[ಹದಿನೆಂಟನೆಯ ಸರ್ಗ]
ಭಾಗಸೂಚನಾ
ರಾವಣನಿಂದ ಮರುತ್ತನ ಪರಾಜಯ, ಇಂದ್ರಾದಿ ದೇವತೆಗಳಿಂದ ವರಪ್ರದಾನ
ಮೂಲಮ್ - 1
ಪ್ರವಿಷ್ಟಾಯಾಂ ಹುತಾಶಂ ತು ವೇದವತ್ಯಾಂ ಸ ರಾವಣಃ ।
ಪುಷ್ಪಕಂ ತು ಸಮಾರುಹ್ಯ ಪರಿಚಕ್ರಾಮ ಮೇದಿನೀಮ್ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ!) ವೇದವತಿಯು ಅಗ್ನಿಯಲ್ಲಿ ಪ್ರವೇಶಿಸಿದ ಬಳಿಕ ರಾವಣನು ಪುಷ್ಪಕ ವಿಮಾನಾರೂಢನಾಗಿ ಪೃಥಿವಿಯಲ್ಲಿ ಸಂಚರಿಸತೊಡಗಿದನು.॥1॥
ಮೂಲಮ್ - 2
ತತೋ ಮರುತ್ತಂ ನೃಪತಿಂ ಯಜಂತಂ ಸಹ ದೈವತೈಃ ।
ಉಶೀರಬೀಜಮಾಸಾದ್ಯ ದದರ್ಶ ಸ ತು ರಾವಣಃ ॥
ಅನುವಾದ
ಅದೇ ಯಾತ್ರೆಯಲ್ಲಿ ಉಶೀರಬೀಜ ಎಂಬ ದೇಶಕ್ಕೆ ಹೋಗಿ ರಾವಣನು ನೋಡಿದನು - ರಾಜಾ ಮರುತ್ತನು ದೇವತೆಗಳೊಂದಿಗೆ ಕುಳಿತು ಯಜ್ಞ ಮಾಡುತ್ತಿದ್ದಾನೆ.॥2॥
ಮೂಲಮ್ - 3
ಸಂವರ್ತೋ ನಾಮ ಬ್ರಹ್ಮರ್ಷಿಃ ಸಾಕ್ಷಾದ್ ಭ್ರಾತಾ ಬೃಹಸ್ಪತೇಃ ।
ಯಾಜಯಾಮಾಸ ಧರ್ಮಜ್ಞಃ ಸರ್ವೈರ್ದೇವ ಗಣೈರ್ವೃತಃ ॥
ಅನುವಾದ
ಆಗ ಸಾಕ್ಷಾತ್ ಬೃಹಸುತಿಯ ತಮ್ಮನು ಹಾಗೂ ಧರ್ಮದ ಮರ್ಮಜ್ಞ ಮಹರ್ಷಿ ಸಂವರ್ತನು ಸಮಸ್ತ ದೇವತೆಗಳಿಂದ ಸುತ್ತುವರೆದು ಯಜ್ಞ ಮಾಡಿಸುತ್ತಿದ್ದನು.॥3॥
ಮೂಲಮ್ - 4
ದೃಷ್ಟ್ವಾ ದೇವಾಸ್ತು ತದ್ರಕ್ಷೋ ವರದಾನೇನ ದುರ್ಜಯಮ್ ।
ತಿರ್ಯಗ್ಯೋನಿಂ ಸಮಾವಿಷ್ಟಾಸ್ತಸ್ಯ ಧರ್ಷಣಭೀರವಃ ॥
ಅನುವಾದ
ಬ್ರಹ್ಮದೇವರ ವರದಿಂದ ಜಯಿಸಲು ಕಠಿಣನಾದ ರಾಕ್ಷಸ ರಾವಣನನ್ನು ಅಲ್ಲಿ ನೋಡಿ, ಅವನ ಆಕ್ರಮಣದ ಭಯದಿಂದ ದೇವತೆಗಳು ತಿರ್ಯಗ್ಯೋನಿ (ಪಕ್ಷಿ)ಯಲ್ಲಿ ಪ್ರವೇಶಿಸಿದರು.॥4॥
ಮೂಲಮ್ - 5
ಇಂದ್ರೋ ಮಯೂರಃ ಸಂವೃತ್ತೋ ಧರ್ಮರಾಜಸ್ತು ವಾಯಸಃ ।
ಕೃಕಲಾಸೋ ಧನಾಧ್ಯಕ್ಷೋ ಹಂಸಶ್ಚ ಮರುಣೋಭವತ್ ॥
ಅನುವಾದ
ಇಂದ್ರನು ನವಿಲು, ಧರ್ಮರಾಜ ಕಾಗೆ, ಕುಬೇರನು ಓತಿಕ್ಯಾತ, ವರುಣ ಹಂಸನಾದನು.॥5॥
ಮೂಲಮ್ - 6
ಅನ್ಯೇಷ್ವಪಿ ಗತೇಷ್ವೇವಂ ದೇವೇಷ್ವರಿನಿಷೂದನ ।
ರಾವಣಃ ಪ್ರಾವಿಶದ್ಯಜ್ಞಂ ಸಾರಮೇಯ ಇವಾಶುಚಿಃ ॥
ಅನುವಾದ
ಶತ್ರುಸೂದನ ಶ್ರೀರಾಮಾ! ಹೀಗೆ ಇತರ ದೇವತೆಗಳೂ ಕೂಡ ವಿಭಿನ್ನ ರೂಪಗಳಲ್ಲಿ ಸ್ಥಿತರಾದಾಗ ರಾವಣನು ಆ ಯಜ್ಞ ಮಂಟಪವನ್ನು ಅಪವಿತ್ರ ನಾಯಿ ಹೊಕ್ಕಂತೆ ಪ್ರವೇಶಿಸಿದನು.॥6॥
ಮೂಲಮ್ - 7
ತಂ ಚ ರಾಜಾನಮಾಸಾದ್ಯ ರಾವಣೋ ರಾಕ್ಷಸಾಧಿಪಃ ।
ಪ್ರಾಹ ಯುದ್ಧಂ ಪ್ರಯಚ್ಛೇತಿ ನಿರ್ಜಿತೋಽಸ್ಮೀತಿ ವಾ ವದ ॥
ಅನುವಾದ
ರಾಜಾ ಮರುತ್ತನ ಬಳಿಗೆ ಹೋಗಿ ರಾಕ್ಷಸಾಧಿಪ ರಾವಣನು ಹೇಳಿದನು - ನನ್ನೊಂದಿಗೆ ಯುದ್ಧ ಮಾಡು ಇಲ್ಲವೆ, ನಾನು ಪರಾಜಿತನಾದೆ ಎಂದು ಹೇಳು.॥7॥
ಮೂಲಮ್ - 8
ತತೋ ಮರುತ್ತೋ ನೃಪತಿಃ ಕೋ ಭವಾನಿತ್ಯುವಾಚ ತಮ್ ।
ಅವಹಾಸಂ ತತೋ ಮುಕ್ತ್ವಾ ರಾವಣೋ ವಾಕ್ಯಮಬ್ರವೀತ್ ॥
ಅನುವಾದ
ಆಗ ರಾಜಾ ಮರುತ್ತನು ಕೇಳಿದನು - ನೀನು ಯಾರು? ಅದನ್ನು ಕೇಳಿ ರಾವಣನು ನಕ್ಕು ನುಡಿದನು.॥8॥
ಮೂಲಮ್ - 9
ಅಕುತೂಹಲಭಾವೇನ ಪ್ರೀತೋಽಸ್ಮಿ ತವ ಪಾರ್ಥಿವ ।
ಧನದಸ್ಯಾನುಜಂ ಯೋ ಮಾಂ ನಾವಗಚ್ಛಸಿ ರಾವಣಮ್ ॥
ಅನುವಾದ
ಭೂಪಾಲಾ! ನಾನು ಕುಬೇರನ ತಮ್ಮ ರಾವಣನಾಗಿದ್ದೇನೆ. ಹೀಗಿದ್ದರೂ ನೀನು ನನ್ನನ್ನು ತಿಳಿಯುತ್ತಿಲ್ಲ. ನನ್ನನ್ನು ನೋಡಿಯೂ ನಿನಗೆ ಕುತೂಹಲ, ಭಯವಾಗಲಿಲ್ಲ. ಇದರಿಂದ ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿದ್ದೇನೆ.॥9॥
ಮೂಲಮ್ - 10
ತ್ರಿಷು ಲೋಕೇಷು ಕೋಽನ್ಯೋಽಸ್ತಿ ಯೋ ನ ಜಾನಾತಿ ಮೇ ಬಲಮ್ ।
ಭ್ರಾತರಂ ಯೇನ ನಿರ್ಜಿತ್ಯ ವಿಮಾನಮಿದಮಾಹೃತಮ್ ॥
ಅನುವಾದ
ಮೂರು ಲೋಕಗಳಲ್ಲಿ ನೀನಲ್ಲದೆ ನನ್ನ ಬಲವನ್ನು ತಿಳಿಯದ ರಾಜಾ ಬೇರೆ ಯಾರು ಇರಬಹುದು. ಅಣ್ಣನಾದ ಕುಬೇರನನ್ನು ಗೆದ್ದು ಈ ವಿಮಾನವನ್ನು ಕಿತ್ತುಕೊಂಡ ರಾವಣ ನಾನೇ ಆಗಿದ್ದೇನೆ.॥10॥
ಮೂಲಮ್ - 11
ತತೋ ಮರುತ್ತಃ ಸ ನೃಪಸ್ತಂ ರಾವಣಮಥಾಬ್ರವೀತ್ ।
ಧನ್ಯಃ ಖಲು ಭವಾನ್ಯೇನ ಜ್ಯೇಷ್ಠೋ ಭ್ರಾತಾರಣೇ ಜಿತಃ ॥
ಅನುವಾದ
ಆಗ ರಾಜಾ ಮರುತ್ತನು ರಾವಣನಲ್ಲಿ ಹೇಳಿದನು- ತನ್ನ ಅಣ್ಣನನ್ನು ಯುದ್ಧದಲ್ಲಿ ಗೆದ್ದಿರುವ ನೀನು ಧನ್ಯನಾಗಿರುವೆ.॥11॥
ಮೂಲಮ್ - 12
ನ ತ್ವಯಾ ಸದೃಶಃ ಶ್ಲಾಘ್ಯಸ್ತ್ರಿಷು ಲೋಕೇಷು ವಿದ್ಯತೇ ।
ಕಂ ತ್ವಂ ಪ್ರಾಕ್ಕೇವಲಂ ಧರ್ಮಂ ಚರಿತ್ವಾ ಲಬ್ಧವಾನ್ ವರಮ್ ॥
ಅನುವಾದ
ನಿನ್ನಂತಹ ಶ್ಲಾಘ್ಯನು ಮೂರು ಲೋಕಗಳಲ್ಲಿ ಬೇರೊಬ್ಬನಿರಲಾರನು. ನೀನು ಹಿಂದೆ ಯಾವ ಶುದ್ಧವಾದ ಧರ್ಮವನ್ನು ಆಚರಿಸಿ ವರವನ್ನು ಪಡೆದಿರುವೆ.॥12॥
ಮೂಲಮ್ - 13½
ಶ್ರುತಪೂರ್ವಂ ಹಿ ನ ಮಯಾ ಭಾಷಸೇ ಯಾದೃಶಂ ಸ್ವಯಮ್ ।
ತಿಷ್ಠೇದಾನೀಂ ನ ಮೇ ಜೀವನ್ಪ್ರತಿಯಾಸ್ಯಸಿ ದುರ್ಮತೇ ॥
ಅದ್ಯ ತ್ವಾಂ ನಿಶಿತೈರ್ಬಾಣೈಃ ಪ್ರೇಷಯಾಮಿ ಯಮಕ್ಷಯಮ್ ।
ಅನುವಾದ
ನೀನು ಹೇಳುತ್ತಿರುವ ಮಾತುಗಳನ್ನು ನಾನು ಹಿಂದೆ ಕೇಳಿಯೇ ಇಲ್ಲ. ದುರ್ಬುದ್ಧಿಯವನೇ! ಯುದ್ಧ ಸನ್ನದ್ಧನಾಗಿ ನಿಲ್ಲು. ನನ್ನ ಕೈಯಿಂದ ಜೀವಂತನಾಗಿ ಹೋಗಲಾರೆ. ಇಂದೇ ನನ್ನ ಹರಿತವಾದ ಬಾಣಗಳಿಂದ ಕೊಂದು ಯಮಸದನಕ್ಕೆ ಕಳಿಸುವೆನು.॥13½॥
ಮೂಲಮ್ - 14½
ತತಃ ಶರಾಸನಂ ಗೃಹ್ಯ ಸಾಯಕಾಂಶ್ಚ ನರಾಧಿಪಃ ॥
ರಣಾಯ ನಿರ್ಯಯೌ ಕ್ರುದ್ಧಃ ಸಂವರ್ತೋ ಮಾರ್ಗಮಾವೃಣೋತ್ ।
ಅನುವಾದ
ಬಳಿಕ ಮರುತ್ತನು ಧನುರ್ಬಾಣಗಳನ್ನು ಧರಿಸಿ ರೋಷಾವೇಶದಿಂದ ಯುದ್ಧಕ್ಕೆ ಹೊರಟನು. ಆದರೆ ಮಹರ್ಷಿ ಸಂವರ್ತನು ಅವನ ದಾರಿಯನ್ನು ತಡೆದನು.॥14½॥
ಮೂಲಮ್ - 15½
ಸೋಽಬ್ರವೀತ್ ಸ್ನೇಹ ಸಂಯುಕ್ತಂ ಮರುತ್ತಂ ತಂ ಮಹಾನೃಷಿಃ ॥
ಶ್ರೋತವ್ಯಂ ಯದಿ ಮದ್ವಾಕ್ಯಂ ಸಂಪ್ರಹಾರೋ ನ ತೇ ಕ್ಷಮಃ ।
ಅನುವಾದ
ಆ ಮಹರ್ಷಿಯು ಮರುತ್ತನಲ್ಲಿ ಸ್ನೇಹದಿಂದ ಹೇಳಿದನು - ರಾಜಾ! ನನ್ನ ಮಾತನ್ನು ಕೇಳಿ. ಅದನ್ನು ಗಮನಿಸುವುದು ಉಚಿತವೆಂದು ತಿಳಿದರೆ ಕೇಳು, ನೀನು ಯುದ್ಧ ಮಾಡುವುದು ಉಚಿತವಲ್ಲ.॥15½॥
ಮೂಲಮ್ - 16½
ಮಾಹೇಶ್ವರಮಿದಂ ಸತ್ರಮಸಮಾಪ್ತಂ ಕುಲಂ ದಹೇತ್ ॥
ದೀಕ್ಷಿತಸ್ಯ ಕುತೋ ಯುದ್ಧಂ ಕ್ರೋಧತ್ವಂ ದೀಕ್ಷಿತೇ ಕುತಃ ।
ಅನುವಾದ
ಈ ಮಹೇಶ್ವರ ಯಜ್ಞ ಪ್ರಾರಂಭಿಸಲಾಗಿದೆ. ಇದು ಪೂರ್ಣವಾಗದಿದ್ದರೆ ನಿನ್ನ ಸಮಸ್ತ ಕುಲವನ್ನು ಸುಟ್ಟು ಬಿಡುವುದು. ಯಜ್ಞದೀಕ್ಷಿತನಾದಾಗ ಯುದ್ಧಕ್ಕೆ ಅವಕಾಶವೆಲ್ಲಿ? ಯಜ್ಞದೀಕ್ಷಿತನಾದವನು ಕ್ರೋಧಗೊಳ್ಳಬಾರದು.॥16½॥
ಮೂಲಮ್ - 17
ಸಂಶಯಶ್ಚ ಜಯೇ ನಿತ್ಯಂ ರಾಕ್ಷಸಶ್ಚ ಸುದುರ್ಜಯಃ ॥
ಮೂಲಮ್ - 18
ಸ ನಿವೃತ್ತೋ ಗುರೋರ್ವಾಕ್ಯಾನ್ಮರುತ್ತಃ ಪೃಥಿವೀಪತಿಃ ।
ವಿಸೃಜ್ಯ ಸಶರಂ ಚಾಪಂ ಸ್ವಸ್ಥೋ ಮಖಮುಖೋಽಭವತ್ ॥
ಅನುವಾದ
ಯುದ್ಧದ ವಿಜಯದಲ್ಲಿ ಸದಾ ಸಂಶಯವೇ ಇರುತ್ತದೆ. ಆ ರಾಕ್ಷಸನೂ ದುರ್ಜಯನಾಗಿದ್ದಾನೆ. ತನ್ನ ಆಚಾರ್ಯನ ಮಾತಿನಂತೆ ಮರುತ್ತನು ಯುದ್ಧದಿಂದ ನಿವೃತ್ತನಾದನು. ಅವನು ಧನುರ್ಬಾಣಗಳನ್ನು ತ್ಯಜಿಸಿ ಸ್ವಸ್ಥ ಭಾವದಿಂದ ಯಜ್ಞಕ್ಕಾಗಿ ಉನ್ಮುಖನಾದನು.॥17-18॥
ಮೂಲಮ್ - 19
ತತಸ್ತಂ ನಿರ್ಜಿತಂ ಮತ್ವಾ ಘೋಷಯಾಮಾಸ ವೈ ಶುಕಃ ।
ರಾವಣೋ ಜಯತೀತ್ಯುಚ್ಚೈರ್ಹರ್ಷಾನ್ನಾದಂ ವಿಮುಕ್ತವಾನ್ ॥
ಅನುವಾದ
ಆಗ ಅವನು ಪರಾಜಿತನಾದನೆಂದು ತಿಳಿದು ಶುಕನು ಮಹಾರಾಜಾ ರಾವಣನ ವಿಜಯವಾಯಿತು ಎಂದು ಘೋಷಿಸಿದನು ಹಾಗೂ ಗಟ್ಟಿಯಾಗಿ ಸಿಂಹನಾದ ಮಾಡತೊಡಗಿದನು.॥19॥
ಮೂಲಮ್ - 20
ತಾನ್ಭಕ್ಷಯಿತ್ವಾ ತತ್ರಸ್ಥಾನ್ಮಹರ್ಷೀನ್ಯಜ್ಞ ಮಾಗತಾನ್ ।
ವಿತೃಪ್ತೋ ರುಧಿರೈಸ್ತೇಷಾಂ ಪುನಃ ಸಂಪ್ರಯಯೌ ಮಹೀಮ್ ॥
ಅನುವಾದ
ಆ ಯಜ್ಞದಲ್ಲಿ ಕುಳಿತಿರುವ ಮಹರ್ಷಿಗಳನ್ನು ತಿಂದು, ರಕ್ತದಿಂದ ತೃಪ್ತನಾಗಿ ರಾವಣನು ಪುನಃ ಪೃಥಿವಿಯಲ್ಲಿ ಸಂಚರಿಸತೊಡಗಿದನು.॥20॥
ಮೂಲಮ್ - 21
ರಾವಣೇ ತು ಗತೇ ದೇವಾಃ ಸೇಂದ್ರಾಶ್ಚೈವ ದಿವೌಕಸಃ ।
ತತಃ ಸ್ವಾಂ ಯೋನಿಮಾಸಾದ್ಯ ತಾನಿ ಸತ್ತ್ವಾನಿ ಚಾಬ್ರುವನ್ ॥
ಅನುವಾದ
ರಾವಣನು ಹೊರಟು ಹೋದ ಮೇಲೆ ಇಂದ್ರಸಹಿತ ಸಮಸ್ತ ದೇವತೆಗಳು ಪುನಃ ಪ್ರಾಣಿಪಕ್ಷಿಗಳ ರೂಪವನ್ನು ಬಿಟ್ಟು ನಿಜರೂಪದಲ್ಲಿ ಪ್ರಕಟರಾಗಿದ್ದರು. ಅವರು ವರಗಳನ್ನು ಕೊಡುತ್ತಾ ನುಡಿದರು .॥21॥
ಮೂಲಮ್ - 22
ಹರ್ಷಾತ್ತದಾಬ್ರವೀದಿಂದ್ರೋ ಮಯೂರಂ ನೀಲಬರ್ಹಿಣಮ್ ।
ಪ್ರೀತೋಽಸ್ಮಿ ತವ ಧರ್ಮಜ್ಞ ಭುಜಂಗಾದ್ಧಿ ನ ತೇ ಭಯಮ್ ॥
ಅನುವಾದ
ಮೊಟ್ಟಮೊದಲಿಗೆ ಇಂದ್ರನು ಹರ್ಷದಿಂದ ನೀಲಿಗರಿಗಳಿದ್ದ ನವಿಲಿಗೆ-ಧಮಜ್ಞ! ನಾನು ನಿನ್ನ ಮೇಲೆ ಬಹಳ ಪ್ರಸನ್ನನಾಗಿರುವೆ. ನಿನಗೆ ಸರ್ಪಗಳಿಂದ ಭಯವಿರಲಾರದು.॥22॥
ಮೂಲಮ್ - 23
ಇದಂ ನೇತ್ರಸಹಸ್ರಂತು ಯತ್ತದ್ಬರ್ಹೇ ಭವಿಷ್ಯತಿ ।
ವರ್ಷಮಾಣೇ ಮಯಿ ಮುದಂ ಪ್ರಾಪ್ಸ್ಯಸೇ ಪ್ರೀತಿಲಕ್ಷಣಮ್ ॥
ಮೂಲಮ್ - 24
ಏವಮಿಂದ್ರೋ ವರಂ ಪ್ರಾದಾನ್ಮಯೂರಾಯ ಸುರೇಶ್ವರಃ ॥
ಅನುವಾದ
ನನಗೆ ಇರುವ ಸಹಸ್ರನೇತ್ರಗಳು ನಿನ್ನ ಗರಿಗಳಲ್ಲಿ ಪ್ರಕಟಗೊಳ್ಳುವವು. ಮೇಘರೂಪದಿಂದ ನಾನು ಮಳೆಗರೆದಾಗ ನಿಮಗೆ ಬಹಳ ಸಂತೋಷವಾಗುವುದು. ಆ ಪ್ರಸನ್ನತೆ ನನ್ನನ್ನು ಪಡೆದ ಕುರುಹಾಗಿರಬಹುದು. ಈ ಪ್ರಕಾರ ದೇವೇಂದ್ರನು ನವಿಲುಗಳಿಗೆ ವರ ನೀಡಿದನು.॥23-24॥
ಮೂಲಮ್ - 25
ನೀಲಾಃ ಕಿಲ ಪುರಾ ಬರ್ಹಾ ಮಯೂರಾಣಾಂ ನರಾಧಿಪ ।
ಸುರಾಧಿಪಾದ್ವರಂ ಪ್ರಾಪ್ಯ ಗತಾಃ ಸರ್ವೇಽಪಿ ಬರ್ಹಿಣಃ ॥
ಅನುವಾದ
ನರೇಶ್ವರ ರಾಮಾ! ಈ ವರದಾನದ ಮೊದಲು ನವಿಲುಗಳ ಗರಿಗಳು ಕೇವಲ ನೀಲಿ ಬಣ್ಣದ್ದಾಗಿದ್ದವು. ದೇವರಾಜನಿಂದ ವರ ಪಡೆದು ಮಯೂರ ಅಲ್ಲಿಂದ ಹೊರಟು ಹೋಯಿತು.॥25॥
ಮೂಲಮ್ - 26
ಧರ್ಮರಾಜೋಽಬ್ರವೀದ್ರಾಮ ಪ್ರಾಗ್ವಂಶೇ ವಾಯಸಂ ಪ್ರತಿ ।
ಪಕ್ಷಿಂಸ್ತವಾಸ್ಮಿ ಸುಪ್ರೀತಃ ಪ್ರೀತಸ್ಯ ವಚನಂ ಶೃಣು ॥
ಅನುವಾದ
ಶ್ರೀರಾಮಾ! ಬಳಿಕ ಧರ್ಮರಾಜನು ಪ್ರಾಗ್ವಂಶದ* ಮಾಡಿನಲ್ಲಿ ಕುಳಿತ ಕಾಗೆಗೆ ಹೇಳಿದನು - ಎಲೈ ಪಕ್ಷಿಯೇ! ನಾನು ನಿನ್ನ ಮೇಲೆ ಪ್ರಸನ್ನನಾಗಿದ್ದೇನೆ. ನಾನು ಹೇಳುವುದನ್ನು ಕೇಳು.॥26॥
ಟಿಪ್ಪನೀ
- ಯಜ್ಞಶಾಲೆಯ ಪೂರ್ವದಲ್ಲಿ ಯಜಮಾನ ಮತ್ತು ಅವನ ಪತ್ನೀ ಇರಲು ಮಾಡಿದ ಮನೆಯನ್ನು ಪ್ರಾಗ್ವಂಶವೆಂದು ಹೇಳುತ್ತಾರೆ. ಈ ಮನೆಯು ಹವಿರ್ಗೃಹದ ಪೂರ್ವಕ್ಕೆ ಇರುತ್ತದೆ.
ಮೂಲಮ್ - 27
ಯಥಾನ್ಯೇ ವಿವಿಧೈ ರೋಗೈಃ ಪಿಡ್ಯಂತೇ ಪ್ರಾಣಿನೋ ಮಯಾ ।
ತೇ ನ ತೇ ಪ್ರಭವಿಷ್ಯಂತಿ ಮಯಿ ಪ್ರೀತೇ ನ ಸಂಶಯಃ ॥
ಅನುವಾದ
ಇತರ ಪ್ರಾಣಿಗಳನ್ನು ನಾನು ನಾನಾ ರೀತಿಯ ರೋಗಗಳಿಂದ ಪೀಡಿಸಿದಂತೆ, ಆ ರೋಗಗಳು ನಿನ್ನ ಮೇಲೆ ಪ್ರಭಾವ ಬೀರಲಾರವು. ಇದರಲ್ಲಿ ಸಂಶಯವಿಲ್ಲ.॥27॥
ಮೂಲಮ್ - 28
ಮೃತ್ಯುಸ್ತೇ ಭಯಂ ನಾಸ್ತಿವರಾನ್ ಮಮ ವಿಹಂಗಮ ।
ಯಾವತ್ತ್ವಾಂ ನ ವಧಿಷ್ಯಂತಿ ನರಾಸ್ತಾವದ್ಭವಿಷ್ಯಸಿ ॥
ಅನುವಾದ
ವಿಹಂಗಮವೇ! ನನ್ನ ವರದಿಂದ ನಿನಗೆ ಮೃತ್ಯುಭಯ ಇರಲಾರದು. ಮನುಷ್ಯಾದಿ ಪ್ರಾಣಿಗಳು ನಿನ್ನನ್ನು ವಧಿಸುವವರೆಗೆ ನೀನು ಜೀವಿಸಿ ಇರುವೆ.॥28॥
ಮೂಲಮ್ - 29
ಯೇ ಚ ಮದ್ವಿಷಯಸ್ಥಾ ವೈ ಮಾನವಾಃ ಕ್ಷುಧಯಾರ್ದಿತಾಃ ।
ತ್ವಯಿ ಭುಕ್ತೇ ಸುತೃಪ್ತಾಸ್ತೇ ಭವಿಷ್ಯಂತಿ ಸಬಾಂಧವಾಃ ॥
ಅನುವಾದ
ನನ್ನ ರಾಜ್ಯವಾದ ಯಮಲೋಕದಲ್ಲಿ ಹಸಿವಿನಿಂದ ಪೀಡಿತರಾದ ಮನುಷ್ಯರಿರುವರೋ, ಅವರ ಪುತ್ರಾದಿಗಳು ಈ ಭೂತಳದಲ್ಲಿ ನಿನಗೆ ಅನ್ನ ಕೊಡುವರೋ, ಆಗ ಅವರು ಬಂಧು-ಬಾಂಧವರಿಂದ ತೃಪ್ತರಾಗುವರು.॥29॥
ಮೂಲಮ್ - 30
ವರುಣಸ್ತ್ವಬ್ರವೀದ್ಧಂಸಂ ಗಂಗಾತೋಯ ವಿಚಾರಿಣಮ್ ।
ಶ್ರೂಯತಾಂ ಪ್ರೀತಿ ಸಂಯುಕ್ತಂ ವಚಃ ಪತ್ರರಥೇಶ್ವರ ॥
ಅನುವಾದ
ಅನಂತರ ವರುಣನು ಗಂಗೆಯಲ್ಲಿ ವಿಚರಿಸುವ ಹಂಸವನ್ನು ಸಂಬೋಧಿಸಿ ಪಕ್ಷಿರಾಜನೇ! ಪ್ರೇಮಪೂರ್ಣ ನನ್ನ ಮಾತನ್ನು ಕೇಳು.॥30॥
ಮೂಲಮ್ - 31
ವರ್ಣೋ ಮನೋರಮಃ ಸೌಮ್ಯಶ್ಚಂದ್ರಮಂಡಲ ಸಂನಿಭಃ ।
ಭವಿಷ್ಯತಿ ತವೋದಗ್ರಃ ಶುದ್ಧೇನ ಸಮಪ್ರಭಃ ॥
ಅನುವಾದ
ನಿನ್ನ ಶರೀರದ ಬಣ್ಣ ಚಂದ್ರನಂತೆ ಹಾಗೂ ಶುದ್ಧ ನೊರೆಯಂತೆ ಪರಮ ಉಜ್ವಲ, ಸೌಮ್ಯ, ಮನೋರಮ ಬೆಳ್ಳಗಾಗುವುದು.॥31॥
ಮೂಲಮ್ - 32
ಮಚ್ಛರೀರಂ ಸಮಾಸಾದ್ಯ ಕಾಂತೋ ನಿತ್ಯಂ ಭವಿಷ್ಯಸಿ ।
ಪ್ರಾಪ್ಸ್ಯಸೇ ಚಾತುಲಾಂ ಪ್ರೀತಿಮೇತನ್ಮೇ ಪ್ರೀತಿಲಕ್ಷಣಮ್ ॥
ಅನುವಾದ
ನನ್ನ ಅಂಗಭೂತ ನೀರನ್ನು ಆಶ್ರಯಿಸಿ ನೀವು ಸದಾ ಕಾಂತಿಯುಕ್ತರಾಗಿರುವಿರಿ, ಇದರಿಂದ ನಿಮಗೆ ಅನುಪಮ ಸಂತೋಷವಾಗುವುದು. ಇದು ನನ್ನ ಪ್ರೇಮದ ಚಿಹ್ನೆಯಾಗಿದೆ.॥32॥
ಮೂಲಮ್ - 33
ಹಂಸಾನಾಂ ಹಿ ಪುರಾ ರಾಮ ನ ವರ್ಣಃ ಸರ್ವ ಪಾಂಡುರಃ ।
ಪಕ್ಷಾ ನೀಲಾಗ್ರಸಂವೀತಾಃ ಕ್ರೋಡಾಃ ಶಷ್ಪಾಗ್ರನಿರ್ಮಲಾಃ ॥
ಅನುವಾದ
ಶ್ರೀರಾಮ! ಹಿಂದೆ ಹಂಸಗಳ ಬಣ್ಣ ಪೂರ್ಣ ಬಿಳಿ ಇರಲಿಲ್ಲ. ರೆಕ್ಕೆಯ ತುದಿ ನೀಲವಾಗಿದ್ದು, ಭುಜಗಳ ನಡುವಿನ ಭಾಗ ನೂತನ ದೂರ್ವಾ ದಳದ ತುದಿಯಂತೆ ಕೋಮಲ ಶ್ಯಾಮವರ್ಣ ದಿಂದ ಕೂಡಿತ್ತು.॥33॥
ಮೂಲಮ್ - 34
ಅಥಾಬ್ರವೀದ್ ವೈಶ್ರವಣಃ ಕೃಕಲಾ ಸಂಗಿರೌ ಸ್ಥಿತಮ್ ।
ಹೈರಣ್ಯಂ ಸಂಪ್ರಯಚ್ಛಾಮಿ ವರ್ಣಂ ಪ್ರೀತಸ್ತವಾಪ್ಯಹಮ್ ॥
ಅನುವಾದ
ಬಳಿಕ ವಿಶ್ರವಸ್ಸುವಿನ ಪುತ್ರ ಕುಬೇರನು ಪರ್ವತ ಶಿಖರದಲ್ಲಿ ಕುಳಿತ ಓತಿಕ್ಯಾತನಲ್ಲಿ ಹೇಳಿದನು - ನಾನು ಪ್ರಸನ್ನನಾಗಿ ನಿಮಗೆ ಸುವರ್ಣದಂತಹ ಸುಂದರ ಬಣ್ಣವನ್ನು ಕರುಣಿಸುತ್ತೇನೆ.॥34॥
ಮೂಲಮ್ - 35
ಸದ್ರವ್ಯಂ ಚ ಶಿರೋ ನಿತ್ಯಂ ಭವಿಷ್ಯತಿ ತವಾಕ್ಷಯಮ್ ।
ಏಷ ಕಾಂಚನಕೋ ವರ್ಣೋ ಮತ್ಪ್ರೀತ್ಯಾ ತೇ ಭವಿಷ್ಯತಿ ॥
ಅನುವಾದ
ನಿನ್ನ ತಲೆ ಸದಾ ಸುವರ್ಣದಂತೆ ಬಣ್ಣದ ಹಾಗೂ ಅಕ್ಷಯವಾಗುವುದು. ನನ್ನ ಪ್ರಸನ್ನತೆಯಿಂದಾಗಿ ನಿನ್ನ ಈ ಕಪ್ಪು ಬಣ್ಣ ಬಂಗಾರದ ಬಣ್ಣವಾಗಿ ಮಾರ್ಪಾಡಾಗುವುದು.॥35॥
ಮೂಲಮ್ - 36
ಏವಂ ದತ್ತ್ವಾ ವರಾಂಸ್ತೇಭ್ಯಸ್ತಸ್ಮಿನ್ಯಜ್ಞೋತ್ಸವೇ ಸುರಾಃ ।
ನಿವೃತ್ತೇ ಸಹ ರಾಜ್ಞಾ ತೇ ಪುನಃ ಸ್ವಭವನಂ ಗತಾಃ ॥
ಅನುವಾದ
ಹೀಗೆ ಅವುಗಳಿಗೆ ಉತ್ತಮ ವರನೀಡಿ ದೇವತೆಗಳೆಲ್ಲರೂ ಆ ಯಜ್ಞೋತ್ಸವವು ಸಮಾಪ್ತವಾದಾಗ ಮರುತ್ತನೊಂದಿಗೆ ಪುನಃ ತಮ್ಮ ಭವನಗಳಿಗೆ ತೆರಳಿದರು.॥36॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಹದಿನೆಂಟನೆಯ ಸರ್ಗ ಪೂರ್ಣವಾಯಿತು. ॥18॥