००४ हेति-कुलम्

[ನಾಲ್ಕನೆಯ ಸರ್ಗ]

ಭಾಗಸೂಚನಾ

ರಾಕ್ಷಸವಂಶದ ವರ್ಣನೆ, ಹೇತಿ, ವಿದ್ಯುತ್ಕೇಶ ಮತ್ತು ಸುಕೇಶನ ಉತ್ಪತ್ತಿ

ಮೂಲಮ್ - 1

ಶ್ರುತ್ವಾಗಸ್ತ್ಯೇರಿತಂ ವಾಕ್ಯಂ ರಾಮೋ ವಿಸ್ಮಯಮಾಗತಃ ।
ಕಥಮಾಸೀತ್ತು ಲಂಕಾಯಾಂ ಸಂಭವೋ ರಕ್ಷಸಾಂ ಪುರಾ ॥

ಅನುವಾದ

ಅಗಸ್ತ್ಯರ ಮಾತನ್ನು ಕೇಳಿ ಶ್ರೀರಾಮನಿಗೆ ವಿಸ್ಮಯವಾಯಿತು. ಲಂಕೆಯಲ್ಲಿ ರಾಕ್ಷಸರ ಉತ್ಪತ್ತಿ ಹೇಗಾಯಿತು? ಯಾರಿಂದಾಯಿತು? ಎಂದು ಶ್ರೀರಾಮನು ಯೋಚಿಸಿದನು.॥1॥

ಮೂಲಮ್ - 2

ತತಃ ಶಿರಃ ಕಂಪಯಿತ್ವಾ ತ್ರೇತಾಗ್ನಿಸಮವಿಗ್ರಹಮ್ ।
ತಮಗಸ್ತ್ಯಂ ಮುಹುರ್ದೃಷ್ಟ್ವಾಸ್ಮಯಮಾನೋಽಭ್ಯಭಾಷತ ॥

ಅನುವಾದ

ಶ್ರೀರಾಮನು ಅಚ್ಚರಿಯನ್ನು ಸೂಚಿಸುತ್ತಾ ತಲೆಯಾಡಿಸಿ, ತ್ರೇತಾಗ್ನಿಗಳ ತೇಜದಂತೆ ತೇಜಸ್ಸಿನಂದ ಬೆಳಗುತ್ತಿದ್ದ ಅಗಸ್ತ್ಯರನ್ನು ಪದೇ-ಪದೇ ನೋಡುತ್ತಾ ಮುಗುಳ್ನಗುತ್ತಾ ಕೇಳಿದನ.॥2॥

ಮೂಲಮ್ - 3

ಭಗವನ್ ಪೂರ್ವಮಪ್ಯೇಷಾ ಲಂಕಾಽಽಸೀತ್ ಪಿಶಿತಾಶಿನಾಮ್ ।
ಶ್ರುತ್ವೇದಂ ಭಗವದ್ವಾಕ್ಯಂ ಜಾತೋ ಮೇ ವಿಸ್ಮಯಃ ಪರಃ ॥

ಅನುವಾದ

ಪೂಜ್ಯರೇ ! ಕುಬೇರ ಮತ್ತು ರಾವಣರ ಮೊದಲು ಈ ಲಂಕೆಯು ಮಾಂಸಭೋಜ ರಾಕ್ಷಸರ ಅಧೀನದಲ್ಲಿತ್ತು ಎಂದು ನಿಮ್ಮಿಂದ ಕೇಳಿ ನನಗೆ ಅತ್ಯಂತ ವಿಸ್ಮಯವಾಗಿದೆ.॥3॥

ಮೂಲಮ್ - 4

ಪುಲಸ್ತ್ಯವಂಶಾದುದ್ಭೂತಾ ರಾಕ್ಷಸಾ ಇತಿ ನಃ ಶ್ರುತಮ್ ।
ಇದಾನೀಮನ್ಯತಶ್ಚಾಪಿ ಸಂಭವಃ ಕೀರ್ತಿತಸ್ತ್ವಯಾ ॥

ಅನುವಾದ

ರಾಕ್ಷಸರ ಉತ್ಪತ್ತಿಯು ಪುಸಲ್ತ್ಯರ ವಂಶದಿಂದಾಯಿತು ಎಂದು ನಾವು ಕೇಳಿದ್ದೆವು. ಆದರೆ ಈಗ ನೀವು ಯಾವುದೋ ಬೇರೆ ಕುಲದಿಂದ ರಾಕ್ಷಸರ ಪ್ರಾದುರ್ಭಾವದ ಮಾತನ್ನು ಹೇಳಿದಿರಿ.॥4॥

ಮೂಲಮ್ - 5

ರಾವಣಾತ್ಕುಂಭಕರ್ಣಾಶ್ಚ ಪ್ರಹಸ್ತಾದ್ ವಿಕಟಾದಪಿ ।
ರಾವಣಸ್ಯ ಚ ಪುತ್ರೇಭ್ಯಃ ಕಿಂ ನು ತೇ ಬಲವತ್ತರಾಃ ॥

ಅನುವಾದ

ಆ ಮೊದಲಿನ ರಾಕ್ಷಸರು ರಾವಣ, ಕುಂಭಕರ್ಣ, ಪ್ರಹಸ್ತ, ವಿಕಟ, ರಾವಣ ಪುತ್ರರಿಗಿಂತಲೂ ಹೆಚ್ಚು ಬಲಿಷ್ಠರಾಗಿದ್ದರೇನು.॥5॥

ಮೂಲಮ್ - 6

ಕ ಏಷಾಂ ಪೂರ್ವಕೋ ಬ್ರಹ್ಮನ್ ಕಿಂ ನಾಮಾ ಚ ಬಲೋತ್ಕಟಃ ।
ಅಪರಾಧಂ ಚ ಕಂ ಪ್ರಾಪ್ಯ ವಿಷ್ಣುನಾ ದ್ರಾವಿತಾಃ ಕಥಮ್ ॥

ಅನುವಾದ

ಬ್ರಹ್ಮನ್! ಅವರ ಪೂರ್ವಜನು ಯಾರು? ಅಂತಹ ಬಲೋತ್ಕಟ ರಾಕ್ಷಸ ರಾಜನ ಹೆಸರೇನು? ಯಾವ ಅಪರಾಧಕ್ಕಾಗಿ ವಿಷ್ಣು ಲಂಕೆಯಿಂದ ಅವರನ್ನು ಓಡಿಸಿದನು.॥6॥

ಮೂಲಮ್ - 7

ಏತದ್ವಿಸ್ತರತಃ ಸರ್ವಂ ಕಥಯಸ್ವ ಮಮಾನಘ ।
ಕುತೂಹಲಮಿದಂ ಮಹ್ಯಂ ನುದ ಭಾನುರ್ಯಥಾ ತಮಃ ॥

ಅನುವಾದ

ಪುಣ್ಯಾತ್ಮರೇ ! ಇದೆಲ್ಲವನ್ನು ನೀವು ನನಗೆ ವಿಸ್ತಾರವಾಗಿ ತಿಳಿಸಿರಿ. ಇದರ ಕುರಿತು ನನ್ನ ಮನಸ್ಸಿನಲ್ಲಿ ಕುತೂಹಲವಿದೆ. ಸೂರ್ಯನು ಅಂಧಕಾರ ಕಳೆಯುವಂತೆಯೇ ನೀವು ನನ್ನ ಕುತೂಹಲವನ್ನು ನಿವಾರಣೆ ಮಾಡಿರಿ.॥7॥

ಮೂಲಮ್ - 8

ರಾಘವಸ್ಯ ವಚಃ ಶ್ರುತ್ವಾ ಸಂಸ್ಕಾರಾಲಂಕೃತಂ ಶುಭಮ್ ।
ಅಥ ವಿಸ್ಮಯಮಾನಸ್ತಮಗಸ್ತ್ಯಃ ಪ್ರಾಹ ರಾಘವಮ್ ॥

ಅನುವಾದ

ಶ್ರೀರಾಮನ ಆ ಸುಂದರವಾಣಿಯು ಪದಸಂಸ್ಕಾರ, ವಾಕ್ಯಸಂಸ್ಕಾರ ಮತ್ತು ಅರ್ಥಸಂಸ್ಕಾರದಿಂದ ಅಲಂಕೃತ ವಾಗಿತ್ತು. ಅದನ್ನು ಕೇಳಿ, ಇವನು ಸರ್ವಜ್ಞನಾಗಿದ್ದರೂ ತಿಳಿಯದವನಂತೆ ನನ್ನಲ್ಲಿ ಕೇಳುತ್ತಿದ್ದಾನಲ್ಲ ಎಂದು ಯೋಚಿಸಿ ಅಗಸ್ತ್ಯರಿಗೆ ವಿಸ್ಮಯವಾಯಿತು. ಮತ್ತೆ ಅವರು ಶ್ರೀರಾಮನಲ್ಲಿ ಹೇಳಿದರು.॥8॥

ಮೂಲಮ್ - 9

ಪ್ರಜಾಪತಿಃ ಪುರಾ ಸೃಷ್ಟ್ವಾ ಅಪಃ ಸಲಿಲಸಂಭವಃ ।
ತಾಸಾಂ ಗೋಪಾಯನೇ ಸತ್ತ್ವಾನಸೃಜತ್ ಪದ್ಮಸಂಭವಃ ॥

ಅನುವಾದ

ರಘುನಂದನ! ಪದ್ಮಸಂಭವ ಪ್ರಜಾಪತಿ ಬ್ರಹ್ಮದೇವರು ಮೊದಲು ನೀರನ್ನು (ಸಮುದ್ರವನ್ನು) ಸೃಷ್ಟಿಸಿ, ಅದನ್ನು ರಕ್ಷಿಸಲು ಅನೇಕ ರೀತಿಯ ಜಲ-ಜಂತುಗಳನ್ನು ನಿರ್ಮಿಸಿದರು.॥9॥

ಮೂಲಮ್ - 10

ತೇ ಸತ್ತ್ವಾಃ ಸತ್ತ್ವಕರ್ತಾರಂ ವಿನೀತವದುಪಸ್ಥಿತಾಃ ।
ಕಿಂ ಕುರ್ಮ ಇತಿ ಭಾಷಂತಃ ಕ್ಷುತ್ಪಿಪಾಸಾಭಯಾದಿತಾಃ ॥

ಅನುವಾದ

ಆ ಜೀವ-ಜಂತುಗಳು ಹಸಿವು- ಬಾಯಾರಿಕೆ ಯಿಂದ ಕಂಗೆಟ್ಟು ‘ಈಗ ನಾವೇನು ಮಾಡುವುದು?’ ಎಂದು ಹೇಳುತ್ತಾ ತಮ್ಮ ಜನ್ಮದಾತ ಬ್ರಹ್ಮದೇವರ ಬಳಿಗೆ ವಿನೀತರಾಗಿ ಹೋದವು.॥10॥

ಮೂಲಮ್ - 11

ಪ್ರಜಾಪತಿಸ್ತು ತಾನ್ಸರ್ವಾನ್ ಪ್ರತ್ಯಾಹ ಪ್ರಹಸನ್ನಿವ ।
ಆಭಾಷ್ಯವಾಚಾ ಯತ್ನೇನ ರಕ್ಷಧ್ವಮಿತಿ ಮಾನದ ॥

ಅನುವಾದ

ಮಾನದ! ಇವೆಲ್ಲರೂ ಬಂದಿರುವುದನ್ನು ನೋಡಿ ಪ್ರಜಾಪತಿಯು ಅವರನ್ನು ಸಂಬೋಧಿಸಿ ನಗುತ್ತಾ ಜಲ- ಜಂತುಗಳೇ! ನೀವು ಪ್ರಯತ್ನಪೂರ್ವಕ ಈ ನೀರನ್ನು ರಕ್ಷಿಸಿರಿ ಎಂದು ಹೇಳಿದರು.॥11॥

ಮೂಲಮ್ - 12

ರಕ್ಷಾಮ ಇತಿ ತತ್ರಾನ್ಯೈರ್ಯಕ್ಷಾಮ ಇತಿ ಚಾಪರೈಃ ।
ಭುಂಕ್ಷಿತಾಭುಂಕ್ಷಿತೈರುಕ್ತಸ್ತತಸ್ತಾನಾಹ ಭೂತಕೃತ್ ॥

ಅನುವಾದ

ಆ ಹಸಿದವರಲ್ಲಿ ಕೆಲವರು ಕೇಳಿದರು - ನಾವು ಈ ಜಲವನ್ನು (ರಕ್ಷಾಮ) ರಕ್ಷಿಸುವೆವು ಮತ್ತು ಇನ್ನೂ ಕೆಲವರು ನಾವು ಇದನ್ನು (ಯಕ್ಷಾಮ) ಪೂಜಿಸುವೆವು ಎಂದು ಹೇಳಿದವು. ಆಗ ಭೂತಕರ್ತೃನಾದ ಪ್ರಜಾಪತಿಯು ಹೇಳಿದರು.॥12॥

ಮೂಲಮ್ - 13

ರಕ್ಷಾಮ ಇತಿ ಯೈರುಕ್ತಂ ರಾಕ್ಷಸಾಸ್ತೇ ಭವಂತು ವಃ ।
ಯಕ್ಷಾಮ ಇತಿ ಯೈರುಕ್ತಂ ಯಕ್ಷಾ ಏವ ಭವಂತು ವಃ ॥

ಅನುವಾದ

ನಿಮ್ಮಲ್ಲಿ ಯಾರು ‘ರಕ್ಷಾಮ’ ಎಂದು ಹೇಳಿದಿರೋ ಅವರೆಲ್ಲರೂ ರಾಕ್ಷಸರಾಗಿರಿ. ‘ಯಕ್ಷಾಮ’ ಎಂದು ಹೇಳಿರು ವವರು ಯಕ್ಷರೆಂದು ಪ್ರಸಿದ್ಧರಾಗಿರಿ. ಹೀಗೆ ಆ ಜೀವಿಗಳು ರಾಕ್ಷಸ ಮತ್ತು ಯಕ್ಷರಾದರು.॥13॥

ಮೂಲಮ್ - 14

ತತ್ರ ಹೇತಿಃ ಪ್ರಹೇತಿಶ್ಚ ಭ್ರಾತರೌ ರಾಕ್ಷಸಾಧಿಪೌ ।
ಮಧುಕೈಟಭ ಸಂಕಾಶೌ ಬಭೂವತುರರಿಂದಮೌ ॥

ಅನುವಾದ

ಆ ರಾಕ್ಷಸರಲ್ಲಿ ಹೇತಿ ಮತ್ತು ಪ್ರಹೇತಿ ಎಂಬ ಇಬ್ಬರು ಸಹೋದರರಿದ್ದರು. ಇವರು ಸಮಸ್ತ ರಾಕ್ಷಸರ ಅಧಿಪತಿಗಳಾಗಿದ್ದರು. ಶತ್ರುದಮನ ಸಮರ್ಥರಾದ ಅವರಿಬ್ಬರು ಮಧು-ಕೈಟಭರಂತೆ ಶಕ್ತಿವಂತರಾಗಿದ್ದರು.॥14॥

ಮೂಲಮ್ - 15

ಪ್ರಹೇತಿರ್ಧಾರ್ಮಿಕಸ್ತತ್ರ ತಪೋವನ ಗತಸ್ತದಾ ।
ಹೇತಿರ್ದಾರಕ್ರಿಯಾರ್ಥೇ ತು ಪರಂ ಯತ್ನಮಥಾಕರೋತ್ ॥

ಅನುವಾದ

ಅವರಲ್ಲಿ ಪ್ರಹೇತಿ ಧರ್ಮಾತ್ಮನಾಗಿದ್ದನು, ಅದರಿಂದ ಅವನು ಕೂಡಲೇ ತಪೋವನಕ್ಕೆ ಹೋಗಿ ತಪಸ್ಸಿಗೆ ತೊಡಗಿದನು. ಆದರೆ ಹೇತಿಯು ವಿವಾಹಕ್ಕಾಗಿ ಭಾರೀ ಪ್ರಯತ್ನ ಮಾಡಿದನು.॥15॥

ಮೂಲಮ್ - 16

ಸ ಕಾಲಭಗಿನೀಂ ಕನ್ಯಾಂ ಭಯಾಂ ನಾಮ ಮಹಾಭಯಾಮ್ ।
ಉದಾವಹದಮೇಯಾತ್ಮಾಸ್ವಯಮೇವ ಮಹಾಮತಿಃ ॥

ಅನುವಾದ

ಅವನು ಆತ್ಮಬಲಸಂಪನ್ನ ಹಾಗೂ ಬುದ್ಧಿವಂತನಾಗಿದ್ದನು. ಅವನು ಸ್ವತಃ ಯಾಚಿಸಿ ಕಾಲನ ತಂಗಿ ಭಯಾನಕಳಾದ ಕುಮಾರಿ ಭಯಾ ಎಂಬುವಳೊಡನೆ ವಿವಾಹವಾದನು.॥16॥

ಮೂಲಮ್ - 17

ಸ ತಸ್ಯಾಂ ಜನಯಾಮಾಸ ಹೇತೀ ರಾಕ್ಷಸಪುಂಗವಃ ।
ಪುತ್ರಂ ಪುತ್ರವತಾಂ ಶ್ರೇಷ್ಠೋ ವಿದ್ಯುತ್ಕೇಶಮಿತಿ ಶ್ರುತಮ್ ॥

ಅನುವಾದ

ರಾಕ್ಷಸರಾಜ ಹೇತಿಯು ಭಯಾಳ ಗರ್ಭದಿಂದ ಒಂದು ಪುತ್ರನನ್ನು ಪಡೆದು, ಅವನು ವಿದ್ಯುತ್ಕೇಶನೆಂದು ಪ್ರಸಿದ್ಧನಾಗಿದ್ದನು. ಅವನ ಹುಟ್ಟಿನಿಂದ ಹೇತಿಯು ತಾನು ಶ್ರೇಷ್ಠ ಪುತ್ರವಂತನೆಂದು ತಿಳಿದನು.॥17॥

ಮೂಲಮ್ - 18

ವಿದ್ಯುತ್ಕೇಶೋ ಹೇತಿಪುತ್ರಃ ಸ ದೀಪ್ತಾರ್ಕಸಮಪ್ರಭಃ ।
ವ್ಯವರ್ಧತ ಮಹಾತೇಜಾಸ್ತೋಯಮಧ್ಯ ಇವಾಂಬುಜಮ್ ॥

ಅನುವಾದ

ಹೇತಿಪುತ್ರ ವಿದ್ಯುತ್ಕೇಶಿ ಸೂರ್ಯನಂತೆ ಪ್ರಕಾಶಿಸುತ್ತಿದ್ದನು. ಆ ಮಹಾತೇಜಸ್ವೀ ಬಾಲಕನು ನೀರಿನಲ್ಲಿ ಕಮಲದಂತೆ ದಿನದಿಂದ ದಿನಕ್ಕೆ ಬೆಳೆಯತೊಡಗಿದನು.॥18॥

ಮೂಲಮ್ - 19

ಸ ಯದಾ ಯೌವನಂ ಭದ್ರಮನುಪ್ರಾಪ್ತೋ ನಿಶಾಚರಃ ।
ತತೋ ದಾರಕ್ರಿಯಾಂ ತಸ್ಯ ಕರ್ತುಂ ವ್ಯವಸಿತಃ ಪಿತಾ ॥

ಅನುವಾದ

ನಿಶಾಚರ ವಿದ್ಯುತ್ಕೇಶಿಯು ಬೆಳೆದು ಯುವಕನಾದಾಗ ಅವನ ತಂದೆ ಹೇತಿಯು ಮಗನ ಮದುವೆ ಮಾಡಲು ನಿಶ್ಚಯಿಸಿದನು.॥19॥

ಮೂಲಮ್ - 20

ಸಂಧ್ಯಾದುಹಿತರಂ ಸೋಽಥ ಸಂಧ್ಯಾತುಲ್ಯಾಂ ಪ್ರಭಾವತಃ ।
ವರಯಾಮಾಸ ಪುತ್ರಾರ್ಥಂ ಹೇತೀ ರಾಕ್ಷಸಪುಂಗವಃ ॥

ಅನುವಾದ

ರಾಕ್ಷಸಶ್ರೇಷ್ಠ ಹೇತಿಯು ತನ್ನ ಮಗನ ಮದುವೆಗಾಗಿ ಸಂಧ್ಯೆಯ ಪುತ್ರಿಯನ್ನು, ತಾಯಿ ಸಂಧ್ಯೆಯಂತೆಯೇ ಇದ್ದ ವಳನ್ನು ವರಿಸಿದನು.॥20॥

ಮೂಲಮ್ - 21

ಅವಶ್ಯಮೇವ ದಾತವ್ಯಾ ಪರಸ್ಮೈ ಸೇತಿ ಸಂಧ್ಯಯಾ ।
ಚಿಂತಯಿತ್ವಾ ಸುತಾ ದತ್ತಾ ವಿದ್ಯುತ್ಕೇಶಾಯ ರಾಘವ ॥

ಅನುವಾದ

ರಘುನಂದನ! ಕನ್ಯೆಯನ್ನು ಬೇರೆ ಯಾರೊಂದಿಗಾದರೂ ಮದುವೆ ಅವಶ್ಯ ಮಾಡಬೇಕು; ಆದ್ದರಿಂದ ಇವನೊಂದಿಗೆ ಏಕೆ ಮಾಡಬಾರದು? ಎಂದು ಯೋಚಿಸಿ, ಸಂಧ್ಯೆಯು ತನ್ನ ಪುತ್ರಿಯನ್ನು ವಿದ್ಯುತ್ಕೇಶಿಗೆ ಕೊಟ್ಟು ಮದುವೆ ಮಾಡಿದಳು.॥21॥

ಮೂಲಮ್ - 22

ಸಂಧ್ಯಾಯಾಸ್ತನಯಾಂ ಲಬ್ಧ್ವಾ ವಿದ್ಯುತ್ಕೇಶೋ ನಿಶಾಚರಃ ।
ರಮತೇ ಸ ತಯಾ ಸಾರ್ಧಂ ಪೌಲೋಮ್ಯಾ ಮಘವಾನಿವ ॥

ಅನುವಾದ

ಸಂಧ್ಯೆಯ ಪುತ್ರಿಯನ್ನು ಪಡೆದು ನಿಶಾಚರ ವಿದ್ಯುತ್ಕೇಶಿಯು ಆಕೆಯೊಂದಿಗೆ, ದೇವೇಂದ್ರನು ಪುಲೋಮಪುತ್ರಿ ಶಚಿಯೊಂದಿಗೆ ವಿಹರಿಸಿದಂತೆ ವಿಹರಿಸಿದನು.॥22॥

ಮೂಲಮ್ - 23

ಕೇನಚಿತ್ತ್ವಥ ಕಾಲೇನ ರಾಮ ಸಾಲಕಟಂಕಟಾ ।
ವಿದ್ಯುತ್ಕೇಶಾದ್ಗರ್ಭಮಾಪ ಘನರಾಜಿರಿವಾರ್ಣವಾತ್ ॥

ಅನುವಾದ

ಶ್ರೀರಾಮಾ! ಸಂಧ್ಯೆಯ ಆ ಪುತ್ರಿಯ ಹೆಸರು ಸಾಲಕಂಟಕಾ ಎಂದಿತ್ತು. ಕೆಲ ಸಮಯದಲ್ಲಿ ಅವಳು ಮೇಘಪಂಕ್ತಿಗಳು ಸಮುದ್ರದಿಂದ ಜಲವನ್ನು ಗ್ರಹಿಸುವಂತೆ ವಿದ್ಯುತ್ಕೇಶಿಯಿಂದ ಗರ್ಭವನ್ನು ಧರಿಸಿದಳು.॥23॥

ಮೂಲಮ್ - 24

ತತಃ ಸಾ ರಕ್ಷಸೀ ಗರ್ಭಂ ಘನಗರ್ಭ ಸಮಪ್ರಭಮ್ ।
ಪ್ರಸೂತಾ ಮಂದರಂ ಗತ್ವಾ ಗಂಗಾ ಗರ್ಭಮಿವಾಗ್ನಿಜಮ್ ।
ಸಮುತ್ಸೃಜ್ಯ ತು ಸಾಗರ್ಭಂ ವಿದ್ಯುತ್ಕೇಶರತಾರ್ಥಿನೀ ॥

ಅನುವಾದ

ಬಳಿಕ ಆ ರಾಕ್ಷಸಿಯು ಮಂದರಾಚಲಕ್ಕೆ ಹೋಗಿ, ಗಂಗೆಯು ಅಗ್ನಿಯು ಬಿಟ್ಟ ಶಿವನಂತೇಜಃಸ್ವರೂಪಿ ಗರ್ಭವನ್ನು (ಕುಮಾರ ಕಾರ್ತಿಕೇಯ) ಉತ್ಪನ್ನಗೊಳಿಸಿದಂತೆ, ವಿದ್ಯುತ್ತಿನ ಕಾಂತಿಯುಳ್ಳ ಬಾಲಕನಿಗೆ ಜನ್ಮನೀಡಿದಳು. ಆ ನವಜಾತ ಶಿಶುವನನ್ನು ಅಲ್ಲೇ ಬಿಟ್ಟು ಅವಳು ವಿದ್ಯುತ್ಕೇಶನೊಂದಿಗೆ ರತಿಕ್ರೀಡೆಗೆ ತೆರಳಿದಳು.॥24॥

ಮೂಲಮ್ - 25

ರೇಮೇ ತು ಸಾರ್ಧಂ ಪತಿನಾ ವಿಸ್ಮೃತ್ಯ ಸುತಮಾತ್ಮಜಮ್ ।
ಉತ್ಸೃಷ್ಟಸ್ತು ತದಾ ಗರ್ಭೋ ಘನಶಬ್ದ ಸಮಸ್ವನಃ ॥

ಅನುವಾದ

ತನ್ನ ಮಗುವನ್ನು ಮರೆತು ಸಾಲಕಂಟಕಾ ಪತಿಯೊಂದಿಗೆ ರಮಿಸತೊಡಗಿದಳು. ಅತ್ತ ಆಕೆಯು ಬಿಟ್ಟ ಗರ್ಭವು ಮೇಘಗಂಭೀರ ಗರ್ಜನೆಯಂತೆ ಶಬ್ದ ಮಾಡತೊಡಗಿತು.॥25॥

ಮೂಲಮ್ - 26

ತಯೋತ್ಸೃಷ್ಟಃ ಸ ತು ಶಿಶುಃ ಶರದರ್ಕ ಸಮದ್ಯುತಿಃ ।
ನಿಧಾಯಾಸ್ಯೇ ಸ್ವಯಂ ಮುಷ್ಟಿಂ ರುರೋದ ಶನಕೈಸ್ತದಾ ॥

ಅನುವಾದ

ಅದರ ಶರೀರಕಾಂತಿಯು ಶರತ್ಕಾಲದ ಸೂರ್ಯನಂತೆ ಬೆಳಗುತ್ತಿತ್ತು. ತಾಯಿಯು ಬಿಟ್ಟ ಆ ಶಿಶುವು ತನ್ನ ಮುಷ್ಟಿಯನ್ನೇ ಬಾಯಿಗೆ ಹಾಕಿ ಅಳತೊಡಗಿತು.॥26॥

ಮೂಲಮ್ - 27

ತತೋ ವೃಷಭಮಾಸ್ಥಾಯ ಪಾರ್ವತ್ಯಾ ಸಹಿತಃ ಶಿವಃ ।
ವಾಯುಮಾರ್ಗೇಣ ಗಚ್ಛನ್ವೈ ಶುಶ್ರಾವ ರುದಿತಸ್ವನಮ್ ॥

ಅನುವಾದ

ಆಗ ಭಗವಾನ್ ಶಂಕರನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಆಕಾಶಮಾರ್ಗವಾಗಿ ಹೋಗುತ್ತಿದ್ದನು. ಅವರು ಬಾಲಕನ ಅಳುವಿನ ದನಿ ಕೇಳಿದರು.॥27॥

ಮೂಲಮ್ - 28½

ಅಪಶ್ಯದುಮಯಾ ಸಾರ್ಧಂ ರುದಂತಂ ರಾಕ್ಷಸಾತ್ಮಜಮ್ ।
ಕಾರುಣ್ಯಭಾವಾತ್ ಪಾರ್ವತ್ಯಾ ಭವಸ್ತ್ರಿಪುರಸೂದನಃ ॥
ತಂ ರಾಕ್ಷಸಾತ್ಮಜಂ ಚಕ್ರೇ ಮಾತುರೇವ ವಯಃಸಮಮ್ ।

ಅನುವಾದ

ಪಾರ್ವತೀಸಹಿತ ಶಿವನು ಅಳುತ್ತಿರುವ ಆ ರಾಕ್ಷಸಕುಮಾರನ ಕಡೆಗೆ ನೋಡಿದರು. ಅದರ ದಯನೀಯ ಸ್ಥಿತಿಯನ್ನು ನೋಡಿ ಮಾತೆ ಪಾರ್ವತಿಯ ಹೃದಯದಲ್ಲಿ ಕರುಣೆಯ ಸ್ರೋತ ಹರಿಯಿತು. ಅವಳ ಪ್ರೇರಣೆಯಿಂದ ತ್ರಿಪುರಸೂದನ ಭಗವಾನ್ ಶಿವನು ಆ ರಾಕ್ಷಸ ಬಾಲಕನನ್ನು ಅದರ ತಾಯಿಯಂತೆಯೇ ತರುಣನನ್ನಾಗಿಸಿದನು.॥28½॥

ಮೂಲಮ್ - 29½

ಅಮರಂ ಚೈವ ತಂ ಕೃತ್ವಾ ಮಹಾದೇವೋಽಕ್ಷರೋವ್ಯಯಃ ॥
ಪುರಮಾಕಾಶಗಂ ಪ್ರಾದಾತ್ ಪಾರ್ವತ್ಯಾಃ ಪ್ರಿಯಕಾಮ್ಯಯಾ ।

ಅನುವಾದ

ಇಷ್ಟೇ ಅಲ್ಲದೆ ಪಾರ್ವತಿಯ ಪ್ರಿಯವನ್ನು ಮಾಡುವ ಇಚ್ಛೆಯಿಂದ ಅವಿನಾಶೀ, ನಿರ್ವಿಕಾರ ಭಗವಾನ್ ಮಹಾದೇವನು ಆ ಬಾಲಕನನ್ನು ಅಮರನಾಗಿಸಿ, ಅವನಿಗೆ ಇರಲು ಒಂದು ಆಕಾಶಚಾರಿ ನಗರಾಕಾರ ವಿಮಾನವನ್ನು ಕೊಟ್ಟನು.॥29½॥

ಮೂಲಮ್ - 30

ಉಮಯಾಪಿ ವರೋ ದತ್ತೋ ರಾಕ್ಷಸೀನಾಂ ನೃಪಾತ್ಮಜ ॥

ಮೂಲಮ್ - 31

ಸದ್ಯೋಪಲಬ್ಧಿರ್ಗರ್ಭಸ್ಯ ಪ್ರಸೂತಿಃ ಸದ್ಯ ಏವ ಚ ।
ಸದ್ಯ ಏವ ವಯಃಪ್ರಾಪ್ತಿಂ ಮಾತುರೇವ ವಯಃಸಮಮ್ ॥

ಅನುವಾದ

ರಾಜಕುಮಾರ! ಅನಂತರ ಪಾರ್ವತಿಯೂ - ‘ಇಂದಿನಿಂದ ರಾಕ್ಷಸಿಯರು ಬೇಗನೇ ಗರ್ಭ ಧರಿಸುವರು; ಮತ್ತೆ ಬೇಗನೇ ಪ್ರಸವ ಮಾಡುವರು. ಹುಟ್ಟಿದ ಬಾಲಕನು ಕೂಡಲೇ ಬೆಳೆದು ತಾಯಿಯಂತೆಯೇ ತರುಣರಾಗುವರು’ ಎಂದು ವರವನ್ನು ಕೊಟ್ಟಳು.॥30-31॥

ಮೂಲಮ್ - 32

ತತಃ ಸುಕೇಶೋ ವರದಾನಗರ್ವಿತಃ
ಶ್ರಿಯಂ ಪ್ರಭೋಃ ಪ್ರಾಪ್ಯ ಹರಸ್ಯ ಪಾರ್ಶ್ವತಃ ।
ಚಚಾರ ಸರ್ವತ್ರ ಮಹಾನ್ಮಹಾಮತಿಃ
ಖಗಂ ಪುರಂ ಪ್ರಾಪ್ಯ ಪುರಂದರೋ ಯಥಾ ॥

ಅನುವಾದ

ವಿದ್ಯುತ್ಕೇಶನ ಆ ಪುತ್ರನು ಸುಕೇಶನೆಂದು ಪ್ರಸಿದ್ಧನಾದನು. ಅವನು ಬಹಳ ಬುದ್ಧಿವಂತನಾಗಿದ್ದನು. ಶಂಕರನ ವರವನ್ನು ಪಡೆದಿದ್ದರಿಂದ ಅವನಿಗೆ ಭಾರೀ ಗರ್ವವುಂಟಾಯಿತು ಹಾಗೂ ಪರಮೇಶ್ವರನಿಂದ ಅದ್ಭುತ ಸಂಪತ್ತನ್ನು ಹಾಗೂ ಆಕಾಶಚಾರೀ ವಿಮಾನವನ್ನು ಪಡೆದು ದೇವೇಂದ್ರನಂತೆ ಎಲ್ಲೆಡೆ ಅಡೆ-ತಡೆ ಇಲ್ಲದೆ ಸಂಚರಿಸತೊಡಗಿದನು.॥32॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರ ಕಾಂಡದಲ್ಲಿ ನಾಲ್ಕನೆಯ ಸರ್ಗ ಪೂರ್ಣವಾಯಿತು. ॥4॥