[ಇಪ್ಪತ್ತೈದನೆಯ ಸರ್ಗ]
ಭಾಗಸೂಚನಾ
ಮೇಘನಾದನಿಗೆ ಯಜ್ಞಗಳ ಮೂಲಕ ಫಲಪ್ರಾಪ್ತಿ, ವಿಭೀಷಣನು ರಾವಣನಿಗೆ ಪರಸ್ತ್ರೀ ಹರಣದ ದೋಷಗಳನ್ನು ತಿಳಿಸಿದುದು, ಕುಂಭೀನಸಿಗೆ ಆಶ್ವಾಸನೆಯನ್ನಿತ್ತು ಮಧುವಿನೊಂದಿಗೆ ರಾವಣನು ದೇವಲೋಕದ ಆಕ್ರಮಣ
ಮೂಲಮ್ - 1
ಸ ತು ದತ್ತ್ವಾ ದಶಗ್ರೀವೋ ಬಲಂ ಘೋರಂ ಖರಸ್ಯತತ್ ।
ಭಗಿನೀಂ ಸ ಸಮಾಶ್ವಾಸ್ಯ ಹೃಷ್ಟಃ ಸ್ವಸ್ಥತರೋಭವತ್ ॥
ಅನುವಾದ
ರಾಕ್ಷಸರ ಭಯಂಕರ ಸೈನ್ಯವನ್ನು ಖರನಿಗೆ ಒಪ್ಪಿಸಿ, ತಂಗಿಗೆ ಧೈರ್ಯ ಹೇಳಿ ರಾವಣನು ಬಹಳ ಸ್ವಸ್ಥಚಿತ್ತನಾಗಿ ಸಂತೋಷಗೊಂಡನು.॥1॥
ಮೂಲಮ್ - 2
ತತೋ ನಿಕುಂಭಿಲಾ ನಾಮ ಲಂಕೋಪವನಮುತ್ತಮಮ್ ।
ತದ್ರಾಕ್ಷಸೇಂದ್ರೋ ಬಲವಾನ್ ಪ್ರವಿವೇಶ ಸಹಾನುಗಃ ॥
ಅನುವಾದ
ಬಳಿಕ ಬಲವಂತ ರಾಕ್ಷಸೇಂದ್ರ ರಾವಣನು ಲಂಕೆಯ ಉಪವನವಾದ ನಿಕುಂಭಿಳಾ ಎಂಬಲ್ಲಿಗೆ ಹೋದನು. ಅವನ ಜೊತೆಗೆ ಅನೇಕ ಸೇವಕರೂ ಇದ್ದರು.॥2॥
ಮೂಲಮ್ - 3
ತತೋ ಯೂಪ ಶತಾಕೀರ್ಣಂ ಸೌಮ್ಯಚೈತ್ಯೋಪಶೋಭಿತಮ್ ।
ದದರ್ಶ ವಿಷ್ಠಿತಂ ಯಜ್ಞಂ ಶ್ರಿಯಾ ಸಂಪ್ರಜ್ವಲನ್ನಿವ ॥
ಅನುವಾದ
ರಾವಣನು ತನ್ನ ಶೋಭೆಯಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದನು. ಅವನು ನಿಕುಂಭಿಳೆಗೆ ಹೋಗಿ ನೋಡುತ್ತಾನೆ- ಒಂದು ಯಜ್ಞ ನಡೆಯುತ್ತಿದ್ದು, ನೂರಾರು ಯೂಪಗಳಿಂದ, ಸುಂದರ ದೇವಾಲಯಗಳಿಂದ ಸುಶೋಭಿತವಾಗಿತ್ತು.॥3॥
ಮೂಲಮ್ - 4
ತತಃ ಕೃಷ್ಣಾಜಿನಧರಂ ಕಮಂಡಲು ಶಿಖಾಧ್ವಜಮ್ ।
ದದರ್ಶ ಸ್ವಸುತಂ ತತ್ರ ಮೇಘನಾದಂ ಭಯಾವಹಮ್ ॥
ಅನುವಾದ
ಮತ್ತೆ ಅವನು ತನ್ನ ಪುತ್ರ ಮೇಘನಾದನನ್ನು ನೋಡಿದನು. ಅವನು ಕಪ್ಪಾದ ಮೃಗಚರ್ಮವನ್ನು, ಕಮಂಡಲು, ಶಿಖೆ, ಧ್ವಜ ಧರಿಸಿಕೊಂಡು ಭಯಂಕರವಾಗಿ ಕಾಣುತ್ತಿದ್ದನು.॥4॥
ಮೂಲಮ್ - 5
ತಂ ಸಮಾಸಾದ್ಯ ಲಂಕೇಶಃ ಪರಿಷ್ವಜ್ಯಾಥ ಬಾಹುಭಿಃ ।
ಅಬ್ರವೀತ್ಕಿಮಿದಂ ವತ್ಸ ವರ್ತಸೇ ಬ್ರೂಹಿ ತತ್ತ್ವತಃ ॥
ಅನುವಾದ
ಅವನ ಬಳಿಗೆ ಹೋಗಿ ಲಂಕೇಶ್ವರನು ಅವನನ್ನು ಅಪ್ಪಿಕೊಂಡು ಕೇಳಿದನು- ಮಗ! ಇದೇನು ಮಾಡುತ್ತಿರುವೆ? ಸರಿಯಾಗಿ ತಿಳಿಸು.॥5॥
ಮೂಲಮ್ - 6
ಉಶನಾ ತ್ವಬ್ರವೀತ್ತತ್ರ ಯಜ್ಞಸಂಪತ್ಸಮೃದ್ಧಯೇ ।
ರಾವಣಂ ರಾಕ್ಷಸ ಶ್ರೇಷ್ಠಂ ದ್ವಿಜಶ್ರೇಷ್ಠೋ ಮಹಾತಪಾಃ ॥
ಅನುವಾದ
(ಮೇಘನಾದನು ಯಜ್ಞದ ನಿಯಮದಿಂದಾಗಿ ಮೌನವಾಗಿದ್ದನು.) ಆಗ ಯಜ್ಞ ಸಂಪತ್ಸಮೃದ್ಧಿಗಾಗಿ ಅಲ್ಲಿಗೆ ಬಂದ ಪುರೋಹಿತ ಮಹಾತಪಸ್ವೀ ದ್ವಿಜಶ್ರೇಷ್ಠ ಶುಕ್ರಾಚಾರ್ಯರು ರಾವಣನಲ್ಲಿ ಹೇಳಿದರು.॥6॥
ಮೂಲಮ್ - 7
ಅಹಮಾಖ್ಯಾಮಿ ತೇ ರಾಜನ್ ಶ್ರೂಯತಾಂ ಸರ್ವಮೇವ ತತ್ ।
ಯಜ್ಞಾಸ್ತೇ ಸಪ್ತ ಪುತ್ರೇಣ ಪ್ರಾಪ್ತಾಸ್ತೇ ಬಹುವಿಸ್ತರಾಃ ॥
ಅನುವಾದ
ರಾಜನೇ! ನಾನೆಲ್ಲವನ್ನು ತಿಳಿಸುವೆನು. ಗಮನವಿಟ್ಟು ಕೇಳು - ನಿಮ್ಮ ಪುತ್ರನು ತುಂಬಾ ವಿಸ್ತಾರದಿಂದ ಏಳು ಯಜ್ಞಗಳ ಅನುಷ್ಠಾನ ಮಾಡುತ್ತಿದ್ದಾನೆ.॥7॥
ಮೂಲಮ್ - 8
ಅಗ್ನಿಷ್ಟೋಮೋಽಶ್ವಮೇಧಶ್ಚ ಯಜ್ಞೋ ಬಹುಸುವರ್ಣಕಃ ।
ರಾಜಸೂಯಸ್ತಥಾ ಯಜ್ಞೋ ಗೋಮೇಧೋ ವೈಷ್ಣವಸ್ತಥಾ ॥
ಮೂಲಮ್ - 9
ಮಾಹೇಶ್ವರೇ ಪ್ರವೃತ್ತೇ ತು ಯಜ್ಞೇ ಪುಂಭಿಃ ಸುದುರ್ಲಭೇ ।
ವರಾಂಸ್ತೇ ಲಬ್ಧವಾನ್ ಪುತ್ರಃ ಸಾಕ್ಷಾತ್ಪಶುಪತೇರಿಹ ॥
ಅನುವಾದ
ಅಗ್ನಿಷ್ಟೋಮ, ಅಶ್ವಮೇಧ, ಬಹು ಸುವರ್ಣಕ, ರಾಜಸೂಯ, ಗೋಮೇಧ, ವೈಷ್ಣವ - ಹೀಗೆ ಆರು ಯಜ್ಞಗಳನ್ನು ಪೂರ್ಣಗೊಳಿಸಿ ಈ ಏಳನೆಯ ಬೇರೆಯವರಿಗೆ ಅತ್ಯಂತ ದುರ್ಲಭವಾದ ಮಾಹೇಶ್ವರ ಯಜ್ಞವನ್ನು ಪ್ರಾರಂಭಿಸಿದಾಗ ನಿನ್ನ ಮಗನಿಗೆ ಸಾಕ್ಷಾತ್ ಭಗವಾನ್ ಪಶುಪತಿಯಿಂದ ಅನೇಕ ವರಗಳು ಪ್ರಾಪ್ತವಾದುವು.॥8-9॥
ಮೂಲಮ್ - 10
ಕಾಮಗಂ ಸ್ಯಂದನಂ ದಿವ್ಯಮಂತರಿಕ್ಷಚರಂ ಧ್ರುವಮ್ ।
ಮಾಯಾಂ ಚ ತಾಮಸೀಂ ನಾಮ ಯಯಾ ಸಂಪದ್ಯತೇ ತಮಃ ॥
ಅನುವಾದ
ಜೊತೆಗೆ ಸ್ವೇಚ್ಛಾಚಾರಿಯಾದ ಒಂದು ಆಕಾಶಚಾರೀ ರಥವೂ, ತಾಮಸೀ ಎಂಬ ಮಾಯೆಯೂ ಉತ್ಪನ್ನವಾಗಿದೆ. ಇದರಿಂದ ಅಂಧಕಾರ ಉಂಟು ಮಾಡ ಬಲ್ಲದು.॥10॥
ಮೂಲಮ್ - 11
ಏತಯಾ ಕಿಲ ಸಂಗ್ರಾಮೇ ಮಾಯಯಾ ರಾಕ್ಷಸೇಶ್ವರ ।
ಪ್ರಯುಕ್ತಯಾ ಗತಿಃ ಶಕ್ಯಾ ನ ಹಿ ಜ್ಞಾತುಂ ಸುರಾಸುರೈಃ ॥
ಅನುವಾದ
ರಾಕ್ಷಸೇಶ್ವರನೇ! ಸಂಗ್ರಾಮದಲ್ಲಿ ಈ ಮಾಯೆಯನ್ನು ಪ್ರಯೋಗಿಸಿದಾಗ ದೇವಾಸುರರಿಗೂ ಕೂಡ ಪ್ರಯೋಗಿಸುವ ಪುರುಷನ ಗತಿ-ವಿಧಿಗಳು ತಿಳಿಯಲಾರದು.॥11॥
ಮೂಲಮ್ - 12
ಅಕ್ಷಯಾವಿಷುಧೀ ಬಾಣೈಶ್ಚಾಪಂ ಚಾಪಿ ಸುದುರ್ಜಯಮ್ ।
ಅಸ್ತ್ರಂ ಚ ಬಲವದ್ರಾಜನ್ ಶತ್ರುವಿಧ್ವಂಸನಂ ರಣೇ ॥
ಅನುವಾದ
ರಾಜನೇ! ಬಾಣಗಳಿಂದ ತುಂಬಿದ ಎರಡು ಅಕ್ಷಯ ಬತ್ತಳಿಕೆಗಳು, ಮುರಿಯದಿರುವ ಧನುಸ್ಸು, ರಣರಂಗದಲ್ಲಿ ಶತ್ರುವನ್ನು ಧ್ವಂಸಗೊಳಿಸುವ ಪ್ರಬಲ ಅಸ್ತ್ರ ಇವೆಲ್ಲವುಗಳ ಪ್ರಾಪ್ತಿಯೂ ಆಗಿದೆ.॥12॥
ಮೂಲಮ್ - 13
ಏತಾನ್ಸರ್ವಾನ್ ವರಾನ್ಲ್ಲಬ್ಧ್ವಾ ಪುತ್ರಸ್ತೇಽಯಂ ದಶಾನನ ।
ಅದ್ಯ ಯಜ್ಞಸಮಾಪ್ತೌ ಚ ತ್ವಾಂ ದಿದೃಕ್ಷನ್ ಸ್ಥಿತೋ ಹ್ಯಹಮ್ ॥
ಅನುವಾದ
ದಶಾನನ! ನಿನ್ನ ಈ ಪುತ್ರನು ಇದೆಲ್ಲ ಮನೋವಾಂಛಿತ ವರಗಳನ್ನು ಪಡೆದು, ಇಂದು ಯಜ್ಞದ ಸಮಾಪ್ತಿಯ ದಿನ ನಿನ್ನನ್ನು ದರ್ಶಿಸುವ ಇಚ್ಛೆಯಿಂದ ಇಲ್ಲಿ ನಿಂತಿರುವನು.॥13॥
ಮೂಲಮ್ - 14
ತತೋಽಬ್ರವೀದ್ದಶಗ್ರೀವೋ ನ ಶೋಭನಮಿದಂ ಕೃತಮ್ ।
ಪೂಜಿತಾಃ ಶತ್ರವೋ ಯಸ್ಮಾದ್ದ್ರವ್ಯೈರಿಂದ್ರ ಪುರೋಗಮಾಃ ॥
ಅನುವಾದ
ಇದನ್ನು ಕೇಳಿ ದಶಗ್ರೀವನು ಹೇಳಿದನು - ಮಗನೇ! ನೀನು ಮಾಡಿದುದು ಚೆನ್ನಾಗಿಲ್ಲ; ಏಕೆಂದರೆ ಈ ಯಜ್ಞ ಸಂಬಂಧೀ ದ್ರವ್ಯಗಳಿಂದ ನನ್ನ ಶತ್ರುವಾದ ಇಂದ್ರಾದಿ ದೇವತೆಗಳ ಪೂಜೆ ನಡೆಯಿತು.॥14॥
ಮೂಲಮ್ - 15
ಏಹೀದಾನೀಂ ಕೃತಂ ಯದ್ಧಿ ಸುಕೃತಂ ತನ್ನ ಸಂಶಯಃ ।
ಆಗಚ್ಛ ಸೌಮ್ಯ ಗಚ್ಛಾಮಃ ಸ್ವಮೇವ ಭವನಂ ಪ್ರತಿ ॥
ಅನುವಾದ
ಇರಲಿ, ಮಾಡಿದುದು ಒಳ್ಳೆಯದೇ ಆಯಿತು, ಇದರಲ್ಲಿ ಸಂಶಯವಿಲ್ಲ. ಸೌಮ್ಯ! ಈಗ ನಡೆ, ನಾವು ನಮ್ಮ ಅರಮನೆಗೆ ಹೋಗೋಣ.॥15॥
ಮೂಲಮ್ - 16
ತತೋ ಗತ್ವಾ ದಶಗ್ರೀವಃ ಸಪುತ್ರಃ ಸವಿಭೀಷಣಃ ।
ಸ್ತ್ರಿಯೋಽವತಾರಯಾಮಾಸ ಸರ್ವಾಸ್ತಾ ಭಾಷ್ಪಗದ್ಗದಾಃ ॥
ಅನುವಾದ
ಬಳಿಕ ದಶಗ್ರೀವನು ಪುತ್ರ ಮತ್ತು ವಿಭೀಷಣನೊಂದಿಗೆ ಹೋಗಿ ಪುಷ್ಪಕ ವಿಮಾನದಿಂದ ತಾನು ಅಪಹರಿಸಿ ತಂದ ಸ್ತ್ರೀಯರನ್ನು ಇಳಿಸಿದನು. ಅವರೆಲ್ಲರೂ ಕಂಬನಿಗರೆಯುತ್ತಾ ಗದ್ಗದರಾಗಿ ವಿಲಾಪಿಸುತ್ತಿದ್ದರು.॥16॥
ಮೂಲಮ್ - 17
ಲಕ್ಷಿಣ್ಯೋ ರತ್ನಭೂತಾಶ್ಚ ದೇವದಾನವ ರಾಕ್ಷಸಾಮ್ ।
ತಸ್ಯ ತಾಸು ಮತಿಂ ಜ್ಞಾತ್ವಾ ಧರ್ಮಾತ್ಮಾ ವಾಕ್ಯಮಬ್ರವೀತ್ ॥
ಅನುವಾದ
ಅವರು ಉತ್ತಮ ಲಕ್ಷಣಗಳಿಂದ ಶೋಭಿಸುತ್ತಾ, ದೇವ - ದಾನವ - ರಾಕ್ಷಸರ ಮನೆಯ ರತ್ನಗಳಿದ್ದವು. ಅವರಲ್ಲಿ ರಾವಣನಿಗೆ ಇರುವ ಆಸಕ್ತಿಯನ್ನು ನೋಡಿ ಧರ್ಮಾತ್ಮಾ ವಿಭೀಷಣನು ಹೇಳಿದನು.॥17॥
ಮೂಲಮ್ - 18
ಈದೃಶಸ್ತ್ವಂ ಸಮಾಚಾರೈರ್ಯಶೋಽರ್ಥಕುಲನಾಶನೈಃ ।
ಧರ್ಷಣಂ ಪ್ರಾಣಿನಾಂ ಜ್ಞಾತ್ವಾ ಸ್ವಮತೇನ ವಿಚೇಷ್ಟಸೇ ॥
ಅನುವಾದ
ರಾಜನೇ! ಈ ಆಚರಣವು ಯಶ, ಧನ, ಕುಲದ ನಾಶ ಮಾಡುವಂತಹದು. ಇದರಿಂದ ಯಾವ ಪ್ರಾಣಿಗಳನ್ನು ಪೀಡಿಸಲಾಗುವುದೋ ಅದರಿಂದ ಪಾಪ ಬರುತ್ತದೆ. ಇದನ್ನು ತಿಳಿದಿದ್ದರೂ ಕೂಡ ನೀವು ಸದಾಚಾರವನ್ನು ಉಲ್ಲಂಘಿಸಿ ಸ್ವೇಚ್ಛಾಚಾರದಲ್ಲಿ ಪ್ರವೃತ್ತರಾಗುತ್ತಿರುವಿರಲ್ಲ.॥18॥
ಮೂಲಮ್ - 19
ಜ್ಞಾತೀಂಸ್ತಾನ್ಧರ್ಷಯಿತ್ವೇಮಾಸ್ತ್ವಯಾನೀತಾ ವರಾಂಗನಾಃ ।
ತ್ವಾಮತಿಕ್ರಮ್ಯ ಮಧುನಾ ರಾಜನ್ಕುಂಭೀನಸೀ ಹೃತಾ ॥
ಅನುವಾದ
ಮಹಾರಾಜಾ ! ಈ ಬಡಪಾಯಿ ಅಬಲೆಯರ ಬಂಧುಬಾಂಧವರನ್ನು ಕೊಂದು ನೀವು ಇವರನ್ನು ಅಪಹರಿಸಿ ತಂದಿರುವಿರಿ. ಇಲ್ಲಿ ನಿಮ್ಮನ್ನು ತಿರಸ್ಕರಿಸಿ ನಿಮ್ಮ ತಲೆಯನ್ನು ಮೆಟ್ಟಿ ಮಧುವು ಚಿಕ್ಕಮ್ಮನ ಮಗಳಾದ ನಮ್ಮ ತಂಗಿ ಕುಂಭೀನಸಿಯನ್ನು ಅಪಹರಿಸಿರುವನು.॥19॥
ಮೂಲಮ್ - 20
ರಾವಣಸ್ತ್ವಬ್ರವೀದ್ವಾಕ್ಯಂ ನಾವಗಚ್ಛಾಮಿ ಕಿಂ ತ್ವಿದಮ್ ।
ಕೋಽಯಂ ಯಸ್ತು ತ್ವಯಾಖ್ಯಾತೋ ಮಧುರಿತ್ಯೇವ ನಾಮತಃ ॥
ಅನುವಾದ
ರಾವಣನೆಂದ - ನೀನು ಹೇಳುವುದು ನನಗೆ ತಿಳಿಯುತ್ತಿಲ್ಲ. ನೀನು ಹೇಳಿದ ಮಧುವು ಯಾರಾಗಿದ್ದಾನೆ.॥20॥
ಮೂಲಮ್ - 21
ವಿಭೀಷಣಸ್ತು ಸಂಕ್ರುದ್ಧೋ ಭ್ರಾತರಂ ವಾಕ್ಯಮಬ್ರವೀತ್ ।
ಶ್ರೂಯತಾಮಸ್ಯ ಪಾಪಸ್ಯ ಕರ್ಮಣಃ ಫಲಮಾಗತಮ್ ॥
ಅನುವಾದ
ಆಗ ವಿಭೀಷಣನು ಕುಪಿತನಾಗಿ ಅಣ್ಣ ರಾವಣನಲ್ಲಿ ಹೇಳಿದನು - ಕೇಳು, ನಿಮ್ಮ ಈ ಪಾಪದ ಫಲವು ತಂಗಿಯ ಅಪಹರಣ ರೂಪದಿಂದ ನಮಗೆ ದೊರಕಿದೆ.॥21॥
ಮೂಲಮ್ - 22
ಮಾತಾಮಹಸ್ಯ ಯೋಽಸ್ಮಾಕಂ ಜ್ಯೇಷ್ಠೋ ಭ್ರಾತಾ ಸುಮಾಲಿನಃ ।
ಮಾಲ್ಯವಾನಿತಿ ವಿಖ್ಯಾತೋ ವೃದ್ಧಃ ಪ್ರಾಜ್ಞೋ ನಿಶಾಚರಃ ॥
ಮೂಲಮ್ - 23
ಪಿತಾ ಜ್ಯೇಷ್ಠೋ ಜನನ್ಯಾ ನೋ ಹ್ಯಸ್ಮಾಕಂ ಚಾರ್ಯಕೋಽಭವತ್ ।
ತಸ್ಯ ಕುಂಭೀನಸೀ ನಾಮ ದುಹಿತುರ್ದುಹಿತಾಭವತ್ ॥
ಮೂಲಮ್ - 24
ಮಾತೃಷ್ವಸುರಥಾಸ್ಮಾಕಂ ಸಾ ಚ ಕನ್ಯಾನಲೋದ್ಭವಾ ।
ಭವತ್ಯಸ್ಮಾಕಮೇವೈಷಾ ಭ್ರಾತೃಣಾಂ ಧರ್ಮತಃ ಸ್ವಸಾ ॥
ಅನುವಾದ
ಸುಮಾಲಿಯು ನಮ್ಮ ಮಾತಾಮಹನೆಂಬುದು ನಿನಗೂ ತಿಳಿದಿದೆ. ನಮ್ಮ ಅಜ್ಜನ ದೊಡ್ಡಣ್ಣ ಮಾಲ್ಯವಂತನು ವಿಖ್ಯಾತನಾಗಿದ್ದನು. ಅವನು ಮಹಾಪ್ರಾಜ್ಞನಾಗಿದ್ದನು. ಅವನು ನಮ್ಮ ತಾಯಿ ಕೈಕಸೆಯ ದೊಡ್ಡಪ್ಪನೂ ಹಾಗೂ ನಮಗೆ ದೊಡ್ಡಜ್ಜನೂ ಹೌದು. ಅವನ ಪುತ್ರಿ ಅನಲೆಯು ನಮಗೆ ಚಿಕ್ಕಮ್ಮನಾಗಬೇಕು. ಅವಳ ಪುತ್ರೀ ಕುಂಭೀನಸೀ ನಮಗೆಲ್ಲರಿಗೆ ಧರ್ಮರೀತಿಯಿಂದ ತಂಗಿಯಾಗಿರುವಳು.॥22-24॥
ಮೂಲಮ್ - 25
ಸಾ ಹೃತಾ ಮಧುನಾ ರಾಜನ್ ರಾಕ್ಷಸೇನ ಬಲೀಯಸಾ ।
ಯಜ್ಞಪ್ರವೃತ್ತೇ ಪುತ್ರೇ ತು ಮಯಿ ಚಾಂತರ್ಜಲೋಷಿತೇ ॥
ಮೂಲಮ್ - 26
ಕುಂಭಕರ್ಣೋ ಮಹಾರಾಜ ನಿದ್ರಾಮನುಭವತ್ಯಥ ।
ನಿಹತ್ಯ ರಾಕ್ಷಸಶ್ರೇಷ್ಠಾನಮಾತ್ಯಾನಿಹ ಸಮ್ಮತಾನ್ ॥
ಅನುವಾದ
ರಾಜನೇ! ನಿಮ್ಮ ಪುತ್ರ ಮೇಘನಾದನು ಯಜ್ಞ ತತ್ಪರನಾಗಿದ್ದಾಗ, ನಾನು ತಪಸ್ಸಿಗಾಗಿ ನೀರೊಳಗೆ ಮುಳುಗಿದ್ದೆ. ಅಣ್ಣ ಕುಂಭಕರ್ಣನು ನಿದ್ದೆಯಲ್ಲಿದ್ದ. ಆಗ ಮಹಾಬಲಿ ರಾಕ್ಷಸ ಮಧುವು ಇಲ್ಲಿಗೆ ಬಂದು ನಮ್ಮ ಆದರಣೀಯ ಮಂತ್ರಿಗಳನ್ನು, ಶ್ರೇಷ್ಠ ರಾಕ್ಷಸರನ್ನು ಕೊಂದು, ಕುಂಭೀನಸಿಯನ್ನು ಅಪಹರಿಸಿಕೊಂಡು ಹೋದನು.॥25-26॥
ಮೂಲಮ್ - 27½
ಧರ್ಷಯಿತ್ವಾ ಹೃತಾ ಸಾ ತು ಗುಪ್ತಾಪ್ಯಂತಃಪುರೇ ತವ ।
ಶ್ರುತ್ವಾಪಿ ತನ್ಮಹಾರಾಜ ಕ್ಷಾಂತಮೇವ ಹತೋ ನ ಸಃ ॥
ಯಸ್ಮಾದವಶ್ಯಂ ದಾತವ್ಯಾ ಕನ್ಯಾ ಭರ್ತ್ರೇ ಹಿ ಭ್ರಾತೃಭಿಃ ।
ಅನುವಾದ
ಮಹಾರಾಜಾ! ಕುಂಭೀನಸಿಯು ಅಂತಃಪುರದಲ್ಲಿ ಸುರಕ್ಷಿತಳಾಗಿದ್ದರೂ ಅವನು ಆಕ್ರಮಣ ಮಾಡಿ ಬಲವಂತವಾಗಿ ಅಪಹರಿಸಿದನು. ಇದನ್ನು ಕೇಳಿಯೂ ನಾವು ಕ್ಷಮಿಸಿದೆವು. ಮಧುವನ್ನು ವಧಿಸಲಿಲ್ಲ; ಏಕೆಂದರೆ ಕನ್ಯೆಯು ವಿವಾಹ ಯೋಗ್ಯಳಾದಾಗ ಆಕೆಯನ್ನು ಯೋಗ್ಯಪತಿಯ ಕೈಗೊಪ್ಪಿಸುವುದು ಉಚಿತವಾಗಿದೆ. ಅಣ್ಣಂದಿರಾದ ನಾವು ಈ ಕಾರ್ಯವನ್ನು ಮೊದಲೇ ಮಾಡಬೇಕಾಗಿತ್ತು.॥27½॥
ಮೂಲಮ್ - 28½
ತದೇತತ್ಕರ್ಮಣೋ ಹ್ಯಸ್ಯ ಫಲಂ ಪಾಪಸ್ಯ ದುರ್ಮತೇಃ ॥
ಅಸ್ಮಿನ್ನೇವಾಭಿ ಸಂಪ್ರಾಪ್ತಂ ಲೋಕೇ ವಿದಿತಮಸ್ತು ತೇ ।
ಅನುವಾದ
ನಮ್ಮಲ್ಲಿಂದ ಬಲಾತ್ಕಾರವಾಗಿ ಕನ್ಯೆಯ ಅಪಹರಣವಾದುದು ನಿಮ್ಮ ದೂಷಿತಬುದ್ಧಿ ಹಾಗೂ ಪಾಪಕರ್ಮದ ಫಲವಾಗಿದೆ, ಅದು ನಿಮಗೆ ಇದೇ ಲೋಕದಲ್ಲಿ ದೊರಕಿತು. ಇದು ನಿಮಗೆ ಚೆನ್ನಾಗಿ ತಿಳಿದಿರಬೇಕಾಗಿತ್ತು.॥28½॥
ಮೂಲಮ್ - 29
ವಿಭೀಷಣವಚಃ ಶ್ರುತ್ವಾ ರಾಕ್ಷಸೇಂದ್ರಃ ಸ ರಾವಣಃ ॥
ಮೂಲಮ್ - 30
ದೌರಾತ್ಮ್ಯೇನಾತ್ಮನೋದ್ಧೂತಸ್ತಪ್ತಾಂಭಾ ಇವ ಸಾಗರಃ ।
ತತೋಽಬ್ರವೀದ್ದಶಗ್ರೀವಃ ಕ್ರುದ್ಧಃ ಸಂರಕ್ತಲೋಚನಃ ॥
ಅನುವಾದ
ವಿಭೀಷಣನ ಈ ಮಾತನ್ನು ಕೇಳಿ ರಾವಣನು ಕುದಿಯುತ್ತಿರುವ ಸಮುದ್ರದಂತೆ ತನ್ನ ದುಷ್ಟ ಸ್ವಭಾವದಿಂದಲೇ ಪರಿತಪಿಸಿದನು. ಕೋಪದಿಂದ ಕೆಂಗಣ್ಣನಾದ ರಾವಣನು ಗರ್ಜಿಸುತ್ತಾ ಹೇಳಿದನು .॥29-3.॥
ಮೂಲಮ್ - 31
ಕಲ್ಪ್ಯತಾಂ ಮೇ ರಥಃ ಶೀಘ್ರಂ ಶೂರಾಃ ಸಜ್ಜೀಭವಂತು ನಃ ।
ಭ್ರಾತಾ ಮೇ ಕುಂಭಕರ್ಣಶ್ಚ ಯೇ ಚ ಮುಖ್ಯಾನಿಶಾಚರಾಃ ॥
ಮೂಲಮ್ - 32½
ವಾಹನಾನ್ಯಧಿರೋಹಂತು ನಾನಾ ಪ್ರಹರಣಾಯುಧಾಃ ।
ಆದ್ಯ ತಂ ಸಮರೇ ಹತ್ವಾ ಮಧುಂ ರಾವಣ ನಿರ್ಭಯಮ್ ॥
ಸುರಲೋಕಂ ಗಮಿಷ್ಯಾಮಿ ಯುದ್ಧಾಕಾಂಕ್ಷೀ ಸುಹೃದ್ವೃತಃ ।
ಅನುವಾದ
ನನ್ನ ರಥವನ್ನು ಹೂಡಿ ಆವಶ್ಯಕ ಸಾಮಗ್ರಿಗಳಿಂದ ಸುಸಜ್ಜಿತಗೊಳಿಸಿರಿ. ನನ್ನ ಶೂರವೀರ ಸೈನಿಕರು ರಣಯಾತ್ರೆಗಾಗಿ ಸಿದ್ಧರಾಗಲಿ. ತಮ್ಮ ಕುಂಭಕರ್ಣನೇ ಆದಿ ಮುಖ್ಯ-ಮುಖ್ಯ ನಿಶಾಚರರು ವಾಹನಗಳನ್ನೇರಿ ಹೊರಡಲಿ. ರಾವಣನಿಗೆ ಹೆದರದೇ ಇರುವ ಮಧು ಯುದ್ಧದಲ್ಲಿ ವಧಿಸಿ, ಮಿತ್ರರೊಂದಿಗೆ ಯುದ್ಧಕ್ಕಾಗಿ ದೇವಲೋಕಕ್ಕೆ ಯಾತ್ರೆ ಮಾಡುವೆನು.॥31-32½॥
ಮೂಲಮ್ - 33½
ಅಕ್ಷೌಹಿಣೀ ಸಹಸ್ರಾಣಿ ಚತ್ವಾರ್ಯಗ್ರ್ಯಾಣಿ ರಕ್ಷಸಾಮ್ ॥
ನಾನಾ ಪ್ರಹರಣಾನ್ಯಾಶು ನಿರ್ಯಯುರ್ಯುದ್ಧ ಕಾಂಕ್ಷಿಣಾಮ್ ।
ಅನುವಾದ
ರಾವಣನ ಅಪ್ಪಣೆಯಂತೆ ಯುದ್ಧೋತ್ಸಾಹಿ ಶ್ರೇಷ್ಠ ರಾಕ್ಷಸರ ನಾಲ್ಕು ಸಾವಿರ ಅಕ್ಷೌಹಿಣಿ ಸೈನ್ಯವು ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳನ್ನು ಧರಿಸಿ ಅವಸರದಿಂದ ಲಂಕೆಯಿಂದ ಹೊರಟಿತು.॥33½॥
ಮೂಲಮ್ - 34½
ಇಂದ್ರಜಿತ್ತ್ವಗ್ರತಃ ಸೈನ್ಯಾತ್ಸೈನಿಕಾನ್ ಪರಿಗೃಹ್ಯ ಚ ॥
ಜಗಾಮ ರಾವಣೋ ಮಧ್ಯೇ ಕುಂಭಕರ್ಣಶ್ಚ ಪೃಷ್ಠತಃ ।
ಅನುವಾದ
ಮೇಘನಾದನು ಸಮಸ್ತ ಸೈನ್ಯದೊಂದಿಗೆ ಅಗ್ರೇಸರನಾದರೆ, ರಾವಣನು ನಡುವಿನಲ್ಲಿದ್ದನು. ಕುಂಭಕರ್ಣನು ಹಿಂದಿನಿಂದ ಹಿಂಬಾಲಿಸಿದನು.॥34½॥
ಮೂಲಮ್ - 35½
ವಿಭೀಷಣಶ್ಚ ಧರ್ಮಾತ್ಮಾ ಲಂಕಾಯಾಂ ಧರ್ಮಮಾಚರನ್ ॥
ಶೇಷಾಃ ಸರ್ವೇ ಮಹಾಭಾಗಾ ಯಯುರ್ಮಧುಪುರಂ ಪ್ರತಿ ।
ಅನುವಾದ
ಧರ್ಮಾತ್ಮನಾದ ವಿಭೀಷಣನು ಲಂಕೆಯಲ್ಲೇ ಉಳಿದು ಧರ್ಮಾಚರಣ ಮಾಡತೊಡಗಿದನು. ಉಳಿದ ಎಲ್ಲ ಮಹಾಭಾಗ ನಿಶಾಚರರು ಮಧುಪುರಿಯ ಕಡೆಗೆ ಹೊರಟರು.॥35½॥
ಮೂಲಮ್ - 36½
ಖರೈರುಷ್ಟ್ರೈರ್ಹಯೈರ್ದೀಪ್ತೈಃ ಶಿಶುಮಾರೈರ್ಮಹೋರಗೈಃ ॥
ರಾಕ್ಷಸಾಃ ಪ್ರಯಯುಃ ಸರ್ವೇ ಕೃತ್ವಾಽಽಕಾಶಂ ನಿರಂತರಮ್ ।
ಅನುವಾದ
ಕತ್ತೆ, ಒಂಟೇ, ಕುದುರೆ, ನೀರಬೆಕ್ಕು, ಮಹಾಸರ್ಪ ಇವುಗಳನ್ನೇ ವಾಹನಗಳನ್ನಾಗಿಸಿಕೊಂಡು ಆಕಾಶದಲ್ಲಿ ಅವಕಾಶವೇ ಇಲ್ಲದ ರೀತಿಯಿಂದ ರಾವಣನ ಸೈನ್ಯ ಪ್ರಯಾಣಮಾಡುತ್ತಿದ್ದರು.॥36½॥
ಮೂಲಮ್ - 37½
ದೈತ್ಯಾಶ್ಚ ಶತಶಸ್ತತ್ರ ಕೃತವೈರಾಶ್ಚ ದೈವತೈಃ ॥
ರಾವಣಂ ಪ್ರೇಕ್ಷ್ಯ ಗಚ್ಛಂತಮನ್ವಗಚ್ಛನ್ಹಿ ಪೃಷ್ಠತಃ ।
ಮೂಲಮ್ - 38½
ಸ ತು ಗತ್ವಾ ಮಧುಪುರಂ ಪ್ರವಿಶ್ಯ ಚ ದಶಾನನಃ ॥
ನ ದದರ್ಶ ಮಧುಂ ತತ್ರ ಭಗಿನೀಂ ತತ್ರ ದೃಷ್ಟವಾನ್ ।
ಅನುವಾದ
ರಾವಣನು ದೇವಲೋಕವನ್ನು ಆಕ್ರಮಿಸಲು ಹೋಗುತ್ತಿರುವುದನ್ನು ನೋಡಿ ದೇವತೆಗಳ ಬದ್ಧವೈರಿಗಳಾದ ನೂರಾರು ದೈತ್ಯರೂ ಅವನನ್ನು ಹಿಂಬಾಲಿಸಿದರು.॥37½-38½॥
ಮೂಲಮ್ - 39½
ಸಾ ಚ ಪ್ರಹ್ವಾಂಜಲಿರ್ಭೂತ್ವಾ ಶಿರಸಾ ಚರಣೌ ಗತಾ ॥
ತಸ್ಯ ರಾಕ್ಷಸರಾಜಸ್ಯ ತ್ರಸ್ತಾ ಕುಂಭೀನಸೀ ತದಾ ।
ಅನುವಾದ
ಮಧುಪುರಿಗೆ ಹೋದರಾವಣನು ಕುಂಭೀನಸಿಯನ್ನು ನೋಡಿದನು, ಆದರೆ ಮಧುವಿನ ದರ್ಶನವಾಗಲಿಲ್ಲ. ಆಗ ಕುಂಭೀನಸಿಯು ಭಯಗೊಂಡು ಕೈಮುಗಿದು ರಾಕ್ಷಸರಾಜ ರಾವಣನ ಕಾಲಿಗೆರಗಿದಳು.॥39½॥
ಮೂಲಮ್ - 40½
ತಾಂ ಸಮುತ್ಥಾಪಯಾಮಾಸ ನ ಭೇತವ್ಯಮಿತಿ ಬ್ರುವನ್ ।
ರಾವಣೋ ರಾಕ್ಷಸಶ್ರೇಷ್ಠಃ ಕಿಂ ಚಾಪಿ ಕರವಾಣಿ ತೇ ॥
ಅನುವಾದ
ಆಗ ರಾವಣನು ‘ಹೆದರಬೇಡ’ ಎಂದು ಹೇಳಿ ಕುಂಭೀನಸಿಯನ್ನು ಎತ್ತಿ ನಾನು ನಿನ್ನ ಯಾವ ಪ್ರಿಯಕಾರ್ಯವನ್ನು ಮಾಡಲೀ ಎಂದು ಕೇಳಿದನು.॥40½॥
ಮೂಲಮ್ - 41
ಸಾಬ್ರವೀದ್ಯದಿ ಮೇ ರಾಜನ್ ಪ್ರಸನ್ನಸ್ತ್ವಂ ಮಹಾಭುಜ ॥
ಮೂಲಮ್ - 42½
ಭರ್ತಾರಂ ನ ಮಮೇಹಾದ್ಯ ಹಂತುಮರ್ಹಸಿ ಮಾನದ ।
ನಹೀ ದೃಶಂ ಭಯಂ ಕಿಂಚಿತ್ ಕುಲಸ್ತ್ರೀಣಾಮಿಹೋಚ್ಯತೇ ॥
ಭಯಾನಾಮಪಿ ಸರ್ವೇಷಾಂ ವೈಧವ್ಯಂ ವ್ಯಸನಂ ಮಹತ್ ।
ಅನುವಾದ
ಕುಂಭೀನಸೀ ಹೇಳಿದಳು - ಬೇರೆಯವರಿಗೆ ಮಾನ ಕೊಡುವ ಮಹಾಬಾಹುವೇ ! ನೀನು ನನ್ನ ಮೇಲೆ ಪ್ರಸನ್ನ ನಾಗಿದ್ದರೆ ನನ್ನ ಪತಿಯನ್ನು ವಧಿಸಬೇಡ; ಏಕೆಂದರೆ ಕುಲ ವಧುಗಳಿಗೆ ವೈಧವ್ಯದಂತಹ ಬೇರೆ ಯಾವುದೇ ಭಯವಿಲ್ಲ. ವೈಧವ್ಯವೇ ನಾರಿಗೆ ಎಲ್ಲಕ್ಕಿಂತ ದೊಡ್ಡ ಸಂಕಟವಾಗಿದೆ.॥41-42½॥
ಮೂಲಮ್ - 43½
ಸತ್ಯವಾಗ್ಭವ ರಾಜೇಂದ್ರಮಾಮವೇಕ್ಷಸ್ಯ ಯಾಚತೀಮ್ ॥
ತ್ವಯಾಪ್ಯುಕ್ತಂ ಮಹಾರಾಜ ನ ಭೇತವ್ಯಮಿತಿ ಸ್ವಯಮ್ ।
ಅನುವಾದ
ರಾಜೇಂದ್ರನೇ! ನೀನು ಸತ್ಯವಾದಿಯಾಗಿರುವೆ. ತನ್ನ ಮಾತನ್ನು ನಿಜಗೊಳಿಸು. ನಾನು ನಿನ್ನಲ್ಲಿ ಪತಿಭಿಕ್ಷೆಯನ್ನು ಬೇಡುತ್ತಿದ್ದೇನೆ. ದುಃಖಿತೆಯಾದ ನಿನ್ನ ತಂಗಿಯನ್ನು ನೋಡಿ ನನ್ನ ಮೇಲೆ ಕೃಪೆದೋರು. ಮಹಾರಾಜನೇ! ‘ಹೆದರಬೇಡ’ ಎಂದು ನೀನೇ ಹೇಳಿರುವೆ. ಆ ಮಾತನ್ನು ನಡೆಸಿಕೊಡು.॥43½॥
ಮೂಲಮ್ - 44
ರಾವಣಸ್ತ್ವಬ್ರವೀದ್ಧೃಷ್ಟಃ ಸ್ವಸಾರಂ ತತ್ರ ಸಂಸ್ಥಿತಾಮ್ ॥
ಮೂಲಮ್ - 45
ಕ್ವ ಚಾಸೌ ತವ ಭರ್ತಾ ವೈ ಮಮ ಶೀಘ್ರಂನಿವೇದ್ಯತಾಮ್ ।
ಸಹ ತೇನ ಗಮಿಷ್ಯಾಮಿ ಸುರಲೋಕಂ ಜಯಾಯ ಹಿ ॥
ಅನುವಾದ
ಇದನ್ನು ಕೇಳಿ ರಾವಣನಿಗೆ ಸಂತೋಷವಾಯಿತು. ನಿನ್ನ ಪತಿ ಎಲ್ಲಿದ್ದಾನೆ? ಎಂದು ತಂಗಿಯ ಬಳಿ ಕೇಳಿದನು. ಅವನನ್ನು ಬೇಗನೇ ಕರೆದು ತಾ. ಅವನನ್ನು ಜೊತೆಗೆ ಕರೆದುಕೊಂಡು ದೇವಲೋಕಕ್ಕೆ ವಿಜಯಕ್ಕಾಗಿ ಹೋಗುವೆನು.॥44-4.॥
ಮೂಲಮ್ - 46½
ತವ ಕಾರುಣ್ಯ ಸೌಹಾರ್ದಾನ್ನಿವೃತ್ತೋಽಸ್ಮಿ ಮಧೋರ್ವಧಾತ್ ।
ಇತ್ಯುಕ್ತಾ ಸಾ ಸಮುತ್ಥಾಪ್ಯ ಪ್ರಸುಪ್ತಂ ತಂ ನಿಶಾಚರಮ್ ॥
ಅಬ್ರವೀತ್ಸಂ ಪ್ರಹೃಷ್ಟೇವ ರಾಕ್ಷಸೀ ಸಾ ಪತಿಂ ವಚಃ ।
ಅನುವಾದ
ನಿನ್ನ ಕುರಿತಾದ ಸೌಹಾರ್ದದಿಂದಾಗಿ ಮಧುವನ್ನು ಕೊಲ್ಲುವ ವಿಚಾರ ನಾನು ಬಿಟ್ಟಿರುವೆನು. ರಾವಣನು ಹೀಗೆ ಹೇಳಿದಾಗ ರಾಕ್ಷಸಕನ್ಯೆ ಕುಂಭೀನಸಿಯು ಸಂತೋಷಗೊಂಡು ಮಲಗಿದ್ದ ತನ್ನ ಪತಿಯ ಬಳಿಗೆ ಹೋಗಿ, ಅವನನ್ನು ಎಬ್ಬಿಸಿ ಹೇಳಿದಳು.॥46½॥
ಮೂಲಮ್ - 47
ಏಷ ಪ್ರಾಪ್ತೋ ದಶಗ್ರೀವೋ ಮಮ ಭ್ರಾತಾ ಮಹಾಬಲಃ ॥
ಮೂಲಮ್ - 48
ಸುರಲೋಕ ಜಯಾಕಾಂಕ್ಷೀ ಸಾಹಾಯ್ಯೇ ತ್ವಾಂ ವೃಣೋತಿ ಚ ।
ತದಸ್ಯ ತ್ವಂ ಸಹಾಯಾರ್ಥಂ ಸಬಂಧುರ್ಗಚ್ಛ ರಾಕ್ಷಸ ॥
ಅನುವಾದ
ರಾಕ್ಷಸಶ್ರೇಷ್ಠನೇ! ನನ್ನ ಅಣ್ಣನಾದ ಮಹಾಬಲಿ ದಶಗ್ರೀವನು ಆಗಮಿಸಿರುವನು. ದೇವಲೋಕವನ್ನು ಜಯಿಸುವ ಇಚ್ಛೆಯಿಂದ ಹೊರಟಿರುವನು. ಇದಕ್ಕಾಗಿ ನಿಮ್ಮನ್ನು ಸಹಾಯಕನಾಗಿಸಲು ಬಯಸುತ್ತಿರುವನು. ಆದ್ದರಿಂದ ನೀವು ತಮ್ಮ ಬಂಧು-ಬಾಂಧವರೊಂದಿಗೆ ಅವನ ಸಹಾಯಕ್ಕೆ ಹೊರಡಿರಿ.॥47-48॥
ಮೂಲಮ್ - 49
ಸ್ನಿಗ್ಧಸ್ಯ ಭಜಮಾನಸ್ಯ ಯುಕ್ತಮರ್ಥಾಯ ಕಲ್ಪಿತುಮ್ ।
ತಸ್ಯಾಸ್ತದ್ವಚನಂ ಶ್ರುತ್ವಾ ತಥೇತ್ಯಾಹ ಮಧುರ್ವಚಃ ॥
ಅನುವಾದ
ನನ್ನಿಂದಾಗಿ ನಿಮ್ಮ ಮೇಲೆ ಸ್ನೇಹವಿದೆ, ನಿಮ್ಮನ್ನು ಅಳಿಯನೆಂದು ತಿಳಿದು ನಿಮ್ಮ ಕುರಿತು ಅನುರಾಗ ಇಟ್ಟಿರುವನು. ಆದ್ದರಿಂದ ನೀವು ಅವನ ಕಾರ್ಯಸಿದ್ಧಿಗಾಗಿ ಸಹಾಯಮಾಡಬೇಕು. ಪತ್ನಿಯ ಈ ಮಾತನ್ನು ಕೇಳಿ ಮಧು ಹಾಗೆಯೇ ಆಗಲೀ ಎಂದು ಹೇಳಿ ಸಹಾಯಕ್ಕಾಗಿ ಒಪ್ಪಿಕೊಂಡನು.॥49॥
ಮೂಲಮ್ - 50
ದದರ್ಶ ರಾಕ್ಷಸಶ್ರೇಷ್ಠಂ ಯಥಾನ್ಯಾಯಮುಪೇತ್ಯ ಸಃ ।
ಪೂಜಯಾಮಾಸ ಧರ್ಮೇಣ ರಾವಣಂ ರಾಕ್ಷಸಾಧಿಪಮ್ ॥
ಅನುವಾದ
ಮತ್ತೆ ಅವನು ನ್ಯಾಯೋಚಿತ ರೀತಿಯಾಗಿ ನಿಶಾಚರಶ್ರೇಷ್ಠ ರಾವಣನನ್ನು ಭೆಟ್ಟಿಯಾದನು ಹಾಗೂ ಅವನಿಗೆ ಧರ್ಮಕ್ಕನುಸಾರ ಸ್ವಾಗತ - ಸತ್ಕಾರ ಮಾಡಿದನು.॥50॥
ಮೂಲಮ್ - 51
ಪ್ರಾಪ್ಯ ಪೂಜಾಂ ದಶಗ್ರೀವೋ ಮಧುವೇಶ್ಮನಿ ವೀರ್ಯವಾನ್ ।
ತತ್ರ ಚೈಕಾಂ ನಿಶಾಮುಷ್ಯ ಗಮನಾಯೋಪಚಕ್ರಮೇ ॥
ಅನುವಾದ
ಮಧುವಿನ ನಿವಾಸದಲ್ಲಿ ಯಥೋಚಿತ ಸತ್ಕಾರ ಪಡೆದು ಪರಾಕ್ರಮಿ ದಶಗ್ರೀವನು ಒಂದು ರಾತ್ರೆ ಅಲ್ಲಿ ಇದ್ದು, ಬೆಳಿಗ್ಗೆ ಎದ್ದು ಅಲ್ಲಿಂದ ಹೊರಟನು.॥51॥
ಮೂಲಮ್ - 52
ತತಃ ಕೈಲಾಸಮಾಸಾದ್ಯ ಶೈಲಂ ವೈಶ್ರವಣಾಲಯಮ್ ।
ರಾಕ್ಷಸೇಂದ್ರೋ ಮಹೇಂದ್ರಾಭಃ ಸೇನಾಮುಪ ನಿವೇಶಯತ್ ॥
ಅನುವಾದ
ಮಧುಪುರಿಯಿಂದ ಪ್ರಯಾಣ ಮಾಡುತ್ತಾ ಮಹೇಂದ್ರತುಲ್ಯ ಪರಾಕ್ರಮಿ ರಾಕ್ಷಸೇಶ್ವರ ರಾವಣನು ಸಾಯಂಕಾಲದೊಳಗೆ ಕುಬೇರನ ಸ್ಥಾನವಾದ ಕೈಲಾಸಕ್ಕೆ ತಲುಪಿದನು. ಅಲ್ಲೆ ಸೈನ್ಯವು ಬೀಡುಬಿಟ್ಟಿತು.॥52॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗ ಪೂರ್ಣವಾಯಿತು. ॥25॥