०२० यम-युद्ध-चोदनम्

[ಇಪ್ಪತ್ತನೆಯ ಸರ್ಗ]

ಭಾಗಸೂಚನಾ

ರಾವಣನಿಗೆ ನಾರದರಿಂದ ಸಮಾಧಾನದ ಮಾತು, ನಾರದರ ಸಲಹೆಯಂತೆ ಯಮನೊಡನೆ ಯುದ್ಧ ಮಾಡಲು ಯಮಲೋಕಕ್ಕೆ ರಾವಣನ ಪ್ರಯಾಣ

ಮೂಲಮ್ - 1

ತತೋ ವಿತ್ರಾಸಯನ್ಮರ್ತ್ಯಾನ್ ಪೃಥಿವ್ಯಾಂರಾಕ್ಷಸಾಧಿಪಃ ।
ಆಸಸಾದ ಘನೇ ತಸ್ಮಿನ್ನಾರದಂ ಮುನಿಪುಂಗವಮ್ ॥

ಅನುವಾದ

(ಅಗಸ್ತ್ಯರು ಹೇಳುತ್ತಾರೆ - ರಘುನಂದನ!) ಬಳಿಕ ರಾಕ್ಷಸ ರಾಜ ರಾವಣನು ಮನುಷ್ಯರನ್ನು ಹೆದರಿಸುತ್ತಾ ಪೃಥಿವಿಯಲ್ಲಿ ಸಂಚರಿಸತೊಡಗಿದನು. ಒಂದು ದಿನ ಪುಷ್ಪಕ ವಿಮಾನದಲ್ಲಿ ಹೋಗುತ್ತಿರುವಾಗ ಮೋಡಗಳ ನಡುವೆ ಮುನಿಶ್ರೇಷ್ಠ ನಾರದರು ಸಿಕ್ಕಿದರು.॥1॥

ಮೂಲಮ್ - 2

ತಸ್ಯಾಭಿವಾದನಂ ಕೃತ್ವಾ ದಶಗ್ರೀವೋ ನಿಶಾಚರಃ ।
ಅಬ್ರವೀತ್ಕುಶಲಂ ಪೃಷ್ಟ್ವಾ ಹೇತುಮಾಗಮನಸ್ಯ ಚ ॥

ಅನುವಾದ

ನಿಶಾಚರ ದಶಗ್ರೀವನು ಅವರನ್ನು ವಂದಿಸಿ, ಕ್ಷೇಮ-ಸಮಾಚಾರ ಮಾತನಾಡುತ್ತಾ, ಅವರ ಆಗಮನದ ಕಾರಣವನ್ನು ಕೇಳಿದನು.॥2॥

ಮೂಲಮ್ - 3

ನಾರದಸ್ತು ಮಹಾತೇಜಾ ದೇವರ್ಷಿರಮಿತಪ್ರಭಃ ।
ಅಬ್ರವೀನ್ಮೇಘಪೃಷ್ಠಸ್ಥೋ ರಾವಣಂ ಪುಷ್ಪಕೇ ಸ್ಥಿತಮ್ ॥

ಅನುವಾದ

ಆಗ ಮೋಡಗಳಲ್ಲಿ ನಿಂತಿರುವ ಅಮಿತ ಕಾಂತಿವಂತ ಮಹಾತೇಜಸ್ವೀ ದೇವರ್ಷಿ ನಾರದರು ಪುಷ್ಪಕ ವಿಮಾನದಲ್ಲಿ ಕುಳಿತಿರುವ ರಾವಣನಲ್ಲಿ ಹೇಳಿದರು.॥3॥

ಮೂಲಮ್ - 4

ರಾಕ್ಷಸಾಧಿಪತೇ ಸೌಮ್ಯ ತಿಷ್ಠ ವಿಶ್ರವಸಃ ಸುತ ।
ಪ್ರೀತೋಸ್ಮ್ಯಭಿಜನೋಪೇತ ವಿಕ್ರಮೈರೂರ್ಜಿತೈಸ್ತವ ॥

ಅನುವಾದ

ಉತ್ತಮ ಕುಲೋತ್ಪನ್ನ ವಿಶ್ರವಣಕುಮಾರ ರಾಕ್ಷಸರಾಜ ರಾವಣ! ಸೌಮ್ಯ! ನಿಲ್ಲು. ನಾನು ನಿನ್ನ ಬೆಳೆದಿರುವ ಬಲ-ವಿಕ್ರಮದಿಂದ ಬಹಳ ಪ್ರಸನ್ನನಾಗಿದ್ದೇನೆ.॥4॥

ಮೂಲಮ್ - 5

ವಿಷ್ಣುನಾ ದೈತ್ಯಘಾತೈಶ್ಚ ಗಂಧರ್ವೋರಗಧರ್ಷಣೈಃ ।
ತ್ವಯಾ ಸಮಂ ವಿಮರ್ದೈಶ್ಚ ಭೃಶಂ ಹಿ ಪರಿತೋಷಿತಃ ॥

ಅನುವಾದ

ದೈತ್ಯರ ವಿನಾಶ ಮಾಡುವ ಅನೇಕ ಸಂಗ್ರಾಮ ಮಾಡಿದ ಭಗವಾನ್ ವಿಷ್ಣುವಿನ ಕುರಿತು ಹಾಗೂ ಗಂಧರ್ವ, ನಾಗ ಗಳನ್ನು ಪದದಲಿತ ಮಾಡುವ ಯುದ್ಧಗಳಿಂದ ನೀನು ನನ್ನನ್ನು ಸಮಾನವಾಗಿ ಸಂತುಷ್ಟಗೊಳಿಸಿದೆ.॥5॥

ಮೂಲಮ್ - 6

ಕಿಂಚಿದ್ವಕ್ಷ್ಯಾಮಿ ತಾವತ್ತು ಶ್ರೋತವ್ಯಂ ಶ್ರೋಷ್ಯಸೇ ಯದಿ ।
ತನ್ಮೇ ನಿಗದತಸ್ತಾತ ಸಮಾಧಿಂ ಶ್ರವಣೇ ಕುರು ॥

ಅನುವಾದ

ಈಗ ನೀನು ಕೇಳುವೆಯಾದರೆ ನಾನು ನಿನ್ನಲ್ಲಿ ಯೋಗ್ಯ ಮಾತನ್ನು ಹೇಳುವೆನು. ಅಯ್ಯಾ! ನಾನಾಡಿದ ಮಾತನ್ನು ಕೇಳಲು ನೀನು ಏಕಾಗ್ರಚಿತ್ತನಾಗು.॥6॥

ಮೂಲಮ್ - 7

ಕಿಮಯಂ ವಧ್ಯತೇ ತಾತ ತ್ವಯಾವಧ್ಯೇನ ದೈವತೈಃ ।
ಹತ ಏವ ಹ್ಯಯಂ ಲೋಕೋ ಯದಾ ಮೃತ್ಯುವಶಂ ಗತಃ ॥

ಅನುವಾದ

ಅಯ್ಯಾ! ನೀನು ದೇವತೆಗಳಿಗೂ ಅವಧ್ಯನಾಗಿ ಈ ಭೂಲೋಕ ನಿವಾಸಿಗಳನ್ನು ಏಕೆ ವಧಿಸುತ್ತಿರುವೆ? ಇಲ್ಲಿಯ ಪ್ರಾಣಿಗಳು ಮೃತ್ಯುವಿಗೆ ಅಧೀನವಾದ ಕಾರಣ ಸ್ವತಃ ಸಾಯುವವರೇ. ಹಾಗಿರುವಾಗ ನೀನು ಸತ್ತಿರುವವರನ್ನು ಏಕೆ ಕೊಲ್ಲುತ್ತೀಯೇ.॥7॥

ಮೂಲಮ್ - 8

ದೇವದಾನವದೈತ್ಯಾನಾಂ ಯಕ್ಷಗಂಧರ್ವರಕ್ಷಸಾಮ್ ।
ಅವಧ್ಯೇನ ತ್ವಯಾ ಲೋಕಃ ಕ್ಲೇಷ್ಟುಂ ಯೋಗ್ಯೋ ನ ಮಾನುಷಃ ॥

ಅನುವಾದ

ದೇವತಾ, ದಾನವ, ದೈತ್ಯ, ಯಕ್ಷ, ಗಂಧರ್ವ, ರಾಕ್ಷಸರೂ ಕೂಡ ಯಾರನ್ನು ಕೊಲ್ಲಲಾರರೋ ಅಂತಹ ವಿಖ್ಯಾತ ವೀರನಾಗಿಯೂ ನೀನು ಈ ಮನುಷ್ಯರಿಗೆ ಏಕೆ ಕಷ್ಟ ಕೊಡುತ್ತಿರುವೆ. ಇದು ಯೋಗ್ಯವಲ್ಲ.॥8॥

ಮೂಲಮ್ - 9

ನಿತ್ಯಂ ಶ್ರೇಯಸಿ ಸಮ್ಮೂಢಂ ಮಹದ್ಭಿರ್ವ್ಯಸನೈರ್ವೃತಮ್ ।
ಹನ್ಯಾತ್ಕಸ್ತಾದೃಶಂ ಲೋಕಂ ಜರಾವ್ಯಾಧಿಶತೈರ್ಯುತಮ್ ॥

ಅನುವಾದ

ಯಾರು ಸದಾ ತನ್ನ ಶ್ರೇಯಸ್ಸಿನ ಸಾಧನೆಯಲ್ಲಿ ಮೂಢರೋ, ದೊಡ್ಡ-ದೊಡ್ಡ ವಿಪತ್ತುಗಳಲ್ಲಿ ಮುಳುಗಿರುವರೋ, ವೃದ್ಧಾಪ್ಯ ಮತ್ತು ನೂರಾರು ರೋಗಗಳಿಂದ ಕೂಡಿರುವರೋ, ಅಂತಹ ಜನರನ್ನು ಯಾವುದೇ ವೀರ ಪುರುಷನು ಹೇಗೆ ಕೊಲ್ಲಬಲ್ಲನು.॥9॥

ಮೂಲಮ್ - 10

ತೈಸ್ತೈರನಿಷ್ಟೋಪಗಮೈರಜಸ್ರಂ ಯತ್ರ ಕುತ್ರ ಕಃ ।
ಮತಿಮಾನ್ಮಾನುಷೇ ಲೋಕೇ ಯುದ್ಧೇನ ಪ್ರಣಯೀ ಭವೇತ್ ॥

ಅನುವಾದ

ನಾನಾ ಪ್ರಕಾರದ ಅನಿಷ್ಟಗಳಿಂದ ಎಲ್ಲೆಲ್ಲೂ ಪೀಡಿತವಾದ ಮನುಷ್ಯಲೋಕಕ್ಕೆ ಬಂದು ಯಾವ ಬುದ್ಧಿವಂತ ವೀರ ಪುರುಷನು ಯುದ್ಧದ ಮೂಲಕ ಮನುಷ್ಯರನ್ನು ವಧಿಸಬಲ್ಲನು.॥10॥

ಮೂಲಮ್ - 11

ಕ್ಷೀಯಮಾಣಂ ದೈವಹತಂ ಕ್ಷುತ್ಪಿಪಾಸಾಜರಾದಿಭಿಃ ।
ಏಷಾದಶೋಕಸಮ್ಮೂಢಂ ಲೋಕಂ ತ್ವಂ ಕ್ಷಪಯಸ್ವ ಮಾ ॥

ಅನುವಾದ

ಈ ಲೋಕವಾದರೋ ಹಸಿವು, ತೃಷೆ, ಜರಾದಿಗಳಿಂದ ಕ್ಷೀಣ ವಾಗುತ್ತಾ ಇದೆ. ವಿಷಾದ ಮತ್ತು ಶೋಕದಲ್ಲಿ ಮುಳುಗಿ ತನ್ನ ವಿವೇಕ ಶಕ್ತಿಯನ್ನು ಕಳೆದುಕೊಂಡಿದೆ. ದೈವಹತವಾದ ಈ ಮರ್ತ್ಯಲೋಕವನ್ನು ನೀನು ನಾಶಮಾಡಬೇಡ.॥11॥

ಮೂಲಮ್ - 12

ಪಶ್ಯ ತಾವನ್ಮಹಾಬಾಹೋ ರಾಕ್ಷಸೇಶ್ವರ ಮಾನುಷಮ್ ।
ಮೂಢಮೇವಂ ವಿಚಿತ್ರಾರ್ಥಂ ಯಸ್ಯ ನ ಜ್ಞಾಯತೇ ಗತಿಃ ॥

ಅನುವಾದ

ಮಹಾಬಾಹು ರಾಕ್ಷಸೇಶ್ವರ! ಈ ಮನುಷ್ಯಲೋಕ ಜ್ಞಾನ ಶೂನ್ಯವಾಗಿ ಮೂಢವಾಗಿದ್ದರೂ ನಾನಾ ಪ್ರಕಾರದ ಕ್ಷುದ್ರ ಪುರುಷಾರ್ಥಗಳಲ್ಲಿ ಆಸಕ್ತವಾಗಿದೆ ಎಂಬುದನ್ನು ನೋಡು. ಇವರಿಗೆ ಯಾವಾಗ ಸುಖ-ದುಃಖಗಳು ಬರುವವು ಎಂಬುದೂ ತಿಳಿಯದು.॥12॥

ಮೂಲಮ್ - 13

ಕ್ವಚಿದ್ವಾದಿತ್ರನೃತ್ಯಾದಿ ಸೇವ್ಯತೇ ಮುದಿತೈರ್ಜನೈಃ ।
ರುದ್ಯತೇ ಚಾಪರೈರಾರ್ತೈರ್ಧಾರಾಶ್ರುನಯನಾನನೈಃ ॥

ಅನುವಾದ

ಇಲ್ಲಿ ಕೆಲವು ಮನುಷ್ಯರು ಹಾಡು-ಕುಣಿತದಲ್ಲಿ ಆನಂದಮಗ್ನರಾಗಿದ್ದಾರೆ, ಅದರಿಂದ ಮನೋರಂಜನೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ದುಃಖದಿಂದ ಪೀಡಿತರಾಗಿ ಕಣ್ಣೀರು ಸುರಿಸುತ್ತಾ ಅಳುತ್ತಿದ್ದಾರೆ.॥13॥

ಮೂಲಮ್ - 14

ಮಾತಾಪಿತೃ ಸುತಸ್ನೇಹಭಾರ್ಯಾಬಂಧುಮನೋರಮೈಃ ।
ಮೋಹಿತೋಯಂ ಜನೋ ಧ್ವಸ್ತಃ ಕ್ಲೇಶಂ ಸ್ವಂ ನಾವಬುಧ್ಯತೇ ॥

ಅನುವಾದ

ತಂದೆ-ತಾಯಿ, ಪತ್ನೀ-ಪುತ್ರರು, ಬಂಧುಗಳ ಸಂಬಂಧದಲ್ಲಿ ಮೋಹಗ್ರಸ್ತವಾದ ಮನುಷ್ಯಲೋಕ ಪಾರಮಾರ್ಥದಿಂದ ಭ್ರಷ್ಟವಾಗುತ್ತಾ ಇದೆ. ಇವರಿಗೆ ತಮ್ಮ ಬಂಧನದಿಂದ ಉಂಟಾದ ಕ್ಲೇಶಗಳ ಅನುಭವವೂ ಆಗುವುದಿಲ್ಲ.॥14॥

ಮೂಲಮ್ - 15

ತತ್ಕಿಮೇವಂ ಪರಿಕ್ಲಿಶ್ಯ ಲೋಕಂ ಮೋಹನಿರಾಕೃತಮ್ ।
ಜಿತ ಏವ ತ್ವಯಾ ಸೌಮ್ಯ ಮರ್ತ್ಯಲೋಕೋ ನಸಂಶಯಃ ॥

ಅನುವಾದ

ಹೀಗೆ ಮೋಹ, ಅಜ್ಞಾನದಿಂದಾಗಿ ಪರಮ ಪುರುಷಾರ್ಥದಿಂದ ವಂಚಿತವಾದ ಈ ಮನುಷ್ಯ ಲೋಕಕ್ಕೆ ಕಷ್ಟಕೊಟ್ಟು ನಿನಗೇನು ಸಿಗುವುದು? ಸೌಮ್ಯ! ನೀನು ಮನುಷ್ಯ ಲೋಕವನ್ನು ಗೆದ್ದುಕೊಂಡಿರುವುದರಲ್ಲಿ ಸಂಶಯವೇ ಇಲ್ಲ.॥15॥

ಮೂಲಮ್ - 16½

ಅವಶ್ಯಮೇಭಿಃ ಸರ್ವೈಶ್ಚಗಂತವ್ಯಂ ಯಮಸಾದನಮ್ ।
ತನ್ನಿಗೃಹ್ಣೀಷ್ವ ಪೌಲಸ್ತ್ಯ ಯಮಂ ಪರಪುರಂಜಯ ॥
ತಸ್ಮಿಂಜಿತೇ ಜಿತಂ ಸರ್ವಂ ಭವತ್ಯೇವ ನ ಸಂಶಯಃ ।

ಅನುವಾದ

ಪರಪುರಂಜಯನೇ! ಈ ಮನುಷ್ಯಲೋಕವು ಅವಶ್ಯವಾಗಿ ಯಮಲೋಕಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ ಶಕ್ತಿಯಿದ್ದರೆ ನೀನು ಯಮರಾಜನನ್ನು ಗೆದ್ದುಕೋ. ಅವನನ್ನು ಗೆದ್ದರೆ ನೀನು ಎಲ್ಲರನ್ನು ಗೆದ್ದಂತೆ, ಇದರಲ್ಲಿ ಸಂಶಯವೇ ಇಲ್ಲ.॥16½॥

ಮೂಲಮ್ - 17½

ಏವಮುಕ್ತಸ್ತು ಲಂಕೇಶೋ ದೀಪ್ಯಮಾನಂ ಸ್ವತೇಜಸಾ ॥
ಅಬ್ರವೀನ್ನಾರದಂ ತತ್ರ ಸಂಪ್ರಹಸ್ಯಾಭಿವಾದ್ಯ ಚ ।

ಅನುವಾದ

ನಾರದರು ಹೀಗೆ ಹೇಳಿದಾಗ ಲಂಕಾಧಿಪತಿ ರಾವಣನು ತನ್ನ ತೇಜದಿಂದ ಉದ್ದಿಪ್ತನಾದ ದೇವಋಷಿಗೆ ಪ್ರಣಾಮ ಮಾಡಿ ನಗುತ್ತಾ ಹೇಳಿದನು.॥17½॥

ಮೂಲಮ್ - 18½

ಮಹರ್ಷೇ ದೇವಗಂಧರ್ವವಿಹಾರ ಸಮರಪ್ರಿಯ ॥
ಅಹಂ ಸಮುದ್ಯತೋ ಗಂತುಂ ವಿಜಯಾರ್ಥಂ ರಸಾತಲಮ್ ।

ಅನುವಾದ

ಮಹರ್ಷಿಯೇ! ನೀವು ದೇವ, ಗಂಧರ್ವ ಲೋಕಗಳಲ್ಲಿ ಸಂಚರಿಸುವವರು. ಯುದ್ಧದ ದೃಶ್ಯವನ್ನು ನೋಡುವುದು ನಿಮಗೆ ಪ್ರಿಯವಾಗಿದೆ. ನಾನೀಗ ರಸಾತಳಕ್ಕೆ ದಿಗ್ವಿಜಯಕ್ಕಾಗಿ ಹೊರಟಿರುವೆನು.॥18½॥

ಮೂಲಮ್ - 19½

ತತೋ ಲೋಕತ್ರಯಂ ಜಿತ್ವಾ ಸ್ಥಾಪ್ಯ ನಾಗಾನ್ಸುರಾನ್ವಶೇ ॥
ಸಮುದ್ರಮಮೃತಾರ್ಥಂ ಚ ಮಥಿಶ್ಯಾಮಿ ರಸಾಲಯಮ್ ।

ಅನುವಾದ

ಮತ್ತೆ ಮೂರು ಲೋಕಗಳನ್ನು ಗೆದ್ದು ನಾಗ ಮತ್ತು ದೇವತೆಗಳನ್ನು ವಶಪಡಿಸಿಕೊಂಡು ಅಮೃತ ಪ್ರಾಪ್ತಿಗಾಗಿ ರಸನಿಧಿ ಸಮುದ್ರವನ್ನು ಮಂಥನ ಮಾಡುವೆನು.॥19½॥

ಮೂಲಮ್ - 20

ಅಥಾಬ್ರವೀದ್ದಶಗ್ರೀವಂ ನಾರದೋ ಭಗವಾನೃಷಿಃ ॥

ಮೂಲಮ್ - 21½

ಕ್ವ ಖಲ್ವಿದಾನೀಂ ಮಾರ್ಗೇಣ ತ್ವಯೇಹಾನ್ಯೇನ ಗಮ್ಯತೇ ।
ಅಯಂ ಖಲು ಸುದುರ್ಗಮ್ಯಃ ಪ್ರೇತರಾಜಪುರಂ ಪ್ರತಿ ॥
ಮಾರ್ಗೋ ಗಚ್ಛತಿ ದುರ್ಧರ್ಷ ಯಮಸ್ಯಾಮಿತ್ರಕರ್ಶನ ।

ಅನುವಾದ

ಇದನ್ನು ಕೇಳಿ ನಾರದರು ಹೇಳಿದರು - ಶತ್ರುಸೂದನ ! ನೀನು ರಸಾತಲಕ್ಕೆ ಹೋಗಬೇಕೆಂದಿದ್ದರೆ ಈಗ ಆ ಮಾರ್ಗ ವನ್ನು ಬಿಟ್ಟು ಬೇರೆ ದಾರಿಯಿಂದ ಎಲ್ಲಿಗೆ ಹೋಗುತ್ತಿರುವೆ? ದುರ್ಧರ್ಷವೀರನೇ! ರಸಾತಲದ ಮಾರ್ಗವು ಅತ್ಯಂತ ದುರ್ಗಮವಾಗಿದ್ದು, ಅದು ಯಮಲೋಕವಾಗಿಯೇ ಹೋಗುತ್ತದೆ.॥20-21½॥

ಮೂಲಮ್ - 22½

ಸ ತು ಶಾರದಮೇಘಾಭಂ ಹಾಸಂಮುಕ್ತ್ವಾ ದಶಾನನಃ ॥
ಉವಾಚ ಕೃತಮಿತ್ಯೇವ ವಚನಂ ಚೇದಮಬ್ರವೀತ್ ।

ಅನುವಾದ

ನಾರದರು ಹೀಗೆ ಹೇಳಿದಾಗ ದಶಮುಖ ರಾವಣನು ಶರದ್ಋತುವಿನ ಮೋಡಗಳಂತೆ ಉಜ್ವಲವಾದ ನಗುವನ್ನು ಚೆಲ್ಲಿ ಹೇಳಿದನು - ದೇವಋಷಿಗಳೇ! ನಾನು ನಿಮ್ಮ ಮಾತನ್ನು ಒಪ್ಪಿಕೊಂಡೆ ಎನ್ನುತ್ತಾ ಮುಂದರಿಸಿದನು.॥22½॥

ಮೂಲಮ್ - 23½

ತಸ್ಮಾದೇವಮಹಂ ಬ್ರಹ್ಮನ್ವೈವಸ್ವತವಧೋದ್ಯತಃ ॥
ಗಚ್ಛಾಮಿ ದಕ್ಷಿಣಾಮಾಶಾಂ ಯತ್ರ ಸೂರ್ಯಾತ್ಮಜೋ ನೃಪಃ ।

ಅನುವಾದ

ಬ್ರಹ್ಮನ್! ಈಗ ಯಮರಾಜನನ್ನು ವಧಿಸಲು ನಾನು ಸೂರ್ಯಪುತ್ರ ಯಮರಾಜ ವಾಸಿಸುವ ದಕ್ಷಿಣ ದಿಕ್ಕಿಗೆ ಹೋಗುತ್ತೇನೆ.॥23½॥

ಮೂಲಮ್ - 24½

ಮಯಾ ಹಿ ಭಗವನ್ಕ್ರೋಧಾತ್ಪ್ರತಿಜ್ಞಾತಂ ರಣಾರ್ಥಿನಾ ॥
ಅವಜೇಷ್ಯಾಮಿ ಚತುರೋ ಲೋಕಪಾಲಾನಿತಿ ಪ್ರಭೋ ।

ಅನುವಾದ

ಸ್ವಾಮಿ! ಪೂಜ್ಯರೇ! ನಾನು ಯುದ್ಧದ ಇಚ್ಛೆಯಿಂದ ನಾಲ್ಕೂ ಲೋಕಪಾಲಕರನ್ನು ಸೋಲಿಸುವೆನು ಎಂದು ಕ್ರೋಧದಿಂದ ಪ್ರತಿಜ್ಞೆ ಮಾಡಿರುವೆನು.॥24½॥

ಮೂಲಮ್ - 25½

ತದಿಹ ಪ್ರಸ್ಥಿತೋಹಂ ವೈ ಪಿತೃರಾಜಪುರಂ ಪ್ರತಿ ॥
ಪ್ರಾಣಿಸಂಕ್ಲೇಶಕರ್ತಾರಂ ಯೋಜಯಿಷ್ಯಾಮಿ ಮೃತ್ಯುನಾ ।

ಅನುವಾದ

ಆದ್ದರಿಂದ ನಾನು ಇಲ್ಲಿಂದ ಹೊರಡುವೆನು. ಜಗತ್ತಿನ ಪ್ರಾಣಿಗಳಿಗೆ ಮೃತ್ಯುವಿನ ಕಷ್ಟ ಕೊಡುವ ಸೂರ್ಯಪುತ್ರ ಸ್ವತಃ ಯಮನನ್ನೇ ಮೃತ್ಯುಮುಖವಾಗಿಸುವೆನು.॥25½॥

ಮೂಲಮ್ - 26½

ಏವಮುಕ್ತ್ವಾ ದಶಗ್ರೀವೋ ಮುನಿಂ ತಮಭಿವಾದ್ಯ ಚ ॥
ಪ್ರಯಯೌ ದಕ್ಷಿಣಾಮಾಶಾಂ ಪ್ರವಿಷ್ಟಃ ಸಹ ಮಂತ್ರಿಭಿಃ ।

ಅನುವಾದ

ಹೀಗೆ ಹೇಳಿ ದಶಗ್ರೀವನು ಮುನಿಗೆ ವಂದಿಸಿ ಮಂತ್ರಿಗಳೊಂದಿಗೆ ದಕ್ಷಿಣ ದಿಕ್ಕಿನ ಕಡೆಗೆ ತೆರಳಿದನು.॥26½॥

ಮೂಲಮ್ - 27½

ನಾರದಸ್ತು ಮಹಾತೇಜಾ ಮುಹೂರ್ತಂ ಧ್ಯಾನಮಾಸ್ಥಿತಃ ॥
ಚಿಂತಯಾಮಾಸ ವಿಪ್ರೇಂದ್ರೋ ವಿಧೂಮ ಇವ ಪಾವಕಃ ।

ಅನುವಾದ

ಅವನು ಹೊರಟುಹೋದ ಬಳಿಕ ಹೊಗೆಯಿಲ್ಲದ ಅಗ್ನಿಯಂತೆ ಮಹಾ ತೇಜಸ್ವೀ ವಿಪ್ರ ನಾರದರು ಎರಡು ಗಳಿಗೆ ಧ್ಯಾನಸ್ಥರಾಗಿ ಹೀಗೆ ಯೋಚಿಸತೊಡಗಿದರು.॥27½॥

ಮೂಲಮ್ - 28½

ಯೇನ ಲೋಕಾಸಯಃ ಸೇಂದ್ರಾಃ ಕ್ಲಿಶ್ಯಂತೇ ಸಚರಾಚರಾಃ ॥
ಕ್ಷೀಣೇ ಚಾಯುಷಿ ಧರ್ಮೇಣ ಸ ಕಾಲೋ ಜೇಷ್ಯತೇ ಕಥಮ್ ।

ಅನುವಾದ

ಆಯುಸ್ಸು ಮುಗಿದಾಗ ಯಾರಿಂದ ಧರ್ಮಪೂರ್ವಕ ಇಂದ್ರಸಹಿತ ಮೂರು ಲೋಕಗಳ ಚರಾಚರ ಪ್ರಾಣಿಗಳನ್ನು ಕಷ್ಟದಲ್ಲಿ ಕೆಡಹುವ, ಕ್ಲೇಶದಲ್ಲಿ ಹಾಕುವ ಆ ಯಮರಾಜ ಈ ರಾವಣ ನಿಂದ ಹೇಗೆ ಗೆಲ್ಲಲ್ಪಡುತ್ತಾನೆ.॥28½॥

ಮೂಲಮ್ - 29

ಸ್ವದತ್ತಕೃತಸಾಕ್ಷೀ ಯೋ ದ್ವಿತೀಯ ಇವ ಪಾವಕಃ ॥

ಮೂಲಮ್ - 30½

ಲಬ್ಧಸಂಜ್ಞಾ ವಿಚೇಷ್ಟಂತೇ ಲೋಕಾ ಯಸ್ಯ ಮಹಾತ್ಮನಃ ।
ಯಸ್ಯ ನಿತ್ಯಂ ತ್ರಯೋ ಲೋಕಾ ವಿದ್ರವಂತಿ ಭಯಾರ್ದಿತಾಃ ॥
ತಂ ಕಥಂ ರಾಕ್ಷಸೇಂದ್ರೋಸೌ ಸ್ವಯಮೇವ ಗಮಿಷ್ಯತಿ ।

ಅನುವಾದ

ಯಾರು ಜೀವಿಗಳ ದಾನ ಮತ್ತು ಕರ್ಮಸಾಕ್ಷಿಯಾಗಿದ್ದಾನೋ, ಯಾರು ಮತ್ತೊಬ್ಬ ಅಗ್ನಿಯಂತೆ ತೇಜಸ್ವಿಯಾಗಿದ್ದಾನೋ, ಯಾವ ಮಹಾತ್ಮನಿಂದ ಚೈತನ್ಯ ಪಡೆದು ಎಲ್ಲ ಜೀವಿಗಳು ನಾನಾ ರೀತಿಯ ಚೇಷ್ಟೆ ಗಳನ್ನು ಮಾಡುವರೋ, ಯಾರ ಭಯದಿಂದ ಪೀಡಿತರಾಗಿ ತ್ರಿಲೋಕದ ಪ್ರಾಣಿಗಳು ದೂರ ಓಡುತ್ತಾರೋ, ಅವನ ಬಳಿಗೆ ಈ ರಾಕ್ಷಸೇಶ್ವರ ಸ್ವತಃ ಹೇಗೆ ಹೋಗಬಲ್ಲನು.॥29-30½॥

ಮೂಲಮ್ - 31

ಯೋ ವಿಧಾತಾ ಚ ಧಾತಾ ಚ ಸುಕೃತಂ ದುಷ್ಕೃತಂ ತಥಾ ॥

ಮೂಲಮ್ - 32

ತ್ರೈಲೋಕ್ಯಂ ವಿಜಿತಂ ಯೇನ ತಂ ಕಥಂ ವಿಜಯಿಷ್ಯತೇ ।
ಅಪರಂ ಕಿಂ ತು ಕೃತ್ವೈವಂ ವಿಧಾನಂ ಸಂವಿಧಾಸ್ಯತಿ ॥

ಅನುವಾದ

ತ್ರಿಲೋಕಗಳನ್ನು ಧರಿಸಿ ಪೋಷಿಸುವ, ಪಾಪ-ಪುಣ್ಯಗಳ ಫಲ ಕೊಡುವ, ಮೂರು ಲೋಕಗಳ ಮೇಲೆ ವಿಜಯ ಪಡೆದ ಆ ಕಾಲದೇವನನ್ನು ಈ ರಾಕ್ಷಸನು ಹೇಗೆ ಜಯಿಸಬಲ್ಲನು? ಕಾಲವೇ ಎಲ್ಲರ ಸಾಧನವಾಗಿದೆ. ಈ ರಾಕ್ಷಸನು ಕಾಲವನ್ನು ಬಿಟ್ಟು ಬೇರೆ ಯಾವ ಸಾಧನವನ್ನು ಗಳಿಸಿ ಆ ಕಾಲನ ಮೇಲೆ ಹೇಗೆ ವಿಜಯ ಪಡೆಯುವನು.॥31-32॥

ಮೂಲಮ್ - 33

ಕೌತೂಹಲಂ ಸಮುತ್ಪನ್ನೋ ಯಾಸ್ಯಾಮಿ ಯಮಸಾದನಮ್ ।
ವಿಮರ್ದಂ ದ್ರಷ್ಟುಮನಯೋರ್ಯಮರಾಕ್ಷಸಯೋಃ ಸ್ವಯಮ್ ॥

ಅನುವಾದ

ಈ ನನ್ನ ಮನಸ್ಸಿನಲ್ಲಿ ಕುತೂಹಲ ಉಂಟಾಗಿದೆ, ಆದ್ದರಿಂದ ಈ ಯಮರಾಜ ಮತ್ತು ರಾಕ್ಷಸರಾಜರ ಯುದ್ಧವನ್ನು ನೋಡಲು ನಾನೂ ಯಮಲೋಕಕ್ಕೆ ಹೋಗುವೆನು.॥33॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಇಪ್ಪತ್ತನೆಯ ಸರ್ಗ ಪೂರ್ಣವಾಯಿತು. ॥20॥