[ಹದಿನಾಲ್ಕನೆಯ ಸರ್ಗ]
ಭಾಗಸೂಚನಾ
ಮಂತ್ರಿಗಳ ಸಹಿತ ಯಕ್ಷರ ಮೇಲೆ ರಾವಣನ ಆಕ್ರಮಣ ಮತ್ತು ಯಕ್ಷರ ಪರಾಜಯ
ಮೂಲಮ್ - 1
ತತಃ ಸ ಸಚಿವೈಃ ಸಾರ್ಧಂ ಷಡ್ಭಿರ್ನಿತ್ಯಬಲೋದ್ಧತಃ ।
ಮಹೋದರ ಪ್ರಹಸ್ತಾಭ್ಯಾಂ ಮಾರೀಚ ಶುಕಸಾರಣೈಃ ॥
ಮೂಲಮ್ - 2
ಧೂಮ್ರಾಕ್ಷೇಣ ಚ ವೀರೇಣ ನಿತ್ಯಂ ಸಮರಗರ್ಧಿನಾ ।
ವೃತಃ ಸಂಪ್ರಯಯೌ ಶ್ರೀಮಾನ್ ಕ್ರೋಧಾಲ್ಲೋಕಾನ್ದಹನ್ನಿವ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಅನಂತರ ಬಲೋನ್ಮತ್ತನಾದ ರಾವಣನು ಮಹೋದರ, ಪ್ರಹಸ್ತ, ಮಾರೀಚ, ಶುಕ, ಸಾರಣ, ಯುದ್ಧಾಭಿಲಾಷೆಯುಳ್ಳ ವೀರ ಧೂಮ್ರಾಕ್ಷ ಹೀಗೆ ಆರು ಮಂತ್ರಿಗಳೊಂದಿಗೆ ಲಂಕೆಯಿಂದ ಹೊರಟನು. ತನ್ನ ಕ್ರೋಧದಿಂದ ಸಮಸ್ತ ಲೋಕಗಳನ್ನು ಸುಟ್ಟು ಭಸ್ಮಮಾಡುವನೋ ಎಂದು ಅನಿಸುತ್ತಿತ್ತು.॥1-2॥
ಮೂಲಮ್ - 3
ಪುರಾಣಿ ಸ ನದೀಃ ಶೈಲಾನ್ ವನಾನ್ಯುಪವನಾನಿ ಚ ।
ಅತಿಕ್ರಮ್ಯ ಮುಹೂರ್ತೇನ ಕೈಲಾಸಂ ಗಿರಿಮಾಗಮತ್ ॥
ಅನುವಾದ
ಅನೇಕ ನಗರ, ನದೀ, ಪರ್ವತ, ವನ-ಉಪವನಗಳನ್ನು ದಾಟಿ ಅವನು ಎರಡು ಗಳಿಗೆಯಲ್ಲಿ ಕೈಲಾಸ ಪರ್ವತಕ್ಕೆ ತಲುಪಿದನು.॥3॥
ಮೂಲಮ್ - 4
ಸಂನಿವಿಷ್ಟಂ ಗಿರೌ ತಸ್ಮಿನ್ರಾಕ್ಷಸೇಂದ್ರಂ ನಿಶಮ್ಯತು ।
ಯುದ್ಧೇಪ್ಸುಂ ತಂ ಕೃತೋತ್ಸಾಹಂ ದುರಾತ್ಮಾನಂ ಸಮಂತ್ರಿಣಮ್ ॥
ಮೂಲಮ್ - 5
ಯಕ್ಷಾ ನ ಶೇಕುಃ ಸಂಸ್ಥಾತುಂ ಪ್ರಮುಖೇತಸ್ಯ ರಕ್ಷಸಃ ।
ರಾಜ್ಞೋ ಭ್ರಾತೇತಿ ವಿಜ್ಞಾಯ ಗತಾ ಯತ್ರ ಧನೇಶ್ವರಃ ॥
ಅನುವಾದ
ದುರಾತ್ಮನಾದ ರಾಕ್ಷಸರಾಜ ರಾವಣನು ಯುದ್ಧಕ್ಕಾಗಿ ಉತ್ಸಾಹಿತನಾಗಿ ತನ್ನ ಮಂತ್ರಿ ಗಳೊಂದಿಗೆ ಕೈಲಾಸ ಪರ್ವತಕ್ಕೆ ಬಂದಿರುವನೆಂದು ಕೇಳಿದಾಗ ಯಕ್ಷರು ರಾವಣನ ಎದುರಿಗೆ ನಿಲ್ಲದಾದರು. ಇವನು ರಾಜನ ತಮ್ಮನಾಗಿದ್ದಾನೆ, ಎಂದು ತಿಳಿದು ಯಕ್ಷರು ಧನೇಶ್ವರ ಕುಬೇರನ ಬಳಿಗೆ ಬಂದರು. ॥ 4-5॥
ಮೂಲಮ್ - 6
ತೇ ಗತ್ವಾ ಸರ್ವಮಾಚಖ್ಯುರ್ಭ್ರಾತುಸ್ತಸ್ಯ ಚಿಕೀರ್ಷಿತಮ್
ಅನುಜ್ಞಾತಾ ಯಯುರ್ಹೃಷ್ಟಾ ಯುದ್ಧಾಯ ಧನದೇನ ತೇ ॥
ಅನುವಾದ
ಅಲ್ಲಿಗೆ ಹೋಗಿ ಅವರು ರಾವಣನ ಎಲ್ಲ ಅಭಿಪ್ರಾಯವನ್ನು ತಿಳಿಸಿದರು. ಆಗ ಕುಬೇರನು ಯುದ್ಧಕ್ಕಾಗಿ ಯಕ್ಷರಿಗೆ ಆಜ್ಞಾಪಿಸಿದನು. ಮತ್ತೆ ಆ ಯಕ್ಷರು ಹರ್ಷೋತ್ಸಾಹದಿಂದ ಕುಬೇರನೊಂದಿಗೆ ಹೊರಟರು.॥6॥
ಮೂಲಮ್ - 7
ತತೋ ಬಲಾನಾಂ ಸಂಕ್ಷೋಭೋ ವ್ಯವರ್ಧತ ಇವೋದಧೇಃ ।
ತಸ್ಯ ನೈರ್ಋತರಾಜಸ್ಯ ಶೈಲಂ ಸಂಚಾಲಯನ್ನಿವ ॥
ಅನುವಾದ
ಆಗ ಯಕ್ಷರ ಸೈನ್ಯವು ಸಮುದ್ರದಂತೆ ಕ್ಷುಬ್ಧವಾಯಿತು. ಅವರ ವೇಗದಿಂದ ಆ ಪರ್ವತವೇ ನಡುಗುವಂತೆ ಅನಿಸುತ್ತಿತ್ತು.॥7॥
ಮೂಲಮ್ - 8
ತತೋ ಯುದ್ಧಂ ಸಮಭವದ್ ಯಕ್ಷರಾಕ್ಷಸ ಸಂಕುಲಮ್ ।
ವ್ಯಥಿತಾಶ್ಚಾಭವಂಸ್ತತ್ರ ಸಚಿವಾ ರಾಕ್ಷಸಸ್ಯ ತೇ ॥
ಅನುವಾದ
ಬಳಿಕ ಯಕ್ಷರಿಗೂ ರಾಕ್ಷಸರಿಗೂ ಘೋರಯುದ್ಧ ಪ್ರಾರಂಭವಾಯಿತು. ಅದರಿಂದ ರಾವಣನ ಸಚಿವರು ವ್ಯಥಿತರಾದರು.॥8॥
ಮೂಲಮ್ - 9
ಸ ದೃಷ್ಟ್ವಾತಾದೃಶಂ ಸೈನ್ಯಂ ದಶಗ್ರೀವೋ ನಿಶಾಚರಃ ।
ಹರ್ಷನಾದಾನ್ಬಹೂನ್ಕೃತ್ವಾ ಸ ಕ್ರೋಧಾದಭ್ಯಧಾವತ ॥
ಅನುವಾದ
ತನ್ನ ಸೈನ್ಯದ ದುರ್ದಶೆ ನೋಡಿ ನಿಶಾಚರ ದಶಗ್ರೀವನು ಪದೇ-ಪದೇ ಹರ್ಷವರ್ಧಕ ಸಿಂಹನಾದ ಮಾಡುತ್ತಾ ರೋಷಾವೇಶದಿಂದ ಯಕ್ಷರ ಕಡೆಗೆ ನುಗ್ಗಿದನು.॥9॥
ಮೂಲಮ್ - 10
ಯೇ ತು ತೇ ರಾಕ್ಷಸೇಂದ್ರಸ್ಯ ಸಚಿವಾ ಘೋರವಿಕ್ರಮಾಃ ।
ತೇಷಾಂ ಸಹಸ್ರಮೇಕೈಕೋ ಯಕ್ಷಾಣಾಂ ಸಮಯೋಧಯತ್ ॥
ಅನುವಾದ
ರಾಕ್ಷಸ ರಾಜನ ಸಚಿವರು ಭಯಂಕರ ಪರಾಕ್ರಮಿಗಳಾಗಿದ್ದು, ಒಬ್ಬೊಬ್ಬ ಸಚಿವನೂ ಸಾವಿರ-ಸಾವಿರ ಯಕ್ಷರೊಡನೆ ಯುದ್ಧ ಮಾಡತೊಡಗಿದರು.॥10॥
ಮೂಲಮ್ - 11
ತತೋ ಗದಾಭಿರ್ಮುಸಲೈರಸಿಭಿಃ ಶಕ್ತಿತೋಮರೈಃ ।
ಹನ್ಯಮಾನೋ ದಶಗ್ರೀವಸ್ತತ್ಸೈನ್ಯಂ ಸಮಗಾಹತ ॥
ಮೂಲಮ್ - 12
ಸ ನಿರುಚ್ಛ್ವಾಸವತ್ತತ್ರ ವಧ್ಯಮಾನೋ ದಶಾನನಃ ।
ವರ್ಷದ್ಭಿರಿವ ಜೀಮೂತೈರ್ಧಾರಾಭಿರವರುಧ್ಯತ ॥
ಅನುವಾದ
ಆಗ ಯಕ್ಷರು ಮೇಘಗಳು ಮಳೆಗರೆದಂತೆ ಗದೆ, ಮುಸಲ, ಖಡ್ಗ, ಶಕ್ತಿ, ತೋಮರ ಮುಂತಾದ ಆಯುಧಗಳ ಮಳೆಗರೆದರು. ಆ ಏಟುಗಳನ್ನು ಸಹಿಸುತ್ತಾ ದಶಗ್ರೀವನು ಸೈನ್ಯದಲ್ಲಿ ನುಗ್ಗಿದನು. ಉಸಿರಾಡಲೂ ಸಾಧ್ಯವಾಗದ ರಾವಣನನ್ನು ಯಕ್ಷರು ತಡೆದರು.॥11-12॥
ಮೂಲಮ್ - 13
ನ ಚಕಾರ ವ್ಯಥಾಂ ಚೈವ ಯಕ್ಷಶಸ್ತ್ರೈಃ ಸಮಾಹತಃ ।
ಮಹೀಧರ ಇವಾಂ ಭೋದೈರ್ಧಾರಾಶತ ಸಮುಕ್ಷಿತಃ ॥
ಅನುವಾದ
ಯಕ್ಷರ ಶಸ್ತ್ರಗಳಿಂದ ಆಹತನಾಗಿಯೂ ಮನಸ್ಸಿನಲ್ಲಿ ದುಃಖಿಸದೇ ಮೇಘಗಳು ಸುರಿಸಿದ ಜಲಧಾರೆಯಿಂದ ಪರ್ವತವು ವಿಚಲಿತನಾದಂತೆ ಸ್ಥಿರನಾಗಿ ನಿಂತಿದ್ದನು.॥13॥
ಮೂಲಮ್ - 14
ಸ ಮಹಾತ್ಮಾ ಸಮುದ್ಯಮ್ಯ ಕಾಲದಂಡೋಪಮಾಂ ಗದಾಮ್ ।
ಪ್ರವಿವೇಶ ತತಃ ಸೈನ್ಯಂ ನಯನ್ ಯಕ್ಷಾನ್ಯಮಕ್ಷಯಮ್ ॥
ಅನುವಾದ
ಆ ಮಹಾಕಾಯ ನಿಶಾಚರನು ಕಾಲದಂಡದಂತಹ ಭಯಂಕರ ಗದೆಯನ್ನೆತ್ತಿಕೊಂಡು ಯಕ್ಷರ ಸೈನ್ಯವನ್ನು ಪ್ರವೇಶಿಸಿ, ಅವರನ್ನು ಯಮ ಸದನಕ್ಕೆ ಕಳಿಸಲು ಪ್ರಾರಂಭಿಸಿದನು.॥14॥
ಮೂಲಮ್ - 15
ಸ ಕಕ್ಷಮಿವ ವಿಸ್ತೀರ್ಣಂ ಶುಷ್ಕೇಂಧನಮಿವಾಕುಲಮ್ ।
ವಾತೇನಾಗ್ನಿರಿವಾದೀಪ್ತೋ ಯಕ್ಷಸೈನ್ಯಂ ದದಾಹ ತತ್ ॥
ಅನುವಾದ
ಗಾಳಿಯಿಂದ ಉರಿದೆದ್ದ ಬೆಂಕಿಯಂತೆ ರಾವಣನು ಹುಲ್ಲಿನಂತೆ ಹರಡಿದ್ದ ಮತ್ತು ಒಣ ಕಟ್ಟಿಗೆಯಂತೆ ವ್ಯಾಕುಲಗೊಂಡ ಯಕ್ಷರ ಸೈನ್ಯವನ್ನು ಸುಡತೊಡಗಿದನು.॥15॥
ಮೂಲಮ್ - 16
ತೈಸ್ತು ತತ್ರ ಮಹಾಮಾತ್ಯೈರ್ಮಹೋದರ ಶುಕಾದಿಭಿಃ ।
ಅಲ್ಪಾವಶೇಷಾಸ್ತೇ ಯಕ್ಷಾಃ ಕೃತಾ ವಾತೈರಿವಾಂಬುದಾಃ ॥
ಅನುವಾದ
ಗಾಳಿಯು ಮೋಡಗಳನ್ನು ಹಾರಿಸಿಬಿಡುವಂತೆ ಮಹೋದರ ಮತ್ತು ಶುಕನೇ ಆದಿ ಮಹಾಮಂತ್ರಿಗಳು ಅಲ್ಲಿ ಯಕ್ಷರನ್ನು ಸಂಹಾರ ಮಾಡಿದರು. ಈಗ ಅವರು ಅಲ್ಪಸಂಖ್ಯೆಯಲ್ಲಿ ಉಳಿದರು.॥16॥
ಮೂಲಮ್ - 17
ಕೇಚಿತ್ಸಮಾಹತಾ ಭಗ್ನಾಃ ಪತಿತಾಃ ಸಮರೇ ಕ್ಷಿತೌ ।
ಓಷ್ಠಾಂಶ್ಚ ದಶನೈಸ್ತೀಕ್ಷ್ಣೈರದಶನ್ ಕುಪಿತಾ ರಣೇ ॥
ಅನುವಾದ
ಎಷ್ಟೋ ಯಕ್ಷರು ಶಸ್ತ್ರಾಘಾತದಿಂದ ಅಂಗ-ಭಂಗವಾಗಿ ಸಮರಾಂಗಣದಲ್ಲಿ ಧರಾಶಾಯಿಯಾದರು. ಎಷ್ಟೋ ಯೋಧರು ಯುದ್ಧದಲ್ಲಿ ಕುಪಿತರಾಗಿ ಹಲ್ಲು ಕಡಿಯುತ್ತಿದ್ದರು.॥17॥
ಮೂಲಮ್ - 18
ಶ್ರಾಂತಾಶ್ಚಾನ್ಯೋನ್ಯಮಾಲಿಂಗ್ಯ ಭ್ರಷ್ಟಶಸ್ತ್ರಾ ರಣಾಜಿರೇ ।
ಸೀದಂತಿ ಚ ತದಾ ಯಕ್ಷಾಃ ಕೂಲಾ ಇವ ಜಲೇನ ಹ ॥
ಅನುವಾದ
ಕೆಲವರು ಬಳಲಿ ಪರಸ್ಪರ ಅಪ್ಪಿಕೊಂಡರು. ಅವರ ಅಸ್ತ್ರ-ಶಸ್ತ್ರಗಳು ಬಿದ್ದುಹೋದುವು. ನೀರಿನ ವೇಗದಿಂದ ನದೀ ತೀರವು ಕೊಚ್ಚಿಕೊಂಡು ಹೋಗುವಂತೆ ರಣರಂಗದಲ್ಲಿ ಶಿಥಿಲವಾಗಿ ಬಿದ್ದು ಹೋದರು.॥18॥
ಮೂಲಮ್ - 19
ಹತಾನಾಂ ಗಚ್ಛತಾಂ ಸ್ವರ್ಗಂ ಯುಧ್ಯತಾಮಥ ಧಾವತಾಮ್ ।
ಪ್ರೇಕ್ಷತಾಮೃಷಿಸಂಘಾನಾಂ ನ ಬಭೂವಾಂತರಂ ದಿವಿ ॥
ಅನುವಾದ
ಯುದ್ಧ ಮಾಡುತ್ತಾ ಹತರಾಗಿ ಸ್ವರ್ಗಕ್ಕೆ ಹೋಗುತ್ತಿದ್ದ ಯಕ್ಷರಿಂದಲೂ, ಯುದ್ಧವನ್ನು ನೋಡುತ್ತಿದ್ದ ಋಷಿಗಳಿಂದಲೂ ತುಂಬಿಹೋಗಿದ್ದ ಆಕಾಶವು ಅತ್ಯಂತ ನಿಬಿಡವಾಗಿತ್ತು.॥19॥
ಮೂಲಮ್ - 20
ಭಗ್ನಾಂಸ್ತು ತಾನ್ ಸಮಾಲಕ್ಷ್ಯ ಯಕ್ಷೇಂದ್ರಾಸ್ತು ಮಹಾಬಲಾನ್ ।
ಧನಾಧ್ಯಕ್ಷೋ ಮಹಾಬಾಹುಃ ಪ್ರೇಷಯಾಮಾಸ ಯಕ್ಷಕಾನ್ ॥
ಅನುವಾದ
ಮಹಾಬಾಹು ಧನಾಧ್ಯಕ್ಷನು ಓಡಿಹೋಗುತ್ತಿದ್ದ ಯಕ್ಷರನ್ನು ನೋಡಿ, ಬೇರೆ ಮಹಾಬಲಿ ಯಕ್ಷರಾಜರನ್ನು ಯುದ್ಧಕ್ಕಾಗಿ ಕಳಿಸಿದನು.॥20॥
ಮೂಲಮ್ - 21
ಏತಸ್ಮಿನ್ನಂತರೇ ರಾಮ ವಿಸ್ತೀರ್ಣ ಬಲವಾಹನಃ ।
ಪ್ರೇಷಿತೋ ನ್ಯಪತದ್ಯಕ್ಷೋ ನಾಮ್ನಾ ಸಂಯೋಧಕಂಟಕಃ ॥
ಅನುವಾದ
ಶ್ರೀರಾಮಾ! ಕುಬೇರನು ಕಳಿಸಿದ ಸಂಯೋಧಕಂಟಕ ಎಂಬ ಯಕ್ಷನು ಅನೇಕ ಸೈನ್ಯ ಮತ್ತು ವಾಹನಗಳಿಂದ ಅಲ್ಲಿಗೆ ಬಂದನು.॥21॥
ಮೂಲಮ್ - 22
ತೇನ ಚಕ್ರೇಣ ಮಾರೀಚೋ ವಿಷ್ಣುನೇವ ರಣೇ ಹತಃ ।
ಪತಿತೋ ಭೂತಲೇ ಶೈಲಾತ್ಕ್ಷೀಣಪುಣ್ಯ ಇವ ಗ್ರಹಃ ॥
ಅನುವಾದ
ಅವನು ಬರುತ್ತಲೇ ವಿಷ್ಣುವಿನಂತೆ ಚಕ್ರದಿಂದ ಯುದ್ಧದಲ್ಲಿ ಮಾರೀಚನನ್ನು ಪ್ರಹರಿಸಿದನು. ಅದರಿಂದ ಗಾಯಗೊಂಡು ಆ ರಾಕ್ಷಸನು ಪುಣ್ಯಕ್ಷೀಣವಾದಾಗ ಸ್ವರ್ಗವಾಸಿ ಗ್ರಹವು ನೆಲಕ್ಕೆ ಬೀಳುವಂತೆ ಪರ್ವತದಿಂದ ಕೆಳಗುರುಳಿದನು.॥22॥
ಮೂಲಮ್ - 23
ಸಸಂಜ್ಞಸ್ತು ಮುಹೂರ್ತೇನ ಸ ವಿಶ್ರಮ್ಯ ನಿಶಾಚರಃ ।
ತಂ ಯಕ್ಷಂ ಯೋಧಯಾಮಾಸ ಸ ಚ ಭಗ್ನಃ ಪ್ರದುದ್ರುವೇ ॥
ಅನುವಾದ
ಮುಹೂರ್ತಕಾಲದಲ್ಲಿ ಎಚ್ಚರಗೊಂಡು ನಿಶಾಚರ ಮಾರೀಚನು ಸ್ವಲ್ಪ ವಿಶ್ರಮಿಸಿ ಯಕ್ಷರೊಡನೆ ಯುದ್ಧಕ್ಕೆ ತೊಡಗಿದನು. ಆಗ ಆ ಯಕ್ಷನು ಓಡಿಹೋದನು.॥23॥
ಮೂಲಮ್ - 24
ತತಃ ಕಾಂಚನ ಚಿತ್ರಾಂಗಂ ವೈದೂರ್ಯ ರಜತೋಕ್ಷಿತಮ್ ।
ಮರ್ಯಾದಾಂ ಪ್ರತಿಹಾರಾಣಾಂ ತೋರಣಾಂತರಮಾವಿಶತ್ ॥
ಅನುವಾದ
ಅನಂತರ ರಾವಣನು ಸುವರ್ಣಜಟಿತವಾದ ನೀಲಮಣಿ, ಬೆಳ್ಳಿಯಿಂದ ವಿಭೂಷಿತವಾದ ಮಹಾದ್ವಾರವನ್ನು ಪ್ರವೇಶಿಸಿದನು. ಅಲ್ಲಿ ದ್ವಾರಪಾಲಕರಿದ್ದು, ಅದು ಗಡಿ ಪ್ರದೇಶವಾಗಿತ್ತು. ಬೇರೆ ಯಾರೂ ಅಲ್ಲಿಂದ ಮುಂದೆ ಹೋದಂತಿರಲಿಲ್ಲ.॥24॥
ಮೂಲಮ್ - 25
ತಂ ತು ರಾಜನ್ ದಶಗ್ರೀವಂ ಪ್ರವಿಶಂತಂ ನಿಶಾಚರಮ್ ।
ಸೂರ್ಯಭಾನುರಿತಿ ಖ್ಯಾತೋ ದ್ವಾರಪಾಲೋ ನ್ಯವಾರಯತ್ ॥
ಅನುವಾದ
ಶ್ರೀರಾಮಾ! ನಿಶಾಚರ ದಶಗ್ರೀವನು ಆ ದ್ವಾರವನ್ನು ಪ್ರವೇಶಿಸತೊಡಗಿದಾಗ ಸೂರ್ಯಭಾನು ಎಂಬ ದ್ವಾರಪಾಲಕನು ಅವನನ್ನು ತಡೆದನು.॥25॥
ಮೂಲಮ್ - 26
ಸ ವಾರ್ಯಮಾಣೋ ಯಕ್ಷೇಣ ಪ್ರವಿವೇಶ ನಿಶಾಚರಃ ।
ಯದಾ ತು ವಾರಿತೋ ರಾಮ ನ ವ್ಯತಿಷ್ಠತ್ಸ ರಾಕ್ಷಸಃ ॥
ಮೂಲಮ್ - 27
ತತಸ್ತೋರಣಮುತ್ಪಾಟ್ಯ ತೇನ ಯಕ್ಷೇಣ ತಾಡಿತಃ ।
ರುಧಿರಂ ಪ್ರಸ್ರವನ್ ಭಾತಿ ಶೈಲೋ ಧಾತುಸ್ರವೈರಿವ ॥
ಅನುವಾದ
ಯಕ್ಷನು ತಡೆದರೂ ಲೆಕ್ಕಿಸದೆ ನಿಶಾಚರನು ಒಳಗೆ ಪ್ರವೇಶಿಸಿದಾಗ ದ್ವಾರಪಾಲಕನು ಒಂದು ಕಂಬವನ್ನು ಕಿತ್ತು ದಶಗ್ರೀವನಿಗೆ ಹೊಡೆದನು. ಅವನ ಶರೀರದಿಂದ ರಕ್ತದ ಧಾರೆ ಹರಿಯಿತು, ಆಗ ಪರ್ವತದಿಂದ ಗೈರಿಕಧಾತು ನೀರಾಗಿ ಹರಿದಂತೆ ಅನಿಸುತ್ತಿತ್ತು.॥26-27॥
ಮೂಲಮ್ - 28
ಸ ಶೈಲ ಶಿಖರಾಭೇಣ ತೋರಣೇನ ಸಮಾಹತಃ ।
ಜಗಾಮ ನ ಕ್ಷತಿಂ ವೀರೋ ವರದಾನಾತ್ ಸ್ವ್ವಯಂಭುವಃ ॥
ಅನುವಾದ
ಪರ್ವತ ಶಿಖರದಂತೆ ಕಾಣುವ ಆ ಕಂಬದ ಏಟುತಿಂದು ದಶಗ್ರೀವನಿಗೆ ಬ್ರಹ್ಮನ ವರಪ್ರಭಾವದಿಂದ ಯಾವುದೇ ಗಾಯವಾಗಲಿಲ್ಲ.॥28॥
ಮೂಲಮ್ - 29
ತೇನೈವ ತೋರಣೇನಾಥ ಯಕ್ಷಸ್ತೇನಾಭಿತಾಡಿತಃ ।
ನಾದೃಶ್ಯತ ತದಾ ಯಕ್ಷೋ ಭಸ್ಮೀಕೃತತನುಸ್ತದಾ ॥
ಅನುವಾದ
ಆಗ ಅವನು ಅದೇ ಕಂಬ ವನ್ನೆತ್ತಿ ಯಕ್ಷನನ್ನು ಪ್ರಹರಿಸಲು ಅವನು ನುಚ್ಚುನೂರಾಗಿ ಕಣ್ಣಿಗೆ ಕಾಣದಂತಾದನು.॥29॥
ಮೂಲಮ್ - 30
ತತಃ ಪ್ರದುದ್ರುವುಃ ಸರ್ವೇ ದೃಷ್ಟಾ ರಕ್ಷಃ ಪರಾಕ್ರಮಮ್ ।
ತತೋ ನದೀರ್ಗುಹಾಶ್ಚೈವ ವಿವಿಶುರ್ಭಯ ಪೀಡಿತಾಃ ।
ತ್ಯಕ್ತ ಪ್ರಹರಣಾಃ ಶ್ರಾಂತಾ ವಿವರ್ಣವದನಾಸ್ತದಾ ॥
ಅನುವಾದ
ಆ ರಾಕ್ಷಸನ ಪರಾಕ್ರಮವನ್ನು ಕಂಡ ಯಕ್ಷರು ಓಡಿ ಹೋದರು. ಕೆಲವರು ನದಿಯಲ್ಲಿ ಈಜಿಕೊಂಡು ಹೋದರೆ, ಕೆಲವರು ಗುಹೆಗಳಲ್ಲಿ ಅಡಗಿದರು. ಎಲ್ಲರೂ ಆಯುಧಗಳನ್ನು ಬಿಸುಟರು. ಅಳಿದುಳಿದ ಯಕ್ಷರು ಬಳಲಿ ಕಾಂತಿಹೀನರಾಗಿದ್ದರು.॥30॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹದಿನಾಲ್ಕನೆಯ ಸರ್ಗ ಪೂರ್ಣವಾಯಿತು. ॥14॥