[ಇಪ್ಪತ್ತಮೂರನೆಯ ಸರ್ಗ]
ಭಾಗಸೂಚನಾ
ನಿವಾತ ಕವಚರೊಡನೆ ರಾವಣನ ಸ್ನೇಹ, ಕಾಲಕೇಯರ ವಧೆ, ವರುಣ ಪುತ್ರರ ಪರಾಜಯ
ಮೂಲಮ್ - 1
ತತೋ ಜಿತ್ವಾ ದಶಗ್ರೀವೋ ಯಮಂ ತ್ರಿದಶಪುಂಗವಮ್ ।
ರಾವಣಸ್ತು ರಣಶ್ಲಾಘೀ ಸ್ವಸಹಾಯಾನ್ ದದರ್ಶ ಹ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ದೇವೇಶ್ವರ ಯಮನನ್ನು ಸೋಲಿಸಿ, ಯುದ್ಧವನ್ನು ಶ್ಲಾಘಿಸುವ ದಶಗ್ರೀವ ರಾವಣನು ತನ್ನ ಸಹಾಯಕರೊಂದಿಗೆ ಸೇರಿಕೊಂಡನು.॥1॥
ಮೂಲಮ್ - 2
ತತೋ ರುಧಿರಸಿಕ್ತಾಂಗಂ ಪ್ರಹಾರೈರ್ಜರ್ಜರೀಕೃತಮ್ ।
ರಾವಣಂ ರಾಕ್ಷಸಾ ದೃಷ್ಟ್ವಾ ವಿಸ್ಮಯಂ ಸಮುಪಾಗಮನ್ ॥
ಅನುವಾದ
ಯಮನ ಪ್ರಹಾರದಿಂದ ಅವನ ಸರ್ವಾಂಗವೂ ರಕ್ತದಿಂದ ತೊಯ್ದುಹೋಗಿತ್ತು. ಈ ಸ್ಥಿತಿಯಲ್ಲಿ ಅವನನ್ನು ನೋಡಿ ಆ ರಾಕ್ಷಸರಿಗೆ ಭಾರೀ ವಿಸ್ಮಯವಾಯಿತು.॥2॥
ಮೂಲಮ್ - 3
ಜಯೇನ ವರ್ಧಯಿತ್ವಾ ಚ ಮಾರೀಚ ಪ್ರಮುಖಾಸ್ತತಃ ।
ಪುಷ್ಪಕಂ ಭೇಜಿರೇ ಸರ್ವೇ ಸಾಂತ್ವ್ವಿತಾ ರಾವಣೇನ ತು ॥
ಅನುವಾದ
‘ಮಹಾರಾಜರಿಗೆ ಜಯವಾಗಲಿ’ ಎಂದು ಹೇಳುತ್ತಾ ರಾವಣನ ಅಭ್ಯುದಯವನ್ನು ಬಯಸುವ ಮಾರೀಚನೇ ಮೊದಲಾದ ರಾಕ್ಷಸರೆಲ್ಲ ರಾವಣನಿಂದ ಸಂತೈಸಲ್ಪಟ್ಟು ಪುಷ್ಪಕ ವಿಮಾನ ಏರಿದರು.॥3॥
ಮೂಲಮ್ - 4
ತತೋ ರಸಾತಲಂ ರಕ್ಷಃ ಪ್ರವಿಷ್ಟಃ ಪಯಸಾಂ ನಿಧಿಮ್ ।
ದೈತ್ಯೋರಗ ಗಣಾಧ್ಯುಷ್ಟಂ ವರುಣೇನ ಸುರಕ್ಷಿತಮ್ ॥
ಅನುವಾದ
ಬಳಿಕ ಆ ರಾಕ್ಷಸನು ರಸಾತಲಕ್ಕೆ ಹೋಗುವ ಇಚ್ಛೆಯಿಂದ ದೈತ್ಯರು, ನಾಗಗಳಿಂದ ಸೇವಿತ ಹಾಗೂ ವರುಣನಿಂದ ರಕ್ಷಿತವಾದ ಜಲನಿಧಿ ಸಮುದ್ರವನ್ನು ಪ್ರವೇಶಿಸಿದನು.॥4॥
ಮೂಲಮ್ - 5
ಸ ತು ಭೋಗವತೀಂ ಗತ್ವಾ ಪುರೀಂ ವಾಸುಕಿ ಪಾಲಿತಾಮ್ ।
ಕೃತ್ವಾ ನಾಗಾನ್ವಶೇ ಹೃಷ್ಟೋ ಯಯೌ ಮಣಿಮಯೀಂ ಪುರೀಮ್ ॥
ಅನುವಾದ
ನಾಗರಾಜ ವಾಸುಕಿಯಿಂದ ಪಾಲಿಸಲ್ಪಟ್ಟ ಭೋಗವತಿಯನ್ನು ಪ್ರವೇಶಿಸಿ, ರಾವಣನು ನಾಗಗಳನ್ನು ಗೆದ್ದು, ಅಲ್ಲಿಂದ ಹರ್ಷಚಿತ್ತನಾಗಿ ಮಣಿಮಯ ಪುರಿಗೆ ಪ್ರಯಾಣ ಮಾಡಿದನು.॥5॥
ಮೂಲಮ್ - 6
ನಿವಾತಕವಚಾಸ್ತತ್ರ ದೈತ್ಯಾ ಲಬ್ಧವರಾ ವಸನ್ ।
ರಾಕ್ಷಸಸ್ತಾನ್ ಸನ್ಸಮಾಗಮ್ಯ ಯುದ್ಧಾಯ ಸಮುಪಾಹ್ವಯತ್ ॥
ಅನುವಾದ
ಬ್ರಹ್ಮದೇವರಿಂದ ಉತ್ತಮ ವರ ಪಡೆದಿದ್ದ ಅಲ್ಲಿ ನಿವಾತ ಕವಚರೆಂಬ ದೈತ್ಯರು ಇರುತ್ತಿದ್ದರು. ರಾವಣನು ಅಲ್ಲಿಗೆ ಹೋಗಿ ಅವರೆಲ್ಲರನ್ನು ಯುದ್ಧಕ್ಕಾಗಿ ಆಹ್ವಾನಿಸಿದನು.॥6॥
ಮೂಲಮ್ - 7
ತೇ ತು ಸರ್ವೇ ಸುವಿಕ್ರಾಂತಾ ದೈತೇಯಾ ಬಲಶಾಲಿನಃ ।
ನಾನಾ ಪ್ರಹರಣಾಸ್ತತ್ರ ಪ್ರಹೃಷ್ಟಾ ಯುದ್ಧದುರ್ಮದಾಃ ॥
ಅನುವಾದ
ಆ ದೈತ್ಯರೆಲ್ಲರೂ ಭಾರೀ ಪರಾಕ್ರಮಿ ಮತ್ತು ಬಲಶಾಲಿಗಳಾಗಿದ್ದರು. ಅನೇಕ ರೀತಿಯ ಅಸ್ತ್ರ-ಶಸ್ತ್ರಗಳನ್ನು ಧರಿಸಿ, ಯುದ್ಧಕ್ಕಾಗಿ ಸದಾ ಉತ್ಸಾಹಿತ ಹಾಗೂ ಉನ್ಮತ್ತರಾಗಿದ್ದರು.॥7॥
ಮೂಲಮ್ - 8
ಶೂಲೈಸ್ತ್ರಿಶೂಲೈಃ ಕುಲಿಶೈಃ ಪಟ್ಟಿಶಾಸಿಪರಶ್ವಧೈಃ ।
ಅನ್ಯೋನ್ಯಂ ಬಿಭಿದುಃ ಕ್ರುದ್ಧಾ ರಾಕ್ಷಸಾ ದಾನವಾಸ್ತಥಾ ॥
ಅನುವಾದ
ರಾವಣನೊಡನೆ ಅವರ ಯುದ್ಧ ಪ್ರಾರಂಭವಾಯಿತು. ಆ ದೈತ್ಯರು ಮತ್ತು ರಾಕ್ಷಸರು ಕುಪಿತರಾಗಿ ಪರಸ್ಪರ ಶೂಲ, ತ್ರಿಶೂಲ, ವಜ್ರ, ಪಟ್ಟಿಶ, ಖಡ್ಗ, ಕೊಡಲಿಗಳಿಂದ ಪ್ರಹರಿಸತೊಡಗಿದರು.॥8॥
ಮೂಲಮ್ - 9
ತೇಷಾಂ ತು ಯುಧ್ಯಮಾನಾನಾಂ ಸಾಗ್ರಃ ಸಂವತ್ಸರೋ ಗತಃ ।
ನ ಚಾನ್ಯತರಯೋಸ್ತತ್ರ ವಿಜಯೋ ವಾ ಕ್ಷಯೋಽಪಿ ವಾ ॥
ಅನುವಾದ
ಹೀಗೆ ಯುದ್ಧ ಮಾಡುತ್ತಾ ಒಂದು ವರ್ಷ ಕಳೆಯಿತು. ಆದರೂ ಅವರಲ್ಲಿ ಯಾರೂ ಗೆಲ್ಲಲಿಲ್ಲ, ಪರಾಜಯರಾಗಿಲ್ಲ.॥9॥
ಮೂಲಮ್ - 10
ತತಃ ಪಿತಾಮಹಸ್ತತ್ರ ತ್ರೈಲೋಕ್ಯಗತಿರವ್ಯಯಃ ।
ಆಜಗಾಮ ದ್ರುತಂ ದೇವೋ ವಿಮಾನವರಮಾಸ್ಥಿತಃ ॥
ಅನುವಾದ
ಆಗ ತ್ರಿಭುವನಗಳ ಆಶ್ರಯಭೂತ ಅವಿನಾಶೀ ಪಿತಾಮಹ ಭಗವಾನ್ ಬ್ರಹ್ಮದೇವರು ಒಂದು ಉತ್ತಮ ವಿಮಾನದಲ್ಲಿ ಕುಳಿತು ಅಲ್ಲಿಗೆ ಶೀಘ್ರವಾಗಿ ಬಂದರು.॥10॥
ಮೂಲಮ್ - 11
ನಿವಾತಕವಚಾನಾಂ ತು ನಿವಾರ್ಯ ರಣಕರ್ಮತತ್ ।
ವೃದ್ಧಃ ಪಿತಾಮಹೋ ವಾಕ್ಯಮುವಾಚ ವಿದಿತಾರ್ಥವತ್ ॥
ಅನುವಾದ
ವೃದ್ಧ ಪಿತಾಮಹನು ನಿವಾತ ಕವಚರ ಆ ಯುದ್ಧವನ್ನು ತಡೆದು, ಅವರಲ್ಲಿ ಇಂತೆಂದನು.॥11॥
ಮೂಲಮ್ - 12
ನ ಹ್ಯಯಂ ರಾವಣೋ ಯುದ್ಧೇ ಶಕ್ಯೋಜೇತುಂ ಸುರಾಸುರೈಃ ।
ನ ಭವಂತಃ ಕ್ಷಯಂ ನೇತುಮಪಿ ಸಾಮರದಾನವೈಃ ॥
ಅನುವಾದ
ದಾನವರೇ! ಸಮಸ್ತ ದೇವತೆಗಳು, ಅಸುರರು ಸೇರಿದರೂ ಯುದ್ಧದಲ್ಲಿ ಈ ರಾವಣನನ್ನು ಗೆಲ್ಲಲಾರರು. ಹಾಗೆಯೇ ಸಮಸ್ತ ದೇವ - ದಾನವರು ಒಟ್ಟಿಗೆ ಆಕ್ರಮಿಸಿದರೂ ನಿಮ್ಮನ್ನು ಸಂಹರಿಸಲಾರರು.॥12॥
ಮೂಲಮ್ - 13
ರಾಕ್ಷಸಸ್ಯ ಸಖಿತ್ವಂ ಚ ಭವದ್ಭಿಃ ಸಹ ರೋಚತೇ ।
ಅವಿಭಕ್ತಾಶ್ಚ ಸರ್ವಾರ್ಥಾಃ ಸುಹೃದಾಂ ನಾತ್ರ ಸಂಶಯಃ ॥
ಅನುವಾದ
ನಿಮ್ಮೀರ್ವರಲ್ಲಿಯೂ ವರಬಲದ ಶಕ್ತಿ ಒಂದೇ ರೀತಿಯಾಗಿದೆ. ಅದಕ್ಕಾಗಿ, ನಿಮ್ಮೊಡನೆ ಈ ರಾಕ್ಷಸನ ಮೈತ್ರಿ ಆದರೆ ನನಗೆ ಚೆನ್ನಾಗಿರುವುದು; ಏಕೆಂದರೆ ಸುಹೃದರ ಎಲ್ಲ ಭೋಗ್ಯ - ಪದಾರ್ಥ ಪರಸ್ಪರ ಒಂದೇ ರೀತಿಯಾಗಿದೆ. ಬೇರೆ - ಬೇರೆ ಹಂಚಿಕೊಳ್ಳಲಾಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.॥13॥
ಮೂಲಮ್ - 14
ತತೋಽಗ್ನಿಸಾಕ್ಷಿಕಂ ಸಖ್ಯಂ ಕೃತವಾಂಸ್ತತ್ರ ರಾವಣಃ ।
ನಿವಾತಕವಚೈಃ ಸಾರ್ಧಂ ಪ್ರೀತಿಮಾನಭವತ್ತದಾ ॥
ಅನುವಾದ
ಆಗ ಅಲ್ಲಿ ರಾವಣನು ಅಗ್ನಿಸಾಕ್ಷಿಯಾಗಿಸಿ ನಿವಾತ ಕವಚರೊಂದಿಗೆ ಮೈತ್ರಿ ಮಾಡಿಕೊಂಡನು. ಇದರಿಂದ ಎಲ್ಲರಿಗೆ ಸಂತೋಷವಾಯಿತು.॥14॥
ಮೂಲಮ್ - 15
ಅರ್ಚಿತಸ್ತೈರ್ಯಥಾನ್ಯಾಯಂ ಸಂವತ್ಸರಮಥೋಷಿತಃ ।
ಸ್ವಪುರಾನ್ನಿರ್ವಿಶೇಷಂ ಚ ಪ್ರಿಯಂ ಪ್ರಾಪ್ತೋ ದಶಾನನಃ ॥
ಅನುವಾದ
ಮತ್ತೆ ನಿವಾತ ಕವಚರಿಂದ ಉಚಿತ ಆದರ ಪಡೆದ ರಾವಣನು ಒಂದು ವರ್ಷ ಅಲ್ಲೇ ನಿಂತನು. ಆ ಸ್ಥಾನದಲ್ಲಿ ದಶಾನನನಿಗೆ ತನ್ನ ನಗರದಂತೆ ಪ್ರಿಯಭೋಗ ಪ್ರಾಪ್ತವಾದವು.॥15॥
ಮೂಲಮ್ - 16
ತತ್ರೋಪಧಾರ್ಯ ಮಾಯಾನಾಂ ಶತಮೇಕಂ ಸಮಾಪ್ತವಾನ್ ।
ಸಲಿಲೇಂದ್ರ ಪುರಾನ್ವೇಷೀ ಭ್ರಮತಿ ಸ್ಮರಸಾತಲಮ್ ॥
ಅನುವಾದ
ಅವನು ನಿವಾತ ಕವಚರಿಂದ ನೂರು ಬಗೆಯ ಮಾಯೆಯನ್ನು ಪಡೆದುಕೊಂಡನು. ಬಳಿಕ ಅವನು ವರುಣನ ನಗರವನ್ನು ಹುಡುಕುತ್ತಾ ರಸಾತಲದಲ್ಲಿ ಎಲ್ಲೆಡೆ ಸಂಚರಿಸತೊಡಗಿದನು.॥16॥
ಮೂಲಮ್ - 17
ತತೋಽಶ್ಮನಗರಂ ನಾಮ ಕಾಲಕೇಯೈರಧಿಷ್ಠಿತಮ್ ।
ಗತ್ವಾ ತು ಕಾಲಕೇಯಾಂಶ್ಚ ಹತ್ವಾ ತತ್ರ ಬಲೋತ್ಕಟಾನ್ ॥
ಮೂಲಮ್ - 18½
ಶೂರ್ಪಣಖ್ಯಾಶ್ಚ ಭರ್ತಾರಮಸಿನಾ ಪ್ರಾಚ್ಛಿನತ್ ತದಾ ।
ಶ್ಯಾಲಂ ಚ ಬಲವಂತಂ ಚ ವಿದ್ಯುಜ್ಜಿಹ್ವಂ ಬಲೋತ್ಕಟಮ್ ॥
ಜಿಹ್ವಯಾ ಸಂಲಿಹಂತಂ ಚ ರಾಕ್ಷಸಂ ಸಮರೇ ತದಾ ।
ಅನುವಾದ
ತಿರುಗಾಡುತ್ತಾ ಅವನು ಅಶ್ಮ ಎಂಬ ನಗರಕ್ಕೆ ಬಂದನು. ಅಲ್ಲಿ ಕಾಲಕೇಯ ಎಂಬ ದಾನವರು ವಾಸಿಸುತ್ತಿದ್ದರು. ಬಲಿಷ್ಠರಾದ ಅವರೆಲ್ಲರನ್ನು ರಾವಣನು ಸಂಹರಿಸಿ, ನಾಲಿಗೆಯಿಂದ ಕಟವಾಯಿಗಳನ್ನು ನೆಕ್ಕುತ್ತಿದ್ದ ತನ್ನ ತಂಗಿ ಶೂರ್ಪಣಖಿಯ ಗಂಡನಾದ, ಮಹಾಬಲಿಷ್ಠ ವಿದ್ಯುಜ್ಜಿಹ್ವ ರಾಕ್ಷಸನನ್ನು ಖಡ್ಗದಿಂದ ಸಂಹರಿಸಿದನು.॥17-18½॥
ಮೂಲಮ್ - 19
ತಂ ವಿಜಿತ್ಯ ಮುಹೂರ್ತೇನ ಜಘ್ನೇ ದೈತ್ಯಾಂಶ್ಚತುಃಶತಮ್ ॥
ಮೂಲಮ್ - 20
ತತಃ ಪಾಂಡುರಮೇಘಾಭಂ ಕೈಲಾಸಮಿವ ಭಾಸ್ವರಮ್ ।
ವರುಣಸ್ಯಾಲಯಂ ದಿವ್ಯಮಪಶ್ಯದ್ರಾಕ್ಷಸಾಧಿಪಃ ॥
ಅನುವಾದ
ಅವನನ್ನು ಕೊಂದು ರಾವಣನು ಎರಡು ಗಳಿಗೆಗಳಲ್ಲಿ ನಾಲ್ಕುನೂರು ದೈತ್ಯರನ್ನು ಸಂಹರಿಸಿದನು. ಬಳಿಕ ಆ ರಾಕ್ಷಸರಾಜ ರಾವಣನು ವರಣನ ದಿವ್ಯ ಭವನವನ್ನು ನೋಡಿದನು. ಅದು ಬಿಳಿಯ ಮೋಡದಂತೆ ಉಜ್ವಲ ಮತ್ತು ಕೈಲಾಸ ಪರ್ವತದಂತೆ ಪ್ರಕಾಶಮಾನವಾಗಿತ್ತು.॥19-20॥
ಮೂಲಮ್ - 21
ಕ್ಷರಂತೀಂ ಚ ಪಯಸ್ತತ್ರ ಸುರಭಿಂ ಗಾಮವಸ್ಥಿತಾಮ್ ।
ಯಸ್ಯಾಃ ಪಯೋಽಭಿನಿಷ್ಪಂದಾತ್ ಕ್ಷೀರೋದೋ ನಾಮ ಸಾಗರಃ ॥
ಅನುವಾದ
ಅಲ್ಲಿ ಕೆಚ್ಚಲಿನಿಂದ ಹಾಲು ಸುರಿಸುತ್ತಿದ್ದಸುರಭಿ ಎಂಬ ಗೋವು ನಿಂತಿತ್ತು. ಈ ಸುರಭಿಯ ಹಾಲಿನಿಂದಲೇ ಕ್ಷೀರಸಾಗರ ತುಂಬಿದೆ ಎಂದು ಹೇಳುತ್ತಾರೆ.॥21॥
ಮೂಲಮ್ - 22
ದದರ್ಶ ರಾವಣಸ್ತತ್ರ ಗೋವೃಷೇಂದ್ರವರಾರಣಿಮ್ ।
ಯಸ್ಮಾಚ್ಚಂದ್ರಃ ಪ್ರಭವತಿ ಶೀತರಶ್ಮಿರ್ನಿಶಾಕರಃ ॥
ಅನುವಾದ
ರಾವಣನು ಮಹಾ ದೇವನ ವಾಹನ ಮಹಾವೃಷದ ಜನನೀ ಸುರಭಿದೇವಿಯನ್ನು ದರ್ಶಿಸಿದನು. ಆಕೆಯಿಂದಲೇ ಶೀತಲ ಕಿರಣಗಳುಳ್ಳ ನಿಶಾಕರ ಚಂದ್ರನ ಪ್ರಾದುರ್ಭಾವವಾಗಿದೆ. (ಸುರಭಿಯಿಂದ ಕ್ಷೀರಸಮುದ್ರ, ಕ್ಷೀರಸಮುದ್ರದಿಂದ ಚಂದ್ರನ ಆವಿರ್ಭಾವ ವಾಯಿತು..॥22॥
ಮೂಲಮ್ - 23
ಯಂ ಸಮಾಶ್ರಿತ್ಯ ಜೀವಂತಿ ಫೇನಪಾಃ ಪರಮರ್ಷಯಃ ।
ಅಮೃತಂ ಯತ್ರ ಚೋತ್ಪನ್ನಂ ಸ್ವಧಾ ಚ ಸ್ವಧಭೋಜಿನಾಮ್ ॥
ಅನುವಾದ
ಚಂದ್ರನ ಉತ್ಪತ್ತಿಸ್ಥಾನವಾದ ಕ್ಷೀರ ಸಮುದ್ರವನ್ನು ಆಶ್ರಯಿಸಿ ಘೇನಸ ಎಂಬ ಮಹರ್ಷಿಗಳು ಅಲ್ಲಿ ಇದ್ದಾರೆ. ಅದೇ ಕ್ಷೀರಸಮುದ್ರದಿಂದ ಸುಧಾ ಮತ್ತು ಸ್ವಧಾಭೋಜಿ ಪಿತೃಗಳ ಸ್ವಧಾ ಪ್ರಕಟಗೊಂಡಳು.॥23॥
ಮೂಲಮ್ - 24
ಯಾಂ ಬ್ರುವಂತಿ ನರಾ ಲೋಕೇ ಸುರಭಿಂ ನಾಮ ನಾಮತಃ ।
ಪ್ರದಕ್ಷಿಣಂ ತು ತಾಂ ಕೃತ್ವಾ ರಾವಣಃ ಪರಮಾದ್ಭುತಾಮ್ ।
ಪ್ರವಿವೇಶ ಮಹಾಘೋರಂ ಗುಪ್ತಂ ಬಹುವಿಧೈರ್ಬಲೈಃ ॥
ಅನುವಾದ
ಲೋಕದಲ್ಲಿ ಸುರಭಿ ಎಂದು ಕರೆಯುವ ಪರಮಾದ್ಭುತ ಗೋಮಾತೆಯ ಪ್ರದಕ್ಷಿಣೆ ಮಾಡಿ ರಾವಣನು ನಾನಾ ರೀತಿಯ ಸೈನ್ಯಗಳಿಂದ ಸುರಕ್ಷಿತ ಮಹಾಭಯಂಕರ ವರುಣಾಲಯವನ್ನು ಪ್ರವೇಶಿಸಿದನು.॥24॥
ಮೂಲಮ್ - 25
ತತೋ ಧಾರಾ ಶತಾಕೀರ್ಣಂ ಶಾರದಾಭ್ರನಿಭಂ ತದಾ ।
ನಿತ್ಯಪ್ರಹೃಷ್ಟಂ ದದೃಶೇ ವರುಣಸ್ಯ ಗೃಹೋತ್ತಮಮ್ ॥
ಅನುವಾದ
ಪ್ರವೇಶಿಸಿ ಅವನು ವರುಣನ ಉತ್ತಮ ಭವನವನ್ನು ನೋಡಿದನು. ಅದು ಸದಾ ಆನಂದಮಯ ಉತ್ಸವಗಳಿಂದ ತುಂಬಿದ್ದು ಅನೇಕ ಕಾರಂಜಿಗಳಿಂದ ಕೂಡಿದ ಶರತ್ಕಾಲಕ ಮೇಘಗಳಂತೆ ಉಜ್ವಲವಾಗಿತ್ತು.॥25॥
ಮೂಲಮ್ - 26
ತತೋ ಹತ್ವಾ ಬಲಾಧ್ಯಕ್ಷಾನ್ ಸಮರೇ ತೈಶ್ಚ ತಾಡಿತಃ ।
ಅಬ್ರವೀಚ್ಚ ತತೋ ಯೋಧಾನ್ರಾಜಾ ಶೀಘ್ರಂ ನಿವೇದ್ಯತಾಮ್ ॥
ಅನುವಾದ
ಅನಂತರ ವರುಣನ ಸೇನಾಪತಿಗಳು ಯುದ್ಧದಲ್ಲಿ ರಾವಣನ ಮೇಲೆ ಪ್ರಹಾರ ಮಾಡಿದರು. ರಾವಣನು ಅವರನ್ನು ಗಾಯಗೊಳಿಸಿ ಆ ಯೋಧರಲ್ಲಿ ಹೇಳಿದನು - ನೀವು ಬೇಗನೇ ರಾಜಾವರುಣನಲ್ಲಿ ನನ್ನ ಮಾತನ್ನು ಹೇಳಿರಿ.॥26॥
ಮೂಲಮ್ - 27
ಯುದ್ಧಾರ್ಥೀ ರಾವಣಃ ಪ್ರಾಪ್ತಸ್ತಸ್ಯ ಯುದ್ಧಂ ಪ್ರದೀಯತಾಮ್ ।
ವದ ವಾ ನ ಭಯಂ ತೇಽಸ್ತಿ ನಿರ್ಜಿತೋಽಸ್ಮೀತಿ ಸಾಂಜಲಿಃ ॥
ಅನುವಾದ
ರಾಜನೇ! ರಾಕ್ಷಸೇಶ್ವರ ರಾವಣನು ಯುದ್ಧಕ್ಕಾಗಿ ಬಂದಿರುವನು. ನೀವು ಅವನೊಡನೆ ಯುದ್ಧ ಮಾಡಿರಿ ಅಥವಾ ಕೈಮುಗಿದು ತನ್ನ ಸೋಲನ್ನು ಒಪ್ಪಿಕೊಳ್ಳಿ. ಮತ್ತೆ ನಿಮಗೆ ಯಾವುದೇ ಭಯವಿಲ್ಲ.॥27॥
ಮೂಲಮ್ - 28
ಏತಸ್ಮಿನ್ನಂತರೇ ಕ್ರುದ್ಧಾ ವರುಣಸ್ಯ ಮಹಾತ್ಮನಃ ।
ಪುತ್ರಾ ಪೌತ್ರಾಶ್ಚ ನಿಷ್ಕ್ರಾಮನ್ ಗೌಶ್ಚ ಪುಷ್ಕರ ಏವ ಚ ॥
ಅನುವಾದ
ಈ ಸೂಚನೆ ಪಡೆದು ಮಹಾತ್ಮಾ ವರುಣನ ಪುತ್ರ, ಪೌತ್ರರು ಕ್ರೋಧಗೊಂಡು ಹೊರಟರು. ಅವರೊಂದಿಗೆ ಗೌ ಮತ್ತು ಪುಷ್ಕರರೆಂಬ ಸೇನಾಧ್ಯರೂ ಇದ್ದರು.॥28॥
ಮೂಲಮ್ - 29
ತೇ ತು ತತ್ರ ಗುಣೋಪೇತಾ ಬಲೈಃ ಪರಿವೃತಾಃ ಸ್ವಕೈಃ ।
ಯುಕ್ತ್ವಾ ರಥಾನ್ ಕಾಮಗಮಾನುದ್ಯದ್ಭಾಸ್ಕರ ವರ್ಚಸಃ ॥
ಅನುವಾದ
ಅವರೆಲ್ಲರೂ ಸರ್ವಗುಣ ಸಂಪನ್ನರಾಗಿದ್ದು, ಉದಯಿಸುವ ಸೂರ್ಯನಂತೆ ತೇಜಸ್ವಿಗಳಾಗಿದ್ದರು. ಇಚ್ಛಾನುಸಾರ ಸಾಗುವ ರಥಗಳನ್ನು ಹತ್ತಿ ಸೈನ್ಯವನ್ನು ತೆಗೆದುಕೊಂಡು ಯುದ್ಧಕ್ಕಾಗಿ ಬಂದರು.॥29॥
ಮೂಲಮ್ - 30
ತತೋ ಯುದ್ಧಂ ಸಮಭವದ್ದಾರುಣಂ ರೋಮಹರ್ಷಣಮ್ ।
ಸಲಿಲೇಂದ್ರಸ್ಯ ಪುತ್ರಾಣಾಂ ರಾವಣಸ್ಯ ಚ ಧೀಮತಃ ॥
ಅನುವಾದ
ಮತ್ತೆ ವರುಣನ ಮಕ್ಕಳಿಗೂ ರಾವಣನಿಗೂ ರೋಮಾಂಚಕರ ಘೋರ ಯುದ್ಧ ಪ್ರಾರಂಭವಾಯಿತು.॥30॥
ಮೂಲಮ್ - 31
ಅಮಾತ್ಯೈಶ್ಚ ಮಹಾವೀರ್ಯೈರ್ದಶಗ್ರೀವಸ್ಯ ರಕ್ಷಸಃ ।
ವಾರುಣಂ ತದ್ಬಲಂ ಸರ್ವಂ ಕ್ಷಣೇನ ವಿನಿಪಾತಿತಮ್ ॥
ಅನುವಾದ
ರಾಕ್ಷಸ ದಶಗ್ರೀವನ ಮಹಾಪರಾಕ್ರಮಿ ಮಂತ್ರಿಗಳು ಒಂದು ಕ್ಷಣದಲ್ಲಿ ವರುಣನ ಸೈನ್ಯವೆಲ್ಲವನ್ನು ಹೊಡೆದು ಓಡಿಸಿದರು.॥31॥
ಮೂಲಮ್ - 32
ಸಮೀಕ್ಷ್ಯ ಸ್ವಬಲಂ ಸಂಖ್ಯೇ ವರುಣಸ್ಯ ಸುತಾಸ್ತದಾ ।
ಅರ್ದಿತಾಃ ಶರಜಾಲೇನ ನಿವೃತ್ತಾ ರಣಕರ್ಮಣಾಃ ॥
ಅನುವಾದ
ಯುದ್ಧದಲ್ಲಿ ತನ್ನ ಸೈನ್ಯದ ಈ ಸ್ಥಿತಿಯನ್ನು ಕಂಡು ವರುಣನ ಪುತ್ರರು ಆಗ ಬಾಣ ಸಮೂಹಗಳಿಂದ ಪೀಡಿತರಾದ ಕಾರಣ ಸ್ವಲ್ಪ ಹೊತ್ತು ಯುದ್ಧದಿಂದ ನಿವೃತ್ತರಾದರು.॥32॥
ಮೂಲಮ್ - 33
ಮಹೀತಲಗತಾಸ್ತೇ ತು ರಾವಣಂ ದೃಶ್ಯ ಪುಷ್ಪಕೇ ।
ಆಕಾಶಮಾಶು ವಿವಿಶುಃ ಸ್ಯಂದನೈಃ ಶೀಘ್ರಗಾಮಿಭಿಃ ॥
ಅನುವಾದ
ಭೂಮಿಯಲ್ಲಿದ್ದು ರಾವಣನು ಪುಷ್ಪಕ ವಿಮಾನದಲ್ಲಿ ಕುಳಿತಿರುವುದನ್ನು ನೋಡಿ, ಅವರೂ ಕೂಡ ಶೀಘ್ರಗಾಮಿ ರಥಗಳಿಂದ ಕೂಡಲೇ ಆಕಾಶಕ್ಕೆ ತಲುಪಿದರು.॥33॥
ಮೂಲಮ್ - 34
ಮಹದಾಸೀತ್ತಸತ್ತೇಷಾಂ ತುಲ್ಯಂ ಸ್ಥಾನಮವಾಪ್ಯ ತತ್ ।
ಆಕಾಶಯುದ್ಧಂ ತುಮುಲಂ ದೇವದಾನವಯೋರಿವ ॥
ಅನುವಾದ
ಆಕಾಶದಲ್ಲೇ ರಾವಣನೊಂದಿಗೆ ಅವರ ಭಾರೀ ಯುದ್ಧವಾಯಿತು. ಅವರ ಆ ಆಕಾಶ ಯುದ್ಧವು ದೇವ-ದಾನವ ಸಂಗ್ರಾಮದಂತೆ ಭಯಂಕರವಾಗಿತ್ತು.॥34॥
ಮೂಲಮ್ - 35
ತತಸ್ತೇ ರಾವಣಂ ಯುದ್ಧೇ ಶರೈಃ ಪಾವಕಸಂನಿಭೈಃ ।
ವಿಮುಖೀಕೃತ್ಯ ಸಂಹೃಷ್ಟಾ ವಿನೇದುರ್ವಿಧಾನ್ರವಾನ್ ॥
ಅನುವಾದ
ಆ ವರುಣ ಪುತ್ರರು ಅಗ್ನಿತುಲ್ಯ ತೇಜಸ್ವೀ ಬಾಣಗಳಿಂದ ಯುದ್ಧದಲ್ಲಿ ರಾವಣನನ್ನು ಹಿಮ್ಮೆಟ್ಟಿಸಿ, ಬಹಳ ಹರ್ಷದಿಂದ ಮಹಾಸಿಂಹನಾದ ಮಾಡಿದರು.॥35॥
ಮೂಲಮ್ - 36
ತತೋ ಮಹೋದರಃ ಕ್ರುದ್ಧೋ ರಾಜಾನಂ ವೀಕ್ಷ್ಯ ಧರ್ಷಿತಮ್ ।
ತ್ಯಕ್ತ್ವಾಮೃತ್ಯುಭಯಂ ವೀರೋ ಯುದ್ಧಾಕಾಂಕ್ಷೀ ವ್ಯಲೋಕಯತ್ ॥
ಅನುವಾದ
ರಾಜಾ ರಾವಣನು ತಿರಸ್ಕೃತನಾದುದನ್ನು ನೋಡಿ ಮಹೋದರನಿಗೆ ಭಾರೀ ಕ್ರೋಧ ಬಂತು. ಅವನು ಮೃತ್ಯುಭಯವನ್ನು ಬಿಟ್ಟು ಯುದ್ಧದ ಇಚ್ಛೆಯಿಂದ ವರುಣ ಪುತ್ರರನ್ನು ನೋಡಿದನು.॥36॥
ಮೂಲಮ್ - 37
ತೇನ ತೇ ವಾರುಣಾ ಯುದ್ಧೇ ಕಾಮಗಾಃ ಪವನೋಪಮಾಃ ।
ಮಹೋದರೇಣ ಗದಯಾ ಹಯಾಸ್ತೇ ಪ್ರಯಯುಃ ಕ್ಷಿತಿಮ್ ॥
ಅನುವಾದ
ವರುಣನ ಕುದುರೆಗಳು ಗಾಳಿಯಂತೆ ಸಂಚರಿಸುತ್ತಾ, ಒಡೆಯನ ಇಚ್ಛೆಗನುಸಾರ ಓಡುತ್ತಿತ್ತು. ಮಹೋದರನು ಅವುಗಳ ಮೇಲೆ ಗದಾಘಾತ ಮಾಡಿದನು. ಗದೆಯ ಏಟಿನಿಂದ ಅವು ಧರಾಶಾಯಿಯಾದವು.॥37॥
ಮೂಲಮ್ - 38
ತೇಷಾಂ ವರುಣಸೂನೂನಾಂ ಹತ್ವಾ ಯೋಧಾನ್ಹಯಾಂಶ್ಚ ತಾನ್ ।
ಮುಮೋಚಾಶು ಮಹಾನಾದಂ ವಿರಥಾನ್ಪ್ರೇಕ್ಷ್ಯ ತಾನ್ ಸ್ಥಿತಾನ್ ॥
ಅನುವಾದ
ವರುಣಪುತ್ರರ ಸೈನ್ಯವನ್ನು, ಕುದುರೆಗಳನ್ನು ಕೊಂದು ರಥಹೀನರಾದವರನ್ನು ಮಹೋದರನು ಕೂಡಲೇ ಜೋರಾಗಿ ಗರ್ಜಿಸತೊಡಗಿದನು.॥38॥
ಮೂಲಮ್ - 39
ತೇ ತು ತೇಷಾಂ ರಥಾಃ ಸಾಶ್ವಾಃ ಸಹ ಸಾರಥಿಭಿರ್ನರೈಃ ।
ಮಹೋದರೇಣ ನಿಹತಾಃ ಪತಿತಾಃ ಪೃಥಿವೀತಲೇ ॥
ಅನುವಾದ
ಮಹೋದರನ ಗದಾಘಾತದಿಂದ ವರುಣಪುತ್ರರ ರಥಗಳೂ, ಕುದುರೆಗಳೂ, ಶ್ರೇಷ್ಠ ಸಾರಥಿಗಳೊಂದಿಗೆ ಚೂರು-ಚೂರು ಆಗಿ ಭೂಮಿಯಲ್ಲಿ ಬಿದ್ದುಬಿಟ್ಟರು.॥39॥
ಮೂಲಮ್ - 40
ತೇ ತು ತ್ಯಕ್ತ್ವಾ ರಥಾನ್ಪುತ್ರಾ ವರುಣಸ್ಯ ಮಹಾತ್ಮನಃ ।
ಆಕಾಶೇ ವಿಷ್ಠಿತಾಃ ಶೂರಾಃ ಸ್ವಪ್ರಭಾವಾನ್ನ ವಿವ್ಯಥುಃ ॥
ಅನುವಾದ
ಮಹಾತ್ಮಾ ವರುಣನ ಆ ಶೂರವೀರ ಪುತ್ರರು ರಥವನ್ನು ಬಿಟ್ಟು ತನ್ನ ಪ್ರಭಾವದಿಂದಲೇ ಆಕಾಶದಲ್ಲಿ ನಿಂತುಕೊಂಡರು. ಅವರಿಗೆ ಕೊಂಚವೂ ವ್ಯಥೆಯಾಗಲಿಲ್ಲ.॥40॥
ಮೂಲಮ್ - 41
ಧನೂಂಷಿ ಕೃತ್ವಾ ಸಜ್ಜಾನಿ ವಿನಿರ್ಭಿದ್ಯ ಮಹೋದರಮ್ ।
ರಾವಣಂ ಸಮರೇ ಕ್ರುದ್ಧಾಃ ಸಹಿತಾಃ ಸಮವಾರಯನ್ ॥
ಅನುವಾದ
ಅವರು ಧನುಸ್ಸನ್ನು ಸಜ್ಜುಗೊಳಿಸಿ ಮಹೋದರನನ್ನು ಕ್ಷತ-ವಿಕ್ಷತಗೊಳಿಸಿ, ಎಲ್ಲರೂ ಕುಪಿತರಾಗಿ ರಾವಣನನ್ನು ಮುತ್ತಿದರು.॥41॥
ಮೂಲಮ್ - 42
ಸಾಯಕೈಶ್ಚಾಪವಿಭ್ರಷ್ಟೈರ್ವಜ್ರಕಲ್ಪೈಃ ಸುದಾರುಣೈಃ ।
ದಾರಯಂತಿ ಸ್ಮ ಸಂಕ್ರುದ್ಧಾ ಮೇಘಾ ಇವ ಮಹಾಗಿರಿಮ್ ॥
ಅನುವಾದ
ಮತ್ತೆ ಅವರು ಅತ್ಯಂತ ಕುಪಿತರಾಗಿ ಮಹಾ ಪರ್ವತದ ಮೇಲೆ ಮೇಘಗಳು ಮಳೆಗರೆವಂತೆ ಧನುಸ್ಸಿನಿಂದ ಚಿಮ್ಮಿದ ವಜ್ರದಂತಹ ಭಯಂಕರ ಬಾಣಗಳಿಂದ ರಾವಣ ನನ್ನು ವಿದೀರ್ಣಗೊಳಿಸಿದರು.॥42॥
ಮೂಲಮ್ - 43
ತತಃ ಕ್ರುದ್ಧೋ ದಶಗ್ರೀವಃ ಕಾಲಾಗ್ನಿರಿವ ಮೂರ್ಛಿತಃ ।
ಶರವರ್ಷಂ ಮಹಾಘೋರಂ ತೇಷಾಂ ಮರ್ಮ ಸ್ವಪಾತಯತ್ ॥
ಅನುವಾದ
ಇದನ್ನು ನೋಡಿದ ರಾವಣನು ಪ್ರಳಯಕಾಲದ ಅಗ್ನಿಯಂತೆ ರೋಷಗೊಂಡು, ಆ ವರುಣ ಪುತ್ರರ ಮರ್ಮಸ್ಥಾನಗಳಲ್ಲಿ ಘೋರ ಬಾಣಗಳ ಮಳೆಗರೆದನು.॥43॥
ಮೂಲಮ್ - 44½
ಮುಸಲಾನಿ ವಿಚಿತ್ರಾಣಿ ತತೋ ಭಲ್ಲಶತಾನಿ ಚ ।
ಪಟ್ಟಿಶಾಂಶ್ಚೈವ ಶಕ್ತೀಶ್ಚ ಶತಘ್ನೀರ್ಮಹತೀರಪಿ ॥
ಪಾತಯಾಮಾಸ ದುರ್ಧರ್ಷಸ್ತೇಷಾಮುಪರಿ ವಿಷ್ಠಿತಃ ।
ಅನುವಾದ
ಪುಷ್ಪಕ ವಿಮಾನದಲ್ಲಿ ಕುಳಿತಿರುವ ಆ ದುರ್ದರ್ಷವೀರನು ಅವರೆಲ್ಲರನ್ನು ವಿಚಿತ್ರ ಮುಸಲಗಳಿಂದ, ಭಲ್ಲೆ, ಪಟ್ಟಿಶ, ಶಕ್ತಿ ದೊಡ್ಡ-ದೊಡ್ಡ ಶತಘ್ನಿಗಳಿಂದ ಪ್ರಹರಿಸಿದನು.॥44½॥
ಮೂಲಮ್ - 45
ಅಪವಿದ್ಧಾಸ್ತು ತೇ ವೀರಾ ವಿನಿಷ್ಪೇತುಃ ಪದಾತಯಃ ॥
ಮೂಲಮ್ - 46
ತತಸ್ತೇನೈವ ಸಹಸಾ ಸೀದಂತಿ ಸ್ಮ ಪದಾತಿನಃ ।
ಮಹಾಪಂಕಮಿವಾಸಾದ್ಯ ಕುಂಜರಾಃ ಷಷ್ಟಿಹಾಯನಾಃ ॥
ಅನುವಾದ
ಆ ಅಸ್ತ್ರ-ಶಸ್ತ್ರಗಳಿಂದ ಗಾಯಗೊಂಡ ಪದಾತಿವೀರರು ಯುದ್ಧಕ್ಕಾಗಿ ಪುನಃ ಮುಂದುವರಿದರು, ಆದರೆ ಕಾಲಾಳುಗಳಾದ್ದರಿಂದ ಆ ಅಸ್ತ್ರ-ಶಸ್ತ್ರಗಳ ವರ್ಷಾದಿಂದ ಸಂಕಟದಲ್ಲಿ ಬಿದ್ದು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಮುದಿ ಆನೆಯಂತೆ ಕಷ್ಟಪಟ್ಟರು.॥45-46॥
ಮೂಲಮ್ - 47
ಸೀದಮಾನಾನ್ ಸುತಾನ್ ಸುಷ್ಟ್ವಾ ವಿಹ್ವಲಾನ್ಸ ಮಹಾಬಲಃ ।
ನನಾದ ರಾವಣೋ ಹರ್ಷಾನ್ಮಹಾನಂಬುಧರೋ ಯಥಾ ॥
ಅನುವಾದ
ವರುಣನ ಪುತ್ರರು ವ್ಯಾಕುಲರಾಗಿರುವುದನ್ನು ನೋಡಿ ಮಹಾಬಲಿ ರಾವಣನು ಮಹಾಮೇಘದಂತೆ ಜೋರಾಗಿ ಹರ್ಷದಿಂದ ಗರ್ಜಿಸತೊಡಗಿದನು.॥47॥
ಮೂಲಮ್ - 48
ತತೋ ರಕ್ಷೋ ಮಹಾನಾದಾನ್ಮುಕ್ತ್ವಾ ಹಂತಿ ಸ್ಮ ವಾರುಣಾನ್ ।
ನಾನಾ ಪ್ರಹರಣೋಪೇತೈರ್ಧಾರಾಪಾತೈರಿವಾಂಬುದಃ ॥
ಅನುವಾದ
ಗಟ್ಟಿಯಾಗಿ ಸಿಂಹನಾದ ಮಾಡಿ ಆ ನಿಶಾಚರನು ಪುನಃ ನಾನಾ ರೀತಿಯ ಅಸ್ತ್ರ-ಶಸ್ತ್ರಗಳಿಂದ ವರುಣ ಪುತ್ರರನ್ನು ಮೋಡಗಳು ಮುಸಲಧಾರೆಯಿಂದ ವೃಕ್ಷಗಳನ್ನು ಪೀಡಿಸುವಂತೆ ಹೊಡೆಯತೊಡಗಿದನು.॥48॥
ಮೂಲಮ್ - 49
ತತಸ್ತೇ ವಿಮುಖಾಃ ಸರ್ವೇ ಪತಿತಾ ಧರಣೀತಲೇ ।
ರಣಾತ್ಸ್ವಪುರುಷೈಃ ಶೀಘ್ರಂ ಗೃಹಾಣ್ಯೇವ ಪ್ರವೇಶಿತಾಃ ॥
ಅನುವಾದ
ಮತ್ತೆ ಆ ಎಲ್ಲ ವರುಣ ಪುತ್ರರು ಯುದ್ಧದಿಂದ ವಿಮುಖರಾಗಿ ನೆಲಕ್ಕೆ ಬಿದ್ದರು. ಬಳಿಕ ಅವರ ಸೇವಕರು ಅವರನ್ನು ರಣರಂಗದಿಂದ ಎತ್ತಿಕೊಂಡು ಅರಮನೆಗೆ ಕೊಂಡುಹೋದರು.॥49॥
ಮೂಲಮ್ - 50
ತಾನಬ್ರವೀತ್ತತೋ ರಕ್ಷೋ ವರುಣಾಯ ನಿವೇದ್ಯತಾಮ್ ।
ರಾವಣಂ ತ್ವಬ್ರವೀನ್ಮಂತ್ರೀ ಪ್ರಹಾಸೋ ನಾಮ ವಾರುಣಃ ॥
ಅನುವಾದ
ಅನಂತರ ಆ ರಾಕ್ಷಸನು ವರುಣನ ಸೇವಕರಲ್ಲಿ ಹೇಳಿದನು - ಈಗ ವರುಣನೇ ಸ್ವತಃ ಯುದ್ಧಕ್ಕೆ ಬರುವಂತೆ ಹೋಗಿ ಹೇಳಿರಿ. ಆಗ ವರುಣನ ಮಂತ್ರಿ ಪ್ರಭಾಸನು ರಾವಣನಲ್ಲಿ ಹೇಳಿದನು.॥50॥
ಮೂಲಮ್ - 51
ಗತಃ ಖಲು ಮಹಾರಾಜೋ ಬ್ರಹ್ಮಲೋಕಂ ಜಲೇಶ್ವರಃ ।
ಗಾಂಧರ್ವಂ ವರುಣಃ ಶ್ರೋತುಂ ಯಂ ತ್ವಾಮಾಹ್ವಯಸೇ ಯುಧಿ ॥
ಅನುವಾದ
ರಾಕ್ಷಸರಾಜನೇ! ಯುದ್ಧಕ್ಕಾಗಿ ನೀನು ಕರೆಯುತ್ತಿರುವ ಜಲದ ಸ್ವಾಮಿ ಮಹಾರಾಜಾ ವರುಣನು ಸಂಗೀತ ಕೇಳಲು ಬ್ರಹ್ಮಲೋಕಕ್ಕೆ ಹೋಗಿರುವರು.॥51॥
ಮೂಲಮ್ - 52
ತತ್ಕಿಂ ತವ ವೃಥಾ ವೀರ ಪರಿಶ್ರಮ್ಯ ಗತೇ ನೃಪೇ ।
ಯೇ ತು ಸಂನಿಹಿತಾ ವೀರಾಃ ಕುಮಾರಾಸ್ತೇ ಪರಾಜಿತಾಃ ॥
ಅನುವಾದ
ವೀರನೇ! ರಾಜಾ ವರುಣನು ಇಲ್ಲಿ ಇಲ್ಲದಿದ್ದಾಗ ಯುದ್ಧಕ್ಕಾಗಿ ವ್ಯರ್ಥಪರಿಶ್ರಮದಿಂದ ಏನು ಲಾಭ? ಇಲ್ಲಿ ಇದ್ದ ಅವನ ವೀರ ಪುತ್ರರು ನಿನ್ನಿಂದ ಪರಾಜಿತರಾಗಿರುವರು.॥52॥
ಮೂಲಮ್ - 53
ರಾಕ್ಷಸೇಂದ್ರಸ್ತು ತಚ್ಛ್ರುತ್ವಾ ನಾಮ ವಿಶ್ರಾವ್ಯಚಾತ್ಮನಃ ।
ಹರ್ಷಾನ್ನಾದಂ ವಿಮುಂಚನ್ವೈ ನಿಷ್ಕ್ರಾಂತೋ ವರುಣಾಲಯಾತ್ ॥
ಅನುವಾದ
ಮಂತ್ರಿಯ ಈ ಮಾತನ್ನು ಕೇಳಿ ರಾಕ್ಷಸೇಶ್ವರ ರಾವಣನು ತನ್ನ ನಾಮವನ್ನು ಘೋಷಿಸುತ್ತಾ, ಸಿಂಹನಾದ ಮಾಡುತ್ತಾ ಮರುಣಾಲಯದಿಂದ ಹೊರಗೆ ಹೊರಟು ಹೋದನು.॥53॥
ಮೂಲಮ್ - 54
ಆಗತಸ್ತು ಪಥಾ ಯೇನ ತೇನೈವ ವಿನಿವೃತ್ಯ ಸಃ ।
ಲಂಕಾಮಭಿಮುಖೋ ರಕ್ಷೋ ನಭಸ್ತಲಗತೋ ಯಯೌ ॥
ಅನುವಾದ
ಯಾವ ಮಾರ್ಗದಿಂದ ಬಂದಿದ್ದನೋ ಅದೇ ದಾರಿಯಿಂದ ಮರಳಿ ಆಕಾಶಮಾರ್ಗದಿಂದ ಲಂಕೆಯ ಕಡೆಗೆ ತೆರಳಿದನು.॥54॥*
ಟಿಪ್ಪನೀ
- ಕೆಲವು ಪ್ರತಿಗಳಲ್ಲಿ ಇಪ್ಪತ್ತಮೂರನೆಯ ಸರ್ಗದ ಬಳಿಕ ಐದು ಸಂಕ್ಷಿಪ್ತ ಸರ್ಗಗಳು ದೊರೆಯುತ್ತವೆ. ಅದರಲ್ಲಿ ರಾವಣನ ದಿಗ್ವಿಜಯವನ್ನು ವಿಸ್ತಾರವಾಗಿ ವರ್ಣಿಸಿದೆ. ಅನಾವಶ್ಯಕ ವಿಸ್ತಾರದ ಭಯದಿಂದ ಇಲ್ಲಿ ಅವನ್ನು ತೆಗೆದುಕೊಳ್ಳಲಿಲ್ಲ.
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗ ಪೂರ್ಣವಾಯಿತು. ॥23॥