०२२ यम-पराजयः

[ಇಪ್ಪತ್ತೆರಡನೆಯ ಸರ್ಗ]

ಭಾಗಸೂಚನಾ

ಯಮ-ರಾವಣರ ಯುದ್ಧ, ರಾವಣನ ವಧೆಗಾಗಿ ಯಮನು ಕಾಲದಂಡವನ್ನೆತ್ತಿದುದು, ಬ್ರಹ್ಮನ ಸಲಹೆಯಂತೆ ಕಾಲದಂಡವನ್ನು ಹಿಂತೆಗೆದುಕೊಂಡುದು, ವಿಜಯಿಯಾದ ರಾವಣನು ಯಮಲೋಕದಿಂದ ಹೊರಟಿದುದು

ಮೂಲಮ್ - 1

ಸ ತಸ್ಯ ತು ಮಹಾನಾದಂ ಶ್ರುತ್ವಾ ವೈವಸ್ವತಃ ಪ್ರಭುಃ ।
ಶತ್ರುಂ ವಿಜಯಿನಂ ಮೇನೇ ಸ್ವಬಲಸ್ಯ ಚ ಸಂಕ್ಷಯಮ್ ॥

ಅನುವಾದ

(ಅಗಸ್ತ್ಯರು ಹೇಳುತ್ತಾರೆ-ರಘುನಂದನ !) ರಾವಣನ ಆ ಮಹಾನಾದವನ್ನು ಕೇಳಿ ಸೂರ್ಯಪುತ್ರ ಭಗವಾನ್ ಯಮನು ಶತ್ರು ವಿಜಯಿಯಾಗಿದ್ದಾನೆ ಹಾಗೂ ನನ್ನ ಸೈನ್ಯವು ನಾಶವಾಯಿತೆಂದು ತಿಳಿದನು.॥1॥

ಮೂಲಮ್ - 2

ಸ ಹಿ ಯೋಧಾನ್ಹತಾನ್ಮತ್ವಾ ಕ್ರೋಧ ಸಂರಕ್ತಲೋಚನಃ ।
ಅಬ್ರವೀತ್ತ್ವರಿತಃ ಸೂತಂ ರಥೋ ಮೇ ಉಪನೀಯತಾಮ್ ॥

ಅನುವಾದ

ತನ್ನ ಯೋಧರು ಹತರಾದರೆಂದು ತಿಳಿದು ಯಮನ ಕಣ್ಣುಗಳು ಕ್ರೋಧದಿಂದ ಕೆಂಪಾದವು. ಸಾರಥಿಗೆ - ‘ನನ್ನ ರಥವನ್ನು ತೆಗೆದುಕೊಂಡು ಬಾ’ ಎಂದು ಆಜ್ಞಾಪಿಸಿದನು.॥2॥

ಮೂಲಮ್ - 3

ತಸ್ಯ ಸೂತಸ್ತದಾ ದಿವ್ಯಮುಪಸ್ಥಾಪ್ಯ ಮಹಾರಥಮ್ ।
ಸ್ಥಿತಃ ಸ ಚ ಮಹಾತೇಜಾ ಅಧ್ಯಾರೋಹತ ತಂ ರಥಮ್ ॥

ಅನುವಾದ

ಆಗ ಸಾರಥಿಯು ಕೂಡಲೇ ದಿವ್ಯವಿಶಾಲವಾದ ರಥವನ್ನು ತಂದು ನಿಲ್ಲಿಸಿ ವಿನೀತ ಭಾವದಿಂದ ಎದುರಿಗೆ ನಿಂತುಕೊಂಡನು. ಮತ್ತೆ ಮಹಾತೇಜಸ್ವೀ ಯಮದೇವತೆ ರಥದಲ್ಲಿ ಆರೂಢನನಾದನು.॥3॥

ಮೂಲಮ್ - 4

ಪ್ರಾಸಮುದ್ಗರಹಸ್ತಶ್ಚ ಮೃತ್ಯುಸ್ತಸ್ಯಾಗ್ರತಃ ಸ್ಥಿತಃ ।
ಯೇನ ಸಂಕ್ಷಿಪ್ಯತೇ ಸರ್ವಂ ತ್ರೈಲೋಕ್ಯಮಿದಮವ್ಯಯಮ್ ॥

ಅನುವಾದ

ಅವನ ಮುಂದುಗಡೆ ಪ್ರಾಸ, ಮುದ್ಗರಗಳನ್ನು ಧರಿಸಿದ್ದ ಮೃತ್ಯುದೇವತೆ ನಿಂತಿದ್ದನು. ಅವನು ಪ್ರವಾಹರೂಪದಿಂದ ಸದಾ ಇರುವ ಈ ತ್ರಿಭುವನಗಳನ್ನು ನಾಶಮಾಡುವವನಾಗಿದ್ದನು.॥4॥

ಮೂಲಮ್ - 5

ಕಾಲದಂಡಸ್ತು ಪಾರ್ಶ್ವಸ್ಥೋ ಮೂರ್ತಿಮಾನಸ್ಯ ಚಾಭವತ್ ।
ಯಮಪ್ರಹರಣಂ ದಿವ್ಯಂ ತೇಜಸಾ ಜ್ವಲದಗ್ನಿವತ್ ॥

ಅನುವಾದ

ಅವನ ಪಕ್ಕದಲ್ಲಿ ಯಮನ ಮುಖ್ಯ, ದಿವ್ಯ ಆಯುಧವಾದ ಕಾಲದಂಡವು ಮೂರ್ತಿಮಂತವಾಗಿ ನಿಂತಿತ್ತು. ಅದು ಅಗ್ನಿಯಂತೆ ಪ್ರಜ್ವಲಿಸುತ್ತಿತ್ತು.॥5॥

ಮೂಲಮ್ - 6

ತಸ್ಯ ಪಾರ್ಶ್ವೇಷು ನಿಚ್ಛಿದ್ರಾಃ ಕಾಲಪಾಶಾಃ ಪ್ರತಿಷ್ಠಿತಾಃ ।
ಪಾವಕಸ್ಪರ್ಶ ಸಂಕಾಶಃ ಸ್ಥಿತೋ ಮೂರ್ತಶ್ಚ ಮುದ್ಗರಃ ॥

ಅನುವಾದ

ಪಕ್ಕದಲ್ಲಿ ಛಿದ್ರರಹಿತ ಕಾಲಪಾಶವು ನಿಂತಿದ್ದು, ಅದರ ಸ್ಪರ್ಶ ಅಗ್ನಿಯಂತೆ ದುಃಸಹವಾಗಿತ್ತು. ಅವನ ಮುದ್ಗರವೂ ಮೂರ್ತಿಮಂತವಾಗಿ ಉಪಸ್ಥಿತವಾಗಿತ್ತು.॥6॥

ಮೂಲಮ್ - 7

ತತೋ ಲೋಕತ್ರಯಂ ಕ್ಷುಬ್ಧಮಕಂಪಂತ ದಿವೌಕಸಃ ।
ಕಾಲಂ ದೃಷ್ಟ್ವಾ ತಥಾ ಕ್ರುದ್ಧಂ ಸರ್ವಲೋಕಭಯಾವಹಮ್ ॥

ಅನುವಾದ

ಸಮಸ್ತ ಲೋಕಗಳನ್ನು ಭಯ ಗೊಳಿಸುವ ಸಾಕ್ಷಾತ್ ಕಾಲನು ಕುಪಿತನಾಗಿರುವುದನ್ನು ನೋಡಿ ಮೂರು ಲೋಕಗಳಲ್ಲಿ ಗಲಿಬಿಲಿಯುಂಟಾಯಿತು. ಸಮಸ್ತ ದೇವತೆಗಳು ನಡುಗಿ ಹೋದರು.॥7॥

ಮೂಲಮ್ - 8

ತತಸ್ತ್ವಚೋದಯತ್ ಸೂತಸ್ತಾನಶ್ವಾನ್ ರುಚಿರಪ್ರಭಾನ್ ।
ಪ್ರಯಯೌ ಭೀಮಸಂನಾದೋ ಯತ್ರ ರಕ್ಷಃಪತಿಃ ಸ್ಥಿತಃ ॥

ಅನುವಾದ

ಬಳಿಕ ಸಾರಥಿಯು ಸುಂದರ ಕಾಂತಿಯುಳ್ಳ ಕುದುರೆಗಳನ್ನು ನಡೆಸಿದನು. ಆ ರಥವು ಭಯಾನಕ ಶಬ್ದಮಾಡುತ್ತಾ ರಾವಣನು ಇದ್ದಲ್ಲಿಗೆ ಬಂದು ನಿಂತಿತು.॥8॥

ಮೂಲಮ್ - 9

ಮುಹೂರ್ತೇನ ಯಮಂ ತೇ ತು ಹಯಾ ಹರಿಹಯೋಪಮಾಃ ।
ಪ್ರಾಪಯನ್ಮನಸಸ್ತುಲ್ಯಾ ಯತ್ರ ತತ್ಪ್ರಸ್ತುತಂ ರಣಮ್ ॥

ಅನುವಾದ

ಇಂದ್ರನ ಕುದುರೆಗಳಂತಿದ್ದ, ಮನೋವೇಗದಂತೆ ಶೀಘ್ರಗಾಮಿ ಕುದುರೆಗಳು ಯಮರಾಜನನ್ನು ಕ್ಷಣಾರ್ಧದಲ್ಲಿ ಯುದ್ಧ ನಡೆಯುತ್ತಿದ್ದ ರಣರಂಗಕ್ಕೆ ತಂದು ಬಿಟ್ಟವು.॥9॥

ಮೂಲಮ್ - 10

ದೃಷ್ಟ್ವಾ ತಥೈವ ವಿಕೃತಂ ರಥಂ ಮೃತ್ಯುಸಮನ್ವಿತಮ್ ।
ಸಚಿವಾ ರಾಕ್ಷಸೇಂದ್ರಸ್ಯ ಸಹಸಾ ವಿಪ್ರದುದ್ರುವುಃ ॥

ಅನುವಾದ

ಮೃತ್ಯುದೇವತೆ ರಥದಲ್ಲಿ ಬಂದಿರುವುದನ್ನು ನೋಡಿ ರಾಕ್ಷಸರಾಜನ ಸಚಿವರು ಅಲ್ಲಿಂದ ಓಡಿಹೋದರು.॥10॥

ಮೂಲಮ್ - 11

ಲಘುಸತ್ತ್ವತಯಾ ತೇ ಹಿ ನಷ್ಟಸಂಜ್ಞಾ ಭಯಾರ್ದಿತಾಃ ।
ನೇಹ ಯೋದ್ಧುಂ ಸಮರ್ಥಾಃ ಸ್ಮ ಇತ್ಯುಕ್ತ್ವಾ ಪ್ರಯಯುರ್ದಿಶಃ ॥

ಅನುವಾದ

ಅಲ್ಪ ಶಕ್ತಿಯುಳ್ಳ ಅವರು ಭಯಗೊಂಡು ‘ನಾವು ಯುದ್ಧ ಮಾಡಲು ಸಮರ್ಥರಲ್ಲ’ ಎಂದು ಅಂದುಕೊಂಡು ಎಚ್ಚರ ತಪ್ಪಿದವರಂತೆ ದಿಕ್ಕಾಪಾಲಾಗಿ ಓಡಿಹೋದರು.॥11॥

ಮೂಲಮ್ - 12

ಸ ತು ತಂ ತಾದೃಶಂ ದೃಷ್ಟ್ವಾ ರಥಂ ಲೋಕಭಯಾವಹಮ್ ।
ನಾಕ್ಷುಭ್ಯತ ದಶಗ್ರೀವೋ ನ ಚಾಪಿ ಭಯಮಾವಿಶತ್ ॥

ಅನುವಾದ

ಆದರೆ ಸಮಸ್ತ ಪ್ರಪಂಚವನ್ನು ಭಯಗೊಳಿಸುವ ವಿಕರಾಳ ರಥವನ್ನು ನೋಡಿಯೂ ದಶಗ್ರೀವನು ಭಯಪಡದೆ, ಕ್ಷೋಭೆಗೊಳ್ಳಲಿಲ್ಲ.॥12॥

ಮೂಲಮ್ - 13

ಸ ತು ರಾವಣಮಾಸಾದ್ಯ ವ್ಯಸೃಜಚ್ಛಕ್ತಿತೋಮರಾನ್ ।
ಯಮೋ ಮರ್ಮಾಣಿ ಸಂಕ್ರುದ್ಧೋ ರಾವಣಸ್ಯ ನ್ಯಕೃಂತತ ॥

ಅನುವಾದ

ಅತ್ಯಂತ ಕ್ರೋಧಗೊಂಡ ಯಮರಾಜನು ರಾವಣನ ಬಳಿಗೆ ಹೋಗಿ ಶಕ್ತಿ, ತೋಮರಗಳಿಂದ ಅವನ ಮರ್ಮಸ್ಥಾನಗಳಲ್ಲಿ ಪ್ರಹರಿಸಿದನು.॥13॥

ಮೂಲಮ್ - 14

ರಾವಣಸ್ತು ತತಃ ಸ್ವಸ್ಥಃ ಶರವರ್ಷಂ ಮುಮೋಚ ಹ ।
ತಸ್ಮಿನ್ ವೈವಸ್ವತರಥೇ ತೋಯವರ್ಷಮಿವಾಂಬುದಃ ॥

ಅನುವಾದ

ಆಗ ರಾವಣನೂ ಸುಧಾರಿಸಿ ಕೊಂಡು ಯಮರಾಜನ ರಥದ ಮೇಲೆ ಮೋಡಗಳು ಮಳೆಗರೆವಂತೆ ಬಾಣಗಳ ಮಳೆಗರೆದನು.॥14॥

ಮೂಲಮ್ - 15

ತತೋ ಮಹಾಶಕ್ತಿಶತೈಃ ಪಾತ್ಯಮಾನೈರ್ಮಹೋರಸಿ ।
ನಾಶಕ್ನೋತ್ಪ್ರತಿಕರ್ತುಂ ಸ ರಾಕ್ಷಸಃ ಶಲ್ಯಪೀಡಿತಃ ॥

ಅನುವಾದ

ರಾವಣನ ಎದೆಯ ಮೇಲೆ ನೂರಾರು ಮಹಾಶಕ್ತಿಗಳ ಪ್ರಹಾರದಿಂದ ಆ ರಾಕ್ಷಸನು ಶಲ್ಯಪ್ರಹಾರದಿಂದ ಪೀಡಿತನಾಗಿ ಯಮರಾಜನನ್ನು ಎದುರಿಸಲೂ ಅಸಮರ್ಥನಾದನು.॥15॥

ಮೂಲಮ್ - 16

ಏವಂ ನಾನಾ ಪ್ರಹರಣೈರ್ಯಮೇನಾಮಿತ್ರಕರ್ಷಿಣಾ ।
ಸಪ್ತರಾತ್ರಂ ಕೃತಃ ಸಂಖ್ಯೇ ವಿಸಂಜ್ಞೋ ವಿಮುಖೋರಿಪುಃ ॥

ಅನುವಾದ

ಹೀಗೆ ಶತ್ರುಸೂದನ ಯಮನು ನಾನಾ ಪ್ರಕಾರದ ಅಸ್ತ್ರ-ಶಸ್ತ್ರಗಳನ್ನು ಪ್ರಯೋಗಿಸುತ್ತಾ ಒಂದೇ ಸಮನೇ ಏಳು ದಿನ ಯುದ್ಧ ಮಾಡಿದನು. ಇದರಿಂದ ಶತ್ರು ರಾವಣನು ಎಚ್ಚರದಪ್ಪಿ ಯುದ್ಧದಿಂದ ವಿಮುಖನಾದನು.॥16॥

ಮೂಲಮ್ - 17

ತದಾಽಽಸೀತ್ತುಮುಲಂ ಯುದ್ಧಂ ಯಮರಾಕ್ಷಸಯೋರ್ದ್ವಯೋಃ ।
ಜಯಮಾಕಾಂಕ್ಷತೋರ್ವೀರ ಸಮರೇಷ್ವ ನಿವರ್ತಿನೋಃ ॥

ಅನುವಾದ

ವೀರರಘುನಂದನ! ಆ ಇಬ್ಬರು ಯೋಧರು ಸಮರಾಂಗಣದಿಂದ ಹಿಮ್ಮೆಟ್ಟುತ್ತಿರಲಿಲ್ಲ. ಇಬ್ಬರೂ ವಿಜಯ ಬಯಸುತ್ತಿದ್ದರು. ಇದರಿಂದ ಯಮರಾಜ ಮತ್ತು ರಾಕ್ಷಸರಿಬ್ಬರಿಗೂ ಆಗ ಘೋರ ಯುದ್ಧವಾಗತೊಡಗಿತು.॥17॥

ಮೂಲಮ್ - 18

ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಪ್ರಜಾಪತಿಂ ಪುರಸ್ಕೃತ್ಯ ಸಮೇತಾಸ್ತದ್ರಣಾಜಿರೇ ॥

ಅನುವಾದ

ಆಗ ದೇವತಾ, ಗಂಧರ್ವ, ಸಿದ್ಧ ಮತ್ತು ಮಹರ್ಷಿಗಳು ಪ್ರಜಾಪತಿ ಬ್ರಹ್ಮದೇವರನ್ನು ಮುಂದೆ ಮಾಡಿ ಸಮರಾಂಗಣದಲ್ಲಿ ಬಂದು ಸೇರಿದರು.॥18॥

ಮೂಲಮ್ - 19

ಸಂವರ್ತ ಇವ ಲೋಕಾನಾಂ ಯುಧ್ಯತೋರಭವತ್ತದಾ ।
ರಾಕ್ಷಸಾನಾಂ ಚ ಮುಖ್ಯಸ್ಯ ಪ್ರೇತಾನಾಮೀಶ್ವರಸ್ಯ ಚ ॥

ಅನುವಾದ

ಆ ಸಮಯದಲ್ಲಿ ರಾಕ್ಷಸ ಮುಖ್ಯ ರಾವಣ ಹಾಗೂ ಪ್ರೇತರಾಜ ಯಮನು ಯುದ್ಧ ಪರಾಯಣರಾದಾಗ ಸಮಸ್ತ ಲೋಕಗಳ ಪ್ರಳಯವೇ ಉಪಸ್ಥಿತವಾದಂತೆ ಅನಿಸಿತು.॥19॥

ಮೂಲಮ್ - 20

ರಾಕ್ಷಸೇಂದ್ರೋಽಪಿ ವಿಸ್ಫಾರ್ಯ ಚಾಪಮಿಂದ್ರಾಶನಿಪ್ರಭಮ್ ।
ನಿರಂತರಮಿವಾಕಾಶಂ ಕುರ್ವನ್ ಬಾಣಾಂಸ್ತತೋಽಸೃಜತ್ ॥

ಅನುವಾದ

ರಾಕ್ಷಸರಾಜ ರಾವಣನೂ ಇಂದ್ರಚಾಪದಂತಹ ತನ್ನ ಧನುಸ್ಸನ್ನು ಸೆಳೆದು ಬಾಣಗಳ ಮಳೆಗರೆಯತೊಡಗಿದನು. ಇದರಿಂದ ಆಕಾಶದಲ್ಲಿ ಎಳ್ಳು ಹಾಕಲು ಜಾಗವಿಲ್ಲದಷ್ಟು ದಟ್ಟವಾಗಿ ತುಂಬಿಹೋಯಿತು.॥20॥

ಮೂಲಮ್ - 21

ಮೃತ್ಯುಂ ಚತುರ್ಭಿರ್ವಿಶಿಖೈಃ ಸೂತಂ ಸಪ್ತಭಿರಾರ್ದಯತ್ ।
ಯಮಂ ಶತಸಹಸ್ರೇಣ ಶೀಘ್ರಂ ಮರ್ಮಸ್ವತಾಡಯತ್ ॥

ಅನುವಾದ

ಅವನು ನಾಲ್ಕು ಬಾಣಗಳನ್ನು ಯಮನಿಗೂ, ಏಳು ಬಾಣಗಳನ್ನು ಸಾರಥಿಗೂ ಪ್ರಯೋಗಿಸಿ ಪೀಡಿತಗೊಳಿಸಿದನು. ಮತ್ತೆ ಬೇಗ-ಬೇಗನೇ ಲಕ್ಷಬಾಣಗಳನ್ನು ಪ್ರಯೋಗಿಸಿ ಯಮನ ಮರ್ಮಸ್ಥಾನಗಳಿಗೆ ಆಳವಾಗಿ ಗಾಯಗೊಳಿಸಿದನು.॥21॥

ಮೂಲಮ್ - 22

ತತಃ ಕ್ರುದ್ಧಸ್ಯ ವದನಾದ್ಯಮಸ್ಯ ಸಮಜಾಯತ ।
ಜ್ವಾಲಾಮಾಲೀ ಸನಿಃಶ್ವಾಸಃ ಸಧೂಮಃ ಕೋಪಪಾವಕಃ ॥

ಅನುವಾದ

ಅದರಿಂದ ಯಮಧರ್ಮನ ಕೋಪವು ಎಲ್ಲೆ ಮೀರಿತು. ಅವನ ಮುಖದಿಂದ ಮಹಾಕೋಪವು ಹೊಗೆಯಿಂದ ಕೂಡಿದ ಅಗ್ನಿಜ್ವಾಲೆಗಳ ರೂಪದಲ್ಲಿ ಪ್ರಕಟವಾಯಿತು.॥22॥

ಮೂಲಮ್ - 23

ತದಾಶ್ಚರ್ಯಮಥೋ ದೃಷ್ಟ್ವಾ ದೇವದಾನವಸಂನಿಧೌ ।
ಪ್ರಹರ್ಷಿತೌ ಸುಸಂರಭ್ಧೌ ಮೃತ್ಯುಕಾಲೌ ಬಭೂವತುಃ ॥

ಅನುವಾದ

ದೇವ ದಾನವರ ಎದುರಿನಲ್ಲಿ ಇಂತಹ ಆಶ್ಚರ್ಯಕರ ಘಟನೆ ನೋಡಿ ರೋಷಾವೇಷಗೊಂಡ ಮೃತ್ಯು ಮತ್ತು ಕಾಲರಿಗೆ ಪರಮಾನಂದವಾಯಿತು.॥23॥

ಮೂಲಮ್ - 24

ತತೋ ಮೃತ್ಯುಃ ಕ್ರುದ್ಧತರೋ ವೈವಸ್ವತಮಭಾಷತ ।
ಮುಂಚ ಮಾಂ ಸಮರೇ ಯಾವದ್ಧನ್ಮೀಮಂ ಪಾಪರಾಕ್ಷಸಮ್ ॥

ಅನುವಾದ

ಬಳಿಕ ಮೃತ್ಯುದೇವತೆಯು ಕುಪಿತವಾಗಿ ವೈವಸ್ವತ ಯಮನಲ್ಲಿ ಹೇಳಿತು - ನೀವು ನನ್ನನ್ನು ಪ್ರಯೋಗಿರಿಸಿರಿ, ನಾನು ಯುದ್ಧದಲ್ಲಿ ಈ ಪಾಪೀ ರಾಕ್ಷಸನನ್ನು ಈಗಲೇ ಕೊಂದುಹಾಕುವೆನು, ಆಜ್ಞಾಪಿಸಿರಿ.॥24॥

ಮೂಲಮ್ - 25

ನೈಷ ರಕ್ಷೋ ಭವೇದದ್ಯ ಮರ್ಯಾದಾ ಹಿ ನಿಸರ್ಗತಃ ।
ಹಿರಣ್ಯಕಶಿಪುಃ ಶ್ರೀಮಾನ್ ನಮುಚಿಃ ಶಂಬರಸ್ತಥಾ ॥

ಮೂಲಮ್ - 26

ನಿಸಂದಿರ್ಧೂಮಕೇತುಶ್ಚ ಬಲಿರ್ವೈರೋಚನೋಽಪಿ ಚ ।
ಶಂಭುರ್ದೈತ್ಯೋ ಮಹಾರಾಜೋ ವೃತ್ರೋ ಬಾಣಸ್ತಥೈವ ಚ ॥

ಮೂಲಮ್ - 27

ರಾಜರ್ಷಯಃ ಶಾಸ್ತ್ರವಿದೋ ಗಂಧರ್ವಾಃ ಸಮಹೋರಗಾಃ ।
ಋಷಯಃ ಪನ್ನಗಾ ದೈತ್ಯಾ ಯಕ್ಷಾಶ್ಚ ಹ್ಯಪ್ಸರೋಗಣಾಃ ॥

ಮೂಲಮ್ - 28

ಯುಗಾಂತಪರಿವರ್ತೇ ಚ ಪೃಥಿವೀ ಸಮಹಾರ್ಣವಾ ।
ಕ್ಷಯಂ ನೀತಾ ಮಹಾರಾಜ ಸಪರ್ವತಸರಿದ್ದ್ರುಮಾ ॥

ಮೂಲಮ್ - 29

ಏತೇ ಚಾನ್ಯೇ ಚ ಬಹವೋ ಬಲವಂತೋ ದುರಾಸದಾಃ ।
ವಿನಿಪನ್ನಾ ಮಯಾ ದೃಷ್ಟಾಃ ಕಿಮುತಾಯಂ ನಿಶಾಚರಃ ॥

ಅನುವಾದ

ಪ್ರಭುವೇ ! ನನ್ನೊಡನೆ ಕಾದಾಡಿ ಈ ರಾಕ್ಷಸನು ಬದುಕುಳಿಯಲಾರನು, ಇದು ನನ್ನ ಸ್ವಭಾವಸಿದ್ಧ ಮರ್ಯಾದೆಯಾಗಿದೆ. ಹಿರಣ್ಯಕಶಿಪು, ನಮುಚಿ, ಶಂಬರ, ನಿಸಂದಿ, ಧೂಮಕೇತು, ವಿರೋಚನಕುಮಾರ ಬಲಿ, ಶುಂಭನೆಂಬ ದೈತ್ಯ, ಮಹಾರಾಜ ವೃತ್ರ, ಬಾಣಾಸುರರಂತಹ ಎಷ್ಟೂ ಶಾಸ್ತ್ರವೇತ್ತ ರಾಜರ್ಷಿ, ಗಂಧರ್ವ, ದೊಡ್ಡ-ದೊಡ್ಡ ನಾಗಗಳು, ಋಷಿ. ಸರ್ಪ, ದೈತ್ಯ, ಯಕ್ಷ, ಅಪ್ಸರೆಯರ ಸಮುದಾಯ ಯುಗಾಂತ್ಯದಲ್ಲಿ ಸಮುದ್ರ, ಪರ್ವತ, ನದಿಗಳು ಮತ್ತು ವೃಕ್ಷಗಳೊಂದಿಗೆ ಪೃಥಿವಿ ಇವೆಲ್ಲ ನನ್ನಿಂದ ಕ್ಷಯವಾಗಿವೆ. ಇವುಗಳಲ್ಲದೆ ಬೇರೆ ಅನೇಕ ಬಲಿಷ್ಠ, ದುರ್ಜಯ ವೀರರೂ ಕೂಡ ನನ್ನಿಂದ ವಿನಾಶರಾಗಿ ಹೋಗಿದ್ದಾರೆ. ಹಾಗಿರುವಾಗ ಈ ನಿಶಾಚರ ಯಾವ ಲೆಕ್ಕ.॥25-29॥

ಮೂಲಮ್ - 30

ಮುಂಚ ಮಾಂ ಸಾಧು ಧರ್ಮಜ್ಞ ಯಾವದೇನಂ ನಿಹನ್ಮ್ಯಹಮ್ ।
ನ ಹಿ ಕಶ್ಚಿನ್ಮಯಾ ದೃಷ್ಟೋ ಬಲವಾನಪಿ ಜೀವತಿ ॥

ಅನುವಾದ

ಧರ್ಮಜ್ಞನೇ! ನೀನು ನನ್ನನ್ನು ಪ್ರಯೋಗಿಸಿರಿ, ನಾನು ಇವನನ್ನು ಖಂಡಿತವಾಗಿ ಕೊಂದು ಹಾಕುವೆನು. ಅವನು ಬಲವಂತನಾಗಿದ್ದರೂ ಹೇಗೆ ಬದುಕಿ ಉಳಿಯುವನು? ಎಂದು ನೋಡುತ್ತೇನೆ.॥30॥

ಮೂಲಮ್ - 31

ಬಲಂ ಮಮ ನ ಖಲ್ವೇ ತನ್ಮರ್ಯಾದೈಷಾ ನಿಸರ್ಗತಃ ।
ಸ ದೃಷ್ಟೋ ನ ಮಯಾ ಕಾಲ ಮುಹೂರ್ತಮಪಿ ಜೀವತಿ ॥

ಅನುವಾದ

ಕಾಲನೇ! ನನ್ನ ದೃಷ್ಟಿ ಬಿದ್ದಾಗ ಆ ರಾವಣನು ಎರಡು ಗಳಿಗೆಯೂ ಬದುಕಿರಲಾರನು. ಈ ನನ್ನ ಮಾತು ಕೇವಲ ನನ್ನ ಬಲವನ್ನು ಪ್ರಕಾಶಿಸುವಷ್ಟೇ ಅಲ್ಲ, ಇದು ಸ್ವಭಾವಸಿದ್ಧ ಮರ್ಯಾದೆಯಾಗಿದೆ.॥31॥

ಮೂಲಮ್ - 32

ತಸ್ಯೈವಂ ವಚನಂ ಶ್ರುತ್ವಾ ಧರ್ಮರಾಜಃ ಪ್ರತಾಪವಾನ್ ।
ಅಬ್ರವೀತ್ತತ್ರ ತಂ ಮೃತ್ಯುಂ ತ್ವಂ ತಿಷ್ಠೈನಂ ನಿಹನ್ಮ್ಯಹಮ್ ॥

ಅನುವಾದ

ಮೃತ್ಯುವಿನ ಈ ಮಾತನ್ನು ಕೇಳಿ ಪ್ರತಾಪಿ ಧರ್ಮರಾಜನು ಹೇಳಿದನು - ನೀನು ಇರು, ನಾನೇ ಇವನನ್ನು ಕೊಂದು ಹಾಕುವೆನು.॥32॥

ಮೂಲಮ್ - 33

ತತಃ ಸಂರಕ್ತನಯನಃ ಕ್ರುದ್ಧೋ ವೈವಸ್ವತಃ ಪ್ರಭುಃ ।
ಕಾಲದಂಡಮಮೋಘಂ ತು ತೋಲಯಾಮಾಸ ಪಾಣಿನಾ ॥

ಅನುವಾದ

ಅನಂತರ ಕ್ರೋಧದಿಂದ ಕಣ್ಣು ಕೆಂಪಗಾಗಿಸಿ, ಕ್ರುದ್ಧನಾಗಿದ್ದ ವೈವಸ್ವತ ಯಮನು ತನ್ನ ಅಮೋಘ ಕಾಲದಂಡವನ್ನು ಎತ್ತಿಕೊಂಡನು.॥33॥

ಮೂಲಮ್ - 34

ಯಸ್ಯ ಪಾರ್ಶ್ವೇಷು ನಿಹಿತಾಃ ಕಾಲಪಾಶಾಃ ಪ್ರತಿಷ್ಠಿತಾಃ ।
ಪಾವಕಾಶನಿಸಂಕಾಶೋ ಮುದ್ಗರೋ ಮೂರ್ತಿಮಾನ್ ಸ್ಥಿತಃ ॥

ಮೂಲಮ್ - 35

ದರ್ಶನಾದೇವ ಯಃ ಪ್ರಾಣಾನ್ ಪ್ರಾಣಿನಾಮಪಿ ಕರ್ಷತಿ ।
ಕಿಂ ಪುನಃ ಸ್ಪೃಶಮಾನಸ್ಯ ಪಾತ್ಯಮಾನಸ್ಯ ವಾ ಪುನಃ ॥

ಅನುವಾದ

ಆ ಕಾಲದಂಡದ ದರ್ಶನ ಮಾತ್ರದಿಂದ ಪ್ರಾಣಿಗಳ ಪ್ರಾಣಗಳು ಹಾರಿಹೋಗುತ್ತಿದ್ದವು. ಹಾಗಿರುವಾಗ ಅದರ ಸ್ಪರ್ಶ ಅಥವಾ ಏಟು ಬಿದ್ದರೆ ಪ್ರಾಣಿಗಳು ಸಾಯುವುದರಲ್ಲಿ ಏನು ಹೇಳುವುದಿದೆ.॥34-35॥

ಮೂಲಮ್ - 36

ಸ ಜ್ವಾಲಾಪರಿವಾರಸ್ತು ನಿರ್ದಹನ್ನಿವ ರಾಕ್ಷಸಮ್ ।
ತೇನ ಸ್ಪೃಷ್ಟೋ ಬಲವತಾ ಮಹಾಪ್ರಹರಣೋಸ್ಫುರತ್ ॥

ಅನುವಾದ

ಜ್ವಾಲಾವೃತವಾದ ಆ ಕಾಲದಂಡವು ರಾಕ್ಷಸನನ್ನು ಸುಟ್ಟು ಹಾಕಲು ಸಿದ್ಧವಾಗಿತ್ತು. ಬಲಿಷ್ಠ ಯಮರಾಜನು ಕೈಗೆತ್ತಿಕೊಂಡ ಆ ಮಹಾ ಆಯುಧವು ತನ್ನ ತೇಜದಿಂದ ಪ್ರಕಾಶಿಸುತ್ತಿತ್ತು.॥36॥

ಮೂಲಮ್ - 37

ತತೋ ವಿದುದ್ರುವುಃ ಸರ್ವೇ ತಸ್ಮಾತ್ ತ್ರಸ್ತಾ ರಣಾಜಿರೇ ।
ಸುರಾಶ್ಚ ಕ್ಷುಭಿತಾಃ ಸರ್ವೇ ದೃಷ್ಟ್ವಾ ದಂಡೋದ್ಯತಂ ಯಮಮ್ ॥

ಅನುವಾದ

ಯಮನು ಅದನ್ನು ಎತ್ತಿಕೊಂಡಾಗಲೇ ರಣರಂಗದಲ್ಲಿ ನಿಂತಿದ್ದ ಸೈನಿಕರೆಲ್ಲ ಭಯಗೊಂಡು ಓಡಿಹೋದರು, ಕಾಲದಂಡವನ್ನು ಧರಿಸಿದ ಯಮನನ್ನು ನೋಡಿ ದೇವತೆಗಳೆಲ್ಲ ಕಳವಳಗೊಂಡರು.॥37॥

ಮೂಲಮ್ - 38

ತಸ್ಮಿನ್ ಪ್ರಹರ್ತುಕಾಮೇ ತು ಯಮೇ ದಂಡೇನ ರಾವಣಮ್ ।
ಯಮಂ ಪಿತಾಮಹಃ ಸಾಕ್ಷಾದ್ದರ್ಶಯಿತ್ವೇದಮಬ್ರವೀತ್ ॥

ಅನುವಾದ

ಯಮರಾಜನು ಆ ದಂಡದಿಂದ ರಾವಣನನ್ನು ಹೊಡೆಯುವಷ್ಟರಲ್ಲಿ ಸಾಕ್ಷಾತ್ ಬ್ರಹ್ಮದೇವರು ಅಲ್ಲಿಗೆ ಬಂದು ತಲುಪಿದರು ಹಾಗೂ ಹೀಗೆ ಹೇಳಿದರು.॥38॥

ಮೂಲಮ್ - 39

ವೈವಸ್ವತ ಮಹಾಬಾಹೋ ನ ಖಲ್ವಮಿತವಿಕ್ರಮ ।
ನ ಹಂತವ್ಯಸ್ತ್ವಯೈತೇನ ದಂಡೇನೈಷ ನಿಶಾಚರಃ ॥

ಅನುವಾದ

ಅಮಿತ ಪರಾಕ್ರಮಿ ವೈವಸ್ವತನೇ! ನೀನು ಈ ಕಾಲದಂಡದಿಂದ ನಿಶಾಚರ ರಾವಣನನ್ನು ವಧಿಸಬೇಡ.॥39॥

ಮೂಲಮ್ - 40

ವರಃ ಖಲು ಮಯೈ ತಸ್ಮೈದತ್ತಸ್ತ್ರಿದಶಪುಂಗವ ।
ಸ ತ್ವಯಾ ನಾನೃತಃ ಕಾರ್ಯೋ ಯನ್ಮಯಾ ವ್ಯಾಹೃತಂ ವಚಃ ॥

ಅನುವಾದ

ದೇವಶ್ರೇಷ್ಠನೇ! ನಾನು ಇವನಿಗೆ ದೇವತೆಗಳಿಂದ ಸಾಯದಂತಹ ವರಕೊಟ್ಟಿರುವೆನು. ನಾನು ಹೇಳಿದುದನ್ನು ನೀನು ಸುಳ್ಳಾಗಿಸಬೇಡ.॥40॥

ಮೂಲಮ್ - 41

ಯೋ ಹಿ ಮಾಮನೃತಂ ಕುರ್ಯಾದ್ದೇವೋ ವಾ ಮಾನುಷೋಽಪಿ ವಾ ।
ತ್ರೈಲೋಕ್ಯಮನೃತಂ ತೇನ ಕೃತಂ ಸ್ಯಾನ್ನಾತ್ರ ಸಂಶಯಃ ॥

ಅನುವಾದ

ದೇವತೆ ಅಥವಾ ಮನುಷ್ಯನು ನನ್ನ ಮಾತನ್ನು ಸುಳ್ಳಾಗಿಸಿದವನು ಮೂರು ಲೋಕಗಳನ್ನು ಸುಳ್ಳುಗಾರರನ್ನಾಗಿಸಿದ ಪಾಪಕ್ಕೆ ಗುರಿಯಾಗುವೆ. ಇದರಲ್ಲಿ ಸಂಶಯವೇ ಇಲ್ಲ.॥41॥

ಮೂಲಮ್ - 42

ಕ್ರುದ್ಧೇನ ವಿಪ್ರಮುಕ್ತೋಽಯಂ ನಿರ್ವಿಶೇಷಂ ಪ್ರಿಯಾಪ್ರಿಯೇ ।
ಪ್ರಜಾಃ ಸಂಹರತೇ ರೌದ್ರೋ ಲೋಕತ್ರಯ ಭಯಾವಹಃ ॥

ಅನುವಾದ

ಈ ಕಾಲದಂಡವು ಮೂರು ಲೋಕಗಳಿಗೆ ಭಯಂಕರ ಮತ್ತು ರೌದ್ರವಾಗಿದೆ. ನೀನು ಕ್ರೋಧದಿಂದ ಪ್ರಯೋಗಿಸಿದಾಗ ಇದು ಪ್ರಿಯ-ಅಪ್ರಿಯ ಎಂಬ ಭೇದಭಾವವಿರಿಸದೆ ಎದುರಿಗೆ ಬಂದ ಸಮಸ್ತ ಪ್ರಜೆಯ ಸಂಹಾರ ಮಾಡಿಬಿಡುವುದು.॥42॥

ಮೂಲಮ್ - 43

ಅಮೋಘೋ ಹ್ಯೇಷ ಸರ್ವೇಷಾಂ ಪ್ರಾಣಿನಾಮಮಿತಪ್ರಭಃ ।
ಕಾಲದಂಡೋ ಮಯಾ ಸೃಷ್ಟಃ ಪೂರ್ವ ಮೃತ್ಯುಪುರಸ್ಕೃತಃ ॥

ಅನುವಾದ

ಈ ಅಮಿತ ತೇಜಸ್ವೀ ಕಾಲದಂಡವನ್ನು ಹಿಂದೆ ನಾನೇ ಸೃಷ್ಟಿಸಿದ್ದೆ. ಇದು ಯಾವುದೇ ಪ್ರಾಣಿಯ ಮೇಲೆ ವ್ಯರ್ಥವಾಗುವುದಿಲ್ಲ. ಇದರ ಪ್ರಹಾರದಿಂದ ಎಲ್ಲರ ಮೃತ್ಯುವಾಗುವುದು.॥43॥

ಮೂಲಮ್ - 44

ತನ್ನ ಖಲ್ವೇಷ ತೇ ಸೌಮ್ಯ ಪಾತ್ಯೋ ರಾವಣಮೂರ್ಧನಿ ।
ನ ಹ್ಯಸ್ಮಿನ್ಪತಿತೇ ಕಶ್ಚಿನ್ಮುಹೂರ್ತಮಪಿ ಜೀವತಿ ॥

ಅನುವಾದ

ಆದ್ದರಿಂದ ಸೌಮ್ಯನೇ! ನೀನು ಇದನ್ನು ರಾವಣನ ಮೇಲೆ ಪ್ರಯೋಗಿಸ ಬೇಡ. ಇದರ ಏಟಿನಿಂದ ಯಾರೂ ಒಂದು ಮುಹೂರ್ತವು ಬದುಕಿರಲಾರರು.॥44॥

ಮೂಲಮ್ - 45

ಯದಿ ಹ್ಯಸ್ಮಿನ್ನಿಪತಿತೇ ನ ಮ್ರಿಯೇತೈಷ ರಾಕ್ಷಸಃ ।
ಮ್ರಿಯತೇ ವಾ ದಶಗ್ರೀವಸ್ತದಾಪ್ಯುಭಯತೋಽನೃತಮ್ ॥

ಅನುವಾದ

ಕಾಲ ದಂಡದಿಂದ ಈ ರಾಕ್ಷಸ ರಾವಣನು ಸತ್ತರೆ ಅಥವಾ ಸಾಯದಿದ್ದರೆ ಎರಡೂ ಸ್ಥಿತಿಯಲ್ಲಿ ನನ್ನ ಮಾತು ಸುಳ್ಳಾದೀತು.॥45॥

ಮೂಲಮ್ - 46

ತನ್ನಿವರ್ತಯ ಲಂಕೇಶಾದ್ದಂಡಮೇತಂ ಸಮುದ್ಯತಮ್ ।
ಸತ್ಯಂ ಚ ಮಾಂ ಕುರುಷ್ವಾದ್ಯ ಲೋಕಾಂಸ್ತ್ವಂ ಯದ್ಯವೇಕ್ಷಸೇ ॥

ಅನುವಾದ

ಅದಕ್ಕಾಗಿ ಕೈಯ್ಯಲ್ಲೆತ್ತಿಕೊಂಡ ಈ ಕಾಲದಂಡವನ್ನು ಇಳಿಸು. ಸಮಸ್ತ ಲೋಕಗಳ ಮೇಲೆ ನಿನಗೆ ದೃಷ್ಟಿ ಇದ್ದರೆ ಇಂದು ರಾವಣನನ್ನು ರಕ್ಷಿಸಿ ನನ್ನನ್ನು ಸತ್ಯವಾದಿಯನ್ನಾಗಿಸು.॥46॥

ಮೂಲಮ್ - 47

ಏವಮುಕ್ತಸ್ತು ಧರ್ಮಾತ್ಮಾ ಪ್ರತ್ಯುವಾಚ ಯಮಸ್ತದಾ ।
ಏಷ ವ್ಯಾವರ್ತಿತೋ ದಂಡಃ ಪ್ರಭವಿಷ್ಣುರ್ಹಿ ನೋ ಭವಾನ್ ॥

ಅನುವಾದ

ಬ್ರಹ್ಮದೇವರು ಹೀಗೆ ಹೇಳಿದಾಗ ಧರ್ಮಾತ್ಮ ಯಮರಾಜನು ಉತ್ತರಿಸಿದನು-ಮಾತು ಹೀಗಿದ್ದರೆ ನಾನು ಈ ದಂಡವನ್ನು ಕೆಳಗಿಳಿಸುವೆ. ನೀವು ನಮಗೆಲ್ಲರ ಸ್ವಾಮಿಯಾಗಿರುವಿರಿ. ನಿಮ್ಮ ಆಜ್ಞೆಯನ್ನು ನಾವೆಲ್ಲ ಪಾಲಿಸಲೇಬೇಕು.॥47॥

ಮೂಲಮ್ - 48

ಕಿಂ ತ್ವಿದಾನೀಂ ಮಯಾ ಶಕ್ಯಂ ಕರ್ತುಂ ರಣಗತೇನ ಹಿ ।
ನ ಮಯಾ ಯದ್ಯಯಂ ಶಕ್ಯೋ ಹಂತುಂ ವರಪುರಸ್ಕೃತಃ ॥

ಅನುವಾದ

ಆದರೆ ವರದಾನದಿಂದಾಗಿ ನನ್ನಿಂದ ಈ ನಿಶಾಚರನ ವಧೆಯಾಗದಿದ್ದರೆ ಈಗ ಇವನೊಂದಿಗೆ ಯುದ್ಧಮಾಡಿ ನಾನು ಏನು ಮಾಡಲಿ.॥48॥

ಮೂಲಮ್ - 49

ಏಷ ತಸ್ಮಾತ್ ಪ್ರಣಶ್ಯಾಮಿ ದರ್ಶನಾದಸ್ಯ ರಕ್ಷಸಃ ।
ಇತ್ಯುತ್ತ್ವಾಸರಥಃ ಸಾಶ್ವಸ್ತತ್ರೈವಾಂತರಧೀಯತ ॥

ಅನುವಾದ

ಅದರಿಂದ ನಾನು ಇವನ ಕಣ್ಣಿಂದ ಮರೆಯಾಗುವೆನು. ಹೀಗೆ ಹೇಳಿ ಯಮರಾಜನು ರಥ - ಕುದುರೆಗಳ ಸಹಿತ ಅಲ್ಲೇ ಅಂತರ್ಧಾನನಾದನು.॥49॥

ಮೂಲಮ್ - 50

ದಶಗ್ರೀವಸ್ತು ತಂ ಜಿತ್ವಾ ನಾಮ ವಿಶ್ರಾವ್ಯಚಾತ್ಮನಃ ।
ಆರುಹ್ಯ ಪುಷ್ಪಕಂ ಭೂಯೋ ನಿಷ್ಕ್ರಾಂತೋ ಯಮಸಾದನಾತ್ ॥

ಅನುವಾದ

ಹೀಗೆ ಯಮರಾಜನನ್ನು ಗೆದ್ದು ತನ್ನ ಹೆಸರನ್ನು ಘೋಷಿಸುತ್ತಾ ರಾವಣನು ಪುಷ್ಪಕವಿಮಾನ ಹತ್ತಿ ಯಮಲೋಕದಿಂದ ಹೊರಟು ಹೋದನು.॥50॥

ಮೂಲಮ್ - 51

ಸ ತು ವೈವಸ್ವತೋ ದೇವೈಃ ಸಹ ಬ್ರಹ್ಮಪುರೋಗಮೈಃ ।
ಜಗಾಮ ತ್ರಿದಿವಂ ಹೃಷ್ಟೋನಾರದಶ್ಚ ಮಹಾಮುನಿಃ ॥

ಅನುವಾದ

ಬಳಿಕ ಸೂರ್ಯಪುತ್ರ ಯಮರಾಜ ಹಾಗೂ ಮಹಾಮುನಿ ನಾರದರು, ಬ್ರಹ್ಮಾದಿ ದೇವತೆಗಳು ಸಂತೋಷದಿಂದ ಸ್ವರ್ಗಲೋಕಕ್ಕೆ ತೆರಳಿದರು.॥51॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗ ಪೂರ್ಣವಾಯಿತು. ॥22॥