[ಮೂರನೆ ಸರ್ಗ]
ಭಾಗಸೂಚನಾ
ವಿಶ್ರವನಿಂದ ವೈಶ್ರವಣ(ಕುಬೇರ)ನ ಉತ್ಪತ್ತಿ, ಅವನ ತಪಸ್ಸು, ವರಪ್ರಾಪ್ತಿ, ಲಂಕೆಯಲ್ಲಿ ನಿವಾಸ
ಮೂಲಮ್ - 1
ಅಥ ಪುತ್ರಃ ಪುಲಸ್ತ್ಯಸ್ಯ ವಿಶ್ರವಾ ಮುನಿಪುಂಗವಃ ।
ಅಚಿರೇಣೈವ ಕಾಲೇನ ಪಿತೇವ ತಪಸಿ ಸ್ಥಿತಃ ॥
ಅನುವಾದ
ಪುಲಸ್ತ್ಯರ ಪುತ್ರ ಮುನಿವರ ವಿಶ್ರವಸನು ತಂದೆಯಂತೆ ತಪಸ್ಸಿಗೆ ತೊಡಗಿದನು.॥1॥
ಮೂಲಮ್ - 2
ಸತ್ಯವಾನ್ ಶೀಲವಾನ್ ದಾಂತಃ ಸ್ವಾಧ್ಯಾಯ ನಿರತಃ ಶುಚಿಃ ।
ಸರ್ವಭೋಗೇಷ್ವ ಸಂಸಕ್ತೋ ನಿತ್ಯಂ ಧರ್ಮಪರಾಯಣಃ ॥
ಅನುವಾದ
ಅವನು ಸತ್ಯವಾದಿಯೂ, ಶೀಲವಂತನೂ, ಜಿತೇಂದ್ರಿಯನೂ, ಸದಾ ಧರ್ಮತತ್ಪರನೂ ಆಗಿದ್ದನು.॥2॥
ಮೂಲಮ್ - 3
ಜ್ಞಾತ್ವಾ ತಸ್ಯ ತು ತದ್ವತ್ತಂ ಭರದ್ವಾಜೋ ಮಹಾಮುನಿಃ ।
ದದೌ ವಿಶ್ರವಸೇ ಭಾರ್ಯಾಂ ಸ್ವಸುತಾಂ ದೇವವರ್ಣಿನೀಮ್ ॥
ಅನುವಾದ
ವಿಶ್ರವಸನ ಉತ್ತಮ ಆಚರಣವನ್ನು ತಿಳಿದು ಮಹಾಮುನಿ ಭರದ್ವಾಜರು ದೇವಾಂಗನೆಯಂತೆ ಸುಂದರಳಾದ ತಮ್ಮ ಕನ್ಯೆಯನ್ನು ಅವರಿಗೆ ಮದುವೆಮಾಡಿ ಕೊಟ್ಟನು.॥3॥
ಮೂಲಮ್ - 4
ಪ್ರತಿಗೃಹ್ಯ ತು ಧರ್ಮೇಣ ಭರದ್ವಾಜಸುತಾಂ ತದಾ ।
ಪ್ರಜಾನ್ವೀಕ್ಷಿಕಯಾ ಬುದ್ಧ್ಯಾ ಶ್ರೇಯೋ ಹ್ಯಸ್ಯ ವಿಚಿಂತಯನ್ ॥
ಮೂಲಮ್ - 5
ಮುದಾ ಪರಮಯಾ ಯುಕ್ತೋ ವಿಶ್ರವಾ ಮುನಿಪುಂಗವಃ ।
ಸ ತಸ್ಯಾಂ ವೀರ್ಯಸಂಪನ್ನಮಪತ್ಯಂ ಪರಮಾದ್ಭುತಮ್ ॥
ಮೂಲಮ್ - 6
ಜನಯಾಮಾಸ ಧರ್ಮಜ್ಞಃ ಸರ್ವೈ ಬ್ರಹ್ಮಗುಣೈವೃತಮ್ ।
ತಸ್ಮಿನ್ ಜಾತೇ ತು ಸಂಹೃಷ್ಟಃ ಸ ಬಭೂವ ಪಿತಾಮಹಃ ॥
ಅನುವಾದ
ಧರ್ಮಜ್ಞನಾದ ಮುನಿವರ ವಿಶ್ರವಸನು ಸಂತೋಷದಿಂದ ಧರ್ಮಾನುಸಾರ ಭಾರದ್ವಾಜರ ಕನ್ಯೆಯ ಪಾಣಿಗ್ರಹಣ ಮಾಡಿಕೊಂಡು, ಪ್ರಜೆಯ ಹಿತವನ್ನು ಚಿಂತಿಸಿ, ಲೋಕಕಲ್ಯಾಣದ ವಿಚಾರಮಾಡಿ ಆಕೆಯ ಗರ್ಭದಿಂದ ಅದ್ಭುತ ಪರಾಕ್ರಮಿ ಒಬ್ಬ ಪುತ್ರನನ್ನು ಉತ್ಪನ್ನ ಮಾಡಿದರು. ಅವನಲ್ಲಿ ಬ್ರಾಹ್ಮಣೋಚಿತ ಎಲ್ಲ ಗುಣಗಳೂ ಇದ್ದವು. ಅವನ ಜನ್ಮದಿಂದ ಅಜ್ಜ ಪುಲಸ್ತ್ಯರಿಗೆ ಬಹಳ ಸಂತೋಷವಾಯಿತು.॥4-6॥
ಮೂಲಮ್ - 7
ದೃಷ್ಟ್ವಾ ಶ್ರೇಯಸ್ಕರೀಂ ಬುದ್ಧಿಂ ಧನಾಧ್ಯಕ್ಷೋ ಭವಿಷ್ಯತಿ ।
ನಾಮ ಚಾಸ್ಯಾಕರೋತ್ಪ್ರೀತಃ ಸಾರ್ಧಂ ದೇವರ್ಷಿಭಿಸ್ತದಾ ॥
ಅನುವಾದ
‘ಈ ಬಾಲಕನಲ್ಲಿ ಜಗತ್ತಿನ ಶ್ರೇಯಸ್ಸು ಮಾಡುವ ಬುದ್ಧಿ ಇದ್ದು, ಇವನು ಮುಂದೆ ಧನಾಧ್ಯಕ್ಷನಾಗುವನು’, ಎಂದು ದಿವ್ಯದೃಷ್ಟಿಯಿಂದ ತಿಳಿದು, ಹರ್ಷಗೊಂಡು ದೇವರ್ಷಿಗಳೊಂದಿಗೆ ಅವನ ನಾಮಕರಣ ಮಾಡಿದರು.॥7॥
ಮೂಲಮ್ - 8
ಯಸ್ಮಾದ್ ವಿಶ್ರವಸೋಽಪತ್ಯಂ ಸಾದೃಶ್ಯಾದ್ವಿಶ್ರವಾ ಇವ ।
ತಸ್ಮಾದ್ವೈಶ್ರವಣೋ ನಾಮ ಭವಿಷ್ಯತ್ಯೇಷ ವಿಶ್ರುತಃ ॥
ಅನುವಾದ
‘ವಿಶ್ರವಸ್ಸುವಿನ ಈ ಪುತ್ರನು ತಂದೆಯಂತೆ ಹುಟ್ಟಿರುವನು, ಅದಕ್ಕಾಗಿ ಇವನು ವೈಶ್ರವಣನೆಂದು ವಿಖ್ಯಾತನಾಗುವನು’ ಎಂದು ಹೇಳಿದರು.॥8॥
ಮೂಲಮ್ - 9
ಸ ತು ವೈಶ್ರವಣಸ್ತತ್ರ ತಪೋವನಗತಸ್ತದಾ ।
ಅವರ್ಧತಾಹುತಿಹುತೋ ಮಹಾತೇಜಾ ಯಥಾನಲಃ ॥
ಅನುವಾದ
ಕುಮಾರ ವೈಶ್ರವಣನು ತಪೋವನದಲ್ಲಿ ಇರುತ್ತಾ ತುಪ್ಪದ ಆಹುತಿಯಿಂದ ಅಗ್ನಿಯು ಪ್ರಜ್ವಲಿತನಾಗುವಂತೆ ಬೆಳೆಯತೊಡಗಿದನು ಹಾಗೂ ಮಹಾತೇಜದಿಂದ ಸಂಪನ್ನನಾದನು.॥9॥
ಮೂಲಮ್ - 10
ತಸ್ಯಾಶ್ರಮಪದಸ್ಥಸ್ಯ ಬುದ್ಧಿರ್ಜಜ್ಞೇ ಮಹಾತ್ಮನಃ ।
ಚರಿಷ್ಯೇ ಪರಮಂ ಧರ್ಮಂ ಧರ್ಮೋ ಹಿ ಪರಮಾ ಗತಿಃ ॥
ಅನುವಾದ
ಆಶ್ರಮದಲ್ಲಿ ಇರುತ್ತಾ ಮಹಾತ್ಮಾ ವೈಶ್ರವಣನ ಮನಸ್ಸಿನಲ್ಲಿ - ನಾನು ಉತ್ತಮ ಧರ್ಮವನ್ನು ಆಚರಿಸುವೆನು ಎಂಬ ವಿಚಾರ ಉಂಟಾಯಿತು; ಏಕೆಂದರೆ ಧರ್ಮವೇ ಪರಮಗತಿಯಾಗಿದೆ.॥10॥
ಮೂಲಮ್ - 11
ಸ ತು ವರ್ಷ ಸಹಸ್ರಾಣಿ ತಪಸ್ತಪ್ತ್ವಾಮಹಾವನೇ ।
ಯಂತ್ರಿತೋ ನಿಯಮೈರುಗ್ರೈಶ್ಚಕಾರ ಸುಮಹತ್ತಪಃ ॥
ಅನುವಾದ
ಹೀಗೆ ಯೋಚಿಸಿ ತಪಸ್ಸನ್ನು ಮಾಡಲು ನಿಶ್ಚಯಿಸಿ, ಮಹಾವನದಲ್ಲಿ ಸಾವಿರಾರು ವರ್ಷ ಕಠೋರ ನಿಯಮಗಳಿಂದ ಭಾರೀ ತಪಸ್ಸನ್ನಾಚರಿಸಿದನು.॥11॥
ಮೂಲಮ್ - 12½
ಪೂರ್ಣೇ ವರ್ಷ ಸಹಸ್ರಾಂತೇ ತಂ ತಂ ವಿಧಿಮಕಲ್ಪಯತ್ ।
ಜಲಾಶೀ ಮಾರುತಾಹಾರೋ ನಿರಾಹಾರಸ್ತಥೈವ ಚ ॥
ಏವಂ ವರ್ಷ ಸಹಸ್ರಾಣಿ ಜಗ್ಮುಸ್ತಾನ್ಯೇಕವರ್ಷವತ್ ।
ಅನುವಾದ
ಒಂದು ಸಾವಿರ ವರ್ಷ ಪೂರ್ಣವಾಗುತ್ತಲೇ ತಪಸ್ಸಿನ ಹೊಸ-ಹೊಸ ವಿಧಿಯನ್ನು ಆಚರಿಸುತ್ತಿದ್ದನು. ಮೊದಲಿಗೆ ಅವನು ಕೇವಲ ನೀರನ್ನು ಕುಡಿದು ಇದ್ದರೆ, ಮತ್ತೆ ಗಾಳಿಯನ್ನು ಮಾತ್ರ ನುಂಗಿ ಇರುತ್ತಿದ್ದನು. ಮುಂದೆ ಅದನ್ನೂ ತ್ಯಜಿಸಿ ಕೇವಲ ನಿರಾಹಾರಿ ಯಾಗಿದ್ದನು. ಹೀಗೆ ಅನೇಕ ಸಾವಿರ ವರ್ಷ ಕಳೆದವು.॥12½॥
ಮೂಲಮ್ - 13½
ಅಥ ಪ್ರೀತೋ ಮಹಾತೇಜಾಃ ಸೇಂದ್ರೈಃ ಸುರಗಣೈಃ ಸಹ ॥
ಗತ್ವಾ ತಸ್ಯಾಶ್ರಮಪದಂ ಬ್ರಹ್ಮೇದಂ ವಾಕ್ಯಮಬ್ರವೀತ್ ।
ಅನುವಾದ
ಆಗ ಅವನ ತಪಸ್ಸಿಗೆ ಒಲಿದ ಬ್ರಹ್ಮದೇವರು ಇಂದ್ರಾದಿ ದೇವತೆಗಳೊಂದಿಗೆ ಅವನ ಆಶ್ರಮಕ್ಕೆ ಬಂದು ಇಂತೆಂದರು.॥13½॥
ಮೂಲಮ್ - 14½
ಪರಿತುಷ್ಟೋಽಸ್ಮಿ ತೇ ವತ್ಸ ಕರ್ಮಣಾನೇನ ಸುವ್ರತ ॥
ವರಂ ವೃಣೀಷ್ವ ಭದ್ರಂ ತೇ ವರಾರ್ಹಸ್ತ್ವಂ ಮಹಾಮತೇ ।
ಅನುವಾದ
ಸುವ್ರತನೇ! ನಿನ್ನ ಈ ಕರ್ಮದಿಂದ, ತಪಸ್ಸಿನಿಂದ ನಾನು ಬಹಳ ಸಂತುಷ್ಟನಾಗಿದ್ದೇನೆ. ಮಹಾಮಾತೇ! ನಿನಗೆ ಮಂಗಳವಾಗಲೀ. ನೀನು ವರ ಪಡೆಯಲು ಯೋಗ್ಯ ನಾಗಿರುವೆ, ಏನಾದರೂ ವರ ಕೇಳು.॥14½॥
ಮೂಲಮ್ - 15½
ಅಥಾಬ್ರವೀದ್ ವೈಶ್ರವಣಃ ಪಿತಾಮಹಮುಪಸ್ಥಿತಮ್ ॥
ಭಗವನ್ ಲ್ಲೋಕಪಾಲತ್ವಮಿಚ್ಛೇಯಂ ಲೋಕರಕ್ಷಣಮ್ ।
ಅನುವಾದ
ಇದನ್ನು ಕೇಳಿ ವೈಶ್ರವಣನು ತನ್ನ ಎದುರಿಗೆ ನಿಂತಿರುವ ಪಿತಾಮಹನಲ್ಲಿ - ಭಗವಂತನೇ! ಲೋಕವನ್ನು ರಕ್ಷಿಸಬೇಕೆಂಬ ನನ್ನ ವಿಚಾರವಿದೆ; ಆದ್ದರಿಂದ ನಾನು ಲೋಕಪಾಲಕನಾಗಬೇಕೆಂದು ಹೇಳಿದನು.॥15½॥
ಮೂಲಮ್ - 16½
ಅಥಾಬ್ರವೀದ್ ವೈಶ್ರವಣಂ ಪರಿತುಷ್ಟೇನ ಚೇತಸಾ ॥
ಬ್ರಹ್ಮಾ ಸುರಗಣೈಃ ಸಾರ್ಧಂ ಬಾಢಮಿತ್ಯೇವ ಹೃಷ್ಟವತ್ ।
ಅನುವಾದ
ವೈಶ್ರವಣನ ಮಾತಿನಿಂದ ಬ್ರಹ್ಮದೇವರಿಗೆ ಇನ್ನೂ ಸಂತೋಷವಾಯಿತು. ಅವರು ಸಮಸ್ತ ದೇವತೆಗಳೊಂದಿಗೆ ಪ್ರಸನ್ನತೆಯಿಂದ ‘‘ಹಾಗೆಯೇ ಆಗಲಿ’’ ಎಂದು ಹೇಳಿದರು.॥16½॥
ಮೂಲಮ್ - 17½
ಅಹಂ ವೈ ಲೋಕಪಾಲಾನಾಂ ಚತುರ್ಥಂ ಸ್ರಷ್ಟುಮುದ್ಯತಃ ॥
ಯಮೇಂದ್ರ ವರುಣಾನಾಂ ಚ ಪದಂ ಯತ್ತವ ಚೇಪ್ಸಿತಮ್ ।
ಅನುವಾದ
ಬಳಿಕ, ಮಗು! ನಾನು ನಾಲ್ಕನೆಯ ಲೋಕಪಾಲನ ಸೃಷ್ಟಿ ಮಾಡಲು ತೊಡಗಿದ್ದೆ. ಯಮ, ಇಂದ್ರ, ವರುಣರಿಗೆ ದೊರಕಿದ ಲೋಕಪಾಲ ಪದವಿಯು ನಿನ್ನ ಇಷ್ಟದಂತೆ ನಿನಗೂ ಸಿಗುವುದು, ಎಂದು ಹೇಳಿದರು.॥17½॥
ಮೂಲಮ್ - 18½
ತದ್ಗಚ್ಛ ಬತ ಧರ್ಮಜ್ಞ ನಿಧೀಶತ್ವಮವಾಪ್ನುಹಿ ॥
ಶಕ್ರಾಂಬುಪಯಮಾನಾಂ ಚ ಚತುರ್ಥಸ್ತ್ವಂ ಭವಿಷ್ಯಸಿ ।
ಅನುವಾದ
ಧರ್ಮಜ್ಞನೇ! ನೀನು ಸಂತೋಷವಾಗಿ ಆ ಪದವಿಯನ್ನು ಸ್ವೀಕರಿಸು ಹಾಗೂ ಅಕ್ಷಯನಿಧಿಗಳಿಗೆ ಸ್ವಾಮಿಯಾಗು. ಇಂದ್ರ, ವರುಣ, ಯಮರೊಂದಿಗೆ ನೀನು ನಾಲ್ಕನೆಯ ಲೋಕಪಾಲನಾಗುವೆ.॥18½॥
ಮೂಲಮ್ - 19½
ಏತಚ್ಚ ಪುಷ್ಪಕಂ ನಾಮ ವಿಮಾನಂ ಸೂರ್ಯಸಂನಿಭಮ್ ॥
ಪ್ರತಿಗೃಹ್ಣೀಷ್ವಯಾನಾರ್ಥಂ ತ್ರಿದಶೈಃ ಸಮತಾಂ ವ್ರಜ ।
ಅನುವಾದ
ಈ ಸೂರ್ಯತುಲ್ಯ ಪುಷ್ಪಕ ವಿಮಾನವನ್ನು ನಿನ್ನ ಸಂಚಾರಕ್ಕೆ ಪಡೆದುಕೋ ಮತ್ತು ದೇವತೆಗಳಂತೆ ಆಗು.॥19½॥
ಮೂಲಮ್ - 20½
ಸ್ವಸ್ತಿ ತೇಽಸ್ತು ಗಮಿಷ್ಯಾಮಃ ಸರ್ವ ಏವ ಯಥಾಗತಮ್ ॥
ಕೃತಕೃತ್ಯಾ ವಯಂ ತಾತ ದತ್ತ್ವಾ ತವ ವರದ್ವಯಮ್ ।
ಅನುವಾದ
ಅಯ್ಯಾ! ನಿನಗೆ ಮಂಗಳವಾಗಲಿ. ಈ ನಾವೆಲ್ಲರೂ ಬಂದ ಹಾಗೆ ತೆರಳುವೆವು. ನಿನಗೆ ವರಗಳನ್ನು ಕೊಟ್ಟು ನಾವು ಕೃತಕೃತ್ಯರೆಂದು ತಿಳಿಯುತ್ತೇವೆ.॥20½॥
ಮೂಲಮ್ - 21
ಇತ್ಯುಕ್ತ್ವಾ ಸ ಗತೋ ಬ್ರಹ್ಮಾ ಸ್ವಸ್ಥಾನಂ ತ್ರಿದಶೈಃ ಸಹ ॥
ಮೂಲಮ್ - 22½
ಗತೇಷು ಬ್ರಹ್ಮಪೂರ್ವೇಷು ದೇವೇಷ್ವಥ ನಭಸ್ತಲಮ್
ಧನೇಶಃ ಪಿತರಂ ಪ್ರಾಹ ಪ್ರಾಂಜಲಿಃ ಪ್ರಯತಾತ್ಮವಾನ್ ॥
ಭಗವಲ್ಲಬ್ಧವಾನಸ್ಮಿ ವರಮಿಷ್ಟಂ ಪಿತಾಮಹಾತ್ ।
ಅನುವಾದ
ಹೀಗೆ ಹೇಳಿ ಬ್ರಹ್ಮದೇವರು ದೇವತೆಗಳೊಂದಿಗೆ ತಮ್ಮ ಸ್ಥಾನಕ್ಕೆ ತೆರಳಿದರು. ಬ್ರಹ್ಮಾದಿ ದೇವತೆಗಳು ಆಕಾಶಮಾರ್ಗವಾಗಿ ಹೊರಟು ಹೋದ ಮೇಲೆ, ಮನಸ್ಸನ್ನು ಸಂಯಮದಲ್ಲಿರಿಸುವ ಧನಾಧ್ಯಕ್ಷನು ತಂದೆಯ ಬಳಿ ಕೈಮುಗಿದು-‘ಪೂಜ್ಯರೇ! ನಾನು ಪಿತಾಮಹರಿಂದ ಮನೋವಾಂಛಿತ ಫಲವನ್ನು ಪಡೆದಿರುವೆನು’ ಎಂದು ಹೇಳಿದನು.॥21-22½॥
ಮೂಲಮ್ - 23
ನಿವಾಸನಂ ನ ಮೇ ದೇವೋ ವಿದಧೇ ಸ ಪ್ರಜಾಪತಿಃ ॥
ಮೂಲಮ್ - 24
ತಂ ಪಶ್ಯ ಭಗವನ್ ಕಂಚಿನ್ನಿವಾಸಂ ಸಾಧು ಮೇ ಪ್ರಭೋ ।
ನ ಚ ಪೀಡಾ ಭವೇದ್ಯತ್ರ ಪ್ರಾಣಿನೋ ಯಸ್ಯ ಕಸ್ಯಚಿತ್ ॥
ಅನುವಾದ
ಆದರೆ ಆ ಪ್ರಜಾಪತಿ ದೇವರು ನನಗಾಗಿ ವಾಸಕ್ಕೆ ಸ್ಥಾನ ತಿಳಿಸಲಿಲ್ಲ. ಆದ್ದರಿಂದ ಪೂಜ್ಯರೇ! ಈಗ ನೀವು ನನಗೆ ವಾಸಿಸಲು ಯೋಗ್ಯವಾದ, ಎಲ್ಲ ದೃಷ್ಟಿಯಿಂದ ಚೆನ್ನಾಗಿರುವ ಸ್ಥಾನವನ್ನು ಹುಡುಕಿರಿ. ಪ್ರಭೋ! ಅಲ್ಲಿ ಇರುವಾಗ ಯಾವುದೇ ಪ್ರಾಣಿಗೆ ಕಷ್ಟವಾಗದಂತಿರಬೇಕು.॥23-24॥
ಮೂಲಮ್ - 25
ಏವಮುಕ್ತಸ್ತು ಪುತ್ರೇಣ ವಿಶ್ರವಾ ಮುನಿಪುಂಗವಃ ।
ವಚನಂ ಪ್ರಾಹ ಧರ್ಮಜ್ಞ ಶ್ರೂಯತಾಮಿತಿ ಸತ್ತಮ ॥
ಮೂಲಮ್ - 26
ದಕ್ಷಿಣಸ್ಯೋದಧೇಸ್ತೀರೇ ತ್ರಿಕೂಟೋ ನಾಮ ಪರ್ವತಃ ।
ತಸ್ಯಾಗ್ರೇ ತು ವಿಶಾಲಾ ಸಾ ಮಹೇಂದ್ರಸ್ಯ ಪುರೀ ಯಥಾ ॥
ಅನುವಾದ
ತನ್ನ ಮಗನು ಹೀಗೆ ಹೇಳಿದಾಗ ಮುನಿವರ ವಿಶ್ರವಸ್ಸು ಹೇಳಿದರು - ಧರ್ಮಜ್ಞನೇ! ಸಾಧು ಶಿರೋಮಣಿಯೇ! ಕೇಳು, ದಕ್ಷಿಣಸಮುದ್ರ ತೀರದಲ್ಲಿ ತ್ರಿಕೂಟ ಎಂಬ ಒಂದು ಪರ್ವತವಿದೆ. ಅದರ ಶಿಖರದಲ್ಲಿ ದೇವರಾಜ ಇಂದ್ರನ ಅಮರಾವತಿಯಂತೆ ಒಂದು ವಿಶಾಲಪುರಿಯು ಶೋಭಿಸುತ್ತಿದೆ.॥25-26॥
ಮೂಲಮ್ - 27
ಲಂಕಾ ನಾಮ ಪುರೀ ರಮ್ಯಾ ನಿರ್ಮಿತಾ ವಿಶ್ವಕರ್ಮಣಾ ।
ರಾಕ್ಷಸಾನಾಂ ನಿವಾಸಾರ್ಥಂ ಯಥೇಂದ್ರಸ್ಯಾಮರಾವತೀ ॥
ಅನುವಾದ
ಲಂಕೆ ಎಂದು ಅದರ ಹೆಸರು. ಇಂದ್ರನ ಅಮರಾವತಿಗೆ ಸಮಾನವಾದ ಆ ಪುರಿಯನ್ನು ವಿಶ್ವಕರ್ಮನು ರಾಕ್ಷಸರಿಗೆ ಇರಲು ನಿರ್ಮಿಸಿದ್ದನು.॥27॥
ಮೂಲಮ್ - 28
ತತ್ರ ತ್ವಂ ವಸ ಭದ್ರಂ ತೇ ಲಂಕಾಯಾಂ ನಾತ್ರ ಸಂಶಯಃ ।
ಹೇಮಪ್ರಾಕಾರಪರಿಖಾ ಯಂತ್ರಶಸ್ತ್ರಸಮಾವೃತಾ ॥
ಅನುವಾದ
ವತ್ಸ! ನಿನಗೆ ಮಂಗಳವಾಗಲೀ. ನೀನು ಹೋಗಿ ನಿಃಸಂದೇಹವಾಗಿ ಆ ಲಂಕಾಪುರಿಯಲ್ಲಿ ಇರು. ಅದರ ಸುತ್ತಲೂ ಬಂಗಾರದ ಪ್ರಾಕಾರವಿದೆ. ನಾಲ್ಕೂಕಡೆ ಅಗಲವಾದ ಕಂದಕಗಳಿವೆ ಮತ್ತು ಅದು ಅನೇಕ ಯಂತ್ರಗಳಿಂದ ಮತ್ತು ಶಸ್ತ್ರಗಳಿಂದ ಸುರಕ್ಷಿತವಾಗಿದೆ.॥28॥
ಮೂಲಮ್ - 29
ರಮಣೀಯಾ ಪುರೀ ಸಾ ಹಿ ರುಕ್ಮವೈದೂರ್ಯತೋರಣಾ ।
ರಾಕ್ಷಸೈಃ ಸಾ ಪರಿತ್ಯಕ್ತಾ ಪುರಾ ವಿಷ್ಣುಭಯಾರ್ದಿತೈಃ ॥
ಅನುವಾದ
ಆ ಪುರಿಯು ಬಹಳ ರಮಣೀಯವಾಗಿದೆ. ಅದರ ಮಹಾದ್ವಾರಗಳು ಚಿನ್ನದಿಂದ ಮತ್ತು ನೀಲಮಣಿಗಳಿಂದ ನಿರ್ಮಿತವಾಗಿವೆ. ಹಿಂದೆ ವಿಷ್ಣುವಿನ ಭಯದಿಂದ ರಾಕ್ಷಸರು ಆ ಪುರಿಯನ್ನು ಬಿಟ್ಟು ಹೋಗಿರುವರು.॥29॥
ಮೂಲಮ್ - 30
ಶೂನ್ಯಾ ರಕ್ಷೋಗಣೈಃ ಸರ್ವೈ ರಸಾತಲತಲಂ ಗತೈಃ ।
ಶೂನ್ಯಾ ಸಮ್ಪ್ರತಿಲಂಕಾ ಸಾ ಪ್ರಭುಸ್ತಸ್ಯಾ ನ ವಿದ್ಯದೇ ॥
ಅನುವಾದ
ರಾಕ್ಷಸರೆಲ್ಲರೂ ರಸಾತಳಕ್ಕೆ ಹೊರಟು ಹೋಗಿರುವರು. ಅದರಿಂದ ಲಂಕಾಪುರಿಯು ಬರಿದಾಗಿದೆ. ಈಗಲೂ ಲಂಕೆಯು ಶೂನ್ಯವಾಗಿದೆ, ಈಗ ಅದಕ್ಕೆ ಒಡೆಯರು ಯಾರೂ ಇಲ್ಲ.॥30॥
ಮೂಲಮ್ - 31
ಸ ತ್ವಂ ತತ್ರ ನಿವಾಸಾಯ ಗಚ್ಛ ಪುತ್ರ ಯಥಾಸುಖಮ್ ।
ನಿರ್ದೋಷಸ್ತತ್ರ ತೇ ವಾಸೋ ನ ಬಾಧಸ್ತತ್ರ ಕಸ್ಯಚಿತ್ ॥
ಅನುವಾದ
ಆದ್ದರಿಂದ ಮಗನೇ! ನೀನು ವಾಸಿಸಲು ಸುಖವಾಗಿ ಅಲ್ಲಿಗೆ ಹೋಗು. ಅಲ್ಲಿ ಇರುವುದರಿಂದ ಯಾವುದೇ ದೋಷ ಅಥವಾ ಅಡೆ-ತಡೆ ಇಲ್ಲ. ಅಲ್ಲಿ ಯಾರಿಂದಲೂ ವಿಘ್ನ-ಬಾಧೆಗಳು ಬರಲಾರವು.॥31॥
ಮೂಲಮ್ - 32
ಏತಚ್ಛ್ರುತ್ವಾ ಸ ಧರ್ಮಾತ್ಮಾ ಧರ್ಮಿಷ್ಠಂ ವಚನಂ ಪಿತುಃ ।
ನಿವಾಸಯಾಮಾಸ ತದಾ ಲಂಕಾಂ ಪರ್ವತಮೂರ್ಧನಿ ॥
ಅನುವಾದ
ತಂದೆಯ ಧರ್ಮಯುಕ್ತ ಮಾತನ್ನು ಕೇಳಿ ಧರ್ಮಾತ್ಮಾ ವೈಶ್ರವಣನು ತ್ರಿಕೂಟ ಪರ್ವತ ಶಿಖರದಲ್ಲಿ ನಿರ್ಮಿತವಾದ ಲಂಕಾಪುರಿಗೆ ಹೋಗಿ ವಾಸಿಸಿದನು.॥32॥
ಮೂಲಮ್ - 33
ನೈರ್ಋತಾನಾಂ ಸಹಸ್ರೈಸ್ತು ಹೃಷ್ಟೈಃ ಪ್ರಮುದಿತೈಃ ಸದಾ ।
ಅಚಿರೇಣೈವ ಕಾಲೇನ ಸಂಪೂರ್ಣಾ ತಸ್ಯ ಶಾಸನಾತ್ ॥
ಅನುವಾದ
ಅವನು ವಾಸಿಸಿದಾಗ ಕೆಲವೇ ದಿನಗಳಲ್ಲಿ ಆ ಪುರಿಯು ಸಾವಿರಾರು ದಷ್ಟಪುಷ್ಟ ರಾಕ್ಷಸರಿಂದ ತುಂಬಿ ಹೋಯಿತು. ವೈಶ್ರವಣನ ಆಜ್ಞೆಯಂತೆ ರಾಕ್ಷಸರು ಅಲ್ಲಿ ಆನಂದವಾಗಿ ಇರತೊಡಗಿದರು.॥33॥
ಮೂಲಮ್ - 34
ಸ ತು ತತ್ರಾವಸತ್ ಪ್ರೀತೋ ಧರ್ಮಾತ್ಮಾ ನೈರ್ಋತರ್ಷಭಃ ।
ಸಮುದ್ರಪರಿಖಾಯಾಂ ಸ ಲಂಕಾಯಾಂ ವಿಶ್ರವಾತ್ಮಜಃ ॥
ಅನುವಾದ
ಸಮುದ್ರವೇ ಕಂದಕವಾಗಿ ಉಳ್ಳ ಲಂಕಾನಗರಿಯಲ್ಲಿ ವಿಶ್ರವಸ್ಸುವಿನ ಧರ್ಮಾತ್ಮಾ ಪುತ್ರ ವೈಶ್ರವಣನು ರಾಕ್ಷಸರಿಗೆ ರಾಜನಾಗಿ ಸಂತೋಷದಿಂದ ವಾಸಿಸತೊಡಗಿದನು.॥34॥
ಮೂಲಮ್ - 35
ಕಾಲೇ ಕಾಲೇ ತು ಧರ್ಮಾತ್ಮಾಪುಷ್ಪಕೇಣ ಧನೇಶ್ವರಃ ।
ಅಭ್ಯಾಗಚ್ಛದ್ವಿನೀತಾತ್ಮಾ ಪಿತರಂ ಮಾತರಂ ಚ ಹಿ ॥
ಅನುವಾದ
ಧರ್ಮಾತ್ಮಾ ಧನೇಶ್ವರ ಆಗಾಗ ಪುಷ್ಪಕವಿಮಾನದಿಂದ ತನ್ನ ತಂದೆ-ತಾಯಿಯರನ್ನು ಭೆಟ್ಟಿಯಾಗಲು ಹೋಗುತ್ತಿದ್ದನು. ಅವನ ಹೃದಯ ಬಹಳ ವಿನೀತವಾಗಿತ್ತು.॥35॥
ಮೂಲಮ್ - 36
ಸ ದೇವಗಂಧರ್ವಗಣೈರಭಿಷ್ಟುತ-
ಸ್ತಥಾಪ್ಸರೋನೃತ್ಯ ವಿಭೂಷಿತಾಲಯಃ ।
ಗಭಸ್ತಿಭಿಃ ಸೂರ್ಯ ಇವಾವಭಾಸಯನ್
ಪಿತುಃ ಸಮೀಪಂ ಪ್ರಯಯೌ ಸ ವಿತ್ತಪಃ ॥
ಅನುವಾದ
ದೇವತೆಗಳು, ಗಂಧರ್ವರು ಅವನನ್ನು ಸ್ತುತಿಸುತ್ತಿದ್ದರು. ಅವನ ಭವ್ಯ ಭವನವು ಅಪ್ಸರೆಯರ ನೃತ್ಯದಿಂದ ಶೋಭಿಸುತ್ತಿತ್ತು. ಆ ಧನಪತಿ ಕುಬೇರನು ತನ್ನ ಕಿರಣಗಳಿಂದ ಪ್ರಕಾಶಿತನಾದ ಸೂರ್ಯನಂತೆ ಎಲ್ಲೆಡೆ ಪ್ರಕಾಶ ಬೀರುತ್ತಾ ತನ್ನ ತಂದೆಯ ಬಳಿಗೆ ಹೋದನು.॥36॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಮೂರನೆಯ ಸರ್ಗ ಪೂರ್ಣವಾಯಿತು. ॥3॥