०१५ पुष्पक-प्राप्तिः

[ಹದಿನೈದನೆಯ ಸರ್ಗ]

ಭಾಗಸೂಚನಾ

ಮಣಿಭದ್ರ ಮತ್ತು ಕುಬೇರನ ಪರಾಜಯ, ರಾವಣನಿಂದ ಪುಷ್ಪಕ ವಿಮಾನದ ಅಪಹರಣ

ಮೂಲಮ್ - 1

ತತಸ್ತಾನ್ಲ್ಲಕ್ಷ್ಯ ವಿತ್ರಸ್ಥಾನ್ ಯಕ್ಷೇಂದ್ರಾಂಶ್ಚ ಸಹಸ್ರಶಃ ।
ಧನಾಧ್ಯಕ್ಷೋ ಮಹಾಯಕ್ಷಂ ಮಣಿಭದ್ರಮಥಾಬ್ರವೀತ್ ॥

ಅನುವಾದ

(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಧನಾಧ್ಯಕ್ಷನಾದ ಕುಬೇರನು ತನ್ನ ಕಡೆಯ ಸಾವಿರಾರು ಯಕ್ಷರು ಭಯಗೊಂಡು ಪಲಾಯನ ಮಾಡುತ್ತಿರುವುದನ್ನು ನೋಡಿ, ಮಣಿಭದ್ರನೆಂಬ ಮಹಾಯಕ್ಷನಲ್ಲಿ ಹೇಳಿದನು.॥1॥

ಮೂಲಮ್ - 2

ರಾವಣಂ ಜಹಿ ಯಕ್ಷೇಂದ್ರ ದುರ್ವೃತ್ತಂ ಪಾಪಚೇತಸಮ್ ।
ಶರಣಂ ಭವ ವೀರಾಣಾಂ ಯಕ್ಷಾಣಾಂ ಯುದ್ಧಶಾಲಿನಾಮ್ ॥

ಅನುವಾದ

ಯಕ್ಷಶ್ರೇಷ್ಠನೇ! ಪಾಪಾತ್ಮನಾದ ದುರಾಚಾರೀ ರಾವಣನನ್ನು ನೀನು ಕೊಂದು, ಯುದ್ಧದಲ್ಲಿ ಶೋಭಿತರಾದ ಯಕ್ಷರಿಗೆ ನೀನು ಶರಣ್ಯನಾಗಿ ಅವರನ್ನು ರಕ್ಷಿಸು.॥2॥

ಮೂಲಮ್ - 3

ಏವಮುಕ್ತೋ ಮಹಾಬಾಹುರ್ಮಣಿಭದ್ರಃ ಸುದುರ್ಜಯಃ ।
ವೃತೋ ಯಕ್ಷಸಹಸ್ರೈಸ್ತು ಚತುರ್ಭಿಃ ಸಮಯೋಧಯತ್ ॥

ಅನುವಾದ

ಅತ್ಯಂತ ದುರ್ಜಯ ವೀರನಾದ ಮಹಾಬಾಹು ಮಣಿಭದ್ರನು ಕುಬೇರನ ಅಪ್ಪಣೆ ಪಡೆದು ನಾಲ್ಕುಸಾವಿರ ಯಕ್ಷ ಸೈನ್ಯವನ್ನು ಜೊತೆಗೂಡಿ ಮಹಾದ್ವಾರಕ್ಕೆ ಬಂದು ರಾಕ್ಷಸರೊಡನೆ ಯುದ್ಧ ಮಾಡತೊಡಗಿದನು.॥3॥

ಮೂಲಮ್ - 4

ತೇ ಗದಾಮುಸಲಪ್ರಾಸೈಃ ಶಕ್ತಿತೋಮರಮುದ್ಗರೈಃ ।
ಅಭಿಘ್ನಂತಸ್ತದಾ ಯಕ್ಷಾ ರಾಕ್ಷಸಾನ್ ಸಮುಪಾದ್ರವನ್ ॥

ಅನುವಾದ

ಆಗ ಯಕ್ಷರು ಗದೆ, ಒನಕೆ, ಪ್ರಾಸ, ಶಕ್ತಿ, ತೋಮರ, ಮುದ್ಗರಗಳಿಂದ ಪ್ರಹಾರ ಮಾಡುತ್ತಾ ರಾಕ್ಷಸರ ಮೇಲೆ ಮುಗಿಬಿದ್ದರು.॥4॥

ಮೂಲಮ್ - 5

ಕುರ್ವಂತಸ್ತುಮುಲಂ ಯುದ್ಧಂ ಚರಂತಃ ಶ್ಯೇನವಲ್ಲಘು ।
ಬಾಢಂ ಪ್ರಯಚ್ಛ ನೇಚ್ಛಾಮಿ ದೀಯತಾಮಿತಿ ಭಾಷಿಣಃ ॥

ಅನುವಾದ

ಮಹಾಘೋರ ಯುದ್ಧಮಾಡುತ್ತಿದ್ದ ಅವರು ಗಿಡುಗ ಪಕ್ಷಿಯಂತೆ ತೀವ್ರಗತಿಯಿಂದ ಸಂಚರಿಸುತ್ತಾ, ‘ನನಗೆ ಯುದ್ಧದ ಅವಕಾಶ ಕೊಡು, ನಾನು ಇಲ್ಲಿಂದ ಹಿಂದೆಗೆಯಲಾರೆ, ನನಗೆ ನನ್ನ ಆಯುಧವನ್ನು ಕೊಡು’ ಎಂದು ಹೇಳುತ್ತಿದ್ದರು.॥5॥

ಮೂಲಮ್ - 6

ತತೋ ದೇವಾಃ ಸಗಂಧರ್ವಾ ಋಷಯೋ ಬ್ರಹ್ಮವಾದಿನಃ ।
ದೃಷ್ಟ್ವಾ ತತ್ತುಮುಲಂ ಯುದ್ಧಂ ಪರಂ ವಿಸ್ಮಯಮಾಗಮನ್ ॥

ಅನುವಾದ

ಆ ತುಮುಲಯುದ್ಧವನ್ನು ನೋಡಿ, ದೇವತೆಗಳು, ಗಂಧರ್ವರು, ಬ್ರಹ್ಮವಾದಿ ಋಷಿಗಳು ಭಾರೀ ಆಶ್ಚರ್ಯಚಕಿತರಾದರು.॥6॥

ಮೂಲಮ್ - 7

ಯಕ್ಷಾಣಾಂ ತು ಪ್ರಹಸ್ತೇನ ಸಹಸ್ರಂ ನಿಹತಂ ರಣೇ ।
ಮಹೋದರೇಣ ಚಾನಿಂದ್ಯಂ ಸಹಸ್ರಮಪರಂ ಹತಮ್ ॥

ಅನುವಾದ

ಆ ರಣರಂಗದಲ್ಲಿ ಪ್ರಹಸ್ತನು ಒಂದು ಸಾವಿರ ಯಕ್ಷರನ್ನು ಸಂಹರಿಸಿದನು. ಮತ್ತೆ ಮಹೋದರನು ಬೇರೆ ಒಂದು ಸಾವಿರ ಪ್ರಶಂಸನೀಯರಾದ ಯಕ್ಷರನ್ನು ವಿನಾಶಗೊಳಿಸಿದನು.॥7॥

ಮೂಲಮ್ - 8

ಕ್ರುದ್ಧೇನ ಚ ತದಾ ರಾಜನ್ ಮಾರಿಚೇನ ಯುಯುತ್ಸುನಾ ।
ನಿಮೇಷಾಂತರಮಾತ್ರೇಣ ದ್ವೇ ಸಹಸ್ರೇ ನಿಪಾತಿತೇ ॥

ಅನುವಾದ

ರಾಜನೇ! ಆಗ ಕುಪಿತನಾದ ರಣೋತ್ಸುಕ ಮಾರೀಚನು ಕಣ್ಣುರೆಪ್ಪೆ ಹೊಡೆಯುವಷ್ಟರಲ್ಲಿ ಉಳಿದ ಎರಡು ಸಾವಿರ ಯಕ್ಷರನ್ನು ಧರಾಶಾಯಿಯಾಗಿಸಿದನು.॥8॥

ಮೂಲಮ್ - 9

ಕ್ವ ಚ ಯಕ್ಷಾರ್ಜವಂ ಯುದ್ಧಂ ಕ್ವ ಚ ಮಾಯಾ ಬಲಾಶ್ರಯಮ್ ।
ರಕ್ಷಸಾಂ ಪುರುಷವ್ಯಾಘ್ರತೇನ ತೇಽಭ್ಯಧಿಕಾ ಯುಧಿ ॥

ಅನುವಾದ

ಪುರುಷಸಿಂಹನೇ! ಯಕ್ಷರ ಋಜುಮಾರ್ಗದ ಯುದ್ಧವೆಲ್ಲಿ? ರಾಕ್ಷಸರ ಮಾಯಾಮಯ ಸಂಗ್ರಾಮವೆಲ್ಲಿ? ರಾಕ್ಷಸರು ಮಾಯಾಬಲದಿಂದ ಯಕ್ಷರಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ದರು.॥9॥

ಮೂಲಮ್ - 10

ಧೂಮ್ರಾಕ್ಷೇಣ ಸಮಾಗಮ್ಯ ಮಣಭದ್ರೋ ಮಹಾರಣೇ ।
ಮುಸಲೇನೋರಸಿ ಕ್ರೋಧಾತ್ತಾಡಿತೋ ನ ಚ ಕಂಪಿತಃ ॥

ಅನುವಾದ

ಆ ಮಹಾಸಂಗ್ರಾಮದಲ್ಲಿ ಧೂಮ್ರಾಕ್ಷನು ಬಂದು ಕ್ರೋಧದಿಂದ ಮಣಿಭದ್ರನ ಎದೆಗೆ ಮುಸಲದಿಂದ ಪ್ರಹರಿಸಿದನು. ಆದರೆ ಇದರಿಂದ ಅವನು ವಿಚಲಿತನಾಗಲಿಲ್ಲ.॥10॥

ಮೂಲಮ್ - 11

ತತೋ ಗದಾಂ ಸಮಾವಿಧ್ಯ ಮಣಿಭದ್ರೇಣ ರಾಕ್ಷಸಃ ।
ಧೂಮ್ರಾಕ್ಷಸ್ತಾಡಿತೋ ಮೂರ್ಧ್ನಿ ವಿಹ್ವಲಃ ಸ ಪಪಾತ ಹ ॥

ಅನುವಾದ

ಮತ್ತೆ ಮಣಿಭದ್ರನೂ ಗದೆಯನ್ನು ತಿರುವುತ್ತಾ ರಾಕ್ಷಸ ಧೂಮ್ರಾಕ್ಷನ ತಲೆಗೆ ಹೊಡೆದನು. ಅದರ ಏಟಿನಿಂದ ಧೂಮ್ರಾಕ್ಷನು ವ್ಯಾಕುಲನಾಗಿ ನೆಲಕ್ಕೆ ಬಿದ್ದುಬಿಟ್ಟನು.॥11॥

ಮೂಲಮ್ - 12

ಧೂಮ್ರಾಕ್ಷಂ ತಾಡಿತಂ ದೃಷ್ಟ್ವಾ ಪತಿತಂ ಶೋಣಿತೋಕ್ಷಿತಮ್ ।
ಅಭ್ಯಧಾವತ ಸಂಗ್ರಾಮೇ ಮಣಿಭದ್ರಂ ದಶಾನನಃ ॥

ಅನುವಾದ

ಗದೆಯ ಏಟಿನಿಂದ ಗಾಯಗೊಂಡು ರಕ್ತದಿಂದ ತೊಯ್ದು ಹೋಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಧೂಮ್ರಾಕ್ಷನನ್ನು ನೋಡಿ, ದಶಮುಖ ರಾವಣನು ಯುದ್ಧದಲ್ಲಿ ಮಣಿಭದ್ರನನ್ನು ಆಕ್ರಮಿಸಿದನು.॥12॥

ಮೂಲಮ್ - 13

ಸಂಕ್ರುದ್ಧಮಭಿಧಾವಂತಂ ಮಣಿಭದ್ರೋ ದಶಾನನಮ್ ।
ಶಕ್ತಿಭಿಸ್ತಾಡಯಾಮಾಸ ತಿಸೃಭಿರ್ಯಕ್ಷ ಪುಂಗವಃ ॥

ಅನುವಾದ

ಕ್ರೋಧಗೊಂಡು ಆಕ್ರಮಿಸುತ್ತಿದ್ದ ರಾವಣನನ್ನು ನೋಡಿ ಯಕ್ಷಶ್ರೇಷ್ಠ ಮಣಿಭದ್ರನು ಅವನ ಮೇಲೆ ಮೂರು ಶಕ್ತಿಗಳಿಂದ ಪ್ರಹಾರ ಮಾಡಿದನು.॥13॥

ಮೂಲಮ್ - 14

ತಾಡಿತೋ ಮಣಿಭದ್ರಸ್ಯ ಮುಕುಟೇ ಪ್ರಾಹರದ್ರಣೇ ।
ತಸ್ಯ ತೇನ ಪ್ರಹಾರೇಣ ಮುಕುಟಂ ಪಾರ್ಶ್ವಮಾಗತಮ್ ॥

ಅನುವಾದ

ಏಟುತಿಂದ ರಾವಣನು ಮಣಿಭದ್ರನ ಕಿರೀಟದ ಮೇಲೆ ಪ್ರಹರಿಸಲು, ಅದರಿಂದ ಅವನ ಮುಕುಟ ಜಾರಿ ಪಕ್ಕಕ್ಕೆ ವಾಲಿಹೋಯಿತು.॥14॥

ಮೂಲಮ್ - 15

ತತಃ ಪ್ರಭೃತಿ ಯಕ್ಷೋಽಸೌ ಪಾರ್ಶ್ವಮೌಲಿರಭೂತ್ಕಿಲ ।
ತಸ್ಮಿಂಸ್ತು ವಿಮುಖೀಭೂತೋ ಮಣಿಭದ್ರೇ ಮಹಾತ್ಮನಿ ।
ಸಂನಾದಃ ಸುಮಹಾನ್ ರಾಜಂಸ್ತಸ್ಮಿನ್ ಶೈಲೇ ವ್ಯವರ್ಧತ ॥

ಅನುವಾದ

ಅಂದಿನಿಂದ ಮಣಿಭದ್ರಯಕ್ಷನು ಪಾರ್ಶ್ವವೌಲಿ ಎಂದು ಪ್ರಸಿದ್ಧನಾದನು. ಮಣಿಭದ್ರನೂ ಯುದ್ಧದಿಂದ ಓಡಿಹೋದನು. ರಾಜನೇ! ಅವನು ಯುದ್ಧದಿಂದ ವಿಮುಖನಾದಾಗ ಆ ಪರ್ವದಲ್ಲಿ ರಾಕ್ಷಸರ ಸಿಂಹಗರ್ಜನೆ ಎಲ್ಲೆಡೆ ತುಂಬಿಹೋಯಿತು.॥15॥

ಮೂಲಮ್ - 16

ತತೋ ದೂರಾತ್ಪ್ರದದೃಶೇ ಧನಾಧ್ಯಕ್ಷೋ ಗದಾಧರಃ ।
ಶುಕ್ರಪ್ರೌಷ್ಠಪದಾಭ್ಯಾಂ ಚ ಪದ್ಮಶಂಖಸಮಾವೃತಃ ॥

ಅನುವಾದ

ಆಗಲೇ ಧನಾಧ್ಯಕ್ಷ ಗದಾಧಾರಿ ಕುಬೇರನು ಶುಕ್ರ ಮತ್ತು ಪ್ರೌಷ್ಠಪದ ಎಂಬ ಮಂತ್ರಿಗಳೊಂದಿಗೆ ಮತ್ತು ಶಂಖ, ಪದ್ಮರೆಂಬ ಧನದ ಅಧಿಷ್ಠಾತೃ ದೇವತೆಗಳೊಂದಿಗೆ ಬರುವುದು ಕಾಣಿಸಿತು.॥16॥

ಮೂಲಮ್ - 17

ಸ ದೃಷ್ಟ್ವಾ ಭ್ರಾತರಂ ಸಂಖ್ಯೇ ಶಾಪಾದ್ ವಿಭ್ರಷ್ಟಗೌರವಮ್ ।
ಉವಾಚ ವಚನಂ ಧೀಮಾನ್ಯುಕ್ತಂ ಪೈತಾಮಹೇ ಕುಲೇ ॥

ಅನುವಾದ

ವಿಶ್ರವಾ ಮುನಿಯ ಶಾಪದಿಂದ ಕ್ರೂರ ಪ್ರಕೃತಿಯವನಾದ್ದರಿಂದ, ಗುರು-ಹಿರಿಯರಿಗೆ ವಂದಿಸುವುದಾಗಲೀ, ಶಿಷ್ಟಾಚಾರದಿಂದ ವಂಚಿತನಾದ ತಮ್ಮನಾದ ರಾವಣನನ್ನು ನೋಡಿ ಧೀಮಂತ ಕುಬೇರನು ಬ್ರಹ್ಮದೇವರ ಕುಲದಲ್ಲಿ ಹುಟ್ಟಿದ ಪುರುಷನಿಗೆ ಯೋಗ್ಯವಾದ ಮಾತನ್ನು ಹೇಳಿದನು.॥17॥

ಮೂಲಮ್ - 18

ಯನ್ಮಯಾ ವಾರ್ಯಮಾಣಸ್ತ್ವಂ ನಾವಗಚ್ಛಸಿ ದುರ್ಮತೇಃ ।
ಪಶ್ಚಾದಸ್ಯ ಫಲಂ ಪ್ರಾಪ್ಯ ಜ್ಞಾಸ್ಯಸೇ ನಿರಯಂ ಗತಃ ॥

ಅನುವಾದ

ದುರ್ಬುದ್ಧಿ ದಶಗ್ರೀವನೇ! ಕುತ್ಸಿತ ಕಾರ್ಯವನ್ನು ಮಾಡಬೇಡವೆಂದು ನಾನೆಷ್ಟು ತಡೆದರೂ ನೀನು ಅದನ್ನು ಅಲಕ್ಷಿಸುತ್ತಿರುವೆ. ಮುಂದೆ ಈ ಕೆಟ್ಟಕರ್ಮದ ಫಲ ಪಡೆದಾಗ, ನರಕಕ್ಕೆ ಹೋದಾಗ ನನ್ನ ಮಾತು ನಿನಗೆ ತಿಳಿದೀತು.॥18॥

ಮೂಲಮ್ - 19

ಯೋ ಹಿ ಮೋಹಾದ್ವಿಷಂ ಪೀತ್ವಾ ನಾವಗಚ್ಛತಿ ದುರ್ಮತಿಃ ।
ಸ ತಸ್ಯ ಪರಿಣಾಮಾಂತೇ ಜಾನೀತೇ ಕರ್ಮಣಃ ಫಲಮ್ ॥

ಅನುವಾದ

ದುರ್ಬುದ್ಧಿಯ ಮನುಷ್ಯನು ಮೋಹದಿಂದ ವಿಷ ಕುಡಿದರೂ ಅದನ್ನು ವಿಷವೆಂದು ತಿಳಿಯುವುದಿಲ್ಲ. ಅದರ ಪರಿಣಾಮ ಪ್ರಾಪ್ತವಾದಾಗ ಅವನಿಗೆ ತಾನು ಮಾಡಿದ ಆ ಕರ್ಮದ ಫಲ ತಿಳಿಯುತ್ತದೆ.॥19॥

ಮೂಲಮ್ - 20

ದೈವತಾನಿ ನ ನಂದಂತಿ ಧರ್ಮಯುಕ್ತೇನ ಕೇನಚಿತ್ ।
ಯೇನ ತ್ವಮೀದೃಶಂ ಭಾವಂ ನೀತಸ್ತಚ್ಚ ನ ಬುದ್ಧ್ಯಸೇ ॥

ಅನುವಾದ

ನಿನ್ನ ಯಾವುದೇ ವ್ಯವಹಾರ ಧರ್ಮಯುಕ್ತವೆಂದು ನೀನು ತಿಳಿದಿದ್ದರೂ ಅದರಿಂದ ದೇವತೆಗಳು ಸಂತೋಷ ಪಡುವುದಿಲ್ಲ. ಅದಕ್ಕಾಗಿ ನೀನು ಇಂತಹ ಕ್ರೂರಭಾವವನ್ನು ಹೊಂದಿರುವೆ. ಆದರೆ ಈ ಮಾತು ನಿನಗೆ ಅರಿವಿಗೆ ಬರುವುದಿಲ್ಲವಲ್ಲ.॥20॥

ಮೂಲಮ್ - 21

ಮಾತರಂ ಪಿತರಂ ವಿಪ್ರಮಾಚಾರ್ಯಂ ಚಾವಮನ್ಯತೇ ।
ಸ ಪಶ್ಯತಿ ಫಲಂ ತಸ್ಯ ಪ್ರೇತರಾಜವಶಂ ಗತಃ ॥

ಅನುವಾದ

ತಂದೆ-ತಾಯಿ, ಬ್ರಾಹ್ಮಣರನ್ನು, ಆಚಾರ್ಯನನ್ನು ಅಪಮಾನ ಮಾಡುವವನು ಯಮರಾಜನಿಗೆ ವಶನಾಗಿ ಆ ಪಾಪದ ಫಲವನ್ನು ಅನುಭವಿಸುತ್ತಾನೆ.॥21॥

ಮೂಲಮ್ - 22

ಅಧ್ರುವೇ ಹಿ ಶರೀರೇ ಯೋ ನ ಕರೋತಿ ತಪೋಽರ್ಜನಮ್ ।
ಸ ಪಶ್ಯಾತ್ತಪ್ಯತೇ ಮೂಢೋ ಮೃತೋ ಗತ್ವಾತ್ಮನೋ ಗತಿಮ್ ॥

ಅನುವಾದ

ಕ್ಷಣಭಂಗುರವಾದ ಈ ಶರೀರವನ್ನು ಪಡೆದು, ತಪಸ್ಸನ್ನು ಗಳಿಸದ ಮೂರ್ಖನು ಸತ್ತ ಬಳಿಕ ತನ್ನ ದುಷ್ಕರ್ಮಗಳ ಫಲ ಸಿಕ್ಕಿದಾಗ ಪಶ್ಚಾತ್ತಾಪಪಡುತ್ತಾನೆ.॥22॥

ಮೂಲಮ್ - 23

ಧರ್ಮಾದ್ರಾಜ್ಯಂ ಧನಂ ಸೌಖ್ಯಮಧರ್ಮಾದ್ದುಃಖಮೇವ ಚ ।
ತಸ್ಮಾದ್ಧರ್ಮಂ ಸುಖಾರ್ಥಾಯ ಕುರ್ಯಾತ್ಪಾಪಂ ವಿಸರ್ಜಯೇತ್ ॥

ಅನುವಾದ

ಧರ್ಮದಿಂದ ರಾಜ್ಯ, ಧನ, ಸುಖದ ಪ್ರಾಪ್ತಿ ಯಾಗುತ್ತದೆ. ಅಧರ್ಮದಿಂದ ಕೇವಲ ದುಃಖವೇ ಭೋಗಿಸಬೇಕಾಗುತ್ತದೆ; ಆದ್ದರಿಂದ ಸುಖಕ್ಕಾಗಿ ಧರ್ಮವನ್ನು ಆಚರಿಸು, ಪಾಪವನ್ನು ಸರ್ವಥಾ ತ್ಯಜಿಸು.॥23॥

ಮೂಲಮ್ - 24

ಪಾಪಸ್ಯ ಹಿ ಫಲಂ ದುಃಖಂ ತದ್ಭೋಕ್ತವ್ಯಮಿಹಾತ್ಮನಾ ।
ತಸ್ಮಾದಾತ್ಮಾಪಘಾತಾರ್ಥಂ ಮೂಢಃ ಪಾಪಂ ಕರಿಷ್ಯತಿ ॥

ಅನುವಾದ

ಪಾಪದ ಫಲ ಕೇವಲ ದುಃಖವಾಗಿದೆ, ಅದನ್ನು ಸ್ವತಃ ಇಲ್ಲೇ ಭೋಗಿಸಬೇಕಾಗುತ್ತದೆ. ಆದ್ದರಿಂದ ಪಾಪ ಮಾಡುವ ಮೂಢನು ಸ್ವತಃ ತನ್ನನ್ನೇ ಕೊಂದುಕೊಂಡಂತೆ ಆಗಿದೆ.॥24॥

ಮೂಲಮ್ - 25

ಕಸ್ಯಚಿನ್ನ ಹಿ ದುರ್ಬುದ್ಧೇಶ್ಛಂದತೋ ಜಾಯತೇ ಮತಿಃ ।
ಯಾದೃಶಂ ಕುರುತೇ ಕರ್ಮ ತಾದೃಶಂ ಫಲಮಶ್ನುತೇ ॥

ಅನುವಾದ

ಶುಭ ಕರ್ಮದ ಅನುಷ್ಠಾನ, ಗುರುಗಳ ಸೇವೆ ಮಾಡದೆ ದುರ್ಬುದ್ಧಿ ಪುರುಷನಿಗೆ ಉತ್ತಮ ಬುದ್ಧಿಯ ಪ್ರಾಪ್ತಿಯಾಗುವುದಿಲ್ಲ. ಅವನು ಮಾಡಿದ ಕರ್ಮದಂತೆ ಫಲ ಅನುಭವಿಸುತ್ತಾನೆ.॥25॥

ಮೂಲಮ್ - 26

ಋದ್ಧಿ ರೂಪಂ ಬಲಂ ಪುತ್ರಾನ್ವಿತ್ತಂ ಶೂರತ್ವಮೇವ ಚ ।
ಪ್ರಾಪ್ನುವಂತಿ ನರಾ ಲೋಕೇ ನಿರ್ಜಿತಂ ಪುಣ್ಯಕರ್ಮಭಿಃ ॥

ಅನುವಾದ

ಜಗತ್ತಿನಲ್ಲಿ ಸಮೃದ್ಧಿ, ಸುಂದರ ರೂಪ, ಬಲ, ವೈಭವ, ಶೌರ್ಯ, ಪುತ್ರಾದಿಗಳ ಪ್ರಾಪ್ತಿ ಪುಣ್ಯಕರ್ಮಗಳ ಅನುಷ್ಠಾನದಿಂದಲೇ ಮನುಷ್ಯರಿಗೆ ಸಿಗುತ್ತದೆ.॥26॥

ಮೂಲಮ್ - 27

ಏವಂ ನಿರಯಗಾಮೀ ತ್ವಂ ಯಸ್ಯ ತೇ ಮತಿರೀದೃಶೀ ।
ನ ತ್ವಾಂ ಸಮಭಿಭಾಷಿಷ್ಯೇಽಸದ್ವತ್ತೇಷ್ವೇಷ ನಿರ್ಣಯಃ ॥

ಅನುವಾದ

ಹೀಗೆಯೇ ನಿನ್ನ ದುಷ್ಕರ್ಮದಿಂದಾಗಿ ನಿನಗೂ ನರಕಕ್ಕೆ ಹೋಗಬೇಕಾದೀತು; ಏಕೆಂದರೆ ನಿನ್ನ ಬುದ್ಧಿ ಪಾಪಾಸಕ್ತವಾಗಿದೆ. ದುರಾಚಾರಿಗಳಲ್ಲಿ ಮಾತನಾಡಬಾರದೆಂದು ಶಾಸ್ತ್ರದ ನಿರ್ಣಯವಾಗಿದೆ. ಆದ್ದರಿಂದ ನಾನೂ ಈಗ ನಿನ್ನಲ್ಲಿ ಯಾವ ಮಾತನ್ನೂ ಆಡುವುದಿಲ್ಲ.॥27॥

ಮೂಲಮ್ - 28

ಏವಮುಕ್ತಾಸ್ತತಸ್ತೇನ ತಸ್ಯಾಮಾತ್ಯಾಃ ಸಮಾಹತಾಃ ।
ಮಾರೀಚಪ್ರಮುಖಾಃ ಸರ್ವೇ ವಿಮುಖಾ ವಿಪ್ರದುದ್ರುವುಃ ॥

ಅನುವಾದ

ಇದೇ ಮಾತನ್ನು ಅವನು ರಾವಣನ ಮಂತ್ರಿಗಳಲ್ಲಿಯೂ ಹೇಳಿದನು. ಮತ್ತೆ ಅವರ ಮೇಲೆ ಶಸ್ತ್ರಗಳಿಂದ ಪ್ರಹಾರ ಮಾಡಿದನು. ಇದರಿಂದ ಗಾಯಗೊಂಡ ಮಾರೀಚಾದಿ ಎಲ್ಲ ರಾಕ್ಷಸರು ಯುದ್ಧದಿಂದ ಓಡಿಹೋದರು.॥28॥

ಮೂಲಮ್ - 29

ತತಸ್ತೇನ ದಶಗ್ರೀವೋ ಯಕ್ಷೇಂದ್ರೇಣ ಮಹಾತ್ಮನಾ ।
ಗದಯಾಭಿಹತೋ ಮೂರ್ಧ್ನಿ ನ ಚ ಸ್ಥಾನಾತ್ಪ್ರಕಂಪಿತಃ ॥

ಅನುವಾದ

ಬಳಿಕ ಮಹಾತ್ಮಾ ಯಕ್ಷರಾಜ ಕುಬೇರನು ತನ್ನ ಗದೆಯಿಂದ ರಾವಣನ ಮಸ್ತಕದಲ್ಲಿ ಪ್ರಹರಿಸಿದನು. ಅದರಿಂದ ನೋವಾದರೂ ತನ್ನ ಸ್ಥಳದಿಂದ ವಿಚಲಿತನಾಗಲಿಲ್ಲ.॥29॥

ಮೂಲಮ್ - 30

ತತಸ್ತೌ ರಾಮ ನಿಘ್ನಂತೌ ತದಾನ್ಯೋನ್ಯಂ ಮಹಾಮೃಧೇ ।
ನ ವಿಹ್ವಲೌ ನ ಚ ಶ್ರಾಂತೌ ತಾವುಭೌ ಯಕ್ಷರಾಕ್ಷಸೌ ॥

ಅನುವಾದ

ಶ್ರೀರಾಮಾ! ಅನಂತರ ಕುಬೇರ ಮತ್ತು ರಾವಣ ಯಕ್ಷ-ರಾಕ್ಷಸರು ಯುದ್ಧದಲ್ಲಿ ಪರಸ್ಪರ ಪ್ರಹಾರ ಮಾಡತೊಡಗಿದರು; ಆದರೆ ಇಬ್ಬರಲ್ಲಿ ಯಾರೂ ಗಾಬರಿಪಡೆದೆ, ಬಳಲುತ್ತಿರಲಿಲ್ಲ.॥30॥

ಮೂಲಮ್ - 31

ಆಗ್ನೇಯಮಸ್ತ್ರಂ ತಸ್ಮೈ ಸ ಮುಮೋಚ ಧನದಸ್ತದಾ ।
ರಾಕ್ಷಸೇಂದ್ರೋ ವಾರುಣೇನ ತದಸ್ತ್ರಂ ಪ್ರತ್ಯವಾರಯತ್ ॥

ಅನುವಾದ

ಆಗ ಕುಬೇರನು ರಾವಣನ ಮೇಲೆ ಆಗ್ನೇಯಾಸವನ್ನು ಪ್ರಯೋಗಿಸಿದನು. ಆದರೆ ರಾವಣನು ಅದನ್ನು ವರುಣಾಸ್ತ್ರದಿಂದ ಶಾಂತಗೊಳಿಸಿದನು.॥31॥

ಮೂಲಮ್ - 32

ತತೋ ಮಾಯಾಂ ಪ್ರವಿಷ್ಟೋಽಸೌ ರಾಕ್ಷಸೀಂ ರಾಕ್ಷಸೇಶ್ವರಃ ।
ರೂಪಾಣಾಂ ಶತಸಾಹಸ್ರಂ ವಿನಾಶಾಯ ಚಕಾರ ಚ ॥

ಅನುವಾದ

ರಾಕ್ಷಸರಾಜನು ರಾಕ್ಷಸೀ ಮಾಯೆಯನ್ನು ಆಶ್ರಯಿಸಿ ಕುಬೇರನನ್ನು ನಾಶ ಮಾಡಲು ಲಕ್ಷಾವಧಿ ರೂಪಗಳನ್ನು ಧರಿಸಿದನು.॥32॥

ಮೂಲಮ್ - 33

ವ್ಯಾಘ್ರೋ ವರಾಹೋ ಜೀಮೂತಃ ಪರ್ವತಃ ಸಾಗರೋ ದ್ರುಮಃ ।
ಯಕ್ಷೋ ದೈತ್ಯಸ್ವರೂಪೀ ಚ ಸೋಽದೃಶ್ಯತ ದಶಾನನಃ ॥

ಅನುವಾದ

ಆಗ ದಶಮುಖನು ಹುಲಿ, ಹಂದಿ, ಮೇಘ, ಪರ್ವತ, ಸಮುದ್ರ, ವೃಕ್ಷ, ಯಕ್ಷ, ದೈತ್ಯ ಹೀಗೆ ಎಲ್ಲ ರೂಪಗಳಲ್ಲಿ ಕಾಣಿಸಿಕೊಂಡನು.॥33॥

ಮೂಲಮ್ - 34½

ಬಹೂನಿ ಚ ಕರೋತಿ ಸ್ಮ ದೃಶ್ಯಂತೇ ನ ತ್ವಸೌ ತತಃ ।
ಪ್ರತಿಗೃಹ್ಯ ತತೋ ರಾಮ ಮಹದಸ್ತ್ರಂ ದಶಾನನಃ ॥
ಜಘಾನ ಮೂರ್ಧ್ನಿ ಧನದಂ ವ್ಯಾವಿದ್ಧ್ಯ ಮಹತೀಂ ಗದಾಮ್ ।

ಅನುವಾದ

ಹೀಗೆ ಅವನು ಅನೇಕ ರೂಪಗಳನ್ನು ಪ್ರಕಟಪಡಿಸುತ್ತಾ, ಅವನು ಅದೃಶ್ಯನಾಗಿದ್ದನು. ಶ್ರೀರಾಮಾ! ಬಳಿಕ ದಶಮುಖನು ಒಂದು ದೊಡ್ಡ ಗದೆಯನ್ನೆತ್ತಿ ತಿರುಗಿಸುತ್ತಾ ಕುಬೇರನ ತಲೆಗೆ ಹೊಡೆದನು.॥34½॥

ಮೂಲಮ್ - 35½

ಏವಂ ಸ ತೇನಾಭಿಹತೋ ವಿಹ್ವಲಃ ಶೋಣಿತೋಕ್ಷಿತಃ ॥
ಕೃತ್ತಮೂಲ ಇವಾಶೋಕೋ ನಿಪಪಾತ ಧನಾಧಿಪಃ ।

ಅನುವಾದ

ಈ ಪ್ರಕಾರ ರಾವಣನಿಂದ ಆಹತನಾದ ಧನಾಧಿಪತಿ ಕುಬೇರನು ರಕ್ತದಿಂದ ತೊಯ್ದುಹೋಗಿ ಬೇರು ಕಡಿದ ವೃಕ್ಷದಂತೆ ನೆಲಕ್ಕೆ ಉರುಳಿದನು.॥35½॥

ಮೂಲಮ್ - 36½

ತತಃ ಪದ್ಮಾದಿಭಿಸ್ತತ್ರ ನಿಧಿಭಿಃ ಸ ತದಾ ವೃತಃ ॥
ಧನದೋಽಚ್ಛ್ವಾಸಿತಸ್ತೈಸ್ತು ವನಮಾನೀಯ ನಂದನಮ್ ।

ಅನುವಾದ

ಅನಂತರ ಪದ್ಮಾದಿನಿಧಿಗಳ ಅಧಿಷ್ಠಾತೃ ದೇವತೆಗಳು ಅವನನ್ನೆತ್ತಿಕೊಂಡು ನಂದನವನದಲ್ಲಿ ಉಪಚಾರಗೈದರು.॥36½॥

ಮೂಲಮ್ - 37½

ನಿರ್ಜಿತ್ಯ ರಾಕ್ಷಸೇಂದ್ರಸ್ತಂ ಧನದಂ ಹೃಷ್ಟಮಾನಸಃ ॥
ಪುಷ್ಪಕಂತಸ್ಯ ಜಗ್ರಾಹ ವಿಮಾನಂ ಜಯಲಕ್ಷಣಮ್ ।

ಅನುವಾದ

ಹೀಗೆ ಕುಬೇರನನ್ನು ಗೆದ್ದು ರಾಕ್ಷಸರಾಜ ರಾವಣನು ಮನಸ್ಸಿನಲ್ಲಿ ಸಂತೋಷಗೊಂಡು, ತನ್ನ ವಿಜಯದ ಚಿಹ್ನೆಯಾಗಿ ಪುಷ್ಪಕ ವಿಮಾನವನ್ನು ತನ್ನ ಅಧಿಕಾರದಲ್ಲಿ ಮಾಡಿಕೊಂಡನು.॥37½॥

ಮೂಲಮ್ - 38½

ಕಾಂಚನಸ್ತಂಭ ಸಂವೀತಂ ವೈದೂರ್ಯಮಣಿ ತೋರಣಮ್ ॥
ಮುಕ್ತಾಜಾಲ ಪರಿಚ್ಛನ್ನಂ ಸರ್ವಕಾಲಫಲದ್ರುಮಮ್ ।

ಅನುವಾದ

ಆ ವಿಮಾನದಲ್ಲಿ ಚಿನ್ನದ ಕಂಬಗಳು, ವೈಢೂರ್ಯದ ಬಾಗಿಲುಗಳು ಇದ್ದು, ಸುತ್ತಲೂ ಮುತ್ತಿನ ಜಾಲರಿಗಳಿಂದ ಮುಚ್ಚಿಹೋಗಿತ್ತು. ಅದರೊಳಗೆ ಎಲ್ಲ ಋತುಗಳಲ್ಲಿ ಫಲ ಕೊಡುವ ವೃಕ್ಷಗಳು ನೆಡಲ್ಪಟ್ಟಿತ್ತು.॥38½॥

ಮೂಲಮ್ - 39½

ಮನೋಜವಂ ಕಾಮಗಮಂ ಕಾಮರೂಪಂ ವಿಹಂಗಮಮ್ ॥
ಮಣಿಕಾಂಚನಸೋಪಾನಂ ತಪ್ತಕಾಂಚನ ವೇದಿಕಮ್ ।

ಅನುವಾದ

ಮನೋವೇಗದ ಅದು ಅದರಲ್ಲಿ ಕುಳಿತಿರುವವರ ಇಚ್ಛೆಗನುಸಾರ ಎಲ್ಲೆಡೆ ಸಂಚರಿಸುತ್ತಿತ್ತು. ಚಾಲಕ ಹೇಳಿದಂತೆ ದೊಡ್ಡ-ಸಣ್ಣ ರೂಪ ಧರಿಸುತ್ತಿತ್ತು. ಆ ಆಕಾಶಚಾರೀ ವಿಮಾನದಲ್ಲಿ ಮಣಿ ಮತ್ತು ಸುವರ್ಣದ ಮೆಟ್ಟಲುಗಳು ಹಾಗೂ ವೇದಿಕೆಗಳಿದ್ದವು.॥39½॥

ಮೂಲಮ್ - 40½

ದೇವೋಪವಾಹ್ಯಮಕ್ಷಯ್ಯಂ ಸದಾ ದೃಷ್ಟಿಮನಃಸುಖಮ್ ॥
ಬಹ್ವಾಶ್ಚರ್ಯಂ ಭಕ್ತಿಚಿತ್ರಂ ಬ್ರಹ್ಮಣಾ ಪರಿನಿರ್ಮಿತಮ್ ।

ಅನುವಾದ

ಅದು ದೇವತೆಗಳ ವಾಹನವಾಗಿದ್ದು, ನೋಡಲು ಸುಂದರ ಮತ್ತು ಚಿತ್ತವನ್ನು ಪ್ರಸನ್ನಗೊಳಿಸುತ್ತಿತ್ತು. ಅದರೊಳಗೆ ಅನೇಕ ರೀತಿಯ ಆಶ್ಚರ್ಯಕರ ಚಿತ್ರಗಳಿದ್ದವು. ಅದರ ಗೋಡೆಗಳಲ್ಲಿ ವಿಧ-ವಿಧದ ನಕ್ಷೆಗಳನ್ನು ಬಿಡಿಸಿದ್ದರು. ಅದರ ವಿಚಿತ್ರ ಶೋಭೆ ಇತ್ತು. ವಿಶ್ವಕರ್ಮನು ಅದನ್ನು ನಿರ್ಮಿಸಿದ್ದನು.॥40½॥

(ಶ್ಲೋಕ 41 - 43)

ಮೂಲಮ್

ನಿರ್ಮಿತಂ ಸರ್ವಕಾಮೈಸ್ತು ಮನೋಹರಮನುತ್ತಮಮ್ ॥
ನ ತು ಶೀತಂ ನ ಚೋಷ್ಣಂ ಚ ಸರ್ವರ್ತುಸುಖದಂ ಶುಭಮ್ ।
ಸ ತಂ ರಾಜಾ ಸಮಾರುಹ್ಯ ಕಾಮಗಂ ವೀರ್ಯ ನಿರ್ಜಿತಮ್ ॥
ಜಿತಂ ತ್ರಿಭುವನಂ ಮೇನೇ ದರ್ಪೋತ್ಸೇಕಾತ್ಸುದುರ್ಮತಿಃ ।
ಜಿತ್ವಾ ವೈಶ್ರವಣಂ ದೇವಂ ಕೈಲಾಸಾತ್ ಸಮವಾತರತ್ ॥

ಅನುವಾದ

ಅದು ಎಲ್ಲ ರೀತಿಯ ಮನೋವಾಂಛಿತ ವಸ್ತುಗಳಿಂದ ಸಂಪನ್ನವಾಗಿ, ಮನೋಹರ ಹಾಗೂ ಪರಮೋತ್ತಮವಾಗಿತ್ತು. ಹೆಚ್ಚು ತಂಪು, ಹೆಚ್ಚು ಬಿಸಿಯಾಗಿರದೆ ಎಲ್ಲ ಋತುಗಳಲ್ಲಿ ವಿಶ್ರಾಂತಿ ಕೊಡುವ ಮಂಗಲಕಾರಿಯಾಗಿತ್ತು. ತನ್ನ ಪರಾಕ್ರಮದಿಂದ ಗೆದ್ದಿರುವ ಆ ಇಚ್ಛಾನುಸಾರ ನಡೆಯುವ ವಿಮಾನದಲ್ಲಿ ಆರೂಢನಾಗಿ, ಅತ್ಯಂತ ದುಷ್ಟಬುದ್ಧಿಯ ರಾವಣನ ಅಹಂಕಾರ ಹೆಚ್ಚಿ ನಾನು ಮೂರು ಲೋಕಗಳನ್ನು ಗೆದ್ದೆ ಎಂದು ತಿಳಿಯತೊಡಗಿದನು. ಹೀಗೆ ವೈಶ್ರವಣನನ್ನು ಪರಾಜಿತಗೊಳಿಸಿ ಕೈಲಾಸದಿಂದ ಕೆಳಗಿಳಿದನು.॥41-43॥

ಮೂಲಮ್ - 44

ಸ ತೇಜಸಾ ವಿಪುಲಮವಾಪ್ಯ ತಂ ಜಯಂ
ಪ್ರತಾಪವಾನ್ ವಿಮಲ ಕಿರೀಟ ಹಾರವಾನ್ ।
ರರಾಜ ವೈ ಪರಮವಿಮಾನಮಾಸ್ಥಿತೋ
ನಿಶಾಚರಃ ಸಹಸಿ ಗತೋ ಯಥಾನಲಃ ॥

ಅನುವಾದ

ನಿರ್ಮಲ ಕಿರೀಟ ಹಾರಗಳಿಂದ ವಿಭೂಷಿತನಾದ ಆ ಪ್ರತಾಪಿ ನಿಶಾಚರನು ತನ್ನ ತೇಜದಿಂದ ಆ ಮಹಾವಿಜಯವನ್ನು ಪಡೆದು, ಆ ಉತ್ತಮ ವಿಮಾನದಲ್ಲಿ ಆರೂಢನಾಗಿ ಯಜ್ಞಮಂಟಪದಲ್ಲಿ ಪ್ರಜ್ವಲಿತ ಯಜ್ಞನಾರಾಯಣನಂತೆ ಶೋಭಿಸತೊಡಗಿದನು.॥44॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹದಿನೈದನೆಯ ಸರ್ಗ ಪೂರ್ಣವಾಯಿತು. ॥15॥