[ಇಪ್ಪತ್ತೊಂದನೆಯ ಸರ್ಗ]
ಭಾಗಸೂಚನಾ
ರಾವಣನಿಂದ ಯಮಲೋಕದ ಆಕ್ರಮಣ, ಯಮಭಟರ ಸಂಹಾರ
ಮೂಲಮ್ - 1
ಏವಂ ಸಂಚಿಂತ್ಯ ವಿಪ್ರೇಂದ್ರೋ ಜಗಾಮ ಲಘುವಿಕ್ರಮಃ ।
ಆಖ್ಯಾತುಂ ತದ್ಯಥಾವೃತ್ತಂ ಯಮಸ್ಯ ಸದನಂ ಪ್ರತಿ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಹೀಗೆ ವಿಚಾರ ಮಾಡಿ ಶೀಘ್ರಗಾಮಿ ವಿಪ್ರೇಂದ್ರ ನಾರದರು ರಾವಣನ ಆಕ್ರಮಣದ ಸುದ್ದಿ ತಿಳಿಯಲು ಯಮಲೋಕಕ್ಕೆ ಹೋದರು.॥1॥
ಮೂಲಮ್ - 2
ಅಪಶ್ಯತ್ ಸ ಯಮಂ ತತ್ರ ದೇವಮಗ್ನಿಪುರಸ್ಕೃತಮ್ ।
ವಿಧಾನಮನುತಿಷ್ಠಂತಂ ಪ್ರಾಣಿನೋ ಯಸ್ಯ ಯಾದೃಶಮ್ ॥
ಅನುವಾದ
ಅಲ್ಲಿಗೆ ಹೋಗಿ ಯಮನು ಅಗ್ನಿಯನ್ನು ಸಾಕ್ಷಿ ಯಾಗಿಟ್ಟು ಕುಳಿತಿರುವುದನ್ನು ನೋಡಿದರು. ಯಾವ ಪ್ರಾಣಿಯ ಕರ್ಮ ಹೇಗಿದೆಯೋ ಅದಕ್ಕನುಸಾರ ಫಲ ಕೊಡುವ ವ್ಯವಸ್ಥೆ ಮಾಡುತ್ತಿದ್ದನು.॥2॥
ಮೂಲಮ್ - 3
ಸ ತು ದೃಷ್ಟ್ವಾ ಯಮಃ ಪ್ರಾಪ್ತಂ ಮಹರ್ಷಿಂ ತತ್ರ ನಾರದಮ್ ।
ಅಬ್ರವೀತ್ಸುಖಮಾಸೀನಮರ್ಘ್ಯಮಾವೇದ್ಯ ಧರ್ಮತಃ ॥
ಅನುವಾದ
ಮಹರ್ಷಿ ನಾರದರು ಬಂದುದನ್ನು ನೋಡಿ ಯಮನು ಅತಿಥಿ ಧರ್ಮಕ್ಕಮುಸಾರ ಅರ್ಘ್ಯಾದಿಗಳನ್ನು ನೀಡಿ, ಕೇಳಿದನು.॥3॥
ಮೂಲಮ್ - 4
ಕಚ್ಚಿತ್ ಕ್ಷೇಮಂ ನು ದೇವರ್ಷೇ ಕಚ್ಚಿದ್ಧರ್ಮೋ ನ ನಶ್ಯತಿ ।
ಕಿಮಾಗಮನಕೃತ್ಯಂ ತೇ ದೇವಗಂಧರ್ವಸೇವಿತ ॥
ಅನುವಾದ
ದೇವ, ಗಂಧರ್ವಸೇವಿತ ದೇವಋಷಿಯೇ! ಕ್ಷೇಮ ತಾನೇ? ಧರ್ಮದ ನಾಶವಾಗುತ್ತಿಲ್ಲವಲ್ಲ? ಇಂದು ನಿಮ್ಮ ಶುಭಾಗಮನದ ಉದ್ದೇಶವೇನು.॥4॥
ಮೂಲಮ್ - 5
ಅಬ್ರವೀತ್ತು ತದಾ ವಾಕ್ಯಂ ನಾರದೋ ಭಗವಾನೃಷಿಃ ।
ಶ್ರೂಯತಾಮಭಿಧಾಸ್ಯಾಮಿ ವಿಧಾನಂ ಚ ವಿಧೀಯತಾಮ್ ॥
ಮೂಲಮ್ - 6
ಏಷ ನಾಮ್ನಾ ದಶಗ್ರೀವಃ ಪಿತೃರಾಜ ನಿಶಾಚರಃ ।
ಉಪಯಾತಿ ವಶಂ ನೇತುಂ ವಿಕ್ರಮೈಸ್ತ್ವಾಂ ಸುದುರ್ಜಯಮ್ ॥
ಅನುವಾದ
ಆಗ ಪೂಜ್ಯ ನಾರದರು ಹೇಳಿದರು - ಪಿತೃರಾಜನೇ! ಕೇಳು, ನಾನು ಒಂದು ಆವಶ್ಯಕ ಮಾತನ್ನು ಹೇಳುವೆನು, ನೀನು ಕೇಳಿ ಅದರ ಪ್ರತಿಕಾರಕ್ಕೆ ಉಪಾಯ ಮಾಡು. ನಿನ್ನನ್ನು ಗೆಲ್ಲುವುದು ಅತ್ಯಂತ ಕಠಿಣವಾಗಿದ್ದರೂ, ಈ ದಶಗ್ರೀವನೆಂಬ ನಿಶಾಚರನು ತನ್ನ ಪರಾಕ್ರಮದಿಂದ ನಿನ್ನನ್ನು ಗೆದ್ದುಕೊಳ್ಳಲು ಬರುತ್ತಿದ್ದಾನೆ.॥5-6॥
ಮೂಲಮ್ - 7
ಏತೇನ ಕಾರಣೇನಾಹಂ ತ್ವರಿತೋ ಹ್ಯಾಗತಃ ಪ್ರಭೋ ।
ದಂಡಪ್ರಹರಣಸ್ಯಾದ್ಯ ತವ ಕಿಂ ನು ಭವಿಷ್ಯತಿ ॥
ಅನುವಾದ
ಪ್ರಭೋ! ಅದರಿಂದ ನಿನಗೆ ಸೂಚಿಸಲು ನಾನು ಕೂಡಲೇ ಇಲ್ಲಿಗೆ ಬಂದಿರುವೆನು. ಆದರೆ ನೀನಾದರೋ ಕಾಲದಂಡವನ್ನು ಧರಿಸುವವನು. ಆ ರಾಕ್ಷಸನ ಆಕ್ರಮಣದಿಂದ ನಿನಗೇನು ಹಾನಿಯಾದೀತು.॥7॥
ಮೂಲಮ್ - 8
ಏತಸ್ಮಿನ್ನಂತರೇ ದೂರಾದಂಶುಮಂತಮಿವೋದಿತಮ್ ।
ದದೃಶುರ್ದೀಪ್ತಮಾಯಾಂತಂ ವಿಮಾನಂ ತಸ್ಯ ರಕ್ಷಸಃ ॥
ಅನುವಾದ
ಹೀಗೆ ಮಾತುಗಳು ನಡೆಯುವಾಗಲೇ ಆ ರಾಕ್ಷಸನು ಸೂರ್ಯನ ಉದಯದಂತೆ ತೇಜಸ್ವೀ ವಿಮಾನ ದೂರದಲ್ಲಿ ಬರುವುದು ಕಾಣಿಸಿತು.॥8॥
ಮೂಲಮ್ - 9
ತಂ ದೇಶಂ ಪ್ರಭಯಾ ತಸ್ಯ ಪುಷ್ಪಕಸ್ಯ ಮಹಾಬಲಃ ।
ಕೃತ್ವಾ ವಿತಿಮಿರಂ ಸರ್ವಂ ಸಮೀಪಮಭ್ಯವರ್ತತ ॥
ಅನುವಾದ
ಮಹಾಬಲಿ ರಾವಣನು ಪುಷ್ಪಕದ ಪ್ರಭೆಯಿಂದ ಆ ಸಮಸ್ತ ಪ್ರದೇಶವನ್ನು ಅಂಧಕಾರ ಶೂನ್ಯವಾಗಿಸಿ ಅತ್ಯಂತ ನಿಕಟ ಬಂದನು.॥9॥
ಮೂಲಮ್ - 10
ಸೋಽಪಶ್ಯತ್ ಸ ಮಹಾಬಾಹುರ್ದಶಗ್ರೀವಸ್ತತಸ್ತತಃ ।
ಪ್ರಾಣಿನಃ ಸುಕೃತಂ ಚೈವ ಭುಂಜಾನಾಂಶ್ಚೈವ ದುಷ್ಕೃತಮ್ ॥
ಅನುವಾದ
ಮಹಾಬಾಹು ದಶಗ್ರೀವನು ಯಮಲೋಕಕ್ಕೆ ಬಂದು, ಅಲ್ಲಿ ಅನೇಕ ಪ್ರಾಣಿಗಳು ತಮ್ಮ-ತಮ್ಮ ಪಾಪ-ಪುಣ್ಯಗಳ ಫಲವನ್ನು ಅನುಭವಿಸುತ್ತಿರುವುದನ್ನು ನೋಡಿದನು.॥10॥
ಮೂಲಮ್ - 11
ಅಪಶ್ಯತ್ಸೈನಿಕಾಂಶ್ಚಾಸ್ಯ ಯಮಸ್ಯಾನುಚರೈಃ ಸಹ ।
ಯಮಸ್ಯ ಪುರುಷೈರುಗ್ರೈರ್ಘೋರರೂಪೈರ್ಭಯಾನಕೈಃ ॥
ಮೂಲಮ್ - 12½
ದದರ್ಶ ವಧ್ಯಮಾನಾಂಶ್ಚ ಕ್ಲಿಶ್ಯಮಾನಾಂಶ್ಚ ದೇಹಿನಃ ।
ಕ್ರೋಶತಶ್ಚ ಮಹಾನಾದಂ ತೀವ್ರನಿಷ್ಟನತತ್ಪರಾನ್ ॥
ಅನುವಾದ
ಯಮರಾಜನ ಸೇವಕರೊಂದಿಗೆ ಅವನ ಸೈನಿಕರನ್ನು ನೋಡಿದನು. ಯಮಯಾತನೆಯ ದೃಶ್ಯ ಅವನ ಕಣ್ಣಿಗೆ ಬಿತ್ತು. ಘೋರ ರೂಪಧಾರೀ ಉಗ್ರ ಪ್ರಕೃತಿಯ ಭಯಾನಕ ಯಮದೂತರು ಎಷ್ಟೋ ಪ್ರಾಣಿಗಳನ್ನು ಬಡಿಯುತ್ತಾ ಕಷ್ಟ ಕೊಡುತ್ತಿದ್ದರು. ಅದರಿಂದ ಆ ಪ್ರಾಣಿಗಳು ಜೋರಾಗಿ ಕಿರಿಚಿಕೊಳ್ಳುತ್ತಿದ್ದವು.॥11-12½॥
ಮೂಲಮ್ - 13
ಕೃಮಿಭಿರ್ಭಕ್ಷ್ಯಮಾಣಾಂಶ್ಚ ಸಾರಮೇಯೈಶ್ಚ ದಾರುಣೈಃ ।
ಶ್ರೋತ್ರಾಯಾಸಕರಾ ವಾಚೋ ವದತಶ್ಚ ಭಯಾವಹಾಃ ॥
ಅನುವಾದ
ಕೆಲವರು ಹುಳ ತಿನ್ನುತ್ತಿದ್ದರೆ, ಕೆಲವರನ್ನು ಭಯಂಕರ ನಾಯಿಗಳು ಕಚ್ಚುತ್ತಿದ್ದವು. ಅವರೆಲ್ಲರೂ ದುಃಖಿತರಾಗಿ ಕರ್ಣಕರ್ಕಶವಾಗಿ ಚೀರುತ್ತಿದ್ದರು.॥13॥
ಮೂಲಮ್ - 14
ಸಂತಾರ್ಯಮಾಣಾನ್ ವೈತರಣೀಂ ಬಹುಶಃ ಶೋಣಿತೋದಕಾಮ್ ।
ವಾಲುಕಾಸು ಚ ತಪ್ತಾಸು ತಪ್ಯಮಾನಾನ್ಮುಹುರ್ಮುಹುಃ ॥
ಅನುವಾದ
ಕೆಲವರು ರಕ್ತದಿಂದ ತುಂಬಿದ ವೈತರಣೀ ನದಿಯನ್ನು ದಾಟಲು ಪದೇ-ಪದೇ ವಿವಶರಾಗುತ್ತಿದ್ದರು. ಎಷ್ಟೋ ಪ್ರಾಣಿಗಳನ್ನು ಕಾದ ಮರಳಿನ ಮೇಲೆ ನಡೆಸಿ ಆಗಾಗ ಸಂತಪ್ತ ಮಾಡಲಾಗುತ್ತಿತ್ತು.॥14॥
ಮೂಲಮ್ - 15
ಆಸಿಪತ್ರವನೇ ಚೈವ ಭಿದ್ಯಮಾನಾನಧಾರ್ಮಿಕಾನ್ ।
ರೌರವೇ ಕ್ಷಾರನದ್ಯಾಂ ಚ ಕ್ಷುರಧಾರಾಸು ಚೈವ ಹಿ ॥
ಮೂಲಮ್ - 16
ಪಾನೀಯಂ ಯಾಚಮಾನಾಂಶ್ಚ ತೃಷಿತಾನ್ ಕ್ಷುಧಿತಾನಪಿ ।
ಶವಭೂತಾನ್ಕೃಶಾನ್ ದೀನಾನ್ವಿವರ್ಣಾನ್ಮುಕ್ತಮೂರ್ಧಜಾನ್ ॥
ಮೂಲಮ್ - 17
ಮಲಪಂಕಧರಾನ್ ದೀನಾನ್ರೂಕ್ಷಾಂಶ್ಚ ಪರಿಧಾವತಃ ।
ದದರ್ಶ ರಾವಣೋ ಮಾರ್ಗೇ ಶತಶೋಽಥ ಸಹಸ್ರಶಃ ॥
ಅನುವಾದ
ಕೆಲವು ಪಾಪಿಗಳನ್ನು ಖಡ್ಗದಂತೆ ಹರಿತವಾದ ಎಲೆಗಳುಳ್ಳ ಅಸಿಪತ್ರ ವನದಲ್ಲ ವಿದೀರ್ಣಗೊಳಿಸಲಾಗುತ್ತಿತ್ತು. ಕೆಲವರನ್ನು ರೌರವ ನರಕದಲ್ಲಿ ಹಾಕಲಾಗುತ್ತಿತ್ತು. ಎಷ್ಟೋ ಪ್ರಾಣಿಗಳನ್ನು ಉಪ್ಪು ನೀರು ತುಂಬಿದ ನದಿಯಲ್ಲಿ ಮುಳುಗಿಸಿಬಿಡುತ್ತಿದ್ದರು. ಅನೇಕರನ್ನು ಕತ್ತಿಯ ಅಲಗಿನ ಮೇಲೆ ನಡೆಸುತ್ತಿದ್ದರು. ಕೆಲವು ಪ್ರಾಣಿಗಳು ಹಸಿವು, ತೃಷೆಯಿಂದ ಒದ್ದಾಡುತ್ತಾ ನೀರನ್ನು ಯಾಚಿಸುತ್ತಿದ್ದರು. ಕೆಲವರು ಹೆಣ ಅಸ್ತಿಪಂಜರದಂತೆ, ದೀನ-ದುರ್ಬಲ, ಬಿಟ್ಟಮಂಡೆಯಲ್ಲಿ ಕಾಣುತ್ತಿದ್ದರು. ಎಷ್ಟೋ ಪ್ರಾಣಿಗಳು ಶರೀರದಲ್ಲಿ ಮಲ-ಕೆಸರನ್ನು ಮೆತ್ತಿಕೊಂಡು ದಯನೀಯರಾಗಿ ಎಲ್ಲೆಡೆ ಓಡುತ್ತಿದ್ದರು. ಹೀಗೆ ನೂರಾರು ಸಾವಿರ ಜೀವಿಗಳು ಯಾತನೆ ಪಡುವುದನ್ನು ರಾವಣನು ನೋಡಿದನು.॥15-17॥
ಮೂಲಮ್ - 18
ಕಾಂಶ್ಚಿಚ್ಚ ಗೃಹಮುಖ್ಯೇಷು ಗೀತವಾದಿತ್ರನಿಃಸ್ವನೈಃ ।
ಪ್ರಮೋದಮಾನಾನದ್ರಾಕ್ಷೀದ್ರಾವಣಃ ಸುಕೃತೈಃ ಸ್ವಕೈಃ ॥
ಅನುವಾದ
ಇನ್ನೊಂದು ಕಡೆ ಪುಣ್ಯಾತ್ಮ ಜೀವರು ತಮ್ಮ ಪುಣ್ಯಕರ್ಮಗಳ ಪ್ರಭಾವದಿಂದ ಒಳ್ಳೆಯ ಮನೆಗಳಲ್ಲಿ ಇದ್ದು ಸಂಗೀತ, ವಾದ್ಯಗಳ ಧ್ವನಿಗಳಿಂದ ಆನಂದಿಸುತ್ತಿದ್ದರು.॥18॥
ಮೂಲಮ್ - 19
ಗೋರಸಂ ಗೋಪ್ರದಾತಾರೋ ಹ್ಯನ್ನಂ ಚೈವಾನ್ನದಾಯಿನಃ ।
ಗೃಹಾಂಶ್ಚ ಗೃಹದಾತಾರಃ ಸ್ವ ಕರ್ಮಲಮಶ್ನತಃ ॥
ಅನುವಾದ
ಗೋದಾನ ಮಾಡಿದವರಿಗೆ ಗೋರಸ, ಅನ್ನದಾನಿಗೆ ಅನ್ನ, ಗೃಹದಾನಿಗೆ ಮನೆ ದೊರಕಿ ತಮ್ಮ ಸತ್ಕರ್ಮಗಳ ಫಲಗಳನ್ನು ಅನುಭವಿಸುತ್ತಿದ್ದರು.॥19॥
ಮೂಲಮ್ - 20
ಸುವರ್ಣಮಣಿಮುಕ್ತಾಭಿಃ ಪ್ರಮದಾಭಿರಲಂಕೃತಾನ್ ।
ಧಾರ್ಮಿಕಾನ ಪರಾಂಸ್ತತ್ರ ದೀಪ್ಯಮಾನಾನ್ ಸ್ವ್ವತೇಜಸಾ ॥
ಅನುವಾದ
ಇತರ ಧರ್ಮಾತ್ಮರು ಅಲ್ಲಿ ಸುವರ್ಣ, ಮಣಿ, ಮುತ್ತುಗಳಿಂದ ಅಲಂಕೃತರಾಗಿ ಯೌವನ ಮದದಿಂದ ಮತ್ತರಾಗಿ ಸುಂದರಿ ಸ್ತ್ರೀಯರೊಂದಿಗೆ ತಮ್ಮ ಅಂಗಕಾಂತಿಯಿಂದ ಪ್ರಕಾಶಿಸುತ್ತಿದ್ದರು.॥20॥
ಮೂಲಮ್ - 21
ದದರ್ಶ ಸ ಮಹಾಬಾಹೂ ರಾವಣೋ ರಾಕ್ಷಸಾಧಿಪಃ ।
ತತಸ್ತಾನ್ಭಿದ್ಯಮಾನಾಂಶ್ಚ ಕರ್ಮಭಿರ್ದುಷ್ಕೃತೈಃಸ್ವಕೈಃ ॥
ಮೂಲಮ್ - 22
ರಾವಣೋ ಮೋಚಯಾಮಾಸ ವಿಕ್ರಮೇಣ ಬಲಾದ್ಬಲೀ ।
ಪ್ರಾಣಿನೋ ಮೋಕ್ಷಿತಾಸ್ತೇನ ದಶಗ್ರೀವೇಣ ರಕ್ಷಸಾ ॥
ಅನುವಾದ
ಮಹಾಬಾಹು ರಾವಣನು ಇದೆಲ್ಲವನ್ನು ನೋಡಿ ರಾಕ್ಷಸ ದಶಗ್ರೀವನು ಪಾಪಕರ್ಮಗಳಿಂದಾಗಿ ಯಾತನೆಯನ್ನು ಅನುಭವಿಸುತ್ತಿದ್ದ ಪ್ರಾಣಿಗಳನ್ನು ತನ್ನ ಪರಾಕ್ರಮದಿಂದ ಮುಕ್ತಗೊಳಿಸಿದನು.॥21-22॥
ಮೂಲಮ್ - 23½
ಸುಖಮಾಪುರ್ಮುಹೂರ್ತಂ ತೇ ಹ್ಯತರ್ಕಿತಮಚಿಂತಿತಮ್ ।
ಪ್ರೇತೇಷು ಮುಚ್ಯಮಾನೇಷು ರಾಕ್ಷಸೇನ ಮಹೀಯಸಾ ॥
ಪ್ರೇತಗೋಪಾಃ ಸುಸಂಕ್ರುದ್ಧಾ ರಾಕ್ಷಸೇಂದ್ರಮಭಿದ್ರವನ್ ।
ಅನುವಾದ
ಇದರಿಂದ ಸ್ವಲ್ಪ ಹೊತ್ತು ಪಾಪಿಗಳಿಗೆ ಬಹಳ ಸುಖವಾಯಿತು, ಅದು ಸಿಗುವ ಸಂಭವ ವಾಗಲೀ, ಯೋಚನೆಯೂ ಅವರಿಗಿರಲಿಲ್ಲ. ಮಹಾರಾಕ್ಷಸನು ಪಾಪಿಗಳ ಎಲ್ಲ ಯಾತನೆಗಳಿಂದ ಮುಕ್ತಗೊಳಿಸಿದಾಗ, ಪ್ರೇತಗಳನ್ನು ಕಾಯುತ್ತಿದ್ದ ಯಮದೂತರು ಅತ್ಯಂತ ಕುಪಿತರಾಗಿ ರಾಕ್ಷಸರಾಜನನ್ನು ಆಕ್ರಮಿಸಿದರು.॥23½॥
ಮೂಲಮ್ - 24½
ತತೋ ಹಲಹಲಾಶಬ್ದಃ ಸರ್ವದಿಗ್ಭ್ಯಃ ಸಮುತ್ಥಿತಃ ॥
ಧರ್ಮರಾಜಸ್ಯ ಯೋಧಾನಾಂ ಶೂರಾಣಾಂ ಸಂಪ್ರಧಾವತಾಮ್ ।
ಅನುವಾದ
ಮತ್ತೆ ಎಲ್ಲ ದಿಕ್ಕುಗಳಿಂದ ಆಕ್ರಮಿಸಿದ ಧರ್ಮರಾಜನ ಶೂರವೀರ ಯೋಧರ ಮಹಾ ಕೋಲಾಹಲ ಪ್ರಕಟವಾಯಿತು.॥24½॥
ಮೂಲಮ್ - 25½
ತೇ ಪ್ರಾಸೈಃ ಪರಿಘೈಃ ಶೂಲೈರ್ಮುಸಲೈಃ ಶಕ್ತಿತೋಮರೈಃ ॥
ಪುಷ್ಪಕಂ ಸಮಧರ್ಷಂತ ಶೂರಾಃ ಶತಸಹಸ್ರಶಃ ।
ಮೂಲಮ್ - 26½
ತಸ್ಯಾಸನಾನಿ ಪ್ರಾಸಾದಾನ್ವೇದಿಕಾಸ್ತೋರಣಾನಿ ಚ ॥
ಪುಷ್ಪಕಸ್ಯ ಬಭಂಜುಸ್ತೇ ಶೀಘ್ರಂ ಮಧುಕರಾ ಇವ ।
ಅನುವಾದ
ಹೂವುಗಳ ಮೇಲೆ ಗುಂಪು-ಗುಂಪಾಗಿ ಭೃಂಗಗಳು ಮುತ್ತಿಕೊಂಡಂತೆ ಪುಷ್ಪಕ ವಿಮಾನವನ್ನು ನೂರಾರು, ಸಾವಿರ ಶೂರವೀರ ಯಮದೂತರು ಏರಿಹೋದರು ಹಾಗೂ ಪ್ರಾಸ, ಪರಿಘ, ಶೂಲ, ಮುಸಲ, ಶಕ್ತಿಗಳಿಂದ ಮತ್ತು ತೋಮರಗಳಿಂದ ಬಡಿಯುತ್ತಾ, ಪುಷ್ಪಕ ವಿಮಾನದ ಆಸನ, ವೇದೀ, ಬಾಗಿಲುಗಳನ್ನು ಮುರಿದು ಹಾಕಿದರು.॥25-26½॥
ಮೂಲಮ್ - 27½
ದೇವನಿಷ್ಠಾನಭೂತಂ ತದ್ವಿಮಾನಂ ಪುಷ್ಪಕಂ ಮೃಧೇ ॥
ಭಜ್ಯಮಾನಂ ತಥೈವಾಸೀದಕ್ಷಯಂ ಬ್ರಹ್ಮತೇಜಸಾ ।
ಅನುವಾದ
ದೇವತೆಗಳ ಅಧಿಷ್ಠಾನ ಭೂತ ಆ ಪುಷ್ಪಕ ವಿಮಾನವು ಆ ಯುದ್ಧದಲ್ಲಿ ಮುರಿದುಹೋದಾಗ ಬ್ರಹ್ಮದೇವರ ಪ್ರಭಾವದಿಂದ ಹಿಂದಿನಂತೆ ಆಯಿತು; ಏಕೆಂದರೆ ಅದು ನಾಶವಾಗುವಂತಹುದಲ್ಲ.॥27½॥
ಮೂಲಮ್ - 28½
ಅಸಂಖ್ಯಾ ಸುಮಹತ್ಯಾಸೀತ್ತಸ್ಯ ಸೇನಾ ಮಹಾತ್ಮನಃ ॥
ಶೂರಾಣಾಮಗ್ರಯಾತೃಣಾಂ ಸಹಸ್ರಾಣಿ ಶತಾನಿ ಚ ।
ಅನುವಾದ
ಮಹಾತ್ಮಾ ಯಮನ ಸೈನ್ಯ ಅಸಂಖ್ಯವಾಗಿತ್ತು. ಅದರಲ್ಲಿ ನೂರಾರು ಸಾವಿರಾರು ಶೂರ-ವೀರರು ಮುಂದರಿದು ಯುದ್ಧ ಮಾಡುವವರಿದ್ದರು.॥28½॥
ಮೂಲಮ್ - 29
ತತೋ ವೃಕ್ಷೈಶ್ಚ ಶೈಲೈಶ್ಚ ಪ್ರಾಸಾದಾನಾಂ ಶತೈಸ್ತಥಾ ॥
ಮೂಲಮ್ - 30
ತತಸ್ತೇ ಸಚಿವಾಸ್ತಸ್ಯ ಯಥಾಕಾಮಂ ಯಥಾಬಲಮ್ ।
ಅಯುಧ್ಯಂತ ಮಹಾವೀರಾಃ ಸ ಚ ರಾಜಾ ದಶಾನನಃ ॥
ಅನುವಾದ
ಯಮ ದೂತರು ಆಕ್ರಮಿಸಿದಾಗ ರಾವಣನ ಆ ಮಹಾವೀರ ಮಂತ್ರಿಗಳು ಹಾಗೂ ಸ್ವತಃ ದಶಗ್ರೀವನೂ ಕೂಡ ವೃಕ್ಷ, ಪರ್ವತ-ಶಿಖರ, ಯಮಲೋಕದ ನೂರಾರು ಪ್ರಾಸಾದ ಗಳನ್ನು ಹಾಳುಗೆಡಹಿ, ಪೂರ್ಣಶಕ್ತಿಯಿಂದ ಇಚ್ಛಾನುಸಾರ ಯುದ್ಧ ಮಾಡತೊಡಗಿದರು.॥29-30॥
ಮೂಲಮ್ - 31
ತೇ ತು ಶೋಣಿತದಿಗ್ಧಾಗಾಃ ಸರ್ವಶಸ್ತ್ರಸಮಾಹತಾಃ ।
ಅಮಾತ್ಯಾ ರಾಕ್ಷಸೇಂದ್ರಸ್ಯ ಚಕ್ರುರಾಯೋಧನಂ ಮಹತ್ ॥
ಅನುವಾದ
ರಾಕ್ಷಸೇಂದ್ರನ ಮಂತ್ರಿಗಳ ಇಡೀ ಶರೀರ ರಕ್ತದಿಂದ ತೊಯ್ದುಹೋಯಿತು. ಶಸ್ತ್ರಗಳ ಆಘಾತದಿಂದ ಅವರು ಗಾಯಗೊಂಡಿದ್ದರು. ಹೀಗಿದ್ದರೂ ಅವರು ಭಾರೀ ಯುದ್ಧ ಮಾಡಿದರು.॥31॥
ಮೂಲಮ್ - 32
ಅನ್ಯೋನ್ಯಂ ತೇ ಮಹಾಭಾಗಾ ಜಘ್ನುಃ ಪ್ರಹರಣೈರ್ಭೃಶಮ್ ।
ಯಮಸ್ಯ ಚ ಮಹಾಬಾಹೋ ರಾವಣಸ್ಯ ಚ ಮಂತ್ರಿಣಃ ॥
ಅನುವಾದ
ಮಹಾಬಾಹು ಶ್ರೀರಾಮ! ಯಮರಾಜ ಹಾಗೂ ರಾವಣನ ಮಂತ್ರಿಗಳು ಪರಸ್ಪರ ಅಸ್ತ್ರ-ಶಸ್ತ್ರಗಳಿಂದ ಜೋರಾಗಿ ಹೊಡೆದಾಟ ಪ್ರಾರಂಭಿಸಿದರು.॥32॥
ಮೂಲಮ್ - 33
ಅಮಾತ್ಯಾಂಸ್ತಾಂಸ್ತು ಸಂತ್ಯಜ್ಯ ಯಮಯೋಧಾ ಮಹಾಬಲಾಃ ।
ತಮೇವ ಚಾಧ್ಯಧಾವಂತ ಶೂಲವರ್ಷೈರ್ದಶಾನನಮ್ ॥
ಅನುವಾದ
ಅನಂತರ ಯಮರಾಜನ ಮಹಾ ಬಲಿಯೋಧರು ರಾವಣನ ಮಂತ್ರಿಗಳನ್ನು ಬಿಟ್ಟು ಆ ದಶಗ್ರೀವನ ಮೇಲೆ ಶೂಲಗಳ ಮಳೆಗರೆದರು.॥33॥
ಮೂಲಮ್ - 34
ತತಃ ಶೋಣಿತದಿಗ್ಧಾಂಗಃ ಪ್ರಹಾರೈರ್ಜರ್ಜರೀಕೃತಃ ।
ಫುಲ್ಲಾಶೋಕ ಇವಾಭಾತಿ ಪುಷ್ಪಕೇ ರಾಕ್ಷಸಾಧಿಪಃ ॥
ಅನುವಾದ
ರಾವಣನ ಸರ್ವಾಂಗ ಶಸ್ತ್ರಗಳಿಂದ ಜರ್ಜರವಾಯಿತು. ಅವನು ರಕ್ತದಿಂದ ತೊಯ್ದು ಹೋಗಿ, ಪುಷ್ಪಕ ವಿಮಾನದಲ್ಲಿದ್ದ ಅರಳಿದ ಅಶೋಕ ವೃಕ್ಷದಂತೆ ಕಂಡುಬರುತ್ತಿದ್ದನು.॥34॥
ಮೂಲಮ್ - 35
ಸ ತು ಶೂಲಗದಾಪ್ರಾಸಾನ್ ಶಕ್ತಿತೋಮರಸಾಯಕಾನ್ ।
ಮುಸಲಾನಿ ಶಿಲಾವೃಕ್ಷಾನ್ ಮುಮೋಚಾಸ್ತ್ರಬಲಾದ್ಬಲೀ ॥
ಅನುವಾದ
ಆಗ ಬಲವಂತ ರಾವಣನು ತನ್ನ ಅಸ್ತ್ರಬಲದಿಂದ ಯಮ ರಾಜನ ಸೈನಿಕರ ಮೇಲೆ ಶೂಲ, ಗದೆ, ಪ್ರಾಸ, ಶಕ್ತಿ, ತೋಮರ, ಬಾಣ, ಒನಕೆ, ಕಲ್ಲು, ಮರಗಳ ಮಳೆಗರೆದನು.॥35॥
ಮೂಲಮ್ - 36
ತರೂಣಾಂ ಚ ಶಿಲಾನಾಂ ಚ ಶಸ್ತ್ರಾಣಾಂ ಜಾತಿದಾರುಣಮ್ ।
ಯಮಸೈನ್ಯೇಷು ತದ್ವರ್ಷಂ ಪಪಾತ ಧರಣೀತಲೇ ॥
ಅನುವಾದ
ವೃಕ್ಷಗಳ, ಶಿಲಾಖಂಡಗಳು, ಶಸ್ತ್ರಗಳ ಆ ಅತ್ಯಂತ ಭಯಂಕರ ವೃಷ್ಟಿಯು ಭೂಮಿಯ ಮೇಲೆ ನಿಂತಿರುವ ಯಮರಾಜನ ಸೈನಿಕರ ಮೇಲೆ ಬೀಳತೊಡಗಿತು.॥36॥
ಮೂಲಮ್ - 37
ತಾಂಸ್ತು ಸರ್ವಾನ್ವಿನಿರ್ಭಿದ್ಯ ತದಸ್ತ್ರಮಪಹತ್ಯ ಚ ।
ಜಘ್ನುಸ್ತೇ ರಾಕ್ಷಸಂ ಘೋರಮೇಕಂ ಶತಸಹಸ್ರಶಃ ॥
ಅನುವಾದ
ಆ ಸೈನಿಕರೂ ಕೂಡ ನೂರಾರು-ಸಾವಿರಾರು ಸಂಖ್ಯೆಯಲ್ಲಿ ಒಂದಾಗಿ ಅವನ ಆಯುಧಗಳನ್ನು ಛಿನ್ನ-ಭಿನ್ನಗೊಳಿಸಿ, ದಿವ್ಯಾಸ್ತ್ರಗಳನ್ನು ನಿವಾರಿಸಿ ಭಯಂಕರ ರಾಕ್ಷಸನೊಬ್ಬನನ್ನು ಹೊಡೆಯತೊಡಗಿದರು.॥37॥
ಮೂಲಮ್ - 38
ಪರಿವಾರ್ಯ ಚ ತಂ ಸರ್ವೇ ಶೈಲಂ ಮೇಘೋತ್ಕರಾ ಇವ ।
ಭಿಂದಿಪಾಲೈಶ್ಚ ಶೂಲೈಶ್ಚ ನಿರುಚ್ಛ್ವಾಸಮಪೋಥಯನ್ ॥
ಅನುವಾದ
ಮೋಡಗಳು ಸಮೂಹ ಪರ್ವತದ ಮೇಲೆ ಮಳೆಗರೆವಂತೆಯೇ ಯಮರಾಜನ ಸಮಸ್ತ ಸೈನಿಕರು ರಾವಣನ ಸುತ್ತಲಿಂದ ಆವರಿಸಿ ಛಿಂದಿಪಾಲ, ಶೂಲಗಳಿಂದ ಪ್ರಹರಿಸತೊಡಗಿದರು. ಅವನಿಗೆ ಉಸಿರಾಡಲು ಬಿಡುತ್ತಿರಲಿಲ್ಲ.॥38॥
ಮೂಲಮ್ - 39
ವಿಮುಕ್ತಕವಚಃ ಕ್ರುದ್ಧಃ ಸಿಕ್ತಃ ಶೋಣಿತವಿಸ್ರವೈಃ ।
ತತಃ ಸ ಪುಷ್ಪಕಂ ತ್ಯಕ್ತ್ವಾಪೃಥಿವ್ಯಾಮವತಿಷ್ಠತ ॥
ಅನುವಾದ
ರಾವಣನ ಕವಚ ಬಿದ್ದುಹೋಯಿತು. ಶರೀರದಿಂದ ರಕ್ತದ ಹೊಳೆಗಳು ಹರಿದವು. ಅವನು ಕುಪಿತನಾಗಿ ಪುಷ್ಪಕ ವಿಮಾನ ಬಿಟ್ಟು ಪೃಥಿವಿಯಲ್ಲಿ ನಿಂತುಕೊಂಡನು.॥39॥
ಮೂಲಮ್ - 40
ತತಃ ಸ ಕಾರ್ಮುಕೀ ವಾಣೀ ಸಮರೇ ಚಾಭಿವರ್ಧತ ।
ಲಬ್ಧಸಂಜ್ಞೋ ಮುಹೂರ್ತೇನ ಕ್ರುದ್ಧಸ್ತಸ್ಥೌ ಯಥಾಂತಕಃ ॥
ಅನುವಾದ
ಎರಡುಗಳಿಗೆ ಸುಧಾರಿಸಿಕೊಂಡು, ಮತ್ತೆ ಧನುರ್ಬಾಣಗಳನ್ನೆತ್ತಿಕೊಂಡು, ಹೆಚ್ಚಿನ ಉತ್ಸಾಹದಿಂದ ಕುಪಿತನಾಗಿ ರಣರಂಗದಲ್ಲಿ ಯಮರಾಜನಂತೆ ನಿಂತುಕೊಂಡನು.॥40॥
ಮೂಲಮ್ - 41
ತತಃ ಪಾಶುಪತಂ ದಿವ್ಯಮಸ್ತ್ರಂ ಸಂಧಾಯ ಕಾರ್ಮುಕೇ ।
ತಿಷ್ಠ ತಿಷ್ಠೇತಿ ತಾನುಕ್ತ್ವಾ ತಚ್ಚಾಪಂ ವ್ಯಪಕರ್ಷತ ॥
ಅನುವಾದ
ಅವನು ಧನುಸ್ಸಿಗೆ ಪಾಶುಪತಾಸ್ತ್ರವನ್ನು ಸಂಧಾನ ಮಾಡಿ, ಆ ಸೈನಿಕರನ್ನು ನಿಲ್ಲಿ-ನಿಲ್ಲಿ ಎಂದು ಹೇಳುತ್ತಾ ಧನುಷ್ಟಂಕಾರ ಮಾಡಿದನು.॥41॥
ಮೂಲಮ್ - 42
ಆಕರ್ಣಾತ್ಸ ವಿಕೃಷ್ಯಾಥ ಚಾಪಮಿಂದ್ರಾರಿರಾಹವೇ ।
ಮುಮೋಚ ತಂ ಶರಂ ಕ್ರುದ್ಧಸಿ ಪುರೇ ಶಂಕರೋ ಯಥಾ ॥
ಅನುವಾದ
ಭಗವಾನ್ ಶಂಕರನು ತ್ರಿಪುರಾಸುರನ ಮೇಲೆ ಪಾಶುಪತಾಸ್ತ್ರವನ್ನು ಪ್ರಯೋಗಿಸಿದಂತೆ, ಆ ಇಂದ್ರದ್ರೋಹಿ ರಾವಣನು ಧನುಸ್ಸನ್ನು ಕಿವಿಯವರೆಗೆ ಸೆಳೆದು ಬಾಣವನ್ನು ಬಿಟ್ಟನು.॥42॥
ಮೂಲಮ್ - 43
ತಸ್ಯ ರೂಪಂ ಶರಸ್ಯಾಸೀತ್ ಸಧೂಮ ಜ್ವಾಲಮಂಡಲಮ್ ।
ವನಂ ದಹಿಷ್ಯತೋ ಘರ್ಮೇ ದಾವಾಗ್ನೇರಿವ ಮೂರ್ಚ್ಛತಃ ॥
ಅನುವಾದ
ಆಗ ಅವನ ಬಾಣವು ಧೂಮ ಮತ್ತು ಜ್ವಾಲೆಗಳ ಮಂಡಲದಿಂದ ಕೂಡಿ, ಗ್ರೀಷ್ಮ ಋತುವಿನಲ್ಲಿ ಕಾಡನ್ನು ಸುಡಲು ಎಲ್ಲೆಡೆ ಹರಡಿದ ದಾವಾನಲದಂತೆ ಕಂಡುಬಂತು.॥43॥
ಮೂಲಮ್ - 44
ಜ್ವಾಲಾಮಾಲೀ ಸ ತು ಶರಃ ಕ್ರವ್ಯಾದಾನುಗತೋ ರಣೇ ।
ಮುಕ್ತೋ ಗುಲ್ಮಾನ್ದ್ರು ಮಾಂಶ್ಚಾಪಿ ಭಸ್ಮ ಕೃತ್ವಾ ಪ್ರಧಾವತಿ ॥
ಅನುವಾದ
ರಣಭೂಮಿಯಲ್ಲಿ ಜ್ವಾಲಾಮಾಲೆಗಳಿಂದ ಕೂಡಿದ ಆ ಬಾಣವು ಧನುಸ್ಸಿನಿಂದ ಚಿಮ್ಮುತ್ತಲೇ ವೃಕ್ಷ ಮತ್ತು ಕಾಡುಗಳನ್ನು ಸುಡುತ್ತಾ ತೀವ್ರಗತಿಯಿಂದ ಮುಂದರಿಯುತ್ತಿರುವಾಗ ಅದರ ಹಿಂದೆ-ಹಿಂದೆ ಮಾಂಸಾಹಾರೀ ಜೀವಜಂತುಗಳು ಹಿಂಬಾಲಿಸಿದವು.॥44॥
ಮೂಲಮ್ - 45
ತೇ ತಸ್ಯ ತೇಜಸಾ ದಗ್ಧಾಃ ಸೈನ್ಯಾ ವೈವಸ್ವತಸ್ಯ ತು ।
ರಣೇ ತಸ್ಮಿನ್ನಿಪತಿತಾ ಮಾಹೇಂದ್ರಾ ಇವ ಕೇಶವಃ ॥
ಅನುವಾದ
ಆ ಯುದ್ಧದಲ್ಲಿ ಯಮರಾಜನ ಎಲ್ಲ ಸೈನಿಕರು ಪಾಶುಪತಾಸ್ತ್ರದ ತೇಜದಿಂದ ದಗ್ಧರಾಗಿ ಇಂದ್ರಧ್ವಜದಂತೆ ನೆಲಕ್ಕೆ ಬಿದ್ದರು.॥45॥
ಮೂಲಮ್ - 46
ತತಸ್ತು ಸಚಿವೈಃಸಾರ್ಧಂ ರಾಕ್ಷಸೋ ಭೀಮವಿಕ್ರಮಃ ।
ನನಾದ ಸುಮಹಾನಾದಂ ಕಂಪಯನ್ನಿವ ಮೇದಿನೀಮ್ ॥
ಅನುವಾದ
ಅನಂತರ ತನ್ನ ಮಂತ್ರಿಗಳೊಂದಿಗೆ ಆ ಭಯಾನಕ ಪರಾಕ್ರಮಿ ರಾಕ್ಷಸನು ನೆಲವನ್ನು ನಡುಗಿಸುತ್ತಾ ಜೋರಾಗಿ ಸಿಂಹನಾದ ಮಾಡತೊಡಗಿದನು.॥46॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗ ಪೂರ್ಣವಾಯಿತು. ॥21॥