०३२ रावण-बन्धनम्

[ಮೂವತ್ತೆರಡನೆಯ ಸರ್ಗ]

ಭಾಗಸೂಚನಾ

ಅರ್ಜುನನು ತೋಳುಗಳಿಂದ ನರ್ಮದೆಯ ನೀರನ್ನು ಅಡ್ಡಗಟ್ಟಿದುದು, ರಾವಣನು ಅರ್ಪಿಸಿದ್ದ ಪುಷ್ಪೋಪಹಾರವು ನೀರಿನಲ್ಲಿ ಕೊಚ್ಚಿ ಹೋದುದು, ಅರ್ಜುನ - ರಾಕ್ಷಸನ ಘೋರ ಯುದ್ಧ, ಅರ್ಜುನನು ರಾವಣನನ್ನು ಬಂಧಿಸಿ ತನ್ನ ನಗರಕ್ಕೆ ಒಯ್ದುದು

ಮೂಲಮ್ - 1

ನರ್ಮದಾಪುಲಿನೇ ಯತ್ರ ರಾಕ್ಷಸೇಂದ್ರಃ ಸ ದಾರುಣಃ ।
ಪುಷ್ಪೋಪಹಾರಂ ಕುರುತೇ ತಸ್ಮಾದ್ದೇಶಾದದೂರತಃ ॥

ಮೂಲಮ್ - 2

ಅರ್ಜುನೋ ಜಯತಾಂ ಶ್ರೇಷ್ಠೋ ಮಾಹಿಷ್ಮತ್ಯಾಃ ಪತಿಃ ಪ್ರಭುಃ ।
ಕ್ರೀಡತೇ ಸಹ ನಾರೀಭಿರ್ನರ್ಮದಾತೋಯಮಾಶ್ರಿತಃ ॥

ಅನುವಾದ

ಕ್ರೂರಿಯಾದ ರಾಕ್ಷಸೇಂದ್ರ ರಾವಣನು ನರ್ಮದೆಯ ತೀರದಲ್ಲಿ ಈಶ್ವರನಿಗೆ ಪುಷ್ಪೋಹಾರ ಅರ್ಪಿಸಿದ ಸ್ವಲ್ಪ ದೂರದಲ್ಲೇ ವಿಜಯಿಗಳಲ್ಲಿ ಶ್ರೇಷ್ಠ ಮಾಹಿಷ್ಮತೀ ಪುರಿಯ ಒಡೆಯ ಶಕ್ತಿಶಾಲೀ ರಾಜಾ ಅರ್ಜುನನು ತನ್ನ ಪತ್ನಿಯರೊಂದಿಗೆ ನರ್ಮದೆಯಲ್ಲಿ ಜಲಕ್ರೀಡೆಯಾಡುತ್ತಿದ್ದನು.॥1-2॥

ಮೂಲಮ್ - 3

ತಾಸಾಂ ಮಧ್ಯಗತೋ ರಾಜಾ ರರಾಜ ಚ ತದಾರ್ಜುನಃ ।
ಕರೇಣೂನಾಂ ಸಹಸ್ರಸ್ಯ ಮಧ್ಯಸ್ಥ ಇವ ಕುಂಜರಃ ॥

ಅನುವಾದ

ಆ ಸುರಸುಂದರಿಯರ ನಡುವೆ ವಿರಾಜಮಾನ ರಾಜಾ ಅರ್ಜುನನು ಸಾವಿರಾರು ಹೆಣ್ಣಾನೆಗಳ ಮಧ್ಯದಲ್ಲಿ ಸ್ಥಿತನಾದ ಗಜರಾಜನಂತೆ ಶೋಭಿಸುತ್ತಿದ್ದನು.॥3॥

ಮೂಲಮ್ - 4

ಜಿಜ್ಞಾಸುಃ ಸ ತು ಬಾಹೂನಾಂ ಸಹಸ್ರಸ್ಯೋತ್ತಮಂ ಬಲಮ್ ।
ರುರೋಧ ನರ್ಮದಾ ವೇಗಂ ಬಾಹುಭಿರ್ಬಹುಭಿರ್ವೃತಃ ॥

ಅನುವಾದ

ತನಗಿರುವ ಸಾವಿರ ತೋಳುಗಳ ಬಲವೆಷ್ಟೆಂಬುದನ್ನು ತಿಳಿಯಲು ತನ್ನ ಬಹುಸಂಖ್ಯಕ ಭುಜಗಳಿಂದ ನರ್ಮದೆಯ ಪ್ರವಾಹವನ್ನು ಅಡ್ಡಗಟ್ಟಿದನು.॥4॥

ಮೂಲಮ್ - 5

ಕಾರ್ತವೀರ್ಯ ಭುಜಾಸಕ್ತಂ ತಜ್ಜಲಂ ಪ್ರಾಪ್ಯ ನಿರ್ಮಲಮ್ ।
ಕೂಲೋಪಹಾರಂ ಕುರ್ವಾಣಂ ಪ್ರತಿಸ್ರೋತಃ ಪ್ರಧಾವತಿ ॥

ಅನುವಾದ

ಕಾರ್ತವೀರ್ಯಾರ್ಜುನನ ಭುಜಗಳಿಂದ ತಡೆದ ನರ್ಮದೆಯ ನಿರ್ಮಲ ಜಲವು ತೀರದಲ್ಲಿ ಪೂಜಿಸುತ್ತಿದ್ದ ರಾವಣನ ಬಳಿಗೆ ಹೋಗಿ ಹಿಂದೆ-ಮುಂದೆ ಹರಿಯತೊಡಗಿತು.॥5॥

ಮೂಲಮ್ - 6

ಸಮೀನನಕ್ರಮಕರಃ ಸಪುಷ್ಪಕುಶಸಂಸ್ತರಃ ।
ಸ ನರ್ಮದಾಂಭಸೋ ವೇಗಃ ಪ್ರಾವೃಟ್ಕಾಲ ಇವಾ ಬಭೌ ॥

ಅನುವಾದ

ನರ್ಮದೆಯ ಜಲದ ಆ ವೇಗವು ಮತ್ಸ್ಯ, ಮೊಸಳೆ, ಹೂವು, ಕುಶಾಸ್ತರಣಗಳೊಂದಿಗೆ, ಮಳೆಗಾಲದ ಮಹಾಪೂರದಂತೆ ಹೆಚ್ಚತೊಡಗಿತು.॥6॥

ಮೂಲಮ್ - 7

ಸ ವೇಗಃ ಕಾರ್ತವೀರ್ಯೇಣ ಸಂಪ್ರೇಷಿತ ಇವಾಂಭಸಃ ।
ಪುಷ್ಪೋಪಹಾರಂ ಸಕಲಂ ರಾವಣಸ್ಯ ಜಹಾರ ಹ ॥

ಅನುವಾದ

ಕಾರ್ತವೀರ್ಯಾನನೇ ಕಳಿಸಿದನೋ ಎಂಬಂತೆ ಆ ಜಲ ಪ್ರವಾಹವು ರಾವಣನ ಸಮಸ್ತ ಪುಷ್ಪೋಹಾರ ಕೊಚ್ಚಿಕೊಂಡು ಹೋಯಿತು.॥7॥

ಮೂಲಮ್ - 8

ರಾವಣೋಽರ್ಧಸಮಾಪ್ತಂ ತಮುತ್ಸೃಜ್ಯ ನಿಯಮಂ ತದಾ ।
ನರ್ಮದಾಂ ಪಶ್ಯತೇ ಕಾಂತಾಂ ಪ್ರತಿಕೂಲಾಂ ಯಥಾ ಪ್ರಿಯಾಮ್ ॥

ಅನುವಾದ

ರಾವಣನ ಆ ಪೂಜೆ ಅರ್ಧ ಮುಗಿದಿತ್ತು ಅಷ್ಟೇ. ಆ ಸ್ಥಿತಿಯಲ್ಲಿ ಅದನ್ನು ಬಿಟ್ಟು ಅವನು ಕೋಪಿಸಿಕೊಂಡ ಕಮನೀಯ ಕಾಂತಿಯುಳ್ಳ ಪ್ರೇಯಸಿಯನ್ನು ನೋಡಿದಂತೆ ನರ್ಮದೆಯನ್ನು ನೋಡತೊಡಗಿದನು.॥8॥

ಮೂಲಮ್ - 9

ಪಶ್ಚಿಮೇನ ತು ತಂದೃಷ್ಟ್ವಾ ಸಾಗರೋದ್ಗಾರ ಸಂನಿಭಮ್ ।
ವರ್ಧಂತಮಂಭಸೋ ವೇಗಂ ಪೂರ್ವಾಮಾಶಾಂ ಪ್ರವಿಶ್ಯ ತು ॥

ಅನುವಾದ

ಪಶ್ಚಿಮದಿಂದ ಬಂದು ಪೂರ್ವಕ್ಕೆ ಹರಿಯುವ ನೀರಿನ ಪ್ರವಾಹವನ್ನು ನೋಡಿದನು. ಅದು ಸಮುದ್ರಕ್ಕೆ ಭರತ ಬಂದಂತೆ ಅನಿಸುತ್ತಿತ್ತು.॥9॥

ಮೂಲಮ್ - 10

ತತೋಽನುದ್ಭ್ರಾಂತಶಕುನಾಂ ಸ್ವಭಾವೇ ಪರಮೇ ಸ್ಥಿತಾಮ್ ।
ನಿರ್ವಿಕಾರಾಂಗನಾಭಾಸಾಮಪಶ್ಯದ್ರಾವಣೋ ನದೀಮ್ ॥

ಅನುವಾದ

ಆದರೆ ನದಿಯ ತೀರದಲ್ಲಿದ್ದ ವೃಕ್ಷಗಳ ಮೇಲೆ ಇದ್ದ ಪಕ್ಷಿಗಳು ಕೊಂಚವೂ ಗಾಬರಿಗೊಳ್ಳದೆ ಶಾಂತವಾಗಿದ್ದವು. ನದಿಯ ಸ್ವಭಾವದಲ್ಲಿಯೂ ಯಾವ ವ್ಯತ್ಯಾಸ ಕಾಣುತ್ತಿರಲಿಲ್ಲ. ಮಳೆಗಾಲದಲ್ಲಿ ಉಂಟಾಗುವ ಕೆಸರ ನೀರಿನಂತೆ ಇರದೆ ಸ್ವಚ್ಛ ನಿರ್ಮಲವಾಗಿ ಕಾಣುತ್ತಿತ್ತು. ವಿಕಾರಶೂನ್ಯಳಾದ ಸ್ತ್ರೀಯಂತೆ ಇದ್ದ ಆ ಮಹಾನದಿಯನ್ನು ರಾವಣನು ನೋಡಿದನು.॥10॥

ಮೂಲಮ್ - 11

ಸವ್ಯತೇರಕರಾಂಗುಲ್ಯಾ ಹ್ಯಶಬ್ದಾಸ್ಯೋ ದಶಾನನಃ ।
ವೇಗಪ್ರಭವಮನ್ವೇಷ್ಟುಂ ಸೋಽದಿಶಚ್ಛುಕಸಾರಣೌ ॥

ಅನುವಾದ

ಮೌನವ್ರತಿಯಾಗಿದ್ದ ರಾವಣನು ಬಲಗೈಯ್ಯ ಬೆರಳಿನ ಸಂಕೇತದಿಂದ ನೆರೆಯ ಕಾರಣವೇನೆಂದು ತಿಳಿಯಲು ಶುಕ-ಸಾರಣರಿಗೆ ಆದೇಶಿಸಿದನು.॥11॥

ಮೂಲಮ್ - 12

ತೌ ತು ರಾವಣಸಂದಿಷ್ಟೌ ಭ್ರಾತರೌ ಶುಕಸಾರಣೌ ।
ವ್ಯೋಮಾಂತರಗತೌ ವೀರೌ ಪ್ರಸ್ಥಿತೌ ಪಶ್ಚಿಮಾಮುಖೌ ॥

ಅನುವಾದ

ರಾವಣನ ಆದೇಶ ಪಡೆದ ಶುಕ-ಸಾರಣರು ಆಕಾಶ ಮಾರ್ಗದಿಂದ ಪಶ್ಚಿಮದ ಕಡೆಗೆ ತೆರಳಿದರು.॥12॥

ಮೂಲಮ್ - 13

ಅರ್ಧಯೋಜನಮಾತ್ರಂ ತು ಗತ್ವಾ ತೌ ರಜನೀಚರೌ ।
ಪಶ್ಯೇತಾಂ ಪುರುಷಂ ತೋಯೇ ಕ್ರೀಡಂತಂ ಸಹಯೋಷಿತಮ್ ॥

ಅನುವಾದ

ಕೇವಲ ಅರ್ಧ ಯೋಜನೆಯಲ್ಲಿ ಅವರು ಓರ್ವ ಪುರುಷನು ಪತ್ನಿಯರೊಂದಿಗೆ ಜಲಕ್ರೀಡೆ ಮಾಡುತ್ತಿರುವುದನ್ನು ನೋಡಿದರು.॥13॥

ಮೂಲಮ್ - 14

ಬೃಹತ್ಸಾಲ ಪ್ರತೀಕಾಶಂ ತೋಯವ್ಯಾಕುಲ ಮೂರ್ಧಜಮ್ ।
ಮದರಕ್ತಾಂತನಯನಂ ಮದವ್ಯಾಕುಲಚೇತಸಮ್ ॥

ಅನುವಾದ

ಅವನ ಶರೀರವು ಸಾಲವೃಕ್ಷದಂತೆ ಎತ್ತರವಾಗಿತ್ತು, ಅವನ ಕೂದಲು ನೀರಿನಿಂದ ಒದ್ದೆಯಾಗಿತ್ತು. ಕಣ್ಣುಗಳು ಮದದಿಂದ ಕೆಂಪಾಗಿದ್ದು, ಚಿತ್ತವೂ ಮದದಿಂದ ವ್ಯಾಕುಲವಾದಂತಿತ್ತು.॥14॥

ಮೂಲಮ್ - 15

ನದೀಂ ಬಾಹುಸಹಸ್ರೇಣ ರುಂಧಂತಮರಿಮರ್ದನಮ್ ।
ಗಿರಿಂ ಪಾದಸಹಸ್ರೇಣ ರುಂಧಂತಮಿವ ಮೇದಿನೀಮ್ ॥

ಅನುವಾದ

ಆ ಶತ್ರುಮರ್ದನ ವೀರನು ತನ್ನ ಸಾವಿರ ಭುಜಗಳಿಂದ ನದಿಯ ವೇಗವನ್ನು ತಡೆಹಿಡಿದು, ಸಾವಿರ ಚರಣಗಳಿಂದ ಪೃಥಿವಿಯನ್ನು ಮೆಟ್ಟಿನಿಂತ ಪರ್ವತದಂತೆ ಶೋಭಿಸುತ್ತಿದ್ದನು.॥15॥

ಮೂಲಮ್ - 16

ಬಾಲಾನಾಂ ವರನಾರೀಣಾಂ ಸಹಸ್ರೇಣ ಸಮಾವೃತಮ್ ।
ಸಮದಾನಾಂ ಕರೇಣೂನಾಂ ಸಹಸ್ರೇಣೇವ ಕುಂಜರಮ್ ॥

ಅನುವಾದ

ನವಯೌವನ ಸಾವಿರಾರು ಸುಂದರಿಯರು ಅವನನ್ನು ಸುತ್ತುವರೆದು, ಸಾವಿರಾರು ಮದಮತ್ತ ಹೆಣ್ಣು ಆನೆಗಳು ಗಜರಾಜನನ್ನು ಸುತ್ತುವರೆದು ನಿಂತಂತೆ ಕಾಣುತ್ತಿತ್ತು.॥16॥

ಮೂಲಮ್ - 17

ತಮದ್ಭುತತರಂ ದೃಷ್ಟ್ವಾ ರಾಕ್ಷಸೌ ಶುಕಸಾರಣೌ ।
ಸಂನಿವೃತ್ತಾವುಪಾಗಮ್ಯ ರಾವಣಂ ತಮಥೋಚತುಃ ॥

ಅನುವಾದ

ಆ ಪರಮಾದ್ಭುತ ದೃಶ್ಯವನ್ನು ನೋಡಿ ರಾಕ್ಷಸರಾದ ಶುಕ-ಸಾರಣರು ಮರಳಿ ರಾವಣನ ಬಳಿಗೆ ಬಂದು ಹೇಳಿದರು.॥17॥

ಮೂಲಮ್ - 18

ಬೃಹತ್ಸಾಲ ಪ್ರತೀಕಾಶಃ ಕೋಽಪ್ಯಸೌ ರಾಕ್ಷಸೇಶ್ವರ ।
ನರ್ಮದಾಂ ರೋಧವದ್ರುದ್ಧ್ವಾ ಕ್ರೀಡಾಪಯತಿ ಯೋಷಿತಃ ॥

ಅನುವಾದ

ರಾಕ್ಷಸರಾಜನೇ! ಇಲ್ಲಿಂದ ಸ್ವಲ್ಪ ದೂರದಲ್ಲಿ ಯಾರೋ ತಾಳೆ ಮರದಂತೆ ವಿಶಾಲಕಾಯ ಪುರುಷನು ಬಾಹುಗಳ ಅಣೆಕಟ್ಟಿನಂತೆ ನರ್ಮದೆಯ ನೀರನ್ನು ತಡೆದು ಸ್ತ್ರೀಯರೊಡನೆ ಕ್ರೀಡಿಸುತ್ತಿರುವನು.॥18॥

ಮೂಲಮ್ - 19

ತೇನ ಬಾಹು ಸಹಸ್ರೇಣ ಸಂನಿರುದ್ಧಜಲಾ ನದೀ ।
ಸಾಗರೋದ್ಗಾರ ಸಂಕಾಶಾನುದ್ಗಾರಾನ್ ಸೃಜತೇ ಮುಹುಃ ॥

ಅನುವಾದ

ಅವನ ಸಾವಿರ ಭುಜಗಳಿಂದ ನದಿಯ ನೀರು ಅಡ್ಡಗಟ್ಟಿರುವನು. ಅದರಿಂದ ಹೀಗೆ ಸಮುದ್ರದ ಭರ್ತಿಯಂತೆ ನೀರು ಉಕ್ಕುತ್ತಿದೆ.॥19॥

ಮೂಲಮ್ - 20

ಇತ್ಯೇವಂ ಭಾಷಮಾಣೌ ತೌ ನಿಶಮ್ಯ ಶುಕಸಾರಣೌ ।
ರಾವಣೋಽರ್ಜುನ ಇತ್ಯುಕ್ತ್ವಾಸ ಯಯೌ ಯುದ್ಧಲಾಲಸಃ ॥

ಅನುವಾದ

ಹೀಗೆ ಹೇಳಿದ ಶುಕ-ಸಾರಣರ ಮಾತನ್ನು ಕೇಳಿ ರಾವಣನು - ಅರ್ಜುನ ಅಲ್ಲೇ ಇದ್ದಾನೆಯೇ? ಎಂದು ಹೇಳಿ ಯುದ್ಧದ ಇಚ್ಛೆಯಿಂದ ಆ ಕಡೆಗೆ ಹೊರಟನು.॥20॥

ಮೂಲಮ್ - 21

ಅರ್ಜುನಾಭಿಮುಖೇ ತಸ್ಮಿನ್ರಾವಣೇ ರಾಕ್ಷಸಾಧಿಪೇ ।
ಚಂಡಃ ಪ್ರವಾತಿ ಪವನಃ ಸನಾದಃ ಸರಜಸ್ತಥಾ ॥

ಅನುವಾದ

ರಾಕ್ಷಸರಾಜ ರಾವಣನು ಅರ್ಜುನನ ಕಡೆಗೆ ನಡೆದಾಗ ಧೂಳು ಎದ್ದು, ಭಾರೀ ಕೋಲಾಹಲದೊಂದಿಗೆ ಪ್ರಚಂಡ ವಾಯು ಬೀಸತೊಡಗಿತು.॥21॥

ಮೂಲಮ್ - 22½

ಸಕೃದೇವ ಕೃತೋ ರಾವಃ ಸರಕ್ತಪೃಶತೋ ಘನೈಃ ।
ಮಹೋದರ ಮಹಾಪಾರ್ಶ್ವ ಧೂಮ್ರಾಕ್ಷ ಶುಕಸಾರಣೈಃ ॥
ಸಂವೃತೋ ರಾಕ್ಷಸೇಂದ್ರಸ್ತು ತತ್ರಾಗಾದ್ಯತ್ರಚಾರ್ಜುನಃ ।

ಅನುವಾದ

ಮೋಡಗಳು ರಕ್ತದ ಮಳೆ ಸುರಿಸಿ, ಜೋರಾಗಿ ಗರ್ಜಿಸತೊಡಗಿದವು. ರಾಕ್ಷಸರಾಜ ರಾವಣನು ಮಹೋದರ, ಮಹಾಪಾರ್ಶ್ವ, ಧೂಮ್ರಾಕ್ಷ, ಶುಕ-ಸಾರಣರೊಂದಿಗೆ ಅರ್ಜುನನು ಕ್ರೀಡಿಸುತ್ತಿದ್ದಲ್ಲಿಗೆ ಹೊರಟನು.॥22½॥

ಮೂಲಮ್ - 23½

ಅದೀರ್ಘೇಣೈವ ಕಾಲೇನ ಸ ತದಾ ರಾಕ್ಷಸೋ ಬಲೀ ॥
ತಂ ನರ್ಮದಾಹ್ರದಂ ಭೀಮಮಾಜಗಾಮಾಂಜನಪ್ರಭಃ ।

ಅನುವಾದ

ಕಾಡಿಗೆ, ಇದ್ದಿಲಿನಂತೆ ಕಪ್ಪಾದ ಆ ಬಲಿಷ್ಠ ರಾವಣನು ಸ್ವಲ್ಪ ಸಮಯದಲ್ಲೇ ನರ್ಮದೆಯ ಆ ಭಯಂಕರ ಜಲರಾಶಿಯ ಬಳಿಗೆ ಹೋದನು.॥23½॥

ಮೂಲಮ್ - 24½

ಸ ತತ್ರ ಸ್ತ್ರೀಪರಿವೃತಂ ವಾಸಿತಾಭಿರಿವ ದ್ವಿಪಮ್ ॥
ನರೇಂದ್ರಂ ಪಶ್ಯತೇ ರಾಜಾ ರಾಕ್ಷಸಾನಾಂ ತದಾರ್ಜುನಮ್ ।

ಅನುವಾದ

ಅಲ್ಲಿಗೆ ಹೋಗಿ ಮೈಥುನದ ಇಚ್ಛೆಯುಳ್ಳ ಹೆಣ್ಣಾನೆಗಳಿಂದ ಸುತ್ತುವರೆದ ಗಜರಾಜನಂತೆ, ಸುಂದರೀ ಪತ್ನೀಯರಿಂದ ಪರಿವೃತನಾದ ಮಹಾರಾಜಾ ಅರ್ಜುನನನ್ನು ರಾವಣನು ನೋಡಿದನು.॥24½॥

ಮೂಲಮ್ - 25½

ಸ ರೋಷಾದ್ರಕ್ತ ನಯನೋ ರಾಕ್ಷಸೇಂದ್ರೋ ಬಲೋದ್ಧತಃ ॥
ಇತ್ಯೇವಮರ್ಜುನಾಮಾತ್ಯಾನಾಹ ಗಂಭೀರಯಾ ಗಿರಾ ।

ಅನುವಾದ

ಅವನನ್ನು ನೋಡುತ್ತಲೇ ಕ್ರೋಧದಿಂದ ರಾವಣನ ಕಣ್ಣುಗಳು ಕೆಂಪಾದವು. ಬಲೋನ್ಮತ್ತನಾದ ರಾಕ್ಷಸರಾಜನು ಅರ್ಜುನನ ಮಂತ್ರಿಗಳಲ್ಲಿ ಗಂಭೀರವಾಣಿಯಿಂದ ಇಂತೆಂದನು.॥25½॥

ಮೂಲಮ್ - 26½

ಅಮಾತ್ಯಾಃ ಕ್ಷಿಪ್ರಮಾಖ್ಯಾತ ಹೈಹಯಸ್ಯ ನೃಪಸ್ಯ ವೈ ॥
ಯುದ್ಧಾರ್ಥಂ ಸಮನುಪ್ರಾಪ್ತೋ ರಾವಣೋ ನಾಮ ನಾಮತಃ ।

ಅನುವಾದ

ಮಂತ್ರಿಗಳೇ! ನೀವು ಹೈರುಯ ರಾಜನಲ್ಲಿ ಬೇಗನೆ ಹೋಗಿ - ರಾವಣನು ನಿನ್ನೊಂದಿಗೆ ಯುದ್ಧಕ್ಕಾಗಿ ಬಂದಿರುವನು ಎಂದು ತಿಳಿಸಿರಿ.॥26½॥

ಮೂಲಮ್ - 27½

ರಾವಣಸ್ಯ ವಚಃ ಶ್ರುತ್ವಾ ಮಂತ್ರಿಣೋಥಾರ್ಜುನಸ್ಯ ತೇ ॥
ಉತ್ತಸ್ಥುಃ ಸಾಯುಧಾಸ್ತಂ ಚ ರಾವಣಂ ವಾಕ್ಯಮಬ್ರುವನ್ ।

ಅನುವಾದ

ರಾವಣನ ಮಾತನ್ನು ಕೇಳಿ ಅರ್ಜುನನ ಆ ಮಂತ್ರಿಗಳು ಆಯುಧಗಳನ್ನು ಧರಿಸಿ ನಿಂತು ರಾವಣನಲ್ಲಿ ಹೀಗೆ ಹೇಳಿದರು.॥27½॥

ಮೂಲಮ್ - 28½

ಯುದ್ಧಸ್ಯ ಕಾಲೋ ವಿಜ್ಞಾತಃ ಸಾಧು ಭೋ ಸಾಧು ರಾವಣ ॥
ಯಃ ಕ್ಷೀಬಂ ಸ್ತ್ರೀಗತಂ ಚೈವ ಯೋದ್ಧುಮುತ್ಸಹಸೇ ನೃಪಮ್ ।

ಅನುವಾದ

ಭಲೇ, ಭಲೇ ರಾವಣ! ನಿನಗೆ ಯುದ್ಧದ ಸಂದರ್ಭ ಚೆನ್ನಾಗಿ ತಿಳಿದಿದೆ. ನಮ್ಮ ಮಹಾರಾಜರು ಮದಮತ್ತರಾಗಿ ಪತ್ನಿಯರೊಂದಿಗೆ ಕ್ರೀಡಿಸುತ್ತಿರುವಾಗ ನೀನು ಅವರೊಡನೆ ಯುದ್ಧ ಮಾಡಲು ಉತ್ಸಾಹಿತನಾಗಿರುವೆಯಲ್ಲ.॥28½॥

ಮೂಲಮ್ - 29½

ಸ್ತ್ರೀಸಮಕ್ಷಗತಂ ಯುತ್ತ್ವಂ ಯೋದ್ಧು ಮುತ್ಸಹಸೇ ನೃಪ ॥
ವಾಸಿತಾಮಧ್ಯಗಂ ಮತ್ತಂ ಶಾರ್ದೂಲ ಇವ ಕುಂಜರಮ್ ।

ಅನುವಾದ

ಸಮಾಗಮವನ್ನು ಬಯಸಿದ ಹೆಣ್ಣಾನೆಗಳಿಂದ ಸುತ್ತುವರಿ ಯಲ್ಪಟ್ಟ ಸಲಗನೊಡನೆ ಕಾಳಗ ಮಾಡಲು ಇಚ್ಛಿಸುವ ಸಿಂಹದಂತೆ, ನೀನು ಸ್ತ್ರೀಯರೊಡನೆ ನಮ್ಮ ರಾಜರು ಇರುವಾಗ ಯುದ್ಧ ಮಾಡಲುಇಚ್ಛಿಸುತ್ತಿರುವೆಯಲ್ಲ.॥29½॥

ಮೂಲಮ್ - 30

ಕ್ಷಮಸ್ವಾದ್ಯ ದಶಗ್ರೀವ ಉಷ್ಯತಾಂ ರಜನೀ ತ್ವಯಾ ।
ಯುದ್ಧೇ ಶ್ರದ್ಧಾ ತು ಯದ್ಯಸ್ತಿ ಶ್ವಸ್ತಾತ ಸಮರೇಽರ್ಜುನಮ್ ॥

ಅನುವಾದ

ಅಯ್ಯಾ ದಶಗ್ರೀವನೇ! ನಿನ್ನ ಮನಸ್ಸಿನಲ್ಲಿ ಯುದ್ಧದ ಉತ್ಸಾಹವಿದ್ದರೆ ಈ ರಾತ್ರಿ ಕಳೆಯುವವರೆಗೆ ಕ್ಷಮಿಸು. ಇಂದಿನ ರಾತ್ರೆ ಇಲ್ಲೇ ಇದ್ದು, ಬೆಳಗಾಗುತ್ತಲೇ ರಾಜಾ ಅರ್ಜುನನನ್ನು ಯುದ್ಧ ಸನ್ನದ್ಧನಾದುದನ್ನು ನೋಡುವೆಯಂತೆ.॥30॥

ಮೂಲಮ್ - 31

ಯದಿ ವಾಪಿ ತ್ವರಾ ತುಭ್ಯಂ ಯುದ್ಧತೃಷ್ಣಾ ಸಮಾವೃತ ।
ನಿಪಾತ್ಯಾಸ್ಮಾನ್ರಣೇ ಯುದ್ಧಮರ್ಜುನೇನೋಪಯಾಸ್ಯಸಿ ॥

ಅನುವಾದ

ಯುದ್ಧದ ತೃಷ್ಣೆಯಿಂದ ಸಮಾವೃತನಾದ ರಾಕ್ಷಸರಾಜನೇ! ನಿನಗೆ ಯುದ್ಧಕ್ಕಾಗಿ ಬಹಳ ಅವಸರವಿದ್ದರೆ, ಮೊದಲು ನಮ್ಮೊಡನೆ ಯುದ್ಧ ಮಾಡಿ, ಅನಂತರ ಮಹಾರಾಜಾ ಅರ್ಜುನನೊಡನೆ ಯುದ್ಧ ಮಾಡಬಹುದು.॥31॥

ಮೂಲಮ್ - 32

ತತಸ್ತೈ ರಾವಣಾಮಾತ್ಯೈರಮಾತ್ಯಾಸ್ತೇ ನೃಪಸ್ಯ ತು ।
ಸೂದಿತಾಶ್ಚಾಪಿ ತೇ ಯುದ್ಧೇ ಭಕ್ಷಿತಾಶ್ಚ ಬುಭುಕ್ಷಿತೈಃ ॥

ಅನುವಾದ

ಇದನ್ನು ಕೇಳಿ ರಾವಣನ ಹಸಿದ ಮಂತ್ರಿಗಳು ಯುದ್ಧದಲ್ಲಿ ಅರ್ಜುನನ ಅಮಾತ್ಯರನ್ನು ಕೊಂದು ತಿನ್ನತೊಡಗಿದರು.॥32॥

ಮೂಲಮ್ - 33

ತತೋ ಹಲಹಲಾಶಬ್ದೋ ನರ್ಮದಾತೀರಗೋ ಬಭೌ ।
ಅರ್ಜುನಸ್ಯಾನುಯಾತ್ರಾಣಾಂ ರಾವಣಸ್ಯ ಚ ಮಂತ್ರಿಣಾಮ್ ॥

ಅನುವಾದ

ಇದರಿಂದ ಅರ್ಜುನನ ಅನುಯಾಯಿಗಳು ಹಾಗೂ ರಾವಣನ ಮಂತ್ರಿಗಳ ಭಾರೀ ಕೋಲಾಹಲ ಆ ನರ್ಮದಾ ತೀರದಲ್ಲಿ ಉಂಟಾಯಿತು.॥33॥

ಮೂಲಮ್ - 34

ಇಷುಭಿಸ್ತೋಮರೈಃ ಪ್ರಾಸೈಸ್ತ್ರಿಶೂಲೈರ್ವಜ್ರಕರ್ಷಣೈಃ ।
ಸರಾವಣಾನರ್ದಯಂತಃ ಸಮಂತಾತ್ಸಮಭಿದ್ರುತಾಃ ॥

ಅನುವಾದ

ಅರ್ಜುನನ ಯೋಧರು ಬಾಣ, ತೋಮರ, ಭಲ್ಲೆ, ತ್ರಿಶೂಲ, ವಜ್ರಕರ್ಷಣ ಎಂಬ ಶಸ್ತ್ರಗಳಿಂದ ನಾಲ್ಕು ಕಡೆಗಳಿಂದ ಆಕ್ರಮಿಸಿ ರಾವಣಸಹಿತ ಸಮಸ್ತ ರಾಕ್ಷಸರನ್ನು ಗಾಯಗೊಳಿಸಿದರು.॥34॥

ಮೂಲಮ್ - 35

ಹೈಹಯಾಧಿಪಯೋಧಾನಾಂ ವೇಗ ಆಸೀತ್ಸುದಾರುಣಃ ।
ಸನಕ್ರಮೀನಮಕರಸಮುದ್ರಸ್ಯೇವ ನಿಃಸ್ವನಃ ॥

ಅನುವಾದ

ಹೈಹಯ ರಾಜನ ಯೋಧರ ವೇಗವು, ಮೀನು ಮೊಸಳೆಗಳ ಸಹಿತ ಸಮುದ್ರದ ಭೀಷಣ ಗರ್ಜನೆಯಂತೆ ಅತ್ಯಂತ ಭಯಂಕರವಾಗಿ ಅನಿಸುತ್ತಿತ್ತು.॥35॥

ಮೂಲಮ್ - 36

ರಾವಣಸ್ಯ ತು ತೇಽಮಾತ್ಯಾಃ ಪ್ರಹಸ್ತ ಶುಕಸಾರಣಾಃ ।
ಕಾರ್ತವೀರ್ಯಬಲಂ ಕ್ರುದ್ಧಾ ನಿಹಂತಿ ಸ್ಮ ಸ್ವತೇಜಸಾ ॥

ಅನುವಾದ

ರಾವಣನ ಮಂತ್ರಿಗಳಾದ ಪ್ರಹಸ್ತ, ಶುಕ - ಸಾರಣ ಮುಂತಾದವರು ಕುಪಿತರಾಗಿ ತಮ್ಮ ಬಲಪರಾಕ್ರಮದಿಂದ ಕಾರ್ತವೀರ್ಯಾರ್ಜುನನ ಸೈನ್ಯವನ್ನು ಸಂಹರಿಸತೊಡಗಿದರು.॥36॥

ಮೂಲಮ್ - 37

ಅರ್ಜುನಾಯ ತು ತತ್ಕರ್ಮ ರಾವಣಸ್ಯ ಸಮಂತ್ರಿಣಃ ।
ಕ್ರೀಡಮಾನಾಯ ಕಥಿತಂ ಪುರುಷೈರ್ಭಯವಿಹ್ವಲೈಃ ॥

ಅನುವಾದ

ಆಗ ಅರ್ಜುನನ ಸೇವಕರು ಭಯದಿಂದ ವಿಹ್ವಲರಾಗಿ ಕ್ರೀಡೆಯಲ್ಲಿ ತೊಡಗಿದ್ದ ಅರ್ಜುನನಲ್ಲಿ ಮಂತ್ರಿಗಳ ಸಹಿತ ರಾವಣನ ಆ ಕ್ರೂರಕರ್ಮದ ಸಮಾಚಾರ ತಿಳಿಸಿದರು.॥37॥

ಮೂಲಮ್ - 38

ಶ್ರುತ್ವಾ ನ ಭೇತವ್ಯಮಿತಿ ಸ್ತ್ರೀಜನಂ ಸ ತದಾರ್ಜುನಃ ।
ಉತ್ತತಾರ ಜಲಾತ್ತಸ್ಮಾದ್ ಗಂಗಾತೋಯಾದಿವಾಂಜನಃ ॥

ಅನುವಾದ

ಕೇಳಿ ಅರ್ಜುನನು ತನ್ನ ಪತ್ನಿಯಲ್ಲಿ- ನೀವೆಲ್ಲರೂ ಹೆದರಬೇಡಿ ಎಂದು ಹೇಳಿದನು. ಮತ್ತೆ ಅವರೆಲ್ಲರೊಂದಿಗೆ ದಿಗ್ಗಜವು ಹೆಣ್ಣಾನೆಗಳೊಂದಿಗೆ ಗಂಗೆಯಿಂದ ಹೊರಗೆ ಬರುವಂತೆ, ನರ್ಮದಾ ಜಲದಿಂದ ಹೊರಬಂದನು.॥38॥

ಮೂಲಮ್ - 39

ಕ್ರೋಧದೂಷಿತನೇತ್ರಸ್ತು ಸ ತದಾರ್ಜುನಪಾವಕಃ ।
ಪ್ರಜಜ್ವಾಲ ಮಹಾಘೋರೋ ಯುಗಾಂತ ಇವ ಪಾವಕಃ ॥

ಅನುವಾದ

ಅವನ ಕಣ್ಣುಗಳು ರೋಷದಿಂದ ಕೆಂಪಾಗಿ ಆ ಅರ್ಜುನನು ಪ್ರಳಯಕಾಲದ ಮಹಾಭಯಂಕರ ಪಾವಕದಂತೆ ಪ್ರಜ್ವಲಿತನಾದನು.॥39॥

ಮೂಲಮ್ - 40

ಸ ತೂರ್ಣತರಮಾದಾಯ ವರಹೇಮಾಂಗದೋ ಗದಾಮ್ ।
ಅಭಿದುದ್ರಾವ ರಕ್ಷಾಂಸಿ ತಮಾಂಸೀವ ದಿವಾಕರಃ ॥

ಅನುವಾದ

ಸುಂದರ ಸ್ವರ್ಣ ಅಂಗದಗಳನ್ನು ಧರಿಸುವ ವೀರ ಅರ್ಜುನನು ಕೂಡಲೇ ಗದೆಯನ್ನೆತ್ತಿಕೊಂಡು ಆ ರಾಕ್ಷಸರನ್ನು ಸೂರ್ಯನು ಅಂಧಕಾರದ ಮೇಲೆ ಆಕ್ರಮಿಸುವಂತೆ ಆಕ್ರಮಿಸಿದನು.॥40॥

ಮೂಲಮ್ - 41

ಬಾಹುವಿಕ್ಷೇಪಕರಣಾಂ ಸಮುದ್ಯಮ್ಯ ಮಹಾಗದಾಮ್ ।
ಗಾರುಡಂ ವೇಗಮಾಸ್ಥಾಯ ಆಪಪಾತೈವ ಸೋಽರ್ಜುನಃ ॥

ಅನುವಾದ

ಭುಜಗಳಿಂದ ತಿರುಹುತ್ತಿರುವ ಆ ವಿಶಾಲ ಗದೆಯನ್ನೆತ್ತಿ ಗರುಡನ ವೇಗದಂತೆ ರಾಜಾ ಅರ್ಜುನನು ನಿಶಾಚರರ ಮೇಲೆರಗಿದನು.॥41॥

ಮೂಲಮ್ - 42

ತಸ್ಯ ಮಾರ್ಗಂ ಸಮಾರುದ್ಧ್ಯ ವಿಂಧ್ಯೊಽರ್ಕಸ್ಯೇವ ಪರ್ವತಃ ।
ಸ್ಥಿತೋ ವಿಂಧ್ಯ ಇವಾಕಂಪ್ಯಃ ಪ್ರಹಸ್ತೋ ಮುಸಲಾಯುಧಃ ॥

ಅನುವಾದ

ಆಗ ಮುಸಲಧಾರೀ ಪ್ರಹಸ್ತನು ಹಿಂದೆ ವಿಂಧ್ಯಾಚಲವು ಸೂರ್ಯಪಥವನ್ನು ತಡೆದಂತೆ, ವಿಂಧ್ಯಗಿರಿಯಂತೆ ಅವಿಚಲನಾಗಿ ಅರ್ಜುನನನ್ನು ತಡೆದು ನಿಂತನು.॥42॥

ಮೂಲಮ್ - 43

ತತೋಽಸ್ಯ ಮುಸಲಂ ಘೋರಂ ಲೋಹಬದ್ಧಂ ಮದೋದ್ಧತಃ ।
ಪ್ರಹಸ್ತಃ ಪ್ರೇಷಯನ್ ಕ್ರುದ್ಧೋ ರರಾಸ ಚ ಯಥಾಂತಕಃ ॥

ಅನುವಾದ

ಮದೋನ್ಮತ್ತನಾದ ಪ್ರಹಸ್ತನು ಕುಪಿತನಾಗಿ ಅರ್ಜುನನ ಮೇಲೆ ಲೋಹಮಯ ಒಂದು ಭಯಂಕರ ಮುಸಲಾಯುಧವನ್ನು ಪ್ರಯೋಗಿಸಿ ಭೀಷಣ ಗರ್ಜನೆ ಮಾಡಿದನು.॥43॥

ಮೂಲಮ್ - 44

ತಸ್ಯಾಗ್ರೇ ಮುಸಲಸ್ಯಾಗ್ನಿರಶೋಕಾಪೀಡ ಸಂನಿಭಃ ।
ಪ್ರಹಸ್ತಕರಮುಕ್ತಸ್ಯ ಬಭೂವ ಪ್ರದಹನ್ನಿವ ॥

ಅನುವಾದ

ಪ್ರಹಸ್ತನು ಪ್ರಯೋಗಿಸಿದ ಆ ಮುಸಲದ ತುದಿಯಿಂದ ಅನೇಕ ಪುಷ್ಪಗಳಂತೆ ಕೆಂಪಾದ ಬೆಂಕಿಯು ಪ್ರಕಟವಾಗಿ ಉರಿಯತೊಡಗಿತು.॥44॥

ಮೂಲಮ್ - 45

ಅಧಾವಮಾನಂ ಮುಸಲಂ ಕಾರ್ತವೀರ್ಯಸ್ತದಾರ್ಜುನಃ ।
ನಿಪುಣಂ ವಂಚಯಾಮಾಸ ಗದಯಾ ಗತವಿಕ್ಲವಃ ॥

ಅನುವಾದ

ಆದರೆ ಕಾರ್ತವೀರ್ಯಾರ್ಜುನನು ಕೊಂಚವೂ ಭಯಪಡದೆ, ತನ್ನ ಕಡೆಗೆ ವೇಗವಾಗಿ ಬರುತ್ತಿದ್ದ ಮುಸಲಾಯುಧವನ್ನು ಗದೆಯಿಂದ ಹೊಡೆದು ವಿಫಲವಾಗಿಸಿದನು.॥45॥

ಮೂಲಮ್ - 46

ತತಸ್ತಮಭಿದುದ್ರಾವ ಸಗದೋ ಹೈಹಯಾಧಿಪಃ ।
ಭ್ರಾಮಯಾಣೋ ಗದಾಂ ಗುರ್ವೀಂ ಪಂಚಬಾಹುಶತೋಚ್ಛ್ರಯಾಮ್ ॥

ಅನುವಾದ

ಬಳಿಕ ಗದಾಧಾರೀ ಹೈಹಯರಾಜನು ಐದುನೂರು ಭುಜಗಳಿಂದ ಎತ್ತಿ ಪ್ರಯೋಗಿಸುವ ಆ ಭಾರೀ ಗದೆಯನ್ನು ತಿರುಗಿಸುತ್ತಾ ಪ್ರಹಸ್ತನ ಕಡೆಗೆ ಓಡಿದನು.॥46॥

ಮೂಲಮ್ - 47

ತತೋ ಹತೋಽತಿವೇಗೇನ ಪ್ರಹಸ್ತೋ ಗದಯಾ ತದಾ ।
ನಿಪಪಾತ ಸ್ಥಿತಃ ಶೈಲೋ ವಜ್ರಿವಜ್ರಹತೋ ಯಥಾ ॥

ಅನುವಾದ

ಆ ಗದೆಯಿಂದ ವೇಗವಾಗಿ ಆಹತನಾದ ಪ್ರಹಸ್ತನು ವಜ್ರಧಾರೀ ಇಂದ್ರನ ವಜ್ರಾಘಾತದಿಂದ ಪರ್ವತವು ಕುಸಿಯುವಂತೆ ಕೂಡಲೇ ನೆಲಕ್ಕೆ ಬಿದ್ದುಬಿಟ್ಟನು.॥47॥

ಮೂಲಮ್ - 48

ಪ್ರಹಸ್ತಂ ಪತಿತಂ ದೃಷ್ಟ್ವಾ ಮಾರೀಚ ಶುಕ ಸಾರಣಾಃ ।
ಸಮಹೋದರಧೂಮ್ರಾಕ್ಷಾ ಅಪಸೃಷ್ಟಾರಣಾಜಿರಾತ್ ॥

ಅನುವಾದ

ಪ್ರಹಸ್ತನು ಧರಾಶಾಯಿಯಾದುದನ್ನು ನೋಡಿ ಮಾರೀಚ, ಶುಕ-ಸಾರಣ, ಮಹೋದರ, ಧೂಮ್ರಾಕ್ಷ ಇವರು ಸಮರಾಂಗಣದಿಂದ ಓಡಿಹೋದರು.॥48॥

ಮೂಲಮ್ - 49

ಅಪಕ್ರಾಂತೇಷ್ವಮಾತ್ಯೇಷು ಪ್ರಹಸ್ತೇ ಚ ನಿಪಾತಿತೇ ।
ರಾವಣೋಽಭ್ಯದ್ರವತ್ತೂರ್ಣಮರ್ಜುನಂ ನೃಪಸತ್ತಮಮ್ ॥

ಅನುವಾದ

ಪ್ರಹಸ್ತನು ಬಿದ್ದು, ಅಮಾತ್ಯರು ಓಡಿಹೋದಾಗ ರಾವಣನು ನೃಪಶ್ರೇಷ್ಠ ಅರ್ಜುನನ ಮೇಲೆ ಆಕ್ರಮಣ ಮಾಡಿದನು.॥49॥

ಮೂಲಮ್ - 50

ಸಹಸ್ರಬಾಹೋಸ್ತದ್ಯುದ್ಧಂ ವಿಂಶದ್ಭಾಹೋಶ್ಚ ದಾರುಣಮ್ ।
ನೃಪರಾಕ್ಷಸಯೋಸ್ತತ್ರ ಆರಬ್ಧಂ ರೋಮಹರ್ಷಣಮ್ ॥

ಅನುವಾದ

ಮತ್ತೆ ಸಾವಿರ ಭುಜವುಳ್ಳ ನರನಾಥ ಮತ್ತು ಇಪ್ಪತ್ತು ತೋಳುಗಳುಳ್ಳ ನಿಶಾಚರನಾಥರಲ್ಲಿ ಅಲ್ಲಿ ರೋಮಾಂಚಕರ ಭಯಂಕರ ಯುದ್ಧ ಪ್ರಾರಂಭವಾಯಿತು.॥50॥

ಮೂಲಮ್ - 51

ಸಾಗರಾವಿವ ಸಂಕ್ಷುಬ್ಧೌ ಚಲಮೂಲಾ ವಿವಾಚಲೌ ।
ತೇಜೋಯುಕ್ತಾ ವಿವಾದಿತ್ಯೌ ಪ್ರದಹಂತಾವಿವಾನಲೌ ॥

ಮೂಲಮ್ - 52

ಬಲೋದ್ಧತೌ ಯಥಾ ನಾಗೌ ವಾಸಿತಾರ್ಥೇ ಯಥಾ ವೃಷೌ ।
ಮೇಘಾವಿವ ವಿನರ್ದಂತೌ ಸಿಂಹಾವಿವ ಬಲೋತ್ತಟೌ ॥

ಮೂಲಮ್ - 53

ರುದ್ರಕಾಲಾವಿವ ಕ್ರುದ್ಧೌ ತೌ ತದಾ ರಾಕ್ಷಸಾರ್ಜುನೌ ।
ಪರಸ್ಪರಂ ಗದಾಂ ಗೃಹ್ಯ ತಾಡಯಾಮಾಸತುರ್ಭೃಶಮ್ ॥

ಅನುವಾದ

ವಿಕ್ಷುಬ್ಧವಾದ ಎರಡು ಸಮುದ್ರಗಳಂತೆ, ಬುಡ ಅಲ್ಲಾಡುವ ಎರಡು ಪರ್ವತಗಳಂತೆ, ಎರಡು ತೇಜಸ್ವೀ ಆದಿತ್ಯರಂತೆ, ಎರಡು ಉರಿಯುವ ಅಗ್ನಿಗಳಂತೆ, ಬಲೋನ್ಮತ್ತವಾದ ಎರಡು ಗಜರಾಜರಂತೆ, ಅಲೆ ಬಂದ ಹಸುವಿಗಾಗಿ ಕಾದಾಡುವ ಎರಡು ಗೂಳಿಗಳಂತೆ, ಜೋರಾಗಿ ಗರ್ಜಿಸುವ ಎರಡು ಮೇಘಗಳಂತೆ, ಬಲಶಾಲಿ ಎರಡು ಸಿಂಹಗಳಂತೆ, ಕ್ರೋಧಗೊಂಡ ರುದ್ರ ಮತ್ತು ಕಾಲನಂತೆ ರಾವಣ ಹಾಗೂ ಅರ್ಜುನರು ಗದೆಯನ್ನೆತ್ತಿಕೊಂಡು ಪರಸ್ಪರ ಹೊಡೆದಾಡತೊಡಗಿದರು.॥51-53॥

ಮೂಲಮ್ - 54

ವಜ್ರಪ್ರಹಾರಾನಚಲಾ ಯಥಾ ಘೋರಾನ್ ವಿಷೇಹಿರೇ ।
ಗದಾ ಪ್ರಹಾರಾಂಸ್ತೌ ತತ್ರ ಸೇಹಾತೇ ನರರಾಕ್ಷಸೌ ॥

ಅನುವಾದ

ಹಿಂದೆ ಪರ್ವತಗಳು ಭಯಂಕರ ವಜ್ರಾಘಾತವನ್ನು ಸಹಿಸಿದಂತೆ ಆ ಅರ್ಜುನ, ರಾವಣರು ಗದೆಗಳ ಪ್ರಹಾರಗಳನ್ನು ಸಹಿಸುತ್ತಿದ್ದರು.॥54॥

ಮೂಲಮ್ - 55

ಯಥಾಶನಿರವೇಭ್ಯಸ್ತು ಜಾಯತೇಽಥ ಪ್ರತಿಶ್ರುತಿಃ ।
ತಥಾ ತಯೋರ್ಗದಾಪೋಥೈರ್ದಿಶಃ ಸರ್ವಾಃ ಪ್ರತಿಶ್ರುತಾಃ ॥

ಅನುವಾದ

ಸಿಡಿಲಿನ ಶಬ್ದವು ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸು ವಂತೆ ಆ ವೀರರಿಬ್ಬರ ಗದಾಘಾತದಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸತೊಡಗಿದವು.॥55॥

ಮೂಲಮ್ - 56

ಅರ್ಜುನಸ್ಯ ಗದಾ ಸಾ ತು ಪಾತ್ಯಮಾನಾಹಿತೋರಸಿ ।
ಕಾಂಚನಾಭಂ ನಭಶ್ಚಕ್ರೇ ವಿದ್ಯುತ್ಸೌದಾಮನೀ ಯಥಾ ॥

ಅನುವಾದ

ಆಕಾಶದಲ್ಲಿ ಮಿಂಚು ಚಿನ್ನದ ಬಣ್ಣದಿಂದ ಪ್ರಕಾಶಿಸುವಂತೆ ರಾವಣನ ಎದೆಗೆ ಹೊಡೆದ ಅರ್ಜುನನ ಗದೆಯಿಂದ ಅವನ ವಕ್ಷಃಸ್ಥಳವು ಸುವರ್ಣ ಪ್ರಭೆಯನ್ನು ಚಿಮ್ಮುತ್ತಿತ್ತು.॥56॥

ಮೂಲಮ್ - 57

ತಥೈವ ರಾವಣೇನಾಪಿ ಪಾತ್ಯಮಾನಾ ಮುಹುರ್ಮುಹುಃ ।
ಅರ್ಜುನೋರಸಿ ನಿರ್ಭಾತಿ ಗದೋಲ್ಕೇವ ಮಹಾಗಿರೌ ॥

ಅನುವಾದ

ಹಾಗೆಯೇ ರಾವಣನು ಅರ್ಜುನನ ಎದೆಗೆ ಪದೆ-ಪದೆ ಹೊಡೆದ ಗದೆಯು ಮಹಾ ಪರ್ವತದ ಮೇಲೆ ಬೀಳುವ ಉಲ್ಕೆಯಂತೆ ಪ್ರಕಾಶಿತವಾಗುತ್ತಿತ್ತು.॥57॥

ಮೂಲಮ್ - 58

ನಾರ್ಜುನಃ ಖೇದಮಾಯಾತಿ ನ ರಾಕ್ಷಸಗಣೇಶ್ವರಃ ।
ಸಮಮಾಸೀತ್ತಯೋರ್ಯುದ್ಧಂ ಯಥಾ ಪೂರ್ವಂ ಬಲೀಂದ್ರಯೋಃ ॥

ಅನುವಾದ

ಆಗ ಅವರಿಬ್ಬರೂ ಬಳಲದೆ ಹಿಂದೆ ಪರಸ್ಪರ ಕಾದಾಡುತ್ತಿದ್ದ ಇಂದ್ರ ಮತ್ತು ಬಲಿಯಂತೆ ಅವರಿಬ್ಬರ ಯುದ್ಧ ಒಂದೇ ರೀತಿಯಾಗಿ ಕಾಣುತ್ತಿತ್ತು.॥58॥

ಮೂಲಮ್ - 59

ಶೃಂಗೈರಿವ ವೃಷಾಯಧ್ಯನ್ ದಂತಾಗ್ರೈರಿವ ಕುಂಜರೌ ।
ಪರಸ್ಪರಂ ವಿನಿಘ್ನಂತೌ ನರರಾಕ್ಷಸಸತ್ತಮೌ ॥

ಅನುವಾದ

ಗೂಳಿಯು ಕೊಂಬಿನಿಂದ ಹಾಗೂ ಆನೆಯು ದಂತದಿಂದ ಪರಸ್ಪರ ಪ್ರಹರಿಸುವಂತೆ ಆ ನರೇಶ ಮತ್ತು ನಿಶಾಚರ ಒಬ್ಬರು ಮತ್ತೊಬ್ಬರನ್ನು ಗದೆಯಿಂದ ಹೊಡೆಯುತ್ತಿದ್ದರು.॥59॥

ಮೂಲಮ್ - 60

ತತೋಽರ್ಜುನೇನ ಕ್ರುದ್ಧೇನ ಸರ್ವಪ್ರಾಣೇನ ಸಾ ಗದಾ ।
ಸ್ತನಯೋರಂತರೇ ಮುಕ್ತಾ ರಾವಣಸ್ಯ ಮಹೋರಸಿ ॥

ಅನುವಾದ

ಅಷ್ಟರಲ್ಲಿ ಅರ್ಜುನನು ಕುಪಿತನಾಗಿ ರಾವಣನ ವಿಶಾಲ ವಕ್ಷಃಸ್ಥಳದ ನಡುವೆ ಪೂರ್ಣ ಶಕ್ತಿಯಿಂದ ಗದಾಘಾತ ಮಾಡಿದನು.॥60॥

ಮೂಲಮ್ - 61

ವರದಾನಕೃತತ್ರಾಣೇ ಸಾ ಗದಾ ರಾವಣೋರಸಿ ।
ದುರ್ಬಲೇವ ಯಥಾವೇಗಂ ದ್ವಿಧಾಭೂತಾಪತತ್ ಕ್ಷಿತೌ ॥

ಅನುವಾದ

ಆದರೆ ರಾವಣನು ವರಪ್ರಭಾವದಿಂದ ಸುರಕ್ಷಿತನಾಗಿದ್ದನು. ಆದ್ದರಿಂದ ರಾವಣನ ಎದೆಗೆ ವೇಗವಾಗಿ ಪ್ರಯೋಗಿಸಿದ ಆ ಗದೆಯು ದುರ್ಬಲ ಗದೆಯಂತೆ ಎರಡು ತುಂಡಾಗಿ ನೆಲಕ್ಕೆ ಬಿದ್ದು ಹೋಯಿತು.॥61॥

ಮೂಲಮ್ - 62

ಸ ತ್ವರ್ಜುನಪ್ರಯುಕ್ತೇನ ಗದಾಘಾತೇನ ರಾವಣಃ ।
ಅಪಾಸರ್ಪದ್ಧನುರ್ಮಾತ್ರಂ ನಿಷಸಾದ ಚ ನಿಷ್ಟನನ್ ॥

ಅನುವಾದ

ಆದರೂ ಅರ್ಜುನನು ಪ್ರಯೋಗಿಸಿದ ಗದಾಘಾತದಿಂದ ಪೀಡಿತನಾದ ರಾವಣನು ಬಿಲ್ಲಂತರಕ್ಕೆ ಹಿಂದೆ ಸರಿದು ಆರ್ತನಾದ ಮಾಡುತ್ತಾ ಕುಳಿತುಬಿಟ್ಟನು.॥62॥

ಮೂಲಮ್ - 63

ಸ ವಿಹ್ವಲಂ ತದಾಲಕ್ಷ್ಯ ದಶಗ್ರೀವಂ ತತೋಽರ್ಜುನಃ ।
ಸಹಸೋತ್ಪತ್ಯ ಜಗ್ರಾಹ ಗರುತ್ಮಾನಿವ ಪನ್ನಗಮ್ ॥

ಅನುವಾದ

ದಶಗ್ರೀವನು ವ್ಯಾಕುಲನಾದುದನ್ನು ನೋಡಿ ಅರ್ಜುನನು ಕೂಡಲೇ ಹಾರಿ, ಗರುಡನು ಯಾವುದಾದರೂ ಸರ್ಪದ ಮೇಲೆ ಎರಗುವಂತೆ ಅವನನ್ನು ಹಿಡಿದುಕೊಂಡನು.॥63॥

ಮೂಲಮ್ - 64

ಸ ತು ಬಾಹುಸಹಸ್ರೇಣ ಬಲಾದ್ಗೃಹ್ಯ ದಶಾನನಮ್ ।
ಬಬಂಧ ಬಲವಾನ್ರಾಜಾ ಬಲಿಂ ನಾರಾಯಣೋ ಯಥಾ ॥

ಅನುವಾದ

ಹಿಂದೆ ಭಗವಾನ್ ನಾರಾಯಣನು ಬಲಿಯನ್ನು ಬಂಧಿಸಿ ದಂತೆ ಬಲವಂತ ರಾಜಾ ಅರ್ಜುನನು ದಶಾನನನನ್ನು ಬಲವಾಗಿ ಹಿಡಿದು ತನ್ನ ಸಾವಿರ ಕೈಗಳಿಂದ ಗಟ್ಟಿಯಾದ ಹಗ್ಗಗಳಿಂದ ಬಂಧಿಸಿದನು.॥64॥

ಮೂಲಮ್ - 65

ಬಧ್ಯಮಾನೇ ದಶಗ್ರೀವೇ ಸಿದ್ಧಚಾರಣದೇವತಾಃ ।
ಸಾಧ್ವೀತಿ ವಾದಿನಃ ಪುಷ್ಪೈಃ ಕಿರಂತ್ಯರ್ಜುನಮೂರ್ಧನಿ ॥

ಅನುವಾದ

ದಶಗ್ರೀವನು ಬಂಧಿತನಾದಾಗ ಸಿದ್ಧರು, ಚಾರಣರು, ದೇವತೆಗಳು ಭಲೇ! ಭಲೇ! ಎಂದು ಹೇಳುತ್ತಾ ಅರ್ಜುನನ ತಲೆಯ ಮೇಲೆ ಹೂವಿನ ಮಳೆ ಸುರಿಸಿದರು.॥65॥

ಮೂಲಮ್ - 66

ವ್ಯಾಘ್ರೋ ಮೃಗಮಿವಾದಾಯ ಮೃಗರಾಡಿವ ಕುಂಜರಮ್ ।
ರರಾಸ ಹೈಹಯೋ ರಾಜಾ ಹರ್ಷಾದಂಬುದವನ್ಮುಹುಃ ॥

ಅನುವಾದ

ಹುಲಿಯು ಜಿಂಕೆಯನ್ನು, ಸಿಂಹವು ಆನೆಯನ್ನು ಹಿಡಿಯುವಂತೆಯೇ ರಾವಣನನ್ನು ತನ್ನ ವಶಪಡಿಸಿಕೊಡು ಹೈಹಯರಾಜನು ಹರ್ಷಾತಿರೇಕದಿಂದ ಮೇಘದಂತೆ ಪುನಃ ಪುನಃ ಗರ್ಜಿಸತೊಡಗಿದನು.॥66॥

ಮೂಲಮ್ - 67

ಪ್ರಹಸ್ತಸ್ತು ಸಮಾಶ್ವಸ್ತೋ ದೃಷ್ಟ್ವಾ ಬದ್ಧಂ ದಶಾನನಮ್ ।
ಸಹಸಾ ರಾಕ್ಷಸಃ ಕ್ರುದ್ಧೋ ಹ್ಯಭಿದುದ್ರಾವ ಹೈಹಯಮ್ ॥

ಅನುವಾದ

ಬಳಿಕ ಪ್ರಹಸ್ತನು ಎಚ್ಚರಗೊಂಡು, ದಶಮುಖ ರಾವಣನು ಬಂಧಿತನಾದುದನ್ನು ನೋಡಿ ರಾಕ್ಷಸನು ಕುಪಿತನಾಗಿ ಹೈಹಯನ ಕಡೆಗೆ ಓಡಿದನು.॥67॥

ಮೂಲಮ್ - 68

ನಕ್ತಂಚರಾಣಾಂ ವೇಗಸ್ತು ಶೇಷಾಮಾಪತತಾಂ ಬಭೌ ।
ಉದ್ಭೂತ ಆತಪಾಪಾಯೇ ಪಯೋದಾನಾಮಿವಾಂಬುಧೌ ॥

ಅನುವಾದ

ಮಳೆಗಾಲ ಬಂದಾಗ ಸಮುದ್ರದಲ್ಲಿ ಉಬ್ಬರ ಬರುವಂತೆ ಅಲ್ಲಿ ಆಕ್ರಮಿಸುತ್ತಿರುವ ಆ ನಿಶಾಚರರ ವೇಗ ಹೆಚ್ಚಿದಂತೆ ಅನಿಸುತ್ತಿತ್ತು.॥68॥

ಮೂಲಮ್ - 69

ಮುಂಚ ಮಂಚೇತಿ ಭಾಷಂ ತಸ್ತಿಷ್ಠ ತಿಷ್ಠೇತಿ ಚಾಸಕೃತ್ ।
ಮುಸಲಾನಿ ಚ ಶೂಲಾನಿ ಸೋತ್ಸಸರ್ಜ ತದಾ ರಣೇ ॥

ಅನುವಾದ

ಬಿಡು, ಬಿಡು, ನಿಲ್ಲು, ಎಂದು ಪದೇ-ಪದೇ ಹೇಳುತ್ತಾ ರಾಕ್ಷಸರು ಅರ್ಜುನನ ಕಡೆಗೆ ಓಡಿದರು. ಆಗ ಪ್ರಹಸ್ತರು ರಣಭೂಮಿಯಲ್ಲಿ ಅರ್ಜುನನ ಮೇಲೆ ಮುಸಲ, ಶೂಲಗಳಿಂದ ಪ್ರಹರಿಸಿದನು.॥69॥

ಮೂಲಮ್ - 70

ಅಪ್ರಾಪ್ತಾನ್ಯೇವ ತಾನ್ಯಾಶು ಅಸಂಭ್ರಾಂತಸ್ತದಾರ್ಜುನಃ ।
ಆಯುಧಾನ್ಯಮರಾರೀಣಾಂ ಜಗ್ರಾಹಾರಿ ನಿಷೂದನಃ ॥

ಅನುವಾದ

ಆದರೆ ಅರ್ಜುನನು ಆಗ ಗಾಬರಿಗೊಳ್ಳಲಿಲ್ಲ. ಆ ಶತ್ರುಸೂದನ ವೀರನು ಪ್ರಹಸ್ತಾದಿ ದೇವದ್ರೋಹಿ ನಿಶಾಚರರು ಬಿಟ್ಟಿರುವ ಅಸ್ತ್ರಗಳು ತನ್ನ ಬಳಿ ಬರುವ ಮೊದಲೇ ಹಿಡಿದುಕೊಂಡನು.॥70॥

ಮೂಲಮ್ - 71

ತತಸ್ತೈರೇವ ರಕ್ಷಾಂಸಿ ದುರ್ಧರೈಃ ಪ್ರವರಾಯುಧೈಃ ।
ಭಿತ್ತ್ವಾ ವಿದ್ರಾವಯಾಮಾಸ ವಾಯುರಂಬುಧರಾನಿವ ॥

ಅನುವಾದ

ಮತ್ತೆ ಅದೇ ದುರ್ಧರ ಶ್ರೇಷ್ಠ ಆಯುಧಗಳಿಂದ ಆ ಎಲ್ಲ ರಾಕ್ಷಸರನ್ನು ಗಾಯಗೊಳಿಸಿ ಗಾಳಿಯು ಮೋಡಗಳನ್ನು ಛಿನ್ನ-ಭಿನ್ನ ಮಾಡಿ ಹಾರಿಸಿಬಿಡುವಂತೆ ಓಡಿಸಿಬಿಟ್ಟನು.॥71॥

ಮೂಲಮ್ - 72

ರಾಕ್ಷಸಾಂಸ್ತ್ರಾಸಯಾಮಾಸ ಕಾರ್ತವೀರ್ಯಾರ್ಜುನಸ್ತದಾ ।
ರಾವಣಂ ಗೃಹ್ಯ ನಗರಂ ಪ್ರವಿವೇಶ ಸುಹೃದ್ವೃತಃ ॥

ಅನುವಾದ

ಆಗ ಕಾರ್ತವೀರ್ಯಾರ್ಜುನನು ಸಮಸ್ತ ರಾಕ್ಷಸರನ್ನು ಭಯಗೊಳಿಸಿ, ರಾವಣನನ್ನು ಕರೆದುಕೊಂಡು ಅವನು ತನ್ನ ಸುಹೃದರೊಂದಿಗೆ ನಗರಕ್ಕೆ ಹೋದನು.॥72॥

ಮೂಲಮ್ - 73

ಸ ಕೀರ್ಯಮಾಣಃ ಕುಸುಮಾಕ್ಷತೋತ್ಕರೈ-
ರ್ದ್ವಿಜೈಃ ಸಪೌರೈಃ ಪುರುಹೂತ ಸಂನಿಭಃ ।
ತತೋಽರ್ಜುನಃ ಸ್ವಾಂ ಪ್ರವಿವೇಶ ತಾಂ ಪುರೀಂ
ಬಲಿಂ ನಿಗೃಹ್ಯೇವ ಸಹಸ್ರಲೋಚನಃ ॥

ಅನುವಾದ

ನಗರಕ್ಕೆ ಬಂದಾಗ ಬ್ರಾಹ್ಮಣರು, ಪ್ರಜಾಜನರು ತಮ್ಮ ಇಂದ್ರತುಲ್ಯ ತೇಜಸ್ವೀ ರಾಜನ ಮೇಲೆ ಹೂವೂ, ಅಕ್ಷತೆಗಳನ್ನು ಚೆಲ್ಲಿದರು. ಸಹಸ್ರಾಕ್ಷ ಇಂದ್ರನು ಬಲಿಯನ್ನು ಬಂದಿಯಾಗಿಸಿಕೊಂಡು ಹೋದಂತೆಯೇ ರಾಜಾ ಅರ್ಜುನನು ಬಂಧಿಸಿದ ರಾವಣನನ್ನು ಜೊತೆಗೆ ತೆಗೆದುಕೊಂಡು ಪುರಿಯನ್ನು ಪ್ರವೇಶಿಸಿದನು.॥73॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತೆರಡನೆಯ ಸರ್ಗ ಪೂರ್ಣವಾಯಿತು. ॥32॥