[ಮೂವತ್ತನಾಲ್ಕನೆಯ ಸರ್ಗ]
ಭಾಗಸೂಚನಾ
ವಾಲಿಯಿಂದ ರಾವಣನ ಪರಾಭವ, ವಾಲೀ - ರಾವಣರ ಮೈತ್ರಿ
ಮೂಲಮ್ - 1
ಅರ್ಜುನೇನ ವಿಮುಕ್ತಸ್ತು ರಾವಣೋ ರಾಕ್ಷಸಾಧಿಪಃ ।
ಚಚಾರ ಪೃಥಿವೀಂ ಸರ್ವಾಮನಿರ್ವಿಣ್ಣಸ್ತಥಾ ಕೃತಃ ॥
ಅನುವಾದ
ರಾಘವ! ಅರ್ಜುನನಿಂದ ಬಿಡುಗಡೆ ಹೊಂದಿ ರಾವಣನು ಖೇದವಿಲ್ಲದವನಾಗಿ ಪುನಃ ಪೃಥಿವಿಯಲ್ಲಿ ಸಂಚರಿಸ ತೊಡಗಿದನು.॥1॥
ಮೂಲಮ್ - 2
ರಾಕ್ಷಸಂ ವಾ ಮನುಷ್ಯಂ ವಾ ಶೃಣುತೇ ಯಂ ಬಲಾಧಿಕಮ್ ।
ರಾವಣಸ್ತಂ ಸಮಾಸಾದ್ಯ ಯುದ್ಧೇ ಹ್ವಯತಿ ದರ್ಪಿತಃ ॥
ಅನುವಾದ
ಭೂಮಂಡಲದಲ್ಲಿ ಅಧಿಕ ಬಲವಿರುವ ರಾಕ್ಷಸನಾಗಲೀ, ಮನುಷ್ಯನಾಗಲೀ, ಅವನ ಬಳಿಗೆ ಹೋಗಿ ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದನು.॥2॥
ಮೂಲಮ್ - 3
ತತಃ ಕದಾಚಿತ್ಕಿಷ್ಕಿಂಧಾಂ ನಗರೀಂ ವಾಲಿ ಪಾಲಿತಾಮ್ ।
ಗತ್ವಾಽಽಹ್ವಯತಿ ಯುದ್ಧಾಯ ವಾಲಿನಂ ಹೇಮಮಾಲಿನಮ್ ॥
ಅನುವಾದ
ಅನಂತರ ಒಂದು ದಿನ ಅವನು ವಾಲಿಯಿಂದ ಪಾಲಿತವಾದ ಕಿಷ್ಕಿಂಧೆಗೆ ಹೋಗಿ ಸುವರ್ಣಮಾಲಾಧಾರೀ ವಾಲಿಯನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.॥3॥
ಮೂಲಮ್ - 4
ತತಸ್ತು ವಾನರಾಮಾತ್ಯಸ್ತಾರಸ್ತಾರಾಪಿತಾ ಪ್ರಭುಃ ।
ಉವಾಚ ವಾನರೋ ವಾಕ್ಯಂ ಯುದ್ಧಪ್ರೇಪ್ಸುಮುಪಾಗತಮ್ ॥
ಅನುವಾದ
ಆಗ ಯುದ್ಧದ ಇಚ್ಛೆಯಿಂದ ಬಂದಿರುವ ರಾವಣನಲ್ಲಿ ವಾಲಿಯ ಮಂತ್ರಿ ತಾರ, ತಾರಾಪಿತ ಸುಷೇಣ, ಯುವರಾಜ ಅಂಗದ ಹಾಗೂ ಸುಗ್ರೀವನು ಹೇಳಿದರು.॥4॥
ಮೂಲಮ್ - 5
ರಾಕ್ಷಸೇಂದ್ರ ಗತೋ ವಾಲೀ ಯಸ್ತೇ ಪ್ರತಿಬಲೋ ಭವೇತ್ ।
ಕೋಽನ್ಯಃ ಪ್ರಮುಖತಃ ಸ್ಥಾತುಂ ತವ ಶಕ್ತಃ ಪ್ಲವಂಗಮಃ ॥
ಅನುವಾದ
ರಾಕ್ಷಸೇಂದ್ರನೇ! ಈಗ ವಾಲಿಯು ಹೊರಗೆ ಹೋಗಿರುವನು. ಅವನನ್ನು ಬಿಟ್ಟು ಬೇರೆ ಯಾವ ವಾನರನು ನಿನ್ನ ಎದುರಿಗೆ ನಿಲ್ಲಬಲ್ಲನು? ಅವನೇ ನಿನಗೆ ಸರಿಸಮಾನನಾಗಬಲ್ಲನು.॥5॥
ಮೂಲಮ್ - 6
ಚತುರ್ಭ್ಯೋಽಪಿ ಸಮುದ್ರೇಭ್ಯಃ ಸಂಧ್ಯಾಮನ್ವಾಸ್ಯ ರಾವಣ ।
ಇದಂ ಮುಹೂರ್ತಮಾಯಾತಿ ವಾಲೀ ತಿಷ್ಠ ಮುಹೂರ್ತಕಮ್ ॥
ಅನುವಾದ
ರಾವಣ! ನಾಲ್ಕು ಸಮುದ್ರಗಳಲ್ಲಿಯೂ ಸಂಧ್ಯೋಪಾಸನೆ ಮಾಡುವ ವಾಲಿಯು ಈಗಲೇ ಬರುವನು. ನೀನು ಸ್ವಲ್ಪ ಹೊತ್ತು ಇಲ್ಲಿಯೇ ಇರು.॥6॥
ಮೂಲಮ್ - 7
ಏತಾನಸ್ಥಿಚಯಾನ್ಪಶ್ಯ ಯ ಏತೇ ಶಂಖಪಾಂಡುರಾಃ ।
ಯುದ್ಧಾರ್ಥಿನಾಮಿಮೇ ರಾಜನ್ ವಾನರಾಧಿಪತೇಜಸಾ ॥
ಅನುವಾದ
ರಾಜನೇ! ನೋಡು, ಈ ಶಂಖದಂತೆ ಬೆಳ್ಳಗೆ ಇರುವ ಎಲುಬಿನ ರಾಶಿಯು ವಾಲಿಯೊಡನೆ ಯುದ್ಧದ ಇಚ್ಛೆಯಿಂದ ಬಂದಿರುವ ನಿನ್ನಂತಹ ವೀರರದ್ದಾಗಿದೆ. ವಾನರರಾಜ ವಾಲಿಯ ತೇಜದಿಂದ ಇವರೆಲ್ಲರ ಅಂತ್ಯವಾಗಿದೆ.॥7॥
ಮೂಲಮ್ - 8
ಯುದ್ವಾಮೃತರಸಃ ಪೀತಸ್ತ್ವಯಾ ರಾವಣ ರಾಕ್ಷಸ ।
ತದಾ ವಾಲಿನಮಾಸಾದ್ಯ ತದಂತಂ ತವ ಜೀವಿತಮ್ ॥
ಅನುವಾದ
ರಾಕ್ಷಸ ರಾವಣನೇ! ನೀನು ಅಮೃತಪಾನ ಮಾಡಿದ್ದರೂ ವಾಲಿಯೊಡನೆ ಯುದ್ಧ ಮಾಡಿದಾಗ ಅದೇ ನಿನ್ನ ಜೀವನದ ಕೊನೆಯ ಗಳಿಗೆಯಾಗುವುದು.॥8॥
ಮೂಲಮ್ - 9
ಪಶ್ಯೇದಾನೀಂ ಜಗಚ್ಚಿತ್ರಮಿಮಂ ವಿಶ್ರವಸಃ ಸುತ ।
ಇದಂ ಮುಹೂರ್ತಂ ತಿಷ್ಠಸ್ವ ದುರ್ಲಭಂ ತೇ ಭವಿಷ್ಯತಿ ॥
ಅನುವಾದ
ವಿಶ್ರವಸ್ಸುಕುಮಾರ! ವಾಲಿಯು ಸಮಸ್ತ ಆಶ್ಚರ್ಯದ ಭಂಡಾರವಾಗಿದ್ದಾನೆ. ಈಗ ನೀನು ಅವನ ದರ್ಶನ ಮಾಡುವೆ. ಕೇವಲ ಇದೇ ಮುಹೂರ್ತದವರೆಗೆ ಪ್ರತೀಕ್ಷೆ ಮಾಡು, ಮತ್ತೆ ನಿನ್ನ ಜೀವನ ದುರ್ಲಭವಾದೀತು.॥9॥
ಮೂಲಮ್ - 10
ಅಥ ವಾ ತ್ವರಸೇ ಮರ್ತುಂ ಗಚ್ಛ ದಕ್ಷಿಣ ಸಾಗರಮ್ ।
ವಾಲಿನಂ ದ್ರಕ್ಷ್ಯಸೇ ತತ್ರ ಭೂಮಿಷ್ಠಮಿವ ಪಾವಕಮ್ ॥
ಅನುವಾದ
ಇಲ್ಲವೇ ನಿನಗೆ ಸಾಯಲು ಬಹಳ ಅವಸರವಿದ್ದರೆ ದಕ್ಷಿಣ ಸಮುದ್ರದ ತೀರಕ್ಕೆ ಹೋಗು. ಅಲ್ಲಿ ನಿನಗೆ ಪೃಥಿವಿಯಲ್ಲಿ ಸ್ಥಿತನಾದ ಯಜ್ಞೇಶ್ವರನಂತಹ ವಾಲಿಯ ದರ್ಶನವಾಗಬಹುದು.॥10॥
ಮೂಲಮ್ - 11
ಸ ತು ತಾರಂ ವಿನಿರ್ಭರ್ಸ್ಯ ರಾವಣೋ ಲೋಕರಾವಣಃ ।
ಪುಷ್ಪಕಂ ತತ್ಸಮಾರುಹ್ಯ ಪ್ರಯಯೌ ದಕ್ಷಿಣಾರ್ಣವಮ್ ॥
ಅನುವಾದ
ಆಗ ಜಗತ್ತನ್ನು ಅಳುವಂತೆ ಮಾಡುವ ರಾವಣನು ತಾರನನ್ನು ನಿಂದಿಸಿ ಪುಷ್ಪಕ ವಿಮಾನವನ್ನೇರಿ ದಕ್ಷಿಣ ಸಮುದ್ರದ ಕಡೆಗೆ ತೆರಳಿದನು.॥11॥
ಮೂಲಮ್ - 12
ತತ್ರ ಹೇಮಗಿರಿಪ್ರಖ್ಯಂ ತರುಣಾರ್ಕನಿಭಾನನಮ್ ।
ರಾವಣೋ ವಾಲಿನಂ ದೃಷ್ಟ್ವಾ ಸಂಧ್ಯೋಪಾಸನ ತತ್ಪರಮ್ ॥
ಅನುವಾದ
ಅಲ್ಲಿ ರಾವಣನು ಸುವರ್ಣಗಿರಿಯಂತಹ ಎತ್ತರವಿರುವ ವಾಲಿಯು ಸಂಧ್ಯೋಪಾಸನೆ ಮಾಡುತ್ತಿರುವುದನ್ನು ನೋಡಿದನು. ಅವನ ಮುಖವು ಪ್ರಭಾತ ಸೂರ್ಯನಂತೆ ಅರುಣ ಪ್ರಭೆಯಿಂದ ಹೊಳೆಯುತ್ತಿತ್ತು.॥12॥
ಮೂಲಮ್ - 13
ಪುಷ್ಪಕಾದವರುಹ್ಯಾಥ ರಾವಣೋಂಽಜನ ಸಂನಿಭಃ ।
ಗ್ರಹೀತುಂ ವಾಲಿನಂ ತೂರ್ಣಂ ನಿಃಶಬ್ದಪದಮವ್ರಜತ್ ॥
ಅನುವಾದ
ಅವನನ್ನು ನೋಡಿ ಕಾಡಿಗೆಯಂತೆ ಕಪ್ಪಾದ ರಾವಣನು ಪುಷ್ಪಕ ವಿಮಾನದಿಂದ ಇಳಿದು, ಕಾಲಿನ ಸಪ್ಪಳವಾಗದಂತೆ ಬೇಗ-ಬೇಗನೇ ವಾಲಿಯನ್ನು ಹಿಡಿಯಲು ಮುಂದರಿದನು.॥13॥
ಮೂಲಮ್ - 14
ಯದೃಚ್ಛಯಾ ತದಾ ದೃಷ್ಟೋ ವಾಲಿನಾಪಿ ಸ ರಾವಣಃ ।
ಪಾಪಾಭಿಪ್ರಾಯಕಂ ದೃಷ್ಟ್ವಾ ಚಕಾರ ನ ತು ಸಂಭ್ರಮಮ್ ॥
ಅನುವಾದ
ದೈವಯೋಗದಿಂದ ವಾಲಿಯೂ ರಾವಣನನ್ನು ನೋಡಿದರೂ ಅವನ ಪಾಪಪೂರ್ಣ ಅಭಿಪ್ರಾಯವನ್ನು ತಿಳಿದರೂ ಗಾಬರಿಗೊಳ್ಳಲಿಲ್ಲ.॥14॥
ಮೂಲಮ್ - 15
ಶಶಮಾಲಕ್ಷ್ಯ ಸಿಂಹೋ ವಾ ಪನ್ನಗಂ ಗರುಡೋ ಯಥಾ ।
ನ ಚಿಂತಯತಿ ತಂ ವಾಲೀ ರಾವಣಂ ಪಾಪ ನಿಶ್ಚಯಮ್ ॥
ಅನುವಾದ
ಸಿಂಹವು ಮೊಲವನ್ನು, ಗರುಡನು ಸರ್ಪವನ್ನು ನೋಡಿಯೂ ಅದರ ಪರಿವೆ ಮಾಡದಂತೆಯೇ ವಾಲಿಯು ಪಾಪಪೂರ್ಣ ವಿಚಾರವುಳ್ಳ ರಾವಣನನ್ನು ನೋಡಿಯೂ ಚಿಂತಿಸಲಿಲ್ಲ.॥15॥
ಮೂಲಮ್ - 16
ಜಿಘೃಕ್ಷಮಾಣ ಮಾಯಾಂತಂ ರಾವಣಂ ಪಾಪಚೇತಸಮ್ ।
ಕಕ್ಷಾವಲಂಬನಂ ಕೃತ್ವಾ ಗಮಿಷ್ಯೇ ತ್ರೀನ್ಮಹಾರ್ಣವಾನ್ ॥
ಅನುವಾದ
ಪಾಪಾತ್ಮಾ ರಾವಣನು ನನ್ನನ್ನು ಹಿಡಿಯಲು ಹತ್ತಿರ ಬಂದಾಗ ನಾನು ಇವನನ್ನು ಕಂಕುಳಲ್ಲಿ ಅದುಮಿ ಹಿಡಿದು, ಇವನನ್ನು ಎತ್ತಿಕೊಂಡೇ ಉಳಿದ ಮೂರು ಮಹಾಸಾಗರಗಳಿಗೆ ಹೋಗುವೆನು ಎಂದು ನಿಶ್ಚಯಿಸಿದನು.॥16॥
ಮೂಲಮ್ - 17
ದ್ರಕ್ಷ್ಯಂತ್ಯರಿಂ ಮಮಾಂಕಸ್ಥಂ ಸ್ರಂಸದೂರುಕರಾಂಬರಮ್ ।
ಲಂಬಮಾನಂ ದಶಗ್ರೀವಂ ಗರುಡಸ್ಯೇವ ಪನ್ನಗಮ್ ॥
ಅನುವಾದ
ಗರುಡನಿಂದ ಹಿಡಿಯಲ್ಪಟ್ಟ ಸರ್ಪದಂತೆ ಶತ್ರುವಾದ ಇವನು ನನ್ನ ಕಂಕುಳಿನಲ್ಲಿದ್ದು ನೇತಾಡುತ್ತಿರುವ ತೊಡೆ, ತೋಳು, ವಸ್ತ್ರಗಳಿಂದ ಕೂಡಿ ಜೋತು ಬಿದ್ದಿರುವುದನ್ನು ಲೋಕದ ಜನರು ನೋಡುವಂತಾಗಲಿ.॥17॥
ಮೂಲಮ್ - 18
ಇತ್ಯೇವಂ ಮತಿಮಾಸ್ಥಾಯ ವಾಲೀ ಮೌನಮುಪಾಸ್ಥಿತಃ ।
ಜಪನ್ವೈ ನೈಗಮಾನ್ಮಂತ್ರಾಂಸ್ತಸ್ಥೌ ಪರ್ವತರಾಡಿವ ॥
ಅನುವಾದ
ಹೀಗೆ ನಿಶ್ಚಯಿಸಿ ಮೌನವಾಗಿದ್ದ ವಾಲಿಯು ವೈದಿಕ ಮಂತ್ರಗಳನ್ನು ಜಪಿಸುತ್ತಾ ಗಿರಿರಾಜ ಸುಮೇರುವಿನಂತೆ ನಿಶ್ಚಲವಾಗಿ ಕುಳಿತ್ತಿದ್ದನು.॥18॥
ಮೂಲಮ್ - 19
ತಾವನ್ಯೋನ್ಯಂ ಜಿಘೃಕ್ಷಂತೌ ಹರಿರಾಕ್ಷಸ ಪಾರ್ಥಿವೌ ।
ಪ್ರಯತ್ನವಂತೌ ತತ್ಕರ್ಮ ಈಹತುರ್ಬಲದರ್ಪಿತೌ ॥
ಅನುವಾದ
ಹೀಗೆ ಬಲಾಭಿಮಾನದಿಂದ ತುಂಬಿದ ಆ ವಾನರರಾಜ ಮತ್ತು ರಾಕ್ಷಸರಾಜ ಇಬ್ಬರೂ ಪರಸ್ಪರ ಹಿಡಿಯಲು ಬಯಸುತ್ತಿದ್ದರು. ಇಬ್ಬರೂ ತಮ್ಮ ಕಾರ್ಯಸಾಧನೆಗಾಗಿ ಪ್ರಯತ್ನಶೀಲರಾಗಿದ್ದರು.॥19॥
ಮೂಲಮ್ - 20
ಹಸ್ತಗ್ರಾಹಂ ತು ತಂ ಮತ್ವಾ ಪಾದ ಶಬ್ದೇನ ರಾವಣಮ್ ।
ಪರಾಙ್ಮುಖೋಽಪಿ ಜಗ್ರಾಹ ವಾಲೀ ಸರ್ಪಮಿವಾಂಡಜಃ ॥
ಅನುವಾದ
ರಾವಣನ ಕಾಲಿನ ಸಪ್ಪಳದಿಂದ ರಾವಣನು ಮುಂದರಿದು ನನ್ನನ್ನು ಹಿಡಿಯಲು ಬಯಸುತ್ತಿರುವ ನೆಂದು ತಿಳಿದ ವಾಲಿಯು ಹಿಂದೆ ನೋಡದೆಯೇ ಗರುಡನು ಸರ್ಪವನ್ನು ಹಿಡಿಯುವಂತೆ ಹಿಡಿದುಕೊಂಡನು.॥20॥
ಮೂಲಮ್ - 21
ಗ್ರಹೀತುಕಾಮಂ ತಂ ಗೃಹ್ಯ ರಕ್ಷಸಾಮೀಶ್ವರಂ ಹರಿಃ ।
ಖಮುತ್ಪಪಾತ ವೇಗೇನ ಕೃತ್ವಾ ಕಕ್ಷಾವಲಂಬಿನಮ್ ॥
ಅನುವಾದ
ಹಿಡಿಯುವ ಇಚ್ಛೆಯುಳ್ಳ ರಾಕ್ಷಸರಾಜನನ್ನು ವಾಲಿಯೇ ಸ್ವತಃ ಹಿಡಿದು ತನ್ನ ಬಗಲಲ್ಲಿ ಅದುಮಿ ಹಿಡಿದುಕೊಂಡು ವೇಗವಾಗಿ ಆಕಾಶಕ್ಕೆ ನೆಗೆದನು.॥21॥
ಮೂಲಮ್ - 22
ತಂ ಚ ಪೀಡಯಮಾನಂ ತು ವಿತುದಂತಂ ನಖೈರ್ಮುಹುಃ ।
ಜಹಾರ ರಾವಣಂ ವಾಲೀ ಪವನಸ್ತೋಯದಂ ಯಥಾ ॥
ಅನುವಾದ
ರಾವಣನು ಉಗುರುಗಳಿಂದ ಪದೇ-ಪದೇ ವಾಲಿಯನ್ನು ಪರಚುತ್ತಿದ್ದರೂ, ಗಾಳಿಯು ಮೋಡಗಳನ್ನು ಹಾರಿಸಿಕೊಂಡು ಹೋಗುವಂತೆ ವಾಲಿಯು ರಾವಣನನ್ನು ಕಂಕುಳಲ್ಲಿಟ್ಟುಕೊಂಡು ತಿರುಗಾಡತೊಡಗಿದನು.॥22॥
ಮೂಲಮ್ - 23
ಅಥ ತೇ ರಾಕ್ಷಸಾಮಾತ್ಯಾ ಹ್ರಿಯಮಾಣೇ ದಶಾನನೇ ।
ಮುಮೋಕ್ಷಯಿಷವೋ ವಾಲಿಂ ರವಮಾಣಾ ಅಭಿದ್ರುತಾಃ ॥
ಅನುವಾದ
ಹೀಗೆ ರಾವಣನು ಅಪಹರಿಸಲ್ಪಟ್ಟಾಗ ಅವನ ಮಂತ್ರಿಗಳು ವಾಲಿಯಿಂದ ಅವನನ್ನು ಬಿಡಿಸಲು ಬೊಬ್ಬಿಡುತ್ತಾ ಅವನ ಹಿಂದೆ-ಹಿಂದೆ ಓಡಿದರು.॥23॥
ಮೂಲಮ್ - 24
ಅನ್ವೀಯಮಾನಸ್ತೈರ್ವಾಲೀ ಭ್ರಾಜತೇಂಽಬರಮಧ್ಯಗಃ ।
ಅನ್ವೀಯಮಾನೋ ಮೇಘೌಘೈರಂಬರಸ್ಥ ಇವಾಂಶುಮಾನ್ ॥
ಅನುವಾದ
ಮುಂದೆ ವಾಲಿಯು ಹೋಗುತ್ತಿದ್ದರೆ ಹಿಂದೆ-ಹಿಂದೆ ರಾಕ್ಷಸರು ಬರುತ್ತಿದ್ದರು. ಇಂತಹ ಸ್ಥಿತಿಯಲ್ಲಿ ಆಕಾಶದ ಮಧ್ಯಕ್ಕೆ ತಲುಪಿದಾಗ ವಾಲಿಯು ಮೇಘಮಂಡಲದಿಂದ ಅನುಸರಿಸಲ್ಪಡುವ ಸೂರ್ಯನಂತೆ ಶೋಭಿಸುತ್ತಿದ್ದನು.॥24॥
ಮೂಲಮ್ - 25
ತೇಶಕ್ನುವಂತಃ ಸಂಪ್ರಾಪ್ತುಂ ವಾಲಿನಂ ರಾಕ್ಷಸೋತ್ತಮಾಃ ।
ತಸ್ಯ ಬಾಹೂರುವೇಗೇನ ಪರಿಶ್ರಾಂತಾ ವ್ಯವಸ್ಥಿತಾಃ ॥
ಅನುವಾದ
ಆ ಶ್ರೇಷ್ಠ ರಾಕ್ಷಸರು ಬಹಳ ಪ್ರಯತ್ನಿಸಿದರೂ ವಾಲಿಯ ಬಳಿಗೆ ತಲುಪದಾದರು. ಅವನ ಭುಜ, ತೊಡೆಗಳ ವೇಗದಿಂದ ಉಂಟಾದ ವಾಯುವಿನ ಹೊಡೆತಕ್ಕೆ ಬಳಲಿ ಅವರು ನಿಂತುಬಿಟ್ಟರು.॥25॥
ಮೂಲಮ್ - 26
ವಾಲಿಮಾರ್ಗಾದಪಾಕ್ರಾಮನ್ ಪರ್ವತೇಂದ್ರಾಪಿ ಗಚ್ಛತಃ ।
ಕಿಂ ಪುನರ್ಜೀವನಪ್ರೇಪ್ಸುರ್ಬಿಭ್ರದ್ವೈ ಮಾಂಸಶೋಣಿತಮ್ ॥
ಅನುವಾದ
ವಾಲಿಯ ಮಾರ್ಗದಿಂದ ಹಾರಾಡುತ್ತಿರುವ ಪರ್ವತಗಳೂ ದೂರಾಗುತ್ತಿದ್ದವು. ಮತ್ತೆ ರಕ್ತ-ಮಾಂಸಮಯ ಶರೀರಧಾರೀ ಪ್ರಾಣಿ ಅವನ ದಾರಿಯಿಂದ ದೂರ ಉಳಿಯುವುದರಲ್ಲಿ ಹೇಳುವುದೇನಿದೆ.॥26॥
ಮೂಲಮ್ - 27
ಅಪಕ್ಷಿಗಣಸಂಪಾತಾನ್ ವಾನರೇಂದ್ರೋ ಮಹಾಜವಃ ।
ಕ್ರಮಶಃ ಸಾಗರಾನ್ಸರ್ವಾನ್ ಸಂಧ್ಯಾಕಾಲಮವಂದತ ॥
ಅನುವಾದ
ವಾಲಿಯು ಸಮುದ್ರಗಳವರೆಗೆ ತಲುಪುವಷ್ಟರಲ್ಲಿ ತೀವ್ರಗಾಮಿ ಪಕ್ಷಿಗಳೂ ತಲುಪುತ್ತಿರಲಿಲ್ಲ. ಆ ಮಹಾವೇಗಶಾಲೀ ವಾನರರಾಜನು ಕ್ರಮವಾಗಿ ಎಲ್ಲ ಸಮುದ್ರ ತೀರಗಳಲ್ಲಿ ಹೋಗಿ ಸಂಧ್ಯಾವಂದನೆ ಮಾಡಿದನು.॥27॥
ಮೂಲಮ್ - 28
ಸಂಪೂಜ್ಯಮಾನೋ ಯಾತಸ್ತು ಖಚರೈಃ ಖಚರೋತ್ತಮಃ ।
ಪಶ್ಚಿಮಂ ಸಾಗರಂ ವಾಲೀ ಆಜಗಾಮ ಸ ರಾವಣಃ ॥
ಅನುವಾದ
ಸಮುದ್ರಗಳ ಯಾತ್ರೆ ಮಾಡುತ್ತಾ ಆಕಾಶ ಚಾರಿಗಳಲ್ಲಿ ಶ್ರೇಷ್ಠವಾಲಿಯನ್ನು ಎಲ್ಲ ಖೇಚರ ಪ್ರಾಣಿಗಳು ಪೂಜಿಸುತ್ತಾ ಪ್ರಶಂಸಿಸುತ್ತಿದ್ದರು. ಅವನು ರಾವಣನನ್ನು ಬಗಲಲ್ಲಿ ಅದುಮಿ ಹಿಡಿದು ಪಶ್ಚಿಮ ಸಮುದ್ರ ತೀರಕ್ಕೆ ಬಂದನು.॥28॥
ಮೂಲಮ್ - 29
ತಸ್ಮಿನ್ಸಂಧ್ಯಾಮುಪಾಸಿತ್ವಾ ಸ್ನಾತ್ವಾ ಜಪ್ತ್ವಾ ಚ ವಾನರಃ ।
ಉತ್ತರಂ ಸಾಗರಂ ಪ್ರಾಯಾದ್ವಹಮಾನೋ ದಶಾನನಮ್ ॥
ಅನುವಾದ
ಅಲ್ಲಿ ಸ್ನಾನ, ಸಂಧ್ಯೋಪಾಸನೆ, ಜಪ ಮಾಡಿ ಆ ವಾನರ ವೀರನು ದಶಾನನನನ್ನು ಎತ್ತಿಕೊಂಡೇ ಉತ್ತರ ಸಮುದ್ರ ತಡಿಗೆ ಬಂದನು.॥29॥
ಮೂಲಮ್ - 30
ಬಹುಯೋಜನ ಸಾಹಸ್ರಂ ವಹಮಾನೋ ಮಹಾಹರಿಃ ।
ವಾಯುವಚ್ಚ ಮನೋವಚ್ಚ ಜಗಾಮ ಸಹ ಶತ್ರುಣಾ ॥
ಅನುವಾದ
ವಾಯು, ಮನಸ್ಸಿನಂತೆ ವೇಗವುಳ್ಳ ಆ ಮಹಾವಾನರ ವಾಲಿಯು ಎಷ್ಟೋ ಸಾವಿರ ಯೋಜನ ರಾವಣನನ್ನು ಹೊತ್ತುಕೊಂಡೇ ಇದ್ದನು. ಮತ್ತೆ ತನ್ನ ಶತ್ರುವಿನೊಂದಿಗೆ ಅವನು ಉತ್ತರ ಸಮುದ್ರದ ತೀರಕ್ಕೆ ಬಂದನು.॥30॥
ಮೂಲಮ್ - 31
ಉತ್ತರೇ ಸಾಗರೇ ಸಂಧ್ಯಾಮುಪಾಸಿತ್ವಾ ದಶಾನನಮ್ ।
ವಹಮಾನೋಽಗಮದ್ವಾಲೀ ಪೂರ್ವಂ ವೈ ಸ ಮಹೋದಧಿಮ್ ॥
ಅನುವಾದ
ಉತ್ತರ ಸಾಗರ ತೀರದಲ್ಲಿ ಸಂಧ್ಯೋಪಾಸನೆ ಮಾಡಿ ದಶಾನನನನ್ನು ಹೊತ್ತುಕೊಂಡೇ ವಾಲಿಯು ಪೂರ್ವದಿಕ್ಕಿನ ಮಹಾಸಾಗರ ತಡಿಗೆ ಬಂದನು.॥31॥
ಮೂಲಮ್ - 32
ತತ್ರಾಪಿ ಸಂಧ್ಯಾಮನ್ವಾಸ್ಯ ವಾಸವಿಃ ಸ ಹರೀಶ್ವರಃ ।
ಕಿಷ್ಕಿಂಧಾಮಭಿತೋ ಗೃಹ್ಯ ರಾವಣಂ ಪುನರಾಗಮತ್ ॥
ಅನುವಾದ
ಅಲ್ಲಿಯೂ ಸಂಧ್ಯೋಪಾಸನೆ ಮುಗಿಸಿ ಆ ಇಂದ್ರಪುತ್ರ ವಾನರರಾಜ ವಾಲಿಯು ದಶಮುಖ ರಾವಣನನ್ನು ಬಗಲಲ್ಲಿ ಅದುಮಿ ಹಿಡಿದುಕೊಂಡೇ ಕಿಷ್ಕಿಂಧೆಯ ಬಳಿಗೆ ಬಂದನು.॥32॥
ಮೂಲಮ್ - 33
ಚತುರ್ಷ್ವಪಿ ಸಮುದ್ರೇಷು ಸಂಧ್ಯಾಮನ್ವಾಸ್ಯ ವಾನರಃ ।
ರಾವಣೋದ್ವಹನಶ್ರಾಂತಃ ಕಿಷ್ಕಿಂಧೋಪ ವನೇಽಪತತ್ ॥
ಅನುವಾದ
ಹೀಗೆ ನಾಲ್ಕೂ ಸಮುದ್ರಗಳಲ್ಲಿ ಸಂಧ್ಯೋಪಾಸನಾ ಕಾರ್ಯಮುಗಿಸಿ ರಾವಣನನ್ನು ಹೊತ್ತದ್ದರಿಂದ ಬಳಲಿದ ವಾನರರಾಜ ವಾಲಿಯು ಕಿಷ್ಕಿಂಧೆಯ ಉಪವನಕ್ಕೆ ಬಂದನು.॥33॥
ಮೂಲಮ್ - 34
ರಾವಣಂ ತು ಮುಮೋಚಾಥ ಸ್ವಕಕ್ಷಾತ್ಕಪಿಸತ್ತಮಃ ।
ಕುತಸ್ತ್ವಮಿತಿ ಚೋವಾಚ ಪ್ರಹಸನ್ ರಾವಣಂ ಮಹುಃ ॥
ಅನುವಾದ
ಅಲ್ಲಿಗೆ ಹೋಗಿ ಕಪಿಶ್ರೇಷ್ಠನು ರಾವಣನನ್ನು ಕಂಕುಳ ದಿಂದ ಬಿಟ್ಟು, ಪದೇ-ಪದೇ ನಗುತ್ತಾ - ಅಯ್ಯಾ! ನೀನು ಎಲ್ಲಿಂದ ಬಂದಿರುವೆ? ಎಂದು ಕೇಳಿದನು.॥34॥
ಮೂಲಮ್ - 35
ವಿಸ್ಮಯಂ ತು ಮಹದ್ಗತ್ವಾ ಶ್ರಮಲೋಲ ನಿರೀಕ್ಷಣಃ ।
ರಾಕ್ಷಸೇಂದ್ರೋ ಹರೀಂದ್ರಂ ತಮಿದಂ ವಚನಮಬ್ರವೀತ್ ॥
ಅನುವಾದ
ಬಳಲಿಕೆಯಿಂದ ರಾವಣನ ಕಣ್ಣುಗಳು ಚಂಚಲವಾಗಿದ್ದವು. ವಾಲಿಯ ಈ ಅದ್ಭುತ ಪರಾಕ್ರಮವನ್ನು ನೋಡಿ ಅವನಿಗೆ ಆಶ್ಚರ್ಯವಾಗಿ ಆ ರಾಕ್ಷಸರಾಜನು ವಾನರರಾಜನಲ್ಲಿ ಹೀಗೆ ಹೇಳಿದನು.॥35॥
ಮೂಲಮ್ - 36
ವಾನರೇಂದ್ರ ಮಹೇಂದ್ರಾಭ ರಾಕ್ಷಸೇಂದ್ರೋಽಸ್ಮಿ ರಾವಣಃ ।
ಯುದ್ಧೇಪ್ಸುರಿಹ ಸಂಪ್ರಾಪ್ತಃ ಸ ಚಾದ್ಯಾಸಾದಿತಸ್ತ್ವಯಾ ॥
ಅನುವಾದ
ಮಹೇಂದ್ರನಂತೆ ಪರಾಕ್ರಮೀ ವಾನರೇಂದ್ರನೇ! ನಾನು ರಾಕ್ಷಸೇಶ್ವರ ರಾವಣನಾಗಿದ್ದೇನೆ. ಯುದ್ಧದ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೆ. ಆ ಯುದ್ಧವು ನಿನ್ನಿಂದ ಸಿಕ್ಕಿಯೇ ಹೋಯಿತು.॥36॥
ಮೂಲಮ್ - 37
ಅಹೋ ಬಲಮಹೋ ವೀರ್ಯಮಹೋ ಗಾಂಭೀರ್ಯಮೇವ ಚ ।
ಯೇನಾಹಂ ಪಶುವದ್ಗೃಹ್ಯ ಭ್ರಾಮಿತಶ್ಚತುರೋಽರ್ಣವಾನ್ ॥
ಅನುವಾದ
ಅಯ್ಯಾ! ನಿನ್ನಲ್ಲಿ ಅದ್ಭುತ ಬಲ, ಪರಾಕ್ರಮವಿದೆ, ಆಶ್ಚರ್ಯಜನಕ ಗಂಭೀರತೆ ಇದೆ. ನೀನು ನನ್ನನ್ನು ಪಶುವಿನಂತೆ ಹಿಡಿದುಕೊಂಡು ನಾಲ್ಕು ಸಮುದ್ರಗಳನ್ನು ಸುತ್ತಾಡಿಸಿದೆ.॥37॥
ಮೂಲಮ್ - 38
ಏವಮಶ್ರಾಂತವದ್ವೀರ ಶೀಘ್ರಮೇವ ಚ ವಾನರ ।
ಮಾಂ ಚೈವೋದ್ವಹಮಾನಸ್ತು ಕೋನ್ಯೋ ವೀರೋ ಭವಿಷ್ಯತಿ ॥
ಅನುವಾದ
ವಾನರವೀರನೇ! ನೀನಲ್ಲದೆ ನನ್ನನ್ನು ಹೀಗೆ ಆಯಾಸವಿಲ್ಲದೆ ಶೀಘ್ರವಾಗಿ ಹೊರಬಲ್ಲನು ಯಾವ ಶೂರವೀರ ಬೇರೆ ಇರಬಹುದು.॥38॥
ಮೂಲಮ್ - 39
ತ್ರಯಾಣಾಮೇವ ಭೂತಾನಾಂ ಗತಿರೇಷಾ ಪ್ಲವಂಗಮ ।
ಮನೋಽನಿಲ ಸುಪರ್ಣಾನಾಂ ತವ ಚಾತ್ರ ನ ಸಂಶಯಃ ॥
ಅನುವಾದ
ವಾನರ ರಾಜನೇ! ಇಂತಹ ಗತಿಯು ಮನಸ್ಸು, ವಾಯು, ಗರುಡ ಈ ಮೂವರಲ್ಲೇ ಕೇಳಲಾಗುತ್ತದೆ. ಈ ಜಗತ್ತಿನಲ್ಲಿ ನಾಲ್ಕನೆಯವ ಇಂತಹ ತೀವ್ರ ವೇಗಶಾಲಿ ನಿಃಸಂದೇಹವಾಗಿ ನೀನೇ ಆಗಿರುವೆ.॥39॥
ಮೂಲಮ್ - 40
ಸೋಽಹಂ ದೃಷ್ಟಬಲಸ್ತುಭ್ಯಮಿಚ್ಛಾಮಿ ಹರಿಪುಂಗವ ।
ತ್ವಯಾ ಸಹ ಚಿರಂ ಸಖ್ಯಂ ಸುಸ್ನಿಗ್ಧಂ ಪಾವಕಾಗ್ರತಃ ॥
ಅನುವಾದ
ಕಪಿಶ್ರೇಷ್ಠನೇ! ನಾನು ನಿನ್ನ ಬಲ ನೋಡಿದೆ. ಈಗ ನಾನು ಅಗ್ನಿಸಾಕ್ಷಿಯಾಗಿಸಿ ನಿನ್ನೊಂದಿಗೆ ಸದಾಕಾಲ ಸ್ನೇಹಪೂರ್ಣ ಮಿತ್ರತೆಯನ್ನು ಬಯಸುತ್ತಿದ್ದೇನೆ.॥40॥
ಮೂಲಮ್ - 41
ದಾರಾಃ ಪುತ್ರಾಃ ಪುರಂ ರಾಷ್ಟ್ರಂ ಭೋಗಾಚ್ಛಾದನ ಭೋಜನಮ್ ।
ಸರ್ವಮೇವಾಭಿಭಕ್ತಂ ನೌ ಭವಿಷ್ಯತಿ ಹರೀಶ್ವರ ॥
ಅನುವಾದ
ವಾನರ ರಾಜನೇ! ಪತ್ನೀ, ಪುತ್ರ, ನಗರ, ರಾಜ್ಯ, ಭೋಗ, ವಸ್ತ್ರ, ಭೋಜನ ಇವೆಲ್ಲ ವಸ್ತುಗಳಲ್ಲಿ ನಮ್ಮಿಬ್ಬರಿಗೂ ಸಮಾನ ಅಧಿಕಾರವಿರುವುದು.॥41॥
ಮೂಲಮ್ - 42
ತತಃ ಪ್ರಜ್ವಾಲಯಿತ್ವಾಗ್ನಿಂ ತಾವುಭೌ ಹರಿರಾಕ್ಷಸೌ ।
ಭ್ರಾತೃತ್ವಮುಪಸಂಪನ್ನೌ ಪರಿಷ್ವಜ್ಯ ಪರಸ್ಪರಮ್ ॥
ಅನುವಾದ
ಆಗ ವಾನರರಾಜ ಮತ್ತು ರಾಕ್ಷಸರಾಜ ಇಬ್ಬರೂ ಅಗ್ನಿ ಪ್ರಜ್ವಲಿಸಿ ಪರಸ್ಪರ ಆಲಿಂಗಿಸಿಕೊಂಡು ತಮ್ಮಲ್ಲಿ ಸೋದರತ್ವ ಸಂಬಂಧ ಮಾಡಿಕೊಂಡರು.॥42॥
ಮೂಲಮ್ - 43
ಅನ್ಯೋನ್ಯಂ ಲಂಬಿತಕರೌ ತತಸ್ತೌ ಹರಿರಾಕ್ಷಸೌ ।
ಕಿಷ್ಕಿಂಧಾಂ ವಿಶತುರ್ಹೃಷ್ಟೌ ಸಿಂಹೌ ಗಿರಿಗುಹಾಮಿವ ॥
ಅನುವಾದ
ಮತ್ತೆ ಅವರಿಬ್ಬರೂ ಒಬ್ಬರು ಮತ್ತೊಬ್ಬರ ಕೈ ಹಿಡಿದುಕೊಂಡು ಸಂತೋಷವಾಗಿ ಕಿಷ್ಕಿಂಧಾಪುರಿಗೆ, ಎರಡು ಸಿಂಹಗಳು ಯಾರದೋ ಗುಹೆಯನ್ನು ಪ್ರವೇಶಿಸುವಂತೆ ಒಳಹೊಕ್ಕರು.॥43॥
ಮೂಲಮ್ - 44
ಸ ತತ್ರ ಮಾಸಮುಷಿತಃ ಸುಗ್ರೀವ ಇವ ರಾವಣಃ ।
ಅಮಾತ್ಯೈರಾಗತೈರ್ನೀತಸ್ತ್ರೈಲೋಕ್ಯೋತ್ಸಾದನಾರ್ಥಿಭಿಃ ॥
ಅನುವಾದ
ರಾವಣನು ಅಲ್ಲಿ ಸುಗ್ರೀವನಂತೆ ಸಮ್ಮಾನಿತನಾಗಿ ತಿಂಗಳೊಂದು ಉಳಿದನು. ಮತ್ತೆ ಮೂರು ಲೋಕಗಳನ್ನು ಕಿತ್ತು ಬಿಸಾಡುವ ಇಚ್ಛೆಯುಳ್ಳ ಅವನ ಮಂತ್ರಿಗಳು ಬಂದು ಕರೆದುಕೊಂಡು ಹೋದರು.॥44॥
ಮೂಲಮ್ - 45
ಏವಮೇತತ್ಪುರಾ ವೃತ್ತಂ ವಾಲಿನಾ ರಾವಣಃ ಪ್ರಭೋ ।
ಧರ್ಷಿತಶ್ಚ ವೃತಶ್ಚಾಪಿ ಭ್ರಾತಾ ಪಾವಕ ಸಂನಿಧೌ ॥
ಅನುವಾದ
ಪ್ರಭೋ! ಹೀಗೆ ಈ ಘಟನೆ ಮೊದಲು ಘಟಿಸಿತ್ತು. ವಾಲಿಯು ರಾವಣನನ್ನು ಸೋಲಿಸಿ, ಮತ್ತೆ ಅಗ್ನಿಸಾಕ್ಷಿಯಾಗಿಸಿ ಅವನನ್ನು ತನ್ನ ಸಹೋದರನನ್ನಾಗಿಸಿಕೊಂಡನು.॥45॥
ಮೂಲಮ್ - 46
ಬಲಮಪ್ರತಿಮಂ ರಾಮ ವಾಲಿನೋಽಭವದುತ್ತಮಮ್ ।
ಸೋಽಪಿ ತ್ವಯಾ ವಿನಿರ್ದಗ್ಧಃ ಶಲಭೋ ವಹ್ನಿನಾ ಯಥಾ ॥
ಅನುವಾದ
ಶ್ರೀರಾಮ! ವಾಲಿಯಲ್ಲಿ ಅನುಪಮ ಹೆಚ್ಚಾದ ಬಲವಿತ್ತು. ಆದರೆ ನೀನು ಅವನನ್ನು ತನ್ನ ಬಾಣಾಗ್ನಿಯಿಂದ ಬೆಂಕಿಯು ಪತಂಗವನ್ನು ಸುಟ್ಟು ಹಾಕುವಂತೆ ದಗ್ಧಗೊಳಿಸಿರುವೆ.॥46॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥34॥