[ಮೊದಲನೆಯ ಸರ್ಗ]
ಭಾಗಸೂಚನಾ
ಶ್ರೀರಾಮನ ಆಸ್ಥಾನಕ್ಕೆ ಮಹರ್ಷಿಗಳ ಆಗಮನ, ಅವರಲ್ಲಿ ಶ್ರೀರಾಮನ ಪ್ರಶ್ನೆ
ಮೂಲಮ್ - 1
ಪ್ರಾಪ್ತರಾಜ್ಯಸ್ಯ ರಾಮಸ್ಯ ರಾಕ್ಷಸಾನಾಂ ವಧೇ ಕೃತೇ ।
ಆಜಗ್ಮುರ್ಮುನಯಃ ಸರ್ವೇ ರಾಘವಂ ಪ್ರತಿನಂದಿತುಮ್ ॥
ಅನುವಾದ
ರಾಕ್ಷಸರನ್ನು ಸಂಹರಿಸಿ ಭಗವಾನ್ ಶ್ರೀರಾಮನು ತನ್ನ ರಾಜ್ಯವನ್ನು ಪಡೆದಾಗ ಸಮಸ್ತ ಋಷಿ-ಮಹರ್ಷಿಗಳು ಶ್ರೀರಘುನಾಥನನ್ನು ಅಭಿನಂದಿಸಲು ಅಯೋಧ್ಯೆಗೆ ಆಗಮಿಸಿದರು.॥1॥
ಮೂಲಮ್ - 2
ಕೌಶಿಕೋಽಥ ಯವಕ್ರೀತೋ ಗಾರ್ಗ್ಯೋ ಗಾಲವ ಏವ ಚ ।
ಕಣ್ವೋ ಮೇಧಾತಿಥೇಃ ಪುತ್ರಃ ಪೂರ್ವಸ್ಯಾಂ ದಿಶಿ ಯೇ ಶ್ರಿತಾಃ ॥
ಅನುವಾದ
ಮುಖ್ಯವಾಗಿ ಪೂರ್ವದಿಕ್ಕಿನಲ್ಲಿ ವಾಸಿಸುವ ಕೌಶಿಕ, ಯವಕ್ರೀತ, ಗಾರ್ಗ್ಯ, ಗಾಲವ ಮತ್ತು ಮೇಧಾತಿಥಿಯ ಪುತ್ರ ಕಣ್ವ ಮುಂತಾದವರು ಅಲ್ಲಿಗೆ ಬಂದರು.॥2॥
ಮೂಲಮ್ - 3½
ಸ್ವಸ್ತ್ಯಾತ್ರೇಯಶ್ಚ ಭಗವಾನ್ನಮುಚಿಃ ಪ್ರಮುಚಿಸ್ತಥಾ ।
ಅಗಸ್ತ್ಯೋಽತ್ರಿಶ್ಚ ಭಗವಾನ್ಸುಮುಖೋ ವಿಮುಖಸ್ತಥಾ ॥
ಆಜಗ್ಮುಸ್ತೇ ಸಹಾಗಸ್ತ್ಯಾ ಯೇ ಶ್ರಿತಾ ದಕ್ಷಿಣಾಂ ದಿಶಮ್ ।
ಅನುವಾದ
ದಕ್ಷಿಣ ದಿಕ್ಕಿನಲ್ಲಿರುವ ಮಹರ್ಷಿ ಅಗಸ್ತ್ಯರೊಂದಿಗೆ ಸ್ವತ್ಸ್ಯಾತ್ರೇಯ, ಭಗವಾನ್ ನಮುಚಿ, ಪ್ರಮುಚಿ, ಭಗವಾನ್ ಅತ್ರಿ, ಸುಮುಖ ಮತ್ತು ವಿಮುಖರು ಅಲ್ಲಿಗೆ ಆಗಮಿಸಿದರು.॥3½॥
ಮೂಲಮ್ - 4½
ನೃಷಃ ಕವಷೋ ಧೌಮ್ಯಃ ಕೌಶೇಯಶ್ಚ ಮಹಾನೃಷಿಃ ॥
ತೇಽಪ್ಯಾಜಗ್ಮುಃ ಸಶಿಷ್ಯಾ ವೈ ಯೇ ಶ್ರಿತಾಃ ಪಶ್ಚಿಮಾಂ ದಿಶಮ್ ।
ಅನುವಾದ
ಪಶ್ಚಿಮ ದಿಶೆಯಲ್ಲಿ ವಾಸಿಸುವ ನೃಷಂಗ, ಕವಷ, ಧೌಮ್ಯ ಮತ್ತು ಮಹರ್ಷಿ ಕೌಶೇಯ ಇವರೂ ತಮ್ಮ ಶಿಷ್ಯರೊಂದಿಗೆ ಬಂದರು.॥4½॥
ಮೂಲಮ್ - 5
ವಸಿಷ್ಠಃ ಕಶ್ಯಪೋಽಥಾತ್ರಿರ್ವಿಶ್ವಾಮಿತ್ರಃ ಸಗೌತಮಃ ॥
ಮೂಲಮ್ - 6
ಜಮದಗ್ನಿರ್ಭರದ್ವಾಜಸ್ತೇಽಪಿ ಸಪ್ತರ್ಷಯಸ್ತಥಾ ।
ಉದೀಚ್ಯಾಂ ದಿಶಿ ಸಪ್ತೈತೇ ನಿತ್ಯಮೇವ ನಿವಾಸಿನಃ ॥
ಅನುವಾದ
ಹಾಗೆಯೇ ಉತ್ತರದಿಕ್ಕಿನಲ್ಲಿ ನಿತ್ಯ ವಾಸಿಸುವ ವಸಿಷ್ಠರೂ,* ಕಶ್ಯಪ, ಅತ್ರಿ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ಭರದ್ವಾಜ ಈ ಸಪ್ತರ್ಷಿಗಳೂ ಅಯೋಧ್ಯೆಗೆ ಆಗಮಿಸಿದರು.॥5-6॥
ಟಿಪ್ಪನೀ
ವಸಿಷ್ಠ ಮುನಿಗಳು ಒಂದು ಶರೀರದಿಂದ ಅಯೋಧ್ಯೆಯಲ್ಲಿ ಇರುತ್ತಾ, ಇನ್ನೊಂದು ಶರೀರದಿಂದ ಸಪ್ತರ್ಷಿ ಮಂಡಲದಲ್ಲಿ ಇರುತ್ತಿದ್ದರು. ಹಾಗೆಯೇ ಇನ್ನೊಂದು ಶರೀರದಿಂದ ಇಲ್ಲಿಗೆ ಬಂದಿರುವ ಮಾತನ್ನು ಇಲ್ಲಿ ಹೇಳಿದೆ ಎಂದು ತಿಳಿಯಬೇಕು.
ಮೂಲಮ್ - 7½
ಸಂಪ್ರಾಪ್ಯೈತೇ ಮಹಾತ್ಮಾನೋ ರಾಘವಸ್ಯ ನಿವೇಶನಮ್ ।
ವಿಷ್ಠಿತಾಃ ಪ್ರತಿಹಾರಾರ್ಥಂ ಹುತಾಶನ ಸಮಪ್ರಭಾಃ ॥
ವೇದವೇದಾಂಗ ವಿದುಷೋ ನಾನಾಶಾಸ್ತ್ರ ವಿಶಾರದಾಃ ।
ಅನುವಾದ
ಇವರೆಲ್ಲರೂ ಅಗ್ನಿಯಂತೆ ತೇಜಸ್ವಿಗಳೂ, ವೇದ-ವೇದಾಂಗ ವಿದ್ವಾಂಸರೂ, ಅನೇಕ ಶಾಸ್ತ್ರಗಳಲ್ಲಿ ಪ್ರವೀಣರೂ ಆಗಿದ್ದರು. ಆ ಮಹಾತ್ಮಾ ಮುನಿಗಳು ಶ್ರೀರಾಮನ ಅರಮನೆಗೆ ಬಂದು ತಾವು ಬಂದಿರುವ ಸೂಚನೆಯನ್ನು ಕೊಡಲು ಮಹಾದ್ವಾರದಲ್ಲಿ ನಿಂತರು.॥7½॥
ಮೂಲಮ್ - 8½
ದ್ವಾಃಸ್ಥಂ ಪ್ರೋವಾಚ ಧರ್ಮಾತ್ಮಾಅಗಸ್ತ್ಯೋ ಮುನಿಸತ್ತಮಃ ॥
ನಿವೇದ್ಯತಾಂ ದಾಶರಥೇರ್ಋಷಯೋ ವಯಮಾಗತಾಃ ।
ಅನುವಾದ
ಆಗ ಧರ್ಮಪರಾಯಣ ಮುನಿಶ್ರೇಷ್ಠ ಅಗಸ್ತ್ಯರು ದ್ವಾರಪಾಲಕರಲ್ಲಿ - ನೀನು ಹೋಗಿ ಭಗವಾನ್ ಶ್ರೀರಾಮನಲ್ಲಿ ನಾವು ಅನೇಕ ಋಷಿ-ಮುನಿಗಳು ನಿನ್ನನ್ನು ಭೇಟಿಯಾಗಲು ಬಂದಿರುವೆವು ಎಂದು ತಿಳಿಸು ಎಂದು ಹೇಳಿದರು.॥8½॥
ಮೂಲಮ್ - 9
ಪ್ರತೀಹಾರಸ್ತತಸ್ತೂರ್ಣಮಗಸ್ತ್ಯವಚನಾದ್ ದ್ರುತಮ್ ॥
ಮೂಲಮ್ - 10
ಸಮೀಪಂ ರಾಘವಸ್ಯಾತು ಪ್ರವಿವೇಶ ಮಹಾತ್ಮನಃ ।
ನಯೇಂಗಿತಜ್ಞಃ ಸದ್ವತ್ತೋ ದಕ್ಷೋ ಧೈರ್ಯಸಮನ್ವಿತಃ ॥
ಅನುವಾದ
ಮಹರ್ಷಿ ಅಗಸ್ತ್ಯರ ಆಜ್ಞೆಯಂತೆ ನೀತಿಜ್ಞನೂ, ಪರೇಂಗಿತಜ್ಞನೂ, ಸದಾಚಾರಿಯೂ, ಚತುರನೂ, ಧೈರ್ಯವಂತನೂ ಆದ ದ್ವಾರಪಾಲಕನು ಕೂಡಲೇ ಮಹಾತ್ಮಾ ಶ್ರೀರಾಮನ ಬಳಿಗೆ ಹೋದನು.॥9-10॥
ಮೂಲಮ್ - 11
ಸ ರಾಮಂ ದೃಶ್ಯ ಸಹಸಾ ಪೂರ್ಣಚಂದ್ರ ಸಮುದ್ಯುತಿಮ್ ।
ಅಗಸ್ತ್ಯಂ ಕಥಯಾಮಾಸ ಸಂಪ್ರಾಪ್ತಮೃಷಿಸತ್ತಮಮ್ ॥
ಅನುವಾದ
ಪೂರ್ಣಚಂದ್ರನಂತೆ ಕಾಂತಿಯುಳ್ಳ ಶ್ರೀರಾಮನನ್ನು ದರ್ಶಿಸಿ- ‘ಪ್ರಭೋ! ಮುನಿಶ್ರೇಷ್ಠ ಅಗಸ್ತ್ಯರು ಅನೇಕ ಋಷಿಗಳೊಂದಿಗೆ ಆಗಮಿಸಿರುವರು’ ಎಂದು ತಿಳಿಸಿದನು.॥11॥
ಮೂಲಮ್ - 12
ಶ್ರುತ್ವಾ ಪ್ರಾಪ್ತಾನ್ಮುನೀಂಸ್ತಾಂಸ್ತು ಬಾಲಸೂರ್ಯ ಸಮಪ್ರಭಾನ್ ।
ಪ್ರತ್ಯುವಾಚ ತತೋ ದ್ವಾಃ ಸ್ಥಂ ಪ್ರವೇಶಯ ಯಥಾಸುಖಮ್ ॥
ಅನುವಾದ
ಬಾಲ ಸೂರ್ಯನಂತೆ ದಿವ್ಯ ತೇಜಸ್ವೀ ಆ ಮುನೀಶ್ವರರ ಆಗಮನದ ಸಮಾಚಾರ ಕೇಳಿ ಶ್ರೀರಾಮಚಂದ್ರನು - ನೀವು ಹೋಗಿ ಅವರೆಲ್ಲರನ್ನು ಇಲ್ಲಿಗೆ ಆದರಪೂರ್ವಕ ಕರೆತನ್ನಿ ಎಂದು ಆಜ್ಞಾಪಿಸಿದನು.॥12॥
ಮೂಲಮ್ - 13
ದೃಷ್ಟ್ವಾ ಪ್ರಾಪ್ತಾನ್ ಮುನೀಂಸ್ತಾಂಸ್ತು ಪ್ರತ್ಯುತ್ಥಾಯ ಕೃತಾಂಜಲಿಃ ।
ಪಾದ್ಯಾರ್ಘ್ಯಾದಿಭಿರಾನರ್ಚ ಗಾಂ ನಿವೇದ್ಯ ಚ ಸಾದರಮ್ ॥
ಅನುವಾದ
(ಅಪ್ಪಣೆ ಪಡೆದು ದ್ವಾರಪಾಲಕರು ಎಲ್ಲರನ್ನು ಕರೆದು ತಂದರು) ಮುನೀಶ್ವರರ ಉಪಸ್ಥಿತಿಯನ್ನು ನೋಡಿ ಶ್ರೀರಾಮನು ಕೈಮುಗಿದು ನಿಂತುಕೊಂಡನು. ಮತ್ತೆ ಅರ್ಘ್ಯ ಪಾದ್ಯಾದಿಗಳಿಂದ ಅವರನ್ನು ಆದರದಿಂದ ಪೂಜಿಸಿದನು. ಪೂಜೆಯಲ್ಲಿ ಎಲ್ಲರಿಗೂ ಒಂದೊಂದು ಗೋವನ್ನು ಅರ್ಪಿಸಿದನು.॥1.॥
ಮೂಲಮ್ - 14
ರಾಮೋಽಭಿವಾದ್ಯ ಪ್ರಯತ ಆಸನಾನ್ಯಾದಿದೇಶ ಹ ।
ತೇಷು ಕಾಂಚನಚಿತ್ರೇಷು ಮಹತ್ಸು ಚ ವರೇಷು ಚ ॥
ಮೂಲಮ್ - 15
ಕುಶಾಂತರ್ಧಾನದತ್ತೇಷು ಮೃಗಚರ್ಮಯುತೇಷು ಚ ।
ಯಥಾರ್ಹಮುಪವಿಷ್ಟಾಸ್ತೇ ಆಸನೇಷ್ವ ಋಷಿಪುಂಗವಾಃ ॥
ಅನುವಾದ
ಶ್ರೀರಾಮನು ಶುದ್ಧಭಾವದಿಂದ ಅವರೆಲ್ಲರಿಗೆ ವಂದಿಸಿ, ಕುಳಿತುಕೊಳ್ಳಲು ಸ್ವರ್ಣಚಿತ್ರಿತ ಆಸನಗಳನ್ನು ನೀಡಿದನು. ಅವು ಸುಂದರವಾಗಿದ್ದು, ವಿಶಾಲವಾಗಿದ್ದವು. ಅವುಗಳ ಮೇಲೆ ದರ್ಭಾಸನವಿರಿಸಿ, ಮೃಗಚರ್ಮ ಹಾಸಿದ್ದರು. ಆ ಆಸನಗಳಲ್ಲಿ ಶ್ರೇಷ್ಠಮುನಿಗಳೆಲ್ಲ ಯಥಾಯೋಗ್ಯವಾಗಿ ಕುಳಿತುಕೊಂಡರು.॥14-15॥
ಮೂಲಮ್ - 15½
ರಾಮೇಣ ಕುಶಲಂ ಪೃಷ್ಟಾಃ ಸಶಿಷ್ಯಾಃ ಸಪುರೋಗಮಾಃ ।
ಮಹರ್ಷಯೋ ವೇದವಿದೋ ರಾಮಂ ವಚನಮಬ್ರುವನ್ ।
ಅನುವಾದ
ಆಗ ಶ್ರೀರಾಮನು ಶಿಷ್ಯರ ಮತ್ತು ಹಿರಿಯರ ಸಹಿತ ಅವರೆಲ್ಲರ ಕುಶಲ ಕೇಳಿದನು. ಅವನು ಕೇಳಿದಾಗ ವೇದವೇತ್ತರಾದ ಮಹರ್ಷಿಗಳು ಇಂತೆಂದರು.॥15½॥
ಮೂಲಮ್ - 16
ಕುಶಲಂ ನೋ ಮಹಾಬಾಹೋ ಸರ್ವತ್ರ ರಘುನಂದನ ॥
ಮೂಲಮ್ - 17
ತ್ವಾಂ ತು ದಿಷ್ಟ್ಯಾಂ ಕುಶಲಿನಂ ಪಶ್ಯಾಮೋ ಹತಶಾತ್ರವಮ್ ।
ದಿಷ್ಯ್ಯಾ ತ್ವಯಾ ಹತೋ ರಾಜನ್ ರಾವಣೋ ಲೋಕ ರಾವಣಃ ॥
ಅನುವಾದ
ಮಹಾಬಾಹು ರಘುನಂದನ! ನಮಗೆ ಎಲ್ಲ ಕುಶಲ ಮಂಗಲವೇ ಆಗಿದೆ. ನಾವೆಲ್ಲರು ನಿನ್ನನ್ನು ಕ್ಷೇಮವಾಗಿ ನೋಡುತ್ತಿದ್ದೇವೆ ಹಾಗೂ ನಿನ್ನ ಎಲ್ಲ ಶತ್ರುಗಳು ನಾಶವಾದುದು ಸೌಭಾಗ್ಯದ ಮಾತಾಗಿದೆ. ರಾಜನೇ! ಸಮಸ್ತ ಲೋಕಗಳನ್ನು ಅಳುವಂತೆ ಮಾಡಿದ ರಾವಣನ ವಧೆ ನೀನು ಮಾಡಿದುದು ಎಲ್ಲರಿಗೂ ಹೆಚ್ಚಿನ ಸೌಭಾಗ್ಯದ ಮಾತಾಗಿದೆ.॥16-17॥
ಮೂಲಮ್ - 18
ನಹಿ ಭಾರಃ ಸ ತೇ ರಾಮ ರಾವಣಃ ಪುತ್ರ ಪೌತ್ರವಾನ್ ।
ಸಧನುಸ್ತ್ವಂ ಹಿ ಲೋಕಾಂಸ್ತ್ರೀನ್ವಿಜಯೇಥಾ ನ ಸಂಶಯಃ ॥
ಅನುವಾದ
ಶ್ರೀರಾಮ! ಮಕ್ಕಳು ಮೊಮ್ಮಕ್ಕಳ ಸಹಿತ ರಾವಣನನ್ನು ವಧಿಸಿದುದು ನಿನಗೇನು ಭಾರವಾಗಿರಲಿಲ್ಲ. ನೀನು ಧನುಸ್ಸು ಹಿಡಿದು ನಿಂತೆಯಾದರೆ ಮೂರು ಲೋಕಗಳ ಮೇಲೆ ವಿಜಯ ಪಡೆಯುವುದರಲ್ಲಿ ಸಂಶಯವೇ ಇಲ್ಲ.॥18॥
ಮೂಲಮ್ - 19
ದಿಷ್ಯ್ಯಾ ತ್ವಯಾ ಹತೋ ರಾಮ ರಾವಣೋ ರಾಕ್ಷಸೇಶ್ವರಃ ।
ದಿಷ್ಟ್ಯಾ ವಿಜಯಿನಂ ತ್ವಾದ್ಯ ಪಶ್ಯಾಮಃ ಸಹ ಸೀತಯಾ ॥
ಅನುವಾದ
ರಘುನಂದನ ರಾಮ! ನೀನು ರಾಕ್ಷಸರಾಜ ರಾವಣನನ್ನು ವಧಿಸಿ, ಸೀತೆಯೊಂದಿಗೆ ವಿಜಯೀ ವೀರನಾದ ನಿನ್ನನ್ನು ನೋಡಿದುದು ಎಷ್ಟು ಆನಂದದ ಮಾತಾಗಿದೆ.॥19॥
ಮೂಲಮ್ - 20
ಲಕ್ಷ್ಮಣೇನ ಚ ಧರ್ಮಾತ್ಮನ್ ಭ್ರಾತ್ರಾ ತ್ವದ್ಧಿತಕಾರಿಣಾ ।
ಮಾತೃರ್ಭಿಭ್ರಾತೃಸಹಿತಂ ಪಶ್ಯಾಮೋಽದ್ಯ ವಯಂ ನೃಪ ॥
ಅನುವಾದ
ಧರ್ಮಾತ್ಮಾ ನರೇಶನೇ! ನಿನ್ನ ತಮ್ಮ ಲಕ್ಷ್ಮಣನು ಸದಾ ನಿನ್ನ ಹಿತದಲ್ಲೆ ತೊಡಗಿರುವನು. ಭರತ-ಶತ್ರುಘ್ನ ಹಾಗೂ ತಾಯಿಯರೊಂದಿಗೆ ಇಲ್ಲಿ ಆನಂದವಾಗಿ ವಿರಾಜಿಸುತ್ತಿರುವೆ. ಈ ರೂಪದಲ್ಲಿ ನಮಗೆ ನಿನ್ನ ದರ್ಶನ ಆಗುತ್ತಿರುವುದು ನಮ್ಮ ಅಹೋ ಭಾಗ್ಯವಾಗಿದೆ.॥20॥
ಮೂಲಮ್ - 21
ದಿಷ್ಟ್ಯಾಪ್ರಹಸ್ತೋ ವಿಕಟೋ ವಿರೂಪಾಕ್ಷೋ ಮಹೋದರಃ ।
ಅಕಂಪನಶ್ಚ ದುರ್ಧರ್ಷೋ ನಿಹತಾಸ್ತೇ ನಿಶಾಚರಾಃ ॥
ಅನುವಾದ
ಪ್ರಹಸ್ತ, ವಿಕಟ, ವಿರೂಪಾಕ್ಷ, ಮಹೋದರ, ದುರ್ಧರ್ಷ, ಅಕಂಪನ ಇಂತಹ ನಿಶಾಚರರು ನಿನ್ನಿಂದ ಹತರಾದುದು ಭಾರೀ ಆನಂದದ ಮಾತಾಗಿದೆ.॥21॥
ಮೂಲಮ್ - 22
ಯಸ್ಯ ಪ್ರಮಾಣಾದ್ವಿಪುಲಂ ಪ್ರಮಾಣಂ ನೇಹ ವಿದ್ಯತೇ ।
ದಿಷ್ಟ್ಯಾ ತೇ ಸಮರೇ ರಾಮ ಕುಂಭಕರ್ಣೋ ನಿಪಾತಿತಃ ॥
ಅನುವಾದ
ಶ್ರೀರಾಮ! ಎಲ್ಲರಿಗಿಂತ ಎತ್ತರ ಮತ್ತು ಸ್ಥೂಲಕಾಯನಾದ ಕುಂಭಕರ್ಣನನ್ನು ನೀನು ಸಮರಾಂಗಣದಲ್ಲಿ ವಧಿಸಿದೆ. ಇದು ನಮಗೆ ಪರಮ ಸೌಭಾಗ್ಯದ ಮಾತಾಗಿದೆ.॥22॥
ಮೂಲಮ್ - 23
ತ್ರಿಶಿರಾಶ್ಚಾತಿಕಾಯಶ್ಚ ದೇವಾಂತಕ ನರಾಂತಕೌ ।
ದಿಷ್ಟ್ಯಾತೇ ನಿಹತಾ ರಾಮ ಮಹಾವೀರ್ಯಾ ನಿಶಾಚರಾಃ ॥
ಅನುವಾದ
ಶ್ರೀರಾಮ! ತ್ರಿಶಿರಾ, ಅತಿಕಾಯ, ದೇವಾಂತಕ, ನರಾಂತಕ ಈ ಮಹಾ ಪರಾಕ್ರಮಿ ನಿಶಾಚರರು ನಿನ್ನ ಕೈಯಿಂದ ಹತರಾದುದು ನಮ್ಮ ಸೌಭಾಗ್ಯವಾಗಿದೆ.॥23॥
ಮೂಲಮ್ - 24
ಕುಂಭಶ್ಚೈವ ನಿಕುಂಭಶ್ಚ ರಾಕ್ಷಸೌ ಭೀಮದರ್ಶನೌ ।
ದಿಷ್ಟ್ಯಾ ತೌ ನಿಹತೌ ರಾಮ ಕುಂಭಕರ್ಣಸುತೌ ಮೃಧೇ ॥
ಅನುವಾದ
ರಘುವೀರನೇ! ನೋಡಲು ಮಹಾಭಯಂಕರರಾದ ಕುಂಭಕರ್ಣನ ಮಕ್ಕಳಾದ ಕುಂಭ ಮತ್ತು ನಿಕುಂಭರೆಂಬ ರಾಕ್ಷಸರೂ ಯುದ್ಧದಲ್ಲಿ ಕೊಲ್ಲಲ್ಪಟ್ಟರು.॥24॥
ಮೂಲಮ್ - 25
ಯುದ್ಧೋನ್ಮತ್ತಶ್ಚ ಮತ್ತಶ್ಚ ಕಾಲಾಂತಕಯಮೋಪಮೌ ।
ಯಜ್ಞಕೋಪಶ್ಚ ಬಲವಾನ್ ಧೂಮ್ರಾಕ್ಷೋ ನಾಮ ರಾಕ್ಷಸಃ ॥
ಅನುವಾದ
ಪ್ರಳಯಕಾಲದ ಸಂಹಾರಕಾರೀ ಯಮನಂತೆ ಭಯಾನಕ ಯುದ್ಧೋನ್ಮತ್ತ ಮತ್ತು ಮತ್ತ ಇವರೂ ಕಾಲವಶರಾದರು. ಬಲಿಷ್ಠ ಯಜ್ಞಕೋಪ ಮತ್ತು ಧೂಮ್ರಾಕ್ಷ ಎಂಬ ರಾಕ್ಷಸರು ಯಮಲೋಕದ ಅತಿಥಿಯಾದರು.॥25॥
ಮೂಲಮ್ - 26
ಕುರ್ವಂತಃ ಕದನಂ ಘೋರಮೇತೇ ಶಸ್ತ್ರಾಸ್ತ್ರಪಾರಗಾಃ ।
ಅಂತಕಪ್ರತಿಮೈರ್ಬಾಣೈರ್ದಿಷ್ಟ್ಯಾವಿನಿಹತಾಸ್ತ್ವಯಾ ॥
ಅನುವಾದ
ಇವರೆಲ್ಲ ನಿಶಾಚರರು ಅಸ್ತ್ರ-ಶಸ್ತ್ರಗಳ ಪಾರಂಗತರಾಗಿದ್ದರು. ಇವರು ಜಗತ್ತಿನಲ್ಲಿ ಭಯಂಕರ ಸಂಹಾರ ಸಾರಿದ್ದರು; ಆದರೆ ನೀನು ಅಂತಕದಂತಹ ಬಾಣಗಳಿಂದ ಎಲ್ಲರನ್ನೂ ಮೃತ್ಯು ಮುಖವಾಗಿಸಿದುದು ತುಂಬಾ ಹರ್ಷದ ಮಾತಾಗಿದೆ.॥26॥
ಮೂಲಮ್ - 27
ದಿಷ್ಟ್ಯಾ ತ್ವಂ ರಾಕ್ಷಸೇಂದ್ರೇಣ ದ್ವಂದ್ವಯುದ್ಧಮುಪಾಗತಃ ।
ದೇವತಾನಾಮವಧ್ಯೇನ ವಿಜಯಂ ಪ್ರಾಪ್ತವಾನಸಿ ॥
ಅನುವಾದ
ರಾಕ್ಷಸರಾಜಾ ರಾವಣನು ದೇವತೆಗಳಿಗೂ ಅವಧ್ಯನಾಗಿದ್ದನು. ಅವನೊಂದಿಗೆ ಯುದ್ಧಮಾಡಿ ವಿಜಯಪಡೆದುದು ದೊಡ್ಡ ಸೌಭಾಗ್ಯದ ಮಾತಾಗಿದೆ.॥27॥
ಮೂಲಮ್ - 28
ಸಂಖ್ಯೇ ತಸ್ಯ ನ ಕಿಂಚಿತ್ತು ರಾವಣಸ್ಯ ಪರಾಭವಃ ।
ದ್ವಂದ್ವಯುದ್ಧಮನುಪ್ರಾಪ್ತೋ ದಿಷ್ಟ್ಯಾತೇ ರಾವಣಿರ್ಹತಃ ॥
ಅನುವಾದ
ಯುದ್ಧದಲ್ಲಿ ನಿನ್ನಿಂದ ರಾವಣನ ಪರಾಭವ (ಸಂಹಾರ)ವಾದುದು ದೊಡ್ಡ ಮಾತಲ್ಲ; ಆದರೆ ದ್ವಂದ್ವಯುದ್ಧದಲ್ಲಿ ಲಕ್ಷ್ಮಣನಿಂದ ರಾವಣಿಯ ವಧೆಯಾದುದು ದೊಡ್ಡ ಆಶ್ಚರ್ಯದ ಮಾತಾಗಿದೆ.॥28॥
ಮೂಲಮ್ - 29
ದಿಷ್ಟ್ಯಾ ತಸ್ಯ ಮಹಾಬಾಹೋ ಕಾಲಸ್ಯೇವಾಭಿಧಾವತಃ ।
ಮುಕ್ತಃ ಸುರರಿಪೋರ್ವೀರ ಪ್ರಾಪ್ತಶ್ಚ ವಿಜಯಸ್ತ್ವಯಾ ॥
ಅನುವಾದ
ಮಹಾಬಾಹು ವೀರನೇ! ಕಾಲನಂತೆ ಆಕ್ರಮಣ ಮಾಡುವ ಆ ದೇವದ್ರೋಹಿ ರಾಕ್ಷಸನ ನಾಗಪಾಶದಿಂದ ಮುಕ್ತವಾಗಿ ನೀನು ವಿಜಯಪಡೆದುದು ಮಹಾ ಸೌಭಾಗ್ಯದ ಮಾತಾಗಿದೆ.॥29॥
ಮೂಲಮ್ - 30½
ಅಭಿನಂದಾಮ ತೇ ಸರ್ವೇ ಸಂಶ್ರುತ್ಯೇಂದ್ರಜಿತೋ ವಧಮ್ ।
ಅವಧ್ಯಃ ಸರ್ವಭೂತಾನಾಂ ಮಹಾಮಾಯಾಧರೋ ಯುಧಿ ॥
ವಿಸ್ಮಯಸ್ತ್ವೇಷ ಚಾಸ್ಮಾಕಂ ತಂ ಶ್ರುತ್ವೇಂದ್ರಜಿತಂ ಹತಮ್ ।
ಅನುವಾದ
ಇಂದ್ರಜಿತುವಿನ ವಧೆಯ ಸಮಾಚಾರ ಕೇಳಿ ನಾವೆಲ್ಲರೂ ಬಹಳ ಸಂತೋಷಗೊಂಡಿದ್ದೇವೆ. ಇದಕ್ಕಾಗಿ ನಿನ್ನನ್ನು ಅಭಿನಂದಿಸುತ್ತೇವೆ. ಆ ಮಹಾಮಾಯಾವೀ ರಾಕ್ಷಸನು ಯುದ್ಧದಲ್ಲಿ ಎಲ್ಲ ಪ್ರಾಣಿಗಳಿಗೆ ಅವಧ್ಯನಾಗಿದ್ದನು. ಅಂತಹ ಇಂದ್ರಜಿತನೂ ಹತನಾದುದನ್ನು ಕೇಳಿ ನಮಗೆ ಹೆಚ್ಚಿನ ಆಶ್ಚರ್ಯವಾಗಿದೆ.॥30½॥
ಮೂಲಮ್ - 31½
ಏತೇ ಚಾನ್ಯೇ ಚ ಬಹವೋ ರಾಕ್ಷಸಾಃ ಕಾಮರೂಪಿಣಃ ॥
ದಿಷ್ಟ್ಯಾ ತ್ವಯಾ ಹತಾ ವೀರಾ ರಘೂಣಾಂ ಕುಲವರ್ಧನ ।
ಅನುವಾದ
ರಘುಕುಲವರ್ಧನ ರಾಮ! ಇನ್ನೂ ಅನೇಕ ಕಾಮರೂಪಿಗಳಾದ ರಾಕ್ಷಸವೀರರು ನಿನ್ನಿಂದ ವಧಿಸಲ್ಪಟ್ಟರು; ಇದು ಬಹಳ ಆನಂದದ ಮಾತಾಗಿದೆ.॥31½॥
ಮೂಲಮ್ - 32½
ದತ್ತ್ವಾ ಪುಣ್ಯಾಮಿಮಾಂ ವೀರ ಸೌಮ್ಯಾಮಭಯದಕ್ಷಿಣಾಮ್ ॥
ದಿಷ್ಟ್ಯಾ ವರ್ಧಸಿ ಕಾಕುತ್ಸ್ಥ ಜಯೇನಾಮಿತ್ರಕರ್ಶನ ।
ಅನುವಾದ
ಕಾಕುತ್ಸ್ಥಕುಲಭೂಷಣ ವೀರನೇ! ಶತ್ರುದಮನ ಶ್ರೀರಾಮ! ಜಗತ್ತಿಗೆ ಈ ಪರಮ ಪುಣ್ಯಮಯ ಅಭಯದಾನವನ್ನು ನೀನು ಕೊಟ್ಟು, ವಿಜಯದಿಂದಾಗಿ ಅಭಿನಂದನೆಗೆ ಪಾತ್ರನಾಗಿರುವೆ. ನಿನ್ನ ಕೀರ್ತಿಯು ನಿರಂತರ ವರ್ಧಿಸುತ್ತಿದೆ; ಇದು ಎಷ್ಟು ಹರ್ಷದ ಮಾತಾಗಿದೆ.॥32½॥
ಮೂಲಮ್ - 33½
ಶುತ್ರತ್ವಾ ತು ವಚನಂ ತೇಷಾಂ ಮುನೀನಾಂ ಭಾವಿತಾತ್ಮನಾಮ್ ॥
ವಿಸ್ಮಯಂ ಪರಮಂ ಗತ್ವಾ ರಾಮಃ ಪ್ರಾಂಜಲಿರಬ್ರವೀತ್ ।
ಅನುವಾದ
ಆ ಪವಿತ್ರಾತ್ಮಾ ಮುನಿಗಳ ಮಾತನ್ನು ಕೇಳಿ ಶ್ರೀರಾಮನಿಗೆ ಭಾರೀ ಆಶ್ಚರ್ಯವಾಗಿ, ಕೈಮುಗಿದುಕೊಂಡು ಕೇಳತೊಡಗಿದನು.॥33½॥
ಮೂಲಮ್ - 34½
ಭಗವಂತಃ ಕುಂಭಕರ್ಣಂ ರಾವಣಂ ಚ ನಿಶಾಚರಮ್ ॥
ಅತಿಕ್ರಮ್ಯ ಮಹಾವೀರ್ಯೌ ಕಿಂ ಪ್ರಶಂಸಥ ರಾವಣಿಮ್ ।
ಅನುವಾದ
ಪೂಜ್ಯ ಮಹರ್ಷಿಗಳೇ! ನಿಶಾಚರ ರಾವಣ ಮತ್ತು ಕುಂಭಕರ್ಣ ಇಬ್ಬರೂ ಮಹಾಪರಾಕ್ರಮ ಸಂಪನ್ನರಾಗಿದ್ದರು. ಅವರಿಬ್ಬರನ್ನು ಬಿಟ್ಟು ನೀವು ರಾವಣಪುತ್ರ ಇಂದ್ರಜಿತುವನ್ನೇ ಏಕೆ ಪ್ರಶಂಸಿಸುತ್ತಿದ್ದೀರಿ.॥34½॥
ಮೂಲಮ್ - 35
ಮಹೋದರಂ ಪ್ರಹಸ್ತಂ ಚ ವಿರೂಪಾಕ್ಷಂ ಚ ರಾಕ್ಷಸಮ್ ॥
ಮೂಲಮ್ - 36
ಮತ್ತೋನ್ಮತ್ತೌ ಚ ದುರ್ಧರ್ಷೌ ದೇವಾಂತಕ ನರಾಂತಕೌ ।
ಅತಿಕ್ರಮ್ಯ ಮಹಾವೀರಾನ್ ಕಿಂ ಪ್ರಶಂಸಥ ರಾವಣಿಮ್ ॥
ಅನುವಾದ
ಮಹೋದರ, ಪ್ರಹಸ್ತ, ವಿರೂಪಾಕ್ಷ ಮತ್ತ, ಉನ್ಮತ್ತ, ದುರ್ಧರ್ಷವೀರ ನರಾಂತಕ-ವೇದಾಂತಕ ಈ ಮಹಾ ವೀರರನ್ನು ಬಿಟ್ಟು ನೀವು ರಾವಣಿಯನ್ನು ಏಕೆ ಪ್ರಶಂಸಿಸುತ್ತಿದ್ದೀರ.॥35-36॥
ಮೂಲಮ್ - 37
ಅತಿಕಾಯಂ ತ್ರಿಶಿರಸಂ ಧೂಮ್ರಾಕ್ಷಂ ಚ ನಿಶಾಚರಮ್ ।
ಅತಿಕ್ರಮ್ಯ ಮಹಾವೀರ್ಯಾನ್ ಕಿಂ ಪ್ರಶಂಸಥ ರಾವಣಿಮ್ ॥
ಅನುವಾದ
ಅತಿಕಾಯ, ತ್ರಿಶಿರಾ, ನಿಶಾಚರ, ಧೂಮ್ರಾಕ್ಷ ಈ ಮಹಾ ಪರಾಕ್ರಮಿಗಳನನ್ನು ಬಿಟ್ಟು ಇಂದ್ರಜಿತುವನ್ನು ಏಕೆ ಪ್ರಶಂಸಿಸುತ್ತಿದ್ದೀರಿ.॥37॥
ಮೂಲಮ್ - 38
ಕೀದೃಶೋ ವೈ ಪ್ರಭಾವೋಸ್ಯ ಕಿಂ ಬಲಂಕಃ ಪರಾಕ್ರಮಃ ।
ಕೇನ ವಾ ಕಾರಣೇನೈಷ ರಾವಣಾದತಿರಿಚ್ಯತೇ ॥
ಅನುವಾದ
ಅವನ ಪ್ರಭಾವ ಅಂತಹದೇನಿತ್ತು? ಅವನಲ್ಲಿ ಯಾವ ಬಲ-ಪರಾಕ್ರಮವಿತ್ತು? ಯಾವ ಕಾರಣದಿಂದ ರಾವಣನನ್ನು ಮೀರಿಸಿದ್ದನು.॥38॥
ಮೂಲಮ್ - 39
ಶಕ್ಯಂ ಯದಿ ಮಯಾ ಶ್ರೋತುಂ ನ ಖಲ್ವಾಜ್ಞಾಪಯಾಮಿ ವಃ ।
ಯದಿ ಗುಹ್ಯಂ ನ ಚೇದ್ವಕ್ತುಂ ಶ್ರೋತುಮಿಚ್ಛಾಮಿ ಕಥ್ಯತಾಮ್ ॥
ಅನುವಾದ
ಇದನ್ನು ನಾನು ಕೇಳಲು ಯೋಗ್ಯವಾಗಿದ್ದರೆ, ಗುಪ್ತವಲ್ಲದಿದ್ದರೆ, ಅದನ್ನು ಕೇಳಲು ಬಯಸುತ್ತಿದ್ದೇನೆ. ತಾವು ತಿಳಿಸುವ ಕೃಪೆ ಮಾಡಿರಿ. ಇದು ನನ್ನ ವಿನಮ್ರ ವಿನಂತಿಯಾಗಿದೆ, ಆಜ್ಞೆಯಲ್ಲ.॥39॥
ಮೂಲಮ್ - 40
ಶಕ್ರೋಽಪಿ ವಿಜಿತಸ್ತೇನ ಕಥಂ ಲಬ್ಧವರಶ್ಚ ಸಃ ।
ಕಥಂ ಚ ಬಲವಾನ್ಪುತ್ರೋ ನ ಪಿತಾ ತಸ್ಯ ರಾವಣಃ ॥
ಅನುವಾದ
ಆ ರಾವಣ ಪುತ್ರನು ಇಂದ್ರನನ್ನು ಹೇಗೆ ಗೆದ್ದಿದ್ದನು? ಎಂತಹ ವರದಾನ ಪಡೆದಿದ್ದನು? ಮಗನು ಮಹಾಬಲಶಾಲಿಯಾಗಿ, ಅವನ ತಂದೆ ರಾವಣನು ಹಾಗೆ ಬಲಶಾಲಿ ಏಕೆ ಆಗಲಿಲ್ಲ.॥40॥
ಮೂಲಮ್ - 41
ಕಥಂ ಪಿತುಶ್ಚಾಪ್ಯಧಿಕೋ ಮಹಾಹವೇ
ಶಕ್ರಸ್ಯ ಜೇತಾ ಹಿ ಕಥಂ ಸ ರಾಕ್ಷಸಃ ।
ವರಾಂಶ್ಚ ಲಬ್ಧಾಃ ಕಥಯಸ್ವ ಮೇದ್ಯ
ಪಾಪ್ರಚ್ಛತಶ್ಚಾಸ್ಯ ಮುನೀಂದ್ರ ಸರ್ವಮ್ ॥
ಅನುವಾದ
ಮುನೀಶ್ವರರೇ! ಆ ರಾಕ್ಷಸ ಇಂದ್ರಜಿತನು ಮಹಾ ಸಂಗ್ರಾಮದಲ್ಲಿ ತಂದೆಗಿಂತಲೂ ಮಿಗಿಲಾದ ಶಕ್ತಿಶಾಲಿ ಹಾಗೂ ಇಂದ್ರನ ಮೇಲೆ ವಿಜಯವನ್ನು ಹೇಗೆ ಪಡೆದನು? ಎಂತಹ ವರಗಳನ್ನು ಪಡೆದುಕೊಂಡಿದ್ದನು? ಇದೆಲ್ಲವನ್ನು ತಿಳಿಯಲು ನಾನು ಬಯಸುತ್ತೇನೆ. ಅದಕ್ಕಾಗಿ ಪದೇ-ಪದೇ ಕೇಳುತ್ತಿದ್ದೇನೆ. ಇದೆಲ್ಲವನ್ನು ತಾವು ನನಗೆ ಹೇಳಿರಿ.॥41॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಉತ್ತರಕಾಂಡದಲ್ಲಿ ಮೊದಲನೆಯ ಸರ್ಗ ಪೂರ್ಣವಾಯಿತು. ॥1॥