०१७ वेदवती-शापः

[ಹದಿನೇಳನೆಯ ಸರ್ಗ]

ಭಾಗಸೂಚನಾ

ರಾವಣನಿಂದ ತಿರಸ್ಕೃತಳಾದ ಬ್ರಹ್ಮರ್ಷಿ ಕನ್ಯೆ ವೇದವತಿಯು ಅವನನ್ನು ಶಪಿಸಿ ಅಗ್ನಿಪ್ರವೇಶ ಮಾಡಿದಿದು ಮತ್ತು ಮರುಜನ್ಮದಲ್ಲಿ ಸೀತೆಯಾಗಿ ಪ್ರಾದುರ್ಭೂತಳಾದುದು

ಮೂಲಮ್ - 1

ಅಥ ರಾಜನ್ಮಹಾಬಾಹುರ್ವಿಚರನ್ ಪೃಥಿವೀತಲೇ ।
ಹಿಮವದ್ವನಮಾಸಾದ್ಯ ಪರಿಚಕ್ರಾಮ ರಾವಣಃ ॥

ಅನುವಾದ

(ಅಗಸ್ತ್ಯರು ಹೇಳುತ್ತಾರೆ-) ರಾಜನೇ! ಅನಂತರ ಮಹಾಬಾಹು ರಾವಣನು ಭೂತಳದಲ್ಲಿ ಸಂಚರಿಸುತ್ತಾ ಹಿಮಾಲಯದ ವನಕ್ಕೆ ಬಂದು ಅಲ್ಲಿ ಎಲ್ಲೆಡೆ ಅಲೆಯತೊಡಗಿದನು.॥1॥

ಮೂಲಮ್ - 2

ತತ್ರಾಪಶ್ಯತ್ಸ ವೈ ಕನ್ಯಾಂ ಕೃಷ್ಣಾಜಿನ ಜಟಾಧರಾಮ್ ।
ಆರ್ಷೇಣ ವಿಧಿನಾ ಚೈನಾಂ ದೀಪ್ಯಂತೀಂ ದೇವತಾಮಿವ ॥

ಅನುವಾದ

ಅಲ್ಲಿ ಕೃಷ್ಣಮೃಗ ಚರ್ಮವನ್ನುಟ್ಟು, ಜಟಾಧಾರಿಯಾದ ಒಂದು ತಪಸ್ವಿನೀ ಕನ್ಯೆಯನ್ನು ನೋಡಿದನು. ಅವಳು ಋಷಿಪ್ರಣೀತ ವಿಧಿಯಿಂದ ತಪಸ್ಸಿನಲ್ಲಿ ತೊಡಗಿ ದೇವಾಂಗನೆಯಂತೆ ಪ್ರಕಾಶಿಸುತ್ತಿದ್ದಳು.॥2॥

ಮೂಲಮ್ - 3

ಸ ದೃಷ್ಟ್ವಾ ರೂಪಸಂಪನ್ನಾಂ ಕನ್ಯಾಂ ತಾಂ ಸುಮಹಾವ್ರತಾಮ್ ।
ಕಾಮಮೋಹಪರೀತಾತ್ಮಾ ಪಪ್ರಚ್ಛ ಪ್ರಹಸನ್ನಿವ ॥

ಅನುವಾದ

ಉತ್ತಮ ಮಹಾವ್ರತವನ್ನು ಪಾಲಿಸುವ, ರೂಪ ಸೌಂದರ್ಯದಿಂದ ಸುಶೋಭಿತಳಾದ ಆ ಕನ್ಯೆಯನ್ನು ನೋಡಿ ರಾವಣನ ಚಿತ್ತ ಕಾಮಜನಿತ ಮೋಹಕ್ಕೆ ಬಲಿಯಾಗಿ, ಅಟ್ಟಹಾಸ ಮಾಡುತ್ತಾ ಆಕೆಯಲ್ಲಿ ಕೇಳಿದನು .॥3॥

ಮೂಲಮ್ - 4

ಕಿಮಿದಂ ವರ್ತಸೇ ಭದ್ರೇ ವಿರುದ್ಧಂ ಯೌವನಸ್ಯ ತೇ ।
ನ ಹಿ ಯುಕ್ತಾತವೈತಸ್ಯ ರೂಪಸ್ಯೈವಂ ಪ್ರತಿಕ್ರಿಯಾ ॥

ಅನುವಾದ

ಶುಭಮಂಗಳೇ! ನೀನು ಈ ಯೌವನಾವಸ್ಥೆಗೆ ವಿಪರೀತವಾಗಿ ವರ್ತಿಸುತ್ತಿರುವೆ. ನಿನ್ನ ಈ ದಿವ್ಯ ರೂಪಕ್ಕೆ ಇಂತಹ ಆಚರಣೆ ಎಂದಿಗೂ ಉಚಿತವಲ್ಲ.॥4॥

ಮೂಲಮ್ - 5

ರೂಪಂ ತೇಽನುಪಮಂ ಭೀರು ಕಾಮೋನ್ಮಾದಕರಂ ನೃಣಾಮ್ ।
ನ ಯುಕ್ತಂ ತಪಸಿ ಸ್ಥಾತುಂ ನಿರ್ಗತೋ ಹ್ಯೇಷ ನಿರ್ಣಯಃ ॥

ಅನುವಾದ

ಸುಂದರೀ! ನಿನ್ನ ಈ ರೂಪಕ್ಕೆ ತುಲನೆಯೇ ಇಲ್ಲ. ಇದು ಪುರುಷರ ಹೃದಯದಲ್ಲಿ ಕಾಮಜನಿತ ಉನ್ಮಾದವನ್ನು ಉಂಟುಮಾಡುವುದಾಗಿದೆ. ಆದ್ದರಿಂದ ನೀನು ತಪಸ್ಸಿನಲ್ಲಿರುವುದು ಉಚಿತವಲ್ಲ. ನಿನ್ನ ಕುರಿತು ನನ್ನ ಹೃದಯದಲ್ಲಿ ಇದೇ ನಿರ್ಣಯ ಪ್ರಕಟವಾಗಿದೆ.॥5॥

ಮೂಲಮ್ - 6½

ಕಸ್ಯಾಸಿ ಕಿಮಿದಂ ಭದ್ರೇ ಕಶ್ಚ ಭರ್ತಾ ವರಾನನೇ ।
ಯೇನ ಸಂಭುಜ್ಯಸೇ ಭೀರು ಸ ನರಃ ಪುಣ್ಯಭಾಗ್ಭುವಿ ॥
ಪೃಚೃತಃ ಶಂಸ ಮೇ ಸರ್ವಂ ಕಸ್ಯ ಹೇತೋಃ ಪರಿಶ್ರಮಃ ।

ಅನುವಾದ

ಶುಭೇ! ನೀನು ಯಾರ ಮಗಳಾಗಿರುವೆ? ಯಾವ ವ್ರತವನ್ನು ಮಾಡುತ್ತಿರುವೆ? ಸುಮುಖೀ! ನಿನ್ನ ಪತಿ ಯಾರು? ನಿನ್ನ ಸಂಬಂಧವಿರುವ ಮನುಷ್ಯನು ಭೂಲೋಕದಲ್ಲಿ ಪುಣ್ಯಾತ್ಮನೇ ಸರಿ. ನಾನು ಕೇಳುವುದೆಲ್ಲವನ್ನು ತಿಳಿಸು. ಯಾವ ಫಲಕ್ಕಾಗಿ ಇಂತಹ ಪರಿಶ್ರಮ ಮಾಡಲಾಗುತ್ತದೆ.॥6½॥

ಮೂಲಮ್ - 7½

ಏವಮುಕ್ತಾತು ಸಾ ಕನ್ಯಾ ರಾವಣೇನ ಯಶಸ್ವಿನೀ ॥
ಅಬ್ರವೀದ್ವಿಧಿವತ್ಕೃತ್ವಾ ತಸ್ಯಾತಿಥ್ಯಂ ತಪೋಧನಾ ।

ಅನುವಾದ

ರಾವಣನು ಹೀಗೆ ಕೇಳಿದಾಗ ಆ ಯಶಸ್ವಿನೀ ತಪೋಧನ ಕನ್ಯೆಯು ಆತನ ವಿಧಿವತ್ತಾಗಿ ಆದರ-ಸತ್ಕಾರ ಮಾಡಿ ನುಡಿದಳು.॥7½॥

ಮೂಲಮ್ - 8½

ಕುಶಧ್ವಜೋ ನಾಮ ಪಿತಾ ಬ್ರಹ್ಮರ್ಷಿರಮಿತಪ್ರಭಃ ॥
ಬೃಹಸ್ಪತಿಸುತಃ ಶ್ರೀಮಾನ್ ಬುದ್ಧ್ಯಾತುಲ್ಯೋ ಬೃಹಸ್ಪತೇಃ ।

ಅನುವಾದ

ಅಮಿತ ತೇಜಸ್ವೀ ಬ್ರಹ್ಮರ್ಷಿ, ಬೃಹಸ್ಪತಿಯ ಪುತ್ರ ಶ್ರೀಮಾನ್ ಕುಶಧ್ವಜನು ನನ್ನ ತಂದೆಯಾಗಿದ್ದನು. ಅವನು ಬೃಹಸ್ಪತಿಯಂತೆ ಬುದ್ಧಿವಂತನೆದು ತಿಳಿಯಲಾಗುತ್ತಿತ್ತು.॥8½॥

ಮೂಲಮ್ - 9½

ತಸ್ಯಾಹಂ ಕುರ್ವತೋ ನಿತ್ಯಂ ವೇದಾಭ್ಯಾಸಂ ಮಹಾತ್ಮನಃ ॥
ಸಂಭೂತಾ ವಾಙ್ಮ್ಮಯೀ ಕನ್ಯಾ ನಾಮ್ನಾ ವೇದವತೀ ಸ್ಮೃತಾ ।

ಅನುವಾದ

ಪ್ರತಿದಿನ ವೇದಾಭ್ಯಾಸಮಾಡುತ್ತಿದ್ದ ಆ ಮಹಾತ್ಮಾ ತಂದೆಯಿಂದ ವಾಙ್ಮಯೀ ರೂಪದಲ್ಲಿ ನನ್ನ ಪ್ರಾದುರ್ಭಾವವಾಗಿತ್ತು. ವೇದವತಿ ಎಂಬುದು ನನ್ನ ಹೆಸರು.॥9½॥

ಮೂಲಮ್ - 10½

ತತೋ ದೇವಾಃ ಸಗಂಧರ್ವಾ ಯಕ್ಷರಾಕ್ಷಸ ಪನ್ನಗಾಃ ॥
ತೇ ಚಾಪಿ ಗತ್ವಾ ಪಿತರಂ ವರಣಂ ರೋಚಯಂತಿ ಮೇ ।

ಅನುವಾದ

ನಾನು ಬೆಳೆದಾಗ ದೇವತಾ, ಗಂಧರ್ವ, ಯಕ್ಷ, ರಾಕ್ಷಸ, ನಾಗ ಹೀಗೆ ಎಲ್ಲರೂ ತಂದೆಯ ಬಳಿಗೆ ಬಂದು ನನ್ನನ್ನು ಬೇಡತೊಡಗಿದರು.॥10½॥

ಮೂಲಮ್ - 11½

ನ ಚ ಮಾಂ ಸ ಪಿತಾ ತೇಭ್ಯೋದತ್ತವಾನ್ ರಾಕ್ಷಸೇಶ್ವರ ॥
ಕಾರಣಂ ತದ್ವದಿಷ್ಯಾಮಿ ನಿಶಾಮಯ ಮಹಾಭುಜ ।

ಅನುವಾದ

ಮಹಾಬಾಹು ರಾಕ್ಷಸೇಶ್ವರನೇ! ತಂದೆಯವರು ಯಾರಿಗೂ ನನ್ನನ್ನು ಕೊಡಲಿಲ್ಲ. ಇದರ ಕಾರಣವನ್ನು ತಿಳಿಸುತ್ತೇನೆ, ಕೇಳು.॥11½॥

ಮೂಲಮ್ - 12

ಪಿತುಸ್ತು ಮಮ ಜಾಮಾತಾ ವಿಷ್ಣುಃ ಕಿಲ ಸುರೇಶ್ವರಃ ॥

ಮೂಲಮ್ - 13

ಅಭಿಪ್ರೇತಸ್ತ್ರೀಲೋಕೇಶಸ್ತಸ್ಮಾನ್ನಾನ್ಯಸ್ಯ ಮೇ ಪಿತಾ ।
ದಾತುಮಿಚ್ಛತಿ ತಸ್ಮೈ ತು ತಚ್ಛ್ರುತ್ವಾ ಬಲದರ್ಪಿತಃ ॥

ಮೂಲಮ್ - 14

ಶಂಭುರ್ನಾಮ ತತೋ ರಾಜಾ ದೈತ್ಯಾನಾಂ ಕುಪಿತೋಽಭವತ್ ।
ತೇನ ರಾತ್ರೌ ಶಯಾನೋ ಮೇ ಪಿತಾ ಪಾಪೇನ ಹಿಂಸಿತಃ ॥

ಅನುವಾದ

ಮೂರುಲೋಕದ ಸ್ವಾಮಿ ದೇವೇಶ್ವರ ಭಗವಾನ್ ವಿಷ್ಣುವೇ ತನ್ನ ಅಳಿಯ ನಾಗಬೇಕೆಂದು ತಂದೆ ಇಚ್ಛಿಸುತ್ತಿದ್ದನು. ಅದರಿಂದ ಬೇರೆ ಯಾರಿಗೂ ನನ್ನನ್ನು ಕೊಡಲು ಬಯಸುತ್ತಿರಲಿಲ್ಲ. ಈ ಅಭಿಪ್ರಾಯ ತಿಳಿದ ಬಲಾಭಿಮಾನಿ ದೈತ್ಯರಾಜ ಶಂಭು ಕುಪಿತನಾಗಿ ರಾತ್ರೆ ಮಲಗಿದ್ದಾಗ ನನ್ನ ತಂದೆಯನ್ನು ಹತ್ಯೆಮಾಡಿಬಿಟ್ಟನು.॥12-14॥

ಮೂಲಮ್ - 15

ತತೋ ಮೇ ಜನನೀ ದೀನಾ ತಚ್ಛರೀರಂ ಪಿತುರ್ಮಮ ।
ಪರಿಷ್ವಜ್ಯ ಮಹಾಭಾಗಾ ಪ್ರವಿಷ್ಟಾ ಹವ್ಯವಾಹನಮ್ ॥

ಅನುವಾದ

ಇದರಿಂದ ಮಹಾಭಾಗಾ ನನ್ನ ತಾಯಿಗೆ ಬಹಳ ದುಃಖವಾಯಿತು. ಅವಳು ತಂದೆಯ ಶವವನ್ನು ಅಪ್ಪಿಕೊಂಡು ಸಹಗಮನ ಮಾಡಿದಳು.॥15॥

ಮೂಲಮ್ - 16

ತತೋ ಮನೋರಥಂ ಸತ್ಯಂ ಪಿತುರ್ನಾರಾಯಣಂ ಪ್ರತಿ ।
ಕರೋಮೀತಿ ತಮೇವಾಹಂ ಹೃದಯೇನ ಸಮುದ್ವಹೇ ॥

ಅನುವಾದ

ಅಂದಿನಿಂದ ಭಗವಾನ್ ನಾರಾಯಣನಿಗೆ ನನ್ನನ್ನು ಕೊಡಬೇಕೆಂಬ ತಂದೆಯ ಮನೋರಥವನ್ನು ನಾನು ಸಫಲಗೊಳಿಸುವೆನೆಂದು ಪ್ರತಿಜ್ಞೆ ಮಾಡಿದೆ. ಇದರಿಂದ ನಾನು ಅವನನ್ನೇ ಹೃದಯಮಂದಿರದಲ್ಲಿ ಧರಿಸಿಕೊಂಡಿರುವೆನು.॥16॥

ಮೂಲಮ್ - 17

ಇತಿ ಪ್ರತಿಜ್ಞಾಮಾರುಹ್ಯ ಚರಾಮಿ ವಿಪುಲಂ ತಪಃ ।
ಏತತ್ತೇ ಸರ್ವಮಾಖ್ಯಾತಂ ಮಯಾ ರಾಕ್ಷಸಪುಂಗವ ॥

ಅನುವಾದ

ಹೀಗೆ ಪ್ರತಿಜ್ಞೆ ಮಾಡಿದ ನಾನು ಈ ಮಹಾವ್ರತವನ್ನು ಕೈಗೊಂಡಿದ್ದೇನೆ. ರಾಕ್ಷಸರಾಜ! ನೀನು ಕೇಳಿದಂತೆ ನಾನು ಎಲ್ಲವನ್ನೂ ತಿಳಿಸಿದ್ದೇನೆ.॥17॥

ಮೂಲಮ್ - 18

ನಾರಾಯಣೋ ಮಮ ಪತಿರ್ನ ತ್ವನ್ಯಃ ಪುರುಷೋತ್ತಮಾತ್ ।
ಆಶ್ರಯೇ ನಿಯಮಂ ಘೋರಂ ನಾರಾಯಣಪರೀಪ್ಸಯಾ ॥

ಅನುವಾದ

ನಾರಾಯಣನೇ ನನ್ನ ಪತಿಯಾಗಿದ್ದಾನೆ. ಆ ಪುರುಷೋತ್ತಮನಲ್ಲದೆ ಬೇರೆ ಯಾರೂ ನನಗೆ ಪತಿಯಾಗಲಾರರು. ಆ ನಾರಾಯಣನನ್ನು ಪಡೆಯಲೆಂದೇ ನಾನು ಈ ಕಠೋರ ವ್ರತವನ್ನು ಆಶ್ರಯಿಸಿರುವೆನು.॥18॥

ಮೂಲಮ್ - 19

ವಿಜ್ಞಾತಸ್ತ್ವಂ ಹಿ ಮೇ ರಾಜನ್ಗಚ್ಛ ಪೌಲಸ್ತ್ಯನಂದನ ।
ಜಾನಾಮಿ ತಪಸಾ ಸರ್ವಂ ತ್ರೈಲೋಕ್ಯೇ ಯದ್ಧಿ ವರ್ತತೇ ॥

ಅನುವಾದ

ಪೌಲಸ್ತ್ಯನಂದನನೇ! ನಾನು ನಿಮ್ಮನ್ನು ಗುರುತಿಸಿದೆ. ನೀವು ಹೋಗಿರಿ. ತ್ರಿಲೋಕಗಳಲ್ಲಿರುವ ಎಲ್ಲವನ್ನೂ ನಾನು ತಪಸ್ಸಿನಿಂದ ತಿಳಿದಿದ್ದೇನೆ.॥19॥

ಮೂಲಮ್ - 20

ಸೋಽಬ್ರವೀದ್ರಾವಣೋ ಭೂಯಸ್ತಾಂ ಕನ್ಯಾಂ ಸುಮಹಾವ್ರತಾಮ್ ।
ಅವರುಹ್ಯ ವಿಮಾನಾಗ್ರಾತ್ ಕಂದರ್ಪ ಶರಪೀಡಿತಃ ॥

ಅನುವಾದ

ಇದನ್ನು ಕೇಳಿ ಕಾಮಪೀಡಿತನಾದ ರಾವಣನು ವಿಮಾನದಿಂದ ಇಳಿದು, ಆ ಉತ್ತಮ ಮಹಾವ್ರತವನ್ನು ಪಾಲಿಸುವ ಕನ್ಯೆಯ ಬಳಿ ಪುನಃ ಹೇಳಿದನು.॥20॥

ಮೂಲಮ್ - 21

ಅವಲಿಪ್ತಾಸಿ ಸುಶ್ರೋಣಿ ಯಸ್ಯಾಸೇ ಮತಿರೀದೃಶೀ ।
ವೃದ್ಧಾನಾಂ ಮೃಗಶಾವಾಕ್ಷಿ ಭ್ರಾಜತೇ ಪುಣ್ಯಸಂಚಯಃ ॥

ಅನುವಾದ

ಸುಂದರಿ! ನೀನು ಗರ್ವಿಷ್ಠೆ ಎಂದು ತೋರುತ್ತದೆ, ಅದರಿಂದ ನಿನ್ನ ಬುದ್ಧಿ ಹೀಗಾಗಿದೆ. ಮೃಗಾಕ್ಷಿಯೇ! ಇಂತಹ ಪುಣ್ಯದ ಸಂಗ್ರಹ ವೃದ್ಧ ಸ್ತ್ರೀಯರಿಗೆ ಶೋಭಿಸುತ್ತಿದೆ, ನಿನ್ನಂತಹ ಯುವತಿಗಲ್ಲ.॥21॥

ಮೂಲಮ್ - 22

ತ್ವಂ ಸರ್ವಗುಣಸಂಪನ್ನಾ ನಾರ್ಹಸೇ ವಕ್ತುಮೀದೃಶಮ್ ।
ತ್ರೈಲೋಕ್ಯಸುಂದರೀ ಭೀರು ಯೌವನಂ ತೇಽತಿವರ್ತತೇ ॥

ಅನುವಾದ

ನೀನಾದರೋ ಸರ್ವಗುಣ ಸಂಪನ್ನ, ತ್ರಿಲೋಕದ ಅದ್ವಿತೀಯ ಸುಂದರಿಯಾಗಿರುವೆ. ನೀನು ಇಂತಹ ಮಾತನ್ನು ಹೇಳಬಾರದು. ಭೀರು! ನಿನ್ನ ಯೌವನ ಕಳೆದುಹೋಗುತ್ತಾ ಇದೆ.॥22॥

ಮೂಲಮ್ - 23

ಅಹಂ ಲಂಕಾಪತಿರ್ಭದ್ರೇ ದಶಗ್ರೀವ ಇತಿ ಶ್ರುತಃ ।
ತಸ್ಯ ಮೇ ಭವ ಭಾರ್ಯಾ ತ್ವಂ ಭುಂಕ್ಷ್ಯ ಭೋಗಾನ್ ಯಥಾಸುಖಮ್ ॥

ಅನುವಾದ

ಭದ್ರೇ! ನಾನು ಲಂಕೆಯ ರಾಜನಾಗಿದ್ದೇನೆ. ನನ್ನ ಹೆಸರು ದಶಗ್ರೀವ, ನೀನು ನನ್ನ ಭಾರ್ಯೆಯಾಗು ಮತ್ತು ಸುಖಪೂರ್ವಕ ಉತ್ತಮ ಭೋಗಗಳನ್ನು ಅನುಭವಿಸು.॥23॥

ಮೂಲಮ್ - 24½

ಕಶ್ಚ ತಾವದಸೌ ಯಂ ತ್ವಂ ವಿಷ್ಣುರಿತ್ಯವಭಾಷಸೇ ।
ವೀರ್ಯೇಣ ತಪಸಾ ಚೈವ ಭೋಗೇನ ಚ ಬಲೇನ ಚ ॥
ಸ ಮಯಾ ನೋ ಸಮೋ ಭದ್ರೇ ಯಂ ತ್ವಂ ಕಾಮಯಸೇಽಂಗನೇ ।

ಅನುವಾದ

ನೀನು ಹೇಳುವ ಆ ವಿಷ್ಣು ಯಾರು? ಮೊದಲು ಹೇಳು. ಅಂಗನೇ! ನೀನು ಬಯಸುವವನು ಬಲ, ಪರಾಕ್ರಮ, ತಪಸ್ಸು, ಭೋಗ-ವೈಭವದಲ್ಲಿ ನನಗೆ ಸಮಾನನಾಗಲಾರನು.॥24½॥

ಮೂಲಮ್ - 25½

ಇತ್ಯುಕ್ತವತಿ ತಸ್ಮಿಂಸ್ತು ವೇದವತ್ಯಥ ಸಾಬ್ರವೀತ್ ॥
ಮಾ ಮೈವಮಿತಿ ಸಾ ಕನ್ಯಾ ತಮುವಾಚ ನಿಶಾಚರಮ್ ।

ಅನುವಾದ

ಅವನು ಹೀಗೆ ಹೇಳಿದಾಗ ಕುಮಾರೀ ವೇದವತಿಯು ನಿಶಾಚರನಲ್ಲಿ ಇಲ್ಲ, ಇಲ್ಲ ಎಂದು ಹೇಳಿದಳು.॥25½॥

ಮೂಲಮ್ - 26½

ತ್ರೈಲೋಕ್ಯಾಧಿಪತಿಂ ವಿಷ್ಣುಂ ಸರ್ವಲೋಕನಮಸ್ಕೃತಮ್ ॥
ತ್ವದೃತೇ ರಾಕ್ಷಸೇಂದ್ರಾನ್ಯಃ ಕೋಽವಮನ್ಯೇತ ಬುದ್ಧಿಮಾನ್ ।

ಅನುವಾದ

ರಾಕ್ಷಸರಾಜನೇ! ಭಗವಾನ್ ವಿಷ್ಣು ಮೂರು ಲೋಕಗಳ ಅಧಿಪತಿಯಾಗಿದ್ದಾನೆ. ಇಡೀ ಜಗತ್ತು ಅವನ ಚರಣದಲ್ಲಿ ನತಮಸ್ತಕವಾಗಿದೆ. ಬುದ್ಧಿವಂತನಾಗಿ ಅವನನ್ನು ಅವಹೇಳನ ಮಾಡುವವನು ನೀನಲ್ಲದೆ ಬೇರೆ ಯಾವ ಪುರುಷನಿದ್ದಾನೆ.॥26½॥

ಮೂಲಮ್ - 27½

ಏವಮುಕ್ತಸ್ತಯಾ ತತ್ರ ವೇದವತ್ಯಾ ನಿಶಾಚರಃ ॥
ಮೂರ್ಧಜೇಷು ತದಾ ಕನ್ಯಾ ಕರಾಗ್ರೇಣ ಪರಾಮೃಶತ್ ।

ಅನುವಾದ

ವೇದವತಿಯು ಹೀಗೆ ಹೇಳಿದಾಗ ಆ ರಾಕ್ಷಸನು ಆ ಕನ್ಯೆಯ ಕೂದಲನ್ನು ಹಿಡಿದನು.॥27½॥

ಮೂಲಮ್ - 28½

ತತೋ ವೇದವತೀ ಕ್ರುದ್ಧಾ ಕೇಶಾನ್ಹಸ್ತೇನ ಸಾಚ್ಛಿನತ್ ॥
ಅಸಿರ್ಭೂತ್ವಾ ಕರಸ್ತಸ್ಯಾಃ ಕೇಶಾಂಶ್ಛಿನ್ನಾಂಸ್ತದಾಕರೋತ್ ।

ಅನುವಾದ

ಇದರಿಂದ ವೇದವತಿಗೆ ಭಾರೀ ಕ್ರೋಧ ಬಂದು, ತನ್ನ ಕೈಯನ್ನೇ ಖಡ್ಗವಾಗಿಸಿ ತನ್ನ ಕೂದಲನ್ನು ಕತ್ತರಿಸಿ ತಲೆಯಿಂದ ಬೇರೆಯಾಗಿಸಿದಳು.॥28½॥

ಮೂಲಮ್ - 29½

ಸಾ ಜ್ವಲಂತೀವ ರೋಷೇಣ ದಹಂತೀವ ನಿಶಾಚರಮ್ ॥
ಉವಾಚಾಗ್ನಿಂ ಸಮಾಧಾಯ ಮರಣಾಯ ಕೃತತ್ವರಾ ।

ಅನುವಾದ

ವೇದವತಿಯು ರೋಷದಿಂದ ಉರಿದೆದ್ದು, ಸಾಯಲು ಆತುರಳಾಗಿ ಅಗ್ನಿಯನ್ನು ಸ್ಥಾಪಿಸಿ ಆ ನಿಶಾಚರನನ್ನು ಸುಟ್ಟು ಬಿಡುವಳೋ ಎಂಬಂತೆ ನುಡಿದಳು.॥29½॥

ಮೂಲಮ್ - 30½

ಧರ್ಷಿತಾಯಾಸ್ತ್ವಯಾನಾರ್ಯ ನ ಮೇ ಜೀವಿತಮಿಷ್ಯತೇ ॥
ರಕ್ಷಸ್ತಸ್ಮಾತ್ಪ್ರವೇಕ್ಷ್ಯಾಮಿ ಪಶ್ಯತಸ್ತೇ ಹುತಾಶನಮ್ ।

ಅನುವಾದ

ನೀಚ ರಾಕ್ಷಸನೇ! ನೀನು ನನ್ನನ್ನು ಅಪಮಾನ ಮಾಡಿರುವೆ, ಆದ್ದರಿಂದ ಈಗ ನಾನು ಬದುಕಿರಲು ಬಯಸುವುದಿಲ್ಲ. ಅದಕ್ಕಾಗಿ ನೀನು ನೋಡು-ನೋಡುತ್ತಾ ನಾನು ಅಗ್ನಿಯಲ್ಲಿ ಪ್ರವೇಶಿಸುವೆನು.॥30½॥

ಮೂಲಮ್ - 31½

ಯಸ್ಮಾತ್ತು ಧರ್ಷಿತಾ ಚಾಹಂ ತ್ವಯಾ ಪಾಪಾತ್ಮನಾ ವನೇ ॥
ತಸ್ಮಾತ್ತವ ವಧಾರ್ಥಂಹಿ ಸಮುತ್ಪತ್ಸ್ಯೇ ಹ್ಯಹಂ ಪುನಃ ।

ಅನುವಾದ

ಪಾಪಾತ್ಮನಾದ ನೀನು ಈ ವನದಲ್ಲಿ ನನ್ನ ಅಪಮಾನಮಾಡಿರುವೆ. ಇದಕ್ಕಾಗಿ ನಿನ್ನ ವಧೆಗಾಗಿ ನಾನು ಪುನಃ ಉತ್ಪನ್ನಳಾಗಿ ಬರುವೆನು.॥31½॥

ಮೂಲಮ್ - 32½

ನ ಹಿ ಶಕ್ಯಃ ಸ್ತ್ರಿಯಾ ಹಂತುಂ ಪುರುಷಃ ಪಾಪನಿಶ್ಚಯಃ ॥
ಶಾಪೇ ತ್ವಯಿ ಮಯೋತ್ಸೃಷ್ಟೇ ತಪಸಶ್ಚ ವ್ಯಯೋ ಭವೇತ್ ।

ಅನುವಾದ

ಸ್ತ್ರೀಯು ತನ್ನ ಶಾರೀರಿಕ ಶಕ್ತಿಯಿಂದ ಯಾರೇ ಪಾಪಾಚಾರೀ ಪುರುಷನನ್ನು ವಧಿಸಲಾರಳು. ನಾನು ನಿನಗೆ ಶಾಪಕೊಟ್ಟರೆ ನನ್ನ ತಪಸ್ಸು ಕ್ಷೀಣವಾದೀತು.॥32½॥

ಮೂಲಮ್ - 33½

ಯದಿ ತ್ವಸ್ತಿ ಮಯಾ ಕಿಂಚಿತ್ ಕೃತಂ ದತ್ತಂ ಹುತಂ ತಥಾ ॥
ತಸ್ಮಾತ್ತ್ವಯೋನಿಜಾ ಸಾಧ್ವೀ ಭವೇಯಂ ಧರ್ಮಿಣಃ ಸುತಾ ।

ಅನುವಾದ

ನಾನು ಏನಾದರೂ ಸತ್ಕರ್ಮ, ದಾನ, ಹೋಮ ಮಾಡಿದ್ದರೆ ಮುಂದಿನ ಜನ್ಮದಲ್ಲಿ ಸತೀ-ಸಾಧ್ವೀ ಅಯೋನಿಜಾ ಕನ್ಯೆಯಾಗಿ ಪ್ರಕಟಳಾಗಿ, ಯಾವನಾದರೂ ಧರ್ಮಾತ್ಮಾ ಪಿತನ ಪುತ್ರಿಯಾಗುವೆನು.॥33½॥

ಮೂಲಮ್ - 34½

ಏವಮುಕ್ತ್ವಾ ಪ್ರವಿಷ್ಟಾ ಸಾ ಜ್ವಲಿತಂ ಜಾತವೇದಸಮ್ ॥
ಪಪಾತ ಚ ದಿವೋ ದಿವ್ಯಾ ಪುಷ್ಪವೃಷ್ಟಿಃ ಸಮಂತತಃ ।

ಅನುವಾದ

ಹೀಗೆ ಹೇಳಿ ಅವಳು ಪ್ರಜ್ವಲಿತ ಅಗ್ನಿಯಲ್ಲಿ ಒಂದಾದಳು. ಆಗ ಆಕೆಯ ಸುತ್ತಲೂ ಆಕಾಶದಿಂದ ದಿವ್ಯಪುಷ್ಪಗಳ ವೃಷ್ಟಿಯಾಯಿತು.॥34½॥

ಮೂಲಮ್ - 35½

ಪುನರೇವ ಸಮುದ್ಭೂತಾ ಪದ್ಮೇ ಪದ್ಮಸಮಪ್ರಭಾ ॥
ತಸ್ಮಾದಪಿ ಪುನಃ ಪ್ರಾಪ್ತಾ ಪೂರ್ವವತ್ತೇನ ರಕ್ಷಸಾ ।

ಅನುವಾದ

ಅನಂತರ ಅವಳು ಮುಂದಿನ ಜನ್ಮದಲ್ಲಿ ಒಂದು ಕಮಲದಿಂದ ಪ್ರಕಟಳಾದಳು. ಆಕೆಯ ಮುಖ ಕಾಂತಿಯು ಕಮಲದಂತೆ ಸುಂದರವಾಗಿತ್ತು. ಆ ರಾಕ್ಷಸನು ಮೊದಲಿನಂತೆ ಪುನಃ ಅಲ್ಲಿಂದ ಆ ಕನ್ಯೆಯನ್ನು ಪಡೆದುಕೊಂಡನು.॥35½॥

ಮೂಲಮ್ - 36½

ಕನ್ಯಾಂ ಕಮಲಗರ್ಭಾಭಾಂ ಪ್ರಗೃಹ್ಯ ಸ್ವಗೃಹಂ ಯಯೌ ॥
ಪ್ರಗೃಹ್ಯ ರಾವಣಸ್ತ್ವೇತಾಂ ದರ್ಶಯಾಮಾಸ ಮಂತ್ರಿಣೇ ।

ಅನುವಾದ

ಕಮಲದೊಳಗೆ ಸುಂದರ ಕಾಂತಿಯುಳ್ಳ ಆ ಕನ್ಯೆಯನ್ನು ತೆಗೆದುಕೊಂಡು ರಾವಣನು ತನ್ನ ಮನೆಗೆ ಹೋದನು. ಅಲ್ಲಿ ಅವನು ಮಂತ್ರಿಗೆ ಆ ಕನ್ಯೆಯನ್ನು ತೋರಿಸಿದನು.॥36½॥

ಮೂಲಮ್ - 37½

ಲಕ್ಷಣಜ್ಞೋ ನಿರೀಕ್ಷ್ಯೈವ ರಾವಣಂ ಚೈವಮಬ್ರವೀತ್ ॥
ಗೃಹಸ್ಥೈಷಾ ಹಿ ಸುಶ್ರೋಣೀ ತ್ವದ್ವಧಾಯೈವ ದೃಶ್ಯತೇ ।

ಅನುವಾದ

ಮಂತ್ರಿಯು ಬಾಲಕ-ಬಾಲಿಕೆಯರ ಲಕ್ಷಣಗಳನ್ನು ತಿಳಿಯುತ್ತಿದ್ದನು. ಅವನು ಸರಿಯಾಗಿ ನೋಡಿ ರಾವಣನಲ್ಲಿ-ಈ ಸುಂದರಿ ಕನ್ಯೆಯು ಮನೆಯಲ್ಲಿದ್ದರೆ ನಿಮ್ಮ ವಧೆಗೆ ಕಾರಣವಾಗುವ ಲಕ್ಷಣಗಳು ಕಾಣುತ್ತವೆ, ಎಂದು ಹೇಳಿದನು.॥37½॥

ಮೂಲಮ್ - 38

ಏತಚ್ಛ್ರುತ್ವಾರ್ಣವೇ ರಾಮ ತಾಂ ಪ್ರಚಿಕ್ಷೇಪ ರಾವಣಃ ॥

ಮೂಲಮ್ - 39

ಸಾ ಚೈವ ಕ್ಷಿತಿಮಾಸಾದ್ಯ ಯಜ್ಞಾಯತನಮಧ್ಯಗಾ ।
ರಾಜ್ಞೋ ಹಲಮುಖೋತ್ಕೃಷ್ಟಾ ಪುನರಪ್ಯುತ್ಥಿತಾ ಸತೀ ॥

ಅನುವಾದ

ಶ್ರೀರಾಮ! ಇದನ್ನು ಕೇಳಿ ರಾವಣನು ಆಕೆಯನ್ನು ಸಮುದ್ರಕ್ಕೆ ಎಸೆದುಬಿಟ್ಟನು. ಬಳಿಕ ಅವಳು ಭೂಮಿಯನ್ನು ಸೇರಿ ರಾಜಾಜನಕನ ಯಜ್ಞಮಂಟಪದ ಮಧ್ಯದ ಭೂಭಾಗಕ್ಕೆ ತಲುಪಿದಳು. ಅಲ್ಲಿ ರಾಜನು ನೇಗಿಲಿನಿಂದ ಭೂಮಿ ಉಳುವಾಗ ಆ ಸತೀಸಾಧ್ವೀ ಕನ್ಯೆಯು ಪ್ರಕಟಗೊಂಡಳು.॥38-39॥

ಮೂಲಮ್ - 40

ಸೈಷಾ ಜನಕರಾಜಸ್ಯ ಪ್ರಸೂತಾ ತನಯಾ ಪ್ರಭೋ ।
ತವ ಭಾರ್ಯಾ ಮಹಾಬಾಹೋ ವಿಷ್ಣುಸ್ತ್ವಂ ಹಿ ಸನಾತನಃ ॥

ಅನುವಾದ

ಪ್ರಭೋ! ಅದೇ ವೇದವತಿಯು ಮಹಾರಾಜಾ ಜನಕನ ಪುತ್ರಿಯ ರೂಪದಿಂದ ಪ್ರಾದುರ್ಭೂತಳಾಗಿ ನಿಮ್ಮ ಪತ್ನಿಯಾದಳು. ಮಹಾಬಾಹೋ! ನೀನೇ ಸನಾತನ ವಿಷ್ಣು ಆಗಿರುವೆ.॥40॥

ಮೂಲಮ್ - 41

ಪೂರ್ವಂ ಕ್ರೋಧಹತಃ ಶತ್ರುರ್ಯಯಾಸೌ ನಿಹತಸ್ತಯಾ ।
ಉಪಾಶ್ರಯಿತ್ವಾ ಶೈಲಾಭಸ್ತವ ವೀರ್ಯಮಮಾನುಷಮ್ ॥

ಅನುವಾದ

ಆ ವೇದವತಿಯು ಮೊದಲೇ ತನ್ನ ರೋಷಜನಿತ ಶಾಪದಿಂದ ಪರ್ವತಾಕಾರ ನಿಮ್ಮ ಶತ್ರುವನ್ನು ಕೊಂದುಹಾಕಿದ್ದಳು. ಅವನನ್ನು ನೀನು ಆಕ್ರಮಣ ಮಾಡಿ ವಧಿಸಿರುವೆ. ಪ್ರಭೋ! ನಿನ್ನ ಪರಾಕ್ರಮ ಅಲೌಕಿಕವಾಗಿದೆ.॥41॥

ಮೂಲಮ್ - 42

ಏವಮೇಷಾ ಮಹಾಭಾಗಾಃ ಮರ್ತ್ಯೇಷೂತ್ಪತ್ಸ್ಯತೇ ಪುನಃ ।
ಕ್ಷೇತ್ರೇ ಹಲಮುಖೋತ್ಕೃಷ್ಟೇ ವೇದ್ಯಾಮಗ್ನಿ ಶಿಖೋಪಮಾ ॥

ಅನುವಾದ

ಹೀಗೆ ಈ ಮಹಾಭಾಗಾ ದೇವಿಯು ಬೇರೆ-ಬೇರೆ ಕಲ್ಪಗಳಲ್ಲಿ ಪುನಃ ರಾವಣನ ವಧೆಗಾಗಿ ಮರ್ತ್ಯಲೋಕದಲ್ಲಿ ಅವತರಿಸುತ್ತಾ ಇರುವಳು. ಯಜ್ಞವೇದಿಯಲ್ಲಿ ಅಗ್ನಿಶಿಖೆಯಂತೆ, ಉತ್ತಕ್ಷೇತ್ರದಲ್ಲಿ ಈಕೆಯ ಆವಿರ್ಭಾವವಾಗಿದೆ.॥42॥

ಮೂಲಮ್ - 43

ಏಷಾ ವೇದವತೀ ನಾಮ ಪೂರ್ವಮಾಸೀತ್ಕೃತೇ ಯುಗೇ ।
ತ್ರೇತಾಯುಗಮನುಪ್ರಾಪ್ಯ ವಧಾರ್ಥಂ ತಸ್ಯ ರಕ್ಷಸಃ ॥

ಮೂಲಮ್ - 44

ಉತ್ಪನ್ನಾ ಮೈಥಿಲಕುಲೇ ಜನಕಸ್ಯ ಮಹಾತ್ಮನಃ ।
ಸೀತೋತ್ಪನ್ನಾ ತು ಸೀತೇತಿ ಮಾನುಷೈಃ ಪುನರುಚ್ಯತೇ ॥

ಅನುವಾದ

ಈ ವೇದವತಿಯು ಮೊದಲು ಕೃತಯುಗದಲ್ಲಿ ಪ್ರಕಟವಾಗಿದ್ದಳು. ಮತ್ತೆ ತ್ರೇತಾಯುಗ ಬಂದಾಗ ರಾವಣನ ವಧೆಗಾಗಿ ಮಿಥಿಲಾಧಿಪತಿ ರಾಜಾ ಜನಕನ ಕುಲದಲ್ಲಿ ಸೀತೆಯಾಗಿ ಅವತರಿಸಿದಳು. ನೇಗಿಲ ತುದಿಯಿಂದ ಉತ್ಪನ್ನಳಾದ ಕಾರಣ ಮನುಷ್ಯನು ಈ ದೇವಿಯನ್ನು ಸೀತಾ ಎಂದು ಹೇಳುತ್ತಾರೆ.॥43-44॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹದಿನೇಳನೆಯ ಸರ್ಗ ಪೂರ್ಣವಾಯಿತು.॥17॥