०२७ सुमालि-हतिः

[ಇಪ್ಪತ್ತೇಳನೆಯ ಸರ್ಗ]

ಭಾಗಸೂಚನಾ

ಸ್ವರ್ಗದ ಮೇಲೆ ಸೈನ್ಯಸಹಿತ ರಾವಣನ ಆಕ್ರಮಣ, ಇಂದ್ರನು ರಾವಣನ ಸಂಹಾರಕ್ಕಾಗಿ ಮಹಾವಿಷ್ಣುವನ್ನು ಪ್ರಾರ್ಥಿಸಿದುದು, ಮುಂದೆ ರಾವಣನ ವಧೆ ಮಾಡುವುದಾಗಿ ಹೇಳಿ ಮಹಾವಿಷ್ಣು ಇಂದ್ರನನ್ನು ಹಿಂದಕ್ಕೆ ಕಳಿಸಿಕೊಟ್ಟುದು, ದೇವ - ದಾನವರ ಯುದ್ಧ

ಮೂಲಮ್ - 1

ಕೈಲಾಸಂ ಲಂಘಯಿತ್ವಾ ತು ಸಸೈನ್ಯಬಲವಾಹನಃ ।
ಆಸಸಾದ ಮಹಾತೇಜಾ ಇಂದ್ರಲೋಕಂ ದಶಾನನಃ ॥

ಅನುವಾದ

ಮಹಾತೇಜಸ್ವೀ ದಶಾನನನು ಸೈನ್ಯ-ಬಲವಾಹಗಳೊಡನೆ ಕೈಲಾಸ ಪರ್ವತವನ್ನು ದಾಟಿ ಇಂದ್ರಲೋಕಕ್ಕೆ ಹೋದನು.॥1॥

ಮೂಲಮ್ - 2

ತಸ್ಯ ರಾಕ್ಷಸಸೈನ್ಯಸ್ಯ ಸಮಂತಾದುಪಯಾಸ್ಯತಃ ।
ದೇವಲೋಕೇ ಬಭೌ ಶಬ್ದೋ ಭಿದ್ಯಮಾನಾರ್ಣವೋಪಮಃ ॥

ಅನುವಾದ

ದೇವಲೋಕದಲ್ಲಿ ಎಲ್ಲೆಡೆ ಕೇಳಿ ಬರುತ್ತಿದ್ದ ರಾವಣನ ಸೈನ್ಯದ ಕೋಲಾಹಲವು ಸಮುದ್ರವನ್ನು ಕಡೆಯುವ ಶಬ್ದದಂತೆ ಕೇಳಿಬರುತ್ತಿತ್ತು.॥2॥

ಮೂಲಮ್ - 3

ಶ್ರುತ್ವಾ ತು ರಾವಣಂ ಪ್ರಾಪ್ತಮಿಂದ್ರಶ್ಚಲಿತ ಆಸನಾತ್ ।
ದೇವಾನಥಾಬ್ರವೀತ್ತತ್ರ ಸರ್ವಾನೇವ ಸಮಾಗತಾನ್ ॥

ಅನುವಾದ

ರಾವಣನ ಆಗಮನವನ್ನು ಕೇಳಿ ದೇವೇಂದ್ರನು ಆಸನದಿಂದ ಎದ್ದು, ತನ್ನ ಬಳಿಗೆ ಬಂದ ಸಮಸ್ತ ದೇವತೆಗಳಲ್ಲಿ ಹೇಳಿದನು.॥3॥

ಮೂಲಮ್ - 4

ಆದಿತ್ಯಾಂಶ್ಚ ವಸೂನ್ ರುದ್ರಾನ್ಸಾಧ್ಯಾಂಶ್ಚ ಸಮರುದ್ಗಣಾನ್ ।
ಸಜ್ಜಾ ಭವತ ಯುದ್ಧಾರ್ಥಂ ರಾವಣಸ್ಯ ದುರಾತ್ಮನಃ ॥

ಅನುವಾದ

ಅವನು ಆದಿತ್ಯರಿಗೆ, ವಸುಗಳಿಗೆ, ರುದ್ರರಿಗೆ, ಸಾಧ್ಯ ಮರುದ್ಗಣರಿಗೂ - ನೀವೆಲ್ಲರೂ ದುರಾತ್ಮಾ ರಾವಣನೊಂದಿಗೆ ಯುದ್ಧಮಾಡಲು ಸಿದ್ಧರಾಗಿರಿ ಎಂದು ತಿಳಿಸಿದನು.॥4॥

ಮೂಲಮ್ - 5

ಏವಮುಕ್ತಾಸ್ತು ಶಕ್ರೇಣ ದೇವಾಃ ಶಕ್ರಸಮಾ ಯುಧಿ ।
ಸಂನಹ್ಯ ಸುಮಹಾಸತ್ತ್ವಾ ಯುದ್ಧಶ್ರದ್ಧಾಸಮನ್ವಿತಾಃ ॥

ಅನುವಾದ

ಇಂದ್ರನು ಹೀಗೆ ಹೇಳಿದಾಗ ಯುದ್ಧದಲ್ಲಿ ಪರಾಕ್ರಮವನ್ನು ತೋರುವ ಮಹಾಬಲಿ ದೇವತೆಗಳು ಕವಚಾದಿ ಧರಿಸಿ ಯುದ್ಧಕ್ಕಾಗಿ ಉತ್ಸುಕರಾದರು.॥5॥

ಮೂಲಮ್ - 6

ಸ ತು ದೀನಃ ಪರಿತ್ರಸ್ತೋ ಮಹೇಂದ್ರೋ ರಾವಣಂ ಪ್ರತಿ ।
ವಿಷ್ಣೋಃ ಸಮೀಪಮಾಗತ್ಯ ವಾಕ್ಯಮೇತದುವಾಚ ಹ ॥

ಅನುವಾದ

ದೇವೇಂದ್ರನಿಗೆ ರಾವಣನಿಂದ ಭಯವಿತ್ತು, ಆದ್ದರಿಂದ ಅವನು ದುಃಖಿತನಾಗಿ ಭಗವಾನ್ ವಿಷ್ಣುವಿನ ಬಳಿಗೆ ಹೋಗಿ ಇಂತೆಂದನು.॥6॥

ಮೂಲಮ್ - 7

ವಿಷ್ಣೋ ಕಥಂ ಕರಿಷ್ಯಾಮಿ ರಾವಣಂ ರಾಕ್ಷಸಂ ಪ್ರತಿ ।
ಅಹೋಽತಿಬಲವದ್ರಕ್ಷೋ ಯುದ್ಧಾರ್ಥಮಭಿವರ್ತತೇ ॥

ಅನುವಾದ

ಮಹಾವಿಷ್ಣುವೇ! ಅತ್ಯಂತ ಬಲಶಾಲಿ ನಿಶಾಚರ ರಾಕ್ಷಸ ರಾವಣನು ನನ್ನೊಡನೆ ಯುದ್ಧ ಮಾಡಲು ಬಂದಿರುವನು, ಈಗ ನಾನೇನು ಮಾಡಲಿ.॥7॥

ಮೂಲಮ್ - 8

ವರಪ್ರದಾನಾದ್ಬಲವಾನ್ ನ ಖಲ್ವನ್ಯೇನ ಹೇತುನಾ ।
ತತ್ತು ಸತ್ಯಂ ವಚಃ ಕಾರ್ಯಂ ಯದುಕ್ತಂ ಪದ್ಮಯೋನಿನಾ ॥

ಅನುವಾದ

ಅವನ ಈ ಉದ್ಧಟತನಕ್ಕೆ ಬ್ರಹ್ಮದೇವರಿಂದ ಪಡೆದ ವರಬಲವೇ ಕಾರಣವಾಗಿದೆ. ಬ್ರಹ್ಮದೇವರು ಕೊಟ್ಟಿರುವ ವರವನ್ನು ಸತ್ಯವಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.॥8॥

ಮೂಲಮ್ - 9

ತದ್ಯಥಾ ನಮುಚಿರ್ವೃತ್ರೋ ಬಲಿರ್ನರಕಶಂಬರೌ ।
ತ್ವದ್ಬಲಂ ಸಮವಷ್ಟಭ್ಯ ಮಯಾ ದಗ್ಧಾಸ್ತಥಾ ಕುರು ॥

ಅನುವಾದ

ಈ ಹಿಂದೆ ನಿನ್ನ ಬಲವನ್ನು ಆಶ್ರಯಿಸಿ ನಾನು ನಮೂಚಿ, ವೃತ್ರಾಸುರ, ಬಲಿ, ನರಕ, ಶಂಬರ ಆದಿ ಅಸುರರನ್ನು ಅಂತ್ಯಗೊಳಿಸಿದಂತೆ ಈಗಲೂ ರಾವಣನ ಅಂತ್ಯವಾಗುವಂತಹ ಉಪಾಯವನ್ನು ಯೋಚಿಸು.॥9॥

ಮೂಲಮ್ - 10

ನ ಹ್ಯನ್ಯೋ ದೇವದೇವೇಶ ತ್ವದೃತೇ ಮಧುಸೂದನ ।
ಗತಿಃ ಪರಾಯಣಂ ಚಾಪಿ ತ್ರೈಲೋಕ್ಯೇ ಸ ಚರಾಚರೇ ॥

ಅನುವಾದ

ಮಧಸೂದನನೇ! ನೀನೇ ದೇವದೇವನಾಗಿರುವೆ, ಈ ಚರಾಚರ ತ್ರಿಭುವನಗಳಲ್ಲಿ ದೇವತೆಗಳಾದ ನಮಗೆ ಪರಮಾಶ್ರಯನು ನೀನಲ್ಲದೆ ಬೇರೆ ಯಾರೂ ಇಲ್ಲ.॥10॥

ಮೂಲಮ್ - 11

ತ್ವಂ ಹಿ ನಾರಾಯಣಃ ಶ್ರೀಮಾನ್ಪದ್ಮನಾಭಃ ಸನಾತನಃ ।
ತ್ವಯೇಮೇ ಸ್ಥಾಪಿತಾ ಲೋಕಾಃ ಶಕ್ರಶ್ಚಾಹಂ ಸುರೇಶ್ವರಃ ॥

ಅನುವಾದ

ಪದ್ಮನಾಭಾ! ನಿನ್ನ ನಾಭಿಕಮಲದಿಂದಲೇ ಜಗತ್ತಿನ ಉತ್ಪತ್ತಿಯಾಗಿದೆ. ನೀನೇ ಸನಾತನ ನಾರಾಯಣನಾಗಿರುವೆ. ಈ ಮೂರು ಲೋಕಗಳನ್ನು ನೀನೇ ಸ್ಥಾಪಿಸಿ, ದೇವರಾಜ ಇಂದ್ರನಾದ ನನ್ನನ್ನು ನೀನೇ ನಿಯೋಜಿಸಿರುವೆ.॥11॥

ಮೂಲಮ್ - 12

ತ್ವಯಾ ಸೃಷ್ಟಮಿದಂ ಸರ್ವಂ ತ್ರೈಲೋಕ್ಯಂ ಸಚರಾಚರಮ್ ।
ತ್ವಾಮೇವ ಭಗವನ್ಸರ್ವೇ ಪ್ರವಿಶಂತಿ ಯುಗಕ್ಷಯೇ ॥

ಅನುವಾದ

ಭಗವಂತ! ನೀನೇ ಸ್ಥಾವರ - ಜಂಗಮ ಪ್ರಾಣಿಗಳ ಸಹಿತ ಈ ತ್ರಿಭುವನಗಳನ್ನು ಸೃಷ್ಟಿಸಿರುವೆ. ಪ್ರಳಯಕಾಲದಲ್ಲಿ ಸಮಸ್ತ ಪ್ರಾಣಿಗಳು ನಿನ್ನೊಳಗೇ ಪ್ರವೇಶಿಸುತ್ತವೆ.॥12॥

ಮೂಲಮ್ - 13

ತದಾಚಕ್ಷ್ವ ಯಥಾತತ್ತ್ವಂ ದೇವದೇವ ಮಮ ಸ್ವಯಮ್ ।
ಅಸಿಚಕ್ರಸಹಾಯಸ್ತ್ವಂ ಯೋತ್ಸ್ಯತೇ ರಾವಣಂ ಪ್ರತಿ ॥

ಅನುವಾದ

ಅದಕ್ಕಾಗಿ ದೇವದೇವನೇ! ನನ್ನ ವಿಜಯವಾಗುವಂತಹ ಯಾವುದಾದರೂ ಅಮೋಘ ಉಪಾಯವನ್ನು ತಿಳಿಸು. ನೀನು ಸ್ವತಃ ಚಕ್ರ ಮತ್ತು ಖಡ್ಗ ಧರಿಸಿ ರಾವಣನೊಡನೆ ಯುದ್ಧ ಮಾಡುವೆಯಾ.॥13॥

ಮೂಲಮ್ - 14

ಏವಮುಕ್ತಃ ಸ ಶಕ್ರೇಣ ದೇವೋ ನಾರಾಯಣಃ ಪ್ರಭುಃ ।
ಅಬ್ರವೀನ್ನ ಪರಿತ್ರಾಸಃ ಕರ್ತವ್ಯಃ ಶ್ರೂಯತಾಂ ಚ ಮೇ ॥

ಅನುವಾದ

ಇಂದ್ರನು ಹೀಗೆ ಹೇಳಿದಾಗ ಭಗವಾನ್ ನಾರಾಯಣನು ಹೇಳಿದನು - ದೇವೇಂದ್ರನೇ! ನೀನು ಭಯಪಡಬೇಡ. ನನ್ನ ಮಾತನ್ನು ಕೇಳು.॥14॥

ಮೂಲಮ್ - 15

ನ ತಾವದೇಷ ದುಷ್ಟಾತ್ಮಾ ಶಕ್ಯೋ ಜೇತುಂ ಸುರಾಸುರೈಃ ।
ಹಂತುಂ ಚಾಪಿ ಸಮಾಸಾದ್ಯ ವರದಾನೇನ ದುರ್ಜಯಃ ॥

ಅನುವಾದ

ಈ ದುಷ್ಟಾತ್ಮಾ ರಾವಣನನ್ನು ಸಮಸ್ತ ದೇವತೆಗಳು, ಅಸುರರು ಸೇರಿಯೂ ಕೊಲ್ಲಲಾರರು, ಸೋಲಿಸಲಾರರು; ಏಕೆಂದರೆ ಇವನು ವರ ಪಡೆದು ಈಗ ದುರ್ಜಯನಾಗಿದ್ದಾನೆ.॥15॥

ಮೂಲಮ್ - 16

ಸರ್ವಥಾ ತು ಮಹತ್ಕರ್ಮ ಕರಿಷ್ಯತಿ ಬಲೋತ್ಕಟಃ ।
ರಾಕ್ಷಸಃ ಪುತ್ರ ಸಹಿತೋ ದೃಷ್ಟಮೇತನ್ನಿಸರ್ಗತಃ ॥

ಅನುವಾದ

ತನ್ನ ಪುತ್ರನೊಂದಿಗೆ ಬಂದಿರುವ ಈ ಉತ್ಕಟ ಬಲಶಾಲಿ ರಾಕ್ಷಸನು ಮಹಾ ಪರಾಕ್ರಮವನ್ನು ಪ್ರಕಟಗೊಳಿಸುವನು. ಇದು ನನಗೆ ನನ್ನ ಸ್ವಾಭಾವಿಕ ಜ್ಞಾನದೃಷ್ಟಿಯಿಂದ ಕಾಣುತ್ತದೆ.॥16॥

ಮೂಲಮ್ - 17

ಯತ್ತು ಮಾಂ ತ್ವಮಭಾಷಿಷ್ಠಾ ಯುಧ್ಯಸ್ವೇತಿ ಸುರೇಶ್ವರ ।
ನಾಹಂ ತಂ ಪ್ರತಿಯೋತ್ಸ್ಯಾಮಿ ರಾವಣಂ ರಾಕ್ಷಸಂ ಯುಧಿ ॥

ಅನುವಾದ

ಸುರೇಶ್ವರ! ಇನ್ನೊಂದು ಮಾತು ಹೇಳುತ್ತೇನೆ - ‘ನೀನೇ ಅವನೊಡನೆ ಯುದ್ಧ ಮಾಡು’ ಎಂದು ನೀನು ಹೇಳುತ್ತಿರುವೆ. ಆದರೆ ಈಗ ನಾನು ಯುದ್ಧದಲ್ಲಿ ರಾವಣನನ್ನು ಇದಿರಿಸಲು ಹೋಗುವುದಿಲ್ಲ.॥17॥

ಮೂಲಮ್ - 18

ನಾಹತ್ವಾ ಸಮರೇ ಶತ್ರುಂ ವಿಷ್ಣುಃ ಪ್ರತಿನಿವರ್ತತೇ ।
ದುರ್ಲಭಶ್ಚೈವ ಕಾಮೋಽದ್ಯ ವರಗುಪ್ತಾದ್ಧಿ ರಾವಣಾತ್ ॥

ಅನುವಾದ

ನಾನು ಸಂಗ್ರಾಮದಲ್ಲಿ ಶತ್ರುವನ್ನು ವಧಿಸದೆ ಹಿಂದಿರುಗುವುದಿಲ್ಲ ಇದು ವಿಷ್ಣುವಾದ ನನ್ನ ಸ್ವಭಾವವಾಗಿದೆ. ಆದರೆ ಈಗ ರಾವಣನು ವರದಾನದಿಂದ ಸುರಕ್ಷಿತನಾಗಿದ್ದಾನೆ. ಅದಕ್ಕಾಗಿ ನನ್ನ ವಿಜಯ ಇಚ್ಛೆ ಅವನಿಂದ ಪೂರ್ಣವಾಗುವುದು ಕಠಿಣವಾಗಿದೆ.॥18॥

ಮೂಲಮ್ - 19

ಪ್ರತಿಜಾನೇ ಚ ದೇವೇಂದ್ರ ತ್ವತ್ಸಮೀಪೇ ಶತಕ್ರತೋ ।
ಭವಿತಾಸ್ಮಿ ಯಥಾಸ್ಯಾಹಂ ರಕ್ಷಸೋ ಮೃತ್ಯುಕಾರಣಮ್ ॥

ಅನುವಾದ

ಆದರೂ ದೇವೇಂದ್ರನೇ ! ಶತಕ್ರತೋ ! ಸಮಯ ಬಂದಾಗ ನಾನೇ ಈ ರಾಕ್ಷಸನ ಮೃತ್ಯುವಿನ ಕಾರಣವಾಗುವೆನೆಂದು ನಿನ್ನಲ್ಲಿ ಪ್ರತಿಜ್ಞಾಪೂರ್ವಕ ಹೇಳುತ್ತೇನೆ.॥19॥

ಮೂಲಮ್ - 20

ಅಹಮೇವ ನಿಹಂತಾಸ್ಮಿ ರಾವಣಂ ಸಪುರಃಸರಮ್ ।
ದೇವತಾ ನಂದಯಿಷ್ಯಾಮಿ ಜ್ಞಾತ್ವಾ ಕಾಲಮುಪಾಗತಮ್ ॥

ಅನುವಾದ

ನಾನೇ ಸೈನ್ಯ ಸಮೇತನಾದ ರಾವಣನನ್ನು ಸಂಹರಿಸಿ, ದೇವತೆಗಳನ್ನು ಆನಂದಗೊಳಿಸುವೆನು; ಆದರೆ ಅವನ ಮೃತ್ಯುವಿನ ಸಮಯ ಸನ್ನಿಹಿತವಾದಾಗಲೇ ಇದಾಗುವುದು.॥20॥

ಮೂಲಮ್ - 21

ಏತತ್ತೇ ಕಥಿತಂ ತತ್ತ್ವಂ ದೇವರಾಜ ಶಚೀಪತೇ ।
ಯುಧ್ಯಸ್ವ ವಿಗತತ್ರಾಸಃ ಸುರೈಃ ಸಾರ್ಧಂ ಮಹಾಬಲ ॥

ಅನುವಾದ

ದೇವರಾಜನೇ! ನಿನಗೆ ಎಲ್ಲ ವಿಷಯಗಳನ್ನು ಯಥಾವತ್ತಾಗಿ ಹೇಳಿರುವೆನು. ಮಹಾಬಲನೇ! ಈಗ ನೀನು ನಿರ್ಭಯನಾಗಿ ದೇವತೆಗಳೊಡನೆ ಆ ರಾಕ್ಷಸನೊಂದಿಗೆ ಯುದ್ಧ ಮಾಡು.॥21॥

ಮೂಲಮ್ - 22

ತತೋ ರುದ್ರಾಃ ಸಹಾದಿತ್ಯಾ ವಸವೋ ಮರುತೋಽಶ್ವಿನೌ ।
ಸಂನ್ನದ್ಧಾ ನಿರ್ಯಯುಸ್ತೂರ್ಣಂ ರಾಕ್ಷಸಾನಭಿತಃ ಪುರಾತ್ ॥

ಅನುವಾದ

ಬಳಿಕ ರುದ್ರ, ಆದಿತ್ಯ, ವಸು, ಮರುದ್ಗಣ, ಅಶ್ವಿನೀಕುಮಾರ ಮೊದಲಾದ ದೇವತೆಗಳು ಯುದ್ಧಕ್ಕೆ ಸಿದ್ಧರಾಗಿ, ಅಮರಾವತಿಯಿಂದ ಹೊರಟು ರಾಕ್ಷಸನನ್ನು ಎದುರಿಸಲು ಮುಂದರಿದರು.॥22॥

ಮೂಲಮ್ - 23

ಏತಸ್ಮಿನ್ನಂತರೇ ನಾದಃ ಶುಶ್ರುವೇ ರಜನೀಕ್ಷಯೇ ।
ತಸ್ಯ ರಾವಣಸೈನ್ಯಸ್ಯ ಪ್ರಯುದ್ಧಸ್ಯ ಸಮಂತತಃ ॥

ಅನುವಾದ

ರಾತ್ರೆ ಕಳೆಯುತ್ತಿರುವಂತೆ ಎಲ್ಲೆಡೆಗಳಿಂದ ಯುದ್ಧಕ್ಕೆ ಉದ್ಯುಕ್ತವಾದ ರಾವಣನ ಸೈನ್ಯದ ಮಹಾ ಕೋಲಾಹಲ ಕೇಳಿ ಬರತೊಡಗಿತು.॥23॥

ಮೂಲಮ್ - 24

ತೇ ಪ್ರಬುದ್ಧಾ ಮಹಾವೀರ್ಯಾ ಅನ್ಯೋನ್ಯಮಭಿವೀಕ್ಷ್ಯವೈ।
ಸಂಗ್ರಾಮಮೇವಾಭಿಮುಖಾ ಅಭ್ಯವರ್ತಂತ ಹೃಷ್ಟವತ್ ॥

ಅನುವಾದ

ಆ ಮಹಾಪರಾಕ್ರಮಿ ರಾಕ್ಷಸ ಸೈನಿಕರು ಬೆಳಿಗ್ಗೆ ಎದ್ದು ಪರಸ್ಪರ ನೋಡುತ್ತಾ, ಬಹಳ ಹರ್ಷ-ಉತ್ಸಾಹದಿಂದ ಯುದ್ಧಕ್ಕಾಗಿ ಮುನ್ನಡೆದರು.॥24॥

ಮೂಲಮ್ - 25

ತತೋ ದೈವತಸೈನ್ಯಾನಾಂ ಸಂಕ್ಷೋಭಃ ಸಮಜಾಯತ ।
ತದಕ್ಷಯಂ ಮಹಾಸೈನ್ಯಂ ದೃಷ್ಟ್ವಾ ಸಮರಮೂರ್ಧನಿ ॥

ಅನುವಾದ

ರಣರಂಗದಲ್ಲಿ ಅಪಾರವಾಗಿದ್ದ ರಾಕ್ಷಸ ಸೈನ್ಯವನ್ನು ನೋಡಿ ದೇವಸೈನ್ಯದಲ್ಲಿ ಕಳವಳವುಂಟಾಯಿತು.॥25॥

ಮೂಲಮ್ - 26

ತತೋ ಯುದ್ಧಂ ಸಮಭವದ್ದೇವದಾನವ ರಕ್ಷಸಾಮ್ ।
ಘೋರಂ ತುಮುಲನಿರ್ಹ್ರಾದಂ ನಾನಾ ಪ್ರಹರಣೋದ್ಯತಮ್ ॥

ಅನುವಾದ

ಮತ್ತೆ ದೇವತೆಗಳಿಗೆ ದಾನವ - ರಾಕ್ಷಸರೊಂದಿಗೆ ಭಯಂಕರ ಯುದ್ಧ ಪ್ರಾರಂಭವಾಯಿತು. ಭಯಂಕರ ಕೋಲಾಹಲ ದೊಂದಿಗೆ ಎರಡೂ ಕಡೆಗಳಿಂದ ಅಸ್ತ್ರ-ಶಸ್ತ್ರಗಳ ಮಳೆ ಸುರಿಯಿತು.॥26॥

ಮೂಲಮ್ - 27

ಏತಸ್ಮಿನ್ನಂತರೇ ಶೂರಾ ರಾಕ್ಷಸಾ ಘೋರದರ್ಶನಾಃ ।
ಯುದ್ಧಾರ್ಥಂ ಸಮವರ್ತಂತ ಸಚಿವಾ ರಾವಣಸ್ಯ ತೇ ॥

ಅನುವಾದ

ಆಗ ಭಯಂಕರವಾದ ರಾವಣನ ಮಂತ್ರಿಗಳು, ಶೂರವೀರ ರಾಕ್ಷಸರು ಯುದ್ಧಕ್ಕಾಗಿ ಮುನ್ನಡೆದರು.॥27॥

ಮೂಲಮ್ - 28

ಮಾರೀಚಶ್ಚ ಪ್ರಹಸ್ತಶ್ಚ ಮಹಾಪಾರ್ಶ್ವ ಮಹೋದರೌ ।
ಅಕಂಪನೋ ನಿಕುಂಭಶ್ಚ ಶುಕಃ ಸಾರಣ ಏವ ಚ ॥

ಮೂಲಮ್ - 29

ಸಂಹ್ರಾದೋ ಧೂಮಕೇತುಶ್ಚ ಮಹಾದಂಷ್ಟ್ರೋ ಘಟೋದರಃ ।
ಜಂಬುಮಾಲೀ ಮಹಾಹ್ರಾದೋ ವಿರೂಪಾಕ್ಷಶ್ಚ ರಾಕ್ಷಸಃ ॥

ಮೂಲಮ್ - 30

ಸುಪ್ತಘ್ನೋ ಯಜ್ಞ ಕೋಪಶ್ಚ ದುರ್ಮುಖೋ ದೂಷಣಃ ಖರಃ ।
ತ್ರಿಶಿರಾಃ ಕರವೀರಾಕ್ಷಃ ಸೂರ್ಯಶತ್ರುಶ್ಚ ರಾಕ್ಷಸಃ ॥

ಮೂಲಮ್ - 31½

ಮಹಾಕಾಯೋಽತಿಕಾಯಶ್ಚ ದೇವಾಂತಕ ನರಾಂತಕೌ ।
ಏತೈಃ ಸರ್ವೈಃ ಪರಿವೃತೋ ಮಹಾವೀರ್ಯೌರ್ಮಹಾಬಲಃ ॥
ರಾವಣಸ್ಯಾರ್ಯಕಃ ಸೈನ್ಯಂ ಸುಮಾಲೀ ಪ್ರವಿವೇಶ ಹ ।

ಅನುವಾದ

ಮಾರೀಚ, ಪ್ರಹಸ್ತ, ಮಹಾಪಾರ್ಶ್ವ, ಮಹೋದರ, ಅಕಂಪನ, ನಿಕುಂಭ, ಶುಕ, ಸಾರಣ, ಸಂಹ್ರಾದ, ಧೂಮಕೇತು, ಮಹಾದಂಷ್ಟ್ರ, ಘಟೋದರ, ಜಂಬುಮಾಲೀ, ಮಹಾಹ್ರಾದ, ವಿರೂಪಾಕ್ಷ, ಸುಪ್ತಘ್ನ, ಯಜ್ಞಕೋಪ, ದುರ್ಮುಖ, ದೂಷಣ, ಖರ, ತ್ರಿಶಿರ, ಕರವೀರಾಕ್ಷ, ಸೂರ್ಯಶತ್ರು, ಮಹಾಕಾಯ, ಅತಿಕಾಯ, ದೇವಾಂತಕ, ನರಾಂತಕ ಮೊದಲಾದ ಎಲ್ಲ ಮಹಾಪರಾಕ್ರಮಿ ರಾಕ್ಷಸರಿಂದ ಸುತ್ತು ವರೆದ ಮಹಾಬಲಿ ರಾವಣನ ತಾತನಾದ ಸುಮಾಲಿಯು ದೇವತೆಗಳ ಸೈನ್ಯದಲ್ಲಿ ಪ್ರವೇಶಿಸಿದನು.॥28-31½॥

ಮೂಲಮ್ - 32½

ಸ ದೈವತಗಣಾನ್ಸರ್ವಾನ್ ನಾನಾಪ್ರಹರಣೈಃ ಶಿತೈಃ ॥
ವ್ಯಧ್ವಂಸಯತ್ಸಮಂ ಕ್ರುದ್ಧೋ ವಾಯುರ್ಜಲಧರಾನಿವ ।

ಅನುವಾದ

ಅವನು ಕುಪಿತನಾಗಿ ನಾನಾರೀತಿಯ ಹರಿತವಾದ ಅಸ್ತ್ರ-ಶಸ್ತ್ರಗಳಿಂದ ಸಮಸ್ತ ದೇವತೆಗಳನ್ನು ವಾಯುವು ಮೋಡಗಳನ್ನು ಛಿನ್ನ-ಭಿನ್ನಗೊಳಿಸುವಂತೆ ಹೊಡೆದು ಓಡಿಸಿದನು.॥32½॥

ಮೂಲಮ್ - 33½

ತದ್ದೈವತ ಬಲಂ ರಾಮ ಹನ್ಯಮಾನಂ ನಿಶಾಚರೈಃ ॥
ಪ್ರಣುನ್ನಂ ಸರ್ವತೋ ದಿಗ್ಭ್ಯಃ ಸಿಂಹನುನ್ನಾ ಮೃಗಾ ಇವ ।

ಅನುವಾದ

ಶ್ರೀರಾಮಾ! ನಿಶಾಚರರ ಏಟು ತಿಂದು ದೇವತೆಗಳ ಸೈನ್ಯವು ಸಿಂಹವು ಬೆನ್ನಟ್ಟಿದ ಜಿಂಕೆಗಳಂತೆ ದಿಕ್ಕಾಪಾಲಾಗಿ ಓಡಿಹೋಯಿತು.॥33½॥

ಮೂಲಮ್ - 34½

ಏತಸ್ಮಿನ್ನಂತರೇ ಶೂರೋ ವಸೂನಾಮಷ್ಟಮೋ ವಸುಃ ॥
ಸಾವಿತ್ರ ಇತಿ ವಿಖ್ಯಾತಃ ಪ್ರವಿವೇಶ ರಣಾಜಿರಮ್ ।

ಅನುವಾದ

ಆಗಲೇ ವಸುಗಳಲ್ಲಿ ಎಂಟನೆಯವನಾದ ಸಾವಿತ್ರವಸು ಸಮರಾಂಗಣವನ್ನು ಪ್ರವೇಶಿಸಿದನು.॥34½॥

ಮೂಲಮ್ - 35½

ಸೈನ್ಯೈಃ ಪರಿವೃತೋ ಹೃಷ್ಟೈರ್ನಾನಾಪ್ರಹರಣೋದ್ಯತೈಃ ॥
ತ್ರಾಸಯನ್ ಶತ್ರುಸೈನ್ಯಾನಿ ಪ್ರವಿವೇಶ ರಣಾಜಿರಮ್ ।

ಅನುವಾದ

ಅವನು ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತನಾಗಿ ಉತ್ಸಾಹೀ ಸೈನಿಕರಿಂದ ಪರಿವೃತನಾಗಿದ್ದನು. ಅವನು ಶತ್ರು ಸೈನ್ಯವನ್ನು ಸಂತ್ರಸ್ತಗೊಳಿಸುತ್ತಾ ರಣಭೂಮಿಯಲ್ಲಿ ಮುನ್ನಡೆದನು.॥35½॥

ಮೂಲಮ್ - 36½

ತಥಾದಿತ್ಯೌ ಮಹಾವೀರ್ಯೌ ತ್ವಷ್ಟಾ ಪೂಷಾ ಚ ತೌ ಸಮಮ್ ॥
ನಿರ್ಭಯೌ ಸಹ ಸೈನ್ಯೇನ ತದಾ ಪ್ರಾವಿಶತಾಂ ರಣೇ ।

ಅನುವಾದ

ಇವನಲ್ಲದೆ ಅದಿತಿಯ ಪುತ್ರರಾದ ತ್ವಷ್ಟಾ ಮತ್ತು ಪೂಷಾ ಇವರಿಬ್ಬರೂ ಸೈನ್ಯದೊಂದಿಗೆ, ನಿರ್ಭಯರಾದ ಅವರು ಒಮ್ಮೆಗೆ ಯುದ್ಧರಂಗವನ್ನು ಪ್ರವೇಶಿಸಿದರು.॥36½॥

ಮೂಲಮ್ - 37½

ತತೋ ಯುದ್ಧಂ ಸಮಭವತ್ಸುರಾಣಾಂ ಸಹ ರಾಕ್ಷಸೈಃ ॥
ಕ್ರುದ್ಧಾನಾಂ ರಕ್ಷಸಾಂ ಕೀರ್ತಿಂ ಸಮರೇಷ್ವ ನಿವರ್ತಿನಾಮ್ ।

ಅನುವಾದ

ಮತ್ತೆ ರಾಕ್ಷಸರೊಂದಿಗೆ ದೇವತೆಗಳ ಘೋರಯುದ್ಧ ಪ್ರಾರಂಭವಾಯಿತು. ಯುದ್ಧದಿಂದ ಹಿಂದಿರುಗದಿದ್ದ ರಾಕ್ಷಸರ ಕೀರ್ತಿಯನ್ನು ನೋಡಿ-ಕೇಳಿ ದೇವತೆಗಳು ಬಹಳ ಕುಪಿತರಾದರು.॥37½॥

ಮೂಲಮ್ - 38½

ತತಸ್ತೇ ರಾಕ್ಷಸಾಃ ಸರ್ವೇ ವಿಬುಧಾನ್ಸಮರೇ ಸ್ಥಿತಾನ್ ॥
ನಾನಾ ಪ್ರಹರಣೈರ್ಘೋರೈರ್ಜಘ್ನುಃ ಶತಸಹಸ್ರಶಃ ।

ಅನುವಾದ

ಅನಂತರ ಸಮಸ್ತ ರಾಕ್ಷಸರು ಯುದ್ಧ ಭೂಮಿಯಲ್ಲಿ ನಿಂತಿದ್ದ ಲಕ್ಷಾವಧೀ ದೇವತೆಗಳನ್ನು ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳಿಂದ ಹೊಡೆಯ ತೊಡಗಿದರು.॥38½॥

ಮೂಲಮ್ - 39½

ದೇವಾಶ್ಚ ರಾಕ್ಷಸಾನ್ ಘೋರಾನ್ಮಹಾಬಲಪರಾಕ್ರಮಾನ್ ॥
ಸಮರೇ ವಿಮಲೈಃ ಶಸ್ತ್ರೈರುಪನಿನ್ಯುರ್ಯಮಕ್ಷಯಮ್ ।

ಅನುವಾದ

ಹಾಗೆಯೇ ದೇವತೆಗಳೂ ಕೂಡ ಮಹಾ ಬಲ ಪರಾಕ್ರಮ ಸಂಪನ್ನ ಘೋರ ರಾಕ್ಷಸರನ್ನು ಯುದ್ಧದಲ್ಲಿ ಫಳ-ಫಳಿಸುತ್ತಿದ್ದ ಅಸ್ತ್ರ-ಶಸ್ತ್ರಗಳಿಂದ ಸಂಹರಿಸಿ ಯಮಲೋಕಕ್ಕೆ ಅಟ್ಟಿದರು.॥39½॥

ಮೂಲಮ್ - 40

ಏತಸ್ಮಿನ್ನಂತರೇ ರಾಮ ಸುಮಾಲೀ ನಾಮ ರಾಕ್ಷಸಃ ॥

ಮೂಲಮ್ - 41½

ನಾನಾ ಪ್ರಹರಣೈಃ ಕ್ರುದ್ಧಸ್ತತ್ಸೈನ್ಯಂ ಸೋಽಭ್ಯವರ್ತತ ।
ಸ ದೈವತಬಲಂ ಸರ್ವಂ ನಾನಾ ಪ್ರಹರಣೈಃ ಶಿತೈಃ ॥
ವ್ಯಧ್ವಂಸಯತ ಸಂಕ್ರುದ್ಧೋ ವಾಯುರ್ಜಲಧರಂ ಯಥಾ ।

ಅನುವಾದ

ಶ್ರೀರಾಮ! ಅಷ್ಟರಲ್ಲಿ ಸುಮಾಲೀ ಎಂಬ ರಾಕ್ಷಸನು ಕುಪಿತನಾಗಿ ನಾನಾ ಪ್ರಕಾರದ ಆಯುಧಗಳಿಂದ ದೇವಸೈನ್ಯವನ್ನು ಆಕ್ರಮಿಸಿ, ಅತ್ಯಂತ ಕ್ರೋಧಗೊಂಡು ಮೋಡಗಳನ್ನು ಛಿನ್ನ-ಭಿನ್ನ ಮಾಡುವ ವಾಯುವಿನಂತೆ ಬಗೆ-ಬಗೆಯ ಹರಿತವಾದ ಅಸ್ತ್ರ-ಶಸ್ತ್ರಗಳಿಂದ ದೇವಸೈನ್ಯವನ್ನು ಚದುರಿಸಿಬಿಟ್ಟನು.॥40-41½॥

ಮೂಲಮ್ - 42½

ತೇ ಮಹಾಬಾಣವರ್ಷೈಶ್ಚ ಶೂಲಪ್ರಾಸೈಃ ಸುದಾರುಣೈಃ ॥
ಹನ್ಯಮಾನಾಃ ಸುರಾಃ ಸರ್ವೇ ನ ವ್ಯತಿಷ್ಠಂತ ಸಂಹತಾಃ ।

ಅನುವಾದ

ಅವನ ಭಯಂಕರ ಮಹಾಬಾಣ, ಶೂಲ ಹಾಗೂ ಪ್ರಾಸಗಳ ಮಳೆಯಿಂದ ಪ್ರಹರಿಸಲ್ಪಟ್ಟ ದೇವತೆಗಳೆಲ್ಲರೂ ಯುದ್ಧರಂಗದಲ್ಲಿ ಸಂಘಟಿತರಾದರೂ ನಿಲ್ಲದಾದರು.॥42½॥

ಮೂಲಮ್ - 43

ತತೋ ವಿದ್ರಾವ್ಯಮಾಣೇಷು ದೈವತೇಷು ಸುಮಾಲಿನಾ ॥

ಮೂಲಮ್ - 44

ವಸೂನಾಮಷ್ಟಮಃ ಕ್ರುದ್ಧಃ ಸಾವಿತ್ರೋ ವೈ ವ್ಯವಸ್ಥಿತಃ ।
ಸಂವೃತಃ ಸ್ವೈರಥಾನೀಕೈಃ ಪ್ರಹರಂತಂ ನಿಶಾಚರಮ್ ॥

ಅನುವಾದ

ಸುಮಾಲಿಯು ದೇವತೆಗಳನ್ನು ಓಡಿಸಿದಾಗ ಎಂಟನೆಯ ವಸು ಸಾವಿತ್ರನಿಗೆ ಭಾರೀ ಕ್ರೋಧ ಉಂಟಾಯಿತು. ಅವನು ತನ್ನ ರಥ ಸೈನ್ಯದೊಂದಿಗೆ ಪ್ರಹರಿಸುತ್ತಿದ್ದ ನಿಶಾಚರನ ಮುಂದೆ ಬಂದು ನಿಂತನು.॥43-44॥

ಮೂಲಮ್ - 45½

ವಿಕ್ರಮೇಣ ಮಹಾತೇಜಾ ವಾರಯಾಮಾಸ ಸಂಯುಗೇ ।
ತತಸ್ತಯೋರ್ಮಹದ್ಯುದ್ಧಮಭವಲ್ಲೋಮಹರ್ಷಣಮ್ ॥
ಸುಮಾಲಿನೋ ವಸೋಶ್ಚೈವ ಸಮರೇಷ್ವ ನಿವರ್ತಿನೋಃ ।

ಅನುವಾದ

ಮಹಾ ತೇಜಸ್ವೀ ಸಾವಿತ್ರನು ಯುದ್ಧದಲ್ಲಿ ತನ್ನ ಪರಾಕ್ರಮದಿಂದ ಸುಮಾಲಿಯನ್ನು ತಡೆದು ನಿಲ್ಲಿಸಿದನು. ಸುಮಾಲೀ ಮತ್ತು ವಸು ಇಬ್ಬರೂ ಯುದ್ಧದಿಂದ ಹಿಂದಿರುಗುವವರಾಗಿರಲಿಲ್ಲ. ಆದ್ದರಿಂದ ಅವರಿಬ್ಬರಲ್ಲಿ ಮಹಾ ರೋಮಾಂಚಕರ ಯುದ್ಧ ನಡೆಯಿತು.॥45½॥

ಮೂಲಮ್ - 46½

ತತಸ್ತಸ್ಯ ಮಹಾಬಾಣೈರ್ವಸುನಾ ಸುಮಹಾತ್ಮನಾ ॥
ನಿಹತಃ ಪನ್ನಗರಥಃ ಕ್ಷಣೇನ ವಿನಿಪಾತಿತಃ ।

ಅನುವಾದ

ಬಳಿಕ ಮಹಾತ್ಮಾ ವಸು ತನ್ನ ವಿಶಾಲ ಬಾಣಗಳಿಂದ ಹಾವುಗಳನ್ನು ಹೂಡಿದ ಸುಮಾಲಿಯ ರಥವನ್ನು ಕ್ಷಣಾರ್ಧದಲ್ಲಿ ನುಚ್ಚುನೂರಾಗಿಸಿದನು.॥46½॥

ಮೂಲಮ್ - 47

ಹತ್ವಾ ತು ಸಂಯುಗೇ ತಸ್ಯ ರಥಂ ಬಾಣಶತೈಶ್ಚಿತಮ್ ॥

ಮೂಲಮ್ - 48½

ಗದಾಂ ತಸ್ಯ ವಧಾರ್ಥಾಯ ವಸುರ್ಜಗ್ರಾಹ ಪಾಣಿನಾ ।
ತತಃ ಪ್ರಗೃಹ್ಯ ದೀಪ್ತಾಗ್ರಾಂ ಕಾಲದಂಡೋಪಮಾಂ ಗದಾಮ್ ॥
ತಾಂ ಮೂರ್ಧ್ನಿ ಪಾತಯಾಮಾಸ ಸಾವಿತ್ರೋ ವೈ ಸುಮಾಲಿನಃ ।

ಅನುವಾದ

ಹೀಗೆ ನೂರಾರು ಬಾಣಗಳಿಂದ ಸುಮಾಲಿಯ ರಥವನ್ನು ನಾಶಪಡಿಸಿ ಆ ನಿಶಾಚರನನ್ನು ವಧಿಸಲಿಕ್ಕಾಗಿ ವಸುವು ಕಾಲ ದಂಡದಂತಹ ಗದೆಯನ್ನು ಕೈಯಲ್ಲೆತ್ತಿಕೊಂಡನು. ಅದರ ತುದಿಯು ಅಗ್ನಿಯಂತೆ ಪ್ರಜ್ವಲಿಸುತ್ತಿತ್ತು. ಅದನ್ನೆತ್ತಿಕೊಂಡು ಸಾವಿತ್ರನು ಸುಮಾಲಿಯ ತಲೆಯ ಮೇಲೆ ಪ್ರಹರಿಸಿದನು.॥47-48½॥

ಮೂಲಮ್ - 49½

ಸಾ ತಸ್ಯೋಪರಿ ಚೋಲ್ಕಾಭಾ ಪತಂತೀ ವಿಬಭೌ ಗದಾ ॥
ಇಂದ್ರಪ್ರಮುಕ್ತಾ ಗರ್ಜಂತೀ ಗಿರಾವಿವ ಮಹಾಶನಿಃ ।

ಅನುವಾದ

ಉಲ್ಕೆಯಂತೆ ಕಾಣುತ್ತಿದ್ದ ಆ ಗದೆಯು ಸುಮಾಲಿಯ ತಲೆಯ ಮೇಲೆ ಬೀಳುತ್ತಿದ್ದಾಗ ಇಂದ್ರನು ಪ್ರಯೋಗಿಸಿದ ವಜ್ರಾಯುಧವು ಗರ್ಜಿಸುತ್ತಾ ಪರ್ವತಕ್ಕೆ ಅಪ್ಪಳಿಸುವಂತೆ ಕಾಣುತ್ತಿತ್ತು.॥49½॥

ಮೂಲಮ್ - 50½

ತಸ್ಯ ನೈವಾಸ್ಥಿ ನ ಶಿರೋ ನ ಮಾಂಸಂ ದದೃಶೇ ತದಾ ॥
ಗದಯಾ ಭಸ್ಮತಾಂ ನೀತಂ ನಿಹತಸ್ಯ ರಣಾಜಿರೇ ।

ಅನುವಾದ

ಗದಾಘಾತದಿಂದ ಸುಮಾಲಿಯು ಮಡಿದು ಅವನ ಎಲುಬಾಗಲೀ, ಮಾಂಸವಾಗಲೀ, ತಲೆಯಾಗಲೀ ಯಾವುದೂ ಕಾಣಲಿಲ್ಲ. ಅದೆಲ್ಲವೂ ಆ ಗದೆಯ ಬೆಂಕಿಯಿಂದ ಸುಟ್ಟು ಬೂದಿಯಾಯಿತು.॥50½॥

ಮೂಲಮ್ - 51

ತಂ ದೃಷ್ಟ್ವಾ ನಿಹತಂ ಸಂಖ್ಯೇ ರಾಕ್ಷಸಾಸ್ತೇ ಸಮನ್ತತಃ ॥

ಮೂಲಮ್ - 52

ವ್ಯದ್ರವನ್ಸಹಿತಾಃ ಸರ್ವೇ ಕ್ರೋಶಮಾನಾಃ ಪರಸ್ಪರಮ್ ।
ವಿದ್ರಾವ್ಯಮಾಣಾ ವಸುನಾ ರಾಕ್ಷಸಾ ನಾವತಸ್ಥಿರೇ ॥

ಅನುವಾದ

ಯುದ್ಧದಲ್ಲಿ ಸುಮಾಲಿಯು ಹತನಾದುದನ್ನು ನೋಡಿ ಎಲ್ಲ ರಾಕ್ಷಸರು ಪರಸ್ಪರ ಕೂಗುತ್ತಾ ದಿಕ್ಕಾಪಾಲಾಗಿ ಓಡಿಹೋದರು. ವಸುವು ಅಟ್ಟಿಸಿದಾಗ ಆ ರಾಕ್ಷಸರು ಸಮರ ಭೂಮಿಯಲ್ಲಿ ನಿಲ್ಲದಾದರು.॥51-52॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು. ॥27॥