[ಹನ್ನೊಂದನೆಯ ಸರ್ಗ]
ಭಾಗಸೂಚನಾ
ರಾವಣ ಸಂದೇಶ ಕೇಳಿ, ಕುಬೇರನು ತಂದೆಯ ಆಜ್ಞೆಯಂತೆ ಲಂಕೆಯನ್ನು ತ್ಯಜಿಸಿ ಕೈಲಾಸ ಪರ್ವತಕ್ಕೆ ಹೋದದು, ಲಂಕೆಯಲ್ಲಿ ರಾವಣನ ರಾಜ್ಯಾಭಿಷೇಕ, ರಾಕ್ಷಸರ ನಿವಾಸ
ಮೂಲಮ್ - 1
ಸುಮಾಲೀ ವರಲಬ್ಧಾಂಸ್ತು ಜ್ಞಾತ್ವಾ ಚೈತಾನ್ನಿಶಾಚರಾನ್ ।
ಉದತಿಷ್ಠದ್ಭಯಂ ತ್ಯಕ್ತ್ವಾ ಸಾನುಗಃ ಸ ರಸಾತಲಾತ್ ॥
ಅನುವಾದ
ರಾವಣಾದಿ ನಿಶಾಚರರು ಬ್ರಹ್ಮನಿಂದ ವರ ಪಡೆದು ಕೊಂಡಿರುವುದನ್ನು ತಿಳಿದ ಸುಮಾಲಿ ಎಂಬ ರಾಕ್ಷಸನು ಅನುಚರರೊಂದಿಗೆ ಭಯತೊರೆದು ರಸಾತಳದಿಂದ ಹೊರಟು ಭೂಮಂಡಲಕ್ಕೆ ಬಂದನು.॥1॥
ಮೂಲಮ್ - 2
ಮಾರೀಚಶ್ಚ ಪ್ರಹಸ್ತಶ್ಚ ವಿರೂಪಾಕ್ಷೋ ಮಹೋದರಃ ।
ಉದತಿಷ್ಠನ್ ಸುಸಂರಬ್ಧಾಃ ಸಚಿವಾಸ್ತಸ್ಯ ರಕ್ಷಸಃ ॥
ಅನುವಾದ
ಅವನೊಡನೆ ಮಾರೀಚ, ಪ್ರಹಸ್ತ, ವಿರೂಪಾಕ್ಷ, ಮಹೋದರ ಎಂಬ ನಾಲ್ವರು ಮಂತ್ರಿಗಳೂ ರೋಷಾವೇಶದಿಂದ ತುಂಬಿದ್ದು ರಸಾತಳದಿಂದ ಮೇಲಕ್ಕೆ ಬಂದರು.॥2॥
ಮೂಲಮ್ - 3
ಸುಮಾಲೀ ಸಚಿವೈಃ ಸಾರ್ಧಂ ವೃತೋ ರಾಕ್ಷಸಪುಂಗವೈಃ ।
ಅಭಿಗಮ್ಯ ದಶಗ್ರೀವಂ ಪರಿಷ್ವಜ್ಯೇದಮಬ್ರವೀತ್ ॥
ಅನುವಾದ
ರಾಕ್ಷಸಶ್ರೇಷ್ಠರಿಂದ ಸುತ್ತುವರೆದ ಸುಮಾಲಿಯು ದಶಗ್ರೀವನ ಬಳಿಗೆ ಬಂದು ಅವನನ್ನು ಅಪ್ಪಿಕೊಂಡು ಇಂತೆಂದನು.॥3॥
ಮೂಲಮ್ - 4
ದಿಷ್ಟ್ಯಾತೇ ವತ್ಸ ಸಂಪ್ರಾಪ್ತಶ್ಚಿಂತಿತೋಽಯಂ ಮನೋರಥಃ ।
ಯಸ್ತ್ವಂ ತ್ರಿಭುವನಶ್ರೇಷ್ಠಾಲ್ಲಬ್ಧವಾನ್ ವರಮುತ್ತಮಮ್ ॥
ಅನುವಾದ
ವತ್ಸ! ನೀನು ತ್ರಿಭುವನಶ್ರೇಷ್ಠ ಬ್ರಹ್ಮದೇವರಿಂದ ಉತ್ತಮ ವರ ಪಡೆದಿರುವುದು ಸೌಭಾಗ್ಯದ ಮಾತಾಗಿದೆ. ಇದರಿಂದ ಚಿರಕಾಲದಿಂದ ಇಚ್ಛಿಸಿದ ಮನೋರಥ ಪ್ರಾಪ್ತವಾಗಿದೆ.॥4॥
ಮೂಲಮ್ - 5
ಯತ್ಕೃತೇ ಚ ವಯಂ ಲಂಕಾಂ ತ್ಯಕ್ತ್ವಾ ಯಾತಾ ರಸಾತಲಮ್ ।
ತದ್ಗತಂ ನೋ ಮಹಾಬಾಹೋ ಮಹದ್ವಿಷ್ಣುಕೃತಂ ಭಯಮ್ ॥
ಅನುವಾದ
ಮಹಾಬಾಹೋ! ನಾವೆಲ್ಲರೂ ವಿಷ್ಣುವಿನ ಭಯದಿಂದಾಗಿ ರಸಾತಳಕ್ಕೆ ಹೋಗಿದ್ದೆವು. ಈಗ ಆ ನಮ್ಮ ಭಯವು ದೂರವಾಯಿತು.॥5॥
ಮೂಲಮ್ - 6
ಅಸಕೃತ್ತದ್ಭಯಾದ್ ಭಗ್ನಾಃ ಪರಿತ್ಯಜ್ಯ ಸ್ವಮಾಲಯಮ್ ।
ವಿದ್ರುತಾಃ ಸಹಿತಾಃ ಸರ್ವೇ ಪ್ರವಿಷ್ಠಾಃ ಸ್ಮ ರಸಾತಲಮ್ ॥
ಅನುವಾದ
ನಾವು ಹಲವಾರು ಬಾರಿ ಅವನಿಂದ ಭಗ್ನರಾದೆವು. ಇದರಿಂದಲೇ ಅವನ ಭಯದಿಂದ ನಾವು ನಮ್ಮ ನಿವಾಸಸ್ಥಾನವಾದ ಲಂಕೆಯನ್ನು ಬಿಟ್ಟು ಒಟ್ಟಿಗೆ ರಸಾತಲವನ್ನು ಸೇರಿಕೊಂಡೆವು.॥6॥
ಮೂಲಮ್ - 7
ಅಸ್ಮದೀಯಾ ಚ ಲಂಕೇಯಂ ನಗರೀ ರಾಕ್ಷಸೋಷಿತಾ ।
ನಿವೇಶಿತಾ ತವ ಭ್ರಾತ್ರಾ ಧನಾಧ್ಯಕ್ಷೇಣ ಧೀಮತಾ ॥
ಅನುವಾದ
ಧೀಮಂತನಾದ ನಿನ್ನಣ್ಣ ಧನಾಧ್ಯಕ್ಷನು ವಾಸಮಾಡುತ್ತಿರುವ ಲಂಕೆಯು ನಮ್ಮದೇ ಆಗಿದೆ. ಹಿಂದೆ ರಾಕ್ಷಸರೇ ಅಲ್ಲಿ ವಾಸ ಮಾಡುತ್ತಿದ್ದರು.॥7॥
ಮೂಲಮ್ - 8
ಯದಿ ನಾಮಾತ್ರ ಶಕ್ಯಂ ಸ್ಯಾತ್ಸಾಮ್ನಾ ದಾನೇನ ವಾನಘ ।
ತರಸಾ ವಾ ಮಹಾಬಾಹೋ ಪ್ರತ್ಯಾನೇತುಂ ಕೃತಂ ಭವೇತ್ ॥
ಅನುವಾದ
ಮಹಾಬಾಹೋ! ಸಾಮ, ದಾನ ಅಥವಾ ಬಲಪ್ರಯೋಗ ದಿಂದಲಾದರೂ ಲಂಕೆಯನ್ನು ನೀನು ವಶಪಡಿಸಿಕೊಂಡರೆ ನಮ್ಮ ಕಾರ್ಯ ಸಾಧಿಸಿದಂತಾಗುವುದು.॥8॥
ಮೂಲಮ್ - 9
ತ್ವಂ ಚ ಲಂಕೇಶ್ವರಸ್ತಾತ ಭವಿಷ್ಯಸಿ ನ ಸಂಶಯಃ ।
ತ್ವಯಾ ರಾಕ್ಷಸವಂಶೋಯಂ ನಿಮಗ್ನೋಽಪಿ ಸಮುದ್ಧೃತಃ ॥
ಅನುವಾದ
ಅಯ್ಯಾ! ನೀನೇ ಲಂಕೇಶ್ವರನಾಗುವುದರಲ್ಲಿ ಸಂಶಯವೇ ಇಲ್ಲ. ರಸಾತಲದಲ್ಲಿ ಮುಳುಗಿಹೋಗಿದ್ದ ರಾಕ್ಷಸ ವಂಶವನ್ನು ನೀನೀಗ ಮೇಲೆತ್ತಿದಂತಾಗುವುದು.॥9॥
ಮೂಲಮ್ - 10½
ಸರ್ವೇಷಾಂ ನಃ ಪ್ರಭುಶ್ಚೈವ ಭವಿಷ್ಯಸಿ ಮಹಾಬಲ ।
ಅಥಾಬ್ರವೀದ್ದಶಗ್ರೀವೋ ಮಾತಾಮಹಮುಪಸ್ಥಿತಮ್ ॥
ವಿತ್ತೇಶೋ ಗುರುರಸ್ಮಾಕಂ ನಾರ್ಹಸೇ ವಕ್ತುಮೀದೃಶಮ್ ।
ಅನುವಾದ
ಮಹಾಬಲಿ ವೀರನೇ! ನೀನೇ ನಮ್ಮೆಲ್ಲರಿಗೆ ರಾಜನಾಗುವೆ. ಇದನ್ನು ಕೇಳಿ ದಶಗ್ರೀವನು ಬಳಿಯಲ್ಲಿ ನಿಂತಿದ್ದ ಮಾತಾಮಹನಾದ ಸುಮಾಲಿಯಲ್ಲಿ ಹೇಳಿದನು - ಅಜ್ಜಾ! ಕುಬೇರನು ನನಗೆ ಅಣ್ಣನಾಗಿದ್ದಾನೆ. ಅದರಿಂದ ಇಂತಹ ಮಾತನ್ನು ನೀವು ಹೇಳಬಾರದು.॥10½॥
ಮೂಲಮ್ - 11½
ಸಾಮ್ನಾ ಹಿ ರಾಕ್ಷಸೇಂದ್ರೇಣ ಪ್ರತ್ಯಾಖ್ಯಾತೋ ಗರೀಯಸಾ ॥
ಕಿಂಚಿನ್ನಾಹ ತದಾ ರಕ್ಷೋ ಜ್ಞಾತ್ವಾ ತಸ್ಯ ಚಿಕೀರ್ಷಿತಾಮ್ ।
ಅನುವಾದ
ಶ್ರೇಷ್ಠನಾದ ರಾಕ್ಷಸೇಂದ್ರನಾದ ದಶಗ್ರೀವನು ಶಾಂತಭಾವದಿಂದ ಹೇಳಿದುದನ್ನು ಕೇಳಿ ಅವನ ಮನೋಗತವಾದ ಅಭಿಲಾಷೆಯನ್ನು ತಿಳಿದು ಸುಮಾಲಿಯು ಸುಮ್ಮನಾಗಿ, ಮುಂದೆ ಏನನ್ನು ಮಾತನಾಡಲಿಲ್ಲ.॥11½॥
ಮೂಲಮ್ - 12
ಕಸ್ಯಚಿತ್ತ್ವಥ ಕಾಲಸ್ಯ ವಸಂತಂ ರಾವಣಂ ತತಃ ॥
ಮೂಲಮ್ - 13
ಉಕ್ತವಂತಂ ತಥಾ ವಾಕ್ಯಂ ದಶಗ್ರೀವಂ ನಿಶಾಚರಃ ।
ಪ್ರಹಸ್ತಃ ಪ್ರಶ್ರಿತಂ ವಾಕ್ಯಮಿದಮಾಹ ಸಕಾರಣಮ್ ॥
ಅನುವಾದ
ಕೆಲವು ಕಾಲವು ಕಳೆದನಂತರ ಸುಮಾಲಿಗೆ ಸೌಮ್ಯವಾದ ಉತ್ತರವನ್ನೇ ಕೊಟ್ಟಿದ್ದ ಶ್ಲೇಷ್ಮಾತಕ ವನದಲ್ಲಿ ವಾಸಿಸುತ್ತಿದ್ದ ದಶಗ್ರೀವ ರಾವಣನಲ್ಲಿ ನಿಶಾಚರ ಪ್ರಹಸ್ತನು ವಿನಯಪೂರ್ವಕ ಮತ್ತು ಯುಕ್ತವಾದ ಈ ಮಾತನ್ನು ಹೇಳಿದನು.॥12-13॥
ಮೂಲಮ್ - 14
ದಶಗ್ರೀವ ಮಹಾಬಾಹೋ ನಾರ್ಹಸೇ ವಕ್ತುಮೀದೃಶಮ್ ।
ಸೌಭ್ರಾತ್ರಂ ನಾಸ್ತಿ ಶೂರಾಣಾಂ ಶೃಣು ಚೇದಂ ವಚೋ ಮಮ ॥
ಅನುವಾದ
ಮಹಾಬಾಹು ದಶಗ್ರೀವನೇ! ನೀನು ಅಜ್ಜನಲ್ಲಿ ಹೇಳಿದಂತೆ ಆಡಬಾರದು. ನನ್ನ ಮಾತನ್ನು ಕೇಳು. ಶೂರರಾದವರಿಗೆ ಭ್ರಾತೃಭಾವವೆಲ್ಲಿಯದು? ಶೂರರಾದವರಿಗೆ ಅಣ್ಣ-ತಮ್ಮಂದಿರೆಂಬ ಭಾವನೆಯೇ ಇರುವುದಿಲ್ಲ.॥14॥
ಮೂಲಮ್ - 15
ಅದಿತಿಶ್ಚ ದಿತಿಶ್ಚೈವ ಭಗಿನ್ಯೌ ಸಹಿತೇ ಹಿ ತೇ ।
ಭಾರ್ಯೇ ಪರಮರೂಪಿಣ್ಯೌ ಕಶ್ಯಪಸ್ಯ ಪ್ರಜಾಪತೇಃ ॥
ಅನುವಾದ
ಅದಿತಿ ಮತ್ತು ದಿತಿ ಎಂಬ ಅಕ್ಕ ತಂಗಿಯರು ಸದಾ ಜೊತೆಯಲ್ಲೇ ಇರುತ್ತಿದ್ದರು. ಪರಮ ಸುಂದರಿಯರಾದ ಇವರು ಕಶ್ಯಪ ಪ್ರಜಾಪತಿಯ ಭಾರ್ಯೆಯರಾಗಿದ್ದರು.॥15॥
ಮೂಲಮ್ - 16
ಅದಿತಿರ್ಜನಯಾಮಾಸ ದೇವಾಂಸ್ತ್ರಿಭುವನೇಶ್ವರಾನ್ ।
ದಿತಿಸ್ತ್ವಜನಯದ್ದೈತ್ಯಾನ್ ಕಶ್ಯಪಸ್ಯಾತ್ಮಸಂಭವಾನ್ ॥
ಅನುವಾದ
ಅದಿತಿಯು ಮೂರು ಲೋಕಗಳ ಒಡೆಯರಾದ ದೇವತೆಗಳಿಗೆ ಜನ್ಮ ನೀಡಿದಳು. ದಿತಿಯು ದೈತ್ಯರಿಗೆ ಜನ್ಮ ನೀಡಿದಳು. ದೇವತೆಗಳು ಮತ್ತು ದೈತ್ಯರು ಕಶ್ಯಪರ ಔರಸ ಪುತ್ರರಾಗಿದ್ದಾರೆ.॥16॥
ಮೂಲಮ್ - 17
ದೈತ್ಯಾನಾಂ ಕಿಲ ಧರ್ಮಜ್ಞ ಪುರೇಯಂ ಸವನಾರ್ಣವಾ ।
ಸಪರ್ವತಾ ಮಹೀ ವೀರ ತೇಽಭವನ್ ಪ್ರಭವಿಷ್ಣವಃ ॥
ಅನುವಾದ
ಧರ್ಮಜ್ಞ ವೀರನೇ! ಪರ್ವತ, ವನ, ಸಮುದ್ರಸಹಿತ ಇಡೀ ಭೂಮಂಡಲವು ಮೊದಲು ದೈತ್ಯರ ಅಧೀನದಲ್ಲೇ ಇತ್ತು. ದೈತ್ಯರು ಆಗ ಅತ್ಯಂತ ಪ್ರಭಾವಶಾಲಿಗಳಾಗಿದ್ದರು.॥17॥
ಮೂಲಮ್ - 18
ನಿಹತ್ಯ ತಾಂಸ್ತು ಸಮರೇ ವಿಷ್ಣುನಾ ಪ್ರಭವಿಷ್ಣುನಾ ।
ದೇವಾನಾಂ ವಶಮಾನೀತಂ ತ್ರೈಲೋಕ್ಯಮಿದಮವ್ಯಯಮ್ ॥
ಅನುವಾದ
ಆದರೆ ಸರ್ವಶಕ್ತಿವಂತ ವಿಷ್ಣುವು ಯುದ್ಧದಲ್ಲಿ ದೈತ್ಯರನ್ನು ಸಂಹರಿಸಿ, ಅಕ್ಷಯವಾದ ಮೂರುಲೋಕಗಳ ಅಧಿಪತ್ಯವನ್ನು ದೇವತೆಗಳಿಗೆ ವಶಕ್ಕೊಪ್ಪಿಸಿದನು.॥18॥
ಮೂಲಮ್ - 19
ನೈತದೇಕೋ ಭವಾನೇವ ಕರಿಷ್ಯತಿ ವಿಪರ್ಯಯಮ್ ।
ಸುರಾಸುರೈರಾಚರಿತಂ ತತ್ ಕುರುಷ್ವ ವಚೋ ಮಮ ॥
ಅನುವಾದ
ಇಂತಹ ವಿಪರೀತವಾದ ಆಚರಣೆಯಲ್ಲಿ ನೀನೇನು ಮೊದಲಿಗನಲ್ಲ. ದೇವತೆಗಳೂ ಮತ್ತು ಅಸುರರೂ ಹಿಂದೆ ಇದೇ ನೀತಿಯನ್ನು ಅನುಸರಿಸಿರುವರು. ಆದುದರಿಂದ ನನ್ನ ಮಾತಿನಂತೆ ನಡೆ.॥19॥
ಮೂಲಮ್ - 20
ಏವಮುಕ್ತೋ ದಶಗ್ರೀವಃ ಪ್ರಹೃಷ್ಟೇನಾಂತರಾತ್ಮನಾ ।
ಚಿಂತಯಿತ್ವಾ ಮುಹೂರ್ತಂ ವೈ ಬಾಢಮಿತ್ಯೇವ ಸೋಽಬ್ರವೀತ್ ॥
ಅನುವಾದ
ಪ್ರಹಸ್ತನು ಹೀಗೆ ಹೇಳಿದಾಗ ದಶಗ್ರೀವನ ಮನಸ್ಸು ಪ್ರಸನ್ನವಾಯಿತು. ಅವನು ಎರಡು ಗಳಿಗೆ ಯೋಚಿಸಿ ಹಾಗೆಯೇ ಆಗಲಿ ಎಂದು ಹೇಳಿದನು.॥20॥
ಮೂಲಮ್ - 21
ಸ ತು ತೇನೈವ ಹರ್ಷೇಣ ತಸ್ಮಿನ್ನಹನಿ ವೀರ್ಯವಾನ್ ।
ವನಂ ಗತೋ ದಶಗ್ರೀವಃ ಸಹ ತೈಃ ಕ್ಷಣದಾಚರೈಃ ॥
ಅನುವಾದ
ಅನಂತರ ಅದೇ ದಿನ ಹರ್ಷದಿಂದ ಪರಾಕ್ರಮಿ ದಶಗ್ರೀವನು ಆ ನಿಶಾಚರರೊಡನೆ ಲಂಕೆಯ ಸಮೀಪದ ಅರಣ್ಯಕ್ಕೆ ಪ್ರಯಾಣ ಮಾಡಿದನು.॥21॥
ಮೂಲಮ್ - 22
ತ್ರಿಕೂಟಸ್ಥಃ ಸ ತು ತದಾ ದಶಗ್ರೀವೋ ನಿಶಾಚರಃ ।
ಪ್ರೇಷಯಾಮಾಸ ದೌತ್ಯೇನ ಪ್ರಹಸ್ತಂ ವಾಕ್ಯಕೋವಿದಮ್ ॥
ಅನುವಾದ
ಆಗ ತ್ರಿಕೂಟ ಪರ್ವತಕ್ಕೆ ಹೋಗಿ ದಶಗ್ರೀವನು ವಾಕ್ಯ ಕೋವಿದನಾದ ಪ್ರಹಸ್ತನನ್ನೇ ದೂತನನ್ನಾಗಿಸಿ ಕುಬೇರನ ಬಳಿಗೆ ಕಳಿಸಿ ಕೊಡುತ್ತಾ ಹೇಳಿದನು.॥22॥
ಮೂಲಮ್ - 23
ಪ್ರಹಸ್ತ ಶೀಘ್ರಂ ಗಚ್ಛ ತ್ವಂ ಬ್ರೂಹಿ ನೈರ್ಋತಪುಂಗವಮ್ ।
ವಚಸಾ ಮಮ ವಿತ್ತೇಶಂ ಸಾಮಪೂರ್ವಮಿದಂ ವಚಃ ॥
ಅನುವಾದ
ಪ್ರಹಸ್ತನೇ! ನೀನು ಬೇಗನೆ ಹೋಗಿ, ನನ್ನ ಮಾತಿನಂತೆ ಧನಾಧ್ಯಕ್ಷ ಕುಬೇರನ ಬಳಿ ಶಾಂತಿಪೂರ್ವಕ ಹೀಗೆ ಹೇಳು.॥23॥
ಮೂಲಮ್ - 24
ಇಯಂ ಲಂಕಾಪುರೀ ರಾಜನ್ ರಾಕ್ಷಸಾನಾಂ ಮಹಾತ್ಮನಾಮ್ ।
ತ್ವಯಾ ನಿವೇಶಿತಾ ಸೌಮ್ಯ ನೈತದ್ಯುಕ್ತಂ ತವಾನಘ ॥
ಅನುವಾದ
ರಾಜನೇ! ಈ ಲಂಕಾಪುರಿಯು ಮಹಾತ್ಮಾ ರಾಕ್ಷಸರದ್ದಾಗಿದೆ. ಅದರಲ್ಲಿ ನೀನು ವಾಸಮಾಡುತ್ತಿರುವೆ. ಸೌಮ್ಯನೇ! ನಿಷ್ಪಾಪ ಯಕ್ಷರಾಜನೇ! ಇದು ನಿನಗೆ ಉಚಿತವಲ್ಲ.॥24॥
ಮೂಲಮ್ - 25
ತದ್ಭವಾನ್ಯದಿ ನೋ ಹ್ಯದ್ಯ ದದ್ಯಾದತುಲವಿಕ್ರಮ ।
ಕೃತಾ ಭವೇನ್ಮಮ ಪ್ರೀತಿಧರ್ಮಶ್ಚೈವಾನುಪಾಲಿತಃ ॥
ಅನುವಾದ
ಅತುಲ ಪರಾಕ್ರಮಿ ಧನೇಶ್ವರನೇ! ನೀನು ಈ ಲಂಕೆಯನು ನಮಗೆ ಮರಳಿಕೊಟ್ಟರೆ ನಮಗೆ ಬಹಳ ಸಂತೋಷವಾಗಬಹುದು. ನೀನು ಧರ್ಮವನ್ನು ಪಾಲಿಸಿದೆ ಎಂದು ತಿಳಿಯಲಾಗುವುದು.॥25॥
ಮೂಲಮ್ - 26
ಸ ತು ಗತ್ವಾ ಪುರೀಂ ಲಂಕಾಂ ಧನದೇನ ಸುರಕ್ಷಿತಾಮ್ ।
ಅಬ್ರವೀತ್ಪರಮೋದಾರಂ ವಿತ್ತಪಾಲಮಿದಂ ವಚಃ ॥
ಅನುವಾದ
ಆಗ ಪ್ರಹಸ್ತನು ಕುಬೇರನು ಪಾಲಿಸುತ್ತಿದ್ದ ಲಂಕಾಪುರಿಗೆ ಹೋಗಿ ಆ ಧನಾಧ್ಯಕ್ಷನಲ್ಲಿ ಬಹಳ ಉದಾರತೆಯಿಂದ ಹೇಳಿದನು-॥26॥
ಮೂಲಮ್ - 27
ಪ್ರೇಷಿತೋಹಂ ತವ ಭ್ರಾತ್ರಾ ದಶಗ್ರೀವೇಣ ಸುವ್ರತ ।
ತ್ವತ್ಸಮೀಪಂ ಮಹಾಬಾಹೋ ಸರ್ವಶಸ್ತ್ರಭೃತಾಂ ವರ ॥
ಮೂಲಮ್ - 28
ತಚ್ಛ್ರೂಯತಾಂ ಮಹಾಪ್ರಾಜ್ಞ ಸರ್ವಶಾಸ ವಿಶಾರದ
ವಚನಂ ಮಮ ವಿತ್ತೇಶ ಯದ್ಬ್ರವೀತಿ ದಶಾನನಃ ॥
ಅನುವಾದ
ಸುವ್ರತನೇ! ಶಸಧಾರಿಗಳಲ್ಲಿ ಶ್ರೇಷ್ಠನೇ! ಸರ್ವಶಾಸ್ತ್ರ ವಿಶಾರದನೇ! ಮಹಾಬಾಹು, ಮಹಾಪ್ರಾಜ್ಞ ಧನೇಶ್ವರನೇ! ನಿಮ್ಮ ತಮ್ಮನಾದ ದಶಗ್ರೀವನು ನನ್ನನ್ನು ನಿಮ್ಮ ಬಳಿಗೆ ಕಳಿಸಿರುವನು. ದಶಮುಖ ರಾವಣನು ನಿಮ್ಮಲ್ಲಿ ಹೇಳಬೇಕಾದ ಮಾತನ್ನು ತಿಳಿಸುತ್ತಿರುವೆನು. ನನ್ನ ಮಾತನ್ನು ಕೇಳಿರಿ.॥27-28॥
ಮೂಲಮ್ - 29
ಇಯಂ ಕಿಲ ಪುರೀ ರಮ್ಯಾ ಸುಮಾಲಿಪ್ರಮುಖೈಃ ಪುರಾ ।
ಭುಕ್ತಪೂರ್ವಾ ವಿಶಾಲಾಕ್ಷ ರಾಕ್ಷಸೈರ್ಭೀಮವಿಕ್ರಮೈಃ ॥
ಮೂಲಮ್ - 30
ತೇನ ವಿಜ್ಞಾಪ್ಯತೇ ಸೋಽಯಂ ಸಾಂಪ್ರತಂ ವಿಶ್ರವಾತ್ಮಜ ।
ತದೇಷಾ ದೀಯತಾಂ ತಾತ ಯಾಚತಸ್ತಸ್ಯ ಸಾಮತಃ ॥
ಅನುವಾದ
ವಿಶಾಲಲೋಚನ ವೈಶ್ರವಣನೇ! ಈ ರಮಣೀಯ ಲಂಕೆಯು ಮೊದಲು ಭಯಾನಕ ಪರಾಕ್ರಮಿ ಸುಮಾಲಿಯೇ ಆದಿ ರಾಕ್ಷಸರ ಅಧಿಕಾರದಲ್ಲಿ ಇತ್ತು. ಅವರು ಬಹಳ ಕಾಲ ಇದನ್ನು ಅನುಭವಿಸಿರುವರು. ಆದ್ದರಿಂದ ‘ಈ ಲಂಕೆಯು ಯಾರದಾಗಿತ್ತೋ ಅವರಿಗೆ ಮರಳಿಕೊಡು’ ಎಂದು ದಶಗ್ರೀವನು ಈಗ ಸೂಚಿಸುತ್ತಿರುವನು. ಅಯ್ಯಾ! ಶಾಂತಿಯಿಂದ ಬೇಡಿದ ದಶಗ್ರೀವನಿಗೆ ನೀನು ಈ ಪುರಿಯನ್ನು ಕೊಟ್ಟು ಬಿಡು.॥29-30॥
ಮೂಲಮ್ - 31
ಪ್ರಹಸ್ತಾದಪಿ ಸಂಶ್ರುತ್ಯ ದೇವೇ ವೈಶ್ರವಣೋ ವಚಃ ।
ಪ್ರತ್ಯುವಾಚ ಪ್ರಹಸ್ತಂ ತಂ ವಾಕ್ಯಂ ವಾಕ್ಯವಿದಾಂ ವರಃ ॥
ಅನುವಾದ
ಪ್ರಹಸ್ತನು ಹೇಳಿದ ಮಾತನ್ನು ಕೇಳಿ, ಮಾತಿನ ಮರ್ಮವನ್ನು ತಿಳಿದ ವೈಶ್ರವಣನು ಪ್ರಹಸ್ತನಲ್ಲಿ ಹೀಗೆ ಉತ್ತರಿಸಿದನು.॥31॥
ಮೂಲಮ್ - 32
ದತ್ತಾ ಮಮೇಯಂ ಪಿತ್ರಾ ತು ಲಂಕಾ ಶೂನ್ಯಾ ನಿಶಾಚರೈಃ ।
ನಿವೇಶಿತಾ ಚ ಮೇ ರಕ್ಷೋ ದಾನಮಾನಾದಿಭಿರ್ಗುಣೈಃ ॥
ಅನುವಾದ
ರಾಕ್ಷಸನೇ! ಈ ಲಂಕೆಯು ಮೊದಲು ರಾಕ್ಷಸರಿಂದ ಬರಿದಾಗಿತ್ತು. ಆಗ ತಂದೆಯವರು ನನಗೆ ಇದರಲ್ಲಿ ಇರಲು ಆಜ್ಞಾಪಿಸಿದನು. ನಾನು ಇದರಲ್ಲಿ ದಾನ, ಮಾನಾದಿ ಗುಣಗಳಿಂದ ಪ್ರಜೆಗಳನ್ನು ನೆಲೆಸಿದೆ.॥32॥
ಮೂಲಮ್ - 33
ಬ್ರೂಹಿ ಗಚ್ಛ ದಶಗ್ರೀವಂ ಪುರೀ ರಾಜ್ಯಂ ಚ ಯನ್ಮಮ ।
ತತ್ರಾಪ್ಯೇತನ್ಮಹಾಬಾಹೋ ಭುಂಕ್ಷ್ಯ ರಾಜ್ಯಮಕಂಟಕಮ್ ॥
ಅನುವಾದ
ದೂತನೇ! ನೀನು ದಶಗ್ರೀವನ ಬಳಿಗೆ ಹೋಗಿ ಹೇಳು - ಮಹಾಬಾಹೋ! ನನ್ನ ಬಳಿ ಇರುವ ಈ ಪುರಿ ಮತ್ತು ನಿಷ್ಕಂಟಕ ರಾಜ್ಯವೆಲ್ಲವೂ ನಿನ್ನದೂ ಆಗಿದೆ. ನೀನೂ ಇದನ್ನು ಉಪಭೋಗಿಸು.॥33॥
ಮೂಲಮ್ - 34
ಅವಿಭಕ್ತಂ ತ್ವಯಾ ಸಾರ್ಧಂ ರಾಜ್ಯಂ ಯಚ್ಚಾಪಿ ಮೇ ವಸು ।
ಏವಮುಕ್ತ್ವಾ ಧನಾಧ್ಯಕ್ಷೋ ಜಗಾಮ ಪಿತುರಂತಿಕಮ್ ॥
ಅನುವಾದ
‘‘ನನ್ನ ರಾಜ್ಯ ಮತ್ತು ಎಲ್ಲ ಸಂಪತ್ತು ನಿನ್ನಿಂದ ಪಾಲಾಗಲಿಲ್ಲ’’ ಎಂದು ಹೇಳಿ ಧನಾಧ್ಯಕ್ಷ ಕುಬೇರನು ತನ್ನ ತಂದೆ ವಿಶ್ರವಸ್ಸುವಿನ ಬಳಿಗೆ ಹೊರಟು ಹೋದನು.॥34॥
ಮೂಲಮ್ - 35
ಅಭಿವಾದ್ಯ ಗುರುಂ ಪ್ರಾಹ ರಾವಣಸ್ಯಯದೀಪ್ಸಿತಮ್ ।
ಏಷತಾತ ದಶಗ್ರೀವೋ ದೂತಂ ಪ್ರೇಷಿತವಾನ್ಮಮ ॥
ಮೂಲಮ್ - 36
ದೀಯತಾಂ ನಗರೀ ಲಂಕಾ ಪೂರ್ವಂ ರಕ್ಷೋಗಣೋಷಿತಾ ।
ಮಯಾತ್ರ ಯದನುಷ್ಠೇಯಂ ತನ್ಮಯಾಚಕ್ಷ್ವಸುವ್ರತ ॥
ಅನುವಾದ
ಅಲ್ಲಿ ತಂದೆಗೆ ವಂದಿಸಿ ರಾವಣನ ಬಯಕೆಯನ್ನು ಹೀಗೆ ತಿಳಿಸಿದನು - ಅಪ್ಪಾ! ಇಂದು ದಶಗ್ರೀವನು ನನ್ನ ಬಳಿಗೆ ದೂತನನ್ನು ಕಳಿಸಿ - ‘ಈ ಲಂಕೆಯಲ್ಲಿ ಮೊದಲು ರಾಕ್ಷಸರು ಇರುತ್ತಿದ್ದರು, ಆದ್ದರಿಂದ ಇದನ್ನು ರಾಕ್ಷಸರಿಗೆ ಮರಳಿ ಕೊಡು, ಎಂದು ಹೇಳಿ ಕಳಿಸಿರುವನು. ಸುವ್ರತನೇ! ಈಗ ಈ ವಿಷಯದಲ್ಲಿ ನಾನೇನು ಮಾಡಬೇಕೆಂಬುದನ್ನು ತಿಳಿಸು’ ಎಂದು ಹೇಳಿದನು.॥35-36॥
ಮೂಲಮ್ - 37
ಬ್ರಹ್ಮರ್ಷಿಸ್ತ್ವೇವಮುಕ್ತೋಽಸೌ ವಿಶ್ರವಾಮುನಿಪುಂಗವಃ ।
ಪ್ರಾಂಜಲಿಂ ಧನದಂ ಪ್ರಾಹ ಶೃಣು ಪುತ್ರ ವಚೋ ಮಮ ॥
ಅನುವಾದ
ಅವನು ಹೀಗೆ ಹೇಳಿದಾಗ ಬ್ರಹ್ಮರ್ಷಿ ಮುನಿವರ ವಿಶ್ರವಾ ಕೈಮುಗಿದು ನಿಂತಿರುವ ಕುಬೇರನಲ್ಲಿ ಹೇಳಿದರು- ಮಗು! ನನ್ನ ಮಾತನ್ನು ಕೇಳು.॥37॥
ಮೂಲಮ್ - 38½
ದಶಗ್ರೀವೋ ಮಹಾಬಾಹುರುಕ್ತವಾನ್ ಮಮ ಸಂನಿಧೌ ।
ಮಯಾ ನಿರ್ಭರ್ತ್ಸಿತಶ್ಚಾಸೀದ್ ಬಹುಶೋಕ್ತಃ ಸುದುರ್ಮತಿಃ ॥
ಸ ಕ್ರೋಧೇನ ಮಯಾ ಚೋಕ್ತೋ ಧ್ವಂಸಸೇ ಚ ಪುನಃ ಪುನಃ ।
ಅನುವಾದ
ಮಹಾಬಾಹು ದಶಗ್ರೀವನು ನನ್ನ ಬಳಿಯೂ ಇದನ್ನು ಹೇಳಿದ್ದನು. ಇದಕ್ಕಾಗಿ ನಾನು ಆ ದುರ್ಬುದ್ಧಿಯನ್ನು ತುಂಬಾ ಗದರಿಸಿ, ಕ್ರೋಧಗೊಂಡು - ಎಲೈ! ಹೀಗೆ ಮಾಡುವುದರಿಂದ ಪತನವಾದೀತು. ಇದರ ಲ ಒಳ್ಳೆಯದಾಗದು ಎಂದು ಹೇಳಿದ್ದೆ.॥38½॥
ಮೂಲಮ್ - 39
ಶ್ರೇಯೋಽಭಿಯುಕ್ತಂ ಧರ್ಮ್ಯಂ ಚ ಶೃಣು ಪುತ್ರ ವಚೋ ಮಮ ॥
ಮೂಲಮ್ - 40
ವರಪ್ರದಾನಸಮ್ಮೂಢೋ ಮಾನ್ಯಾಮಾನ್ಯಂ ಸುದುರ್ಮತಿಃ ।
ನ ವೇತ್ತಿ ಮಮ ಶಾಪಾಚ್ಚ ಪ್ರಕೃತಿಂ ದಾರುಣಾಂ ಗತಃ ॥
ಅನುವಾದ
ಮಗನೇ ! ಈಗ ನೀನು ನನ್ನ ಧರ್ಮಾನುಕೂಲ ಮತ್ತು ಶ್ರೇಯಸ್ಕರ ಮಾತನ್ನು ಗಮನವಿಟ್ಟು ಕೇಳು. ರಾವಣನ ಬುದ್ಧಿ ನೆಟ್ಟಗಿಲ್ಲ. ಅವನು ವರ ಪಡೆದು ಉನ್ಮತ್ತನಾಗಿದ್ದಾನೆ. ವಿವೇಕ ಕಳೆದುಕೊಂಡಿರುವನು. ನನ್ನ ಶಾಪದಿಂದಾಗಿಯೇ ಅವನ ಪ್ರಕೃತಿ ಕ್ರೂರವಾಗಿದೆ.॥39-40॥
ಮೂಲಮ್ - 41
ತಸ್ಮಾದ್ಗಚ್ಛ ಮಹಾಬಾಹೋ ಕೈಲಾಸಂ ಧರಣೀಧರಮ್ ।
ನಿವೇಶಯ ನಿವಾಸಾರ್ಥಂ ತ್ಯಕ್ತ್ವಾ ಲಂಕಾಂ ಸಹಾನುಗಃ ॥
ಅನುವಾದ
ಅದಕ್ಕಾಗಿ ಮಹಾಬಾಹೋ ! ಈಗ ನೀನು ಅನುಚರರೊಂದಿಗೆ ಲಂಕೆಯನ್ನು ಬಿಟ್ಟು ಕೈಲಾಸಕ್ಕೆ ಹೊರಟುಹೋಗು. ಅಲ್ಲಿ ಇರಲು ಇನ್ನೊಂದು ನಗರವನ್ನು ನೆಲೆಗೊಳಿಸು.॥41॥
ಮೂಲಮ್ - 42½
ತತ್ರ ಮಂದಾಕಿನೀ ರಮ್ಯಾ ನದೀನಾಮುತ್ತಮಾ ನದೀ ।
ಕಾಂಚನೈಃ ಸೂರ್ಯಸಂಕಾಶೈಃ ಪಂಕಜೈಃ ಸಂವೃತೋದಕಾ ॥
ಕುಮುದೈರುತ್ಪಲೈಶ್ಚೈವ ಅನ್ಯೈಶ್ಚೈವ ಸುಗಂಧಿಭಿಃ ।
ಅನುವಾದ
ಅಲ್ಲಿ ರಮಣೀಯ ಶ್ರೇಷ್ಠ ಮಂದಾಕಿನೀ ನದಿ ಹರಿಯುತ್ತಿದೆ. ಅದರ ನೀರು ಸೂರ್ಯನಂತೆ ಪ್ರಕಾಶಿಸುವ ಸುವರ್ಣಮಯ ಕಮಲ, ಉತ್ಪಲ ಹಾಗೂ ಇತರ ಬೇರೆ ಸುಗಂಧಿತ ಹೂವುಗಳಿಂದ ಆಚ್ಛಾದಿತವಾಗಿದೆ.॥42½॥
ಮೂಲಮ್ - 43
ತತ್ರ ದೇವಾಃ ಸಗಂಧರ್ವಾಃ ಸಾಪ್ಸರೋರಗಕಿಂನರಾಃ ॥
ಮೂಲಮ್ - 45
ವಿಹಾರಶೀಲಾಃ ಸತತಂ ರಮಂತೇ ಸರ್ವದಾಶ್ರಿತಾಃ ।
ನ ಹಿ ಕ್ಷಮಂ ತವಾನೇನ ವೈರಂ ಧನದ ರಕ್ಷಸಾ ॥
ಜಾನೀಷೇ ಹಿಯಥಾನೇನ ಲಬ್ಧಃ ಪರಮಕೋ ವರಃ ॥
ಅನುವಾದ
ಆ ಪರ್ವತದ ಮೇಲೆ ಸದಾ ತಿರುಗಾಡುವುದು ಪ್ರಿಯರಾದ ದೇವತಾ, ಗಂಧರ್ವ, ಅಪ್ಸರಾ, ನಾಗ, ಕಿನ್ನರ ಮುಂತಾದ ದಿವ್ಯ ಪ್ರಾಣಿಗಳು ಯಾವಾಗಲೂ ಅಲ್ಲಿ ಆನಂದವನ್ನು ಅನುಭವಿ ಸುವರು. ಧನಾಧಿಪನೇ! ಈ ರಾಕ್ಷಸನೊಂದಿಗೆ ವೈರವಿರಿ ಸುವುದು ಉಚಿತವಲ್ಲ. ಇವನು ಬ್ರಹ್ಮನಿಂದ ಎಂತಹ ಉತ್ತಮ ವರ ಪಡೆದಿರುವನೆಂದು ನಿನಗೆ ತಿಳಿದೇ ಇದೆ.॥43-45॥
ಮೂಲಮ್ - 46
ಏವಮುಕ್ತೋ ಗೃಹೀತ್ವಾ ತು ತದ್ವಚಃ ಪಿತೃಗೌರವಾತ್ ।
ಸದಾರಪುತ್ರಃ ಸಾಮಾತ್ಯಃ ಸವಾಹನ ಧನೋ ಗತಃ ॥
ಅನುವಾದ
ಮುನಿಯು ಹೀಗೆ ಹೇಳಿದಾಗ ಕುಬೇರನು ತಂದೆಗೆ ಗೌರವ ಕೊಟ್ಟು ಅವರ ಮಾತನ್ನು ಒಪ್ಪಿಕೊಂಡನು. ಪತ್ನೀ, ಪುತ್ರ, ಮಂತ್ರೀ, ವಾಹನ, ಧನದೊಂದಿಗೆ ಲಂಕೆಯಿಂದ ಕೈಲಾಸಕ್ಕೆ ಹೊರಟುಹೋದನು.॥46॥
ಮೂಲಮ್ - 47
ಪ್ರಹಸ್ತೋಽಥ ದಶಗ್ರೀವಂ ಗತ್ವಾಂ ವಚನಮಬ್ರವೀತ್ ।
ಪ್ರಹೃಷ್ಟಾತ್ಮಾ ಮಹಾತ್ಮಾನಂ ಸಹಾಮಾತ್ಯಂ ಸಹಾನುಜಮ್ ॥
ಅನುವಾದ
ಅನಂತರ ಪ್ರಹಸ್ತನು ಸಂತೋಷಗೊಂಡು ಮಂತ್ರಿ ಮತ್ತು ಸಹೋದರ ರೊಂದಿಗೆ ಕುಳಿತಿರುವ ದಶಗ್ರೀವನ ಬಳಿಗೆ ಹೋಗಿ ಹೇಳಿದನು.॥47॥
ಮೂಲಮ್ - 48
ಶೂನ್ಯಾ ಸಾ ನಗರೀ ಲಂಕಾ ತ್ಯಕ್ತ್ವೇನಾಂ ಧನದೋ ಗತಃ ।
ಪ್ರವಿಶ್ಯ ತಾಂ ಸಹಾಸ್ಮಾಭಿಃ ಸ್ವಧರ್ಮಂ ತತ್ರಪಾಲಯ ॥
ಅನುವಾದ
ಲಂಕೆಯು ಬರಿದಾಗಿದೆ, ಕುಬೇರನು ಅದನ್ನು ಬಿಟ್ಟು ಹೋಗಿರುವನು. ಈಗ ನೀವು ನಮ್ಮೊಂದಿಗೆ ಅದನ್ನು ಪ್ರವೇಶಿಸಿ ತಾವು ಧರ್ಮದ ಪಾಲನೆ ಮಾಡಿರಿ.॥48॥
ಮೂಲಮ್ - 49
ಏವಮುಕ್ತೋ ದಶಗ್ರೀವಃ ಪ್ರಹಸ್ತೇನ ಮಹಾಬಲಃ ।
ವಿವೇಶ ನಗರೀಂ ಲಂಕಾಂ ಭ್ರಾತೃಭಿಃ ಸಬಲಾನುಗೈಃ ॥
ಮೂಲಮ್ - 50
ಧನದೇನ ಪರಿತ್ಯಕ್ತಾಂ ಸುವಿಭಕ್ತಮಹಾಪಥಾಮ್ ।
ಆರುರೋಹ ಸ ದೇವಾರಿಃ ಸ್ವರ್ಗಂ ದೇವಾಧಿಪೋ ಯಥಾ ॥
ಅನುವಾದ
ಪ್ರಹಸ್ತನು ಹೀಗೆ ಹೇಳಿದಾಗ ಮಹಾಬಲಿ ದಶಗ್ರೀವನು ತನ್ನ ಸೈನ್ಯ, ಅನುಚರ ಹಾಗೂ ಸಹೋದರರೊಂದಿಗೆ ಕುಬೇರನು ತ್ಯಜಿಸಿದ ಲಂಕೆಯನ್ನು ಪ್ರವೇಶಿಸಿದನು. ಆ ನಗರದಲ್ಲಿ ವಿಭಾಗಪೂರ್ವಕ ಸುಂದರ ದೊಡ್ಡ-ದೊಡ್ಡ ರಾಜಬೀದಿಗಳಿದ್ದವು. ಸ್ವರ್ಗದ ಸಿಂಹಾಸನದಲ್ಲಿ ದೇವೇಂದ್ರನು ಕುಳಿತಿರುವಂತೆಯೇ ದೇವದ್ರೋಹಿ ರಾವಣನು ಲಂಕೆಯನ್ನು ಪ್ರವೇಶಿಸಿದನು.॥49-50॥
ಮೂಲಮ್ - 51
ಸ ಚಾಭಿಷಿಕ್ತಃ ಕ್ಷಣದಾಚರೈಸ್ತದಾ
ನಿವೇಶಯಾಮಾಸ ಪುರೀಂ ದಶಾನನಃ ।
ನಿಕಾಮಪೂರ್ಣಾ ಚ ಬಭೂವ ಸಾಪುರೀ
ನಿಶಾಚರೈರ್ನೀಲಬಲಾಹಕೋಪಮೈಃ ॥
ಅನುವಾದ
ಆಗ ನಿಶಾಚರರು ದಶಮುಖ ರಾವಣನಿಗೆ ರಾಜ್ಯಾಭಿಷೇಕ ಮಾಡಿದರು. ನೋಡು, ನೋಡುತ್ತಿರುವಂತೆ ಇಡೀ ಲಂಕೆಯ ನೀಲಮೇಘದಂತೆ ರಾಕ್ಷಸರಿಂದ ತುಂಬಿಹೋಯಿತು.॥51॥
ಮೂಲಮ್ - 52
ಧನೇಶ್ವರಸ್ತ್ಯಥ ಪಿತೃವಾಕ್ಯಗೌರವಾ-
ನ್ನ್ಯವೇಶಯಚ್ಛಶಿವಿಮಲೇ ಗಿರೌ ಪುರೀಮ್ ।
ಸ್ವಲಂಕೃತೈರ್ಭವನವರೈರ್ವಿಭೂಷಿತಾಂ
ಪುರಂದರಃ ಸ್ವರಿವ ಯಥಾಮರಾವತೀಮ್ ॥
ಅನುವಾದ
ಧನೇಶ್ವರ ಕುಬೇರನು ತಂದೆಯ ಆಜ್ಞೆಯನ್ನು ಮನ್ನಿಸಿ ಚಂದ್ರದಂತೆ ನಿರ್ಮಲ ಕಾಂತಿಯುಳ್ಳ ಕೈಲಾಸ ಪರ್ವತದಲ್ಲಿ ಶೋಭಾಮಯ ಶ್ರೇಷ್ಠಭವನಗಳಿಂದ ವಿಭೂಷಿತ ಅಲಕಾಪುರಿಯನ್ನು ನೆಲೆಗೊಳಿಸಿ, ದೇವರಾಜ ಇಂದ್ರನ ಅಮರಾವತಿಯಂತೆಯೇ ಆ ಪುರಿ ಇತ್ತು.॥52॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಹನ್ನೊಂದನೆಯ ಸರ್ಗ ಪೂರ್ಣವಾಯಿತು. ॥11॥