००९ रावणादि-जन्म

[ಒಂಭತ್ತನೆಯ ಸರ್ಗ]

ಭಾಗಸೂಚನಾ

ರಾವಣಾದಿಗಳ ಜನ್ಮ, ಅವರು ತಪಸ್ಸಿಗೆ ಗೋಕರ್ಣ ಆಶ್ರಮಕ್ಕೆ ಹೋದುದು

ಮೂಲಮ್ - 1

ಕಸ್ಯಚಿತ್ತ್ವ್ವಥ ಕಾಲಸ್ಯ ಸುಮಾಲೀ ನಾಮ ರಾಕ್ಷಸಃ ।
ರಸಾತಲಾನ್ಮರ್ತ್ಯಲೋಕಂ ಸರ್ವಂವೈ ವಿಚಚಾರ ಹ ॥

ಮೂಲಮ್ - 2

ನೀಲಜೀಮೂತಸಂಕಾಶ ಸ್ತಪ್ತಕಾಂಚನ ಕುಂಡಲಃ ।
ಕನ್ಯಾಂ ದುಹಿತರಂ ಗೃಹ್ಯ ವಿನಾ ಪದ್ಮಮಿವ ಶ್ರಿಯಮ್ ॥

ಅನುವಾದ

ಸ್ವಲ್ಪ ಕಾಲದ ಬಳಿಕ, ನೀಲಮೇಘದಂತೆ ಶೋಭಿತನಾದ, ಪುಟಕ್ಕಿಟ್ಟ ಚಿನ್ನದ ಕರ್ಣಕುಂಡಲಗಳಿಂದ ಅಲಂಕೃತನಾದ ಸುಮಾಲಿಯು, ಕಮಲರಹಿತಳಾದ ಲಕ್ಷ್ಮೀದೇವಿಯಂತಿದ್ದ ತನ್ನ ಸುಂದರ ಕನ್ಯೆಯನ್ನು ಕರೆದುಕೊಂಡು ರಸಾತಳದಿಂದ ಭೂಮಂಡಲಕ್ಕೆ ಬಂದು ಸಂಚರಿಸುತ್ತಿದ್ದನು.॥1-2॥

ಮೂಲಮ್ - 3

ರಾಕ್ಷಸೇಂದ್ರಃ ಸ ತುತದಾ ವಿಚರನ್ವೈ ಮಹೀತಲೇ ।
ತದಾಪಶ್ಯತ್ಸ ಗಚ್ಛಂತಂ ಪುಷ್ಪಕೇಣ ಧನೇಶ್ವರಮ್ ॥

ಮೂಲಮ್ - 4½

ಗಚ್ಛಂತಂ ಪಿತರಂ ದ್ರಷ್ಟುಂ ಪುಲಸ್ತ್ಯತನಯಂ ವಿಭುಮ್ ।
ತಂ ದೃಷ್ಟ್ವಾಮರಸಂಕಾಶಂ ಗಚ್ಛಂತಂ ಪಾವಕೋಪಮಮ್ ॥
ರಸಾತಲಂ ಪ್ರವಿಷ್ಟಃ ಸನ್ಮರ್ತ್ಯಲೋಕಾತ್ಸವಿಸ್ಮಯಃ ।

ಅನುವಾದ

ಆಗ ಭೂತಳದಲ್ಲಿ ಸಂಚರಿಸುತ್ತಿರುವಾಗ ಪುಷ್ಪಕ ವಿಮಾನದಲ್ಲಿ ಕುಳಿತು ತಂದೆಯಾದ ಪುಲಸ್ತ್ಯರನ್ನು ಮಗ ವಿಶ್ರವಸ್ಸುವಿನ ದರ್ಶನ ಮಾಡಲು ಹೋಗುತ್ತಿದ್ದ ಧನೇಶ್ವರನಾದ ಕುಬೇರನನ್ನು ನೋಡಿದನು. ದೇವಸದೃಶನಾದ ಪ್ರಜ್ವಲಿತ ಅಗ್ನಿಯಂತಿದ್ದ ಕುಬೇರನನ್ನು ನೋಡಿ ವಿಸ್ಮಿತನಾದ ರಾಕ್ಷಸರಾಜನು ಮರ್ತ್ಯಲೋಕದಿಂದ ರಸಾತಳಕ್ಕೆ ಹಿಂದಿರುಗಿದನು.॥3-4½॥

ಮೂಲಮ್ - 5½

ಇತ್ಯೇವಂ ಚಿಂತಯಾಮಾಸ ರಾಕ್ಷಸಾನಾಂ ಮಹಾಮತಿಃ ॥
ಕಿಂ ಕೃತ್ವಾ ಶ್ರೇಯ ಇತ್ಯೇವಂ ವರ್ಧೇಮಹಿಕಥಂ ವಯಮ್ ।

ಅನುವಾದ

ಬುದ್ಧಿವಂತನಾದ ಸುಮಾಲಿಯು ಏನು ಮಾಡುವುದರಿಂದ ರಾಕ್ಷಸರ ಉನ್ನತಿಯಾದೀತು? ಹೇಗೆ ಒಳಿತಾದೀತು? ಎಂದು ಯೋಚಿಸತೊಡಗಿದನು.॥5½॥

ಮೂಲಮ್ - 6

ಅಥಾಬ್ರವೀತ್ಸುತಾಂ ರಕ್ಷಃ ಕೈಕಸೀಂ ನಾಮ ನಾಮತಃ ॥

ಮೂಲಮ್ - 7

ಪುತ್ರಿ ಪ್ರದಾನಕಾಲೋಯಂ ಯೌವನಂ ವ್ಯತಿವರ್ತತೇ
ಪ್ರತ್ಯಾಖ್ಯಾನಾಚ್ಚ ಭೀತೈಸ್ತ್ವಂ ನ ವರೈಃ ಪ್ರತಿಗೃಹ್ಯಸೇ ॥

ಅನುವಾದ

ಹೀಗೆ ವಿಚಾರಮಾಡಿ ಆ ರಾಕ್ಷಸನು ತನ್ನ ಮಗಳಾದ ಕೈಕಸೆಯಲ್ಲಿ ಹೇಳಿದನು - ಮಗಳೇ! ಈಗ ನೀನು ವಿವಾಹಯೋಗ್ಯಳಾಗಿರುವೆ, ಯೌವನ ಕಳೆಯುತ್ತಾ ಇದೆ. ನೀನು ತಿರಸ್ಕರಿಸುವೆ ಎಂಬ ಭಯದಿಂದ ಶ್ರೇಷ್ಠವರರು ನಿನ್ನನ್ನು ವರಿಸುವುದಿಲ್ಲ.॥6-7॥

ಮೂಲಮ್ - 8

ತ್ವತ್ಕೃತೇ ಚ ವಯಂ ಸರ್ವೇ ಯಂತ್ರಿತಾ ಧರ್ಮಬುದ್ಧಯಃ ।
ತ್ವಂ ಹಿ ಸರ್ವಗುಣೋಪೇತಾ ಶ್ರೀಃ ಸಾಕ್ಷಾದಿವ ಪುತ್ರಿಕೇ ॥

ಅನುವಾದ

ಮಗಳೇ ! ನಿನಗೆ ವಿಶಿಷ್ಟ ವರ ದೊರೆಯಲಿ ಎಂದು ನಾವು ಬಹಳ ಪ್ರಯತ್ನ ಮಾಡಿದೆವು; ಏಕೆಂದರೆ ಕನ್ಯಾದಾನದ ವಿಷಯದಲ್ಲಿ ಧರ್ಮಬುದ್ಧಿ ಇರಿಸುವವರು ನಾವು. ನೀನಾದರೋ, ಸಾಕ್ಷಾತ್ ಲಕ್ಷ್ಮಿಯಂತೆಯೇ ಸರ್ವಗುಣ ಸಂಪನ್ನನಾಗಿರುವೆ. ನಿನ್ನನ್ನು ವರಿಸುವ ವರನು ನಿನಗೆ ಅನುರೂಪನಾಗಿರಬೇಕು.॥8॥

ಮೂಲಮ್ - 9

ಕನ್ಯಾಪಿತೃತ್ವಂ ದುಃಖಂ ಹಿ ಸರ್ವೇಷಾಂ ಮಾನಕಾಂಕ್ಷಿಣಾಮ್ ।
ನ ಜ್ಞಾಯತೇ ಚ ಕಃ ಕನ್ಯಾಂ ವರಯೇದಿತಿ ಕನ್ಯಕೇ ॥

ಅನುವಾದ

ಮಾನವಾಗಿ ಬಾಳಬೇಕೆಂದಿರುವ ಎಲ್ಲ ಜನರಿಗೂ ಕನ್ಯಾಪಿತೃತ್ವವು ದುಃಖಕ್ಕೆ ಕಾರಣವಾಗಿರುತ್ತದೆ. ಏಕೆಂದರೆ ಎಂತಹ ಪುರುಷನು ಮಗಳನ್ನು ವರಿಸುವನೆಂಬುದು ಕೊನೆಯವರೆಗೂ ತಿಳಿದಿರುವುದಿಲ್ಲ.॥9॥

ಮೂಲಮ್ - 10

ಮಾತುಃ ಕುಲಂ ಪಿತೃಕುಲಂ ಯತ್ರ ಚೈವ ಚ ದೀಯತೇ ।
ಕುಲತ್ರಯಂ ಸದಾ ಕನ್ಯಾ ಸಂಶಯೇ ಸ್ಥಾಪ್ಯ ತಿಷ್ಠತಿ ॥

ಅನುವಾದ

ತಾಯಿಯ, ತಂದೆಯ ಮತ್ತು ಸೇರಬೇಕಾದ ಮನೆಯ ಕುಟುಂಬವನ್ನು ಸದಾ ಸಂಶಯದಲ್ಲೇ ಇಟ್ಟಿರುತ್ತಾಳೆ.॥10॥

ಮೂಲಮ್ - 11

ಸಾ ತ್ವಂ ಮುನಿವರಂ ಶ್ರೇಷ್ಠಂ ಪ್ರಜಾಪತಿ ಕುಲೋದ್ಭವಮ್ ।
ಭಜ ವಿಶ್ರವಸಂ ಪುತ್ರಿ ಪೌಲಸ್ತ್ಯಂ ವರಯ ಸ್ವಯಮ್ ॥

ಅನುವಾದ

ಆದ್ದರಿಂದ ಮಗಳೇ! ನೀನು ಪ್ರಜಾಪತಿಯ ಕುಲದಲ್ಲಿ ಹುಟ್ಟಿದ ಶ್ರೇಷ್ಠಗುಣಸಂಪನ್ನ ಪುಲಸ್ತ್ಯ ನಂದನ ಮುನಿವರ ವಿಶ್ರವಸ್ಸುವನ್ನು ಸ್ವಯಂಪತಿಯಾಗಿ ವರಿಸಿ ಅವನ ಸೇವೆಯಲ್ಲಿ ಇರು.॥11॥

ಮೂಲಮ್ - 12

ಈದೃಶಾಸ್ತೇ ಭವಿಷ್ಯಂತಿಪುತ್ರಾಃ ಪುತ್ರಿ ನ ಸಂಶಯಃ ।
ತೇಜಸಾ ಭಾಸ್ಕರಸಮೋ ತಾದೃಶೋಽಯಂ ಧನೇಶ್ವರಃ ॥

ಅನುವಾದ

ಮಗಳೇ! ಹೀಗೆ ಮಾಡುವುದರಿಂದ ನಿಃಸಂಶಯವಾಗಿ ಧನೇಶ್ವರ ಕುಬೇರನಂತಹ ಪುತ್ರನು ನಿನಗೆ ಹುಟ್ಟುವನು. ಕುಬೇರನು ತನ್ನ ತೇಜದಿಂದ ಸೂರ್ಯನಂತೆ ಬೆಳಗುತ್ತಿರುವುದನ್ನು ನೀನು ನೋಡಿಯೇ ಇರುವೆ.॥12॥

ಮೂಲಮ್ - 13

ಸಾ ತು ತದ್ವಚನಂ ಶ್ರುತ್ವಾ ಕನ್ಯಕಾ ಪಿತೃಗೌರವಾತ್ ।
ತತ್ರ ಗತ್ವಾ ಚ ಸಾ ತಸ್ಥೌ ವಿಶ್ರವಾ ಯತ್ರ ತಪ್ಯತೇ ॥

ಅನುವಾದ

ತಂದೆಯ ಮಾತನ್ನು ಕೇಳಿ, ಅದನ್ನು ಗೌರವಿಸುವ ಉದ್ದೇಶದಿಂದ ಮುನಿವರ ವಿಶ್ರವಸ್ತು ತಪಸ್ಸು ಮಾಡುತ್ತಿರುವಲ್ಲಿಗೆ, ಹೋಗಿ ಒಂದು ಕಡೆ ನಿಂತುಕೊಂಡಳು.॥13॥

ಮೂಲಮ್ - 14

ಏತಸ್ಮಿನ್ನಂತರೇ ರಾಮ ಪುಲಸ್ತ್ಯತನಯೋ ದ್ವಿಜಃ ।
ಅಗ್ನಿಹೋತ್ರಮುಪಾತಿಷ್ಠಚ್ಚತುರ್ಥ ಇವ ಪಾವಕಃ ॥

ಅನುವಾದ

ಶ್ರೀರಾಮಾ! ಆಗ ಪುಲಸ್ತ್ಯನಂದನ ವಿಶ್ರವಸ್ಸು ಸಾಯಂಕಾಲದ ಅಗ್ನಿಹೋತ್ರ ಮಾಡುತ್ತಿದ್ದನು. ಆ ತೇಜಸ್ವೀ ಮುನಿಯು ಮೂರು ಅಗ್ನಿಗಳೊಂದಿಗೆ ನಾಲ್ಕನೆಯ ಅಗ್ನಿಯಂತೆ ಪ್ರಕಾಶಿಸುತ್ತಿದ್ದನು.॥14॥

ಮೂಲಮ್ - 15

ಅವಿಚಿಂತ್ಯ ತು ತಾಂ ವೇಲಾಂ ದಾರುಣಾಂ ಪಿತೃಗೌರವಾತ್ ।
ಉಪಸೃತ್ಯಾಗ್ರತಸ್ತಸ್ಯ ಚರಣಾಧೋಮುಖೀ ಸ್ಥಿತಾ ॥

ಅನುವಾದ

ತಂದೆಯ ಕುರಿತು ಗೌರವಬುದ್ಧಿಯುಳ್ಳ ಕೈಕಸೆಯು ಆ ಭಯಂಕರ ಸಮಯವನ್ನು ವಿಚಾರಮಾಡದೆ, ಅವರ ಬಳಿಗೆ ಹೋಗಿ ಅವರ ಚರಣಗಳಲ್ಲಿ ದೃಷ್ಟಿಯಿರಿಸಿ ಎದುರಿಗೆ ಹೋಗಿ ನಿಂತಳು.॥15॥

ಮೂಲಮ್ - 16½

ವಿಲಿಖಂತೀ ಮುಹುರ್ಭೂಮಿಮಂಗುಷ್ಠಾಗ್ರೇಣ ಭಾಮಿನೀ ।
ಸ ತು ತಾಂ ವೀಕ್ಷ್ಯ ಸುಶ್ರೋಣೀಂ ಪೂರ್ಣಚಂದ್ರನಿಭಾನನಾಮ್ ॥
ಅಬ್ರವೀತ್ಪರಮೋದಾರೋ ದೀಪ್ಯಮಾನಾಂ ಸ್ವತೇಜಸಾ ।

ಅನುವಾದ

ಆಕೆಯು ಕಾಲಿನ ಹೆಬ್ಬೆರಳಿನಿಂದ ನೆಲವನ್ನು ಕೆರೆಯುತ್ತಾ, ಚಂದ್ರನಂತೆ ಮುಖ ಹಾಗೂ ಸುಂದರ ಕಟಿಪ್ರದೇಶವುಳ್ಳ ಆ ಸುಂದರಿಯು ತನ್ನ ತೇಜದಿಂದ ಪ್ರಕಾಶಿಸುತ್ತಿದ್ದಳು. ಆಕೆಯನ್ನು ನೋಡಿ ಮಹರ್ಷಿಗಳು ಕೇಳಿದರು.॥16½॥

ಮೂಲಮ್ - 17

ಭದ್ರೇ ಕಸ್ಯಾಸಿ ದುಹಿತಾ ಕುತೋ ವಾ ತ್ವಮಿಹಾಗತಾ ॥

ಮೂಲಮ್ - 18

ಕಿಂ ಕಾರ್ಯಂ ಕಸ್ಯ ವಾ ಹೇತೋಸ್ತತ್ತ್ವತೋ ಬ್ರೂಹಿ ಶೋಭನೇ ॥

ಅನುವಾದ

ಮಂಗಳಾಗಿಯೇ ! ನೀನು ಯಾರ ಮಗಳಾಗಿರುವೆ? ಎಲ್ಲಿಂದ ಬಂದಿರುವೆ? ನನ್ನಿಂದ ಏನು ಕಾರ್ಯವಾಗಬೇಕಾಗಿದೆ? ಯಾವ ಉದ್ದೇಶದಿಂದ ನೀನು ಇಲ್ಲಿಗೆ ಬಂದಿರುವೆ? ಇದೆಲ್ಲವನ್ನು ಸರಿಯಾಗಿ ತಿಳಿಸು.॥17-18॥

ಮೂಲಮ್ - 19

ಏವಮುಕ್ತಾ ತು ಸಾ ಕನ್ಯಾ ಕೃತಾಂಜಲಿರಥಾಬ್ರವೀತ್ ।
ಆತ್ಮಪ್ರಭಾವೇಣ ಮುನೇ ಜ್ಞಾತುಮರ್ಹಸಿಮೇ ಮತಮ್ ॥

ಮೂಲಮ್ - 20

ಕಿಂ ತು ಮಾಂ ವಿದ್ದಿ ಬ್ರಹ್ಮರ್ಷೇ ಶಾಸನಾತ್ಪಿತುರಾಗತಾಮ್ ।
ಕೈಕಸೀ ನಾಮ ನಾಮ್ನಾಹಂ ಶೇಷಂ ತ್ವಂ ಜ್ಞಾತುಮರ್ಹಸಿ ॥

ಅನುವಾದ

ವಿಶ್ರವಸಮುನಿಯು ಹೀಗೆ ಕೇಳಿದಾಗ ಕೈಕಸೆಯು ಕೈಮುಗಿದು ಇಂತೆಂದಳು- ಮುನಿಶ್ರೇಷ್ಠರೇ! ನೀವು ನಿಮ್ಮ ಪ್ರಭಾವದಿಂದಲೇ ನನ್ನ ಮನೋಕಾಮನೆ ತಿಳಿಯಬಲ್ಲರಿ; ಆದರೆ ಬ್ರಹ್ಮಷಿಯೇ! ನೀವು ಕೇಳಿದ್ದರಿಂದ ನಾನು ಹೇಳುತ್ತೇನೆ-ತಂದೆಯ ಅಪ್ಪಣೆಯಂತೆ ನಾನು ನಿಮ್ಮ ಸೇವೆಗಾಗಿ ಬಂದಿರುವೆನು. ನನ್ನ ಹೆಸರು ಕೈಕಸೆ. ಉಳಿದುದು ನಿಮಗೆಲ್ಲ ತಿಳಿದೇ ಇದೆ. ನನ್ನಿಂದ ಹೇಳಿಸುವ ಆವಶ್ಯಕತೆ ಇಲ್ಲ.॥19-20॥

ಮೂಲಮ್ - 21

ಸ ತು ಗತ್ವಾ ಮುನಿರ್ಧ್ಯಾನಂ ವಾಕ್ಯಮೇತದುವಾಚ ಹ ।
ವಿಜ್ಞಾತಂ ತೇ ಮಯಾ ಭದ್ರೇ ಕಾರಣಂ ಯನ್ಮನೋಗತಮ್ ॥

ಮೂಲಮ್ - 22

ಸುತಾಭಿಲಾಷೋ ಮತ್ತಸ್ತೇ ಮತ್ತಮಾತಂಗಗಾಮಿನಿ ।
ದಾರುಣಾಯಾಂ ತು ವೇಲಾಯಾಂಯಸ್ಮಾತ್ತ್ವಂ ಮಾಮುಪಸ್ಥಿತಾ ॥

ಮೂಲಮ್ - 23½

ಶೃಣು ತಸ್ಮಾತ್ಸುತಾನ್ ಭದ್ರೇ ಯಾದೃಶಾಂಜನಯಿಷ್ಯಸಿ ।
ದಾರುಣಾನ್ ದಾರುಣಾಕಾರಾನ್ ದಾರುಣಾಭಿ ಜನಪ್ರಿಯಾನ್ ॥
ಪ್ರಸವಿಷ್ಯಸಿ ಸುಶ್ರೋಣಿ ರಾಕ್ಷಸಾನ್ ಕ್ರೂರಕರ್ಮಣಃ ।

ಅನುವಾದ

ಇದನ್ನು ಕೇಳಿ ಮುನಿಯು ಧ್ಯಾನಮಗ್ನರಾಗಿ ಕ್ಷಣಕಾಲ ಯೋಚಿಸಿ ಹೇಳಿದರು - ಮಂಗಳಾಂಗಿಯೇ! ನಿನ್ನ ಮನಸ್ಸಿನ ಅಭಿಪ್ರಾಯ ತಿಳಿಯಿತು. ಮದಿಸಿದ ಆನೆಯಂತೆ ನಡೆಯುಳ್ಳವಳೇ! ನನ್ನಿಂದ ಪುತ್ರರನ್ನು ಪಡೆಯಲು ನೀನು ಬಯಸುತ್ತಿರುವೆ; ಆದರೆ ಈ ದಾರುಣ ಸಮಯದಲ್ಲಿ ನನ್ನ ಬಳಿಗೆ ಬಂದಿರುವೆ. ಅದರಿಂದ ನೀನು ಎಂತಹ ಪುತ್ರರನ್ನು ಪಡೆಯುವೆ ಎಂಬುದನ್ನು ಕೇಳು - ಸುಂದರೀ! ನಿನ್ನ ಪುತ್ರರು ಕ್ರೂರರೂ, ಭಯಂಕರ ಶರೀರವುಳ್ಳವರಾಗುವರು. ಅವರಿಗೆ ಕ್ರೂರಕರ್ಮಿ ರಾಕ್ಷಸರೊಂದಿಗೆ ಪ್ರೇಮ ಉಂಟಾದೀತು. ನೀನು ಕ್ರೂರಕರ್ಮಿಗಳಾದ ರಾಕ್ಷಸರನ್ನೇ ಪಡೆಯುವೆ.॥21-23½॥

ಮೂಲಮ್ - 24

ಸಾ ತುತದ್ವಚನಂ ಶ್ರುತ್ವಾ ಪ್ರಣಿಪತ್ಯಾಬ್ರವೀದ್ ವಚಃ ॥

ಮೂಲಮ್ - 25

ಭಗವನ್ನೀದೃಶಾನ್ ಪುತ್ರಾಂಸ್ತ್ವತ್ತೋಽಹಂ ಬ್ರಹ್ಮವಾದಿನಃ ।
ನೇಚ್ಛಾಮಿ ಸುದುರಾಚಾರಾನ್ ಪ್ರಸಾದಂ ಕರ್ತುಮರ್ಹಸಿ ॥

ಅನುವಾದ

ಮುನಿಯ ಮಾತನ್ನು ಕೇಳಿ ಕೈಕಸೆಯು ಅವರ ಕಾಲಿಗೆ ಬಿದ್ದು ಹೀಗೆ ನುಡಿದಳು - ಪೂಜ್ಯರೇ! ನೀವು ಬ್ರಹ್ಮವಾದೀ ಮಹಾತ್ಮರಾಗಿದ್ದೀರಿ. ನಾನು ನಿಮ್ಮಿಂದ ಇಂತಹ ದುರಾಚಾರೀ ಮಕ್ಕಳನ್ನು ಬಯಸುವುದಿಲ್ಲ; ಆದ್ದರಿಂದ ನೀವು ನನ್ನ ಮೇಲೆ ಕೃಪೆದೋರಿರಿ.॥24-25॥

ಮೂಲಮ್ - 26

ಕನ್ಯಯಾ ತ್ವೇವಮುಕ್ತಸ್ತು ವಿಶ್ರವಾ ಮುನಿಪುಂಗವಃ ।
ಉವಾಚ ಕೈಕಸೀಂ ಭೂಯಃ ಪೂರ್ಣೇಂದುರಿವ ರೋಹಿಣೀಮ್ ॥

ಅನುವಾದ

ಆ ರಾಕ್ಷಸಕನ್ಯೆ ಹೀಗೆ ಹೇಳಿದಾಗ ಪೂರ್ಣಚಂದ್ರನಂತಿದ್ದ ಮುನಿವರ ವಿಶ್ರವಸರು ರೋಹಿಣಿ ಯಂತೆ ಸುಂದರಳಾದ ಕೈಕಸಿಯ ಬಳಿ ಹೇಳಿದರು.॥26॥

ಮೂಲಮ್ - 27

ಪಶ್ಚಿಮೋ ಯಸ್ತವ ಸುತೋ ಭವಿಷ್ಯತಿ ಶುಭಾನನೇ ।
ಮಮ ವಂಶಾನುರೂಪಃ ಸ ಧರ್ಮಾತ್ಮಾ ಚ ನ ಸಂಶಯಃ ॥

ಅನುವಾದ

ಶುಭಾನನೇ! ನಿನ್ನ ಕಿರಿಯ ಕೊನೆಯ ಪುತ್ರನು ನನ್ನ ವಂಶಕ್ಕನುರೂಪೀ ಧರ್ಮಾತ್ಮನಾಗುವನು. ಇದರಲ್ಲಿ ಸಂಶಯವೇ ಬೇಡ.॥27॥

ಮೂಲಮ್

(ಶ್ಲೋಕ - 28)
ಏವಮುಕ್ತಾ ತು ಸಾ ಕನ್ಯಾ ರಾಮ ಕಾಲೇನ ಕೇನಚಿತ್ ।
ಜನಯಾಮಾಸ ಬೀಭತ್ಸಂ ರಕ್ಷೋ ರೂಪಂ ಸುದಾರುಣಮ್ ॥

ಮೂಲಮ್ - 29

ದಶಗ್ರೀವಂ ಮಹಾದಂಷ್ಟ್ರಂ ನೀಲಾಂಜನಚಯೋಪಮಮ್ ।
ತಾಮ್ರೋಷ್ಠಂ ವಿಂಶತಿಭುಜಂ ಮಹಾಸ್ಯಂ ದೀಪ್ತಮೂರ್ಧಜಮ್ ॥

ಅನುವಾದ

ಶ್ರೀರಾಮಾ! ಮುನಿಯು ಹೀಗೆ ಹೇಳಿದಾಗ ಕೈಕಸೆಯು ಸ್ವಲ್ಪ ಸಮಯದಲ್ಲಿ ಅತ್ಯಂತ ಭಯಾನಕ ಮತ್ತು ಕ್ರೂರ ಸ್ವಭಾವದ ಒಬ್ಬ ರಾಕ್ಷಸನಿಗೆ ಜನ್ಮ ನೀಡಿದಳು. ಅವನಿಗೆ ಹತ್ತು ತಲೆ, ದೊಡ್ಡ-ದೊಡ್ಡ ದಾಡೆಗಳು, ತಾಮ್ರದಂತೆ ತುಟಿಗಳು, ಇಪ್ಪತ್ತು ಭುಜಗಳು, ವಿಶಾಲಮುಖಗಳು, ಹೊಳೆಯುವ ಕೇಶರಾಶಿ ಇತ್ತು. ಅವನ ಶರೀರದ ಬಣ್ಣ ಇದ್ದಿಲಿನಂತೆ ಕಪ್ಪಾಗಿತ್ತು. ॥28-29॥

ಮೂಲಮ್ - 30

ತಸ್ಮಿಂಜಾತೇ ತತಸ್ತಸ್ಮಿನ್ ಸಜ್ವಾಲಕವಲಾಃ ಶಿವಾಃ ।
ಕ್ರವ್ಯಾದಾಶ್ಚಾಪಸವ್ಯಾನಿ ಮಂಡಲಾನಿ ಪ್ರಚಕ್ರಮುಃ ॥

ಅನುವಾದ

ಅಂತಹ ರಾಕ್ಷಸನು ಹುಟ್ಟುತ್ತಲೇ ಹೆಣ್ಣುಗುಳ್ಳೆನರಿಗಳು ಬೆಂಕಿಯುಂಡೆಗಳನ್ನು ಉಗುಳುತ್ತಿದ್ದವು. ಮಾಂಸಭಕ್ಷಿ ರಣಹದ್ದು ಮೊದಲಾದ ಪಕ್ಷಿಗಳು ಅಪ್ರದಕ್ಷಿಣವಾಗಿ ಮಂಡಲಾಕಾರ ಹಾರಾಡುತ್ತಿದ್ದವು.॥30॥

ಮೂಲಮ್ - 31

ವವರ್ಷ ರುಧಿರಂ ದೇವೋ ಮೇಘಾಶ್ಚಖರ ನಿಃಸ್ವನಾಃ ।
ಪ್ರಬಭೌ ನ ಚ ಸೂರ್ಯೋ ವೈ ಮಹೋಲ್ಕಾಶ್ಚಾಪತನ್ಭುವಿ ॥

ಮೂಲಮ್ - 32

ಚಕಂಪೇ ಜಗತೀ ಚೈವ ವವುರ್ವಾತಾಃ ಸುದಾರಣಾಃ ।
ಅಕ್ಷೋಭ್ಯಃ ಕ್ಷುಭಿತಶ್ಚೈವ ಸಮುದ್ರಃ ಸರಿತಾಂ ಪತಿಃ ॥

ಅನುವಾದ

ಪರ್ಜನ್ಯನು ರಕ್ತದ ಮಳೆಗರೆದನು, ಮೇಘಗಳು ಕತ್ತೆಯಂತೆ ಗರ್ಜಿಸಿದವು, ಸೂರ್ಯನು ಮಂಕಾದನು, ಭಯಂಕರ ಬಿರುಗಾಳಿ ಬೀಸತೊಡಗಿತು, ಉಲ್ಕಾಪಾತ ಆಗುತ್ತಿತ್ತು, ಯಾರಿಂದಲೂ ಕ್ಷುಬ್ಧನಾಗದ ಸರಿತ್ವತಿಯಾದ ಸಮುದ್ರವು ವಿಕ್ಷುಬ್ಧವಾಯಿತು.॥31-32॥

ಮೂಲಮ್ - 33

ಅಥ ನಾಮಾಕರೋತ್ತಸ್ಯ ಪಿತಾಮಹಸಮಃ ಪಿತಾ ।
ದಶಗ್ರೀವಃ ಪ್ರಸೂತೋಯಂ ದಶಗ್ರೀವೋ ಭವಿಷ್ಯತಿ ॥

ಅನುವಾದ

ಆಗ ಬ್ರಹ್ಮದೇವರಂತೆ ತೇಜಸ್ವೀ ವಿಶ್ರವಸ್ಸು ಮುನಿಯು ಆ ಪುತ್ರನಿಗೆ ನಾಮಕರಣ ಮಾಡಿದನು. ಇವನು ಹತ್ತುತಲೆಗಳಿಂದ ಹುಟ್ಟಿರುವುದರಿಂದ ‘ದಶಗ್ರೀವ’ ಎಂಬ ಹೆಸರಿನಿಂದ ಪ್ರಸಿದ್ಧನಾಗುವನು.॥33॥

ಮೂಲಮ್ - 34

ತಸ್ಯ ತ್ವನಂತರಂ ಜಾತಃ ಕುಂಭಕರ್ಣೋ ಮಹಾಬಲಃ ।
ಪ್ರಮಾಣಾದ್ಯಸ್ಯ ವಿಪುಲಂ ಪ್ರಮಾಣಂ ನೇಹವಿದ್ಯತೇ ॥

ಅನುವಾದ

ಬಳಿಕ ಮಹಾಬಲಿ ಕುಂಭಕರ್ಣನ ಜನ್ಮವಾಯಿತು. ಅವನ ಶರೀರಕ್ಕಿಂತ ದೊಡ್ಡ ಶರೀರ ಜಗತ್ತಿನಲ್ಲಿ ಯಾರಿಗೂ ಇರಲಿಲ್ಲ.॥34॥

ಮೂಲಮ್ - 35

ತತಃ ಶೂರ್ಪಣಖಾ ನಾಮ ಸಂಜಜ್ಞೇ ವಿಕೃತಾನನಾ ।
ವಿಭೀಷಣಶ್ಚ ಧರ್ಮಾತ್ಮಾ ಕೈಕಸ್ಯಾಃ ಪಶ್ಚಿಮಃ ಸುತಃ ॥

ಅನುವಾದ

ಅನಂತರ ವಿಕರಾಳ ಮುಖವುಳ್ಳ ಶೂರ್ಪಣಖೆ ಹುಟ್ಟಿದಳು. ಬಳಿಕ ಧರ್ಮಾತ್ಮಾ ವಿಭೀಷಣನ ಜನ್ಮವಾಯಿತು. ಅವನು ಕೈಕಸೆಯ ಕೊನೆಯ ಪುತ್ರನಾಗಿದ್ದನು.॥35॥

ಮೂಲಮ್ - 36

ತಸ್ಮಿಂಜಾತೇ ಮಹಾಸತ್ತ್ವೇ ಪುಷ್ಪವರ್ಷಂ ಪಪಾತ ಹ ।
ನಭಃ ಸ್ಥಾನೇ ದುಂದುಭಯೋ ದೇವಾನಾಂ ಪ್ರಾಣದಂಸ್ತಥಾ ।
ವಾಕ್ಯಂ ಚೈವಾಂತರಿಕ್ಷೆ ಚ ಸಾಧು ಸಾಧ್ವಿತಿ ತತ್ತದಾ ॥

ಅನುವಾದ

ಆ ಮಹಾ ಸತ್ತ್ವಶಾಲಿ ಪುತ್ರನು ಹುಟ್ಟಿದಾಗ ಆಕಾಶದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳ ದುಂದುಭಿಗಳು ಮೊಳಗಿದವು. ಆಗ ಅಂತರಿಕ್ಷದಿಂದ ‘ಸಾಧು-ಸಾಧು’ ಎಂಬ ಧ್ವನಿ ಕೇಳಿ ಬಂತು.॥36॥

ಮೂಲಮ್ - 37

ತೌ ತು ತತ್ರ ಮಹಾರಣ್ಯೇ ವವೃಧಾತೇ ಮಹೌಜಸೌ ।
ಕುಂಭಕರ್ಣ ದಶಗ್ರೀವೋ ಲೋಕೋದ್ವೇಗಕರೌ ತದಾ ॥

ಅನುವಾದ

ಕುಂಭಕರ್ಣ ಮತ್ತು ದಶಗ್ರೀವ ಇವರಿಬ್ಬರು ಮಹಾಬಲಿ ರಾಕ್ಷಸರು ಲೋಕದಲ್ಲಿ ಉದ್ವೇಗ ಉಂಟುಮಾಡುವವರಾಗಿದ್ದರು. ಆ ವಿಶಾಲಕಾಯ ಇಬ್ಬರೂ ಕಾಡಿನಲ್ಲೇ ದಿನೇ-ದಿನೇ ವೃದ್ಧಿಸತೊಡಗಿದರು.॥37॥

ಮೂಲಮ್ - 38

ಕುಂಭಕರ್ಣಃ ಪ್ರಮತ್ತಸ್ತು ಮಹರ್ಷೀನ್ ಧರ್ಮವತ್ಸಲಾನ್ ।
ತ್ರೈಲೋಕ್ಯೇ ತ್ಯಾಸಂತುಷ್ಟೋ ಭಕ್ಷಯನ್ ವಿಚಚಾರ ಹ ॥

ಅನುವಾದ

ಕುಂಭಕರ್ಣನು ಭಾರೀ ಉನ್ಮತ್ತನಾದನು. ಅವನು ಎಷ್ಟು ತಿಂದರೂ ತೃಪ್ತನಾಗುತ್ತಿರಲಿಲ್ಲ; ಅದರಿಂದ ಮೂರೂ ಲೋಕಗಳಲ್ಲಿ ಅಲೆಯುತ್ತಾ ಧರ್ಮಾತ್ಮಾ ಮಹರ್ಷಿಗಳನ್ನು ತಿನ್ನುತ್ತಿದ್ದನು.॥38॥

ಮೂಲಮ್ - 39

ವಿಭೀಷಣಸ್ತು ಧರ್ಮಾತ್ಮಾ ನಿತ್ಯಂ ಧರ್ಮವ್ಯವಸ್ಥಿತಃ ।
ಸ್ವಾಧ್ಯಾಯ ನಿಯತಾಹಾರ ಉವಾಸ ವಿಜಿತೇಂದ್ರಿಯಃ ॥

ಅನುವಾದ

ವಿಭೀಷಣನು ಬಾಲ್ಯದಿಂದಲೇ ಧರ್ಮಾತ್ಮನಾಗಿದ್ದನು. ಅವನು ಸದಾ ಧರ್ಮದಲ್ಲೇ ಸ್ಥಿತನಾಗಿದ್ದು, ಸ್ವಾಧಾಯ, ನಿಯಮಿತ ಆಹಾರ ಸೇವಿಸುತ್ತಾ, ಇಂದ್ರಿಯಗಳನ್ನು ತನ್ನ ಹತೋಟಿಯಲ್ಲಿರಿಸಿಕೊಂಡಿದ್ದನು.॥39॥

ಮೂಲಮ್ - 40

ಅಥ ವೈಶ್ರವಣೋ ದೇವಸ್ತತ್ರ ಕಾಲೇನ ಕೇನಚಿತ್ ।
ಆಗತಃ ಪಿತರಂ ದ್ರಷ್ಟುಂ ಪುಷ್ಪಕೇಣ ಧನೇಶ್ವರಃ ॥

ಅನುವಾದ

ಕೆಲ ದಿನಗಳಲ್ಲಿ ಧನಾಧಕ್ಷನಾದ ವೈಶ್ರವಣನು (ಕುಬೇರ) ಪುಷ್ಪಕ ವಿಮಾನಾರೂಢನಾಗಿ ತನ್ನ ತಂದೆಯ ದರ್ಶನ ಪಡೆಯಲು ಅಲ್ಲಿಗೆ ಬಂದನು.॥40॥

ಮೂಲಮ್ - 41

ತಂ ದೃಷ್ಟ್ವಾಕೈಕಸೀ ತತ್ರ ಜ್ವಲಂತಮಿವ ತೇಜಸಾ ।
ಆಗಮ್ಯ ರಾಕ್ಷಸೀ ತತ್ರ ದಶಗ್ರೀವಮುವಾಚ ಹ ॥

ಅನುವಾದ

ತನ್ನ ತೇಜದಿಂದ ಪ್ರಕಾಶಿಸುತ್ತಿದ್ದ ಅವನನ್ನು ನೋಡಿ, ರಾಕ್ಷಸ ಕನ್ಯೆ ಕೈಕಸೆಯು ತನ್ನ ಮಗನಾದ ದಶಗ್ರೀವನ ಬಳಿಗೆ ಬಂದು ಹೀಗೆ ನುಡಿದಳು.॥41॥

ಮೂಲಮ್ - 42

ಪುತ್ರ ವೈಶ್ರವಣಂ ಪಶ್ಯಭ್ರಾತರಂ ತೇಜಸಾ ವೃತಮ್ ।
ಭ್ರಾತೃಭಾವೇ ಸಮೇ ಚಾಪಿ ಪಶ್ಯಾತ್ಮಾನಂ ತ್ವಮೀದೃಶಮ್ ॥

ಅನುವಾದ

ಮಗು! ನಿನ್ನಣ್ಣ ವೈಶ್ರವಣನನ್ನು ನೋಡು. ಅವನು ಹೇಗೆ ತೇಜಸ್ವಿಯಾಗಿದ್ದಾನೆ! ತಮ್ಮನಾದ ಕಾರಣ ನೀನೂ ಕೂಡ ಅವನಂತೆ ಆಗಬೇಕು. ಆದರೆ ತನ್ನ ಸ್ಥಿತಿಯನ್ನು ನೋಡು ಹೇಗಿದೆ.॥42॥

ಮೂಲಮ್ - 43

ದಶಗ್ರೀವ ತಥಾ ಯತ್ನಂ ಕುರುಷ್ವಾಮಿತವಿಕ್ರಮ ।
ಯಥಾ ತ್ವಮಪಿ ಮೇ ಪುತ್ರ ಭವೇ ರ್ವೈಶ್ರವಣೋಪಮಃ ॥

ಅನುವಾದ

ಅಮಿತ ಪರಾಕ್ರಮಿ ದಶಗ್ರೀವನೇ! ಮಗನೇ! ನೀನು ವೈಶ್ರವಣನಂತೆ ತೇಜ ಮತ್ತು ವೈಭವದಿಂದ ಸಂಪನ್ನನಾಗುವಂತೆ ಪ್ರಯತ್ನಮಾಡು.॥43॥

ಮೂಲಮ್ - 44

ಮಾತುಸ್ತದ್ವಚನಂ ಶ್ರುತ್ವಾ ದಶಗ್ರೀವಃ ಪ್ರತಾಪವಾನ್ ।
ಅಮರ್ಷಮತುಲಂ ಲೇಭೇ ಪ್ರತಿಜ್ಞಾಂ ಚಾಕರೋತ್ತದಾ ॥

ಅನುವಾದ

ತಾಯಿಯ ಮಾತನ್ನು ಕೇಳಿ ಪ್ರತಾಪಶಾಲಿಯಾದ ದಶಗ್ರೀವನಿಗೆ ಅತ್ಯಂತ ಅಸಹನೆಯುಂಟಾಯಿತು. ಅವನು ಕೂಡಲೇ ಹೀಗೆ ಪ್ರತಿಜ್ಞೆ ಮಾಡಿದನು.॥44॥

ಮೂಲಮ್ - 45

ಸತ್ಯಂ ತೇ ಪ್ರತಿಜಾನಾಮಿ ಭ್ರಾತೃತುಲ್ಯೋಽಧಿಕೋಽಪಿ ವಾ ।
ಭವಿಷ್ಯಾಮ್ಯೋಜಸಾ ಚೈವ ಸಂತಾಪಂ ತ್ಯಜ ಹೃದ್ಗತಮ್ ॥

ಅನುವಾದ

ಅಮ್ಮಾ! ನೀನು ಮನಸ್ಸಿನ ಚಿಂತೆ ಬಿಟ್ಟುಬಿಡು. ನಾನು ನನ್ನ ಪರಾಕ್ರಮದಿಂದ ಅಣ್ಣನಾದ ವೈಶ್ರವಣನಂತೆ ಇಲ್ಲವೇ ಅವನಿಗಿಂತ ಹೆಚ್ಚಿನವನಾಗುವೆನು ಎಂದು ಪ್ರತಿಜ್ಞಾಪೂರ್ವಕ ಹೇಳುತ್ತೇನೆ.॥45॥

ಮೂಲಮ್ - 46

ತತಃ ಕ್ರೋಧೇನ ತೇನೈವ ದಶಗ್ರೀವಃ ಸಹಾನುಜಃ ।
ಚಿಕೀರ್ಷುರ್ದುಷ್ಕರಂ ಕರ್ಮ ತಪಸೇ ಧೃತಮಾನಸಃ ॥

ಮೂಲಮ್ - 47

ಪ್ರಾಪ್ಸ್ಯಾಮಿ ತಪಸಾ ಕಾಮಮಿತಿ ಕೃತ್ವಾಧ್ಯವಸ್ಯ ಚ ।
ಆಗಚ್ಛದಾತ್ಮಸಿದ್ಧಥ್ಯಂ ಗೋಕರ್ಣಸ್ಯಾಶ್ರಮಂ ಶುಭಮ್ ॥

ಅನುವಾದ

ಬಳಿಕ ಕ್ರೋಧಾವೇಶದಿಂದ ಸಹೋದರ ರೊಂದಿಗೆ ದಶಗ್ರೀವನು ದುಷ್ಕರ ಕರ್ಮವನ್ನು ಇಚ್ಛಿಸಿ ‘ನಾನು ತಪಸ್ಸಿನಿಂದ ನನ್ನ ಮನೋರಥ ಪೂರ್ಣ ಮಾಡಿಕೊಳ್ಳುವೆನು’ ಎಂದು ಯೋಚಿಸಿ, ಮನಸ್ಸಿನಲ್ಲಿ ತಪಸ್ಸನ್ನು ಮಾಡಲು ನಿಶ್ಚೈಸಿ, ಅಭೀಷ್ಟಸಿದ್ಧಿಗಾಗಿ ಗೋಕರ್ಣದ ಪವಿತ್ರ ಆಶ್ರಮಕ್ಕೆ ಹೋದನು.॥46-47॥

ಮೂಲಮ್ - 48

ಸ ರಾಕ್ಷಸಸ್ತತ್ರ ಸಹಾನುಜಸ್ತದಾ
ತಪಶ್ಚಚಾರಾತುಲಮುಗ್ರವಿಕ್ರಮಃ ।
ಅತೋಷಯಚ್ಚಾಪಿ ಪಿತಾಮಹಂ ವಿಭುಂ
ದದೌ ಸ ತುಷ್ಟಶ್ಚ ವರಾಂಜಯಾವಹಾನ್ ॥

ಅನುವಾದ

ಸಹೋದರರೊಂದಿಗೆ ಆ ಭಯಂಕರ ಪರಾಕ್ರಮಿ ರಾಕ್ಷಸನು ಅನುಪಮ ತಪಸ್ಸನ್ನು ಪ್ರಾರಂಭಿಸಿದನು. ಆ ತಪಸ್ಸಿನಿಂದ ಅವನು ಬ್ರಹ್ಮದೇವರನ್ನು ಒಲಿಸಿಕೊಂಡನು. ಪ್ರಸನ್ನರಾದ ಬ್ರಹ್ಮದೇವರು ಅವನಿಗೆ ವಿಜಯ ಕೊಡುವ ವರವನ್ನು ಕರುಣಿಸಿದನು.॥48॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಒಂಭತ್ತನೆಯ ಸರ್ಗ ಪೂರ್ಣವಾಯಿತು. ॥9॥