[ಎಂಟನೆಯ ಸರ್ಗ]
ಭಾಗಸೂಚನಾ
ಮಾಲ್ಯವಂತನ ಯುದ್ಧ ಮತ್ತು ಪರಾಜಯ, ಸುಮಾಲಿ ಮೊದಲಾದ ಎಲ್ಲ ರಾಕ್ಷಸರು ರಸಾತಲನನ್ನು ಪ್ರವೇಶಿಸಿದುದು
ಮೂಲಮ್ - 1
ಹನ್ಯಮಾನೇ ಬಲೇ ತಸ್ಮಿನ್ ಪದ್ಮನಾಭೇನ ಪೃಷ್ಠತಃ ।
ಮಾಲ್ಯವಾನ್ಸಂನಿವೃತ್ತೋಽಥ ವೇಲಾಮೇತ್ಯ ಇವಾರ್ಣವಃ ॥
ಅನುವಾದ
(ಅಗಸ್ತ್ಯರು ಹೇಳುತ್ತಾರೆ - ರಘುನಂದನ!) ಪದ್ಮನಾಭನು ಹಿಂಬದಿಯಿಂದಲೇ ರಾಕ್ಷಸರ ಸೈನ್ಯವನ್ನು ಧ್ವಂಸಗೊಳಿಸಿದಾಗ ಸಮುದ್ರದ ಅಲೆಗಳು ತೀರಕ್ಕೆ ಅಪ್ಪಳಿಸಿ ಹಿಂದಿರುಗುವಂತೆಯೇ ಮಾಲ್ಯವಂತನು ರಣರಂಗಕ್ಕೆ ಹಿಂದಿರುಗಿದನು.॥1॥
ಮೂಲಮ್ - 2
ಸಂರಕ್ತನಯನಃ ಕ್ರೋಧಾಚ್ಚಲನ್ಮೌಲಿರ್ನಿಶಾಚರಃ ।
ಪದ್ಮನಾಭಮಿದಂ ಪ್ರಾಹ ವಚನಂ ಪುರುಷೋತ್ತಮಮ್ ॥
ಅನುವಾದ
ಅವನ ಕಣ್ಣುಗಳು ಕೆಂಪಗಾಗಿ, ಕಿರೀಟವು ಅಲ್ಲಾಡುತ್ತಿತ್ತು. ಆ ಮಾಲ್ಯವಂತನು ಪುರುಷೋತ್ತಮ ಪದ್ಮನಾಭನಲ್ಲಿ ಇಂತೆಂದನು.॥2॥
ಮೂಲಮ್ - 3
ನಾರಾಯಣ ನ ಜಾನೀಷೇ ಕ್ಷಾತ್ರಧರ್ಮಂ ಪುರಾತನಮ್ ।
ಅಯುದ್ಧಮನಸೋ ಭೀತಾನಸ್ಮಾನ್ಹಂಸಿ ಯಥೇತರಃ ॥
ಅನುವಾದ
ನಾರಾಯಣನೇ! ನೀನು ಪುರಾತನ ಕ್ಷಾತ್ರಧರ್ಮವನ್ನು ಖಂಡಿತವಾಗಿ ತಿಳಿದಿಲ್ಲ. ಅದರಿಂದಲೇ ಸಾಧಾರಣ ಮನುಷ್ಯ ನಂತೆ ನೀನು ಯುದ್ಧ ಮಾಡಲು ಮನಸ್ಸಿಲ್ಲದೆ, ಭಯಗೊಂಡು ಓಡುತ್ತಿರುವ ನಮ್ಮನ್ನು ಕೊಲ್ಲುತ್ತಿರುವೆಯಲ್ಲ.॥3॥
ಮೂಲಮ್ - 4
ಪರಾಙ್ಮುಖವಧಂ ಪಾಪಂ ಯಃ ಕರೋತಿ ಸುರೇಶ್ವರ ।
ಸ ಹಂತಾ ನ ಗತಃ ಸ್ವರ್ಗಂ ಲಭತೇ ಪುಣ್ಯಕರ್ಮಣಾಮ್ ॥
ಅನುವಾದ
ಸುರೇಶ್ವರನೇ! ಯುದ್ಧ ವಿಮುಖ ರಾದವರನ್ನು ವಧಿಸಿ ಪಾಪಕಾರ್ಯವನ್ನು ಮಾಡುವ ಘಾತುಕನು ಪುಣ್ಯಕರ್ಮಿಗಳಿಗೆ ಲಭಿಸುವ ಸ್ವರ್ಗಲೋಕವನ್ನು ಎಂದೂ ಪಡೆಯಲಾರನು.॥4॥
ಮೂಲಮ್ - 5
ಯುದ್ಧಶ್ರದ್ಧಾಥವಾ ತೇಽಸ್ತಿ ಶಂಖಚಕ್ರ ಗದಾಧರ ।
ಅಹಂ ಸ್ಥಿತೋಽಸ್ಮಿ ಪಶ್ಯಾಮಿ ಬಲಂ ದರ್ಶಯ ಯತ್ತವ ॥
ಅನುವಾದ
ಶಂಖ, ಚಕ್ರ, ಗದಾಧಾರಿಯೇ! ನಿನಗೆ ಯುದ್ಧ ಮಾಡುವ ಇಚ್ಛೆ ಇದ್ದರೆ ನಾನು ನಿಂತಿರುವೆನು ನೋಡು. ನಿನ್ನಲ್ಲಿ ಎಷ್ಟು ಬಲವಿದೆಯೋ ನೋಡಿಯೇ ಬಿಡುವೆ; ತೋರು ನಿನ್ನ ಪರಾಕ್ರಮ.॥5॥
ಮೂಲಮ್ - 6
ಮಾಲ್ಯವಂತಂ ಸ್ಥಿತಂ ದೃಷ್ಟ್ವಾ ಮಾಲ್ಯವಂತಮಿವಾಚಲಮ್ ।
ಉವಾಚ ರಾಕ್ಷಸೇಂದ್ರಂ ತಂ ದೇವರಾಜಾನುಜೋ ಬಲೀ ॥
ಅನುವಾದ
ಪರ್ವತದಂತೆ ಅವಿಚಲನಾಗಿ ನಿಂತಿರುವ ರಾಕ್ಷಸರಾಜ ಮಾಲ್ಯವಂತನನ್ನು ನೋಡಿ ಉಪೇಂದ್ರನಾದ ಮಹಾವಿಷ್ಣುವು ಅವನಲ್ಲಿ ಹೇಳಿದನು.॥6॥
ಮೂಲಮ್ - 7
ಯುಷ್ಮತ್ತೋ ಭಯಭೀತಾನಾಂ ದೇವಾನಾಂ ವೈ ಮಯಾಭಯಮ್ ।
ರಾಕ್ಷಸೋತ್ಸಾದನಂ ದತ್ತಂ ತದೇತದನುಪಾಲ್ಯತೇ ॥
ಅನುವಾದ
ನಿಮ್ಮಿಂದ ದೇವತೆಗಳಿಗೆ ಭಾರೀ ಭಯ ಉಂಟಾಗಿದೆ, ರಾಕ್ಷಸರನ್ನು ಸಂಹರಿಸುವೆನಾಗಿ ನಾನು ಪ್ರತಿಜ್ಞೆ ಮಾಡಿ, ಅವರಿಗೆ ಅಭಯ ಕೊಟ್ಟಿರುವೆನು. ಅದರಿಂದ ಹೀಗೆ ಆ ಪ್ರತಿಜ್ಞೆಯ ಪಾಲಿಸಲಾಗುತ್ತದೆ.॥7॥
ಮೂಲಮ್ - 8
ಪ್ರಾಣೈರಪಿ ಪ್ರಿಯಂ ಕಾರ್ಯಂ ದೇವಾನಾಂ ಹಿ ಸದಾ ಮಯಾ ।
ಸೋಽಹಂ ವೋ ನಿಹನಿಷ್ಯಾಮಿ ರಸಾತಲ ಗತಾನಪಿ ॥
ಅನುವಾದ
ಪ್ರಾಣ ಪಣಕ್ಕಿಟ್ಟು ದೇವತೆಗಳ ಪ್ರಿಯಕಾರ್ಯ ನಾನು ಮಾಡುವೆನು; ಅದಕ್ಕಾಗಿ ನೀವು ರಸಾತಲಕ್ಕೆ ಓಡಿಹೋದರೂ ನಿಮ್ಮನ್ನು ವಧಿಸದೆ ನಾನು ಇರಲಾರೆನು.॥8॥
ಮೂಲಮ್ - 9
ದೇವದೇವಂ ಬ್ರುವಾಣಂ ತಂ ರಕ್ತಾಂಬುರುಹಲೋಚನಮ್ ।
ಶಕ್ತ್ಯಾ ಬಿಭೇದ ಸಂಕ್ರುದ್ಧೋ ರಾಕ್ಷಸೇಂದ್ರೋ ಭುಜಾಂತರೇ ॥
ಅನುವಾದ
ಕೆಂದಾವರೆಯಂತೆ ಕಣ್ಣುಗಳುಳ್ಳ ದೇವದೇವನಾದ ವಿಷ್ಣುವು ಹೀಗೆ ಹೇಳಿದಾಗ ರಾಕ್ಷಸರಾಜ ಮಾಲ್ಯವಂತನು ಅತ್ಯಂತ ಕುಪಿತನಾಗಿ ತನ್ನ ಶಕ್ತಿಯಿಂದ ವಿಷ್ಣುವಿನ ಎದೆಗೆ ಪ್ರಹಾರ ಮಾಡಿದನು.॥9॥
ಮೂಲಮ್ - 10
ಮಾಲ್ಯವದ್ಭುಜ ನಿರ್ಮುಕ್ತಾ ಶಕ್ತಿಘಂಟಾಕೃತಸ್ವನಾ ।
ಹರೇರುರಸಿ ಬಭ್ರಾಜ ಮೇಘಸ್ಥೇವ ಶತಹ್ರದಾ ॥
ಅನುವಾದ
ಮಾಲ್ಯವಂತನು ಪ್ರಯೋಗಿಸಿದ ಆ ಶಕ್ತಿಯು ಘಂಟಾನಾದ ಮಾಡುತ್ತಾ ಶ್ರೀಹರಿಯ ಎದೆಗೆ ಬಡಿಯಿತು ಮತ್ತು ಕಪ್ಪಾದ ಮೋಡದಲ್ಲಿ ಹೊಳೆಯುವ ಮಿಂಚಿನಂತೆ ಶೋಭಿಸತೊಡಗಿತು.॥10॥
ಮೂಲಮ್ - 11
ತತಸ್ತಾಮೇವ ಚೋತ್ಕೃಷ್ಯ ಶಕ್ತಿಂ ಶಕ್ತಿಧರಪ್ರಿಯಃ ।
ಮಾಲ್ಯವಂತಂ ಸಮುದ್ದಿಶ್ಯ ಚಿಕ್ಷೇಪಾಂಬುರುಹೇಕ್ಷಣಃ ॥
ಅನುವಾದ
ಶಕ್ತಿಧರ ಕಾರ್ತಿಕೇಯನಿಗೆ ಪ್ರಿಯನಾದ, ಆ ಭಗವಾನ್ ಕಮಲನಯನ ವಿಷ್ಣುವು ಆ ಶಕ್ತಿಯನ್ನು ಎದೆಯಿಂದ ಕಿತ್ತು ಮಾಲ್ಯವಂತನಿಗೇ ಪ್ರಹರಿಸಿದನು.॥11॥
ಮೂಲಮ್ - 12
ಸ್ಕಂದೋತ್ಸೃಷ್ಟೇವ ಸಾ ಶಕ್ತಿರ್ಗೋವಿಂದಕರನಿಃಸೃತಾ ।
ಕಾಂಕ್ಷಂತೀ ರಾಕ್ಷಸಂ ಪ್ರಾಯಾನ್ಮಹೋಲ್ಕೇವಾಂಜನಾಚಲಮ್ ॥
ಅನುವಾದ
ಸ್ಕಂದನು ಪ್ರಯೋಗಿಸಿದ ಶಕ್ತಿಯಂತೆ ಗೋವಿಂದನು ಎಸೆದಿರುವ ಆ ಶಕ್ತಿಯು, ಅಂಜನಗಿರಿಯ ಮೇಲೆ ದೊಡ್ಡದಾದ ಉಲ್ಕೆಯು ಬೀಳುವಂತೆ ಆ ರಾಕ್ಷಸನ ಎದೆಗೆ ಗುರಿಯಿಟ್ಟು ಹೊರಟಿತು.॥12॥
ಮೂಲಮ್ - 13
ಸಾತತ್ಯೋರಸಿ ವಿಸ್ತೀರ್ಣೇ ಹಾರಭಾರಾವಭಾಸಿತೇ ।
ಆಪತದ್ರಾಕ್ಷಸೇಂದ್ರಸ್ಯ ಗಿರಿಕೂಟ ಇವಾಶನಿಃ ॥
ಅನುವಾದ
ಹಾರಗಳಿಂದ ಪ್ರಕಾಶಿತವಾದ ಆ ರಾಕ್ಷಸನ ವಿಶಾಲ ವಕ್ಷಸ್ಥಳದಲ್ಲಿ ಆ ಶಕ್ತಿಯು, ಪರ್ವತ ಶಿಖರದಲ್ಲಿ ವಜ್ರಪಾತ ವಾದಂತೆ ಎರಗಿತು.॥13॥
ಮೂಲಮ್ - 14
ತಯಾ ಭಿನ್ನ ತನುತ್ರಾಣಃ ಪ್ರಾವಿಶದ್ವಿಪುಲಂ ತಮಃ ।
ಮಾಲ್ಯವಾನ್ ಪುನರಾಶ್ವಸ್ತಸ್ತಸ್ಥೌ ಗಿರಿರಿವಾಚಲಃ ॥
ಅನುವಾದ
ಅದರಿಂದ ಮಾಲ್ಯವಂತನ ಕವಚ ತುಂಡಾಗಿ, ಮೂರ್ಛಿತನಾದನು ; ಆದರೆ ಸ್ವಲ್ಪ ಹೊತ್ತಿನಲ್ಲೇ ಪುನಃ ಸಾವರಿಸಿಕೊಂಡು ಮಾಲ್ಯವಂತನು ಪರ್ವತದಂತೆ ಅವಿಚಲನಾಗಿ ನಿಂತುಕೊಂಡನು.॥14॥
ಮೂಲಮ್ - 15
ತತಃ ಕಾಲಾಯಸಂ ಶೂಲಂ ಕಂಟಕೈರ್ಬಹುಭಿಶ್ಚಿತಮ್ ।
ಪ್ರಗೃಹ್ಯಾಭ್ಯಹನದ್ದೇವಂ ಸ್ತನಯೋರಂತರೇ ದೃಢಮ್ ॥
ಅನುವಾದ
ಅನಂತರ ಅವನು ಅನೇಕ ಮುಳ್ಳುಗಳುಳ್ಳ ಕಬ್ಬಿಣದ ಶೂಲವನ್ನೆತ್ತಿಕೊಂಡು ಭಗವಂತನ ಎದೆಗೆ ಗುರಿಯಿಟ್ಟು ಪ್ರಹರಿಸಿದನು.॥15॥
ಮೂಲಮ್ - 16
ತಥೈವ ರಣರಕ್ತಸ್ತು ಮುಷ್ಟಿನಾ ವಾಸವಾನುಜಮ್ ।
ತಾಡಯಿತ್ವಾ ಧನುರ್ಮಾತ್ರಮಪಕ್ರಾಂತೌ ನಿಶಾಚರಃ ॥
ಅನುವಾದ
ಅಲ್ಲದೆ ಯುದ್ಧ ಪ್ರೇಮಿ ಆ ರಾಕ್ಷಸನು ವಿಷ್ಣುವಿಗೆ ಮುಷ್ಟಿಯಿಂದ ಹೊಡೆದು ಒಂದು ಧನುಸ್ಸಿನಷ್ಟು ಹಿಂದಕ್ಕೆ ತಳ್ಳಿದನು.॥16॥
ಮೂಲಮ್ - 17
ತತೋಂಽಬರೇ ಮಹಾನ್ಶಬ್ದಃ ಸಾಧು ಸಾಧ್ವಿತಿ ಚೋತ್ಥಿತಃ ।
ಆಹತ್ಯ ರಾಕ್ಷಸೋ ವಿಷ್ಣುಂ ಗರುಡಂ ಚಾಪ್ಯತಾಡಯತ್ ॥
ಅನುವಾದ
ಆಗ ಆಕಾಶದಲ್ಲಿ ರಾಕ್ಷಸರ ಮಹಾನಾದ ಪ್ರತಿಧ್ವನಿಸಿತು. ಚೆನ್ನಾಯಿತು-ಚೆನ್ನಾಯ್ತು ಎಂದು ಎಲ್ಲರೂ ಒಟ್ಟಿಗೆ ಕೂಗಿದರು. ವಿಷ್ಣುವಿಗೆ ಗುದ್ದಿ ಆ ರಾಕ್ಷಸನು ಗರುಡನಿಗೂ ಮುಷ್ಟಿಪ್ರಹಾರ ಮಾಡಿದನು.॥17॥
ಮೂಲಮ್ - 18
ವೈನತೇಯಸ್ತತಃ ಕ್ರುದ್ಧಃ ಪಕ್ಷವಾತೇನ ರಾಕ್ಷಸಮ್ ।
ವ್ಯಪೋಹದ್ ಬಲವಾನ್ವಾಯುಃ ಶುಷ್ಕಪರ್ಣಚಯಂ ಯಥಾ ॥
ಅನುವಾದ
ಇದನ್ನು ನೋಡಿ ವೈನತೇಯನು ಕುಪಿತನಾಗಿ, ತನ್ನ ರೆಕ್ಕೆಗಳ ಗಾಳಿಯಿಂದ, ಬಿರುಗಾಳಿಯು ತರಗೆಲೆಗಳನ್ನು ಹಾರಿಸಿಬಿಡುವಂತೆ ರಾಕ್ಷಸನನ್ನು ಹಾರಿಸಿಬಿಟ್ಟನು.॥18॥
ಮೂಲಮ್ - 19
ದ್ವಿಜೇಂದ್ರ ಪಕ್ಷವಾತೇನ ದ್ರಾವಿತಂ ದೃಶ್ಯ ಪೂರ್ವಜಮ್ ।
ಸುಮಾಲೀ ಸ್ವಬಲೈಃ ಸಾರ್ಧಂ ಲಂಕಾಮಭಿಮುಖೋ ಯಯೌ ॥
ಅನುವಾದ
ತನ್ನಣ್ಣನನ್ನು ಪಕ್ಷಿರಾಜನು ರೆಕ್ಕೆಗಳ ಗಾಳಿಯಿಂದ ಹಾರಿಸಿದುದನ್ನು ನೋಡಿ ಸುಮಾಲಿಯು ತನ್ನ ಸೈನಿಕರೊಂದಿಗೆ ಲಂಕೆಯ ಕಡೆಗೆ ತೆರಳಿದನು.॥19॥
ಮೂಲಮ್ - 20
ಪಕ್ಷವಾತ ಬಲೋದ್ಧೂತೋ ಮಾಲ್ಯವಾನಪಿ ರಾಕ್ಷಸಃ ।
ಸ್ವಬಲೇನ ಸಮಾಗಮ್ಯ ಯಯೌ ಲಂಕಾಂ ಹ್ರಿಯಾವೃತಃ ॥
ಅನುವಾದ
ಗರುಡನ ರೆಕ್ಕೆಗಳ ಗಾಳಿಯಿಂದ ಹಾರಿಹೋದ ರಾಕ್ಷಸ ಮಾಲ್ಯವಂತನೂ ಕೂಡ ನಾಚಿಕೊಂಡ ತನ್ನ ಸೈನ್ಯವನ್ನು ಸೇರಿ ಲಂಕೆಯತ್ತ ಸಾಗಿದನು.॥20॥
ಮೂಲಮ್ - 21
ಏವಂ ತೇ ರಾಕ್ಷಸಾ ರಾಮ ಹರಿಣಾ ಕಮಲೇಕ್ಷಣ ।
ಬಹುಶಃ ಸಂಯುಗೇ ಭಗ್ನಾ ಹತಪ್ರವರನಾಯಕಾಃ ॥
ಅನುವಾದ
ಕಮಲನಯನ ಶ್ರೀರಾಮಾ! ಹೀಗೆ ವಿಷ್ಣುವಿನೊಡನೆ ರಾಕ್ಷಸರ ಯುದ್ಧ ಅನೇಕ ಸಲ ನಡೆಯಿತು. ಪ್ರತಿಯೊಂದು ಸಂಗ್ರಾಮದಲ್ಲಿ ಪ್ರಧಾನ ನಾಯಕರು ಸತ್ತು, ಎಲ್ಲರೂ ಓಡಿಹೋಗಬೇಕಾಯಿತು.॥21॥
ಮೂಲಮ್ - 22
ಅಶಕ್ನುವಂತಸ್ತೇ ವಿಷ್ಣುಂ ಪ್ರತಿಯೋದ್ಧುಂ ಬಲಾರ್ದಿತಾಃ ।
ತ್ಯಕ್ತ್ವಾ ಲಂಕಾಂ ಗತಾ ವಸ್ತುಂ ಪಾತಾಲಂ ಸಹಪತ್ನಯಃ ॥
ಅನುವಾದ
ಅವರು ಭಗವಾನ್ ವಿಷ್ಣುವನ್ನು ಎದುರಿಸದೇ ಹೋದರು. ಯಾವಾಗಲೂ ಅವನ ಬಲದಿಂದ ಪೀಡಿತರಾಗಿ ಸಮಸ್ತ ನಿಶಾಚರರು ಲಂಕೆಯನ್ನು ಬಿಟ್ಟು ತಮ್ಮ ಪತ್ನಿಯರೊಂದಿಗೆ ಪಾತಾಳಕ್ಕೆ ಹೊರಟು ಹೋದರು.॥22॥
ಮೂಲಮ್ - 23
ಸುಮಾಲಿನಂ ಸಮಾಸಾದ್ಯ ರಾಕ್ಷಸಂ ರಘುಸತ್ತಮ ।
ಸ್ಥಿತಾಃ ಪ್ರಖ್ಯಾತವೀರ್ಯಾಸ್ತೇ ವಂಶೇ ಸಾಲಕಟಂಕಟೇ ॥
ಅನುವಾದ
ರಘುಶ್ರೇಷ್ಠನೇ! ಆ ವಿಖ್ಯಾತ ಪರಾಕ್ರಮಿ ನಿಶಾಚರರು ಸಾಲಕಟಂಕಟ ವಂಶದವನಾದ ರಾಕ್ಷಸ ಸುಮಾಲಿಯನ್ನು ಆಶ್ರಯಿಸಿ ಇರ ತೊಡಗಿದರು.॥23॥
ಮೂಲಮ್ - 24
ಯೇ ತ್ವಯಾ ನಿಹತಾಸ್ತೇ ತು ಪೌಲಸ್ತ್ಯಾ ನಾಮ ರಾಕ್ಷಸಾಃ ।
ಸುಮಾಲೀ ಮಾಲ್ಯವಾನ್ಮಾಲೀ ಯೇ ಚ ತೇಷಾಂ ಪುರಃಸರಾಃ ।
ಸರ್ವ ಏತೇ ಮಹಾಭಾಗಾ ರಾವಣಾದ್ಬಲವತ್ತರಾಃ ॥
ಅನುವಾದ
ಶ್ರೀರಾಮಾ! ಪುಲಸ್ತ್ಯವಂಶದ ಯಾವ-ಯಾವ ರಾಕ್ಷಸರನ್ನು ನೀನು ಕೊಂದಿರುವೆಯೋ, ಅವರಿಗಿಂತ ಪ್ರಾಚೀನ ರಾಕ್ಷಸರ ಪರಾಕ್ರಮ ಹೆಚ್ಚಾಗಿತ್ತು. ಸುಮಾಲಿ, ಮಾಲ್ಯವಂತ, ಮಾಲಿ ಹಾಗೂ ಅವರೊಂದಿಗೆ ಇದ್ದ ಮಹಾಭಾಗ ಯೋಧರೆಲ್ಲರೂ ರಾವಣನಿಗಿಂತ ಹೆಚ್ಚ ಬಲಿಷ್ಠರಾಗಿದ್ದರು.॥24॥
ಮೂಲಮ್ - 25
ನ ಚಾನ್ಯೋ ರಾಕ್ಷಸಾನ್ ಹಂತಾ ಸುರಾರೀನ್ದೇವ ಕಂಟಕಾನ್ ।
ಋತೇ ನಾರಾಯಣಂ ದೇವಂ ಶಂಖಚಕ್ರಗದಾಧರಮ್ ॥
ಅನುವಾದ
ದೇವತೆಗಳ ಕಂಟಕರೂಪೀ ಆ ದೇವದ್ರೋಹಿ ರಾಕ್ಷಸರ ವಧೆಯನ್ನು ಶಂಖ, ಚಕ್ರ, ಗದಾಧಾರಿ ನಾರಾಯಣನಲ್ಲದೆ ಬೇರೆ ಯಾರೂ ಮಾಡಲಾರರು.॥25॥
ಮೂಲಮ್ - 26
ಭವಾನ್ನಾರಾಯಣೋ ದೇವಶ್ಚತುರ್ಬಾಹುಃ ಸನಾತನಃ ।
ರಾಕ್ಷಸಾನ್ ಹಂತುಮುತ್ಪನ್ನೋ ಹ್ಯಜಯ್ಯಃ ಪ್ರಭುರವ್ಯಯಃ ॥
ಅನುವಾದ
ನೀನು ಚತುರ್ಭುಜ ಸನಾತನ ಭಗವಾನ್ ನಾರಾಯಣನೇ ಆಗಿರುವೆ. ನಿನ್ನನ್ನು ಯಾರೂ ಸೋಲಿಸಲಾರರು. ನೀನು ಅವಿನಾಶಿ ಪ್ರಭುನಾಗಿರುವೆ ಹಾಗೂ ರಾಕ್ಷಸರನ್ನು ವಧಿಸಲೆಂದೇ ಈ ಲೋಕದಲ್ಲಿ ಅವತರಿಸಿರುವೆ.॥26॥
ಮೂಲಮ್ - 27
ನಷ್ಟಧರ್ಮವ್ಯವಸ್ಥಾನಾಂ ಕಾಲೇ ಕಾಲೇ ಪ್ರಜಾಕರಃ ।
ಉತ್ಪದ್ಯತೇ ದಸ್ಯುವಧೇ ಶರಣಾಗತ ವತ್ಸಲಃ ॥
ಅನುವಾದ
ನೀನೇ ಈ ಪ್ರಜೆಗಳ ಸೃಷ್ಟಿಕರ್ತನಾಗಿದ್ದು, ಶರಣಾಗತರ ಮೇಲೆ ದಯೆ ಇರಿಸುತ್ತೀಯೆ. ಧರ್ಮದ ವ್ಯವಸ್ಥೆಯನ್ನು ನಾಶಗೊಳಿಸುವ ದಸ್ಯುಗಳು ಹುಟ್ಟಿದಾಗಲೆಲ್ಲ ಆ ದಸ್ಯುಗಳ ವಧೆಗಾಗಿ ನೀನು ಅವತರಿಸುತ್ತೀಯೆ.॥27॥
ಮೂಲಮ್ - 28
ಏಷಾ ಮಯಾ ತವ ನರಾಧಿಪ ರಾಕ್ಷಸಾನಾ-
ಮುತ್ಪತ್ತಿರದ್ಯ ಕಥಿತಾ ಸಕಲಾ ಯಥಾವತ್ ।
ಭೂಯೋ ನಿಬೋಧ ರಘುಸತ್ತಮ ರಾವಣಸ್ಯ
ಜನ್ಮಪ್ರಭಾವಮತುಲಂ ಸಸುತಸ್ಯ ಸರ್ವಮ್ ॥
ಅನುವಾದ
ನರೇಶ್ವರನೇ! ಹೀಗೆ ರಾಕ್ಷಸರ ಉತ್ಪತ್ತಿಯ ಪೂರ್ಣ ಪ್ರಸಂಗವೆಲ್ಲವನ್ನು ನಾನು ನಿನಗೆ ವರ್ಣಿಸುವೆನು, ಕೇಳು.॥28॥
ಮೂಲಮ್ - 29
ಚಿರಾತ್ಸುಮಾಲೀ ವ್ಯಚರದ್ರಸಾತಲಂ
ಸ ರಾಕ್ಷಸೋ ವಿಷ್ಣುಭಯಾರ್ದಿತಸ್ತದಾ ।
ಪುತ್ರೈಶ್ಚ ಪೌತ್ರೈಶ್ಚ ಸಮನ್ವಿತೋ ಬಲೀ
ತತಸ್ತು ಲಂಕಾಮವಸದ್ಧನೇಶ್ವರಃ ॥
ಅನುವಾದ
ವಿಷ್ಣುವಿನ ಭಯದಿಂದ ಪೀಡಿತನಾದ ರಾಕ್ಷಸ ಸುಮಾಲಿಯು ದೀರ್ಘಕಾಲ ತನ್ನ ಮಕ್ಕಳು-ಮೊಮ್ಮಕ್ಕಳ ಜೊತೆಗೆ ರಸಾತಲದಲ್ಲಿ ವಿಹರಿ ಸುತ್ತಿದ್ದನು. ಅಷ್ಟರಲ್ಲಿ ಧನಾಧ್ಯಕ್ಷ ಕುಬೇರನು ಲಂಕೆಯನ್ನು ತನ್ನ ವಾಸಸ್ಥಾನವಾಗಿಸಿಕೊಂಡನು.॥29॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಎಂಟನೆಯ ಸರ್ಗ ಪೂರ್ಣವಾಯಿತು. ॥8॥