[ಹನ್ನೆರಡನೆಯ ಸರ್ಗ]
ಭಾಗಸೂಚನಾ
ಶೂರ್ಪಣಖಿ, ರಾವಣಾದಿ ಮೂರು ಸಹೋದರರ ವಿವಾಹ ಮತ್ತು ಮೇಘನಾದನ ಜನ್ಮ
ಮೂಲಮ್ - 1
ರಾಕ್ಷಸೇಂದ್ರೋಽಭಿಷಿಕ್ತಸ್ತು ಭ್ರಾತೃಭಿಃ ಸಹಿತಸ್ತದಾ ।
ತತಃ ಪ್ರದಾನಂ ರಾಕ್ಷಸ್ಯಾ ಭಗಿನ್ಯಾಃ ಸಮಚಿಂತಯತ್ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ಶ್ರೀರಾಮಾ !) ರಾಕ್ಷಸೇಶ್ವರ ರಾವಣನು ಪಟ್ಟಾಭಿಷೇಕವಾದ ಬಳಿಕ ಲಂಕಾಪುರಿಯಲ್ಲಿ ಇರತೊಡಗಿದನು. ಆಗ ಸಹೋದರಿ ಶೂರ್ಪಣಖಿಯ ವಿವಾಹದ ಚಿಂತೆ ಉಂಟಾಯಿತು.॥1॥
ಮೂಲಮ್ - 2
ಸ್ವಸಾರಂ ಕಾಲಕೇಯಾಯ ದಾನವೇಂದ್ರಾಯ ರಾಕ್ಷಸೀಮ್ ।
ದದೌ ಶೂರ್ಪಣಖಾಂ ನಾಮ ವಿದ್ಯುಜ್ಜಿಹ್ವಾಯ ರಾಕ್ಷಸಃ ॥
ಅನುವಾದ
ಆ ರಾವಣನು ಕಾಲಕೆಯ ಪುತ್ರ ದಾನವರಾಜ ವಿಜ್ಯುಜ್ದಿಹ್ವನಿಗೆ ತನ್ನ ತಂಗಿಯ ಮದುವೆ ಮಾಡಿಕೊಟ್ಟನು.॥2॥
ಮೂಲಮ್ - 3
ಅಥ ದತ್ತ್ವಾ ಸ್ವಯಂ ರಕ್ಷೋ ಮೃಗಯಾಮಟತೇ ಸ್ಮ ತತ್ ।
ತತ್ರಾ ಪಶ್ಯತ್ತತೋ ರಾಮ ಮಯಂ ನಾಮ ದಿತೇಃ ಸುತಮ್ ॥
ಮೂಲಮ್ - 4½
ಕನ್ಯಾಸಹಾಯಂ ತಂ ದೃಷ್ಟ್ವಾ ದಶಗ್ರೀವೋ ನಿಶಾಚರಃ ।
ಅಪೃಚ್ಛತ್ಕೋ ಭವಾನೇಕೋ ನಿರ್ಮನುಷ್ಯಮೃಗೇ ವನೇ ॥
ಅನಯಾ ಮೃಗಶಾವಾಕ್ಷ್ಯಾ ಕಿಮರ್ಥಂ ಸಹ ತಿಷ್ಠಸಿ ।
ಅನುವಾದ
ಶ್ರೀರಾಮಾ! ತಂಗಿಯ ಮದುವೆ ಮಾಡಿ ರಾವಣನು ಒಂದು ದಿನ ಬೇಟೆಗಾಗಿ ಕಾಡಿನಲ್ಲಿ ತಿರುಗಾಡುತ್ತಿದ್ದನು. ಅಲ್ಲಿ ಅವನು ದಿತಿಪುತ್ರ ಮಯನನ್ನು ನೋಡಿದನು. ಅವ ನೊಂದಿಗೆ ಓರ್ವ ಸುಂದರಿ ಕನ್ಯೆಯೂ ಇದ್ದಳು. ಅವನನ್ನು ನೋಡಿ ದಶಗ್ರೀವನು ಕೇಳಿದನು - ನೀವು ಯಾರು? ನಿರ್ಜನ ವನವಾದ ಈ ಶೂನ್ಯವನದಲ್ಲಿ ಅಲೆಯುತ್ತಿರುವೆಯಲ್ಲ! ಈ ಮೃಗನಯನೀ ಕನ್ಯೆಯ ಜೊತೆಗೆ ನೀವು ಇಲ್ಲಿ ಯಾವ ಉದ್ದೇಶದಿಂದ ವಾಸಿಸುತ್ತಿರುವೆ.॥3-4½॥
ಮೂಲಮ್ - 5½
ಮಯಸ್ತದಾಬ್ರವೀದ್ರಾಮ ಪೃಚ್ಛಂತಂ ತಂ ನಿಶಾಚರಮ್ ॥
ಶ್ರೂಯತಾಂ ಸರ್ವಮಾಖ್ಯಾಸ್ಯೇ ಯಥಾವೃತ್ತಮಿದಂ ತವ ।
ಅನುವಾದ
ಶ್ರೀರಾಮಾ! ಹೀಗೆ ಕೇಳಿದ ಆ ನಿಶಾಚರನಲ್ಲಿ ಮಯನು ಹೇಳುತ್ತಾನೆ - ನಾನು ನನ್ನ ಎಲ್ಲ ವೃತ್ತಾಂತವನ್ನು ಯಥಾರ್ಥವಾಗಿ ತಿಳಿಸುತ್ತೇನೆ, ಕೇಳು.॥5½॥
ಮೂಲಮ್ - 6
ಹೇಮಾ ನಾಮಾಪ್ಸರಾಸ್ತಾತ ಶ್ರುತಪೂರ್ವಾ ಯದಿ ತ್ವಯಾ ॥
ಮೂಲಮ್ - 7
ದೈವತೈರ್ಮಮ ಸಾ ದತ್ತಾ ಪೌಲೋಮೀವ ಶತಕ್ರತೋಃ ।
ತಸ್ಯಾಂ ಸಕ್ತಮನಾ ಹ್ಯಾಸಂ ದಶವರ್ಷಶತಾನ್ಯಹಮ್ ॥
ಮೂಲಮ್ - 8
ಸಾ ಚದೈವತಕಾರ್ಯೇಣ ಗತಾ ವರ್ಷಾಶ್ಚತುರ್ದಶ ।
ತಸ್ಯಾಃ ಕೃತೇ ಚ ಹೇಮಾಯಾಃ ಸರ್ವಂ ಹೇಮಮಯಂ ಪುರಮ್ ॥
ಮೂಲಮ್ - 9
ವಜ್ರವೈಡೂರ್ಯಚಿತ್ರಂ ಚ ಮಾಯಯಾ ನಿರ್ಮಿತಂ ಮಯಾ ।
ತತ್ರಾಹಮವಸಂ ದೀನಸ್ತಯಾ ಹೀನಃ ಸುದುಃಖಿತಃ ॥
ಅನುವಾದ
ಅಯ್ಯಾ! ಸ್ವರ್ಗದಲಿ ಹೇಮಾ ಎಂಬ ಪ್ರಸಿದ್ಧ ಅಪ್ಸರೆ ಇದ್ದಳೆಂದು, ನೀನು ಹಿಂದೆ ಎಂದಾದರೂ ಕೇಳಿರಬಹುದು. ಪ್ರಲೋಮ ದಾನವನ ಕನ್ಯೆ ಶಚಿಯನ್ನು ದೇವೇಂದ್ರನಿಗೆ ಕೊಟ್ಟಂತೆ, ದೇವತೆಗಳು ಆಕೆಯನ್ನು ನನಗೆ ಅರ್ಪಿಸಿದ್ದರು. ನಾನು ಆಕೆಯಲ್ಲಿ ಆಸಕ್ತನಾಗಿ ಒಂದು ಸಾವಿರವರ್ಷ ಆಕೆಯೊಂದಿಗೆ ಇದ್ದೆ. ಒಂದು ದಿನ ಅವಳು ದೇವತೆಗಳ ಕಾರ್ಯಕ್ಕಾಗಿ ಸ್ವರ್ಗಕ್ಕೆ ಹೋದಳು, ಆಗಿನಿಂದ ಹದಿನಾಲ್ಕು ವರ್ಷ ಕಳೆಯಿತು. ನಾನು ಆ ಹೇಮಳಿಗಾಗಿ ಮಾಯೆಯಿಂದ ಒಂದು ನಗರವನ್ನು ಪೂರ್ಣ ಬಂಗಾರದಿಂದ ನಿರ್ಮಿಸಿದ್ದೆ. ನೀಲ, ವಜ್ರಗಳಿಂದ ಅದು ವಿಚಿತ್ರವಾಗಿ ಶೋಭಿಸುತ್ತಿತ್ತು. ಅದರಲ್ಲೇ ನಾನು ಇಷ್ಟರವರೆಗೆ ಆಕೆಯ ವಿಯೋಗದಿಂದ ಅತ್ಯಂತ ದೀನ, ದುಃಖಿಯಾಗಿ ಇರುತ್ತಿದ್ದೆ.॥6-9॥
ಮೂಲಮ್ - 10
ತಸ್ಮಾತ್ಪುರಾದ್ದುಹಿತರಂ ಗೃಹೀತ್ವಾ ವನಮಾಗತಃ ।
ಇಯಂ ಮಮಾತ್ಮಜಾ ರಾಜಂಸ್ತಸ್ಯಾಃ ಕುಕ್ಷೌ ವಿವರ್ಧಿತಾ ॥
ಅನುವಾದ
ಅದೇ ನಗರದಿಂದ ಈ ಕನ್ಯೆಯೊಂದಿಗೆ ನಾನು ವನಕ್ಕೆ ಬಂದಿದ್ದೇನೆ. ರಾಜನೇ! ಇವಳು ನನ್ನ ಮಗಳು, ಹೇಮಾಳ ಗರ್ಭದಿಂದ ಹುಟ್ಟಿ ನನ್ನಿಂದ ಪಾಲಿಸಲ್ಪಟ್ಟಿರುವಳು.॥10॥
ಮೂಲಮ್ - 11½
ಭರ್ತಾರಮನಯಾ ಸಾರ್ಧಮಸ್ಯಾಃ ಪ್ರಾಪ್ತೋಽಸ್ಮಿ ಮಾರ್ಗಿತುಮ್ ।
ಕನ್ಯಾಪಿತೃತ್ವಂ ದುಃಖಂ ಹಿ ಸರ್ವೇಷಾಂ ಮಾನಕಾಂಕ್ಷಿಣಾಮ್ ॥
ಕನ್ಯಾ ಹಿ ದ್ವೇ ಕುಲೇನಿತ್ಯಂ ಸಂಶಯೇ ಸ್ಥಾಪ್ಯ ತಿಷ್ಠತಿ ।
ಅನುವಾದ
ಈಕೆಯೊಂದಿಗೆ ಇವಳಿಗೆ ಯೋಗ್ಯಪತಿಯನ್ನು ಹುಡುಕುತ್ತಾ ಬಂದಿರುವೆನು. ಸಾಮಾನ್ಯವಾಗಿ ಕನ್ಯಾಪಿತೃತ್ವ ಕಷ್ಟಕಾರಕವಾಗಿರುತ್ತದೆ. (ಏಕೆಂದರೆ ಕನ್ಯೆಯ ತಂದೆಯು ಬೇರೆಯವರ ಮುಂದೆ ತಲೆಬಾಗಬೇಕಾಗುತ್ತದೆ) ಕನ್ಯೆಯು ಸದಾ ಎರಡು ಕುಲಗಳನ್ನು ಸಂಶಯದಲ್ಲೆ ಹಾಕುವಳು.॥11½॥
ಮೂಲಮ್ - 12½
ಪುತ್ರದ್ವಯಂ ಮಮಾಪ್ಯಸ್ಯಾಂ ಭಾರ್ಯಾಯಾಂ ಸಂಬಭೂವ ಹ ॥
ಮಾಯಾವೀ ಪ್ರಥಮಸ್ತಾತ ದುಂದುಭಿಸ್ತದನಂತರಃ ।
ಅನುವಾದ
ಅಯ್ಯಾ! ನನ್ನ ಭಾರ್ಯೆ ಹೇಮಾಳಿಂದ ಮಾಯಾವೀ ಮತ್ತು ದುಂದುಭಿ ಎಂಬ ಇಬ್ಬರು ಗಂಡುಮಕ್ಕಳೂ ಹುಟ್ಟಿರುವರು.॥12½॥
ಮೂಲಮ್ - 13½
ಏವಂ ತೇ ಸರ್ವಮಾಖ್ಯಾತಂ ಯಾಥಾತಥ್ಯೇನ ಪೃಚ್ಛತಃ ॥
ತ್ವಮಿದಾನೀಂ ಕಥಂ ತಾತ ಜಾನೀಯಾಂ ಕೋ ಭವಾನಿತಿ ।
ಅನುವಾದ
ಅಯ್ಯಾ! ನೀನು ಕೇಳಿದ್ದರಿಂದ ನನ್ನ ಎಲ್ಲ ವೃತ್ತಾಂತವನ್ನು ಯಥಾರ್ಥವಾಗಿ ತಿಳಿಸಿದ್ದೇನೆ. ನೀನು ಯಾರು? ಎಂದು ತಿಳಿಯಲು ನಾನು ಬಯಸುತ್ತೇನೆ.॥13½॥
ಮೂಲಮ್ - 14
ಏವಮುಕ್ತಂ ತು ತದ್ರಕ್ಷೋ ವಿನೀತಮಿದಮಬ್ರವೀತ್ ॥
ಮೂಲಮ್ - 15
ಅಹಂ ಪೌಲಸ್ತ್ಯ ತನಯೋ ದಶಗ್ರೀವಶ್ಚ ನಾಮತಃ ।
ಮುನೇರ್ವಿಶ್ರವಸೋ ಯಸ್ತು ತೃತೀಯೋ ಬ್ರಹ್ಮಣೋಽಭವತ್ ॥
ಅನುವಾದ
ಮಯಾಸುರನು ಹೀಗೆ ಕೇಳಿದಾಗ ರಾವಣನು ವಿನೀತವಾಗಿ ಹೇಳಿದನು - ನಾನು ಪುಲಸ್ತ್ಯನ ಪುತ್ರ ವಿಶ್ರವಸ್ಸುವಿನ ಮಗನಾಗಿದ್ದೇನೆ. ವಿಶ್ರವಸ್ಸುವಿನಿಂದ ಹುಟ್ಟಿದ ನಾನು ಬ್ರಹ್ಮದೇವರಿಂದ ಮೂರನೆಯವನಾಗಿದ್ದೇನೆ. ನನ್ನ ಹೆಸರು ರಾವಣನೆಂದು.॥14-15॥
ಮೂಲಮ್ - 16½
ಏವಮುಕ್ತ ಸ್ತದಾ ರಾಮ ರಾಕ್ಷಸೇಂದ್ರೇಣ ದಾನವಃ ।
ಮಹರ್ಷೇಸ್ತನಯಂ ಜ್ಞಾತ್ವಾ ಮಯೋ ಹರ್ಷಮುಪಾಗತಃ ॥
ದಾತುಂ ದುಹಿತರಂ ತಸ್ಮೈ ರೋಚಯಾಮಾಸ ತತ್ರ ವೈ ।
ಅನುವಾದ
ಶ್ರೀರಾಮಾ! ರಾಕ್ಷಸೇಶ್ವರನು ಹೀಗೆ ಹೇಳಿದಾಗ ದಾನವ ಮಯನು ಮಹರ್ಷಿ ವಿಶ್ರವಸ್ಸುವಿನ ಆ ಪುತ್ರನ ಪರಿಚಯ ಪಡೆದು ಬಹಳ ಸಂತೋಷಗೊಂಡು ತನ್ನ ಮಗಳ ಮದುವೆಯನ್ನು ಆತನೊಂದಿಗೆ ಮಾಡಿಕೊಡಲು ಇಚ್ಛಿಸಿದನು.॥16½॥
ಮೂಲಮ್ - 17½
ಕರೇಣ ತು ಕರಂ ತಸ್ಯಾ ಗ್ರಾಹಯಿತ್ವಾ ಮಯಸ್ತದಾ ॥
ಪ್ರಹಸನ್ಪ್ರಾಹ ದೈತ್ಯೇಂದ್ರೋ ರಾಕ್ಷಸೇಂದ್ರ ಮಿದಂ ವಚಃ ।
ಅನುವಾದ
ಬಳಿಕ ದೈತ್ಯರಾಜ ಮಯನು ತನ್ನ ಪುತ್ರಿಯ ಕೈಯನ್ನು ರಾವಣನ ಕೈಯಲ್ಲಿಟ್ಟುಕೊಟ್ಟು ನಗುತ್ತಾ ಆ ರಾಕ್ಷಸ ರಾಜನಲ್ಲಿ ಇಂತೆಂದನು.॥17½॥
ಮೂಲಮ್ - 18½
ಇಯಂ ಮಮಾತ್ಮಜಾ ರಾಜನ್ ಹೇಮಯಾಪ್ಸರಸಾ ಧೃತಾ ॥
ಕನ್ಯಾ ಮಂದೋದರೀ ನಾಮ ಪತ್ನ್ಯರ್ಥಂ ಪ್ರತಿಗೃಹ್ಯತಾಮ್ ।
ಅನುವಾದ
ರಾಜನೇ! ಅಪ್ಸರೆಯ ಗರ್ಭದಲ್ಲಿ ಧರಿಸಿದ ಈಕೆ ನನ್ನ ಮಗಳಾಗಿದ್ದಾಳೆ. ಇವಳ ಹೆಸರು ಮಂಡೋದರೀ. ಈಕೆಯನ್ನು ನೀನು ತನ್ನ ಪತ್ನಿಯಾಗಿಸಿ ಸ್ವೀಕರಿಸು.॥18½॥
ಮೂಲಮ್ - 19½
ಬಾಢಮಿತ್ಯೇವ ತಂ ರಾಮ ದಶಗ್ರೀವೋಽಭ್ಯಭಾಷತ ॥
ಪ್ರಜ್ವಾಲ್ಯ ತತ್ರ ಚೈವಾಗ್ನಿ ಮಕರೋತ್ಪಾಣಿ ಸಂಗ್ರಹಮ್ ।
ಅನುವಾದ
ಶ್ರೀರಾಮಾ! ಆಗ ದಶಗ್ರೀವನು ‘ಹಾಗೇ ಆಗಲಿ’ ಎಂದು ಹೇಳಿ ಮಯಾಸುರನ ಮಾತನ್ನು ಒಪ್ಪಿಕೊಂಡನು. ಮತ್ತೆ ಅಲ್ಲಿ ಅಗ್ನಿಯನ್ನು ಸ್ಥಾಪಿಸಿ ಮಂದೊದರಿಯ ಪಾಣಿಗ್ರಹಣ ಮಾಡಿದನು.॥19½॥
ಮೂಲಮ್ - 20½
ಸ ಹಿ ತಸ್ಯ ಮಯೋ ರಾಮ ಶಾಪಾಭಿಜ್ಞಸ್ತಪೋಧನಾತ್ ॥
ವಿದಿತ್ವಾ ತೇನ ಸಾ ದತ್ತಾ ತಸ್ಯ ಪೈತಾಮಹಂ ಕುಲಮ್ ।
ಅನುವಾದ
ರಘುನಂದನ ! ತಪೋಧನ ವಿಶ್ರವಸನಿಂದ ರಾವಣನಿಗೆ ಕ್ರೂರಪ್ರಕೃತಿಯವನಾಗು ಎಂದು ಶಪಿಸಿದ್ದುದು ಮಯಾಸುರ ತಿಳಿದಿದ್ದ; ಆದರೂ ರಾವಣನು ಬ್ರಹ್ಮದೇವರ ಕುಲದ ಬಾಲಕನೆಂದು ಅವನಿಗೆ ತನ್ನ ಕನ್ಯೆಯನ್ನು ಕೊಟ್ಟಿದ್ದನು.॥20½॥
ಮೂಲಮ್ - 21½
ಅಮೋಘಾಂ ತಸ್ಯ ಶಕ್ತಿಂ ಚ ಪ್ರದದೌ ಪರಮಾದ್ಭುತಮ್ ॥
ಪರೇಣ ತಪಸಾ ಲಬ್ಧಾಂ ಜಘ್ನಿವಾಂ ಲ್ಲಕ್ಷ್ಮಣಂ ಯಯಾ ।
ಅನುವಾದ
ಜೊತೆಗೆ ಉತ್ತಮ ತಪಸ್ಸಿನಿಂದ ಪ್ರಾಪ್ತವಾದ ಒಂದು ಪರಮಾದ್ಭುತ ಅಮೋಘ ಶಕ್ತಿಯನ್ನು ಪಡೆದಿದ್ದನು. ಅದರಿಂದ ರಾವಣನು ಲಕ್ಷ್ಮಣನನ್ನು ಗಾಯಗೊಳಿಸಿದ್ದನು.॥21½॥
ಮೂಲಮ್ - 22½
ಏವಂ ಸ ಕೃತ್ವಾ ದಾರಾನ್ವೈ ಲಂಕಾಯಾ ಈಶ್ವರಃ ಪ್ರಭುಃ ॥
ಗತ್ವಾ ತು ನಗರೀಂ ಭಾರ್ಯೇ ಭ್ರಾತೃಭ್ಯಾಂ ಸಮುಪಾಹರತ್ ।
ಅನುವಾದ
ಹೀಗೆ ವಿವಾಹ ಮಾಡಿಕೊಂಡು ಪ್ರಭಾವಶಾಲೀ ಲಂಕೇಶ್ವರ ರಾವಣನು ಲಂಕೆಗೆ ತೆರಳಿ, ತನ್ನ ಇಬ್ಬರೂ ತಮ್ಮಂದಿರಿಗೆ ಮದುವೆ ಮಾಡಿ ಇಬ್ಬರೂ ಪತ್ನಿಯರನ್ನು ಕರೆದುಕೊಂಡು ಬಂದನು.॥22½॥
ಮೂಲಮ್ - 23½
ವೈರೋಚನಸ್ಯ ದೌಹಿತ್ರೀಂ ವಜ್ರಜ್ವಾಲೇತಿ ನಾಮತಃ ॥
ತಾಂ ಭಾರ್ಯಾಂ ಕುಂಭಕರ್ಣಸ್ಯ ರಾವಣಃ ಸಮಕಲ್ಪಯತ್ ।
ಅನುವಾದ
ವಿರೋಚನಕುಮಾರ ಬಲಿಯ ಮೊಮ್ಮಗಳು ವಜ್ರಜ್ವಾಲಾ ಎಂಬುವಳನ್ನು ಕುಂಭಕರ್ಣನಿಗಾಗಿ ಪತ್ನಿಯಾಗಿಸಿದನು.॥23½॥
ಮೂಲಮ್ - 24½
ಗಂಧರ್ವರಾಜಸ್ಯ ಸುತಾಂ ಶೈಲೂಷಸ್ಯ ಮಹಾತ್ಮನಃ ॥
ಸರಮಾಂ ನಾಮ ಧರ್ಮಜ್ಞಾಂ ಲೇಭೇ ಭಾರ್ಯಾಂ ವಿಭೀಷಣಃ ।
ಅನುವಾದ
ಗಂಧರ್ವರಾಜ ಮಹಾತ್ಮಾ ಶೈಲೂಷನ ಕನ್ಯೆ ಸರಮೆಯನ್ನು ಧರ್ಮಜ್ಞನಾದ ವಿಭೀಷಣನಿಗೆ ಮದುವೆ ಮಾಡಿದನು.॥24½॥
ಮೂಲಮ್ - 25
ತೀರೇ ತು ಸರಸೋ ವೈ ತು ಸಂಜಜ್ಞೇ ಮಾನಸಸ್ಯ ಹಿ ॥
ಮೂಲಮ್ - 26½
ಸರಸ್ತದಾ ಮಾನಸಂ ತು ವವೃಧೇ ಜಲದಾಗಮೇ ।
ಮಾತ್ರಾ ತು ತಸ್ಯಾಃ ಕನ್ಯಾಯಾಃ ಸ್ನೇಹೇನಾಕ್ರಂದಿತಂ ವಚಃ ॥
ಸರೋ ಮಾ ವರ್ಧಯಸ್ವೇತಿ ತತಃ ಸಾ ಸರಮಾಭವತ್ ।
ಅನುವಾದ
ಆ ಸರಮೆಯು ಮಾನಸ ಸರೋವರದ ತೀರದಲ್ಲಿ ಹುಟ್ಟಿದ್ದಳು. ಅವಳು ಹುಟ್ಟುವಾಗ ವರ್ಷಾಋತುವಿ ನಿಂದಾಗಿ ಮಾನಸ ಸರೋವರ ಉಕ್ಕತೊಡಗಿತು. ಆಗ ಈ ಕನ್ಯೆಯ ತಾಯಿ ಸರೋವರದಲ್ಲಿ ಬೇಡಿಕೊಂಡಳು - ‘ಸರೋಮಾ ವರ್ಧಯಸ್ವ’ (ಹೇ ಸರೋವರವೇ ! ನೀನು ಬೆಳೆಯಬೇಡ) ಎಂದು ಹೇಳಬೇಕಾಗಿತ್ತು, ಆದರೆ ಗಾಬರಿಯಿಂದ ‘ಸರಃ ಮಾ’ ಎಂದು ಹೇಳಿದಳು. ಅದರಿಂದ ಆ ಕನ್ಯೆಯ ಹೆಸರು ಸರಮಾ ಎಂದಾಯಿತು.॥25-26½॥
ಮೂಲಮ್ - 27½
ಏವಂ ತೇ ಕೃತದಾರಾ ವೈ ರೇಮೀರೇ ತತ್ರ ರಾಕ್ಷಸಾಃ ॥
ಸ್ವಾಂ ಸ್ವಾಂ ಭಾರ್ಯಾಮುಪಾದಯ ಗಂಧರ್ವಾ ಇವ ನಂದನೇ ।
ಅನುವಾದ
ಹೀಗೆ ಆ ಮೂವರೂ ರಾಕ್ಷಸರು ವಿವಾಹಿತರಾಗಿ ತಮ್ಮ- ತಮ್ಮ ಪತ್ನಿಯರೊಂದಿಗೆ ನಂದನವನದಲ್ಲಿ ವಿಹರಿಸುವ ಗಂಧರ್ವರಂತೆ ಲಂಕೆಯಲ್ಲಿ ರಮಿಸತೊಡಗಿದರು.॥27½॥
ಮೂಲಮ್ - 28½
ತತೋ ಮಂದೋದರೀ ಪುತ್ರಂ ಮೇಘನಾದಮಜೀಜನತ್ ॥
ಸ ಏಷ ಇಂದ್ರಜಿನ್ನಾಮ ಯುಷ್ಮಾಭಿರಭಿಧೀಯತೇ ।
ಅನುವಾದ
ಅನಂತರ ಕೆಲ ಕಾಲದಲ್ಲಿ ಮಂದೋದರಿಯು ಮೇಘನಾದನಿಗೆ ಜನ್ಮವಿತ್ತಳು, ಅವನನ್ನು ಜನರು ಇಂದ್ರಜಿತು ಎಂದೂ ಕರೆಯುತ್ತಿದ್ದರು.॥28½॥
ಮೂಲಮ್ - 29½
ಜಾತಮಾತ್ರೇಣ ಹಿ ಪುರಾ ತೇನ ರಾವಣಸೂನುನಾ ॥
ರುದತಾ ಸುಮಹಾನ್ಮುಕ್ತೋ ನಾದೋ ಜಲಧರೋಪಮಃ ।
ಅನುವಾದ
ಆ ರಾವಣಪುತ್ರನು ಹುಟ್ಟುತ್ತಲೇ ಅಳುವಾಗ ಮೇಘದಂತೆ ಗಂಭೀರ ನಾದ ಮಾಡಿದ್ದನು.॥29½॥
ಮೂಲಮ್ - 30½
ಜಡೀಕೃತಾ ಚ ಸಾ ಲಂಕಾ ತಸ್ಯ ನಾದೇನ ರಾಘವ ॥
ಪಿತಾ ತಸ್ಯಾಕರೋನ್ನಾಮ ಮೇಘನಾದ ಇತಿ ಸ್ವಯಮ್
ಅನುವಾದ
ರಘುನಂದನ! ಆ ಮೇಘದಂತಹ ನಾದದಿಂದ ಇಡೀ ಲಂಕೆ ಜಡದಂತೆ ಸ್ಥಬ್ದವಾಗಿತ್ತು; ಅದರಿಂದ ರಾವಣನೇ ಸ್ವತಃ ಅವನ ಹೆಸರು ಮೇಘನಾದನೆಂದು ಇಟ್ಟನು.॥30½॥
ಮೂಲಮ್ - 31
ಸೋಽವರ್ಧತ ತದಾ ರಾಮ ರಾವಣಾಂತಃಪುರೇ ಶುಭೇ ॥
ಮೂಲಮ್ - 32
ರಕ್ಷಮಾಣೋ ವರಸ್ತ್ರೀಭಿಶ್ಫನ್ನಃ ಕಾಷ್ಠೈರಿವಾನಲಃ ।
ಮಾತಾಪಿತ್ರೋರ್ಮಹಾಹರ್ಷಂ ಜನಯನ್ ರಾವಣಾತ್ಮಜಃ ॥
ಅನುವಾದ
ಶ್ರೀರಾಮಾ! ಆಗ ಆ ರಾವಣ ಕುಮಾರನು ರಾವಣನ ಸುಂದರ ಅಂತಃಪುರದಲ್ಲಿ ತಂದೆ-ತಾಯಿಯರಿಗೆ ಹರ್ಷವನ್ನುಂಟು ಮಾಡುತ್ತಾ ಶ್ರೇಷ್ಠನಾರಿಯರಿಂದ ಸುರಕ್ಷಿತನಾಗಿ ಕಟ್ಟಿಗೆಯಲ್ಲಿ ಅಡಗಿದ ಬೆಂಕಿಯಂತೆ ಬೆಳೆದನು.॥31-32॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹನ್ನೆರಡನೆಯ ಸರ್ಗ ಪೂರ್ಣವಾಯಿತು. ॥12॥