[ಹತ್ತನೆಯ ಸರ್ಗ]
ಭಾಗಸೂಚನಾ
ರಾವಣಾದಿಗಳ ತಪಸ್ಸು, ವರಪ್ರಾಪ್ತಿ
ಮೂಲಮ್ - 1
ಅಥಾಬ್ರಮೀನ್ಮುನಿಂ ರಾಮಃ ಕಥಂ ತೇ ಭ್ರಾತರೋ ವನೇ ।
ಕೀದೃಶಂತು ತದಾ ಬ್ರಹ್ಮಂಸ್ತಪಸ್ತೇಪುರ್ಮಹಾಬಲಾಃ ॥
ಅನುವಾದ
ಇಲ್ಲಿಯವರೆಗಿನ ಕಥೆ ಕೇಳಿ ಶ್ರೀರಾಮನು ಅಗಸ್ತ್ಯರಲ್ಲಿ ಕೇಳಿದನು - ಬ್ರಾಹ್ಮಣ ಶ್ರೇಷ್ಠರೇ! ಆ ಮೂವರೂ ಮಹಾಬಲಿ ರಾಕ್ಷಸರು ವನದಲ್ಲಿ ಹೇಗೆ ತಪಸ್ಸು ಮಾಡುತ್ತಿದ್ದರು.॥1॥
ಮೂಲಮ್ - 2
ಅಗಸ್ತ್ಯಸ್ತ್ವಬ್ರವೀತ್ತತ್ರ ರಾಮಂ ಸುಪ್ರೀತಮಾನಸಮ್ ।
ತಾಂಸ್ತಾನ್ ಧರ್ಮವಿಧೀಂ ಸ್ತತ್ರ ಭ್ರಾತರಸ್ತೇ ಸಮಾವಿಶನ್ ॥
ಅನುವಾದ
ಅತ್ಯಂತ ಪ್ರಸನ್ನಚಿತ್ತರಾದ ಅಗಸ್ತ್ಯರು ಶ್ರೀರಾಮನಲ್ಲಿ ಹೇಳಿದರು- ರಘುನಂದನ! ಆ ಮೂವರೂ ಸಹೋದರರೂ ಬೇರೆ-ಬೇರೆ ಧರ್ಮವಿಧಿಗಳನ್ನು ಅನುಷ್ಠಾನ ಮಾಡಿದರು.॥2॥
ಮೂಲಮ್ - 3
ಕುಂಭಕರ್ಣಸ್ತತೋ ಯತ್ತೋ ನಿತ್ಯಂ ಧರ್ಮಪಥೇ ಸ್ಥಿತಃ ।
ತತಾಪ ಗ್ರೀಷ್ಮಕಾಲೇ ತು ಪಂಚಾಗ್ನೀನ್ ಪರಿತಂ ಸ್ಥಿತಃ ॥
ಮೂಲಮ್ - 4
ಮೇಘಾಂಬುಸಿಕ್ತೋ ವರ್ಷಾಸು ವೀರಾಸನಮಸೇವತ ।
ನಿತ್ಯಂ ಚ ಶಿಶಿರೇ ಕಾಲೇ ಜಲಮಧ್ಯಪ್ರತಿಶ್ರಯಃ ॥
ಅನುವಾದ
ಕುಂಭಕರ್ಣನು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿ ಪ್ರತಿದಿನ ಧರ್ಮಮಾರ್ಗದಲ್ಲಿ ಸ್ಥಿತನಾಗಿ ಬೇಸಿಗೆಯಲ್ಲಿ ಪಂಚಾಗ್ನಿಗಳ ನಡುವೆ ಕುಳಿತು ಘೋರ ತಪಸ್ಸನ್ನಾಚರಿಸಿದನು.॥3-4॥
ಮೂಲಮ್ - 5
ಏವಂ ವರ್ಷ ಸಹಸ್ರಾಣಿ ದಶ ತಸ್ಯಾಪಚಕ್ರಮುಃ ।
ಧರ್ಮೇ ಪ್ರಯತಮಾನಸ್ಯ ಸತ್ಪಥೇ ನಿಷ್ಠಿತಸ್ಯ ಚ ॥
ಅನುವಾದ
ಮತ್ತೆ ಮಳೆಗಾಲದಲ್ಲಿ ಬಯಲಲ್ಲಿ ವೀರಾಸನದಲ್ಲಿ ಕುಳಿತು ಮಳೆ ನೀರಿನಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದನು.॥5॥
ಮೂಲಮ್ - 6
ವಿಭೀಷಣಸ್ತು ಧರ್ಮಾತ್ಮಾ ನಿತ್ಯಂ ಧರ್ಮಪರಃ ಶುಚಿಃ ।
ಪಂಚವರ್ಷ ಸಹಸ್ರಾಣಿ ಪಾದೇನೈಕೇನ ತಸ್ಥಿವಾನ್ ॥
ಅನುವಾದ
ವಿಭೀಷಣನು ಸದಾ ಧರ್ಮಾತ್ಮನಾಗಿದ್ದನು. ಅವನು ನಿತ್ಯ ಧರ್ಮ ಪರಾಯಣನಾಗಿ, ಶುದ್ಧ ಆಚಾರ ವಿಚಾರ ಪಾಲಿಸುತ್ತಾ ಐದುಸಾವಿರ ವರ್ಷ ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡಿದನು.॥6॥
ಮೂಲಮ್ - 7
ಸಮಾಪ್ತೇ ನಿಯಮೇ ತಸ್ಯ ನನೃತುಶ್ಚಾಪ್ಸರೋಗಣಾಃ ।
ಪಪಾತ ಪುಷ್ಪವರ್ಷಂ ಚ ತುಷ್ಟುವುಶ್ಚಾಪಿ ದೇವತಾಃ ॥
ಅನುವಾದ
ಅವನ ನಿಯಮ ಸಮಾಪ್ತವಾದಾಗ ಅಪ್ಸರೆಯರು ನೃತ್ಯಮಾಡತೊಡಗಿದರು. ಅವನ ಮೇಲೆ ಆಕಾಶದಿಂದ ಹೂವಿನ ಮಳೆ ಸುರಿಯಿತು ಹಾಗೂ ದೇವತೆಗಳು ವಿಭೀಷಣನನ್ನು ಸ್ತುತಿಸಿದರು.॥7॥
ಮೂಲಮ್ - 8
ಪಂಚವರ್ಷಸಹಸ್ರಾಣಿ ಸೂರ್ಯಂ ಚೈವಾನ್ವವರ್ತತ ।
ತಸ್ಥೌ ಚೋರ್ಧ್ವಶಿರೋಬಾಹುಃ ಸ್ವಾಧ್ಯಾಯೇ ಧೃತಮಾನಸಃ ॥
ಅನುವಾದ
ಅನಂತರ ವಿಭೀಷಣನು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಸ್ವಾಧ್ಯಾಯ ಪರಾಯಣನಾಗಿ ಐದುಸಾವಿರ ವರ್ಷ ಸೂರ್ಯ ನಾರಾಯಣನನ್ನು ಆರಾಧಿಸಿದನು.॥8॥
ಮೂಲಮ್ - 9
ಏವಂ ವಿಭೀಷಣಸ್ಯಾಪಿ ಸ್ವರ್ಗಸ್ಥಸ್ಯೇವ ನಂದನೇ ।
ದಶವರ್ಷ ಸಹಸ್ರಾಣಿ ಗತಾನಿ ನಿಯತಾತ್ಮನಃ ॥
ಅನುವಾದ
ಹೀಗೆ ಮನಸ್ಸನ್ನು ವಶಕೊಂಡ ವಿಭೀಷಣನೂ ಕೂಡ ಹತ್ತುಸಾವಿರ ವರ್ಷ ಸ್ವರ್ಗದ ನಂದನವನದಲ್ಲಿ ಇರುವಂತೆ ಸುಖವಾಗಿ ಕಳೆದನು.॥9॥
ಮೂಲಮ್ - 10
ದಶವರ್ಷ ಸಹಸ್ರಂ ತು ನಿರಾಹಾರೋ ದಶಾನನಃ ।
ಪೂರ್ಣೇ ವರ್ಷ ಸಹಸ್ರೇ ತು ಶಿರಶ್ಚಾಗ್ನೌ ಜುಹಾವ ಸಃ ॥
ಅನುವಾದ
ದಶಮುಖನೂ ಹತ್ತುಸಾವಿರ ವರ್ಷಗಳು ಒಂದೇ ಸಮನೆ ಉಪವಾಸ ಮಾಡಿದನು. ಪ್ರತಿಯೊಂದು ಸಾವಿರ ವರ್ಷ ಪೂರ್ಣವಾದಾಗ ಅವನು ತನ್ನ ಒಂದು ಮಸ್ತಕವನ್ನು ಕಡಿದು ಅಗ್ನಿಯಲ್ಲಿ ಆಹುತಿ ಕೊಡುತ್ತಿದ್ದನು.॥10॥
ಮೂಲಮ್ - 11
ಏವಂ ವರ್ಷ ಸಹಸ್ರಾಣಿ ನವ ತಸ್ಯಾತಿಚಕ್ರಮುಃ ।
ಶಿರಾಂಸಿ ನವ ಚಾಪ್ಯಸ್ಯ ಪ್ರವಿಷ್ಟಾನಿ ಹುತಾಶನಮ್ ॥
ಅನುವಾದ
ಹೀಗೆ ಮಾಡುತ್ತಾ ಒಂಭತ್ತು ಸಾವಿರ ವರ್ಷ ಕಳೆಯಿತು ಹಾಗೂ ಒಂಭತ್ತು ತಲೆಗಳನ್ನು ಅಗ್ನಿಗೆ ಅರ್ಪಿಸಿದನು.॥11॥
ಮೂಲಮ್ - 12
ಅಥ ವರ್ಷ ಸಹಸ್ರೇ ತು ದಶಮೇ ದಶಮಂ ಶಿರಃ ।
ಛೇತ್ತುಕಾಮೇ ಧಶಗ್ರೀವೇ ಪ್ರಾಪ್ತಸ್ತತ್ರ ಪಿತಾಮಹಃ ॥
ಅನುವಾದ
ಹತ್ತನೆಯ ಸಾವಿರ ವರ್ಷ ಪೂರ್ಣವಾದಾಗ ದಶಗ್ರೀವನು ತನ್ನ ಹತ್ತನೆಯ ಮಸ್ತಕವನ್ನು ಕಡಿಯಲು ಮುಂದಾದಾಗ ಪಿತಾಮಹ ಬ್ರಹ್ಮದೇವರು ಅಲ್ಲಿಗೆ ಆಗಮಿಸಿದರು.॥12॥
ಮೂಲಮ್ - 13
ಪಿತಾಮಹಸ್ತು ಸುಪ್ರೀತಃ ಸಾರ್ಧಂ ದೇವೈರುಪಸ್ಥಿತಃ ।
ತವ ತಾವದ್ದಶಗ್ರೀವ ಪ್ರೀತೋಸ್ಮೀಽತ್ಯಭ್ಯಭಾಷತ ॥
ಅನುವಾದ
ಪಿತಾಮಹ ಬ್ರಹ್ಮದೇವರು ಅತ್ಯಂತ ಪ್ರಸನ್ನರಾಗಿ ದೇವತೆಗಳೊಂದಿಗೆ ಅಲ್ಲಿಗೆ ಬಂದಿದ್ದರು. ಅವರು ಬಂದಾಕ್ಷಣ ಹೇಳಿದರು- ದಶಗ್ರೀವ! ನಾನು ನಿನ್ನ ಮೇಲೆ ಪ್ರಸನ್ನನಾಗಿದ್ದೇನೆ.॥13॥
ಮೂಲಮ್ - 14
ಶೀಘ್ರಂ ವರಯ ಧರ್ಮಜ್ಞ ವರೋ ಯಸ್ತೇಽಭಿಕಾಂಕ್ಷಿತಃ ।
ಕಂ ತೇ ಕಾಮಂ ಕರೋಮ್ಯದ್ಯ ನ ವೃಥಾ ತೇ ಪರಿಶ್ರಮಃ ॥
ಅನುವಾದ
ಧರ್ಮಜ್ಞನೇ! ನಿನ್ನ ಮನಸ್ಸಿನಲ್ಲಿರುವ ಇಚ್ಛಿತ ವರವನ್ನು ಕೇಳು. ಇಂದು ನಿನ್ನ ಅಭಿಲಾಷೆ ಪೂರ್ಣಗೊಳಿಸುವೆನು. ನಿನ್ನ ಪರಿಶ್ರಮ ವ್ಯರ್ಥವಾಗಿ ಹೋಗಬಾರದು.॥14॥
ಮೂಲಮ್ - 15
ಅಥಾಬ್ರವೀದ್ದಶಗ್ರೀವಃ ಪ್ರಹೃಷ್ಟೇನಾಂತರಾತ್ಮನಾ ।
ಪ್ರಣಮ್ಯ ಶಿರಸಾ ದೇವಂ ಹರ್ಷಗದ್ಗದಯಾ ಗಿರಾ ॥
ಅನುವಾದ
ಇದನ್ನು ಕೇಳಿ ದಶಗ್ರೀವನು ಸಂತೋಷಗೊಂಡು, ತಲೆಬಾಗಿ ಬ್ರಹ್ಮದೇವರಿಗೆ ಪ್ರಣಾಮ ಮಾಡಿ, ಹರ್ಷ, ಗದ್ಗದ ವಾಣಿಯಲ್ಲಿ ಹೇಳಿದನು.॥15॥
ಮೂಲಮ್ - 16
ಭಗವನ್ ಪ್ರಾಣಿನಾಂ ನಿತ್ಯಂ ನಾನ್ಯತ್ರ ಮರಣಾದ್ಭಯಮ್ ।
ನಾಸ್ತಿ ಮೃತ್ಯುಸಮಃ ಶತ್ರುರಮರತ್ವಮಹಂ ವೃಣೇ ॥
ಅನುವಾದ
ಭಗವಂತನೇ! ಪ್ರಾಣಿಗಳಿಗೆ ಮರಣಕ್ಕಿಂತ ಹೆಚ್ಚಿನದಾದ ಭಯವಿರುವುದಿಲ್ಲ. ಆದ್ದರಿಂದ ನಾನು ಅಮರನಾಗಲು ಬಯಸುತ್ತೇನೆ; ಏಕೆಂದರೆ ಮೃತ್ಯುವಿಗೆ ಸಮವಾದ ಶತ್ರು ಮತ್ತೊಂದು ಇರುವುದಿಲ್ಲ.॥16॥
ಮೂಲಮ್ - 17
ಏವಮುಕ್ತಸ್ತದಾ ಬ್ರಹ್ಮಾ ದಶಗ್ರೀವಮುವಾಚ ಹ ।
ನಾಸ್ತಿ ಸರ್ವಾಮರತ್ವಂ ತೇ ವರಮನ್ಯಂ ವೃಣೀಷ್ವ ಮೇ ॥
ಅನುವಾದ
ಅವನು ಹೀಗೆ ಹೇಳಿದಾಗ ಬ್ರಹ್ಮದೇವರು ದಶಗ್ರೀವನಲ್ಲಿ ಹೇಳಿದರು-ನಿನಗೆ ಸರ್ವಥಾ ಅಮರತ್ವ ಸಿಗಲಾರದು; ಅದಕ್ಕಾಗಿ ಬೇರೆ ವರವನ್ನು ಕೇಳು.॥17॥
ಮೂಲಮ್ - 18
ಏವಮುಕ್ತೇ ತದಾ ರಾಮ ಬ್ರಹ್ಮಣಾ ಲೋಕಕರ್ತೃಣಾ ।
ದಶಗ್ರೀವ ಉವಾಚೇದಂ ಕೃತಾಂಜಲಿ ರಥಾಗ್ರತಃ ॥
ಅನುವಾದ
ಶ್ರೀರಾಮಾ! ಲೋಕಸೃಷ್ಟಾ ಬ್ರಹ್ಮದೇವರು ಹೀಗೆ ಹೇಳಿದಾಗ ದಶಗ್ರೀವನು ಕೈಮುಗಿದು ಇಂತೆಂದನು.॥18॥
ಮೂಲಮ್ - 19
ಸುಪರ್ಣನಾಗ ಯಕ್ಷಾಣಾಂ ದೈತ್ಯದಾನವ ರಕ್ಷಸಾಮ್ ।
ಅವಧ್ಯೋಹಂ ಪ್ರಜಾಧ್ಯಕ್ಷ ದೇವತಾನಾಂ ಚ ಶಾಶ್ವತ ॥
ಅನುವಾದ
ಸನಾತನ ಪ್ರಜಾಪತಿಯೇ! ನಾನು ಗರುಡ, ನಾಗ, ಯಕ್ಷ, ದೈತ್ಯ, ದಾನವ, ರಾಕ್ಷಸ ಹಾಗೂ ದೇವತೆಗಳಿಗೂ ಅವಧ್ಯನಾಗಬೇಕು.॥19॥
ಮೂಲಮ್ - 20
ನಹಿ ಚಿಂತಾ ಮಮಾನ್ಯೇಷು ಪ್ರಾಣಿಷ್ವಮರಪೂಜಿತ ।
ತೃಣಭೂತಾ ಹಿ ತೇ ಮನ್ಯೇ ಪ್ರಾಣಿನೋ ಮಾನುಷಾದಯಃ ॥
ಅನುವಾದ
ದೇವವಂದ್ಯ ಪಿತಾಮಹನೇ! ಇತರ ಪ್ರಾಣಿಗಳಿಂದ ನನಗೆ ಎಳ್ಳಷ್ಟು ಭಯವಿಲ್ಲ. ಮನುಷ್ಯಾದಿ ಇತರ ಜೀವಿಗಳನ್ನು ನಾನು ತೃಣಪ್ರಾಯವೆಂದು ತಿಳಿಯುತ್ತೇನೆ.॥20॥
ಮೂಲಮ್ - 21
ಏವಮುಕ್ತಸ್ತು ಧರ್ಮಾತ್ಮಾ ದಶಗ್ರೀವೇಣ ರಕ್ಷಸಾ ।
ಉವಾಚ ವಚನಂ ದೇವಃ ಸಹ ದೇವೈಃ ಪಿತಾಮಹಃ ॥
ಅನುವಾದ
ದಶಗ್ರೀವ ರಾಕ್ಷಸನು ಹೀಗೆ ಹೇಳಿದಾಗ ದೇವತೆಗಳ ಸಹಿತ ಬ್ರಹ್ಮದೇವರು ಹೀಗೆ ಹೇಳಿದರು.॥21॥
ಮೂಲಮ್ - 22
ಭವಿಷ್ಯತ್ಯೇವಮೇತತ್ತೇ ವಚೋ ರಾಕ್ಷಸಪುಂಗವ ।
ಏವಮುಕ್ತ್ವಾ ತು ತಂ ರಾಮ ದಶಗ್ರೀವಂ ಪಿತಾಮಹಃ ॥
ಅನುವಾದ
ರಾಕ್ಷಸಶ್ರೇಷ್ಠನೇ! ನಿನ್ನ ಮಾತು ನಿಜವಾಗಲಿ. ಶ್ರೀರಾಮಾ! ಪಿತಾಮಹರು ಪುನಃ ದಶಗ್ರೀವನಲ್ಲಿ ಹೀಗೆ ಹೇಳಿದರು.॥22॥
ಮೂಲಮ್ - 23
ಶೃಣು ಚಾಪಿ ವರೋ ಭೂಯಃ ಪ್ರೀತಸ್ಯೇಹ ಶುಭೋ ಮಮ ।
ಹುತಾನಿ ಯಾನಿ ಶೀರ್ಷಾಣಿ ಪೂರ್ವಮಗ್ನೌ ತ್ವಯಾನಘ ॥
ಮೂಲಮ್ - 24½
ಪುನಸ್ತಾನಿ ಭವಿಷ್ಯಂತಿ ತಥೈವ ತವ ರಾಕ್ಷಸ ।
ವಿತರಾಮೀಹ ತೇ ಸೌಮ್ಯ ವರಂ ಚಾನ್ಯಂ ದುರಾಸದಮ್ ॥
ಛಂದತಸ್ತವ ರೂಪಂ ಚ ಮನಸಾ ಯದ್ಯಥೇಪ್ಸಿತಮ್ ।
ಅನುವಾದ
ನಿಷ್ಪಾಪ ರಾಕ್ಷಸನೇ! ಕೇಳು, ನಾನು ಪ್ರಸನ್ನನಾಗಿ ಪುನಃ ನಿನಗೆ ಈ ಶುಭವರವನ್ನು ಕೊಡುತ್ತೇನೆ. ನೀನು ಮೊದಲು ಅಗ್ನಿಯಲ್ಲಿ ಹೋಮ ಮಾಡಿದ ನಿನ್ನ ತಲೆಗಳು ಹಿಂದಿನಂತೆ ಪ್ರಕಟವಾಗಲಿ. ಸೌಮ್ಯನೇ! ಇದಲ್ಲದೆ ಇನ್ನೊಂದು ದುರ್ಲಭ ವರವನ್ನು ಕೊಡುತ್ತಿದ್ದೇನೆ - ನೀನು ಮನಸ್ಸಿನಲ್ಲಿ ಬಯಸಿದ ರೂಪವನ್ನು ಧರಿಸಬಲ್ಲೆ. ನೀನು ಕಾಮರೂಪಿ ಯಾಗುವೆ.॥23-24½॥
ಮೂಲಮ್ - 25½
ಏವಂ ಪಿತಾಮಹೋಕ್ತಸ್ಯ ದಶಗ್ರೀವಸ್ಯ ರಕ್ಷಸಃ ॥
ಅಗ್ನೌ ಹುತಾನಿ ಶೀರ್ಷಾಣಿ ಪುನಸ್ತಾನ್ಯುತ್ಥಿತಾನಿ ವೈ।
ಅನುವಾದ
ಬ್ರಹ್ಮದೇವರು ಹೀಗೆ ಹೇಳಿದಾಗಲೇ ರಾಕ್ಷಸ ದಶಗ್ರೀವನು ಮೊದಲು ಅಗ್ನಿಯಲ್ಲಿ ಹೋಮಿಸಿದ ತಲೆಗಳು ಹೊಸದಾಗಿ ಮೂಡಿದವು.॥25½॥
ಮೂಲಮ್ - 26½
ಏವಮುಕ್ತ್ವಾತು ತಂ ರಾಮ ದಶಗ್ರೀವಂ ಪಿತಾಮಹಃ ॥
ವಿಭೀಷಣಮಥೋವಾಚ ವಾಕ್ಯಂ ಲೋಕ ಪಿತಾಮಹಃ ।
ಅನುವಾದ
ಶ್ರೀರಾಮಾ! ದಶಗ್ರೀವನಲ್ಲಿ ಇಂತು ನುಡಿದು ಲೋಕಪಿತಾಮಹ ಬ್ರಹ್ಮದೇವರು ವಿಭೀಷಣನಲ್ಲಿ ಇಂತೆಂದರು.॥26½॥
ಮೂಲಮ್ - 27½
ವಿಭೀಷಣ ತ್ವಯಾ ವತ್ಸ ಧರ್ಮಸಂಹಿತ ಬುದ್ಧಿನಾ ॥
ಪರಿತುಷ್ಟೋಽಸ್ಮಿ ಧರ್ಮಾತ್ಮನ್ ವರಂ ವರಯ ಸುವ್ರತ ।
ಅನುವಾದ
ಮಗು ವಿಭೀಷಣನೇ! ನಿನ್ನ ಬುದ್ಧಿ ಸದಾ ಧರ್ಮದಲ್ಲೇ ತೊಡಗಿದೆ, ಆದ್ದರಿಂದ ನಾನು ನಿನಗೆ ಬಹಳ ಸಂತುಷ್ಟನಾಗಿದ್ದೇನೆ. ಸುವ್ರತ ಧರ್ಮಾತ್ಮನೇ! ನೀನೂ ಕೂಡ ತನಗೆ ಅಭೀಷ್ಟವಾದ ವರವನ್ನು ಕೇಳು.॥27½॥
ಮೂಲಮ್ - 28
ವಿಭೀಷಣಸ್ತು ಧರ್ಮಾತ್ಮಾ ವಚನಂ ಪ್ರಾಹ ಸಾಂಜಲಿಃ ॥
ಮೂಲಮ್ - 29½
ವೃತಃ ಸರ್ವಗುಣೈರ್ನಿತ್ಯಂ ಚಂದ್ರಮಾ ರಶ್ಮಿಭಿರ್ಯಥಾ ।
ಭಗವನ್ ಕೃತಕೃತ್ಯೋಽಹಂ ಯನ್ಮೇಲೋಕಗುರುಃ ಸ್ವಯಮ್ ॥
ಪ್ರೀತೇನ ಯದಿ ದಾತವ್ಯೋ ವರೋ ಮೇ ಶೃಣು ಸುವ್ರತ ।
ಅನುವಾದ
ಆಗ ಕಿರಣ ಮಾಲಾಮಂಡಿತ ಚಂದ್ರನಂತೆ, ಸಮಸ್ತ ಗುಣಸಂಪನ್ನ ಧರ್ಮಾತ್ಮಾ ವಿಭೀಷಣನು ಕೈ ಮುಗಿದು ಹೇಳಿದನು - ಭಗವಂತನೇ! ಲೋಕಗುರು ನೀನು ನನ್ನ ಮೇಲೆ ಪ್ರಸ್ನನಾಗಿದ್ದರೆ ನಾನು ಕೃತಾರ್ಥನಾಗಿದ್ದೇನೆ. ನನಗೆ ಕೇಳು ವುದು ಯಾವುದೂ ಉಳಿದಿಲ್ಲ. ಸುವ್ರತ ಪಿತಾಮಹನೇ! ನೀನು ಪ್ರಸನ್ನನಾಗಿ ವರ ಕೊಡಲು ಬಯಸುವೆಯಾದರೆ ಕೇಳು.॥28-29½॥
ಮೂಲಮ್ - 30½
ಪರಮಾಪದ್ಗತಸ್ಯಾಪಿ ಧರ್ಮೇ ಮಮ ಮತಿರ್ಭವೇತ್ ॥
ಅಶಿಕ್ಷಿತಂ ಚ ಬ್ರಹ್ಮಾಸ್ತ್ರಂ ಭಗವನ್ ಪ್ರತಿಭಾತು ಮೇ ।
ಅನುವಾದ
ಭಗವಂತನೇ ! ಭಾರೀ ಆಪತ್ತಿನಲ್ಲಿ ಬಿದ್ದರೂ ನನ್ನ ಬುದ್ಧಿ ಧರ್ಮದಲ್ಲೇ ತೊಡಗಿರಲಿ, ಅದರಿಂದ ಎಂದೂ ವಿಚಲಿತ ವಾಗದೆ, ಕಲಿಯದೆಯೇ ನನಗೆ ಬ್ರಹ್ಮಾಸ್ತ್ರದ ಜ್ಞಾನ ಉಂಟಾಗಲೀ.॥30½॥
ಮೂಲಮ್ - 31
ಯಾ ಯಾ ಮೇ ಜಾಯತೇ ಬುದ್ಧಿರ್ಯೇಷುಯೇಷ್ವಾಶ್ರಮೇಷು ಚ ॥
ಮೂಲಮ್ - 32
ಸಾ ಸಾ ಭವತು ಧರ್ಮಿಷ್ಠಾ ತಂ ತಂ ಧರ್ಮಂ ಚ ಪಾಲಯೇ ।
ಏಷ ಮೇ ಪರಮೋದಾರೋ ವರಃ ಪರಮಕೋ ಮತಃ ॥
ಅನುವಾದ
ಯಾವುದೇ ಆಶ್ರಮದ ವಿಷಯದಲ್ಲಿ ನನ್ನ ವಿಚಾರ ಧರ್ಮಾನುಕಾಲವಾಗಿರಲಿ ಹಾಗೂ ಆ ಧರ್ಮವನ್ನು ನಾನು ಪಾಲಿಸುವೆನು; ಇದೇ ನನಗೆ ಎಲ್ಲಕ್ಕಿಂತ ಉತ್ತಮವಾದ ವರದಾನವಾಗಿದೆ.॥31-32॥
ಮೂಲಮ್ - 33
ನ ಹಿ ಧರ್ಮಾಭಿರಕ್ತಾನಾಂ ಲೋಕೇ ಕಿಂಚನ ದುರ್ಲಭಮ್ ।
ಪುನಃ ಪ್ರಜಾಪತಿಃ ಪ್ರೀತೋ ವಿಭೀಷಣಮುವಾಚ ಹ ॥
ಅನುವಾದ
ಏಕೆಂದರೆ ಧರ್ಮದಲ್ಲಿ ಅನುರಕ್ತನಾದವನಿಗೆ ಯಾವುದೂ ದುರ್ಲಭವಲ್ಲ. ಇದನ್ನು ಕೇಳಿ ಪ್ರಸನ್ನರಾದ ಪ್ರಜಾಪತಿ ಬ್ರಹ್ಮದೇವರು ಪುನಃ ವಿಭೀಷಣನಲ್ಲಿ ಹೇಳಿದರು.॥33॥
ಮೂಲಮ್ - 34½
ಧರ್ಮಿಷ್ಠಸ್ತ್ವಂ ಯಥಾ ವತ್ಸ ತಥಾ ಚೈತದ್ ಭವಿಷ್ಯತಿ ।
ಯಸ್ಮಾದ್ರಾಕ್ಷಸಯೋನೌ ತೇ ಜಾತಸ್ಯಾಮಿತ್ರನಾಶನ ॥
ನಾಧರ್ಮೇ ಜಾಯತೇ ಬುದ್ಧಿರಮರತ್ವಂ ದದಾಮಿ ತೇ ।
ಅನುವಾದ
ವತ್ಸ! ನೀನು ಧರ್ಮದಲಿ ಸ್ಥಿತನಾಗುವೆ, ನೀನು ಬಯಸಿದುದೆಲ್ಲ ಪೂರ್ಣವಾಗುವುದು. ಶತ್ರುನಾಶಕನೇ ! ರಾಕ್ಷಸಯೋನಿಯಲ್ಲಿ ಹುಟ್ಟಿದ್ದರೂ ನಿನ್ನ ಬುದ್ಧಿ ಅಧರ್ಮದಲ್ಲಿ ಎಂದೂ ತೊಡಗಲಾರದು; ಇದರಿಂದ ನಿನಗೆ ನಾನು ಅಮರತ್ವವನ್ನು ಕರುಣಿಸುವೆನು.॥34½॥
ಮೂಲಮ್ - 35½
ಇತ್ಯುಕ್ತ್ವಾ ಕುಂಭಕರ್ಣಾಯ ವರಂ ದಾತುಮವಸ್ಥಿತಮ್ ॥
ಪ್ರಜಾಪತಿಂ ಸುರಾಃ ಸರ್ವೇ ವಾಕ್ಯಂ ಪ್ರಾಂಜಲಯೋಽಬ್ರುವನ್ ।
ಅನುವಾದ
ವಿಭೀಷಣನಲ್ಲಿ ಹೀಗೆ ಹೇಳಿ ಬ್ರಹ್ಮದೇವರು ಕುಂಭಕರ್ಣನಿಗೆ ವರ ಕೊಡಲು ಹೊರಟಾಗ ದೇವತೆಗಳೆಲ್ಲ ಕೈಮುಗಿದು ಅವರಲ್ಲಿ ಹೀಗೆ ಹೇಳಿದರು.॥35½॥
ಮೂಲಮ್ - 36½
ನ ತಾವತ್ ಕುಂಭಕರ್ಣಾಯ ಪ್ರದಾತವ್ಯೋ ವರಸ್ತ್ವಯಾ ॥
ಜಾನೀಷೇ ಹಿ ಯಥಾ ಲೋಕಾಂಸ್ತ್ರಾಸಯತ್ಯೇಷ ದುರ್ಮತಿಃ ।
ಅನುವಾದ
ಪ್ರಭೋ! ನೀವು ಕುಂಭಕರ್ಣನಿಗೆ ವರ ಕೊಡಬೇಡಿರಿ; ಏಕೆಂದರೆ ಈ ದುರ್ಬದ್ಧಿ ನಿಶಾಚರ ಸಮಸ್ತ ಲೋಕಗಳಿಗೆ ತೊಂದರೆ ಕೊಡುತ್ತಿರುವುದು ನೀವು ತಿಳಿದೇ ಇದ್ದೀರಿ.॥36½॥
ಮೂಲಮ್ - 37½
ನಂದನೇಽಪ್ಸರಸಃ ಸಪ್ತ ಮಹೇಂದ್ರಾನುಚರಾ ದಶ ॥
ಅನೇನ ಭಕ್ಷಿತಾ ಬ್ರಹ್ಮನ್ಋಷಯೋ ಮಾನುಷಾಸ್ತಥಾ ।
ಅನುವಾದ
ಬ್ರಹ್ಮನ್! ಇವನು ನಂದನವನದ ಏಳು ಅಪ್ಸರೆಯನ್ನು, ದೇವೇಂದ್ರನ ಹತ್ತು ಅನುಚರರನ್ನು ಹಾಗೂ ಅನೇಕ ಋಷಿಗಳನ್ನು, ಮನುಷ್ಯರನ್ನು ತಿಂದು ಹಾಕಿರುವನು.॥37½॥
ಮೂಲಮ್ - 38½
ಅಲಬ್ಧವರಪೂರ್ವೇಣ ಯತ್ಕೃತಂ ರಾಕ್ಷಸೇನ ತು ॥
ಯದ್ಯೇಷ ವರಲಬ್ಧಃ ಸ್ಯಾದ್ಭಕ್ಷಯೇದ್ಭುವನತ್ರಯಮ್ ।
ಅನುವಾದ
ವರ ಪಡೆಯದೆಯೇ ಈ ರಾಕ್ಷಸನು ಹೀಗೆ ಪ್ರಾಣಿಗಳನ್ನು ತಿಂದು ಕ್ರೂರ ಕರ್ಮಮಾಡುತ್ತಿರುವನಾದರೆ, ವರ ಪ್ರಾಪ್ತ ವಾದಾಗ ಇವನು ಮೂರು ಲೋಕಗಳನ್ನು ತಿಂದು ಬಿಡುವನು.॥38½॥
ಮೂಲಮ್ - 39½
ವರವ್ಯಾಜೇನ ಮೋಹೋಽಸ್ಮೈ ದೀಯತಾಮಮಿತಪ್ರಭ ॥
ಲೋಕಾನಾಂ ಸ್ವಸ್ತಿ ಚೈವಂ ಸ್ಯಾದ್ಭವೇದಸ್ಯ ಚ ಸಮ್ಮತಿಃ ।
ಅನುವಾದ
ಅಮಿತ ತೇಜಸ್ವೀ ದೇವನೇ! ನೀವು ವರದ ನೆಪದಲ್ಲಿ ಇವನಿಗೆ ಮೋಹ ಉಂಟುಮಾಡಿರಿ. ಇದರಿಂದ ಸಮಸ್ತ ಲೋಕಗಳ ಮಂಗಳವಾದೀತು ಮತ್ತು ಇನ ಸಮ್ಮಾನವೂ ಆಗುವುದು.॥39½॥
ಮೂಲಮ್ - 40½
ಏವಮುಕ್ತಃ ಸುರೈರ್ಬ್ರಹ್ಮಾಚಿಂತಯತ್ಪದ್ಮಸಂಭವಃ ॥
ಚಿಂತಿತಾ ಚೋಪತಸ್ಥೇಽಸ್ಯ ಪಾರ್ಶ್ವಂ ದೇವೀ ಸರಸ್ವತೀ ।
ಅನುವಾದ
ದೇವತೆಗಳು ಹೀಗೆ ಹೇಳಿದಾಗ ಪದ್ಮಸಂಭವನು ಸರಸ್ವತಿಯನ್ನು ಸ್ಮರಿಸಿದನು, ಸ್ಮರಿಸುತ್ತಲೇ ದೇವೀ ಸರಸ್ವತಿಯು ಬಳಿಗೆ ಬಂದಳು.॥40½॥
ಮೂಲಮ್ - 41½
ಪ್ರಾಂಜಲಿಃ ಸಾ ತು ಪಾರ್ಶ್ವಸ್ಥಾ ಪ್ರಾಹ ವಾಕ್ಯಂ ಸರಸ್ವತೀ ॥
ಇಯಮಸ್ಮ್ಯಾಗತಾ ದೇವ ಕಿಂ ಕಾರ್ಯಂ ಕರವಾಣ್ಯಹಮ್ ।
ಅನುವಾದ
ಅವರ ಬಳಿಯಲ್ಲಿ ನಿಂತಿರುವ ಸರಸ್ವತಿಯು ಕೈಮುಗಿದು, ದೇವ! ನಾನು ಬಂದಿರುವೆನು, ನನಗೇನು ಅಪ್ಪಣೆ? ನಾನು ಯಾವ ಕಾರ್ಯ ಮಾಡಲಿ.॥41½॥
ಮೂಲಮ್ - 42½
ಪ್ರಜಾಪತಿಸ್ತು ತಾಂ ಪ್ರಾಪ್ತಾಂ ಪ್ರಾಹ ವಾಕ್ಯಂ ಸರಸ್ವತೀಮ್ ॥
ವಾಣಿ ತ್ವಂ ರಾಕ್ಷಸೇಂದ್ರಸ್ಯ ಭವ ವಾಗ್ದೇವತೇಪ್ಸಿತಾ ।
ಅನುವಾದ
ಅಲ್ಲಿಗೆ ಬಂದಿರುವ ಸರಸ್ವತಿ ದೇವಿಯಲ್ಲಿ ಪ್ರಜಾಪತಿಗಳು ಹೇಳಿದರು-ವಾಗ್ದೇವತೇ! ನೀನು ರಾಕ್ಷಸೇಂದ್ರ ಕುಂಭಕರ್ಣನ ನಾಲಿಗೆಯಲ್ಲಿ ನೆಲೆಸು, ದೇವತೆಗಳಿಗೆ ಅನುಕೂಲವಾದ ವಾಣಿಯಿಂದ ಪ್ರಕಟಳಾಗು.॥42½॥
ಮೂಲಮ್ - 43½
ತಥೇತ್ಯುಕ್ತ್ವಾ ಪ್ರವಿಷ್ಟಾ ಸಾ ಪ್ರಜಾಪತಿರಥಾಬ್ರವೀತ್ ॥
ಕುಂಭಕರ್ಣ ಮಹಾಬಾಹೋ ವರಂ ವರಯ ಯೋ ಮತಃ ।
ಅನುವಾದ
‘ಹಾಗೆಯೇ ಆಗಲಿ’ ಎಂದು ಹೇಳಿ ಸರಸ್ವತಿಯು ಕುಂಭಕರ್ಣನ ಬಾಯನ್ನು ಸೇರಿದಳು. ಬಳಿಕ ಪ್ರಜಾಪತಿಗಳು ಆ ರಾಕ್ಷಸನಲ್ಲಿ - ಮಹಾಬಾಹು ಕುಂಭಕರ್ಣನೇ! ನಿನ್ನ ಮನಸ್ಸಿಗೆ ಬಂದ ವರವನ್ನು ಕೇಳು ಎಂದು ಹೇಳಿದರು.॥43½॥
ಮೂಲಮ್ - 44
ಕುಂಭಕರ್ಣಸ್ತುತದ್ವಾಕ್ಯಂ ಶ್ರುತ್ವಾ ವಚನಮಬ್ರವೀತ್ ॥
ಮೂಲಮ್ - 45
ಸ್ವಪ್ತುಂ ವರ್ಷಾಣ್ಯನೇಕಾನಿ ದೇವದೇವ ಮಮೇಪ್ಸಿತಮ್ ।
ಏವಮಸ್ತ್ವಿತಿ ತಂ ಚೋಕ್ತ್ವಾ ಪ್ರಾಯಾದ್ಬ್ರಹ್ಮಾ ಸುರೈಃ ಸಮಮ್ ॥
ಅನುವಾದ
ಅವರ ಮಾತನ್ನು ಕೇಳಿ ಕುಂಭಕರ್ಣನು ಹೇಳಿದನು - ದೇವದೇವಾ! ನಾನು ಅನೇಕ ವರ್ಷಗಳವರೆಗೆ ಮಲಗಿಯೇ ಇರುವೆನು. ಇದೇ ನನ್ನ ಇಚ್ಛೆಯಾಗಿದೆ. ಆಗ ‘ಹಾಗೆಯೇ ಆಗಲಿ’ ಎಂದು ಹೇಳಿ ಬ್ರಹ್ಮದೇವರು ದೇವತೆಗಳೊಂದಿಗೆ ಹೊರಟು ಹೋದರು.॥44-45॥
ಮೂಲಮ್ - 46
ದೇವೀ ಸರಸ್ವತೀ ಚೈವ ರಾಕ್ಷಸಂ ತಂ ಜಹೌ ಪುನಃ ।
ಬ್ರಹ್ಮಣಾ ಸಹ ದೇವೇಷು ಗತೇಷು ಚ ನಭಃಸ್ಥಲಮ್ ॥
ಮೂಲಮ್ - 47
ವಿಮುಕ್ತೋಽಸೌ ಸರಸ್ವತ್ಯಾ ಸ್ವಾಂ ಸಂಜ್ಞಾಂ ಚ ತತೋಗತಃ ।
ಕುಂಭಕರ್ಣಸ್ತು ದುಷ್ಟಾತ್ಮಾ ಚಿಂತಯಾಮಾಸ ದುಃಖಿತಃ ॥
ಅನುವಾದ
ಮತ್ತೆ ಸರಸ್ವತಿಯು ರಾಕ್ಷಸನನ್ನು ಬಿಟ್ಟು ದೇವತೆಗಳೊಂದಿಗೆ ತೆರಳಿದಾಗ ದುಷ್ಟಾತ್ಮಾ ಕುಂಭಕರ್ಣನು ಎಚ್ಚರಗೊಂಡು, ದುಃಖಿತನಾಗಿ ಹೀಗೆ ಯೋಚಿಸ ತೊಡಗಿದನು.॥46-47॥
ಮೂಲಮ್ - 48
ಈದೃಶಂ ಕಿಮಿದಂ ವಾಕ್ಯಂ ಮಮಾದ್ಯ ವದನಾಚ್ಚ್ಯುತಮ್ ।
ಅಹಂ ವ್ಯಾಮೋಹಿತೋ ದೇವೈರಿತಿ ಮನ್ಯೇ ತದಾಗತೈಃ ॥
ಅನುವಾದ
ಅಯ್ಯೋ! ಇಂದು ನನ್ನ ಬಾಯಿಯಿಂದ ಇಂತಹ ಮಾತು ಏಕೆ ಹೊರಟಿತು? ಬ್ರಹ್ಮದೇವರೊಂದಿಗೆ ಬಂದಿರುವ ದೇವತೆಗಳೇ ಆಗ ನನ್ನನ್ನು ಮೋಹಗೊಳಿಸಿದರೆಂದು ನಾನು ತಿಳಿಯುತ್ತೇನೆ.॥48॥
ಮೂಲಮ್ - 49
ಏವಂ ಲಬ್ಧವರಾಃ ಸರ್ವೇ ಭ್ರಾತರೋ ದೀಪ್ತತೇಜಸಃ ।
ಶ್ಲೇಷ್ಮಾತಕವನಂ ಗತ್ವಾ ತತ್ರ ತೇ ನ್ಯವಸನ್ ಸುಖಮ್ ॥
ಅನುವಾದ
ಹೀಗೆ ಆ ಮೂವರೂ ತೇಜಸ್ವೀ ಸಹೋದರರು ವರ ಪಡೆದು ಶ್ಲೆಷ್ಮಾತಕ (ಚಳ್ಳೆಹಣ್ಣಿನ) ವನಕ್ಕೆ ಹೋಗಿ ಸುಖವಾಗಿ ಇರತೊಡಗಿದರು.॥49॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಹತ್ತನೆಯ ಸರ್ಗ ಪೂರ್ಣವಾಯಿತು. ॥10॥