वाचनम्
ಭಾಗಸೂಚನಾ
ಭರತನು ಶ್ರೀರಾಮನಿಗೆ ರಾಜ್ಯವನ್ನು ವಹಿಸಿಕೊಟ್ಟುದು, ಶ್ರೀರಾಮನ ನಗರಯಾತ್ರೆ, ಶ್ರೀರಾಮನ ರಾಜ್ಯಾಭಿಷೇಕ, ವಾನರರ ಬೀಳ್ಕೊಡುಗೆ, ರಾಮಾಯಣಗ್ರಂಥದ ಮಹಿಮೆ
ಮೂಲಮ್ - 1
ಶಿರಸ್ಯಂಜಲಿಮಾಧಾಯ ಕೈಕೇಯ್ಯಾನಂದ ವರ್ಧನಃ ।
ಬಭಾಷೇ ಭರತೋ ಜ್ಯೇಷ್ಠಂ ರಾಮಂ ಸತ್ಯಪರಾಕ್ರಮಮ್ ॥
ಅನುವಾದ
ಕೈಕೇಯಿಗೆ ಆನಂದವರ್ಧನನಾದ ಭರತನು ಜೋಡಿಸಿ ಕೈಗಳನ್ನು ತಲೆಯಲ್ಲಿ ಹೊತ್ತು, ಸತ್ಯ ಪರಾಕ್ರಮಿಯಾದ ಅಣ್ಣನಾದ ಶ್ರೀರಾಮನಲ್ಲಿ ಹೇಳಿದನು.॥1॥
ಮೂಲಮ್ - 2
ಪೂಜಿತಾ ಮಾಮಿಕಾ ಮಾತಾ ದತ್ತಂ ರಾಜ್ಯಮಿದಂ ಮಮ ।
ತದ್ದದಾಮಿ ಪುನಸ್ತುಭ್ಯಂ ಯಥಾ ತ್ವಮದದಾ ಮಮ ॥
ಅನುವಾದ
ಅಣ್ಣಾ! ನೀನು ನನ್ನ ತಾಯಿಯನ್ನು ಸಮ್ಮಾನಿಸಿ, ಈ ರಾಜ್ಯವನ್ನು ನನಗೆ ಕೊಟ್ಟೆ. ನೀನು ನನಗೆ ಕೊಟ್ಟಂತೆ ಈಗ ನಾನು ಪುನಃ ನಿನಗೆ ಹಿಂದಕ್ಕೆ ಕೊಡುತ್ತಿದ್ದೇನೆ.॥2॥
ಮೂಲಮ್ - 3
ಧುರಮೇಕಾಕಿನಾ ನ್ಯಸ್ತಾಂ ವೃಷಭೇಣ ಬಲೀಯಸಾ ।
ಕಿಶೋರವದ್ ಗುರುಂ ಭಾರಂ ನ ವೋಢುಮಹಮುತ್ಸಹೇ ॥
ಅನುವಾದ
ಅತ್ಯಂತ ಬಲಿಷ್ಠ ಎತ್ತು ಹೊರುವ ಭಾರವನ್ನು ಒಂದು ಕರು ಹೊರಲಾದರು; ಹಾಗೆಯೇ ನಾನು ಈ ದೊಡ್ಡ ಭಾರವನ್ನು ಹೊರಲು ಅಸಮರ್ಥನಾಗಿದ್ದೇನೆ.॥3॥
ಮೂಲಮ್ - 4
ವಾರಿವೇಗೇನ ಮಹತಾ ಭಿನ್ನಃ ಸೇತುರಿವ ಕ್ಷರನ್ ।
ದುರ್ಬಂಧನಮಿದಂ ಮನ್ಯೇ ರಾಜ್ಯಚ್ಛಿದ್ರಮ ಸಂವೃತಮ್ ॥
ಅನುವಾದ
ಅಣೆಕಟ್ಟು ಒಡೆದು ಹೋಗಿ ಹರಿಯುವ ನೀರಿನ ರಭಸವನ್ನು ತಡೆಯಲು ಸಾಧ್ಯವಾಗದಿರುವಂತೆಯೇ ರಾಜ್ಯದ ತೆರೆದುಕೊಂಡಿರುವ ಛಿದ್ರಗಳನ್ನು ಸರಿಪಡಿಸುವುದು ನನಗೆ ಅಸಂಭವವೆಂದೇ ನಾನು ತಿಳಿಯುತ್ತೇನೆ.॥4॥
ಮೂಲಮ್ - 5
ಗತಿಂ ಖರ ಇವಾಶ್ವಸ್ಯ ಹಂಸಸ್ಯೇವ ಚ ವಾಯಸಃ ।
ನಾನ್ವೇತುಮುತ್ಸಹೇವೀರ ತವ ಮಾರ್ಗಮರಿಂದಮ ॥
ಅನುವಾದ
ಶತ್ರುದಮನ ವೀರನೇ! ಕತ್ತೆಯು ಕುದುರೆಯ ಹಾಗೂ ಕಾಗೆಯು ಹಂಸದ ಗತಿಯನ್ನು ಅನುಸರಿಸಲಾರದೋ ಹಾಗೆಯೇ ನಾನು ನಿನ್ನ ಮಾರ್ಗದ-ರಕ್ಷಣೀಯ ರಕ್ಷಣರೂಪೀ ಕೌಶಲ್ಯವನ್ನು ಅನುಕರಣಮಾಡಲಾರೆನು.॥5॥
ಮೂಲಮ್ - 6
ಯಥಾ ಚಾರೋಪಿತೋ ವೃಕ್ಷೋ ಜಾತಶ್ಚಾಂತರ್ನಿವೇಶನೇ ।
ಮಹಾನಪಿ ದುರಾರೋಹೋ ಮಹಾಸ್ಕಂಧಃ ಪ್ರಶಾಖವಾನ್ ॥
ಮೂಲಮ್ - 7
ಶೀರ್ಯೇತ ಪುಷ್ಪಿತೋ ಭೂತ್ವಾ ನ ಲಾನಿ ಪ್ರದರ್ಶಯನ್ ।
ತಸ್ಯ ನಾನುಭವೇದರ್ಥಂ ಯಸ್ಯ ಹೇತೋಃ ಸ ರೋಪಿತಃ ॥
ಮೂಲಮ್ - 8
ಏಷೋಪಮಾ ಮಹಾಬಾಹೋ ತ್ವಮರ್ಥಂ ವೇತ್ತುಮರ್ಹಸಿ ।
ಯದ್ಯಸ್ಮಾನ್ಮನುಜೇಂದ್ರ ತ್ವಂ ಭರ್ತಾಭೃತ್ಯಾನ್ನ ಶಾಧಿ ಹಿ ॥
ಅನುವಾದ
ಮಹಾಬಾಹೋ! ನರೇಂದ್ರನೇ! ಮನೆಯ ನಿವೇಶನದಲ್ಲಿ ವೃಕ್ಷದ ಸಸಿಯೊಂದನ್ನು ನೆಡಲಾಯಿತು, ಅದು ಕಾಲಾಂತರದಲ್ಲಿ ದೊಡ್ಡದಾಗಿ ಎತ್ತರವಾಗಿ ಬೆಳೆಯಿತು, ಅದನ್ನು ಹತ್ತಲೂ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಅದರ ಕಾಂಡವು ದೊಡ್ಡದಾಗಿ, ರೆಂಬೆಗಳು ಹೆಚ್ಚಾಗಿಯೇ ಇದ್ದವು. ಆ ವೃಕ್ಷದಲ್ಲಿ ಹೂವು ಬಿಡುತ್ತಿದ್ದವು, ಆದರೆ ಹಣ್ಣುಗಳು ಕಂಡುಬಂದಲ್ಲ. ಈ ಸ್ಥಿತಿಯಲ್ಲಿ ಅದು ಧರೆಗುರುಳಿತು. ಗಿಡನೆಟ್ಟವನು ಯಾವ ಫಲದ ಉದ್ದೇಶದಿಂದ ನೆಟ್ಟಿದ್ದನೋ, ಅದನ್ನು ಅನುಭವಿಸಲಿಲ್ಲ. ಈ ಉಪಮೆಯು ನಿನ್ನ ಕುರಿತು ಅನ್ವಯಿಸುತ್ತದೆ. ನೀನು ಪ್ರಜೆಗಳನ್ನು ರಕ್ಷಿಸುವೆ ಎಂದೇ ನಿನ್ನನ್ನು ಪಾಲನ-ಪೋಷಣ ಮಾಡಿ ದೊಡ್ಡವನಾಗಿಸಲಾಯಿತು. ಆದರೆ ಅವರ ರಕ್ಷಣೆಯ ಸಮಯಬಂದಾಗ ಕಾರಣಾಂತರದಿಂದ ಹೊಣೆಯನ್ನು ತಪ್ಪಿಸಿಕೊಂಡು ಕಾಡಿಗೆ ಹೊರಟುಹೋದೆ. ನೀನು ಸ್ವಾಮಿಯಾಗಿಯೂ ಪ್ರಜೆಗಳನ್ನು ಪಾಲಿಸದಿದ್ದರೆ ನಿಷ್ಪಲ ವೃಕ್ಷದಂತೆ ನೀನು ಆಗುವೆ.॥6-8॥
ಮೂಲಮ್ - 9
ಜಗದದ್ಯಾಭಿಷಿಕ್ತಂ ತ್ವಾಮನುಪಶ್ಯತು ರಾಘವ ।
ಪ್ರತಪಂತಮಿವಾದಿತ್ಯಂ ಮಧ್ಯಾಹ್ನೇ ದೀಪ್ತತೇಜಸಮ್ ॥
ಅನುವಾದ
ರಘುನಂದನ! ಜಗತ್ತಿನ ಎಲ್ಲ ಜನರು ನಿನ್ನ ರಾಜ್ಯಾಭಿಷೇಕ ನೋಡಲೆಂದೆ ನಮ್ಮ ಇಚ್ಛೆಯಾಗಿದೆ. ಮಧ್ಯಾಹ್ನದ ಸೂರ್ಯ ನಂತೆ ನಿನ್ನ ತೇಜ ಮತ್ತು ಪ್ರತಾಪ ಹೆಚ್ಚುತ್ತಾ ಇರಲಿ.॥9॥
ಮೂಲಮ್ - 10
ತೂರ್ಯಸಂಘಾತ ನಿರ್ಘೋಷೈಃ ಕಾಂಚಿನೂಪುರ ನಿಃಸ್ವನೈಃ ।
ಮಧುರೈರ್ಗೀತಶಬ್ದೈಶ್ಚ ಪ್ರತಿಬುಧ್ಯಸ್ವ ಶೇಷ್ವ ಚ ॥
ಅನುವಾದ
ನೀನು ವಿವಿಧ ವಾದ್ಯಗಳ ಮಧುರ ಧ್ವನಿಗಳಿಂದ, ಓಡ್ಯಾಣ- ನೂಪುರಗಳ ಝಣತ್ಕಾರಗಳಿಂದ, ಮಧುರ ಗೀತ ಧ್ವನಿಗಳಿಂದ ನೀನು ಎಚ್ಚರಗೊಳ್ಳು.॥10॥
ಮೂಲಮ್ - 11
ಯಾವದಾವರ್ತತೇ ಚಕ್ರಂ ಯಾವತೀ ಚ ವಸುಂಧರಾ ।
ತಾವತ್ತ್ವಮಿಹ ಲೋಕಸ್ಯ ಸ್ವಾಮಿತ್ವಮನುವರ್ತಯ ॥
ಅನುವಾದ
ಕಾಲಚಕ್ರವು ತಿರುಗುತ್ತಿರು ವವರೆಗೆ, ಪೃಥಿವಿಯು ಸ್ಥಿರವಾಗಿರುವವರೆಗೆ ನೀನು ಈ ಪ್ರಪಂಚಕ್ಕೆ ಒಡೆಯನಾಗಿ ಇರು.॥11॥
ಮೂಲಮ್ - 12
ಭರತಸ್ಯ ವಚಃ ಶ್ರುತ್ವಾ ರಾಮಃ ಪುರಪುಂಜಯಃ ।
ತಥೇತಿ ಪ್ರತಿಜಗ್ರಾಹ ನಿಷಸಾದಾಸನೇ ಶುಭೇ ॥
ಅನುವಾದ
ಭರತನ ಈ ಮಾತನ್ನು ಕೇಳಿ ಶತ್ರುನಗರವನ್ನು ಜಯಿಸುವ ಶ್ರೀರಾಮನು ‘ತಥಾಸ್ತು’ ಎಂದು ಹೇಳಿ ಭರತನ ಮಾತನ್ನು ಒಪ್ಪಿಕೊಂಡನು ಹಾಗೂ ಒಂದು ಸುಂದರ ಆಸನದಲ್ಲಿ ವಿರಾಜಮಾನನಾದನು.॥12॥
ಮೂಲಮ್ - 13
ತತಃ ಶತ್ರುಘ್ನವಚನಾನ್ನಿಪುಣಾಃ ಶ್ಮಶ್ರುವರ್ಧನಾಃ ।
ಸುಖಹಸ್ತಾಃ ಸುಶೀಘ್ರಾಶ್ಚ ರಾಘವಂ ಪರ್ಯವಾರಯನ್ ॥
ಅನುವಾದ
ಮತ್ತೆ ಶತ್ರುಘ್ನನ ಆಜ್ಞೆಯಂತೆ ಶೀಘ್ರಕರ್ಮಿಗಳೂ, ಕೈಚಳಕವಿರುವವರೂ ಆದ ನಿಪುಣ ನಾಯಿಂದರನ್ನು ಕರೆಸಲಾಯಿತು. ಅವರೆಲ್ಲರೂ ಶ್ರೀರಘುನಾಥನನ್ನು ಸುತ್ತುವರಿದು ನಿಂತರು.॥13॥
ಮೂಲಮ್ - 14
ಪೂರ್ವಂ ತು ಭರತೇ ಸ್ನಾತೇ ಲಕ್ಷ್ಮಣೇ ಚ ಮಹಾಬಲೇ ।
ಸುಗ್ರೀವೇ ವಾನರೇಂದ್ರೇ ಚ ರಾಕ್ಷಸೇಂದ್ರೇ ವಿಭೀಷಣೇ ॥
ಮೂಲಮ್ - 15
ವಿಶೋಧಿತ ಜಟಃ ಸ್ನಾತಶ್ಚಿತ್ರಮಾಲ್ಯಾನುಲೇಪನಃ ।
ಮಹಾರ್ಹವಸನೊಪೇತಸ್ತಸ್ಥೌ ತತ್ರ ಶ್ರಿಯಾ ಜ್ವಲನ್ ॥
ಅನುವಾದ
ಮೊದಲು ಭರತನು, ಮತ್ತೆ ಮಹಾಬಲಿ ಲಕ್ಷ್ಮಣನೂ, ವಾನರರಾಜ ಸುಗ್ರೀವನೂ, ರಾಕ್ಷಸರಾಜ ವಿಭೀಷಣನೂ ಅನುಕ್ರಮವಾಗಿ ಸ್ನಾನಮಾಡಿದರು. ಅನಂತರ ಜಟಾ ವಿಸರ್ಜನ ಮಾಡಿ ಶ್ರೀರಾಮನೂ ಸ್ನಾನ ಮಾಡಿದನು. ಮತ್ತೆ ವಿಚಿತ್ರ ಪುಷ್ಪಮಾಲೆ, ಸುಂದರ ಅನುಲೇಪ ಮತ್ತು ಬಹು ಅಮೂಲ್ಯ ಪೀತಾಂಬರ ಧರಿಸಿದನು. ಆಭೂಷಣಗಳ ಶೋಭೆಯಿಂದ ಪ್ರಕಾಶಿಸುತ್ತಾ ಅವನು ಸಿಂಹಾಸನದಲ್ಲಿ ವಿರಾಜಮಾನನಾದನು.॥14-15॥
ಮೂಲಮ್ - 16
ಪ್ರತಿಕರ್ಮ ಚ ರಾಮಸ್ಯ ಕಾರಯಾಮಾಸ ವೀರ್ಯವಾನ್ ।
ಲಕ್ಷ್ಮಣಸ್ಯ ಚ ಲಕ್ಷ್ಮೀವಾನಿಕ್ಷ್ವಾಕುಕುಲವರ್ಧನಃ ॥
ಅನುವಾದ
ಇಕ್ಷ್ವಾಕುಕುಲದ ಕೀರ್ತಿಯನ್ನು ಬೆಳಗಿಸುವ ಪರಾಕ್ರಮೀ ವೀರ ಶತ್ರುಘ್ನನು ಶ್ರೀರಾಮ ಮತ್ತು ಲಕ್ಷ್ಮಣರನ್ನು ಶೃಂಗರಿಸಿದನು.॥16॥
ಮೂಲಮ್ - 17
ಪ್ರತಿಕರ್ಮ ಚ ಸೀತಾಯಾಃ ಸರ್ವಾ ದಶರಥಸ್ತ್ರಿಯಃ ।
ಆತ್ಮನೈವ ತದಾ ಚಕ್ರುರ್ಮನಸ್ವಿನ್ಯೋ ಮನೋಹರಮ್ ॥
ಅನುವಾದ
ಆಗ ದಶರಥ ರಾಜನ ಎಲ್ಲ ಮನಸ್ವಿನೀ ರಾಣಿಯರು ಸ್ವತಃ ತಮ್ಮ ಕೈಗಳಿಂದ ಸೀತೆಯನ್ನು ಮನೋಹರವಾಗಿ ಶೃಂಗರಿಸಿದರು.॥17॥
ಮೂಲಮ್ - 18
ತತೋ ವಾನರಪತ್ನೀನಾಂ ಸರ್ವಾಸಾಮೇವ ಶೋಭನಮ್ ।
ಚಕಾರ ಯತ್ನಾತ್ ಕೌಸಲ್ಯಾ ಪ್ರಹೃಷ್ಟಾ ಪುತ್ರವತ್ಸಲಾ ॥
ಅನುವಾದ
ಪುತ್ರವತ್ಸಲಾ ಕೌಸಲ್ಯೆಯು ಅತ್ಯಂತ ಹರ್ಷೋತ್ಸಾಹದಿಂದ ಪ್ರಯತ್ನಪೂರ್ವಕ ಸಮಸ್ತ ವಾನರ ಪತ್ನಿಯರನ್ನು ಸುಂದರ ಶೃಂಗಾರ ಮಾಡಿದಳು.॥18॥
ಮೂಲಮ್ - 19
ತತಃ ಶತ್ರುಘ್ನವಚನಾತ್ಸುಮಂತ್ರೋ ನಾಮ ಸಾರಥಿಃ ।
ಯೋಜಯಿತ್ವಾಭಿಚಕ್ರಾಮ ರಥಂ ಸರ್ವಾಂಗ ಶೋಭನಮ್ ॥
ಅನುವಾದ
ಅನಂತರ ಶತ್ರುಘ್ನನ ಆಜ್ಞೆಯಿಂದ ಸಾರಥಿ ಸುಮಂತ್ರನು ಒಂದು ಸರ್ವಾಂಗ ಸುಂದರ ರಥವನ್ನು ಸಜ್ಜಾಗಿಸಿ ತೆಗೆದುಕೊಂಡು ಬಂದನು.॥19॥
ಮೂಲಮ್ - 20
ಅಗ್ನ್ಯರ್ಕಾಮಲಸಂಕಾಶಂ ದಿವ್ಯಂ ದೃಷ್ಟ್ವಾ ರಥಸ್ಥಿತಮ್ ।
ಆರುರೋಹ ಮಹಾಬಾಹೂ ರಾಮಃ ಪರಪುರಂಜಯಃ ॥
ಅನುವಾದ
ಸೂರ್ಯಾಗ್ನಿಯಂತೆ ದೇದೀಪ್ಯಮಾನ ಆ ದಿವ್ಯರಥವು ನಿಂತಿರುವುದನ್ನು ನೋಡಿ ಮಹಾಬಾಹು ಶ್ರೀರಾಮನು ಅದರಲ್ಲಿ ಆರೂಢನಾದನು.॥20॥
ಮೂಲಮ್ - 21
ಸುಗ್ರೀವೋ ಹನುಮಾಂಶ್ಚೈವ ಮಹೇಂದ್ರ ಸದೃಶದ್ಯುತೀ ।
ಸ್ನಾತೌ ದಿವ್ಯನಿಭೈರ್ವಸೈರ್ಜಗ್ಮತುಃ ಶುಭಕುಂಡಲೌ ॥
ಅನುವಾದ
ಸುಗ್ರೀವ ಮತ್ತು ಹನುಮಂತರಿಬ್ಬರೂ ದೇವೇಂದ್ರನಂತೆ ಕಾಂತಿವಂತರಾಗಿದ್ದರು. ಕಿವಿಗಳಲ್ಲಿ ಸುಂದರ ಕುಂಡಲಗಳು ಶೋಭಿಸುತ್ತಿದ್ದ ಅವರಿಬ್ಬರೂ ಸ್ನಾನಗೈದು ದಿವ್ಯವಸ್ತ್ರಗಳಿಂದ ವಿಭೂಷಿತರಾಗಿ ನಗರದ ಕಡೆಗೆ ಹೊರಟರು.॥21॥
ಮೂಲಮ್ - 22
ಸರ್ವಾಭರಣಜುಷ್ಟಾಶ್ಚಯಯುಸ್ತಾಃ ಶುಭಕುಂಡಲಾಃ ।
ಸುಗ್ರೀವಪತ್ನ್ಯಃ ಸೀತಾ ಚ ದ್ರಷ್ಟುಂ ನಗರಮುತ್ಸುಕಾಃ ॥
ಅನುವಾದ
ಸುಗ್ರೀವನ ಪತ್ನಿಯರು ಮತ್ತು ಸೀತೆಯು ಸಮಸ್ತ ಆಭರಣಗಳಿಂದ ವಿಭೂಷಿತರಾಗಿ, ಸುಂದರ ಕುಂಡಲಗಳಿಂದ ಅಲಂಕೃತರಾಗಿ ನಗರವನ್ನು ನೋಡುವ ಉತ್ಸುಕತೆಯಿಂದ ಮೇನೆಗಳಲ್ಲಿ ಹೊರಟರು.॥22॥
ಮೂಲಮ್ - 23
ಅಯೋಧ್ಯಾಯಾಂ ತು ಸಚಿವಾ ರಾಜ್ಞೋ ದಶರಥಸ್ಯ ಚ ।
ಪುರೋಹಿತಂ ಪುರಸ್ಕೃತ್ಯ ಮಂತ್ರಯಾಮಾಸುರರ್ಥವತ್ ॥
ಅನುವಾದ
ಅಯೋಧ್ಯೆಯಲ್ಲಿ ದಶರಥರಾಜನ ಮಂತ್ರಿಗಳು ಪುರೋಹಿತ ವಸಿಷ್ಠರನ್ನು ಮುಂದೆ ಮಾಡಿ ಶ್ರೀರಾಮಚಂದ್ರನ ರಾಜ್ಯಾಭಿಷೇಕಕ್ಕಾಗಿ ಆವಶ್ಯಕ ವಿಚಾರ-ವಿನಿಮಯ ಮಾಡಿದರು.॥23॥
ಮೂಲಮ್ - 24
ಅಶೋಕೋ ವಿಜಯಶ್ಚೈವ ಸಿದ್ಧಾರ್ಥಶ್ಚ ಸಮಾಹಿತಾಃ ।
ಮನ್ತ್ರಯನ್ ರಾಮವೃದ್ಧ್ಯರ್ಥಮೃದ್ಧ್ಯರ್ಥಂ ನಗರಸ್ಯ ಚ ॥
ಅನುವಾದ
ಅಶೋಕ, ವಿಜಯ, ಸಿದ್ಧಾರ್ಥ ಈ ಮೂವರೂ ಮಂತ್ರಿಗಳು ಏಕಾಗ್ರಚಿತ್ತರಾಗಿ ಶ್ರೀರಾಮನ ಅಭ್ಯುದಯ ಹಾಗೂ ನಗರದ ಸಮೃದ್ಧಿಗಾಗಿ ಪರಸ್ಪರ ಮಂತ್ರಾಲೋಚನೆ ಮಾಡಿದರು.॥24॥
ಮೂಲಮ್ - 25
ಸರ್ವಮೇವಾಭಿಷೇಕಾರ್ಥಂ ಜಯಾರ್ಹಸ್ಯ ಮಹಾತ್ಮನಃ ।
ಕರ್ತುಮರ್ಹಥ ರಾಮಸ್ಯ ಯದ್ಯನ್ಮಂಗಲ ಪೂರ್ವಕಮ್ ॥
ಅನುವಾದ
ಅವರು ಸೇವಕರಿಗೆ ಹೇಳಿದರು- ಜಯಾರ್ಹನಾದ ಮಹಾತ್ಮಾ ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕಾಗಿ ಆವಶ್ಯಕವಾದ ಕಾರ್ಯವನ್ನು ನೀವೆಲ್ಲರೂ ಮಂಗಲ ಪೂರ್ವಕ ಮಾಡಿರಿ.॥25॥
ಮೂಲಮ್ - 26
ಇತಿ ತೇ ಮಂತ್ರಿಣಃ ಸರ್ವೇ ಸಂದಿಶ್ಯ ಚ ಪುರೋಹಿತಃ ।
ನಗರಾನ್ನಿರ್ಯಯುಸ್ತೂರ್ಣಂ ರಾಮದರ್ಶನ ಬುದ್ಧಯಃ ॥
ಅನುವಾದ
ಹೀಗೆ ಆದೇಶ ಕೊಟ್ಟು ಆ ಮಂತ್ರಿಗಳು ಮತ್ತು ಪುರೋಹಿತರು ಶ್ರೀರಾಮಚಂದ್ರನ ದರ್ಶನಕ್ಕಾಗಿ ಕೂಡಲೇ ನಗರದಿಂದ ಹೊರಟರು.॥26॥
ಮೂಲಮ್ - 27
ಹರಿಯುಕ್ತಂ ಸಹಸ್ರಾಕ್ಷೋ ರಥಮಿಂದ್ರ ಇವಾನಘಃ ।
ಪ್ರಯಯೌ ರಥಮಾಸ್ಥಾಯ ರಾಮೋ ನಗರಮುತ್ತಮಮ್ ॥
ಅನುವಾದ
ಸಹಸ್ರಾಕ್ಷ ಇಂದ್ರನು ಹಸಿರು ಕುದುರೆಗಳನ್ನು ಹೂಡಿದ ರಥದಲ್ಲಿ ಪ್ರಯಾಣಿಸುತ್ತಿರುವಂತೆಯೇ ನಿಷ್ಪಾಪ ಶ್ರೀರಾಮನು ಒಂದು ಶ್ರೇಷ್ಠ ರಥಾರೂಢನಾಗಿ ತನ್ನ ಉತ್ತಮನಗರದ ಕಡೆಗೆ ಹೊರಟನು.॥27॥
ಮೂಲಮ್ - 28
ಜಗ್ರಾಹ ಭರತೋ ರಶ್ಮೀನ್ ಶತ್ರುಘ್ನಶ್ಛತ್ರಮಾದದೇ ।
ಲಕ್ಷ್ಮಣೋ ವ್ಯಜನಂ ತಸ್ಯ ಮೂರ್ಧ್ನಿ ಸಂವೀಜಯಂ ಸ್ತದಾ ॥
ಅನುವಾದ
ಆಗ ಭರತನು ಸಾರಥಿಯಾಗಿ ರಥವನ್ನು ನಡೆಸುತ್ತಿದ್ದ, ಶತ್ರುಘ್ನನು ಛತ್ರವನ್ನು ಹಿಡಿದನು. ಲಕ್ಷ್ಮಣನು ಆಗ ಶ್ರೀರಾಮಚಂದ್ರನಿಗೆ ಚಾಮರ ಬೀಸುತ್ತಿದ್ದನು.॥28॥
ಮೂಲಮ್ - 29
ಶ್ವೇತಂ ಚ ವಾಲವ್ಯಜನಂ ಜಗ್ರಾಹೇ ಪರಿತಃ ಸ್ಥಿತಃ ।
ಅಪರಂ ಚಂದ್ರ ಸಂಕಾಶಂ ರಾಕ್ಷಸೇಂದ್ರೋ ವಿಭೀಷಣಃ ॥
ಅನುವಾದ
ಒಂದು ಕಡೆ ಲಕ್ಷ್ಮಣನು ನಿಂತಿದ್ದರೆ ಇನ್ನೊಂದು ಕಡೆ ರಾಕ್ಷಸ ವಿಭೀಷಣನು ನಿಂತಿದ್ದನು. ಅವನು ಚಂದ್ರ ದಂತಹ ಕಾಂತಿಯುಕ್ತ ಇನ್ನೊಂದು ಬಿಳಿಯ ಚಾಮರ ಹಿಡಿದು ಬೀಸುತ್ತಿದ್ದನು.॥29॥
ಮೂಲಮ್ - 30
ಋಷಿಸಂಘೈ ಸ್ತದಾಽಽಕಾಶೇ ದೇವೈಶ್ಚ ಸಮರುದ್ಗಣೈಃ ।
ಸ್ತೂಯಮಾನಸ್ಯ ರಾಮಸ್ಯ ಶುಶ್ರುವೆ ಮಧುರಧ್ವನಿಃ ॥
ಅನುವಾದ
ಆಗ ಆಕಾಶದಲ್ಲಿ ನಿಂತಿರುವ ಋಷಿಗಳು, ಮರುದ್ಗಣಗಳ ಸಹಿತ ದೇವತೆಗಳ ಸಮುದಾಯ ಶ್ರೀರಾಮಚಂದ್ರನ ಸ್ತವನದ ಮಧುರ ಧ್ವನಿಯನ್ನು ಕೇಳುತ್ತಿದ್ದರು.॥30॥
ಮೂಲಮ್ - 31
ತತಃ ಶತ್ರುಂಜಯಂ ನಾಮ ಕುಂಜರಂ ಪರ್ವತೋಪಮಮ್ ।
ಆರುರೋಹ ಮಹಾತೇಜಾಃ ಸುಗ್ರೀವಃ ಪ್ಲವಗರ್ಷಭಃ ॥
ಅನುವಾದ
ಅನಂತರ ಮಹಾತೇಜಸ್ವೀ ವಾನರರಾಜ ಸುಗ್ರೀವನು ಶತ್ರುಂಜಯ ಎಂಬ ಪರ್ವತಾಕಾರ ಗಜರಾಜನ ಮೇಲೆ ಕುಳಿತನು.॥31॥
ಮೂಲಮ್ - 32
ನವ ನಾಗಸಹಸ್ರಾಣಿ ಯಯುರಾಸ್ಥಾಯ ವಾನರಾಃ ।
ಮಾನುಷಂ ವಿಗ್ರಹಂ ಕೃತ್ವಾ ಸರ್ವಾಭರಣಭೂಷಿತಾಃ ॥
ಅನುವಾದ
ವಾನರರು ಒಂಭತ್ತು ಸಾವಿರ ಆನೆಗಳ ಮೇಲೆ ಕುಳಿತು ನಡೆಯುತ್ತಿದ್ದರು. ಅವರು ಆಗ ಮಾನವ ರೂಪ ಧರಿಸಿ, ಎಲ್ಲ ರೀತಿಯ ಆಭೂಷಣಗಳಿಂದ ಅಲಂಕೃತರಾಗಿದ್ದರು.॥32॥
ಮೂಲಮ್ - 33
ಶಂಖಶಬ್ದಪ್ರಣಾದೈಶ್ಚ ದುಂದುಭೀನಾಂ ಚ ನಿಸ್ವನೈಃ ।
ಪ್ರಯಯೌ ಪುರುಷವ್ಯಾಘ್ರಸ್ತಾಂ ಪುರೀಂ ಹರ್ಮ್ಯಮಾಲಿನೀಮ್ ॥
ಅನುವಾದ
ಪುರುಷಸಿಂಹ ಶ್ರೀರಾಮನು ಶಂಖಧ್ವನಿ ಮತ್ತು ದುಂದುಭಿಗಳ ಗಂಭೀರನಾದದೊಂದಿಗೆ ಪ್ರಾಸಾದ ಸಾಲುಗಳಿಂದ ಅಲಂಕೃತ ಅಯೋಧ್ಯಾಪುರಿಯ ಕಡೆಗೆ ನಡೆದನು.॥33॥
ಮೂಲಮ್ - 34
ದದೃಶುಸ್ತೇ ಸಮಾಯಾಂತಂ ರಾಘವಂ ಸಪುರಃಸರಮ್ ।
ವಿರಾಜಮಾನಂ ವಪುಷಾ ರಥೇನಾತಿ ರಥಂ ತದಾ ॥
ಅನುವಾದ
ಅಯೋಧ್ಯಾ ನಿವಾಸಿಗಳು ಅತಿರಥಿ ಶ್ರೀರಘುನಾಥನು ರಥದಲ್ಲಿ ಕುಳಿತು ಬರುವುದನ್ನು ನೋಡಿದರು. ಅವನ ಶ್ರೀವಿಗ್ರಹ ದಿವ್ಯಕಾಂತಿಯಿಂದ ಪ್ರಕಾಶಿಸುತ್ತಿತ್ತು. ಅವನ ಮುಂದೆ ಸೈನಿಕರ ದಂಡು ಸಾಗುತ್ತಿತ್ತು.॥34॥
ಮೂಲಮ್ - 35
ತೇ ವರ್ಧಯಿತ್ವಾ ಕಾಕುತ್ಸ್ಥಂ ರಾಮೇಣ ಪ್ರತಿನಂದಿತಾಃ ।
ಅನುಜಗ್ಮುರ್ಮಹಾತ್ಮಾನಂ ಭ್ರಾತೃಭಿಃ ಪರಿವಾರಿತಮ್ ॥
ಅನುವಾದ
ಎಲ್ಲ ಜನರು ಮುಂದೆ ಬಂದು ಶ್ರೀರಾಮನನ್ನು ಮಂಗಳಾಶಾಸನ ಪೂರ್ವಕ ಆಶೀರ್ವದಿಸಿದರು. ಶ್ರೀರಾಮನೂ ಕೂಡ ಅವರನ್ನು ಅಭಿನಂದಿಸಿದನು. ಮತ್ತೆ ಎಲ್ಲ ಪುರವಾಸಿಗಳು ತಮ್ಮಂದಿರಿಂದ ಪರಿವೃತನಾದ ಮಹಾತ್ಮಾ ಶ್ರೀರಾಮನ ಹಿಂದೆ- ಹಿಂದೆ ನಡೆಯತೊಡಗಿದರು.॥35॥
ಮೂಲಮ್ - 36
ಅಮಾತ್ಯೈರ್ಬಾಹ್ಮಣೈಶ್ಚೈವ ತಥಾ ಪ್ರಕೃತಿಭಿರ್ವೃತಃ ।
ಶ್ರಿಯಾ ವಿರುರುಚೇ ರಾಮೋ ನಕ್ಷತ್ರೈರಿವಚಂದ್ರಮಾಃ ॥
ಅನುವಾದ
ನಕ್ಷತ್ರಗಳಿಂದ ಸುತ್ತುವರಿದ ಚಂದ್ರನಂತೆಯೇ ಮಂತ್ರಿಗಳಿಂದ, ಬ್ರಾಹ್ಮಣರಿಂದ, ಪ್ರಜಾಜನರಿಂದ ಪರಿವೃತನಾದ ಶ್ರೀರಾಮಚಂದ್ರನು ತನ್ನ ದಿವ್ಯಶಾಂತಿಯಿಂದ ಬೆಳಗುತ್ತಿದ್ದನು.॥36॥
ಮೂಲಮ್ - 37
ಸ ಪುರೋಗಾಮಿಭಿಸ್ತೂರ್ಯೈಸ್ತಾಲಸ್ವಸ್ತಿಕ ಪಾಣಿಭಿಃ ।
ಪ್ರವ್ಯಾಹರದ್ಭಿರ್ಮುದಿತೈರ್ಮಂಗಲಾನಿ ವೃತೋಯಯೌ ॥
ಅನುವಾದ
ಎಲ್ಲಕ್ಕಿಂತ ಮುಂದೆ ಮಂಗಳವಾದ್ಯದವರು ಆನಂದ ಮಗ್ನರಾಗಿ ನಾಗಸ್ವರ, ತಾಳ, ಸ್ವಸ್ತಿಕಗಳನ್ನು ನುಡಿಸುತ್ತಾ ಮಂಗಳ ಗೀತೆಗಳನ್ನು ಹಾಡುತ್ತಿದ್ದರು. ಹೀಗೆ ಎಲ್ಲರೊಂದಿಗೆ ಶ್ರೀರಾಮನು ನಗರದ ಕಡೆಗೆ ನಡೆದನು.॥37॥
ಮೂಲಮ್ - 38
ಅಕ್ಷತಂ ಜಾತರೂಪಂ ಚ ಗಾವಃ ಕನ್ಯಾಃ ಸಹದ್ವಿಜಾಃ ।
ನರಾ ಮೋದಕಹಸ್ತಾಶ್ಚ ರಾಮಸ್ಯ ಪುರತೋ ಯಯುಃ ॥
ಅನುವಾದ
ಶ್ರೀರಾಮನ ಮುಂದೆ ಅಕ್ಷತೆ, ಸ್ವರ್ಣಯುಕ್ತ ಪಾತ್ರೆ, ಗೋವು, ಬ್ರಾಹ್ಮಣರು, ಕನ್ಯೆಯರು ಹಾಗೂ ಕೈಯಲ್ಲಿ ಭಕ್ಷಗಳ ತಟ್ಟೆಗಳನ್ನು ಹಿಡಿದುಕೊಂಡು ಮನುಷ್ಯರು ನಡೆಯುತ್ತಿದ್ದರು.॥38॥
ಮೂಲಮ್ - 39
ಸಖ್ಯಂ ಚ ರಾಮಃ ಸುಗ್ರೀವೇ ಪ್ರಭಾವಂ ಚಾನಿಲಾತ್ಮಜೇ ।
ವಾನರಾಣಾಂ ಚ ತತ್ಕರ್ಮ ಹ್ಯಾಚಚಕ್ಷೇಥ ಮಂತ್ರಿಣಾಮ್ ॥
ಅನುವಾದ
ಶ್ರೀರಾಮಚಂದ್ರನು ತನ್ನ ಮಂತ್ರಿಗಳಲ್ಲಿ ಸುಗ್ರೀವನ ಮಿತ್ರತೆ, ಹನುಮಂತನ ಪ್ರಭಾವ ಹಾಗೂ ಇತರೆ ವಾನರರ ಅದ್ಭುತ ಪರಾಕ್ರಮದ ಚರ್ಚೆ ಮಾಡುತ್ತಾ ಹೋಗುತ್ತಿದ್ದನು.॥39॥
ಮೂಲಮ್ - 40
ಶ್ರುತ್ವಾ ಚ ವಿಸ್ಮಯಂ ಜಗ್ಮುರಯೋಧ್ಯಾಪುರವಾಸಿನಃ ।
ವಾನರಾಣಾಂ ಚ ತತ್ ಕರ್ಮ ರಾಕ್ಷಸಾನಾಂ ಚ ತದ್ಬಲಮ್ ।
ವಿಭೀಷಣಸ್ಯ ಸಂಯೋಗಮಾಚಚಕ್ಷೇಽಥ ಮಂತ್ರಿಣಾಮ್ ॥
ಅನುವಾದ
ವಾನರರ ಪುರುಷಾರ್ಥಕ, ರಾಕ್ಷಸರ ಬಲದ ಮಾತುಗಳನ್ನು ಕೇಳಿ ಅಯೋಧ್ಯಾವಾಸಿಗಳಿಗೆ ಬಹಳ ಆಶ್ಚರ್ಯವಾಯಿತು. ಶ್ರೀರಾಮನು ವಿಭೀಷಣನ ಶರಣಾಗತಿಯನ್ನು ಮಂತ್ರಿಗಳಿಗೆ ತಿಳಿಸಿದನು.॥40॥
ಮೂಲಮ್ - 41
ದ್ಯುತಿಮಾನೇತದಾಖ್ಯಾಯ ರಾಮೋ ವಾನರ ಸಂಯುತಃ ।
ಹೃಷ್ಟಪುಷ್ಪಜನಾಕೀರ್ಣಾಮಯೋಧ್ಯಾಂ ಪ್ರವಿವೇಶ ಸಃ ॥
ಅನುವಾದ
ಇವೆಲ್ಲ ಮಾತುಗಳನ್ನು ತಿಳಿಸಿ ವಾನರರೊಂದಿಗೆ ತೇಜಸ್ವೀ ಶ್ರೀರಾಮನು ಹೃಷ್ಟ-ಪುಷ್ಟ ಮನುಷ್ಯರಿಂದ ತುಂಬಿದ ಅಯೋಧ್ಯೆಯನ್ನು ಪ್ರವೇಶಿಸಿದನು.॥41॥
ಮೂಲಮ್ - 42
ತತೋ ಹ್ಯಭುಚ್ಛ್ರಯನ್ ಪೌರಾಃ ಪತಾಕಾಶ್ಚ ಗೃಹೇ ಗೃಹೇ ।
ಐಕ್ಷ್ವಾಕಾಧ್ಯುಷಿತಂ ರಮ್ಯಮಾಸಸಾದ ಪಿತುರ್ಗೃಹಮ್ ॥
ಅನುವಾದ
ಆಗ ಪುರವಾಸಿಗಳು ತಮ್ಮ ತಮ್ಮ ಮನೆಗಳಲ್ಲಿ ಇಟ್ಟಿರುವ ಪತಾಕೆಗಳನ್ನು ಎತ್ತಿಹಿಡಿದರು. ಮತ್ತೆ ಶ್ರೀರಾಮನು ಇಕ್ಷ್ವಾಕುವಂಶೀ ರಾಜರು ಆಳಿದ ತಂದೆಯ ರಮಣಿಯ ಭವನವನ್ನು ಹೊಕ್ಕನು.॥42॥
ಮೂಲಮ್ - 43
ಅಥಾಬ್ರವೀದ್ರಾಜ ಪುತ್ರೋ ಭರತಂ ಧರ್ಮಿಣಾಂ ವರಮ್ ।
ಅರ್ಥೋಪಹಿತಯಾ ವಾಚಾ ಮಧುರಂ ರಘುನಂದನಃ ॥
ಮೂಲಮ್ - 44
ಪಿತುರ್ಭವನಮಾಸಾದ್ಯ ಪ್ರವಿಶ್ಯ ಚ ಮಹಾತ್ಮನಃ ।
ಕೌಸಲ್ಯಾಂ ಚ ಸುಮಿತ್ರಾಂ ಚ ಕೈಕೇಯೀಮಭಿವಾದ್ಯ ಚ ॥
ಅನುವಾದ
ಆಗ ರಘುಕುಲನಂದನ ರಾಜಕುಮಾರ ಶ್ರೀರಾಮನು ಮಹಾತ್ಮಾ ಪಿತನ ಭವನವನ್ನು ಪ್ರವೇಶಿಸಿ ತಾಯಿ ಕೌಸಲ್ಯಾ, ಸುಮಿತ್ರಾ, ಕೈಕೇಯಿಯರ ಚರಣಗಳಲ್ಲಿ ತಲೆಬಾಗಿದನು ಹಾಗೂ ಧರ್ಮಾತ್ಮರಲ್ಲಿ ಶ್ರೇಷ್ಠಭರತನಲ್ಲಿ ಅರ್ಥಯುಕ್ತ ಮಧುರವಾಣಿಯಲ್ಲಿ ಹೇಳಿದನು.॥43-44॥
ಮೂಲಮ್ - 45
ತಚ್ಚ ಮದ್ಭವನಂ ಶ್ರೇಷ್ಠಂ ಸಾಶೋಕವನಿಕಂ ಮಹತ್ ।
ಮುಕ್ತಾವೈಢೂರ್ಯಸಂಕೀರ್ಣಂ ಸುಗ್ರೀವಾಯ ನಿವೇದಯ ॥
ಅನುವಾದ
ಭರತ! ಅಶೋಕವೃಕ್ಷಗಳಿಂದ ಸುತ್ತುವರಿದ, ಮುತ್ತು-ವೈಡೂರ್ಯಮಣಿಗಳಿಂದ ಝಟಿತವಾದ ನನ್ನ ಭವನವನ್ನು ಸುಗ್ರೀವನಿಗೆ ಕೊಡು.॥45॥
ಮೂಲಮ್ - 46
ತಸ್ಯ ತದ್ವಚನಂ ಶ್ರುತ್ವಾ ಭರತಃ ಸತ್ಯವಿಕ್ರಮಃ ।
ಹಸ್ತೇ ಗೃಹೀತ್ವಾ ಸುಗ್ರೀವಂ ಪ್ರವಿವೇಶ ತಮಾಲಯಮ್ ॥
ಅನುವಾದ
ರಾಮನ ಆಜ್ಞೆ ಪಡೆದು ಸತ್ಯಪರಾಕ್ರಮಿ ಭರತನು ಸುಗ್ರೀವನ ಕೈಹಿಡಿದುಕೊಂಡು ಆ ಭವನವನ್ನು ಪ್ರವೇಶಿಸಿದನು.॥46॥
ಮೂಲಮ್ - 47
ತತಸ್ತೈಲ ಪ್ರದೀಪಾಂಶ್ಚ ಪರ್ಯಂಕಾಸ್ತರಣಾನಿ ಚ ।
ಗೃಹೀತ್ವಾ ವಿವಿಶುಃ ಕ್ಷಿಪ್ರಂ ಶತ್ರುಘ್ನೇನ ಪ್ರಚೋದಿತಾಃ ॥
ಅನುವಾದ
ಮತ್ತೆ ಶತ್ರುಘ್ನನ ಆಜ್ಞೆಯಂತೆ ಅನೇಕಾನೇಕ ಸೇವಕರು ಎಳ್ಳೆಣ್ಣೆಯಿಂದ ಉರಿಯುವ ಅನೇಕ ದೀಪಗಳನ್ನು, ಮಂಚ ಮತ್ತು ಮೇಲುಹೊದಿಕೆಗಳನ್ನು ಹಿಡಿದುಕೊಂಡು ಬೇಗನೇ ಬಂದರು.॥47॥
ಮೂಲಮ್ - 48
ಉವಾಚ ಚ ಮಹಾತೇಜಾಃ ಸುಗ್ರೀವಂ ರಾಘವಾನುಜಃ ।
ಅಭಿಷೇಕಾಯ ರಾಮಸ್ಯ ದೂತಾನಾಜ್ಞಾಪಯ ಪ್ರಭೋ ॥
ಅನುವಾದ
ಅನಂತರ ಮಹಾತೇಜಸ್ವೀ ಭರತನು ಸುಗ್ರೀವನಲ್ಲಿ ಹೇಳಿದನು- ಪ್ರಭೋ! ಭಗವಾನ್ ಶ್ರೀರಾಮನ ಅಭಿಷೇಕಕ್ಕಾಗಿ ಜಲವನ್ನು ತರಲು ನಿಮ್ಮ ದೂತರಿಗೆ ನೀವು ಆಜ್ಞಾಪಿಸಿರಿ.॥48॥
ಮೂಲಮ್ - 49
ಸೌವರ್ಣಾನ್ ವಾನರೇಂದ್ರಾಣಾಂ ಚತುರ್ಣಾಂ ಚತುರೋ ಘಟಾನ್ ।
ದದೌ ಕ್ಷಿಪ್ರಂ ಸ ಸುಗ್ರೀವಃ ಸರ್ವರತ್ನ ವಿಭೂಷಿತಾನ್ ॥
ಅನುವಾದ
ಆಗ ಸುಗ್ರೀವನು ತತ್ಕ್ಷಣ ನಾಲ್ವರು ಶ್ರೇಷ್ಠ ವಾನರರಿಗೆ ಎಲ್ಲ ರೀತಿಯಿಂದ ರತ್ನಗಳಿಂದ ಅಲಂಕೃತ ನಾಲ್ಕು ಸ್ವರ್ಣ ಕಲಶಗಳನ್ನು ಕೊಟ್ಟನು.॥49॥
ಮೂಲಮ್ - 50
ತಥಾ ಪ್ರತ್ಯೂಷಸಮಯೇ ಚತುರ್ಣಾಂ ಸಾಗರಾಂಭಸಾಮ್ ।
ಪೂರ್ಣೈರ್ಘಟೈಃ ಪ್ರತೀಕ್ಷಧ್ವಂ ತಥಾಕುರುತ ವಾನರಾಃ ॥
ಅನುವಾದ
ವಾನರರೇ! ನೀವು ನಾಳೆ ಬೆಳಗಾಗುವುದೊಳಗೆ ನಾಲ್ಕು ಸಮುದ್ರಗಳ ಜಲ ತುಂಬಿದ ಕಲಶಗಳ ಸಹಿತ ಉಪಸ್ಥಿತರಾಗಿ ಆವಶ್ಯಕ ಆದೇಶದ ಪ್ರತೀಕ್ಷೆ ಮಾಡಿರಿ.॥50॥
ಮೂಲಮ್ - 51
ಏವಮುಕ್ತಾ ಮಹಾತ್ಮಾನೋ ವಾನರಾ ವಾರಣೋಪಮಾಃ ।
ಉತ್ಪೇತುರ್ಗಗನಂ ಶೀಘ್ರಂ ಗರುಡಾ ಇವ ಶೀಘ್ರಗಾಃ ॥
ಅನುವಾದ
ಸುಗ್ರೀವನು ಹೀಗೆ ಆದೇಶಿಸಿದಾಗ ಗರುಡನಂತೆ ಶೀಘ್ರಗಾಮಿಗಳಾದ, ಆನೆಯಂತೆ ವಿಶಾಲಕಾಯ ಮಹಾಮನಸ್ವೀ ವಾನರರು ತತ್ಕ್ಷಣ ಆಕಾಶಕ್ಕೆ ಹಾರಿದರು.॥51॥
ಮೂಲಮ್ - 52½
ಜಾಂಬವಾಂಶ್ಚ ಹನೂಮಾಂಶ್ಚ ವೇಗದರ್ಶೀ ಚ ವಾನರಃ ।
ಋಷಭಶ್ಚೈವ ಕಲಶಾಂಜಲ ಪೂರ್ಣಾ ನಥಾನಯನ್ ॥
ನದೀಶತಾನಾಂ ಪಂಚಾನಾಂ ಜಲ ಕುಂಭೈರುಪಾಹರನ್ ।
ಅನುವಾದ
ಜಾಂಬವಂತ, ಹನುಮಂತ, ವೇಗದರ್ಶಿ(ಗವಯ) ಮತ್ತು ಋಷಭ-ಇವರೆಲ್ಲ ವಾನರರು ನಾಲ್ಕು ಸಮುದ್ರಗಳಿಂದ ಮತ್ತು ಐದು ನೂರು ನದಿಗಳಿಂದ ಅನೇಕ ಸ್ವರ್ಣಕಲಶ ಜಲವನ್ನು ತುಂಬಿ ತಂದರು.॥52½॥
ಮೂಲಮ್ - 53½
ಪೂರ್ವಾತ್ಸಮುದ್ರಾತ್ಕಲಶಂ ಜಲಪೂರ್ಣಮಥಾನಯತ್ ॥
ಸುಷೇಣಃ ಸತ್ತ್ವಸಂಪನ್ನಃ ಸರ್ವರತ್ನ ವಿಭೂಷಿತಮ್ ।
ಅನುವಾದ
ಕರಡಿಗಳ ಅನೇಕ ಸುಂದರ ಸೈನ್ಯವುಳ್ಳ ಶಕ್ತಿಶಾಲಿ ಜಾಂಬವಂತನು ನವರತ್ನಗಳಿಂದ ವಿಭೂಷಿತ ಸುವರ್ಣಮಯ ಕಲಶವನ್ನೆತ್ತಿ ಕೊಂಡುಹೋಗಿ ಪೂರ್ವ ಸಮುದ್ರದ ಜಲತುಂಬಿ ತಂದನ.॥53½॥
ಮೂಲಮ್ - 54½
ಋಷಭೋ ದಕ್ಷಿಣಾತ್ತೂರ್ಣಂ ಸಮುದ್ರಾಜ್ಜಲಮಾನಯತ್ ॥
ರಕ್ತಚಂದನ ಕರ್ಪೂರೈಃ ಸಂವೃತಂ ಕಾಂಚನಂ ಘಟಮ್ ।
ಅನುವಾದ
ಋಷನು ದಕ್ಷಿಣ ಸಮುದ್ರದಿಂದ ಶೀಘ್ರವಾಗಿ ಕೆಂಪು ಚಂದನದಿಂದ, ಕರ್ಪೂರದಿಂದ ಮುಚ್ಚಿದ ಒಂದು ಚಿನ್ನದ ಕಲಶವನ್ನು ತುಂಬಿತಂದನು.॥54½॥
ಮೂಲಮ್ - 55½
ಗವಯಃ ಪಶ್ಚಿಮಾತ್ತೋಯಮಾಜಹಾರ ಮಹಾರ್ಣವಾತ್ ॥
ರತ್ನಕುಂಭೇನ ಮಹತಾ ಶೀತಂ ಮಾರುತವಿಕ್ರಮಃ ।
ಅನುವಾದ
ವಾಯು ವೇಗದಂತೆ ವೇಗಶಾಲೀ ಗವಯನು ಒಂದು ರತ್ನನಿರ್ಮಿತ ವಿಶಾಲ ಕಲಶದಲ್ಲಿ ಪಶ್ಚಿಮದ ಮಹಾಸಾಗರದಿಂದ ಶೀತಲ ಜಲವನ್ನು ತುಂಬಿ ತಂದನು.॥55½॥
ಮೂಲಮ್ - 56½
ಉತ್ತರಾಚ್ಚ ಜಲಂ ಶೀಘ್ರಂ ಗರುಡಾನಿಲವಿಕ್ರಮಃ ॥
ಆಜಹಾರ ಸ ಧರ್ಮಾತ್ಮಾನಿಲಃ ಸರ್ವಗುಣಾನ್ವಿತಃ ।
ಅನುವಾದ
ಗರುಡ ಮತ್ತು ವಾಯುವಿನಂತೆ ತೀವ್ರಗತಿಯಿಂದ ಹಾರುವ ಧರ್ಮಾತ್ಮಾ ಸರ್ವಗುಣಸಂಪನ್ನ ಪವನಪುತ್ರ ಹನುಮಂತನು ಉತ್ತರದ ಮಹಾಸಾಗರದಿಂದ ಶೀಘ್ರವಾಗಿ ಜಲವನ್ನು ತಂದನು.॥56½॥
ಮೂಲಮ್ - 57
ತತಸ್ತೈರ್ವಾನರಶ್ರೇಷ್ಠೈರಾನೀತಂ ಪ್ರೇಕ್ಷ್ಯ ತಜ್ಜಲಮ್ ॥
ಮೂಲಮ್ - 58
ಅಭಿಷೇಕಾಯ ರಾಮಸ್ಯ ಶತ್ರುಘ್ನಃ ಸಚಿವೈಃ ಸಹ ॥
ಪುರೋಹಿತಾಯ ಶ್ರೇಷ್ಠಾಯ ಸುಹೃದ್ಭ್ಯಶ್ಚ ನ್ಯವೇದಯತ್ ॥
ಅನುವಾದ
ಆ ಶ್ರೇಷ್ಠವಾನರರು ತಂದಿರುವ ಜಲವನ್ನು ನೋಡಿ ಮಂತ್ರಿಗಳ ಸಹಿತ ಶತ್ರುಘ್ನನು ಆ ಎಲ್ಲ ಜಲವನ್ನು ಶ್ರೀರಾಮನ ಅಭಿಷೇಕಕ್ಕಾಗಿ ಪುರೋಹಿತ ವಸಿಷ್ಠರಿಗೆ ಹಾಗೂ ಇತರ ಸುಹೃದರಿಗೆ ಅರ್ಪಿಸಿದರು.॥57-58॥
ಮೂಲಮ್ - 59
ತತಃ ಸ ಪ್ರಯತೋ ವೃದ್ಧೋ ವಸಿಷ್ಠೋ ಬ್ರಾಹ್ಮಣೈಃ ಸಹ ।
ರಾಮಂ ರತ್ನಮಯೇ ಪೀಠೇ ಸಸೀತಂ ಸಂನ್ಯವೇಶಯತ್ ॥
ಅನುವಾದ
ಅನಂತರ ಬ್ರಾಹ್ಮಣರ ಸಹಿತ ಶುದ್ಧಚೇತಾ ವೃದ್ಧ ವಸಿಷ್ಠರು ಸೀತಾಸಹಿತ ಶ್ರೀರಾಮಚಂದ್ರನನ್ನು ರತ್ನಮಯ ಸಿಂಹಾಸನದಲ್ಲಿ ಕುಳ್ಳಿರಿಸಿದರು.॥59॥
ಮೂಲಮ್ - 60
ವಸಿಷ್ಠೋ ವಾಮದೇವಶ್ಚ ಜಾಬಾಲಿರಥ ಕಾಶ್ಯಪಃ ।
ಕಾತ್ಯಾಯನಃ ಸುಯಜ್ಞಶ್ಚ ಗೌತಮೋ ವಿಜಯಸ್ತಥಾ ॥
ಮೂಲಮ್ - 61
ಅಭ್ಯಷಿಂಚನ್ನರ ವ್ಯಾಘ್ರಂ ಪ್ರಸನ್ನೇನ ಸುಗಂಧಿನಾ ।
ಸಲಿಲೇನ ಸಹಸ್ರಾಕ್ಷಂ ವಸವೋ ವಾಸವಂ ಯಥಾ ॥
ಅನುವಾದ
ಬಳಿಕ ಅಷ್ಟವಸುಗಳು ದೇವೇಂದ್ರನಿಗೆ ಅಭಿಷೇಕ ಮಾಡಿದಂತೆ ವಸಿಷ್ಠರು, ವಾಮದೇವ, ಜಾಬಾಲಿ, ಕಾಶ್ಯಪ, ಕಾತ್ಯಾಯನ, ಸುಯಜ್ಞ, ಗೌತಮ ಮತ್ತು ವಿಜಯ-ಈ ಎಂಟು ಮಂತ್ರಿಗಳು ಶುದ್ಧವಾದ ಸುಗಂಧಿತ ಜಲದಿಂದ ಸೀತಾಸಹಿತ ಪುರುಷಪ್ರವರ ಶ್ರೀರಾಮಚಂದ್ರನ ಅಭಿಷೇಕ ಮಾಡಿಸಿದರು.॥60-61॥
ಮೂಲಮ್ - 62
ಋತ್ವಿಗ್ಭಿರ್ಬ್ರಾಹ್ಮಣೈಃ ಪೂರ್ವಂ ಕನ್ಯಾಭಿರ್ಮಂತ್ರಿಭಿಸ್ತಥಾ ।
ಯೋಧೈಶ್ಚೈ ವಾಭ್ಯಷಿಂಚಂಸ್ತೇ ಸಂಪ್ರಹೃಷ್ಟೈಃ ಸನೈಗಮೈಃ ॥
ಮೂಲಮ್ - 63
ಸರ್ವೌಷಧಿರಸೈಶ್ಚಾಪಿದೈವತೈರ್ನಭಸಿ ಸ್ಥಿತೈಃ ।
ಚತುರ್ಭಿಲೋಕಪಾಲೈಶ್ಚ ಸರ್ವೈರ್ದೇವೈಶ್ಚ ಸಂಗತೈಃ ॥
ಅನುವಾದ
(ಯಾವುದರಿಂದ ಮಾಡಿಸಿದರು ಎಂಬುದನ್ನು ಹೇಳುತ್ತಾರೆ.) ಮೊಟ್ಟಮೊದಲಿಗೆ ಅವರು ಸಮಸ್ತ ಔಷಧಿಗಳ ರಸಗಳಿಂದ, ಹಿಂದೆ ಹೇಳಿದ ಜಲದಿಂದ ಋತ್ವಿಕ್ ಬ್ರಾಹ್ಮಣರಿಂದ, ಮತ್ತೆ ಹದಿನಾರು ಕನ್ಯೆಯರಿಂದ, ಬಳಿಕ ಮಂತ್ರಿಗಳಿಂದ ಅಭಿಷೇಕ ಮಾಡಿಸಿದರು. ಅನಂತರ ಇತರ ಯೋಧರಿಂದ ಹಾಗೂ ಹರ್ಷಗೊಂಡ ಶ್ರೇಷ್ಠ ವ್ಯವಸಾಯಿಗಳಿಗೂ ಕೂಡ ಅಭಿಷೇಕ ಮಾಡಲು ಅವಕಾಶ ಕೊಡಲಾಯಿತು. ಆಗ ಆಕಾಶದಲ್ಲಿ ನಿಂತಿರುವ ಸಮಸ್ತ ದೇವತೆಗಳು ಮತ್ತು ಒಟ್ಟಿಗೆ ಸೇರಿದ ನಾಲ್ವರು ಲೋಕಪಾಲರೂ ಶ್ರೀರಾಮನಿಗೆ ಅಭಿಷೇಕ ಮಾಡಿದರು.॥62-63॥
ಮೂಲಮ್ - 64
ಬ್ರಹ್ಮಣಾ ನಿರ್ಮಿತಂ ಪೂರ್ವಂ ಕಿರೀಟಂ ರತ್ನಶೋಭಿತಮ್ ।
ಅಭಿಷಿಕ್ತಃ ಪುರಾ ಯೇನ ಮನುಸ್ತಂ ದೀಪ್ತತೇಜಸಮ್ ॥
ಮೂಲಮ್ - 65
ತಸ್ಯಾನ್ವವಾಯೇ ರಾಜಾನಃ ಕ್ರಮಾದ್ಯೇನಾಭಿಷೇಚಿತಾಃ ।
ಸಭಾಯಾಂ ಹೇಮಕ್ಲೃಪ್ತಾಯಾಂ ಶೋಭಿತಾಯಾಂ ಮಹಾಧನೈಃ ॥
ಮೂಲಮ್ - 66
ರತ್ನೈರ್ನಾನಾವಿಧೈಶ್ಚೈವ ಚಿತ್ರಿತಾಯಾಂ ಸುಶೋಭನೈಃ ।
ನಾನಾ ರತ್ನಮಯೇ ಪೀಠೇ ಕಲ್ಪಯಿತ್ವಾ ಯಥಾವಿಧಿ ॥
ಮೂಲಮ್ - 67
ಕಿರೀಟೇನ ತತಃ ಪಶ್ಚಾದ್ ವಸಿಷ್ಠೇನ ಮಹಾತ್ಮನಾ ।
ಋತ್ವಿಗ್ಭಿರ್ಭೂಷಣೈಶ್ಚೈವ ಸಮಯೋಕ್ಷ್ಯತ ರಾಘವಃ ॥
ಅನುವಾದ
ಅನಂತರ ಮಹಾವೈಭವದಿಂದ ಶೋಭಾಯಮಾನವಾಗಿ ಕಾಣುತ್ತಿದ್ದ ಸುವರ್ಣ ನಿರ್ಮಿತವಾದದ ಸಭಾಭವನದಲ್ಲಿ ಪ್ರಕಾಶಮಾನವಾದ ನಾನಾ ವಿಧವಾದ ರತ್ನಗಳಿಂದ ಚಿತ್ರಿತವಾಗಿದ್ದ ರತ್ನಮಯ ಪೀಠದಲ್ಲಿ ಶ್ರೀರಾಮಸೀತೆಯರನ್ನು ಕುಳ್ಳಿರಿಸಿ ಮಹಾತ್ಮರಾದ ವಸಿಷ್ಠರು ಋತ್ವಿಜರೊಡನೆ ಮನುವಿನಿಂದ ಹಿಡಿದು ದಶರಥನವರೆಗೆ ಅನುಕ್ರಮವಾಗಿ ಎಲ್ಲ ರಾಜರೂ ಪಟ್ಟಾಭಿಷೇಕದ ಸಮಯದಲ್ಲಿ ಧರಿಸುತ್ತಿದ್ದ, ದೇವೀಪ್ಯಮಾನವಾದ, ಬ್ರಹ್ಮನಿರ್ಮಿತವಾಗಿದ್ದ, ರತ್ನಶೋಭಿತವಾದ ಕಿರೀಟವನ್ನು ಶ್ರೀರಾಮನ ಮುಡಿಯಲ್ಲಿರಿಸಿದರು. ಅದರೊಂದಿಗೆ ಹಾರ-ಕೇಯೂರಾದಿ ಆಭರಣಗಳಿಂದಲೂ ಶ್ರೀರಾಮನನ್ನು ಸಮಲಂಕರಿಸಿದರು.॥64-67॥
ಮೂಲಮ್ - 68½
ಛತ್ರಂ ತಸ್ಯ ಚ ಜಗ್ರಾಹ ಶತ್ರುಘ್ನಃ ಪಾಂಡುರಂ ಶುಭಮ್ ।
ಶ್ವೇತಂ ಚ ವಾಲವ್ಯಜನಂ ಸುಗ್ರೀವೋ ವಾನರೇಶ್ವರಃ ॥
ಅಪರಂ ಚಂದ್ರಸಂಕಾಶಂ ರಾಕ್ಷಸೇಂದ್ರೋ ವಿಭೀಷಣಃ ।
ಅನುವಾದ
ಆಗ ಶತ್ರುಘ್ನನು ಶ್ರೀರಾಮನ ಮೇಲೆ ಸುಂದರ ಬಿಳಿಯ ಬಣ್ಣದ ವ್ರತವನ್ನು ಹಿಡಿದನು. ಒಂದು ಕಡೆ ವಾನರ ರಾಜ ವಿಭೀಷಣನು ಚಂದ್ರನಂತೆ ಹೊಳೆಯುವ ಚಾಮರ ಬೀಸಲು ಪ್ರಾರಂಭಿಸಿದನು.॥68½॥
ಮೂಲಮ್ - 69
ಮಾಲಾಂ ಜ್ವಲಂತೀ ವಪುಷಾ ಕಾಂಚನೀಂ ಶತಪುಷ್ಕರಾಮ್ ॥
ಮೂಲಮ್ - 70½
ರಾಘವಾಯ ದದೌ ವಾಯುರ್ವಾಸವೇನ ಪ್ರಚೋದಿತಃ ।
ಸರ್ವರತ್ನಸಮಾಯುಕ್ತಂ ಮಣಿಭಿಶ್ಚ ವಿಭೂಷಿತಮ್ ॥
ಮುಕ್ತಾಹಾರಂ ನರೇಂದ್ರಾಯ ದದೌ ಶಕ್ರಪ್ರಚೋದಿತಃ ।
ಅನುವಾದ
ಅದೇ ಸಮಯದಲ್ಲಿ ದೇವೇಂದ್ರನ ಪ್ರೇರಣೆಯಂತೆ ವಾಯುದೇವರು ನೂರು ಸ್ವರ್ಣಕಮಲಗಳಿಂದ ಮಾಡಿದ ಒಂದು ಪ್ರಕಾಶಮಾನ ಮಾಲೆಯನ್ನು ಮತ್ತು ಎಲ್ಲ ವಿಧದ ರತ್ನಗಳಿಂದ ಕೂಡಿದ ಮಣಿಗಳ ವಿಭೂಷಿತ ಮುಕ್ತಾಹಾರವನ್ನು ರಾಜಾ ರಾಮಚಂದ್ರನಿಗೆ ಕಾಣಿಕೆಯಾಗಿ ನೀಡಿದನು.॥69-70½॥
ಮೂಲಮ್ - 71½
ಪ್ರಜಗುರ್ದೇವಗಂಧರ್ವಾ ನನೃತುಶ್ಚಾಪ್ಸರೋಗಣಾಃ ॥
ಅಭಿಷೇಕೇ ತದರ್ಹಸ್ಯ ತದಾ ರಾಮಸ್ಯ ಧೀಮತಃ ।
ಅನುವಾದ
ಧೀಮಂತನಾದ ಶ್ರೀರಾಮ ಪಟ್ಟಾಭಿಷೇಕದ ಸಮಯ ದೇವಗಂಧರ್ವರು ಹಾಡತೊಡಗಿದರು. ಅಪ್ಸರೆಯರು ನೃತ್ಯಮಾಡಿದರು. ಭಗವಾನ್ ಶ್ರೀರಾಮನು ಈ ಸಮ್ಮಾನಕ್ಕೆ ಸರ್ವಥಾ ಯೋಗ್ಯನಾಗಿದ್ದನು.॥71½॥
ಮೂಲಮ್ - 72½
ಭೂಮಿಃ ಸಸ್ಯವತೀ ಚೈವ ಫಲವಂತಶ್ಚ ಪಾದಪಾಃ ॥
ಗಂಧವಂತಿ ಚಪುಷ್ಪಾಣಿ ಬಭೂವೂ ರಾಘವೋತ್ಸವೇ ।
ಅನುವಾದ
ಶ್ರೀರಾಘವನ ರಾಜ್ಯಾಭಿಷೇಕೋತ್ಸವದ ಸಮಯ ಪೃಥಿವಿಯು ಸಸ್ಯ ಸಮೃದ್ಧವಾಯಿತು. ವಕ್ಷಗಳಲ್ಲಿ ಫಲ-ಪುಷ್ಪಗಳು ಬಿಟ್ಟು ಸುಗಂಧಮಯವಾಯಿತು.॥72½॥
ಮೂಲಮ್ - 73
ಸಹಸ್ರಶತಮಶ್ವಾನಾಂ ಧೇನೂನಾಂ ಚ ಗವಾಂ ತಥಾ ॥
ಮೂಲಮ್ - 74½
ದದೌ ಶತವೃಷಾನ್ಪೂರ್ವಂ ದ್ವಿಜೇಭ್ಯೋ ಮನುಜರ್ಷಭಃ ।
ತ್ರಿಂಶತ್ಕೋಟೀರ್ಹಿರಣ್ಯಸ್ಯ ಬ್ರಾಹ್ಮಣೇಭ್ಯೋ ದದೌ ಪುನಃ ॥
ನಾನಾಭರಣವಸ್ತ್ರಾಣಿ ಮಹಾರ್ಹಾಣಿ ಚ ರಾಘವಃ ।
ಅನುವಾದ
ಮಹಾರಾಜಾ ಶ್ರೀರಾಮನು ಆಗ ಮೊದಲು ಬ್ರಾಹ್ಮಣರಿಗೆ ಒಂದು ಲಕ್ಷ ಹಾಲು ಕರೆಯುವ ಗೋವುಗಳನ್ನು, ಅಷ್ಟೇ ಕುದುರೆಗಳನ್ನು, ನೂರು ಗೂಳಿಗಳನ್ನು ದಾನ ಮಾಡಿದನು. ಇಷ್ಟೇ ಅಲ್ಲದೆ ಮೂವತ್ತು ಕೋಟಿ ಸ್ವರ್ಣನಾಣ್ಯಗಳನ್ನು, ನಾನಾ ವಿಧದ ಬಹುಮೂಲ್ಯ ವಸಾಭೂಷಣಗಳನ್ನು ಬ್ರಾಹ್ಮಣರಿಗೆ ಹಂಚಿದನು.॥73-74½॥
ಮೂಲಮ್ - 75½
ಅರ್ಕರಶ್ಮಿಪ್ರತೀಕಾಶಾಂ ಕಾಂಚನೀಂ ಮಣಿವಿಗ್ರಹಾಮ್ ॥
ಸುಗ್ರೀವಾಯ ಸ್ರಜಂ ದಿವ್ಯಾಂ ಪ್ರಾಯಚ್ಛನ್ಮನುಜಾಧಿಪಃ ।
ಅನುವಾದ
ಬಳಿಕ ರಾಜಾರಾಮಚಂದ್ರನು ತನ್ನ ಮಿತ್ರ ಸುಗ್ರೀವನಿಗೆ ಸೂರ್ಯಕಿರಣಗಳಂತೆ ಪ್ರಕಾಶಿಸುವ ಅನೇಕ ಮಣಿಗಳಿಂದ ಕೂಡಿದ ಒಂದು ದಿವ್ಯ ಸ್ವರ್ಣಮಾಲಿಕೆ ಉಡುಗೊರೆಯಾಗಿ ನೀಡಿದನು.॥75½॥
ಮೂಲಮ್ - 76½
ವೈಢೂರ್ಯಮಣಿಚಿತ್ರೇ ಚ ಚಂದ್ರರಶ್ಮಿವಿಭೂಷಿತೇ ॥
ವಾಲಿಪುತ್ರಾಯ ಧೃತಿಮಾನಂಗದಾಯಾಂಗದೇ ದದೌ ।
ಅನುವಾದ
ಅನಂತರ ಶ್ರೀರಾಮನು ವೈಢೂರ್ಯಮಣಿಗಳಿಂದ ಚಿತ್ರಿತವಾದ ಚಂದ್ರಕಿರಣಗಳಂತೆ ವಿಭೂಷಿತ ಎರಡು ತೊಳ್ಬಳೆಗಳನ್ನು, ವಾಲಿಪುತ್ರ ಅಂಗದನಿಗೆ ಪಾರಿತೋಷಕವಾಗಿ ಕೊಟ್ಟನು.॥76½॥
ಮೂಲಮ್ - 77
ಮಣಿಪ್ರವರಜುಷ್ವಂತಂ ಮುಕ್ತಾಹಾರಮನುತ್ತಮಮ್ ॥
ಮೂಲಮ್ - 78
ಸೀತಾಯೈ ಪ್ರದದೌ ರಾಮಶ್ಚಂದ್ರರಶ್ಮಿಸಮಪ್ರಭಮ್ ।
ಅರಜೇ ವಾಸಸೀ ದಿವ್ಯೇ ಶುಭಾನ್ಯಾಭರಣಾನಿ ಚ ॥
ಅನುವಾದ
ವಾಯುದೇವರು ಕಾಣಿಕೆಯಾಗಿ ನೀಡಿದ ಚಂದ್ರಕಿರಣಗಳಂತೆ ಹೊಳೆಯುತ್ತಿದ್ದ, ಉತ್ತಮ ಮಣಿಗಳಿಂದ ಕೂಡಿದ ಆ ಪರಮೋತ್ತ ಮುಕ್ತಾ ಹಾರವನ್ನು ಶ್ರೀರಾಮನು ಸೀತೆಯ ಕೊರಳಿಗೆ ತೊಡಿಸಿ, ಜೊತೆಗೆ ಎಂದೂ ಮಲಿನವಾಗದಿರುವ ಎರಡು ದಿವ್ಯ ವಸ್ತ್ರಗಳನ್ನು, ಅನೇಕ ಸುಂದರ ಆಭೂಷಣಗಳನ್ನು ಸೀತೆಗೆ ಅರ್ಪಿಸಿದನು.॥77-78॥
ಮೂಲಮ್ - 79½
ಅವೇಕ್ಷಮಾಣಾ ವೈದೇಹೀ ಪ್ರದದೌ ವಾಯುಸೂನವೇ ।
ಅವಮುಚ್ಯಾತ್ಮನಃ ಕಂಠಾದ್ಧಾರಂ ಜನಕನಂದಿನೀ ॥
ಅವೈಕ್ಷತ ಹರೀನ್ಸರ್ವಾನ್ ಭರ್ತಾರಂ ಚ ಮುಹುರ್ಮುಹುಃ ।
ಅನುವಾದ
ವೈದೇಹಿಯು ಪತಿಯ ಕಡೆಗೆ ನೋಡುತ್ತಾ ವಾಯುಪುತ್ರ ಹನುಮಂತನಿಗೆ ಏನಾದರೂ ಪಾರಿತೋಷಕವನ್ನು ಕೊಡಲು ಯೋಚಿಸಿದಳು. ಆ ಜಾನಕಿಯು ಆ ಮುತ್ತಿನ ಹಾರವನ್ನು ಕತ್ತಿಂದ ತೆಗೆದು ಪದೇ ಪದೇ ವಾನರರ ಕಡೆಗೆ ಹಾಗೂ ಪತಿಯ ಕಡೆಗೆ ನೋಡತೊಡಗಿದಳು.॥79½॥
ಮೂಲಮ್ - 80½
ತಾಮಿಂಗಿತಜ್ಞಃ ಸಂಪ್ರೇಕ್ಷ್ಯ ಬಭಾಷೇ ಜನಕಾತ್ಮಜಾಮ್ ॥
ಪ್ರದೇಹಿ ಸುಭಗೇ ಹಾರಂಯಸ್ಯ ತುಷ್ಟಾಸಿ ಭಾಮಿನಿ ।
ಅನುವಾದ
ಆಕೆಯ ಆ ಚೇಷ್ಟೆಯನ್ನು ತಿಳಿದ ಶ್ರೀರಾಮಚಂದ್ರನು ಜಾನಕಿಯನ್ನು ನೋಡುತ್ತಾ ಹೇಳಿದನು- ಸೌಭಾಗ್ಯಶಾಲಿನೀ! ಭಾಮಿನೀ! ನೀನು ಯಾರ ಮೇಲೆ ಸಂತುಷ್ಟಳಾಗಿರುವೆಯೋ ಅವರಿಗೆ ಈ ಹಾರ ಕೊಟ್ಟುಬಿಡು.॥80½॥
ಮೂಲಮ್ - 81
ಅಥ ಸಾ ವಾಯುಪುತ್ರಾಯ ತಂ ಹಾರಮಸಿತೇಕ್ಷಣಾ ॥
ಮೂಲಮ್ - 82
ತೇಜೋ ಧೃತಿರ್ಯಶೋ ದಾಕ್ಷ್ಯಂ ಸಾಮರ್ಥ್ಯಂ ವಿನಯೋ ನಯಃ ।
ಪೌರುಷಂ ವಿಕ್ರಮೋ ಬುದ್ಧಿರ್ಯಸ್ಮಿನ್ನೇತಾನಿ ನಿತ್ಯದಾ ॥
ಅನುವಾದ
ಕಪ್ಪಾದ ಕಣ್ಣುಗಳುಳ್ಳ ಸೀತಾಮಾತೆಯು - ತೇಜ, ಧೃತಿ, ಯಶ, ಚಾತುರ್ಯ, ಶಕ್ತಿ, ವಿನಯ, ನೀತಿ, ಪುರುಷಾರ್ಥ, ಪರಾಕ್ರಮ ಮತ್ತು ಉತ್ತಮ ಬುದ್ಧಿ, ಈ ಸದ್ಗುಣಗಳು ಸದಾ ಇರುವ ವಾಯುಪುತ್ರ ಹನುಮಂತನಿಗೆ ಆ ಹಾರವನ್ನು ಕೊಟ್ಟಳು.॥81-82॥
ಮೂಲಮ್ - 83
ಹನುಮಾಂಸ್ತೇನ ಹಾರೇಣ ಶುಶುಭೇ ವಾನರರ್ಷಭಃ ।
ಚಂದ್ರಾಂಶುಚಯಗೌರೇಣ ಶ್ವೇತಾಭ್ರೇಣ ಯಥಾಚಲಃ ॥
ಅನುವಾದ
ಆ ಹಾರದಿಂದ ಕಪಿಶ್ರೇಷ್ಠ ಹನುಮಂತನು ಚಂದ್ರಕಿರಣಗಳಂತಹ ಬಿಳಿಯ ಮೋಡಗಳಿಂದ ಸುಶೋಭಿತವಾದ ಪರ್ವತದಂತೆ ಶೋಭಿಸ ತೊಡಗಿದನು.॥83॥
ಮೂಲಮ್ - 84
ಸರ್ವೇ ವಾನರವೃದ್ಧಾಶ್ಚ ಯೇ ಚಾನ್ಯೇ ವಾನರೋತ್ತಮಾಃ ।
ವಾಸೋಭಿರ್ಭೂಷಣೈಶ್ಚೈವ ಯಥಾರ್ಹಂ ಪ್ರತಿಪೂಜಿತಾಃ ॥
ಅನುವಾದ
ಇದೇ ಪ್ರಕಾರ ಮುಖ್ಯಮುಖ್ಯ ವಾನರ ಶ್ರೇಷ್ಠರೆಲ್ಲರನ್ನು ವಸಾಭೂಷಣಗಳಿಂದ ಯಥಾಯೋಗ್ಯವಾಗಿ ಸತ್ಕಾರ ಮಾಡಲಾಯಿತು.॥84
ಮೂಲಮ್ - 85
ವಿಭೀಷಣೋಽಥ ಸುಗ್ರೀವೋ ಹನೂಮಾಂ ಜಾಂಬವಾಂ ಸ್ತಥಾ ।
ಸರ್ವೇ ವಾನರಮುಖ್ಯಾಶ್ಚ ರಾಮೇಣಾಕ್ಲಿಷ್ಟ ಕರ್ಮಣಾ ॥
ಮೂಲಮ್ - 86
ಯಥಾರ್ಹಂ ಪೂಜಿತಾಃ ಸರ್ವೇ ಕಾಮೈ ರತ್ನೈಶ್ಚ ಪುಷ್ಕಲೈಃ ।
ಪ್ರಹೃಷ್ಟ ಮನಸಃ ಸರ್ವೇ ಜಗ್ಮುರೇವ ಯಥಾಗತಮ್ ॥
ಅನುವಾದ
ಅನಾಯಾಸವಾಗಿ ಮಹಾಕರ್ಮ ಮಾಡುವ ಶ್ರೀರಾಮನು ವಿಭೀಷಣ, ಸುಗ್ರೀವ, ಹನುಮಂತ ಹಾಗೂ ಜಾಂಬವಂತ ಮೊದಲಾದ ಎಲ್ಲ ಶ್ರೇಷ್ಠ ವಾನರ ವೀರರಿಗೆ ಮನೋವಾಂಛಿತ ವಸ್ತುಗಳನ್ನು, ಹೇರಳ ರತ್ನಗಳಿಂದ ಯಥಾಯೋಗ್ಯವಾಗಿ ಸತ್ಕಾರ ಮಾಡಿದನು. ಅವರೆಲ್ಲರೂ ಸಂತೋಷಗೊಂಡು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ॥85-86॥
ಮೂಲಮ್ - 87
ತತೋ ದ್ವಿವಿದಮೈಂದಾಭ್ಯಾಂ ನೀಲಾಯ ಚ ಪರಂತಪಃ ।
ಸರ್ವಾನ್ಕಾಮಗುಣಾನ್ವೀಕ್ಷ್ಯ ಪ್ರದದೌ ವಸುಧಾಧಿಪಃ ॥
ಅನುವಾದ
ಅನಂತರ ಪರಂತಪನಾದ ರಾಜಾ ಶ್ರೀರಘುನಂದನು ದ್ವಿವಿದ, ಮೈಂದ, ನೀಲ ಅವರನ್ನು ನೋಡಿ ಅವರೆಲ್ಲರಿಗೆ ಮನೋವಾಂಛಿತ ಸರ್ವಗುಣಯುಕ್ತ ಉತ್ತಮ ರತ್ನಾದಿಗಳನ್ನು ಪಾರಿತೋಷಕವಾಗಿ ಕೊಟ್ಟನು.॥87॥
ಮೂಲಮ್ - 88
ದೃಷ್ಟ್ವಾಸರ್ವೇ ಮಹಾತ್ಮಾನಸ್ತತಸ್ತೇ ಪ್ಲವಗರ್ಷಭಾಃ ।
ವಿಸೃಷ್ಟಾಃ ಪಾರ್ಥಿವೇಂದ್ರೇಣ ಕಿಷ್ಕಿಂಧಾಂ ಸಮುಪಾಗಮನ್ ॥
ಅನುವಾದ
ಈ ಪ್ರಕಾರ ಭಗವಾನ್ ಶ್ರೀರಾಮನ ಪಟ್ಟಾಭಿಷೇಕವನ್ನು ನೋಡಿ ಎಲ್ಲ ಮನಸ್ವೀ ಶ್ರೇಷ್ಠವಾನರರು ಮಹಾರಾಜ ಶ್ರೀರಾಮನಿಂದ ಬೀಳ್ಕೊಂಡು ಕಿಷ್ಕಿಂಧೆಗೆ ತೆರಳಿದರು.॥88॥
ಮೂಲಮ್ - 89
ಸುಗ್ರೀವೋ ವಾನರಶ್ರೇಷ್ಠೋ ದೃಷ್ಟ್ವಾ ರಾಮಾಭಿಷೇಚನಮ್ ।
ಪೂಜಿತಶ್ಚೈವ ರಾಮೇಣ ಕಿಷ್ಕಿಂಧಾಂ ಪ್ರಾವಿಶತ್ಪುರೀಮ್ ॥
ಅನುವಾದ
ವಾನರ ಶ್ರೇಷ್ಠ ಸುಗ್ರೀವನೂ ಶ್ರೀರಾಮರಾಜ್ಯಾಭಿಷೇಕದ ಉತ್ಸವ ನೋಡಿ, ಅವನಿಂದ ಸತ್ಕೃತನಾಗಿ ಕಿಷ್ಕಿಂಧೆಯನ್ನು ಪ್ರವೇಶಿಸಿದನು.॥89॥
ಮೂಲಮ್ - 90
ವಿಭೀಷಣೋಽಪಿ ಧರ್ಮಾತ್ಮಾ ಸಹ ತೈರ್ನೈರ್ಋತರ್ಷಭೈಃ ।
ಲಬ್ಧ್ವಾ ಕುಲಧನಂ ರಾಜಾ ಲಂಕಾಂ ಪ್ರಾಯಾನ್ಮಹಾಯಶಾಃ ॥
ಅನುವಾದ
ಮಹಾಯಶಸ್ವೀ ಧರ್ಮಾತ್ಮಾ ವಿಭೀಷಣನೂ ತನ್ನ ಕುಲದ ವೈಭವವಾದ ತನ್ನ ರಾಜ್ಯವನ್ನು ಪಡೆದು ತನ್ನ ಜೊತೆಯವರಾದ ನಿಶಾಚರರೊಂದಿಗೆ ಲಂಕೆಗೆ ಪ್ರಯಾಣ ಬೆಳೆಸಿದನು.॥90॥
ಮೂಲಮ್ - 91
ಸ ರಾಜ್ಯಮಖಿಲಂ ಶಾಸನ್ನಿಹತಾರಿರ್ಮಹಾಯಶಾಃ ।
ರಾಘವಃ ಪರಮೋದಾರಃ ಶಶಾಸ ಪರಯಾ ಮುದಾ ।
ಉವಾಚ ಲಕ್ಷ್ಮಣಂ ರಾಮೋ ಧರ್ಮಜ್ಞಂ ಧರ್ಮವತ್ಸಲಃ ॥
ಅನುವಾದ
ತನ್ನ ಶತ್ರುಗಳನ್ನು ವಧಿಸಿ ಪರಮೋದಾರ ಮಹಾಯಶಸ್ವೀ ಶ್ರೀರಘುನಾಥನು ಬಹಳ ಆನಂದದಿಂದ ಸಮಸ್ತ ರಾಜ್ಯವನ್ನು ಆಳತೊಡಗಿದನು. ಧರ್ಮವತ್ಸಲ ಶ್ರೀರಾಮನು ಧರ್ಮಜ್ಞ ಲಕ್ಷ್ಮಣರಲ್ಲಿ ಹೇಳಿದನು.॥91॥
ಮೂಲಮ್ - 92
ಆತಿಷ್ಠ ಧರ್ಮಜ್ಞ ಮಯಾ ಸಹೇಮಾಂ
ಗಾಂ ಪೂರ್ವರಾಜಾಧ್ಯುಷಿತಾಂ ಬಲೇನ ।
ತುಲ್ಯಂ ಮಯಾ ತ್ವಂ ಪಿತೃಭಿರ್ಧೃತಾ ಯಾ
ತಾಂ ಯೌವರಾಜ್ಯೇ ಧುರಮುದ್ವಹಸ್ವ ॥
ಅನುವಾದ
ಧರ್ಮಜ್ಞ ಲಕ್ಷ್ಮಣ! ಹಿಂದಿನ ರಾಜರು ಚತುರಂಗ ಸೈನ್ಯದೊಂದಿಗೆ ಪಾಲಿಸುತ್ತಿದ್ದ ಈ ಭೂಮಂಡಲವನ್ನು ನೀನೂ ನನ್ನೊಡನೆ ಶಾಸನಮಾಡು. ನಮ್ಮ ತಾತ-ಮುತ್ತಾತರು ಆಳಿದ ರಾಜ್ಯಭಾರವನ್ನು ನೀನೂ ನನ್ನಂತೆಯೇ ಯುವರಾಜನಾಗಿ ಆಳುತ್ತಾ ಇರು.॥92॥
ಮೂಲಮ್ - 93
ಸರ್ವಾತ್ಮನಾ ಪರ್ಯನುನೀಯಮಾನೋ
ಯದಾ ನ ಸೌಮಿತ್ರಿರುಪೈತಿ ಯೋಗಮ್ ।
ನಿಯುಜ್ಯಮಾನೋ ಭುವಿ ಯೌವರಾಜ್ಯೇ
ತತೋಭ್ಯಷಿಂಚದ್ ಭರತಂ ಮಹಾತ್ಮಾ ॥
ಅನುವಾದ
ಆದರೆ ಶ್ರೀರಾಮನು ಎಲ್ಲ ರೀತಿಯಿಂದ ಸಮಜಾಯಿಸಿ, ನಿಯುಕ್ತಗೊಳಿಸಿದರೂ ಸೌಮಿತ್ರಿ ಲಕ್ಷ್ಮಣನು ಆ ಪದವನ್ನು ಸ್ವೀಕರಿಸದ್ದಿದಾಗ ಮಹಾತ್ಮಾ ಶ್ರೀರಾಮನು ಭರತನನ್ನು ಯುವರಾಜನಾಗಿ ಅಭಿಷೇಕ ಮಾಡಿದನು.॥93॥
ಮೂಲಮ್ - 94
ಪೌಂಡರಿಕಾಶ್ವಮೇಧಾಭ್ಯಾಂ ವಾಜಪೇಯೇನ ಚಾಸಕೃತ್ ।
ಅನ್ಯೈಶ್ಚ ವಿವಿಧೈರ್ಯಜ್ಞೈರಜಯತ್ ಪಾರ್ಥಿವಾತ್ಮಜಃ ॥
ಅನುವಾದ
ಮಹಾರಾಜಾ ಶ್ರೀರಾಮನು ಅನೇಕ ಸಲ ಪೌಂಡರೀಕ, ಅಶ್ವಮೇಧ, ವಾಜಪೇಯ ಹಾಗೂ ಇತರ ನಾನಾ ವಿಧದ ಯಜ್ಞಗಳ ಅನುಷ್ಠಾನ ಮಾಡಿದನು.॥94॥
ಮೂಲಮ್ - 95
ರಾಜ್ಯಂ ದಶ ಸಹಸ್ರಾಣಿ ಪ್ರಾಪ್ಯ ವರ್ಷಾಣಿ ರಾಘವಃ ।
ಶತಾಶ್ಚ ಮೇಧಾನಾಜಹ್ರೇ ಸದಶ್ವಾನ್ಭೂರಿ ದಕ್ಷಿಣಾನ್ ॥
ಅನುವಾದ
ಶ್ರೀರಘುನಾಥನು ಹನ್ನೊಂದು ಸಾವಿರ ವರ್ಷ ರಾಜ್ಯವನ್ನು ಆಳಿದನು ಹಾಗೂ ನೂರು ಅಶ್ವಮೇಧಯಜ್ಞಗಳನ್ನು ಮಾಡಿದನು. ಯಜ್ಞದಲ್ಲಿ ಉತ್ತಮ ಕುದುರೆಗಳನ್ನು ಬಿಡಲಾಗಿತ್ತು. ಮತ್ತು ಋತ್ವಿಜರಿಗೆ ಹೇರಳ ದಕ್ಷಿಣೆ ಕೊಡಲಾಗಿತ್ತು.॥95॥
ಮೂಲಮ್ - 96
ಆಜಾನುಲಂಬಬಾಹುಃ ಸ ಮಹಾವಕ್ಷಾಃ ಪ್ರತಾಪವಾನ್ ।
ಲಕ್ಷ್ಮಣಾನುಚರೋ ರಾಮಃ ಶಶಾಸಪೃಥಿವೀಮಿಮಾನ್ ॥
ಅನುವಾದ
ಅಜಾನುಬಾಹುವಾದ ಅವನ ವಕ್ಷಃಸ್ಥಳವು ಉಬ್ಬಿಕೊಂಡು ವಿಶಾಲವಾಗಿತ್ತು. ಆ ಪ್ರತಾಪಿ ನರೇಶನಾದ ಶ್ರೀರಾಮನು ಲಕ್ಷ್ಮಣನೊಡಗೂಡಿ ಈ ಭೂಮಂಡಲದ ಶಾಸನಮಾಡಿದನು.॥96॥
ಮೂಲಮ್ - 97
ರಾಘವಶ್ಚಾಪಿ ಧರ್ಮಾತ್ಮಾ ಪ್ರಾಪ್ಯರಾಜ್ಯಮನುತ್ತಮಮ್ ।
ಈಜೇ ಬಹುವಿಧೈರ್ಯಜ್ಞೈಃ ಸಸುಹೃದ್ ಜ್ಞಾತಿಬಾಂಧವಃ ॥
ಅನುವಾದ
ಅಯೋಧ್ಯೆಯ ಪರಮೋತ್ತಮ ರಾಜ್ಯವನ್ನು ಪಡೆದು ಧರ್ಮಾತ್ಮಾ ಶ್ರೀರಾಮನು ಸುಹೃದರು, ಕುಟುಂಬಿಗಳನ್ನು ಹಾಗೂ ಬಂಧು-ಬಾಂಧವರೊಂದಿಗೆ ಅನೇಕ ಪ್ರಕಾರದ ಯಜ್ಞ ಮಾಡಿದನು.॥97॥
ಮೂಲಮ್ - 98
ನ ಪರ್ಯದೇವನ್ವಿಧವಾ ನ ಚ ವ್ಯಾಲಕೃತಂ ಭಯಮ್ ।
ನ ವ್ಯಾಧಿಜಂ ಭಯಂ ಚಾಸೀದ್ ರಾಮೇ ರಾಜ್ಯಂ ಪ್ರಶಾಸತಿ ॥
ಅನುವಾದ
ಶ್ರೀರಾಮನು ರಾಜ್ಯಶಾಸನ ಕಾಲದಲ್ಲಿ ಎಂದೂ ವಿಧವೆಯರ ಪ್ರಲಾಪ ಕೇಳುತ್ತಿರಲಿಲ್ಲ. ಸರ್ಪಾದಿ ದುಷ್ಟಪ್ರಾಣಿಗಳ ಭಯವಿಲ್ಲದೆ ಎಲ್ಲರೂ ನಿರೋಗಿಗಳಾಗಿದ್ದರು.॥98॥
ಮೂಲಮ್ - 99
ನಿರ್ದಸ್ಯುರಭವಲ್ಲೋಕೋ ನಾನರ್ಥಂ ಕಶ್ಚಿದಸ್ಪೃಶತ್ ।
ನ ಚ ಸ್ಮ ವೃದ್ಧಾ ಬಾಲಾನಾಂ ಪ್ರೇತ ಕಾರ್ಯಾಣಿ ಕುರ್ವತೇ ॥
ಅನುವಾದ
ಸಮಸ್ತ ಜಗತ್ತಿನಲ್ಲಿ ಕಳ್ಳರ-ದರೋಡೆಕೋರರ ಹೆಸರೇ ಇರಲಿಲ್ಲ. ಯಾರೂ ಕೂಡ ಅನರ್ಥಕಾರೀ ಕಾರ್ಯಗಳಲ್ಲಿ ಕೈಹಾಕುತ್ತಿರಲಿಲ್ಲ. ವೃದ್ಧರಿಗೆ ಬಾಲಕರ ಉತ್ತರಕರ್ಮ ಮಾಡುವ ಪ್ರಸಂಗ ಬರುತ್ತಿರಲಿಲ್ಲ.॥99॥
ಮೂಲಮ್ - 100
ಸರ್ವಂ ಮುದಿತಮೇವಾಸೀತ್ಸರ್ವೋ ಧರ್ಮಪರೋಽಭವತ್ ।
ರಾಮಮೇವಾನುಪಶ್ಯಂತೋ ನಾಭ್ಯಹಿಂಸನ್ ಪರಸ್ಪರಮ್ ॥
ಅನುವಾದ
ಎಲ್ಲರೂ ಸದಾ ಪ್ರಸನ್ನರಾಗಿ ಇರುತ್ತಿದ್ದರು. ಎಲ್ಲರೂ ಧರ್ಮಪರಾಯಣರಾಗಿ ಶ್ರೀರಾಮನನ್ನು ಪದೇ ಪದೇ ದೃಷ್ಟಿಯಲ್ಲಿಟ್ಟುಕೊಂಡು ಎಂದೂ ಪರಸ್ಪರ ಕಷ್ಟಕೊಡುತ್ತಿರಲಿಲ್ಲ.॥100॥
ಮೂಲಮ್ - 101
ಆಸನ್ ವರ್ಷಸಹಸ್ರಾಣಿ ತಥಾ ಪುತ್ರಸಹಸ್ರಿಣಃ ।
ನಿರಾಮಯಾ ವಿಶೋಕಾಶ್ಚ ರಾಮೇ ರಾಜ್ಯಂ ಪ್ರಶಾಸತಿ ॥
ಅನುವಾದ
ಶ್ರೀರಾಮನ ಆಳ್ವಿಕೆಯಲ್ಲಿ ಜನರು ಸಾವಿರಾರು ವರ್ಷ ಬದುಕಿದ್ದು, ಸಾವಿರಾರು ಮಕ್ಕಳು - ಮೊಮ್ಮಕ್ಕಳನ್ನು ಪಡೆಯುತ್ತಿದ್ದರು. ಅವರಿಗೆ ಯಾವದೇ ರೋಗ-ಶೋಕ ಇರುತ್ತಿರಲಿಲ್ಲ.॥101॥
ಮೂಲಮ್ - 102
ರಾಮೋ ರಾಮೋ ರಾಮ ಇತಿ ಪ್ರಜಾನಾಮಭವನ್ ಕಥಾಃ ।
ರಾಮಭೂತಂ ಜಗದಭೂದ್ ರಾಮೇ ರಾಜ್ಯಂ ಪ್ರಶಾಸತಿ ॥
ಅನುವಾದ
ಶ್ರೀರಾಮನ ರಾಜ್ಯದಲ್ಲಿ ಪ್ರಜಾಜನರಲ್ಲಿ ಕೇವಲ ರಾಮ, ರಾಮ, ರಾಮನದ್ದೇ ಚರ್ಚೆ ನಡೆಯುತ್ತಿತ್ತು. ಇಡೀ ಜಗತ್ತು ಶ್ರೀರಾಮಮಯವಾಗಿತ್ತು.॥102॥
ಮೂಲಮ್ - 103
ನಿತ್ಯಮೂಲಾ ನಿತ್ಯಲಾಸ್ತರವಸ್ತತ್ರ ಪುಷ್ಪಿತಾಃ ।
ಕಾಮವರ್ಷೀ ಚ ಪರ್ಜನ್ಯಃ ಸುಖಸ್ಪರ್ಶಶ್ಚ ಮಾರುತಃ ॥
ಅನುವಾದ
ಶ್ರೀರಾಮನ ರಾಜ್ಯದಲ್ಲಿ ಮರಗಳ ಬೇರು ಭದ್ರವಾಗಿದ್ದವು. ಆ ವೃಕ್ಷಗಳು ಸದಾ ಹೂವು- ಹಣ್ಣುಗಳಿಂದ ತುಂಬಿರುತ್ತಿದ್ದವು. ಮಂದಗತಿಯಲ್ಲಿ ಬೀಸುವ ಗಾಳಿಯ ಸ್ಪರ್ಶ ಸುಖಮಯವಾಗಿತ್ತು.॥103॥
ಮೂಲಮ್ - 104
ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಲೋಭ ವಿವರ್ಜಿತಾಃ ।
ಸ್ವಕರ್ಮಸು ಪ್ರವರ್ತಂತೇ ತುಷ್ಟಾಃ ಸ್ವೈರೇವಕರ್ಮಭಿಃ ॥
ಅನುವಾದ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ನಾಲ್ಕೂ ವರ್ಣದ ಜನರು ಲೋಭರಹಿತರಾಗಿದ್ದರು. ಎಲ್ಲರಿಗೂ ತಮ್ಮ ವರ್ಣೋಚಿತ ಕರ್ಮಗಳಿಂದ ಸಂತೋಷವಿದ್ದು, ಅದನ್ನೇ ಪಾಲಿಸಲು ತೊಡಗಿರುತ್ತಿದ್ದರು.॥104॥
ಮೂಲಮ್ - 105
ಆಸನ್ಪ್ರಜಾಃ ಧರ್ಮಪರಾ ರಾಮೇ ಶಾಸತಿ ನಾನೃತಾಃ ।
ಸರ್ವೇ ಲಕ್ಷಣಸಂಪನ್ನಾಃ ಸರ್ವೇ ಧರ್ಮಪರಾಯಣಾಃ ॥
ಅನುವಾದ
ಶ್ರೀರಾಮನ ಶಾಸನ ಕಾಲದಲ್ಲಿ ಎಲ್ಲ ಪ್ರಜೆ ಧರ್ಮದಲ್ಲಿ ತತ್ಪರರಾಗಿದ್ದ, ಎಂದೂ ಸುಳ್ಳು ಹೇಳುತ್ತಿರಲಿಲ್ಲ. ಎಲ್ಲ ಜನರು ಉತ್ತಮ ಲಕ್ಷಣ ಸಂಪನ್ನರಾಗಿದ್ದು, ಎಲ್ಲರೂ ಧರ್ಮವನ್ನು ಆಶ್ರಯಿಸಿದ್ದರು.॥105॥
ಮೂಲಮ್ - 106
ದಶ ವರ್ಷಸಹಸ್ರಾಣಿ ದಶವರ್ಷ ಶತಾನಿ ಚ ।
ಭ್ರಾತೃಭಿಃ ಸಹಿತಃ ಶ್ರೀಮಾನ್ ರಾಮೋ ರಾಜ್ಯಮಕಾರಯತ್ ॥
ಅನುವಾದ
ಸಹೋದರರೊಂದಿಗೆ ಶ್ರೀರಾಮನು ಹನ್ನೊಂದು ಸಾವಿರ ವರ್ಷಗಳವರೆಗೆ ರಾಜ್ಯವನ್ನಾಳಿದನು.॥106॥
ಮೂಲಮ್ - 107
ಧರ್ಮ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ ।
ಆದಿಕಾವ್ಯಮಿದಂ ಚಾರ್ಷಂ ಪುರಾ ವಾಲ್ಮೀಕಿನಾಕೃತಮ್ ॥
ಅನುವಾದ
ಈ ಋಷಿಪ್ರೋಕ್ತ ಆದಿಕಾವ್ಯ ರಾಮಾಯಣವಾಗಿದೆ, ಇದನ್ನು ಹಿಂದೆ ಮಹರ್ಷಿ ವಾಲ್ಮೀಕಿಗಳು ನಿರ್ಮಿಸಿದ್ದರು. ಇದು ಧರ್ಮ, ಯಶ, ಆಯುಸ್ಸು ವೃದ್ಧಿಗೊಳಿಸುವಂತಹುದು ಹಾಗೂ ರಾಜರಿಗೆ ವಿಜಯವನ್ನು ಕೊಡುವಂತಹುದು.॥107॥
ಮೂಲಮ್ - 108
ಯಃ ಶೃಣೋತಿ ಸದಾ ಲೋಕೇ ನರಃ ಪಾಪಾದ್ ವಿಮುಚ್ಯತೇ ।
ಪುತ್ರಕಾಮಶ್ಚ ಪುತ್ರಾನ್ವೈ ಧನಕಾಮೋ ಧನಾನಿ ಚ ॥
ಮೂಲಮ್ - 109
ಲಭತೇ ಮನುಜೋ ಲೋಕೇ ಶ್ರುತ್ವಾ ರಾಮಾಭಿಷೇಚನಮ್ ।
ಮಹೀಂ ವಿಜಯತೇ ರಾಜಾ ರಿಪೂಂ ಶ್ಚಾಪ್ಯಧಿತಿಷ್ಠತಿ ॥
ಅನುವಾದ
ಸದಾ ಇದನ್ನು ಶ್ರವಣಿಸುವವನು ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ. ಶ್ರೀರಾಮನ ಪಟ್ಟಾಭಿಷೇಕದ ಪ್ರಸಂಗವನ್ನು ಶ್ರವಣಿಸಿ, ಪುತ್ರೇಚ್ಛು ಪುತ್ರವಂತ, ಧನೇಚ್ಛು ಧನವಂತನಾಗುತ್ತಾನೆ. ರಾಜನು ಈ ಕಾವ್ಯವನ್ನು ಶ್ರವಣಿಸಿದರೆ ಎಲ್ಲೆಡೆ ವಿಜಯ ಪಡೆದು, ಶತ್ರುಗಳನ್ನು ತನ್ನ ಅಧೀನವಾಗಿಸಿಕೊಳ್ಳುವನು.॥108-109॥
ಮೂಲಮ್ - 110½
ರಾಘವೇಣ ಯಥಾ ಮಾತಾ ಸುಮಿತ್ರಾ ಲಕ್ಷ್ಮಣೇನ ಚ ।
ಭರತೇನ ಚ ಕೈಕೇಯೀ ಜೀವಪುತ್ರಾಸ್ತಥಾ ಸ್ತ್ರಿಯಃ ॥
ಭವಿಷ್ಯಂತಿ ಸದಾನಂದಾಃ ಪುತ್ರಪೌತ್ರ ಸಮನ್ವಿತಾಃ ।
ಅನುವಾದ
ಕೌಸಲ್ಯೆಯು ರಾಮನನ್ನು, ಸುಮಿತ್ರೆ ಲಕ್ಷ್ಮಣನನ್ನು, ಕೈಕೆ ಭರತನನ್ನು ಪಡೆದು ಜೀವಿತ ಪುತ್ರ ಮಾತೆಯರಾದಂತೆ, ಜಗತ್ತಿನ ಇತರ ಸ್ತ್ರೀಯರೂ ಕೂಡ ಆದಿಕಾವ್ಯದ ಪಾರಾಯಣ ಶ್ರವಣದಿಂದ ಜೀವಿತ ಪುತ್ರವತಿಯರಾಗಿ ಸದಾ ಆನಂದ ಮಗ್ನರಾಗಿ ಪುತ್ರ-ಪೌತ್ರರಿಂದ ಸಂಪನ್ನರಾಗುವರು.॥110॥
ಮೂಲಮ್ - 111½
ಶ್ರುತ್ವಾ ರಾಮಾಯಣಮಿದಂ ದೀರ್ಘಮಾಯುಶ್ಚ ವಿಂದತಿ ॥
ರಾಮಸ್ಯ ವಿಜಯಂ ಚೇಮಂ ಸರ್ವಮಕ್ಲಿಷ್ಟಕರ್ಮಣಃ ।
ಅನುವಾದ
ಕ್ಲೇಶರಹಿತ ಕರ್ಮಮಾಡುವ ಶ್ರೀರಾಮನ ವಿಜಯದ ಕಥಾರೂಪೀ ಈ ಸಂಪೂರ್ಣ ರಾಮಯಣಕಾವ್ಯವನ್ನು ಕೇಳಿ ಮನುಷ್ಯನು ದೀರ್ಘಕಾಲದವರೆಗೆ ಸ್ಥಿರವಾದ ಆಯುಸ್ಸನ್ನು ಪಡೆಯುತ್ತಾನೆ.॥111॥
ಮೂಲಮ್ - 112½
ಶೃಣೋತಿ ಯ ಇದಂ ಕಾವ್ಯಂ ಪುರಾ ವಾಲ್ಮೀಕಿನಾ ಕೃತಮ್ ॥
ಶ್ರದ್ದಧಾನೋ ಜಿತಕ್ರೋಧೋ ದುರ್ಗಾಣ್ಯತಿತರತ್ಯಸೌ ।
ಅನುವಾದ
ಹಿಂದೆ ಮಹರ್ಷಿ ವಾಲ್ಮೀಕಿಗಳು ರಚಿಸಿದುದೇ ಈ ಆದಿಕಾವ್ಯವಾಗಿದೆ. ಕ್ರೋಧವನ್ನು ಗೆದ್ದು, ಶ್ರದ್ಧೆಯಿಂದ ಇದನ್ನು ಕೇಳುವವನು ದೊಡ್ಡ ದೊಡ್ಡ ಸಂಕಟಗಳಿಂದ ಪಾರಾಗಿ ಹೋಗುತ್ತಾನೆ.॥112॥
ಮೂಲಮ್ - 113
ಸಮಾಗಮ್ಯ ಪ್ರವಾಸಾಂತೇ ರಮತೇ ಸಹ ಬಾಂಧವೈಃ ॥
ಮೂಲಮ್ - 114
ಶೃಣ್ವಂತಿ ಯ ಇದಂ ಕಾವ್ಯಂ ಪುರಾ ವಾಲ್ಮೀಕಿನಾ ಕೃತಮ್ ।
ತೇ ಪ್ರಾರ್ಥಿತಾನ್ವರಾನ್ಸರ್ವಾನ್ ಪ್ರಾಪ್ನುವಂತೀಹ ರಾಘವಾತ್ ॥
ಅನುವಾದ
ಹಿಂದೆ ಮಹರ್ಷಿ ವಾಲ್ಮೀಕಿಗಳಿಂದ ರಚಿಸಲ್ಪಟ್ಟ ಈ ಕಾವ್ಯವನ್ನು ಕೇಳುವವರು ಪರದೇಶದಿಂದ ಮರಳಿ ಬಂದು ತಮ್ಮ ಬಂಧು-ಬಾಂಧವರನ್ನು ಸೇರಿ, ಆನಂದ ಅನುಭವಿಸುವರು. ಅವರು ಈ ಜಗತ್ತಿನಲ್ಲಿ ಶ್ರೀರಘುನಾಥನಿಂದ ಸಮಸ್ತ ಮನೋವಾಂಛಿತ ಫಲಗಳನ್ನು ಪಡೆದುಕೊಳ್ಳುವರು.॥113-114॥
ಮೂಲಮ್ - 115
ಶ್ರವಣೇನ ಸುರಾಃ ಸರ್ವೇ ಪ್ರೀಯಂತೇ ಸಂಪ್ರಶೃಣ್ವತಾಮ್ ।
ವಿನಾಯಕಾಶ್ಚ ಶಾಮ್ಯಂತಿ ಗೃಹೇ ತಿಷ್ಠಂತಿ ಯಸ್ಯ ವೈ ॥
ಅನುವಾದ
ಇದರ ಶ್ರವಣದಿಂದ ಸಮಸ್ತ ದೇವತೆಗಳು ಶ್ರೋತೃಗಳ ಮೇಲೆ ಪ್ರಸನ್ನರಾಗುತ್ತಾರೆ ಹಾಗೂ ಯಾರ ಮನೆಯಲ್ಲಿ ವಿಘ್ನಕಾರೀಗ್ರಹರು ಇರುತ್ತಾರೋ ಅವರು ಶಾಂತರಾಗುತ್ತಾರೆ.॥115॥
ಮೂಲಮ್ - 116
ವಿಜಯೇತ ಮಹೀಂ ರಾಜಾ ಪ್ರವಾಸೀ ಸ್ವಸ್ತಿಮಾನ್ ಭವೇತ್ ।
ಸ್ತ್ರಿಯೋ ರಜಸ್ವಲಾಃ ಶ್ರುತ್ವಾ ಪುತ್ರಾನ್ಸೂಯುರನುತ್ತಮಾನ್ ॥
ಅನುವಾದ
ಇದರ ಶ್ರವಣದಿಂದ ರಾಜರು ಭೂಮಂಡಲವನ್ನು ಜಯಿಸಿಕೊಳ್ಳುವರು. ಪರದೇಶದಲ್ಲಿದ್ದ ಪುರುಷನು ಕ್ಷೇಮವಾಗಿ ಇರುವನು. ರಜಸ್ವಲೆ ಸ್ತ್ರೀಯರೂ ಕೂಡ ಇದನ್ನು ಕೇಳಿ ಶ್ರೇಷ್ಠ ಪುತ್ರರನ್ನು ಪಡೆಯುತ್ತಾರೆ.॥116॥
ಮೂಲಮ್ - 117
ಪೂಜಯಂಶ್ಚ ಪಠಂಶ್ಚೇನಮಿತಿಹಾಸಂ ಪುರಾತನಮ್ ।
ಸರ್ವಪಾಪೈಃ ಪ್ರಮುಚ್ಯೇತ ದೀರ್ಘಮಾಯುರವಾಪ್ನುಯಾತ್ ॥
ಅನುವಾದ
ಈ ಪ್ರಾಚೀನ ಇತಿಹಾಸವನ್ನು ಪೂಜಿಸುವವನು, ಪಾರಾಯಣ ಮಾಡುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ದೀರ್ಘಾಯುಸ್ಸನ್ನು ಪಡೆಯುವನು.॥117॥
ಮೂಲಮ್ - 118
ಪ್ರಣಮ್ಯ ಶಿರಸಾ ನಿತ್ಯಂ ಶ್ರೋತವ್ಯಂ ಕ್ಷತ್ರಿಯೈರ್ದ್ವಿಜಾತ್ ।
ಐಶ್ವರ್ಯಂ ಪುತ್ರಲಾಭಶ್ಚ ಭವಿಷ್ಯತಿ ನ ಸಂಶಯಃ ॥
ಅನುವಾದ
ಕ್ಷತ್ರಿಯರು ಪ್ರತಿದಿನ ತಲೆಬಾಗಿ ನಮಸ್ಕರಿಸಿ ಬ್ರಾಹ್ಮಣರಿಂದ ಈ ಗ್ರಂಥವನ್ನು ಶ್ರವಣಿಸಬೇಕು. ಇದರಿಂದ ಅವರಿಗೆ ಐಶ್ವರ್ಯ ಮತ್ತು ಪುತ್ರ ಪ್ರಾಪ್ತಿಯಾಗುವುದರಲ್ಲಿ ಸಂಶಯವೇ ಇಲ್ಲ.॥118॥
ಮೂಲಮ್ - 119
ರಾಮಾಯಣಮಿದಂ ಕೃತ್ಸ್ನಂ ಶೃಣ್ವತಃ ಪಠತಃ ಸದಾ ।
ಪ್ರೀಯತೇ ಸತತಂ ರಾಮಃ ಸ ಹಿ ವಿಷ್ಣುಃ ಸನಾತನಃ ॥
ಅನುವಾದ
ಈ ಸಂಪೂರ್ಣ ರಾಮಾಯಣವನ್ನು ಶ್ರವಣ ಹಾಗೂ ಪಾರಾಯಣ ಮಾಡುವವನ ಮೇಲೆ ಸನಾತನ ವಿಷ್ಣು ಸ್ವರೂಪೀ ಭಗವಾನ್ ಶ್ರೀರಾಮನು ಸದಾ ಪ್ರಸನ್ನನಾಗುತ್ತಾನೆ.॥119॥
ಮೂಲಮ್ - 120
ಆದಿದೇವೋ ಮಹಾಬಾಹು ರ್ಹರಿರ್ನಾರಾಯಣಃ ಪ್ರಭುಃ ।
ಸಾಕ್ಷಾದ್ರಾಮೋ ರಘುಶ್ರೇಷ್ಠಃ ಶೇಷೋ ಲಕ್ಷ್ಮಣ ಉಚ್ಯತೇ ॥
ಅನುವಾದ
ಸಾಕ್ಷಾತ್ ಆದಿದೇವ ಮಹಾ ಬುಹು, ಪಾಪಹಾರೀ ಪ್ರಭು ನಾರಾಯಣನೇ ರಘುಕುಲತಿಲಕ ಶ್ರೀರಾಮನಾಗಿದ್ದಾನೆ ಮತ್ತು ಭಗವಾನ್ ಶೇಷನೇ ಲಕ್ಷ್ಮಣನಾಗಿದ್ದಾನೆ.॥120॥
ಮೂಲಮ್ - 121
ಏವಮೇತತ್ಪುರಾವೃತ್ತಮಾಖ್ಯಾನಂ ಭದ್ರಮಸ್ತು ವಃ ।
ಪ್ರವ್ಯಾಹರತ ವಿಸ್ರಬ್ಧಂ ಬಲಂ ವಿಷ್ಣೋಃ ಪ್ರವರ್ಧತಾಮ್ ॥
ಅನುವಾದ
(ಲವಕುಶರು ಹೇಳುತ್ತಾರೆ-) ಶ್ರೋತೃಗಳೇ! ನಿಮಗೆ ಮಂಗಳವಾಗಲಿ. ಇದು ಹಿಂದೆ ನಡೆದ ಅಖ್ಯಾನವೇ ಈ ಪ್ರಕಾರ ರಾಮಾಯಣ ಕಾವ್ಯರೂಪದಲ್ಲಿ ವರ್ಣಿತವಾಗಿದೆ. ಇದರಿಂದ ನಿಮ್ಮ ವೈಷ್ಣವಬಲದ ವೃದ್ಧಿಯಾಗುವುದು.॥121॥
ಮೂಲಮ್ - 122
ದೇವಾಶ್ಚ ಸರ್ವೇ ತುಷ್ಯಂತಿ ಗ್ರಹಣಾಚ್ಛ್ರವಣಾತ್ತಥಾ ।
ರಾಮಾಯಣಸ್ಯ ಶ್ರವಣೇ ತುಷ್ಯಂತಿ ಪಿತರಃ ಸದಾ ॥
ಅನುವಾದ
ರಾಮಾಯಣವನ್ನು ಹೃದಯಂಗಮ ಮಾಡಿಕೊಳ್ಳುವುದರಿಂದ, ಕೇಳುವುದರಿಂದ ಎಲ್ಲ ದೇವತೆಗಳು ಸಂತುಷ್ಟರಾಗುತ್ತಾರೆ. ಇದರ ಶ್ರವಣದಿಂದ ಪಿತೃಗಳಿಗೂ ತೃಪ್ತಿಸಿಗುತ್ತದೆ.॥122॥
ಮೂಲಮ್ - 123
ಭಕ್ತ್ಯಾ ರಾಮಸ್ಯ ಯೇ ಚೇಮಾಂ ಸಂಹಿತಾಮೃಷಿಣಾ ಕೃತಾಮ್ ।
ಲಿಖಯೇಂತೀಹ ಚ ನರಾಸ್ತೇಷಾಂ ವಾಸಸ್ತ್ರಿವಿಷ್ಟಪೇ ॥
ಅನುವಾದ
ಶ್ರೀರಾಮಚಂದ್ರನಲ್ಲಿ ಭಕ್ತಿಭಾವವನ್ನರಿಸಿ ಮಹರ್ಷಿ ವಾಲ್ಮೀಕಿ ವಿರಚಿತ ಈ ರಾಮಾಯಣ ಸಂಹಿತೆಯನ್ನು ಬರೆಯುವವನು ಸ್ವರ್ಗದಲ್ಲಿ ವಾಸಿಸುವನು.॥123॥
ಮೂಲಮ್ - 124
ಕುಟುಂಬವೃದ್ಧಿಂ ಧನಧಾನ್ಯವೃದ್ಧಿಂ
ಸ್ತ್ರಿಯಶ್ಚ ಮುಖ್ಯಾಃ ಸುಖಮುತ್ತಮಂ ಚ ।
ಶ್ರುತ್ವಾ ಶುಭಂ ಕಾವ್ಯಮಿದಂ ಮಹಾರ್ಥಂ
ಪ್ರಾಪ್ನೋತಿ ಸರ್ವಾಂ ಭುವಿ ಚಾರ್ಥಸಿದ್ಧಿಮ್ ॥
ಅನುವಾದ
ಈ ಶುಭ, ಗಂಭೀರ ಅರ್ಥದಿಂದ ಕೂಡಿದ ಕಾವ್ಯವನ್ನು ಕೇಳುವ ಮನುಷ್ಯನ ಕುಟುಂಬ ಮತ್ತು ಧನ-ಧಾನ್ಯದ ವೃದ್ಧಿಯಾಗುತ್ತದೆ. ಅವನಿಗೆ ಶ್ರೇಷ್ಠ ಗುಣವುಳ್ಳ ಸುಂದರ ಪತ್ನಿ ದೊರಕುವಳು ಹಾಗೂ ಈ ಭೂತಳದಲ್ಲಿ ಅವನು ತನ್ನ ಎಲ್ಲ ಮನೋರಥಗಳನ್ನು ಪಡೆದುಕೊಳ್ಳುವನು.॥124॥
ಮೂಲಮ್ - 125
ಆಯುಷ್ಯಮಾರೋಗ್ಯಕರಂ ಯಶಸ್ಯಂ
ಸೌಭ್ರಾತೃಕಂ ಬುದ್ಧಿಕರಂ ಶುಭಂ ಚ ।
ಶ್ರೋತವ್ಯ ಮೇತನ್ನಿಯಮೇನ ಸದ್ಭಿ-
ರಾಖ್ಯಾನಮೋಜಸ್ಕರಮೃದ್ಧಿಕಾಮೈಃ ॥
ಅನುವಾದ
ಈ ಕಾವ್ಯವು ಆಯುಸ್ಸು, ಆರೋಗ್ಯ, ಯಶ ಹಾಗೂ ಭ್ರಾತೃಪ್ರೇಮವನ್ನು ಹೆಚ್ಚಿಸುವುದಾಗಿದೆ. ಇದು ಉತ್ತಮ ಬುದ್ಧಿಕೊಡುವುದಿದ್ದು, ಮಂಗಲಕರವಾಗಿದೆ; ಆದ್ದರಿಂದ ಸಮೃದ್ಧಿಯನ್ನು ಬಯಸುವ ಸತ್ಪುರುಷರು ಈ ಉತ್ಸಾಹವರ್ಧಕ ವಾದ ಇತಿಹಾಸವನ್ನು ನಿಯಮಪೂರ್ವಕ ಶ್ರವಣಿಸಬೇಕು.॥125॥
Misc Detail
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಇಪ್ಪತ್ತೆಂಟನೆಯ ಸರ್ಗ ಪೂರ್ಣವಾಯಿತು. ॥128॥
ಮೂಲಮ್ (ಸಮಾಪ್ತಿಃ)
ಯುದ್ಧಕಾಂಡವು ಪೂರ್ಣವಾಯಿತು.
॥ ಶ್ರೀಸೀತಾರಾಮಚಂದ್ರಾರ್ಪಣಮಸ್ತು ॥