[ಹದಿಮೂರನೆಯ ಸರ್ಗ]
ಭಾಗಸೂಚನಾ
ರಾವಣನಿಂದ ರಚಿತವಾದ ಶಯನಾಗಾರದಲ್ಲಿ ಕುಂಭಕರ್ಣನ ಶಯನ, ರಾವಣನ ಅತ್ಯಾಚಾರ, ಸದಾಚಾರದಲ್ಲಿರುವಂತೆ ರಾವಣನಿಗೆ ಕುಬೇರನು ದೂತನ ಮೂಲಕ ಸಂದೇಶ ಕಳಿಸಿದುದು, ರಾವಣನಿಂದ ದೂತನ ವಧೆ
ಮೂಲಮ್ - 1
ಅಥ ಲೋಕೇಶ್ವರೋತ್ಸೃಷ್ಟಾ ತತ್ರ ಕಾಲೇನ ಕೇನಚಿತ್ ।
ನಿದ್ರಾ ಸಮಭವತ್ತೀವ್ರಾ ಕುಂಭಕರ್ಣಸ್ಯ ರೂಪಿಣೀ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಬಳಿಕ ಕೆಲಕಾಲ ಕಳೆದಾಗ ಲೋಕೇಶ್ವರ ಬ್ರಹ್ಮದೇವರಿಂದ ಕಳುಹಲ್ಪಟ್ಟ ನಿದ್ರೆಯು ಆಕಳಿಕೆಯ ರೂಪದಿಂದ ಕುಂಭಕರ್ಣನಲ್ಲಿ ವೇಗದಿಂದ ಪ್ರಕಟವಾಯಿತು.॥1॥
ಮೂಲಮ್ - 2
ತತೋ ಭ್ರಾತರಮಾಸೀನಂ ಕುಂಭಕರ್ಣೋಽಬ್ರವೀದ್ವಚಃ ।
ನಿದ್ರಾ ಮಾಂ ಬಾಧತೇ ರಾಜನ್ಕಾರಯಸ್ವಮಮಾಲಯಮ್ ॥
ಅನುವಾದ
ಆಗ ಕುಂಭಕರ್ಣನು ಬಳಿಯಲ್ಲೆ ಕುಳಿತ ರಾವಣನಿಗೆ ಹೇಳಿದನು - ರಾಜನೇ! ನನಗೆ ನಿದ್ದೆ ಬಾಧಿಸುತ್ತಿದೆ; ಆದ್ದರಿಂದ ನನಗೆ ಮಲಗಲು ಒಂದು ಶಯನಾಗಾರವನ್ನು ನಿರ್ಮಿಸಿಕೊಡು.॥2॥
ಮೂಲಮ್ - 3
ವಿನಿಯುಕ್ತಾಸ್ತತೋ ರಾಜ್ಞಾ ಶಿಲ್ಪಿನೋ ವಿಶ್ವಕರ್ಮವತ್ ।
ವಿಸ್ತೀರ್ಣಂ ಯೋಜನಂ ಸ್ನಿಗ್ಧಂ ತತೋ ದ್ವಿಗುಣಮಾಯತಮ್ ॥
ಮೂಲಮ್ - 4
ದರ್ಶನೀಯಂ ನಿರಾಬಾಧಂ ಕುಂಭಕರ್ಣಸ್ಯ ಚಕ್ರಿರೇ ।
ಸ್ಫಾಟಿಕೈಃ ಕಾಂಚನೈಶ್ಚಿತ್ರೈಃ ಸ್ತಂಭೈಃ ಸರ್ವತ್ರ ಶೋಭಿತಮ್ ॥
ಇದನ್ನು ಕೇಳಿ ರಾಕ್ಷಸರಾಜನು ವಿಶ್ವಕರ್ಮರಂತಹ ಯೋಗ್ಯ ಶಿಲ್ಪಿಗಳಿಗೆ ಶಯನಾಗಾರವನ್ನು ನಿರ್ಮಿಸುವಂತೆ ಆಜ್ಞಾಪಿಸಿದನು. ಶಿಲ್ಪಿಗಳು ಎರಡು ಯೋಜನ ಉದ್ದ, ಒಂದು ಯೋಜನ ಅಗಲವಾದ ಸುಂದರ ಮನೆಯನ್ನು ನಿರ್ಮಿಸಿದರು. ಅದರಲ್ಲಿ ಮಲಗಲು ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ. ಅದರಲ್ಲಿ ಎಲ್ಲೆಡೆ ಸ್ಫಟಿಕದ ಕಂಭಗಳಿದ್ದು ಆ ಭವನದ ಶೋಭೆಯನ್ನು ಹೆಚ್ಚಿಸಿದ್ದವು. ॥3-4॥
ಮೂಲಮ್ - 5
ವೈದೂರ್ಯಕೃತಸೋಪಾನಂ ಕಿಂಕಿಣೀಜಾಲಕಂ ತಥಾ ।
ದಾಂತತೋರಣವಿನ್ಯಸ್ತಂ ವಜ್ರಸ್ಫಟಿಕವೇದಿಕಮ್ ॥
ಅನುವಾದ
ಅದರಲ್ಲಿ ನೀಲಮಣಿಯ ಮೆಟ್ಟಿಲುಗಳಿದ್ದು, ಎಲ್ಲೆಡೆ ಕಿರುಗೆಜ್ಜೆಗಳ ಜಾಲರಿಗಳಿದ್ದವು. ಅದರ ಮುಖ್ಯದ್ವಾರ ಆನೆಯ ದಂತದಿಂದ ಮಾಡಿದ್ದು, ವಜ್ರ, ಸ್ಫಟಿಕ ಮಣಿಗಳ ವೇದಿಕೆಗಳು ಶೋಭಿಸುತ್ತಿದ್ದವು.॥5॥
ಮೂಲಮ್ - 6
ಮನೋಹರಂ ಸರ್ವಸುಖಂ ಕಾರಯಾಮಾಸ ರಾಕ್ಷಸಃ ।
ಸರ್ವತ್ರ ಸುಖದಂ ನಿತ್ಯಂ ಮೇರೋಃ ಪುಣ್ಯಾಂ ಗುಹಾಮಿವ ॥
ಅನುವಾದ
ಆ ಭವನವು ಎಲ್ಲ ರೀತಿಯಿಂದ ಸುಖಮಯ, ಮನೋಹರವಾಗಿತ್ತು. ಮೇರು ಪರ್ವತದ ಪುಣ್ಯಮಯ ಗುಹೆಯಂತೆ ಸದಾ ಸುಖಪ್ರದವಾಗಿತ್ತು. ರಾವಣನು ಕುಂಭಕರ್ಣನಿಗಾಗಿ ಇಂತಹ ಸುಂದರ ಶಯನಾಗಾರವನ್ನು ನಿರ್ಮಿಸಿದ್ದನು.॥6॥
ಮೂಲಮ್ - 7
ತತ್ರ ನಿದ್ರಾಂ ಸಮಾವಿಷ್ಟಃ ಕುಂಭಕರ್ಣೋ ಮಹಾಬಲಃ ।
ಬಹೂನ್ಯಬ್ಧಸಹಸ್ರಾಣಿ ಶಯಾನೋ ನ ಚ ಬುಧ್ಯತೇ ॥
ಅನುವಾದ
ಮಹಾಬಲಿ ಕುಂಭಕರ್ಣನು ಆ ಭವನಕ್ಕೆ ಹೋಗಿ ನಿದ್ರಾವಶನಾದನು. ಅನೇಕ ಸಾವಿರ ವರ್ಷ ಮಲಗಿಯೇ ಇದ್ದನು. ಎಚ್ಚರಗೊಳ್ಳಲೇ ಇಲ್ಲ.॥7॥
ಮೂಲಮ್ - 8
ನಿದ್ರಾಭಿಭೂತೇ ತು ತದಾ ಕುಂಭಕರ್ಣೇ ದಶಾನನಃ ।
ದೇವರ್ಷಿಯಕ್ಷಗಂಧರ್ವಾನ್ ಸಂಜಘ್ನೇ ಹಿ ನಿರಂಕುಶಃ ॥
ಅನುವಾದ
ಕುಂಭಕರ್ಣನು ನಿದ್ದೆಹೋದಾಗ ರಾವಣನು ಉಚ್ಛಂಖಲನಾಗಿ ದೇವತೆಗಳನ್ನು, ಋಷಿಗಳನ್ನು, ಯಕ್ಷರನ್ನು ಮತ್ತು ಗಂಧರ್ವರನ್ನು ಪೀಡಿಸುತ್ತಾ, ಕೊಲ್ಲತೊಡಗಿದನು.॥8॥
ಮೂಲಮ್ - 9
ಉದ್ಯಾನಾನಿ ವಿಚಿತ್ರಾಣಿ ನಂದನಾದೀನಿ ಯಾನಿ ಚ ।
ತಾನಿ ಗತ್ವಾ ಸುಸಂಕ್ರುದ್ಧೋ ಭಿನತ್ತಿ ಸ್ಮ ದಶಾನನಃ ॥
ಅನುವಾದ
ದೇವತೆಗಳ ನಂದನವನವೇ ಆದಿ ವಿಚಿತ್ರ ಉದ್ಯಾನಗಳಿಗೆ ಹೋಗಿ ದಶಾನನನು ಅತ್ಯಂತ ಕುಪಿತನಾಗಿ ಅವೆಲ್ಲವನ್ನು ಹಾಳುಗೆಡಹುತ್ತಿದ್ದನು.॥9॥
ಮೂಲಮ್ - 10
ನದೀಂ ಗಜ ಇವ ಕ್ರೀಡನ್ ವೃಕ್ಷಾನ್ವಾಯುರಿನ ಕ್ಷಿಪನ್ ।
ನಗಾನ್ವಜ್ರ ಇವೋತ್ಸೃಷ್ಟೋ ವಿಧ್ವಂಸಯತಿ ರಾಕ್ಷಸಃ ॥
ಅನುವಾದ
ಆ ರಾಕ್ಷಸನು ನದಿಯಲ್ಲಿ ಆನೆಯಂತೆ ಕ್ರೀಡಿಸುತ್ತಾ ಪ್ರವಾಹವನ್ನು ತಡೆದುಬಿಡುತ್ತಿದ್ದನು. ವೃಕ್ಷಗಳನ್ನು ಗಾಳಿಯಂತೆ ಕಿತ್ತುಬಿಡುತ್ತಿದ್ದನು, ಪರ್ವತಗಳನ್ನು ಇಂದ್ರನು ವಜ್ರದಿಂದ ಪುಡಿಗೈಯ್ದಂತೆ ನುಚ್ಚುನೂರು ಮಾಡುತ್ತಿದ್ದನು.॥10॥
ಮೂಲಮ್ - 11
ತಥಾವೃತ್ತಂ ತು ವಿಜ್ಞಾಯ ದಶಗ್ರೀವಂ ಧನೇಶ್ವರಃ ।
ಕುಲಾನುರೂಪಂ ಧರ್ಮಜ್ಞೋ ವೃತ್ತಂ ಸಂಸ್ಮೃತ್ಯಚಾತ್ಮನಃ ॥
ಮೂಲಮ್ - 12
ಸೌಭ್ರಾತ್ರದರ್ಶನಾರ್ಥಂ ತು ದೂತಂ ವೈಶ್ರವಣಸ್ತದಾ ।
ಲಂಕಾಂ ಸಂಪ್ರೇಷಯಾಮಾಸ ದಶಗ್ರೀವಸ್ಯ ವೈ ಹಿತಮ್ ॥
ಅನುವಾದ
ದಶಗ್ರೀವನ ಈ ನಿರಂಕುಶ ವರ್ತನೆಯ ಸುದ್ದಿ ತಿಳಿದು ಧನೇಶ್ವರ ಕುಬೇರನು ತನ್ನ ಕುಲಕ್ಕನುರೂಪವಾಗಿ ಆಚಾರ-ವ್ಯವಹಾರದ ವಿಚಾರ ಮಾಡಿ, ಉತ್ತಮ ಭ್ರಾತೃಪ್ರೇಮದಿಂದಾಗಿ ದೂತನೊಬ್ಬನನ್ನು ಲಂಕೆಗೆ ಕಳಿಸಿದನು. ರಾವಣನಿಗೆ ಹಿತವಾದ ಮಾತನ್ನು ತಿಳಿಸಿ ದಾರಿಗೆ ತರುವುದೇ ಅವನ ಉದ್ದೇಶವಾಗಿತ್ತು.॥11-12॥
ಮೂಲಮ್ - 13
ಸ ಗತ್ವಾ ನಗರೀಂ ಲಂಕಾಮಾಸಸಾದ ವಿಭೀಷಣಮ್ ।
ಮಾನಿತಸ್ತೇನ ಧರ್ಮೇಣ ಪೃಷ್ಟಶ್ಚಾಗಮನಂ ಪ್ರತಿ ॥
ಅನುವಾದ
ಆ ದೂತನು ಲಂಕೆಗೆ ಹೋಗಿ ಮೊದಲಿಗೆ ವಿಭೀಷಣನಿಗೆ ಭೆಟ್ಟಿಯಾದನು. ವಿಭೀಷಣನು ಧರ್ಮದಂತೆ ಅವನನ್ನು ಸತ್ಕರಿಸಿ ಲಂಕೆಗೆ ಬಂದ ಕಾರಣವನ್ನು ಕೇಳಿದನು.॥13॥
ಮೂಲಮ್ - 14
ಪೃಷ್ಟ್ವಾ ಚ ಕುಶಲಂ ರಾಜ್ಞೋ ಜ್ಞಾತೀನಾಂ ಚ ವಿಭೀಷಣಃ ।
ಸಭಾಯಾಂ ದರ್ಶಯಾಮಾಸ ತಮಾಸೀನಂ ದಶಾನನಮ್ ॥
ಅನುವಾದ
ಮತ್ತೆ ಬಂಧು-ಬಾಂಧವರ ಕ್ಷೇಮಕೇಳಿ, ವಿಭೀಷಣನು ಆ ದೂತನನ್ನು ಕರೆದುಕೊಂಡು ರಾಜಸಭೆಯಲ್ಲಿ ಕುಳಿತಿರುವ ರಾವಣನ ಭೆಟ್ಟಿ ಮಾಡಿಸಿದನು.॥14॥
ಮೂಲಮ್ - 15
ಸ ದೃಷ್ಟ್ವಾ ತತ್ರ ರಾಜಾನಂ ದೀಪ್ಯಮಾನಂ ಸ್ವತೇಜಸಾ ।
ಜಯೇತಿ ವಾಚಾ ಸಂಪೂಜ್ಯ ತೂಷ್ಣೀಂ ಸಮಭಿವರ್ತತ ॥
ಅನುವಾದ
ಸಭೆಯಲ್ಲಿ ತನ್ನ ತೇಜದಿಂದ ಉದ್ದಿಪ್ತನಾಗಿದ್ದ ರಾವಣನನ್ನು ನೋಡಿ ದೂತನು ‘ಮಹಾರಾಜರಿಗೆ ಜಯವಾಗಲಿ’ ಎಂದು ಹೇಳಿ ವಾಣಿಯಿಂದ ಅವನನ್ನು ಸತ್ಕರಿಸಿ, ಸ್ವಲ್ಪ ಹೊತ್ತು ಸುಮ್ಮನಿದ್ದನು.॥15॥
ಮೂಲಮ್ - 16
ಸ ತತ್ರೋತ್ತಮಪರ್ಯಂಕೇ ವರಾಸ್ತರಣಶೋಭಿತೇ ।
ಉಪವಿಷ್ಟಂ ದಶಗ್ರೀವಂ ದೂತೋ ವಾಕ್ಯಮಥಾಬ್ರವೀತ್ ॥
ಅನುವಾದ
ಅನಂತರ ಉತ್ತಮ ಹಂಸತೂಲಿಕಾ ತಲ್ಪದಲ್ಲಿ ಕುಳಿತ್ತಿದ್ದ ದಶಗ್ರೀವನಲ್ಲಿ ಆ ದೂತನು ಇಂತೆಂದನು.॥16॥
ಮೂಲಮ್ - 17
ರಾಜನ್ವದಾಮಿ ತೇ ಸರ್ವಂ ಭ್ರಾತಾ ತವ ಯದಬ್ರವೀತ್ ।
ಉಭಯೋಃ ಸದೃಶಂ ವೀರ ವೃತ್ತಸ್ಯ ಚ ಕುಲಸ್ಯ ಚ ॥
ಅನುವಾದ
ವೀರ ಮಹಾರಾಜರೇ! ನಿಮ್ಮ ಸಹೋದರ ಕುಬೇರನು ನಿಮ್ಮ ಬಳಿಗೆ ಸಂದೇಶ ಕಳಿಸಿರುವನು. ಅದನ್ನು ತಂದೆ-ತಾಯಿ ಎರಡೂ ಕುಲ ಹಾಗೂ ಸದಾಚಾರಕ್ಕನುರೂಪವಾಗಿ ನಾನು ನಿಮಗೆ ತಿಳಿಸುತ್ತೇನೆ; ಕೇಳಿ.॥17॥
ಮೂಲಮ್ - 18
ಸಾಧು ಪರ್ಯಾಪ್ತಮೇತಾವತ್ ಕೃತ್ಯಶ್ಚಾರಿತ್ರಸಂಗ್ರಹಃ ।
ಸಾಧು ಧರ್ಮೇ ವ್ಯವಸ್ಥಾನಂ ಕ್ರಿಯತಾಂ ಯದಿ ಶಕ್ಯತೇ ॥
ಅನುವಾದ
ದಶಗ್ರೀವನೇ! ನೀನು ಇಷ್ಟರವರೆಗೆ ಮಾಡಿದ ಕೆಟ್ಟ ಕೆಲಸವೇ ಬಹಳವಾಗಿದೆ. ಇನ್ನು ನೀನು ಚೆನ್ನಾಗಿ ಸದಾಚಾರದ ಸಂಗ್ರಹಮಾಡಬೇಕು. ಧರ್ಮಪಥದಲ್ಲಿ ಸ್ಥಿತನಾದರೆ ನಿನಗೆ ಒಳ್ಳೆಯದಾಗುವುದು.॥18॥
ಮೂಲಮ್ - 19
ದೃಷ್ಟಂ ಮೇ ನಂದನಂ ಭಗ್ನಮೃಷಯೋ ನಿಹತಾಃ ಶ್ರುತಾಃ ।
ದೇವತಾನಾಂ ಸಮುದ್ಯೋಗಸ್ತ್ವತ್ತೋ ರಾಜನ್ಮಯಾ ಶ್ರುತಃ ॥
ಅನುವಾದ
ನೀನು ನಂದನವನವನ್ನು ಹಾಳುಗೆಡಹಿದೆ ಇದನ್ನು ನಾನೇ ನೋಡಿದ್ದೇನೆ. ನೀನು ಅನೇಕ ಋಷಿಗಳನ್ನು ಕೊಂದಿರುವೆ ಎಂದು ಕೇಳಿದ್ದೆ. ರಾಜನೇ! (ಇದರಿಂದ ನೊಂದ ದೇವತೆಗಳು ನಿನ್ನ ಪ್ರತಿಕಾರ ಮಾಡಲು ಬಯಸಿದ್ದಾರೆ) ನಿನಗೆ ವಿರುದ್ಧವಾಗಿ ದೇವತೆಗಳ ಉದ್ಯೋಗ ಪ್ರಾರಂಭವಾಗಿದೆ ಎಂದು ನಾನು ಕೇಳಿದ್ದೆ.॥19॥
ಮೂಲಮ್ - 20
ನಿರಾಕೃತಶ್ಚ ಬಹುಶಸ್ತ್ವಯಾಹಂ ರಾಕ್ಷಸಾಧಿಪಃ ।
ಸಾಪರಾಧೋಽಪಿ ಬಾಲೋ ಹಿ ರಕ್ಷಿತವ್ಯಃ ಸ್ವಬಾಂಧವೈಃ ॥
ಅನುವಾದ
ರಾಕ್ಷಸರಾಜನೇ! ನೀನು ಅನೇಕ ಸಲ ನನ್ನನ್ನು ತಿರಸ್ಕರಿಸಿರುವೆ, ಆದರೂ ಬಾಲಕರು ಮಾಡಿದ ತಪ್ಪನ್ನು ಬಂಧು ಬಾಂಧವರು ಕ್ಷಮಿಸಿ ರಕ್ಷಿಸಲೇಬೇಕು. (ಅದಕ್ಕಾಗಿ ನಿನಗೆ ಹಿತಕಾರಕ ಸಂದೇಶ ಕಳಿಸುತ್ತಿದ್ದೇನೆ.॥20॥
ಮೂಲಮ್ - 21
ಅಹಂ ತು ಹಿಮವತ್ಪೃಷ್ಠಂ ಗತೋ ಧರ್ಮಮುಪಾಸಿತುಮ್ ।
ರೌದ್ರಂ ವ್ರತಂ ಸಮಾಸ್ಥಾಯ ನಿಯತೋ ನಿಯತೇಂದ್ರಿಯಃ ॥
ಅನುವಾದ
ನಾನು ಶೌಚ-ಸಂತೋಷಾದಿ ನಿಯಮಪೂರ್ವಕ, ಇಂದ್ರಿಯ ಸಂಯಮದಿಂದ ‘ರೌದ್ರವ್ರತ’ವನ್ನು ಕೈಗೊಂಡು ಧರ್ಮಾನುಷ್ಠಾನ ಮಾಡಲು ಹಿಮಾಲಯದ ತಪ್ಪಲಿಗೆ ಹೋಗಿದ್ದೆ.॥21॥
ಮೂಲಮ್ - 22
ತತ್ರ ದೇವೋ ಮಯಾ ದೃಷ್ಟ ಉಮಯಾ ಸಹಿತಃ ಪ್ರಭುಃ ।
ಸವ್ಯಂ ಚಕ್ಷುರ್ಮಯಾ ದೈವಾತ್ತತ್ರ ದೇವ್ಯಾಂ ನಿಪಾತಿತಮ್ ॥
ಮೂಲಮ್ - 23
ಕಾನ್ವೇಷೇತಿ ಮಹಾರಾಜ ನ ಖಲ್ವನ್ಯೇನ ಹೇತುನಾ ।
ರೂಪಂ ಚಾನುಪಮಂ ಕೃತ್ವಾ ರುದ್ರಾಣೀ ತತ್ರ ತಿಷ್ಠತಿ ॥
ಅನುವಾದ
ಅಲ್ಲಿ ನನಗೆ ಉಮೆ ಸಹಿತ ಭಗವಾನ್ ಮಹಾದೇವನ ದರ್ಶನವಾಯಿತು. ಮಹಾರಾಜಾ! ಆಗ ನನ್ನ ದೃಷ್ಟಿಯು ಅಕಸ್ಮಾತ್ತಾಗಿ ಪಾರ್ವತಿಯ ಕಡೆಗೆ ಹೋಯಿತು. ಖಂಡಿತವಾಗಿ ನಾನು ಯಾವುದೇ ವಿಕಾರಭಾವದಿಂದ ಆಕೆಯನ್ನು ನೋಡಿರಲಿಲ್ಲ. ಆಗ ದೇವಿ ರುದ್ರಾಣಿಯು ಅನುಪಮ ರೂಪವನ್ನು ಧರಿಸಿ ಅಲ್ಲಿ ನಿಂತಿದ್ದಳು.॥22-23॥
ಮೂಲಮ್ - 24
ದೇವ್ಯಾ ದಿವ್ರಪ್ರಭಾವೇಣ ದಗ್ಧಂ ಸವ್ಯಂ ಮಮೇಕ್ಷಣಮ್ ।
ರೇಣುಧ್ವಸ್ತಾಮಿವ ಜ್ಯೋತಿಃ ಪಿಂಗಲತ್ವಮುಪಾಗತಮ್ ॥
ಅನುವಾದ
ದೇವಿಯ ದಿವ್ಯಪ್ರಭಾವದಿಂದ ಆಗ ನನ್ನ ಎಡಗಣ್ಣು ಸುಟ್ಟುಹೋಗಿ, ಬಲಗಣ್ಣು ಧೂಳು ತುಂಬಿದಂತೆ ಪಿಂಗಲವಾಯಿತು.॥24॥
ಮೂಲಮ್ - 25
ತತೋಽಹಮನ್ಯದ್ವಿಸ್ತೀರ್ಣಂ ಗತ್ವಾ ತಸ್ಯ ಗಿರೇಸ್ತಟಮ್ ।
ತೂಷ್ಣೀಂ ವರ್ಷಶತಾನ್ಯಷ್ಟೌ ಸಮಧಾರಂ ಮಹಾವ್ರತಮ್ ॥
ಅನುವಾದ
ಬಳಿಕ ನಾನು ಪರ್ವತದ ವಿಸ್ತಾರವಾದ ಇನ್ನೊಂದು ತುದಿಗೆ ಹೋಗಿ ಎಂಟುನೂರು ವರ್ಷಗಳ ವರೆಗೆ ಆ ಮಹಾವ್ರತವನ್ನು ಮಾಡತೊಡಗಿದೆ.॥25॥
ಮೂಲಮ್ - 26
ಸಮಾಪ್ತೇ ನಿಯಮೇ ತಸ್ಮಿಂಸ್ತತ್ರ ದೇವೋ ಮಹೇಶ್ವರಃ ।
ತತಃ ಪ್ರೀತೇನ ಮನಸಾ ಪ್ರಾಹ ವಾಕ್ಯಮಿದಂ ಪ್ರಭುಃ ॥
ಅನುವಾದ
ಆ ನಿಯಮ ಮುಗಿದಾಗ ಭಗವಾನ್ ಮಹೇಶ್ವರನು ದರ್ಶನ ಕೊಟ್ಟು ಸಂತೋಷಚಿತ್ತನಾಗಿ ಹೇಳಿದನು.॥26॥
ಮೂಲಮ್ - 27
ಪ್ರೀತೋಽಸ್ಮಿ ತವ ಧರ್ಮಜ್ಞ ತಪಸಾನೇನ ಸುವ್ರತ ।
ಮಯಾ ಚೈತದ್ವ್ರತಂ ಚೀರ್ಣಂ ತ್ವಯಾ ಚೈವ ಧನಾಧಿಪ ॥
ಅನುವಾದ
ಸುವ್ರತ ಧರ್ಮಜ್ಞ ಧನೇಶ್ವರನೇ! ನಾನು ನಿನ್ನ ತಪಸ್ಸಿನಿಂದ ಸಂತುಷ್ಟ ನಾಗಿದ್ದೇನೆ. ಈ ವ್ರತವನ್ನು ನಾನು ಮಾಡಿದ್ದೆ, ಈಗ ನೀನು ಮಾಡಿರುವಿ.॥27॥
ಮೂಲಮ್ - 28
ತೃತೀಯಃ ಪುರುಷೋ ನಾಸ್ತಿ ಯಶ್ಚರೇದ್ ವ್ರತಮೀದೃಶಮ್ ।
ವ್ರತಂ ಸುದುಷ್ಕರಂ ಹ್ಯೇತನ್ಮಯೈವೋತಾದಿತಂ ಪುರಾ ॥
ಅನುವಾದ
ಮೂರನೆಯವನು ಯಾರೂ ಇಂತಹ ಕಠೋರ ವ್ರತವನ್ನು ಮಾಡಲಾರನು. ಅತ್ಯಂತ ದುಷ್ಕರವಾದ ಈ ವ್ರತದ ಪ್ರವರ್ತಕ ನಾನೇ ಆಗಿದ್ದೇನೆ.॥28॥
ಮೂಲಮ್ - 29
ತತ್ಸಖಿತ್ವಂ ಮಯಾ ಸೌಮ್ಯ ರೋಚಯಸ್ವ ಧನೇಶ್ವರ ।
ತಪಸಾ ನಿರ್ಜಿತಶ್ಚೈವ ಸಖಾ ಭವ ಮಮಾನಘ ॥
ಅನುವಾದ
ಆದ್ದರಿಂದ ಸೌಮ್ಯ ಧನೇಶ್ವರನೇ! ಈಗ ನೀನು ನನಗೆ ಮಿತ್ರನಾದೆ. ಇದು ನಿನಗೂ ಪ್ರಿಯವಾಗಿರಬೇಕು. ಪುಣ್ಯಾತ್ಮನೇ! ನೀನು ತನ್ನ ತಪಸ್ಸಿನಿಂದ ನನ್ನನ್ನು ಗೆದ್ದುಬಿಟ್ಟಿರುವೆ, ಆದ್ದರಿಂದ ನನ್ನ ಮಿತ್ರನಾಗಿ ನೀನು ಇರು.॥29॥
ಮೂಲಮ್ - 30
ದೇವ್ಯಾ ದಗ್ಧಂ ಪ್ರಭಾವೇಣ ಯಚ್ಚ ಸವ್ಯಂ ತದೇಕ್ಷಣಮ್ ।
ಪೈಂಗಲ್ಯಂ ಯದವಾಪ್ತಂ ಹಿ ದೇವ್ಯಾ ರೂಪ ನಿರೀಕ್ಷಣಾತ್ ॥
ಮೂಲಮ್ - 31½
ಏಕಾಕ್ಷ ಪಿಂಗಲೀತ್ಯೇವ ನಾಮ ಸ್ಥಾಸ್ಯತಿ ಶಾಶ್ವತಮ್ ।
ಏವಂ ತೇನ ಸಖಿತ್ವಂ ಚ ಪ್ರಾಪ್ಯಾನುಜ್ಞಾಂ ಚ ಶಂಕರಾತ್ ॥
ಆಗತೇನ ಮಯಾ ಚೈವಂ ಶ್ರುತಸ್ತೇ ಪಾಪನಿಶ್ಚಯಃ ।
ಅನುವಾದ
ದೇವೀ ಪಾರ್ವತಿಯ ಕಡೆಗೆ ದೃಷ್ಟಿಪಾತ ಮಾಡಿದ್ದರಿಂದ ಆಕೆಯ ಪ್ರಭಾವದಿಂದ ನಿನ್ನ ಎಡಗಣ್ಣು ಸುಟ್ಟುಹೋಗಿ, ಇನ್ನೊಂದು ಕಣ್ಣು ಕೂಡ ಪಿಂಗಲ ವರ್ಣದ್ದಾಯಿತು. ಇದರಿಂದ ಸದಾ ಸ್ಥಿರನಾಗಿರುವ ನಿನಗೆ ‘ಏಕಾಕ್ಷ ಪಿಂಗಲಿ’ ಎಂಬ ಹೆಸರು ಚಿರಸ್ಥಾಯಿಯಾಗುವುದು. ಹೀಗೆ ಶಂಕರನೊಂದಿಗೆ ಮೈತ್ರಿಯನ್ನು ಸ್ಥಾಪಿಸಿಕೊಂಡು, ಅವನ ಅಪ್ಪಣೆಯಂತೆ ಮನೆಗೆ ಮರಳಿದಾಗ ನಿನ್ನ ಪಾಪಪೂರ್ಣ ನಿಶ್ಚಯದ ಮಾತನ್ನು ಕೇಳಿದೆ.॥30-31½॥
ಮೂಲಮ್ - 32½
ತದಧರ್ಮಿಷ್ಠಸಂಯೋಗಾನ್ನಿವರ್ತ ಕುಲದೂಷಣಾತ್ ॥
ಚಿಂತ್ವತೇ ಹಿ ವಧೋಪಾಯಃ ಸರ್ವಿಸಂಘೈಃ ಸುರೈಸ್ತವ ।
ಅನುವಾದ
ಆದ್ದರಿಂದ ಈಗ ನೀನು ತನ್ನ ಕುಲಕ್ಕೆ ಕಳಂಕ ಹಚ್ಚುವ ಪಾಪಕರ್ಮದಿಂದ ದೂರವಾಗು; ಏಕೆಂದರೆ ಎಲ್ಲ ಋಷಿಗಳೊಡನೆ ದೇವತೆಗಳು ನಿನ್ನ ವಧೆಯ ಉಪಾಯ ಯೋಚಿಸುತ್ತಿದ್ದಾರೆ.॥32½॥
ಮೂಲಮ್ - 33½
ಏವಮುಕ್ತೋ ದಶಗ್ರೀವಃ ಕೋಪಸಂರಕ್ತಲೋಚನಃ ॥
ಹಸ್ತಾನ್ದಂತಾಂಶ್ಚ ಸಂಪಿಷ್ಯ ವಾಕ್ಯಮೇತದುವಾಚ ಹ ।
ಅನುವಾದ
ದೂತನು ಆಡಿದ ಮಾತನ್ನು ಕೇಳಿ ದಶಗ್ರೀವನು ಕಣ್ಣುಗಳು ಕ್ರೋಧದಿಂದ ಕೆಂಪಾದವು. ಹಲ್ಲು ಕಡಿಯುತ್ತಾ ಕೈಗಳನ್ನು ಮಸೆಯುತ್ತಾ ಹೇಳಿದನು.॥33½॥
ಮೂಲಮ್ - 34½
ವಿಜ್ಞಾತಂ ತೇ ಮಯಾ ದೂತ ವಾಕ್ಯಂ ಯತ್ತ್ವಂ ಪ್ರಭಾಷಸೇ ॥
ನೈವ ತ್ವಮಸಿ ನೈವಾಸೌ ಭ್ರಾತ್ರಾ ಯೇನಾಸಿ ಚೋದಿತಃ ।
ಅನುವಾದ
ದೂತನೇ! ನೀನು ಹೇಳಿದುದರ ಅಭಿಪ್ರಾಯ ನಾನು ತಿಳಿದೆ. ಈಗ ನೀನಾಗಲೀ, ನಿನ್ನನ್ನು ದೂತನಾಗಿ ಕಳಿಸಿದ ಅಣ್ಣನಾಗಲೀ ಜೀವಿಸಿರಲಾರಿರಿ.॥34½॥
ಮೂಲಮ್ - 35½
ಹಿತಂ ನೈಷ ಮಮೈತದ್ಧಿ ಬ್ರವೀತಿ ಧನರಕ್ಷಕಃ ॥
ಮಹೇಶ್ವರ ಸಖಿತ್ವಂ ತು ಮೂಢಃ ಶ್ರಾವಯತೇ ಕಿಲ ।
ಅನುವಾದ
ಧನರಕ್ಷಕ ಕುಬೇರನು ನನಗಾಗಿ ಕಳಿಸಿದ ಸಂದೇಶ ಹಿತಕರವಾದುದಲ್ಲ. ಆ ಮೂರ್ಖನು ನನ್ನನ್ನು ಹೆದರಿಸಲು ಮಹಾದೇವನೊಂದಿಗೆ ಆದ ಮೈತ್ರಿಯ ಕಥೆಯನ್ನು ಹೇಳುತ್ತಿದ್ದಾನೆ.॥35½॥
ಮೂಲಮ್ - 36
ನೈವೇದಂ ಕ್ಷಮಣೀಯಂ ಮೇ ಯದೇತದ್ಭಾಷಿತಂ ತ್ವಯಾ ॥
ಮೂಲಮ್ - 37
ಯದೇತಾವನ್ಮಯಾ ಕಾಲಂ ದೂತ ತಸ್ಯ ತುಮರ್ಷಿತಮ್ ।
ನ ಹಂತವ್ಯೋ ಗುರುರ್ಜ್ಯೇಷ್ಠೋ ಮಯಾಯಮಿತಿ ಮನ್ಯತೇ ॥
ಅನುವಾದ
ದೂತನೇ! ನೀನು ಇಲ್ಲಿ ಹೇಳಿದ ಮಾತು ನನಗೆ ಸಹಿಸಲು ಯೋಗ್ಯವಲ್ಲ. ಕುಬೇರನು ನನ್ನ ಅಣ್ಣನಾದ್ದರಿಂದ ಅವನನ್ನು ವಧಿಸುವುದು ಉಚಿತವಲ್ಲ, ಎಂದು ತಿಳಿದುಕೊಂಡೇ ನಾನು ಇಂದಿನತನಕ ಅವನನ್ನು ಕ್ಷಮಿಸಿದ್ದೇನೆ.॥36-37॥
ಮೂಲಮ್ - 38
ತಸ್ಯ ತ್ವಿದಾನೀಂ ಶ್ರುತ್ವಾ ಮೇ ವಾಕ್ಯಮೇಷಾ ಕೃತಾ ಮತಿಃ ।
ತ್ರೀನ್ಲ್ಲೋಕಾನಪಿ ಜೇಷ್ಯಾಮಿ ಬಾಹುವೀರ್ಯಮುಪಾಶ್ರಿತಃ ॥
ಅನುವಾದ
ಆದರೆ ಈಗ ಅವನ ಮಾತನ್ನು ಕೇಳಿ ನಾನು ನನ್ನ ಬಾಹುಬಲದಿಂದ ಮೂರು ಲೋಕಗಳನ್ನು ಗೆಲ್ಲಬೇಕೆಂದು ನಿಶ್ಚಯಿಸಿರುವೆನು.॥38॥
ಮೂಲಮ್ - 39
ಏತನ್ಮುಹೂರ್ತಮೇವಾಹಂ ತಸ್ಯೈ ಕಸ್ಯ ತು ವೈ ಕೃತೇ ।
ಚತುರೋ ಲೋಕಪಾಲಾಂಸ್ತಾನ್ನಯಷ್ಯಾಮಿ ಯಮಕ್ಷಯಮ್ ॥
ಅನುವಾದ
ಇದೇ ಮುಹೂರ್ತದಲ್ಲಿ ಅವನೊಬ್ಬನ ಅಪರಾಧದಿಂದ ನಾಲ್ಕೂ ಲೋಕಪಾಲಕರನ್ನು ಯಮಲೋಕಕ್ಕೆ ಕಳಿಸಿ ಬಿಡುತ್ತೇನೆ.॥39॥
ಮೂಲಮ್ - 40
ಏವಮುಕ್ತ್ವಾತು ಲಂಕೇಶೋ ದೂತಂ ಖಡ್ಗೇನ ಜಘ್ನಿವಾನ್ ।
ದದೌ ಭಕ್ಷಯಿತುಂ ಹ್ಯೇನಂ ರಾಕ್ಷಸಾನಾಂ ದುರಾತ್ಮವಾನ್ ॥
ಅನುವಾದ
ಹೀಗೆ ಹೇಳಿ ಲಂಕೇಶ ರಾವಣನು ಖಡ್ಗದಿಂದ ಆ ದೂತನನ್ನು ಕತ್ತರಿಸಿ, ಅವನ ದೇಹವನ್ನು ದುರಾತ್ಮರಾದ ರಾಕ್ಷಸರಿಗೆ ಭಕ್ಷಿಸಲು ಕೊಟ್ಟನು.॥40॥
ಮೂಲಮ್ - 41
ತತಃ ಕೃತಸ್ವಸ್ತ್ಯಯನೋ ರಥಮಾರುಹ್ಯ ರಾವಣಃ ।
ತ್ರೈಲೋಕ್ಯವಿಜಯಾಕಾಂಕ್ಷೀ ಯಯೌ ಯತ್ರ ಧನೇಶ್ವರಃ ॥
ಅನುವಾದ
ಅನಂತರ ರಾವಣನು ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿ, ಮೂರೂ ಲೋಕಗಳನ್ನು ಜಯಿಸುವ ಇಚ್ಛೆಯಿಂದ ರಥಾರೂಢನಾಗಿ ಧನಪತಿ ಕುಬೇರನು ಇರುವಲ್ಲಿಗೆ ತೆರಳಿದನು.॥41॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹದಿಮೂರನೆಯ ಸರ್ಗ ಪೂರ್ಣವಾಯಿತು. ॥13॥