०२९ इन्द्र-पराजयः

[ಇಪ್ಪತ್ತೊಂಭತ್ತನೆಯ ಸರ್ಗ]

ಭಾಗಸೂಚನಾ

ರಾವಣನು ದೇವಸೈನ್ಯದಿಂದ ಹೊರಬಂದುದು, ಅವನನ್ನು ಬಂಧಿಸಲು ದೇವತೆಗಳ ಪ್ರಯತ್ನ, ಮೇಘನಾದನು ಯುದ್ಧದಲ್ಲಿ ಇಂದ್ರನನ್ನು ಬಂಧಿಸಿ ವಿಜಯಿಯಾಗಿ ಸೈನ್ಯಸಹಿತ ಲಂಕೆಗೆ ಹಿಂದಿರುಗಿದುದು

ಮೂಲಮ್ - 1

ತತಸ್ತಮಸಿ ಸಂಜಾತೇ ಸರ್ವೇ ತೇ ದೇವರಾಕ್ಷಸಾಃ ।
ಆಯುಧ್ಯಂತ ಬಲೋನ್ಮತ್ತಾಃ ಸೂದಯಂತಃ ಪರಸ್ಪರಮ್ ॥

ಅನುವಾದ

ಎಲ್ಲೆಡೆ ಕತ್ತಲು ಕವಿದಾಗ ಬಲೋನ್ಮತ್ತರಾದ ಸಮಸ್ತ ದೇವತೆಗಳು ಮತ್ತು ರಾಕ್ಷಘಿಸರು ಪರಸ್ಪರ ಹೊಡೆದಾಡುತ್ತಾ ಯುದ್ಧ ಮಾಡತೊಡಗಿದರು.॥1॥

ಮೂಲಮ್ - 2

ತತಸ್ತು ದೇವಸೈನ್ಯೇನ ರಾಕ್ಷಸಾನಾಂ ಬೃಹದ್ಬಲಮ್ ।
ದಶಾಂಶಂ ಸ್ಥಾಪಿತಂ ಯುದ್ಧೇ ಶೇಷಂ ನೀತಂ ಯಮಕ್ಷಯಮ್ ॥

ಅನುವಾದ

ಆಗ ದೇವತೆಗಳ ಸೈನ್ಯವು ರಾಕ್ಷಸರ ವಿಶಾಲ ಸೈನ್ಯವನ್ನು ಕೇವಲ ಹತ್ತನೆ ಒಂದು ಭಾಗ ಮಾತ್ರ ಯುದ್ಧರಂಗದಲ್ಲಿ ಇರುವಂತೆ ಮಾಡಿ, ಉಳಿದ ರಾಕ್ಷಸ ಸೈನ್ಯವನ್ನು ಯಮಸದನಕ್ಕೆ ಅಟ್ಟಿದರು.॥2॥

ಮೂಲಮ್ - 3

ತಸ್ಮಿಂಸ್ತು ತಾಮಸೇ ಯುದ್ಧೇ ಸರ್ವೇ ತೇ ದೇವರಾಕ್ಷಸಾಃ ।
ಅನ್ಯೋನ್ಯಂ ನಾಭ್ಯಜಾನಂತ ಯುದ್ಧಮಾನಾಃ ಪರಸ್ಪರಮ್ ॥

ಅನುವಾದ

ಆ ತಾಮಸ ಯುದ್ಧದಲ್ಲಿ ಸಮಸ್ತ ದೇವತೆಗಳು ಮತ್ತು ರಾಕ್ಷಸರು ಪರಸ್ಪರ ಕಾದಾಡುತ್ತಾ ಒಬ್ಬರು ಮತ್ತೊಬ್ಬರನ್ನು ಗುರುತಿಸದೇ ಹೋದರು.॥3॥

ಮೂಲಮ್ - 4

ಇಂದ್ರಶ್ಚ ರಾವಣಶ್ಚೈವ ರಾವಣಿಶ್ಚ ಮಹಾಬಲಃ ।
ತಸ್ಮಿಂಸ್ತಮೋಜಾಲವೃತೇ ಮೋಹಮೀಯುರ್ನ ತೇ ತ್ರಯಃ ॥

ಅನುವಾದ

ಇಂದ್ರ, ರಾವಣ ಮತ್ತು ಮಹಾಬಲೀ ಮೇಘನಾದ ಈ ಮೂವರೂ ಮಾತ್ರ ಅಂಧಕಾರ ತುಂಬಿದ ಸಮರಾಂಗಣದಲ್ಲಿ ಮೋಹಿತರಾಗಿರಲಿಲ್ಲ.॥4॥

ಮೂಲಮ್ - 5

ಸ ತು ದೃಷ್ಟ್ವಾ ಬಲಂ ಸರ್ವಂ ರಾವಣೋ ನಿಹತಂ ಕ್ಷಣಾತ್ ।
ಕ್ರೋಧಮಭ್ಯಗಮತ್ತೀವ್ರಂ ಮಹಾನಾದಂ ಚ ಮುಕ್ತವಾನ್ ॥

ಅನುವಾದ

ತನ್ನ ಸೈನ್ಯವು ಕ್ಷಣದಲ್ಲಿ ಹತರಾಗಿರುವುದನ್ನು ರಾವಣನು ನೋಡಿದಾಗ ಮನಸ್ಸಿನಲ್ಲಿ ಭಾರೀ ಕ್ರೋಧ ಉಂಟಾಗಿ ಜೋರಾಗಿ ಗರ್ಜಿಸಿದನು.॥5॥

ಮೂಲಮ್ - 6

ಕ್ರೋಧಾತ್ಸೂತಂ ಚ ದುರ್ಧಷಃ ಸ್ಯಂದನಸ್ಥಮುವಾಚ ಹ ।
ಪರಸೈನ್ಯಸ್ಯ ಮಧ್ಯೇನ ಯಾವದಂತೋ ನಯಸ್ವ ಮಾಮ್ ॥

ಅನುವಾದ

ಆ ದುರ್ಜಯ ನಿಶಾಚರನು ರಥದಲ್ಲಿ ಕುಳಿತ್ತಿದ್ದ ಸಾರಥಿಯಲ್ಲಿ ಸಿಟ್ಟಿನಿಂದ ಹೇಳಿದ - ಸಾರಥಿ ! ಶತ್ರುಗಳ ಈ ಸೈನ್ಯದ ಮಧ್ಯಭಾಗಕ್ಕೆ ನನ್ನನ್ನು ಕರೆದುಕೊಂಡು ಹೋಗು.॥6॥

ಮೂಲಮ್ - 7

ಅದ್ಯೈತಾನ್ ತ್ರಿದಶಾನ್ಸರ್ವಾನ್ವಿಕ್ರಮೈಃ ಸಮರೇ ಸ್ವಯಮ್ ।
ನಾನಾಶಸ್ತ್ರಮಹಾಸಾರೈರ್ನಯಾಮಿ ಯಮಸಾದನಮ್ ॥

ಅನುವಾದ

ಇಂದು ನಾನು ಸ್ವತಃ ನನ್ನ ಪರಾಕ್ರಮದಿಂದ ನಾನಾ ರೀತಿಯ ಅಸ್ತ್ರಗಳ ಮಳೆ ಸುರಿಸಿ ಈ ಎಲ್ಲ ದೇವತೆಗಳನ್ನು ಯಮಲೋಕಕ್ಕೆ ಅಟ್ಟಿಬಿಡುವೆನು.॥7॥

ಮೂಲಮ್ - 8

ಅಹಮಿಂದ್ರಂ ವಧಿಷ್ಯಾಮಿ ಧನದಂ ವರುಣಂ ಯಮಮ್ ।
ತ್ರಿದಶಾನ್ವಿನಿಹತ್ಯಾಶು ಸ್ವಯಂ ಸ್ಥಾಸ್ಯಾಮ್ಯಥೋಪರಿ ॥

ಅನುವಾದ

ನಾನು ಇಂದ್ರ, ವರುಣ, ಯಮನನ್ನು ವಧಿಸಿಬಿಡುವೆ. ದೇವತೆಗಳೆಲ್ಲರನ್ನು ಬೇಗನೇ ವಧಿಸಿ ಸ್ವತಃ ಎಲ್ಲರಿಗಿಂತ ಮೇಲೆ ಸ್ಥಿತನಾಗುವೆನು.॥8॥

ಮೂಲಮ್ - 9

ವಿಷಾದೋ ನೈವ ಕರ್ತವ್ಯಃ ಶೀಘ್ರಂ ವಾಹಯ ಮೇ ರಥಮ್ ।
ದ್ವಿಃ ಖಲು ತ್ವಾಂ ಬ್ರವೀಮ್ಯದ್ಯ ಯಾವದಂತಂ ನಯಸ್ವ ಮಾಮ್ ॥

ಅನುವಾದ

ವಿಷಾದಪಡಬೇಡ, ಬೇಗನೇ ರಥವನ್ನು ನಡೆಸು. ನಿನಗೆ ಪುನಃ ಹೇಳುತ್ತಿದ್ದೇನೆ - ದೇವತೆಗಳ ಸೈನ್ಯದ ಕೊನೆ ಇರುವವರೆಗೆ ನನ್ನನ್ನು ಈಗಲೇ ಕೊಂಡುಹೋಗು.॥9॥

ಮೂಲಮ್ - 10

ಅಯಂ ಸ ನಂದನೋದ್ದೇಶೋ ಯತ್ರ ವರ್ತಾಮಹೇ ವಯಮ್ ।
ನಯಮಾಮದ್ಯ ತತ್ರ ತ್ವಮುದಯೋ ಯತ್ರ ಪರ್ವತಃ ॥

ಅನುವಾದ

ಈಗ ನಾವು ನಂದನವನ ಪ್ರದೇಶದಲ್ಲಿ ಇದ್ದೇವೆ. ಇಲ್ಲಿಂದಲೇ ದೇವತೆಗಳ ಸೈನ್ಯ ಪ್ರಾರಂಭವಾಗುತ್ತದೆ. ಈಗ ನೀನು ಉದಯಾಚಲಕ್ಕೆ ಕೊಂಡುಹೋಗು. (ನಂದನವನದಿಂದ ಉದಯಾಚಲದವರೆಗೆ ದೇವತೆಗಳ ಸೈನ್ಯ ಹರಡಿತ್ತು.॥10॥

ಮೂಲಮ್ - 11

ತಸ್ಯ ತದ್ವಚನಂ ಶ್ರುತ್ವಾ ತುರಗಾನ್ಸ ಮನೋಜವಾನ್ ।
ಆದಿದೇಶಾಥ ಶತ್ರೂಣಾಂ ಮಧ್ಯೇನೈವ ಚ ಸಾರಥಿಃ ॥

ಅನುವಾದ

ರಾವಣನ ಮಾತನ್ನು ಕೇಳಿ ಸಾರಥಿಯು ಮನೋವೇಗದಂತಿರುವ ಕುದುರೆಗಳನ್ನು ಶತ್ರುಸೈನ್ಯದ ನಡುವಿನಿಂದ ಓಡಿಸಿದನು.॥11॥

ಮೂಲಮ್ - 12

ತಸ್ಯ ತಂ ನಿಶ್ಚಯಂ ಜ್ಞಾತ್ವಾ ಶಕ್ರೋ ದೇವೇಶ್ವರಸ್ತದಾ ।
ರಥಸ್ಥಃ ಸಮರಸ್ಥಸ್ತಾನ್ ದೇವಾನ್ವಾಕ್ಯಮಥಾಬ್ರವೀತ್ ॥

ಅನುವಾದ

ರಾವಣನ ಈ ನಿಶ್ಚಯವನ್ನು ತಿಳಿದು ಸಮರಾಂಗಣದಲ್ಲಿ ರಥದಲ್ಲಿ ಕುಳಿತ ದೇವೇಂದ್ರನು ಆ ದೇವತೆಗಳಲ್ಲಿ ಹೇಳಿದನು.॥12॥

ಮೂಲಮ್ - 13

ಸುರಾಃ ಶೃಣುತಮದ್ವಾಕ್ಯಂ ಯತ್ತಾವನ್ಮಮ ರೋಚತೇ ।
ಜೀವನ್ನೇವ ದಶಗ್ರೀವಃ ಸಾಧು ರಕ್ಷೋ ನಿಗೃಹ್ಯತಾಮ್ ॥

ಅನುವಾದ

ದೇವತೆಗಳೇ! ನನ್ನ ಮಾತನ್ನು ಕೇಳಿರಿ. ಈ ನಿಶಾಚರ ದಶಗ್ರೀವನನ್ನು ಜೀವಂತವಾಗಿ ಸೆರೆಹಿಡಿಯುವುದೇ ಒಳ್ಳೆಯದೆಂದು ತೋರುತ್ತದೆ.॥13॥

ಮೂಲಮ್ - 14

ಏಷ ಹ್ಯತಿಬಲಃ ಸೈನ್ಯೇ ರಥೇನ ಪವನೌಜಸಾ ।
ಗಮಿಷ್ಯತಿ ಪೃವೃದ್ಧೋರ್ಮಿಃ ಸಮುದ್ರ ಇವ ಪರ್ವಣಿ ॥

ಅನುವಾದ

ಈ ಅತ್ಯಂತ ಬುದ್ಧಿಶಾಲಿ ರಾಕ್ಷಸನು ವಾಯುವೇಗದಿಂದ ರಥದ ಮೂಲಕ ಸೈನ್ಯದ ನಡುವಿನಿಂದ ಪೂರ್ಣಿಮೆಯ ದಿನ ಉತ್ತಾಲ ತರಂಗಗಳಿಂದ ಕೂಡಿದ ಸಮುದ್ರವು ಉಕ್ಕುವಂತೆ ತೀವ್ರಗತಿಯಿಂದ ಮುಂದೆ ಹೋಗುವನು.॥14॥

ಮೂಲಮ್ - 15

ನಹ್ಯೇಷ ಹಂತುಂ ಶಕ್ಯೋಽದ್ಯ ವರದಾನಾತ್ಸುನಿರ್ಭಯಃ ।
ತದ್ಗ್ರಹೀಷ್ಯಾಮಹೇ ರಕ್ಷೋ ಯತ್ತಾ ಭವತ ಸಂಯುಗೇ ॥

ಅನುವಾದ

ಇವನು ಇಂದು ಸಾಯಲಾರನು; ಏಕೆಂದರೆ ಬ್ರಹ್ಮದೇವರ ವರದಿಂದ ಪೂರ್ಣವಾಗಿ ನಿರ್ಭಯನಾಗಿದ್ದಾನೆ. ಆದ್ದರಿಂದ ನಾವು ಈ ರಾಕ್ಷಸನನ್ನು ಸೆರೆ ಹಿಡಿಯೋಣ. ನೀವು ಯುದ್ಧದಲ್ಲಿ ಇದಕ್ಕಾಗಿ ಪೂರ್ಣ ಪ್ರಯತ್ನಿಸಿರಿ.॥15॥

ಮೂಲಮ್ - 16

ಯಥಾ ಬಲೌ ನಿರುದ್ಧೇ ಚ ತ್ರೈಲೋಕ್ಯಂ ಭುಜ್ಯತೇ ಮಯಾ ।
ಏವಮೇತಸ್ಯ ಪಾಪಸ್ಯ ನಿರೋಧೋ ಮಮರೋಚತೇ ॥

ಅನುವಾದ

ರಾಜಾ ಬಲಿಯು ಬಂಧಿಸಲ್ಪಟ್ಟಾಗಲೇ ನಾನು ಮೂರು ಲೋಕಗಳ ರಾಜ್ಯವನ್ನು ಉಪಭೋಗಿಸುವಂತೆಯೇ ಈ ಪಾಪಿ ನಿಶಾಚರನನ್ನು ಬಂದಿಯಾಗಿಸಿದಾಗ ನನಗೆ ಒಳ್ಳೆಯದೆನಿಸುವುದು.॥16॥

ಮೂಲಮ್ - 17

ತತೋಽನ್ಯಂ ದೇಶಮಾಸ್ಥಾಯ ಶಕ್ರಃ ಸಂತ್ಯಜ್ಯ ರಾವಣಮ್ ।
ಅಯುಧ್ಯತ ಮಹಾರಾಜ ರಾಕ್ಷಸಾಂಸ್ತ್ರಾಸಯನ್ರಣೇ ॥

ಅನುವಾದ

ಮಹಾರಾಜ ಶ್ರೀರಾಮಾ! ಹೀಗೆ ಹೇಳಿ ಇಂದ್ರನು ರಾವಣನೊಡನೆ ಯುದ್ಧ ಮಾಡುವುದನ್ನು ಬಿಟ್ಟು, ಬೇರೆಡೆಗೆ ಹೋಗಿ ಸಮರಾಂಗಣದಲ್ಲಿ ರಾಕ್ಷಸರನ್ನು ಭಯಪಡಿಸುತ್ತಾ ಯುದ್ಧ ಮಾಡತೊಡಗಿದನು.॥17॥

ಮೂಲಮ್ - 18

ಉತ್ತರೇಣ ದಶಗ್ರೀವಃ ಪ್ರವಿವೇಶಾ ನಿವರ್ತಕಃ ।
ದಕ್ಷಿಣೇನ ತು ಪಾರ್ಶ್ವೇಣ ಪ್ರವಿವೇಶ ಶತಕ್ರತುಃ ॥

ಅನುವಾದ

ಯುದ್ಧದಲ್ಲಿ ಬೆನ್ನು ತೋರದಿರುವ ರಾವಣನು ಉತ್ತರದ ಕಡೆಯಿಂದ ದೇವಸೈನ್ಯದಲ್ಲಿ ಪ್ರವೇಶಿಸಿದನು ಮತ್ತು ದೇವೇಂದ್ರನು ದಕ್ಷಿಣದ ಕಡೆಯಿಂದ ಪ್ರವೇಶಿಸಿದನು.॥18॥

ಮೂಲಮ್ - 19

ತತಃ ಸ ಯೋಜನಶತಂ ಪ್ರವಿಷ್ಟೋ ರಾಕ್ಷಸಾಧಿಪಃ ।
ದೇವತಾನಾಂ ಬಲಂ ಸರ್ವಂ ಶರವರ್ಷೈರವಾಕಿರತ್ ॥

ಅನುವಾದ

ದೇವತೆಗಳ ಸೈನ್ಯವು ಮೂರು ಯೋಜನೆಗಳಷ್ಟು ಹರಡಿಕೊಂಡಿತ್ತು. ರಾಕ್ಷಸಾಧಿಪ ರಾವಣನು ಅದರೊಳಗೆ ನುಗ್ಗಿ ಬಾಣಗಳ ಮಳೆಗರೆದು ದೇವ ಸೈನ್ಯವನ್ನು ಮುಚ್ಚಿಬಿಟ್ಟನು.॥19॥

ಮೂಲಮ್ - 20

ತತಃ ಶಕ್ರೋ ನಿರೀಕ್ಷ್ಯಾಥ ಪ್ರಣಷ್ಟಂ ತು ಸ್ವಕಂ ಬಲಮ್ ।
ನ್ಯವರ್ತಯದ ಸಂಭ್ರಾಂತಃ ಸಮಾವೃತ್ಯ ದಶಾನನಮ್ ॥

ಅನುವಾದ

ತನ್ನ ವಿಶಾಲ ಸೈನ್ಯವು ನಾಶವಾಗುವುದನ್ನು ಕಂಡು ಇಂದ್ರನು ಧೈರ್ಯದಿಂದ ದಶಮುಖ ರಾವಣನನ್ನು ಎದುರಿಸಿ ನಾಲ್ಕು ಕಡೆಗಳಿಂದಲೂ ಆಕ್ರಮಿಸಿ ಯುದ್ಧದಿಂದ ವಿಮುಖನನ್ನಾಗಿಸಿದನು.॥20॥

ಮೂಲಮ್ - 21

ಏತಸ್ಮಿನ್ನಂತರೇ ನಾದೋ ಮುಕ್ತೋ ದಾನವರಾಕ್ಷಸೈಃ ।
ಹಾ ಹತಾಃ ಸ್ಮ ಇತಿ ಗ್ರಸ್ತಂ ದೃಷ್ಟ್ವಾಶಕ್ರೇಣ ರಾವಣಮ್ ॥

ಅನುವಾದ

ಆಗ ರಾವಣನು ಇಂದ್ರನ ಹಿಡಿತದಲ್ಲಿ ಸಿಕ್ಕಿಕೊಂಡಿರುವುದನ್ನು ನೋಡಿ ದಾನವ ಹಾಗೂ ರಾಕ್ಷಸರು ಅಯ್ಯೋ! ಸತ್ತೆವು ಎಂದು ಜೋರಾಗಿ ಆರ್ತನಾದ ಮಾಡಿದರು.॥21॥

ಮೂಲಮ್ - 22

ತತೋ ರಥಂ ಸಮಾಸ್ಥಾಯ ರಾವಣಿಃ ಕ್ರೋಧಮೂರ್ಛಿತಃ ।
ತತ್ಸೈನ್ಯಮತಿ ಸಂಕ್ರುದ್ಧಃ ಪ್ರವಿವೇಶ ಸುದಾರುಣಮ್ ॥

ಅನುವಾದ

ಆಗಲೇ ರಾವಣಪುತ್ರ ಮೇಘನಾದನು ಕ್ರೋಧೋನ್ಮತ್ತನಾಗಿ, ರಥಾರೂಢನಾಗಿ ಅತ್ಯಂತ ಕುಪಿತನಾಗಿ ಶತ್ರುಗಳ ಭಯಂಕರ ಸೈನ್ಯವನ್ನು ಪ್ರವೇಶಿಸಿದನು.॥22॥

ಮೂಲಮ್ - 23

ತಾಂ ಪ್ರವಿಶ್ಯ ಮಹಾಮಾಯಾಂ ಪ್ರಾಪ್ತಾಂ ಪಶುಪತೇಃ ಪುರಾ ।
ಪ್ರವಿವೇಶ ಸುಸಂರಬ್ಧಸ್ತತ್ಸೈನ್ಯಂ ಸಮಭಿದ್ರವತ್ ॥

ಅನುವಾದ

ಸೈನ್ಯವನ್ನು ಪ್ರವೇಶಿಸಿ ಹಿಂದೆ ಪಶುಪತಿ ಮಹಾದೇವನಿಂದ ಪಡೆದ ತಮೋಮಯ ಮಹಾಮಾಯೆಯಿಂದಾಗಿ ತನ್ನನ್ನು ಮರೆಯಾಗಿಸಿಕೊಂಡು, ಅತ್ಯಂತ ಕ್ರೋಧದಿಂದ ಶತ್ರುಸೈನ್ಯವನ್ನು ನುಗ್ಗಿ ಚದುರಿಸತೊಡಗಿದನು.॥23॥

ಮೂಲಮ್ - 24

ಸ ಸರ್ವಾ ದೇವತಾಸ್ತ್ಯಕ್ತ್ವಾ ಶಕ್ರಮೇವಾಭ್ಯಧಾವತ ।
ಮಹೇಂದ್ರಶ್ಚ ಮಹಾತೇಜಾ ನಾಪಶ್ಯಚ್ಚ ಸುತಂ ರಿಪೋಃ ॥

ಅನುವಾದ

ಅವನು ಇತರ ದೇವತೆಗಳನ್ನು ಬಿಟ್ಟು ಇಂದ್ರನನ್ನು ಆಕ್ರಮಿಸಿದನು, ಆದರೆ ಮಹಾತೇಜಸ್ವೀ ಇಂದ್ರನು ತನ್ನ ಶತ್ರುವಿನ ಮಗನನ್ನು ನೋಡದಾದನು.॥24॥

ಮೂಲಮ್ - 25

ವಿಮುಕ್ತಕವಚಸ್ತತ್ರ ವಧ್ಯಮಾನೋಽಪಿ ರಾವಣಿಃ ।
ತ್ರಿದಶೈಃ ಸುಮಹಾವೀರ್ಯೈರ್ನ ಚಕಾರ ಚ ಕಿಂಚನ ॥

ಅನುವಾದ

ಮಹಾಪರಾಕ್ರಮಿ ದೇವತೆಗಳ ಏಟು ತಿಂದು ರಾವಣಕುಮಾರನ ಕವಚ ಪುಡಿಯಾಗಿದ್ದರೂ, ಅವನ ಮನಸ್ಸಿಗೆ ಕೊಂಚವೂ ಭಯವಾಗಲಿಲ್ಲ.॥25॥

ಮೂಲಮ್ - 26

ಸ ಮಾತಲಿಂ ಸಮಾಯಾಂತಂ ತಾಡಯಿತ್ವಾ ಶರೋತ್ತಮೈಃ ।
ಮಹೇಂದ್ರಂ ಬಾಣವರ್ಷೇಣ ಭೂಯ ಏವಾಭ್ಯವಾಕಿರತ್ ॥

ಅನುವಾದ

ತನ್ನೆದುರಿಗೆ ಬರುತ್ತಿರುವ ಮಾತಲಿಯನ್ನು ಅವನು ಗಾಯಗೊಳಿಸಿ, ಬಾಣಗಳ ಮಳೆ ಸುರಿಸಿ ಪುನಃ ದೇವೇಂದ್ರನನ್ನು ಮುಚ್ಚಿಬಿಟ್ಟನು.॥26॥

ಮೂಲಮ್ - 27

ತತಸ್ತ್ಯಕ್ತ್ವಾ ರಥಂ ಶಕ್ರೋ ವಿಸಸರ್ಜ ಚ ಸಾರಥಿಮ್ ।
ಐರಾವತಂ ಸಮಾರುಹ್ಯ ಮೃಗಯಾಮಾಸ ರಾವಣಿಮ್ ॥

ಅನುವಾದ

ಆಗ ಇಂದ್ರನು ರಥವನ್ನು ಬಿಟ್ಟು ಸಾರಥಿಯನ್ನು ಬಿಳ್ಕೊಟ್ಟು, ಐರಾವತ ಆನೆಯನ್ನೇರಿ ರಾವಣಕುಮಾರನನ್ನು ಹುಡುಕತೊಡಗಿದನು.॥27॥

ಮೂಲಮ್ - 28

ಸ ತತ್ರ ಮಾಯಾಬಲವಾನದೃಶ್ಯೋಽಥಾಂತರಿಕ್ಷಗಃ ।
ಇಂದ್ರಂ ಮಾಯಾ ಪರಿಕ್ಷಿಪ್ತಂ ಕೃತ್ವಾ ಸ ಪ್ರಾದ್ರವಚ್ಛರೈಃ ॥

ಅನುವಾದ

ಮೇಘನಾದನು ತನ್ನ ಮಾಯೆಯಿಂದಾಗಿ ಪ್ರಬಲನಾಗಿದ್ದನು. ಅವನು ಅದೃಶ್ಯನಾಗಿಯೇ ಆಕಾಶದಲ್ಲಿ ಸಂಚರಿಸತೊಡಗಿದ ಹಾಗೂ ಇಂದ್ರನನ್ನು ಮಾಯೆಯಿಂದ ವ್ಯಾಕುಲಗೊಳಿಸಿ ಬಾಣಗಳಿಂದ ಅವನನ್ನು ಆಕ್ರಮಿಸಿದನು.॥28॥

ಮೂಲಮ್ - 29

ಸ ತಂ ಯದಾ ಪರಿಶ್ರಾಂತಮಿಂದ್ರಂ ಜಜ್ಞೇಽಥ ರಾವಣಿಃ ।
ತದೈನಂ ಮಾಯಯಾ ಬದ್ಧ್ವಾ ಸ್ವಸೈನ್ಯಮಭಿತೋಽನಯತ್ ॥

ಅನುವಾದ

ಇಂದ್ರನು ಬಹಳ ಬಳಲಿದನೆಂದು ತಿಳಿದ ರಾವಣಕುಮಾರನು ಅವನನ್ನು ಬಂಧಿಸಿ ತನ್ನ ಸೈನ್ಯದೊಳಗೆ ಕೊಂಡು ಹೋದನು.॥29॥

ಮೂಲಮ್ - 30

ತಂ ತು ದೃಷ್ಟ್ವಾ ಬಲಾತ್ತೇನ ನೀಯಮಾನಂ ಮಹಾರಣಾತ್ ।
ಮಹೇಂದ್ರಮಮರಾಃ ಸರ್ವೇ ಕಿಂ ನು ಸ್ಯಾದಿತ್ಯಚಿಂತಯನ್ ॥

ಅನುವಾದ

ಮಹಾಸಮರದಿಂದ ಮಹೇಂದ್ರನನ್ನು ಮೇಘನಾದನು ಬಲವಂತವಾಗಿ ಕೊಂಡುಹೋದುದನ್ನು ನೋಡಿ ದೇವತೆ ಗಳೆಲ್ಲರೂ ಈಗೇನಾಗುವುದು ಎಂದು ಯೋಚಿಸತೊಡಗಿದರು.॥30॥

ಮೂಲಮ್ - 31

ದೃಶ್ಯತೇ ನ ಸ ಮಾಯಾವೀ ಶಕ್ರಜಿತ್ಸಮಿತಿಂಜಯಃ ।
ವಿದ್ಯಾವಾನಪಿ ಯೇನೇಂದ್ರೋ ಮಾಯಯಾಪಹೃತೋ ಬಲಾತ್ ॥

ಅನುವಾದ

ಯುದ್ಧವಿಜಯೀ ಈ ಮಾಯಾವೀ ರಾಕ್ಷಸನು ಸ್ವತಃ ಕಾಣಿಸಿಕೊಳ್ಳುವುದಿಲ್ಲ, ಅದರಿಂದ ಇಂದ್ರನನ್ನು ಗೆಲ್ಲಲು ಸಫಲನಾದನು. ದೇವೇಂದ್ರನು ರಾಕ್ಷಸಿ ಮಾಯೆಯನ್ನು ಸಂಹರಿಸುವ ವಿದ್ಯೆ ತಿಳಿದಿದ್ದರೂ ಈ ರಾಕ್ಷಸನು ಮಾಯೆಯಿಂದ ಬಲವಂತವಾಗಿ ಅಪಹರಣ ಮಾಡಿರುವನು.॥31॥

ಮೂಲಮ್ - 32

ಏತಸ್ಮಿನ್ನಂತರೇ ಕ್ರುದ್ಧಾಃ ಸರ್ವೇ ಸುರಗಣಾಸ್ತದಾ ।
ರಾವಣಂ ವಿಮುಖೀಕೃತ್ಯ ಶರವರ್ಷೈರವಾಕಿರನ್ ॥

ಅನುವಾದ

ಹೀಗೆ ಯೋಚಿಸುತ್ತಾ ಆ ದೇವತೆಗಳೆಲ್ಲರೂ ಆಗ ರೋಷಗೊಂಡು, ರಾವಣನನ್ನು ಯುದ್ದದಿಂದ ವಿಮುಖಗೊಳಿಸಿ, ಅವನ ಮೇಲೆ ಬಾಣಗಳ ಮಳೆ ಸುರಿಸಿದರು.॥32॥

ಮೂಲಮ್ - 33

ರಾವಣಸ್ತು ಸಮಾಸಾದ್ಯ ಆದಿತ್ಯಾಂಶ್ಚ ವಸೂಂಸ್ತದಾ ।
ನ ಶಶಾಕ ಸ ಸಂಗ್ರಾಮೇ ಯೋದ್ಧುಂ ಶತ್ರುಭಿರರ್ದಿತಃ ॥

ಅನುವಾದ

ಆದಿತ್ಯರು, ವಸುಗಳು ಎದುರಾದಾಗ ರಾವಣನು ಯುದ್ಧದಲ್ಲಿ ಅವರ ಮುಂದೆ ನಿಲ್ಲದಾದನು; ಏಕೆಂದರೆ ಶತ್ರುಗಳು ಅವನನ್ನು ಬಹಳ ಪೀಡಿಸಿದ್ದರು.॥33॥

ಮೂಲಮ್ - 34

ಸ ತಂ ದೃಷ್ಟ್ವಾ ಪರಿಮ್ಲಾನಂ ಪ್ರಹಾರೈರ್ಜರ್ಜರೀಕೃತಮ್ ।
ರಾವಣಿಃ ಪಿತರಂ ಯುದ್ಧೇಽದರ್ಶನಸ್ಥೋಽಬ್ರವೀದಿದಮ್ ॥

ಅನುವಾದ

ತಂದೆಯ ಶರೀರ ಬಾಣಗಳಿಂದ ಜರ್ಜರಿತವಾಗಿ ಯುದ್ಧದಲ್ಲಿ ಬಳಲಿರುವುದನ್ನು ಕಂಡ ಮೇಘನಾದನು ಅದೃಶ್ಯನಾಗಿದ್ದುಕೊಂಡೆ ರಾವಣನಲ್ಲಿ ಇಂತೆಂದನು.॥34॥

ಮೂಲಮ್ - 35

ಆಗಚ್ಛ ತಾತ ಗಚ್ಛಾಮೋ ರಣಕರ್ಮ ನಿವರ್ತತಾಮ್ ।
ಜಿತಂ ನೋ ವಿದಿತಂ ತೇಽಸ್ತು ಸ್ವಸ್ಥೋಭವ ಗತಜ್ವರಃ ॥

ಅನುವಾದ

ಅಪ್ಪಾ! ನಡೀರಿ, ಈಗ ನಾವು ಮನೆಗೆ ಹೋಗೋಣ. ಯುದ್ಧ ನಿಲ್ಲಿಸಿಬಿಡಿ, ನಮ್ಮ ವಿಜಯವಾಗಿದೆ. ಆದ್ದರಿಂದ ನೀವು ನಿಶ್ಚಿಂತರಾಗಿರಿ.॥35॥

ಮೂಲಮ್ - 36

ಅಯಂ ಹಿ ಸುರಸೈನ್ಯಸ್ಯ ತ್ರೈಲೋಕ್ಯಸ್ಯ ಚ ಯಃ ಪ್ರಭುಃ ।
ಸ ಗೃಹೀತೋ ದೇವಬಲಾದ್ ಭಗ್ನದರ್ಪಾಃ ಸುರಾಃ ಕೃತಾಃ ॥

ಅನುವಾದ

ಈ ಮೂರು ಲೋಕದ ಸ್ವಾಮಿ ಇಂದ್ರನನ್ನು ನಾನು ದೇವಸೈನ್ಯದಿಂದ ಸೆರೆ ಹಿಡಿದಿದ್ದೇನೆ. ಹೀಗೆ ಮಾಡಿ ನಾನು ದೇವತೆಗಳ ಅಹಂಕಾರವನ್ನು ನುಚ್ಚುನೂರಾಗಿಸಿದ್ದೇನೆ.॥36॥

ಮೂಲಮ್ - 37

ಯಥೇಷ್ಟಂ ಭುಂಕ್ಷ್ವ ಲೋಕಾಂ ಸ್ತ್ರೀನ್ನಿಗೃಹ್ಯಾರಾತಿಮೋಜಸಾ ।
ವೃಥಾ ಕಿಂ ತೇ ಶ್ರಮೇಣೇಹ ಯುದ್ಧಮದ್ಯ ತು ನಿಷ್ಫಲಮ್ ॥

ಅನುವಾದ

ನೀವು ನಿಮ್ಮ ಶತ್ರುವನ್ನು ಬಲವಂತವಾಗಿ ಬಂಧಿಸಿ ಸ್ವೆಚ್ಛೆಯಿಂದ ಮೂರು ಲೋಕದ ರಾಜ್ಯವನ್ನು ಅನುಭವಿಸುವಿರಿ. ಇಲ್ಲಿ ಯುದ್ಧ ಮಾಡುವ ವ್ಯರ್ಥಶ್ರಮದಿಂದ ಏನು ಪ್ರಯೋಜನ.॥37॥

ಮೂಲಮ್ - 38

ತತಸ್ತೇ ದೈವತಗಣಾ ನಿವೃತ್ತಾ ರಣಕರ್ಮಣಃ ।
ತಚ್ಛ್ರುತ್ವಾ ರಾವಣೇರ್ವಾಕ್ಯಂ ಶಕ್ರಹೀನಾಃ ಸುರಾಃ ಗತಾಃ ॥

ಅನುವಾದ

ಮೇಘನಾದನ ಮಾತನ್ನು ಕೇಳಿ ದೇವತೆಗಳೆಲ್ಲ ಯುದ್ಧದಿಂದ ನಿವೃತ್ತರಾಗಿ, ಇಂದ್ರನಿಲ್ಲದೆ ಮರಳಿ ಹೋದರು.॥38॥

ಮೂಲಮ್ - 39

ಅಥ ರಣವಿಗತಃ ಸ ಉತ್ತವೌಜಾ-
ಸ್ತ್ರಿದಶರಿಪುಃ ಪ್ರಥಿತೋ ನಿಶಾಚರೇಂದ್ರಃ ।
ಸ್ವಸುತವಚನಮಾದೃತಃ ಪ್ರಿಯಂ ತತ್
ಸಮನುನಿಶಮ್ಯ ಜಗಾದಚೈವ ಸೂನುಮ್ ॥

ಅನುವಾದ

ತನ್ನ ಮಗನ ಪ್ರಿಯ ಮಾತನ್ನು ಕೇಳಿದ ಮಹಾ ಬಲಶಾಲೀ ದೇವದ್ರೋಹೀ, ಸುವಿಖ್ಯಾತ ರಾಕ್ಷಸರಾಜ ರಾವಣನು ಯುದ್ಧದಿಂದ ನಿವೃತ್ತನಾಗಿ ಮೇಘನಾದನಲ್ಲಿ ಹೇಳಿದನು.॥39॥

ಮೂಲಮ್ - 40

ಅತಿಬಲಸದೃಶೈಃ ಪರಾಕ್ರಮೈಸ್ತ್ವಂ
ಮಮ ಕುಲವಂಶವಿವರ್ಧನಃ ಪ್ರಭೋ ।
ಯದಯಮತುಲ್ಯಬಲಸ್ತ್ವಯಾದ್ಯ ವೈ
ತ್ರಿದಶಪತಿಸ್ತ್ರಿದಶಾಶ್ಚ ನಿರ್ಜಿತಾಃ ॥

ಅನುವಾದ

ಸಾಮರ್ಥ್ಯಶಾಲಿ ಪುತ್ರನೇ! ತನ್ನ ಬಲಕ್ಕನುರೂಪ ಅತ್ಯಂತ ಪರಾಕ್ರಮ ಪ್ರಕಟಿಸಿ ಇಂದು ನೀನು ಈ ಅನುಪಮ ಬಲಶಾಲೀ ದೇವೇಂದ್ರನನ್ನು ಗೆದ್ದು, ದೇವತೆಗಳನ್ನು ಸೋಲಿಸಿಬಿಟ್ಟಿರುವೆ. ನೀನು ನನ್ನ ಕುಲ ಮತ್ತು ವಂಶದ ಕೀರ್ತಿಯನ್ನು ವೃದ್ಧಿಪಡಿಸುವವನು ಎಂಬುದು ನಿಶ್ಚಯವಾಯಿತು.॥40॥

ಮೂಲಮ್ - 41

ನಯ ರಥಮಧಿರೋಪ್ಯ ವಾಸವಂ ನಗರ-
ಮಿತೋ ವ್ರಜ ಸೇನಯಾ ವೃತಸ್ತ್ವಮ್ ।
ಅಹಮಪಿ ತವ ಪೃಷ್ಠತೋ ದ್ರುತಂ
ಸಹ ಸಚಿವೈರನುಯಾಮಿ ಹೃಷ್ಟವತ್ ॥

ಅನುವಾದ

ಮಗು! ಇಂದ್ರನನ್ನು ರಥದಲ್ಲಿ ಕುಳ್ಳಿರಿಸಿಕೊಂಡು ನೀನು ಸೈನ್ಯದೊಂದಿಗೆ ಲಂಕೆಗೆ ತೆರಳು. ನಾನೂ ಕೂಡ ಮಂತ್ರಿಗಳೊಂದಿಗೆ ಸಂತೋಷವಾಗಿ ಬೇಗನೇ ನಿನ್ನ ಹಿಂದೆ-ಹಿಂದೆ ಬರುವೆನು.॥41॥

ಮೂಲಮ್ - 42

ಅಥ ಸ ಬಲವೃತಃ ಸವಾಹನ-
ಸ್ತ್ರಿದಶಪತಿಂ ಪರಿಗೃಹ್ಯ ರಾವಣಿಃ ।
ಸ್ವಭವನಮಧಿಗಮ್ಯ ವೀರ್ಯವಾನ್
ಕೃತಸಮರಾನ್ವಿಸಸರ್ಜ ರಾಕ್ಷಸಾನ್ ॥

ಅನುವಾದ

ತಂದೆಯ ಮಾತನ್ನು ಕೇಳಿ ರಾವಣಕುಮಾರ ಮೇಘನಾದನು ದೇವ ರಾಜನನ್ನು ಜೊತೆಯಲ್ಲಿ ಕರೆದುಕೊಂಡು ಸೈನ್ಯ, ವಾಹನಗಳೊಂದಿಗೆ ಲಂಕೆಗೆ ತೆರಳಿದನು. ಅಲ್ಲಿಗೆ ಹೋಗಿ ಯುದ್ಧದಲ್ಲಿ ಭಾಗಿಗಳಾದ ನಿಶಾಚರರನ್ನು ಬೀಳ್ಕೊಟ್ಟನು.॥42॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗ ಪೂರ್ಣವಾಯಿತು.॥29॥