०२८ इन्द्रजिज्-जयन्त-युद्धम्

[ಇಪ್ಪತ್ತೆಂಟನೆಯ ಸರ್ಗ]

ಭಾಗಸೂಚನಾ

ಮೇಘನಾದ ಮತ್ತು ಜಯಂತರ ಯುದ್ಧ, ಪುಲೋಮನು ಜಯಂತನನ್ನು ಬೇರೆಡೆಗೆ ಕರೆದೊಯ್ದುದು, ದೇವೇಂದ್ರನು ಯುದ್ಧಭೂಮಿಗೆ ಬಂದುದು, ರುದ್ರರಿಂದಲೂ, ಮರುದ್ಗಣಗಳಿಂದಲೂ ರಾಕ್ಷಸರ ಸಂಹಾರ, ಇಂದ್ರ ರಾವಣರ ಯುದ್ಧ

ಮೂಲಮ್ - 1

ಸುಮಾಲಿನಂ ಹತಂ ದೃಷ್ಟ್ವಾವಸುನಾ ಭಸ್ಮಸಾತ್ಕೃತಮ್ ।
ಸ್ವಸೈನ್ಯಂ ವಿದ್ರುತಂ ಚಾಪಿ ಲಕ್ಷಯಿತ್ವಾರ್ದಿತಂ ಸುರೈಃ ॥

ಮೂಲಮ್ - 2

ತತಃ ಸ ಬಲವಾನ್ ಕ್ರುದ್ಧೋ ರಾವಣಸ್ಯ ಸುತಸ್ತದಾ ।
ನಿವರ್ತ್ಯ ರಾಕ್ಷಸಾನ್ಸರ್ವಾನ್ಮೇಘನಾದೋ ವ್ಯವಸ್ಥಿತಃ ॥

ಅನುವಾದ

ಸುಮಾಲಿಯು ವಸುವಿನಿಂದ ಭಸ್ಮವಾದುದನ್ನೂ, ತನ್ನ ಸೈನ್ಯವು ಓಡಿಹೋಗುತ್ತಿರುವುದನ್ನೂ ನೋಡಿ ಮಹಾಬಲ ಶಾಲಿಯಾದ ರಾವಣ ಪುತ್ರ ಮೇಘನಾದನು ಎಲ್ಲ ಸೈನಿಕರನ್ನು ಹುರಿದುಂಬಿಸುತ್ತಾ ಹಿಂದಿರುಗಿಸಿ ಯುದ್ಧ ಸನ್ನದ್ಧನಾಗಿ ಯುದ್ಧಕ್ಕೆ ಬಂದು ನಿಂತನು.॥1-2॥

ಮೂಲಮ್ - 3

ಸ ರಥೇನಾಗ್ನಿವರ್ಣೇನ ಕಾಮಗೇನ ಮಹಾರಥಃ ।
ಅಭಿದುದ್ರಾವ ಸೇನಾಂ ತಾಂ ವನಾನ್ಯಗ್ನಿರಿವ ಜ್ವಲನ್ ॥

ಅನುವಾದ

ಆ ಮಹಾರಥಿಯು ಸ್ವೇಚ್ಛೆಯಿಂದ ನಡೆಯುವ ಅಗ್ನಿತುಲ್ಯ ತೇಜಸ್ವೀ ರಥವನ್ನೇರಿ ಕಾಡಿನಲ್ಲಿ ಹರಡುವ ಕಾಡ್ಗಿಚ್ಚಿನಂತೆ ದೇವಸೈನ್ಯದ ಕಡೆಗೆ ಧಾವಿಸಿದನು.॥3॥

ಮೂಲಮ್ - 4

ತತಃ ಪ್ರವಿಶತಸ್ತಸ್ಯ ವಿವಿಧಾಯುಧಧಾರಿಣಃ ।
ವಿದುದ್ರುವುರ್ದಿಶಃ ಸರ್ವಾ ದರ್ಶನಾದೇವ ದೇವತಾಃ ॥

ಅನುವಾದ

ನಾನಾ ಪ್ರಕಾರದ ಆಯುಧಗಳನ್ನು ಧರಿಸಿ ತಮ್ಮ ಸೈನ್ಯದಲ್ಲಿ ಪ್ರವೇಶಿಸುತ್ತಿರುವ ಮೇಘನಾದನನ್ನು ನೋಡುತ್ತಲೇ ದೇವತೆಗಳೆಲ್ಲರೂ ದಶದಿಕ್ಕುಗಳಿಗೆ ಓಡಿಹೋದರು.॥4॥

ಮೂಲಮ್ - 5

ನ ಬಭೂವ ತದಾ ಕಶ್ಚಿದ್ಯುಯುತ್ಸೋರಸ್ಯ ಸಮ್ಮುಖೇ ।
ಸರ್ವಾನಾವಿದ್ಧ್ಯ ವಿತ್ರಸ್ತಾಂಸ್ತತಃ ಶಕ್ರೋಽಬ್ರವೀತ್ಸುರಾನ್ ॥

ಅನುವಾದ

ಆಗ ಯುದ್ಧದ ಇಚ್ಛೆಯುಳ್ಳ ಮೇಘನಾದನ ಎದುರಿಗೆ ಯಾರೂ ನಿಲ್ಲದಾದರು. ಭಯಗೊಂಡ ಸಮಸ್ತ ದೇವತೆಗಳನ್ನು ಗದರಿಸಿ ಇಂದ್ರನು ನುಡಿದನು.॥5॥

ಮೂಲಮ್ - 6

ನ ಭೇತವ್ಯಂ ನ ಗಂತವ್ಯಂ ನಿವತರ್ರ್ಧ್ವಂ ರಣೇ ಸುರಾಃ ।
ಏಷ ಗಚ್ಛತಿ ಪುತ್ರೋ ಮೇ ಯುದ್ಧಾರ್ಥಮಪರಾಜಿತಃ ॥

ಅನುವಾದ

ದೇವತೆಗಳಿರಾ! ಭಯಪಡಬೇಡಿ, ಯುದ್ಧವನ್ನು ಬಿಟ್ಟು ಹೋಗದೆ ರಣರಂಗಕ್ಕೆ ಮರಳಿ ಬನ್ನಿ. ಎಂದೂ ಯಾರಿಂದಲೂ ಸೋಲದಿರುವ ಈ ನನ್ನ ಪುತ್ರ ಜಯಂತ ಯುದ್ಧಕ್ಕಾಗಿ ಹೋಗುತ್ತಿದ್ದಾನೆ.॥6॥

ಮೂಲಮ್ - 7

ತತಃ ಶಕ್ರಸುತೋ ದೇವೋ ಜಯಂತ ಇತಿ ವಿಶ್ರುತಃ ।
ರಥೇನಾದ್ಭುತಕಲ್ಪೇನ ಸಂಗ್ರಾಮೇ ಸೋಽಭ್ಯವರ್ತತ ॥

ಅನುವಾದ

ಬಳಿಕ ಇಂದ್ರಪುತ್ರ ಜಯಂತನು ಅದ್ಭುತವಾದ ರಥದಲ್ಲಿ ಕುಳಿತು ಯುದ್ಧಕ್ಕಾಗಿ ಆಗಮಿಸಿದನು.॥7॥

ಮೂಲಮ್ - 8

ತತಸ್ತೇ ತ್ರಿದಶಾಃ ಸರ್ವೇ ಪರಿವಾರ್ಯ ಶಚೀಸುತಮ್ ।
ರಾವಣಸ್ಯ ಸುತಂ ಯುದ್ಧೇ ಸಮಾಸಾದ್ಯ ಪ್ರಜಘ್ನಿರೇ ॥

ಅನುವಾದ

ಮತ್ತೆ ಎಲ್ಲ ದೇವತೆಗಳು ಜಯಂತನನ್ನೊಡಗೂಡಿ ಯುದ್ಧರಂಗಕ್ಕೆ ಬಂದು ರಾವಣ ಪುತ್ರನನ್ನು ಪ್ರಹರಿಸತೊಡಗಿದರು.॥8॥

ಮೂಲಮ್ - 9

ತೇಷಾಂ ಯುದ್ಧಂ ಸಮಭವತ್ಸದೃಶಂ ದೇವರಕ್ಷಸಾಮ್ ।
ಮಹೇಂದ್ರಸ್ಯ ಚ ಪುತ್ರಸ್ಯ ರಾಕ್ಷಸೇಂದ್ರ ಸುತಸ್ಯ ಚ ॥

ಅನುವಾದ

ಆಗ ದೇವತೆಗಳು ರಾಕ್ಷಸರೊಂದಿಗೆ ಮತ್ತು ಮಹೇಂದ್ರಕುಮಾರನು ರಾವಣಪುತ್ರನೊಡನೆ ಅವರವರ ಬಲ ಪರಾಕ್ರಮಕ್ಕನುರೂಪವಾಗಿ ಯುದ್ಧ ಮಾಡತೊಡಗಿದರು.॥9॥

ಮೂಲಮ್ - 10

ತತೋ ಮಾತಲಿಪುತ್ರಸ್ಯ ಗೋಮುಖಸ್ಯ ಸ ರಾವಣಿಃ ।
ಸಾರಥೇಃ ಪಾತಯಾಮಾಸ ಶರಾನ್ಕನಕಭೂಷಣಾನ್ ॥

ಅನುವಾದ

ರಾವಣಕುಮಾರ ಮೇಘನಾದನು ಜಯಂತನ ಸಾರಥಿ ಮಾತಲೀ ಪುತ್ರ ಗೋಮುಖನ ಮೇಲೆ ಸ್ವರ್ಣಭೂಷಿತ ಬಾಣಗಳ ಮಳೆಗರೆದನು.॥10॥

ಮೂಲಮ್ - 11

ಶಚೀಸುತಶ್ಚಾಪಿ ತಥಾ ಜಯಂತಸ್ತಸ್ಯ ಸಾರಥಿಮ್ ।
ತಂ ಚಾಪಿ ರಾವಣಿಃ ಕ್ರುದ್ಧಃ ಸಮಂತಾತ್ ಪ್ರತ್ಯವಿಧ್ಯತ ॥

ಅನುವಾದ

ಶಚೀಪುತ್ರ ಜಯಂತನೂ ಕೂಡ ಮೇಘನಾದನ ಸಾರಥಿಯನ್ನು ಗಾಯಗೊಳಿಸಿದನು. ಆಗ ಕುಪಿತನಾದ ಮೇಘನಾದನು ಜಯಂತನನ್ನೂ ಕೂಡ ಎಲ್ಲ ಕಡೆಗಳಿಂದ ಬಾಣಗಳ ಮೂಲಕ ಕ್ಷತ-ವಿಕ್ಷತಗೊಳಿಸಿದನು.॥11॥

ಮೂಲಮ್ - 12

ಸ ಹಿ ಕ್ರೋಧಸಮಾವಿಷ್ಟೋ ಬಲೀ ವಿಸ್ಫಾರಿತೇಕ್ಷಣಃ ।
ರಾವಣಿಃ ಶಕ್ರತನಯಂ ಶರವರ್ಷೈರವಾಕಿರತ್ ॥

ಅನುವಾದ

ಆಗ ಕ್ರೋಧಗೊಂಡ ಬಲಿಷ್ಠನಾದ ಮೇಘನಾದನು ಕಣ್ಣುಗಳನ್ನು ಅರಳಿಸಿ ನೋಡುತ್ತಾ ಜಯಂತನನ್ನು ಬಾಣಗಳ ವರ್ಷದಿಂದ ಮುಚ್ಚಿಬಿಟ್ಟನು.॥12॥

ಮೂಲಮ್ - 13

ತತೋ ನಾನಾ ಪ್ರಹರಣಾನ್ ಶಿತಧಾರಾನ್ಸಹಸ್ರಶಃ ।
ಪಾತಯಾಮಾಸ ಸಂಕ್ರುದ್ಧಃ ಸುರಸೈನ್ಯೇಷು ರಾವಣಿಃ ॥

ಅನುವಾದ

ಅತ್ಯಂತ ಕುಪಿತನಾದ ರಾವಣ ಕುಮಾರನು ದೇವತೆಗಳ ಸೈನ್ಯದ ಮೇಲೆಯೂ ಹರಿತವಾದ ನಾನಾ ರೀತಿಯ ಸಾವಿರಾರು ಅಸ್ತ್ರ-ಶಸ್ತ್ರಗಳ ಮಳೆಗರೆದನು.॥13॥

ಮೂಲಮ್ - 14

ಶತಘ್ನೀಮುಸಲಪ್ರಾಸ ಗದಾಖಡ್ಗ ಪರಶ್ವಧಾನ್ ।
ಮಹಾಂತಿ ಗಿರಿಶೃಂಗಾಣಿ ಪಾತಯಾಮಾಸ ರಾವಣಿಃ ॥

ಅನುವಾದ

ಅವನು ಶತಘ್ನೀ, ಮುಸಲ, ಪ್ರಾಸ, ಗದೆ, ಖಡ್ಗ, ಕೊಡಲಿಗಳನ್ನು ಪ್ರಯೋಗಿಸಿ, ಜೊತೆಗೆ ದೊಡ್ಡ-ದೊಡ್ಡ ಪರ್ವತ ಶಿಖರಗಳನ್ನು ಪ್ರಯೋಗಿಸಿದನು.॥14॥

ಮೂಲಮ್ - 15

ತತಃ ಪ್ರವ್ಯಥಿತಾಃ ಲೋಕಾಃ ಸಂಜಜ್ಞೇ ಚ ತಮಸ್ತತಃ ।
ತಸ್ಯ ರಾವಣ ಪುತ್ರಸ್ಯ ಶತ್ರುಸೈನ್ಯಾನಿ ನಿಘ್ನತಃ ॥

ಅನುವಾದ

ಶತ್ರುಸಂಹಾರದಲ್ಲಿ ತೊಡಗಿದ ರಾವಣಕುಮಾರನು ಮಾಯೆಯಿಂದ ಆಗ ಎಲ್ಲೆಡೆ ಕತ್ತಲು ಕವಿಯುವಂತೆ ಮಾಡಿದನು. ಇದರಿಂದ ಸಮಸ್ತ ಲೋಕಗಳು ದುಃಖಿತವಾದುವು.॥15॥

ಮೂಲಮ್ - 16

ತತಸ್ತದ್ ದೈವತಬಲಂ ಸಮಂತಾತ್ತಂ ಶಚೀಸುತಮ್ ।
ಬಹುಪ್ರಕಾರಮಸ್ವಸ್ಥಮಭವಚ್ಛರಪೀಡಿತಮ್ ॥

ಅನುವಾದ

ಆಗ ಶಚೀಪುತ್ರನ ಸುತ್ತಲೂ ನಿಂತಿದ್ದ ದೇವತೆಗಳ ಸೈನ್ಯವು ಬಾಣಗಳಿಂದ ಪೀಡಿತವಾಗಿ ವಿಷಣ್ಣವಾಯಿತು.॥16॥

ಮೂಲಮ್ - 17

ನಾಭ್ಯಜಾನಂತ ಚಾನ್ಯೋನ್ಯಂ ರಕ್ಷೋ ವಾ ದೇವತಾಥವಾ ।
ತತ್ರ ತತ್ರ ವಿಪರ್ಯಸ್ತಂ ಸಮಂತಾತ್ ಪರಿಧಾವತ ॥

ಅನುವಾದ

ರಾಕ್ಷಸರು ಮತ್ತು ದೇವತೆಗಳು ಪರಸ್ಪರ ನೋಡಲಾಗದೆ ಎಲ್ಲೆಡೆ ಚದುರಿಹೋಗಿ ಅಲೆಯತೊಡಗಿದರು.॥17॥

ಮೂಲಮ್ - 18

ದೇವಾ ದೇವಾನ್ನಿಜಘ್ನುಸ್ತೇ ರಾಕ್ಷಸಾನ್ ರಾಕ್ಷಸಾಸ್ತಥಾ ।
ಸಮ್ಮೂಢಾಸ್ತಮಸಾಚ್ಛನ್ನಾ ವ್ಯದ್ರವನ್ನಪರೇ ತಥಾ ॥

ಅನುವಾದ

ಅಂಧಕಾರದಿಂದ ಆಚ್ಛಾದಿತರಾಗಿ ಅವರು ವಿವೇಕ ಶಕ್ತಿಯನ್ನು ಕಳೆದುಕೊಂಡು ದೇವತೆಗಳು ದೇವತೆಗಳನ್ನು, ರಾಕ್ಷಸರು ರಾಕ್ಷಸರನ್ನು ಪ್ರಹರಿಸತೊಡಗಿದರು. ಅನೇಕ ಯೋಧರು ಯುದ್ಧದಿಂದ ಓಡಿಹೋದರು.॥18॥

ಮೂಲಮ್ - 19

ಏತಸ್ಮಿನ್ನಂತರೇ ವೀರಃ ಪುಲೋಮಾ ನಾಮ ವೀರ್ಯವಾನ್ ।
ದೈತ್ಯೇಂದ್ರಸ್ತೇನ ಸಂಗೃಹ್ಯ ಶಚೀಪುತ್ರೋಽಪವಾಹಿತಃ ॥

ಅನುವಾದ

ಅಷ್ಟರಲ್ಲಿ ಪರಾಕ್ರಮೀ ವೀರ ದೈತ್ಯರಾಜ ಪುಲೋಮಾ ಯುದ್ಧಕ್ಕೆ ಬಂದು ಶಚೀಪುತ್ರ ಜಯಂತನನ್ನು ಹಿಡಿದುಕೊಂಡು ಅಲ್ಲಿಂದ ದೂರ ಕೊಂಡುಹೋದನು.॥19॥

ಮೂಲಮ್ - 20

ಸಂಗೃಹ್ಯ ತಂ ತು ದೌಹಿತ್ರಂ ಪ್ರವಿಷ್ಟಃ ಸಾಗರಂ ತದಾ ।
ಆರ್ಯಕಃ ಸ ಹಿ ತಸ್ಯಾಸೀತ್ಪುಲೋಮಾ ಯೇನ ಸಾ ಶಚೀ ॥

ಅನುವಾದ

ಅವನು ಶಚಿಯ ತಂದೆ ಮತ್ತು ಜಯಂತನ ತಾತನಾಗಿದ್ದನು. ಆದ್ದರಿಂದ ತನ್ನ ಮೊಮ್ಮಗನನ್ನು ಕರೆದುಕೊಂಡು ಸಮುದ್ರದೊಳಗೆ ನುಗ್ಗಿದನು.॥20॥

ಮೂಲಮ್ - 21

ಜ್ಞಾತ್ವಾ ಪ್ರಣಾಶಂ ತು ತದಾ ಜಯಂತಸ್ಯಾಥ ದೇವತಾಃ ।
ಅಪ್ರಹೃಷ್ಟಾಸ್ತತಃ ಸರ್ವಾ ವ್ಯಥಿತಾಃ ಸಂಪ್ರದುದ್ರುವುಃ ॥

ಅನುವಾದ

ದೇವತೆಗಳಿಗೆ ಜಯಂತನು ಕಣ್ಮರೆಯಾದುದನ್ನು ತಿಳಿದಾಗ ಅವರ ಉತ್ಸಾಹ ಉಡುಗಿ ಹೋಯಿತು. ಅವರು ದುಃಖಿತರಾಗಿ ದಿಕ್ಕಾಪಾಲಾಗಿ ಓಡತೊಡಗಿದರು.॥21॥

ಮೂಲಮ್ - 22

ರಾವಣಿಸ್ತ್ವಥ ಸಂಕ್ರುದ್ಧೋ ಬಲೈಃ ಪರಿವೃತಃ ಸ್ವಕೈಃ ।
ಅಭ್ಯಧಾವತ ದೇವಾಂಸ್ತಾನ್ಮುಮೋಚ ಚ ಮಹಾಸ್ವನಮ್ ॥

ಅನುವಾದ

ಅತ್ತ ತನ್ನ ಸೈನಿಕರಿಂದ ಪರಿವೃತನಾದ ರಾವಣಕುಮಾರ ಮೇಘನಾದನು ಅತ್ಯಂತ ಕುಪಿತನಾಗಿ ದೇವತೆಗಳನ್ನು ಆಕ್ರಮಿಸಿ ಜೋರಾಗಿ ಗರ್ಜಿಸಿದನು.॥22॥

ಮೂಲಮ್ - 23

ದೃಷ್ಟ್ವಾ ಪ್ರಣಾಶಂ ಪುತ್ರಸ್ಯ ದೈವತೇಷು ಚ ವಿದ್ರುತಮ್ ।
ಮಾತಲಿಂ ಚಾಹ ದೇವೇಶೋ ರಥಃ ಸಮುಪನೀಯತಾಮ್ ॥

ಅನುವಾದ

ಪುತ್ರನು ಕಣ್ಮರೆಯಾಗಿ ದೇವತೆಗಳ ಸೈನ್ಯದಲ್ಲಿ ಉಂಟಾದ ಗೊಂದಲವನ್ನು ನೋಡಿ ದೇವೇಂದ್ರನು ಮಾತಲಿಗೆ ಹೇಳಿದನು - ನನ್ನ ರಥವನ್ನು ಸಜ್ಜುಗೊಳಿಸಿ ತೆಗೆದುಕೊಂಡು ಬಾ.॥23॥

ಮೂಲಮ್ - 24

ಸ ತು ದಿವ್ಯೋ ಮಹಾಭೀಮಃ ಸಜ್ಜ ಏವ ಮಹಾರಥಃ ।
ಉಪಸ್ಥಿತೋ ಮಾತಲಿನಾ ವಾಹ್ಯಮಾನೋ ಮಹಾಜವಃ ॥

ಅನುವಾದ

ಮಾತಲಿಯು ಒಂದು ಭಯಂಕರ ದಿವ್ಯ-ವಿಶಾಲವಾದ ರಥವನ್ನು ಅಲಂಕರಿಸಿ ತಂದು ನಿಲ್ಲಿಸಿದನು. ಮಾತಲಿಯು ನಡೆಸುತ್ತಿದ್ದ ಆ ರಥವು ಮಹಾವೇಗಶಾಲಿಯಾಗಿತ್ತು.॥24॥

ಮೂಲಮ್ - 25

ತತ್ರೋ ಮೇಘಾ ರಥೇ ತಸ್ಮಿಂಸ್ತಡಿತ್ತ್ವಂತೋ ಮಹಾಬಲಾಃ ।
ಅಗ್ರತೋ ವಾಯುಚಪಲಾ ನೇದುಃ ಪರಮ ನಿಃಸ್ವನಾಃ ॥

ಅನುವಾದ

ಮಿಂಚಿನಿಂದ ಕೂಡಿದ ಮಹಾಬಲಿಷ್ಠವಾದ ಮೇಘಗಳು ಆ ರಥದ ಮುಂದೆ ಗಾಳಿಯ ಹೊಡೆತಕ್ಕೆ ಚಂಚಲವಾಗಿ ಜೋರಾಗಿ ಗರ್ಜಿಸತೊಡಗಿದವು.॥25॥

ಮೂಲಮ್ - 26

ನಾನಾ ವಾದ್ಯಾನಿ ವಾದ್ಯಂತ ಗಂಧರ್ವಾಶ್ಚ ಸಮಾಹಿತಾಃ ।
ನನೃತುಶ್ಚಾಪ್ಸರಃ ಸಂಘಾ ನಿರ್ಯಾತೇ ತ್ರಿದಶೇಶ್ವರೇ ॥

ಅನುವಾದ

ದೇವೇಶ್ವರ ಇಂದ್ರನು ಹೊರಟಾಗ ನಾನಾ ರೀತಿಯ ವಾದ್ಯಗಳು ಮೊಳಗಿದವು, ಗಂಧರ್ವರು ಹಾಡತೊಡಗಿದರೆ, ಅಪ್ಸರೆಯರು ನೃತ್ಯಮಾಡತೊಡಗಿದರು.॥26॥

ಮೂಲಮ್ - 27

ರುದ್ರೈರ್ವಸುಭಿರಾದಿತ್ಯೈರಶ್ವಿಭ್ಯಾಂ ಸಮರುದ್ಗಣೈಃ ।
ವೃತೋ ನಾನಾ ಪ್ರಹರಣೈರ್ನಿರ್ಯಯೌತ್ರಿದಶಾಧಿಪಃ ॥

ಅನುವಾದ

ಬಳಿಕ ರುದ್ರರು, ವಸುಗಳು, ಆದಿತ್ಯರು, ಅಶ್ವಿನೀ ಕುಮಾರರು, ಮರುದ್ಗಣರು ಇವರಿಂದ ಪರಿವೃತನಾದ ದೇವೇಂದ್ರನು ನಾನಾ ರೀತಿಯ ಅಸ್ತ್ರ-ಶಸ್ತ್ರಗಳೊಂದಿಗೆ ಅಮರಾಪುರಿಯಿಂದ ಹೊರಗೆ ಹೊರಟನು.॥27॥

ಮೂಲಮ್ - 28

ನಿರ್ಗಚ್ಛತಸ್ತು ಶಕ್ರಸ್ಯ ಪರುಷಃ ಪವನೋ ವವೌ ।
ಭಾಸ್ಕರೋ ನಿಷ್ಪ್ರಭಶ್ಚೈವ ಮಹೋಲ್ಕಾಶ್ಚ ಪ್ರಪೇದಿರೇ ॥

ಅನುವಾದ

ಇಂದ್ರನು ಹೊರಡುತ್ತಲೇ ಪ್ರಚಂಡ ವಾಯು ಬೀಸಿತು. ಸೂರ್ಯನು ಮಂಕಾದನು. ಆಕಾಶದಿಂದ ಎಲ್ಲೆಡೆ ಉಲ್ಕೆಗಳು ಬೀಳತೊಡಗಿದವು.॥28॥

ಮೂಲಮ್ - 29

ಏತಸ್ಮಿನ್ನಂತರೇ ಶೂರೋ ದಶಗ್ರೀವಃ ಪ್ರತಾಪವಾನ್ ।
ಆರುರೋಹ ರಥಂ ದಿವ್ಯಂ ನಿರ್ಮಿತಂ ವಿಶ್ವಕರ್ಮಣಾ ॥

ಅನುವಾದ

ಆಗಲೇ ಪ್ರತಾಪೀ ವೀರ ದಶಗ್ರೀವನೂ ಕೂಡ ವಿಶ್ವಕರ್ಮನಿಂದ ನಿರ್ಮಿತ ದಿವ್ಯರಥವನ್ನು ಹತ್ತಿದನು.॥29॥

ಮೂಲಮ್ - 30

ಪನ್ನಗೈಃ ಸುಮಹಾಕಾಯೈರ್ವೇಷ್ಟಿತಂ ಲೋಮಹರ್ಷಣೈಃ ।
ಯೇಷಾಂ ನಿಃಶ್ವಾಸವಾತೇನ ಪ್ರದೀಪ್ತಮಿವ ಸಂಯುಗೇ ॥

ಅನುವಾದ

ಅವನ ರಥದಲ್ಲಿ ರೋಮಾಂಚಕರ ವಿಶಾಲಕಾಯ ಸರ್ಪಗಳು ಸುತ್ತಿಕೊಂಡಿದ್ದವು. ಅವುಗಳ ಉಸುರಿನ ಗಾಳಿಯಿಂದ ಆ ರಥವು ಯುದ್ಧರಂಗದಲ್ಲಿ ಉರಿಯುತ್ತಿದೆಯೇ ಎಂದು ಅನಿಸುತ್ತಿತ್ತು.॥30॥

ಮೂಲಮ್ - 31

ದೈತ್ಯೈರ್ನಿಶಾಚರೈಶ್ಚೈವ ಸ ರಥಃ ಪರಿವಾರಿತಃ ।
ಸಮರಾಭಿಮುಖೋ ದಿವ್ಯೋ ಮಹೇಂದ್ರಂ ಸೋಽಭ್ಯವರ್ತತ ॥

ಅನುವಾದ

ದೈತ್ಯರು ಮತ್ತು ನಿಶಾಚರರು ಆ ರಥವನ್ನು ಸುತ್ತುವರೆದಿದ್ದರು. ಸಮರಾಂಗಣಕ್ಕೆ ಹೊರಟ ರಾವಣನ ಆ ದಿವ್ಯರಥವು ಮಹೇಂದ್ರನ ಎದುರಿಗೆ ಬಂದಿತು.॥31॥

ಮೂಲಮ್ - 32

ಪುತ್ರಂ ತಂ ವಾರಯಿತ್ವಾ ತು ಸ್ವಯಮೇವ ವ್ಯವಸ್ಥಿತಃ ।
ಸೋಽಪಿ ಯುದ್ಧಾದ್ವಿನಿಷ್ಕ್ರಮ್ಯ ರಾವಣಿಃ ಸಮುಪಾವಿಶತ್ ॥

ಅನುವಾದ

ರಾವಣನು ತನ್ನ ಪುತ್ರನನ್ನು ತಡೆದು ಸ್ವತಃ ಯುದ್ಧಕ್ಕೆ ಸಿದ್ಧನಾದನು. ಆಗ ರಾವಣಪುತ್ರ ಮೇಘನಾದನು ಯುದ್ಧದಿಂದ ಹೊರಟು ಹೋಗಿ ತನ್ನ ರಥದಲ್ಲಿ ಕುಳಿತಿಕೊಂಡನು.॥32॥

ಮೂಲಮ್ - 33

ತತೋ ಯುದ್ಧಂ ಪ್ರವೃತ್ತಂ ತು ಸುರಾಣಾಂ ರಾಕ್ಷಸೈಃ ಸಹ ।
ಶಸ್ತ್ರಾಣಿ ವರ್ಷತಾಂ ತೇಷಾಂ ಮೇಘಾನಾಮಿವ ಸಂಯುಗೇ ॥

ಅನುವಾದ

ಮತ್ತೆ ದೇವತೆಗಳ ಮತ್ತು ರಾಕ್ಷಸರ ಘೋರ ಯುದ್ಧ ನಡೆಯಿತು. ಮೇಘಗಳು ಮಳೆ ಸುರಿಸುವಂತೆ ದೇವತೆಗಳು ಯುದ್ಧದಲ್ಲಿ ಅಸ್ತ್ರ-ಶಸ್ತ್ರಗಳ ಮಳೆಗರೆದರು.॥33॥

ಮೂಲಮ್ - 34

ಕುಂಭಕರ್ಣಸ್ತು ದುಷ್ಟಾತ್ಮಾ ನಾನಾ ಪ್ರಹರಣೋದ್ಯತಃ ।
ನಾಜ್ಞಾಯತ ತದಾ ರಾಜನ್ಯುದ್ಧಂ ಕೇನಾಭ್ಯಪದ್ಯತ ॥

ಅನುವಾದ

ರಾಜನೇ! ದುಷ್ಟಾತ್ಮಾ ಕುಂಭಕರ್ಣನೂ ನಾನಾ ರೀತಿಯ ಅಸ್ತ್ರಶಸ್ತ್ರಗಳಿಂದ ಯಾರೊಡನೆ ಯುದ್ಧ ಮಾಡುತ್ತಿದ್ದನೋ ತಿಳಿಯುತ್ತಿರಲಿಲ್ಲ. ಅರ್ಥಾತ್ ಉನ್ಮತ್ತನಾದ ಕಾರಣ ತನ್ನವರ ಪರರ ಸೈನ್ಯದೊಂದಿಗೆ ಕಾದಾಡುತ್ತಿದ್ದನು.॥34॥

ಮೂಲಮ್ - 35

ದಂತೈಃ ಪಾದೈರ್ಭುಜೈರ್ಹಸ್ತೈಃ ಶಕ್ತಿತೋಮರ ಮುದ್ಗರೈಃ ।
ಯೇನ ತೇನೈವ ಸಂಕ್ರುದ್ಧಸ್ತಾಡಯಾಮಾಸ ದೇವತಾಃ ॥

ಅನುವಾದ

ಅವನು ಅತ್ಯಂತ ಕುಪಿತನಾಗಿ ಹಲ್ಲು, ಒದೆ, ಭುಜ, ಕೈ, ಶಕ್ತಿ, ತೋಮರ, ಮುದ್ಗರ ಮೊದಲಾದವುಗಳು ಏನು ಸಿಗುವುದೋ ಅದರಿಂದಲೇ ದೇವತೆಗಳನ್ನು ಬಡಿಯುತ್ತಿದ್ದನು.॥35॥

ಮೂಲಮ್ - 36

ಸ ತು ರುದ್ರೈರ್ಮಹಾಘೋರೈಃ ಸಂಗಮ್ಯಾಥ ನಿಶಾಚರಃ ।
ಪ್ರಯುದ್ಧಸ್ತೈಶ್ಚ ಸಂಗ್ರಾಮೇ ಕ್ಷತಃ ಶಸ್ತ್ರೈರ್ನಿರಂತರಮ್ ॥

ಅನುವಾದ

ಆ ನಿಶಾಚರನು ಮಹಾಭಯಂಕರ ರುದ್ರರೊಂದಿಗೆ ಘೋರಯುದ್ಧ ಮಾಡತೊಡಗಿದನು. ಸಂಗ್ರಾಮದಲ್ಲಿ ರುದ್ರರು ತಮ್ಮ ಅಸ್ತ್ರ-ಶಸ್ತ್ರಗಳಿಂದ ಅವನ ಇಡೀ ಶರೀರವನ್ನು ಕ್ಷತ-ವಿಕ್ಷತಗೊಳಿಸಿದರು.॥36॥

ಮೂಲಮ್ - 37

ಬಭೌ ಶಸ್ತ್ರಾಚಿತತನುಃ ಕುಂಭಕರ್ಣಃ ಕ್ಷರನ್ನಸೃಕ್ ।
ವಿದ್ಯುತ್ಸ್ತ ನಿತನಿರ್ಘೋಷೋ ಧಾರಾವಾನಿವ ತೋಯದಃ ॥

ಅನುವಾದ

ಕುಂಭಕರ್ಣನ ಶರೀರವು ಶಸ್ತ್ರಗಳಿಂದ ತುಂಬಿಹೋಗಿ ರಕ್ತದ ಹೊಳೆಯೇ ಹರಿಯುತ್ತಿತ್ತು. ಆಗ ಅವನು ಮಿಂಚಿನಿಂದ ಕೂಡಿದ, ಗರ್ಜಿಸುತ್ತಿರುವ ಕಪ್ಪಾದ ಮೋಡದಂತೆ ಕಂಡು ಬರುತ್ತಿದ್ದನು.॥37॥

ಮೂಲಮ್ - 38

ತತಸ್ತದ್ರಾಕ್ಷಸಂ ಸೈನ್ಯಂ ಪ್ರಯುದ್ಧಂ ಸಮರುದ್ಗಣೈಃ ।
ರಣೇ ವಿದ್ರಾವಿತಂ ಸರ್ವಂ ನಾನಾ ಪ್ರಹರಣೈಸ್ತದಾ ॥

ಅನುವಾದ

ಬಳಿಕ ಘೋರ ಯುದ್ಧದಲ್ಲಿ ತೊಡಗಿದ್ದ ರಾಕ್ಷಸ ಸೈನ್ಯವನ್ನು ಯುದ್ಧರಂಗದಲ್ಲಿ ನಾನಾ ರೀತಿಯ ಅಸ್ತ್ರ-ಶಸ್ತ್ರಗಳಿಂದ ರುದ್ರರು ಮತ್ತು ಮರದ್ಗಣರು ಹೊಡೆದು ಓಡಿಸಿದರು.॥38॥

ಮೂಲಮ್ - 39

ಕೇಚಿದ್ವಿನಿಹತಾಃ ಕೃತ್ತಾಶ್ಚೇಷ್ಟಂತಿ ಸ್ಮ ಮಹೀತಲೇ ।
ವಾಹನೇಷ್ವವಸಕ್ತಾಶ್ಚ ಸ್ಮಿತಾ ಏವಾಪರೇ ರಣೇ ॥

ಅನುವಾದ

ಎಷ್ಟೋ ನಿಶಾಚರರು ಸತ್ತುಹೋದರು, ಎಷ್ಟೋ ಜನರು ಶರೀರ ತುಂಡು-ತುಂಡುಗಳಾಗಿ ನೆಲಕ್ಕೊರಗಿದರು. ಎಷ್ಟೋ ರಾಕ್ಷಸರು ಪ್ರಾಣಹೀನರಾದರೂ ತಮ್ಮ ವಾಹನಕ್ಕೆ ಅಂಟಿಕೊಂಡಿದ್ದರು.॥39॥

ಮೂಲಮ್ - 40

ರಥಾನ್ನಾಗಾನ್ ಖರಾನುಷ್ಟ್ರಾನ್ ಪನ್ನಗಾಂ ಸ್ತುರಗಾಂ ಸ್ತಥಾ ।
ಶಿಶುಮಾರಾನ್ವರಾಹಾಂಶ್ಚ ಪಿಶಾಚವದನಾನಪಿ ॥

ಮೂಲಮ್ - 41

ತಾನ್ಸಮಾಲಿಂಗ್ಯಬಾಹುಭ್ಯಾಂ ವಿಷ್ಟಬ್ಧಾಃ ಕೇಚಿದುತ್ಥಿತಾಃ ।
ದೇವೈಸ್ತು ಶಸ್ತ್ರಸಂಭಿನ್ನಾಮಮ್ರಿರೇ ಚ ನಿಶಾಚರಾಃ ॥

ಅನುವಾದ

ಕೆಲವು ರಾಕ್ಷಸರು ರಥ, ಆನೆ, ಕತ್ತೆ, ಒಂಟೆ, ಸರ್ಪ, ಕುದುರೆ, ಶಿಶುಮಾರ, ಹಂದಿ, ಪಿಶಾಚಮುಖ ಮುಂತಾದ ವಾಹನಗಳನ್ನು ಅಪ್ಪಿಕೊಂಡು ನಿಶ್ಚೇಷ್ಟಿತರಾಗಿದ್ದರು. ಎಷ್ಟೋ ಜನರು ಮೊದಲೇ ಮೂರ್ಛಿತರಾಗಿದ್ದು, ಮೂರ್ಛೆತಳೆದು ಎದ್ದಾಗ ದೇವತೆಗಳ ಆಯುಧಗಳಿಂದ ಮೃತ್ಯುಮುಖರಾದರು.॥40-41॥

ಮೂಲಮ್ - 42

ಚಿತ್ರಕರ್ಮ ಇವಾಭಾತಿ ಸರ್ವೇಷಾಂ ರಣಸಂಪ್ಲವಃ ।
ನಿಹತಾನಾಂ ಪ್ರಸುಪ್ತಾನಾಂ ರಾಕ್ಷಸಾನಾಂ ಮಹೀತಲೇ ॥

ಅನುವಾದ

ಪ್ರಾಣಗಳನ್ನು ಕಳೆದುಕೊಂಡು ನೆಲಕ್ಕೆ ಬಿದ್ದ ಸಮಸ್ತ ರಾಕ್ಷಸರು ಈ ರೀತಿಯಾಗಿ ಯುದ್ಧದಲ್ಲಿ ಹತರಾದುದು ಇಂದ್ರಜಾಲದಂತೆ ಆಶ್ಚರ್ಯಜನಕವಾಗಿತ್ತು.॥42॥

ಮೂಲಮ್ - 43

ಶೋಣಿತೋದಕ ನಿಷ್ಪಂದಾ ಕಾಕಗೃಧ್ರ ಸಮಾಕುಲಾ ।
ಪ್ರವೃತ್ತಾ ಸಂಯುಗಮುಖೇ ಶಸ್ತ್ರಗ್ರಾಹವತೀ ನದೀ ॥

ಅನುವಾದ

ಯುದ್ಧರಂಗದಲ್ಲಿ ರಕ್ತದ ಹೊಳೆ ಹರಿದವು, ಅದರಲ್ಲಿ ಅನೇಕ ರೀತಿಯ ಅಸ್ತ್ರ-ಶಸ್ತ್ರಗಳು ಮೊಸಳೆಗಳೋ ಎಂಬ ಭ್ರಮೆ ಉಂಟಾಗುತ್ತಿತ್ತು. ಆ ರಕ್ತ ನದಿಯ ದಡದಲ್ಲಿ ಎಲ್ಲೆಡೆ ರಣಹದ್ದು, ಕಾಗೆಗಳು ಆವರಿಸಿಕೊಂಡಿದ್ದವು.॥43॥

ಮೂಲಮ್ - 44

ಏತಸ್ಮಿನ್ನಂತರೇ ಕ್ರುದ್ಧೋ ದಶಗ್ರೀವಃ ಪ್ರತಾಪವಾನ್ ।
ನಿರೀಕ್ಷ್ಯತು ಬಲಂ ಸರ್ವಂ ದೈವತೈರ್ವಿನಿಪಾತಿತಮ್ ॥

ಅನುವಾದ

ದೇವತೆಗಳು ತಮ್ಮ ಸೈನಿಕರನ್ನು ಕೊಂದು ಹಾಕಿದುದನ್ನು ಪ್ರತಾಪಿ ದಶಗ್ರೀವನು ನೋಡಿದಾಗ ಕ್ರೋಧದಿಂದ ಉರಿದೆದ್ದನು.॥44॥

ಮೂಲಮ್ - 45

ಸ ತಂ ಪ್ರತಿವಿಗಾಹ್ಯಾಶು ಪ್ರವೃದ್ಧಂ ಸೈನ್ಯಸಾಗರಮ್ ।
ತ್ರಿದಶಾನ್ಸಮರೇ ನಿಘ್ನನ್ ಶಕ್ರಮೇವಾಭ್ಯವರ್ತತ ॥

ಅನುವಾದ

ಅವನು ಸಮುದ್ರದಂತೆ ದೂರದವರೆಗೆ ಹರಡಿ ಕೊಂಡಿದ್ದ ದೇವಸೈನ್ಯವನ್ನು ನುಗ್ಗಿ ಸಮರಾಂಗಣದಲ್ಲಿ ದೇವತೆಗಳನ್ನು ಕೊಂದು ಧರಾಶಾಯಿಯಾಗಿಸಿ, ಕೂಡಲೇ ದೇವೇಂದ್ರನ ಮುಂದೆ ಬಂದನು.॥45॥

ಮೂಲಮ್ - 46

ತತಃ ಶಕ್ರೋ ಮಹಚ್ಚಾಪಂ ವಿಸ್ಫಾರ್ಯ ಸುಮಹಾಸ್ವನಮ್ ।
ಯಸ್ಯ ವಿಸ್ಫಾರನಿರ್ಘೋಷೈಃ ಸ್ತನಂತಿ ಸ್ಮ ದಿಶೋ ದಶ ॥

ಅನುವಾದ

ಆಗ ಇಂದ್ರನು ಜೋರಾಗಿ ಧನುಷ್ಟಂಕಾರ ಮಾಡಿದನು. ಆ ಧನುಷ್ಟಂಕಾರದ ಧ್ವನಿ ದಶದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು.॥46॥

ಮೂಲಮ್ - 47

ತದ್ವಿಕೃಷ್ಯ ಮಹಚ್ಚಾಪಿಮಿಂದ್ರೋ ರಾವಣಮೂರ್ಧನಿ ।
ಪಾತಯಾಮಾಸ ಸ ಶರಾನ್ ಪಾವಕಾದಿತ್ಯವರ್ಚಸಃ ॥

ಅನುವಾದ

ಆ ವಿಶಾಲ ಧನುಸ್ಸನ್ನು ಸೆಳೆದು ಇಂದ್ರನು ರಾವಣನ ತಲೆಯ ಮೇಲೆ ಸೂರ್ಯಾಗ್ನಿಯಂತಹ ತೇಜಸ್ವೀ ಬಾಣಗಳನ್ನು ಪ್ರಯೋಗಿಸಿದನು.॥47॥

ಮೂಲಮ್ - 48

ತಥೈವ ಚ ಮಹಾಬಾಹುರ್ದಶಗ್ರೀವೋ ನಿಶಾಚರಃ ।
ಶಕ್ರಂ ಕಾರ್ಮುಕ ವಿಭ್ರಷ್ಟೈಃ ಶರವರ್ಷೈರವಾಕಿರತ್ ॥

ಅನುವಾದ

ಹೀಗೆ ಮಹಾಬಾಹು ನಿಶಾಚರ ದಶಗ್ರೀವನೂ ಕೂಡ ತನ್ನ ಧನುಸ್ಸಿನಿಂದ ಬಿಟ್ಟ ಬಾಣವರ್ಷದಿಂದ ಇಂದ್ರನನ್ನು ಮುಚ್ಚಿಬಿಟ್ಟನು.॥48॥

ಮೂಲಮ್ - 49

ಪ್ರಯುಧ್ಯತೋರಥ ತಯೋರ್ಬಾಣವರ್ಷೈಃ ಸಮಂತತಃ ।
ನಾಜ್ಞಾಯತ ತದಾ ಕಿಂಚಿತ್ಸರ್ವಂ ಹಿ ತಮಸಾ ವೃತಮ್ ॥

ಅನುವಾದ

ಅವರಿಬ್ಬರೂ ಯುದ್ಧದಲ್ಲಿ ತತ್ಪರರಾಗಿ ಬಾಣಗಳ ಮಳೆಗರೆದಾಗ ಎಲ್ಲೆಡೆ ಕತ್ತಲು ಕವಿಯಿತು. ಯಾರಿಗೂ ಏನೂ ಕಾಣದಾಯಿತು.॥49॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು. ॥28॥