[ಆರನೆಯ ಸರ್ಗ]
ಭಾಗಸೂಚನಾ
ಭಗವಾನ್ ಶಂಕರನ ಸಲಹೆಯಂತೆ ದೇವತೆಗಳು ರಾಕ್ಷಸರ ವಧೆಗಾಗಿ ವಿಷ್ಣುವಿನಲ್ಲಿ ಶರಣಾದುದು, ಅವನಿಂದ ಆಶ್ವಾಸನೆ ಪಡೆದುದು, ರಾಕ್ಷಸರಿಂದ ದೇವತೆಗಳ ಮೇಲೆ ಆಕ್ರಮಣ, ದೇವತೆಗಳ ಸಹಾಯಕ್ಕೆ ವಿಷ್ಣುವಿನ ಆಗಮನ
ಮೂಲಮ್ - 1
ತೈರ್ವಧ್ಯಮಾನಾ ದೇವಾಶ್ಚ ಋಷಯಶ್ಚ ತಪೋಧನಾಃ ।
ಭಯಾರ್ತಾಃ ಶರಣಂ ಜಗ್ಮುರ್ದೇವದೇವಂ ಮಹೇಶ್ವರಮ್ ॥
ಅನುವಾದ
(ಮಹರ್ಷಿ ಅಗಸ್ತ್ಯರು ಹೇಳುತ್ತಾರೆ - ರಘುನಂದನ !) ಈ ರಾಕ್ಷಸರಿಂದ ಪೀಡಿತರಾದ ದೇವತೆಗಳು ಹಾಗೂ ತಪೋಧನ ಋಷಿಗಳು ಭಯದಿಂದ ವ್ಯಾಕುಲರಾಗಿ ದೇವಾಧಿದೇವ ಮಹಾದೇವನಲ್ಲಿ ಶರಣಾದರು.॥1॥
ಮೂಲಮ್ - 2
ಜಗತ್ಸೃಷ್ಟ್ಯಂತ ಕರ್ತಾರಮಜಮವ್ಯಕ್ತರೂಪಿಣಮ್ ।
ಆಧಾರಂ ಸರ್ವಲೋಕಾನಾಮಾರಾಧ್ಯಂಪರಮಂ ಗುರುಮ್ ॥
ಮೂಲಮ್ - 3
ತೇ ಸಮೇತ್ಯ ತು ಕಾಮಾರಿಂ ತ್ರಿಪುರಾರಿಂ ತ್ರಿಲೋಚನಮ್ ।
ಊಚುಃ ಪ್ರಾಂಜಲಯೋ ದೇವಾ ಭಯಗದ್ಗದ ಭಾಷಿಣಃ ॥
ಅನುವಾದ
ಜಗತ್ತಿನ ಸೃಷ್ಟಿ-ಸಂಹಾರ ಮಾಡುವವನೂ, ಅಜನ್ಮಾ ಅವ್ಯಕ್ತರೂಪಧಾರಿಯೂ, ಸಂಪೂರ್ಣ ಜಗತ್ತಿನ ಆಧಾರನೂ, ಆರಾಧ್ಯದೇವರೂ, ಗುರುವೂ ಆದ, ಕಾಮನಾಶಕ, ತ್ರಿಪುರ ವಿನಾಶಕ, ತ್ರಿನೇತ್ರಧಾರಿ, ಭಗವಾನ್ ಶಿವನ ಬಳಿಗೆ ಹೋಗಿ ಎಲ್ಲ ದೇವತೆಗಳು ಕೈಮುಗಿದುಕೊಂಡು ಗದ್ಗದಿತರಾಗಿ ನುಡಿದರು.॥2-3॥
ಮೂಲಮ್ - 4
ಸುಕೇಶಪುತ್ರೈರ್ಭಗವನ್ ಪಿತಾಮಹವರೋದ್ಧತೈಃ ।
ಪ್ರಜಾಧ್ಯಕ್ಷ ಪ್ರಜಾಃ ಸರ್ವಾ ಬಾಧ್ಯಂತೇ ರಿಪುಬಾಧನೈಃ ॥
ಅನುವಾದ
ಭಗವಂತನೇ! ಪ್ರಜಾನಾಥನೇ! ಬ್ರಹ್ಮದೇವರ ವರದಿಂದ ಉನ್ಮತ್ತರಾದ ಸುಕೇಶನ ಪುತ್ರರು ಶತ್ರುಗಳನ್ನು ಪೀಡಿಸುತ್ತಾ ಪ್ರಜೆಗಳಿಗೆ ಬಹಳ ಕಷ್ಟಕೊಡುತ್ತಿದ್ದಾರೆ.॥4॥
ಮೂಲಮ್ - 5
ಶರಣ್ಯಾನ್ಯಶರಣ್ಯಾನಿ ಹ್ಯಾಶ್ರಮಾಣಿ ಕೃತಾನಿ ನಃ ।
ಸ್ವರ್ಗಾಚ್ಚ ದೇವಾನ್ ಪ್ರಚ್ಯಾವ್ಯ ಸ್ವರ್ಗೇ ಕ್ರೀಡಂತಿ ದೇವವತ್ ॥
ಅನುವಾದ
ಎಲ್ಲರಿಗೆ ಆಶ್ರಯವನ್ನು ನೀಡಲು ಸಮರ್ಥರಾದ ನಮ್ಮ ನಿವಾಸಗಳನ್ನು ರಾಕ್ಷಸರು ಹಾಳುಗೆಡವಿದ್ದಾರೆ. ಸ್ವರ್ಗದಿಂದ ದೇವತೆಗಳನ್ನು ಓಡಿಸಿ, ತಾವೇ ಸ್ವರ್ಗದಲ್ಲಿರುತ್ತಾ ದೇವತೆಗಳಂತೆ ವಿಹರಿಸುತ್ತಿದ್ದಾರೆ.॥5॥
ಮೂಲಮ್ - 6
ಅಹಂ ವಿಷ್ಣುರಹಂ ರುದ್ರೋ ಬ್ರಹ್ಮಾಹಂ ದೇವರಾಡಹಮ್ ।
ಅಹಂ ಯಮಶ್ಚ ವರುಣಶ್ಚಂದ್ರೋಽಹಂ ರವಿರಪ್ಯಹಮ್ ॥
ಮೂಲಮ್ - 7
ಇತಿ ಮಾಲೀ ಸುಮಾಲೀ ಚ ಮಾಲ್ಯವಾಂಶ್ಚೈವರಾಕ್ಷಸಾಃ ।
ಬಾಧಂತೇ ಸಮರೋದ್ಧರ್ಷಾ ಯೇ ಚ ತೇಷಾಂ ಪುರಃ ಸರಾಃ ॥
ಅನುವಾದ
ಮಾಲಿ, ಸುಮಾಲೀ, ಮಾಲ್ಯವಂತ ಈ ರಾಕ್ಷಸರು - ನಾವೇ ವಿಷ್ಣು, ನಾವೇ ರುದ್ರ, ನಾವೇ ಬ್ರಹ್ಮಾ, ದೇವೇಂದ್ರ ಇಂದ್ರ, ಯಮ, ವರುಣ, ಚಂದ್ರ, ಸೂರ್ಯರಾಗಿದ್ದೇವೆ. ಹೀಗೆ ಅಹಂಕಾರ ಪ್ರಕಟಿಸುತ್ತಾ ಆ ರಣದುರ್ಜಯ ನಿಶಾಚರರು ಮತ್ತು ಅವರ ಸೈನಿಕರು ನಮಗೆ ಭಾರೀ ಕಷ್ಟಕೊಡುತ್ತಿದ್ದಾರೆ.॥6-7॥
ಮೂಲಮ್ - 8
ತನ್ನೋ ದೇವ ಭಯಾರ್ತಾನಾಮಭಯಂ ದಾತುಮರ್ಹಸಿ ।
ಅಶಿವಂ ವಪುರಾಸ್ಥಾಯ ಜಹಿ ವೈ ದೇವಕಂಟಕಾನ್ ॥
ಅನುವಾದ
ದೇವಾ! ಅವರ ಭಯದಿಂದ ನಾವು ಗಾಬರಿಗೊಂಡಿದ್ದೇವೆ. ನೀವು ನಮಗೆ ಅಭಯವನ್ನಿತ್ತು, ರೌದ್ರರೂಪ ಧರಿಸಿ ದೇವತೆಗಳ ಕಂಟಕಪ್ರಾಯರಾದ ರಾಕ್ಷಸರನ್ನು ಸಂಹರಿಸು.॥8॥
ಮೂಲಮ್ - 9
ಇತ್ಯುಕ್ತಸ್ತು ಸುರೈಃ ಸರ್ವೈಃ ಕಪರ್ದೀ ನೀಲಲೋಹಿತಃ ।
ಸುಕೇಶಂ ಪ್ರತಿ ಸಾಪೇಕ್ಷಃ ಪ್ರಾಹ ದೇವಗಣಾನ್ಪ್ರಭುಃ ॥
ಅನುವಾದ
ಸಮಸ್ತ ದೇವತೆಗಳು ಹೀಗೆ ಹೇಳಿದಾಗ ನೀಲಲೋಹಿತ ಜಟಾಜೂಟಧಾರಿ ಭಗವಾನ್ ಶಂಕರನು ಸುಕೇಶನ ವಿಷಯದಲ್ಲಿ ಅನುಗ್ರಹ ಬುದ್ಧಿಯುಳ್ಳ ವನಾದ್ದರಿಂದ ದೇವತೆಗಳಲ್ಲಿ ಹೇಳಿದನು.॥9॥
ಮೂಲಮ್ - 10
ಅಹಂ ತಾನ್ನ ಹನಿಷ್ಯಾಮಿ ಮಮಾವಧ್ಯಾ ಹಿ ತೇಽಸುರಾಃ ।
ಕಿಂ ತು ಮಂತ್ರಂ ಪ್ರದಾಸ್ಯಾಮಿ ಯೋ ವೈ ತಾನ್ ನಿಹನಿಷ್ಯತಿ ॥
ಅನುವಾದ
ದೇವತೆಗಳಿರಾ ! ನಾನು ಅವರನ್ನು ಸಂಹರಿಸಲಾರೆನು. ಆದರೆ ಅವರನ್ನು ಪ್ರಭುವಾದ ಮಹಾವಿಷ್ಣು ಖಂಡಿತವಾಗಿ ಪರಿಹರಿಸುವನು. ನೀವು ಅವನಲ್ಲಿ ಶರಣಾಗಿರಿ.॥10॥
ಮೂಲಮ್ - 11
ಏತಮೇವ ಸಮುದ್ಯೋಗಂ ಪುರಸ್ಕೃತ್ಯ ಮಹರ್ಷಯಃ ।
ಗಚ್ಛಧ್ವಂ ಶರಣಂ ವಿಷ್ಣುಂ ಹನಿಷ್ಯತಿ ಸ ತಾನ್ಭುಃ ॥
ಅನುವಾದ
ದೇವತೆಗಳೇ! ಮಹರ್ಷಿಗಳೇ! ನೀವು ಈಗಲೇ ಈ ಉದ್ಯೋಗಕ್ಕೆ ತೊಡಗಿ ಭಗವಾನ್ ವಿಷ್ಣುವಿಗೆ ಶರಣು ಹೋಗಿರಿ. ಆ ಪ್ರಭು ಅವಶ್ಯವಾಗಿ ಅವರ ನಾಶಮಾಡುವನು.॥11॥
ಮೂಲಮ್ - 12
ತತಸ್ತು ಜಯಶಬ್ದೇನ ಪ್ರತಿನಂದ್ಯ ಮಹೇಶ್ವರಮ್ ।
ವಿಷ್ಣೋಃ ಸಮೀಪಮಾಜಗ್ಮುರ್ನಿಶಾಚರ ಭಯಾರ್ದಿತಾಃ ॥
ಅನುವಾದ
ಇದನ್ನು ಕೇಳಿ ಎಲ್ಲ ದೇವತೆಗಳು ಜಯ-ಜಯಕಾರ ಮಾಡುತ್ತಾ ಮಹೇಶ್ವರನನ್ನು ಅಭಿನಂದಿಸಿ, ನಿಶಾಚರರಿಂದ ಪೀಡಿತರಾದ ಅವರು ವಿಷ್ಣುವಿನ ಬಳಿಗೆ ಹೋದರು.॥12॥
ಮೂಲಮ್ - 13
ಶಂಖಚಕ್ರಧರಂ ದೇವಂ ಪ್ರಣಮ್ಯ ಬಹುಮಾನ ಚ ।
ಊಚುಃ ಸಂಭ್ರಾಂತವದ್ವಾಕ್ಯಂ ಸುಕೇಶ ತನಯಾನ್ಪ್ರತಿ ॥
ಅನುವಾದ
ಶಂಖ, ಚಕ್ರ, ಧರಿಸಿದ ಆ ನಾರಾಯಣನಿಗೆ ನಮಸ್ಕರಿಸಿ ದೇವತೆಗಳು ತಮ್ಮ ಭಕ್ತಿಯನ್ನು ಪ್ರಕಟಿಸಿದರು. ವಿನೀತರಾಗಿ ಸುಕೇಶನ ಪುತ್ರರ ವಿಷಯವಾಗಿ ಗಾಬರಿಯಿಂದ ಇಂತು ನುಡಿದರು.॥13॥
ಮೂಲಮ್ - 14
ಸುಕೇಶತನಯೈರ್ದೇವ ತ್ರಿಭಿಸ್ತ್ರೇತಾಗ್ನಿ ಸಂನಿಭೈಃ ।
ಆಕ್ರಮ್ಯ ವರದಾನೇನ ಸ್ಥಾನಾನ್ಯಪಹೃತಾನಿ ನಃ ॥
ಅನುವಾದ
ದೇವ! ಸುಕೇಶನ ಮೂವರು ಪುತ್ರರು ತ್ರಿವಿಧ ಅಗ್ನಿಗಳಂತೆ ತೇಜಸ್ವಿಯಾಗಿದ್ದಾರೆ. ಅವರು ವರಬಲದಿಂದ ನಮ್ಮ ಮೇಲೆ ಆಕ್ರಮಣ ಮಾಡಿ ನಮ್ಮ ಸ್ಥಾನ ಕಸಿದು ಕೊಂಡಿರುವರು.॥14॥
ಮೂಲಮ್ - 15
ಲಂಕಾ ನಾಮ ಪುರೀ ದುರ್ಗಾ ತ್ರಿಕೂಟ ಶಿಖರೇ ಸ್ಥಿತಾ ।
ತತ್ರ ಸ್ಥಿತಾಃ ಪ್ರಬಾಧಂತೇ ಸರ್ವಾನ್ನಃ ಕ್ಷಣದಾಚರಾಃ ॥
ಅನುವಾದ
ತ್ರಿಕೂಟಪರ್ವತ ಶಿಖರದಲ್ಲಿರುವ ಲಂಕೆ ಎಂಬ ದುರ್ಗಮ ನಗರಿಯಲ್ಲಿ ಇರುತ್ತಾ ಆ ನಿಶಾಚರರು ದೇವತೆಗಳಾದ ನಮ್ಮೆಲ್ಲರಿಗೂ ಕಷ್ಟಕೊಡುತ್ತಾ ಇದ್ದಾರೆ.॥15॥
ಮೂಲಮ್ - 16
ಸ ತ್ವಮಸ್ಮದ್ಧಿತಾರ್ಥಾಯ ಜಹಿ ತಾನ್ಮಧುಸೂದನ ।
ಶರಣಂ ತ್ವಾಂ ವಯಂ ಪ್ರಾಪ್ತಾ ಗತಿರ್ಭವ ಸುರೇಶ್ವರ ॥
ಅನುವಾದ
ಮಧುಸೂದನ! ನಮ್ಮ ಹಿತವನ್ನು ಮಾಡಲು ನೀನು ಆ ಅಸುರರನ್ನು ವಧಿಸು. ದೇವೇಶ್ವರ! ನಾವು ನಿನಗೆ ಶರಣು ಬಂದಿರುವೆವು. ನೀನೇ ನಮ್ಮ ಆಶ್ರಯದಾತನಾಗಿರುವೆ.॥16॥
ಮೂಲಮ್ - 17
ಚಕ್ರಕೃತ್ತಾಸ್ಯಕಮಲಾನ್ನಿವೇದಯ ಯಮಾಯ ವೈ ।
ಯೇಷ್ವಭಯದೋಽಸ್ಮಾಕಂ ನಾನ್ಯೋಽಸ್ತಿ ಭವತಾ ವಿನಾ ॥
ಅನುವಾದ
ನಿನ್ನ ಚಕ್ರದಿಂದ ಅವರ ಕಮಲದಂತಹ ಮಸ್ತಕಗಳನ್ನು ಕಡಿದು ಯಮನಿಗೆ ಒಪ್ಪಿಸಿಬಿಡು. ನೀನಲ್ಲದೆ ಬೇರೆ ಯಾರೂ ಈ ಭಯದ ಸಂದರ್ಭದಲ್ಲಿ ಅಭಯವನ್ನು ಕೊಡಬಲ್ಲರು.॥17॥
ಮೂಲಮ್ - 18
ರಾಕ್ಷಸಾನ್ಸಮರೇ ಹೃಷ್ಟಾನ್ಸಾನುಬಂಧಾನ್ಮದೋದ್ಧತಾನ್ ।
ನುದ ತ್ವಂ ನೋ ಭಯಂ ದೇವ ನೀಹಾರಮಿವ ಭಾಸ್ಕರಃ ॥
ಅನುವಾದ
ದೇವ! ಆ ರಾಕ್ಷಸರು ಮದೋನ್ಮತ್ತರಾಗಿದ್ದಾರೆ. ನಮಗೆ ಕಷ್ಟಕೊಟ್ಟು ಹರ್ಷದಿಂದ ಉಬ್ಬಿದ್ದಾರೆ ; ಆದ್ದರಿಂದ ನೀನು ರಣರಂಗದಲ್ಲಿ ಬಂಧುಗಳ ಸಹಿತ ಸೂರ್ಯನು ಮಂಜನ್ನು ನಾಶಮಾಡಿದಂತೆ ಅವರನ್ನು ವಧಿಸಿ, ನಮ್ಮ ಭಯವನ್ನು ದೂರಗೊಳಿಸು.॥18॥
ಮೂಲಮ್ - 19
ಇತ್ಯೇವಂ ದೈವತೈರುಕ್ತೋ ದೇವದೇವೋ ಜನಾರ್ದನಃ ।
ಅಭಯಂ ಭಯದೋಽರೀಣಾಂ ದತ್ತ್ವಾ ದೇವಾನುವಾಚ ಹ ॥
ಅನುವಾದ
ದೇವತೆಗಳು ಹೀಗೆ ಹೇಳಿದಾಗ ಶತ್ರುಗಳಿಗೆ ಭಯವನ್ನು ಕೊಡುವ ದೇವಾಧಿದೇವ ಭಗವಾನ್ ಜನಾರ್ದನನು ಅವರಿಗೆ ಅಭಯವನ್ನೀಯುತ್ತಾ ಇಂತೆಂದನು.॥19॥
ಮೂಲಮ್ - 20
ಸುಕೇಶಂ ರಾಕ್ಷಸಂ ಜಾನೇ ಈಶಾನವರದರ್ಪಿತಮ್ ।
ತಾಂಶ್ಚಾಸ್ಯ ತನಯಾಂಜಾನೇ ಯೇಷಾಂ ಜ್ಯೇಷ್ಠಃ ಸ ಮಾಲ್ಯಮಾನ್ ॥
ಮೂಲಮ್ - 21
ತಾನಹಂ ಸಮತಿಕ್ರಾಂತ ಮರ್ಯಾದಾನ್ ರಾಕ್ಷಸಾಧಮಾನ್ ।
ನಿಹನಿಷ್ಯಾಮಿ ಸಂಕ್ರುದ್ಧಃ ಸುರಾ ಭವತ ವಿಜ್ವರಾಃ ॥
ಅನುವಾದ
ದೇವತೆಗಳೇ! ಸುಕೇಶನೆಂಬ ರಾಕ್ಷಸನನ್ನು ನಾನು ಬಲ್ಲೆನು. ಅವನು ಶಂಕರನ ವರಪಡೆದು ಉನ್ಮತ್ತನಾಗಿರುವನು. ಅವನ ಪುತ್ರರನ್ನೂ ತಿಳಿದಿದ್ದೇನೆ. ಅವರಲ್ಲಿ ಮಾಲ್ಯವಂತನು ಹಿರಿಯವನಾಗಿದ್ದಾನೆ. ಆ ನೀಚ ರಾಕ್ಷಸನು ಧರ್ಮದ ಮೇರೆಯನ್ನು ಮೀರಿದ್ದಾನೆ. ಆದ್ದರಿಂದ ಕ್ರೋಧದಿಂದ ಅವನನ್ನು ನಾಶ ಮಾಡುವೆನು. ನೀವು ನಿಶ್ಚಿಂತರಾಗಿರಿ.॥20-21॥
ಮೂಲಮ್ - 22
ಇತ್ಯುಕ್ತಾಸ್ತೇ ಸುರಾಃ ಸರ್ವೇ ವಿಷ್ಣುನಾ ಪ್ರಭುವಿಷ್ಣುನಾ ।
ಯಥಾವಾಸಂ ಯಯುರ್ಹೃಷ್ಟಾಃ ಪ್ರಶಂಸಂತೋ ಜನಾರ್ದನಮ್ ॥
ಅನುವಾದ
ಸರ್ವ ಸಮರ್ಥನಾದ ವಿಷ್ಣುವು ಹೀಗೆ ಆಶ್ವಾಸನೆ ಕೊಟ್ಟಾಗ ದೇವತೆಗಳಿಗೆ ಬಹಳ ಹರ್ಷವಾಯಿತು. ಅವರು ಜನಾರ್ದನನನ್ನು ಭೂರಿ-ಭೂರಿ ಪ್ರಶಂಸಿಸುತ್ತಾ ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು.॥22॥
ಮೂಲಮ್ - 23
ವಿಬುಧಾನಾಂ ಸಮುದ್ಯೋಗಂ ಮಾಲ್ಯವಾಂಸ್ತು ನಿಶಾಚರಃ ।
ಶ್ರುತ್ವಾ ತೌ ಭ್ರಾತರೌ ವೀರಾವಿದಂ ವಚನಮಬ್ರವೀತ್ ॥
ಅನುವಾದ
ದೇವತೆಗಳ ಈ ಉದ್ಯೋಗದ ಸುದ್ದಿ ತಿಳಿದ ನಿಶಾಚರ ಮಾಲ್ಯವಂತನು ತನ್ನ ಇಬ್ಬರು ವೀರ ಸಹೋದರರಲ್ಲಿ ಹೀಗೆ ನುಡಿದನು.॥23॥
ಮೂಲಮ್ - 24
ಅಮರಾ ಋಷಯಶ್ಚೈವ ಸಂಗಮ್ಯ ಕಿಲ ಶಂಕರಮ್ ।
ಅಸ್ಮದ್ವಧಂ ಪರೀಪ್ಸಂತ ಇದಂ ವಚಮಬ್ರುವನ್ ॥
ಅನುವಾದ
ದೇವತೆಗಳು ಮತ್ತು ಋಷಿಗಳು ಸೇರಿ ನಮ್ಮನ್ನು ವಧಿಸಲು ಬಯಸುತ್ತಿದ್ದಾರೆಂದು ಕೇಳಿ ಬಂತು. ಅದಕ್ಕಾಗಿ ಅವರು ಭಗವಾನ್ ಶಂಕರನ ಬಳಿಗೆ ಹೋಗಿ ಹೀಗೆ ಹೇಳಿದರಂತೆ-॥24॥
ಮೂಲಮ್ - 25
ಸುಕೇಶತನಯಾ ದೇವ ವರದಾನ ಬಲೋದ್ಧತಾಃ ।
ಬಾಧಂತೇಽಸ್ಮಾನ್ಸಮುದ್ದೃಪ್ತಾ ಘೋರರೂಪಾಃ ಪದೇ ಪದೇ ॥
ಅನುವಾದ
ದೇವ! ಸುಕೇಶನ ಪುತ್ರರು ನಿನ್ನ ವರದಾನದ ಬಲದಿಂದ ಉದ್ದಂಡ ಮತ್ತು ಅಭಿಮಾನದಿಂದ ಉನ್ಮತ್ತರಾಗಿದ್ದಾರೆ. ಆ ಭಯಂಕರ ರಾಕ್ಷಸರು ಹೆಜ್ಜೆ-ಹೆಜ್ಜೆಗೆ ನಮ್ಮನ್ನು ಸತಾಯಿಸುತ್ತಿದ್ದಾರೆ.॥25॥
ಮೂಲಮ್ - 26
ರಾಕ್ಷಸೈರಭಿಭೂತಾಃ ಸ್ಮೋ ನ ಶಕ್ತಾಃ ಸ್ಮ ಪ್ರಜಾಪತೇ ।
ಸ್ವೇಷು ಸದ್ಮಸು ಸಂಸ್ಥಾತುಂ ಭಯಾತ್ತೇಷಾಂ ದುರಾತ್ಮನಾಮ್ ॥
ಅನುವಾದ
ಪ್ರಜಾನಾಥ! ರಾಕ್ಷಸರಿಂದ ಪರಾಜಿತರಾಗಿ ನಾವು ಆ ದುಷ್ಟರ ಭಯದಿಂದ ನಮ್ಮ ಮನೆಗಳಲ್ಲಿಯೂ ಇರಲಾರೆವು.॥26॥
ಮೂಲಮ್ - 27
ತದಸ್ಮಾಕಂ ಹಿತಾರ್ಥಾಯ ಜಹಿ ತಾಂಶ್ಚ ತ್ರಿಲೋಚನ ।
ರಾಕ್ಷಸಾನ್ ಹುಂಕೃತೇನೈವ ದಹ ಪ್ರದಹತಾಂ ವರ ॥
ಅನುವಾದ
ತ್ರಿಲೋಚನನೇ! ನೀನು ನಮ್ಮ ಹಿತಕ್ಕಾಗಿ ಆ ಅಸುರರನ್ನು ವಧಿಸು. ದಹನ ಮಾಡುವವರಲ್ಲಿ ಶ್ರೇಷ್ಠ ರುದ್ರದೇವನೇ! ನೀನು ನಿನ್ನ ಹುಂಕಾರದಿಂದಲೇ ರಾಕ್ಷಸರನ್ನು ಸುಟ್ಟು ಬೂದಿ ಮಾಡಿಬಿಡು.॥27॥
ಮೂಲಮ್ - 28
ಇತ್ಯೇವಂ ತ್ರಿದಶೈರುಕ್ತೋ ನಿಶಮ್ಯಾಂಧಕಸೂದನಃ ।
ಶಿರಃ ಕರಂ ಚ ಧುನ್ವಾನ ಇದಂ ವಚನಮಬ್ರವೀತ್ ॥
ಅನುವಾದ
ದೇವತೆಗಳು ಹೀಗೆ ಹೇಳಿದಾಗ ಅಂಧಕಶತ್ರು ಶಿವನು ತಲೆಯನ್ನು ಕೈಗಳನ್ನು ಕೊಡವುತ್ತಾ ಅವರಲ್ಲಿ ಹೀಗೆ ಹೇಳಿದನು.॥28॥
ಮೂಲಮ್ - 29
ಅವಧ್ಯಾ ಮಮ ತೇ ದೇವಾಃ ಸುಕೇಶತನಯಾ ರಣೇ ।
ಮಂತ್ರಂ ತು ವಃ ಪ್ರದಾಸ್ಯಾಮಿ ಯಸ್ತಾನ್ವೈನಿಹನಿಷ್ಯತಿ ॥
ಅನುವಾದ
ದೇವತೆಗಳೇ! ಸುಕೇಶನ ಮಕ್ಕಳು ನನ್ನಿಂದ ವಧಿಸಲ್ಪಡತಕ್ಕವರಲ್ಲ. ಆದರೆ ನಿಶ್ಚಯವಾಗಿ ಅವರನ್ನು ವಧಿಸುವ ಪುರುಷನ ಬಳಿಗೆ ಹೋಗಲು ನಾನು ನಿಮಗೆ ಸಲಹೆ ಕೊಡುತ್ತೇನೆ.॥29॥
ಮೂಲಮ್ - 30
ಯೋಽಸೌ ಚಕ್ರಗದಾಪಾಣಿಃ ಪೀತವಾಸಾ ಜನಾರ್ದನಃ ।
ಹರಿರ್ನಾರಾಯಣಃ ಶ್ರೀಮಾನ್ ಶರಣಂ ತಂ ಪ್ರಪದ್ಯಥ ॥
ಅನುವಾದ
ಅವನ ಕೈಗಳಲ್ಲಿ ಚಕ್ರ, ಗದೆ ಸುಶೋಭಿತವಾಗಿವೆ. ಪೀತಾಂಬರ ಧರಿಸಿದ ಅವನನ್ನು ಜನಾರ್ದನ-ಹರಿ ಎಂದು ಹೇಳುತ್ತಾರೆ. ನಾರಾಯಣನೆಂದು ವಿಖ್ಯಾತನಾದ ಅವನಿಗೆ ನೀವು ಶರಣುಹೋಗಿರಿ.॥30॥
ಮೂಲಮ್ - 31
ಹರಾದವಾಪ್ಯ ತೇ ಮಂತ್ರಂ ಕಾಮಾರಿಮಭಿವಾದ್ಯ ಚ ।
ನಾರಾಯಣಾಲಯಂ ಪ್ರಾಪ್ಯ ತಸ್ಮೈ ಸರ್ವಂ ನ್ಯವೇದಯನ್ ॥
ಅನುವಾದ
ಭಗವಾನ್ ಶಂಕರನಿಂದ ಹೀಗೆ ಸಲಹೆ ಪಡೆದು ದೇವತೆಗಳು ಕಾಮಾರಿಯನ್ನು ವಂದಿಸಿ ನಾರಾಯಣನ ಧಾಮಕ್ಕೆ ತೆರಳಿ ಅವನಲ್ಲಿ ಎಲ್ಲವನ್ನು ತಿಳಿಸಿದರು.॥31॥
ಮೂಲಮ್ - 32
ತತೋ ನಾರಾಯಣೇನೋಕ್ತಾ ದೇವಾ ಇಂದ್ರಪುರೋಗಮಾಃ ।
ಸುರಾರೀಂಸ್ತಾನ್ ಹಷ್ಯಾಮಿ ಸುರಾ ಭವತ ನಿರ್ಭಯಾಃ ॥
ಅನುವಾದ
ಆಗ ನಾರಾಯಣನು ಇಂದ್ರಾದಿ ದೇವತೆಗಳಲ್ಲಿ - ದೇವತೆಗಳೇ! ನಾನು ಆ ದೇಶದ್ರೋಹಿಗಳನ್ನು ನಾಶ ಮಾಡಿ ಬಿಡುವೆನು; ಆದ್ದರಿಂದ ನೀವು ನಿರ್ಭಯರಾಗಿರಿ ಎಂದು ಹೇಳಿದನು.॥32॥
ಮೂಲಮ್ - 33
ದೇವಾನಾಂ ಭಯಭೀತಾನಾಂ ಹರಿಣಾ ರಾಕ್ಷಸರ್ಷಭೌ ।
ಪ್ರತಿಜ್ಞಾತೋ ವಧೋಽಸ್ಮಾಕಂ ಚಿಂತ್ಯತಾಂ ಯದಿಹ ಕ್ಷಮಮ್ ॥
ಅನುವಾದ
ರಾಕ್ಷಸಶ್ರೇಷ್ಠರೇ! ಹೀಗೆ ಭಯಗೊಂಡ ದೇವತೆಗಳ ಎದುರಿಗೆ ಶ್ರೀಹರಿಯು ನಮ್ಮನ್ನು ಕೊಲ್ಲುವ ಪ್ರತಿಜ್ಞೆ ಮಾಡಿರುವನು. ಆದ್ದರಿಂದ ಈಗ ನಾವು ಈ ವಿಷಯ ದಲ್ಲಿ ಉಚಿತವಾಗಿ ವಿಚಾರ ಮಾಡಬೇಕು.॥33॥
ಮೂಲಮ್ - 34
ಹಿರಣಕಶಿಪೋರ್ಮೃತ್ಯುರನ್ಯೇಷಾಂ ಚ ಸುರದ್ವಿಷಾಮ್ ।
ನಮುಚಿಃ ಕಾಲನೇಮಿಶ್ಚ ಸಂಹ್ರಾದೋ ವೀರಸತ್ತಮಃ ॥
ಮೂಲಮ್ - 35
ರಾಧೇಯೋ ಬಹುಮಾಯೀ ಚ ಲೋಕಪಾಲೋಽಥ ಧಾರ್ಮಿಕಃ ।
ಯಮಲಾರ್ಜುನೌ ಚ ಹಾರ್ದಿಕ್ಯಃ ಶುಂಭಶ್ಚೈವ ನಿಶುಂಭಕಃ ॥
ಮೂಲಮ್ - 36
ಅಸುರಾ ದಾನವಶ್ಚೈವ ಸತ್ತ್ವವಂತೋ ಮಹಾಬಲಾಃ ।
ಸರ್ವೇ ಸಮರಮಾಸಾದ್ಯ ನ ಶ್ರೂಯಂತೇಽಪರಾಜಿತಾಃ ॥
ಅನುವಾದ
ಹಿರಣ್ಯಕಶಿಪು ಹಾಗೂ ಇತರ ದೇಶದ್ರೋಹಿ ದೈತ್ಯರ ಮೃತ್ಯುವು ಇದೆ ವಿಷ್ಣುವಿನಿಂದಾಗಿದೆ. ನಮೂಚಿ, ಕಾಲನೇಮಿ, ವೀರವರ ಸಂಹ್ರಾದ, ನಾನಾ ರೀತಿಯ ಮಾಯೆಯನ್ನು ಬಲ್ಲ ರಾಧೇಯ, ಧರ್ಮನಿಷ್ಠ ಲೋಕಪಾಲ, ಯಮಲಾರ್ಜುನ, ಹಾರ್ದಿಕ್ಯ, ಶುಂಭ-ನಿಶುಂಭ ಮೊದಲಾದ ಮಹಾಬಲಿ ಶಕ್ತಿಶಾಲೀ ಸಮಸ್ತ ಅಸುರ ಮತ್ತು ದಾನವರು ಯುದ್ಧದಲ್ಲಿ ವಿಷ್ಣುವನ್ನು ಎದುರಿಸಿ ಎಲ್ಲರೂ ಪರಾಜಿತರಾಗಿದ್ದಾರೆ.॥34-36॥
ಮೂಲಮ್ - 37
ಸರ್ವೈಃ ಕ್ರತುಶತೈರಿಷ್ಟಂ ಸರ್ವೇ ಮಾಯಾವಿದಸ್ತಥಾ ।
ಸರ್ವೇ ಸರ್ವಾಸ್ತ್ರಕುಶಲಾಃ ಸರ್ವೇ ಶತ್ರುಭಯಂಕರಾಃ ॥
ಅನುವಾದ
ಅವರೆಲ್ಲ ಅಸುರರು ನೂರಾರು ಯಜ್ಞ ಮಾಡಿದ್ದರು. ಎಲ್ಲರೂ ಮಾಯೆಯನ್ನು ತಿಳಿದಿದ್ದರು. ಅವರೆಲ್ಲರೂ ಸಮಸ್ತ ಅಸ್ತ್ರ-ಶಸ್ತ್ರಗಳಲ್ಲಿ ಕುಶಲರಾಗಿದ್ದರು ಹಾಗೂ ಶತ್ರುಗಳಿಗೆ ಭಯಂಕರರಾಗಿದ್ದರು.॥37॥
ಮೂಲಮ್ - 38
ನಾರಾಯಣೇನ ನಿಹತಾಃ ಶತಶೋಽಥ ಸಹಸ್ರಶಃ ।
ಏತಜ್ಜ್ಞಾತ್ವಾ ತು ಸರ್ವೇಷಾಂ ಕ್ಷಮಂ ಕರ್ತುಮಿಹಾರ್ಹಥ ।
ದುಃಖಂ ನಾರಾಯಣಂ ಜೇತುಂ ಯೋ ನೋ ಹಂತುಮಿಹೇಚ್ಛತಿ ॥
ಅನುವಾದ
ಇಂತಹ ನೂರಾರು ಸಾವಿರ ಅಸುರರನ್ನು ನಾರಾಯಣನು ಕಾಲವಶನಾಗಿಸಿರುವನು. ಇದನ್ನು ತಿಳಿದು ನಾವೆಲ್ಲರೂ ಉಚಿತ ಕರ್ತವ್ಯವನ್ನೇ ಮಾಡಬೇಕು. ನಮ್ಮನ್ನು ವಧಿಸಲು ಬಯಸಿದ ನಾರಾಯಣನನ್ನು ಗೆಲ್ಲುವುದು ದುಷ್ಕರ ಕಾರ್ಯವಾಗಿದೆ.॥38॥
ಮೂಲಮ್ - 39
ತತಃ ಸುಮಾಲೀ ಮಾಲೀ ಚ ಶ್ರುತ್ವಾ ಮಾಲ್ಯವತೋ ವಚಃ ।
ಊಚತುರ್ಭ್ರಾತರಂ ಜ್ಯೇಷ್ಠಮಶ್ವಿನಾವಿವ ವಾಸವಮ್ ॥
ಅನುವಾದ
ಮಾಲ್ಯವಂತನ ಮಾತನ್ನು ಕೇಳಿ ಸುಮಾಲೀ ಮತ್ತು ಮಾಲಿಯವರು ಅಣ್ಣನಲ್ಲಿ ಇಬ್ಬರು ಅಶ್ವಿನೀಕುಮಾರರು ದೇವೇಂದ್ರನೊಡನೆ ವಾರ್ತಾಲಾಪ ಮಾಡಿದಂತೆ ನುಡಿದರು.॥39॥
ಮೂಲಮ್ - 40
ಸ್ವಧೀತಂ ದತ್ತಮಿಷ್ಟಂ ಚ ಐಶ್ವರ್ಯಂ ಪರಿಪಾಲಿತಮ್ ।
ಆಯುರ್ನಿರಾಮಯಂ ಪ್ರಾಪ್ತಂ ಸುಧರ್ಮಃ ಸ್ಥಾಪಿತಃ ಪಥಿ ॥
ಅನುವಾದ
ರಾಕ್ಷಸರಾಜನೇ! ನಾವು ಸ್ವಾಧ್ಯಾಯ, ದಾನ, ಯಜ್ಞ ಮಾಡಿದ್ದೇವೆ. ಐಶ್ವರ್ಯದ ರಕ್ಷಣೆ ಮತ್ತು ಭೋಗವನ್ನು ಮಾಡಿದ್ದೇವೆ. ನಮಗೆ ವ್ಯಾಧಿರಹಿತ ಆಯಸ್ಸು ದೊರೆತಿದೆ. ನಾವು ಕರ್ತವ್ಯ ಮಾರ್ಗದಲ್ಲಿ ಉತ್ತಮ ಧರ್ಮವನ್ನು ಸ್ಥಾಪಿಸಿದ್ದೇವೆ.॥40॥
ಮೂಲಮ್ - 41
ದೇವಸಾಗರಮಕ್ಷೋಭ್ಯಂ ಶಸ್ತ್ರೈಃ ಸಮವಗಾಹ್ಯ ಚ ।
ಜಿತಾ ದ್ವೇಷೋ ಹ್ಯಪ್ರತಿಮಾಸ್ತನ್ನೋ ಮೃತ್ಯುಕೃತಂ ಭಯಮ್ ॥
ಅನುವಾದ
ಇಷ್ಟೇ ಅಲ್ಲ, ನಾವು ಶಾಸ್ತ್ರಗಳ ಬಲದಿಂದ ದೇವಸೈನ್ಯರೂಪೀ ಅಪಾರ ಸಮುದ್ರವನ್ನು ಪ್ರವೇಶಿಸಿ, ವೀರತೆಯಲ್ಲಿ ಎದುರಿಲ್ಲದ ಶತ್ರುಗಳನ್ನು ಗೆದ್ದಿದ್ದೇವೆ. ಆದ್ದರಿಂದ ನಮಗೆ ಮೃತ್ಯುವಿನ ಯಾವ ಭಯವೂ ಇಲ್ಲ.॥41॥
ಮೂಲಮ್ - 42
ನಾರಾಯಣಶ್ಚ ರುದ್ರಶ್ಚ ಶಕ್ರಶ್ಚಾಪಿ ಯಮಸ್ತಥಾ ।
ಅಸ್ಮಾಕಂ ಪ್ರಮುಖೇ ಸ್ಥಾತುಂ ಸರ್ವೇಬಿಭ್ಯತಿ ಸರ್ವದಾ ॥
ಅನುವಾದ
ನಾರಾಯಣ, ರುದ್ರ, ಇಂದ್ರ ಹಾಗೂ ಯಮನೇ ಆಗಿರಲೀ, ಎಲ್ಲರೂ ಸದಾ ನಮ್ಮೆದುರಿಗೆ ನಿಲ್ಲಲು ಹೆದರುತ್ತಾರೆ.॥42॥
ಮೂಲಮ್ - 43
ವಿಷ್ಣೋರ್ದ್ವೇಷಸ್ಯ ನಾಸ್ತ್ಯೇವ ಕಾರಣಂ ರಾಕ್ಷಸೇಶ್ವರ ।
ದೇವಾನಾಮೇವ ದೋಷೇಣ ವಿಷ್ಣೋಃ ಪ್ರಚಲಿತಂ ಮನಃ ॥
ಅನುವಾದ
ರಾಕ್ಷಸೇಶ್ವರ! ವಿಷ್ಣುವಿನ ಮನಸ್ಸಿನಲ್ಲಾದರೋ ನಮ್ಮ ಕುರಿತು ದ್ವೇಷದ ಯಾವುದೇ ಕಾರಣವಿಲ್ಲ. (ಏಕೆಂದರೆ ನಾವು ಅವನಿಗೆ ಯಾವ ಅಪರಾಧವನ್ನೂ ಮಾಡಿಲ್ಲ) ಕೇವಲ ದೇವತೆಗಳ ಚಾಡಿ ಮಾತಿನಿಂದಾಗಿ ನಮ್ಮ ಕುರಿತು ನಾರಾಯಣನ ಮನಸ್ಸು ಕೆಟ್ಟಿದೆ.॥43॥
ಮೂಲಮ್ - 44
ತಸ್ಮಾದದ್ಯೈವ ಸಹಿತಾಃ ಸರ್ವೇನ್ಯೋಽನ್ಯಸಮಾವೃತಾಃ ।
ದೇವಾನಾಮೇವ ಜಿಘಾಂಸಾಮೋ ಯೇಭ್ಯೋ ದೋಷಃ ಸಮುತ್ಥಿತಃ ॥
ಅನುವಾದ
ಈಗ ನಾವೆಲ್ಲರೂ ಒಂದಾಗಿ ಒಬ್ಬರು ಮತ್ತೊಬ್ಬರ ರಕ್ಷಣೆ ಮಾಡುತ್ತಾ ಜೊತೆಯಾಗಿ ನಡೆಯಬೇಕು. ಯಾವ ದೇವತೆಗಳಿಂದ ಈ ಉಪದ್ರವ ಉಂಟಾಗಿದೆಯೋ ಅವರನ್ನು ವಧಿಸಲು ಪ್ರಯತ್ನಿಸುವಾ.॥44॥
ಮೂಲಮ್ - 45½
ಏವಂ ಸಮ್ಮಂತ್ರ್ಯ ಬಲಿನಃ ಸರ್ವಸೈನ್ಯ ಸಮಾವೃತಾಃ ।
ಉದ್ಯೋಗಂ ಘೋಷಯಿತ್ವಾತುಸರ್ವೇ ನೈರ್ಋತಪುಂಗವಾಃ ॥
ಯುದ್ಧಾಯ ನಿರ್ಯಯುಃ ಕ್ರುದ್ಧಾ ಜಂಭವೃತ್ರಾದಯೇ ಯಥಾ ।
ಅನುವಾದ
ಹೀಗೆ ನಿಶ್ಚಯಿಸಿ ಎಲ್ಲ ಮಹಾಬಲಿ ರಾಕ್ಷಸ ಸೇನಾಪತಿಗಳು ಯುದ್ಧಕ್ಕಾಗಿ ಘೋಷಣೆ ಮಾಡಿದರು. ಸಮಸ್ತ ಸೇನೆಯನ್ನು ಜೊತೆ ಸೇರಿಸಿ ಜಂಭ ಮತ್ತು ವೃತ್ರರಂತೆ ಕುಪಿತರಾಗಿ ರಣಕ್ಕೆ ಹೊರಟರು.॥45½॥
ಮೂಲಮ್ - 46½
ಇತಿ ತೇ ರಾಮ ಸಮ್ಮಂತ್ಯ್ರ ಸರ್ವೋದ್ಯೋಗೇನ ರಾಕ್ಷಸಾಃ ॥
ಯುದ್ಧಾಯ ನಿರ್ಯಯುಃ ಸರ್ವೇ ಮಹಾಕಾಯಾ ಮಹಾಬಲಾಃ ।
ಅನುವಾದ
ಶ್ರೀರಾಮಾ! ಹೀಗೆ ಮಂತ್ರಾಲೋಚನೆ ಮಾಡಿ ಎಲ್ಲ ಮಹಾಬಲಿ ವಿಶಾಲಕಾಯ ರಾಕ್ಷಸರು ಪೂರ್ಣ ಸಿದ್ಧತೆ ಮಾಡಿ ಯುದ್ಧಕ್ಕಾಗಿ ಸಾಗಿದರು.॥46½॥
ಮೂಲಮ್ - 47
ಸ್ಯಂದನೈರ್ವಾರಣೈಶ್ಚೈವ ಹಯೈಶ್ಚ ಕರಿಸಂನಿಭೈಃ ॥
ಮೂಲಮ್ - 48
ಖರೈರ್ಗೋಭಿರಥೋಷ್ಟ್ರೈಶ್ಚ ಶಿಶುಮಾರೈರ್ಭುಜಂಮೈಃ ।
ಮಕರೈಃ ಕಚ್ಛಪೈರ್ಮೀನೈರ್ವಿಹಂಗೈರ್ಗರುಡೋಪಮೈಃ ॥
ಮೂಲಮ್ - 49½
ಸಿಂಹೈರ್ವ್ಯಾಘ್ರೈರ್ವರಾಹೈಶ್ಚ ಸೃಮರೈಶ್ಚಮರೈರಪಿ ।
ತ್ಯಕ್ತ್ವಾ ಲಂಕಾಂ ಗತಾಃ ಸರ್ವೇ ರಾಕ್ಷಸಾ ಬಲಗರ್ವಿತಾಃ ॥
ಪ್ರಯಾತಾ ದೇವಲೋಕಾಯ ಯೋದ್ಧುಂ ದೈವತಶತ್ರವಃ ।
ಅನುವಾದ
ಬಲಗರ್ವಿತರಾದ ಸಮಸ್ತ ದೇವದ್ರೋಹಿ ರಾಕ್ಷಸರು ರಥ, ಆನೆ, ಆನೆಯಂತಹ ಕುದುರೆ, ಕತ್ತೆ, ಎತ್ತು, ಒಂಟೆ, ಶಿಶುಮಾರ, ಸರ್ಪ, ಮೊಸಳೆ, ಆಮೆ, ಮೀನು, ಗರುಡದಂತಹ ಪಕ್ಷಿಗಳು, ಸಿಂಹ, ಹುಲಿ, ಹಂದಿ, ಜಿಂಕೆ, ಚಮರೀಮೃಗ ಮುಂತಾದ ವಾಹನಗಳನ್ನು ಏರಿ ಲಂಕೆಯನ್ನು ಬಿಟ್ಟು ಯುದ್ಧಕ್ಕಾಗಿ ದೇವಲೋಕದ ಕಡೆಗೆ ಹೊರಟರು.॥47-49½॥
ಮೂಲಮ್ - 50½
ಲಂಕಾ ವಿಪರ್ಯಯಂ ದೃಷ್ಟ್ವಾ ಯಾನಿ ಲಂಕಾಲಯಾನ್ಯಥ ॥
ಭೂತಾನಿ ಭಯದರ್ಶೀನಿ ವಿಮನಸ್ಕಾನಿ ಸರ್ವಶಃ ।
ಅನುವಾದ
ಲಂಕೆಯಲ್ಲಿದ್ದ ಪ್ರಾಣಿ, ಗ್ರಾಮ ದೇವತೆ ಮುಂತಾದವುಗಳೆಲ್ಲ ಅಪಶಕುನ ತೋರಿ ಲಂಕೆಯ ಭಾವೀ ವಿಧ್ವಂಸದ ಭಯವನ್ನು ಅನುಭವಿಸಿ ಮನಸ್ಸಿನಲ್ಲೇ ಬೇಸರಗೊಂಡವು.॥50½॥
ಮೂಲಮ್ - 51
ರಥೋತ್ತಮೈರುಹ್ಯಮಾನಾಃ ಶತಶೋಥ ಸಹಸ್ರಶಃ ॥
ಮೂಲಮ್ - 52
ಪ್ರಯಾತಾ ರಾಕ್ಷಸಾಸ್ತೂರ್ಣಾಂ ದೇವಲೋಕಂ ಪ್ರಯತ್ನತಃ ।
ರಕ್ಷಸಾಮೇವ ಮಾರ್ಗೇಣ ದೈವತಾನ್ಯಪಚಕ್ರಮುಃ ॥
ಅನುವಾದ
ಉತ್ತಮ ರಥವನ್ನು ಏರಿ ಸಾವಿರಾರು ನೂರು ರಾಕ್ಷಸರು ಕೂಡಲೇ ದೇವಲೋಕದ ಕಡೆಗೆ ಧಾವಿಸಿದರು. ಆ ನಗರದ ದೇವತೆಗಳು ರಾಕ್ಷಸರ ದಾರಿಯಲೇ ಪುರಿಯನ್ನು ಬಿಟ್ಟು ಹೊರಟು ಹೋದವು.॥51-52॥
ಮೂಲಮ್ - 53
ಭೌಮಾಚ್ಚೈವಾಂತರಿಕ್ಷಾಚ್ಚ ಕಾಲಾಜ್ಞಪ್ತಾ ಭಯಾವಹಾಃ ।
ಉತ್ಪಾತಾ ರಾಕ್ಷಸೇಂದ್ರಾಂಣಾಮಭಾವಾಯ ಸಮುತ್ಥಿತಾಃ ॥
ಅನುವಾದ
ಆಗ ಕಾಲ ಪ್ರೇರಣೆಯಿಂದ ರಾಕ್ಷಸರ ವಿನಾಶಕ ಸೂಚಕವಾದ ಅನೇಕ ಭಯಂಕರ ಉತ್ಪಾತಗಳು ಪ್ರಕಟವಾಗ ತೊಡಗಿದವು.॥53॥
ಮೂಲಮ್ - 54
ಅಸ್ಥೀನಿ ಮೇಘಾ ವವೃಷುರುಷ್ಣಂ ಶೋಣಿತಮೇವ ಚ ।
ವೇಲಾಂ ಸಮುದ್ರಾಶ್ಚೋತ್ಕ್ರಾಂತಾಶ್ಚೇಲುಶ್ಚಾಪ್ಯಥ ಭೂಧರಾಃ ॥
ಅನುವಾದ
ಮೋಡಗಳು ಬಿಸಿ ರಕ್ತದ ಮತ್ತು ಎಲುಬುಗಳ ಮಳೆಗರೆದವು. ಸಮುದ್ರ ತನ್ನ ಎಲ್ಲೆ ಮೀರಿ ಉಕ್ಕಿ ಹರಿಯಿತು, ಪರ್ವತಗಳು ನಡುಗತೊಡಗಿದವು.॥54॥
ಮೂಲಮ್ - 55
ಅಟ್ಟಹಾಸಾನ್ ವಿಮುಂಚಂತೋ ಘನನಾದ ಸಮಸ್ವನಾಃ ।
ವಾಶ್ಯಂತ್ಯಶ್ಚ ಶಿವಾಸ್ತತ್ರ ದಾರುಣಂ ಘೋರದರ್ಶನಾಃ ॥
ಅನುವಾದ
ಮೇಘದಂತೆ ಗಂಭೀರ ಧ್ವನಿ ಮಾಡುವ ಪ್ರಾಣಿಗಳು ವಿಕಟವಾಗಿ ಅಟ್ಟಹಾಸ ಮಾಡಿದವು. ಭಯಂಕರವಾದ ಗುಳ್ಳೆನರಿಗಳು ಕರ್ಕಶವಾಗಿ ಅರಚತೊಡಗಿದವು.॥55॥
ಮೂಲಮ್ - 56½
ಸಂಪತಂತ್ಯಥ ಭೂತಾನಿ ದೃಶ್ಯಂತೇ ಚ ಯಥಾಕ್ರಮಮ್ ।
ಗೃಧ್ರ ಚಕ್ರಂ ಮಹಚ್ಚಾತ್ರ ಪ್ರಜ್ವಾಲೋದ್ಗಾರಿಭಿರ್ಮುಖೈಃ ॥
ರಕ್ಷೋಗಣಸ್ಯೋಪರಿಷ್ಟಾತ್ ಪರಿಭ್ರಮತಿ ಕಾಲವತ್ ।
ಅನುವಾದ
ಪೃಥಿವಿಯೇ ಪಂಚಭೂತಗಳು ಬಿದ್ದು ಕರಗಿಹೋದಂತೆ ಅನಿಸಿತು. ವಿಶಾಲ ರಣಹದ್ದುಗಳು ಬಾಯಿಂದ ಬೆಂಕಿಯನ್ನು ಉಗುಳುತ್ತಾ ರಾಕ್ಷಸರ ಮೇಲೆ ಹಾರಾಡತೊಡಗಿದವು.॥56½॥
ಮೂಲಮ್ - 57½
ಕಪೋತಾ ರಕ್ತಪಾದಾಶ್ಚ ಸಾರಿಕಾ ವಿದ್ರುತಾ ಯಯುಃ ॥
ಕಾಕಾ ವಾಶ್ಯಂತಿ ತತ್ರೈವ ಬಿಡಾಲಾ ವೈ ದ್ವಿಪಾದಯಃ ।
ಅನುವಾದ
ಪಾರಿವಾಳ, ಗಿಳಿ, ಮತ್ತು ಮೈನಾ ಹಕ್ಕಿಗಳು ಲಂಕೆ ಯನ್ನು ಬಿಟ್ಟು ನಡೆದವು. ಕಾಗೆಗಳು ಕಾ-ಕಾ ಎಂದು ಕೂಗುತ್ತಿದ್ದವು. ಬೆಕ್ಕುಗಳೂ ಕೂಡ ವಿಕಾರವಾಗಿ ಕೂಗುತ್ತಾ, ಆನೆಯೇ ಮೊದಲಾದ ಪ್ರಾಣಿಗಳು ಆರ್ತನಾದ ಮಾಡುತ್ತಿದ್ದವು.॥57½॥
ಮೂಲಮ್ - 58½
ಉತ್ಪಾತಾಂಸ್ತಾನನಾದೃಶ್ಯ ರಾಕ್ಷಸಾ ಬಲದರ್ಪಿತಾಃ ॥
ಯಾಂತೇವ ನ ನಿವರ್ತಂತೇ ಮೃತ್ಯುಪಾಶಾವಪಾಶಿತಾಃ ।
ಅನುವಾದ
ರಾಕ್ಷಸರ ಬಲಗರ್ವದಿಂದ ಉನ್ಮತ್ತರಾದರು, ಅವರು ಕಾಲ ಪಾಶಕ್ಕೆ ಬಂಧಿತರಾಗಿದ್ದರಿಂದ ಆ ಉತ್ಪಾತಗಳನ್ನು ಲೆಕ್ಕಿಸದೆ ಅವಹೇಳನ ಮಾಡುತ್ತಾ ಯುದ್ಧಕ್ಕಾಗಿ ಮುಂದರಿದರು.॥58½॥
ಮೂಲಮ್ - 59½
ಮಾಲ್ಯವಾಂಶ್ಚ ಸುಮಾಲೀ ಚ ಮಾಲೀ ಚ ಸುಮಹಾಬಲಃ ॥
ಪುರಾಸರಾ ರಾಕ್ಷಸಾನಾಂ ಜ್ವಲಿತಾ ಇವ ಪಾವಕಾಃ ।
ಅನುವಾದ
ಮಾಲ್ಯವಂತ, ಸುಮಾಲಿ, ಮಹಾಬಲಿ ಮಾಲಿ ಇವರು ಪ್ರಜ್ವಲಿತ ಬೆಂಕಿಯಂತೆ ತೇಜಸ್ವೀ ಶರೀರಗಳಿಂದ ಎಲ್ಲ ರಾಕ್ಷಸರ ಮುಂದೆ-ಮುಂದೆ ನಡೆಯುತ್ತಿದ್ದರು.॥59½॥
ಮೂಲಮ್ - 60½
ಮಾಲ್ಯವಂತಂ ತು ತೇ ಸರ್ವೇ ಮಾಲ್ಯವಂತವಿವಾಚಲಮ್ ॥
ನಿಶಾಚರಾ ಆಶ್ರಯಂತಿ ಧಾತಾರಮಿವ ದೇವತಾಃ ।
ಅನುವಾದ
ದೇವತೆಗಳು ಬ್ರಹ್ಮದೇವರನ್ನು ಆಶ್ರಯಿಸುವಂತೆ ಎಲ್ಲ ನಿಶಾಚರರು ಪರ್ವತದಂತೆ ಅವಿಚಲನಾದ ಮಾಲ್ಯವಂತ ನನ್ನು ಆಶ್ರಯಿಸಿದ್ದರು.॥60½॥
ಮೂಲಮ್ - 61½
ತದ್ಭಲಂ ರಾಕ್ಷಸೇಂದ್ರಾಣಾಂ ಮಹಾಭ್ರಘನನಾದಿತಮ್ ॥
ಜಯೇಪ್ಸಯಾ ದೇವಲೋಕಂ ಯಯೌ ಮಾಲಿವಶೇ ಸ್ಥಿತಮ್ ।
ಅನುವಾದ
ಸೇನಾಪತಿ ಮಾಲಿಯ ನಿಯಂತ್ರಣದಲ್ಲಿದ್ದ ಆ ಸೈನ್ಯವು ಮಹಾಮೇಘದಂತೆ ಗರ್ಜಿಸುತ್ತಾ, ವಿಜಯದ ಇಚ್ಛೆಯಿಂದ ದೇವಲೋಕದ ಕಡೆಗೆ ಸಾಗುತ್ತಿತ್ತು.॥61½॥
ಮೂಲಮ್ - 62½
ರಾಕ್ಷಸಾನಾಂ ಸಮುದ್ಯೋಗಂ ತಂ ತು ನಾರಾಯಣಃ ಪ್ರಭುಃ ॥
ದೇವದೂತಾದುಪಶ್ರುತ್ಯ ಚಕ್ರೇ ಯುದ್ಧೇ ತದಾ ಮನಃ ।
ಅನುವಾದ
ದೇವತೆಗಳ ದೂತನಿಂದ ಆ ಯುದ್ಧೋ ದ್ಯೋಗವನ್ನು ತಿಳಿದ ಭಗವಾನ್ ನಾರಾಯಣನೂ ಯುದ್ಧ ಮಾಡುವ ವಿಚಾರ ಮಾಡಿದನು.॥62½॥
ಮೂಲಮ್ - 63½
ಸ ಸಜ್ಜಾಯುಧ ತೂಣೀರೋ ವೈನತೋಯೋಪರಿ ಸ್ಥಿತಃ ॥
ಆಸಾದ್ಯ ಕವಚಂ ದಿವ್ಯಂ ಸಹಸ್ರಾರ್ಕಸಮದ್ಯುತಿ ।
ಅನುವಾದ
ಅವನು ಸಾವಿರಾರು ಸೂರ್ಯರಂತಹ ಪ್ರಕಾಶಮಾನ ದಿವ್ಯ ಕವಚವನ್ನೂ, ಬಾಣಗಳು ತುಂಬಿದ ಬತ್ತಳಿಕೆಯನ್ನು ಧರಿಸಿಕೊಂಡು ಗರುಡಾರೂಢನಾದನು.॥63½॥
ಮೂಲಮ್ - 64½
ಆಬದ್ಧ್ಯಶರಸಂಪೂರ್ಣೇ ಇಷುಧೀ ವಿಮಲೇ ತದಾ ॥
ಶ್ರೋಣಿಸೂತ್ರಂ ಚ ಖಡ್ಗಂ ಚ ವಿಮಲಂ ಕಮಲೇಕ್ಷಣಃ ।
ಅನುವಾದ
ಇಷ್ಟೇ ಅಲ್ಲದೆ ಅನೇಕ ಆಯುಧಗಳೊಂದಿಗೆ ಎರಡು ಹೊಳೆಯುವ ಭಾರೀ ಧನುಸ್ಸುಗಳನ್ನು ಧರಿಸಿದ್ದನು. ಆ ಕಮಲನಯನ ಶ್ರೀಹರಿಯು ಸೊಂಟದಲ್ಲಿ ಹೊಳೆಯುತ್ತಿರುವ ಖಡ್ಗವನ್ನು ಕಟ್ಟಿಕೊಂಡಿದ್ದನು.॥64½॥
ಮೂಲಮ್ - 65
ಶಂಖಚಕ್ರಗದಾಶಾರ್ಙ್ಗ ಖಡ್ಗಾಂಶ್ಚೈವ ವರಾಯುಧಾನ್ ॥
ಮೂಲಮ್ - 66
ಸುಪರ್ಣಂ ಗಿರಿಸಂಕಾಶಂ ವೈನತೇಯಮಥಾಸ್ಥಿತಃ ।
ರಾಕ್ಷಸಾನಾಮಭಾವಾಯ ಯಯೌ ತೂರ್ಣತರಂ ಪ್ರಭುಃ ॥
ಅನುವಾದ
ಹೀಗೆ ಶಂಖ, ಚಕ್ರ, ಗದಾ, ಶಾಙ್ಗ ಧನುಸ್ಸು, ಖಡ್ಗ ಮುಂತಾದ ಉತ್ತಮ ಆಯುಧಗಳನ್ನು ಧರಿಸಿ ಸುಂದರ ರೆಕ್ಕೆಗಳುಳ್ಳ ಪರ್ವತಾಕಾರ ಗರುಡಾ ರೂಢನಾಗಿ ರಾಕ್ಷಸರ ಸಂಹಾರಕ್ಕಾಗಿ ಕೂಡಲೇ ಹೊರಟನು.॥65-66॥
ಮೂಲಮ್ - 67
ಸುಪರ್ಣಪೃಷ್ಠೇ ಸ ಬಭೌ ಶ್ಯಾಮಃ ಪೀತಾಂಬರೋ ಹರಿಃ ।
ಕಾಂಚನಸ್ಯ ಗಿರೇಃ ಶೃಂಗೇ ಸತಡಿತ್ತೋಯದೋ ಯಥಾ ॥
ಅನುವಾದ
ಗರುಡನ ಬೆನ್ನಮೇಲೆ ಕುಳಿತ ಪೀತಾಂಬರಧಾರೀ ಶ್ಯಾಮಸುಂದರ ಶ್ರೀಹರಿಯು ಸ್ವರ್ಣಮಯ ಮೇರುಪರ್ವತದ ಶಿಖರದಲ್ಲಿ ಮಿಂಚಿನೊಂದಿಗೆ ಇರುವ ಮೇಘದಂತೆ ಶೋಭಿಸುತ್ತಿದ್ದನು.॥67॥
ಮೂಲಮ್ - 68
ಸ ಸಿದ್ಧದೇವರ್ಷಿಮಹೋರಗೈಶ್ಚ
ಗಂಧರ್ವಯಕ್ಷೈರುಪಗೀಯಮಾನಃ ।
ಸಮಾಸಸಾದಾಸುರಸೈನ್ಯಶತ್ರು-
ಶ್ಚಕ್ರಾಸಿಶಾರ್ಙ್ಗಾಯುಧ ಶಂಖಪಾಣಿಃ ॥
ಅನುವಾದ
ಆಗ ಸಿದ್ಧರು, ದೇವರ್ಷಿಗಳು, ನಾಗಗಳು, ಗಂಧರ್ವರು, ಯಕ್ಷರು ಅವನ ಗುಣಗಾನ ಮಾಡುತ್ತಿದ್ದರು. ಅಸುರ ಶತ್ರುವಾದ ಆ ಶ್ರೀಹರಿಯು ಶಂಖ, ಚಕ್ರ, ಖಡ್ಗ, ಶಾಙ್ಗಧನುಸ್ಸನ್ನು ಧರಿಸಿ ಆಗಲೇ ಅಲ್ಲಿಗೆ ಬಂದನು.॥68॥
ಮೂಲಮ್ - 69
ಸುಪರ್ಣಪಕ್ಷಾನಿಲನುನ್ನಪಕ್ಷಂ
ಭ್ರಮತ್ಪತಾಕಂ ಪ್ರವಿಕೀರ್ಣಶಸ್ತ್ರಮ್ ।
ಚಚಾಲ ತದ್ರಾಕ್ಷಸರಾಜಸೈನ್ಯಂ
ಚಲೋಪಲಂ ನೀಲಮಿವಾಚಲಾಗ್ರಮ್ ॥
ಅನುವಾದ
ಗರುಡನ ಪಂಖಗಳ ತೀವ್ರ ವಾಯುವಿನಿಂದ ರಾಕ್ಷಸ ಸೈನ್ಯವು ಕ್ಷುಬ್ಧಗೊಂಡಿತು. ರಥಗಳ ಪತಾಕೆಗಳು ಹಾರಿಹೋದವು. ರಾಕ್ಷಸ ಕೈಗಳಲ್ಲಿದ್ದ ಆಯುಧಗಳು ಬೀಳತೊಡಗಿದವು. ನೀಲಪರ್ವತದ ಶಿಖರವು ನಡುಗುತ್ತಾ, ಚೆಲ್ಲಿಹೋದಂತೆ ಮಾಲ್ಯವಂತನ ಇಡೀ ಸೈನ್ಯ ನಡುಗತೊಡಗಿತು.॥69॥
ಮೂಲಮ್ - 70
ತತಃ ಶಿಶೈಃ ಶೋಣಿತಮಾಂಸರೂಷಿತೈ-
ರ್ಯುಗಾಂತ ವೈಶ್ವಾನರತುಲ್ಯವಿಗ್ರಹೈಃ
ನಿಶಾಚರಾಃ ಸಂಪರಿವಾರ್ಯ ಮಾಧವಂ
ವರಾಯುಧೈರ್ನಿರ್ಬಿಭಿದುಃ ಸಹಸ್ರಶಃ ॥
ಅನುವಾದ
ರಾಕ್ಷಸರ ಉತ್ತಮ ಅಸ್ತ್ರ-ಶಸ್ತ್ರಗಳು ಹರಿತವಾಗಿದ್ದು, ರಕ್ತ-ಮಾಂಸಗಳಿಂದ ನೆನೆದು ಪ್ರಳಯಕಾಲದ ಅಗ್ನಿಯಂತೆ ಹೊಳೆಯುತ್ತಿದ್ದವು. ಆ ಸಾವಿರಾರು ನಿಶಾಚರರು ಅವುಗಳಿಂದ ಭಗವಾನ್ ಲಕ್ಷ್ಮೀಪತಿಯನ್ನು ಸುತ್ತಲಿಂದಲೂ ಆಕ್ರಮಿಸಿ ಹೊಡೆಯತೊಡಗಿದರು.॥70॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಆರನೆಯ ಸರ್ಗ ಪೂರ್ಣವಾಯಿತು. ॥6॥