[ಇಪ್ಪತ್ತನಾಲ್ಕನೆಯ ಸರ್ಗ]
ಭಾಗಸೂಚನಾ
ರಾವಣನಿಂದ ಅಪಹೃತರಾದ ದೇವಾದಿಗಳ ಕನ್ಯೆಯರ ಗೋಳಾಟ ಮತ್ತು ಶಾಪ, ಪತಿಯನ್ನು ಕಳೆದುಕೊಂಡ ಶೂರ್ಪಣಖೆಗೆ ರಾವಣನ ಆಶ್ವಾಸನೆ, ಖರನೊಡನೆ ಆಕೆಯನ್ನು ದಂಡಕಾರಣ್ಯಕ್ಕೆ ಕಳಿಸಿದುದು
ಮೂಲಮ್ - 1
ನಿವರ್ತಮಾನಃ ಸಂಹೃಷ್ಟೋ ರಾವಣಃ ಸ ದುರಾತ್ಮವಾನ್ ।
ಜಹ್ರೇ ಪಥಿ ನರೇಂದ್ರರ್ಷಿ ದೇವದಾನವ ಕನ್ಯಕಾಃ ॥
ಅನುವಾದ
ಜಯಗಳಿಸಿ ಹರ್ಷದಿಂಗ ಹಿಂದಿರುಗುವಾದ ದುರಾತ್ಮನಾದ ರಾವಣನು ದಾರಿಯಲ್ಲಿ ಅನೇಕ ರಾಜರ, ಋಷಿಗಳ, ದೇವ-ದಾನವರ ಕನ್ಯೆಯನ್ನು ಅಪಹರಿಸಿತಂದನು.॥1॥
ಮೂಲಮ್ - 2
ದರ್ಶನೀಯಾಂ ಹಿ ಯಾಂ ರಕ್ಷಃ ಕನ್ಯಾಂ ಸ್ತ್ರೀಂ ವಾಥ ಪಶ್ಯತಿ ।
ಹತ್ವಾ ಬಂಧುಜನಂ ತಸ್ಯಾ ವಿಮಾನೇ ತಾಂ ರುರೋಧ ಸಃ ॥
ಅನುವಾದ
ಕ್ರೂರಿಯಾದ ರಾವಣನು ದರ್ಶನೀಯಳಾದ ರೂಪವತಿ ಕನ್ಯೆಯನ್ನು, ಯುವತಿಯನ್ನು ನೋಡುತ್ತಿದ್ದನೋ, ಅವರೆಲ್ಲರ ಬಂಧು-ಬಾಂಧವರನ್ನು ಕೊಂದು ವಿಮಾನದಲ್ಲಿ ಕುಳ್ಳಿರಿಸಿ ಕರೆತರುತ್ತಿದ್ದನು.॥2॥
ಮೂಲಮ್ - 3
ಏವಂ ಪನ್ನಗಕನ್ಯಾಶ್ಚ ರಾಕ್ಷಸಾಸುರಮಾನುಷೀಃ ।
ಯಕ್ಷದಾನವಕನ್ಯಾಶ್ಚ ವಿಮಾನೇ ಸೋಽಧ್ಯರೋಪಯತ್ ॥
ಅನುವಾದ
ಹೀಗೆ ಅವನು ನಾಗಗಳ, ರಾಕ್ಷಸರ, ಅಸುರರ, ಮನುಷ್ಯರ, ಯಕ್ಷರ, ದಾನವರ ಹೀಗೆ ಅನೇಕ ಕನ್ಯೆಯರನ್ನು ಅಪಹರಿಸಿ ವಿಮಾನದಲ್ಲಿ ಕುಳ್ಳಿರಿಸಿ ಲಂಕೆಗೆ ತಂದನು.॥3॥
ಮೂಲಮ್ - 4
ತಾ ಹಿ ಸರ್ವಾಃ ಸಮಂ ದುಃಖಾನ್ಮುಮುಚುರ್ಭಾಷ್ಪಜಂ ಜಲಮ್ ।
ತುಲ್ಯ ಮಗ್ನ್ಯರ್ಚಿಷಾಂ ತತ್ರ ಶೋಕಾಗ್ನಿಭಯ ಸಂಭವಮ್ ॥
ಅನುವಾದ
ಅವರೆಲ್ಲರೂ ಒಟ್ಟಿಗೆ ದುಃಖದಿಂದ ಕಂಬನಿ ಹರಿಸತೊಡಗಿದರು. ಶೋಕಾಗ್ನಿ ಮತ್ತು ಭಯದಿಂದ ಹರಿಯುವ ಆ ಕಂಬನಿಯ ಒಂದೊಂದು ತೊಟ್ಟೂ ಕೂಡ ಬೆಂಕಿಯ ಕಿಡಿಗಳಂತೆ ಅನಿಸುತ್ತಿದ್ದವು.॥4॥
ಮೂಲಮ್ - 5
ತಾಭಿಃ ಸರ್ವಾನವದ್ಯಾಭಿರ್ನದೀಭಿರಿವ ಸಾಗರಃ ।
ಆಪೂರಿತಂ ವಿಮಾನಂ ತದ್ಭಯ ಶೋಕಾಶಿವಾಶ್ರುಭಿಃ ॥
ಅನುವಾದ
ನದಿಗಳು ಸಮುದ್ರವನ್ನು ತುಂಬುವಂತೆ ಆ ಸಮಸ್ತ ಸುಂದರಿಯರ ಭಯ-ಶೋಕದಿಂದ ಉಂಟಾದ ಅಮಂಗಲಕರ ಕಣ್ಣೀರಿನಿಂದ ಆ ವಿಮಾನ ತುಂಬಿಹೋಯಿತು.॥5॥
ಮೂಲಮ್ - 6
ನಾಗಗಂಧರ್ವ ಕನ್ಯಾಶ್ಚ ಮಹರ್ಷಿತನಯಾಶ್ಚ ಯಾಃ ।
ದೈತ್ಯದಾನವ ಕನ್ಯಾಶ್ಚ ವಿಮಾನೇ ಶತಶೋಽರುದನ್ ॥
ಅನುವಾದ
ನಾಗಗಳ, ಗಂಧರ್ವರ, ಮಹರ್ಷಿಗಳ, ದೈತ್ಯ-ದಾನವರ ನೂರಾರು ಕನ್ಯೆಯರು ಆ ವಿಮಾನದಲ್ಲಿ ಅಳುತ್ತಿದ್ದರು.॥6॥
ಮೂಲಮ್ - 7
ದೀರ್ಘಕೇಶ್ಯಃ ಸುಚಾರ್ವಂಗ್ಯಃ ಪೂರ್ಣಚಂದ್ರ ನಿಭಾನನಾಃ ।
ಪೀನಸ್ತನತಟಾ ಮಧ್ಯೇ ವಜ್ರವೇದಿ ಸಮಪ್ರಭಾಃ ॥
ಮೂಲಮ್ - 8
ರಥಕೂಬರ ಸಂಕಾಶೈಃ ಶ್ರೋಣೀದೇಶೈರ್ಮನೋಹರಾಃ ।
ಸ್ತ್ರಿಯಃ ಸುರಾಂಗನಾಪ್ರಖ್ಯಾ ನಿಷ್ಟಪ್ತಕನಕಪ್ರಭಾಃ ॥
ಅನುವಾದ
ಅವರೆಲ್ಲರಿಗೂ ನೀಳವಾದ ಕೂದಲುಗಳಿದ್ದು, ಎಲ್ಲ ಅಂಗಾಂಗಗಳು ಸುಂದರ, ಮನೋಹರವಾಗಿದ್ದವು. ಚಂದ್ರನನ್ನು ನಾಚಿಸುವಂತಹ ಮುಖಕಾಂತಿಯಿಂದ ಕೂಡಿದ್ದು, ಉಬ್ಬಿದ ಸ್ತನಗಳು ಆಕರ್ಷಕವಾಗಿದ್ದವು. ಶರೀರದ ಮಧ್ಯಭಾಗವು ವಜ್ರದ ವೇದಿಕೆಯಂತಿದ್ದು, ನಿತಂಬಗಳು ರಥದ ಮೂಕಿಯಂತೆ ಪ್ರಕಾಶಿಸುತ್ತಿದ್ದವು. ಮನೋಹರವಾದ ಆ ಸ್ತ್ರೀಯರು ದೇವಾಂಗನೆಯರಂತೆ ಕಾಂತಿಯುಕ್ತರಾಗಿದ್ದು, ಅವರ ಶರೀರಗಳು ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದವು.॥7-8॥
ಮೂಲಮ್ - 9½
ಶೋಕ ದುಃಖ ಭಯತ್ರಸ್ತಾ ವಿಹ್ವಲಾಶ್ಚ ಸುಮಧ್ಯಮಾಃ ।
ತಾಸಾಂ ನಿಃಶ್ವಾಸವಾತೇನ ಸರ್ವತಃ ಸಂಪ್ರದೀಪಿತಮ್ ॥
ಅಗ್ನಿಹೋತ್ರಮಿವಾಭಾತಿ ಸಂನಿರುದ್ಧಾಗ್ನಿ ಪುಷ್ಪಕಮ್ ।
ಅನುವಾದ
ಸುಂದರ ನಡುಪ್ರದೇಶ ಹೊಂದಿದ್ದ ಆ ಎಲ್ಲ ಸುಂದರಿಯರು ಶೋಕ-ದುಃಖ-ಭಯದಿಂದ ವಿಹ್ವಲರಾಗಿದ್ದರು. ಅವರ ಬಿಸಿಯಾದ ನಿಟ್ಟುಸಿರಿನಿಂದ ಆ ಪುಷ್ಪಕ ವಿಮಾನವು ಪ್ರಜ್ವಲಿಸುತ್ತಾ ಉರಿಯುತ್ತಿದ್ದ ಅಗ್ನಿಹೋತ್ರದ ಯಜ್ಞಶಾಲೆಯಂತೆ ಕಂಡು ಬರುತ್ತಿತ್ತು.॥9½॥
ಮೂಲಮ್ - 10½
ದಶಗ್ರೀವ ವಶಂ ಪ್ರಾಪ್ತಾಸ್ತಾಸ್ತು ಶೋಕಾಕುಲಾಃ ಸ್ತ್ರಿಯಃ ॥
ದೀನವಕ್ತ್ರೇಕ್ಷಣಾಃ ಶ್ಯಾಮಾ ಮೃಗ್ಯಃ ಸಿಂಹವಶಾ ಇವ ।
ಅನುವಾದ
ದಶಗ್ರೀವನ ಸೆರೆಯಲ್ಲಿ ಸಿಕ್ಕಿದ ಶೋಕಾಕುಲ ಅಬಲೆಯರು ಸಿಂಹದ ಸೆರೆಯಲ್ಲಿ ಸಿಕ್ಕಿದ ಜಿಂಕೆಗಳಂತೆ ದುಃಖಿತೆಯರಾಗಿದ್ದರು. ಮುಖಗಳಲ್ಲಿ, ಕಣ್ಣುಗಳಲ್ಲಿ ದೀನತೆ ಆವರಿಸಿತ್ತು. ಅವರೆಲ್ಲರ ವಯಸ್ಸು ಹದಿನಾರರಂತೆ ಇತ್ತು.॥10½॥
ಮೂಲಮ್ - 11½
ಕಾಚಿಚ್ಚಿಂತಯತೀ ತತ್ರ ಕಿಂ ನು ಮಾಂ ಭಕ್ಷಯಿಷ್ಯತಿ ॥
ಕಾಚಿದ್ದಧ್ಯೌ ಸುದುಃಖಾರ್ತಾ ಅಪಿ ಮಾಂ ಮಾರಯೇದಯಮ್ ।
ಅನುವಾದ
ಈ ರಾಕ್ಷಸನು ನನ್ನನ್ನು ತಿಂದುಬಿಡುವನೋ ಎಂದು ಕೆಲವರು ಅತ್ಯಂತ ದುಃಖಿತೆಯರಾಗಿದ್ದರೆ, ಕೆಲವರು ಇವನು ನನ್ನನ್ನು ಕೊಂದುಬಿಡುವನೋ ಎಂದು ಆರ್ತರಾಗಿ ಚಿಂತೆಯಲ್ಲಿ ಮುಳುಗಿದ್ದರು.॥11½॥
ಮೂಲಮ್ - 12½
ಇತಿ ಮಾತೃಃ ಪಿತೃನ್ ಸ್ಮೃತ್ವಾ ಭರ್ತೃನ್ ಭ್ರಾತೃಸ್ತಥೈವ ಚ ॥
ದುಃಖಶೋಕಸಮಾವಿಷ್ಟಾ ವಿಲೇಪುಃ ಸಹಿತಾಃ ಸ್ತ್ರಿಯಃ ।
ಅನುವಾದ
ಆ ಸ್ತ್ರೀಯರು ತಂದೆ-ತಾಯಿ ಪತಿ-ಸಹೋದರರನ್ನು ನೆನೆಯುತ್ತಾ ದುಃಖಶೋಕದಲ್ಲಿ ಮುಳುಗಿ ಒಟ್ಟಿಗೆ ಕರುಣಾ ಜನಕ ವಿಲಾಪ ಮಾಡುತ್ತಿದ್ದರು.॥12½॥
ಮೂಲಮ್ - 13½
ಕಥಂ ನು ಖಲು ಮೇ ಪುತ್ರೋ ಭವಿಷ್ಯತಿ ಮಯಾ ವಿನಾ ॥
ಕಥಂ ಮಾತಾ ಕಥಂ ಭ್ರಾತಾ ನಿಮಗ್ನಾಃ ಶೋಕಸಾಗರೇ ।
ಅನುವಾದ
ಅಯ್ಯೋ! ನಾನಿಲ್ಲದೆ ನನ್ನ ಪುಟ್ಟ ಮಗು ಏನು ಮಾಡುತ್ತಿದೆಯೋ, ನನ್ನ ತಾಯಿ ಸ್ಥಿತಿ ಏನಾಗಿದೆಯೋ, ನನ್ನ ಅಣ್ಣ-ತಮ್ಮಂದಿರು ಎಷ್ಟು ಚಿಂತಿತರಾಗಿರುವರೋ, ಎಂಬ ಶೋಕಸಾಗರದಲ್ಲಿ ಮುಳುಗಿದ್ದರು.॥13½॥
ಮೂಲಮ್ - 14
ಹಾ ಕಥಂ ನು ಕರಿಷ್ಯಾಮಿ ಭರ್ತುಸ್ತಸ್ಮಾದಹಂ ವಿನಾ ।
ಮೃತ್ಯೋ ಪ್ರಸಾದಯಾಮಿ ತ್ವಾಂ ನಯ ಮಾಂ ದುಃಖಭಾಗಿನೀಮ್ ॥
ಮೂಲಮ್ - 15
ಕಿಂ ನು ತದ್ದುಷ್ಕೃತಂ ಕರ್ಮ ಪುರಾ ದೇಹಾಂತರೇ ಕೃತಮ್ ॥
ಮೂಲಮ್ - 16
ಏವಂ ಸ್ಮ ದುಃಖಿತಾಃ ಸರ್ವಾಃ ಪತಿತಾಃ ಶೋಕಸಾಗರೇ ।
ನ ಖಲ್ವಿದಾನೀಂ ಪಶ್ಯಾಮೋ ದುಃಖಸ್ಯಾಸ್ಯಾಂತಮಾತ್ಮನಃ ॥
ಅನುವಾದ
ಅಯ್ಯೋ! ನನ್ನ ಪತಿಯಿಂದ ಅಗಲಿ ನಾನೇನು ಮಾಡಲಿ? ಎಲೈ ಮೃತ್ಯುವೇ! ನೀನು ಪ್ರಸನ್ನನಾಗಿ ದುಃಖಿತೆಯಾದ ನನ್ನನ್ನು ಕರೆದುಕೊಂಡು ಹೋಗು ಎಂದು ಪ್ರಾರ್ಥಿಸುತ್ತಿದ್ದರು. ಅಯ್ಯೋ! ಹಿಂದಿನ ಜನ್ಮದಲ್ಲಿ ಯಾವ ಪಾಪ ಮಾಡಿ ಈಗ ಇಂತಹ ದುಃಖದಿಂದ ಪೀಡಿತರಾಗಿ ಶೋಕಸಮುದ್ರದಲ್ಲಿ ಬಿದ್ದಿರುವೆವು. ಈಗ ನಾವು ಈ ದುಃಖದಿಂದ ಬಿಡುಗಡೆ ಖಂಡಿತವಾಗಿ ಕಾಣುವುದಿಲ್ಲ.॥14-16॥
ಮೂಲಮ್ - 17½
ಅಹೋ ಧಿಙ್ಮಾನುಷಂ ಲೋಕಂ ನಾಸ್ತಿ ಖಲ್ವಧಮಃ ಪರಃ ।
ಯದ್ದುರ್ಬಲಾ ಬಲವತಾ ಭರ್ತಾರೋ ರಾವಣೇನ ನಃ ॥
ಸೂರ್ಯೇಣೋದಯತಾ ಕಾಲೇ ನಕ್ಷತ್ರಾಣೀವ ನಾಶಿತಾಃ ।
ಅನುವಾದ
ಈ ಮನುಷ್ಯಲೋಕಕ್ಕೆ ಧಿಕ್ಕಾರವಿರಲಿ. ಇದಕ್ಕಿಂತ ಮಿಗಿಲಾದ ಅಧಮಲೋಕ ಬೇರೊಂದು ಇರಲಾರದು; ಏಕೆಂದರೆ ಇಲ್ಲಿ ಈ ಬಲಿಷ್ಠ ರಾವಣನು ನಮ್ಮ ದುರ್ಬಲ ಪತಿಗಳನ್ನು, ಸೂರ್ಯನು ಉದಯಿಸಿ ನಕ್ಷತ್ರಗಳನ್ನು ಮರೆಮಾಡುವಂತೆಯೇ ನಾಶಪಡಿಸಿಬಿಟ್ಟನು.॥17½॥
ಮೂಲಮ್ - 18½
ಅಹೋ ಸುಬಲವದ್ದ್ರಕ್ಷೋ ವಧೋಪಾಯೇಷು ರಜ್ಯತೇ ॥
ಅಹೋ ದುರ್ವೃತ್ತಮಾಸ್ಥಾಯ ನಾತ್ಮಾನಂ ವೈ ಜುಗುಪ್ಸತೇ ।
ಅನುವಾದ
ಬಲಿಷ್ಠನಾಗಿರುವ ಈ ರಾಕ್ಷಸನಾದರೋ ಇತರರನ್ನು ಸಂಹರಿಸುವುದರಲ್ಲೇ ಆಸಕ್ತನಾಗಿರುತ್ತಾನೆ. ಈ ಪಾಪಿಷ್ಠನು ದುರಾಚಾರದಲ್ಲಿ ತೊಡಗಿದ್ದರೂ ನಾಚಿಕೆ ಪಡುತ್ತಿಲ್ಲ.॥18½॥
ಮೂಲಮ್ - 19½
ಸರ್ವಥಾ ಸದೃಶಸ್ತಾವದ್ ವಿಕ್ರಮೋಽಸ್ಯ ದುರಾತ್ಮನಃ ॥
ಇದಂ ತ್ವಸದೃಶಂ ಕರ್ಮ ಪರದಾರಾಭಿಮರ್ಶನಮ್ ।
ಅನುವಾದ
ದುರಾತ್ಮನಾದ ಇವನ ಪರಾಕ್ರಮವು ಇವನು ಮಾಡಿರುವ ತಪಸ್ಸಿಗನುರೂಪವೇ ಆಗಿದೆ. ಆದರೆ ಪರಸ್ತ್ರೀಯರ ಬಲಾತ್ಕಾರವಾದ ದುಷ್ಕರ್ಮವು ಇವನಿಗೆ ಎಂದಿಗೂ ಯೋಗ್ಯವಲ್ಲ.॥19½॥
ಮೂಲಮ್ - 20½
ಯಸ್ಮಾದೇಷ ಪರಕ್ಯಾಸು ರಮತೇ ರಾಕ್ಷಸಾಧಮಃ ॥
ತಸ್ಮಾದ್ವೈ ಸ್ತ್ರೀಕೃತೇನೈವ ವಧಂ ಪ್ರಾಪ್ಸ್ಯತಿ ದುರ್ಮತಿಃ ।
ಅನುವಾದ
ಈ ನೀಚ ನಿಶಾಚರನು ಪರಸ್ತ್ರೀಯರೊಂದಿಗೆ ರಮಿಸುತ್ತಿದ್ದಾನೆ, ಅದರಿಂದ ಸ್ತ್ರೀಯ ಕಾರಣದಿಂದಲೇ ಈ ದುರ್ಬುದ್ಧಿ ರಾಕ್ಷಸನ ವಧೆಯಾಗುವುದು.॥20½॥
ಮೂಲಮ್ - 21½
ಸತೀಭಿರ್ವರನಾರೀಭಿರೇವಂ ವಾಕ್ಯೇಽಭ್ಯುದೀರಿತೇ ॥
ದೇವದುಂದುಭಯಃ ಖಸ್ಥಾಃ ಪುಷ್ಪವೃಷ್ಟಿಃ ಪಪಾತ ಚ ।
ಅನುವಾದ
ಆ ಶ್ರೇಷ್ಠ ಸತಿ-ಸಾಧ್ವೀ ನಾರಿಯರು ಹೀಗೆ ಶಪಿಸಿದಾಗ ಆಕಾಶದಲ್ಲಿ ದೇವ ದುಂದುಭಿಗಳು ಮೊಳಗಿದವು. ಪುಷ್ಪವೃಷ್ಟಿ ಆಗತೊಡಗಿತು.॥21½॥
ಮೂಲಮ್ - 22½
ಶಪ್ತಃ ಸ್ತ್ರೀಭಿಃ ಸ ತು ಸಮಂ ಹತೌಜಾ ಇವ ನಿಷ್ಪ್ರಭಃ ॥
ಪತಿವ್ರತಾಭಿಃ ಸಾಧ್ವೀಭಿರ್ಬಭೂವ ವಿಮನಾ ಇವ ।
ಅನುವಾದ
ಪತಿವ್ರತಾ ಸಾಧ್ವೀ ಸ್ತ್ರೀಯರು ಈ ರೀತಿ ಶಪಿಸಿದಾಗ ರಾವಣನ ಶಕ್ತಿ ಕುಂದಿಹೋಯಿತು. ಅವನು ನಿಸ್ತೇಜದಂತಾಗಿ ಅವನ ಮನಸ್ಸಿನಲ್ಲಿ ಉದ್ವೇಗ ಉಂಟಾಯಿತು.॥22½॥
ಮೂಲಮ್ - 23½
ಏವಂ ವಿಲಪಿತಂ ತಾಸಾಂ ಶೃಣ್ವನ್ ರಾಕ್ಷಸಪುಂಗವಃ ॥
ಪ್ರವಿವೇಶ ಪುರೀಂ ಲಂಕಾಂ ಪೂಜ್ಯಮಾನೋ ನಿಶಾಚರೈಃ ।
ಅನುವಾದ
ಹೀಗೆ ಅವರ ವಿಲಾಪವನ್ನು ಕೇಳುತ್ತಾ ರಾಕ್ಷಸಶ್ರೇಷ್ಠ ರಾವಣನು ನಿಶಾಚರರಿಂದ ಸತ್ಕೃತನಾಗಿ ಲಂಕಾಪುರಿಯನ್ನು ಪ್ರವೇಶಿಸಿದನು.॥23½॥
ಮೂಲಮ್ - 24½
ಏತಸ್ಮಿನ್ನಂತರೇ ಘೋರಾ ರಾಕ್ಷಸೀ ಕಾಮರೂಪಿಣೀ ॥
ಸಹಸಾ ಪತಿತಾ ಭೂಮೌ ಭಗಿನೀ ರಾವಣಸ್ಯ ಸಾ ।
ಅನುವಾದ
ಆಗಲೇ ಕಾಮರೂಪಿಯಾದ ರಾವಣನ ತಂಗೀ ಭಯಂಕರ ರಾಕ್ಷಸೀ ಶೂರ್ಪಣಖೆಯು ರಾವಣನ ಎದುರಿಗೆ ಬಂದು ನೆಲಕ್ಕೆ ಬಿದ್ದುಬಿಟ್ಟಳು.॥24½॥
ಮೂಲಮ್ - 25½
ತಾಂ ಸ್ವಸಾರಂ ಸಮುತ್ಥಾಪ್ಯ ರಾವಣಃ ಪರಿಸಾಂತ್ವಯನ್ ॥
ಅಬ್ರವೀತ್ಕಿಮಿದಂ ಭದ್ರೇ ವಕ್ತುಕಾಮಾಸಿ ಮಾಂ ದ್ರುತಮ್ ।
ಅನುವಾದ
ರಾವಣನು ತನ್ನ ತಂಗಿಯನ್ನು ಎಬ್ಬಿಸಿ ಸಾಂತ್ವನಪಡಿಸುತ್ತಾ ಭದ್ರೆ! ಈಗ ನೀನು ನನ್ನಲ್ಲಿ ಏನು ಹೇಳಬೇಕೆಂದಿರುವೆಯೋ ಅದನ್ನು ಬೇಗನೇ ಹೇಳು.॥25½॥
ಮೂಲಮ್ - 26½
ಸಾ ಭಾಷ್ಪ ಪರಿರುದ್ಧಾಕ್ಷೀ ರಕ್ತಾಕ್ಷೀ ವಾಕ್ಯಮಬ್ರವೀತ್ ॥
ಕೃತಾಸ್ಮಿ ವಿಧವಾ ರಾಜಂಸ್ತ್ವಯಾ ಬಲವತಾ ಬಲಾತ್ ।
ಅನುವಾದ
ಶೂರ್ಪಣಖೆಯ ಕಣ್ಣುಗಳಲ್ಲಿ ಕಂಬನಿ ತುಂಬಿ, ಕಣ್ಣುಗಳು ಅತ್ತು-ಅತ್ತು ಕೆಂಪಗಾಗಿದ್ದವು. ಆಕೆ ಹೇಳಿದಳು - ರಾಜನೇ! ನೀನು ಬಲವಂತನಾದ್ದರಿಂದ ನನ್ನನ್ನು ವಿಧವೆಯಾಗಿಸಿದೆಯಲ್ಲ.॥26½॥
ಮೂಲಮ್ - 27½
ಏತೇ ರಾಜಂ ಸ್ತ್ವಯಾ ವೀರ್ಯಾದ್ದೈತ್ಯಾ ವಿನಿಹತಾ ರಣೇ ॥
ಕಾಲಕೇಯಾ ಇತಿ ಖ್ಯಾತಾಃ ಸಹಸ್ರಾಣಿ ಚತುರ್ದಶ ।
ಅನುವಾದ
ರಾಕ್ಷಸರಾಜನೇ! ನೀನು ಯುದ್ಧದಲ್ಲಿ ತನ್ನ ಬಲ ಪರಾಕ್ರಮದಿಂದ ಹದಿನಾಲ್ಕು ಸಾವಿರ ಕಾಲಿಕೆಯರೆಂಬ ದೈತ್ಯರನ್ನು ವಧಿಸಿಬಿಟ್ಟೆ.॥27½॥
ಮೂಲಮ್ - 28½
ಪ್ರಾಣೇಭ್ಯೋಽಪಿ ಗರೀಯಾನ್ಮೇ ತತ್ರ ಭರ್ತಾ ಮಹಾಬಲಃ ॥
ಸೋಽಪಿ ತ್ವಯಾ ಹತಸ್ತಾತ ರಿಪುಣಾ ಭ್ರಾತೃಗಂಧಿನಾ ।
ಅನುವಾದ
ಅಯ್ಯಾ! ಅವರಲ್ಲೇ ನನ್ನ ಪ್ರಾಣಪ್ರಿಯ ಆದರಣೀಯ ನನ್ನ ಪತಿಯೂ ಇದ್ದನು. ನೀನು ಅವನನ್ನು ಕೊಂದುಹಾಕಿದೆ. ನೀನು ಹೆಸರಿಗಷ್ಟೆ ಅಣ್ಣನಾಗಿದ್ದು, ನಿಜವಾಗಿ ನನ್ನ ಶತ್ರುವೇ ಆಗಿರುವೆ.॥28½॥
ಮೂಲಮ್ - 29½
ತ್ವಯಾಸ್ಮಿ ನಿಹತಾ ರಾಜನ್ಸ್ವ್ವಯಮೇವ ಹಿ ಬಂಧುನಾ ॥
ರಾಜನ್ವೈಧವ್ಯಶಬ್ದಂ ಚ ಭೋಕ್ಷ್ಯಾಮಿ ತ್ವತ್ಕೃತಂ ಹ್ಯಹಮ್ ।
ಅನುವಾದ
ರಾಜನೇ! ನೀನು ನನಗೆ ಒಡಹುಟ್ಟಿರುವ ಅಣ್ಣನಾಗಿದ್ದರೂ ತನ್ನ ಕೈಯಿಂದಲೇ ನನ್ನ ಪತಿಯನ್ನು ಕೊಂದೆ. ಈಗ ನಿನ್ನಿಂದಾಗಿಯೇ ನಾನು ವಿಧವೆ ಎಂದು ಹೇಳಿಸಿಕೊಂಡಿರುವೆನು.॥29½॥
ಮೂಲಮ್ - 30½
ನನು ನಾಮ ತ್ವಯಾ ರಕ್ಷ್ಯೋ ಜಾಮಾತಾ ಸಮರೇಷ್ವಪಿ ॥
ಸ ತ್ವಯಾ ನಿಹತೋ ಯುದ್ಧೇ ಸ್ವಯಮೇವ ನ ಲಜ್ಜಸೇ ।
ಅನುವಾದ
ಅಣ್ಣಾ! ನೀನು ನನಗೆ ತಂದೆಯಂತೆ ಇರುವೆ. ನನ್ನ ಪತಿ ನಿನಗೆ ಅಳಿಯನಂತೆ ಇದ್ದನು. ನೀನು ಯುದ್ಧದಲ್ಲಿ ನಿನ್ನ ಭಾವ ನೆಂಟನನ್ನು ರಕ್ಷಿಸದೇ ಹೋದೆ. ಈಗ ನಿನಗೆ ನಾಚಿಕೆಯಾಗುವುದಿಲ್ಲವೇ.॥30½॥
ಮೂಲಮ್ - 31½
ಏವಮುಕ್ತೋ ದಶಗ್ರೀವೋ ಭಗಿನ್ಯಾ ಕ್ರೋಶಮಾನಯಾ ॥
ಅಬ್ರವೀತ್ಸಾಂತ್ವಯಿತ್ವಾ ತಾಂ ಸಾಮಪೂರ್ವಮಿದಂ ವಚಃ ।
ಅನುವಾದ
ನಿಂದಿಸುತ್ತಾ, ಅಳುತ್ತಿರುವ ತಂಗಿಯು ಹೀಗೆ ಹೇಳಿದಾಗ ದಶಗ್ರೀವನು ಆಕೆಯನ್ನು ಸಮಾಧಾನಪಡಿಸುತ್ತಾ ಮಧುರವಾಗಿ ಇಂತೆಂದನು .॥31½॥
ಮೂಲಮ್ - 32½
ಅಲಂ ವತ್ಸೇರುದಿತ್ವಾ ತೇ ನ ಭೇತವ್ಯಂ ಚ ಸರ್ವಶಃ ॥
ದಾನಮಾನಪ್ರಸಾದೈಸ್ತ್ವಾಂ ಶೋಷಯಿಷ್ಯಾಮಿ ಯತ್ನತಃ ।
ಅನುವಾದ
ತಂಗೀ! ಈಗ ಅಳುವುದು ವ್ಯರ್ಥ. ನೀನು ಯಾವ ರೀತಿಯಿಂದಲೀ ಭಯಪಡಬಾರದು. ನಾನು ದಾನ, ಮಾನ, ಅನುಗ್ರಹದಿಂದ ನಿನ್ನನ್ನು ಸಂತೋಷಪಡಿಸುವೆನು.॥32½॥
ಮೂಲಮ್ - 33
ಯುದ್ಧಪ್ರಮತ್ತೋ ವ್ಯಾಕ್ಷಿಪ್ತೋ ಜಯಾಕಾಂಕ್ಷೀ ಕ್ಷಿಪನ್ಶರಾನ್ ॥
ಮೂಲಮ್ - 34
ನಾಹಮಜ್ಞಾಸಿಷಂ ಯುಧ್ಯನ್ ಸ್ವಾನ್ ಪರಾನ್ವಾಪಿ ಸಂಯುಗೇ ।
ಜಾಮಾತರಂ ನ ಜಾನೇ ಸ್ಮ ಪ್ರಹರನ್ ಯುದ್ಧ ದುರ್ಮದಃ ॥
ಅನುವಾದ
ನಾನು ಯುದ್ಧದಲ್ಲಿ ಉನ್ಮತ್ತನಾಗಿದ್ದೆ, ನನ್ನ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ವಿಜಯಪಡೆಯುವುದೊಂದೇ ನನ್ನ ತಲೆಯಲ್ಲಿ ಇದ್ದದ್ದರಿಂದ ಒಂದೇ ಸಮನೆ ಬಾಣಪ್ರಯೋಗ ಮಾಡುತ್ತಿದ್ದೆ. ಯುದ್ಧರಂಗದಲ್ಲಿ ತನ್ನವರು, ಪರರು ಎಂಬ ಜ್ಞಾನ ಉಳಿಯುವುದಿಲ್ಲ. ನಾನು ರಣೋನ್ಮತ್ತನಾಗಿ ಪ್ರಹರಿಸುತ್ತಿದ್ದೆ. ಇದರಿಂದ ಅಳಿಯ, ಭಾವನೆಂಟನನ್ನು ಗುರುತಿಸದೇ ಹೋದೆ.॥33-34॥
ಮೂಲಮ್ - 35
ತೇನಾಸೌ ನಿಹತಃ ಸಂಖ್ಯೇ ಮಯಾ ಭರ್ತಾ ತವ ಸ್ವಸಃ ।
ಅಸ್ಮಿನ್ಕಾಲೇ ತು ತತ್ಪ್ರಾಪ್ತಂ ತತ್ಕರಿಷ್ಯಾಮಿ ತೇ ಹಿತಮ್ ॥
ಅನುವಾದ
ತಂಗೀ! ಇದೇ ಕಾರಣದಿಂದ ಯುದ್ಧದಲ್ಲಿ ನಿನ್ನ ಪತಿ ನನ್ನ ಕೈಯಿಂದ ಹತನಾದನು. ಈಗ ಮುಂದಿರುವ ಕರ್ತವ್ಯಕ್ಕನುಸಾರ ನಿನ್ನ ಹಿತದ ಸಾಧನೆಯನ್ನೇ ಮಾಡುವೆನು.॥35॥
ಮೂಲಮ್ - 36½
ಭ್ರಾತುರೈಶ್ವರ್ಯಯುಕ್ತಸ್ಯ ಖರಸ್ಯ ವಸ ಪಾರ್ಶ್ವತಃ ।
ಚತುರ್ದಶಾನಾಂ ಭ್ರಾತಾ ತೇ ಸಹಸ್ರಾಣಾಂ ಭವಿಷ್ಯತಿ ॥
ಪ್ರಭುಃ ಪ್ರಯಾಣೇ ದಾನೇ ಚ ರಾಕ್ಷಸಾನಾಂ ಮಹಾಬಲಃ ।
ಅನುವಾದ
ನೀನು ಐಶ್ವರ್ಯಶಾಲಿ ತಮ್ಮ ಖರನ ಬಳಿಗೆ ಹೋಗಿ ಇರು. ನಿನ್ನ ತಮ್ಮ ಮಹಾಬಲಿ ಖರನು ಹದಿನಾಲ್ಕು ಸಾವಿರ ರಾಕ್ಷಸರ ಅಧಿಪತಿಯಾಗುವನು. ಅವನು ಅವರೆಲ್ಲರ ಯೋಗಕ್ಷೇಮ ನೋಡಿಕೊಳ್ಳುವನು.॥36½॥
ಮೂಲಮ್ - 37½
ತತ್ರ ಮಾತೃಷ್ವಸೇಯಸ್ತೇ ಭ್ರಾತಾಯಂ ವೈ ಖರಃ ಪ್ರಭುಃ ॥
ಭವಿಷ್ಯತಿ ತವಾದೇಶಂ ಸದಾ ಕುರ್ವನ್ನಿಶಾಚರಃ ।
ಅನುವಾದ
ಈ ನಿನ್ನ ಚಿಕ್ಕಮ್ಮನ ಮಗ ನಿಶಾಚರ ಖರನು ಎಲ್ಲವನ್ನು ಮಾಡಲು ಸಮರ್ಥನಾಗಿದ್ದು, ನನ್ನ ಆದೇಶವನ್ನು ಸದಾ ಪಾಲಿಸುತ್ತಾ ಇರುವನು.॥37½॥
ಮೂಲಮ್ - 38½
ಶೀಘ್ರಂ ಗಚ್ಛತ್ವಯಂ ವೀರೋ ದಂಡಕಾನ್ ಪರಿರಕ್ಷಿತುಮ್ ॥
ದೂಷಣೋಽಸ್ಯ ಬಲಾಧ್ಯಕ್ಷೋ ಭವಿಷ್ಯತಿ ಮಹಾಬಲಃ ।
ಅನುವಾದ
ಈ ವೀರನು ನನ್ನ ಆಜ್ಞೆಯಂತೆ ಬೇಗನೇ ದಂಡಕಾರಣ್ಯದ ರಕ್ಷಣೆಗಾಗಿ ಹೋಗುವನು. ಮಹಾಬಲಿ ದೂಷಣನು ಅವನ ಸೇನಾಪತಿಯಾಗುವನು..॥38½॥
ಮೂಲಮ್ - 39½
ತತ್ರ ತೇ ವಚನಂ ಶೂರಃ ಕರಿಷ್ಯತಿ ಸದಾ ಖರಃ ॥
ರಕ್ಷಸಾಂ ಕಾಮರೂಪಾಣಾಂ ಪ್ರಭುರೇಷ ಭವಿಷ್ಯತಿ ।
ಅನುವಾದ
ಅಲ್ಲಿ ಶೂರನಾದ ಖರನು ಸದಾ ನಿನ್ನ ಆಜ್ಞೆಯನ್ನು ಪಾಲಿಸುತ್ತಾ, ಕಾಮರೂಪಿಗಳಾದ ರಾಕ್ಷಸರ ಒಡೆಯನಾಗುವನು.॥39½॥
(ಶ್ಲೋಕ 40)
ಮೂಲಮ್
ಏವಮುಕ್ತ್ವಾ ದಶಗ್ರೀವಃ ಸೈನ್ಯಮಸ್ಯಾದಿದೇಶ ಹ ॥
(ಶ್ಲೋಕ 41)
ಮೂಲಮ್
ಚತುರ್ದಶ ಸಹಸ್ರಾಣಿ ರಕ್ಷಸಾಂ ವೀರ್ಯಶಾಲಿನಾಮ್ ।
ಸ ತೈಃ ಪರಿವೃತಃ ಸರ್ವೈ ರಾಕ್ಷಸೈರ್ಘೋರದರ್ಶನೈಃ ॥
ಮೂಲಮ್ - 42
ಆಗಚ್ಛತ ಖರಃ ಶೀಘ್ರಂ ದಂಡಕಾನಕುತೋಭಯಃ ।
ಸ ತತ್ರ ಕಾರಯಾಮಾಸ ರಾಜ್ಯಂ ನಿಹತಕಂಟಕಮ್ ॥
ಸಾ ಚ ಶೂರ್ಪಣಖಾತತ್ರ ನ್ಯವಸದ್ ದಂಡಕೇ ವನೇ ।
ಅನುವಾದ
ಹೀಗೆ ಹೇಳಿ ದಶಗ್ರೀವನು ಹದಿನಾಲ್ಕು ಸಾವಿರ ಪರಾಕ್ರಮಿ ರಾಕ್ಷಸರ ಸೈನ್ಯವನ್ನು ಖರನೊಡನೆ ಹೋಗುವಂತೆ ಆಜ್ಞಾಪಿಸಿದನು. ಆ ಭಯಂಕರ ರಾಕ್ಷಸರನ್ನು ಮೆರೆಸಿಕೊಂಡು ಖರನು ಶೀಘ್ರವಾಗಿ ದಂಡಕಾರಣ್ಯಕ್ಕೆ ಬಂದು, ನಿರ್ಭಯನಾಗಿ ಅಲ್ಲಿಯ ಅಕಂಟಕ ರಾಜ್ಯವನ್ನು ಆಳತೊಡಗಿದನು. ಅವನೊಂದಿಗೆ ಶೂರ್ಪಣಖೆಯೂ ದಂಡಕಾರಣ್ಯದಲ್ಲಿ ವಾಸಿಸತೊಡಗಿದಳು.॥40-42॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು. ॥24॥