[ಎರಡನೆಯ ಸರ್ಗ]
ಭಾಗಸೂಚನಾ
ಪುಲಸ್ತ್ಯರ ಗುಣ - ತಪಸ್ಸಿನ ವರ್ಣನೆ, ವಿಶ್ರವಾ ಮುನಿಯ ಉತ್ಪತ್ತಿಯ ಕಥೆಯನ್ನು ಮಹರ್ಷಿ ಅಗಸ್ತ್ಯರು ತಿಳಿಸಿದುದು
ಮೂಲಮ್ - 1
ತಸ್ಯ ತದ್ವಚನಂ ಶ್ರುತ್ವಾ ರಾಘವಸ್ಯ ಮಹಾತ್ಮನಃ ।
ಕುಂಭಯೋನಿರ್ಮಹಾತೇಜಾ ವಾಕ್ಯಮೇತದುವಾಚ ಹ ॥
ಅನುವಾದ
ಮಹಾತ್ಮಾ ರಘುನಾಥನ ಪ್ರಶ್ನೆಯನ್ನು ಕೇಳಿ ಮಹಾತೇಜಸ್ವಿ ಕುಂಭಯೋನಿ ಅಗಸ್ತ್ಯರು ಹೀಗೆ ನುಡಿದರು.॥1॥
ಮೂಲಮ್ - 2
ಶೃಣು ರಾಮ ತಥಾ ವೃತ್ತಂ ತಸ್ಯ ತೇಜೋಬಲಂ ಮಹತ್ ।
ಜಘಾನ ಶತ್ರೂನ್ಯೇನಾಸೌ ನ ಚ ವಧ್ಯಃ ಸ ಶತ್ರುಭಿಃ ॥
ಅನುವಾದ
ಶ್ರೀರಾಮ! ಇಂದ್ರಜಿತುವಿನ ಮಹಾಬಲ ಮತ್ತು ತೇಜದ ಕುರಿತು ನಡೆದ ವೃತ್ತಾಂತವನ್ನು ಹೇಳುವೆನು ಕೇಳು. ಯಾವ ಬಲದಿಂದ ಅವನು ಶತ್ರುಗಳನ್ನು ಕೊಲ್ಲುತ್ತಿದ್ದನೋ, ಆದರೆ ತಾನು ಯಾವುದೇ ಶತ್ರುವಿನಿಂದ ಸೋಲುತ್ತಿರಲಿಲ್ಲವೋ ಅದರ ಪರಿಚಯ ಮಾಡಿಸುತ್ತೇನೆ.॥2॥
ಮೂಲಮ್ - 3
ತಾವತ್ತೇ ರಾವಣಸ್ಯೇದಂ ಕುಲಂ ಜನ್ಮ ಚ ರಾಘವ ।
ವರಪ್ರದಾನಂ ಚ ತಥಾ ತಸ್ಮೈ ದತ್ತಂ ಬ್ರವೀಮಿ ತೇ ॥
ಅನುವಾದ
ರಘುನಂದನ! ಈ ಪ್ರಸ್ತುತ ವಿಷಯವನ್ನು ವರ್ಣಿಸುವ ಮೊದಲು, ರಾವಣನ ಕುಲ, ಜನ್ಮ, ವರಪ್ರಾಪ್ತಿ ಇತ್ಯಾದಿ ಪ್ರಸಂಗಗಳನ್ನು ನಿನಗೆ ತಿಳಿಸುತ್ತೇನೆ.॥3॥
ಮೂಲಮ್ - 4
ಪುರಾ ಕೃತಯುಗೇ ರಾಮ ಪ್ರಜಾಪತಿಸುತಃ ಪ್ರಭುಃ ।
ಪುಲಸ್ತ್ಯೋ ನಾಮ ಬ್ರಹ್ಮರ್ಷಿಃ ಸಾಕ್ಷಾದಿವ ಪಿತಾಮಹಃ ॥
ಅನುವಾದ
ಶ್ರೀರಾಮ! ಹಿಂದೆ ಕೃತಯುಗ ದಲ್ಲಿ ಪ್ರಜಾಪತಿ ಬ್ರಹ್ಮದೇವರಿಗೆ ಬ್ರಹ್ಮರ್ಷಿ ಪುಲಸ್ತ್ಯನೆಂಬ ಪ್ರಸಿದ್ಧ ಪುತ್ರನು ಹುಟ್ಟಿದನು. ಅವನು ಸಾಕ್ಷಾತ್ ಬ್ರಹ್ಮ ದೇವರಂತೆ ತೇಜಸ್ವಿಯಾಗಿದ್ದನು.॥4॥
ಮೂಲಮ್ - 5
ನಾನುಕೀರ್ತ್ಯಾ ಗುಣಾಸ್ತಸ್ಯ ಧರ್ಮತಃ ಶೀಲತಸ್ತಥಾ ।
ಪ್ರಜಾಪತೇಃ ಪುತ್ರ ಇತಿ ವಸ್ತುಂ ಶಕ್ಯಂ ಹಿ ನಾಮತಃ ॥
ಅನುವಾದ
ಅವನ ಗುಣ, ಧರ್ಮ, ಶೀಲಗಳನ್ನು ಪೂರ್ಣವಾಗಿ ಯಾರೂ ವರ್ಣಿಸ ಲಾರರು. ಅವನು ಪ್ರಜಾಪತಿಯ ಪುತ್ರನಾಗಿದ್ದನು ಇಷ್ಟು ಪರಿಚಯ ಸಾಕು.॥5॥
ಮೂಲಮ್ - 6
ಪ್ರಜಾಪತಿ ಸುತತ್ವೇನ ದೇವಾನಾಂ ವಲ್ಲಭೋ ಹಿ ಸಃ ।
ಇಷ್ಟಃ ಸರ್ವಸ್ಯ ಲೋಕಸ್ಯ ಗುಣೈಃ ಶುಭ್ರೈರ್ಮಹಾಮತಿಃ ॥
ಅನುವಾದ
ಪ್ರಜಾಪತಿಯ ಪುತ್ರನಾದ್ದರಿಂದ ದೇವತೆಗಳು ಅವನನ್ನು ಪ್ರೀತಿಸುತ್ತಿದ್ದರು. ಅವನು ಬಹಳ ಬುದ್ಧಿವಂತ ಮತ್ತು ಉಜ್ವಲ ಗುಣಗಳಿಂದಾಗಿ ಎಲ್ಲ ಜನರಿಗೆ ಪ್ರಿಯನಾಗಿದ್ದನು.॥6॥
ಮೂಲಮ್ - 7
ಸ ತು ಧರ್ಮಪ್ರಸಂಗೇನ ಮೇರೋಃ ಪಾರ್ಶ್ವೇ ಮಹಾಗಿರೇಃ ।
ತೃಣಬಿಂದ್ವಾಶ್ರಮಂ ಗತ್ವಾಪ್ಯವಸನ್ಮುನಿಪುಂಗವಃ ॥
ಅನುವಾದ
ಒಮ್ಮೆ ಮುನಿವರ ಪುಲಸ್ತ್ಯರು ಧರ್ಮಾಚರಣ ಪ್ರಸಂಗದಿಂದ ಮಹಾಗಿರಿ ಮೇರುವಿನ ಬಳಿ ರಾಜರ್ಷಿ ತೃಣಬಿಂದುವಿನ ಆಶ್ರಮಕ್ಕೆ ಹೋಗಿ ಅಲ್ಲೇ ಇರತೊಡಗಿದರು.॥7॥
ಮೂಲಮ್ - 8
ತಪಸ್ತೇಪೇ ಸ ಧರ್ಮಾತ್ಮಾ ಸ್ವಾಧ್ಯಾಯ ನಿಯತೇಂದ್ರಿಯಃ ।
ಗತ್ವಾಽಽಶ್ರಮಪದಂತಸ್ಯ ವಿಘ್ನಂ ಕುರ್ವಂತಿ ಕನ್ಯಕಾಃ ॥
ಮೂಲಮ್ - 9
ಋಷಿಪನ್ನಗಕನ್ಯಾಶ್ಚ ರಾಜರ್ಷಿ ತನಯಾಶ್ಚ ಯಾಃ ।
ಕ್ರೀಡಂತ್ಯೋಽಪ್ಸರಸಶ್ಚೈವ ತಂ ದೇಶಮುಪಪೇದಿರೇ ॥
ಅನುವಾದ
ಅವರ ಮನಸ್ಸು ಸದಾ ಧರ್ಮದಲ್ಲೇ ತೊಡಗಿರುತ್ತಿತ್ತು. ಇಂದ್ರಿಯಗಳನ್ನು ಸಂಯಮದಲ್ಲಿರಿಸಿ ಕೊಂಡು ಪ್ರತಿದಿನ ವೇದಾಧ್ಯಯನ ಮಾಡುತ್ತಾ ತಪಸ್ಸಿನಲ್ಲೇ ಇರುತ್ತಿದ್ದರು. ಆದರೆ ಕೆಲವು ಕನ್ಯೆಯರು ಅವರ ಆಶ್ರಮಕ್ಕೆ ಹೋಗಿ ಅವರ ತಪಸ್ಸಿನಲ್ಲಿ ವಿಘ್ನವನ್ನೊಡ್ಡಲು ಪ್ರಾರಂಭಿಸಿದರು. ಋಷಿಗಳ, ನಾಗರ, ರಾಜರ್ಷಿಗಳ ಕನ್ಯೆಯರು ಹಾಗೂ ಅಪ್ಸರೆಯರೂ ಕೂಡ ಕ್ರೀಡಿಸುತ್ತಾ ಅವರ ಆಶ್ರಮಕ್ಕೆ ಬಂದು ಹೋಗುತ್ತಿದ್ದರು.॥8-9॥
ಮೂಲಮ್ - 10
ಸರ್ವರ್ತುಷೂಪಭೋಗ್ಯತ್ವಾದ್ ರಮ್ಯತ್ವಾತ್ಕಾನನಸ್ಯ ಚ ।
ನಿತ್ಯಶಸ್ತಾಸ್ತು ತಂ ದೇಶಂ ಗತ್ವಾ ಕ್ರೀಡಂತಿ ಕನ್ಯಕಾಃ ॥
ಅನುವಾದ
ಅಲ್ಲಿಯ ವನವು ಎಲ್ಲ ಋತುಗಳಲ್ಲಿ ಉಪಭೋಗಕ್ಕೆ ಯೋಗ್ಯವಾಗಿದ್ದು, ರಮಣೀಯವಾಗಿತ್ತು. ಅದಕ್ಕಾಗಿ ಕನ್ಯೆಯರು ಪ್ರತಿದಿನ ಆ ಪ್ರದೇಶಕ್ಕೆ ಹೋಗಿ ಬಗೆ-ಬಗೆಯಾಗಿ ಕ್ರೀಡಿಸುತ್ತಿದ್ದರು.॥10॥
ಮೂಲಮ್ - 11½
ದೇಶಸ್ಯ ರಮಣೀಯತ್ವಾತ್ ಪುಲಸ್ತ್ಯೋ ಯತ್ರ ಸ ದ್ವಿಜಃ ।
ಗಾಯಂತ್ಯೋ ವಾದಯಂತ್ಯಶ್ಚ ಲಾಸಯಂತ್ಯಸ್ತಥೈವ ಚ ॥
ಮುನೇಸ್ತಪಸ್ವಿನಸ್ತಸ್ಯ ವಿಘ್ನಂ ಚಕ್ರುರನಿಂದಿತಾಃ ।
ಅನುವಾದ
ಬ್ರಹ್ಮರ್ಷಿ ಪುಲಸ್ತ್ಯರು ಇರುವ ಸ್ಥಾನವಾದರೋ ಇನ್ನೂ ರಮಣೀಯ ವಾಗಿತ್ತು; ಇದಕ್ಕಾಗಿ ಆ ಸತೀ-ಸಾಧ್ವೀ ಕನ್ಯೆಯರು ಪ್ರತಿದಿನ ಅಲ್ಲಿಗೆ ಬಂದು ಹಾಡುತ್ತಾ, ನುಡಿಸುತ್ತಾ, ನರ್ತಿಸುತ್ತಿದ್ದರು. ಈ ಪ್ರಕಾರ ಅವರು ತಪಸ್ವೀ ಮುನಿಯ ತಪಸ್ಸಿನಲ್ಲಿ ವಿಘ್ನವನ್ನು ತಂದೊಡ್ಡುತ್ತಿದ್ದರು.॥11½॥
ಮೂಲಮ್ - 12½
ಅಥ ರುಷ್ಟೋ ಮಹಾತೇಜಾ ವ್ಯಾಜಹಾರ ಮಹಾಮುನಿಃ ॥
ಯಾ ಮೇ ದರ್ಶನಮಾಗಚ್ಛೇತ್ಸಾ ಗರ್ಭಂ ಧಾರಯಿಷ್ಯತಿ ।
ಅನುವಾದ
ಇದರಿಂದ ಆ ಮಹಾತೇಜಸ್ವೀ ಮಹಾಮುನಿ ಪುಲಸ್ತ್ಯರು ಸಿಟ್ಟುಗೊಂಡು - ‘ನಾಳೆಯಿಂದ ಇಲ್ಲಿ ಯಾರಾದರೂ ಕನ್ಯೆಯು ನನ್ನ ಕಣ್ಣಿಗೆ ಬಿದ್ದರೆ ಅವಳು ನಿಶ್ಚಯವಾಗಿ ಗರ್ಭಿಣಿಯಾಗುವಳು’ ಎಂದು ಶಪಿಸಿದರು.॥12½॥
ಮೂಲಮ್ - 13½
ತಾಸ್ತು ಸರ್ವಾಃ ಪ್ರತಿಶ್ರುತ್ಯ ತಸ್ಯ ವಾಕ್ಯಂ ಮಹಾತ್ಮನಃ ॥
ಬ್ರಹ್ಮಶಾಪಭಯಾದ್ಭೀತಾಸ್ತಂ ದೇಶಂ ನೋಪಚಕ್ರಮುಃ ।
ಅನುವಾದ
ಆ ಮಹಾತ್ಮರ ಈ ಮಾತನ್ನು ಕೇಳಿ ಅವರೆಲ್ಲ ಕನ್ಯೆಯರು ಬ್ರಹ್ಮಶಾಪದ ಭಯದಿಂದ ಹೆದರಿ ಅಲ್ಲಿಗೆ ಬಂದುಹೋಗುವುದನ್ನು ಬಿಟ್ಟುಬಿಟ್ಟರು.॥13½॥
ಮೂಲಮ್ - 14½
ತೃಣಬಿಂದೋಸ್ತು ರಾಜರ್ಷೇಸ್ತನಯಾನ ಶೃಣೋತಿ ತತ್ ॥
ಗತ್ವಾಽಽಶ್ರಮಪದಂ ತತ್ರ ವಿಚಚಾರ ಸುನಿರ್ಭಯಾ ।
ಅನುವಾದ
ಆದರೆ ರಾಜರ್ಷಿ ತೃಣಬಿಂದುವಿನ ಕನ್ಯೆಯು ಈ ಶಾಪವನ್ನು ಕೇಳಿರಲಿಲ್ಲ. ಅದರಿಂದ ಅವಳು ಮರುದಿನವೂ ಆಶ್ರಮಕ್ಕೆ ಬಂದು ನಿರಾತಂಕವಾಗಿ ವಿಚರಿಸ ತೊಡಗಿದಳು.॥14½॥
ಮೂಲಮ್ - 15
ನ ಚಾಪಶ್ಯಚ್ಚ ಸಾ ತತ್ರ ಕಾಂಚಿದಭ್ಯಾಗತಾಂ ಸಖೀಮ್ ॥
ಮೂಲಮ್ - 16
ತಸ್ಮಿನ್ಕಾಲೇ ಮಹಾತೇಜಾಃ ಪ್ರಾಜಾಪತ್ಯೋ ಮಹಾನೃಷಿಃ ।
ಸ್ವಾಧ್ಯಾಯಮಕರೋತ್ತತ್ರ ತಪಸಾ ಭಾವಿತಃ ಸ್ವಯಮ್ ॥
ಅನುವಾದ
ಅಲ್ಲಿ ಅವಳು ಯಾರೇ ತನ್ನ ಸಖಿಯರನ್ನು ನೋಡಲಿಲ್ಲ. ಆಗ ಪ್ರಜಾಪತಿ ಪುತ್ರ ಮಹಾ ತೇಜಸ್ವೀ ಮಹರ್ಷಿ ಪುಲಸ್ತ್ಯರು ತನ್ನ ತಪಸ್ಸಿನಿಂದ ಪ್ರಕಾಶಿತನಾಗಿ ವೇದಾಧ್ಯಯನ ಮಾಡುತ್ತಿದ್ದರು.॥15-16॥
ಮೂಲಮ್ - 17
ಸಾ ತು ವೇದಶ್ರುತಿಂ ಶ್ರುತ್ವಾ ದೃಷ್ಟ್ವಾವೈ ತಪಸೋ ನಿಧಿಮ್ ।
ಅಭವತ್ ಪಾಂಡುದೇಹಾ ಸಾ ಸುವ್ಯಂಜಿತ ಶರೀರಜಾ ॥
ಅನುವಾದ
ವೇದಾಧ್ಯಯನವನ್ನು ಕೇಳಿ ಆ ಕನ್ಯೆಯು ಆಕಡೆ ಹೋಗಿ, ತಪೋನಿಧಿ ಪುಲಸ್ತ್ಯರ ದರ್ಶನ ಮಾಡಿದಳು. ಮಹರ್ಷಿಯ ದೃಷ್ಟಿ ಬೀಳುತ್ತಲೇ ಆಕೆಯ ಶರೀರ ಬಿಳಿಚಿಕೊಂಡು ಗರ್ಭದ ಚಿಹ್ನೆಗಳು ಪ್ರಕಟಗೊಂಡವು.॥17॥
ಮೂಲಮ್ - 18
ಬಭೂವ ಚ ಸಮುದ್ವಿಗ್ನಾ ದೃಷ್ಟ್ವಾತದ್ದೋಷಮಾತ್ಮನಃ ।
ಇದಂ ಮೇ ಕಿಂತ್ವಿತಿ ಜ್ಞಾತ್ವಾ ಪಿತುರ್ಗತ್ವಾಽಽಶ್ರಮೇ ಸ್ಥಿತಾ ॥
ಅನುವಾದ
ತನ್ನ ಶರೀರದಲ್ಲಿ ಈ ದೋಷವನ್ನು ನೋಡಿ ಅವಳು ಗಾಬರಿಗೊಂಡಳು. ‘ನನಗೆ ಹೀಗೇಕಾಯಿತು’ ಎಂದು ಚಿಂತಿಸುತ್ತಾ ತಂದೆಯ ಆಶ್ರಮಕ್ಕೆ ಹೋಗಿ ನಿಂತುಕೊಂಡಳು.॥18॥
ಮೂಲಮ್ - 19
ತಾಂ ತು ದೃಷ್ಟ್ವಾ ತಥಾಭೂತಾಂ ತೃಣಬಿಂದುರಥಾಬ್ರವೀತ್ ।
ಕಿಂ ತ್ವಮೇತತ್ತ್ವಸದೃಶಂ ಧಾರಯಸ್ಯಾತ್ಮನೋ ವಪುಃ ॥
ಅನುವಾದ
ಆ ಸ್ಥಿತಿಯಲ್ಲಿ ತನ್ನ ಮಗಳನ್ನು ನೋಡಿ ತೃಣಬಿಂದು ಕೇಳಿದರು - ‘ನಿನ್ನ ಶರೀರದ ಸ್ಥಿತಿ ಹೀಗೇ ಕಾಯಿತು? ಈ ರೂಪದಲ್ಲಿ ಶರೀರವನ್ನು ಧರಿಸಿದುದು ನಿನಗೆ ಸರ್ವಥಾ ಆಯೋಗ್ಯ ಮತ್ತು ಅನುಚಿತವಾಗಿದೆ’.॥19॥
ಮೂಲಮ್ - 20
ಸಾ ತು ಕೃತ್ವಾಂಜಲಿಂ ದೀನಾ ಕನ್ಯೋವಾಚ ತಪೋಧನಮ್ ।
ನ ಜಾನೇ ಕಾರಣಂ ತಾತ ಯೇನ ಮೇರೂಪಮೀದೃಶಮ್ ॥
ಅನುವಾದ
ಆ ಬಡಪಾಯಿ ಕನ್ಯೆಯು ಕೈಮುಗಿದು ತಪೋಧನ ತಂದೆಯಲ್ಲಿ ಹೇಳಿದಳು - ಅಪ್ಪಾ! ಯಾವುದರಿಂದ ನನ್ನ ರೂಪ ಹೀಗಾಗಿದೆ ಎಂಬುದರ ಕಾರಣವನ್ನು ನಾನು ತಿಳಿಯೆ.॥20॥
ಮೂಲಮ್ - 21
ಕಿಂ ತು ಪೂರ್ವಂ ಗತಾಸ್ಮ್ಯೇಕಾ ಮಹರ್ಷೇರ್ಭಾವಿತಾತ್ಮನಃ ।
ಪುಲಸ್ತ್ಯಸ್ಯಾಶ್ರಮಂ ದಿವ್ಯಮನ್ವೇಷ್ಟುಂ ಸ್ವಸಖೀಜನಮ್ ॥
ಅನುವಾದ
ಈಗ ಸ್ವಲ್ಪ ಹೊತ್ತು ಮೊದಲು ನಾನು ಪವಿತ್ರ ಅಂತಃಕರಣವುಳ್ಳ ಮಹರ್ಷಿ ಪುಲಸ್ತ್ಯರ ದಿವ್ಯ ಆಶ್ರಮಕ್ಕೆ ತನ್ನ ಸಖಿಯರನ್ನು ಹುಡುಕಿಕೊಂಡು ಒಬ್ಬಳೇ ಹೋಗಿದ್ದೆ.॥21॥
ಮೂಲಮ್ - 22
ನ ಚ ಪಶ್ಯಾಮ್ಯಹಂ ತತ್ರ ಕಾಂಚಿದಭ್ಯಾಗತಾಂ ಸಖೀಮ್ ।
ರೂಪಸ್ಯ ತು ವಿಪರ್ಯಾಸಂ ದೃಷ್ಟ್ವಾ ತ್ರಾಸಾದಿಹಾಗತಾ ॥
ಅನುವಾದ
ಅಲ್ಲಿ ನೋಡಿದರೆ ಯಾವ ಸಖಿಯರೂ ಇರಲಿಲ್ಲ. ಜೊತೆಗೆ ನನ್ನ ರೂಪವು ಮೊದಲಿಗಿಂತ ವಿಪರೀತ ಸ್ಥಿತಿಗೆ ಬಂತು. ಇದೆಲ್ಲ ನೋಡಿ ನಾನು ಭಯಗೊಂಡು ಇಲ್ಲಿಗೆ ಬಂದಿರುವೆನು.॥22॥
ಮೂಲಮ್ - 23
ತೃಣಬಿಂದುಸ್ತು ರಾಜರ್ಷಿಸ್ತಪಸಾ ದ್ಯೋತಿತಪ್ರಭಃ ।
ಧ್ಯಾನಂ ವಿವೇಶ ತಚ್ಚಾಪಿ ಅಪಶ್ಯದೃಷಿಕರ್ಮಜಮ್ ॥
ಅನುವಾದ
ರಾಜರ್ಷಿ ತೃಣಬಿಂದು ತನ್ನ ತಪಸ್ಸಿನಿಂದ ಪ್ರಕಾಶಿಸುತ್ತಿದ್ದರು. ಅವರು ಧ್ಯಾನದಲ್ಲಿ - ಇದೆಲ್ಲವೂ ಮಹರ್ಷಿ ಪುಲಸ್ತ್ಯರಿಂದಲೇ ಆದುದು ಎಂದು ಅರಿತುಕೊಂಡರು.॥23॥
ಮೂಲಮ್ - 24
ಸ ತು ವಿಜ್ಞಾಯ ತಂ ಶಾಪಂ ಮಹರ್ಷೇರ್ಭಾವಿತಾತ್ಮನಃ ।
ಗೃಹೀತ್ವಾ ತನಯಾಂ ಗತ್ವಾ ಪುಸ್ತ್ಯಮಿದಮಬ್ರವೀತ್ ॥
ಅನುವಾದ
ಆ ಪವಿತ್ರಾತ್ಮಾ ಮಹರ್ಷಿಯ ಶಾಪವನ್ನು ತಿಳಿದು ತನ್ನ ಮಗಳೊಂದಿಗೆ ಪುಲಸ್ತ್ಯರ ಬಳಿಗೆ ಹೋಗಿ ಇಂತೆಂದರು.॥24॥
ಮೂಲಮ್ - 25
ಭಗವಂಸ್ತನಯಾಂ ಮೇ ತ್ವಂ ಗುಣೈಃ ಸ್ವೈರೇವ ಭೂಷಿತಾಮ್ ।
ಭಿಕ್ಷಾಂ ಪ್ರತಿಗೃಹಾಣೇಮಾಂ ಮಹರ್ಷೇ ಸ್ವಯಮುದ್ಯತಾಮ್ ॥
ಅನುವಾದ
ಪೂಜ್ಯರೇ! ನನ್ನ ಈ ಕನ್ಯೆಯು ತನ್ನ ಗುಣಗಳಿಂದ ವಿಭೂಷಿತಳಾಗಿದ್ದಾಳೆ. ಮಹರ್ಷಿಗಳೇ! ತಾವು ಈಕೆಯನ್ನು ತಾನಾಗಿ ದೊರೆತ ಭಿಕ್ಷೆ ಎಂದು ತಿಳಿದು ಸ್ವೀಕರಿಸಿರಿ.॥25॥
ಮೂಲಮ್ - 26
ತಪಶ್ಚರಣಯುಕ್ತಸ್ಯ ಶ್ರಾಮ್ಯಮಾಣೇಂದ್ರಿಯಸ್ಯ ತೇ ।
ಶುಶ್ರೂಷಣಪರಾ ನಿತ್ಯಂ ಭವಿಷ್ಯತಿ ನ ಸಂಶಯಃ ॥
ಅನುವಾದ
ನೀವು ತಪಸ್ಸಿನಲ್ಲಿ ತೊಡಗಿದ್ದರಿಂದ ಬಳಲಿದ್ದೀರಿ, ಆದ್ದರಿಂದ ಇವಳು ಸದಾ ನಿಮ್ಮ ಜೊತೆಗೆ ಇದ್ದು, ನಿಮ್ಮ ಸೇವೆ-ಶುಶ್ರೂಷೆ ಮಾಡುವಳು ಇದರಲ್ಲಿ ಸಂಶಯವೇ ಇಲ್ಲ.॥26॥
ಮೂಲಮ್ - 27
ತಂ ಬ್ರುವಾಣಂ ತು ತದ್ವಾಕ್ಯಂ ರಾಜರ್ಷಿಂ ಧಾರ್ಮಿಕಂ ತದಾ ।
ಜಿಘೃಕ್ಷುರಬ್ರವೀತ್ಕನ್ಯಾಂ ಬಾಢಮಿತ್ಯೇವ ಸ ದ್ವಿಜಃ ॥
ಅನುವಾದ
ಹೀಗೆ ಹೇಳುತ್ತಿರುವ ಆ ಧರ್ಮಾತ್ಮಾ ರಾಜರ್ಷಿಯನ್ನು ನೋಡಿ, ಅವರ ಕನ್ಯೆಯನ್ನು ಗ್ರಹಣಮಾಡುವ ಇಚ್ಛೆಯಿಂದ ಅವರಲ್ಲಿ ‘ಸರಿ, ಹಾಗೇ ಆಗಲಿ’ ಎಂದು ಹೇಳಿದರು.॥27॥
ಮೂಲಮ್ - 28
ದತ್ತ್ವಾ ತು ತನಯಾಂ ರಾಜಾ ಸ್ವಮಾಶ್ರಮಪದಂ ಗತಃ ।
ಸಾಪಿ ತತ್ರಾವಸತ್ಕನ್ಯಾ ತೋಷಯಂತೀ ಪತಿಂ ಗುಣೈಃ ॥
ಅನುವಾದ
ಆಗ ಮಹರ್ಷಿಗೆ ತನ್ನ ಕನ್ಯೆಯನ್ನು ಒಪ್ಪಿಸಿ ರಾಜರ್ಷಿ ತೃಣಬಿಂದು ತಮ್ಮ ಆಶ್ರಮಕ್ಕೆ ಮರಳಿದರು. ಆ ಕನ್ಯೆಯು ತನ್ನ ಗುಣಗಳಿಂದ ಪತಿಯನ್ನು ಸಂತೋಷಪಡಿಸುತ್ತಾ ಅಲ್ಲೇ ಇರತೊಡಗಿದಳು.॥28॥
ಮೂಲಮ್ - 29
ತಸ್ಯಾಸ್ತು ಶೀಲವೃತ್ತಾಭ್ಯಾಂ ತುತೋಷ ಮುನಿಪುಂಗವಃ ।
ಪ್ರೀತಃ ಸ ತು ಮಹಾತೇಜಾ ವಾಕ್ಯಮೇತದುವಾಚ ಹ ॥
ಅನುವಾದ
ಅಕೆಯ ಶೀಲ-ಸದಾಚಾರದಿಂದ ಆ ಮಹಾತೇಜಸ್ವೀ ಮುನಿಶ್ರೇಷ್ಠ ಪುಲಸ್ತ್ಯರು ಬಹಳ ಸಂತುಷ್ಟರಾಗಿ ಸಂತೋಷದಿಂದ ಹೀಗೆ ನುಡಿದರು.॥29॥
ಮೂಲಮ್ - 30½
ಪರಿತುಷ್ಟೋಽಸ್ಮಿ ಸುಶ್ರೋಣಿ ಗುಣಾನಾಂ ಸಂಪದಾ ಭೃಶಮ್ ।
ತಸ್ಮಾದ್ದೇವಿ ದದಾಮ್ಯದ್ಯ ಪುತ್ರಮಾತ್ಮಸಮಂ ತವ ॥
ಉಭಯೋರ್ವಂಶಕರ್ತಾರಂ ಪೌಲಸ್ತ್ಯ ಇತಿ ವಿಶ್ರುತಮ್ ।
ಅನುವಾದ
ಸುಂದರಿ! ನಾನು ನಿನ್ನ ಸದ್ಗುಣಗಳಿಂದ ಅತ್ಯಂತ ಪ್ರಸನ್ನನಾಗಿದ್ದೇನೆ. ದೇವಿ! ಅದಕ್ಕಾಗಿ ಇಂದು ನಾನು ನಿನಗೆ ನನ್ನಂತಹ ಪುತ್ರನನ್ನು ಕರುಣಿಸುವೆನು. ಅವನು ಉಭಯಕುಲದ ಗೌರವ ಹೆಚ್ಚಿಸಿ ಪೌಲಸ್ತ್ಯ ಎಂದು ವಿಖ್ಯಾತನಾಗುವನು.॥30½॥
ಮೂಲಮ್ - 31½
ಯಸ್ಮಾತ್ತು ವಿಶ್ರುತೋ ವೇದಸ್ತ್ವಯೇಹಾಧ್ಯಯತೋ ಮಮ ॥
ತಸ್ಮಾತ್ಸ ವಿಶ್ರವಾ ನಾಮ ಭವಿಷ್ಯತಿ ನ ಸಂಶಯಃ ।
ಅನುವಾದ
ದೇವಿ! ನಾನು ಇಲ್ಲಿ ವೇದಾಧ್ಯಯನ ಮಾಡುವಾಗ ನೀನು ಅದನ್ನು ವಿಶೇಷವಾಗಿ ಕೇಳಿದ್ದೆ, ಆದ್ದರಿಂದ ನಿನ್ನ ಪುತ್ರನು ವಿಶ್ರವಣ ಎಂದು ಪ್ರಸಿದ್ಧನಾಗುವನು; ಇದರಲ್ಲಿ ಸಂಶಯವಿಲ್ಲ.॥31½॥
ಮೂಲಮ್ - 32
ಏವಮುಕ್ತಾ ತು ಸಾ ದೇವೀ ಪ್ರಹೃಷ್ಟೇನಾಂತರಾತ್ಮನಾ ॥
ಮೂಲಮ್ - 33
ಅಚಿರೇಣೈವ ಕಾಲೇನಾಸೂತ ವಿಶ್ರವಸಂ ಸುತಮ್ ।
ತ್ರಿಷು ಲೋಕೇಷು ವಿಖ್ಯಾತಂ ಯಶೋಧರ್ಮ ಸಮನ್ವಿತಮ್ ॥
ಅನುವಾದ
ಪತಿಯು ಪ್ರಸನ್ನಚಿತ್ತದಿಂದ ಹೀಗೆ ಹೇಳಿದಾಗ ಆ ದೇವಿಯು ಕೆಲವೇ ದಿನಗಳಲ್ಲಿ ವಿಶ್ರವಾ ಎಂಬ ಪುತ್ರನಿಗೆ ಜನ್ಮ ನೀಡಿದಳು. ಅವನು ಧರ್ಮ-ಯಶ ಸಂಪನ್ನನಾಗಿ ಮೂರು ಲೋಕಗಳಲ್ಲಿ ಖ್ಯಾತನಾದನು.॥32-33॥
ಮೂಲಮ್ - 34
ಶ್ರುತಿಮಾನ್ ಸಮದರ್ಶೀ ಚ ವ್ರತಾಚಾರರತಸ್ತಥಾ ।
ಪಿತೇವ ತಪಸಾಯುಕ್ತೋ ಹ್ಯಭವದ್ವಿಶ್ರವಾ ಮುನಿಃ ॥
ಅನುವಾದ
ವಿಶ್ರವಾ ಮುನಿಯು ವೇದವಿದ್ವಾಂಸನೂ, ಸಮದರ್ಶಿಯೂ, ವ್ರತಾಚರಣೆಯನ್ನು ಪಾಲಿಸುವವನೂ, ತಂದೆಯಂತೆ ತಪಸ್ವಿಯೂ ಆಗಿದ್ದನು.॥34॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಎರಡನೆಯ ಸರ್ಗ ಪೂರ್ಣವಾಯಿತು. ॥2॥