१२६ हनुमता रामागमनसन्देशः

वाचनम्
ಭಾಗಸೂಚನಾ

ಹನುಮಂತನು ಭರತನಿಗೆ ರಾಮ-ಲಕ್ಷ್ಮಣ-ಸೀತೆಯರ ವನವಾಸದ ವೃತ್ತಾಂತವನ್ನು ಸಮಗ್ರವಾಗಿ ಹೇಳಿದುದು

ಮೂಲಮ್ - 1

ಬಹೂನಿ ನಾಮ ವರ್ಷಾಣಿ ಗತಸ್ಯ ಸುಮಹದ್ವನಮ್ ।
ಶೃಣೋಮ್ಯಹಂ ಪ್ರೀತಿಕರಂ ಮಮ ನಾಥಸ್ಯ ಕೀರ್ತನಮ್ ॥

ಅನುವಾದ

ಮಹಾನುಭಾವನೇ! ನನ್ನ ಸ್ವಾಮಿಯು ಮಹಾರಣ್ಯಕ್ಕೆ ಹೋಗಿ ಬಹಳ ವರ್ಷ ಕಳೆದವು. ಇಷ್ಟು ವರ್ಷಗಳ ಬಳಿಕ ಇಂದು ಅವನ ಆನಂದದಾಯಕ ಆಗಮನದ ವಾರ್ತೆಯನ್ನು ಕೇಳುತ್ತಿದ್ದೇನೆ.॥1॥

ಮೂಲಮ್ - 2

ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮಾಮ್ ।
ಏತಿ ಜೀವಂತಮಾನಂದೋ ನರಂ ವರ್ಷ ಶತಾದಪಿ ॥

ಅನುವಾದ

‘ಮನುಷ್ಯನು ಬದುಕಿದ್ದರೆ ನೂರು ವರ್ಷಗಳ ಬಳಿಕವಾದರೂ ಅವನಿಗೆ ಸಂತೋಷವು ಉಂಟಾಗಿಯೇ ಆಗುತ್ತದೆ’ ಎಂದು ಲೋಕೋಕ್ತಿಯು ಯಥಾರ್ಥವೆಂದೇ ನನಗೆ ಅನಿಸುತ್ತದೆ.॥2॥

ಮೂಲಮ್ - 3

ರಾಘವಸ್ಯ ಹರೀಣಾಂ ಚ ಕಥಮಾಸೀತ್ಸಮಾಗಮಃ ।
ಕಸ್ಮಿನ್ದೇಶೇ ಕಿಮಾಶ್ರಿತ್ಯ ತತ್ತ್ವಮಾಖ್ಯಾಹಿ ಪೃಚ್ಛತಃ ॥

ಅನುವಾದ

ಸೌಮ್ಯನೇ! ರಾಘವನಿಗೂ ವಾನರರಿಗೂ ಸಮಾಗಮ ಹೇಗಾಯಿತು? ಎಲ್ಲಾಯಿತು? ಯಾವ ಕಾರಣದಿಂದಾಯಿತು? ಇದೆಲ್ಲವನ್ನು ತಿಳಿಯಲು ನಾನು ಬಯಸುತ್ತಿದ್ದೇನೆ. ನೀನು ಸವಿಸ್ತಾರವಾಗಿ ತಿಳಿಸು.॥3॥

ಮೂಲಮ್ - 4

ಸ ಪೃಷ್ಟೋ ರಾಜಪುತ್ರೇಣ ಬೃಸ್ಯಾಂ ಸಮುಪವೇಶಿತಃ ।
ಆಚಚಕ್ಷೇ ತತಃ ಸರ್ವಂ ರಾಮಸ್ಯ ಚರಿತಂ ವನೇ ॥

ಅನುವಾದ

ರಾಜಕುಮಾರ ಭರತನು ಹೀಗೆ ಕೇಳಿದಾಗ ಕುಶಾಸನದಲ್ಲಿ ಕುಳಿತುಕೊಂಡ ಹನುಮಂತನು ಶ್ರೀರಾಮನ ವನವಾಸದ ಎಲ್ಲ ಚರಿತ್ರೆಯನ್ನು ಹೇಳಲುಪಕ್ರಮಿಸಿದನು .॥4॥

ಮೂಲಮ್ - 5

ಯಥಾ ಪ್ರವ್ರಾಜಿತೋ ರಾಮೋ ಮಾತುರ್ದತ್ತೌ ವರೌ ತವ ।
ಯಥಾ ಚ ಪುತ್ರಶೋಕೇನ ರಾಜಾ ದಶರಥೋ ಮೃತಃ ॥

ಮೂಲಮ್ - 6

ಯಥಾ ದೂತೈಸ್ತ್ವ ಮಾನೀತಸ್ತೂರ್ಣಂ ರಾಜ ಗೃಹಾತ್ಪ್ರಭೋ ।
ತ್ವಯಾಯೋಧ್ಯಾಂ ಪ್ರವಿಷ್ಟೇನ ಯಥಾ ರಾಜ್ಯಂ ನ ಚೇಪ್ಸಿತಮ್ ॥

ಮೂಲಮ್ - 7

ಚಿತ್ರಕೂಟಂ ಗಿರಿಂ ಗತ್ವಾ ರಾಜ್ಯೇನಾಮಿತ್ರಕರ್ಶನಃ ।
ನಿಮಂತ್ರತಸ್ತ್ವಯಾ ಭ್ರಾತಾ ಧರ್ಮಮಾಚರತಾ ಸತಾಮ್ ॥

ಮೂಲಮ್ - 8

ಸ್ಥಿತೇನ ರಾಜ್ಞೋ ವಚನೇ ಯಥಾ ರಾಜ್ಯಂ ವಿಸರ್ಜಿತಮ್ ।
ಆರ್ಯಸ್ಯ ಪಾದುಕೇ ಗೃಹ್ಯ ಯಥಾಸಿ ಪುನರಾಗತಃ ॥

ಮೂಲಮ್ - 9

ಸರ್ವಮೇತನ್ಮಹಾಬಾಹೋ ಯಥಾವದ್ವಿದಿತಂ ತವ ।
ತ್ವಯಿ ಪ್ರತಿಪ್ರಯಾತೇ ತು ಯದ್ವೃತ್ತಂ ತನ್ನಿಬೋಧ ಮೇ ॥

ಅನುವಾದ

ಪ್ರಭುವೇ! ಮಹಾಬಾಹೋ! ದಶರಥನು ನಿನ್ನ ತಾಯಿಗೆ ಎರಡು ವರಗಳನ್ನು ಕೊಟ್ಟಿದ್ದು, ಶ್ರೀರಾಮನನ್ನು ಅರಣ್ಯಕ್ಕೆ ಕಳಿಸಿದ್ದು, ಪುತ್ರಶೋಕದಿಂದ ದಶರಥನು ಮರಣಹೊಂದಿದುದು, ನಿನ್ನನ್ನು ರಾಜಭಟರು ಶೀಘ್ರವಾಗಿ ರಾಜ ಗೃಹದಿಂದ ಕರೆತಂದುದು, ಅಯೋಧ್ಯೆಗೆ ಬಂದು ನೀನು ರಾಜ್ಯವನ್ನು ಪಡೆದುಕೊಳ್ಳಲು ನಿರಾಕರಿಸಿದುದು, ಸತ್ಪುರುಷರು ಧರ್ಮವನ್ನೇ ಆಚರಿಸುತ್ತಾ ರಾಜ್ಯವನ್ನು ಅಣ್ಣನಿಗೆ ಹಿಂದಿರುಗಿಸಿಕೊಡಲು ನೀನು ಚಿತ್ರಕೂಟಕ್ಕೆ ಪ್ರಯಾಣ ಮಾಡಿದುದು, ದಶರಥನ ಆಜ್ಞಾಪಾಲನೆಯಲ್ಲಿಯೇ ದೃಢ ಪ್ರತಿಜ್ಞನಾದ ಶ್ರೀರಾಮನು ರಾಜ್ಯವನ್ನು ತ್ಯಜಿಸಿದುದು, ನೀನು ಹಿರಿಯಣ್ಣನ ಪಾದುಕೆಗಳನ್ನು ತೆಗೆದುಕೊಂಡು ಮರಳಿದುದು - ಈ ಎಲ್ಲ ವಿಷಯ ನಿನಗೆ ಯಥಾವತ್ತಾಗಿ ತಿಳಿದೇ ಇದೆ. ನೀನು ಹಿಂದಿರುಗಿದ ಮೇಲೆ ನಡೆದ ವೃತ್ತಾಂತವನ್ನು ನಾನೀಗ ಹೇಳುತ್ತೇನೆ.॥5-9॥

ಮೂಲಮ್ - 10

ಅಪಯಾತೇ ತ್ವಯಿ ತದಾ ಸಮುದ್ಭ್ರಾಂತಮೃಗದ್ವಿಜಮ್ ।
ಪರಿದ್ಯೂನಮಿವಾತ್ಯರ್ಥಂ ತದ್ವನಂ ಸಮಪದ್ಯತ ॥

ಮೂಲಮ್ - 11

ತದ್ಧಸ್ತಿಮೃದಿತಂ ಘೋರಂ ಸಿಂಹವ್ಯಾಘ್ರ ಮೃಗಾಯುತಮ್ ।
ಪ್ರವಿವೇಶಾಥ ವಿಜನಂ ಸಮಹದ್ದಂಡಕಾವನಮ್ ॥

ಅನುವಾದ

ನೀನು ಮರಳಿ ಬಂದಾಗ ಆ ವನವು ಎಲ್ಲೆಡೆ ಅತ್ಯಂತ ಕ್ಷಿಣಿಸತೊಡಗಿತು. ಅಲ್ಲಿಯ ಪಶುಪಕ್ಷಿಗಳು ಭಯಗೊಂಡು ಭ್ರಾಂತವಾದುವು. ಆಗ ಶ್ರೀರಾಮನು ಆ ವನವನ್ನು ಬಿಟ್ಟು ವಿಶಾಲ ನಿರ್ಜನವಾದ ದಂಡಕಾರಣ್ಯವನ್ನು ಪ್ರವೇಶಿಸಿದನು. ಆ ಘೋರವನವು ಆನೆಗಳಿಂದ ಧ್ವಂಸವಾಗಿತ್ತು. ಅದರಲ್ಲಿ ಸಿಂಹ-ಹುಲಿ-ಜಿಂಕೆಗಳು ತುಂಬಿಹೋಗಿದ್ದವು.॥10-11॥

ಮೂಲಮ್ - 12

ತೇಷಾಂ ಪುರಸ್ತಾದ್ಬಲವಾನ್ ಗಚ್ಛತಾಂ ಗಹನೇ ವನೇ ।
ನಿನದನ್ ಸುಮಹಾನಾದಂ ವಿರಾಧಃ ಪ್ರತ್ಯದೃಶ್ಯತ ॥

ಅನುವಾದ

ಆ ಗಹನ ವನದಲ್ಲಿ ಹೋಗುತ್ತಿರುವಾಗ ಆ ಮೂವರಿಗೆ ಮಹಾ ಗರ್ಜನೆ ಮಾಡುತ್ತಾ ಬಲವಾನ್ ವಿರಾಧನೆಂಬ ರಾಕ್ಷಸನು ಎದುರಿಗೆ ಗೋಚರಿಸಿದನು.॥12॥

ಮೂಲಮ್ - 13

ತಮುತ್ಕ್ಷಿಪ್ಯ ಮಹಾನಾದಮೂರ್ಧ್ವಬಾಹುಮಧೋಮುಖಮ್ ।
ನಿಖಾತೇ ಪ್ರಕ್ಷಿಪಂತಿ ಸ್ಮನದಂತಮಿವ ಕುಂಜರಮ್ ॥

ಅನುವಾದ

ಊರ್ಧ್ವಬಾಹುವೂ, ಅಧೋಮುಖನೂ ಆಗಿದ್ದ, ಮದಿಸಿದ ಆನೆಯು ಘೀಳಿಡುವಂತೆ ಜೋರಾಗಿ ಗರ್ಜಿಸುತ್ತಿರುವ ಆ ರಾಕ್ಷಸನನ್ನು ಇಬ್ಬರೂ ಸೇರಿ ಕೊಂದು ಹಂಡದಲ್ಲಿ ಎಸೆದುಬಿಟ್ಟರು.॥13॥

ಮೂಲಮ್ - 14

ತತ್ಕೃತ್ವಾ ದುಷ್ಕರಂ ಕರ್ಮ ಭ್ರಾತರೌ ರಾಮಲಕ್ಷ್ಮಣೌ ।
ಸಾಯಾಹ್ನೇ ಶರಭಂಗಸ್ಯ ರಮ್ಯಮಾಶ್ರಮಮೀಯತುಃ ॥

ಅನುವಾದ

ಅಂತಹ ದುಷ್ಕರ ಕರ್ಮವೆಸಗಿ ರಾಮ-ಲಕ್ಷ್ಮಣರಿಬ್ಬರೂ ಸೀತೆ ಯೊಂದಿಗೆ ಸಂಜೆಯೊಳಗೆ ಶರಭಂಗಮುನಿಯ ರಮಣೀಯ ಆಶ್ರಮವನ್ನು ಸೇರಿದರು.॥14॥

ಮೂಲಮ್ - 15

ಶರಭಂಗೇದಿವಂ ಪ್ರಾಪ್ತೇ ರಾಮಃ ಸತ್ಯಪರಾಕ್ರಮಃ ।
ಅಭಿವಾದ್ಯ ಮುನೀನ್ಸರ್ವಾನ್ ಜನಸ್ಥಾನಮುಪಾಗಮತ್ ॥

ಅನುವಾದ

ಶರಭಂಗ ಮುನಿಯು ಶ್ರೀರಾಮನ ಸಮಕ್ಷ ಸ್ವರ್ಗಲೋಕಕ್ಕೆ ಹೊರಟುಹೋದನು. ಆಗ ಸತ್ಯ ಪರಾಕ್ರಮಿ ಶ್ರೀರಾಮನು ಎಲ್ಲ ಮುನಿಗಳಿಗೆ ವಂದಿಸಿ ಜನಸ್ಥಾನಕ್ಕೆ ಬಂದನು.॥15॥

ಮೂಲಮ್ - 16½

ಪಶ್ಚಾಚ್ಛೂರ್ಪಣಖಾನಾಮ ರಾಮಪಾರ್ಶ್ವಮುಪಾಗತಾ ।
ತತೋ ರಾಮೇಣ ಸಂದಿಷ್ಟೋ ಲಕ್ಷ್ಮಣಃ ಸಹಸೋತ್ಥಿತಃ ॥
ಪ್ರಗೃಹ್ಯ ಖಡ್ಗಂ ಚಿಚ್ಛೇದ ಕರ್ಣನಾಸಂ ಮಹಾಬಲಃ ।

ಅನುವಾದ

ಜನಸ್ಥಾನಕ್ಕೆ ಬಂದ ಬಳಿಕ ಶೂರ್ಪಣಖಾ ಎಂಬ ಓರ್ವ ರಾಕ್ಷಸಿಯು ಕಾಮಭಾವದಿಂದ ಶ್ರೀರಾಮನ ಬಳಿಗೆ ಬಂದಳು. ಆಗ ಶ್ರೀರಾಮನು ಲಕ್ಷ್ಮಣನಿಗೆ ಆಕೆಯನ್ನು ದಂಡಿಸುವಂತೆ ಆದೇಶಿಸಿದನು. ಮಹಾಬಲಿ ಲಕ್ಷ್ಮಣನು ಸಟ್ಟನೆ ಎದ್ದು ಖಡ್ಗದಿಂದ ಆ ರಾಕ್ಷಸಿಯ ಮೂಗು ಕಿವಿಗಳನ್ನು ಕತ್ತರಿಸಿ ಹಾಕಿದನು.॥16½॥

ಮೂಲಮ್ - 17½

ಚತುರ್ದಶ ಸಹಸ್ರಾಣಿ ರಕ್ಷಸಾಂ ಭೀಮ ಕರ್ಮಣಾಮ್ ॥
ಹತಾನಿ ವಸತಾ ತತ್ರ ರಾಘವೇಣ ಮಹಾತ್ಮನಾ ।

ಅನುವಾದ

ಅಲ್ಲಿ ಇರುತ್ತಿರುವಾಗ ಮಹಾತ್ಮಾ ರಾಘವನು ಒಬ್ಬಂಟಿಗನಾಗಿಯೇ ಶೂರ್ಪಣಖಿಯ ಪ್ರೇರಣೆಯಂತೆ ಬಂದ ಭಯಾನಕ ಕರ್ಮಮಾಡುವ ಹದಿನಾಲ್ಕು ಸಾವಿರ ರಾಕ್ಷಸರನ್ನು ವಧಿಸಿದನು.॥17½॥

ಮೂಲಮ್ - 18½

ಏಕೇನ ಸಹ ಸಂಗಮ್ಯ ರಾಮೇಣ ರಣಮೂರ್ಧ್ನನಿ ॥
ಅಹ್ನಶ್ಚತುರ್ಥಭಾಗೇನ ನಿಃಶೇಷಾ ರಾಕ್ಷಸಾಃ ಕೃತಾಃ ।

ಅನುವಾದ

ಯುದ್ಧರಂಗದಲ್ಲಿ ಒಬ್ಬಂಟಿಗನಾದ ರಾಮನನ್ನು ಎದುರಿಸಿ ಆ ಸಮಸ್ತ ರಾಕ್ಷಸರು ಪ್ರಹರ ಒಂದರಲ್ಲಿ ಸಮಾಪ್ತರಾದರು.॥18½॥

ಮೂಲಮ್ - 19½

ಮಹಾಬಲಾ ಮಹಾವೀರ್ಯಾಸ್ತಪಸೋ ವಿಘ್ನಕಾರಿಣಃ ॥
ನಿಹತಾ ರಾಘವೇಣಾಜೌ ದಂಡಕಾರಣ್ಯವಾಸಿನಃ ।

ಅನುವಾದ

ತಪಸ್ಸಿನಲ್ಲಿ ವಿಘ್ನವನ್ನೊಡುವ ದಂಡಕಾರಣ್ಯನಿವಾಸೀ ಮಹಾಬಲಿ, ಮಹಾ ಪರಾಕ್ರಮಿ ಆ ರಾಕ್ಷಸರನ್ನು ಶ್ರೀರಘುನಾಥನು ಯುದ್ಧದಲ್ಲಿ ಕೊಂದು ಹಾಕಿದನು.॥19½॥

ಮೂಲಮ್ - 20½

ರಾಕ್ಷಸಾಶ್ಚ ವಿನಿಷ್ಪಿಷ್ಟಾಃ ಖರಶ್ಚ ನಿಹತೋ ರಣೇ ॥
ದೂಷಣಂ ಚಾಗ್ರತೋಹತ್ವಾ ತ್ರಿಶಿರಾಸ್ತದನಂತರಮ್ ।

ಅನುವಾದ

ಆ ರಣರಂಗದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರು ನುಚ್ಚುನೂರಾದರು, ಖರ-ದೂಷಣರ ವಧೆಯಾಯಿತು. ಅನಂತರ ತ್ರಿಶಿರನು ಮೃತ್ಯುಮುಖನಾದನು.॥20½॥

ಮೂಲಮ್ - 21

ತತಸ್ತೇನಾರ್ದಿತಾ ಬಾಲಾ ರಾವಣಂ ಸಮುಪಾಗತಾ ॥

ಮೂಲಮ್ - 22

ರಾವಣಾನುಚರೋ ಘೋರೋ ಮಾರೀಚೋ ನಾಮ ರಾಕ್ಷಸಃ ।
ಲೋಭಯಾಮಾಸ ವೈದೇಹೀಂ ಭೂತ್ವಾ ರತ್ನಮಯೋ ಮೃಗಃ ॥

ಅನುವಾದ

ಈ ಘಟನೆಯಿಂದ ನೊಂದ ಆ ಮೂರ್ಖ ರಾಕ್ಷಸಿ ಲಂಕೆಗೆ ರಾವಣನ ಬಳಿಗೆ ಹೋದಳು. ರಾವಣನ ಮಾತಿಗೆ ಓಗೊಟ್ಟು ಅವನ ಅನುಚರ ಮಾರೀಚನೆಂಬ ಭಯಂಕರ ರಾಕ್ಷಸನು ರತ್ನಮಯ ಜಿಂಕೆಯ ರೂಪವನ್ನು ಧರಿಸಿ ವಿದೇಹಕುಮಾರಿ ಸೀತೆಯನ್ನು ಮರಳುಗೊಳಿಸಿದನು.॥21-22॥

ಮೂಲಮ್ - 23

ಸಾ ರಾಮಮಬ್ರವೀದ್ದೃಷ್ಟಾ ವೈದೇಹೀ ಗೃಹ್ಯತಾಮಿತಿ ।
ಅಯಂ ಮನೋಹರಃ ಕಾಂತ ಆಶ್ರಮೋ ನೋ ಭವಿಷ್ಯತಿ ॥

ಅನುವಾದ

ಆ ಮೃಗವನ್ನು ನೋಡಿ ಸೀತೆಯು ಶ್ರೀರಾಮನಲ್ಲಿ ಹೇಳಿದಳು- ಆರ್ಯಪುತ್ರ! ಈ ಮೃಗವನ್ನು ಹಿಡಿದು ತನ್ನಿ. ಇದು ಇರುವುದರಿಂದ ನನ್ನ ಈ ಆಶ್ರಮವು ಕಾಂತಿವಂತ ಹಾಗೂ ಮನೋಹರವಾಗುವುದು.॥23॥

ಮೂಲಮ್ - 24

ತತೋ ರಾಮೋ ಧನುಷ್ಪಾಣಿರ್ಮೃಗಂ ತಮನುಧಾವತಿ ।
ಸ ತಂ ಜಘಾನ ಧಾವಂತಂ ಶರೇಣಾನತಪರ್ವಣಾ ॥

ಅನುವಾದ

ಆಗ ಶ್ರೀರಾಮನು ಕೈಯಲ್ಲಿ ಧನುಸ್ಸನ್ನೆತ್ತಿಕೊಂಡು ಆ ಮೃಗವನ್ನು ಹಿಂಬಾಲಿಸಿದನು ಹಾಗೂ ಬಾಗಿದ ಗಂಟುಗಳುಳ್ಳ ಒಂದೇ ಬಾಣದಿಂದ ಓಡುತ್ತಿರುವ ಆ ಮೃಗವನ್ನು ಕೊಂದುಹಾಕಿದನು.॥24॥

ಮೂಲಮ್ - 25

ಅಥ ಸೌಮ್ಯ ದಶಗ್ರೀವೋ ಮೃಗಂ ಯಾತಿ ತು ರಾಘವೇ ।
ಲಕ್ಷ್ಮಣೇ ಚಾಪಿ ನಿಷ್ಕ್ರಾಂತೇ ಪ್ರವಿವೇಶಾಶ್ರಮಂ ತದಾ ॥

ಅನುವಾದ

ಸೌಮ್ಯ! ಶ್ರೀರಾಮನು ಮೃಗದ ಹಿಂದೆ ಹೋಗಿದ್ದನು ಹಾಗೂ ಲಕ್ಷ್ಮಣನೂ ಅವನ ಸಮಾಚಾರ ತಿಳಿಯಲು ಪರ್ಣಶಾಲೆಯಿಂದ ಹೊರಗೆ ಹೋದಾಗ ರಾವಣನು ಆ ಆಶ್ರಮವನ್ನು ಪ್ರವೇಶಿಸಿದನು.॥25॥

ಮೂಲಮ್ - 26½

ಜಗ್ರಾಹ ತರಸಾ ಸೀತಾಂ ಗ್ರಹಃ ಖೇ ರೋಹಿಣೀಮಿವ ।
ತ್ರಾತುಕಾಮಂ ತತೋ ಯುದ್ಧೇ ಹತ್ವಾ ಗೃಧ್ರಂ ಜಟಾಯುಷಮ್ ॥
ಪ್ರಗೃಹ್ಯ ಸೀತಾಂ ಸಹಸಾ ಜಗಾಮಾಶು ಸ ರಾಕ್ಷಸಃ ।

ಅನುವಾದ

ಅವನು ಆಕಾಶದಲ್ಲಿ ಮಂಗಳನು ರೋಹಿಣಿಯನ್ನು ಆಕ್ರಮಿಸಿದಂತೆ ಸೀತೆಯನ್ನು ಬಲವಾಗಿ ಹಿಡಿದುಕೊಂಡನು. ಆಗ ಆಕೆಯ ರಕ್ಷಣೆಗಾಗಿ ಬಂದಿರುವ ಗೃಧ್ರರಾಜನನ್ನು ಯುದ್ಧದಲ್ಲಿ ಕೊಂದು, ಆ ರಾಕ್ಷಸನು ಸೀತೆಯನ್ನೆತ್ತಿಕೊಂಡು ಕಣ್ಮರೆಯಾದನು.॥26½॥

ಮೂಲಮ್ - 27

ತತಸ್ತ್ವದ್ಭುತ ಸಂಕಾಶಾಃ ಸ್ಥಿತಾಃ ಪರ್ವತಮೂರ್ಧನಿ ॥

ಮೂಲಮ್ - 28

ಸೀತಾಂ ಗೃಹೀತ್ವಾ ಗಚ್ಛಂತಂ ವಾನರಾಃ ಪರ್ವತೋಪಮಾಃ ।
ದದೃಶುರ್ವಿಸ್ಮಿತಾಕಾರಾ ರಾವಣಂ ರಾಕ್ಷಸಾಧಿಪಮ್ ॥

ಅನುವಾದ

ಅನಂತರ ಒಂದು ಪರ್ವತ ಶಿಖರದಲ್ಲಿ ಇರುವ ಪರ್ವತದಂತಹ ಅದ್ಭುತ ವಿಶಾಲಶರೀರವುಳ್ಳ ವಾನರರು ಆಶ್ಚರ್ಯಚಕಿತರಾಗಿ ಸೀತೆಯನ್ನು ಎತ್ತಿಕೊಂಡು ಹೋಗುತ್ತಿರುವ ರಾವಣನನ್ನು ನೋಡಿದರು.॥27-28॥

ಮೂಲಮ್ - 29½

ತತಃ ಶೀಘ್ರ ತರಂ ಗತ್ವಾ ತದ್ವಿಮಾನಂ ಮನೋಜವಮ್ ।
ಆರುಹ್ಯ ಸಹ ವೈದೇಹ್ಯಾ ಪುಷ್ಪಕಂ ಸ ಮಹಾಬಲಃ ॥
ಪ್ರವಿವೇಶ ತತೋ ಲಂಕಾಂ ರಾವಣೋ ರಾಕ್ಷಸೇಶ್ವರಃ ।

ಅನುವಾದ

ಆ ಮಹಾಬಲಿ ರಾಕ್ಷಸ ರಾಜರಾವಣನು ಅವಸರದಿಂದ ಮನೋವೇಗದಂತೆ ವೇಗಶಾಲಿ ಪುಷ್ಪಕ ವಿಮಾನದ ಬಳಿಗೆ ಹೋಗಿ, ಸೀತೆಯೊಡನೆ ಅದನ್ನು ಹತ್ತಿ ಅವನು ಲಂಕೆಯನ್ನು ಪ್ರವೇಸಿಸಿದನು.॥29½॥

ಮೂಲಮ್ - 30½

ತಾಂ ಸುವರ್ಣಪರಿಷ್ಕಾರೇ ಶುಭೇ ಮಹತಿ ವೇಶ್ಮನಿ ॥
ಪ್ರವೇಶ್ಯ ಮೈಥಿಲೀಂ ವಾಕ್ಯೈಃ ಸಾಂತ್ವ ಯಾಮಾಸ ರಾವಣಃ ।

ಅನುವಾದ

ಅಲ್ಲಿ ಸ್ವರ್ಣಭೂಷಿತ ವಿಶಾಲಭವನದಲ್ಲಿ ಮೈಥಿಲಿಯನ್ನು ಇರಿಸಿ, ರಾವಣನು ನಯ-ವಿನಯ ಮಾತುಗಳಿಂದ ಆಕೆಯನ್ನು ಸಾಂತ್ವನಪಡಿಸತೊಡಗಿದನು.॥30½॥

ಮೂಲಮ್ - 31½

ತೃಣವದ್ಭಾಷಿತಂ ತಸ್ಯ ತಂ ಚ ನೈರ್ಋತ ಪುಂಗವಮ್ ॥
ಅಚಿಂತಯಂತೀ ವೈದೇಹೀ ಅಶೋಕವನಿಕಾಂ ಗತಾ ।

ಅನುವಾದ

ಅಶೋಕವಾಟಿಕೆಯಲ್ಲಿದ್ದ ಸೀತೆಯು ರಾವಣನ ಮಾತುಗಳನ್ನು ಹಾಗೂ ಆ ರಾಕ್ಷಸರಾಜನನ್ನು ಹುಲ್ಲುಕಡ್ಡಿಯಂತೆ ತಿಳಿದು ತಿರಸ್ಕರಿಸಿದಳು ಮತ್ತು ಎಂದೂ ಅದನ್ನು ಯೋಚಿಸಲಿಲ್ಲ.॥31½॥

ಮೂಲಮ್ - 32

ನ್ಯವರ್ತತ ತತೋ ರಾಮೋ ಮೃಗಂ ಹತ್ವಾ ತದಾವನೇ ॥

ಮೂಲಮ್ - 33

ನಿವರ್ತಮಾನಃ ಕಾಕುತ್ಸ್ಥೋ ದೃಷ್ಟ್ವಾಗೃಧ್ರಂ ಸವಿವ್ಯಥೇ ।
ಗೃಧ್ರಂ ಹತಂ ತದಾ ದೃಷ್ಟ್ವಾ ರಾಮಃ ಪ್ರಿಯತರಂ ಪಿತುಃ ॥

ಅನುವಾದ

ಅತ್ತ ಕಾಡಿನಲ್ಲಿ ಶ್ರೀರಾಮ ಚಂದ್ರನು ಮೃಗವನ್ನು ಕೊಂದು ಮರಳಿದನು. ಹಿಂದಕ್ಕೆ ಬಂದಾಗ ಅವನು ತಂದೆಗಿಂತಲೂ ಹೆಚ್ಚು ಪ್ರಿಯನಾದ ಗೃಧ್ರರಾಜನು ಸತ್ತುಬಿದ್ದಿರುವುದನ್ನು ನೋಡಿ, ಅವನ ಮನಸ್ಸಿಗೆ ಭಾರೀ ವ್ಯಥೆಯಾಯಿತು.॥32-33॥

ಮೂಲಮ್ - 34

ಮಾರ್ಗಮಾಣಸ್ತು ವೈದೇಹೀಂ ರಾಘವಃ ಸಹಲಕ್ಷ್ಮಣಃ ।
ಗೋದಾವರೀಮನುಚರನ್ ವನೋದ್ದೇಶಾಂಶ್ಚ ಪುಷ್ಪಿತಾನ್ ॥

ಅನುವಾದ

ಲಕ್ಷ್ಮಣ ಸಹಿತ ಶ್ರೀರಘುನಾಥನು ವಿದೇಹಕುಮಾರೀ ಸೀತೆಯನ್ನು ಹುಡುಕುತ್ತಾ ಗೋದಾವರೀ ತೀರದ ಪುಷ್ಪಗಳು ಅರಳಿದ ವನಗಳಲ್ಲಿ ಸಂಚರಿಸತೊಡಗಿದನು.॥34॥

ಮೂಲಮ್ - 35½

ಆಸೇದತುರ್ಮಹಾರಣ್ಯೇ ಕಬಂಧಂ ನಾಮ ರಾಕ್ಷಸಮ್ ।
ತತಃ ಕಬಂಧ ವಚನಾದ್ ರಾಮಃ ಸತ್ಯಪರಾಕ್ರಮಃ ॥
ಋಶ್ಯಮೂಕಗಿರಿಂ ಗತ್ವಾ ಸುಗ್ರೀವೇಣ ಸಮಾಗತಃ ।

ಅನುವಾದ

ಹುಡುಕುತ್ತಾ ಹುಡುಕುತ್ತಾ ಇಬ್ಬರೂ ಸಹೋದರರು ಆ ವಿಶಾಲ ವನದಲ್ಲಿ ಕಬಂಧ ಎಂಬ ರಾಕ್ಷಸನ ಬಳಿಗೆ ತಲುಪಿದರು. ಅನಂತರ ಸತ್ಯಪರಾಕ್ರಮಿ ರಾಮನು ಕಬಂಧನ ಉದ್ಧಾರಮಾಡಿ, ಅವನು ಹೇಳಿದಂತೆ ಋಷ್ಯಮೂಕ ಪರ್ವತಕ್ಕೆ ಹೋಗಿ ಸುಗ್ರೀವ ನನ್ನು ಭೆಟ್ಟಿಯಾದನು.॥35½॥

ಮೂಲಮ್ - 36

ತಯೋಃ ಸಮಾಗಮಃ ಪೂರ್ವಂ ಪ್ರೀತ್ಯಾ ಹಾರ್ದೋ ವ್ಯಜಾಯತ ॥

ಮೂಲಮ್ - 37

ಭ್ರಾತ್ರಾ ನಿರಸ್ತಃ ಕ್ರುದ್ಧೇನ ಸುಗ್ರೀವೋ ವಾಲಿನಾ ಪುರಾ ।
ಇತರೇ ತರಸಂವಾದಾತ್ ಪ್ರಗಾಢಃ ಪ್ರಣಯಸ್ತಯೋಃ ॥

ಅನುವಾದ

ಒಬ್ಬರನ್ನೊಬ್ಬರು ನೋಡುವ ಮೊದಲೇ ಇಬ್ಬರಲ್ಲಿ ಹಾರ್ದಿಕವಾದ ಸ್ನೇಹ ಉಂಟಾಯಿತು. ಆ ಹಿಂದೆ ಕ್ರುದ್ಧನಾದ ವಾಲಿಯು ಸುಗ್ರೀವನನ್ನು ರಾಜ್ಯದಿಂದ ಭಷ್ಟನನ್ನಾಗಿ ಮಾಡಿದ್ದನು. ಇಬ್ಬರೂ ಪರಸ್ಪರವಾಗಿ ಮಾತುಕತೆಗಳನ್ನು ನಡೆಸಿದ ಬಳಿಕ ಅವರ ಸ್ನೇಹವು ಮತ್ತೂ ಗಾಢವಾಯಿತು.॥36-37॥

ಮೂಲಮ್ - 38

ರಾಮಃ ಸ್ವಬಾಹುವೀರ್ಯೇಣ ಸ್ವರಾಜ್ಯಂ ಪ್ರತ್ಯಪಾದಯತ್ ।
ವಾಲಿನಂ ಸಮರೇ ಹತ್ವಾ ಮಹಾಕಾಯಂ ಮಹಾಬಲಮ್ ॥

ಅನುವಾದ

ಶ್ರೀರಾಮನು ತನ್ನ ಬಾಹುಬಲದಿಂದ ಸಮರಾಂಗಣದಲ್ಲಿ ಮಹಾಕಾಯ, ಮಹಾಬಲಿ ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಕೊಡಿಸಿದನು.॥38॥

ಮೂಲಮ್ - 39

ಸುಗ್ರೀವಃ ಸ್ಥಾಪಿತೋ ರಾಜ್ಯೇ ಸಹಿತಃ ಸರ್ವವಾನರೈಃ ।
ರಾಮಾಯ ಪ್ರತಿಜಾನೀತೇ ರಾಜಪುತ್ರ್ಯಾಸ್ತು ಮಾರ್ಗಣಮ್ ॥

ಅನುವಾದ

ಶ್ರೀರಾಮನು ಸಮಸ್ತ ವಾನರರ ಸಹಿತ ಸುಗ್ರೀವವನ್ನು ರಾಜಸಿಂಹಾಸನದಲ್ಲಿ ಸ್ಥಾಪಿಸಿದನು. ಸುಗ್ರೀವನು ಶ್ರೀರಾಮನ ಮುಂದೆ - ‘ನಾನು ರಾಜಕುಮಾರೀ ಸೀತೆಯನ್ನು ಹುಡುಕುವೆನು’ ಎಂಬ ಪ್ರತಿಜ್ಞೆ ಮಾಡಿದನು.॥39॥

ಮೂಲಮ್ - 40

ಆದಿಷ್ಟಾ ವಾನರೇಂದ್ರೇಣ ಸುಗ್ರೀವೇಣ ಮಹಾತ್ಮನಾ ।
ದಶ ಕೋಟ್ಯಃ ಪ್ಲವಂಗಾನಾಂ ಸರ್ವಾಃ ಪ್ರಸ್ಥಾಪಿತಾ ದಿಶಃ ॥

ಅನುವಾದ

ಅದಕ್ಕನುಸಾರ ಮಹಾತ್ಮಾ ವಾನರರಾಜ ಸುಗ್ರೀವನು ಹತ್ತು ಕೋಟಿ ವಾನರರನ್ನು ಸೀತೆಯನ್ನು ಹುಡುಕಲು ಆಜ್ಞಾಪಿಸಿ ಎಲ್ಲ ದಿಕ್ಕುಗಳಿಗೂ ಕಳಿಸಿಕೊಟ್ಟನು.॥40॥

ಮೂಲಮ್ - 41

ತೇಷಾಂ ನೋ ವಿಪ್ರಕೃಷ್ಟಾನಾಂ ವಿಂಧ್ಯೇ ಪರ್ವತಸತ್ತಮೇ ।
ಭೃಶಂ ಶೋಕಾಭಿತಪ್ತಾನಾಂ ಮಹಾನ್ಕಾಲೋಽತ್ಯವರ್ತತ ॥

ಅನುವಾದ

ಅದೇ ವಾನರರಲ್ಲಿ ನಾನೂ ಇದ್ದೆ. ಗಿರಿರಾಜ ವಿಂಧ್ಯದ ಗುಹೆಯಲ್ಲಿ ಪ್ರವೇಶಿಸಿದ್ದರಿಂದ ನಾವು ಮರಳುವ ನಿಶ್ಚಿತ ಅವಧಿ ಮುಗಿದುಹೋಯಿತು. ನಾವು ಬಹಳ ವಿಳಂಬ ಮಾಡಿದೆವು. ನಾವು ಶೋಕದಲ್ಲಿ ಬಿದ್ದು ದೀರ್ಘಕಾಲ ಕಳೆದುಹೋಯಿತು.॥41॥

ಮೂಲಮ್ - 42

ಭ್ರಾತಾ ತು ಗೃಧ್ರರಾಜಸ್ಯ ಸಂಪಾತಿರ್ನಾಮ ವೀರ್ಯವಾನ್ ।
ಸಮಾಖ್ಯಾತಿ ಸ್ಮ ವಸತೀಂ ಸೀತಾಂ ರಾವಣಮಂದಿರೇ ॥

ಅನುವಾದ

ಅನಂತರ ಗೃಧ್ರರಾಜ ಜಟಾಯುವಿನ ಒಬ್ಬ ಅಣ್ಣನಾದ ಸಂಪಾತಿಯನ್ನು ಕಂಡೆವು. ಸೀತೆಯು ಲಂಕೆಯಲ್ಲಿ ರಾವಣನ ಭವನದಲ್ಲಿ ವಾಸಿಸುತ್ತಿರುವಳು ಎಂದು ಅವನು ನಮಗೆ ತಿಳಿಸಿದನು.॥42॥

ಮೂಲಮ್ - 43

ಸೋಽಹಂ ಶೋಕಪರೀತಾನಾಂ ದುಃಖಂ ತತ್ಜ್ಞಾತಿನಾಂ ನುದನ್ ।
ಆತ್ಮವೀರ್ಯಂ ಸಮಾಸ್ಥಾಯ ಯೋಜನಾನಾಂ ಶತಂ ಪ್ಲುತಃ ।
ತತ್ರಾಹಮೇಕಾಮದ್ರಾಕ್ಷಮಶೋಕವನಿಕಾಂ ಗತಾಮ್ ॥

ಅನುವಾದ

ಆಗ ದುಃಖದಲ್ಲಿ ಮುಳುಗಿದ ನಮ್ಮ ಬಂಧುಗಳ ಕಷ್ಟವನ್ನು ನಿವಾರಿಸಲು ನಾನು ಬಲ-ಪರಾಕ್ರಮವನ್ನು ಆಶ್ರಯಿಸಿ ನೂರು ಯೋಜನ ಸಮುದ್ರದಲ್ಲಿ ಹಾರಿ ಹೋಗಿ, ಲಂಕೆ ಅಶೋಕ ವನದಲ್ಲಿ ಒಬ್ಬಳೇ ಕುಳಿತಿರುವ ಸೀತೆಯನ್ನು ಭೆಟ್ಟಿಯಾದೆ.॥43॥

ಮೂಲಮ್ - 44

ಕೌಶೇಯವಸ್ತ್ರಾಂ ಮಲಿನಾಂ ನಿರಾನಂದಾಂ ದೃಢವ್ರತಾಮ್ ।
ತಯಾ ಸಮೇತ್ಯ ವಿಧಿವತ್ ಪೃಷ್ಟ್ವಾ ಸರ್ವಮನಿಂದಿತಾಮ್ ॥

ಮೂಲಮ್ - 45

ಅಭಿಜ್ಞಾನಂ ಮಯಾ ದತ್ತಂ ರಾಮನಾಮಾಂಗುಲೀಯಕಮ್ ।
ಅಭಿಜ್ಞಾನಂ ಮಣಿಂ ಲಬ್ಧ್ವಾ ಚರಿತಾರ್ಥೋಽಹಮಾಗತಃ ॥

ಅನುವಾದ

ಅವಳು ಒಂದು ರೇಶ್ಮೆಯ ಸೀರೆ ಉಟ್ಟಿದ್ದಳು. ಶರೀರ ಮಲಿನವಾಗಿದ್ದು ಆನಂದ ಶೂನ್ಯಳಾಗಿ ಕಂಡುಬರುತ್ತಿದ್ದಳು ಹಾಗೂ ಪಾತಿವ್ರತ್ಯದ ಪಾಲನೆಯಲ್ಲಿ ದೃಢವಾಗಿ ತೊಡಗಿದ್ದಳು. ಆಕೆಯನ್ನು ಕಂಡು ನಾನು ಆ ಸತೀ-ಸಾಧ್ವೀ ದೇವಿಯಲ್ಲಿ ಎಲ್ಲ ಸಮಾಚಾರ ಕೇಳಿ, ಪರಿಚಯಕ್ಕಾಗಿ ಶ್ರೀರಾಮನಾಮಾಂಕಿತ ಮುದ್ರಿಕೆಯನ್ನು ಆಕೆಗೆ ಕೊಟ್ಟೆ. ಜೊತೆಗೆ ಅವಳಿಂದ ಗುರುತಿಗಾಗಿ ಚೂಡಾಮಣಿಯನ್ನು ಪಡೆದು, ಕೃತಕೃತ್ಯಗಿ ಮರಳಿ ಬಂದೆ.॥44-45॥

ಮೂಲಮ್ - 46

ಮಯಾ ಚ ಪುನರಾಗಮ್ಯ ರಾಮಸ್ಯಾಕ್ಲಿಷ್ಟ ಕರ್ಮಣಃ ।
ಅಭಿಜ್ಞಾನಂ ಮಯಾ ದತ್ತ ಮರ್ಚಿಷ್ಮಾನ್ಸ ಮಹಾಮಣಿಃ ॥

ಅನುವಾದ

ಅನಾಯಾಸವಾಗಿ ಕ್ಲಿಷ್ಟಕರ್ಮಗಳನ್ನು ಮಾಡುವ ಶ್ರೀರಾಮನ ಬಳಿಗೆ ಮರಳಿ ಬಂದು ನಾನು ಆ ತೇಜಸ್ವೀ ಮಹಾಮಣಿ ಯನ್ನು ಅಭಿಜ್ಞಾನವಾಗಿ ಅವನಿಗೆ ನೀಡಿದೆ.॥46॥

ಮೂಲಮ್ - 47

ಶ್ರುತ್ವಾ ತಾಂ ಮೈಥಿಲೀಂ ರಾಮಸ್ತ್ವಾಶಶಂಸೇ ಚ ಜೀವಿತಮ್ ।
ಜೀವಿತಾಂತ ಮನುಪ್ರಾಪ್ತಃ ಪೀತ್ವಾಮೃತಮಿವಾತುರಃ ॥

ಅನುವಾದ

ಮೃತ್ಯುವಿನ ಹತ್ತಿರ ಮುಟ್ಟಿದ ರೋಗಿಯು ಅಮೃತಪಾನ ಮಾಡಿ ಪುನಃ ಏಳುವಂತೆಯೇ ಸೀತೆಯ ವಿಯೋಗದಲ್ಲಿ ಮರಣಾಸನ್ನನಾದ ಶ್ರೀರಾಮನು ಸೀತೆಯ ಶುಭ ಸಮಾಚಾರ ಪಡೆದು ಜೀವಿಸಿರಲು ಆಶಿಸಿದನು.॥47॥

ಮೂಲಮ್ - 48

ಉದ್ಯೋಜಯಿಷ್ಯನ್ನುದ್ಯೋಗಂ ದಧ್ರೇ ಲಂಕಾವಧೇಮನಃ ।
ಜಿಘಾಂಸುರಿವ ಲೋಕಾಂತೇ ಸರ್ವಾ ನ್ಲ್ಲೊಕಾನ್ವಿಭಾವಸುಃ ॥

ಅನುವಾದ

ಮತ್ತೆ ಪ್ರಳಯಕಾಲದಲ್ಲಿ ಸಂವರ್ತಕ ಎಂಬ ಅಗ್ನಿದೇವನು ಸಮಸ್ತ ಲೋಕಗಳನ್ನು ಭಸ್ಮಮಾಡಲು ಉದ್ಯುಕ್ತನಾದಂತೆಯೇ ಸೈನ್ಯವನ್ನು ಪ್ರೋತ್ಸಾಹಿಸುತ್ತಾ ಶ್ರೀರಾಮನು ಲಂಕೆಯನ್ನು ನಾಶಮಾಡಿ ಬಿಡುವ ವಿಚಾರ ಮಾಡಿದನು.॥48॥

ಮೂಲಮ್ - 49

ತತಃ ಸಮುದ್ರಮಾಸಾದ್ಯ ನಲಂ ಸೇತುಮಕಾರಯತ್ ।
ಅತರತ್ಕಪಿವೀರಾಣಾಂ ವಾಹಿನೀ ತೇನ ಸೇತುನಾ ॥

ಅನುವಾದ

ಬಳಿಕ ಸಮುದ್ರತೀರಕ್ಕೆ ಬಂದು ಶ್ರೀರಾಮನು ನಳನೆಂಬ ವಾನರನಿಂದ ಸಮುದ್ರಕ್ಕೆ ಸೇತುವೆ ಕಟ್ಟಿಸಿ, ಆ ಸೇತುವೆಯ ಮೂಲಕ ವಾನರರ ಸೈನ್ಯವೆಲ್ಲ ಸಾಗರದಾಟಿ ಹೋಯಿತು.॥49॥

ಮೂಲಮ್ - 50

ಪ್ರಹಸ್ತ ಮವಧೀನ್ನೀಲಃ ಕುಂಭಕರ್ಣಂ ತು ರಾಘವಃ ।
ಲಕ್ಷ್ಮಣೋ ರಾವಣಸುತಂ ಸ್ವಯಂ ರಾಮಸ್ತು ರಾವಣಮ್ ॥

ಅನುವಾದ

ಅಲ್ಲಿ ಯುದ್ಧದಲ್ಲಿ ನೀಲನು ಪ್ರಹಸ್ತನನ್ನು, ಲಕ್ಷ್ಮಣನು ರಾವಣ ಪುತ್ರ ಇಂದ್ರಜಿತುವನ್ನು ಹಾಗೂ ಸಾಕ್ಷಾತ್ ರಘುಕುಲನಂದನ ಶ್ರೀರಾಮನು ಕುಂಭಕರ್ಣ ಹಾಗೂ ರಾವಣನನ್ನು ಕೊಂದುಹಾಕಿದನು.॥50॥

ಮೂಲಮ್ - 51

ಸ ಶಕ್ರೇಣ ಸಮಾಗಮ್ಯ ಯಮೇನ ವರುಣೇನ ಚ ।
ಮಹೇಶ್ವರಸ್ವಯಂಭೂಭ್ಯಾಂ ತಥಾ ದಶರಥೇನ ಚ ॥

ಅನುವಾದ

ಅನಂತರ ಶ್ರೀರಘುನಾಥನು ಕ್ರಮವಾಗಿ ಇಂದ್ರ, ಯಮ, ವರುಣ, ಮಹಾದೇವ, ಬ್ರಹ್ಮದೇವರು ಹಾಗೂ ಮಹಾರಾಜಾ ದಶರಥನನ್ನು ಭೆಟ್ಟಿಯಾದನು.॥51॥

ಮೂಲಮ್ - 52

ತೈಶ್ಚ ದತ್ತವರಃ ಶ್ರೀಮಾನೃಷಿಭಿಶ್ಚ ಸಮಾಗತೈಃ ।
ಸುರರ್ಷಿಭಿಶ್ಚ ಕಾಕುತ್ಸ್ಥೋ ವರಾನ್ಲ್ಲೇಭೇ ಪರಂತಪಃ ॥

ಅನುವಾದ

ಅಲ್ಲಿಗೆ ಆಗಮಿಸಿದ ಋಷಿಗಳು ಮತ್ತು ದೇವರ್ಷಿಗಳು ಶತ್ರುಸಂತಾಪಿ ಶ್ರೀಮಾನ್ ರಘುವೀರನಿಗೆ ವರವನ್ನು ಕೊಟ್ಟು, ಶ್ರೀರಾಮನು ಅದನ್ನು ಪಡೆದುಕೊಂಡನು.॥52॥

ಮೂಲಮ್ - 53

ಸ ತು ದತ್ತವರಃ ಪ್ರೀತ್ಯಾ ವಾನರೈಶ್ಚ ಸಮಾಗತಃ ।
ಪುಷ್ಪಕೇಣ ವಿಮಾನೇನ ಕಿಷ್ಕಿಂಧಾಮಭ್ಯುಪಾಗಮತ್ ॥

ಅನುವಾದ

ವರ ಪಡೆದು ಪ್ರಸನ್ನನಾದ ಶ್ರೀರಾಮಚಂದ್ರನು ವಾನರರೊಂದಿಗೆ ಪುಷ್ಪಕವಿಮಾನದ ಮೂಲಕ ಕಿಷ್ಕಿಂಧೆಗೆ ಬಂದನು.॥53॥

ಮೂಲಮ್ - 54

ತಾಂ ಗಂಗಾ ಪುನರಾಸಾದ್ಯ ವಸಂತಂ ಮುನಿಸನ್ನಿಧೌ ।
ಅವಿಘ್ನಂ ಪುಷ್ಯಯೋಗೇನ ಶ್ವೋ ರಾಮಂದ್ರಷ್ಟುಮರ್ಹಸಿ ॥

ಅನುವಾದ

ಅಲ್ಲಿಂದ ಗಂಗಾತಟಕ್ಕೆ ಬಂದು ಪ್ರಯಾಗದಲ್ಲಿ ಭರದ್ವಾಜ ಮುನಿಯ ಸನ್ನಿಧಿಯಲ್ಲಿ ನಿಂತಿರುವನು. ನಾಳೆ ಪುಷ್ಯ ನಕ್ಷತ್ರದ ಯೋಗದಲ್ಲಿ ನೀನು ಯಾವುದೇ ವಿಘ್ನಬಾಧೆಗಳಿಲ್ಲದೆ ಶ್ರೀರಾಮನ ದರ್ಶನ ಮಾಡುವೆ.॥54॥

ಮೂಲಮ್ - 55

ತತಃ ಸ ವಾಕ್ಯೈರ್ಮಧುರೈರ್ಹನೂಮತೋ
ನಿಶಮ್ಯ ಹೃಷ್ಟೋ ಭರತಃ ಕೃತಾಂಜಲಿಃ ।
ಉವಾಚ ವಾಣೀಂ ಮನಸಃ ಪ್ರಹರ್ಷಿಣೀಂ
ಚಿರಸ್ಯ ಪೂರ್ಣಃ ಖಲು ಮೇ ಮನೋರಥಃ ॥

ಅನುವಾದ

ಹೀಗೆ ಹನುಮಂತನು ಮಧುರ ವಾಕ್ಯಗಳಿಂದ ಹೇಳಿದ ಎಲ್ಲ ಮಾತುಗಳನ್ನು ಕೇಳಿ ಭರತನು ಬಹಳ ಸಂತೋಷಗೊಂಡು ಕೈಮುಗಿದುಕೊಂಡು ಮನಸ್ಸಿಗೆ ಹರ್ಷವನ್ನೀಯುವ - ‘ಇಂದು ಬಹಳ ಕಾಲದ ಬಳಿಕ ನನ್ನ ಮನೋರಥ ಪೂರ್ಣವಾಯಿತು’ ಎಂದು ನುಡಿದನು.॥55॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತಾರನೆಯ ಸರ್ಗ ಪೂರ್ಣವಾಯಿತು.॥126॥