[ಇಪ್ಪತ್ತಾರನೆಯ ಸರ್ಗ]
ಭಾಗಸೂಚನಾ
ರಾವಣನು ರಂಭೆಯನ್ನು ರತಿಕ್ರೀಡೆಗಾಗಿ ಬಲಾತ್ಕರಿಸಿದುದು, ನಲಕೂಬರರ ಶಾಪ
ಮೂಲಮ್ - 1
ಸ ತು ತತ್ರದಶಗ್ರೀವಃ ಸಹ ಸೈನ್ಯೇನ ವೀರ್ಯವಾನ್ ।
ಅಸ್ತಂ ಪ್ರಾಪ್ತೇ ದಿನಕರೇ ನಿವಾಸಂ ಸಮರೋಚಯತ್ ॥
ಅನುವಾದ
ಸೂರ್ಯನು ಅಸ್ತಾಚಲಕ್ಕೆ ಹೋದಾಗ ಪರಾಕ್ರಮಿ ದಶಗ್ರೀವನು ತನ್ನ ಸೈನ್ಯದೊಂದಿಗೆ ಕೈಲಾಸದಲ್ಲೇ ರಾತ್ರೆ ಉಳಿಯುವುದು ಸರಿಯೆಂದು ತಿಳಿದನು.॥1॥
ಮೂಲಮ್ - 2
ಉದಿತೇ ವಿಮಲೇ ಚಂದ್ರೇ ತುಲ್ಯಪರ್ವತವರ್ಚಸಿ ।
ಪ್ರಸುಪ್ತಂ ಸುಮಹತ್ಸೈನ್ಯಂ ನಾನಾ ಪ್ರಹರಣಾಯುಧಮ್ ॥
ಅನುವಾದ
ಮತ್ತೆ ಕೈಲಾಸದಂತೆ ಶ್ವೇತಕಾಂತಿಯುಳ್ಳ ನಿರ್ಮಲಚಂದ್ರನು ಉದಯಿಸಿದನು, ನಾನಾ ರೀತಿಯ ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತವಾದ ನಿಶಾಚರರ ಆ ವಿಶಾಲ ಮಹಾಸೈನ್ಯವು ಗಾಢನಿದ್ದೆಯಲ್ಲಿ ಮುಳುಗಿತು.॥2॥
ಮೂಲಮ್ - 3
ರಾವಣಸ್ತು ಮಹಾವೀರ್ಯೋ ನಿಷಣ್ಣಃ ಶೈಲಮೂರ್ಧನಿ ।
ಸ ದದರ್ಶ ಗುಣಾಂಸ್ತತ್ರ ಚಂದ್ರಪಾದಪಶೋಭಿತಾನ್ ॥
ಅನುವಾದ
ಆದರೆ ಮಹಾ ಪರಾಕ್ರಮಿ ರಾವಣನು ಆ ಪರ್ವತದ ಶಿಖರದಲ್ಲಿ ಸುಮ್ಮನೇ ಕುಳಿತು, ಬೆಳದಿಂಗಳಿನಿಂದ ಸುಶೋಭಿತವಾದ ಪರ್ವತದ ನೈಸರ್ಗಿಕ ಶೋಭೆಯನ್ನು ನಿರೀಕ್ಷಿಸತೊಡಗಿದನು.॥3॥
ಮೂಲಮ್ - 4
ಕರ್ಣಿಕಾರವನೈರ್ದೀಪ್ತೈಃ ಕದಂಬವಕುಲೈಸ್ತಥಾ ।
ಪದ್ಮಿನೀಭಿಶ್ಚ ಫುಲ್ಲಾಭಿರ್ಮಂದಾಕಿನ್ಯಾ ಜಲೈರಪಿ ॥
ಮೂಲಮ್ - 5
ಚಂಪಕಾಶೋಕಪುನ್ನಾಗ ಮಂದಾರ ತರುಭಿಸ್ತಥಾ ।
ಚೂತಪಾಟಲಲೋಧ್ರೈಶ್ಚ ಪ್ರಿಯಙ್ಗ್ವರ್ಜುನಕೇತಕೈಃ ॥
ಮೂಲಮ್ - 6
ತಗರೈರ್ನಾರೀಕೇಲೈಶ್ಚ ಪ್ರಿಯಾಲಪನಸೈಸ್ತಥಾ ।
ಏತೈರನ್ಯೈಶ್ಚ ತರುಭಿರುದ್ಭಾಸಿತವನಾಂತರೇ ॥
ಅನುವಾದ
ಕೆಲವೆಡೆಗಳಲ್ಲಿ ಅರಳಿದ ಕಣಗಿಲೆಯ ಕಾಡು ಶೋಭಿಸುತ್ತಿದ್ದರೆ, ಕೆಲವೆಡೆ ಕದಂಬ, ಬಕುಲ ವೃಕ್ಷಗಳು ತಮ್ಮ ಶೋಭೆಯನ್ನು ಬೀರುತ್ತಿದ್ದವು. ಕೆಲವೆಡೆ ಮಂದಾಕಿನಿಯು ನೀರು ತುಂಬಿ, ಅರಳಿದ ಕಮಲಗಳಿಂದ ಅಲಂಕೃತವಾಗಿ ಶೋಭಿಸುತ್ತಿತ್ತು. ಕೆಲವೆಡೆ ಸಂಪಿಗೆ, ಅಶೋಕ, ಪುನ್ನಾಗ, ಮಂದಾರ, ಮಾವು, ಪಾಟಲ, ಲೋಧ್ರ, ಪ್ರಿಯಂಗು, ಅರ್ಜುನ, ಕೇದಿಗೆ, ತಗರ, ತೆಂಗು ಮುಂತಾದ ಮರಗಳಿಂದ ಕೂಡಿದ ಅರಣ್ಯಪ್ರದೇಶಗಳಿದ್ದು ಪರ್ವತಶಿಖರದ ಕಾಂತಿಯನ್ನು ಹೆಚ್ಚಿಸುತ್ತಿದ್ದವು.॥4-6॥
ಮೂಲಮ್ - 7
ಕಿನ್ನರಾ ಮದನೇನಾರ್ತಾ ರಕ್ತಾ ಮಧುರಕಂಠಿನಃ ।
ಸಮಂ ಸಂಪ್ರಜಗುರ್ಯತ್ರ ಮನಸ್ತುಷ್ಟಿವಿವರ್ಧನಮ್ ॥
ಅನುವಾದ
ಮಂಜುಳ ಕಂಠಧ್ವನಿಯುಳ್ಳ ಕಿನ್ನರರು ತಮ್ಮ ಕಾಮಿನಿಯರೊಂದಿಗೆ ಅಲ್ಲಿ ರಾಗವಾಗಿ ಹಾಡುತ್ತಿದ್ದರು. ಅದು ಕಿವಿಗೆ ಬೀಳುತ್ತಲೇ ಮನಸ್ಸಿನ ಆನಂದ ಹೆಚ್ಚುತ್ತಿತ್ತು.॥7॥
ಮೂಲಮ್ - 8
ವಿದ್ಯಾಧರಾ ಮಹಾಕ್ಷೀಬಾ ಮದರಕ್ತಾಂತಲೋಚನಾಃ ।
ಯೋಷಿದ್ಭಿಃ ಸಹ ಸಂಕ್ರಾಂತಾಶ್ಚಿಕ್ರೀಡುರ್ಜಹೃಷುಶ್ಚ ವೈ ॥
ಮೂಲಮ್ - 9
ಘಂಟಾನಾಮಿನ ಸಂನಾದಃ ಶುಶ್ರುವೇ ಮಧುರಸ್ವನಃ ।
ಅಪ್ಸರೋಗಣ ಸಂಘಾನಾಂ ಗಾಯತಾಂ ಧನದಾಲಯೇ ॥
ಅನುವಾದ
ಮದದಿಂದ ಕೆಂಪಾದ ಕಡೆ ಕಣ್ಣುಗಳುಳ್ಳ, ಮದಮತ್ತ ವಿದ್ಯಾಧರರು ಯುವತಿಯರೊಂದಿಗೆ ಕ್ರೀಡಿಸುತ್ತಾ ಹರ್ಷಮಗ್ನರಾಗಿದ್ದರು. ಅಲ್ಲಿ ಕುಬೇರನ ಭವನದಲ್ಲಿ ಹಾಡುತ್ತಿರುವ ಅಪ್ಸರೆಯರ ಗೀತೆಗಳ ಮಧುರ ಧ್ವನಿಗಳ ಘಂಟಾನಾದದಂತೆ ಕೇಳಿಬರುತ್ತಿತ್ತು.॥8-9॥
ಮೂಲಮ್ - 10
ಪುಷ್ಪವರ್ಣಾಣಿ ಮುಂಚಂತೋ ನಗಾಃ ಪವನತಾಡಿತಾಃ ।
ಶೈಲಂ ತಂ ವಾಸಯಂತೀವ ಮಧುಮಾಧವ ಗಂಧಿನಃ ॥
ಅನುವಾದ
ವಸಂತ ಋತುವಿನ ಎಲ್ಲ ಪುಷ್ಪಗಳ ಪರಿಮಳಯುಕ್ತ ಮರಗಳು ಗಾಳಿಯ ಹೊಡೆತಕ್ಕೆ ಹೂವುಗಳ ಮಳೆಗರೆಯುತ್ತಾ ಆ ಇಡೀ ಪರ್ವತವನ್ನು ಸುವಾಸಿತಗೊಳಿಸುತ್ತಿತ್ತು.॥10॥
ಮೂಲಮ್ - 11
ಮಧುಪುಷ್ಪರಜಃಪೃಕ್ತಂ ಗಂಧಮಾದಾಯ ಪುಷ್ಕಲಮ್ ।
ಪ್ರವವೌ ವರ್ಧಯನ್ಕಾಮಂ ರಾವಣಸ್ಯ ಸುಖೋಽನಿಲಃ ॥
ಅನುವಾದ
ವಿವಿಧ ಕುಸುಮಗಳ ಮಧುರ ಮಕರಂದ ಹಾಗೂ ಪರಾಗಮಿಶ್ರಿತ ದಟ್ಟವಾದ ಸುಗಂಧವನ್ನು ಪಸರಿಸುತ್ತಾ ಮಂದ-ಮಂದವಾಗಿ ಬೀಸುವ ಸುಖದ ಗಾಳಿಯು ರಾವಣನಲ್ಲಿ ಕಾಮವಾಸನೆ ಉದ್ದೀಪಿತಗೊಳಿಸಿತು.॥11॥
ಮೂಲಮ್ - 12
ಗೇಯಾತ್ಪುಷ್ಪಸಮೃದ್ಧ್ಯಾ ಚ ಶೈತ್ಯಾದ್ವಾಯೋರ್ಗಿರೇರ್ಗುಣಾತ್ ।
ಪ್ರವೃತ್ತಾಯಾಂ ರಜನ್ಯಾಂ ಚ ಚಂದ್ರಸ್ಯೋದಯನೇನ ಚ ॥
ಮೂಲಮ್ - 13
ರಾವಣಃ ಸ ಮಹಾವೀರ್ಯಃ ಕಾಮಸ್ಯವಶಮಾಗತಃ ।
ವಿನಿಃಶ್ವಸ್ಯ ವಿನಿಃಶ್ವಸ್ಯ ಶಶಿನಂ ಸಮವೈಕ್ಷತ ॥
ಅನುವಾದ
ಸಂಗೀತದ ಮಧುರತಾನ, ಬಗೆ-ಬಗೆಯ ಪುಷ್ಪಗಳ ಸಮೃದ್ಧಿ, ಶೀತಲವಾಯುವಿನ ಸ್ಪರ್ಶ, ಪರ್ವತದ ರಮಣೀಯ ಆಕರ್ಷಣ, ರಜನಿಯ ಮಧುರ ಸಮಯ, ಚಂದ್ರೋದಯ - ಹೀಗೆ ಉದ್ದೀಪನದ ಎಲ್ಲ ಉಪಕರಣಗಳಿಂದಾಗಿ ಮಹಾಪರಾಕ್ರಮಿ ರಾವಣನು ಕಾಮಕ್ಕೆ ಅಧೀನನಾಗಿ, ಪದೇ-ಪದೇ ನಿಟ್ಟುಸಿರುಬಿಡುತ್ತಾ ಚಂದ್ರನನ್ನು ನೋಡತೊಡಗಿದನು.॥12-13॥
ಮೂಲಮ್ - 14
ಏತಸ್ಮಿನ್ನಂತರೇ ತತ್ರ ದಿವ್ಯಾಭರಣಭೂಷಿತಾ ।
ಸರ್ವಾಪ್ಸರೋವರಾ ರಂಭಾ ಪೂರ್ಣಚಂದ್ರನಿಭಾನನಾ ॥
ಅನುವಾದ
ಆಗಲೇ ಸಮಸ್ತ ಅಪ್ಸರೆಯರಲ್ಲಿ ಶ್ರೇಷ್ಠಸುಂದರಿ ಪೂರ್ಣ ಚಂದ್ರಮುಖಿ ರಂಭೆಯು ದಿವ್ಯವಸ್ತ್ರಾಣಭೂಷಣಗಳಿಂದ ವಿಭೂಷಿತಳಾಗಿ ಆ ದಾರಿಯಿಂದ ಹೋಗುತ್ತಿದ್ದಳು.॥14॥
ಮೂಲಮ್ - 15
ದಿವ್ಯಚಂದನಲಿಪ್ತಾಂಗೀ ಮಂದಾರಕೃತ ಮೂರ್ಧಜಾ ।
ದಿವ್ಯೋತ್ಸವಕೃತಾರಂಭಾ ದಿವ್ಯಪುಷ್ಪವಿಭೂಷಿತಾ ॥
ಅನುವಾದ
ಅವಳು ಶರೀರಕ್ಕೆ ದಿವ್ಯಚಂದನವನ್ನು ಲೇಪಿಸಿಕೊಂಡು, ಮುಡಿಯಲ್ಲಿ ಪಾರಿಜಾತ ಪುಷ್ಪಗಳನ್ನು ಮುಡಿದಿದ್ದಳು. ದಿವ್ಯಪುಷ್ಪಗಳಿಂದ ಶೃಂಗರಿಸಿಕೊಂಡು ಪ್ರಿಯ ಸಮಾಗಮರೂಪೀ ದಿವ್ಯ ಉತ್ಸವಕ್ಕಾಗಿ ಹೋಗುತ್ತಿದ್ದಳು.॥15॥
ಮೂಲಮ್ - 16
ಚಕ್ಷುರ್ಮನೋಹರಂ ಪೀನಂ ಮೇಖಲಾದಾಮಭೂಷಿತಮ್ ।
ಸಮುದ್ವಹಂತೀ ಜಘನಂ ರತಿಪ್ರಾಭೃತಮುತ್ತಮಮ್ ॥
ಅನುವಾದ
ಸುವರ್ಣಮಯ ಸೊಂಟಪಟ್ಟಿಯಿಂದ ಸಮಲಂಕೃತವಾಗಿ ಇದ್ದ ರಂಭೆಯ ಕಟಿಪ್ರದೇಶವು ರತಿಗೆ ಸಮರ್ಪಿಸುವ ಉಪಹಾರವೋ ಎಂಬಂತೆ ನೇತ್ರಾನಂದಕರವಾಗಿ ಕಾಣುತ್ತಿತ್ತು.॥16॥
ಮೂಲಮ್ - 17
ಕೃತೈರ್ವಿಶೇಷಕೈರಾರ್ದ್ರೈಃ ಷಡರ್ತುಕುಸುಮೋದ್ಭವೈಃ ।
ಬಭಾವನ್ಯತಮೇವ ಶ್ರೀಃ ಕಾಂತಿ ಶ್ರೀದ್ಯುತಿ ಕೀರ್ತಿಭಿಃ ॥
ಅನುವಾದ
ಆಕೆಯ ಗಲ್ಲಗಳು ಹರಿಚಂದನದಿಂದ ಚಿತ್ರಿತವಾಗಿದ್ದವು. ಎಲ್ಲ ಋತುಗಳಲ್ಲಿ ಬಿಡುವ ನೂತನ, ಪುಷ್ಪಗಳಮಾಲೆಯನ್ನು ಧರಿಸಿ, ತನ್ನ ಅಲೌಕಿಕ ಕಾಂತಿ, ಶೋಭೆ, ಕೀರ್ತಿಯಿಂದ ಯುಕ್ತಳಾಗಿ ಇನ್ನೋರ್ವ ಲಕ್ಷ್ಮೀಯಂತೆ ಕಂಡುಬರುತ್ತಿದ್ದಳು.॥17॥
ಮೂಲಮ್ - 18
ನೀಲಂ ಸತೋಯಮೇಘಾಭಂ ವಸ್ತ್ರಂ ಸಮವಗುಂಠಿತಾ ।
ಯಸ್ಯಾ ವಕ್ತ್ರಂ ಶಶಿನಿಭಂ ಭ್ರುವೌ ಚಾಪನಿಭೇ ಶುಭೇ ॥
ಅನುವಾದ
ಆಕೆಯ ಮುಖವು ಚಂದ್ರನಂತೆ ಮನೋಹರವಾಗಿದ್ದು, ಎರಡು ಹುಬ್ಬುಗಳೂ ಬಿಲ್ಲಿನಂತೆ ಇದ್ದವು. ನೀರು ತುಂಬಿದ ಮೋಡದಂತೆ ನೀಲಿ ಬಣ್ಣದ ಸೀರೆಯನ್ನು ಉಟ್ಟಿದ್ದಳು.॥18॥
ಮೂಲಮ್ - 19
ಊರೂ ಕರಿಕರಾಕಾರೌ ಕರೌ ಪಲ್ಲವಕೋಮಲೌ ।
ಸೈನ್ಯಮಧ್ಯೇನ ಗಚ್ಛಂತೀ ರಾವಣೇನೋಪಲಕ್ಷಿತಾ ॥
ಅನುವಾದ
ಅವಳ ತೊಡೆಗಳು ಆನೆಯ ಸೊಂಡಿಲಿನಂತಿದ್ದು, ಕೈಗಳು ದೇಹರೂಪೀ ವೃಕ್ಷದ ಚಿಗುರಿನಂತೆ ಸುಕೋಮಲವಾಗಿದ್ದವು. ಸೈನ್ಯದ ನಡುವೆ ಹೋಗುತ್ತಿದ್ದ ಆಕೆಯನ್ನುರಾವಣನು ನೋಡಿದನು.॥19॥
ಮೂಲಮ್ - 20
ತಾಂ ಸಮುತ್ಥಾಯ ಗಚ್ಛಂತೀಂ ಕಾಮಬಾಣವಶಂ ಗತಃ ।
ಕರೇ ಗೃಹೀತ್ವಾ ಲಜ್ಜಂತೀಂ ಸ್ಮಯಮಾನೋಽಭ್ಯಭಾಷತ ॥
ಅನುವಾದ
ನೋಡುತ್ತಲೇ ಅವನು ಮನ್ಮಥ ಬಾಣಗಳಿಗೆ ತುತ್ತಾಗಿ, ಎದ್ದುನಿಂತು ಹೋಗುತ್ತಿದ್ದ ರಂಭೆಯ ಕೈಯನ್ನು ಹಿಡಿದನು. ಬಡಪಾಯಿ ಆ ಅಬಲೆ ನಾಚಿಕೊಂಡಳು, ಆದರೆ ನಿಶಾಚರನು ಮುಗುಳ್ನಕ್ಕು ಹೇಳಿದನು.॥20॥
ಮೂಲಮ್ - 21
ಕ್ವಗಚ್ಛಸಿ ವರಾರೋಹೇ ಕಾಂ ಸಿದ್ಧಿಂ ಭಜಸೇ ಸ್ವಯಮ್ ।
ಕಸ್ಯಾಭ್ಯುದಯಕಾಲೋಽಯಂ ಯಸ್ತ್ವಾಂ ಸಮುಪಭೋಕ್ಷ್ಯತೇ ॥
ಅನುವಾದ
ಸುಂದರಿ ! ಎಲ್ಲಿಗೆ ಹೋಗುತ್ತಿರುವೆ? ಯಾರ ಇಚ್ಛೆಯನ್ನು ಪೂರ್ಣಗೊಳಿಸಲು ಹೊರಟಿರುವೆ? ನಿನ್ನನ್ನು ಉಪಭೋಗಿಸುವ ಯಾರ ಭಾಗ್ಯೋದಯದ ಸಮಯ ಬಂದಿದೆ.॥21॥
ಮೂಲಮ್ - 22
ತ್ವದಾನನರಸಸ್ಯಾದ್ಯ ಪದ್ಮೋತ್ಪಲಸುಗಂಧಿನಃ ।
ಸುಧಾಮೃತರಸಸ್ಯೇವ ಕೋಽದ್ಯ ತೃಪ್ತಿಂ ಗಮಿಷ್ಯತಿ ॥
ಅನುವಾದ
ಕಮಲ, ಉತ್ಪಲಗಳ ಸುಗಂಧವನ್ನು ಧರಿಸಿದ ನಿನ್ನ ಈ ಮನೋಹರ ಮುಖಾರವಿಂದದ ರಸವು ಅಮೃತಕ್ಕೂ ಅಮೃತವಾಗಿದೆ. ಈ ಅಮೃತ ರಸಾಸ್ವಾದಗೈದು ಇಂದು ಯಾರು ತೃಪ್ತನಾಗುವನು.॥22॥
ಮೂಲಮ್ - 23
ಸ್ವರ್ಣಕುಂಭನಿಭೌ ಪೀನೌ ಶುಭೌ ಭೀರು ನಿರಂತರೌ ।
ಕಸ್ಯೋರಃಸ್ಥಲಸಂಸ್ಪರ್ಶಂ ದಾಸ್ಯತಸ್ತೇ ಕುಚಾವಿಮೌ ॥
ಅನುವಾದ
ಸುವರ್ಣಕುಂಭ ಸದೃಶವಾಗಿರುವ ಒಂದಕ್ಕೊಂದು ಸೇರಿಕೊಂಡಿರುವ, ಸ್ಥೂಲವಾಗಿಯೂ ಶುಭಕರವೂ ಆದ ಈ ನಿನ್ನ ಕುಚದ್ವಯಗಳು ಯಾವ ಭಾಗ್ಯವಂತನ ವಕ್ಷಃಸ್ಥಳವನ್ನು ಸ್ಪರ್ಶಿಸಿ ಸುಖಕೊಡುವವು.॥23॥
ಮೂಲಮ್ - 24
ಸುವರ್ಣಚಕ್ರ ಪ್ರತಿಮಂ ಸ್ವರ್ಣದಾಮಚಿತಂ ಪ್ರಥು ।
ಅಧ್ಯಾರೋಕ್ಷ್ಯತಿ ಕಸ್ತೇಽದ್ಯ ಜಘನಂ ಸ್ವರ್ಗರೂಪಿಣಮ್ ॥
ಅನುವಾದ
ಚಿನ್ನದ ಸೊಂಟಪಟ್ಟಿಯಿಂದ ಸಮಲಂಕೃತವಾದ ಸುವರ್ಣ ಚಕ್ರದಂತೆ ದುಂಡಾಗಿಯೂ, ವಿಶಾಲವಾಗಿರುವ, ಸ್ವರ್ಗಸುಖಕ್ಕೆ ಸಮವಾದ ಸುಖವನ್ನೀಯುವ ನಿನ್ನ ಜಘನವನ್ನೇರಿ ಸುಖಪಡುವ ಭಾಗ್ಯಶಾಲಿಯು ಯಾರು.॥24॥
ಮೂಲಮ್ - 25
ಮದ್ವಿಶಿಷ್ಟಃ ಪುಮಾನ್ಕೋಽದ್ಯ ಶಕ್ರೋ ವಿಷ್ಣುರಥಾಶ್ವಿನೌ ।
ಮಾಮತೀತ್ಯ ಹಿ ಯಚ್ಚ ತ್ವಂ ಯಾಸಿ ಭೀರು ನಶೋಭನಮ್ ॥
ಅನುವಾದ
ಇಂದ್ರ, ಉಪೇಂದ್ರ, ಅಶ್ವಿನೀಕುಮಾರರೇ ಏನು ಈಗ ನನ್ನಿಂದ ಮಿಗಿಲಾದ ಪುರುಷ ಯಾರಿದ್ದಾನೆ? ಸುಂದರೀ! ನೀನು ನನ್ನನ್ನು ಬಿಟ್ಟು ಬೇರೆಡೆಗೆ ಹೋಗುತ್ತಿರುವುದು ಸರಿಯಲ್ಲ.॥25॥
ಮೂಲಮ್ - 26
ವಿಶ್ರಮ ತ್ವಂ ಪೃಥುಶ್ರೋಣಿ ಶಿಲಾತಲಮಿದಂ ಶುಭಮ್ ।
ತ್ರೈಲೋಕ್ಯೇ ಯಃ ಪ್ರಭುಶ್ಚೈವ ಮದನ್ಯೋ ನೈವ ವಿದ್ಯತೇ ॥
ಅನುವಾದ
ಸ್ಥೂಲ ನಿತಂಬವುಳ್ಳ ಸುಂದರಿ! ಈ ಸುಂದರ ಶಿಲೆಯಲ್ಲಿ ಕುಳಿತು ವಿಶ್ರಮಿಸು. ಈ ತ್ರಿಭುವನದ ಸ್ವಾಮಿಯು ನನಗಿಂತ ಬೇರೆ ಇಲ್ಲ. ನಾನೇ ಸಂಪೂರ್ಣ ಲೋಕಗಳ ಅಧಿಪತಿಯಾಗಿದ್ದೇನೆ.॥26॥
ಮೂಲಮ್ - 27
ತದೇವಂ ಪ್ರಾಂಜಲಿಃ ಪ್ರಹ್ವೋ ಯಾಚತೇ ತ್ವಾಂ ದಶಾನನಃ ।
ಭರ್ತುರ್ಭರ್ತಾ ವಿಧಾತಾ ಚ ತ್ರೈಲೋಕ್ಯಸ್ಯ ಭಜಸ್ವಮಾಮ್ ॥
ಅನುವಾದ
ಮೂರು ಲೋಕಗಳ ಒಡೆಯರಿಗೂ ಒಡೆಯನಾದ ಈ ವಿಧಾತಾ ದಶಮುಖ ರಾವಣನು ಇಂದು ಈ ರೀತಿಯಾಗಿ ವಿನೀತನಾಗಿ ಯಾಚಿಸುತ್ತಿದ್ದಾನೆ. ಸುಂದರೀ! ನನ್ನನ್ನು ಸ್ವೀಕರಿಸು.॥27॥
ಮೂಲಮ್ - 28
ಏವಮುಕ್ತಾಬ್ರವೀದ್ರಂಭಾ ವೇಪಮಾನಾ ಕೃತಾಂಜಲಿಃ ।
ಪ್ರಸೀದ ನಾರ್ಹಸೇ ವಕ್ತುಮೀದೃಶಂ ತ್ವಂ ಹಿ ಮೇ ಗುರುಃ ॥
ಅನುವಾದ
ರಾವಣನು ಹೀಗೆ ಹೇಳಿದಾಗ ನಡುಗಿ ಹೋಗಿ ಕೈಮುಗಿದು ಹೇಳಿದಳು - ಪ್ರಭೋ! ಪ್ರಸನ್ನರಾಗಿ ನನ್ನ ಮೇಲೆ ಕೃಪೆತೋರಿರಿ. ನೀವು ಹೀಗೆ ಮಾತನಾಡಬಾರದು; ಏಕೆಂದರೆ ನೀವು ನನಗೆ ಪಿತೃತುಲ್ಯ ಮಾವನಾಗಿರುವಿರಿ.॥28॥
ಮೂಲಮ್ - 29
ಅನ್ಯೇಭ್ಯೋಽಪಿ ತ್ವಯಾ ರಕ್ಷ್ಯಾ ಪ್ರಾಪ್ನುಯಾಂ ಧರ್ಷಣಂ ಯದಿ ।
ತದ್ಧರ್ಮತಃ ಸ್ನುಷಾ ತೇಽಹಂ ತತ್ತ್ವಮೇತದ್ಬ್ರವೀಮಿ ತೇ ॥
ಅನುವಾದ
ಬೇರೆ ಯಾರಾದರೂ ನನ್ನನ್ನು ಬಲಾತ್ಕರಿಸಲು ಬಂದಾಗ ನೀವು ನನ್ನನ್ನು ರಕ್ಷಿಸಬೇಕು. ನಾನು ಧರ್ಮದೃಷ್ಟಿಯಿಂದ ನಿಮ್ಮ ಸೊಸೆಯಾಗಿದ್ದೇನೆ. ಇದನ್ನು ನಾನು ಸತ್ಯವಾಗಿ ತಿಳಿಸುತ್ತಿದ್ದೇನೆ.॥29॥
ಮೂಲಮ್ - 30
ಅಥಾಬ್ರವೀದ್ದಶಗ್ರೀವಶ್ಚರಣಾಧೋಮುಖಿಂ ಸ್ಥಿತಾಮ್ ।
ರೋಮಹರ್ಷಮನುಪ್ರಾಪ್ತಾಂ ದೃಷ್ಟಮಾತ್ರೇಣ ತಾಂ ತದಾ ॥
ಅನುವಾದ
ರಂಭೆಯು ತಲೆತಗ್ಗಿಸಿಕೊಂಡು ನಿಂತಿದ್ದಳು. ರಾವಣನ ದೃಷ್ಟಿಮಾತ್ರದಿಂದ ಭಯದಿಂದ ರೋಮಾಂಚಿತಗೊಂಡಿದ್ದಳು. ಆಗ ರಾವಣನು ಆಕೆಯಲ್ಲಿ ಹೇಳಿದನು.॥30॥
ಮೂಲಮ್ - 31
ಸುತಸ್ಯ ಯದಿ ಮೇ ಭಾರ್ಯಾ ತತಸ್ತ್ವಂ ಹಿ ಸ್ನುಷಾ ಭವೇಃ ।
ಬಾಢ್ಯಮಿತ್ಯೇವ ಸಾ ರಂಭಾ ಪ್ರಾಹ ರಾವಣಮುತ್ತರಮ್ ॥
ಅನುವಾದ
ರಂಭೇ! ನೀನೇನಾದರೂ ನನ್ನ ಮಗನ ಮಡದಿಯಾಗಿದ್ದರೆ ಆಗ ನನ್ನ ಸೊಸೆಯಾಗುತ್ತಿದ್ದೆ. ಹಾಗಿರುವಾಗ ನೀನು ಸೊಸೆ ಹೇಗಾಗುವೆ? ಅಗ ರಂಭೆಯು ಹೇಳಿದಳು.॥31॥
ಮೂಲಮ್ - 32
ಧರ್ಮತಸ್ತೇ ಸುತಸ್ಯಾಹಂ ಭಾರ್ಯಾ ರಾಕ್ಷಸಪುಂಗವ ।
ಪುತ್ರಃ ಪ್ರಿಯತರಃ ಪ್ರಾಣೈರ್ಭ್ರಾತುರ್ವೈಶ್ರವಣಸ್ಯ ತೇ ॥
ಅನುವಾದ
ರಾಕ್ಷಸ ಶಿರೋಮಣಿಯೇ! ಧರ್ಮದೃಷ್ಟಿಯಿಂದ ನಾನು ನಿಮ್ಮ ಮಗನ ಮಡದಿಯಾಗಿರುವೆನು. ನಿಮ್ಮ ಅಣ್ಣ ಕುಬೇರನ ಪುತ್ರನು ನನಗೆ ಪ್ರಾಣಗಳಿಗಿಂತಲೂ ಪ್ರಿಯನಾಗಿದ್ದಾನೆ.॥32॥
ಮೂಲಮ್ - 33
ವಿಖ್ಯಾತಸ್ತ್ರಿಷು ಲೋಕೇಷು ನಲಕೂಬರ ಇತ್ಯಯಮ್ ।
ಧರ್ಮತೋ ಯೋ ಭವೇದ್ವಿಪ್ರಃ ಕ್ಷತ್ರಿಯೋ ವೀರ್ಯತೋ ಭವೇತ್ ॥
ಅನುವಾದ
ಅವನು ಮೂರು ಲೋಕಗಳಲ್ಲಿ ‘ನಳಕೂಬರ’ ಎಂದು ವಿಖ್ಯಾತ ನಾಗಿದ್ದಾನೆ. ಧರ್ಮಾನುಷ್ಠಾನದ ದೃಷ್ಟಿಯಿಂದ ಬ್ರಾಹ್ಮಣನಾಗಿದ್ದು, ಪರಾಕ್ರಮದ ದೃಷ್ಟಿಯಿಂದ ಕ್ಷತ್ರಿಯನಾಗಿದ್ದಾನೆ.॥33॥
ಮೂಲಮ್ - 34
ಕ್ರೋಧಾದ್ಯಶ್ಚ ಭವೇದಗ್ನಿಃ ಕ್ಷಾಂತ್ಯಾ ಚ ವಸುಧಾಸಮಃ ।
ತಸ್ಯಾಸ್ಮಿ ಕೃತಸಂಕೇತಾ ಲೋಕಪಾಲಸುತಸ್ಯ ವೈ ॥
ಅನುವಾದ
ಅವನು ಕ್ರೋಧದಲ್ಲಿ ಅಗ್ನಿಯೂ, ಕ್ಷಮೆಯಲ್ಲಿ ಭೂಮಿಗೂ ಸಮಾನನಾಗಿದ್ದಾನೆ. ಅದೇ ಲೋಕಪಾಲ ಕುಮಾರ ಪ್ರಿಯತಮ ನಳಕೂಬನೊಡನೆ ಸೇರಲು ಸಂಕೇತ ಮಾಡಿಕೊಂಡಿದ್ದೇನೆ.॥34॥
ಮೂಲಮ್ - 35
ತಮುದ್ದಿಶ್ಯ ತು ಮೇ ಸರ್ವಂ ವಿಭೂಷಣಮಿದಂ ಕೃತಮ್ ।
ಯಥಾ ತಸ್ಯ ಹಿ ನಾನ್ಯಸ್ಯ ಭಾವೋ ಮಾಂ ಪ್ರತಿ ತಿಷ್ಠತಿ ॥
ಅನುವಾದ
ಇವೆಲ್ಲ ಶೃಂಗಾರ ಅವನಿಗಾಗಿಯೇ ಮಾಡಿಕೊಂಡಿದ್ದೇನೆ. ಅವನಿಗೆ ನನ್ನ ಕುರಿತು ಅನುರಾಗವಿರುವಂತೆಯೇ ನನಗೂ ಅವನ ಮೇಲೆ ಗಾಢವಾದ ಪ್ರೇಮವಿದೆ. ಬೇರೆ ಯಾರ ಕುರಿತು ಪ್ರೇಮವಿಲ್ಲ.॥35॥
ಮೂಲಮ್ - 36
ತೇನ ಸತ್ಯೇನ ಮಾಂ ರಾಜನ್ಮೋಕ್ತುಮರ್ಹಸ್ಯರಿಂದಮ ।
ಸ ಹಿ ತಿಷ್ಠತಿ ಧರ್ಮಾತ್ಮಾ ಮಾಂ ಪ್ರತೀಕ್ಷ್ಯಸಮುತ್ಸುಕಃ ॥
ಅನುವಾದ
ಅರಿಂದಮನೇ! ಈ ಸತ್ಯವನ್ನು ತಿಳಿದು ನನ್ನನ್ನು ಬಿಟ್ಟುಬಿಡು. ಆ ನನ್ನ ಧರ್ಮಾತ್ಮಾ ಪ್ರಿಯತಮನು ಉತ್ಸುಕನಾಗಿ ನನ್ನನ್ನೇ ಪ್ರತೀಕ್ಷೆ ಮಾಡುತ್ತಿರಬಹುದು.॥36॥
ಮೂಲಮ್ - 37
ತತ್ರ ವಿಘ್ನಂ ತು ತಸ್ಯೇಹ ಕರ್ತುಂ ನಾರ್ಹಸಿ ಮುಂಚಮಾಮ್ ।
ಸದ್ಭಿರಾಚರಿತಂ ಮಾರ್ಗಂ ಗಚ್ಛ ರಾಕ್ಷಸಪುಂಗವ ॥
ಅನುವಾದ
ಅವನ ಈ ಸೇವಾಕಾರ್ಯದಲ್ಲಿ ನೀನು ವಿಘ್ನವನ್ನೊಡ್ಡ ಬೇಡ. ನನ್ನನ್ನು ಬಿಟ್ಟುಬಿಡು. ರಾಕ್ಷಸರಾಜನೇ! ನೀನು ಸತ್ಪುರುಷರಿಂದ ಆಚರಿಸುವ ಧರ್ಮದಲ್ಲಿ ನಡೆ.॥37॥
ಮೂಲಮ್ - 38
ಮಾನನೀಯೋ ಮಮ ತ್ವಂ ಹಿ ಪಾಲನೀಯಾ ತಥಾಸ್ಮಿ ತೇ ।
ಏವಮುಕ್ತೋ ದಶಗ್ರೀವಃ ಪ್ರತ್ಯುವಾಚ ವಿನೀತವತ್ ॥
ಅನುವಾದ
ನೀನು ನನಗೆ ಮಾನನೀಯ ಮಾವನಾಗಿರುವೆ. ಆದ್ದರಿಂದ ನೀನು ನನ್ನನ್ನು ರಕ್ಷಿಸಬೇಕು. ಇದನ್ನು ಕೇಳಿ ದಶಗ್ರೀವನು ಆಕೆಗೆ ನಮ್ರವಾಗಿ ಉತ್ತರಿಸಿದನು.॥38॥
ಮೂಲಮ್ - 39½
ಸ್ನುಷಾಸ್ಮಿ ಯದವೋಚಸ್ತ್ವಮೇಕಪತ್ನೀಷ್ವಯಂ ಕ್ರಮಃ ।
ದೇವಲೋಕಸ್ಥಿತಿರಯಂ ಸುರಾಣಾಂ ಶಾಶ್ವತೀ ಮತಾ ॥
ಪತಿರಪ್ಸರಸಾಂ ನಾಸ್ತಿ ನ ಚೈಕಸ್ತ್ರೀಪರಿಗ್ರಹಃ ।
ಅನುವಾದ
ರಂಭೆ! ನೀನು ನನ್ನ ಸೊಸೆ ಎಂದು ಹೇಳುವುದು ಸರಿಯಲ್ಲ. ಯಾವುದಾದರೂ ಒಂದೇ ಪುರುಷನ ಪತ್ನಿಗೆ ಈ ಸಂಬಂಧ ಹೊಂದಿಕೊಳ್ಳುವುದು. ನಿಮ್ಮ ದೇವಲೋಕದ ಸ್ಥಿತಿ ಬೇರೆಯಾಗಿದೆ. ಅಪ್ಸರೆಯರಿಗೆ ಯಾರೂ ಪತಿಯಾಗಿ ಇರುವುದಿಲ್ಲ, ಇದು ಇಲ್ಲಿಯ ನಿಯಮವಾಗಿದೆ. ಇಲ್ಲಿ ಯಾರೂ ಒಂದೇ ಸ್ತ್ರೀಯ ಜೊತೆಗೆ ವಿವಾಹಿತನಾಗಿರುವುದಿಲ್ಲ.॥39½॥
ಮೂಲಮ್ - 40½
ಏವಮುಕ್ತ್ವಾ ಸ ತಾಂ ರಕ್ಷೋ ನಿವೇಶ್ಯ ಚ ಶಿಲಾತಲೇ ॥
ಕಾಮಭೋಗಾಭಿಸಂರಕ್ತೋ ಮೈಥುನಾಯೋಪಚಕ್ರಮೇ ।
ಅನುವಾದ
ಹೀಗೆ ಹೇಳಿ ಅವನು ರಂಭೆಯನ್ನು ಬಲಾತ್ಕಾರವಾಗಿ ಶಿಲೆಯಲ್ಲಿ ಕುಳ್ಳಿರಿಸಿ, ಕಾಮಭೋಗದಲ್ಲಿ ಆಸಕ್ತನಾಗಿ ಆಕೆಯೊಂದಿಗೆ ಸಮಾಗಮ ಮಾಡಿದನು.॥40½॥
ಮೂಲಮ್ - 41½
ಸಾ ವಿಮುಕ್ತಾ ತತೋ ರಂಭಾ ಭ್ರಷ್ಟಮಾಲ್ಯವಿಭೂಷಣಾ ॥
ಗಜೇಂದ್ರಾಕ್ರೀಡಮಥಿತಾ ನದೀವಾಕುಲತಾಂ ಗತಾ ।
ಅನುವಾದ
ಆಕೆಯ ಪುಷ್ಪಹಾರಗಳು ಹರಿದವು, ಒಡವೆಗಳು ಅಸ್ತ-ವ್ಯಸ್ತವಾದವು. ಉಪಭೋಗಿಸಿ ರಾವಣನು ರಂಭೆಯನ್ನು ಬಿಟ್ಟುಬಿಟ್ಟನು. ಆನೆಯು ಮಥಿಸಿದ ನದಿಯಂತೆ ಅವಳ ಸ್ಥಿತಿಯಾಗಿ ಅತ್ಯಂತ ವ್ಯಾಕುಲಳಾದಳು.॥41½॥
ಮೂಲಮ್ - 42½
ಲುಲಿತಾಕುಲ ಕೇಶಾಂತಾ ಕರವೇಪಿತಪಲ್ಲವಾ ॥
ಪವನೇನಾವಧೂತೇವ ಲತಾ ಕುಸುಮಶಾಲಿನೀ ।
ಅನುವಾದ
ಕೂದಲು ಕೆದರಿ ಗಾಳಿಗೆ ಹಾರಾಡುತ್ತಿದ್ದವು, ಶೃಂಗಾರ ಕೆಟ್ಟುಹೋಯಿತು. ಕರಪಲ್ಲವಗಳು ನಡುಗತೊಡಗಿದವು. ಪುಷ್ಪಭರಿತ ಲತೆಯು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ನಲುಗಿಹೋದಂತೆ ಆಕೆ ಕಾಣುತ್ತಿದ್ದಳು.॥42½॥
ಮೂಲಮ್ - 43½
ಸಾ ವೇಪಮಾನಾ ಲಜ್ಜಂತೀ ಭೀತಾ ಕರಕೃತಾಂಜಲಿಃ ॥
ನಲಕೂಬರಮಾಸಾದ್ಯ ಪಾದಯೋರ್ನಿಪಪಾತ ಹ ।
ಅನುವಾದ
ಭಯ, ಲಜ್ಜೆಯಿಂದ ನಡುಗುತ್ತಾ ಅವಳು ನಳಕೂಬರನ ಬಳಿಗೆ ಹೋಗಿ ಕೈಮುಗಿದು ಕಾಲುಗಳ ಮೇಲೆ ಕುಸಿದುಬಿದ್ದಳು.॥43½॥
ಮೂಲಮ್ - 44½
ತದವಸ್ಥಾಂ ಚ ತಾಂ ದೃಷ್ಟ್ವಾ ಮಹಾತ್ಮಾ ನಲಕೂಬರಃ ॥
ಅಬ್ರವೀತ್ಕಿಮಿದಂ ಭದ್ರೇ ಪಾದಯೋಃ ಪತಿತಾಸಿ ಮೇ ।
ಅನುವಾದ
ಈ ಸ್ಥಿತಿಯಲ್ಲಿ ರಂಭೆಯನ್ನು ನೋಡಿ ಮಹಾಮನಾ ನಳಕೂಬರನು ಕೇಳಿದನು-ಭದ್ರೇ! ಇದೇನಿದು? ನನ್ನ ಕಾಲುಗಳ ಮೇಲೆ ಏಕೆ ಬೀಳುತ್ತಿರುವೇ.॥44½॥
ಮೂಲಮ್ - 45½
ಸಾ ವೈ ನಿಃಶ್ವಸಮಾನಾ ತು ವೇಪಮಾನಾ ಕೃತಾಂಜಲಿಃ ॥
ತಸ್ಮೈ ಸರ್ವಂ ಯಥಾತತ್ತ್ವಮಾಖ್ಯಾತುಮುಪಚಕ್ರಮೇ ।
ಅನುವಾದ
ಗಡಗಡನೆ ನಡುಗುತ್ತಾ, ನಿಟ್ಟುಸಿರು ಬಿಡುತ್ತಾ ಕೈಮುಗಿದು ನಡೆದುದೆಲ್ಲವನ್ನು ತಿಳಿಸಲು ಪ್ರಾರಂಭಿಸಿದಳು.॥45½॥
ಮೂಲಮ್ - 46½
ಏಷ ದೇವ ದಶಗ್ರೀವಃ ಪ್ರಾಪ್ತೋ ಗಂತುಂ ತ್ರಿವಿಷ್ಟಪಮ್ ॥
ತೇನ ಸೈನ್ಯ ಸಹಾಯೇನ ನಿಶೇಯಂ ಪರಿಣಾಮಿತಾ ।
ಅನುವಾದ
ದೇವ! ಆ ದಶಮುಖ ರಾವಣನು ಸ್ವರ್ಗಲೋಕದ ಮೇಲೆ ಆಕ್ರಮಣ ಮಾಡಲು ಬಂದಿರುವನು. ಅವನೊಡನೆ ಭಾರೀ ದೊಡ್ಡ ಸೈನ್ಯವಿದ್ದು, ಇಂದಿನ ರಾತ್ರೆ ಇಲ್ಲೇ ಬೀಡು ಬಿಟ್ಟಿರುವನು.॥46½॥
ಮೂಲಮ್ - 47½
ಆಯಾಂತೀ ತೇನ ದೃಷ್ಟಾಸ್ಮಿ ತ್ವತ್ಸಕಾಶಮರಿಂದಮ ॥
ಗೃಹೀತಾ ತೇನ ಪೃಷ್ಟಾಸ್ಮಿ ಕಸ್ಯ ತ್ವಮಿತಿ ರಕ್ಷಸಾ ।
ಅನುವಾದ
ಶತ್ರುದಮನ ವೀರನೇ! ನಾನು ನಿನ್ನ ಬಳಿಗೆ ಬರುತ್ತಿದ್ದೆ, ಆದರೆ ಆ ರಾಕ್ಷಸನು ನನ್ನನ್ನು ನೋಡಿ, ನನ್ನ ಕೈಹಿಡಿದೆಳೆದು ನೀನು ಯಾರ ಪ್ರೇಯಸಿಯಾಗಿರುವೆ? ಎಂದು ಕೇಳಿದನು.॥47½॥
ಮೂಲಮ್ - 48½
ಮಯಾ ತು ಸರ್ವಂ ಯತ್ಸತ್ಯಂ ತಸ್ಮೈ ಸರ್ವಂ ನಿವೇದಿತಮ್ ॥
ಕಾಮಮೋಹಾಭಿಭೂತಾತ್ಮಾ ನಾಶ್ರೌಷೀತ್ತದ್ವಚೋ ಮಮ ।
ಅನುವಾದ
ನಾನು ಅವನಲ್ಲಿ ಎಲ್ಲ ನಿಜವನ್ನು ಹೇಳಿದೆ. ಆದರೆ ಅವನ ಮನಸ್ಸು ಕಾಮಜನಿತ ಮೋಹದಿಂದ ಆವರಿಸಿತ್ತು. ಅದರಿಂದ ನನ್ನ ಯಾವ ಮಾತನ್ನು ಕೇಳಲಿಲ್ಲ.॥48½॥
ಮೂಲಮ್ - 49½
ಯಾಚ್ಯಮಾನೋ ಮಯಾ ದೇವ ಸ್ನುಷಾ ತೇಽಹಮಿತಿ ಪ್ರಭೋ ॥
ತತ್ಸರ್ವಂ ಪೃಷ್ಠ ತಃ ಕೃತ್ವಾ ಬಲಾತ್ತೇನಾಸ್ಮಿ ಧರ್ಷಿತಾ ।
ಅನುವಾದ
ದೇವ ನಾನು ಪದೇ-ಪದೇ ಪ್ರಾರ್ಥಿಸಿದೆ. ಸ್ವಾಮಿ! ನಾನು ನಿನ್ನ ಸೊಸೆಯಾಗಿದ್ದೇನೆ ನನ್ನನ್ನು ಬಿಡು. ಆದರೆ ಅವನು ನನ್ನ ಮಾತನ್ನು ಅಲಕ್ಷಿಸಿ ನನ್ನೊಡನೆ ಅತ್ಯಾಚಾರ ಮಾಡಿದನು.॥49½॥
ಮೂಲಮ್ - 50½
ಏವಂ ತ್ವಮಪರಾಧಂ ಮೇ ಕ್ಷಂತುಮರ್ಹಸಿ ಸುವ್ರತ ॥
ನ ಹಿ ತುಲ್ಯಂ ಬಲಂ ಸೌಮ್ಯ ಸ್ತ್ರಿಯಾಶ್ಚ ಪುರುಷಸ್ಯ ಹಿ ।
ಅನುವಾದ
ಸುವ್ರತ ಪ್ರಿಯತಮನೇ! ಅಬಲೆಯಾದ ನಿನ್ನಿಂದ ಆದ ಅಪರಾಧವನ್ನು ಕ್ಷಮಿಸು. ಸೌಮ್ಯ! ನಾರಿಯಲ್ಲಿ ಪುರುಷರಂತೆ ಶಾರೀರಿಕ ಬಲ ಇರುವುದಿಲ್ಲ. ಇದರಿಂದ ಆ ದುಷ್ಟನಿಂದ ನನ್ನನ್ನು ರಕ್ಷಿಸಿಕೊಳ್ಳದೆ ಹೋದೆ.॥50½॥
ಮೂಲಮ್ - 51½
ಏತಚ್ಛ್ರುತ್ವಾ ತು ಸಂಕ್ರುದ್ಧಸ್ತದಾ ವೈಶ್ರವಣಾತ್ಮಜಃ ॥
ಧರ್ಷಣಾಂ ತಾಂ ಪರಾಂ ಶ್ರುತ್ವಾ ಧ್ಯಾನಂ ಸಂಪ್ರವಿವೇಶ ಹ ।
ಅನುವಾದ
ಇದನ್ನು ಕೇಳಿ ವೈಶ್ರವಣ ಕುಮಾರ ನಳಕೂಬರನಿಗೆ ಭಾರೀ ಕ್ರೋಧ ಬಂತು. ರಂಭೆಯ ಮೇಲೆ ಮಾಡಿದ ಆ ಮಹಾ ಅತ್ಯಾಚಾರವನ್ನು ತಿಳಿದು ಸ್ವಲ್ಪಹೊತ್ತು ಧ್ಯಾನಾಸಕ್ತನಾದನು.॥51½॥
ಮೂಲಮ್ - 52½
ತಸ್ಯ ತತ್ಕರ್ಮ ವಿಜ್ಞಾಯ ತದಾ ವೈಶ್ರವಣಾತ್ಮಜಃ ॥
ಮುಹೂರ್ತಾತ್ಕ್ರೋಧತಾಮ್ರಾಕ್ಷಸ್ತೋಯಂ ಜಗ್ರಾಹ ಪಾಣಿನಾ ।
ಅನುವಾದ
ಆಗಲೇ ರಾವಣನ ಆ ಕೆಟ್ಟಕೃತ್ಯವನ್ನು ತಿಳಿದು ವೈಶ್ರವಣಪುತ್ರ ನಳಕೂಬರನ ಕಣ್ಣುಗಳು ಕ್ರೋಧದಿಂದ ಕೆಂಪಗಾಗಿ, ಕೈಯಲ್ಲಿ ಜಲವನ್ನೆತ್ತಿಕೊಂಡನು.॥52½॥
ಮೂಲಮ್ - 53½
ಗೃಹೀತ್ವಾ ಸಲಿಲಂ ಸರ್ವಮುಪಸ್ಪೃಶ್ಯ ಯಥಾವಿಧಿ ॥
ಉತ್ಸಸರ್ಜ ತದಾ ಶಾಪಂ ರಾಕ್ಷಸೇಂದ್ರಸ್ಯ ದಾರುಣಮ್ ।
ಅನುವಾದ
ಮೊದಲಿಗೆ ವಿಧಿವತ್ತಾಗಿ ಆಚಮನ ಮಾಡಿ ನೇತ್ರಾದಿ ಇಂದ್ರಿಯಗಳನ್ನು ಸ್ಪರ್ಶಿಸಿ ಅವನು ರಾಕ್ಷಸೇಂದ್ರನಿಗೆ ದಾರುಣವಾದ ಭಯಂಕರ ಶಾಪಕೊಟ್ಟನು.॥53½॥
ಮೂಲಮ್ - 54½
ಅಕಾಮಾ ತೇನ ಯಸ್ಮಾತ್ತ್ವಂ ಬಲಾದ್ಭದ್ರೇ ಪ್ರಧರ್ಷಿತಾ ॥
ತಸ್ಮಾತ್ಸ ಯುವತೀಮನ್ಯಾಂ ನಾಕಾಮಾಮುಪಯಾಸ್ಯತಿ ।
ಮೂಲಮ್ - 55½
ಯದಾ ಹ್ಯ ಕಾಮಾಂ ಕಾಮಾರ್ತೋ ಧರ್ಷಯಿಷ್ಯತಿ ಯೋಷಿತಮ್ ॥
ಮೂರ್ಧಾ ತು ಸಪ್ತಧಾ ತಸ್ಯ ಶಕಲೀಭವಿತಾ ತದಾ ।
ಅನುವಾದ
ಮಂಗಳಾಂಗಿಯೇ! ನಿನಗೆ ಇಷ್ಟ ವಿಲ್ಲದಿದ್ದರೂ ರಾವಣನು ನಿನ್ನ ಮೇಲೆ ಬಲಾತ್ಕಾರವಾಗಿ ಅತ್ಯಾಚಾರ ಮಾಡಿರುವನು. ಆದ್ದರಿಂದ ‘ಇಂದಿನಿಂದ ಬೇರೆ ಯಾವುದೇ ಯುವತಿಯು ಅವನನ್ನು ಬಯಸದೆ ಇರುವಾಗ ಕಾಮಪೀಡಿತನಾಗಿ ಅವನು ಆಕೆಯ ಮೇಲೆ ಬಲಾತ್ಕಾರ ಮಾಡಿದರೆ ಕೂಡಲೇ ಅವನ ತಲೆ ನೂರು ಹೋಳಾಗಲಿ’ ಎಂದು ಶಪಿಸಿದನು.॥54½-55½॥
ಮೂಲಮ್ - 56½
ತಸ್ಮಿನ್ನುದಾಹೃತೇ ಶಾಪೇ ಜ್ವಲಿತಾಗ್ನಿಸಮಪ್ರಭೇ ॥
ದೇವದುಂದುಭಯೋ ನೇದುಃ ಪುಷ್ಪವೃಷ್ಟಿಶ್ಚಖಾಚ್ಚ್ಯುತಾ ।
ಅನುವಾದ
ಪ್ರಜ್ವಲಿತ ಅಗ್ನಿಯಂತೆ ಸುಟ್ಟುಬಿಡುವಂತಹ ಶಾಪವನ್ನು ನಳಕೂಬರನು ಉಚ್ಚರಿಸಿದಾಗ ದೇವತೆಗಳ ದುಂದುಭಿಗಳು ಮೊಳಗಿದವು. ಆಕಾಶದಿಂದ ಪುಷ್ಪವೃಷ್ಟಿಯಾಯಿತು.॥56½॥
ಮೂಲಮ್ - 57
ಪಿತಾಮಹಮುಖಾಶ್ಚೈವ ಸರ್ವೇ ದೇವಾಃ ಪ್ರಹರ್ಷಿತಾಃ ॥
ಮೂಲಮ್ - 58
ಜ್ಞಾತ್ವಾ ಲೋಕಗತಿಂ ಸರ್ವಾಂ ತಸ್ಯ ಮೃತ್ಯುಂ ಚ ರಕ್ಷಸಃ ।
ಋಷಯಃ ಪಿತರಶ್ಚೈವ ಪ್ರೀತಿಮಾಪುರನುತ್ತಮಾಮ್ ॥
ಅನುವಾದ
ಬ್ರಹ್ಮಾದಿ ದೇವತೆಗಳಿಗೆ ಬಹಳ ಹರ್ಷವಾಯಿತು. ರಾವಣನು ಮಾಡಿದ ಲೋಕದ ದುರ್ದಶೆ ಮತ್ತು ಆ ರಾಕ್ಷಸನ ಮೃತ್ಯುವನ್ನು ತಿಳಿದು ಋಷಿಗಳಿಗೆ, ಪಿತೃಗಳಿಗೆ ತುಂಬಾ ಸಂತೋಷವಾಯಿತು.॥57-58॥
ಮೂಲಮ್ - 59
ಶ್ರುತ್ವಾ ತು ಸ ದಶಗ್ರೀವಸ್ತಂ ಶಾಪಂ ರೋಮಹರ್ಷಣಮ್ ।
ನಾರೀಷು ಮೈಥುನೀಭಾವಂ ನಾಕಾಮಾಸ್ವಭ್ಯರೋಚಯತ್ ॥
ಅನುವಾದ
ಆ ರೋಮಾಂಚನಕಾರಿ ಶಾಪವನ್ನು ಕೇಳಿ ದಶಗ್ರೀವನು ತನ್ನನ್ನು ಬಯಸದೇ ಇರುವ ಸ್ತ್ರೀಯರೊಂದಿಗೆ ಬಲಾತ್ಕಾರ ಮಾಡುವುದನ್ನು ಬಿಟ್ಟುಬಿಟ್ಟನು.॥59॥
ಮೂಲಮ್ - 60
ತೇನ ನೀತಾಃ ಸ್ತ್ರಿಯಃ ಪ್ರೀತಿಮಾಪುಃ ಸರ್ವಾಃ ಪತಿವ್ರತಾಃ ।
ನಲಕೂಬರನಿರ್ಮುಕ್ತಂ ಶಾಪಂ ಶ್ರುತ್ವಾ ಮನಃಪ್ರಿಯಮ್ ॥
ಅನುವಾದ
ನಳಕೂಬರನು ರಾವಣನಿಗೆ ಕೊಟ್ಟ ಶಾಪದಿಂದ, ಅವನಿಂದ ಅಪಹೃತರಾದ ಪತಿವ್ರತಾಸ್ತ್ರೀಯರ ಮನಸಿಗೆ ತುಂಬಾ ಪ್ರಿಯವಾಯಿತು. ಅದರಿಂದ ಅವರೆಲ್ಲರೂ ಸಂತೋಷಗೊಂಡರು.॥60॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥26॥