[ಹದಿನಾರನೆಯ ಸರ್ಗ]
ಭಾಗಸೂಚನಾ
ದಶಾನನನಿಗೆ ನಂದೀಶ್ವರ ಶಾಪ, ಭಗವಾನ್ ಶಂಕರನಿಂದ ರಾವಣನ ಮಾನಭಂಗ, ಅವನಿಂದ ಚಂದ್ರಹಾಸ ಎಂಬ ಖಡ್ಗಪ್ರಾಪ್ತಿ
ಮೂಲಮ್ - 1
ಸ ಜಿತ್ವಾ ಧನದಂ ರಾಮ ಭ್ರಾತರಂ ರಾಕ್ಷಸಾಧಿಪಃ ।
ಮಹಾಸೇನ ಪ್ರಸೂತಿಂ ತದ್ಯಯೌ ಶರವಣಂ ಮಹತ್ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ) ರಾಘವ! ರಾವಣನು ಕುಬೇರನನ್ನು ಗೆದ್ದು, ಮಹಾಸೇನನು ಹುಟ್ಟಿದ ಶರವಣ ವೆಂಬ ವಿಶಾಲವಾದ ನೂಜೆಹುಲ್ಲಿನ ವನಕ್ಕೆ ಹೋದನು.॥1॥
ಮೂಲಮ್ - 2
ಅಥಾಪಶ್ಯದ್ದಶಗ್ರೀವೋ ರೌಕ್ಮಂ ಶರವಣಂ ಮಹತ್ ।
ಗಭಸ್ತಿಜಾಲ ಸಂವೀತಂ ದ್ವಿತೀಯಮಿವ ಭಾಸ್ಕರಮ್ ॥
ಅನುವಾದ
ಅಲ್ಲಿಗೆ ಹೋಗಿ ದಶಗ್ರೀವನು ಸುವರ್ಣಮಯ ಕಾಂತಿಯಿಂದ ಯುಕ್ತವಾದ, ಕಿರಣಸಮೂಹಗಳಿಂದ ವ್ಯಾಪ್ತವಾಗಿ ಇನ್ನೊಬ್ಬ ಸೂರ್ಯನಂತೆ ಕಂಗೊಳಿಸುವ ಆ ಶರವಣ ವನವನ್ನು ನೋಡಿದನು.॥2॥
ಮೂಲಮ್ - 3
ಸ ಪರ್ವತಂ ಸಮಾರುಹ್ಯ ಕಂಚಿದ್ ರಮ್ಯವನಾಂತರಮ್ ।
ಪ್ರೇಕ್ಷತೇ ಪುಷ್ಪಕಂ ತತ್ರ ರಾಮ ವಿಷ್ಟಂಭಿತಂ ತದಾ ॥
ಅನುವಾದ
ಅದರ ಬಳಿಯಲ್ಲೇ ಇದ್ದ ಪರ್ವತ, ವನಸ್ಥಳ ತುಂಬಾ ರಮಣೀಯವಾಗಿತ್ತು. ಶ್ರೀರಾಮಾ! ಅದನ್ನು ಹತ್ತಲು ತೊಡಗಿದಾಗ ಪುಷ್ಪಕ ವಿಮಾನದ ಗತಿ ನಿಂತುಹೋದಂತೆ ಕಂಡಿತು.॥3॥
ಮೂಲಮ್ - 4
ವಿಷ್ಟಬ್ಧಂ ಕಿಮಿದಂ ಕಸ್ಮಾನ್ನಾಗಮತ್ ಕಾಮಗಂ ಕೃತಮ್ ।
ಅಚಿಂತಯದ್ರಾಕ್ಷಸೇಂದ್ರಃ ಸಚಿವೈಸ್ತೈಃ ಸಮಾವೃತಃ ॥
ಮೂಲಮ್ - 5
ಕಿಂ ನಿಮಿತ್ತಮಿಚ್ಛಯಾ ಮೇ ನೇದಂ ಗಚ್ಛತಿ ಪುಷ್ಪಕಮ್ ।
ಪರ್ವತಸ್ಯೋಪರಿಷ್ಠಸ್ಯ ಕರ್ಮೇದಂ ಕಸ್ಯಚಿದ್ಭವೇತ್ ॥
ಅನುವಾದ
ಆಗ ಆ ರಾಕ್ಷಸರಾಜನು ತನ್ನ ಮಂತ್ರಿಗಳೊಂದಿಗೆ ಈ ಪುಷ್ಪಕ ವಿಮಾನ ಏಕೆ ನಿಂತಿದೆ ಎಂದು ವಿಚಾರ ಮಾಡತೊಡಗಿದನು. ಇದಾದರೋ ಒಡೆಯನ ಇಚ್ಛೆಗನುಸಾರ ನಡೆಯುವುದು. ಹೀಗಿದ್ದರೂ ಮುಂದಕ್ಕೆ ಏಕೆ ಹೋಗುವುದಿಲ್ಲ? ನನ್ನ ಈ ಪುಷ್ಪಕವಿಮಾನ ನನ್ನ ಇಚ್ಛೆಗನುಸಾರ ನಡೆಯದಿರಲು ಕಾರಣವೇನು? ಈ ಪರ್ವತದ ಮೇಲೆ ಯಾರೋ ಇದ್ದು, ಅವನದೇ ಈ ಕರ್ಮವಿರಬಹುದು.॥4-5॥
ಮೂಲಮ್ - 6
ತತೋಽಬ್ರವೀತ್ತದಾ ರಾಮ ಮಾರೀಚೋ ಯುದ್ಧಕೋವಿದಃ ।
ನೇದಂ ನಿಷ್ಕಾರಣಂ ರಾಜನ್ ಪುಷ್ಪಕಂ ಯನ್ನ ಗಚ್ಛತಿ ॥
ಅನುವಾದ
ಶ್ರೀರಾಮಾ! ಆಗ ಬುದ್ಧಿಕುಶಲ ಮಾರೀಚನು ಹೇಳಿದನು- ರಾಜಾ! ಈ ಪುಷ್ಪಕವಿಮಾನ ಮುಂದೆ ಹೋಗದಿರುವು ದರಲ್ಲಿ ಯಾವುದೇ ಕಾರಣ ಅವಶ್ಯವಾಗಿದೆ. ಕಾರಣವಿಲ್ಲದೆ ಹೀಗೆ ಎಂದಿಗೂ ಆಗಲಾರದು.॥6॥
ಮೂಲಮ್ - 7
ಅಥವಾ ಪುಷ್ಪಕಮಿದಂ ಧನದಾನ್ನಾನ್ಯವಾಹನಮ್ ।
ಅತೋ ನಿಷ್ಪಂದಮಭವದ್ ಧನಾಧ್ಯಕ್ಷ ವಿನಾಕೃತಮ್ ॥
ಅನುವಾದ
ಅಥವಾ ಈ ಪುಷ್ಪಕವಿಮಾನ ಕುಬೇರನಲ್ಲದೆ ಬೇರೆಯವರ ವಾಹನ ಆಗಲಾರದು; ಅದಕ್ಕಾಗಿ ಅವನಿಲ್ಲದೆ ಇದು ನಿಶ್ಚೇಷ್ಟಿತವಾಗಿದೆ.॥7॥
ಮೂಲಮ್ - 8
ಇತಿ ವಾಕ್ಯಾಂತರೇ ತಸ್ಯ ಕರಾಲಃ ಕೃಷ್ಣಪಿಂಗಲಃ ।
ವಾಮನೋ ವಿಕಟೋ ಮುಂಡೀ ನಂದೀ ಹ್ರಸ್ವಭುಜೋ ಬಲೀ ॥
ಮೂಲಮ್ - 9
ತತಃ ಪಾರ್ಶ್ವಮುಪಾಗಮ್ಯ ಭವಸ್ಯಾನುಚರೋಽಬ್ರವೀತ್ ।
ನಂದೀಶ್ವರೋ ವಚಶ್ಚೇದಂ ರಾಕ್ಷಸೇಂದ್ರಮಶಂಕಿತಃ ॥
ಅನುವಾದ
ಅಷ್ಟರಲ್ಲೇ ಭಗವಾನ್ ಶಂಕರನ ಪಾರ್ಷದ ನಂದೀಶ್ವರನು ರಾವಣನ ಬಳಿಗೆ ಬಂದನು. ಅವನು ನೋಡಲು ವಿಕಾರನಾಗಿದ್ದನು. ಅಂಗಕಾಂತಿಯು ಕಪ್ಪು ಹಾಗೂ ಪಿಂಗಲವಾಗಿತ್ತು. ಕುಳ್ಳಗಾಗಿದ್ದು, ವಿಕಟರೂಪದಿಂದ ಇದ್ದನು. ಬೋಳುತಲೆಯಿದ್ದು ಭುಜಗಳು ಚಿಕ್ಕದಾಗಿದ್ದವು. ಬಹಳ ಬಲಿಷ್ಠನಾದ ಆ ನಂದೀಶ್ವರನು ನಿಃಶಂಕನಾಗಿ ರಾಕ್ಷಸೇಶ್ವರ ರಾವಣನಲ್ಲಿ ಹೇಳಿದನು.॥8-9॥
ಮೂಲಮ್ - 10½
ನಿವರ್ತಸ್ವ ದಶಗ್ರೀವ ಶೈಲೇ ಕ್ರೀಡತೀ ಶಂಕರಃ ।
ಸುಪರ್ಣನಾಗ ಯಕ್ಷಾಣಾಂ ದೇವಗಂಧರ್ವ ರಕ್ಷಸಾಮ್ ॥
ಸರ್ವೇಷಾಮೇವ ಭೂತಾನಾಮಗಮ್ಯಃ ಪರ್ವತಃ ಕೃತಃ ।
ಅನುವಾದ
ದಶಗ್ರೀವನೇ! ಮರಳಿಹೋಗು. ಈ ಪರ್ವತದಲ್ಲಿ ಭಗವಾನ್ ಶಂಕರನು ಕ್ರೀಡಿಸುತ್ತಿರುವನು. ಇಲ್ಲಿಗೆ ಸುಪರ್ಣ, ನಾಗ, ಯಕ್ಷ, ದೇವತಾ, ಗಂಧರ್ವ, ರಾಕ್ಷಸ ಹೀಗೆ ಯಾವ ಪ್ರಾಣಿಯು ಬಂದು ಹೋಗುವುದು ನಿಷೇಧಿಸಲಾಗಿದೆ.॥10½॥
ಮೂಲಮ್ - 11
ಇತಿ ನಂದಿ ವಚಃ ಶ್ರುತ್ವಾ ಕ್ರೋಧಾತ್ ಕಂಪಿತಕುಂಡಲಃ ॥
ಮೂಲಮ್ - 12
ರೋಷಾತ್ತು ತಾಮ್ರನಯನಃ ಪುಷ್ಪಕಾದವರುಹ್ಯ ಸಃ ।
ಕೋಽಯಂ ಶಂಕರ ಇತ್ಯುಕ್ತ್ವಾ ಶೈಲಮೂಲಮುಪಾಗತಃ ॥
ಅನುವಾದ
ನಂದಿಯ ಮಾತನ್ನು ಕೇಳಿ ದಶಗ್ರೀವನು ಕುಪಿತನಾದನು. ಕರ್ಣಕುಂಡಲಗಳು ಅಲ್ಲಾಡಿದವು, ಕಣ್ಣುಗಳು ರೋಷದಿಂದ ಕೆಂಪಾದವು. ಅವನು ಪುಷ್ಪಕ ವಿಮಾನದಿಂದ ಇಳಿದು - ಯಾರು ಈ ಶಂಕರ? ಎಂದು ಹೇಳುತ್ತಾ ಪರ್ವತದ ಬುಡಕ್ಕೆ ಬಂದನು.॥11-12॥
ಮೂಲಮ್ - 13
ಸೋಽಪಶ್ಯನ್ನಂದಿನಂ ತತ್ರ ದೇವಸ್ಯಾದೂರತಃ ಸ್ಥಿತಮ್ ।
ದೀಪ್ತಂ ಶೂಲಮವಷ್ಟಭ್ಯ ದ್ವಿತೀಯಮಿವ ಶಂಕರಮ್ ॥
ಅನುವಾದ
ಅಲ್ಲಿ ಹೋಗಿ ನೋಡಿದರೆ ಭಗವಾನ್ ಶಂಕರನು ಸಮೀಪದಲ್ಲೇ ಹೊಳೆಯುತ್ತಿರುವ ಶೂಲವನ್ನೆತ್ತಿಕೊಂಡ ನಂದಿಯು ಇನ್ನೊಬ್ಬ ಶಿವನಂತೆ ನಿಂತಿದ್ದುದು ನೋಡಿದನು.॥13॥
ಮೂಲಮ್ - 14
ತಂ ದೃಷ್ಟ್ವಾವಾನರಮುಖಮವಜ್ಞಾಯ ಸ ರಾಕ್ಷಸಃ ।
ಪ್ರಹಾಸಂ ಮುಮುಚೇ ತತ್ರ ಸತೋಯ ಇವ ತೋಯದಃ ॥
ಅನುವಾದ
ವಾನರನಂತೆ ಮುಖವುಳ್ಳ ಅವನನ್ನು ನೋಡಿ ಆ ನಿಶಾಚರನು ತಿರಸ್ಕಾರದಿಂದ, ನೀರು ತುಂಬಿದ ಮೇಘದಂತೆ ಗಂಭೀರ ಸ್ವರದಲ್ಲಿ ಗಹಗಹಿಸಿ ನಗತೊಡಗಿದನು.॥14॥
ಮೂಲಮ್ - 15
ತಂ ಕ್ರುದ್ಧೋ ಭಗವಾನ್ನಂದೀ ಶಂಕರಸ್ಯಾಪರಾ ತನುಃ ।
ಅಬ್ರವೀತ್ತತ್ರ ತದ್ರಕ್ಷೋ ದಶಾನನಮುಪಸ್ಥಿತಮ್ ॥
ಅನುವಾದ
ಇದನ್ನು ನೋಡಿ, ಮತ್ತೊಂದು ಸ್ವರೂಪೀ ನಂದಿಯು ಕುಪಿತನಾಗಿ, ಅಲ್ಲಿ ನಿಂತಿದ್ದ ನಿಶಾಚರ ದಶಮುಖನಲ್ಲಿ ಇಂತೆಂದನು.॥15॥
ಮೂಲಮ್ - 16
ಯಸ್ಮಾದ್ವಾನರರೂಪಂ ಮಾಮವಜ್ಞಾಯ ದಶಾನನ ।
ಅಶನೀಪಾತ ಸಂಕಾಶಮಪಹಾಸಂ ಪ್ರಮುಕ್ತವಾನ್ ॥
ಮೂಲಮ್ - 17
ತಸ್ಮಾನ್ಮದ್ವೀರ್ಯ ಸಂಯುಕ್ತಾಮದ್ರೂಪ ಸಮತೇಜಸಃ ।
ಉತ್ಪತ್ಸ್ಯಂತಿ ವದಾರ್ಥಂ ಹಿ ಕುಲಸ್ಯ ತವ ವಾನರಾಃ ॥
ಅನುವಾದ
ದಶಾನನಾ! ನೀನು ವಾನರರೂಪದಲ್ಲಿ ನನ್ನನ್ನು ನೋಡಿ ಅವಹೇಳನೆ ಮಾಡುತ್ತಾ, ಸಿಡಿಲಗರ್ಜನೆಯಂತೆ ಅಟ್ಟಹಾಸ ಮಾಡಿರುವೆ. ಆದ್ದರಿಂದ ನಿನ್ನ ಕುಲವನ್ನು ನಾಶ ಮಾಡಲು ನನ್ನಂತೆಯೇ ಪರಾಕ್ರಮಿಗಳಾದ, ರೂಪ, ತೇಜಸಂಪನ್ನರಾದ ವಾನರರು ಉತ್ಪನ್ನರಾಗುವರು.॥16-17॥
ಮೂಲಮ್ - 18
ನಖದಂಷ್ಟ್ರಾಯುಧಾಃ ಕ್ರೂರ ಮನಃ ಸಂಪಾತರಂ ಹಸಃ ।
ಯುದ್ಧೋನ್ಮತ್ತಾ ಬಲೋದ್ರಿಕ್ತಾಃ ಶೈಲಾ ಇವ ವಿಸರ್ಪಿಣಃ ॥
ಅನುವಾದ
ಕ್ರೂರ ನಿಶಾಚರನೇ! ಉಗುರು, ಹಲ್ಲುಗಳೇ ಆ ವಾನರರ ಅಸ್ತ್ರಗಳಾಗುವುವು, ಮನೋವೇಗದಂತೆ ವೇಗಶಾಲಿಗಳಾಗಿ, ಯುದ್ಧಕ್ಕಾಗಿ ಉನ್ಮತ್ತರಾಗಿ ಮಹಾಬಲಶಾಲಿಯಾಗುವರು, ನಡೆದಾಡುವ ಪರ್ವತಗಳಂತೆಯೇ ಕಂಡು ಬರುವರು.॥18॥
ಮೂಲಮ್ - 19
ತೇ ತವ ಪ್ರಬಲಂ ದರ್ಪಮುತ್ಸೇಧಂ ಚ ಪೃಥಗ್ವಿಧಮ್ ।
ವ್ಯಪನೇಷ್ಯಂತಿ ಸಂಭೂಯ ಸಹಾಮಾತ್ಯಸು ತಸ್ಯ ಚ ॥
ಅನುವಾದ
ಅವರು ಒಂದಾಗಿ ಮಂತ್ರಿ, ಪುತ್ರರ ಸಹಿತ ನಿನ್ನ ಪ್ರಬಲ ಅಭಿಮಾನವನ್ನು, ವಿಶಾಲಕಾಯನಾಗಿರುವ ಗರ್ವವನ್ನು ನುಚ್ಚುನೂರಾಗಿಸುವರು.॥19॥
ಮೂಲಮ್ - 20
ಕಿಂ ತ್ವಿದಾನೀಂ ಮಯಾ ಶಕ್ಯಂ ಹಂತುಂ ತ್ವಾಂ ಹೇ ನಿಶಾಚರ ।
ನ ಹಂತವ್ಯೋ ಹಸತ್ತ್ವಂ ಹಿ ಪೂರ್ವಮೇವ ಸ್ವಕರ್ಮಭಿಃ ॥
ಅನುವಾದ
ಎಲೈ ನಿಶಾಚರನೇ! ನಿನ್ನನ್ನು ಈಗಲೇ ಕೊಂದುಹಾಕುವ ಶಕ್ತಿ ನನಗಿದೆ, ಆದರೂ ನೀನು ಸಾಯಬಾರದು.॥20॥
ಮೂಲಮ್ - 21
ಇತ್ಯುದೀರಿತವಾಕ್ಯೇ ತು ದೇವೇ ತಸ್ಮಿನ್ಮಹಾತ್ಮನಿ ।
ದೇವದುಂದುಭಯೋ ನೇದುಃ ಪುಷ್ಪವೃಷ್ಟಿಶ್ಚ ಖಾಚ್ಚ್ಯುತಾ ॥
ಅನುವಾದ
ಏಕೆಂದರೆ ತನ್ನ ಕುತ್ಸಿತ ಕರ್ಮಗಳಿಂದ ನೀನು ಮೊದಲೆ ಸತ್ತಿರುವೆ. (ಸತ್ತವರನ್ನು ಕೊಲ್ಲುವುದರಿಂದ ಏನು ಲಾಭ?) ಮಹಾತ್ಮಾ ನಂದಿಯು ಇಷ್ಟು ಹೇಳುತ್ತಲೇ ದೇವದುಂದುಭಿಗಳು ಮೊಳಗಿದವು, ಆಕಾಶದಿಂದ ಪುಷ್ಪವೃಷ್ಟಿಯಾಯಿತು.॥21॥
ಮೂಲಮ್ - 22
ಅಚಿಂತಯಿತ್ವಾ ಸ ತದಾ ನಂದಿವಾಕ್ಯಂ ಮಹಾಬಲಃ ।
ಪರ್ವತಂ ತು ಸಮಾಸಾದ್ಯ ವಾಕ್ಯಮಾಹ ದಶಾನನಃ ॥
ಮೂಲಮ್ - 23
ಪುಷ್ಪಕಸ್ಯ ಗತಿಶ್ಛಿನ್ನಾ ಯತ್ಕೃತೇ ಮಮ ಗಚ್ಛತಃ ।
ತಮಿಮಂ ಶೈಲಮುನ್ಮೂಲಂ ಕರೋಮಿ ತವಗೋಪತೇ ॥
ಅನುವಾದ
ಆದರೆ ಮಹಾಬಲಿ ದಶಾನನನು ಆಗ ನಂದಿಯ ಮಾತನ್ನು ಪರಿಗಣಿಸದೆ ಆ ಪರ್ವತದ ಬಳಿಗೆ ಹೋಗಿ ಪಶುಪತಿಯೇ! ಯಾವ ಕಾರಣದಿಂದ ಯಾತ್ರೆ ಮಾಡುವಾಗ ನನ್ನ ಪುಷ್ಪಕ ವಿಮಾನದ ಗತಿ ನಿಂತುಹೋಯಿತೋ, ನಿನ್ನ ಆ ಪರ್ವತವು ನನ್ನ ಎದುರಿಗೆ ನಿಂತಿದೆ. ಅದನ್ನು ನಾನು ಕಿತ್ತು ಬಿಸಾಡುವೆನು.॥22-23॥
ಮೂಲಮ್ - 24
ಕೇನ ಪ್ರಭಾವೇಣ ಭವೋ ನಿತ್ಯಂ ಕ್ರೀಡತಿ ರಾಜವತ್ ।
ವಿಜ್ಞಾತವ್ಯಂ ನ ಜಾನೀತೇ ಭಯಸ್ಥಾನಮುಪಸ್ಥಿತಮ್ ॥
ಅನುವಾದ
ಯಾವ ಪ್ರಭಾವದಿಂದ ಶಂಕರನು ಪ್ರತಿದಿನ ಇಲ್ಲಿ ರಾಜನಂತೆ ಕ್ರೀಡಿಸುತ್ತಿರುವನು? ಅವನ ಎದುರಿಗೆ ಭಯವು ಉಪಸ್ಥಿತವಾಗಿದೆ ಎಂಬುದನ್ನು ಅವನು ತಿಳಿಯದೆ ಹೋದನು.॥24॥
ಮೂಲಮ್ - 25
ಏವಮುಕ್ತ್ವಾ ತತೋ ರಾಮಭುಜಾನ್ವಿಕ್ಷಿಪ್ಯ ಪರ್ವತೇ ।
ತೋಲಯಾಮಾಸ ತಂ ಶೀಘ್ರಂ ಸ ಶೈಲಃ ಸಮಕಂಪತ ॥
ಅನುವಾದ
ಶ್ರೀರಾಮ! ಹೀಗೆ ಹೇಳಿ ದಶಗ್ರೀವನು ಪರ್ವತದ ಬುಡಕ್ಕೆ ಕೈಗಳನ್ನು ಚಾಚಿ, ಅದನ್ನು ಎತ್ತಲು ಪ್ರಯತ್ನಿಸಿದಾಗ, ಆ ಪರ್ವತ ನಡುಗತೊಡಗಿತು.॥25॥
ಮೂಲಮ್ - 26
ಚಾಲನಾತ್ಪರ್ವತಸ್ಯೈವ ಗಣಾ ದೇವಸ್ಯ ಕಂಪಿತಾಃ ।
ಚಚಾಲ ಪಾರ್ವತೀ ಚಾಪಿ ತದಾಶ್ಲಿಷ್ಟಾ ಮಹೇಶ್ವರಮ್ ॥
ಅನುವಾದ
ಪರ್ವತವು ನಡುಗು ವುದರಿಂದ ಶಂಕರನ ಗಣಗಳೆಲ್ಲರೂ ಕಂಪಿಸಿದರು. ಪಾರ್ವತಿ ದೇವಿಯು ವಿಚಲಿತಳಾಗಿ ಭಗವಾನ್ ಶಂಕರನನ್ನು ಅಪ್ಪಿ ಕೊಂಡಳು.॥26॥
ಮೂಲಮ್ - 27
ತತೋ ರಾಮ ಮಹಾದೇವೋ ದೇವಾನಾಂ ಪ್ರವರೋ ಹರಃ ।
ಪಾದಾಂಗುಷ್ಠೇನ ತಂ ಶೈಲಂ ಪೀಡಯಾಮಾಸ ಲೀಲಯಾ ॥
ಅನುವಾದ
ಶ್ರೀರಾಮ! ಆಗ ಶ್ರೇಷ್ಠ ಪಾಪಹಾರಿ ದೇವದೇವ ಮಹಾದೇವನು ಆ ಪರ್ವತವನ್ನು ತನ್ನ ಕಾಲಿನ ಅಂಗುಷ್ಠದಿಂದ ಲೀಲಾಜಾಲವಾಗಿ ಒತ್ತಿಬಿಟ್ಟನು.॥27॥
ಮೂಲಮ್ - 28
ಪೀಡಿತಾಸ್ತು ತತಸ್ತಸ್ಯ ಶೈಲ ಸ್ತಂಭೋಪಮಾ ಭುಜಾಃ ।
ವಿಸ್ಮಿತಾಶ್ಚಾಭವಂಸ್ತತ್ರ ಸಚಿವಾಸ್ತಸ್ಯ ರಕ್ಷಸಃ ॥
ಅನುವಾದ
ಮತ್ತೆ ಪರ್ವತಸ್ತಂಭಗಳಂತೆ ಇದ್ದ ದಶಗ್ರೀವನ ಭುಜಗಳು ಪರ್ವತದ ಕೆಳಗೆ ಜಜ್ಜಿಹೋದವು. ಇದನ್ನು ನೋಡಿ ಅಲ್ಲಿ ನಿಂತಿದ್ದ ಆ ರಾಕ್ಷಸನ ಮಂತ್ರಿಗಳಿಗೆ ಭಾರೀ ಆಶ್ಚರ್ಯವಾಯಿತು.॥28॥
ಮೂಲಮ್ - 29
ರಕ್ಷಸಾ ತೇನ ರೋಷಾಚ್ಚ ಭುಜಾನಾಂ ಪೀಡನಾತ್ತಥಾ ।
ಮುಕ್ತೋ ವಿರಾವಃ ಸಹಸಾ ತ್ರೈಲೋಕ್ಯಂ ಯೇನ ಕಂಪಿತಮ್ ॥
ಅನುವಾದ
ಆ ರಾಕ್ಷಸನು ಬಾಹುಗಳ ನೋವಿನಿಂದ, ರೋಷದಿಂದ ಜೋರಾಗಿ ಆರ್ತನಾದ ಮಾಡಿದನು. ಅದರಿಂದ ಮೂರು ಲೋಕಗಳೂ ನಡುಗಿದವು.॥29॥
ಮೂಲಮ್ - 30
ಮೇನಿರೇ ವಜ್ರನಿಷ್ಪೇಷಂ ತಸ್ಯಾಮಾತ್ಯಾ ಯುಗಕ್ಷಯೇ ।
ತದಾ ವರ್ತ್ಮಸು ಚಲಿತಾ ದೇವಾ ಇಂದ್ರಪುರೋಗಮಾಃ ॥
ಅನುವಾದ
ಪ್ರಳಯ ಕಾಲವೇ ಬಂತು ಎಂದು ಅವನ ಮಂತ್ರಿಗಳು ತಿಳಿದರು. ಸಿಡಿಲು ಬಡಿಯಿತು, ಆಗ ಇಂದ್ರಾದಿ ದೇವತೆಗಳು ಮಾರ್ಗದಲ್ಲಿ ವಿಚಲಿತರಾದರು.॥30॥
ಮೂಲಮ್ - 31
ಸಮುದ್ರಾಶ್ಚಾಪಿ ಸಂಕ್ಷುಬ್ಧಾಶ್ಚಲಿತಾಶ್ಚಾಪಿ ಪರ್ವತಾಃ ।
ಯಕ್ಷಾ ವಿದ್ಯಾಧರಾಃ ಸಿದ್ಧಾಃ ಕಿಮೇತದಿತಿ ಚಾಬ್ರುವನ್ ॥
ಅನುವಾದ
ಸಮುದ್ರ ಉಕ್ಕಿತು, ಪರ್ವತಗಳು ಕಂಪಿಸಿದವು. ಯಕ್ಷ, ವಿದ್ಯಾಧರರು, ಸಿದ್ಧರು ಪರಸ್ಪರ ಕೇಳತೊಡಗಿದರು - ಇದೇನಾಗುತ್ತಿದೆ.॥31॥
ಮೂಲಮ್ - 32
ತೋಷಯಸ್ವ ಮಹಾದೇವಂ ನೀಲಕಂಠಮುಮಾಪತಿಮ್ ।
ತಮೃತೇ ಶರಣಂ ನಾನ್ಯಂ ಪಶ್ಯಾಮೋಽತ್ರ ದಶಾನನ ॥
ಅನುವಾದ
ದಶಗ್ರೀವನ ಮಂತ್ರಿಗಳು ಹೇಳಿದರು - ಮಹಾರಾಜ ದಶಾನನ ! ಈಗ ನೀವು ನೀಲಕಂಠ ಉಮಾವಲ್ಲಭ ಮಹಾದೇವನನ್ನು ಸಂತುಷ್ಟಗೊಳಿಸಿರಿ. ಇಲ್ಲಿ ನಿಮಗೆ ಶರಣ್ಯರಾದವರು ಬೇರೆ ಯಾರನ್ನು ನಾವು ಕಾಣೆವು.॥32॥
ಮೂಲಮ್ - 33
ಸ್ತುತಿಭಿಃ ಪ್ರಣತೋ ಭೂತ್ವಾ ತಮೇವ ಶರಣಂ ವ್ರಜ ।
ಕೃಪಾಲುಃ ಶಂಕರಸ್ತುಷ್ಟಃ ಪ್ರಸಾದಂ ತೇ ವಿಧಾಸ್ಯತಿ ॥
ಅನುವಾದ
ನೀವು ಸ್ತುತಿಗಳಿಂದ ಅವನಿಗೆ ಪ್ರಣಾಮ ಮಾಡಿ ಅವನಲ್ಲಿ ಶರಣಾಗಿರಿ. ಭಗವಂತ ಶಂಕರನು ಬಹಳ ದಯಾಳು ಆಗಿದ್ದಾನೆ. ಅವನು ಸಂತುಷ್ಟನಾಗಿ ನಿಮ್ಮ ಮೇಲೆ ಕೃಪೆದೋರುವನು.॥33॥
ಮೂಲಮ್ - 34
ಏವಮುಕ್ತಸ್ಯದಾಮಾತ್ಯೈಸ್ತುಷ್ಟಾವ ವೃಷಭಧ್ವಜಮ್ ।
ಸಾಮಭಿರ್ವಿವಿಧೈಃ ಸ್ತೋತ್ರೈಃ ಪ್ರಣಮ್ಯ ಸ ದಶಾನನಃ ।
ಸಂವತ್ಸರಸಹಸ್ರಂತು ರುದತೋ ರಕ್ಷಸೋ ಗತಮ್ ॥
ಅನುವಾದ
ಮಂತ್ರಿಗಳು ಹೀಗೆ ಹೇಳಿದಾಗ ದಶಮುಖನು ಭಗವಾನ್ ವೃಷಭಧ್ವಜನಿಗೆ ವಂದಿಸಿ, ನಾನಾ ಸ್ತೋತ್ರಗಳಿಂದ ಹಾಗೂ ಸಾಮವೇದ ಮಂತ್ರಗಳಿಂದ ಅವನನ್ನು ಸ್ತುತಿಸಿದನು. ಹೀಗೆ ಕೈಗಳ ನೋವಿನಿಂದ ಅಳುತ್ತಾ, ಸ್ತುತಿಸುತ್ತಾ ಒಂದು ಸಾವಿರ ವರ್ಷ ಕಳೆದುಹೋದುವು.॥34॥
ಮೂಲಮ್ - 35
ತತಃ ಪ್ರೀತೋ ಮಹಾದೇವಃ ಶೈಲಾಗ್ರೇ ವಿಷ್ಠಿತಃ ಪ್ರಭುಃ ।
ಮುಕ್ತ್ವಾ ಚಾಸ್ಯ ಭುಜಾನ್ರಾಮ ಪ್ರಾಹ ವಾಕ್ಯಂ ದಶಾನನಮ್ ॥
ಅನುವಾದ
ಶ್ರೀರಾಮಾ! ಬಳಿಕ ಆ ಪರ್ವತದಲ್ಲಿ ಸ್ಥಿತನಾದ ಮಹಾದೇವನು ಪ್ರಸನ್ನನಾದನು ದಶಾನನನ ಭುಜಗಳನ್ನು ಸಂಕಟದಿಂದ ಪಾರುಮಾಡಿ ಹೇಳಿದನು.॥35॥
ಮೂಲಮ್ - 36
ಪ್ರೀತೋಽಸ್ಮಿ ತವ ವೀರ್ಯಸ್ಯ ಶೌಟೀರ್ಯಾಚ್ಚ ದಶಾನನ ।
ಶೈಲಾಕ್ರಾಂತೇನ ಯೋ ಮುಕ್ತಸ್ತ್ವಯಾ ರಾವಃ ಸುದಾರುಣಃ ॥
ಮೂಲಮ್ - 37
ಯಸ್ಮಾಲ್ಲೋಕತ್ರಯಂ ಚೈತದ್ರಾವಿತಂ ಭಯಮಾಗತಮ್ ।
ತಸ್ಮಾತ್ತ್ವಂ ರಾವಣೋ ನಾಮ ನಾಮ್ನಾ ರಾಜನ್ ಭವಿಷ್ಯಸಿ ॥
ಅನುವಾದ
ದಶಮುಖನೇ ! ನೀನು ವೀರನಾಗಿರುವೆ. ನಿನ್ನ ಪರಾಕ್ರಮದಿಂದ ನಾನು ಪ್ರಸನ್ನನಾಗಿದ್ದೇನೆ. ಪರ್ವತವು ಅದುಮಲ್ಪಟ್ಟಿದ್ದರಿಂದ ನೀನು ಅತ್ಯಂತ ಭಯಾನಕ ರಾವ (ಆರ್ತನಾದ) ಮಾಡಿದ್ದರಿಂದ ಮೂರು ಲೋಕಗಳ ಪ್ರಾಣಿಗಳು ಅತ್ತುಬಿಟ್ಟರು. ಅದರಿಂದ ರಾಕ್ಷಸರಾಜನೇ! ಇನ್ನು ನೀನು ರಾವಣ ಎಂಬ ಹೆಸರಿನಿಂದ ಪ್ರಸಿದ್ಧನಾಗುವೆ.॥36-37॥
ಮೂಲಮ್ - 38
ದೇವತಾ ಮಾನುಷಾ ಯಕ್ಷಾ ಯೇ ಚಾನ್ಯೇ ಜಗತೀತಲೇ ।
ಏವಂ ತ್ವಾಮಭಿಧಾಸ್ಯಂತಿ ರಾವಣಂ ಲೋಕರಾವಣಮ್ ॥
ಅನುವಾದ
ಭೂತಳದಲ್ಲಿ ವಾಸಿಸುವ ಮನುಷ್ಯರು, ಯಕ್ಷರು ಹಾಗೂ ಇತರ ಎಲ್ಲರೂ ಹೀಗೆ ಸಮಸ್ತ ಲೋಕಗಳನ್ನು ಅಳುವಂತೆ ಮಾಡಿದ ದಶಗ್ರೀವನಾದ ನಿನ್ನನ್ನು ರಾವಣನೆಂದು ಹೇಳುವರು.॥38॥
ಮೂಲಮ್ - 39
ಗಚ್ಛ ಪೌಲಸ್ತ್ಯ ವಿಸ್ರಬ್ಧಂ ಪಥಾ ಯೇನ ತ್ವಮಿಚ್ಛಸಿ ।
ಮಯಾ ಚೈವಾಭ್ಯನುಜ್ಞಾತೋ ರಾಕ್ಷಸಾಧಿಪ ಗಮ್ಯತಾಮ್ ॥
ಅನುವಾದ
ಪುಲಸ್ತ್ಯನಂದನ! ಈಗ ನೀನು ಬಯಸಿದ ಮಾರ್ಗದಿಂದ ಅಡೆ-ತಡೆ ಯಿಲ್ಲದೆ ಹೋಗಬಲ್ಲೆ. ರಾಕ್ಷಸಪತೇ! ನಾನು ನಿನಗೆ ಹೋಗಲು ಅಪ್ಪಣೆ ಕೊಡುತ್ತೇನೆ, ಹೋಗು.॥39॥
ಮೂಲಮ್ - 40
ಏವಮುಕ್ತಸ್ತು ಲಂಕೇಶಃ ಶಂಭುನಾ ಸ್ವಯಮಬ್ರವೀತ್ ।
ಪ್ರೀತೋ ಯದಿ ಮಹಾದೇವ ವರಂ ಮೇ ದೇಹಿ ಯಾಚತಃ ॥
ಅನುವಾದ
ಭಗವಾನ್ ಶಂಕರನು ಹೀಗೆ ಹೇಳಿದಾಗ ಲಂಕೇಶ್ವರ ಹೇಳಿದನು-ಮಹಾದೇವನೇ! ನೀನು ಪ್ರಸನ್ನನಾಗಿದ್ದರೆ ನಾನು ನಿನ್ನಿಂದ ವರವನ್ನು ಬೇಡುತ್ತಿದ್ದೇನೆ. ಅದನ್ನು ದಯಪಾಲಿಸು.॥40॥
ಮೂಲಮ್ - 41
ಅವಧ್ಯತ್ವಂ ಮಯಾ ಪ್ರಾಪ್ತಂ ದೇವಗಂಧರ್ವದಾನವೈಃ ।
ರಾಕ್ಷಸೈರ್ಗುಹ್ಯಕೈರ್ನಾಗೈರ್ಯೇ ಚಾನ್ಯೇ ಬಲವತ್ತರಾಃ ॥
ಅನುವಾದ
ನಾನು ದೇವತಾ, ಗಂಧರ್ವ, ದಾನವ, ರಾಕ್ಷಸ, ಗುಹ್ಯಕ, ನಾಗ ಹಾಗೂ ಇತರ ಮಹಾಬಲಶಾಲೀ ಪ್ರಾಣಿಗಳಿಂದ ಅವಧ್ಯನಾಗುವಂತೆ ವರ ಪಡೆದಿರುವೆ.॥41॥
ಮೂಲಮ್ - 42½
ಮಾನುಷಾನ್ನ ಗಣೇ ದೇವ ಸ್ವಲ್ಪಾಸ್ತೇ ಮಮ ಸಮ್ಮತಾಃ ।
ದೀರ್ಘಮಾಯುಶ್ಚ ಮೇ ಪ್ರಾಪ್ತಂ ಬ್ರಹ್ಮಣಸ್ತ್ರಿ ಪುರಾಂತಕ ॥
ವಾಂಛಿತಂ ಚಾಯುಷಃ ಶೇಷಂ ಶಸ್ತ್ರಂ ತ್ವಂ ಚ ಪ್ರಯಚ್ಛಮೇ ।
ಅನುವಾದ
ದೇವ! ಮನುಷ್ಯರನ್ನಾದರೋ ನಾನು ಎಣಿಸುವುದೇ ಇಲ್ಲ. ನಾನು ತಿಳಿದಂತೆ ಅವರ ಶಕ್ತಿ ಬಹಳ ಅಲ್ಪವಾಗಿದೆ. ತ್ರಿಪುರಾಂತಕನೇ! ಬ್ರಹ್ಮದೇವರಿಂದ ನನಗೆ ದೀರ್ಘಾಯುಸ್ಸು ದೊರೆತಿದೆ. ಬ್ರಹ್ಮದೇವರು ಕೊಟ್ಟ ಆಯುಸ್ಸು ಪೂರ್ಣವಾಗಿ ಪಡೆಯುವಂತೆ ನಾನು ಬಯಸುತ್ತೇನೆ. ಇದನ್ನು ನೀನು ಪೂರ್ಣಗೊಳಿಸಬೇಕು. ಜೊತೆಗೆ ನಿನ್ನಿಂದ ಒಂದು ಅಸ್ತ್ರವನ್ನು ಪಡೆಯಬೇಕೆಂಬ ಆಸೆ.॥42½॥
ಮೂಲಮ್ - 43
ಏವಮುಕ್ತಸ್ತತಸ್ತೇನ ರಾವಣೇನ ಸ ಶಂಕರಃ ॥
ಮೂಲಮ್ - 44
ದದೌ ಖಡ್ಗಂ ಮಹಾದೀಪ್ತಂ ಚಂದ್ರಹಾಸಮಿತಿ ಶ್ರುತಮ್ ।
ಆಯುಷಶ್ಚಾವಶೇಷಂ ಚ ದದೌ ಭೂತಪತಿಸ್ತದಾ ॥
ಅನುವಾದ
ರಾವಣನು ಹೀಗೆ ಹೇಳಿದಾಗ ಭಗವಾನ್ ಶಂಕರನು ಒಂದು ಅತ್ಯಂತ ಹೊಳೆಯುವ ಚಂದ್ರಹಾಸ ಎಂಬ ಖಡ್ಗವನ್ನು ಕೊಟ್ಟನು. ಅವನ ಕಳೆದುಹೋದ ಆಯುಸ್ಸಿನ ಅಂಶವನ್ನು ಪೂರ್ಣಗೊಳಿಸಿದನು.॥43-44॥
ಮೂಲಮ್ - 45
ದತ್ತ್ವೋವಾಚ ತತಃ ಶಂಭುರ್ನಾವಜ್ಞೇಯಮಿದಂ ತ್ವಯಾ ।
ಅವಜ್ಞಾತಂ ಯದಿಹಿ ತೇ ಮಾಮೇವೈಷ್ಯತ್ಯಸಂಶಯಃ ॥
ಅನುವಾದ
ಆ ಖಡ್ಗವನ್ನು ನೋಡಿ ಶಿವನು ಹೇಳಿದನು- ನೀನು ಇದನ್ನು ಎಂದೂ ತಿರಸ್ಕರಿಸಬಾರದು. ನಿನ್ನಿಂದ ಎಂದಾದರೂ ಇದರ ತಿರಸ್ಕಾರವಾದರೆ ಇದು ಪುನಃ ನನ್ನ ಬಳಿಗೆ ಬರುವುದು, ಇದರಲ್ಲಿ ಸಂಶಯವಿಲ್ಲ.॥45॥
ಮೂಲಮ್ - 46
ಏವಂ ಮಹೇಶ್ವರೇಣೈವ ಕೃತನಾಮಾ ಸ ರಾವಣಃ ।
ಅಭಿವಾದ್ಯ ಮಹಾದೇವಮಾರುರೋಹಾಥ ಪುಷ್ಪಕಮ್ ॥
ಅನುವಾದ
ಹೀಗೆ ಭಗವಾನ್ ಶಂಕರನಿಂದ ನೂತನ ಹೆಸರು ಪಡೆದು ರಾವಣನು ಅವನಿಗೆ ನಮಸ್ಕರಿಸಿದನು. ಬಳಿಕ ಅವನು ಪುಷ್ಪಕ ವಿಮಾನವನ್ನೇರಿದನು.॥46॥
ಮೂಲಮ್ - 47
ತತೋ ಮಹೀತಲಂ ರಾಮ ಪರ್ಯಕ್ರಾಮತ ರಾವಣಃ ।
ಕ್ಷತ್ರಿಯಾನ್ ಸುಮಹಾವೀರ್ಯಾನ್ ಬಾಧಮಾನಸ್ತತಸ್ತತಃ ॥
ಅನುವಾದ
ಶ್ರೀರಾಮ! ಅನಂತರ ರಾವಣನು ಇಡೀ ಪೃಥಿವಿಯಲ್ಲಿ ದಿಗ್ವಿಜಯಕ್ಕಾಗಿ ಸಂಚರಿಸತೊಡಗಿದನು. ಅವನು ಎಲ್ಲೆಡೆಗಳಿಗೆ ಹೋಗಿ ಅನೇಕ ಮಹಾಪರಾಕ್ರಮಿಗಳನ್ನು ಪೀಡಿಸಿದನು.॥47॥
ಮೂಲಮ್ - 48
ಕೇಚಿತ್ತೇಜಸ್ವಿನಃ ಶೂರಾಃ ಕ್ಷತ್ರಿಯಾ ಯುದ್ಧದುರ್ಮದಾಃ ।
ತಚ್ಛಾಸನಮಕುರ್ವಂತೋ ವಿನೇಶುಃ ಸಪರಿಚ್ಛದಾಃ ॥
ಅನುವಾದ
ಅನೇಕ ತೇಜಸ್ವೀ ಕ್ಷತ್ರಿಯರು, ಶೂರವೀರ ರಣೋನ್ಮತ್ತರು ರಾವಣನ ಆಜ್ಞೆಯನ್ನು ಪಾಲಿಸದಿರಲು ಅವರೆಲ್ಲ ಸೈನ್ಯ ಪರಿವಾರ ಸಹಿತ ನಾಶವಾಗಿ ಹೋದರು.॥48॥
ಮೂಲಮ್ - 49
ಅಪರೇ ದುರ್ಜಯಂ ರಕ್ಷೋ ಜಾನಂತಃ ಪ್ರಾಜ್ಞಸಮ್ಮತಾಃ ।
ಜಿತಾಃ ಸ್ಮ ಇತ್ಯಭಾಷಂತ ರಾಕ್ಷಸಂ ಬಲದರ್ಪಿತಮ್ ॥
ಅನುವಾದ
ಬುದ್ಧಿವಂತರಾದ ಇತರ ಕ್ಷತ್ರಿಯರು ರಾಕ್ಷಸನನ್ನು ಅಜೇಯನೆಂದು ತಿಳಿದು, ಆ ಬಲಾಭಿಮಾನಿ ನಿಶಾಚರನ ಎದುರಿಗೆ ತಮ್ಮ ಪರಾಜಯವನ್ನು ಸ್ವೀಕರಿಸಿಕೊಂಡರು.॥49॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹದಿನಾರನೆಯ ಸರ್ಗ ಪೂರ್ಣವಾಯಿತು. ॥16॥