०३३ रावण-मोचनम्

[ಮೂವತ್ತಮೂರನೆಯ ಸರ್ಗ]

ಭಾಗಸೂಚನಾ

ಪುಲಸ್ತ್ಯನು ರಾವಣನನ್ನು ಅರ್ಜುನನ ಬಂಧನದಿಂದ ಬಿಡಿಸಿದುದು

ಮೂಲಮ್ - 1

ರಾವಣಗ್ರಹಣಂ ತತ್ತು ವಾಯುಗ್ರಹಣ ಸಂನಿಭಮ್ ।
ತತಃ ಪುಲಸ್ತ್ಯಃ ಶುಶ್ರಾವ ಕಥಿತಂ ದಿವಿ ದೈವತೈಃ ॥

ಅನುವಾದ

ಗಾಳಿಯನ್ನು ಸೆರೆಹಿಡಿದಂತೆ ಕಷ್ಟಸಾಧ್ಯವಾದ ರಾವಣನು ಅರ್ಜುನನಲ್ಲಿ ಕೈಸೆರೆಯಾದ ವಾರ್ತೆಯು ದೇವತೆಗಳಿಂದ ಪುಲಸ್ತ್ಯಮುನಿಗೂ ತಿಳಿಯಿತು.॥1॥

ಮೂಲಮ್ - 2

ತತಃ ಪುತ್ರಕೃತ ಸ್ನೇಹಾತ್ ಕಂಪಮಾನೋ ಮಹಾಧೃತಿಃ ।
ಮಾಹಿಷ್ಮತೀಪತಿಂ ದ್ರಷ್ಟುಮಾಜಗಾಮ ಮಹಾನೃರ್ಷಿಃ ॥

ಅನುವಾದ

ಆ ಮಹರ್ಷಿ ಮಹಾಧೈರ್ಯಶಾಲಿಯಾಗಿದ್ದರೂ ಸಂತಾನದ ಕುರಿತು ಇರುವ ಸ್ನೇಹದಿಂದಾಗಿ ಕೃಪಾಪರವಶರಾದರು ಹಾಗೂ ಮಾಹಿಷ್ಮತಿ ರಾಜನಿಗೆ ಭೆಟ್ಟಿಯಾಗಲು ಭೂತಳಕ್ಕೆ ಬಂದರು.॥2॥

ಮೂಲಮ್ - 3

ಸ ವಾಯುಮಾರ್ಗಮಾಸ್ಥಾಯ ವಾಯುತುಲ್ಯಗತಿರ್ದ್ವಿಜಃ ।
ಪುರೀಂ ಮಾಹಿಷ್ಮತೀಂ ಪ್ರಾಪ್ತೋ ಮನಃ ಸಂಪಾತವಿಕ್ರಮಃ ॥

ಅನುವಾದ

ವಾಯುವೇಗವುಳ್ಳ, ಮನೋಗತಿಯಂತೆ ಆ ಬ್ರಹ್ಮರ್ಷಿಯು ಆಕಾಶಮಾರ್ಗದಿಂದ ಮಾಹೀಷ್ಮತೀ ಪುರಿಗೆ ಬಂದರು.॥3॥

ಮೂಲಮ್ - 4

ಸೋಽಮರಾವತಿ ಸಂಕಾಶಾಂ ಹೃಷ್ಟಪುಷ್ಟ ಜನಾವೃತಾಮ್ ।
ಪ್ರವಿವೇಶ ಪುರೀಂ ಬ್ರಹ್ಮಾ ಇಂದ್ರಸ್ಯೇವಾಮರಾವತೀಮ್ ॥

ಅನುವಾದ

ಬ್ರಹ್ಮದೇವರು ಇಂದ್ರನ ಅಮರಾವತಿಯನ್ನು ಪ್ರವೇಶಿಸುವಂತೆ ಪುಲಸ್ತ್ಯರು ಹೃಷ್ಟ-ಪುಷ್ಟ ಜನರಿಂದ ತುಂಬಿದ, ಅಮರಾವತಿಯಂತೆ ಶೋಭಾಸಂಪನ್ನ ಮಾಹಿಷ್ಮತೀ ನಗರಿಯನ್ನು ಪ್ರವೇಶಿಸಿದರು.॥4॥

ಮೂಲಮ್ - 5

ಪಾದಚಾರಮಿವಾದಿತ್ಯಂ ನಿಷ್ಪತಂತಂ ಸುದುರ್ದೃಶಮ್ ।
ತತಸ್ತೇ ಪ್ರತ್ಯಭಿಜ್ಞಾಯ ಅರ್ಜುನಾಯ ನ್ಯವೇದಯನ್ ॥

ಅನುವಾದ

ಆಕಾಶದಿಂದ ಇಳಿದು ಕಾಲ್ನಡಿಗೆಯಲ್ಲಿ ಬರುತ್ತಿದ್ದ ಅವರು ಸೂರ್ಯನಂತೆ ಕಂಡು ಬಂದರು. ಅತ್ಯಂತ ತೇಜದಿಂದಾಗಿ ಅವರನ್ನು ನೋಡುವುದೂ ಕಠಿಣವಾಗಿತ್ತು. ಅರ್ಜುನನ ಸೇವಕರು ಅವರನ್ನು ಗುರುತಿಸಿ, ರಾಜಾ ಅರ್ಜುನನಲ್ಲಿ ಅವರ ಶುಭಾಗಮನವನ್ನು ತಿಳಿಸಿದರು.॥5॥

ಮೂಲಮ್ - 6

ಪುಲಸ್ತ್ಯ ಇತಿ ವಿಜ್ಞಾಯ ವಚನಾದ್ಧೈಹಯಾಧಿಪಃ ।
ಶಿರಸ್ಯಂಜಲಿಮಾಧಾಯ ಪ್ರತ್ಯುದ್ಗಚ್ಛತ್ ತಪಸ್ವಿನಮ್ ॥

ಅನುವಾದ

ಸೇವಕರು ಹೇಳಿದಾಗ ಹೈಹಯರಾಜನಿಗೆ ಪುಲಸ್ತ್ಯರು ಆಗಮಿಸಿರುವರು ಎಂದು ತಿಳಿದಾಗ, ತಲೆಯ ಮೇಲೆ ಕೃತಾಂಜಲಿಯಾಗಿ ಮುನಿಯ ಸ್ವಾಗತಕ್ಕೆ ಮುಂದಾದನು.॥6॥

ಮೂಲಮ್ - 7

ಪುರೋಹಿತೋಽಸ್ಯ ಗೃಹ್ಯಾರ್ಘ್ಯಂ ಮಧುಪರ್ಕಂ ತಥೈವ ಚ ।
ಪುರಸ್ತಾತ್ ಪ್ರಯಯೌ ರಾಜ್ಞಃ ಶಕ್ರಸ್ಯೇವ ಬೃಹಸ್ಪತಿಃ ॥

ಅನುವಾದ

ಅರ್ಜುನರಾಜನ ಪುರೋಹಿತರು ಅರ್ಘ್ಯ, ಮಧುಪರ್ಕಾದಿ ಹಿಡಿದುಕೊಂಡು ಅವನ ಮುಂದೆ-ಮುಂದೆ ಇಂದ್ರನ ಎದುರಿಗೆ ಬೃಹಸ್ಪತಿಗಳು ನಡೆದಂತೆ ನಡೆಯುತ್ತಿದ್ದರು.॥7॥

ಮೂಲಮ್ - 8

ತತಸ್ತಮೃಷಿಮಾಯಾಂತಮುದ್ಯಂತಮಿವ ಭಾಸ್ಕರಮ್ ।
ಅರ್ಜುನೋ ದೃಶ್ಯ ಸಂಭ್ರಾಂತೋ ವವಂದೇಂದ್ರ ಇವೇಶ್ವರಮ್ ॥

ಅನುವಾದ

ಅಲ್ಲಿಗೆ ಬಂದಿರುವ ಮಹರ್ಷಿಗಳು ಉದಯಿಸುವ ಸೂರ್ಯನಂತೆ ತೇಜಸ್ವಿಯಾಗಿ ಕಂಡು ಬರುತ್ತಿದ್ದರು. ಅವರನ್ನು ನೋಡಿ ರಾಜಾ ಅರ್ಜುನನು ಚಕಿತನಾದನು. ಅವನು ಬ್ರಹ್ಮರ್ಷಿಯ ಚರಣಗಳಲ್ಲಿ ಆದರಪೂರ್ವಕ ಇಂದ್ರನು ಬ್ರಹ್ಮದೇವರಿಗೆ ತಲೆಬಾಗುವಂತೆ ಪ್ರಣಾಮಮಾಡಿದನು.॥8॥

ಮೂಲಮ್ - 9

ಸ ತಸ್ಯ ಮಧುಪರ್ಕಂ ಗಾಂ ಪಾದ್ಯಮರ್ಘ್ಯಂ ನಿವೇದ್ಯ ಚ ।
ಪುಲಸ್ತ್ಯಮಾಹ ರಾಜೇಂದ್ರೋ ಹರ್ಷಗದ್ಗದಯಾ ಗಿರಾ ॥

ಅನುವಾದ

ಬ್ರಹ್ಮರ್ಷಿಗಳಿಗೆ ಪಾದ್ಯ, ಅರ್ಘ್ಯ, ಮಧುಪರ್ಕ, ಗೋವನ್ನು ಸಮರ್ಪಿಸಿ ರಾಜಾಧಿರಾಜ ಅರ್ಜುನನು ಹರ್ಷ ಗದ್ಗದ ವಾಣಿಯಿಂದ ಪುಲಸ್ತ್ಯರಲ್ಲಿ ಹೇಳಿದನು.॥9॥

ಮೂಲಮ್ - 10

ಅದ್ಯೈವಮಮರಾವತ್ಯಾ ತುಲ್ಯಾ ಮಾಹಿಷ್ಮತೀ ಕೃತಾ ।
ಅದ್ಯಾಹಂ ತು ದ್ವಿಜೇಂದ್ರ ತ್ವಾಂ ಯಸ್ಮಾತ್ಪಶ್ಯಾಮಿ ದುರ್ದೃಶಮ್ ॥

ಅನುವಾದ

ದ್ವಿಜೇಂದ್ರರೇ! ನಿಮ್ಮ ದರ್ಶನ ಪರಮ ದುರ್ಲಭವಾದರೂ ಇಂದು ನಾನು ತಮ್ಮ ದರ್ಶನದಿಂದ ಆನಂದಿತನಾಗಿದ್ದೇನೆ. ಹೀಗೆ ಇಲ್ಲಿಗೆ ಬಂದು ನೀವು ಈ ಮಾಹಿಷ್ಮತೀಪುರಿಯನ್ನು ಅಮರಾವತಿಯಂತೆ ಗೌರವ ಶಾಲಿಯಾಗಿಸಿದಿರಿ.॥10॥

ಮೂಲಮ್ - 11

ಅದ್ಯ ಮೇ ಕುಶಲಂ ದೇವ ಅದ್ಯ ಮೇ ಕುಶಲಂ ವ್ರತಮ್ ।
ಅದ್ಯ ಮೇ ಸಫಲಂ ಜನ್ಮ ಅದ್ಯ ಮೇ ಸಫಲಂ ತಪಃ ॥

ಮೂಲಮ್ - 12

ಯತ್ತೇ ದೇವಗಣೈರ್ವಂದ್ಯೌ ವಂದೇಽಹಂ ಚರಣೌ ತವ ।
ಇದಂ ರಾಜ್ಯಮಿಮೇ ಪುತ್ರಾ ಇಮೇ ದಾರಾ ಇಮೇ ವಯಮ್ ।
ಬ್ರಹ್ಮನ್ಕಿಂ ಕುರ್ಮಃ ಕಿಂ ಕಾರ್ಯಮಾಜ್ಞಾಪಯತು ನೋ ಭವಾನ್ ॥

ಅನುವಾದ

ದೇವ! ಇಂದು ನಾನು ನಿಮ್ಮ ದೇವವಂದ್ಯ ಚರಣಗಳನ್ನು ವಂದಿಸುತ್ತಿದ್ದೇನೆ, ಅದರಿಂದ ವಾಸ್ತವವಾಗಿ ಸಕುಶಲನಾದೆ. ಇಂದು ನನ್ನ ವ್ರತ ಪೂರ್ಣವಾಯಿತು. ಇಂದೇ ನನ್ನ ತಪಸ್ಸು ಸಾರ್ಥಕವಾಗಿ, ಜನ್ಮವು ಸಫಲವಾಯಿತು. ಬ್ರಾಹ್ಮಣೋತ್ತಮರೇ! ಈ ರಾಜ್ಯ, ಈ ಪತ್ನೀ, ಪುತ್ರ ಮತ್ತು ನಾವೆಲ್ಲರೂ ನಿಮ್ಮವರಾಗಿದ್ದೇವೆ. ನಾವು ನಿಮ್ಮ ಯಾವ ಸೇವೆ ಮಾಡಬೇಕೆಂದು ಆಜ್ಞಾಪಿಸಿರಿ.॥11-12॥

ಮೂಲಮ್ - 13

ತಂ ಧರ್ಮೇಽಗ್ನಿಷು ಪುತ್ರೇಷು ಶಿವ ಪೃಷ್ಟ್ವಾ ಚ ಪಾರ್ಥಿವಮ್ ।
ಪುಲಸ್ತ್ಯೋವಾಚ ರಾಜಾನಂ ಹೈಹಯಾನಾಂ ತಥಾರ್ಜುನಮ್ ॥

ಅನುವಾದ

ಆಗ ಪುಲಸ್ತ್ಯರು ಹೈಹಯರಾಜಾ ಅರ್ಜುನನ ಧರ್ಮ, ಅಗ್ನಿ, ಪುತ್ರ, ಪರಿವಾರದ ಕ್ಷೇಮ ಸಮಾಚಾರ ಕೇಳಿ, ಅವನಲ್ಲಿ ಹೀಗೆ ಹೇಳಿದರು.॥13॥

ಮೂಲಮ್ - 14

ನರೇಂದ್ರಾಂಬುಜಪತ್ರಾಕ್ಷ ಪೂರ್ಣಚಂದ್ರ ನಿಭಾನನ ।
ಅತುಲಂ ತೇ ಬಲಂ ಯೇನ ದಶಗ್ರೀವಸ್ತ್ವಯಾ ಜಿತಃ ॥

ಅನುವಾದ

ಪೂರ್ಣಚಂದ್ರನಂತೆ ಮನೋಹರ ಮುಖವುಳ್ಳ ಕಮಲನಯನ ರಾಜನೇ! ನಿನ್ನ ಬಲಕ್ಕೆ ತುಲನೆಯೇ ಇಲ್ಲ; ಏಕೆಂದರೆ ನೀನು ದಶಗ್ರೀವನನ್ನು ಗೆದ್ದುಕೊಂಡಿರುವೆ.॥14॥

ಮೂಲಮ್ - 15

ಭಯಾದ್ಯಸ್ಯೋಪತಿಷ್ಠೇತಾಂ ನಿಷ್ಪಂದೌ ಸಾಗರಾನಿಲೌ ।
ಸೋಽಯಂ ಮೃಧೇ ತ್ವಯಾ ಬದ್ಧಃ ಪೌತ್ರೋ ಮೇ ರಣದುರ್ಜಯಃ ॥

ಅನುವಾದ

ಯಾರ ಭಯದಿಂದ ಸಮುದ್ರ, ವಾಯು ಕೂಡ ಚಂಚಲತೆ ಬಿಟ್ಟು, ಸೇವೆಯಲ್ಲಿ ಉಪಸ್ಥಿತವಾಗುವುವೋ, ಅಂತಹ ನನ್ನ ರಣದುರ್ಜಯ ಮೊಮ್ಮಗನನ್ನು ನೀನು ಸಂಗ್ರಾಮದಲ್ಲಿ ಬಂಧಿಸಿರುವೆ.॥15॥

ಮೂಲಮ್ - 16

ಪುತ್ರಕಸ್ಯ ಯಶಃ ಪೀತಂ ನಾಮ ವಿಶ್ರಾವಿತಂ ತ್ವಯಾ ।
ಮದ್ವಾಕ್ಯಾದ್ಯಾಚ್ಯಮಾನೋಽದ್ಯ ಮುಂಚ ವತ್ಸ ದಶಾನನಮ್ ॥

ಅನುವಾದ

ಹೀಗೆ ಮಾಡಿ ನೀನು ನನ್ನ ಈ ಮಗುವಿನ ಯಶವನ್ನು ಕುಡಿದು, ಎಲ್ಲೆಡೆ ತನ್ನ ಹೆಸರಿನ ಡಂಗುರ ಸಾರಿದೆ. ವತ್ಸ! ಈಗ ನಾನು ಅವನ ಬಿಡುಗಡೆಯನ್ನು ಯಾಚಿಸಲು ಬಂದಿದ್ದೇನೆ. ನನ್ನ ಮಾತಿನಂತೆ ಅವನನ್ನು ಬಿಟ್ಟುಬಿಡು.॥16॥

ಮೂಲಮ್ - 17

ಪುಲಸ್ತ್ಯಾಜ್ಞಾಂ ಪ್ರಗೃಹ್ಯೋಚೇ ನ ಕಿಂಚನ ವಚೋಽರ್ಜುನಃ ।
ಮುಮೋಚ ವೈ ಪಾರ್ಥಿವೇಂದ್ರೋ ರಾಕ್ಷಸೇಂದ್ರಂ ಪ್ರಹೃಷ್ಟವತ್ ॥

ಅನುವಾದ

ಪುಲಸ್ತ್ಯರ ಈ ಮಾತನ್ನು ಶಿರಸಾವಹಿಸಿ ಅರ್ಜುನನು ಏನನ್ನೂ ಪ್ರತಿಯಾಡದೆ, ತುಂಬಾ ಸಂತೋಷದಿಂದ ರಾಕ್ಷಸರಾಜ ರಾವಣನನ್ನು ಬಂಧಮುಕ್ತಗೊಳಿಸಿದನು.॥17॥

ಮೂಲಮ್ - 18

ಸ ತಂ ಪ್ರಮುಚ್ಯ ತ್ರಿದಶಾರಿಮರ್ಜುನಃ
ಪ್ರಪೂಜ್ಯ ದಿವ್ಯಾಭರಣಸ್ರಗಂಬರೈಃ ।
ಅಹಿಂಸಕಂ ಸಖ್ಯಮುಪೇತ್ಯ ಸಾಗ್ನಿಕಂ
ಪ್ರಣಮ್ಯ ತಂ ಬ್ರಹ್ಮಸುತಂ ಗೃಹಂ ಯಯೌ ॥

ಅನುವಾದ

ಆ ದೇವದ್ರೋಹೀ ರಾಕ್ಷಸನನ್ನು ಬಂಧಮುಕ್ತಗೊಳಿಸಿ ಅರ್ಜುನನು ದಿವ್ಯ ಆಭೂಷಣ, ಮಾಲೆ, ವಸ್ತ್ರಗಳಿಂದ ಅವನನ್ನು ಸನ್ಮಾನಿಸಿದನು. ಅಗ್ನಿಯನ್ನು ಸಾಕ್ಷಿಯಾಗಿಸಿ, ಯಾರನ್ನೂ ಹಿಂಸಿಸಬಾರ ದೆಂದು ಅವನೊಡನೆ ಮಿತ್ರತೆಯ ಸಂಬಂಧ ಬೆಳೆಸಿದನು. ಬಳಿಕ ಬ್ರಹ್ಮಪುತ್ರ ಪುಲಸ್ತ್ಯರನ್ನು ವಂದಿಸಿ ಅರ್ಜುನನು ಅರಮನೆಗೆ ಮರಳಿದನು.॥18॥

ಮೂಲಮ್ - 19

ಪುಲಸ್ತ್ಯೇನಾಪಿ ಸಂತ್ಯಕ್ತೋ ರಾಕ್ಷಸೇಂದ್ರಃ ಪ್ರತಾಪವಾನ್ ।
ಪರಿಷ್ವಕ್ತಃ ಕೃತಾತಿಥ್ಯೋ ಲಜ್ಜಮಾನೋ ವಿನಿರ್ಜಿತಃ ॥

ಅನುವಾದ

ಹೀಗೆ ಅರ್ಜುನನಿಂದ ಆತಿಥ್ಯ ಸ್ವೀಕರಿಸಿ, ಬಂಧಮುಕ್ತನಾದ ಪ್ರತಾಪೀ ರಾಕ್ಷಸರಾಜ ರಾವಣನನ್ನು ಪುಲಸ್ತ್ಯರು ಬಿಗಿದಪ್ಪಿಕೊಂಡರು. ಆದರೆ ಆ ಪರಾಜಯದಿಂದಾಗಿ ರಾವಣನು ಲಜ್ಜಿತನಾಗಿದ್ದನು.॥19॥

ಮೂಲಮ್ - 20

ಪಿತಾಮಹ ಸುತಶ್ಚಾಪಿ ಪುಲಸ್ತ್ಯೋ ಮುನಿಪುಂಗವಃ ।
ಮೋಚಯಿತ್ವಾ ದಶಗ್ರೀವಂ ಬ್ರಹ್ಮಲೋಕಂ ಜಗಾಮ ಹ ॥

ಅನುವಾದ

ದಶಗ್ರೀವನನ್ನು ಬಿಡಿಸಿ ಬ್ರಹ್ಮಪುತ್ರ ಮುನಿವರ ಪುಲಸ್ತ್ಯರು ಪುನಃ ಬ್ರಹ್ಮಲೋಕಕ್ಕೆ ತೆರಳಿದರು.॥20॥

ಮೂಲಮ್ - 21

ಏವಂ ಸ ರಾವಣಃ ಪ್ರಾಪ್ತಃ ಕಾರ್ತವೀರ್ಯಾತ್ಪ್ರಧರ್ಷಣಮ್ ।
ಪುಲಸ್ತ್ಯವಚನಾಚ್ಚಾಪಿ ಪುನರ್ಮುಕ್ತೋ ಮಹಾಬಲಃ ॥

ಅನುವಾದ

ಹೀಗೆ ರಾವಣನಿಗೆ ಕಾರ್ತವೀರ್ಯಾರ್ಜುನನ ಕೈಯಲ್ಲಿ ಪರಾಜಿತನಾಗಬೇಕಾಯಿತು. ಮತ್ತೆ ಪುಲಸ್ತ್ಯರ ಮಾತಿನಿಂದ ಆ ಮಹಾಬಲೀ ರಾಕ್ಷಸನಿಗೆ ಬಿಡುಗಡೆ ದೊರಕಿತ್ತು.॥21॥

ಮೂಲಮ್ - 22

ಏವಂ ಬಲಿಭ್ಯೋ ಬಲಿನಃ ಸಂತಿ ರಾಘವನಂದನ ।
ನಾವಜ್ಞಾ ಹಿ ಪರೇ ಕಾರ್ಯಾ ಯ ಇಚ್ಛೇಚ್ಛ್ರೇಯ ಆತ್ಮನಃ ॥

ಅನುವಾದ

ರಘುಕುಲನಂದನ! ಹೀಗೆ ಪ್ರಪಂಚದಲ್ಲಿ ಬಲಿಷ್ಠರಿಗಿಂತ ಬಲಿಷ್ಠರು ಇರುವರು; ಆದ್ದರಿಂದ ತನ್ನ ಶ್ರೇಯಸ್ಸನ್ನು ಬಯಸುವವನು ಬೇರೆಯವರನ್ನು ಅವಹೇಳನ ಮಾಡಬಾರದು.॥22॥

ಮೂಲಮ್ - 23

ತತಃ ಸ ರಾಜಾ ಪಿಶಿತಾಶನಾನಾಂ
ಸಹಸ್ರಬಾಹೋರುಪಲಭ್ಯ ಮೈತ್ರೀಮ್ ।
ಪುನರ್ನೃಪಾಣಾಂ ಕದನಂ ಚಕಾರ
ಚಕಾರ ಸರ್ವಾಂ ಪೃಥಿವೀಂ ಚದರ್ಪಾತ್ ॥

ಅನುವಾದ

ಸಹಸ್ರಬಾಹುವಿನ ಮಿತ್ರತೆಯನ್ನು ಪಡೆದು ರಾಕ್ಷಸರ ರಾಜಾ ರಾವಣನು ಪುನಃ ದರ್ಪಿಷ್ಠನಾಗಿ ಇಡೀ ಭೂಮಂಡಲದಲ್ಲಿ ಸಂಚರಿಸುತ್ತಾ ರಾಜರನ್ನು ಸಂಹರಿಸತೊಡಗಿದನು.॥23॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಮೂವತ್ತಮೂರನೆಯ ಸರ್ಗ ಪೂರ್ಣವಾಯಿತು. ॥33॥