००५ माल्यवदादि

[ಐದನೆಯ ಸರ್ಗ]

ಭಾಗಸೂಚನಾ

ಸುಕೇಶನ ಪುತ್ರ ಮಾಲ್ಯವಂತ, ಸುಮಾಲೀ ಮತ್ತು ಮಾಲಿಯ ಸಂತಾನದ ವರ್ಣನೆ

ಮೂಲಮ್ - 1

ಸುಕೇಶಂ ಧಾರ್ಮಿಕಂ ದೃಷ್ಟ್ವಾವರಲಬ್ಧಂ ಚ ರಾಕ್ಷಸಮ್ ।
ಗ್ರಾಮಣೀರ್ನಾಮ ಗಂಧರ್ವೋ ವಿಶ್ವಾವಸು ಸಮಪ್ರಭಃ ॥

ಮೂಲಮ್ - 2½

ತಸ್ಯ ದೇವವತೀ ನಾಮ ದ್ವಿತೀಯಾ ಶ್ರೀರಿವಾತ್ಮಜಾ ।
ತ್ರಿಷು ಲೋಕೇಷು ವಿಖ್ಯಾತಾ ರೂಪಯೌವನಶಾಲಿನೀ ॥
ತಾಂ ಸುಕೇಶಾಯ ಧರ್ಮಾತ್ಮಾ ದದೌ ರಕ್ಷಃಶ್ರಿಯಂ ಯಥಾ ।

ಅನುವಾದ

(ಅಗಸ್ತ್ಯರು ಹೇಳುತ್ತಿದ್ದಾರೆ - ರಘುನಂದನ!) ಅನಂತರ ಒಂದು ದಿನ ವಿಶ್ವಾವಸುವಿನಂತೆ ತೇಜಸ್ವೀ ಗ್ರಾಮಣೀ ಎಂಬ ಗಂಧರ್ವನು ರಾಕ್ಷಸ ಸುಕೇಶನಿಗೆ ಧರ್ಮಾತ್ಮಾ ಹಾಗೂ ವರಪ್ರಾಪ್ತ ವೈಭವದಿಂದ ಸಂಪನ್ನನೆಂದು ನೋಡಿ, ದೇವವತೀ ಎಂಬ ತನ್ನ ಕನ್ಯೆಯನ್ನು ಅವನೊಂದಿಗೆ ವಿವಾಹ ಮಾಡಿದನು. ಆ ಕನ್ಯೆಯು ಇನ್ನೋರ್ವ ಲಕ್ಷ್ಮಿಯಂತೆ ದಿವ್ಯ ರೂಪ-ಯೌವನದಿಂದ ಸುಶೋಭಿತಳಾಗಿದ್ದು, ಮೂರೂ ಲೋಕಗಳಲ್ಲಿ ವಿಖ್ಯಾತಳಾಗಿದ್ದಳು. ಧರ್ಮಾತ್ಮಾ ಗ್ರಾಣಿಯು ರಾಕ್ಷಸರ ಮೂರ್ತಿಮತಿ ರಾಜಲಕ್ಷ್ಮಿಯಂತೆ ದೇವವತಿಯನ್ನು ಸುಕೇಶನಿಗೆ ಒಪ್ಪಿಸಿದನು.॥1-2½॥

ಮೂಲಮ್ - 3½

ವರದಾನಕೃತೈಶ್ವರ್ಯಂ ಸಾ ತಂ ಪ್ರಾಪ್ಯ ಪತಿಂ ಪ್ರಿಯಮ್ ॥
ಆಸೀದ್ದೇವವತೀ ತುಷ್ಟಾ ಧನಂ ಪ್ರಾಪ್ಯೇವ ನಿರ್ಧನಃ ।

ಅನುವಾದ

ವರಬಲದಿಂದ ದೊರೆತ ಐಶ್ವರ್ಯದಿಂದ ಸಂಪನ್ನ ಪ್ರಿಯತಮ ಪತಿಯನ್ನು ಪಡೆದು, ಯಾವನಾದರೂ ಬಡವನಿಗೆ ಧನರಾಶಿಯು ದೊರೆಯುವಂತೆ, ದೇವವತಿಯು ಬಹಳ ಸಂತುಷ್ಟಳಾದಳು.॥3½॥

ಮೂಲಮ್ - 4½

ಸ ತಯಾ ಸಹ ಸಂಯುಕ್ತೋ ರರಾಜ ರಜನೀಚರಃ ॥
ಅಂಜನಾದಭಿನಿಷ್ಕ್ರಾಂತಃ ಕರೇಣ್ವೇವ ಮಹಾಗಜಃ ।

ಅನುವಾದ

ಅಂಜನ ಎಂಬ ದಿಗ್ಗಜದಿಂದ ಹುಟ್ಟಿದ ಮಹಾಗಜವು ಹೆಣ್ಣಾನೆಯೊಂದಿಗೆ ಶೋಭಿಸುವಂತೆಯೇ ಆ ರಾಕ್ಷಸನು ಗಂಧರ್ವಕನ್ಯೆ ದೇವವತಿಯೊಂದಿಗೆ ಇದ್ದು ಹೆಚ್ಚು ಶೋಭಿಸಿದನು.॥4½॥

ಮೂಲಮ್ - 5½

ತತಃ ಕಾಲೇ ಸುಕೇಶಸ್ತು ಜನಯಾಮಾಸ ರಾಘವ ॥
ತ್ರೀನ್ಪುತ್ರಾಂಜನಯಾಮಾಸ ತ್ರೇತಾಗ್ನಿಸಮ ವಿಗ್ರಹಾನ್ ।

ಅನುವಾದ

ರಘುನಂದನ! ಬಳಿಕ ಸಮಯ ಬಂದಾಗ ದೇವವತಿಯ ಗರ್ಭದಿಂದ ಮೂರು ಪುತ್ರರು ಹುಟ್ಟಿದರು; ಅವರು ಮೂರು ಅಗ್ನಿಗಳಂತೆ ತೇಜಸ್ವಿಗಳಾಗಿದ್ದರು.॥5½॥

ಮೂಲಮ್ - 6½

ಮಾಲ್ಯವಂತಂ ಸುಮಾಲಿಂ ಚ ಮಾಲಿಂ ಚ ಬಲಿನಾಂ ವರಮ್ ॥
ತ್ರೀಂಸಿ ನೇತ್ರಸಮಾನ್ಪುತ್ರಾನ್ ರಾಕ್ಷಸಾನ್ ರಾಕ್ಷಸಾಧಿಪಃ ।

ಅನುವಾದ

ಮಾಲ್ಯವಂತ, ಸುಮಾಲೀ ಮತ್ತು ಮಾಲಿ ಎಂದು ಅವರ ಹೆಸರಾಗಿತ್ತು. ಮಾಲಿಯು ಶ್ರೇಷ್ಠ ಬಲವಂತನಾಗಿದ್ದನು. ಅವರು ಮೂವರೂ ತ್ರಿನೇತ್ರಧಾರಿ ಮಹಾದೇವನಂತೆ ಶಕ್ತಿಶಾಲಿಯಾಗಿದ್ದರು. ಆ ಮೂವರೂ ರಾಕ್ಷಸ ಪುತ್ರರನ್ನು ನೋಡಿ ರಾಕ್ಷಸರಾಜ ಸುಕೇಶನಿಗೆ ಬಹಳ ಸಂತೋಷವಾಯಿತು.॥6½॥

ಮೂಲಮ್ - 7½

ತ್ರಯೋ ಲೋಕಾ ಇವಾವ್ಯಗ್ರಾಃ ಸ್ಥಿತಾಸ್ತ್ರಯ ಇವಾಗ್ನಯಃ ॥
ತ್ರಯೋ ಮಂತ್ರಾ ಇವಾತ್ಯುಗ್ರಾಸ್ತ್ರಯೋ ಘೋರಾ ಇವಾಮಯಾಃ ।

ಅನುವಾದ

ಅವರು ಮೂರು ಲೋಕಗಳಂತೆ ಸುಸ್ಥಿರರೂ, ಮೂರು ಅಗ್ನಿಗಳಂತೆ1 ತೇಜಸ್ವಿಗಳೂ, ಮೂರುಮಂತ್ರ (ಶಕ್ತಿಗಳಿಂದ2 ಅಥವಾ ವೇದ3)ದಂತೆ ಉಗ್ರ ಹಾಗೂ ಮೂರು ರೋಗ4ಗಳಂತೆ ಅತ್ಯಂತ ಭಯಂಕರರಾಗಿದ್ದರು.॥7½॥

ಟಿಪ್ಪನೀ
  1. ಗಾರ್ಹಪತ್ಯ, ಆಹವನೀಯ, ದಕ್ಷಿಣಾಗ್ನಿ ಇವು ಮೂರು ಅಗ್ನಿಗಳು.
  2. ಪ್ರಭುಶಕ್ತಿ, ಉತ್ಸಾಹಶಕ್ತಿ ಹಾಗೂ ಮಂತ್ರಶಕ್ತಿ ಇವು ಮೂರು ಶಕ್ತಿಗಳು.
  3. ಋಗ್, ಯಜು ಮತ್ತು ಸಾಮ ಇವು ಮೂರು ವೇದಗಳು.
  4. ವಾತ, ಪಿತ್ತ, ಕಫ - ಇವುಗಳ ಪ್ರಕೋಪದಿಂದ ಉಂಟಾಗುವ ಮೂರು ರೋಗಗಳು.
ಮೂಲಮ್ - 8½

ತ್ರಯಃ ಸುಕೇಶಸ್ಯ ಸುತಾಸ್ತ್ರೇತಾಗ್ನಿ ಸಮತೇಜಸಃ ॥
ವಿವೃದ್ಧಿಮಗಮಂಸ್ತತ್ರ ವ್ಯಾಧಯೋಪೇಕ್ಷಿತಾ ಇವ ।

ಅನುವಾದ

ಸುಕೇಶನ ಆ ಮೂವರು ಪುತ್ರರು ತ್ರಿವಿಧ ಅಗ್ನಿಗಳಂತೆ ತೇಜಸ್ವಿಗಳಾಗಿದ್ದರು. ಉಪೇಕ್ಷೆಯಿಂದ ಔಷಧಿ ಮಾಡದೆ ರೋಗ ಬೆಳೆಯುವಂತೆ ಅವರು ಬೆಳೆಯತೊಡಗಿದರು.॥8½॥

ಮೂಲಮ್ - 9½

ವರಪ್ರಾಪ್ತಿಂ ಪಿತುಸ್ತೇ ತು ಜ್ಞಾತ್ವೈಶ್ವರ್ಯಂ ತಪೋಬಲಾತ್ ॥
ತಪಸ್ತಪ್ತುಂ ಗತಾ ಮೇರುಂ ಭ್ರಾತರಃ ಕೃತನಿಶ್ಚಯಾಃ ।

ಅನುವಾದ

ನಮ್ಮ ತಂದೆಗೆ ತಪೋಬಲದಿಂದ ವರ ಮತ್ತು ಐಶ್ವರ್ಯ ಪ್ರಾಪ್ತವಾಗಿದೆ ಎಂದು ಅವರಿಗೆ ತಿಳಿದಾಗ ಆ ಮೂವರೂ ತಪಸ್ಸಿಗಾಗಿ ಮೇರುಪರ್ವತಕ್ಕೆ ಹೋದರು.॥9½॥

ಮೂಲಮ್ - 10½

ಪ್ರಗೃಹ್ಯ ನಿಯಮಾನ್ ಘೋರಾನ್ ರಾಕ್ಷಸಾ ನೃಪಸತ್ತಮ ॥
ವಿಚೇರುಸ್ತೇ ತಪೋ ಘೋರಂ ಸರ್ವಭೂತ ಭಯಾವಹಮ್ ।

ಅನುವಾದ

ನೃಪಶ್ರೇಷ್ಠನೇ! ಆ ರಾಕ್ಷಸರು ಅಲ್ಲಿ ಭಯಂಕರ ನಿಯಮಗಳಿಂದ ತಪಸ್ಸಿಗೆ ತೊಡಗಿದರು. ಅವರ ಆ ತಪಸ್ಸು ಸಮಸ್ತ ಪ್ರಾಣಿಗಳಿಗೆ ಭಯಾವಹವಾಗಿತ್ತು.॥10½॥

ಮೂಲಮ್ - 11½

ಸತ್ಯಾರ್ಜವಶಮೋಪೇತೈಸ್ತಪೋಭಿರ್ಭುವಿ ದುರ್ಲಭೈಃ ॥
ಸಂತಾಪಯಂತಸ್ತ್ರೀಲ್ಲೋಕಾನ್ ಸದೇವಾಸುರ ಮಾನುಷಾನ್ ।

ಅನುವಾದ

ಭೂತಳದಲ್ಲಿ ದುರ್ಲಭವಾದ ಸತ್ಯ, ಸರಳತೆ, ಶಮ-ದಮಾದಿಗಳಿಂದ ಅವರು ದೇವಾಸುರ ಮತ್ತು ಮನುಷ್ಯರ ಸಹಿತ ಮೂರು ಲೋಕಗಳನ್ನು ಸುಡತೊಡಗಿದರು.॥11½॥

ಮೂಲಮ್ - 12½

ತತೋ ವಿಭುಶ್ಚತುರ್ವಕ್ತ್ರೋ ವಿಮಾನವರಮಾಶ್ರಿತಃ ॥
ಸುಕೇಶಪುತ್ರಾನಾಮಂತ್ರ್ಯ ವರದೋಽಸ್ಮೀತ್ಯಭಾಷತ ।

ಅನುವಾದ

ಆಗ ಚತುರ್ಮುಖ ಬ್ರಹ್ಮದೇವರು ಒಂದು ಶ್ರೇಷ್ಠ ವಿಮಾನದಿಂದ ಅಲ್ಲಿಗೆ ಬಂದು, ಸುಕೇಶನ ಪುತ್ರರನ್ನು ಸಂಬೋಧಿಸಿ, ನಾನು ನಿಮಗೆ ವರವನ್ನು ಕೊಡಲು ಬಂದಿರುವೆ ಎಂದು ಹೇಳಿದರು.॥12½॥

ಮೂಲಮ್ - 13½

ಬ್ರಹ್ಮಾಣಂ ವರದಂ ಜ್ಞಾತ್ವಾ ಸೇಂದ್ರೈರ್ದೇವಗಣೈರ್ವೃತಮ್ ॥
ಊಚುಃ ಪ್ರಾಂಜಲಯಃ ಸರ್ವೇ ವೇಪಮಾನಾ ಇವ ದ್ರುಮಾಃ ।

ಅನುವಾದ

ಇಂದ್ರಾದಿ ದೇವತೆಗಳಿಂದ ಸುತ್ತುವರೆದ ಬ್ರಹ್ಮದೇವರು ಬಂದಿರುವರೆಂದು ತಿಳಿದು ಅವರೆಲ್ಲರೂ ವೃಕ್ಷಗಳಂತೆ ಕಂಪಿಸುತ್ತಾ ಕೈಮುಗಿದುಕೊಂಡು ನುಡಿದರು.॥13½॥

ಮೂಲಮ್ - 14

ತಪಸಾರಾಽಽಧಿಪತೋ ದೇವ ಯದಿ ನೋ ದಿಶಸೇ ವರಮ್ ॥

ಮೂಲಮ್ - 15

ಅಜೇಯಾಃ ಶತ್ರು ಹಂತಾರಸ್ತಥೈವ ಚಿರಜೀವಿನಃ ।
ಪ್ರಭವಿಷ್ಣ್ವೋ ಭವಾಮೇತಿ ಪರಸ್ಪರಮನುವ್ರತಾಃ ॥

ಅನುವಾದ

ದೇವಾ! ನೀವು ನಮ್ಮ ತಪಸ್ಸಿಗೆ ಮೆಚ್ಚಿ ನಮಗೆ ವರಕೊಡಲು ಬಂದಿರುವೆಯಾದರೆ, ನಮ್ಮನ್ನು ಯಾರೂ ಸೋಲಿಸದಿರುವಂತೆ ಕೃಪೆಮಾಡು. ನಾವು ಶತ್ರುಗಳನ್ನು ವಧಿಸಲು ಸಮರ್ಥರೂ, ಚಿರಜೀವಿಗಳೂ, ಪ್ರಭಾವಶಾಲಿಗಳೂ ಆಗಬೇಕು. ಜೊತೆಗೆ ನಮ್ಮಲ್ಲಿ ಪರಸ್ಪರ ಪ್ರೇಮ ಸದಾ ಇರಲಿ.॥14-15॥

ಮೂಲಮ್ - 16

ಏವಂ ಭವಿಷ್ಯಥೇತ್ಯುಕ್ತ್ವಾ ಸುಕೇಶತನಯಾನ್ವಿಭುಃ ।
ಸ ಯಯೌ ಬ್ರಹ್ಮಲೋಕಾಯ ಬ್ರಹ್ಮಾ ಬ್ರಾಹ್ಮಣವತ್ಸಲಃ ॥

ಅನುವಾದ

ಇದನ್ನು ಕೇಳಿ ಬ್ರಹ್ಮದೇವರು ಸುಕೇಶನ ಪುತ್ರರಲ್ಲಿ ‘ಹಾಗೆಯೇ ಆಗುವುದು’ ಎಂದು ಹೇಳಿ ಬ್ರಾಹ್ಮಣವತ್ಸಲ ಬ್ರಹ್ಮದೇವರು ತಮ್ಮ ಲೋಕಕ್ಕೆ ಹೊರಟುಹೋದರು.॥16॥

ಮೂಲಮ್ - 17

ವರಂ ಲಬ್ಧ್ವಾ ತು ತೇ ಸರ್ವೇ ರಾಮ ರಾಂತ್ರಿಂಚರಾಸ್ತದಾ ।
ಸುರಾಸುರಾನ್ ಪ್ರಬಾಧಂತೇ ವರದಾನಸು ನಿರ್ಭಯಾಃ ॥

ಅನುವಾದ

ಶ್ರೀರಾಮಾ! ಅವರೆಲ್ಲ ನಿಶಾಚರರು ವರದಾನದಿಂದ ಅತ್ಯಂತ ನಿರ್ಭಯರಾಗಿ ದೇವತೆಗಳಿಗೆ ಹಾಗೂ ಅಸುರರಿಗೆ ಕಷ್ಟಕೊಡತೊಡಗಿದರು.॥17॥

ಮೂಲಮ್ - 18

ತೈರ್ಬಾಧ್ಯಮಾನಾಸ್ತ್ರಿದಶಾಃ ಸರ್ಷಿಸಂಘಾಃ ಸಚಾರಣಾಃ ।
ತ್ರಾತಾರಂ ನಾಧಿಗಚ್ಛಂತಿ ನಿರಯಸ್ಥಾ ಯಥಾ ನರಾಃ ॥

ಅನುವಾದ

ಅವರಿಂದ ತೊಂದರೆಗೀಡಾದ ದೇವತೆಗಳು, ಋಷಿಗಳು, ಚಾರಣರು ನರಕದಲ್ಲಿ ಬಿದ್ದ ಮನುಷ್ಯರಂತೆ ತಮಗೆ ಯಾರೂ ರಕ್ಷಕರೂ, ಸಹಾಯಕರೂ ಇಲ್ಲದೆ ಹೋದರು.॥18॥

ಮೂಲಮ್ - 19

ಅಥ ತೇ ವಿಶ್ವಕರ್ಮಾಣಂ ಶಿಲ್ಪಿನಾಂ ವರಮವ್ಯಯಮ್ ।
ಊಚುಃ ಸಮೇತ್ಯ ಸಂಹೃಷ್ಟಾ ರಾಕ್ಷಸಾ ರಘುಸತ್ತಮ ॥

ಅನುವಾದ

ರಘುವಂಶ ಶ್ರೇಷ್ಠನೇ! ಒಂದು ದಿನ ಶಿಲ್ಪಕರ್ಮ ತಿಳಿದವರಲ್ಲಿ ಶ್ರೇಷ್ಠನಾದ ವಿಶ್ವಕರ್ಮನ ಬಳಿಗೆ ಹೋಗಿ ಆ ರಾಕ್ಷಸರು ಹರ್ಷೋತ್ಸಾಹದಿಂದ ಹೇಳಿದರು.॥19॥

ಮೂಲಮ್ - 20

ಓಜಸ್ತೇಜೋ ಬಲವತಾಂ ಮಹತಾಮಾತ್ಮತೇಜಸಾ ।
ಗೃಹಕರ್ತಾ ಭವಾನೇವ ದೇವಾನಾಂ ಹೃದಯೇಪ್ಸಿತಮ್ ॥

ಮೂಲಮ್ - 21½

ಅಸ್ಮಾಕಮಪಿ ತಾವತ್ತ್ವಂ ಗೃಹಂ ಕುರು ಮಹಾಮತೇ ।
ಹಿಮವಂತಮುಪಾಶ್ರಿತ್ಯ ಮೇರುಂ ಮಂದರಮೇವ ವಾ ॥
ಮಹೇಶ್ವರಗೃಹಪ್ರಖ್ಯಂ ಗೃಹಂ ನಃ ಕ್ರಿಯತಾಂ ಮಹತ್ ।

ಅನುವಾದ

ಮಹಾಮತಿಯೇ! ತೇಜ, ಓಜ, ಬಲಗಳಿಂದ ಸಂಪನ್ನರಾದ ಮಹಾದೇವತೆಗಳಿಗೂ ಕೂಡ ನೀವು ತಮ್ಮ ಶಕ್ತಿಯಿಂದ ಉತ್ತಮ ಭವನಗಳನ್ನು ನಿರ್ಮಿಸುತ್ತಿದ್ದೀರಿ. ಆದ್ದರಿಂದ ನಮಗಾಗಿಯೂ ನೀವು ಹಿಮಾಲಯ, ಮೇರು, ಮಂದರಾಚಲಕ್ಕೆ ಹೋಗಿ ಭಗವಾನ್ ಶಂಕರನ ದಿವ್ಯಭವನದಂತೆ ಒಂದು ವಿಶಾಲ ನಿವಾಸಸ್ಥಾನವನ್ನು ನಿರ್ಮಾಣ ಮಾಡಿಕೊಡಿ.॥20-21½॥

ಮೂಲಮ್ - 22½

ವಿಶ್ವಕರ್ಮಾ ತತಸ್ತೇಷಾಂ ರಾಕ್ಷಸಾನಾಂ ಮಹಾಭುಜಃ ॥
ನಿವಾಸಂ ಕಥಯಾಮಾಸ ಶಕ್ರಸ್ಯೇವಾಮರಾವತೀಮ್ ।

ಅನುವಾದ

ಇದನ್ನು ಕೇಳಿ ಮಹಾಬಾಹು ವಿಶ್ವಕರ್ಮನು ಆ ರಾಕ್ಷಸರಿಗಾಗಿ ಇಂದ್ರನ ಅಮರಾವತಿಯನ್ನು ನಾಚಿಸುವಂತಹ ಒಂದು ನಿವಾಸಸ್ಥಾನವನ್ನು ತಿಳಿಸಿದನು.॥22½॥

ಮೂಲಮ್ - 23½

ದಕ್ಷಿಣಸ್ಯೋದಧೇಸ್ತೀರೇ ತ್ರಿಕೂಟೋ ನಾಮ ಪರ್ವತಃ ॥
ಸುವೇಲ ಇತಿ ಚಾಪ್ಯನ್ಯೋ ದ್ವಿತೀಯೋ ರಾಕ್ಷಸೇಶ್ವರಃ ।

ಅನುವಾದ

ರಾಕ್ಷಸಪತಿಗಳೇ! ದಕ್ಷಿಣ ಸಮುದ್ರದ ತೀರದಲ್ಲಿ ತ್ರಿಕೂಟ ಎಂಬ ಪರ್ವತವು, ಇನ್ನೊಂದು ಸುವೇಲವೋ ಎಂಬಂತೆ ಒಂದು ವಿಖ್ಯಾತ ಶೈಲವಿದೆ.॥23½॥

ಮೂಲಮ್ - 24

ಶಿಖರೇ ತಸ್ಯ ಶೈಲಸ್ಯ ಮಧ್ಯಮೇಂಽಬುದಸಂನಿಭೇ ॥

ಮೂಲಮ್ - 25

ಶಕುನೈರಪಿ ದುಷ್ಪ್ರಾಪೇ ಟಂಕಚ್ಛಿನ್ನಚತುರ್ದಿಶಿ ।
ತ್ರಿಂಶದ್ಯೋಜನವಿಸ್ತೀರ್ಣಾ ಶತಯೋಜನಮಾಯತಾ ॥

ಮೂಲಮ್ - 26

ಸ್ವರ್ಣಪ್ರಾಕಾರ ಸಂವೀತಾ ಹೇಮತೋರಣ ಸಂವೃತಾ ।
ಮಯಾ ಲಂಕೇತಿ ನಗರೀ ಶಕ್ರಾಜ್ಞಪ್ತೇನ ನಿರ್ಮಿತಾ ॥

ಅನುವಾದ

ಆ ತ್ರಿಕೂಟಪರ್ವತದ ನಡುವಿನ ಶಿಖರದ ಮೇಲೆ ಮೇಘಸದೃಶವಾದ, ಪಕ್ಷಿಗಳಿಗೂ ಹೋಗಲು ಅಸಾಧ್ಯವಾದ, ನಾಲ್ಕು ದಿಕ್ಕುಗಳಲ್ಲಿಯೂ ಉಳಿಗಳಿಂದ ಕೆತ್ತಿ ನಯಗೊಳಿಸಿರುವ, ಮೂವತ್ತು ಯೋಜನಗಳಷ್ಟು ವಿಶಾಲವಾಗಿಯೂ ಇರುವ ಲಂಕೆ ಎಂಬ ನಗರವನ್ನು ಇಂದ್ರನ ಆಜ್ಞೆಯಿಂದ ನಾನು ರಚಿಸಿರುವೆನು. ಅದು ಮೂವತ್ತು ಯೋಜನ ಅಗಲವೂ, ನೂರುಯೋಜನ ಉದ್ದವೂ ಆಗಿದೆ. ಸುತ್ತಲೂ ಬಂಗಾರದ ಪ್ರಾಕಾರವಿದ್ದು, ಚಿನ್ನದ ಮಹಾದ್ವಾರಗಳಿವೆ.॥24-26॥

ಮೂಲಮ್ - 27

ತಸ್ಯಾಂ ವಸತ ದುರ್ಧರ್ಷಾ ಯೂಯಂ ರಾಕ್ಷಸಪುಂಗವಾಃ ।
ಅಮರಾವತೀಂ ಸಮಾಸಾದ್ಯ ಸೇಂದ್ರಾ ಇವ ದಿವೌಕಸಃ ॥

ಅನುವಾದ

ದುರ್ಧರ್ಷ ರಾಕ್ಷಸಶ್ರೇಷ್ಠರೇ! ಅಮರಾವತಿಯನ್ನು ಆಶ್ರಯಿಸಿ ಇಂದ್ರಾದಿದೇವತೆಗಳು ಇರುವಂತೆಯೇ ನೀವೂಕೂಡ ಆ ಲಂಕಾಪುರಿಗೆ ಹೋಗಿ ವಾಸಿಸಿರಿ.॥27॥

ಮೂಲಮ್ - 28

ಲಂಕಾದುರ್ಗಂ ಸಮಾಸಾದ್ಯ ರಾಕ್ಷಸೈರ್ಬಹುಭಿರ್ವೃತಾಃ ।
ಭವಿಷ್ಯಥ ದುರಾಧರ್ಷಾಃ ಶತ್ರೂಣಾಂ ಶತ್ರುಸೂದನಾಃ ॥

ಅನುವಾದ

ಶತ್ರುಸೂದನ ವೀರರೇ! ಲಂಕಾದುರ್ಗವನ್ನು ಆಶ್ರಯಿಸಿ ಅನೇಕ ರಾಕ್ಷಸರೊಂದಿಗೆ ನೀವು ವಾಸಿಸಿದಾಗ ಶತ್ರುಗಳಿಗೆ ನಿಮ್ಮನ್ನು ಜಯಿಸುವುದು ಅತ್ಯಂತ ಕಠಿಣವಾಗುವುದು.॥28॥

ಮೂಲಮ್ - 29

ವಿಶ್ವಕರ್ಮವಚಃ ಶ್ರುತ್ವಾ ತತಸ್ತೇ ರಾಕ್ಷಸೋತ್ತಮಾಃ ।
ಸಹಸ್ರಾನುಚರಾ ಭೂತ್ವಾ ಗತ್ವಾ ತಾಮವಸನ್ಪುರೀಮ್ ॥

ಅನುವಾದ

ವಿಶ್ವಕರ್ಮನ ಮಾತನ್ನು ಕೇಳಿ ಆ ಶ್ರೇಷ್ಠ ರಾಕ್ಷಸರು ಸಾವಿರಾರು ಅನುಚರರೊಂದಿಗೆ ಆ ಪುರಿಗೆ ಹೋಗಿ ನೆಲೆಸಿದರು.॥29॥

ಮೂಲಮ್ - 30

ದೃಢಪ್ರಾಕಾರಪರಿಖಾಂ ಹೈಮೈರ್ಗೃಹಶತೈರ್ವೃತಾಮ್ ।
ಲಂಕಾಮವಾಪ್ಯ ತೇ ಹೃಷ್ಟಾ ನ್ಯವಸನ್ ರಜನೀಚರಾಃ ॥

ಅನುವಾದ

ಅದರ ಕಂದಕಗಳು, ಪ್ರಾಕಾರಗಳು ಬಲಿಷ್ಠವಾಗಿದ್ದವು. ಸಾವಿರಾರು ಸ್ವರ್ಣಸೌಧಗಳು ಆ ನಗರದ ಶೋಭೆ ಹೆಚ್ಚಿಸಿದ್ದವು. ಆ ಲಂಕೆಗೆ ಹೋಗಿ ಬಹಳ ಹರ್ಷದಿಂದ ಇರತೊಡಗಿದರು.॥30॥

ಮೂಲಮ್ - 31

ಏತಸ್ಮಿನ್ನೇವ ಕಾಲೇ ತು ಯಥಾಕಾಮಂ ಚ ರಾಘವ ।
ನರ್ಮದಾ ನಾಮ ಗಂಧರ್ವೀ ಬಭೂವ ರಘುನಂದನ ॥

ಮೂಲಮ್ - 32½

ತಸ್ಯಾಃ ಕನ್ಯಾತ್ರಯಂ ಹ್ಯಾಸೀದ್ ಧ್ರೀ ಶ್ರೀ ಕೀರ್ತಿ ಸಮದ್ಯುತಿ ।
ಜ್ಯೇಷ್ಠಕ್ರಮೇಣಸಾ ತೇಷಾಂ ರಾಕ್ಷಸಾನಾಮ ರಾಕ್ಷಸೀ ॥
ಕನ್ಯಾಸ್ತಾಃ ಪ್ರದದೌ ಹೃಷ್ಟಾಃ ಪೂರ್ಣಚಂದ್ರ ನಿಭಾನನಾಃ ।

ಅನುವಾದ

ರಘುಕುಲನಂದನ ಶ್ರೀರಾಮ! ಅದೇ ಸಮಯದಲ್ಲಿ ನರ್ಮದಾ ಎಂಬ ಗಂಧರ್ವಿಗೆ ಹ್ರೀ, ಶ್ರೀ ಮತ್ತು ಕೀರ್ತಿ ಎಂಬ ಮೂವರು ಕನ್ಯೆಯರಿದ್ದರು. ನರ್ಮದೆಯು ರಾಕ್ಷಸಿಯು ಇರದಿದ್ದರೂ ಅವಳು ಸುಕೇಶನ ಮೂರೂ ರಾಕ್ಷಸ ಪುತ್ರರಿಗೆ ತನ್ನ ಕನ್ಯೆಯರನ್ನು ಮದುವೆ ಮಾಡಿಕೊಟ್ಟಳು. ಚಂದ್ರನಂತೆ ಮನೋಹರ ಮುಖಗಳುಳ್ಳ ಆ ಕನ್ಯೆಯರು ಬಹಳ ಸಂತೋಷಗೊಂಡರು.॥31-32½॥

ಮೂಲಮ್ - 33½

ತ್ರಯಾಣಾಂ ರಾಕ್ಷಸೇಂದ್ರಾಣಾಂ ತಿಸ್ರೋ ಗಂಧರ್ವಕನ್ಯಕಾಃ ॥
ದತ್ತಾ ಮಾತ್ರಾ ಮಹಾಭಾಗಾ ನಕ್ಷತ್ರೇ ಭಗದೈವತೇ ।

ಅನುವಾದ

ತಾಯಿ ನರ್ಮದೆಯು ಉತ್ತರಾ ಫಲ್ಗುಣಿ ನಕ್ಷತ್ರದಲ್ಲಿ ಆ ಮೂವರೂ ಮಹಾ ಭಾಗ್ಯವತಿ ಗಂಧರ್ವ ಕನ್ಯೆಯರನ್ನು ಆ ಮೂರೂ ರಾಕ್ಷಸ ರಾಜರಿಗೆ ಒಪ್ಪಿಸಿದಳು.॥33½॥

ಮೂಲಮ್ - 34½

ಕೃತದಾರಾಸ್ತು ತೇ ರಾಮ ಸುಕೇಶತನಯಾಸ್ತದಾ ॥
ಚಿಕ್ರೀಡುಃ ಸಹ ಭಾರ್ಯಾಭಿರಪ್ಸರೋಭಿರಿವಾಮರಾಃ ।

ಅನುವಾದ

ರಾಮ! ದೇವತೆಗಳು ಅಪ್ಸರೆಯರೊಂದಿಗೆ ಕ್ರೀಡಿಸುವಂತೆಯೇ, ಸುಕೇಶನ ಪುತ್ರರು, ವಿವಾಹದ ಬಳಿಕ ತನ್ನ ಪತ್ನಿಯರೊಂದಿಗೆ ಇದ್ದು ಲೌಕಿಕ ಸುಖವನ್ನು ಅನುಭವಿಸಿದರು.॥34½॥

ಮೂಲಮ್ - 35½

ತತೋ ಮಾಲ್ಯವತೋ ಭಾರ್ಯಾ ಸುಂದರೀ ನಾಮ ಸುಂದರೀ ॥
ಸ ತಸ್ಯಾಂ ಜನಯಾಮಾಸ ಯದಪತ್ಯಂ ನಿಬೋಧ ತತ್ ।

ಅನುವಾದ

ಅವರಲ್ಲಿ ಮಾಲ್ಯವಂತನ ಪತ್ನಿಯ ಹೆಸರು ಸುಂದರಿ ಎಂದಿತ್ತು. ಅವಳು ಹೆಸರಿನಂತೆಯೇ ಸುಂದರಳಾಗಿದ್ದಳು. ಮಾಲ್ಯವಂತನು ಆಕೆಯಿಂದ ಪಡೆದ ಸಂತಾನಗಳ ಹೆಸರುಗಳನ್ನು ಹೇಳುತ್ತೇನೆ; ಕೇಳು.॥35½॥

ಮೂಲಮ್ - 36

ವಜ್ರಮುಷ್ಟಿರ್ವಿರೂಪಾಕ್ಷೋ ದುರ್ಮುಖಶ್ಚೈವ ರಾಕ್ಷಸಃ ॥

ಮೂಲಮ್ - 37

ಸುಪ್ತಘ್ನೋ ಯಜ್ಞ ಕೋಪಶ್ಚ ಮತ್ತೋನ್ಮತ್ತೌ ತಥೈವ ಚ ।
ಅನಲಾ ಚಾಭವತ್ಕನ್ಯಾ ಸುಂದರ್ಯಾಂ ನಾಮ ಸುಂದರೀ ॥

ಅನುವಾದ

ವಜ್ರಮುಷ್ಟಿ, ವಿರೂಪಾಕ್ಷ, ದುರ್ಮುಖ, ಸುಪ್ತಘ್ನ, ಯಜ್ಞ ಕೋಪ ಮತ್ತು ಉನ್ಮತ್ತ ಎಂಬ ಏಳು ಪುತ್ರರಿದ್ದರು. ಶ್ರೀರಾಮಾ! ಇವರಲ್ಲದೆ ಸುಂದರಿಯ ಗರ್ಭದಿಂದ ಅನಲಾ ಎಂಬ ಓರ್ವ ಸುಂದರ ಕನ್ಯೆಯು ಹುಟ್ಟಿದ್ದಳು.॥36-37॥

ಮೂಲಮ್ - 38

ಸುಮಾಲೀನೋಽಪಿ ಭಾರ್ಯಾಽಽಸೀತ್ ಪೂರ್ಣಚಂದ್ರನಿಭಾನನಾ ।
ನಾಮ್ನಾ ಕೇತುಮತೀ ರಾಮ ಪ್ರಾಣೇಭ್ಯೋಪಿ ಗರೀಯಸೀ ॥

ಅನುವಾದ

ಸುಮಾಲಿಯ ಪತ್ನೀ ಕೇತುಮತಿಯ ಮುಖ ಪೂರ್ಣಚಂದ್ರನಂತೆ ಮನೋಹರವಾಗಿತ್ತು. ಸುಮಾಲಿಗೆ ಅವಳು ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾಗಿದ್ದಳು.॥38॥

ಮೂಲಮ್ - 39

ಸುಮಾಲೀ ಜನಯಾಮಾಸ ಯದಪತ್ಯಂ ನಿಶಾಚರಃ ।
ಕೇತುಮತ್ಯಾಂ ಮಹಾರಾಜ ತನ್ನಿಬೋಧಾನುಪೂರ್ವಶಃ ॥

ಅನುವಾದ

ಮಹಾರಾಜಾ! ನಿಶಾಚರ ಸುಮಾಲಿಯು ಕೇತುಮತಿಯಿಂದ ಪಡೆದ ಸಂತಾನ ಗಳ ಪರಿಚಯ ಕೊಡುವೆನು, ಕೇಳು.॥39॥

ಮೂಲಮ್ - 40

ಪ್ರಹಸ್ತೋಽಕಂಪನಶ್ಚೈವ ವಿಕಟಃ ಕಾಲಿಕಾಮುಖಃ ।
ಧೂಮ್ರಾಕ್ಷಶ್ಚೈವ ದಂಡಶ್ಚ ಸುಪಾರ್ಶ್ವಶ್ಚ ಮಹಾಬಲಃ ॥

ಮೂಲಮ್ - 41

ಸಂಹ್ರಾದಿಃ ಪ್ರಘಸಶ್ಚೈವ ಭಾಸಕರ್ಣಶ್ಚ ರಾಕ್ಷಸಃ ।
ರಾಕಾ ಪುಷ್ಪೋತ್ಕಟಾ ಚೈವ ಕೈಕಸೀ ಚ ಶುಚಿಸ್ಮಿತಾಃ ॥

ಮೂಲಮ್ - 42

ಕಂಭೀನಸೀ ಚ ಇತ್ಯೇಷೇ ಸುಮಾಲೇಃ ಪ್ರಸವಾಃ ಸ್ಮೃತಾಃ ॥

ಅನುವಾದ

ಪ್ರಹಸ್ತ, ಅಕಂಪನ, ವಿಕಟ, ಕಾಲಿಕಾಮುಖ, ಧೂಮ್ರಾಕ್ಷ, ದಂಡ, ಮಹಾಬಲಿಸುಪಾರ್ಶ್ವ, ಸಂಹ್ರಾದಿ, ಪ್ರಘಸ ಹಾಗೂ ರಾಕ್ಷಸ ಭಾಸಕರ್ಣ ಇವರು ಸುಮಾಲಿಯ ಪುತ್ರರಾಗಿದ್ದರು ಮತ್ತು ರಾಕಾ, ಪುಷ್ಪೋತ್ಕಟಾ, ಕೈಕಸೀ ಮತ್ತು ಕುಂಭೀನಸೀ ಹೀಗೆ ನಾಲ್ವರು ಮಂದಸ್ಮಿತಿಯರಾದ ಕನ್ಯೆಯರಿದ್ದರು. ಇವರೆಲ್ಲರೂ ಸುಮಾಲಿಯ ಸಂತಾನವೆಂದು ಹೇಳುತ್ತಾರೆ.॥40-42॥

ಮೂಲಮ್ - 43

ಮಾಲೇಸ್ತು ವಸುದಾ ನಾಮ ಗಂಧರ್ವೀ ರೂಪಶಾಲಿನೀ ।
ಭಾರ್ಯಾಸೀತ್ಪದ್ಮಪತ್ರಾಕ್ಷೀ ಸ್ವಕ್ಷೀ ಯಕ್ಷೀವರೋಪಮಾ ॥

ಅನುವಾದ

ಮಾಲಿಯ ಪತ್ನೀ ಗಂಧರ್ವಕನ್ಯೆ ರೂಪ-ಸೌಂದರ್ಯ ಸುಶೋಭಿತ ವಸುದಾ ಆಗಿದ್ದಳು. ಆಕೆಯ ನೇತ್ರಗಳು ಅರಳಿದ ಕಮಲದಂತೆ ವಿಶಾಲವಾಗಿ ಸುಂದರವಾಗಿದ್ದವು. ಅವಳು ಶ್ರೇಷ್ಠ ಯಕ್ಷಪತ್ನಿಯರಂತೆ ಸುಂದರಳಾಗಿದ್ದಳು.॥43॥

ಮೂಲಮ್ - 44

ಸುಮಾಲೇರನುಜಸ್ತಸ್ಯಾಂ ಜನಯಾಮಾಸ ಯತ್ ಪ್ರಭೋ ।
ಅಪತ್ಯಂ ಕಥ್ಯಮಾನಂ ತು ಮಯಾ ತ್ವಂ ಶೃಣು ರಾಘವ ॥

ಅನುವಾದ

ಪ್ರಭು ರಘುನಂದನ! ಸುಮಾಲಿಯ ತಮ್ಮ ಮಾಲಿಯು ವಸುದಾಳಿಂದ ಪಡೆದ ಸಂತಾನಗಳನ್ನು ವರ್ಣಿಸುವೆನು, ಕೇಳು.॥44॥

ಮೂಲಮ್ - 45

ಅನಲಶ್ಚಾನಿಲಶ್ಚೈವ ಹರಃ ಸಂಪಾತೀರೇವ ಚ ।
ಏತೇ ವಿಭೀಷಣಾಮಾತ್ಯಾ ಮಾಲೇಯಾಸ್ತೇ ನಿಶಾಚರಾಃ ॥

ಅನುವಾದ

ಅನಲ, ಅನಿಲ, ಹರ ಮತ್ತು ಸಂಪಾತಿ ಹೀಗೆ ನಾಲ್ವರು ನಿಶಾಚರ ಮಾಲಿಯ ಪುತ್ರರಾಗಿದ್ದರು. ಇವರು ಈಗ ವಿಭೀಷಣನ ಮಂತ್ರಿಗಳಾಗಿದ್ದಾರೆ.॥45॥

ಮೂಲಮ್ - 46

ತತಸ್ತು ತೇ ರಾಕ್ಷಸಪುಂಗವಾಸ್ತ್ರಯೋ
ನಿಶಾಚರೈಃ ಪುತ್ರಶತೈಶ್ಚ ಸಂವೃತಾಃ ।
ಸುರಾನ್ಸಹೇಂದ್ರಾನೃಷಿ ನಾಗಯಕ್ಷಾನ್
ಬಬಾಧಿರೇ ತಾನ್ಬಹುವೀರ್ಯದರ್ಪಿತಾಃ ॥

ಅನುವಾದ

ಮಾಲ್ಯವಂತ ಮೊದಲಾದ ಮೂವರೂ ಶ್ರೇಷ್ಠ ರಾಕ್ಷಸರು ತಮ್ಮ ನೂರಾರು ಪುತ್ರರೊಂದಿಗೆ ಹಾಗೂ ಇತರ ನಿಶಾಚರರೊಂದಿಗೆ ಇದ್ದು ತಮ್ಮ ಬಾಹುಬಲದ ಅಭಿಮಾನದಿಂದ ಇಂದ್ರಾದಿ ದೇವತೆಗಳಿಗೆ, ಋಷಿಗಳಿಗೆ, ನಾಗಗಳಿಗೆ, ಯಕ್ಷರಿಗೆ ಪೀಡಿಸತೊಡಗಿದರು.॥46॥

ಮೂಲಮ್ - 47

ಜಗದ್ಭ್ರಮಂತೋಽನಿಲವದ್ದುರಾಸದಾ
ರಣೇಷು ಮೃತ್ಯುಪ್ರತಿಮಾನ ತೇಜಸಃ ।
ವರಪ್ರದಾನಾದಪಿ ಗರ್ವಿತಾ ಭೃಶಂ
ಕ್ರತುಕ್ರಿಯಾಣಾಂ ಪ್ರಶಮಂಕರಾಃ ಸದಾ ॥

ಅನುವಾದ

ಅವರು ಗಾಳಿಯಂತೆ ಜಗತ್ತಿನಲ್ಲಿ ವಿಚರಿಸುತ್ತಿದ್ದರು. ಯುದ್ಧದಲ್ಲಿ ಅವರನ್ನು ಗೆಲ್ಲುವುದು ಕಷ್ಟವಾಗಿತ್ತು. ಮೃತ್ಯುವಿನಂತೆ ತೇಜಸ್ವಿಗಳಾದ ಅವರು ವರಬಲದಿಂದ ಗರ್ವಿತರಾಗಿ, ಯಜ್ಞಾದಿ ಕ್ರಿಯೆಗಳನ್ನು ಸದಾ ವಿನಾಶ ಮಾಡುತ್ತಾ ಇದ್ದರು.॥47॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಐದನೆಯ ಸರ್ಗ ಪೂರ್ಣವಾಯಿತು. ॥5॥