[ಮೂವತ್ತನೆಯ ಸರ್ಗ]
ಭಾಗಸೂಚನಾ
ಮೇಘನಾದನಿಗೆ ಬ್ರಹ್ಮನಿಂದ ವರದಾನ, ಇಂದ್ರನ ಬಿಡುಗಡೆ, ಇಂದ್ರನು ಹಿಂದೆ ಮಾಡಿದ ಪಾಪಕರ್ಮವನ್ನು ತಿಳಿಸಿ ವೈಷ್ಣವಯಾಗವನ್ನು ಮಾಡುವಂತೆ ಬ್ರಹ್ಮನ ಆದೇಶ, ಯಾಗವನ್ನು ಪೂರೈಸಿ ಇಂದ್ರನ ಸ್ವರ್ಗಲೋಕಾಗಮನ
ಮೂಲಮ್ - 1
ಜಿತೇ ಮಹೇಂದ್ರೇಽತಿಬಲೇ ರಾವಣಸ್ಯ ಸುತೇನ ವೈ।
ಪ್ರಜಾಪತಿಂ ಪುರಸ್ಕೃತ್ಯ ಯಯುರ್ಲಂಕಾಂ ಸುರಾಸ್ತದಾ ॥
ಅನುವಾದ
ರಾವಣಪುತ್ರ ಮೇಘನಾದನು ಮಹಾಬಲಿಷ್ಠನಾದ ಇಂದ್ರನನ್ನು ಗೆದ್ದು ತನ್ನ ನಗರಕ್ಕೆ ಕೊಂಡು ಹೋದಾಗ ಸಮಸ್ತ ದೇವತೆಗಳು ಬ್ರಹ್ಮದೇವರನ್ನು ಮುಂದೆ ಮಾಡಿ ಲಂಕೆಗೆ ಆಗಮಿಸಿದರು.॥1॥
ಮೂಲಮ್ - 2
ತತ್ರ ರಾವಣಮಾಸಾದ್ಯ ಪುತ್ರಭ್ರಾತೃಭಿರಾವೃತಮ್ ।
ಅಬ್ರವೀದ್ಗಗನೇ ತಿಷ್ಠನ್ ಸಾಮಪೂರ್ವಂ ಪ್ರಜಾಪತಿಃ ॥
ಅನುವಾದ
ಮಕ್ಕಳಿಂದಲೂ, ಸಹೋದರ ರಿಂದಲೂ, ಸಮಾವೃತನಾಗಿ ಕುಳಿತ್ತಿದ್ದ ರಾವಣನ ಬಳಿಗೆ ಹೋಗಿ ಬ್ರಹ್ಮದೇವರು ಆಕಾಶದಲ್ಲೇ ನಿಂತು ಸೌಮ್ಯವಾದ ಮಾತುಗಳಿಂದ ಹೇಳಿದರು.॥2॥
ಮೂಲಮ್ - 3
ವತ್ಸ ರಾವಣ ತುಷ್ಟೋಽಸ್ಮಿ ಪುತ್ರಸ್ಯ ತವ ಸಂಯುಗೇ ।
ಅಹೋಽಸ್ಯ ವಿಕ್ರಮೌದಾರ್ಯಂ ತವ ತುಲ್ಯೋಽಧಿಕೋಽಪಿ ವಾ ॥
ಅನುವಾದ
ವತ್ಸ ರಾವಣ! ಯುದ್ಧದಲ್ಲಿ ನಿನ್ನ ಪುತ್ರನ ಶೌರ್ಯವನ್ನು ನೋಡಿ ನಾನು ಬಹಳ ಸಂತುಷ್ಟನಾಗಿದ್ದೇನೆ. ಅಯ್ಯಾ! ಅವನ ಉದಾರ ಪರಾಕ್ರಮ ನಿನ್ನಂತೆಯೇ ಅಥವಾ ನಿನಗಿಂತಲೂ ಮಿಗಿಲಾಗಿದೆ.॥3॥
ಮೂಲಮ್ - 4
ಜಿತಂ ಹಿ ಭವತಾ ಸರ್ವಂ ತ್ರೈಲೋಕ್ಯಂ ಸ್ವೇನ ತೇಜಸಾ ।
ಕೃತಾ ಪ್ರತಿಜ್ಞಾ ಸಫಲಾ ಪ್ರೀತೋಽಸ್ಮಿ ಸಸುತಸ್ಯ ತೇ ॥
ಅನುವಾದ
ನೀನು ನಿನ್ನ ತೇಜದಿಂದ ಮೂರು ಲೋಕಗಳನ್ನು ಗೆದ್ದುಕೊಂಡಿರುವೆ. ತನ್ನ ಪ್ರತಿಜ್ಞೆಯನ್ನು ಸಫಲಗೊಳಿಸಿರುವೆ. ಅದಕ್ಕಾಗಿ ಪುತ್ರಸಹಿತ ನಿನ್ನ ಮೇಲೆ ನಾನು ಬಹಳ ಪ್ರಸನ್ನನಾಗಿದ್ದೇನೆ.॥4॥
ಮೂಲಮ್ - 5
ಅಯಂ ಚ ಪುತ್ರೋಽತಿಬಲಸ್ತವ ರಾವಣ ವೀರ್ಯವಾನ್ ।
ಜಗತೀಂದ್ರಜಿದಿತ್ಯೇವ ಪರಿಖ್ಯಾತೋ ಭವಿಷ್ಯತಿ ॥
ಅನುವಾದ
ರಾವಣ! ನಿನ್ನ ಪುತ್ರನು ಅತಿಶಯ ಬಲಶಾಲಿ ಮತ್ತು ಪರಾಕ್ರಮಿಯಾಗಿದ್ದಾನೆ. ಇಂದಿನಿಂದ ಇವನು ಇಂದ್ರಜಿತು ಎಂಬ ಹೆಸರಿನಿಂದ ವಿಖ್ಯಾತನಾಗುವನು.॥5॥
ಮೂಲಮ್ - 6
ಬಲವಾನ್ದುರ್ಜಯಶ್ಚೈವ ಭವಿಷ್ಯತ್ಯೇವ ರಾಕ್ಷಸಃ ।
ಯಂ ಸಮಾಶ್ರಿತ್ಯ ತೇ ರಾಜನ್ ಸ್ಥಾಪಿತಾಸ್ತ್ರಿದಶಾ ವಶೇ ॥
ಅನುವಾದ
ರಾಜನೇ! ಈ ರಾಕ್ಷಸನು ದೊಡ್ಡ ಬಲವಂತ ಮತ್ತು ದುರ್ಜಯನಾಗುವನು. ಅವನ ಆಶ್ರಯ ಪಡೆದು ನೀನು ಸಮಸ್ತ ದೇವತೆಗಳನ್ನು ಅಧೀನವಾಗಿಸಿಕೊಂಡಿರುವೆ.॥6॥
ಮೂಲಮ್ - 7
ತನ್ಮುಚ್ಯತಾಂ ಮಹಾಬಾಹೋ ಮಹೇಂದ್ರಃ ಪಾಕಶಾಸನಃ ।
ಕಿಂ ಚಾಸ್ಯ ಮೋಕ್ಷಣಾರ್ಥಾಯ ಪ್ರಯಚ್ಛಂತು ದಿವೌಕಸಃ ॥
ಅನುವಾದ
ಮಹಾಬಾಹೋ! ಈಗ ನೀನು ಪಾಕಶಾಸನ ಇಂದ್ರನನ್ನು ಬಿಟ್ಟು ಬಿಡು. ಇವನನ್ನು ಬಿಟ್ಟು ಬದಲಿಗೆ ನಿನಗೆ ದೇವತೆಗಳು ಏನು ಕೊಡಬೇಕು.॥7॥
ಮೂಲಮ್ - 8
ಅಥಾಬ್ರವೀನ್ಮಹಾತೇಜಾ ಇಂದ್ರಜಿತ್ಸಮಿತಿಂಜಯಃ ।
ಅಮರತ್ವಮಹಂ ದೇವ ವೃಣೇ ಯದ್ಯೇಷ ಮುಚ್ಯತೇ ॥
ಅನುವಾದ
ಆಗ ಯುದ್ಧವಿಜಯಿ ಮಹಾತೇಜಸ್ವೀ ಇಂದ್ರಜಿತನು ಸ್ವತಃ ಹೇಳಿದನು - ದೇವ! ಇಂದ್ರನನ್ನು ಬಿಡಬೇಕಿದ್ದರೆ ನಾನು ಇದರ ಬದಲಿಗೆ ಅಮರತ್ವವನ್ನು ಪಡೆಯಲಿಚ್ಛಿಸುತ್ತೇನೆ.॥8॥
ಮೂಲಮ್ - 9½
ತತೋಽಬ್ರವೀನ್ಮಹಾತೇಜಾ ಮೇಘನಾದಂ ಪ್ರಜಾಪತಿಃ ।
ನಾಸ್ತಿ ಸರ್ವಾಮರತ್ವಂ ಹಿ ಕಸ್ಯಚಿತ್ಪ್ರಾಣಿನೋ ಭುವಿ ॥
ಪಕ್ಷಿಣಶ್ಚತುಷ್ಪದೋ ವಾ ಭೂತಾನಾಂ ವಾ ಮಹೌಜಸಾಮ್ ।
ಅನುವಾದ
ಇದನ್ನು ಕೇಳಿ ಮಹಾತೇಜಸ್ವೀ ಬ್ರಹ್ಮದೇವರು ಮೇಘ ನಾದನಲ್ಲಿ ಹೇಳಿದರು - ಮಗು ! ಈ ಭೂತಳದಲ್ಲಿ ಪಕ್ಷಿಗಳು, ಚತುಷ್ಪಾದಗಳು, ಮಹಾತೇಜಸ್ವೀ ಮನುಷ್ಯಾದಿ ಪ್ರಾಣಿಗಳಲ್ಲಿ ಯಾರೂ ಸರ್ವಥಾ ಅಮರರಾಗಲಾರರು.॥9½॥
ಮೂಲಮ್ - 10½
ಶ್ರುತ್ವಾ ಪಿತಾಮಹೇನೋಕ್ತಮಿಂದ್ರಜಿತ್ಪ್ರಭುಣಾವ್ಯಯಮ್ ॥
ಅಥಾಬ್ರವೀತ್ಸ ತತ್ರಸ್ಥಂ ಮೇಘನಾದೋ ಮಹಾಬಲಃ ।
ಅನುವಾದ
ಭಗವಾನ್ ಬ್ರಹ್ಮದೇವರು ಹೇಳಿದ ಮಾತನ್ನು ಕೇಳಿ ಇಂದ್ರವಿಜಯಿ ಮೇಘನಾದನು ಅಲ್ಲಿ ನಿಂತಿರುವ ಅವಿನಾಶೀ ಬ್ರಹ್ಮನಲ್ಲಿ ಹೇಳಿದನು.॥10½॥
ಮೂಲಮ್ - 11
ಶ್ರೂಯತಾಂ ಯಾ ಭವೇತ್ಸಿದ್ಧಿಃ ಶತಕ್ರತು ವಿಮೋಕ್ಷಣೇ ॥
ಮೂಲಮ್ - 12
ಮಮೇಷ್ಟಂ ನಿತ್ಯತೋ ಹವ್ಯೈರ್ಮಂತ್ರೈಃ ಸಂಪೂಜ್ಯ ಪಾವಕಮ್ ।
ಸಂಗ್ರಾಮಮವತರ್ತುಂ ಚ ಶತ್ರುನಿರ್ಜಯಕಾಂಕ್ಷಿಣಃ ॥
ಮೂಲಮ್ - 13
ಅಶ್ವಯುಕ್ತೋ ರಥೋ ಮಹ್ಯಮುತ್ತಿಷ್ಠೇತ್ತು ವಿಭಾವಸೋಃ ।
ತತ್ಸ್ಥಸ್ಯಾಮರತಾ ಸ್ಯಾನ್ಮೇ ಏಷ ಮೇ ನಿಶ್ಚಿತೋ ವರಃ ॥
ಅನುವಾದ
ಭಗವನ್! ಸರ್ವಥಾ ಅಮರತ್ವವು ಅಸಂಭವವಾದರೆ, ಇಂದ್ರನನ್ನು ಬಿಟ್ಟ ಬದಲಿಗೆ ನನ್ನ ಇನ್ನೊಂದು ಶರತ್ತು ನಾನು ಪ್ರಾಪ್ತಿ ಮಾಡಿಕೊಳ್ಳುವ ಇನ್ನೊಂದು ಸಿದ್ಧಿಯನ್ನು ಕೇಳು - ನಾನು ಶತ್ರುವನ್ನು ಗೆಲ್ಲುವ ಇಚ್ಛೆಯಿಂದ ಸಂಗ್ರಾಮಕ್ಕೆ ಹೋದಾಗ ಮತ್ತು ಮಂತ್ರಯುಕ್ತ ಅಗ್ನಿಗೆ ಆಹುತಿಯನ್ನು ನೀಡಿ ಪೂಜಿಸುವಾಗ, ಅಗ್ನಿಯಿಂದ ನನಗಾಗಿ ಒಂದು ರಥ ಪ್ರಕಟವಾಗಲಿ, ಅದು ಕುದುರೆಗಳನ್ನು ಹೂಡಿ ಸಿದ್ಧವಾಗಿರಲಿ ಮತ್ತು ಅದರಲ್ಲಿ ನಾನು ಕುಳಿತಿರುವತನಕ ನನ್ನನ್ನು ಯಾರೂ ಕೊಲ್ಲದಿರಲಿ, ಇದು ಸದಾ ನಿಯಮವಾಗಿರಲಿ; ಇದೇ ನನ್ನ ನಿಶ್ಚಯವಾಗಿದೆ.॥11-13॥
ಮೂಲಮ್ - 14
ತಸ್ಮಿನ್ಯದ್ಯಸಮಾಪ್ತೇ ಚ ಜಪ್ಯಹೋಮೇ ವಿಭಾವಸೌ ।
ಯುಧ್ಯೇಯಂ ದೇವ ಸಂಗ್ರಾಮೇ ತದಾ ಮೇ ಸ್ಯಾದ್ವಿನಾಶನಮ್ ॥
ಅನುವಾದ
ಯುದ್ಧನಿಮಿತ್ತ ಮಾಡುವ ಜಪ-ಹೋಮ ಪೂರ್ಣಗೊಳಿಸದೆಯೇ ನಾನು ಸಮರಾಂಗಣದಲ್ಲಿ ಯುದ್ಧಮಾಡತೊಡಗಿದರೆ ಆಗ ನನ್ನ ವಿನಾಶವಾಗಲಿ.॥14॥
ಮೂಲಮ್ - 15
ಸರ್ವೋಹಿ ತಪಸಾ ದೇವ ವೃಣೋತ್ಯಮರತಾಂ ಪುಮಾನ್ ।
ವಿಕ್ರಮೇಣ ಮಯಾ ಶ್ವೇತದಮರತ್ವಂ ಪ್ರವರ್ತಿತಮ್ ॥
ಅನುವಾದ
ದೇವ! ಎಲ್ಲ ಜನರು ತಪಸ್ಸು ಮಾಡಿ ಅಮರತ್ವ ಪ್ರಾಪ್ತಮಾಡಿಕೊಳ್ಳುತ್ತಾರೆ. ಆದರೆ ನಾನು ಪರಾಕ್ರಮದಿಂದ ಈ ಅಮರತ್ವವನ್ನು ವರಿಸಿದ್ದೇನೆ.॥15॥
ಮೂಲಮ್ - 16
ಏವಮಸ್ತ್ವಿತಿ ತಂ ಚಾಹ ವಾಕ್ಯಂ ದೇವಃ ಪಿತಾಮಹಃ ।
ಮುಕ್ತಶ್ಚೇಂದ್ರಜಿತಾ ಶಕ್ರೋ ಗತಾಶ್ಚ ತ್ರಿದಿವಂ ಸುರಾಃ ॥
ಅನುವಾದ
ಇದನ್ನು ಕೇಳಿ ಬ್ರಹ್ಮದೇವರು ‘ಏವಮಸ್ತು’ (ಹಾಗೆಯೇ ಆಗಲಿ) ಎಂದು ಹೇಳಿದರು. ಬಳಿಕ ಇಂದ್ರಜಿತು ಇಂದ್ರನನ್ನು ಮುಕ್ತಗೊಳಿಸಿದನು. ಎಲ್ಲ ದೇವತೆಗಳು ಅವನನ್ನು ಜೊತೆಗೆ ಕರೆದುಕೊಂಡು ಸ್ವರ್ಗಕ್ಕೆ ತೆರಳಿದರು.॥16॥
ಮೂಲಮ್ - 17
ಏತಸ್ಮಿನ್ನಂತರೇ ರಾಮ ದೀನೋ ಭ್ರಷ್ಟಾಮರದ್ಯುತಿಃ ।
ಇಂದ್ರಶ್ಚಿಂತಾಪರೀತಾತ್ಮಾ ಧ್ಯಾನ ತತ್ಪರತಾಂ ಗತಃ ॥
ಅನುವಾದ
ಶ್ರೀರಾಮ! ಆಗ ಇಂದ್ರನ ದೇವೋಚಿತ ತೇಜ ನಾಶವಾಗಿತ್ತು. ಅವನು ಚಿಂತೆಯಲ್ಲಿ ಮುಳುಗಿ ತನ್ನ ಪರಾಜಯದ ಕಾರಣವನ್ನು ಯೋಚಿಸತೊಡಗಿದನು.॥17॥
ಮೂಲಮ್ - 18
ತಂ ತು ದೃಷ್ಟ್ವಾ ತಥಾಭೂತಂ ಪ್ರಾಹ ದೇವಃ ಪಿತಾಮಹಃ ।
ಶತಕ್ರತೋ ಕಿಮು ಪುರಾ ಕರೋತಿ ಸ್ಮ ಸುದುಷ್ಕೃತಮ್ ॥
ಅನುವಾದ
ಬ್ರಹ್ಮದೇವರು ಅವನ ಈ ಸ್ಥಿತಿಯನ್ನು ಗಮನಿಸಿ ಹೇಳಿದರು- ಶತಕ್ರತೋ! ಇಂದು ನಿನಗೆ ಈ ಅಪಮಾನದಿಂದ ಶೋಕ, ದುಃಖವಾಗುತ್ತಿದ್ದರೆ, ನೀನು ಹಿಂದೆ ಭಾರೀ ದುಷ್ಕರ್ಮ ಏಕೆ ಮಾಡಿದೆ? ಹೇಳು.॥18॥
ಮೂಲಮ್ - 19
ಅಮರೇಂದ್ರ ಮಯಾ ಬುದ್ಧ್ಯಾ ಪ್ರಜಾಃ ಸೃಷ್ಟಾಸ್ತಥಾ ಪ್ರಭೋ ।
ಏಕವರ್ಣಾಃ ಸಮಾಭಾಷಾ ಏಕರೂಪಾಶ್ಚ ಸರ್ವಶಃ ॥
ಅನುವಾದ
ದೇವರಾಜನೇ! ಮೊದಲು ನಾನು ನನ್ನ ಬುದ್ಧಿಯಿಂದ ಪ್ರಜೆಗಳನ್ನು ಉತ್ಪನ್ನ ಮಾಡಿದ್ದನೋ, ಅವರೆಲ್ಲರ ಅಂಗಕಾಂತಿ, ಭಾಷೆ, ರೂಪ, ವಯಸ್ಸು ಎಲ್ಲವೂ ಒಂದೇ ರೀತಿಯಾಗಿತ್ತು.॥19॥
ಮೂಲಮ್ - 20
ತಾಸಾಂ ನಾಸ್ತಿ ವಿಶೇಷೋ ಹಿ ದರ್ಶನೇ ಲಕ್ಷಣೇಽಪಿ ವಾ ।
ತತೋಽಹಮೇಕಾಗ್ರಮನಾಸ್ತಾಃ ಪ್ರಜಾಃ ಸಮಚಿಂತಯಮ್ ॥
ಅನುವಾದ
ಅವರ ರೂಪ, ಬಣ್ಣಗಳಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಆಗ ನಾನು ಆ ಪ್ರಜೆಗಳ ವಿಷಯದಲ್ಲಿ ವಿಶೇಷತೆ ಉಂಟುಮಾಡಲು ವಿಚಾರ ಮಾಡತೊಡಗಿದೆ.॥20॥
ಮೂಲಮ್ - 21
ಸೋಽಹಂ ತಾಸಾಂ ವಿಶೇಷಾರ್ಥಂ ಸ್ತ್ರಿಯಮೇಕಾಂ ವಿನಿರ್ಮಮೇ ।
ಯದ್ಯತ್ಪ್ರಜಾನಾಂ ಪ್ರತ್ಯಂಗಂ ವಿಶಿಷ್ಟಂ ತತ್ತದುದ್ಧೃತಮ್ ॥
ಅನುವಾದ
ವಿಚಾರ ಮಾಡಿದ ಬಳಿಕ ಆ ಎಲ್ಲ ಪ್ರಜೆಗಳಿಗಿಂತ ವಿಶಿಷ್ಟ ಪ್ರಜೆಯನ್ನು ಪ್ರಸ್ತುತಗೊಳಿಸಲು ನಾನು ಓರ್ವ ನಾರಿಯನ್ನು ಸೃಷ್ಟಿಸಿದೆ. ಪ್ರಜೆಗಳ ಪ್ರತಿಯೊಂದು ಅಂಗಗಳಲ್ಲಿದ್ದ ಸೌಂದರ್ಯ ವಿಶಿಷ್ಟತೆಯನ್ನು ಆಕೆಯ ಅಂಗಗಳಲ್ಲಿ ಪ್ರಕಟಿಸಿದೆನು.॥21॥
ಮೂಲಮ್ - 22
ತತೋ ಮಯಾ ರೂಪಗುಣೈರಹಲ್ಯಾಸ್ತ್ರೀ ವಿನಿರ್ಮಿತಾ ।
ಹಲಂ ನಾಮೇಹ ವೈರೂಪ್ಯಂ ಹಲ್ಯಂ ತತ್ಪ್ರಭವಂ ಭವೇತ್ ॥
ಮೂಲಮ್ - 23
ಯಸ್ಯಾ ನ ವಿದ್ಯತೇ ಹಲ್ಯಂ ತೇನಾಹಲ್ಯೇತಿ ವಿಶ್ರುತಾ ।
ಅಹಲ್ಯೇತ್ಯೇವ ಚ ಮಯಾ ತಸ್ಯಾ ನಾಮ ಪ್ರಕೀರ್ತಿತಮ್ ॥
ಅನುವಾದ
ಆ ಅದ್ಭುತ ಗುಣ-ರೂಪಗಳಿಂದ ನಿರ್ಮಿಸಿದ ನಾರಿಯ ಹೆಸರು ಅಹಲ್ಯೆ ಎಂದಾಗಿತ್ತು. ಈ ಜಗತ್ತಿನಲ್ಲಿ ಕುರೂಪವನ್ನು ಹಲವೆಂದು ಹೇಳುತ್ತಾರೆ, ಅದರಿಂದ ನಿಂದನೀಯತೆ ಪ್ರಕಟವಾಗುವುದರಿಂದ ಹಲ್ಯವೆಂಬ ಹೆಸರು. ಯಾವ ನಾರಿಯಲ್ಲಿ ‘ಹಲ್ಯ’ವಿಲ್ಲವೋ ಅವಳನ್ನು ಅಹಲ್ಯೆ ಎಂದು ಹೇಳುವರು. ಅದರಿಂದ ಆ ನವನಿರ್ಮಿತ ನಾರೀ ಅಹಲ್ಯೆ ಎಂದು ಖ್ಯಾತಳಾದಳು. ನಾನೇ ಆಕೆಯ ಹೆಸರು ಹಾಗೇ ಇಟ್ಟಿದ್ದೆ.॥22-23॥
ಮೂಲಮ್ - 24
ನಿರ್ಮಿತಾಯಾಂ ಚ ದೇವೇಂದ್ರ ತಸ್ಯಾಂ ನಾರ್ಯಾಂ ಸುರರ್ಷಭ ।
ಭವಿಷ್ಯತೀತಿ ಕಸ್ಯೈಷಾ ಮಮ ಚಿಂತಾ ತತೋಽಭವತ್ ॥
ಅನುವಾದ
ಸುರಶ್ರೇಷ್ಠ ದೇವೇಂದ್ರನೇ! ಆ ನಾರಿಯ ನಿರ್ಮಾಣವಾದಾಗ ಈಕೆ ಯಾರ ಪತ್ನಿಯಾಗುವಳು ಎಂಬ ಚಿಂತೆ ನನ್ನ ಮನಸ್ಸಿನಲ್ಲಿ ಉಂಟಾಯಿತು.॥24॥
ಮೂಲಮ್ - 25
ತ್ವಂ ತು ಶಕ್ರ ತದಾ ನಾರೀಂ ಜಾನೀಷೇ ಮನಸಾ ಪ್ರಭೋ ।
ಸ್ಥಾನಾಧಿಕತಯಾ ಪತ್ನೀ ಮಮೈಷೇತಿ ಪುರಂದರ ॥
ಅನುವಾದ
ಪುರಂದರ! ದೇವೇಂದ್ರ! ಆಗ ನೀನು ತನ್ನ ಸ್ಥಾನ, ಪದವಿಯ ಶ್ರೇಷ್ಠತೆಯಿಂದಾಗಿ ನನ್ನ ಅನುಮತಿ ಇಲ್ಲದೆಯೇ ಮನಸ್ಸಿನಲ್ಲೇ ಇವಳು ನನ್ನ ಪತ್ನಿಯಾಗಲಿ ಎಂದು ತಿಳಿಯತೊಡಗಿದೆ.॥25॥
ಮೂಲಮ್ - 26
ಸಾ ಮಯಾ ನ್ಯಾಸಭೂತಾ ತು ಗೌತಮಸ್ಯ ಮಹಾತ್ಮನಃ ।
ನ್ಯಸ್ತಾ ಬಹೂನಿ ವರ್ಷಾಣಿ ತೇನ ನಿರ್ಯಾತಿತಾ ಚ ಹ ॥
ಅನುವಾದ
ನಾನು ಮಹರ್ಷಿ ಗೌತಮರ ಬಳಿಯಲ್ಲಿ ನ್ಯಾಸರೂಪವಾಗಿ ಆ ಕನ್ಯೆಯನ್ನು ಅವನಿಗೆ ಒಪ್ಪಿಸಿದೆ. ಅವಳು ಬಹಳ ವರ್ಷಗಳವರೆಗೆ ಅವರಲ್ಲೇ ಇದ್ದಳು. ಮತ್ತೆ ಗೌತಮರು ನನಗೆ ಆಕೆಯನ್ನು ಮರಳಿಸಿದರು.॥26॥
ಮೂಲಮ್ - 27
ತತಸ್ತಸ್ಯ ಪರಿಜ್ಞಾಯ ಮಹಾಸ್ಥೈರ್ಯಂ ಮಹಾಮುನೇಃ ।
ಜ್ಞಾತ್ವಾ ತಪಸಿ ಸಿದ್ಧಿಂ ಚ ಪತ್ನ್ಯರ್ಥಂ ಸ್ಪರ್ಶಿತಾ ತದಾ ॥
ಅನುವಾದ
ಮಹಾಮುನಿ ಗೌತಮನ ಆ ಮಹಾಸ್ಥೈರ್ಯ, ಇಂದ್ರಿಯ ನಿಗ್ರಹ ಹಾಗೂ ತಪಸ್ಸಿನ ಸಿದ್ಧಿಯನ್ನು ತಿಳಿದು ನಾನು ಆ ಕನ್ಯೆಯನ್ನು ಪುನಃ ಅವರಿಗೇ ಪತ್ನೀ ರೂಪದಿಂದ ಕೊಟ್ಟುಬಿಟ್ಟೆ.॥27॥
ಮೂಲಮ್ - 28
ಸ ತಯಾ ಸಹ ಧರ್ಮಾತ್ಮಾ ರಮತೇ ಸ್ಮ ಮಹಾಮುನಿಃ ।
ಆಸನ್ನಿರಾಶಾ ದೇವಾಸ್ತು ಗೌತಮೇ ದತ್ತಯಾ ತಯಾ ॥
ಅನುವಾದ
ಧರ್ಮಾತ್ಮಾ ಮಹಾಮುನಿ ಗೌತಮನು ಆಕೆಯೊಡನೆ ಇರತೊಡಗಿದನು. ಅಹಲ್ಯೆಯನ್ನು ಗೌತಮರಿಗೆ ಕೊಟ್ಟಾಗ ದೇವತೆಗಳು ನಿರಾಶರಾದರು.॥28॥
ಮೂಲಮ್ - 29
ತ್ವಂ ಕ್ರುದ್ಧಸ್ತ್ವಿಹ ಕಾಮಾತ್ಮಾ ಗತ್ವಾ ತಸ್ಯಾಶ್ರಮಂ ಮುನೇಃ ।
ದೃಷ್ಟವಾಂಶ್ಚ ತದಾ ತಾಂ ಸ್ತ್ರೀಂ ದೀಪ್ತಾಮಗ್ನಿಶಿಖಾಮಿವ ॥
ಅನುವಾದ
ನಿನ್ನ ಕ್ರೋಧಕ್ಕೆ ಎಲ್ಲೆಯೇ ಇರಲಿಲ್ಲ. ನಿನ್ನ ಮನಸ್ಸು ಕಾಮಕ್ಕೆ ಅಧೀನವಾಗಿತ್ತು. ಅದರಿಂದ ನೀನು ಮುನಿಯ ಆಶ್ರಮಕ್ಕೆ ಹೋಗಿ ಅಗ್ನಿಶಿಖೆಯಂತೆ ಪ್ರಜ್ವಲಿಸುವ ಆ ದಿವ್ಯ ಸುಂದರಿಯನ್ನು ನೋಡಿದೆ.॥29॥
ಮೂಲಮ್ - 30
ಸಾ ತ್ವಯಾ ಧರ್ಷಿತಾ ಶಕ್ರ ಕಾಮಾರ್ತೇನ ಸಮನ್ಯುನಾ ।
ದೃಷ್ಟಸ್ತ್ವಂ ಸ ತದಾ ತೇನ ಆಶ್ರಮೇ ಪರಮರ್ಷಿಣಾ ॥
ಅನುವಾದ
ಇಂದ್ರನೇ! ನೀನು ಕುಪಿತ ಮತ್ತು ಕಾಮಪೀಡಿತನಾಗಿ ಆಕೆಯೊಡನೆ ಬಲಾತ್ಕಾರ ಮಾಡಿದೆ. ಆಗ ಆ ಮಹರ್ಷಿಯು ತನ್ನ ಆಶ್ರಮದಲ್ಲಿ ನಿನ್ನನ್ನು ನೋಡಿದನು.॥30॥
ಮೂಲಮ್ - 31
ತತಃ ಕ್ರುದ್ಧೇನ ತೇನಾಸಿ ಶಪ್ತಃ ಪರಮತೇಜಸಾ ।
ಗತೋಽಸಿ ಯೇನ ದೇವೇಂದ್ರ ದಶಾಭಾಗ ವಿಪರ್ಯಯಮ್ ॥
ಅನುವಾದ
ದೇವೇಂದ್ರನೇ! ಇದರಿಂದ ಆ ಪರಮ ತೇಜಸ್ವೀ ಮಹರ್ಷಿಗೆ ಭಾರೀ ಕ್ರೋಧ ಉಂಟಾಗಿ, ನಿನಗೆ ಅವರು ಶಾಪ ಕೊಟ್ಟರು. ಅದೇ ಶಾಪದಿಂದಾಗಿ ನೀನು ಶತ್ರುವಿನ ಸೆರೆ ಸಿಕ್ಕಿದ ವಿಪರೀತ ಸ್ಥಿತಿಯಲ್ಲಿ ಬಿದ್ದೆ.॥31॥
ಮೂಲಮ್ - 32
ಯಸ್ಮಾನ್ಮೇ ಧರ್ಷಿತಾ ಪತ್ನೀ ತ್ವಯಾ ವಾಸವ ನಿರ್ಭಯಾತ್ ।
ತಸ್ಮಾತ್ತ್ವಂ ಸಮರೇ ಶಕ್ರ ಶತ್ರುಹಸ್ತಂ ಗಮಿಷ್ಯಸಿ ॥
ಅನುವಾದ
ಅವರು ಶಾಪ ಕೊಡುವಾಗ - ವಾಸವನೇ! ನೀನು ನಿರ್ಭಯನಾಗಿ ನನ್ನ ಪತ್ನಿಯೊಂದಿಗೆ ಬಲಾತ್ಕಾರ ಮಾಡಿರುವೆ; ಅದಕ್ಕಾಗಿ ನೀನು ಯುದ್ಧದಲ್ಲಿ ಶತ್ರುವಿನ ವಶನಾಗುವೆ, ಎಂದು ಹೇಳಿರುವರು.॥32॥
ಮೂಲಮ್ - 33
ಅಯಂ ತು ಭಾವೋ ದುರ್ಬುದ್ಧೇ ಯಸ್ತ್ವಯೇಹ ಪ್ರವರ್ತಿತಃ ।
ಮಾನುಷೇಷ್ವಪಿ ಲೋಕೇಷು ಭವಿಷ್ಯತಿ ನ ಸಂಶಯಃ ॥
ಅನುವಾದ
ದುರ್ಬುದ್ಧೇ! ನಿನ್ನಂತಹ ರಾಜನ ದೋಷದಿಂದ ಮನುಷ್ಯ ಲೋಕದಲ್ಲಿಯೂ ಈ ಜಾರಭಾವ ಪ್ರಚಲಿತವಾದೀತು, ನೀನೇ ಸ್ವತಃ ಈ ಸೂತ್ರಪಾತ ಮಾಡಿರುವೆ, ಇದರಲ್ಲಿ ಸಂಶಯವೇ ಇಲ್ಲ.॥33॥
ಮೂಲಮ್ - 34
ತತ್ರಾರ್ಧಂ ತಸ್ಯ ಯಃ ಕರ್ತಾ ತ್ವಯ್ಯರ್ಧಂ ನಿಪತಿಷ್ಯತಿ ।
ನ ಚ ತೇ ಸ್ಥಾವರಂ ಸ್ಥಾನಂ ಭವಿಷ್ಯತಿ ನ ಸಂಶಯಃ ॥
ಅನುವಾದ
ಜಾರಭಾವದಿಂದ ಪಾಪಾಚಾರ ಮಾಡುವ ಪುರುಷನಿಗೆ ಆ ಪಾಪದ ಅರ್ಧ ಭಾಗ ಸಿಗುವುದು ಮತ್ತು ಅರ್ಧಭಾಗ ನಿನಗೆ ಸಿಗುವುದು; ಏಕೆಂದರೆ ಇದರ ಪ್ರವರ್ತಕ ನೀನಾಗಿರುವೆ. ನೀನು ಈ ಸ್ಥಾನದಿಂದ ಭ್ರಷ್ಟನಾಗುವುದು ಸಂದೇಹವೇ ಇಲ್ಲ.॥34॥
ಮೂಲಮ್ - 35
ಯಶ್ಚ ಯಶ್ಚ ಸುರೇಂದ್ರಃ ಸ್ಯಾದ್ಧ್ರುವಃ ಸ ನ ಭವಿಷ್ಯತಿ ।
ಏಷ ಶಾಪೋ ಮಯಾ ಮುಕ್ತ ಇತ್ಯಸೌ ತ್ವಾಂ ತದಾಬ್ರವೀತ್ ॥
ಅನುವಾದ
ಯಾರೇ ದೇವರಾಜನ ಪದದಲ್ಲಿ ಪ್ರತಿಷ್ಠಿತನಾಗುವನೋ, ಅವನು ಅಲ್ಲಿ ಸ್ಥಿರನಾಗಿರಲಾರನು. ಈ ಶಾಪವನ್ನು ನಾನು ಇಂದ್ರನಿಗೆ ಮಾತ್ರ ಕೊಟ್ಟಿರುವೆ; ಎಂಬ ಮಾತು ಮುನಿಯು ನಿನಗೆ ಹೇಳಿರುವರು.॥35॥
ಮೂಲಮ್ - 36
ತಾಂ ತು ಭಾರ್ಯಾಂ ಸುನಿರ್ಭರ್ತ್ಸ್ಯ ಸೋಽಬ್ರವೀತ್ಸು ಮಹಾತಪಾಃ ।
ದುರ್ವಿನೀತೇ ವಿನಿಧ್ವಂಸ ಮಮಾಶ್ರಮ ಸಮೀಪತಃ ॥
ಮೂಲಮ್ - 37
ರೂಪಯೌವನ ಸಂಪನ್ನಾ ಯಸ್ಮಾತ್ತ್ವಮನವಸ್ಥಿತಾ ।
ತಸ್ಮಾದ್ರೂಪವತೀ ಲೋಕೇ ನ ತ್ವಮೇಕಾ ಭವಿಷ್ಯತಿ ॥
ಅನುವಾದ
ಮತ್ತೆ ಆ ಮಹಾತಪಸ್ವೀ ಮುನಿಯು ತನ್ನ ಪತ್ನಿಗೂ ಚೆನ್ನಾಗಿ ಗದರಿಸಿ - ದುಷ್ಟೇ! ನೀನು ನನ್ನ ಆಶ್ರಮದ ಹತ್ತಿರವೇ ಅದೃಶ್ಯಳಾಗಿ ಇದ್ದು, ತನ್ನ ರೂಪ ಸೌಂದರ್ಯದಿಂದ ಭ್ರಷ್ಟಳಾಗು. ರೂಪ-ಯೌವನ ದಿಂದ ಸಂಪನ್ನಳಾಗಿಯೂ ಮರ್ಯಾದೆಯಲ್ಲಿ ಇರದೇ ಹೋದೆ, ಅದಕ್ಕಾಗಿ ಈಗ ಲೋಕದಲ್ಲಿ ನೀನೊಬ್ಬಳೇ ರೂಪವತಿಯಾಗಿ ಇರಲಾರೆ ಎಂದು ಶಪಿಸಿದ್ದರು. (ಅನೇಕ ರೂಪವತಿ ಸ್ತ್ರೀಯರು ಹುಟ್ಟುವರು.॥36-37॥
ಮೂಲಮ್ - 38
ರೂಪಂ ಚ ತೇ ಪ್ರಜಾಃ ಸರ್ವಾ ಗಮಿಷ್ಯಂತಿ ನ ಸಂಶಯಃ ।
ಯತ್ತದೇಕಂ ಸಮಾಶ್ರಿತ್ಯ ವಿಭ್ರಮೋಽಯಮುಪಸ್ಥಿತಃ ॥
ಅನುವಾದ
ಯಾವ ಒಂದು ರೂಪ ಸೌಂದರ್ಯದಿಂದಾಗಿ ಇಂದ್ರನ ಮನಸ್ಸಿನಲ್ಲಿ ಈ ಕಾಮ ವಿಕಾರ ಉತ್ಪನ್ನವಾಗಿತ್ತೋ, ನಿನ್ನ ಆ ರೂಪ-ಸೌಂದರ್ಯವನ್ನು ಸಮಸ್ತ ಪ್ರಜೆಯು ಪಡೆಯುವುದು; ಇದರಲ್ಲಿ ಸಂಶಯವೇ ಇಲ್ಲ.॥38॥
ಮೂಲಮ್ - 39
ತದಾಪ್ರಭೃತಿ ಭೂಯಿಷ್ಠಂ ಪ್ರಜಾ ರೂಪಸಮನ್ವಿತಾ ।
ಸಾ ತಂ ಪ್ರಸಾದಯಾಮಾಸ ಮಹರ್ಷಿ ಗೌತಮಂ ತದಾ ॥
ಮೂಲಮ್ - 40
ಅಜ್ಞಾನಾದ್ಧರ್ಷಿತಾ ವಿಪ್ರ ತ್ವದ್ರೂಪೇಣ ದಿವೌಕಸಾ ।
ನ ಕಾಮಕಾರಾದ್ವಿಪ್ರರ್ಷೇ ಪ್ರಸಾದಂ ಕರ್ತುಮರ್ಹಸಿ ॥
ಅನುವಾದ
ಅಂದಿನಿಂದ ಹೆಚ್ಚಿನ ಪ್ರಜೆ ರೂಪವತಿಯರಾದರು. ಅಹಲ್ಯೆಯು ಆಗ ವಿನೀತ ವಚನಗಳಿಂದ ಮಹರ್ಷಿ ಗೌತಮರನ್ನು ಪ್ರಸನ್ನಗೊಳಿಸಿ ಹೇಳಿದಳು-ವಿಪ್ರವರ, ಮಹರ್ಷಿಯೇ! ದೇವರಾಜನು ನಿಮ್ಮ ರೂಪವನ್ನೇ ಧರಿಸಿ ನನ್ನನ್ನು ಕಲಂಕಿತಳನ್ನಾಗಿಸಿದ. ನಾನು ಅವನನ್ನು ಗುರುತಿಸದೇ ಹೋದೆ. ಆದ್ದರಿಂದ ತಿಳಿಯದೆಯೇ ನನ್ನಿಂದ ಈ ಅಪರಾಧವಾಯಿತು, ಸ್ವೇಚ್ಛಾಚಾರದಿಂದ ಅಲ್ಲ. ಆದ್ದರಿಂದ ನೀವು ನನ್ನ ಮೇಲೆ ಕೃಪೆ ಮಾಡಿರಿ.॥39-40॥
ಮೂಲಮ್ - 41
ಅಹಲ್ಯಯಾ ತ್ವೇವಮುಕ್ತಃ ಪ್ರತ್ಯುವಾಚ ಸ ಗೌತಮಃ ।
ಉತ್ಪತ್ಸ್ಯತಿ ಮಹಾತೇಜಾ ಇಕ್ಷ್ವಾಕೂಣಾಂ ಮಹಾರಥಃ ॥
ಮೂಲಮ್ - 42
ರಾಮೋ ನಾಮ ಶ್ರುತೋ ಲೋಕೇ ವನಂ ಚಾಪ್ಯುಪಯಾಸ್ಯತಿ ।
ಬ್ರಾಹ್ಮಣಾರ್ಥೇ ಮಹಾಬಾಹುರ್ವಿಷ್ಣುರ್ಮಾನುಷವಿಗ್ರಹಃ ॥
ಮೂಲಮ್ - 43
ತಂ ದ್ರಕ್ಷ್ಯಸಿ ಯದಾ ಭದ್ರೇ ತತಃ ಪೂತಾ ಭವಿಷ್ಯಸಿ ।
ಸ ಹಿ ಪಾವಯಿತುಂ ಶಕ್ತಸ್ತ್ವಯಾ ಯದ್ದುಷ್ಕೃತಂ ಕೃತಮ್ ॥
ಅನುವಾದ
ಅಹಲ್ಯೆಯು ಹೀಗೆ ಹೇಳಿದಾಗ ಗೌತಮರು ನುಡಿದರು- ಭದ್ರೆ! ಇಕ್ಷ್ವಾಕುವಂಶದಲ್ಲಿ ಓರ್ವ ಮಹಾತೇಜಸ್ವೀ ಮಹಾರಥೀ ವೀರನ ಅವತಾರವಾದೀತು. ಅವನು ಜಗತ್ತಿನಲ್ಲಿ ಶ್ರೀರಾಮನೆಂದು ವಿಖ್ಯಾತನಾಗುವನು. ಮಹಾಬಾಹು ಶ್ರೀರಾಮನ ರೂಪದಲ್ಲಿ ಸಾಕ್ಷಾತ್ ಭಗವಾನ್ ವಿಷ್ಣುವೇ ಮನುಷ್ಯ ಶರೀರವನ್ನು ಧರಿಸಿ ಪ್ರಕಟನಾಗುವನು. ಅವನು ಬ್ರಾಹ್ಮಣ(ವಿಶ್ವಾಮಿತ್ರ)ರ ಕಾರ್ಯಕ್ಕಾಗಿ ತಪೋವನಕ್ಕೆ ಆಗಮಿಸುವನು. ನೀನು ಅವನ ದರ್ಶನ ಮಾಡಿದಾಗ ಪವಿತ್ರಳಾಗುವೆ. ನೀನು ಮಾಡಿದ ಪಾಪದಿಂದ ಅವನೇ ಪವಿತ್ರಗೊಳಿಸಬಲ್ಲನು. ॥41-43॥
ಮೂಲಮ್ - 44
ತಸ್ಯಾತಿಥ್ಯಂ ಚ ಕೃತ್ವಾ ವೈ ಮತ್ಸಮೀಪಂ ಗಮಿಷ್ಯಸಿ ।
ವತ್ಸ್ಯಸಿ ತ್ವಂ ಮಹಾ ಸಾರ್ಧಂ ತದಾ ಹಿ ವರವರ್ಣಿನಿ ॥
ಅನುವಾದ
ವರವರ್ಣಿನಿ! ಅವನ ಆತಿಥ್ಯಗೈದು ನೀನು ನನ್ನ ಬಳಿಗೆ ಬರುವೆ ಹಾಗೂ ಪುನಃ ನನ್ನೊಂದಿಗೆ ಇರತೊಡಗುವೆ.॥44॥
ಮೂಲಮ್ - 45
ಏವಮುಕ್ತ್ವಾ ಸ ವಿಪ್ರರ್ಷಿರಾಜಗಾಮ ಸ್ವಮಾಶ್ರಮಮ್ ।
ತಪಶ್ಚಚಾರ ಸುಮಹತ್ಸಾ ಪತ್ನೀ ಬ್ರಹ್ಮವಾದಿನಃ ॥
ಅನುವಾದ
ಹೀಗೆ ಹೇಳಿ ಬ್ರಹ್ಮರ್ಷಿ ಗೌತಮರು ತನ್ನ ಆಶ್ರಮದೊಳಗೆ ಹೋದರು ಮತ್ತು ಆ ಬ್ರಹ್ಮವಾದೀ ಮುನಿಯ ಪತ್ನೀ ಅಹಲ್ಯೆಯು ಭಾರೀ ತಪಸ್ಸಿಗೆ ತೊಡಗಿದಳು.॥45॥
ಮೂಲಮ್ - 46
ಶಾಪೋತ್ಸರ್ಗಾದ್ಧಿ ತಸ್ಯೇದಂ ಮುನೇಃ ಸರ್ವಮುಪಸ್ಥಿತಮ್ ।
ತತ್ಸ್ಮರ ತ್ವಂ ಮಹಾಬಾಹೋ ದುಷ್ಕೃತಂ ಯತ್ತ್ವಯಾ ಕೃತಮ್ ॥
ಅನುವಾದ
ಮಹಾಬಾಹೋ! ಆ ಬ್ರಹ್ಮರ್ಷಿ ಗೌತಮರು ಶಾಪ ಕೊಟ್ಟಿದ್ದರಿಂದಲೇ ನಿನ್ನ ಮೇಲೆ ಇವೆಲ್ಲ ಸಂಕಟ ಬಂದೆರಗಿದೆ. ಆದ್ದರಿಂದ ನೀನು ಮಾಡಿದ ಪಾಪವನ್ನು ಸ್ಮರಿಸು.॥46॥
ಮೂಲಮ್ - 47
ತೇನ ತ್ವಂ ಗ್ರಹಣಂ ಶತ್ರೋರ್ಯಾತೋ ನಾನ್ಯೇನ ವಾಸವ ।
ಶೀಘ್ರಂ ವೈ ಯಜ ಯಜ್ಞಂ ತ್ವಂ ವೈಷ್ಣವಂ ಸುಸಮಾಹಿತಃ ॥
ಅನುವಾದ
ವಾಸವನೇ! ಆ ಶಾಪದಿಂದಾಗಿಯೇ ನೀನು ಶತ್ರುವಿನ ಕೈಸೆರೆಯಾದೆ, ಬೇರೆ ಯಾವ ಕಾರಣದಿಂದಲೂ ಅಲ್ಲ. ಆದ್ದರಿಂದ ಈಗ ಏಕಾಗ್ರಚಿತ್ತನಾಗಿ ಬೇಗನೇ ವೈಷ್ಣವ ಯಜ್ಞದ ಅನುಷ್ಠಾನ ಮಾಡು.॥47॥
ಮೂಲಮ್ - 48½
ಪಾವಿತಸ್ತೇನ ಯಜ್ಞೇನ ಯಾಸ್ಯಸೇ ತ್ರಿದಿವಂ ತತಃ ।
ಪುತ್ರಶ್ಚ ತವ ದೇವೇಂದ್ರ ನ ವಿನಷ್ಟೋ ಮಹಾರಣೇ ॥
ನೀತಃ ಸಂನಿಹಿತಶ್ಚೈವ ಆರ್ಯಕೇಣ ಮಹೋದಧೌ ।
ಅನುವಾದ
ದೇವೇಂದ್ರನೇ! ಆ ಯಜ್ಞದಿಂದ ಪವಿತ್ರನಾಗಿ ನೀನು ಪುನಃ ಸ್ವರ್ಗಲೋಕವನ್ನು ಪಡೆಯುವೆ. ನಿನ್ನ ಪುತ್ರನು ಆ ಮಹಾಸಮರದಲ್ಲಿ ಸತ್ತಿಲ್ಲ. ಅವನ ತಾತ ಪುಲೋಮನು ಅವನನ್ನು ಮಹಾಸಾಗರಕ್ಕೆ ಕೊಂಡು ಹೋಗಿರುವನು. ಈಗ ಅವನು ಅವನ ಬಳಿಯಲ್ಲೇ ಇರುವನು.॥48½॥
ಮೂಲಮ್ - 49½
ಏತಚ್ಛ್ರುತ್ವಾ ಮಹೇಂದ್ರಸ್ತು ಯಜ್ಞಮಿಷ್ಟ್ವಾಚ ವೈಷ್ಣವಮ್ ॥
ಪುನಸ್ತ್ರಿದಿವಮಾಕ್ರಾಮದನ್ವಶಾಸಚ್ಚ ದೇವರಾಟ್ ।
ಅನುವಾದ
ಬ್ರಹ್ಮದೇವರ ಈ ಮಾತನ್ನು ಕೇಳಿ ದೇವರಾಜನು ವೈಷ್ಣವ ಯಜ್ಞದ ಅನುಷ್ಠಾನ ಮಾಡಿದನು. ಆ ಯಜ್ಞ ಪೂರ್ಣಗೊಳಿಸಿ ದೇವರಾಜನು ಸ್ವರ್ಗಕ್ಕೆ ಹೋದನು ಹಾಗೂ ದೇವರಾಜ್ಯವನ್ನು ಆಳತೊಡಗಿದನು.॥49½॥
ಮೂಲಮ್ - 50½
ಏತದಿಂದ್ರಜಿತೋ ನಾಮ ಬಲಂ ಯತ್ಕೀರ್ತಿತಂ ಮಯಾ ॥
ನಿರ್ಜಿತಸ್ತೇನ ದೇವೇಂದ್ರಃ ಪ್ರಾಣಿನೋನ್ಯೇ ತು ಕಿಂ ಪುನಃ ।
ಅನುವಾದ
ರಘುನಂದನ! ಇಂದ್ರವಿಜಯಿ ಮೇಘನಾದನ ಬಲ ಇದಾಗಿದೆ. ಅದನ್ನು ನಾನು ನಿನಗೆ ವರ್ಣಿಸಿರುವೆನು. ಅವನು ದೇವೇಂದ್ರನನ್ನು ಗೆದ್ದಿದ್ದನು, ಹಾಗಿರುವಾಗ ಬೇರೆ ಪ್ರಾಣಿಗಳ ಭಯವೆಲ್ಲಿ ಇತ್ತು.॥50½॥
ಮೂಲಮ್ - 51½
ಆಶ್ಚರ್ಯಮಿತಿ ರಾಮಶ್ಚ ಲಕ್ಷ್ಮಣಶ್ಚಾಬ್ರವೀತ್ತದಾ ॥
ಅಗಸ್ತ್ಯವಚನಂ ಶ್ರುತ್ವಾ ವಾನರಾ ರಾಕ್ಷಸಾಸ್ತದಾ ।
ಅನುವಾದ
ಅಗಸ್ತ್ಯರ ಈ ಮಾತನ್ನು ಕೇಳಿ ಶ್ರೀರಾಮ - ಲಕ್ಷ್ಮಣರು ತತ್ಕಾಲ - ‘ಆಶ್ಚರ್ಯವಾಗಿದೆ’ ಎಂದು ನುಡಿದರು. ಜೊತೆಗೆ ವಾನರರಿಗೂ, ರಾಕ್ಷಸರಿಗೂ ಬಹಳ ವಿಸ್ಮಯವಾಯಿತು.॥51½॥
ಮೂಲಮ್ - 52½
ವಿಭೀಷಣಸ್ತು ರಾಮಸ್ಯ ಪಾರ್ಶ್ವಸ್ಥೋ ವಾಕ್ಯಮಬ್ರವೀತ್ ॥
ಆಶ್ಚರ್ಯಂ ಸ್ಮಾರಿತೋಸ್ಮ್ಯದ್ಯ ಯತ್ತದ್ದೃಷ್ಟಂ ಪುರಾತನಮ್ ।
ಅನುವಾದ
ಆಗ ಶ್ರೀರಾಮನ ಪಕ್ಕದಲ್ಲೇ ಕುಳಿತ್ತಿದ್ದ ವಿಭೀಷಣನಲ್ಲಿ ಹೇಳಿದನು - ನಾನು ಹಿಂದೆ ನೋಡಿದ ಆಶ್ಚರ್ಯದ ಮಾತನ್ನು ಇಂದು ಮಹರ್ಷಿಗಳು ನೆನಪು ಮಾಡಿಕೊಟ್ಟರು.॥52½॥
ಮೂಲಮ್ - 53
ಅಗಸ್ತ್ಯಂ ತ್ವಬ್ರವೀದ್ರಾಮಃ ಸತ್ಯಮೇತಚ್ಛ್ರುತಂ ಚ ಮೇ ॥
ಮೂಲಮ್ - 54
ಏವಂ ರಾಮ ಸಮುದ್ಭೂತೋ ರಾವಣೋ ಲೋಕಕಂಟಕಃ ।
ಸಪುತ್ರೋ ಯೇನ ಸಂಗ್ರಾಮೇ ಜಿತಃ ಶಕ್ರಃ ಸುರೇಶ್ವರಃ ॥
ಅನುವಾದ
ಶ್ರೀರಾಮಚಂದ್ರನು ಅಗಸ್ತ್ಯರಲ್ಲಿ ಹೇಳಿದನು - ನಿಮ್ಮ ಮಾತು ನಿಜವಾಗಿದೆ. ನಾನೂ ವಿಭೀಷಣನಿಂದ ಇದನ್ನು ಕೇಳಿದ್ದೆ. ಮತ್ತೆ ಅಗಸ್ತ್ಯರು ಹೇಳಿದರು - ಶ್ರೀರಾಮ! ಹೀಗೆ ಪುತ್ರಸಹಿತ ರಾವಣನು ಸಮಸ್ತ ಜಗತ್ತಿಗಾಗಿ ಕಂಟಕಪ್ರಾಯನಾಗಿದ್ದನು. ಅವನು ದೇವರಾಜ ಇಂದ್ರನನ್ನು ಯುದ್ಧದಲ್ಲಿ ಗೆದ್ದಿದ್ದನು.॥53-54॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಮೂವತ್ತನೆಯ ಸರ್ಗ ಪೂರ್ಣವಾಯಿತು. ॥30॥