१२७ नन्दिग्रामे भरतप्रतीक्षा

वाचनम्
ಭಾಗಸೂಚನಾ

ಅಯೋಧ್ಯೆಯಲ್ಲಿ ಶ್ರೀರಾಮನ ಸ್ವಾಗತಕ್ಕಾಗಿ ಸಿದ್ಧತೆ, ಅಯೋಧ್ಯೆಯಿಂದ ಎಲ್ಲರೂ ನಂದಿಗ್ರಾಮಕ್ಕೆ ತೆರಳಿದುದು, ಶ್ರೀರಾಮನ ಆಗಮನ, ಭರತನೊಡನೆ ಸಮಾಗಮ, ಪುಷ್ಪಕ ವಿಮಾನವನ್ನು ಕುಬೇರನಿಗೆ ಹಿಂದಿರುಗಿಸಿದುದು

ಮೂಲಮ್ - 1

ಶ್ರುತ್ವಾ ತು ಪರಮಾನಂದಂ ಭರತಃ ಸತ್ಯವಿಕ್ರಮಃ ।
ಹೃಷ್ಟಮಾಜ್ಞಾಪಯಾಮಾಸ ಶತ್ರುಘ್ನಂ ಪರವೀರಹಾ ॥

ಅನುವಾದ

ಈ ಪರಮಾನಂದಮಯ ಸಮಾಚಾರ ಕೇಳಿ ಶತ್ರುವೀರರ ಸಂಹಾರ ಮಾಡುವ ಸತ್ಯಪರಾಕ್ರಮಿ ಭರತನು ಶತ್ರುಘ್ನನಲ್ಲಿ ಹರ್ಷದಿಂದ ಆಜ್ಞಾಪಿಸಿದನು.॥1॥

ಮೂಲಮ್ - 2

ದೈವತಾನಿ ಚ ಸರ್ವಾಣಿ ಚೈತ್ಯಾನಿ ನಗರಸ್ಯ ಚ ।
ಸುಗಂಧ ಮಾಲ್ಯೈರ್ವಾದಿತ್ರೈರರ್ಚಂತು ಶುಚಯೋ ನರಾಃ ॥

ಅನುವಾದ

ಶುದ್ಧ ಆಚಾರವುಳ್ಳ ಪುರುಷರು ಕುಲದೇವತೆಗಳನ್ನು ಮತ್ತು ನಗರದ ಎಲ್ಲ ದೇವಾಲಯಗಳಲ್ಲಿ ವಾದ್ಯ-ವಾದನಗ ಳೊಂದಿಗೆ, ಸುಗಂಧಿತ ಪುಷ್ಪಗಳಿಂದ ಪೂಜೆ ಮಾಡಲಿ.॥2॥

ಮೂಲಮ್ - 3

ಸೂತಾಃ ಸ್ತುತಿಪುರಾಣಜ್ಞಾಃ ಸರ್ವೇ ವೈತಾಲಿಕಾಸ್ತಥಾ ।
ಸರ್ವೇ ವಾದಿತ್ರಕುಶಲಾ ಗಣಿಕಾಶ್ಚೈವ ಸರ್ವಶಃ ॥

ಮೂಲಮ್ - 4½

ರಾಜದಾರಾಸ್ತಥಾಮಾತ್ಯಾಃ ಸೈನ್ಯಾಃ ಸೇನಾಂಗ ನಾಗಣಾಃ ।
ಬ್ರಾಹ್ಮಣಾಶ್ಚ ಸರಾಜನ್ಯಾಃ ಶ್ರೇಣೀಮುಖ್ಯಾಸ್ತಥಾಗಣಾಃ ॥
ಅಭಿನಿರ್ಯಾಂತು ರಾಮಸ್ಯ ದ್ರಷ್ಟುಂ ಶಶಿನಿ ಭಂಮುಖಮ್ ।

ಅನುವಾದ

ಸ್ತೋತ್ರಗಳನ್ನು ಮತ್ತು ಪುರಾಣಗಳನ್ನು ಬಲ್ಲ ಸೂತರು, ಸಮಸ್ತ ಸುತ್ತಿಪಾಠಕರು, ವಾದ್ಯ-ವಾದನದಲ್ಲಿ ಕುಶಲರಾದವರು, ಎಲ್ಲ ವೇಶ್ಯೆಯರು, ರಾಣಿಯರು, ಮಂತ್ರಿಗಳು, ಸೈನಿಕರೂ, ಸೈನಿಕರ ಪತ್ನಿಯರೂ, ಬ್ರಾಹ್ಮಣ, ಕ್ಷತ್ರಿಯ ಹಾಗೂ ವ್ಯವಸಾಯೀ ಸಂಘಗಳ ಪ್ರಮುಖರು, ಶ್ರೀರಾಮ ಚಂದ್ರನ ಮುಖದರ್ಶನಕ್ಕಾಗಿ ನಗರದಿಂದ ಹೊರಗೆ ನಡೆಯಲಿ.॥3-4½॥

ಮೂಲಮ್ - 5

ಭರತಸ್ಯ ವಚಃ ಶ್ರುತ್ವಾ ಶತ್ರುಘ್ನಃ ಪರವೀರಹಾ ॥

ಮೂಲಮ್ - 6

ವಿಷ್ಟೀರನೇಕಸಾಹಸ್ರಾಶ್ಚೋದಯಾಮಾಸ ಭಾಗಶಃ ।
ಸಮೀಕುರುತ ನಿಮ್ನಾನಿ ವಿಷಮಾಣಿ ಸಮಾನಿ ಚ ॥

ಅನುವಾದ

ಭರತನ ಮಾತನ್ನು ಕೇಳಿ ಶತ್ರು ವೀರರನ್ನು ಸಂಹರಿಸುವ ಶತ್ರುಘ್ನನು ಅನೇಕ ಸಾವಿರ ಕೂಲಿಕಾರರನ್ನು ಬೇರೆ ಬೇರೆ ಗುಂಪುಗಳಾಗಿಸಿ - ‘ನೀವೆಲ್ಲರೂ ಎತ್ತರ-ತಗ್ಗಾದ ದಾರಿಯನ್ನು ಸಮತಟ್ಟಾಗಿಸಿರಿ’ ಎಂದು ಆಜ್ಞಾಪಿಸಿದನು.॥5-6॥

ಮೂಲಮ್ - 7

ಸ್ಥಾನಾನಿ ಚ ನಿರಸ್ಯಂತಾಂ ನಂದಿಗ್ರಾಮಾದಿತಃ ಪರಮ್ ।
ಸಿಂಚಂತು ಪೃಥಿವೀಂ ಕೃತ್ನ್ಸಾಂ ಹಿಮಶೀತೇನ ವಾರಿಣಾ ॥

ಅನುವಾದ

ಅಯೋಧ್ಯೆಯಿಂದ ನಂದಿಗ್ರಾಮದ ವರೆಗಿನ ಮಾರ್ಗ ಶುಚಿಗೊಳಿಸಿರಿ. ಅಕ್ಕಪಕ್ಕದ ನೆಲವನ್ನು ತಣ್ಣೀರನ್ನು ಸಿಂಪಡಿಸಿರಿ..॥7॥

ಮೂಲಮ್ - 8

ತತೋಽಭ್ಯವಕಿರಂತ್ವನ್ಯೇ ಲಾಜೈಃ ಪುಷ್ಪೈಶ್ಚ ಸರ್ವತಃ ।
ಸಮುಚ್ಛ್ರಿತಪತಾಕಾಸ್ತು ರಥ್ಯಾಃ ಪುರವರೋತ್ತಮೇ ॥

ಅನುವಾದ

ಬಳಿಕ ಇತರ ಜನರು ದಾರಿಯಲ್ಲಿ ಎಲ್ಲೆಡೆ ಅರಳು ಮತ್ತು ಹೂವನ್ನು ಚೆಲ್ಲಲಿ. ಈ ಶ್ರೇಷ್ಠನಗರದ ರಾಜ ಬೀದಿಗಳ ಅಕ್ಕ-ಪಕ್ಕಗಳಲ್ಲಿ ಎತ್ತರವಾದ ಪತಾಕೆಗಳನ್ನು ಹಾರಿಸಲಿ.॥8॥

ಮೂಲಮ್ - 9

ಶೋಭಯಂತು ಚ ವೇಶ್ಮಾನಿ ಸೂರ್ಯಸ್ಯೋದಯನಂ ಪ್ರತಿ ।
ಸ್ರಗ್ದಾಮಭಿರ್ಮುಕ್ತಪುಷ್ಪೈಶ್ಚ ಸುವರ್ಣೈಃ ಪಂಚವರ್ಣಕೈಃ ॥

ಅನುವಾದ

ನಾಳೆ ಸೂರ್ಯೋದಯದೊಳಗೆ ಜನರು ನಗರದ ಎಲ್ಲ ಮನೆಗಳನ್ನು ಹೂವಿನ ಮಾಲೆಗಳಿಂದ, ಬಿಡಿಬಿಡಿಯಾದ ಕಮಲ ಕನ್ನೈದಿಲೆ, ಗುಲಾಬಿ ಹೂವುಗಳಿಂದ, ಸುಗಂಧಯುಕ್ತ ಪಂಚವರ್ಣದ ರಂಗವಲ್ಲಿಗಳಿಂದಲೂ ಅಲಂಕರಿಸಲಿ.॥9॥

ಮೂಲಮ್ - 10

ರಾಜಮಾರ್ಗಮಸಂಬಾಧಂ ಕಿರಂತು ಶತಶೋ ನರಾಃ ।
ತತಸ್ತಚ್ಛಾಸನಂ ಶ್ರುತ್ವಾ ಶತ್ರುಘ್ನಸ್ಯ ಮುದಾನ್ವಿತಾಃ ॥

ಅನುವಾದ

ರಾಜಬೀದಿಯಲ್ಲಿ ಹೆಚ್ಚಿನ ಗದ್ದಲ ಇಲ್ಲದಿರಲಿ, ಇದರ ವ್ಯವಸ್ಥೆಗಾಗಿ ನೂರಾರು ಜನರು ಎಲ್ಲೆಡೆ ತೊಡಗಲಿ. ಶತ್ರುಘ್ನನ ಆ ಆದೇಶವನ್ನು ಕೇಳಿ ಎಲ್ಲರೂ ಸಂತೋಷದಿಂದ ಅದನ್ನು ಪಾಲಿಸಲು ತೊಡಗಿದರು.॥10॥

ಮೂಲಮ್ - 11½

ಧೃಷ್ಟಿರ್ಜಯಂತೋ ವಿಜಯಃ ಸಿದ್ಧಾರ್ಥೋ ಹ್ಯರ್ಥಸಾಧಕಃ ।
ಅಶೋಕೋ ಮಂತ್ರಪಾಲಶ್ಚ ಸುಮಂತ್ರಶ್ಚಾಪಿ ನಿರ್ಯಯುಃ ॥
ಮತ್ತೈರ್ನಾಗಸಹಸ್ರೈಶ್ಚ ಸಧ್ವಜೈಃ ಸುವಿಭೂಷಿತೈಃ ।

ಅನುವಾದ

ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ- ಈ ಎಂಟು ಮಂತ್ರಿಗಳು ಧ್ವಜ ಮತ್ತು ಒಡವೆಗಳಿಂದ ಭೂಷಿತರಾಗಿ ಮುತ್ತಗಜ ಗಳನ್ನೇರಿ ಹೊರಡಲಿ.॥11॥

ಮೂಲಮ್ - 12½

ಅಪರೇ ಹೇಮಕಕ್ಷ್ಯಾಭಿಃ ಸಗಜಾಭಿಃ ಕರೇಣುಭಿಃ ॥
ನಿರ್ಯಯುಸ್ತುರಗಾಕ್ರಾಂತಾ ರಥೈಶ್ಚ ಸುಮಹಾರಥಾಃ ।

ಅನುವಾದ

ಇತರ ಅನೇಕ ಮಹಾರಥಿ ವೀರರು ಬಂಗಾರದ ಸರಪಳಿಗಳಿಂದ ಕಟ್ಟಿದ ಹೆಣ್ಣಾನೆಗಳ ಮೇಲೆ ಗಂಡಾನೆಗಳ ಮೇಲೆ, ಕುದುರೆಗಳ ಮೇಲೆ ಕುಳಿತುಹೊರಡಲಿ.॥12½॥

ಮೂಲಮ್ - 13

ಶಕ್ತ್ಯಷ್ಟಿ ಪಾಶಹಸ್ತಾನಾಂ ಸಧ್ವಜಾನಾಂ ಪತಾಕಿನಾಮ್ ॥

ಮೂಲಮ್ - 14

ತುರಗಾಣಾಂ ಸಹಸ್ರೈಶ್ಚ ಮುಖ್ಯೈರ್ಮುಖ್ಯತರಾನ್ವಿತೈಃ ।
ಪದಾತೀನಾಂ ಸಹಸ್ರೈಶ್ಚ ವೀರಾಃ ಪರಿವೃತಾ ಯಯುಃ ॥

ಅನುವಾದ

ಧ್ವಜ ಪತಾಕೆಗಳಿಂದ ಅಲಂಕೃತ ಸಾವಿರಾರು ಒಳ್ಳೆಯ ಕುದುರೆ ಸವಾರರು ಹಾಗೂ ಕೈಗಳಲ್ಲಿ ಶಕ್ತಿ, ಋಷ್ಟಿ, ಪಾಶ ಧರಿಸಿದ ಸಾವಿರಾರು ಪದಾತಿಗಳಿಂದ ಪರಿವೃತರಾದ ವೀರಪುರುಷರು ಶ್ರೀರಾಮನನ್ನು ಇದಿರ್ಗೊಗೊಳ್ಳಲು ಹೊರಡಲಿ.॥13-14॥

ಮೂಲಮ್ - 15

ತತೋ ಯಾನಾನ್ಯುಪಾರೂಢಾಃ ಸರ್ವಾ ದಶರಥಸ್ತ್ರಿಯಃ ॥

ಮೂಲಮ್ - 16

ಕೌಸಲ್ಯಾಂ ಪ್ರಮುಖೇ ಕೃತ್ವಾ ಸುಮಿತ್ರಾಂ ಚಾಪಿ ನಿರ್ಯಯುಃ ।
ಕೈಕೇಯ್ಯಾ ಸಹಿತಾಃ ಸರ್ವಾ ನಂದಿಗ್ರಾಮಮುಪಾಗಮನ್ ॥

ಅನುವಾದ

ಅನಂತರ ದಶರಥರಾಜನ ಎಲ್ಲ ರಾಣಿಯರು ಪಲ್ಲಕ್ಕಿಗಳನ್ನು ಏರಿ, ಕೌಸಲ್ಯೆ ಮತ್ತು ಸುಮಿತ್ರೆಯರನ್ನು ಮುಂದಿರಿಸಿಕೊಂಡು ಹೊರಟರು ಹಾಗೂ ಕೈಕೇಯಿ ಸಹಿತವಾಗಿ ಎಲ್ಲರೂ ನಂದಿಗ್ರಾಮಕ್ಕೆ ಬಂದರು.॥15-16॥

ಮೂಲಮ್ - 17

ದ್ವಿಜಾತಿಮುಖ್ಯೈರ್ಧರ್ಮಾತ್ಮಾ ಶ್ರೇಣೀಮುಖ್ಯೈಃ ಸನೈಗಮೈಃ ।
ಮಾಲ್ಯಮೋದಕಹಸ್ತೈಶ್ಚ ಮಂತ್ರಿಭಿರ್ಭರತೋ ವೃತಃ ॥

ಮೂಲಮ್ - 18

ಶಂಖಭೇರೀ ನಿನಾದೈಶ್ಚ ವಂದಿಭಿಶ್ಚಾಭಿನಂದಿತಃ ।
ಆರ್ಯಪಾದೌ ಗೃಹೀತ್ವಾ ತು ಶಿರಸಾ ಧರ್ಮಕೋವಿದಃ ॥

ಅನುವಾದ

ಧರ್ಮಾತ್ಮಾ ಮತ್ತು ಧರ್ಮಜ್ಞನಾದ ಭರತನು ಮುಖ್ಯ ಮುಖ್ಯ ಬ್ರಾಹ್ಮಣರಿಂದ, ವ್ಯವಸಾಯಿ ವರ್ಗದ ಮುಖ್ಯಸ್ಥರಿಂದ, ವೈಶ್ಯರಿಂದ, ಕೈಯಲ್ಲಿ ಹೂವಿನಹಾರ, ಮಿಠಾಯಿ ಎತ್ತಿಕೊಂಡ ಮಂತ್ರಿಗಳಿಂದ ಸುತ್ತುವರಿದು ಅಣ್ಣನ ಚರಣ ಪಾದುಕೆಗಳನ್ನು ಶಿರದಲ್ಲಿ ಹೊತ್ತು, ಶಂಖ, ಭೇರಿಗಳ ಗಂಭೀರ ಧ್ವನಿಗಳೊಂದಿಗೆ ಹೊರಟನು. ಆಗ ವಂದೀಜನರು ಅವನನ್ನು ಅಭಿನಂದಿಸುತ್ತಿದ್ದರು.॥17-18॥

ಮೂಲಮ್ - 19

ಪಾಂಡುರಂ ಛತ್ರಮಾದಾಯ ಶುಕ್ಲಮಾಲ್ಯೋಪಶೋಭಿತಮ್ ।
ಶುಕ್ಲೇ ಚ ವಾಲವ್ಯಜನೇ ರಾಜಾರ್ಹೇ ಹೇಮಭೂಷಿತೇ ॥

ಅನುವಾದ

ಶ್ವೇತ ಮಾಲೆಗಳಿಂದ ಸುಶೋಭಿತ ಬೆಳ್ಗೊಡೆ ಹಾಗೂ ರಾಜರಿಗೆ ಯೋಗ್ಯವಾದ ಸ್ವರ್ಣಭೂಷಿತ ಎರಡು ಚಾಮರಗಳನ್ನು ಅವನು ಜೊತೆಯಲ್ಲಿರಿಸಿಕೊಂಡಿದ್ದನು.॥19॥

ಮೂಲಮ್ - 20

ಉಪವಾಸಾಕೃಶೋ ದೀನಶ್ಚೀರಕೃಷ್ಣಾಜಿನಾಂಬರಃ ।
ಭ್ರಾತುರಾಗಮನಂ ಶ್ರುತ್ವಾ ತತ್ಪೂರ್ವಂ ಹರ್ಷಮಾಗತಃ ॥

ಅನುವಾದ

ಭರತನು ಉಪವಾಸ ದಿಂದಾಗಿ ದೀನ-ದುರ್ಬಲನಾಗಿದ್ದನು. ಅವನು ನಾರುಮಡಿ ಮತ್ತು ಮೃಗಚರ್ಮವನ್ನು ಧರಿಸಿದ್ದನು. ಅಣ್ಣನ ಆಗಮವನ್ನು ಕೇಳಿ ಮೊದಲು ಮಹಾಹರ್ಷವಾದುದು ಅವನಿಗೆ.॥20॥

ಮೂಲಮ್ - 21

ಪ್ರತ್ಯುದ್ಯಯೌ ಯದಾ ರಾಮಂ ಮಹಾತ್ಮಾಸಚಿವೈಃ ಸಹ ।
ಅಶ್ವಾನಾಂ ಖುರಶಬ್ದೈಶ್ಚ ರಥನೇಮಿಸ್ವನೇನ ಚ ॥

ಮೂಲಮ್ - 22

ಶಂಖದುಂದುಭಿನಾದೇನ ಸಂಚಚಾಲೇವ ಮೇದಿನೀ ।
ಗಜಾನಾಂ ಬೃಂಹಿತೈಶ್ಚಾಪಿ ಶಂಖದುಂದುಭಿನಿಃಸ್ವನೈಃ ॥

ಅನುವಾದ

ಮಹಾತ್ಮಾ ಭರತನು ಆಗ ಶ್ರೀರಾಮನನ್ನು ಎದುರುಗೊಳ್ಳಲು ಮುಂದಕ್ಕೆ ಹೋಗುತ್ತಿದ್ದನು. ಕುದುರೆಗಳ ಗೊರಸುಗಳ ಧ್ವನಿ, ರಥಚಕ್ರಗಳ ಗಡ-ಗಡಧ್ವನಿ, ಶಂಖ-ಭೇರಿಗಳ ಗಂಭೀರನಾದ, ಇವುಗಳಿಂದ ಹಾಗೂ ಜೊತೆ ಸೇರಿದ ಆನೆಗಳ ಘೀಳಿಡುವ ಶಬ್ದದಿಂದ ಇಡೀ ಭೂಮಿ ನಡುಗಿ ದಂತಾಯಿತು.॥21-22॥

ಮೂಲಮ್ - 23

ಕೃತ್ಸ್ನಂ ತು ನಗರಂ ತತ್ತು ನಂದಿಗ್ರಾಮಮುಪಾಗಮತ್ ।
ಸಮೀಕ್ಷ್ಯ ಭರತೋ ವಾಕ್ಯಮುವಾಚ ಪವನಾತ್ಮಜಮ್ ॥

ಅನುವಾದ

ಅಯೋಧ್ಯೆಯ ನಾಗರಿಕರೆಲ್ಲರೂ ನಂದಿಗ್ರಾಮಕ್ಕೆ ಆಗಮಿಸಿದನ್ನು ನೋಡಿ ಭರತನು ಪವನ ಪುತ್ರ ಹನುಮಂತನಲ್ಲಿ ಕೇಳಿದನು.॥23॥

ಮೂಲಮ್ - 24½

ಕಚ್ಚಿನ್ನ ಖಲು ಕಾಪೇಯೀ ಸೇವ್ಯತೇ ಚಲಚಿತ್ತತಾ ।
ನ ಹಿ ಪಶ್ಯಾಮಿ ಕಾಕುತ್ಸ್ಥಂ ರಾಮಮಾರ್ಯಂ ಪರಂತಪಮ್ ॥
ಕಚ್ಚಿನ್ನ ಖಲು ದೃಶ್ಯಂತೇ ಕಪಯಃ ಕಾಮರೂಪಿಣಃ ।

ಅನುವಾದ

ವಾನರ ವೀರನೇ! ವಾನರರ ಚಿತ್ತ ಸ್ವಾಭಾವಿಕವಾಗಿ ಚಂಚಲವಾಗಿರುತ್ತದೆ. ಎಲ್ಲಾದರೂ ನೀನೂ ಅದೇ ಗುಣವನ್ನು ಸೇವಿಸಿಲ್ಲ ತಾನೇ? ಶ್ರೀರಾಮನು ಬರುವ ಸುಳ್ಳುಸುದ್ದಿಯನ್ನು ಹರಡಿಲ್ಲವಲ್ಲ! ಏಕೆಂದರೆ ಇನ್ನು ಪರಂತಪನಾದ ಕಕುತ್ಸ್ಥಕುಲಭೂಷಣ ಆರ್ಯ ಶ್ರೀರಾಮನ ದರ್ಶನವಾಗುತ್ತಿಲ್ಲ ಹಾಗೂ ಕಾಮರೂಪಿಗಳಾದ ವಾನರರೂ ಕಣ್ಣಿಗೆ ಬೀಳುತ್ತಿಲ್ಲವಲ್ಲ.॥24½॥

ಮೂಲಮ್ - 25½

ಅಥೈವಮುಕ್ತೇ ವಚನೇ ಹನೂಮಾನಿದಮಬ್ರವೀತ್ ॥
ಅರ್ಥ್ಯಂ ವಿಜ್ಞಾಪಯನ್ನೇವ ಭರತಂ ಸತ್ಯವಿಕ್ರಮಮ್ ।

ಅನುವಾದ

ಭರತನು ಹೀಗೆ ಹೇಳಿದಾಗ ಹನುಮಂತನು - ಸತ್ಯಪರಾಕ್ರಮಿ ಭರತನಲ್ಲಿ ಸಾರ್ಥಕ ಮತ್ತು ಸತ್ಯವಾದ ಮಾತನ್ನು ಹೇಳಿದನು.॥25½॥

ಮೂಲಮ್ - 26½

ಸದಾಲಾನ್ಕುಸುಮಿತಾನ್ ವೃಕ್ಷಾನ್ಪ್ರಾಪ್ಯ ಮಧುಸ್ರವಾನ್ ॥
ಭರದ್ವಾಜ ಪ್ರಸಾದೇನ ಮತ್ತಭ್ರಮರನಾದಿತಾನ್ ।

ಅನುವಾದ

ಮುನಿವರ್ಯ ಭರದ್ವಾಜರ ಕೃಪೆಯಿಂದ ದಾರಿಯ ಎಲ್ಲ ವೃಕ್ಷಗಳು ಸದಾ ಹೂವು-ಹಣ್ಣುಗಳನ್ನು ಬಿಡುತ್ತಿವೆ; ಅವುಗಳಿಂದ ಜೇನಿನ ಧಾರೆಯೇ ಒಸರುತ್ತಿದೆ. ಆ ವೃಕ್ಷಗಳಲ್ಲಿ ಮತ್ತ ಭ್ರಮರಗಳು ನಿರಂತರ ಗುಂಜಾರವ ಮಾಡುತ್ತಿವೆ. ಅವನ್ನು ಪಡೆದ ವಾನರರು ತಮ್ಮ ಹಸಿವು-ಬಾಯಿರಿಕೆಯನ್ನು ತಣಿಸಿ ಕೊಳ್ಳಲು ತೊಡಗಿದ್ದಾರೆ.॥26½॥

ಮೂಲಮ್ - 27½

ತಸ್ಯ ಚೈವ ವರೋ ದತ್ತೋ ವಾಸವೇನ ಪರಂತಪ ॥
ಸಸೈನ್ಯಸ್ಯ ತಥಾತಿಥ್ಯಂ ಕೃತಂ ಸರ್ವಗುಣಾನ್ವಿತಮ್ ।

ಅನುವಾದ

ಪರಂತಪ! ದೇವೇಂದ್ರನೂ ಶ್ರೀರಾಮನಿಗೆ ಹೀಗೆ ವರವನ್ನು ಕೊಟ್ಟಿದ್ದನು. ಆದ್ದರಿಂದ ಭರದ್ವಾಜರು ಸೈನ್ಯ ಸಹಿತ ಶ್ರೀರಾಮಚಂದ್ರನ ಸರ್ವಗುಣ ಸಂಪನ್ನ-ಸಾಂಗೋಪಾಂಗ ಆತಿಥ್ಯ-ಸತ್ಕಾರ ಮಾಡಿದ್ದಾರೆ.॥27½॥

ಮೂಲಮ್ - 28½

ನಿಃಸ್ವನಃ ಶ್ರೂಯತೇ ಭೀಮಃ ಪ್ರಹೃಷ್ಟಾನಾಂ ವನೌಕಸಾಮ್ ॥
ಮನ್ಯೇ ವಾನರಸೇನಾ ಸಾ ನದೀಂ ತರತಿ ಗೋಮತೀಮ್ ।

ಅನುವಾದ

ಆದರೂ ನೋಡು, ಈ ಹರ್ಷಗೊಂಡ ವಾನರರ ಭಯಂಕರ ಕೋಲಾಹಲ ಕೇಳಿ ಬರುತ್ತಿದೆ. ಈಗ ವಾನರ ಸೇನೆಯು ಗೋಮತಿಯನ್ನು ದಾಟಿರುವರು ಎಂದು ಅನಿಸುತ್ತಿದೆ.॥28½॥

ಮೂಲಮ್ - 29½

ರಜೋವರ್ಷಂ ಸಮುದ್ಭೂತಂ ಪಶ್ಯ ಸಾಲವನಂ ಪ್ರತಿ ॥
ಮನ್ಯೇ ಸಾಲವನಂ ರಮ್ಯಂ ಲೋಲಯಂತಿ ಪ್ಲವಂಗಮಾಃ ।

ಅನುವಾದ

ಅತ್ತ ಸಾಲವನದ ಕಡೆಗೆ ನೋಡು, ಹೇಗೆ ಧೂಳಿನ ವರ್ಷಾ ಆಗುತ್ತಿದೆಯಲ್ಲ? ವಾನರರು ರಮಣೀಯ ಸಾಲವನವನ್ನು ಆಂದೋಲಿತಗೊಳಿಸುತ್ತಿದ್ದಾರೆ ಎಂದು ನಾನು ತಿಳಿಯುತ್ತೇನೆ.॥29½॥

ಮೂಲಮ್ - 30

ತದೇತದ್ದೃಶ್ಯತೇ ದೂರಾದ್ವಿಮಾನಂ ಚಂದ್ರಸಂನಿಭಮ್ ॥

ಮೂಲಮ್ - 31

ವಿಮಾನಂ ಪುಷ್ಪಕಂ ದಿವ್ಯಂ ಮನಸಾ ಬ್ರಹ್ಮನಿರ್ಮಿತಮ್ ।
ರಾವಣಂ ಬಾಂಧವೈಃ ಸಾರ್ಧಂ ಹತ್ವಾ ಲಬ್ಧಂ ಮಹಾತ್ಮನಾ ॥

ಅನುವಾದ

ಅದೋ ಇನ್ನೊಂದು ಚಂದ್ರನಂತೆ ಕಂಡುಬರುವ ಪುಷ್ಪಕ ವಿಮಾನ ನೋಡು. ಈ ದಿವ್ಯ ಪುಷ್ಪಕ ವಿಮಾನವನ್ನು ವಿಶ್ವಕರ್ಮನು ತನ್ನ ಮನೋಸಂಕಲ್ಪದಂತೆ ರಚಿಸಿದ್ದನು. ಮಹಾತ್ಮಾ ಶ್ರೀರಾಮನು ಬಂಧು-ಬಾಂಧವರೊಂದಿಗೆ ರಾವಣನನ್ನು ಕೊಂದು ಇದನ್ನು ಪಡೆದಿರುವನು.॥30-31॥

ಮೂಲಮ್ - 32

ತರುಣಾದಿತ್ಯ ಸಂಕಾಶಂ ವಿಮಾನಂ ರಾಮವಾಹನಮ್ ।
ಧನದಸ್ಯ ಪ್ರಸಾದೇನ ದಿವ್ಯಮೇತನ್ಮನೋಜವಮ್ ॥

ಅನುವಾದ

ಶ್ರೀರಾಮನ ವಾಹನವಾಗಿರುವ ಈ ವಿಮಾನ ಪ್ರಾತಃಕಾಲದ ಸೂರ್ಯನಂತೆ ಪ್ರಕಾಶಿಸುತ್ತಿದೆ. ಮನೋವೇಗದಂತಿರುವ ಈ ದಿವ್ಯ ವಿಮಾನವು ಬ್ರಹ್ಮದೇವರ ಕೃಪೆಯಿಂದ ಕುಬೇರನಿಗೆ ದೊರಕಿತ್ತು.॥32॥

ಮೂಲಮ್ - 33

ಏತಸ್ಮಿನ್ ಭ್ರಾತರೌ ವೀರೌ ವೈದೇಹ್ಯಾಸಹ ರಾಘವೌ ।
ಸುಗ್ರೀವಶ್ಚ ಮಹಾತೇಜಾ ರಾಕ್ಷಸಶ್ಚ ವಿಭೀಷಣಃ ॥

ಅನುವಾದ

ಇದರಲ್ಲೇ ವಿದೇಹ ರಾಜಕುಮಾರಿ ಸೀತೆಯೊಂದಿಗೆ ರಘುವಂಶೀಯ ವೀರರಿಬ್ಬರೂ ಕುಳಿತಿರುವರು ಹಾಗೂ ಮಹಾತೇಜಸ್ವೀ ಸುಗ್ರೀವ, ರಾಕ್ಷಸ ರಾಜ ವಿಭೀಷಣರೂ ಇದರಲ್ಲೇ ವಿರಾಜಿಸುತ್ತಿದ್ದಾರೆ.॥33॥

ಮೂಲಮ್ - 34

ತತೋ ಹರ್ಷಸಮುದ್ಭೂತೋ ನಿಃಸ್ವನೋ ದಿವಮಸ್ಪೃಶತ್ ।
ಸ್ತ್ರೀಬಾಲಯುವ ವೃದ್ಧಾನಾಂ ರಾಮೋಽಯಮಿತಿ ಕೀರ್ತಿತೇ ॥

ಅನುವಾದ

ಹನುಮಂತನು ಇಷ್ಟು ಹೇಳುತ್ತಲೇ ಸ್ತ್ರೀಯರ, ಬಾಲಕರ, ತರುಣರ, ವೃದ್ಧರ, ಎಲ್ಲ ಪುರವಾಸಿಗಳ ಬಾಯಿಯಿಂದ ‘ಅದೋ! ಶ್ರೀರಾಮಚಂದ್ರನು ಬಂದನು’ ಎಂಬ ಉದ್ಗಾರ ಹೊರಟಿತು. ಆ ಹರ್ಷನಾದವು ಸ್ವರ್ಗಲೋಕದವರೆಗೆ ಪ್ರತಿಧ್ವನಿಸಿತು.॥34॥

ಮೂಲಮ್ - 35

ರಥಕುಂಜರವಾಜಿಭ್ಯಸ್ತೇಽವತೀರ್ಯ ಮಹೀಂ ಗತಾಃ ।
ದದೃಶುಸ್ತಂ ವಿಮಾನಸ್ಥಂ ನರಾಃ ಸೋಮಮಿವಾಂಬರೇ ॥

ಅನುವಾದ

ಎಲ್ಲರೂ ಆನೆ, ಕುದುರೆ, ರಥಗಳಿಂದ ಇಳಿದು ನೆಲದ ಮೇಲೆ ನಿಂತು, ವಿಮಾನದಲ್ಲಿ ವಿರಾಜಿಸುತ್ತಿರುವ ಶ್ರೀರಾಮನ ಕಡೆಗೆ ಆಕಾಶದಲ್ಲಿ ಬೆಳಗುವ ಚಂದ್ರನನ್ನು ದರ್ಶಿಸುವಂತೆ ನೋಡತೊಡಗಿದರು.॥35॥

ಮೂಲಮ್ - 36

ಪ್ರಾಂಜಲಿರ್ಭರತೋ ಭೂತ್ವಾ ಪ್ರಹೃಷ್ಟೋ ರಾಘವೋನ್ಮುಖಃ ।
ಯಥಾರ್ಥೇನಾರ್ಘ್ಯಪಾದ್ಯಾದ್ಯೈಸ್ತತೋ ರಾಮಮಪೂಜಯತ್ ॥

ಅನುವಾದ

ಭರತನು ಶ್ರೀರಾಮಚಂದ್ರನ ಕಡೆಗೆ ನೆಟ್ಟನೋಟದಿಂದ ನೋಡುತ್ತಾ ಕೈಮುಗಿದು ನಿಂತುಕೊಂಡನು. ಅವನ ಶರೀರ ಹರ್ಷದಿಂದ ಪುಳಕಗೊಂಡಿತು. ಅವನು ದೂರದಿಂದಲೇ ಅರ್ಘ್ಯ-ಪಾದ್ಯಾದಿಗಳಿಂದ ಶ್ರೀರಾಮನನ್ನು ವಿಧಿವತ್ತಾಗಿ ಪೂಜಿಸಿದನು.॥36॥

ಮೂಲಮ್ - 37

ಮನಸಾ ಬ್ರಹ್ಮಣಾ ಸೃಷ್ಟೇ ವಿಮಾನೇ ಭರತಾಗ್ರಜಃ ।
ರರಾಜ ಪೃಥುದೀರ್ಘಾಕ್ಷೋ ವಜ್ರಪಾಣಿರಿವಾಮರಃ ॥

ಅನುವಾದ

ವಿಶ್ವಕರ್ಮನು ಮನಸ್ಸಿನಿಂದ ನಿರ್ಮಿಸಿದ ಆ ವಿಮಾನದಲ್ಲಿ ಕುಳಿತಿರುವ ವಿಶಾಲನೇತ್ರನಾದ ಭಗವಾನ್ ಶ್ರೀರಾಮನು ವಜ್ರಧಾರಿ ದೇವೇಂದ್ರನಂತೆ ವಿರಾಜಿಸುತ್ತಿದ್ದನು.॥37॥

ಮೂಲಮ್ - 38

ತತೋ ವಿಮಾನಾಗ್ರಗತಂ ಭರತೋ ಭ್ರಾತರಂ ತದಾ ।
ವವಂದೇ ಪ್ರಣತೋ ರಾಮಂ ಮೇರುಸ್ಥಮಿವ ಭಾಸ್ಕರಮ್ ॥

ಅನುವಾದ

ವಿಮಾನದ ಮೇಲೆ ಕುಳಿತಿರುವ ಅಣ್ಣ ಶ್ರೀರಾಮನನ್ನು ನೋಡುತ್ತಲೇ ಭರತನು ವಿನೀತಭಾವದಿಂದ ಮೇರುಗಿರಿಯಲ್ಲಿ ಉದಯಿಸಿದ ಸೂರ್ಯನಿಗೆ ಬ್ರಾಹ್ಮಣರು ನಮಸ್ಕರಿಸುವಂತೆ, ಸಾಷ್ಟಾಂಗ ನಮಸ್ಕಾರ ಮಾಡಿದನು.॥38॥

ಮೂಲಮ್ - 39

ತತೋ ರಾಮಾಭ್ಯನುಜ್ಞಾತಂ ತದ್ವಿಮಾನಮನುತ್ತಮಮ್ ।
ಹಂಸಯುಕ್ತಂ ಮಹಾವೇಗಂ ನಿಷ್ಪಪಾತ ಮಹೀತಲೇ ॥

ಅನುವಾದ

ಅಷ್ಟರಲ್ಲಿ ಶ್ರೀರಾಮನ ಆಜ್ಞೆಪಡೆದ ಆ ಮಹಾವೇಗಶಾಲಿ ಹಂಸಯುಕ್ತ ಉತ್ತಮ ವಿಮಾನವು ಭೂಮಿಯಲ್ಲಿ ಇಳಿಯಿತು.॥39॥

ಮೂಲಮ್ - 40

ಆರೋಪಿತೋ ವಿಮಾನಂ ತದ್ಭರತಃ ಸತ್ಯವಿಕ್ರಮಃ ।
ರಾಮಮಾಸಾದ್ಯ ಮುದಿತಃ ಪುನರೇವಾಭ್ಯವಾದಯತ್ ॥

ಅನುವಾದ

ಭಗವಾನ್ ಶ್ರೀರಾಮನು ಸತ್ಯಪರಾಕ್ರಮಿ ಭರತನನ್ನು ವಿಮಾನದಲ್ಲಿ ಹತ್ತಿಸಿಕೊಂಡನು. ಅವನು ಶ್ರೀರಘುನಾಥನ ಬಳಿಗೆ ಹೋಗಿ ಆನಂದವಿಭೋರನಾಗಿ ಪುನಃ ಅವನ ಚರಣಗಳಲ್ಲಿ ಸಾಷ್ಟಾಂಗ ಪ್ರಣಾಮ ಮಾಡಿದನು.॥40॥

ಮೂಲಮ್ - 41

ತಂ ಸಮುತ್ಥಾಯ ಕಾಕುತ್ಸ್ಥಶ್ಚಿರಸ್ಯಾಕ್ಷಿಪಥಂ ಗತಮ್ ।
ಅಂಕೇ ಭರತಮಾರೋಪ್ಯ ಮುದಿತಃ ಪರಿಷಸ್ವಜೇ ॥

ಅನುವಾದ

ಬಹಳ ಕಾಲದ ಬಳಿಕ ನೋಡಿದ ಭರತನನ್ನು ಎತ್ತಿಕೊಂಡು ಶ್ರೀರಾಮನು ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡನು ಹಾಗೂ ಬಹಳ ಹರ್ಷದಿಂದ ಅವನನ್ನು ಬಿಗಿದಪ್ಪಿಕೊಂಡನು.॥41॥

ಮೂಲಮ್ - 42

ತತೋ ಲಕ್ಷ್ಮಣಮಾಸಾದ್ಯ ವೈದೇಹೀಂ ಚ ಪರಂತಪಃ ।
ಅಥಾಭ್ಯವಾದಯತ್ ಪ್ರೀತೋ ಭರತೋ ನಾಮ ಚಾಬ್ರವೀತ್ ॥

ಅನುವಾದ

ಬಳಿಕ ಪರಂತಪನಾದ ಭರತನು ಲಕ್ಷ್ಮಣನನ್ನು ಕಂಡು, ಅವನ ವಂದನೆಯನ್ನು ಸ್ವೀಕರಿಸಿ ವಿದೇಹ ರಾಜಕುಮಾರಿ ಸೀತೆಗೆ ಪ್ರೀತಿಯಿಂದ ತನ್ನ ನಾಮಧೇಯವನ್ನು ಹೇಳಿಕೊಂಡು ನಮಸ್ಕಾರ ಮಾಡಿದನು.॥42॥

ಮೂಲಮ್ - 43

ಸುಗ್ರೀವಂ ಕೈಕಯೀಪುತ್ರೋ ಜಾಂಬವಂತಂತಥಾಂಗದಮ್ ।
ಮೈಂದಂ ಚ ದ್ವಿವಿದಂ ನೀಲಮೃಷಭಂ ಚೈವ ಸಸ್ವಜೇ ॥

ಮೂಲಮ್ - 44

ಸುಷೇಣಂ ಚ ನಲಂ ಚೈವ ಗವಾಕ್ಷಂ ಗಂಧಮಾದನಮ್ ।
ಶರಭಂ ಪನಸಂ ಚೈವ ಪರಿತಃ ಪರಿಷಸ್ವಜೇ ॥

ಅನುವಾದ

ಅನಂತರ ಕೈಕೇಯಿ ಕುಮಾರ ಭರತನು ಸುಗ್ರೀವ, ಜಾಂಬವಂತ, ಅಂಗದ, ಮೈಂದ, ದ್ವಿವಿದ, ನೀಲ, ಋಷಭ, ಸುಷೇಣ, ನಳ, ಗವಾಕ್ಷ, ಗಂಧಮಾದನ, ಶರಭ, ಪನಸ - ಹೀಗೆ ಎಲ್ಲರನ್ನು ಆಲಿಂಗಿಸಿಕೊಂಡನು.॥43-44॥

ಮೂಲಮ್ - 45

ತೇ ಕೃತ್ವಾ ಮಾನುಷಂ ರೂಪಂ ವಾನರಾಃ ಕಾಮರೂಪಿಣಃ ।
ಕುಶಲಂ ಪರ್ಯಪೃಚ್ಛಂಸ್ತೇ ಪ್ರಹೃಷ್ಟಾ ಭರತಂ ತದಾ ॥

ಅನುವಾದ

ಆ ಕಾಮರೂಪಿಗಳಾದ ವಾನರರು ಮನುಷ್ಯರೂಪ ಧರಿಸಿ ಭರತನನ್ನು ಭೆಟ್ಟಿಯಾದರು. ಅವರೆಲ್ಲರೂ ಮಹಾ ಹರ್ಷದಿಂದ ಉಲ್ಲಸಿತರಾಗಿ ಆಗ ಭರತನಲ್ಲಿ ಕ್ಷೇಮಸಮಾಚಾರ ಕೇಳಿದರು.॥45॥

ಮೂಲಮ್ - 46

ಅಥಾಬ್ರವೀದ್ರಾಜಪುತ್ರಃ ಸುಗ್ರೀವಂ ವಾನರರ್ಷಭಮ್ ।
ಪರಿಷ್ವಜ್ಯ ಮಹಾತೇಜಾ ಭರತೋ ಧರ್ಮಿಣಾಂ ವರಃ ॥

ಅನುವಾದ

ಧರ್ಮಾತ್ಮರಲ್ಲಿ ಶ್ರೇಷ್ಠ ಮಹಾತೇಜಸ್ವೀ ರಾಜಕುಮಾರ ಭರತನು ವಾನರರಾಜ ಸುಗ್ರೀವನನ್ನು ಅಪ್ಪಿಕೊಂಡು ಅವನಲ್ಲಿ ಕೇಳಿದನು .॥46॥

ಮೂಲಮ್ - 47

ತ್ವಮಸ್ಮಾಕಂ ಚತುರ್ಣಾಂ ವೈ ಭ್ರಾತಾ ಸುಗ್ರೀವ ಪಂಚಮಃ ।
ಸೌಹೃದಾಜ್ಜಾಯತೇ ಮಿತ್ರಮಪಕಾರೋಽರಿಲಕ್ಷಣಮ್ ॥

ಅನುವಾದ

ಸುಗ್ರೀವ! ನೀನು ನಾವು ನಾಲ್ವರಿಗೆ ಐದನೆಯ ಸಹೋದರನಾಗಿರುವೆ. ಏಕೆಂದರೆ ಸ್ನೇಹಪೂರ್ವಕ ಉಪಕಾರ ಮಾಡುವುದರಿಂದಲೇ ಮಿತ್ರತೆ ಉಂಟಾಗುತ್ತದೆ. (ಮಿತ್ರನು ತನ್ನ ಸಹೋದರನಾಗುತ್ತಾನೆ) ಅಪಕಾರ ಮಾಡುವುದೇ ಶತ್ರುವಿನ ಲಕ್ಷಣವಾಗಿದೆ.॥47॥

ಮೂಲಮ್ - 48

ವಿಭೀಷಣಂ ಚ ಭರತಃ ಸಾಂತ್ವವಾಕ್ಯಮಥಾಬ್ರವೀತ್ ।
ದಿಷ್ಟ್ಯಾತ್ವಯಾ ಸಹಾಯೇನ ಕೃತಂ ಕರ್ಮ ಸುದುಷ್ಕರಮ್ ॥

ಅನುವಾದ

ಬಳಿಕ ಭರತನು ವಿಭೀಷಣನನ್ನು ಸಾಂತ್ವನ ಪಡಿಸುತ್ತಾ ಹೇಳಿದನು. ರಾಕ್ಷಸರಾಜನೇ! ನಿಮ್ಮ ಸಹಾಯ ಪಡೆದು ಶ್ರೀರಘುನಾಥನು ಅತ್ಯಂತ ದುಷ್ಕರ ಕಾರ್ಯ ಪೂರ್ಣಗೊಳಿಸಿದುದು ದೊಡ್ಡ ಸೌಭಾಗ್ಯದ ಮಾತಾಗಿದೆ.॥48॥

ಮೂಲಮ್ - 49

ಶತ್ರುಘ್ನಶ್ಚ ತದಾ ರಾಮಮಭಿವಾದ್ಯ ಸಲಕ್ಷ್ಮಣಮ್ ।
ವಿಸೀತಾಯಾಶ್ಚರಣೌ ವೀರೋ ನಯಾದಭ್ಯವಾದಯತ್ ॥

ಅನುವಾದ

ಆಗಲೇ ವೀರ ಶತ್ರುಘ್ನನೂ ಶ್ರೀರಾಮ-ಲಕ್ಷ್ಮಣರಿಗೆ ನಮಸ್ಕರಿಸಿ ಸೀತೆಯ ಚರಣಗಳಲ್ಲಿ ವಿನಯಪೂರ್ವಕ ಮಸ್ತಕವನ್ನು ಚಾಚಿ ವಂದಿಸಿದನು.॥49॥

ಮೂಲಮ್ - 50

ರಾಮೋ ಮಾತರಮಾಸಾದ್ಯ ವಿವರ್ಣಾಂ ಶೋಕಕರ್ಶಿತಾಮ್ ।
ಜಗ್ರಾಹ ಪ್ರಣತಃ ಪಾದೌ ಮನೋ ಮಾತುಃ ಪ್ರಹರ್ಷಯನ್ ॥

ಅನುವಾದ

ಮಾತೆ ಕೌಸಲ್ಯೆಯು ಶೋಕದಿಂದಾಗಿ ಅತ್ಯಂತ ದುರ್ಬಲ ಮತ್ತು ಕಾಂತಿಹೀನಳಾಗಿದ್ದಳು. ಆಕೆಯ ಬಳಿಗೆ ಹೋಗಿ ಶ್ರೀರಾಮನು ಬಾಗಿ ಎರಡೂ ಕಾಲುಗಳನ್ನು ಹಿಡಿದುಕೊಂಡು ಮಾತೆಗೆ ಅತ್ಯಂತ ಹರ್ಷವನ್ನು ನೀಡಿದನು.॥50॥

ಮೂಲಮ್ - 51

ಅಭಿವಾದ್ಯ ಸುಮಿತ್ರಾಂ ಚ ಕೈಕೇಯೀಂ ಚ ಯಶಸ್ವಿನೀಮ್ ।
ಸ ಮಾತೃಶ್ಚ ತತಃ ಸರ್ವಾಃ ಪುರೋಹಿತಮುಪಾಗಮತ್ ॥

ಅನುವಾದ

ಮತ್ತೆ ಸುಮಿತ್ರೆ ಮತ್ತು ಯಶಸ್ವಿನೀ ಕೈಕೆಯಿಗೆ ನಮಸ್ಕರಿಸಿ ಅವನು ಎಲ್ಲ ಮಾತೆಯರಿಗೆ ಅಭಿವಾದನ ಮಾಡಿದನು. ಬಳಿಕ ಅವನು ರಾಜಪುರೋಹಿತ ವಸಿಷ್ಠರ ಬಳಿಗೆ ಹೋದನು.॥51॥

ಮೂಲಮ್ - 52

ಸ್ವಾಗತಂ ತೇ ಮಹಾಬಾಹೋ ಕೌಸಲ್ಯಾನಂದವರ್ಧನ ।
ಇತಿ ಪ್ರಾಂಜಲಯಃ ಸರ್ವೇ ನಾಗರಾ ರಾಮಮಬ್ರುವನ್ ॥

ಅನುವಾದ

ಆಗ ಅಯೋಧ್ಯೆಯ ಸಮಸ್ತ ನಾಗರಿಕರು ಕೈಮುಗಿದು ಶ್ರೀರಾಮಚಂದ್ರನಲ್ಲಿ ಒಟ್ಟಿಗೆ ಹೇಳಿದರು- ‘ಕೌಸಲ್ಯಾನಂದವರ್ಧಕ ಮಹಾಬಾಹು ಶ್ರೀರಾಮಾ! ನಿನಗೆ ಸ್ವಾಗತ! ಹೃತ್ಪೂರ್ವಕ ಸ್ವಾಗತವು.॥52॥

ಮೂಲಮ್ - 53

ತಾನ್ಯಂಜಲಿ ಸಹಸ್ರಾಣಿ ಪ್ರಗೃಹೀತಾನಿ ನಾಗರೈಃ ।
ವ್ಯಾಕೋಶಾನೀವ ಪದ್ಮಾನಿ ದದರ್ಶ ಭರತಾಗ್ರಜಃ ॥

ಅನುವಾದ

ಭರತನ ಅಣ್ಣ ಶ್ರೀರಾಮನು ಅರಳಿದ ಕಮಲಗಳಂತೆ ನಾಗರಿಕರ ಸಾವಿರಾರು ಅಂಜಲಿಗಳು ಅವನೆಡೆಗೆ ಚಾಚಿರುವುದನ್ನು ನೋಡಿದನು.॥53॥

ಮೂಲಮ್ - 54½

ಪಾದುಕೇ ತೇ ತು ರಾಮಸ್ಯ ಗೃಹೀತ್ವಾ ಭರತಃ ಸ್ವಯಮ್ ।
ಚರಣಾಭ್ಯಾಂ ನರೇಂದ್ರಸ್ಯ ಯೋಜಯಾಮಾಸ ಧರ್ಮವಿತ್ ॥
ಅಬ್ರವೀಚ್ಚ ತದಾ ರಾಮಂ ಭರತಃ ಸ ಕೃತಾಂಜಲಿಃ ॥

ಅನುವಾದ

ಅನಂತರ ಧರ್ಮಜ್ಞ ಭರತನು ಸ್ವತಃ ಶ್ರೀರಾಮನು ಆ ಚರಣಪಾದುಕೆಗಳನ್ನು ತಂದು ಆ ಮಹಾರಾಜನ ಚರಣಗಳಿಗೆ ತೊಡಿಸಿ, ಕೈಮುಗಿದುಕೊಂಡು ಹೇಳಿದನು-.॥54½॥

(ಶ್ಲೋಕ - 55 )

ಮೂಲಮ್

ಏತತ್ತೇ ಸಕಲಂ ರಾಜ್ಯಂ ನ್ಯಾಸಂ ನಿರ್ಯಾತಿತಂ ಮಯಾ ॥

ಮೂಲಮ್ - 56

ಅದ್ಯ ಜನ್ಮ ಕೃತಾರ್ಥಂ ಮೇ ಸಂವೃತ್ತಶ್ಚ ಮನೋರಥಃ ।
ಯತ್ತ್ವಾಂ ಪಶ್ಯಾಮಿ ರಾಜಾನಮಯೋಧ್ಯಾಂ ಪುನರಾಗತಮ್ ॥

ಅನುವಾದ

ಪ್ರಭೋ! ನನ್ನ ಬಳಿಯಲ್ಲಿ ಒತ್ತೆಯಾಗಿ ಇಟ್ಟಿದ್ದ ನಿಮ್ಮ ಈ ಇಡೀ ರಾಜ್ಯವನ್ನು ಇಂದು ನಾನು ನಿಮ್ಮ ಚರಣಗಳಲ್ಲಿ ಮರಳಿಸಿದ್ದೇನೆ. ಅಯೋಧ್ಯಾ ನರೇಶ ಶ್ರೀರಾಮನಾದ ನೀನು ಪುನಃ ಅಯೋಧ್ಯೆಗೆ ಮರಳಿರುವುದನ್ನು ನೋಡಿ ಇಂದು ನನ್ನ ಜನ್ಮಸಾರ್ಥಕವಾಯಿತು; ನನ್ನ ಮನೋರಥ ಪೂರ್ಣಗೊಂಡಿತು.॥55-56॥

ಮೂಲಮ್ - 57

ಅವೇಕ್ಷತಾಂ ಭವಾನ್ಕೋಶಂ ಕೋಷ್ಠಾಗಾರಂ ಗೃಹಂ ಬಲಮ್ ।
ಭವತಸ್ತೇಜಸಾ ಸರ್ವಂ ಕೃತಂ ದಶಗುಣಂ ಮಯಾ ॥

ಅನುವಾದ

ನೀವು ರಾಜ್ಯದ ಭಂಡಾರ, ಕೋಶ, ಸೈನ್ಯ ಎಲ್ಲವನ್ನು ನೋಡಿಕೋ. ನಿನ್ನ ಪ್ರತಾಪದಿಂದ ಇವೆಲ್ಲ ವಸ್ತುಗಳು ಮೊದಲಿಗಿಂತ ಹತ್ತುಪಟ್ಟು ಹೆಚ್ಚಾಗಿವೆ.॥57॥

ಮೂಲಮ್ - 58

ತಥಾ ಬ್ರುವಾಣಂ ಭರತಂ ದೃಷ್ಟ್ವಾತಂ ಭ್ರಾತೃವತ್ಸಲಮ್ ।
ಮುಮುಚುರ್ವಾನರಾ ಭಾಷ್ಪಂ ರಾಕ್ಷಸಶ್ಚ ವಿಭೀಷಣಃ ॥

ಅನುವಾದ

ಭ್ರಾತೃವತ್ಸಲ ಭರತನು ಹೀಗೆ ಹೇಳಿರುವುದನ್ನು ನೋಡಿ ಸಮಸ್ತ ವಾನರರು ಮತ್ತು ರಾಕ್ಷಸರಾಜಾ ವಿಭೀಷಣನು ಕಣ್ಣೀರು ಹರಿಸಿದರು.॥58॥

ಮೂಲಮ್ - 59

ತತಃ ಪ್ರಹರ್ಷಾದ್ಬರತಮಂಕಮಾರೋಪ್ಯ ರಾಘವಃ ।
ಯಯೌ ತೇನ ವಿಮಾನೇನ ಸಸೈನ್ಯೋಭರತಾಶ್ರಮಮ್ ॥

ಅನುವಾದ

ಅನಂತರ ಶ್ರೀರಘುನಾಥನು ಭರತನನ್ನು ಬಹಳ ಹರ್ಷ ಮತ್ತು ಸ್ನೇಹದೊಂದಿಗೆ ತೊಡೆಯಲ್ಲಿ ಕುಳ್ಳಿರಿಸಿಕೊಂಡು ವಿಮಾನದ ಮೂಲಕವೇ ಸೈನ್ಯಸಹಿತ ಅವನ ಆಶ್ರಮಕ್ಕೆ ಹೋದನು.॥5.॥

ಮೂಲಮ್ - 60

ಭರತಾಶ್ರಮಮಾಸಾದ್ಯ ಸಸೈನ್ಯೋ ರಾಘವಸ್ತದಾ ।
ಅವತೀರ್ಯ ವಿಮಾನಾಗ್ರಾದವತಸ್ಥೇ ಮಹೀತಲೇ ॥

ಅನುವಾದ

ಭರತನ ಆಶ್ರಮಕ್ಕೆ ಹೋಗಿ ಸೈನ್ಯಸಹಿತ ಶ್ರೀರಘುನಾಥನು ವಿಮಾನದಿಂದ ಇಳಿದು ಭೂಮಿಯ ಮೇಲೆ ನಿಂತುಕೊಂಡನು.॥60॥

ಮೂಲಮ್ - 61

ಅಬ್ರವೀತ್ತು ತದಾ ರಾಮಸ್ತದ್ ವಿಮಾನಮನುತ್ತಮಮ್ ।
ವಹ ವೈಶ್ರವಣಂ ದೇವಮನುಜಾನಾಮಿ ಗಮ್ಯತಾಮ್ ॥

ಅನುವಾದ

ಆಗ ಶ್ರೀರಾಮನು ಆ ಉತ್ತಮ ವಿಮಾನಕ್ಕೆ ಹೇಳಿದನು- ‘ವಿಮಾನ ರಾಜನೇ! ಇನ್ನು ನೀನು ಇಲ್ಲಿಂದ ದೇವಪ್ರವರ ಕುಬೇರನ ಬಳಿಗೆ ಹೋಗಿ, ಅವನ ವಾಹನವಾಗಿರು’ ಎಂದು ನಾನು ಆಜ್ಞಾಪಿಸುತ್ತಿದ್ದೇನೆ.॥61॥

ಮೂಲಮ್ - 62

ತತೋ ರಾಮಾಭ್ಯನುಜ್ಞಾತಂ ತದ್ವಿಮಾನಮನುತ್ತಮಮ್ ।
ಉತ್ತರಾಂ ದಿಶಮಾಗಮ್ಯ ಜಗಾಮ ಧನದಾಲಯಮ್ ॥

ಮೂಲಮ್ - 63

ವಿಮಾನಂ ಪುಷ್ಪಕಂ ದಿವ್ಯಂ ಸಂಗ್ರಹೀತಂ ತು ರಕ್ಷಸಾ ।
ಅಗಮದ್ಧನದಂ ವೇಗಾದ್ ರಾಮವಾಕ್ಯ ಪ್ರಚೋದಿತಮ್ ॥

ಅನುವಾದ

ಶ್ರೀರಾಮನ ಅಪ್ಪಣೆಯನ್ನು ಪಡೆದು ಆ ಪರಮೋತ್ತಮ ವಿಮಾನವು ಉತ್ತರದಿಕ್ಕಿಗೆ ಕುಬೇರನ ಸ್ಥಾನಕ್ಕೆ ಹೊರಟುಹೋಯಿತು.॥62-63॥

ಮೂಲಮ್ - 64

ಪುರೋಹಿತಸ್ಯಾತ್ಮಸಖಸ್ಯ ರಾಘವೋ
ಬೃಹಸ್ಪತೇಃ ಶಕ್ರ ಇವಾಮರಾಧಿಪಃ ।
ನಿಪೀಡ್ಯ ಪಾದೌ ಪೃಥಗಾಸನೇ ಶುಭೇ
ಸಹೈವ ತೇನೋಪವಿವೇಶ ವೀರ್ಯವಾನ್ ॥

ಅನುವಾದ

ಅನಂತರ ಪರಾಕ್ರಮಿ ಶ್ರೀರಘುನಾಥನು ತನ್ನ ಮಿತ್ರ ಪುರೋಹಿತ ಪುತ್ರ ಸುಯಜ್ಞನ (ಅಥವಾ ತನ್ನ ಪರಮಸಹಾಯಕ ವಸಿಷ್ಠರ) ಚರಣಗಳಿಗೆ ದೇವೇಂದ್ರನು ಬೃಹಸ್ಪತಿಯು ಚರಣಸ್ಪರ್ಶಿಸುವಂತೆ, ವಂದಿಸಿದನು. ಮತ್ತೆ ಅವರನ್ನು ಒಂದು ಸುಂದರ ಆಸನದಲ್ಲಿ ಕುಳ್ಳಿರಿಸಿ, ಜೊತೆಗೆ ಮತ್ತೊಂದು ಆಸನದಲ್ಲಿ ಸ್ವತಃ ವಿರಾಜಮಾನನಾದನು.॥64॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತೇಳನೆಯ ಸರ್ಗ ಪೂರ್ಣವಾಯಿತು.॥127॥