[ಏಳನೆಯ ಸರ್ಗ]
ಭಾಗಸೂಚನಾ
ಭಗವಾನ್ ವಿಷ್ಣುವಿನಿಂದ ರಾಕ್ಷಸರ ಸಂಹಾರ
ಮೂಲಮ್ - 1
ನಾರಾಯಣಗಿರಿಂ ತೇ ತು ಗರ್ಜಂತೋ ರಾಕ್ಷಸಾಂಬುದಾಃ ।
ಅರ್ದಯಂತೋಽಸ್ತ್ರವರ್ಷೇಣ ವರ್ಷೇಣೇವಾದ್ರಿಮಂಬುದಾಃ ॥
ಅನುವಾದ
(ಅಹಸ್ತ್ಯರು ಹೇಳುತ್ತಾರೆ - ರಘುನಂದನ !) ಮೋಡಗಳು ಮಳೆಸುರಿಸಿ ಬೆಟ್ಟವನ್ನು ತೋಯಿಸುವಂತೆಯೇ ಗರ್ಜಿಸುತ್ತಾ ಆ ರಾಕ್ಷಸರೂಪೀ ಮೇಘಗಳು ಅಸ್ತ್ರಗಳ ಮಳೆಗಳಿಂದ ನಾರಾಯಣನನ್ನು ಪೀಡಿಸತೊಡಗಿದರು.॥1॥
ಮೂಲಮ್ - 2
ಶ್ಯಾಮಾವದಾತಸ್ತೈರ್ವಿಷ್ಣುರ್ನೀಲೈರ್ನಕ್ತಂಚರೋತ್ತಮೈಃ ।
ವೃತೋಂಽಜನಗಿರೀವಾಯಂ ವರ್ಷಮಾಣೈಃ ಪಯೋಧರೈಃ ॥
ಅನುವಾದ
ಭಗವಾನ್ ವಿಷ್ಣುವಿನ ಶ್ರೀವಿಗ್ರಹವು ಉಜ್ವಲ ಶ್ಯಾಮವರ್ಣದಿಂದ ಶೋಭಿಸುತ್ತಿತ್ತು. ಅಸ್ತ್ರ-ಶಸ್ತ್ರಗಳ ಮಳೆಗರೆಯುವ ಶ್ರೇಷ್ಠ ನಿಶಾಚರರು ನೀಲಿಬಣ್ಣದವರಾಗಿದ್ದರು. ಅಂಜನಗಿರಿಯನ್ನು ಸುತ್ತಲಿನಿಂದ ಮುತ್ತಿ ಕೃಷ್ಣಮೇಘಗಳು ಮಳೆಗರೆಯುವಂತೆ ಅನಿಸುತ್ತಿತ್ತು.॥2॥
ಮೂಲಮ್ - 3
ಶಲಭಾ ಇವ ಕೇದಾರಂ ಮಶಕಾ ಇವ ಪಾವಕಮ್ ।
ಯಥಾಮೃತಘಟಂ ದಂಶಾ ಮಕರಾ ಇವ ಚಾರ್ಣವಮ್ ॥
ಮೂಲಮ್ - 4
ತಥಾ ರಕ್ಷೋಧನುರ್ಮುಕ್ತಾ ವಜ್ರನೀಲ ಮನೋಜವಾಃ ।
ಹರಿಂ ವಿಶಂತಿ ಸ್ಮ ಶರಾ ಲೋಕಾ ಇವ ವಿಪರ್ಯಯೇ ॥
ಅನುವಾದ
ಮಿಡತೆಗಳು ಭತ್ತದ ಪೈರನ್ನು ಮುತ್ತುವಂತೆ, ಪತಂಗಗಳು ಬೆಂಕಿಯನ್ನು ಮುತ್ತುವಂತೆ, ಜೇನುತುಪ್ಪವನ್ನು ಕಾಡು ನೊಣಗಳು ಮುತ್ತಿಕೊಂಡಂತೆ, ಮೊಸಳೆಗಳು ಸಮುದ್ರವನ್ನು ಪ್ರವೇಶಿ ಸುವಂತೆ, ರಾಕ್ಷಸರು ಪ್ರಯೋಗಿಸುತ್ತಿದ್ದ ವಜ್ರಾಯುಧದಂತಹ, ವಾಯುವೇಗ-ಮನೋವೇಗದಂತಹ ಬಾಣಗಳು, ಪ್ರಳಯ ಕಾಲದಲ್ಲಿ ಸಮಸ್ತ ಲೋಕಗಳು ಶ್ರೀಹರಿಯಲ್ಲಿ ಲೀನವಾಗುವಂತೆಯೇ, ನಾರಾಯಣನಲ್ಲಿ ಪ್ರವೇಶಿಸಿ ಲೀನವಾಗಿ ಹೋದವು.॥3-4॥
ಮೂಲಮ್ - 5
ಸ್ಯಂದನೈಃ ಸ್ಯಂದನಗತಾ ಗಜೈಶ್ಚ ಗಜಮೂರ್ಧಗಾಃ ।
ಅಶ್ವಾರೋಹಾಸ್ತಥಾಶ್ವೈಶ್ಚ ಪಾದಾತಾಶ್ಚಾಂಬರೇ ಸ್ಥಿತಾಃ ॥
ಅನುವಾದ
ರಥದಲ್ಲಿ ಕುಳಿತ ಯೋಧರು ರಥಗಳೊಂದಿಗೆ, ಗಜಸವಾರರು ಗಜಗಳೊಂದಿಗೆ, ಕುದುರೆ ಸವಾರರು ಕುದುರೆಗಳೊಂದಿಗೆ, ಪದಾತಿಗಳು ಯುದ್ಧಕ್ಕಾಗಿ ಆಗಸದಲ್ಲಿ ನಿಂತಿದ್ದರು.॥5॥
ಮೂಲಮ್ - 6
ರಾಕ್ಷಸೇಂದ್ರಾ ಗಿರಿನಿಭಾಃ ಶರೈಃ ಶಕ್ತ್ಯೃಷ್ಟಿತೋಮರೈಃ ।
ನಿರುಚ್ಛ್ವಾಸಂ ಹರಿಂ ಚಕ್ರುಃ ಪ್ರಾಣಾಯಾಮಾ ಇವ ದ್ವಿಜಮ್ ॥
ಅನುವಾದ
ಪರ್ವತೋಪಮ ರಾಕ್ಷಸ ಶ್ರೇಷ್ಠರು ಸುತ್ತಲಿನಿಂದ ಶಕ್ತಿ, ಋಷ್ಟಿ, ತೋಮರ, ಬಾಣಗಳ ಮಳೆಗರೆದು ಪ್ರಾಣಾಯಾಮ ಮಾಡುವ ದ್ವಿಜರು ಶ್ವಾಸವನ್ನು ತಡೆಯುವಂತೆ, ನಾರಾಯಣನ ಉಸಿರು ನಿಲ್ಲಿಸಿಬಿಟ್ಟರು.॥6॥
ಮೂಲಮ್ - 7
ನಿಶಾಚರೈಸ್ತಾಡ್ಯಮಾನೋ ಮೀನೈರಿವ ಮಹೋದಧಿಃ ।
ಶಾರ್ಙ್ಗಮಾಯಮ್ಯ ದುರ್ಧರ್ಷೋ ರಾಕ್ಷಸೇಭ್ಯೋಽಸೃಜಚ್ಛರಾನ್ ॥
ಅನುವಾದ
ಮೀನುಗಳ ಮಹಾಸಾಗರವನ್ನು ಪ್ರಹರಿಸುವಂತೆ ಆ ನಿಶಾಚರರು ತಮ್ಮ ಅಸ್ತ್ರ-ಶಸ್ತ್ರಗಳಿಂದ ಶ್ರೀಹರಿಯನ್ನು ಹೊಡೆಯುತ್ತಿದ್ದರು. ಅಗ ದುರ್ಜಯ ದೇವನಾದ ವಿಷ್ಣುವು ತನ್ನ ಶಾರ್ಙ್ಗಧನುಸ್ಸನ್ನು ಸೆಳೆದು ರಾಕ್ಷಸರ ಮೇಲೆ ಬಾಣಗಳ ಮಳೆಗರೆದನು.॥7॥
ಮೂಲಮ್ - 8
ಶರೈಃ ಪೂರ್ಣಾಯತೋತ್ಸೃಷ್ಟೈರ್ವಜ್ರಕಲ್ಪೈರ್ಮನೋಜವೈಃ ।
ಚಿಚ್ಛೇದ ವಿಷ್ಣುರ್ನಿಶಿತೈಃ ಶತಶೋಥ ಸಹಸ್ರಶಃ ॥
ಅನುವಾದ
ಧನುಸ್ಸನ್ನು ಆಕರ್ಣಾಂತ ಸೆಳೆದು ಬಿಡುತ್ತಿದ್ದ ಬಾಣಗಳು ಅಸಹ್ಯವಾದ ವಜ್ರಾಯುಧದಂತೆ, ಮನೋವೇಗದಿಂದ ಒಡಗೊಂಡಿದ್ದವು. ಆ ಹರಿತ ಬಾಣಗಳಿಂದ ವಿಷ್ಣುವು ಸಾವಿರಾರು ರಾಕ್ಷಸರನ್ನು ಕತ್ತರಿಸಿ ಹಾಕಿದನು.॥8॥
ಮೂಲಮ್ - 9
ವಿದ್ರಾವ್ಯ ಶರವರ್ಷೇಣ ವರ್ಷಂ ವಾಯುರಿವೋತ್ಥಿತಮ್ ।
ಪಾಂಚಜನ್ಯಂ ಮಹಾಶಂಖಂ ಪ್ರದಧ್ಮೌ ಪುರುಷೋತ್ತಮಃ ॥
ಅನುವಾದ
ಮೋಡಗಳನ್ನು ಮತ್ತು ಮಳೆಯನ್ನು ಬಿರುಗಾಳಿ ಹಾರಿಸಿ ಬಿಡುವಂತೆ ನಾರಾಯಣನು ತನ್ನ ಬಾಣವರ್ಷದಿಂದ ರಾಕ್ಷಸರನ್ನು ಓಡಿಸಿ ತನ್ನ ಪಾಂಚಜನ್ಯವೆಂಬ ಶಂಖವನ್ನು ಊದಿದನು.॥9॥
ಮೂಲಮ್ - 10
ಸೋಂಽಬುಜೋ ಹರಿಣಾ ಧ್ಮಾತಃ ಸರ್ವಪ್ರಾಣೇನ ಶಂಖರಾಟ್ ।
ರರಾಸ ಭೀಮನಿರ್ಹ್ರಾದಸ್ತ್ರೈಲೋಕ್ಯಂ ವ್ಯಥಯನ್ನಿವ ॥
ಅನುವಾದ
ಪೂರ್ಣ ಪ್ರಾಣಶಕ್ತಿಯಿಂದ ಊದಿದ ಆ ಜಲ-ಜನಿತ ಶಂಖರಾಜನ ಭಯಂಕರ ಶಬ್ದದಿಂದ ಮೂರು ಲೋಕಗಳನ್ನು ವ್ಯಥೆಗೊಳಿಸುತ್ತಾ ಪ್ರತಿಧ್ವನಿಸಿತು.॥10॥
ಮೂಲಮ್ - 11
ಶಂಖರಾಜರವಃ ಸೋಽಥ ತ್ರಾಸಯಾಮಾಸ ರಾಕ್ಷಸಾನ್ ।
ಮೃಗರಾಜ ಇವಾರಣ್ಯೇ ಸಮದಾನಿವ ಕುಂಜರಾನ್ ॥
ಅನುವಾದ
ಕಾಡಿನಲ್ಲಿ ಗರ್ಜಿಸುವ ಸಿಂಹವು ಮತ್ತ ಗಜಗಳನ್ನು ಭಯಗೊಳಿಸುವಂತೆಯೇ ಆ ಶಂಖ ಧ್ವನಿಯು ಸಮಸ್ತ ರಾಕ್ಷಸರನ್ನು ಭಯಗೊಳಿಸಿ, ಗಾಬರಿ ಹುಟ್ಟಿಸಿತು.॥11॥
ಮೂಲಮ್ - 12
ನ ಶೇಕುರಶ್ವಾಃ ಸಂಸ್ಥಾತುಂ ವಿಮದಾಃ ಕುಂಜರಾಽಭವನ್ ।
ಸ್ಯಂದನೇಭ್ಯಶ್ಚ್ಯುತಾ ವೀರಾಃ ಶಂಖರಾವಿತದುರ್ಬಲಾಃ ॥
ಅನುವಾದ
ಆ ಶಂಖಧ್ವನಿ ಕೇಳಿ ಶಕ್ತಿ ಸಾಹಸವನ್ನು ಕಳೆದುಕೊಂಡ ಕುದುರೆಗಳು ಯುದ್ಧರಂಗದಲ್ಲಿ ನಿಲ್ಲದಾದವು. ಆನೆಗಳ ಮದ ಇಳಿದುಹೋಯಿತು, ವೀರಸೈನಿಕರು ರಥದಿಂದ ಕೆಡಹಿಬಿದ್ದರು.॥12॥
ಮೂಲಮ್ - 13
ಶಾರ್ಙ್ಗಚಾಪ ವಿನಿರ್ಮುಕ್ತಾ ವಜ್ರತುಲ್ಯಾನನಾಃ ಶರಾಃ ।
ವಿದಾರ್ಯ ತಾನಿ ರಕ್ಷಾಂಸಿ ಸಪುಂಖಾ ವಿವಿಶುಃ ಕ್ಷಿತಿಮ್ ॥
ಅನುವಾದ
ವಜ್ರದಂತೆ, ಸುಂದರ ರೆಕ್ಕೆಗಳುಳ್ಳ ಆ ಕಠೋರವಾದ ತುದಿಯುಳ್ಳ ಬಾಣಗಳು ಶಾರ್ಙ್ಗ ಧನುಸ್ಸಿನಿಂದ ಚಿಮ್ಮಿ ರಾಕ್ಷಸರನ್ನು ಸೀಳುತ್ತಾ ಪೃಥಿವಿಯಲ್ಲಿ ನೆಟ್ಟು ಹೋಗುತ್ತಿದ್ದವು.॥13॥
ಮೂಲಮ್ - 14
ಭಿದ್ಯಮಾನಾಃ ಶರೈಃ ಸಂಖ್ಯೇ ನಾರಾಯಣಕರಚ್ಯುತೈಃ ।
ನಿಪೇತೂ ರಾಕ್ಷಸಾ ಭೂಮೌ ಶೈಲಾ ವಜ್ರಹತಾ ಇವ ॥
ಅನುವಾದ
ರಣರಂಗದಲ್ಲಿ ವಿಷ್ಣುವು ಬಿಟ್ಟ ಬಾಣಗಳಿಂದ ಛಿನ್ನ-ಭಿನ್ನರಾದ ನಿಶಾಚರರು ವಜ್ರಾಘಾತದಿಂದ ಪುಡಿಯಾದ ಪರ್ವತದಂತೆ ಧರಾಶಾಯಿಯಾಗ ತೊಡಗಿದರು.॥14॥
ಮೂಲಮ್ - 15
ವ್ರಣಾನಿ ಪರಗಾತ್ರೇಭ್ಯೋ ವಿಷ್ಣುಚಕ್ರಕೃತಾನಿ ಹಿ ।
ಅಸೃಕ್ ಕ್ಷರಂತಿ ಧಾರಾಭಿಃ ಸ್ವರ್ಣಧಾರಾ ಇವಾಚಲಾಃ ॥
ಅನುವಾದ
ಶ್ರೀಹರಿಯ ಚಕ್ರದಿಂದ ಶತ್ರುಗಳ ಶರೀರಗಳಲ್ಲಿ ಆದ ಗಾಯಗಳಿಂದ ಪರ್ವತಗಳಿಂದ ಹರಿಯುವ ಕೆಂಪುನೀರಿನಂತೆ ರಕ್ತದ ಪ್ರವಾಹಗಳು ಹರಿಯತೊಡಗಿದವು.॥15॥
ಮೂಲಮ್ - 16
ಶಂಖರಾಜರವಶ್ಚಾಪಿ ಶಾಂರ್ಙ್ಗಚಾಪರವಸ್ತಥಾ ।
ರಾಕ್ಷಸಾನಾಂ ರವಾಂಶ್ಚಾಪಿ ಗ್ರಸತೇ ವೈಷ್ಣವೋ ರವಃ ॥
ಅನುವಾದ
ಶಂಖರಾಜದ ಧ್ವನಿ, ಶಾರ್ಙ್ಗಧನುಸ್ಸಿನ ಟೆಂಕಾರ ಹಾಗೂ ವಿಷ್ಣುವಿನ ಗರ್ಜನೆಯ ತುಮುಲ ನಾದಗಳಿಂದ ರಾಕ್ಷಸರ ಕೋಲಾಹಲವು ಅಡಗಿಹೋಯಿತು.॥16॥
ಮೂಲಮ್ - 17
ತೇಷಾಂ ಶಿರೋಧರಾನ್ ಧೂತಾನ್ ಶರಧ್ವಜ ಧನೂಂಷಿ ಚ ।
ರಥಾನ್ ಪಾತಾಕಾಸ್ತೂಣೀರಾಂಶ್ಚಿಚ್ಛೇದ ಸ ಹರಿಃ ಶರೈಃ ॥
ಅನುವಾದ
ರಾಕ್ಷಸರ ನಡುಗುತ್ತಿರು ತಲೆಗಳನ್ನು, ಬಾಣಗಳನ್ನು, ಧ್ವಜಗಳನ್ನು, ಧನುಸ್ಸುಗಳನ್ನು, ರಥ-ಪತಾಕೆಗಳನ್ನು, ಬತ್ತಳಿಕೆಗಳನ್ನು, ಭಗವಂತನು ತನ್ನ ಬಾಣಗಳಿಂದ ತುಂಡರಿಸಿಬಿಟ್ಟನು.॥17॥
ಮೂಲಮ್ - 18
ಸೂರ್ಯಾದಿವ ಕರಾ ಘೋರಾ ವಾರ್ಯೋಘಾ ಇವ ಸಾಗರಾತ್ ।
ಪರ್ವತಾದಿವ ನಾಗೇಂದ್ರಾ ಧಾರೌಘಾ ಇವ ಚಾಂಬುದಾತ್ ॥
ಮೂಲಮ್ - 19
ತಥಾ ಶಾರ್ಙ್ಗವಿನುರ್ಮುಕ್ತಾಃ ಶರಾ ನಾರಾಯಣೇರಿತಾಃ ।
ನಿರ್ಧಾವಂತೀಷವಸ್ತೂರ್ಣಂ ಶತಶೋಥ ಸಹಸ್ರಶಃ ॥
ಅನುವಾದ
ಸೂರ್ಯನ ಭಯಂಕರ ಕಿರಣಗಳಿಂದ ಸಮುದ್ರದ ನೀರಿನ ಪ್ರವಾಹ ಉಂಟಾಗುವಂತೆ, ಪರ್ವತದಿಂದ ದೊಡ್ಡ-ದೊಡ್ಡ ಸರ್ಪಗಳು ಮತ್ತು ಮೇಘಗಳಿಂದ ಜಲದ ಧಾರೆ ಉಂಟಾಗುವಂತೆಯೇ ನಾರಾಯಣನ ಶಾರ್ಙ್ಗಧನುಸ್ಸಿನಿಂದ ಹೊರಟ ನೂರಾರು ಸಾವಿರ ಬಾಣಗಳು ಎಲ್ಲೆಡೆ ಹರಿದಾಡಿದವು.॥18-19॥
ಮೂಲಮ್ - 20
ಶರಭೇಣ ಯಥಾ ಸಿಂಹಾಃ ಸಿಂಹೇನ ದ್ವಿರದಾ ಯಥಾ ।
ದ್ವಿರದೇನ ಯಥಾ ವ್ಯಾಘ್ರಾ ವ್ಯಾಘ್ರೇಣ ದ್ವೀಪಿನೋ ಯಥಾ ॥
ಮೂಲಮ್ - 21
ದ್ವೀಪಿನೇವ ಯಥಾ ಶ್ವಾನಃ ಶುನಾ ಮಾರ್ಜಾರಕೋ ಯಥಾ ।
ಮಾರ್ಜಾರೇಣ ಯಥಾ ಸರ್ಪಾಃ ಸರ್ಪೇಣ ಚ ಯಥಾಖವಃ ॥
ಮೂಲಮ್ - 22
ತಥಾ ತೇ ರಾಕ್ಷಸಾಃ ಸರ್ವೇ ವಿಷ್ಣುನಾ ಪ್ರಭವಿಷ್ಣುನಾ ।
ದ್ರವಂತಿ ದ್ರಾವಿತಾಶ್ಚಾನ್ಯೇ ಶಾಯಿತಾಶ್ಚ ಮಹೀತಲೇ ॥
ಅನುವಾದ
ಶರಭನಿಂದ ಸಿಂಹ, ಸಿಂಹನಿಂದ ಆನೆ, ಆನೆಯಿಂದ ಹುಲಿ, ಹುಲಿಯಿಂದ ಚಿರತೆ, ಚಿರತೆಯಿಂದ ನಾಯಿಗಳು, ನಾಯಿಯಿಂದ ಬೆಕ್ಕುಗಳು, ಬೆಕ್ಕಿನಿಂದ ಹಾವುಗಳು, ಹಾವಿನಿಂದ ಇಲಿಗಳು ಹೆದರಿ ಓಡಿಹೋಗುವಂತೆಯೇ ಎಲ್ಲ ರಾಕ್ಷಸರು ಪ್ರಭಾವಶಾಲಿ ವಿಷ್ಣುವಿನ ಏಟು ತಿಂದು ಓಡತೊಡಗಿದರು. ಅವನು ಓಡಿಸಿದ ಅನೇಕ ರಾಕ್ಷಸರು ಧರಾಶಾಯಿಯಾದರು.॥20-22॥
ಮೂಲಮ್ - 23
ರಾಕ್ಷಸಾನಾಂ ಸಹಸ್ರಾಣಿ ನಿಹತ್ಯ ಮಧುಸೂದನಃ ।
ವಾರಿಜಂ ಪೂರಯಾಮಾಸ ತೋಯದಂ ಸುರರಾಡಿವ ॥
ಅನುವಾದ
ಸಾವಿರಾರು ರಾಕ್ಷಸರನ್ನು ವಧಿಸಿ ಮಧುಸೂದನನು ತನ್ನ ಪಾಂಚಜನ್ಯ ಶಂಖವನ್ನು, ದೇವೇಂದ್ರನು ನೀರಿನಿಂದ ಮೇಘಗಳನ್ನು ತುಂಬುವಂತೆಯೇ ಗಂಭೀರ ಧ್ವನಿಯಿಂದ ತುಂಬಿಬಿಟ್ಟನು.॥23॥
ಮೂಲಮ್ - 24
ನಾರಾಯಣ ಶರತ್ರಸ್ತಂ ಶಂಖನಾದಸುವಿಹ್ವಲಮ್ ।
ಯಯೌ ಲಂಕಾಮಭಿಮುಖಂ ಪ್ರಭಗ್ನಂ ರಾಕ್ಷಸಂ ಬಲಮ್ ॥
ಅನುವಾದ
ನಾರಾಯಣನ ಬಾಣಗಳಿಂದ ಭಯಗೊಂಡು, ಶಂಖನಾದದಿಂದ ವ್ಯಾಕುಲಗೊಂಡ ರಾಕ್ಷಸ ಸೈನ್ಯವು ಲಂಕೆಯ ಕಡೆಗೆ ಓಡಿಹೋಯಿತು.॥24॥
ಮೂಲಮ್ - 25
ಪ್ರಭಗ್ನೇ ರಾಕ್ಷಸಬಲೇ ನಾರಾಯಣ ಶರಾಹತೇ ।
ಸುಮಾಲೀ ಶರವರ್ಷೇಣ ನಿವವಾರ ರಣೇ ಹರಿಮ್ ॥
ಅನುವಾದ
ನಾರಾಯಣನ ಬಾಣಗಳಿಂದ ಗಾಯಗೊಂಡು ರಾಕ್ಷಸ ಸೈನ್ಯವು ಓಡತೊಡಗಿದಾಗ ಸುಮಾಲಿಯು ರಣರಂಗದಲ್ಲಿ ಬಾಣಗಳ ಮಳೆಗರೆದು ಶ್ರೀಹರಿಯನ್ನು ತಡೆಹಿಡಿದನು.॥25॥
ಮೂಲಮ್ - 26
ಸ ತು ತಂ ಛಾದಯಾಮಾಸ ನೀಹಾರ ಇವ ಭಾಸ್ಕರಮ್ ।
ರಾಕ್ಷಸಾಃ ಸತ್ತ್ವಸಂಪನ್ನಾಃ ಪುನರ್ಧೈರ್ಯಂ ಸಮಾದಧುಃ ॥
ಅನುವಾದ
ಮಂಜು ಸೂರ್ಯನನ್ನು ಮುಚ್ಚಿಬಿಡುವಂತೆ ಸುಮಾಲಿಯು ಬಾಣಗಳಿಂದ ವಿಷ್ಣುವನ್ನು ಮುಚ್ಚಿಬಿಟ್ಟನು. ಇದನ್ನು ನೋಡಿ ಶಕ್ತಿಶಾಲಿ ರಾಕ್ಷಸರಿಗೆ ಪುನಃ ಧೈರ್ಯ ಉಂಟಾಯಿತು.॥26॥
ಮೂಲಮ್ - 27
ಅಥ ಸೋಽಭ್ಯಪತದ್ರೋಷಾದ್ ರಾಕ್ಷಸೋ ಬಲದರ್ಪಿತಃ ।
ಮಹಾನಾದಂ ಪ್ರಕುರ್ವಾಣೋ ರಾಕ್ಷಸಾನ್ ಜೀವಯನ್ನಿವ ॥
ಅನುವಾದ
ಆ ಬಲಾಭಿಮಾನಿ ನಿಶಾಚರನು ಜೋರಾಗಿ ಗರ್ಜಿಸಿ, ರಾಕ್ಷಸರಲ್ಲಿ ಹೊಸ ಸ್ಫೂರ್ತಿ ತುಂಬುತ್ತಾ ರೋಷಪೂರ್ವಕ ಆಕ್ರಮಣ ಮಾಡಿದನು.॥27॥
ಮೂಲಮ್ - 28
ಉತ್ಕ್ಷಿಪ್ಯ ಲಂಬಾಭರಣಂ ಧುನ್ವನ್ಕರಮಿವ ದ್ವಿಪಃ ।
ರರಾಸ ರಾಕ್ಷಸೋ ಹರ್ಷಾತ್ಸತಡಿತ್ತೋಯದೋ ಯಥಾ ॥
ಅನುವಾದ
ಆನೆಯ ಸೊಂಡಿಲನ್ನು ಎತ್ತಿ ಆಡಿಸುವಂತೆ ತೂಗುತ್ತಿರುವ ಒಡವೆಗಳಿಂದ ಕೂಡಿದ ಕೈಗಳನ್ನೆತ್ತಿ ಅಲ್ಲಾಡಿಸುತ್ತಾ ಆ ರಾಕ್ಷಸನು ನೀರು ತುಂಬಿದ ಮೋಡವು ಮಿಂಚಿನೊಂದಿಗೆ ಗರ್ಜಿಸುವಂತೆ ಹರ್ಷದಿಂದ ಗರ್ಜಿಸಿದನು.॥28॥
ಮೂಲಮ್ - 29
ಸುಮಾಲೇರ್ನರ್ದತಸ್ತಸ್ಯ ಶಿರೋ ಜ್ವಲಿತ ಕುಂಡಲಮ್ ।
ಚಿಚ್ಛೇದ ಯಂತುರಶ್ವಾಶ್ಚ ಭ್ರಾಂತಾಸ್ತಸ್ಯ ತು ರಕ್ಷಸಃ ॥
ಅನುವಾದ
ಆಗ ಭಗವಂತನು ಬಾಣಗಳಿಂದ ಗರ್ಜಿಸುತ್ತಿರುವ ಸುಮಾಲಿಯ ಸಾರಥಿಯ ಹೊಳೆಯುತ್ತಿರುವ ಕುಂಡಲಗಳ ಸಹಿತ ತಲೆಯನ್ನು ತುಂಡರಿಸಿದನು. ಆಗ ಕುದುರೆಗಳು ನಿಯಂತ್ರಣವಿಲ್ಲದೆ ಎಲ್ಲೆಡೆ ಓಡತೊಡಗಿದವು.॥29॥
ಮೂಲಮ್ - 30½
ತೈರಶ್ವೈರ್ಭ್ರಾಮ್ಯತೇ ಭ್ರಾಂತೈಃ ಸುಮಾಲೀ ರಾಕ್ಷಸೇಶ್ವರಃ ।
ಇಂದ್ರಿಯಾಶ್ವೈಃ ಪರಿಭ್ರಾಂತೈರ್ಧೃತಿಹೀನೋ ಯಥಾ ನರಃ ॥
ಅನುವಾದ
ಇಂದ್ರಿಯ ನಿಗ್ರಹವಿಲ್ಲದ ಮನುಷ್ಯನು ವಿಷಯಗಳಲ್ಲಿ ಅಲೆಯುವ ಇಂದ್ರಿಯಗಳ ಜೊತೆಗೆ ಸ್ವತಃ ಅಲೆಯುವಂತೆ ಆ ಕುದುರೆಗಳ ತಲೆ ತಿರುಗುವಂತೆಯೇ ರಾಕ್ಷಸೇಶ್ವರ ಸುಮಾಲಿಯ ತಲೆಯೂ ತಿರುಗಿತು.॥30½॥
ಮೂಲಮ್ - 31½
ತತೋ ವಿಷ್ಣುಂ ಮಹಾಬಾಹುಂ ಪ್ರಪತಂತಂ ರಣಾಜಿರೇ ।
ಹೃತೇ ಸುಮಾಲೇರಶ್ವೈಶ್ಚ ರಥೇ ವಿಷ್ಣುರಥಂ ಪ್ರತಿ ॥
ಮಾಲೀ ಚಾಭ್ಯದ್ರವದ್ಯುಕ್ತಃ ಪ್ರಗೃಹ್ಯ ಸಶರಂ ಧನುಃ ।
ಅನುವಾದ
ರಣರಂಗದಲ್ಲಿ ಕುದುರೆಗಳು ಸುಮಾಲಿಯ ರಥವನ್ನು ಅತ್ತ-ಇತ್ತ ಕೊಂಡು ಹೋಗುವಾಗ ಮಾಲಿ ಎಂಬ ರಾಕ್ಷಸನು ಯುದ್ಧಕ್ಕಾಗಿ ಉದ್ಯುಕ್ತನಾಗಿ ಕೈಯಲ್ಲಿ ಧನುಸ್ಸನ್ನು ಹಿಡಿದು ಗರುಡನ ಮೇಲೆ ಎರಗಿದನು. ಜೊತೆಗೆ ಮಹಾಬಾಹು ವಿಷ್ಣುವಿನ ಮೇಲೆಯೂ ಆಕ್ರಮಣ ಮಾಡಿದನು.॥31½॥
ಮೂಲಮ್ - 32½
ಮಾಲೇರ್ಧನುಶ್ಚ್ಯುತಾ ಬಾಣಾಃ ಕಾರ್ತಸ್ವರ ವಿಭೂಷಿತಾಃ ॥
ವಿವಿಶುರ್ಹರಿಮಾಸಾದ್ಯ ಕ್ರೌಂಚಂ ಪತ್ರರಥಾ ಇವ ।
ಅನುವಾದ
ಮಾಲಿಯು ಬಿಟ್ಟ ಸುವರ್ಣಭೂಷಿತ ಬಾಣಗಳು ಪಕ್ಷಿಗಳು ಕ್ರೌಂಚ ಪರ್ವತದ ಛಿದ್ರದಲ್ಲಿ ಪ್ರವೇಶಿಸುವಂತೆ ಭಗವಾನ್ ವಿಷ್ಣುವಿನ ಶರೀರದಲ್ಲಿ ನಾಟಿದವು.॥32½॥
ಮೂಲಮ್ - 33½
ಅರ್ದ್ಯಮಾನಃ ಶರೈಃ ಸೋಥ ಮಾಲಿಮುಕ್ತೈಃ ಸಹಸ್ರಶಃ ॥
ಚುಕ್ಷುಭೇ ನ ರಣೇ ವಿಷ್ಣುರ್ಜಿತೇಂದ್ರಿಯ ಇವಾಧಿಭಿಃ ।
ಅನುವಾದ
ಜಿತೇಂದ್ರಿಯ ಪುರುಷನು ಮಾನಸಿಕ ವ್ಯಥೆಗಳಿಂದ ವಿಚಲಿತ ನಾಗದಂತೆ ರಣರಂಗದಲ್ಲಿ ವಿಷ್ಣುವು ಮಾಲಿಯು ಬಿಟ್ಟ ಸಾವಿರಾರು ಬಾಣಗಳಿಂದ ಪೀಡಿತನಾದರೂ ಕ್ಷುಬ್ಧನಾಗಲಿಲ್ಲ.॥33½॥
ಮೂಲಮ್ - 34½
ಅಥ ಮೌರ್ವೀಸ್ವನಂ ಶ್ರುತ್ವಾ ಭಗವಾನ್ ಭೂತಭಾವನಃ ॥
ಮಾಲಿನಂಪ್ರತಿ ಬಾಣೌಘಾನ್ ಸಸರ್ಜಾಸಿಗದಾಧರಃ ।
ಅನುವಾದ
ಬಳಿಕ ಗದಾಧರ ಭೂತಭಾವದ ವಿಷ್ಣುವು ತನ್ನ ಧನುಸ್ಸನ್ನು ಟಂಕಾರಗೈದು ಮಾಲಿಯ ಮೇಲೆ ಬಾಣ ಸಮೂಹಗಳ ಮಳೆಗರೆದನು.॥34½॥
ಮೂಲಮ್ - 35½
ತೇ ಮಾಲಿದೇಹಮಾಸಾದ್ಯ ವಜ್ರವಿದ್ಯುತ್ಪ್ರಭಾಃ ಶರಾಃ ॥
ಪಿಬಂತಿ ರುಧಿರಂ ತಸ್ಯ ನಾಗಾ ಇವ ಸುಧಾರಸಮ್ ।
ಅನುವಾದ
ವಿದ್ಯುತ್ ಮತ್ತು ವಜ್ರದಂತೆ ಪ್ರಕಾಶಿಸುವ ಆ ಬಾಣಗಳು ಮಾಲಿಯ ಶರೀರದಲ್ಲಿ ಹೊಕ್ಕು ಸರ್ಪವು ಅಮೃತಪಾನ ಮಾಡಿದಂತೆ ರಕ್ತ ಕುಡಿಯತೊಡಗಿದವು.॥35½॥
ಮೂಲಮ್ - 36½
ಮಾಲಿನಂ ವಿಮುಖಂ ಕೃತ್ವಾ ಶಂಖಚಕ್ರಗದಾಧರಃ ॥
ಮಾಲಿವೌಲಿಂ ಧ್ವಜಂ ಚಾಪಂ ವಾಜಿನಶ್ಚಾಪ್ಯಪಾತಯತ್ ।
ಅನುವಾದ
ಕೊನೆಗೆ ಮಾಲಿಯನ್ನು ವಿಮುಖಗೊಳಿಸಿ ಶಂಖ ಚಕ್ರ ಗದಾಧಾರಿ ಯಾದ ಶ್ರೀಹರಿಯು ಆ ರಾಕ್ಷಸನ ಕಿರೀಟ, ಧ್ವಜ, ಧನುಸ್ಸನ್ನು ತುಂಡರಿಸಿ, ಕುದುರೆಗಳನ್ನು ಕೊಂದು ಹಾಕಿದನು.॥36½॥
ಮೂಲಮ್ - 37½
ವಿರಥಸ್ತು ಗದಾಂ ಗೃಹ್ಯ ಮಾಲೀ ನಕ್ತಂಚರೋತ್ತಮಃ ॥
ಆಪುಪ್ಲುವೇ ಗದಾಪಾಣಿರ್ಗಿರ್ಯಗ್ರಾದಿವ ಕೇಸರೀ ।
ಅನುವಾದ
ರಥಹೀನನಾದ ರಾಕ್ಷಸಶ್ರೇಷ್ಠ ಮಾಲಿಯು ಗದೆಯನ್ನೆತ್ತಿಕೊಂಡು ಸಿಂಹವು ಪರ್ವತ ಶಿಖರದಿಂದ ಹಾರಿ ಕೆಳಗೆ ಬರುವಂತೆ ನೆಲಕ್ಕೆ ನೆಗೆದನು.॥37½॥
ಮೂಲಮ್ - 38½
ಗದಯಾ ಗರುಡೇಶಾನಮೀಶಾನಮಿವ ಚಾಂತಕಃ ॥
ಲಲಾಟದೇಶೇಽಭ್ಯಹನದ್ವಜ್ರೇಣೇಂದ್ರೋ ಯಥಾಚಲಮ್ ।
ಅನುವಾದ
ಯಮರಾಜನು ಶಿವನ ಮೇಲೆ, ಇಂದ್ರನು ಪರ್ವತಗಳ ಮೇಲೆ ವಜ್ರದಿಂದ ಪ್ರಹರಿಸುವಂತೆಯೇ ಮಾಲಿಯು ಪಕ್ಷಿರಾಜ ಗರುಡನ ಹಣೆಗೆ ಗದೆಯಿಂದ ತೀವ್ರವಾದ ಏಟುಕೊಟ್ಟನು.॥38½॥
ಮೂಲಮ್ - 39½
ಗದಯಾಭಿಹತಸ್ತೇನ ಮಾಲಿನಾಗರುಡೋ ಭೃಶಮ್ ॥
ರಣಾತ್ಪರಾಙ್ಮುಖಂ ದೇವಂ ಕೃತವಾನ್ ವೇದನಾತುರಃ ।
ಅನುವಾದ
ಮಾಲಿಯ ಗದೆಯ ಏಟಿನಿಂದ ಗರುಡನು ನೋವಿನಿಂದ ವ್ಯಾಕುಲನಾದನು. ಅವನು ಸ್ವತಃ ಯುದ್ಧದಿಂದ ವಿಮುಖನಾಗಿ ವಿಷ್ಣುವನ್ನೂ ವಿಮುಖನಾಗುವಂತೆ ಮಾಡಿದನು.॥39½॥
ಮೂಲಮ್ - 40½
ಪರಾಙ್ಮುಖೋ ಕೃತೇ ದೇವೇ ಮಾಲಿನಾ ಗರುಡೇನ ವೈ ॥
ಉದತಿಷ್ಠನ್ಮಹಾನ್ಶಬ್ದೋ ರಕ್ಷಸಾಮಭಿ ನರ್ದತಾಮ್ ।
ಅನುವಾದ
ಮಾಲಿಯು ಗರುಡನೊಂದಿಗೆ ಭಗವಾನ್ ವಿಷ್ಣುವನ್ನು ಯುದ್ಧದಿಂದ ವಿಮುಖನಂತೆ ಮಾಡಿದಾಗ ಜೋರಾಗಿ ಗರ್ಜಿಸಿದನು, ರಾಕ್ಷಸರ ಮಹಾಶಬ್ದವು ಎಲ್ಲೆಡೆ ಪ್ರತಿಧ್ವನಿಸಿತು.॥40½॥
ಮೂಲಮ್ - 41
ರಕ್ಷಸಾಂ ರುವತಾಂ ರಾವಂ ಶ್ರುತ್ವಾ ಹರಿಹಯಾನುಜಃ ॥
ಮೂಲಮ್ - 42
ತಿರ್ಯಗಾಸ್ಥಾಯ ಸಂಕ್ರುದ್ಧಃ ಪಕ್ಷೀಶೇ ಭಗವಾನ್ ಹರಿಃ ।
ಪರಾಙ್ಮುಖೋಪ್ಯುತ್ಸಸರ್ಜ ಮಾಲೇಶ್ಚಕ್ರಂ ಜಿಘಾಂಸಯಾ ॥
ಅನುವಾದ
ಗರ್ಜಿಸುತ್ತಿರುವ ರಾಕ್ಷಸರ ಆ ಸಿಂಹನಾದವನ್ನು ಕೇಳಿ ಉಪೇಂದ್ರನಾದ ವಿಷ್ಣುವು ಅತ್ಯಂತ ಕುಪಿತನಾಗಿ ಪಕ್ಷಿರಾಜನ ಬೆನ್ನಿನ ಮೇಲೆ ಓರೆಯಾಗಿ ಕುಳಿತನು. ಆಗ ಪರಾಙ್ಮುಖನಾದರೂ ಶ್ರೀಹರಿಯು ಮಾಲಿಯನ್ನು ವಧಿಸುವ ಇಚ್ಛೆಯಿಂದ ಹಿಂದಿರುಗಿ ಸುದರ್ಶನ ಚಕ್ರ ಪ್ರಯೋಗಿಸಿದನು.॥41-42॥
ಮೂಲಮ್ - 43
ತತ್ಸೂರ್ಯ ಮಂಡಲಾಭಾಸಂ ಸ್ವಭಾಸಾ ಭಾಸಯನ್ನಭಃ ।
ಕಾಲಚಕ್ರ ನಿಭಂ ಚಕ್ರಂ ಮಾಲೇಃ ಶೀರ್ಷಮಪಾತಯತ್ ॥
ಅನುವಾದ
ಸೂರ್ಯಮಂಡಲದಂತೆ ಹೊಳೆಯುವ ಕಾಲಚಕ್ರದಂತಿರುವ ಆ ಚಕ್ರವು ತನ್ನ ಪ್ರಭೆಯನ್ನು ಎಲ್ಲೆಡೆ ಬೀರಿ ಮಾಲಿಯ ಮಸ್ತಕವನ್ನು ಕತ್ತರಿಸಿಬಿಟ್ಟಿತು.॥43॥
ಮೂಲಮ್ - 44
ತಚ್ಛಿರೋ ರಾಕ್ಷಸೇಂದ್ರಸ್ಯ ಚಕ್ರೋತ್ಕೃತ್ತಂ ವಿಭೀಷಣಮ್ ।
ಪಪಾತ ರುಧಿರೋದ್ಗಾರಿ ಪುರಾ ರಾಹುಶಿರೋ ಯಥಾ ॥
ಅನುವಾದ
ಚಕ್ರದಿಂದ ತುಂಡಾದ ರಾಕ್ಷಸರಾಜ ಮಾಲಿಯ ಆ ಭಯಂಕರ ತಲೆಯು, ಹಿಂದೆ ಕತ್ತರಿಸಲ್ಪಟ್ಟ ರಾಹುವಿನ ಶಿರದಂತೆ ರಕ್ತದ ಧಾರೆ ಹರಿಸುತ್ತಾ ನೆಲಕ್ಕೆ ಉರುಳಿತು.॥44॥
ಮೂಲಮ್ - 45
ತತಃ ಸುರೈಃ ಸಂಪ್ರಹೃಷ್ಟೈಃ ಸರ್ವಪ್ರಾಣ ಸಮೀರಿತಃ ।
ಸಿಂಹನಾದರವೋ ಮುಕ್ತಃ ಸಾಧು ದೇವೇತಿ ವಾದಿಭಿಃ ॥
ಅನುವಾದ
ಇದರಿಂದ ದೇವತೆಗಳು ಸಂತೋಷಗೊಂಡು ಭಗವಂತನಿಗೆ ಧನ್ಯವಾದಗಳನ್ನು ಹೇಳುತ್ತಾ ಎಲ್ಲ ಶಕ್ತಿಯನ್ನು ಹಾಕಿ ಜೋರಾಗಿ ಸಿಂಹನಾದ ಮಾಡಿದರು.॥45॥
ಮೂಲಮ್ - 46
ಮಾಲಿನಂ ನಿಹತಂ ದೃಷ್ಟ್ವಾಸುಮಾಲೀ ಮಾಲ್ಯವಾನಪಿ ।
ಸಬಲೌ ಶೋಕಸಂತಪ್ತೌ ಲಂಕಾಮೇವ ಪ್ರಧಾವಿತೌ ॥
ಅನುವಾದ
ಮಾಲಿಯು ಮಡಿದುದನ್ನು ನೋಡಿ ಸುಮಾಲಿ ಮತ್ತು ಮಾಲ್ಯವಂತರಿಬ್ಬರೂ ರಾಕ್ಷಸರು ಶೋಕದಿಂದ ವ್ಯಾಕುಲರಾಗಿ ಲಂಕೆಯ ಕಡೆಗೆ ಓಡಿದರು.॥46॥
ಮೂಲಮ್ - 47
ಗರುಡಸ್ತು ಸಮಾಶ್ವಸ್ತಃ ಸಂನಿವೃತ್ಯ ಯಥಾ ಪುರಾ ।
ರಾಕ್ಷಸಾನ್ ದ್ರಾವಯಾಮಾಸ ಪಕ್ಷವಾತೇನ ಕೋಪಿತಃ ॥
ಅನುವಾದ
ಅಷ್ಟರಲ್ಲಿ ಗರುಡನು ಸುಧಾರಿಸಿಕೊಂಡು ಹಿಂದಿನಂತೆ ತನ್ನ ರೆಕ್ಕೆಗಳ ಬಿರುಸಾದ ಗಾಳಿಯಿಂದಲೇ ರಾಕ್ಷಸರನ್ನು ಹಿಂದಕ್ಕಟ್ಟಿದನು.॥47॥
ಮೂಲಮ್ - 48
ಚಕ್ರಕೃತ್ತಾಸ್ಯಕಮಲಾ ಗದಾ ಸಂಚೂರ್ಣಿತೋರಸಃ ।
ಲಾಂಗಲಗ್ಲಪಿತಗ್ರೀವಾ ಮುಸಲೈರ್ಭಿನ್ನಮಸ್ತಕಾಃ ॥
ಅನುವಾದ
ಎಷ್ಟೋ ರಾಕ್ಷಸರ ಮುಖ ಕಮಲಗಳು ಚಕ್ರದಿಂದ ಕತ್ತರಿಸಲ್ಪಟ್ಟವು. ಗದಾಘಾತದಿಂದ ಎದೆ ಒಡೆದುಹೋದವು. ಹಲಾಯುಧದಿಂದ ಎಷ್ಟೋ ರಾಕ್ಷಸರ ಕತ್ತು ತುಂಡಾದವು, ತಲೆ ಒಡೆದುಹೋದುವು.॥48॥
ಮೂಲಮ್ - 49
ಕೇಪಿಚ್ಚೈವಾಸಿನಾ ಛಿನ್ನಾಸ್ತಥಾನ್ಯೇ ಶರತಾಡಿತಾಃ ।
ನಿಪೇತುರಂಬರಾತ್ತೂರ್ಣಂ ರಾಕ್ಷಸಾಃ ಸಾಗರಾಂಭಸಿ ॥
ಅನುವಾದ
ಖಡ್ಗದಿಂದ ಎಷ್ಟೋ ರಾಕ್ಷಸರು ತುಂಡು-ತುಂಡಾದರು. ಬಹಳಷ್ಟು ಅಸುರರು ಬಾಣಗಳಿಂದ ಪೀಡಿತರಾಗಿ ಆಕಾಶದಿಂದ ಸಮುದ್ರದಲ್ಲಿ ತೊಪತೊಪನೆ ಬೀಳುತ್ತಿದ್ದರು.॥49॥
ಮೂಲಮ್ - 50
ನಾರಾಯಣೋಪೀಷುವರಾಶನೀಭಿ-
ರ್ವಿದಾರಯಾಮಾಸ ಧನುರ್ವಿಮುಕ್ತೈಃ ।
ನಕ್ತಂಚರಾನ್ಧೂತ ವಿಮುಕ್ತ ಕೇಶಾನ್
ಯಥಾಶನೀಭಿಃ ಸತಡಿನ್ಮಹಾಭ್ರಃ ॥
ಅನುವಾದ
ಮಹಾವಿಷ್ಣುವು ಧನುಸ್ಸಿನಿಂದ ಚ್ಯುತವಾದ ಶ್ರೇಷ್ಠ ಬಾಣಗಳಿಂದ ತಲೆಗೆದರಿಕೊಂಡಿದ್ದ ರಾಕ್ಷಸರನ್ನು ವಿದೀರ್ಣಗೊಳಿಸಿದನು. ಪೀತಾಂಬರಧಾರಿ ಶ್ಯಾಮಸುಂದರ ಶ್ರೀಹರಿಯು ಆಗ ಮಿಂಚಿನಿಂದ ಕೂಡಿದ ಮಹಾಮೇಘದಂತೆ ಪ್ರಕಾಶಿಸುತ್ತಿದ್ದನು.॥50॥
ಮೂಲಮ್ - 51
ಭಿನ್ನಾತಪತ್ರಂ ಪತಮಾನಶಸ್ತ್ರಂ
ಶರೈರಪಧ್ವಸ್ತವಿನೀತವೇಷಮ್ ।
ವಿನಿಃಸೃತಾಂತ್ರಂ ಭಯಲೋಲನೇತ್ರಂ
ಬಲಂ ತದುನ್ಮತ್ತತರಂ ಬಭೂವ ॥
ಅನುವಾದ
ರಾಕ್ಷಸರ ಆ ಸೈನ್ಯವು ಅತ್ಯಂತ ಉನ್ಮತ್ತರಂತಿತ್ತು. ಬಾಣಗಳಿಂದ ಅವರ ಛತ್ರಗಳು ತುಂಡಾಗಿದ್ದವು, ಅಸ್ತ್ರ-ಶಸ್ತ್ರಗಳು ಬಿದ್ದುಹೋಗಿದ್ದವು, ಸೌಮ್ಯವೇಷ ಇಲ್ಲವಾಗಿತ್ತು, ಕರುಳಬಳ್ಳಿ ಹೊರಬಿದ್ದಿತ್ತು ಹಾಗೂ ಎಲ್ಲರ ಕಣ್ಣುಗಳು ಭಯದಿಂದ ಚಂಚಲವಾಗಿದ್ದವು.॥51॥
ಮೂಲಮ್ - 52
ಸಿಂಹಾರ್ದಿತಾನಾಮಿವ ಕುಂಜರಾಣಾಂ
ನಿಶಾಚರಾಣಾಂ ಸಹ ಕುಂಜರಾಣಾಮ್ ।
ರವಾಶ್ಚ ವೇಗಾಶ್ಚ ಸಮಂ ಬಭೂವುಃ
ಪುರಾಣಸಿಂಹೇನ ವಿಮರ್ದಿತಾನಾಮ್ ॥
ಅನುವಾದ
ಸಿಂಹಗಳಿಂದ ಪೀಡಿಸಲ್ಪಟ್ಟ ಆನೆಗಳ ಚೀತ್ಕಾರ ಮತ್ತು ವೇಗ ಒಟ್ಟಿಗೆ ಪ್ರಕಟ ವಾಗುವಂತೆಯೇ ಆ ಪುರಾಣ ಪ್ರಸಿದ್ಧ ನರಸಿಂಹರೂಪೀ ಶ್ರೀಹರಿಯು ಹೊಸಕಿ ಹಾಕಿದ ಆ ನಿಶಾಚರರೂಪೀ ಗಜ ರಾಜರ ಹಾಹಾಕರ ಮತ್ತು ವೇಗ ಜೊತೆಗೇ ಪ್ರಕಟವಾಗುತ್ತಿದ್ದವು.॥52॥
ಮೂಲಮ್ - 53
ತೇ ವಾರ್ಯಮಾಣಾ ಹರಿಬಾಣಜಾಲೈಃ
ಸ್ವಬಾಣಜಾಲಾನಿ ಸಮುತ್ಸೃಜಂತಃ ।
ಧಾವಂತಿ ನಕ್ತಂಚರ ಕಾಲಮೇಘಾ
ವಾಯುಪ್ರಣುನ್ನಾ ಇವ ಕಾಲಮೇಘಾಃ ॥
ಅನುವಾದ
ವಿಷ್ಣುವಿನ ಬಾಣಗಳಿಂದ ಆವೃತರಾಗಿ ತಮ್ಮ ಆಯುಧಗಳನ್ನು ಎಸೆದು ನಿಶಾಚರರೂಪೀ ಕಪ್ಪಾದ ಮೋಡಗಳು, ಗಾಳಿಯಿಂದ ಹಾರಿಸಲ್ಪಟ್ಟ ವರ್ಷಾಕಾಲದ ಮೇಘಗಳು ಆಕಾಶದಲ್ಲಿ ಓಡುತ್ತಿರುವಂತೆ, ಚದುರಿ ಹೋದುದನ್ನು ಕಾಣುತ್ತಿತ್ತು.॥53॥
ಮೂಲಮ್ - 54
ಚಕ್ರಪ್ರಹಾರೈರ್ವಿನಿಕೃತ್ತಶೀರ್ಷಾಃ
ಸಂಚೂರ್ಣಿತಾಂಗಾಶ್ಚ ಗದಾಪ್ರಹಾರೈಃ ।
ಅಸಿಪ್ರಹಾರೈರ್ದ್ವಿವಿಧಾವಿಭಿನ್ನಾಃ
ಪತಂತಿ ಶೈಲಾ ಇವ ರಾಕ್ಷಸೇಂದ್ರಾಃ ॥
ಅನುವಾದ
ಚಕ್ರದ ಪ್ರಹಾರದಿಂದ ರಾಕ್ಷಸರ ಮಸ್ತಕಗಳು ತುಂಡಾಗಿದ್ದವು, ಗದಾಘಾತ ದಿಂದ ಅವರ ಶರೀರಗಳು ಚೂರು-ಚೂರಾಗಿದ್ದವು, ಖಡ್ಗದ ಹೊಡೆತದಿಂದ ತುಂಡು-ತುಂಡಾಗಿದ್ದರು; ಹೀಗೆ ಆ ರಾಕ್ಷಸ ರಾಜರು ಪರ್ವತದಂತೆ ಧರಾಶಾಯಿಗಳಾಗಿದ್ದರು.॥54॥
ಮೂಲಮ್ - 55
ವಿಲಂಬಮಾನೈರ್ಮಣಿಹಾರಕುಂಡಲೈ-
ರ್ನಿಶಾಚರೈರ್ನೀಲಬಲಾಹಕೋಪಮೈಃ ।
ನಿಪಾತ್ಯಮಾನೈರ್ದದೃಶೇ ನಿರಂತರಂ
ನಿಪಾತ್ಯ ಮಾನೈರಿವ ನೀಲಪರ್ವತೈಃ ॥
ಅನುವಾದ
ತೂಗುತ್ತಿರುವ ಮಣಿಮಯ ಹಾರ-ಕುಂಡಲಗಳಿಂದ ಬಿದ್ದಿರುವ ನೀಲಮೇಘದಂತಹ ನಿಶಾಚರರ ಹೆಣಗಳಿಂದ ಆ ಯುದ್ಧಭೂಮಿ ತುಂಬಿಹೋಗಿತ್ತು. ಅಲ್ಲಿ ಧರಾಶಾಯಿಯರಾದ ರಾಕ್ಷಸರು ನೀಲ ಪರ್ವತದಂತೆ ಕಂಡುಬರುತ್ತಿದ್ದರು. ಹೀಗೆ ಅಲ್ಲಿಯ ನೆಲ ಎಳ್ಳು ಹಾಕಲೂ ಜಾಗವಿಲ್ಲದಂತೆ ಆವರಿಸಿ ಹೋದುದು ಕಾಣುತ್ತಿತ್ತು.॥55॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ಏಳನೆಯ ಸರ್ಗ ಪೂರ್ಣವಾಯಿತು. ॥7॥