮ್ - 42
ಇಂದ್ರಮಾಶಂಸಮಾನಸ್ತು ತ್ರಾತಾರಂ ಸಿಂಹಿಕಾಸುತಃ ।
ಇಂದ್ರ ಇಂದ್ರೇತಿ ಸಂತ್ರಾಸಾನ್ಮುಹುರ್ಮುಹುರಭಾಷತ ॥
ಅನುವಾದ
ಆಗ ಸಿಂಹಿಕಾ ಪುತ್ರ ರಾಹು ತನ್ನ ರಕ್ಷಕ ಇಂದ್ರನೆಂದೇ ಬಗೆದು ರಕ್ಷಣೆಗಾಗಿ ಭಯದಿಂದ ಇಂದ್ರನೇ! ಇಂದ್ರನೇ! ರಕ್ಷಿಸು ಎಂದು ಪುನಃ-ಪುನಃ ಕೂಗತೊಡಗಿದನು.॥42॥
ಮೂಲಮ್ - 43
ರಾಹೋರ್ವಿಕ್ರೋಶಮಾನಸ್ಯ ಪ್ರಾಗೇವಾಲಕ್ಷಿತಂ ಸ್ವರಮ್ ।
ಶ್ರುತ್ವೇಂದ್ರೋ ವಾಚ ಮಾ ಭೈಷೀರಹಮೇನಂ ನಿಷೂದಯೇ ॥
ಅನುವಾದ
ಕೂಗುತ್ತಿರುವ ರಾಹುವಿನ ಸ್ವರವನ್ನು ಗುರುತಿಸಿ ಇಂದ್ರನು ಹೇಳಿದನು - ಹೆದರಬೇಡ. ನಾನು ಈ ಆಕ್ರಮಣಕಾರಿಯನ್ನು ಕೊಂದುಬಿಡುವೆ.॥43॥
ಮೂಲಮ್ - 44
ಐರಾವತಂ ತತೋ ದೃಷ್ಟ್ವಾ ಮಹತ್ತದಿದಮಿತ್ಯಪಿ ।
ಫಲಂ ತಂ ಹಸ್ತಿರಾಜಾಮಭಿದುದ್ರಾವ ಮಾರುತಿಃ ॥
ಅನುವಾದ
ಬಳಿಕ ಐರಾವತವನ್ನು ನೋಡಿ ಹನುಮಂತನು ಇದೂ ಒಂದು ದೊಡ್ಡ ಫಲವೆಂದು ತಿಳಿದು ಆ ಗಜರಾಜನನ್ನು ಹಿಡಿಯಲು ಅದರ ಕಡೆಗೆ ಓಡಿದನು.॥44॥
ಮೂಲಮ್ - 45
ತಥಾಸ್ಯ ಧಾವತೋ ರೂಪಮೈರಾವತ ಜಿಘೃಕ್ಷಯಾ ।
ಮುಹೂರ್ತಮಭವದ್ ಘೋರಮಿಂದ್ರಾಗ್ನ್ಯೋರಿವ ಭಾಸ್ವರಮ್ ॥
ಅನುವಾದ
ಐರಾವತವನ್ನು ಹಿಡಿಯುವ ಇಚ್ಛೆಯಿಂದ ಓಡುತ್ತಿರುವ ಹನುಮಂತನ ರೂಪವು ಮುಹೂರ್ತ ಮಾತ್ರ ಇಂದ್ರಾಗ್ನಿಗಳಂತೆ ಪ್ರಕಾಶಮಾನವಾಗಿ ಭಯಂಕರವಾಯಿತು.॥45॥
ಮೂಲಮ್ - 46
ಏವಮಾಧಾವಮಾನಂ ತು ನಾತಿಕ್ರುದ್ಧಃ ಶಚೀಪತಿಃ ।
ಹಸ್ತಾಂತಾದತಿಮುಕ್ತೇನ ಕುಲಿಶೇನಾಭ್ಯ ತಾಡಯತ್ ॥
ಅನುವಾದ
ಬಾಲಕ ಹನುಮಂತನನ್ನು ನೋಡಿ ಶಚೀಪತಿ ಇಂದ್ರನಿಗೆ ಹೆಚ್ಚು ಸಿಟ್ಟು ಬಂದಿಲ್ಲ. ಆದರೂ ಹೀಗೆ ಆಕ್ರಮಣ ಮಾಡುವ ಬಾಲಕ ವಾನರನ ಮೇಲೆ ಅವನು ವಜ್ರಾಯುಧದಿಂದ ಪ್ರಹರಿಸಿದನು.॥46॥
ಮೂಲಮ್ - 47
ತತೋ ಗಿರೌ ಪಪಾತೈಷ ಇಂದ್ರವಜ್ರಾಭಿತಾಡಿತಃ ।
ಪತಮಾನಸ್ಯ ಚೈತಸ್ಯ ವಾಮಾ ಹನುರಭಜ್ಯತ ॥
ಅನುವಾದ
ಇಂದ್ರನ ವಜ್ರಾಯುಧದ ಏಟು ತಿಂದು ಹನುಮಂತನು ಒಂದು ಪರ್ವತದ ಮೇಲೆ ಬಿದ್ದನು. ಹಾಗೆ ಬೀಳುವಾಗ ಅವನ ಎಡ ದವಡೆಯು ಮುರಿದು ಹೋಯಿತು.॥47॥
ಮೂಲಮ್ - 48
ತಸ್ಮಿಂಸ್ತು ಪತಿತೇ ಚಾಪಿ ವಜ್ರತಾಡನವಿಹ್ವಲೇ ।
ಚುಕ್ರೋಧೇಂದ್ರಾಯ ಪವನಃ ಪ್ರಜಾನಾಮಹಿತಾಯ ಸಃ ॥
ಅನುವಾದ
ವಜ್ರಾಘಾತದಿಂದ ವ್ಯಾಕುಲನಾಗಿ ಅವನು ಬೀಳುತ್ತಲೇ ವಾಯುದೇವರು ಇಂದ್ರನ ಮೇಲೆ ಕುಪಿತನಾದನು. ಅವನ ಈ ಕ್ರೋಧ ಪ್ರಜಾಜನರಿಗೆ ಅಹಿತಕರವಾಯಿತು.॥48॥
ಮೂಲಮ್ - 49
ಪ್ರಚಾರಂ ಸ ತು ಸಂಗೃಹ್ಯ ಪ್ರಜಾಸ್ವಂತರ್ಗತಃ ಪ್ರಭುಃ ।
ಗುಹಾಂ ಪ್ರವಿಷ್ಟಃ ಸ್ವಸುತಂ ಶಿಶುಮಾದಾಯ ಮಾರುತಃ ॥
ಅನುವಾದ
ಸಮರ್ಥನಾದ ಮಾರುತನು ಸಮಸ್ತ ಪ್ರಜೆಗಳೊಳಗೆ ಇದ್ದರೂ ತನ್ನ ಗತಿಯನ್ನು ಹಿಂದೆಗೆದುಕೊಂಡನು. ಶ್ವಾಸಾದಿ ರೂಪದಲ್ಲಿ ಸಂಚಾರ ತಡೆಹಿಡಿದನು ಹಾಗೂ ತನ್ನ ಪುತ್ರ ಹನುಮಂತನನ್ನು ಎತ್ತಿಕೊಂಡು ಒಂದು ಗುಹೆಗೆ ಹೋದನು.॥49॥
ಮೂಲಮ್ - 50
ವಿಣ್ಮೂತ್ರಾಶಯಮಾವೃತ್ಯ ಪ್ರಜಾನಾಂ ಪರಮಾರ್ತಿಕೃತ್ ।
ರುರೋಧ ಸರ್ವಭೂತಾನಿ ಯಥಾ ವರ್ಷಾಣಿ ವಾಸವಃ ॥
ಅನುವಾದ
ಇಂದ್ರನು ಮಳೆಯನ್ನು ತಡೆಯುವಂತೆಯೇ ವಾಯುದೇವರು ಪ್ರಜಾಜನರ ಮಲ-ಮೂತ್ರಗಳನ್ನು ತಡೆದು, ಅವರಿಗೆ ಬಹಳ ಪೀಡೆಯನ್ನುಂಟುಮಾಡಿದನು. ಅವನು ಸಮಸ್ತ ಪ್ರಾಣಿಗಳ ಪ್ರಾಣ-ಸಂಚಾರ ಅವರೋಧ ಮಾಡಿಬಿಟ್ಟನು.॥50॥
ಮೂಲಮ್ - 51
ವಾಯುಪ್ರಕೋಪಾದ್ಭೂತಾನಿ ನಿರುಚ್ಛ್ವಾ ಸಾನಿ ಸರ್ವತಃ ।
ಸಂಧಿಭಿರ್ಭಿದ್ಯಮಾನೈಶ್ಚ ಕಾಷ್ಠಭೂತಾನಿ ಜಜ್ಞಿರೇ ॥
ಅನುವಾದ
ವಾಯುವಿನ ಪ್ರಕೋಪದಿಂದ ಸಮಸ್ತ ಪ್ರಾಣಿಗಳ ಉಸಿರು ನಿಂತುಹೋಯಿತು. ಅವರ ಎಲ್ಲ ಸಂದುಗಳು ಸಡಿಲಾದವು. ಎಲ್ಲರೂ ಕಟ್ಟಿಗೆಯಂತೆ ಚೇಷ್ಟಾಶೂನ್ಯರಾದರು.॥51॥
ಮೂಲಮ್ - 52
ನಿಃಸ್ವಾಧ್ಯಾಯವಷಟ್ಕಾರಂ ನಿಷ್ಕ್ರಿಯಂ ಧರ್ಮವರ್ಜಿತಮ್ ।
ವಾಯುಪ್ರಕೋಪಾಸ್ತ್ರೈಲೋಕ್ಯಂ ನಿರಯಸ್ಥಮಿವಾಭವತ್ ॥
ಅನುವಾದ
ಮೂರು ಲೋಕಗಳಲ್ಲಿ ವೇದಾಧ್ಯಯನ, ಯಜ್ಞಗಳು ನಡೆಯದಂತಾಗಿ ಎಲ್ಲ ಧರ್ಮ ಕರ್ಮ ನಿಂತುಹೋದುವು. ತ್ರಿಭುವನದ ಪ್ರಾಣಿಗಳು ನರಕದಲ್ಲಿ ಬಿದ್ದಂತೆ ಯಾತನೆ ಅನುಭವಿಸತೊಡಗಿದರು.॥52॥
ಮೂಲಮ್ - 53
ತತಃ ಪ್ರಜಾಃ ಸಗಂಧರ್ವಾಃ ಸದೇವಾಸುರ ಮಾನುಷಾಃ ।
ಪ್ರಜಾಪತಿಂ ಸಮಾಧಾವನ್ ದುಃಖಿತಾಶ್ಚ ಸುಖೇಚ್ಛಯಾ ॥
ಅನುವಾದ
ಆಗ ಗಂಧರ್ವರು, ದೇವತೆಗಳು, ಅಸುರರು, ಮನುಷ್ಯರೇ ಆದಿ ಎಲ್ಲ ಪ್ರಜೆಯು ವ್ಯಥಿತರಾಗಿ, ಸುಖ ಪಡೆಯುವ ಇಚ್ಛೆಯಿಂದ ಪ್ರಜಾಪತಿ ಬ್ರಹ್ಮದೇವರ ಬಳಿಗೆ ಓಡಿದರು.॥53॥
ಮೂಲಮ್ - 54
ಊಚುಃ ಪ್ರಾಂಜಲಯೋ ದೇವಾ ಮಹೋದರನಿಭೋದರಾಃ ।
ತ್ವಯಾ ತು ಭಗವನ್ಸೃಷ್ಟಾಃ ಪ್ರಜಾ ನಾಥ ಚತುರ್ವಿಧಾಃ ॥
ಮೂಲಮ್ - 55½
ತ್ವಯಾ ದತ್ತೋಽಯಮಸ್ಮಾಕಮಾಯುಷಃ ಪವನಃ ಪತಿಃ ।
ಸೋಽಸ್ಮಾನ್ಪ್ರಾಣೇಶ್ವರೋಭೂತ್ವಾ ಕಸ್ಮಾದೇಷೋಽದ್ಯ ಸತ್ತಮ ॥
ರುರೋಧ ದುಃಖಂ ಜನಯನ್ನಂತಃಪುರ ಇವ ಸ್ತ್ರಿಯಃ ।
ಅನುವಾದ
ಆಗ ದೇವತೆಗಳ ಹೊಟ್ಟೆ ಮಹೋದರ ರೋಗದಂತೆ ಉಬ್ಬಿಹೋಗಿತ್ತು. ಅವರು ಕೈಮುಗಿದುಕೊಂಡು ಭಗವನ್, ಸ್ವಾಮಿ! ನೀವು ನಾಲ್ಕು ರೀತಿಯ ಪ್ರಜೆಗಳನ್ನು ಸೃಷ್ಟಿಸಿದೆ. ನೀವು ನಮ್ಮೆಲ್ಲರ ಆಯುಸ್ಸಿನ ಅಧಿಪತಿ ರೂಪದಲ್ಲಿ ವಾಯುದೇವರಿಗೆ ಅರ್ಪಿಸಿದಿರಿ. ಸಾಧುಶಿರೋಮಣಿಯೇ! ಈ ಪವನ ದೇವನು ನಮ್ಮ ಪ್ರಾಣಗಳ ಸ್ವಾಮಿ ಯಾಗಿದ್ದರೂ ಇಂದು ಅವನು ಅಂತಃಪುರದ ಸ್ತ್ರೀಯರಂತೆ ನಮ್ಮ ಶರೀರದೊಳಗೆ ತನ್ನ ಸಂಚಾರ ನಿಲ್ಲಿಸಿಬಿಟ್ಟಿರುವನು ಹಾಗೂ ಈ ಪ್ರಕಾರ ಇವನು ನಮಗೆ ದುಃಖಜನಕನಾಗಿದ್ದಾನೆ.॥54-55½॥
ಮೂಲಮ್ - 56½
ತಸ್ಮಾತ್ತ್ವಾಂ ಶರಣಂ ಪ್ರಾಪ್ತಾ ವಾಯುನೋಪಹತಾ ವಯಮ್ ॥
ವಾಯುಸಂರೋಧಜಂ ದುಃಖಮಿದಂ ನೋ ನುದ ದುಃಖಹನ್ ।
ಅನುವಾದ
ವಾಯುವಿನಿಂದ ಪೀಡಿತರಾದ ನಾವು ನಿಮಗೆ ಶರಣಾಗಿರುವೆವು, ದುಃಖಹಾರಿ ಪ್ರಜಾಪತಿಯೇ! ನೀವು ನಮ್ಮ ಈ ವಾಯುರೋಧಜನಿತ ದುಃಖವನ್ನು ದೂರಗೊಳಿಸು.॥56½॥
ಮೂಲಮ್ - 57½
ಏತತ್ಪ್ರಜಾನಾಂ ಶ್ರುತ್ವಾ ತು ಪ್ರಜಾನಾಥಃ ಪ್ರಜಾಪತಿಃ ॥
ಕಾರಣಾದಿತಿ ಚೋಕ್ತ್ವಾಸೌ ಪ್ರಜಾಃ ಪುನರಭಾಷತ ।
ಅನುವಾದ
ಪ್ರಜೆಗಳ ಈ ಮಾತನ್ನು ಕೇಳಿ ಅವರ ಪಾಲಕ, ರಕ್ಷಕ ಬ್ರಹ್ಮದೇವರು ಹೇಳಿದರು - ‘ಇದರಲ್ಲಿ ಏನೋ ಕಾರಣವಿದೆ’ ಎಂದು ತಿಳಿಸಿ ಪ್ರಜೆಗಳಲ್ಲಿ ಪುನಃ ಹೇಳಿದರು.॥57½॥
ಮೂಲಮ್ - 58½
ಯಸ್ಮಿಂಶ್ಚ ಕಾರಣೇ ವಾಯುಶ್ಚುಕ್ರೋಧ ಚರುರೋಧ ಚ ॥
ಪ್ರಜಾಃ ಶೃಣುಧ್ವಂ ತತ್ಸರ್ವಂ ಶ್ರೋತವ್ಯಂಚಾತ್ಮನಃ ಕ್ಷಮಮ್ ।
ಅನುವಾದ
ಪ್ರಜೆಗಳಿರಾ! ಯಾವ ಕಾರಣದಿಂದ ವಾಯುದೇವರು ಕ್ರೋಧಗೊಂಡು, ತನ್ನ ಗತಿಯನ್ನು ನಿಲ್ಲಿಸಿರುವನು? ಇದನ್ನು ಹೇಳುತ್ತೇನೆ, ಕೇಳಿರಿ. ಆ ಕಾರಣ ಕೇಳುವುದು ನಿಮಗೆ ಉಚಿತವಾಗಿದೆ.॥58½॥
ಮೂಲಮ್ - 59½
ಪುತ್ರಸ್ತಸ್ಯಾಮರೇಶೇನ ಇಂದ್ರೇಣಾದ್ಯ ನಿಪಾತಿತಃ ॥
ರಾಹೋರ್ವಚನಮಾಸ್ಥಾಯ ತತಃ ಸ ಕುಪಿತೋಽನಿಲಃ ।
ಅನುವಾದ
ಇಂದು ದೇವೇಂದ್ರನು ರಾಹುವಿನ ಮಾತನ್ನು ಕೇಳಿ ವಾಯುಪುತ್ರನನ್ನು ಹೊಡೆದು ಬೀಳಿಸಿರುವನು, ಇದರಿಂದ ಅವನು ಕುಪಿತನಾಗಿರುವನು.॥59½॥
ಮೂಲಮ್ - 60½
ಅಶರೀರಃ ಶರೀರೇಷು ವಾಯುಶ್ಚರತಿ ಪಾಲಯನ್ ॥
ಶರೀರಂ ಹಿ ವಿನಾ ವಾಯುಂ ಸಮತಾಂ ಯಾತಿ ದಾರುಭಿಃ ।
ಅನುವಾದ
ವಾಯುದೇವರು ಸ್ವತಃ ಶರೀರ ಧರಿಸದೆಯೇ ಸಮಸ್ತ ಶರೀರಗಳಲ್ಲಿ ಅದನ್ನು ರಕ್ಷಿಸುತ್ತಾ ಸಂಚರಿಸುತ್ತಾನೆ. ವಾಯುವಿಲ್ಲದಿದ್ದರೆ ಈ ಶರೀರ ಒಣಗಿದ ಕಟ್ಟಿಗೆಯಂತಾಗುವುದು.॥60½॥
ಮೂಲಮ್ - 61½
ವಾಯುಃ ಪ್ರಾಣಃ ಸುಖಂ ವಾಯುಃ ವಾಯುಃ ಸರ್ವಮಿದಂಜಗತ್ ॥
ವಾಯುನಾ ಸಂಪರಿತ್ಯಕ್ತಂ ನ ಸುಖಂ ವಿಂದತೇ ಜಗತ್ ।
ಅನುವಾದ
ವಾಯುವೇ ಎಲ್ಲರ ಪ್ರಾಣ ಮತ್ತು ಸುಖ ಆಗಿದ್ದಾನೆ, ವಾಯುವೇ ಈ ಇಡೀ ಜಗತ್ತಾಗಿದ್ದಾನೆ. ವಾಯುವನ್ನು ಬಿಟ್ಟು ಜಗತ್ತು ಎಂದೂ ಸುಖಿಯಾಗಲಾರದು.॥61½॥
ಮೂಲಮ್ - 62½
ಅದ್ಯೈವ ಚಪರಿತ್ಯಕ್ತಂ ವಾಯುನಾ ಜಗದಾಯುಷಾ ॥
ಅದ್ಯೈವ ತೇ ನಿರುಚ್ಛ್ವಾಸಾಃ ಕಾಷ್ಠ ಕುಡ್ಯೋಪಮಾಃ ಸ್ಥಿತಾಃ ।
ಅನುವಾದ
ವಾಯುವೇ ಜಗತ್ತಿನ ಆಯುಸ್ಸು ಆಗಿದ್ದಾನೆ. ಈಗ ವಾಯುವು ಪ್ರಪಂಚದ ಪ್ರಾಣಿಗಳನ್ನು ತ್ಯಜಿಸಿರುವನು. ಇದರಿಂದ ಅವರೆಲ್ಲರೂ ನಿಷ್ಪ್ರಾಣರಾಗಿ ಕಟ್ಟಿಗೆ, ಗೋಡೆಗಳಂತೆ ಆಗಿದ್ದಾರೆ.॥62½॥
ಮೂಲಮ್ - 63
ತದ್ಯಾಮಸ್ತತ್ರ ಯತ್ರಾಸ್ತೇ ಮಾರುತೋ ರುಕ್ಪ್ರದೋ ಹಿ ನಃ ।
ಮಾ ವಿನಾಶಂ ಗಮಿಷ್ಯಾಮಿ ಅಪ್ರಸಾದ್ಯಾದಿತೇಃ ಸುತಾಃ ॥
ಅನುವಾದ
ಅದಿತಿ ಪುತ್ರರೇ! ಈಗ ನಾವು ಎಲ್ಲರನ್ನು ಪೀಡಿಸುವ ವಾಯುದೇವರು ಅಡಗಿ ಕುಳಿತಲ್ಲಿಗೆ ಹೋಗಬೇಕು. ಅವನನ್ನು ಸಂತೋಷಗೊಳಿಸದೆ ಎಲ್ಲರ ವಿನಾಶ ಆಗದಿರಲಿ.॥63॥
ಮೂಲಮ್ - 64
ತತಃ ಪ್ರಜಾಭಿಃ ಸಹಿತಃ ಪ್ರಜಾಪತಿಃ
ಸದೇವಗಂಧರ್ವಭುಜಂಗಗುಹ್ಯಕೈಃ ।
ಜಗಾಮ ತತ್ರಾಸ್ಯತಿ ಯತ್ರ ಮಾರುತಃ
ಸುತಂ ಸುರೇಂದ್ರಾಭಿಹತಂ ಪ್ರಗೃಹ್ಯ ಸಃ ॥
ಅನುವಾದ
ಅನಂತರ ದೇವತೆಗಳು, ಗಂಧರ್ವರು, ನಾಗರು, ಗುಹ್ಯಕರೇ ಮೊದಲಾದ ಪ್ರಜೆಗಳನ್ನು ಕರೆದುಕೊಂಡು ಪ್ರಜಾಪತಿ ಬ್ರಹ್ಮನು ವಾಯುದೇವನು ಇಂದ್ರನಿಂದ ಹೊಡೆಯಲ್ಪಟ್ಟ ತನ್ನ ಮಗನನ್ನೆತ್ತಿಕೊಂಡು ಕುಳಿತಲ್ಲಿಗೆ ಬಂದನು.॥64॥
ಮೂಲಮ್ - 65
ತತೋಽರ್ಕವೈಶ್ವಾನರಕಾಂಚನಪ್ರಭಂ
ಸುತಂ ತದೋತ್ಸಂಗಗತಂ ಸದಾಗತೇಃ ।
ಚತುರ್ಮುಖೋ ವೀಕ್ಷ್ಯ ಕೃಪಾಮಥಾಕರೋತ್
ಸದೇವಗಂಧರ್ವಋಷಿಯಕ್ಷರಾಕ್ಷಸೈಃ ॥
ಅನುವಾದ
ಬಳಿಕ ಬ್ರಹ್ಮದೇವರು ದೇವತಾ, ಗಂಧರ್ವ, ಋಷಿ, ಯಕ್ಷ, ರಾಕ್ಷಸರೊಂದಿಗೆ ಅಲ್ಲಿಗೆ ಹೋಗಿ ವಾಯುದೇವರ ತೊಡೆ ಯಲ್ಲಿ ಮಲಗಿದ ಅವನ ಪುತ್ರನನ್ನು ನೋಡಿದರು. ಅವನ ಅಂಗಕಾಂತಿಯು ಸೂರ್ಯಾಗ್ನಿಯಂತೆ ಪ್ರಕಾಶಿಸುತ್ತಿತ್ತು. ಮಗುವಿನ ಅಂತಹ ಸ್ಥಿತಿಯನ್ನು ನೋಡಿ ಬ್ರಹ್ಮದೇವರಿಗೆ ತುಂಬಾ ದಯೆ ಉಂಟಾಯಿತು.॥65॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತೈದನೆಯ ಸರ್ಗ ಪೂರ್ಣವಾಯಿತು. ॥35॥