१२५ भरत-हनुमत्संवादः

वाचनम्
ಭಾಗಸೂಚನಾ

ಹನುಮಂತನು ಗುಹನಿಗೂ ಮತ್ತು ಭರತನಿಗೂ ಶ್ರೀರಾಮನ ಆಗಮನದ ಸೂಚನೆ ಕೊಟ್ಟುದು, ಪ್ರಸನ್ನನಾದ ಭರತನು ಹನುಮಂತನಿಗೆ ಉಡುಗೊರೆ ಕೊಡುವಂತೆ ಘೋಷಿಸಿದುದು

ಮೂಲಮ್ - 1

ಅಯೋಧ್ಯಾಂ ತು ಸಮಾಲೋಕ್ಯ ಚಿಂತಯಾಮಾಸ ರಾಘವಃ ।
ಪ್ರಿಯಕಾಮಃ ಪ್ರಿಯಂ ರಾಮಸ್ತತಸ್ತ್ವರಿತವಿಕ್ರಮಃ ॥

ಅನುವಾದ

(ಭರದ್ವಾಜರ ಆಶ್ರಮದಲ್ಲಿ ಇಳಿಯುವ ಮೊದಲು) ವಿಮಾನದಿಂದಲೇ ಅಯೋಧ್ಯಾಪುರಿಯನ್ನು ದರ್ಶಿಸಿ, ಅಯೋಧ್ಯಾ ನಿವಾಸಿಗಳ ಹಾಗೂ ಸುಗ್ರೀವಾದಿಗಳ ಪ್ರಿಯವನ್ನು ಮಾಡಲು ಬಯಸಿದ ಶೀಘ್ರಪರಾಕ್ರಮಿ ಶ್ರೀರಾಮನು ಇವರೆಲ್ಲರ ಪ್ರಿಯ ಹೇಗಾಗಬಹುದು ಎಂದು ಯೋಚಿಸಿದನು.॥1॥

ಮೂಲಮ್

(ಶ್ಲೋಕ - 2)
ಚಿಂತಯಿತ್ವಾ ತತೋ ದೃಷ್ಟಿಂ ವಾನರೇಷು ನ್ಯಪಾತಯತ್ ।
ಉವಾಚ ಧೀಮಾಂತೇಜಸ್ವೀ ಹನೂಮಂತಂ ಪ್ಲವಂಗಮಮ್ ॥

ಅನುವಾದ

ವಿಚಾರ ಮಾಡಿ ತೇಜಸ್ವೀ ಮತ್ತು ಬುದ್ಧಿವಂತ ಶ್ರೀರಾಮನು ವಾನರರನ್ನು ನೋಡುತ್ತಾ ವಾನರವೀರ ಹನುಮಂತನಲ್ಲಿ ಹೇಳಿದನು.॥2॥

ಮೂಲಮ್ - 3

ಅಯೋಧ್ಯಾಂ ತ್ವರಿತೋಗತ್ವಾ ಶೀಘ್ರಂ ಪ್ಲವಗಸತ್ತಮ ।
ಜಾನೀಹಿ ಕಚ್ಚಿತ್ ಕುಶಲೀ ಜನೋ ನೃಪತಿಮಂದಿರೇ ॥

ಅನುವಾದ

ಕಪಿಶ್ರೇಷ್ಠನೇ! ನೀನು ಶೀಘ್ರವಾಗಿ ಅಯೋಧ್ಯೆಗೆ ಹೋಗಿ ರಾಜಭವನದಲ್ಲಿ ಎಲ್ಲರೂ ಕ್ಷೇಮದಿಂದಿರುವಿರಲ್ಲ ಎಂದು ತಿಳಿ.॥3॥

ಮೂಲಮ್ - 4

ಶೃಂಗಬೇರಪುರಂ ಪ್ರಾಪ್ಯಗುಹಂ ಗಹನಗೋಚರಮ್ ।
ನಿಷಾದಾಧಿಪತಿಂ ಬ್ರೂಹಿ ಕುಶಲಂ ವಚನಾನ್ಮಮ ॥

ಅನುವಾದ

ಹಾಗೆಯೇ ಶೃಂಗವೇರಪುರಕ್ಕೆ ಹೋಗಿ ವನವಾಸೀ ನಿಷಾದರಾಜ ಗುಹನನ್ನೂ ಕಂಡು ನನ್ನ ಕಡೆಯಿಂದ ಕುಶಲವನ್ನು ಹೇಳು.॥4॥

ಮೂಲಮ್ - 5

ಶ್ರುತ್ವಾ ತು ಮಾಂ ಕುಶಲಿನಮರೋಗಂ ವಿಗತಜ್ಜರಮ್ ।
ಭವಿಷ್ಯತಿ ಗುಹಃ ಪ್ರೀತಃ ಸ ಮಮಾತ್ಮಸಮಃ ಸಖಾ ॥

ಅನುವಾದ

ನಾನು ಕುಶಲ, ನಿರೋಗಿ ಮತ್ತು ಚಿಂತಾರಹಿತನೆಂದು ಕೇಳಿ ನಿಷಾದರಾಜ ಗುಹನಿಗೆ ಬಹಳ ಸಂತೋಷವಾದೀತು. ಏಕೆಂದರೆ ಅವನು ನನ್ನ ಮಿತ್ರನಾಗಿದ್ದಾನೆ, ಆತ್ಮಸಮನಾಗಿದ್ದಾನೆ.॥5॥

ಮೂಲಮ್ - 6

ಅಯೋಧ್ಯಾಯಾಶ್ಚ ತೇ ಮಾರ್ಗಂ ಪ್ರವೃತ್ತಿಂ ಭರತಸ್ಯ ಚ ।
ನಿವೇದಯಿಷ್ಯತಿ ಪ್ರೀತೋ ನಿಷಾದಾಧಿಪತಿರ್ಗುಹಃ ॥

ಅನುವಾದ

ನಿಷಾದ ರಾಜಗುಹನು ಸಂತೋಷಗೊಂಡು ನಿನಗೆ ಅಯೋಧ್ಯೆಯ ದಾರಿ ಮತ್ತು ಭರತನ ಸಮಾಚಾರ ತಿಳಿಸುವನು.॥6॥

ಮೂಲಮ್ - 7

ಭರತಸ್ತು ತ್ವಯಾ ವಾಚ್ಯಃ ಕುಶಲಂ ವಚನಾನ್ಮಮ ।
ಸಿದ್ಧಾರ್ಥಂ ಶಂಸ ಮಾಂ ತಸ್ಮೈ ಸಭಾರ್ಯಂ ಸಹಲಕ್ಷ್ಮಣಮ್ ॥

ಅನುವಾದ

ಭರತನ ಬಳಿಗೆ ಹೋಗಿ ನೀನು ನನ್ನ ಪರವಾಗಿ ಅವನ ಕುಶಲವನ್ನು ಕೇಳಿ, ಅವನಿಗೆ ಸೀತಾ-ಲಕ್ಷ್ಮಣಸಹಿತ ಸಲ ಮನೋರಥನಾಗಿ ನಾನು ಮರಳಿ ಬಂದ ಸಮಾಚಾರ ತಿಳಿಸು.॥7॥

ಮೂಲಮ್ - 8

ಹರಣಂ ಚಾಪಿ ವೈದೇಹ್ಯಾ ರಾವಣೇನ ಬಲೀಯಸಾ ।
ಸುಗ್ರೀವೇಣ ಚ ಸಂವಾದಂ ವಾಲಿನಶ್ಚ ವಧಂ ರಣೇ ॥

ಮೂಲಮ್ - 9

ಮೈಥಿಲ್ಯಾನ್ವೇಷಣಂ ಚೈವ ಯಥಾ ಚಾಧಿಗತಾ ತ್ವಯಾ ।
ಲಂಘಯಿತ್ವಾ ಮಹಾತೋಯಮಾಪಗಾಪತಿಮವ್ಯಯಮ್ ॥

ಮೂಲಮ್ - 10

ಉಪಾಯಾನಂ ಸಮುದ್ರಸ್ಯ ಸಾಗರಸ್ಯ ಚ ದರ್ಶನಮ್ ।
ಯಥಾ ಚ ಕಾರಿತಃ ಸೇತೂ ರಾವಣಶ್ಚ ಯಥಾ ಹತಃ ॥

ಮೂಲಮ್ - 11

ವರದಾನಂ ಮಹೇಂದ್ರೇಣ ಬ್ರಹ್ಮಣಾ ವರುಣೇನ ಚ ।
ಮಹಾದೇವಪ್ರಸಾದಾಚ್ಚ ಪಿತ್ರಾ ಮಮ ಸಮಾಗಮಮ್ ॥

ಅನುವಾದ

ಬಲಿಷ್ಠ ರಾವಣನಿಂದ ಸೀತೆಯ ಅಪಹರಣ, ಸುಗ್ರೀವ ಸಖ್ಯ, ರಣಭೂಮಿಯಲ್ಲಿ ವಾಲಿಯ ವಧೆ, ಸೀತಾನ್ವೇಷಣೆ, ನೀನು ಮಹಾಸಾಗರವನ್ನು ದಾಟಿ ಸೀತೆಯನ್ನು ಕಂಡ ಸಂಗತಿ, ಮತ್ತು ಸಮುದ್ರತೀರಕ್ಕೆ ನಾನು ಹೋದುದು, ಸಾಗರ ದರ್ಶನ, ಸೇತುಬಂಧನ, ರಾವಣ ವಧೆ, ಇಂದ್ರ, ಬ್ರಹ್ಮಾ, ವರುಣರ ಭೇಟಿ ಹಾಗೂ ವರ ಪಡೆದುದು, ಮಹಾದೇವನು ಪ್ರಸನ್ನನಾಗಿ, ತಂದೆಯ ದರ್ಶನವಾದ, ಹೀಗೆ ಎಲ್ಲ ವೃತ್ತಾಂತವನ್ನು ಅವನಿಗೆ ತಿಳಿಸು.॥8-11॥

ಮೂಲಮ್ - 12

ಉಪಯಾತಂ ಚ ಮಾಂ ಸೌಮ್ಯ ಭರತಾಯ ನಿವೇದಯ ।
ಸಹ ರಾಕ್ಷಸರಾಜೇನ ಹರೀಣಾಮೀಶ್ವರೇಣ ಚ ॥

ಮೂಲಮ್ - 13

ಜಿತ್ವಾ ಶತ್ರುಗಣಾನ್ರಾಮಃ ಪ್ರಾಪ್ಯ ಚಾನುತ್ತಮಂ ಯಶಃ ।
ಉಪಾಯಾತಿ ಸಮೃದ್ಧಾರ್ಥಃ ಸಹ ಮಿತ್ರೈರ್ಮಹಾಬಲೈಃ ॥

ಅನುವಾದ

ಸೌಮ್ಯ! ಶ್ರೀರಾಮನು ಶತ್ರುಗಳನ್ನು ಜಯಿಸಿ, ಪರಮೋತ್ತಮ ಯಶಪಡೆದು, ಸಫಲ ಮನೋರಥನಾಗಿ ರಾಕ್ಷಸರಾಜ ವಿಭೀಷಣ, ವಾನರರಾಜ ಸುಗ್ರೀವ ಹಾಗೂ ತನ್ನ ಇತರ ಮಹಾಬಲಿ ಮಿತ್ರರೊಂದಿಗೆ ಬರುತ್ತಿದ್ದಾನೆ ಮತ್ತು ಪ್ರಯಾಗದವರೆಗೆ ಆಗಮಿಸಿರುವನು ಎಂಬುದನ್ನು ತಿಳಿಸು.॥12-13॥

ಮೂಲಮ್ - 14

ಏತಚ್ಛ್ರುತ್ವಾ ಯಮಾಕಾರಂ ಭಜತೇ ಭರತಸ್ತತಃ ।
ಸ ಚ ತೇ ವೇದಿತವ್ಯಃ ಸ್ಯಾತ್ಸರ್ವಂ ಯಚ್ಚಾಪಿ ಮಾಂ ಪ್ರತಿ ॥

ಅನುವಾದ

ಈ ಮಾತನ್ನು ಕೇಳಿ ಭರತನ ಮುಖಭಾವವನ್ನು ಗಮನಿಸಿ ತಿಳಿ. ಭರತನಲ್ಲಿ ನನ್ನ ಕುರಿತು ಇರುವ ಕರ್ತವ್ಯ, ವರ್ತನೆಯನ್ನು ತಿಳಿಯಲು ಪ್ರಯತ್ನಿಸು.॥14॥

ಮೂಲಮ್ - 15

ಜ್ಞೇಯಾಃ ಸರ್ವೇಚ ವೃತ್ತಾಂತಾ ಭರತಸ್ಯೇಂಗಿತಾನಿ ಚ ।
ತತ್ತ್ವೇನ ಮುಖವರ್ಣೇನ ದೃಷ್ಟ್ಯಾ ವ್ಯಾಭಾಷಿತೇನ ಚ ॥

ಅನುವಾದ

ಅಲ್ಲಿಯ ಎಲ್ಲ ವೃತ್ತಾಂತ ಹಾಗೂ ಭರತನ ಚೇಷ್ಟೆಗಳನ್ನು ಯಥಾರ್ಥವಾಗಿ ನೀನು ತಿಳಿಯಬೇಕು. ಮುಖಭಾವ, ದೃಷ್ಟಿ, ಮಾತುಕತೆಯಿಂದ ಅವನ ಮನೋಭಾವವನ್ನು ಅರಿಯಲು ಪ್ರಯತ್ನಿಸು.॥15॥

ಮೂಲಮ್ - 16

ಸರ್ವಕಾಮ ಸಮೃದ್ಧಂ ಹಿ ಹಸ್ತ್ಯಶ್ಚ ರಥಸಂಕುಲಮ್ ।
ಪಿತೃಪೈತಾಮಹಂ ರಾಜ್ಯಂ ಕಸ್ಯ ನಾವರ್ತಯೇನ್ಮನಃ ॥

ಅನುವಾದ

ಸಮಸ್ತ ಮನೋವಾಂಛಿತ ಭೋಗದಿಂದ ಸಂಪನ್ನ ಹಾಗೂ ಆನೆ, ಕುದುರೆ, ರಥಗಳಿಂದ ತುಂಬಿದ, ತಾತ-ಮುತ್ತಾತರ ರಾಜ್ಯ ಸುಲಭವಾಗಿ ದೊರೆತಾಗ ಯಾರ ಮನಸ್ಸು ತಾನೆ ಕೆಡುವುದಿಲ್ಲ.॥16॥

ಮೂಲಮ್ - 17

ಸಂಗತ್ಯಾ ಭರತಃ ಶ್ರೀಮಾನ್ ರಾಜ್ಯೇನಾ ಸ್ವಯಂ ಭವೇತ್ ।
ಪ್ರಶಾಸ್ತು ವಸುಧಾಂ ಸರ್ವಾಮಖಿಲಾಂ ರಘುನಂದನಃ ॥

ಅನುವಾದ

ಕೈಕೇಯಿಯ ಸಂಗತಿ ಅಥವಾ ಚಿರಕಾಲ ರಾಜ್ಯವೈಭವದ ಸಂಸರ್ಗವಾದ್ದರಿಂದ ಶ್ರೀಮಾನ್ ಭರತನು ಸ್ವತಃ ರಾಜ್ಯವನ್ನು ಪಡೆಯಲು ಬಯಸುತ್ತಿದ್ದರೆ ರಘುಕುಲನಂದನ ಭರತನು ಸಮಸ್ತ ಭೂಮಂಡಲದ ರಾಜ್ಯವನ್ನಾಳಲಿ. (ನಾನು ಆ ರಾಜ್ಯವನ್ನು ತೆಗೆದುಕೊಳ್ಳುವುದಿಲ್ಲ. ಆ ಸ್ಥಿತಿಯಲ್ಲಿ ನಾವು ಬೇರೆ ಎಲ್ಲಾದರೂ ಇದ್ದು ತಪಸ್ವೀ ಜೀವನ ನಡೆಸುವೆವು..॥17॥

ಮೂಲಮ್ - 18

ತಸ್ಯ ಬುದ್ಧಿಂ ಚ ವಿಜ್ಞಾಯ ವ್ಯವಸಾಯಂ ಚ ವಾನರ ।
ಯಾವನ್ನ ದೂರಂ ಯಾತಾಃ ಸ್ಮ ಕ್ಷಿಪ್ರಮಾಗಂತುಮರ್ಹಸಿ ॥

ಅನುವಾದ

ವಾನರ ವೀರ! ನೀನು ಭರತನ ವಿಚಾರ ಮತ್ತು ನಿಶ್ಚಯವನ್ನು ತಿಳಿದು, ನಾವು ಈ ಆಶ್ರಮದಿಂದ ಹೊರಡುವ ಮೊದಲೇ ಮರಳಿ ಬಂದುಬಿಡು.॥18॥

ಮೂಲಮ್ - 19

ಇತಿ ಪ್ರತಿಸಮಾದಿಷ್ಟೋ ಹನೂಮಾನ್ಮಾರುತಾತ್ಮಜಃ ।
ಮಾನುಷಂ ಧಾರಯನ್ರೂಪಮಯೋಧ್ಯಾಂ ತ್ವರಿತೋ ಯಯೌ ॥

ಅನುವಾದ

ಶ್ರೀರಘುನಾಥನು ಹೀಗೆ ಆದೇಶ ಕೊಟ್ಟಾಗ ಪವನ ಪುತ್ರ ಹನುಮಂತನು ಮನುಷ್ಯರೂಪವನ್ನು ಧರಿಸಿ ತೀವ್ರಗತಿಯಿಂದ ಅಯೋಧ್ಯೆಯ ಕಡೆಗೆ ಹೊರಟನು.॥19॥

ಮೂಲಮ್ - 20

ಅಥೋತ್ಪಪಾತ ವೇಗೇನ ಹನೂಮಾನ್ಮಾರುತಾತ್ಮಜಃ ।
ಗರುತ್ಮಾನಿವ ವೇಗೇನ ಜಿಘೃಕ್ಷನ್ನುರಗೋತ್ತಮಮ್ ॥

ಅನುವಾದ

ಗರುಡನು ಯಾವುದಾದರೂ ಶ್ರೇಷ್ಠ ಸರ್ಪವನ್ನು ಹಿಡಿಯಲು ವೇಗವಾಗಿ ಆಕ್ರಮಿಸುವಂತೆ ಪವನಪುತ್ರ ಹನುಮಂತನು ವೇಗವಾಗಿ ಹಾರುತ್ತಲೇ ನಡೆದನು.॥20॥

ಮೂಲಮ್ - 21

ಲಂಘಯಿತ್ವಾ ಪಿತೃಪಥಂ ವಿಹಗೇಂದ್ರಾಲಯಂ ಶುಭಮ್ ।
ಗಂಗಾಯಮುನಯೋರ್ಭೀಮಂ ಸಮತೀತ್ಯ ಸಮಾಗಮಮ್ ॥

ಮೂಲಮ್ - 22

ಶೃಂಗಬೇರಪುರಂ ಪ್ರಾಪ್ಯ ಗುಹಮಾಸಾದ್ಯ ವೀರ್ಯವಾನ್ ।
ಸ ವಾಚಾ ಶುಭಯಾ ಹೃಷ್ಟೋ ಹನೂಮಾನಿದಮಬ್ರವೀತ್ ॥

ಅನುವಾದ

ಪಕ್ಷಿರಾಜ ಗರುಡನ ಸುಂದರ ಗೃಹವಾದ, ತನ್ನ ತಂದೆ ವಾಯುವಿನ ಮಾರ್ಗವನ್ನು ಅತಿಕ್ರಮಿಸಿ, ಗಂಗಾ-ಯಮುನಾ ಸಂಗಮವನ್ನು ದಾಟಿ ಶೃಂಗವೇರಪುರಕ್ಕೆ ತಲುಪಿ ಪರಾಕ್ರಮಿ ಹನುಮಂತನು ನಿಷಾದರಾಜ ಗುಹನನ್ನು ಭೆಟ್ಟಿಯಾಗಿ, ಹರ್ಷದಿಂದ ಸುಂದರವಾಣಿಯಲ್ಲಿ ಹೇಳಿದನು.॥21-22॥

ಮೂಲಮ್ - 23

ಸಖಾ ತು ತವ ಕಾಕುತ್ಸ್ಥೋ ರಾಮಃ ಸತ್ಯಪರಾಕ್ರಮಃ ।
ಸಸೀತಃ ಸಹ ಸೌಮಿತ್ರಿಃ ಸ ತ್ವಾಂ ಕುಶಲಮಬ್ರವೀತ್ ॥

ಮೂಲಮ್ - 24

ಪಂಚಮೀಮದ್ಯ ರಜನೀಮುಷಿತ್ವಾ ವಚನಾನ್ಮುನೇಃ ।
ಭರದ್ವಾಜಾಭ್ಯನುಜ್ಞಾತಂ ದೃಕ್ಷ್ಯಸ್ಯತ್ರೈವ ರಾಘವಮ್ ॥

ಅನುವಾದ

ಅಯ್ಯಾ! ನಿನ್ನ ಮಿತ್ರ ಕಾಕುತ್ಸ್ಥಕುಲಭೂಷಣ ಸತ್ಯಪರಾಕ್ರಮಿ ಶ್ರೀರಾಮನು ಸೀತಾ-ಲಕ್ಷ್ಮಣರೊಡನೆ ಬರುತ್ತಿರುವನು ಹಾಗೂ ಅವನು ನಿನಗೆ ಕುಶಲ ಸಮಾಚಾರವನ್ನು ಹೇಳಿ ಕಳಿಸಿರುವನು. ಅವನು ಪ್ರಯಾಗದಲ್ಲಿ ಭರದ್ವಾಜ ಮುನಿಯು ಹೇಳಿದಂತೆ ಅವರ ಆಶ್ರಮದಲ್ಲಿ ಇಂದು ಪಂಚಮಿಯ ರಾತ್ರೆಯನ್ನು ಕಳೆದು ಅವರ ಅಪ್ಪಣೆ ಪಡೆದು ಹೊರಡುವನು. ನಿನಗೆ ಇಲ್ಲೇ ಶ್ರೀರಾಮನ ದರ್ಶನವಾಗುವುದು.॥23-24॥

ಮೂಲಮ್ - 25

ಏವಮುಕ್ತ್ವಾಮಹಾತೇಜಾಃ ಸಂಪ್ರಹೃಷ್ಟತನೂರುಹಃ ।
ಉತ್ಪಪಾತ ಮಹಾವೇಗಾದ್ ವೇಗವಾನ ವಿಚಾರಯನ್ ॥

ಅನುವಾದ

ಗುಹನಲ್ಲಿ ಹೀಗೆ ಹೇಳಿ ಮಹಾತೇಜಸ್ವೀ, ವೇಗಶಾಲೀ ಹನುಮಂತನು ಏನನ್ನು ಯೋಚಿಸದೆ ವೇಗದಿಂದ ಮುಂದೆ ಹಾರಿಹೋದನು. ಆಗ ಅವನ ಸರ್ವಾಂಗವು ಹರ್ಷದಿಂದ ರೋಮಾಂಚನವಾಗಿತ್ತು.॥25॥

ಮೂಲಮ್ - 26

ಸೋಽಪಶ್ಯದ್ರಾಮತೀರ್ಥಂ ಚ ನದೀಂ ವಾಲುಕಿನೀಂ ತಥಾ ।
ವರೂಥೀಂ ಗೋಮತೀಂ ಚೈವ ಭೀಮಂ ಶಾಲವನಂ ತಥಾ ॥

ಅನುವಾದ

ದಾರಿಯಲ್ಲಿ ಅವನಿಗೆ ಪರಶುರಾಮತೀರ್ಥ, ವಾಲುಕಿನೀ ನದೀ, ವರೂಥೀ, ಗೋಮತಿ ಮತ್ತು ಭಯಾನಕ ಸಾಲವನದ ದರ್ಶನವಾಯಿತು.॥26॥

ಮೂಲಮ್ - 27

ಪ್ರಜಾಶ್ಚ ಬಹುಸಾಹಸ್ರೀಃ ಸ್ಘೀತಾಂಜನ ಪದಾನಪಿ ।
ಸ ಗತ್ವಾ ದೂರಮಧ್ವಾನಂ ತ್ವರಿತಃ ಕಪಿಕುಂಜರಃ ॥

ಮೂಲಮ್ - 28

ಆಸಸಾದ ದ್ರುಮಾನ್ಫುಲ್ಲಾನ್ನಂದಿಗ್ರಾಮ ಸಮೀಪಗಾನ್ ।
ಸುರಾಧಿಪಸ್ಯೋಪವನೇ ಯಥಾ ಚೈತ್ರರಥೇ ದ್ರುಮಾನ್ ॥

ಅನುವಾದ

ಅನೇಕ ಸಾವಿರ ಪ್ರಜೆಗಳಿಂದ ಹಾಗೂ ಸಮೃದ್ಧವಾದ ಊರುಗಳನ್ನು ನೋಡುತ್ತಾ ಕಪಿಶ್ರೇಷ್ಠ ಹನುಮಂತನು ವೇಗವಾಗಿ ದೂರದ ದಾರಿಯನ್ನು ಹಾರಿ, ನಂದಿಗ್ರಾಮದ ಸಮೀಪದ ಅರಳಿನಿಂತ ವೃಕ್ಷಗಳ ಬಳಿಗೆ ತಲುಪಿದನು. ಅವು ದೇವೇಂದ್ರನ ನಂದನ ವನ ಮತ್ತು ಕುಬೇರನ ಚೈತ್ರರಥ ವನದ ವೃಕ್ಷಗಳಂತೆ ಶೋಭಿಸುತ್ತಿದ್ದವು.॥27-28॥

ಮೂಲಮ್ - 29

ಸ್ತ್ರೀಭಿಃ ಸಪುತ್ರೈಃ ಪೌತ್ರೈಶ್ಚ ರಮಮಾಣೈಃ ಸ್ವಲಂಕೃತೈಃ ।
ಕ್ರೋಶಮಾತ್ರೇ ತ್ವಯೋಧ್ಯಾಯಾಶ್ಚೀರ ಕೃಷ್ಣಾಜಿನಾಂಬರಮ್ ॥

ಮೂಲಮ್ - 30

ದದರ್ಶ ಭರತಂ ದೀನಂ ಕೃಶಮಾಶ್ರಮವಾಸಿನಮ್ ।
ಜಟಿಲಂ ಮಲದಿಗ್ಧಾಂಗಂ ಭ್ರಾತೃವ್ಯಸನ ಕರ್ಶಿತಮ್ ॥

ಮೂಲಮ್ - 31

ಫಲಮೂಲಾಶಿನಂ ದಾಂತಂ ತಾಪಸಂ ಧರ್ಮಚಾರಿಣಮ್ ।
ಸಮುನ್ನತ ಜಟಾಧಾರಂ ವಲ್ಕಲಾಜಿನವಾಸಸಮ್ ॥

ಮೂಲಮ್ - 32

ನಿಯತಂ ಭಾವಿತಾತ್ಮಾನಂ ಬ್ರಹ್ಮರ್ಷಿಸಮತೇಜಸಮ್ ।
ಪಾದುಕೇ ತೇ ಪುರಸ್ಕೃತ್ಯ ಪ್ರಶಾಸಂತಂ ವಸುಂಧರಾಮ್ ॥

ಅನುವಾದ

ಅವುಗಳ ಬಳಿಯಲ್ಲಿ ವಸ್ತ್ರಾಭೂಣಗಳಿಂದ ಅಲಂಕೃತವಾದ ಅನೇಕ ಸ್ತ್ರೀಯರು ತಮ್ಮ ಮಕ್ಕಳು-ಮೊಮ್ಮಕ್ಕಳೊಂದಿಗೆ ಸಂಚರಿಸುತ್ತಾ ಹೂವುಗಳನ್ನು ಹೆಕ್ಕುತ್ತಿದ್ದರು. ಅಯೋಧ್ಯೆಯಿಂದ ಒಂದು ಗಾವುದ ದೂರದಲ್ಲಿ ಅವನು ಆಶ್ರಮವಾಸೀ ಭರತನನ್ನು ನೋಡಿದನು. ಅವನು ನಾರುಮುಡಿಯನ್ನುಟ್ಟು ಕೃಷ್ಣಮೃಗ ಚರ್ಮವನ್ನು ಧರಿಸಿದ್ದು, ದುಃಖಿ ಹಾಗೂ ದುರ್ಬಲವಾಗಿ ಕಾಣುತ್ತಿದ್ದನು. ಅವನ ತಲೆಯಲ್ಲಿ ಜಟೆ ಬೆಳೆದಿತ್ತು. ಶರೀರ ಮಲಿನವಾಗಿತ್ತು, ಅಣ್ಣನ ವನವಾಸದ ದುಃಖವು ಅವನನ್ನು ಕೃಶಗೊಳಿಸಿತ್ತು. ಫಲ-ಮೂಲಗಳೆ ಆಹಾರವಾಗಿದ್ದ ಅವನು ಇಂದ್ರಿಯಗಳನ್ನು ದಮನಮಾಡಿ ತಪಸ್ಸಿನಲ್ಲಿ ತೊಡಗಿದ್ದು, ಧರ್ಮಾಚರಣ ಮಾಡುತ್ತಿದ್ದನು. ಎತ್ತರವಾದ ಜಟಾಜೂಟದಿಂದ ಕಂಡು ಬರುವ ಅವನು ವಲ್ಕಲ-ಮೃಗಚರ್ಮವನ್ನು ಹೊದ್ದು ಕೊಂಡಿದ್ದನು. ಬಹಳ ನಿಯಮದಿಂದ ಇದ್ದ ಅವನ ಅಂತಃಕರಣ ಶುದ್ಧವಾಗಿತ್ತು ಹಾಗೂ ಅವನು ಬ್ರಹ್ಮರ್ಷಿಯಂತೆ ತೇಜಸ್ವಿಯಾಗಿ ಕಾಣುತ್ತಿದ್ದನು. ರಘುನಾಥನ ಚರಣಪಾದುಕೆಗಳನ್ನು ಮುಂದಿರಿಸಿಕೊಂಡು ಅವನು ಪೃಥಿವಿಯ ಶಾಸನ ಮಾಡುತ್ತಿದ್ದನು.॥29-32॥

ಮೂಲಮ್ - 33½

ಚಾತುರ್ವರ್ಣ್ಯಸ್ಯ ಲೋಕಸ್ಯ ತ್ರಾತಾರಂ ಸರ್ವತೋ ಭಯಾತ್ ।
ಉಪಸ್ಥಿತಿಮಮಾತ್ಯೈಶ್ಚ ಶುಚಿಭಿಶ್ಚ ಪುರೋಹಿತೈಃ ॥
ಬಲಮುಖ್ಯೈಶ್ಚ ಯುಕ್ತೈಶ್ಚ ಕಾಷಾಯಾಂಬರಧಾರಿಭಿಃ ।

ಅನುವಾದ

ಭರತನು ನಾಲ್ಕು ವರ್ಣದ ಪ್ರಜೆಗಳನ್ನು ಎಲ್ಲ ರೀತಿಯಿಂದ ನಿರ್ಭಯವಾಗಿರಿಸಿದ್ದನು. ಅವನ ಬಳಿಯಲ್ಲಿ ಮಂತ್ರೀ, ಪುರೋಹಿತ, ಸೇನಾಪತಿ ಇವರೂ ಕಾವಿಬಟ್ಟೆ ತೊಟ್ಟು ಯೋಗಯುಕ್ತರಾಗಿ ಇರುತ್ತಿದ್ದರು.॥33½॥

ಮೂಲಮ್ - 34½

ನ ಹಿ ತೇ ರಾಜಪುತ್ರಂ ತಂ ಚೀರಕೃಷ್ಣಾಜಿನಾಂಬರಮ್ ॥
ಪರಿಭೋಕ್ತುಂ ವ್ಯವಸ್ಯಂತಿ ಪೌರಾ ವೈ ಧರ್ಮವತ್ಸಲಾಃ ।

ಅನುವಾದ

ಅಯೋಧ್ಯೆಯ ಧರ್ಮಾನುರಾಗೀ ಪುರವಾಸಿಗಳೂ ಕೂಡ ಚೀರಕೃಷ್ಣಾಜಿನ ಧರಿಸಿದ ರಾಜಕುಮಾರ ಭರತನ ಆ ಸ್ಥಿತಿಯನ್ನು ನೋಡಿ ತಾವೂ ಕೂಡ ಭೋಗ-ಭೋಗಿಸಲು ಇಚ್ಛಿಸುತ್ತಿರಲಿಲ್ಲ.॥34½॥

ಮೂಲಮ್ - 35½

ತಂ ಧರ್ಮಮಿವ ಧರ್ಮಜ್ಞಂ ದೇಹಬಂಧಮಿವಾಪರಮ್ ॥
ಉವಾಚ ಪ್ರಾಂಜಲಿರ್ವಾಕ್ಯಂ ಹನೂಮಾನ್ಮಾರುತಾತ್ಮಜಃ ।

ಅನುವಾದ

ಮನುಷ್ಯ ದೇಹಧರಿಸಿ ಬಂದಿರುವ ಹನುಮಂತನು-ಇನ್ನೊಂದು ಧರ್ಮದಂತಿದ್ದ, ಧರ್ಮಜ್ಞ ಭರತನ ಬಳಿಗೆ ಹೋಗಿ ಕೈಮುಗಿದುಕೊಂಡು ಹೇಳಿದನು.॥35½॥

ಮೂಲಮ್ - 36

ವಸಂತಂ ದಂಡಕಾರಣ್ಯೇ ಯಂ ತ್ವಂ ಚೀರಜಟಾಧರಮ್ ॥

ಮೂಲಮ್ - 37½

ಅನುಶೋಚಸಿ ಕಾಕುತ್ಸ್ಥಂ ಸ ತ್ವಾಂ ಕೌಶಲಮಬ್ರವೀತ್ ।
ಪ್ರಿಯಮಾಖ್ಯಾಮಿ ತೇ ದೇವ ಶೋಕಂ ತ್ಯಜ ಸುದಾರುಣಮ್ ॥
ಅಸ್ಮಿನ್ಮುಹೂರ್ತೇ ಭ್ರಾತ್ರಾ ತ್ವಂ ರಾಮೇಣ ಸಹ ಸಂಗತಃ ।

ಅನುವಾದ

ದೇವ! ದಂಡಕಾರಣ್ಯದಲ್ಲಿ ಚಿರ-ವಸ-ಜಟಾ ಧಾರಿಯಾಗಿ ಇರುವ ಯಾವ ರಘುನಾಥನಿಗಾಗಿ ನೀನು ನಿರಂತರ ಚಿಂತಿತನಾಗಿರುವೆಯೋ, ಅವನು ನಿನಗೆ ತನ್ನ ಕ್ಷೇಮ-ಸಮಾಚಾರ ಹೇಳಿಕಳಿಸಿರುವನು ಮತ್ತು ನಾನು ನಿಮ್ಮ ಕುಶಲವನ್ನು ಕೇಳುತ್ತಿದ್ದೇನೆ. ಈಗ ನೀನು ಅತ್ಯಂತ ದಾರುಣವಾದ ಶೋಕವನ್ನು ಬಿಟ್ಟುಬಿಡು. ನಾನು ನಿನಗೆ ಬಹಳ ಪ್ರಿಯವಾದ ಸಮಾಚಾರ ಹೇಳುತ್ತೇನೆ. ನೀನು ಬೇಗನೆ ನಿನ್ನಣ್ಣ ಶ್ರೀರಾಮನನ್ನು ಸೇರುವೆ.॥36-37½॥

ಮೂಲಮ್ - 38

ನಿಹತ್ಯ ರಾವಣಂ ರಾಮಃ ಪ್ರತಿಲಭ್ಯ ಚ ಮೈಥಿಲೀಮ್ ॥

ಮೂಲಮ್ - 39

ಉಪಯಾತಿ ಸಮೃದ್ಧಾರ್ಥಃ ಸಹ ಮಿತ್ರೈರ್ಮಹಾಬಲೈಃ ।
ಲಕ್ಷ್ಮಣಶ್ಚ ಮಹಾತೇಜಾ ವೈದೇಹೀ ಚ ಯಶಸ್ವಿನೀ ।
ಸೀತಾ ಸಮಗ್ರಾ ರಾಮೇಣ ಮಹೇಂದ್ರೇಣ ಶಚೀ ಯಥಾ ॥

ಅನುವಾದ

ಭಗವಾನ್ ಶ್ರೀರಾಮನು ರಾವಣನನ್ನು ಕೊಂದು ಮಿಥಿಲೇಶ ಕುಮಾರಿಯನ್ನು ಪಡೆದು ಸಫಲಮನೋರಥನಾಗಿ, ತನ್ನ ಮಹಾಬಲಿ ಮಿತ್ರರೊಂದಿಗೆ ಬರುತ್ತಿದ್ದಾನೆ. ಅವನೊಡನೆ ಮಹಾತೇಜಸ್ವೀ ಲಕ್ಷ್ಮಣ ಮತ್ತು ಯಶಸ್ವಿನೀ ಸೀತೆಯೂ ಇರುವರು. ದೇವೇಂದ್ರನೊಡನೆ ಶಚಿಯು ಶೋಭಿಸುವಂತೆಯೇ ಶ್ರೀರಾಮನೊಂದಿಗೆ ಪೂರ್ಣಕಾಮಾ ಸೀತೆಯೂ ಶೋಭಿಸುತ್ತಿರುವಳು.॥38-39॥

ಮೂಲಮ್ - 40

ಏವಮುಕ್ತೋ ಹನುಮತಾ ಭರತಃ ಕೈಕಯೀಸುತಃ ।
ಪಪಾತ ಸಹಸಾ ಹೃಷ್ಟೋ ಹರ್ಷಾನ್ಮೋಹ ಮುಪಾಗಮತ್ ॥

ಅನುವಾದ

ಹನುಮಂತನು ಹೀಗೆ ಹೇಳುತ್ತಲೇ ಕೈಕೇಯಿಕುಮಾರ ಭರತನು ಆನಂದಮಗ್ನನಾಗಿ ಭೂಮಿಯಲ್ಲಿ ಕುಸಿದು ಬಿದ್ದನು ಹಾಗೂ ಅತಿ ಹರ್ಷದಿಂದ ಮೂರ್ಛಿತನಾದನು.॥40॥

ಮೂಲಮ್ - 41

ತತೋ ಮುಹೂರ್ತಾದುತ್ಥಾಯ ಪ್ರತ್ಯಾಶ್ವಸ್ಯ ಚ ರಾಘವಃ ।
ಹನೂಮಂತ ಮುವಾಚೇದಂ ಭರತಃ ಪ್ರಿಯವಾದಿನಮ್ ॥

ಮೂಲಮ್ - 42

ಅಶೋಕಜೈಃ ಪ್ರೀತಿಮಯೈಃ ಕಪಿಮಾಲಿಂಗ್ಯಸಂಭ್ರಮಾತ್ ।
ಸಿಷೇಚ ಭರತಃ ಶ್ರೀಮಾನ್ವಿಪುಲೈರಶ್ರುಬಿಂದುಭಿಃ ॥

ಅನುವಾದ

ಮುಹೂರ್ತ ಕಾಲದನಂತರ ಎಚ್ಚರಗೊಂಡು ಎದ್ದುನಿಂತನು. ಆಗ ರಘುಕುಲಭೂಷಣ ಶ್ರೀಮಾನ್ ಭರತನು ಪ್ರಿಯವಾದೀ ಹನುಮಂತನನ್ನು ಸಂಭ್ರಮದಿಂದ ಬಿಗಿದಪ್ಪಿಕೊಂಡನು. ಶೋಕ ಸಂಸರ್ಗದಿಂದ ಶೂನ್ಯ ಪರಮಾನಂದದಿಂದಾಗಿ ಆನಂದಾಶ್ರುಗಳಿಂದ ಹನುಮಂತನನ್ನು ನೆನೆಸಿ, ಮತ್ತೆ ಹೇಳಿದನು.॥41-42॥

ಮೂಲಮ್ - 43

ದೇವೋ ವಾ ಮಾನುಷೋ ವಾ ತ್ವಮನುಕ್ರೋಶಾದಿಹಾಗತಃ ।
ಪ್ರಿಯಾಖ್ಯಾನಸ್ಯ ತೇ ಸೌಮ್ಯ ದದಾಮಿ ಬ್ರುವತಃ ಪ್ರಿಯಮ್ ॥

ಅನುವಾದ

ಅಯ್ಯಾ! ನೀನು ದೇವತೆಯೋ, ಮನುಷ್ಯನೋ? ನನ್ನ ಮೇಲೆ ಕೃಪೆದೋರಲು ಇಲ್ಲಿಗೆ ಆಗಮಿಸಿರುವೆ. ಸೌಮ್ಯ! ನೀನು ತಿಳಿಸಿದ ಈ ಪ್ರಿಯ ಸುದ್ದಿಯ ಬದಲಿಗೆ ನಾನು ನಿನಗೆ ಯಾವ ಪ್ರಿಯವಸ್ತು ನೀಡಲಿ? (ನನಗಾದರರೋ ಈ ಪ್ರಿಯ ಸುದ್ದಿಗೆ ಸಮವಾದ ಯಾವುದೇ ಬಹುಮೂಲ್ಯವಸ್ತು ನನಗೆ ಕಂಡುಬರುವುದಿಲ್ಲ..॥43॥

ಮೂಲಮ್ - 44

ಗವಾಂ ಶತಸಹಸ್ರಂ ಚ ಗ್ರಾಮಾಣಾಂ ಚ ಶತಂ ಪರಮ್ ।
ಸಕುಂಡಲಾಃ ಶುಭಾಚಾರಾ ಭಾರ್ಯಾಃ ಕನ್ಯಾಶ್ಚ ಷೋಡಶ ॥

ಮೂಲಮ್ - 45

ಹೇಮವರ್ಣಾಃ ಸುನಾಸೋರೂಃ ಶಶಿಸೌಮ್ಯಾನನಾಃ ಸ್ತ್ರಿಯಃ ।
ಸರ್ವಾಭರಣಸಂಪನ್ನಾಃ ಸಂಪನ್ನಾಃ ಕುಲಜಾತಿಭಿಃ ॥

ಅನುವಾದ

ಆದರೂ ನಾನು ಒಂದು ಲಕ್ಷ ಗೋವು, ನೂರು ಉತ್ತಮ ಗ್ರಾಮಗಳನ್ನು ಹಾಗೂ ಉತ್ತಮ ಆಚಾರ-ವಿಚಾರವುಳ್ಳ ಹದಿನಾರು ಕನ್ಯೆಯರನ್ನು ಪತ್ನಿಯರಾಗಿ ನಿನಗೆ ಅರ್ಪಿಸುತ್ತೇನೆ. ಆ ಕನ್ಯೆಯರ ಕಿವಿಗಳಲ್ಲಿ ಸುಂದರ ಕುಂಡಲಗಳೂ ಹೊಳೆಯುತ್ತಿರುವವು. ಅವರ ಅಂಗಶಾಂತಿ ಸುವರ್ಣದಂತಿದ್ದು, ಮುಖಗಳು ಚಂದ್ರನಂತೆ ಸುಂದರವಿರುವವು. ಅವರು ಕುಲೀನರಾಗಿದ್ದು, ಎಲ್ಲ ಆಭೂಷಣಗಳಿಂದ ವಿಭೂಷಿತರಾಗಿರುವರು.॥44-45॥

ಮೂಲಮ್ - 46

ನಿಶಮ್ಯ ರಾಮಾಗಮನಂ ನೃಪಾತ್ಮಜಃ
ಕಪಿಪ್ರವೀರಸ್ಯ ತದಾದ್ಭುತೋಪಮಮ್ ।
ಪ್ರಹರ್ಷಿತೋ ರಾಮದಿದೃಕ್ಷಯಾಭವತ್
ಪುನಶ್ಚ ಹರ್ಷಾದಿದಮಬ್ರವೀದ್ವಚಃ ॥

ಅನುವಾದ

ಆ ಪ್ರಮುಖ ವಾನರವೀರ ಹನುಮಂತನಿಂದ ಶ್ರೀರಾಮಚಂದ್ರನ ಆಗಮನದ ಅದ್ಭುತ ಸಮಾಚಾರ ಕೇಳಿ ರಾಜಕುಮಾರ ಭರತನಿಗೆ ಶ್ರೀರಾಮನ ದರ್ಶನದ ಇಚ್ಛೆಯಿಂದ ಅತ್ಯಂತ ಹರ್ಷವಾಯಿತು ಮತ್ತು ಹರ್ಷಾತಿರೇಕದಿಂದ ಪುನಃ ಹೀಗೆ ಹೇಳಿದನು.॥46॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರಇಪ್ಪತ್ತೈದನೆಯ ಸರ್ಗ ಪೂರ್ಣವಾಯಿತು.॥125॥