वाचनम्
ಭಾಗಸೂಚನಾ
ಶ್ರೀರಾಮನು ಭರದ್ವಾಜರ ಆಶ್ರಮದ ಬಳಿ ವಿಮಾನದಿಂದ ಇಳಿದು ಮಹರ್ಷಿಗಳನ್ನು ಸಂದರ್ಶಿಸಿ ಅವರಿಂದ ವರವನ್ನು ಪಡೆದುದು
ಮೂಲಮ್ - 1
ಪೂರ್ಣೇ ಚತುರ್ದಶೇ ವರ್ಷೇ ಪಂಚಮ್ಯಾಂ ಲಕ್ಷ್ಮಣಾಗ್ರಜಃ ।
ಭರದ್ವಾಜಾಶ್ರಮಂ ಪ್ರಾಪ್ಯ ವವಂದೇ ನಿಯತೋ ಮುನಿಮ್ ॥
ಅನುವಾದ
ಮನಸ್ಸನ್ನು ವಶದಲ್ಲಿರಿಸಿಕೊಂಡ ಶ್ರೀರಾಮನು ಹದಿನಾಲ್ಕು ವರ್ಷಗಳು ಮುಗಿದಾಗ ಪಂಚಮಿತಿಥಿಯಲ್ಲಿ ಭರದ್ವಾಜರ ಆಶ್ರಮಕ್ಕೆ ಹೋಗಿ ಮಹರ್ಷಿಗಳಿಗೆ ನಮಸ್ಕರಿಸಿದನು.॥1॥
ಮೂಲಮ್ - 2
ಸೋಽಪೃಚ್ಛದಭಿವಾದ್ಯೈನಂ ಭರದ್ವಾಜಂ ತಪೋಧನಮ್ ।
ಶೃಣೋಷಿ ಕಚ್ಚಿದ್ಭಗವನ್ ಸುಭಿಕ್ಷಾನಾಮಯಂಪುರೇ ।
ಕಚ್ಚಿತ್ಸ ಯುಕ್ತೋ ಭರತೋ ಜೀವಂತ್ಯಪಿ ಚ ಮಾತರಃ ॥
ಅನುವಾದ
ತಪಸ್ಸಿನ ನಿಧಿಯಾದ ಭರದ್ವಾಜ ಮುನಿಯನ್ನು ವಂದಿಸಿ ಶ್ರೀರಾಮನು ಕೇಳಿದನು- ಪೂಜ್ಯರೇ! ನೀವು ಅಯೋಧ್ಯೆಯ ಕುರಿತು ಏನಾದರೂ ಕೇಳಿರುವಿರಾ? ಅಲ್ಲಿ ಎಲ್ಲ ಕ್ಷೇಮ ತಾನೇ? ಭರತನು ಪ್ರಜಾಪಾಲನೆಯಲ್ಲಿ ತತ್ಪರನಾಗಿರುವನಲ್ಲ? ನನ್ನ ತಾಯಂದಿರು ಜೀವಂತರಾಗಿರುವವರಲ್ಲ.॥2॥
ಮೂಲಮ್ - 3
ಏವಮುಕ್ತಸ್ತು ರಾಮೇಣ ಭರದ್ವಾಜೋ ಮಹಾಮುನಿಃ ।
ಪ್ರತ್ಯುವಾಚ ರಘುಶ್ರೇಷ್ಠಂ ಸ್ಮಿತಪೂರ್ವಂ ಪ್ರಹೃಷ್ಟವತ್ ॥
ಅನುವಾದ
ಶ್ರೀರಾಮಚಂದ್ರನು ಹೀಗೆ ಕೇಳಿದಾಗ ಮಹಾಮುನಿ ಭರದ್ವಾಜರು ಮುಗುಳ್ನಕ್ಕು ರಾಮನಲ್ಲಿ ಹೇಳಿದರು.॥3॥
ಮೂಲಮ್ - 4
ಆಜ್ಞಾವಶತ್ವೇ ಭರತೋ ಜಟಿಲಸ್ತ್ವಾಂ ಪ್ರತೀಕ್ಷತೇ ।
ಪಾದುಕೇ ತೇಪುರಸ್ಕೃತ್ಯ ಸರ್ವಂ ಚ ಕುಶಲಂ ಗೃಹೇ ॥
ಅನುವಾದ
ರಘುನಂದನ ಭರತನು ನಿನ್ನ ಆಜ್ಞೆಗಧೀನನಾಗಿದ್ದಾನೆ. ಅವನು ಜಟೆ ಬೆಳೆಸಿಕೊಂಡು ನಿನ್ನ ಆಗಮವನ್ನು ಪ್ರತಿಕ್ಷಿಸುತ್ತಿದ್ದಾನೆ. ನಿನ್ನ ಚರಣಪಾದುಕೆಗಳನ್ನು ಎದುರಿಗೆ ಇಟ್ಟುಕೊಂಡು ಎಲ್ಲ ಕಾರ್ಯ ಮಾಡುತ್ತಿದ್ದಾನೆ. ನಿನ್ನ ಅರಮನೆಯಲ್ಲಿ ಮತ್ತು ಎಲ್ಲವೂ ಕ್ಷೇಮ.॥4॥
ಮೂಲಮ್ - 5
ತ್ವಾಂ ಪುರಾ ಚೀರವಸನಂ ಪ್ರವಿಶಂತಂ ಮಹಾವನಮ್ ।
ಸ್ತ್ರೀತೃತೀಯಂ ಚ್ಯುತಂ ರಾಜ್ಯಾದ್ಧರ್ಮಕಾಮಂ ಚ ಕೇವಲಮ್ ॥
ಮೂಲಮ್ - 6
ಪದಾತಿಂ ತ್ಯಕ್ತಸರ್ವಸ್ವಂ ಪಿತುನಿರ್ದೇಶಕಾರಿಣಮ್ ।
ಸರ್ವಭೋಗೈಃ ಪರಿತ್ಯಕ್ತಂ ಸ್ವರ್ಗಚ್ಯುತಮಿವಾಮರಮ್ ॥
ಮೂಲಮ್ - 7
ದೃಷ್ಟ್ವಾತು ಕರುಣಾ ಪೂರ್ವಂ ಮಮಾಸೀತ್ ಸಮಿತಿಂಜಯ ।
ಕೈಕೇಯೀ ವಚನೇ ಯುಕ್ತಂ ವನ್ಯಮೂಲ ಫಲಾಶಿನಮ್ ॥
ಅನುವಾದ
ಮೊದಲು ನೀನು ಮಹಾವನಕ್ಕೆ ಹೋಗುವಾಗ ನಾರುಮಡಿಯನ್ನು ಧರಿಸಿದ್ದೆ ಹಾಗೂ ನಿಮ್ಮಿಬ್ಬರ ಜೊತೆಗೆ ಮೂರನೆಯವಳಾಗಿ ನಿನ್ನ ಪತ್ನಿಯಿದ್ದಳು. ನೀನು ರಾಜ್ಯದಿಂದ ವಂಚಿತನಾಗಿ ಕೇವಲ ಧರ್ಮಪಾಲನೆಯ ಇಚ್ಛೆಯಿಂದ ಸರ್ವಸ್ವವನ್ನು ತ್ಯಜಿಸಿ ಪಿತೃವಾಕ್ಯ ಪರಿಪಾಲನೆಗಾಗಿ ಕಾಲ್ನಡಿಗೆಯಿಂದ ಹೋಗುತ್ತಿದ್ದೆ. ಎಲ್ಲ ಭೋಗಗಳಿಂದ ದೂರವಾಗಿ ಸ್ವರ್ಗದಿಂದ ಪತನವಾದ ದೇವತೆಯಂತೆ ಕಂಡುಬರುತ್ತಿದ್ದೆ. ಶತ್ರುವಿಜಯೀ ವೀರನೇ! ನೀನು ಕೈಕೇಯಿಯ ಆದೇಶದ ಪಾಲನೆಯಲ್ಲಿ ತತ್ಪರನಾಗಿ ಕಾಡಿನ ಫಲ-ಮೂಲಗಳನ್ನು ತಿನ್ನುತ್ತಿದ್ದೆ, ಆಗ ನಿನ್ನನ್ನು ನೋಡಿ ನನ್ನ ಮನಸ್ಸಿನಲ್ಲಿ ಭಾರೀ ಕರುಣೆ ಇತ್ತು.॥5-7॥
ಮೂಲಮ್ - 8
ಸಾಂಪ್ರತಂ ತು ಸಮೃದ್ಧಾರ್ಥಂ ಸಮಿತ್ರಗಣಬಾಂಧವಮ್ ।
ಸಮೀಕ್ಷ್ಯವಿಜಿತಾರಿಂ ಚ ಮಮಾಭೂತ್ಪ್ರೀತಿರುತ್ತಮಾ ॥
ಅನುವಾದ
ಆದರೆ ಈಗಲಾದರೋ ಎಲ್ಲ ಸ್ಥಿತಿ ಬದಲಾಗಿದೆ. ನೀನು ಶತ್ರುವನ್ನು ಗೆದ್ದು, ಸಲ ಮನೋರಥನಾಗಿ ಮಿತ್ರರು ಮತ್ತು ಬಂಧುಗಳೊಂದಿಗೆ ಮರಳುತ್ತಿರುವೆ. ಈ ರೂಪದಲ್ಲಿ ನಿನ್ನನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ.॥8॥
ಮೂಲಮ್ - 9
ಸರ್ವಂ ಚ ಸುಖದುಃಖಂ ತೇ ವಿದಿತಂ ಮಮ ರಾಘವ ।
ಯತ್ತ್ವಯಾ ವಿಪುಲಂ ಪ್ರಾಪ್ತಂ ಜನಸ್ಥಾನ ನಿವಾಸಿನಾ ॥
ಅನುವಾದ
ರಘುವೀರನೇ! ನೀನು ಜನಸ್ಥಾನದಲ್ಲಿ ಇದ್ದು ಅನುಭವಿಸಿದ ಸುಖ-ದುಃಖಗಳೆಲ್ಲ ನನಗೆ ತಿಳಿದಿದೆ.॥9॥
ಮೂಲಮ್ - 10
ಬ್ರಾಹ್ಮಣಾರ್ಥೇ ನಿಯುಕ್ತಸ್ಯ ರಕ್ಷತಃ ಸರ್ವತಾಪಸಾನ್ ।
ರಾವಣೇನ ಹೃತಾ ಭಾರ್ಯಾ ಬಭೂವೇಯಮನಿಂದಿತಾ ॥
ಅನುವಾದ
ಅಲ್ಲಿ ಇದ್ದು ನೀನು ಬ್ರಾಹ್ಮಣರ ಕಾರ್ಯದಲ್ಲಿ ಸಂಲಗ್ನವಾಗಿ ಸಮಸ್ತ ತಪಸ್ವೀ ಮುನಿಗಳನ್ನು ರಕ್ಷಿಸುತ್ತಿದ್ದೆ. ಆಗ ರಾವಣನು ನಿನ್ನ ಈ ಸೀತೆಯನ್ನು ಅಪಹರಿಸಿದ್ದನು.॥10॥
ಮೂಲಮ್ - 11
ಮಾರೀಚ ದರ್ಶನಂ ಚೈವ ಸೀತೋನ್ಮಥನಮೇವ ಚ ।
ಕಬಂಧ ದರ್ಶನಂ ಚೈವ ಪಂಪಾಭಿಗಮನಂ ತಥಾ ॥
ಮೂಲಮ್ - 12
ಸುಗ್ರೀವೇಣ ಚ ತೇ ಸಖ್ಯಂ ಯಚ್ಚ ವಾಲೀ ಹತಸ್ತ್ವಯಾ ।
ಮಾರ್ಗಣಂ ಚೈವ ವೈದೇಹ್ಯಾಃ ಕರ್ಮ ವಾತಾತ್ಮಜಸ್ಯ ಚ ॥
ಮೂಲಮ್ - 13
ವಿದಿತಾಯಾಂ ಚ ವೈದೇಹ್ಯಾಂ ನಲಸೇತುರ್ಯಥಾ ಕೃತಃ ।
ಯಥಾ ಚಾ ದೀಪಿತಾ ಲಂಕಾ ಪ್ರಹೃಷ್ಟೈರ್ಹರಿಯೂಥಪೈಃ ॥
ಮೂಲಮ್ - 14
ಸಪುತ್ರಬಾಂಧವಾಮಾತ್ಯಃ ಸಬಲಃ ಸಹವಾಹನಃ ।
ಮೂಲಮ್ - 15½
ಯಥಾ ಚ ನಿಹತೇ ತಸ್ಮಿನ್ ರಾವಣೇ ದೇವಕಂಟಕೇ ।
ಸಮಾಗಮಶ್ಚ ತ್ರಿದಶೈರ್ಯಥಾ ದತ್ತಶ್ಚ ತೇ ವರಃ ॥
ಸರ್ವಂ ಮಮೈತದ್ವಿದಿತಂ ತಪಸಾ ಧರ್ಮವತ್ಸಲ ।
ಅನುವಾದ
ಧರ್ಮವತ್ಸಲ! ಮಾರೀಚನು ಕಪಟಮೃಗವಾಗಿ ಕಾಣಿಸಿಕೊಳ್ಳುವುದು, ಸೀತೆಯ ಬಲವಂತವಾಗಿ ಅಪಹರಣವಾಗುವುದು, ಆಕೆಯನ್ನು ಹುಡುಕುವಾಗ ದಾರಿಯಲ್ಲಿ ಕಬಂಧನು ಸಿಗುವುದು, ನೀನು ಪಂಪಾ ಸರೋವರಕ್ಕೆ ಹೋಗುವುದು, ಸುಗ್ರೀವನೊಂದಿಗೆ ಮೈತ್ರಿ ಏರ್ಪಡುವುದು, ನಿನ್ನ ಕೈಯಿಂದ ವಾಲಿಯು ಹತನಾಗುವುದು, ಸೀತಾನ್ವೇಷಣ, ಹನುಮಂತನ ಅದ್ಭುತ ಕಾರ್ಯ, ಸೀತೆಯ ಶೋಧವಾದ ಬಳಿಕ ನಳನಿಂದ ಸಮುದ್ರದ ಮೇಲೆ ಸೇತುನಿರ್ಮಾಣ, ಹರ್ಷೋತ್ಸಾಹ ತುಂಬಿದ ವಾನರ ದಳಪತಿಗಳಿಂದ ಲಂಕಾದಹನ, ಪುತ್ರ, ಬಂಧು, ಮಂತ್ರಿ, ಸೈನ್ಯ ಮತ್ತು ವಾಹನಗಳ ಸಹಿತ ಬಲಾಭಿಮಾನೀ ರಾವಣನ ವಧೆ ನಿನ್ನಿಂದಾದುದು, ಆ ದೇವ ಕಂಟಕ ರಾವಣನು ಹತನಾದಾಗ ದೇವತೆಗಳೊಂದಿಗೆ ನಿನ್ನ ಸಮಾಗಮ, ಅವರು ನಿನಗೆ ವರ ಕೊಟ್ಟಿದ್ದು - ಇವೆಲ್ಲ ಸಂಗತಿಗಳು ತಪಸ್ಸಿನ ಪ್ರಭಾವ ದಿಂದ ನನಗೆ ತಿಳಿದಿದೆ.॥11-15½॥
ಮೂಲಮ್ - 16
ಸಂಪತಂತಿ ಚ ಮೇ ಶಿಷ್ಯಾಃ ಪ್ರವೃತ್ತ್ಯಾಖ್ಯಾಃ ಪುರೀಮಿತಃ ॥
ಮೂಲಮ್ - 17
ಅಹಮಪ್ಯತ್ರ ತೇ ದದ್ಮಿ ವರಂ ಶಸ್ತ್ರಭೃತಾಂ ವರ ।
ಅರ್ಘ್ಯಂ ಪ್ರತಿಗೃಹಾಣೇದಮಯೋಧ್ಯಾಂ ಶ್ವೋ ಗಮಿಷ್ಯಸಿ ॥
ಅನುವಾದ
ಪವೃತ್ತಿ ಎಂಬ ನನ್ನ ಶಿಷ್ಯರು ಇಲ್ಲಿಂದ ಅಯೋಧ್ಯೆಗೆ ಹೋಗುತ್ತಾ ಇರುತ್ತಾರೆ. ಅದರಿಂದ ಅಲ್ಲಿಯ ವೃತ್ತಾಂತ ನನಗೆ ತಿಳಿಯುತ್ತಾ ಇರುತ್ತವೆ. ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಶ್ರೀರಾಮ! ಇಲ್ಲಿ ನಾನೂ ನಿನಗೆ ಒಂದು ವರ ಕೊಡುತ್ತೇನೆ. ನಿನಗೆ ಇಚ್ಛಿತವಾದ ವರವನ್ನು ಕೇಳಿಕೋ. ಇಂದು ನನ್ನ ಅರ್ಘ್ಯ-ಆತಿಥ್ಯ ಸ್ವೀಕರಿಸಿ, ನಾಳೆ ಬೆಳಿಗ್ಗೆ ಅಯೋಧ್ಯೆಗೆ ತೆರಳು.॥16-17॥
ಮೂಲಮ್ - 18
ತಸ್ಯ ತಚ್ಛಿರಸಾ ವಾಕ್ಯಂ ಪ್ರತಿಗೃಹ್ಯ ನೃಪಾತ್ಮಜಃ ।
ಬಾಢಮಿತ್ಯೇವ ಸಂಹೃಷ್ಟಃ ಶ್ರೀಮಾನ್ವರಮಯಾಚತ ॥
ಅನುವಾದ
ಮುನಿಯ ಮಾತನ್ನು ಶಿರಸಾವಹಿಸಿ ಹರ್ಷಗೊಂಡ ಶ್ರೀಮಾನ್ ರಾಜಕುಮಾರ ಶ್ರೀರಾಮನು ‘ಹಾಗೆಯೇ ಆಗಲಿ’ ಎಂದು ಹೇಳಿ, ಅವರಲ್ಲಿ ಈ ವರ ಕೇಳಿದನು.॥18॥
ಮೂಲಮ್ - 19½
ಅಕಾಲಲಿನೋ ವೃಕ್ಷಾಃ ಸರ್ವೇ ಚಾಪಿ ಮಧುಸ್ರವಾಃ ।
ಫಲಾನ್ಯಮೃತಗಂಧೀನಿ ಬಹೂನಿ ವಿವಿಧಾನಿ ಚ ॥
ಭವಂತು ಮಾರ್ಗೇ ಭಗವನ್ನಯೋಧ್ಯಾಂ ಪ್ರತಿಗಚ್ಛತಃ ।
ಅನುವಾದ
ಪೂಜ್ಯರೇ! ಇಲ್ಲಿಂದ ಅಯೋಧ್ಯೆಗೆ ಹೋಗುವಾಗ ದಾರಿಯಲ್ಲಿ ಎಲ್ಲ ವೃಕ್ಷಗಳಲ್ಲಿ ಅಕಾಲದಲ್ಲಿಯೂ ಫಲಗಳು ತುಂಬಿರಲಿ ಹಾಗೂ ಅವೆಲ್ಲವೂ ಜೇನು ಸುರಿಸುವಂತಾಗಲಿ. ಅವುಗಳಲ್ಲಿ ನಾನಾ ಪ್ರಕಾರದ ಅನೇಕ ಅಮೃತೋಪಮ ಸುಗಂಧಿತ ಫಲಗಳು ಬಿಡಲಿ.॥19½॥
ಮೂಲಮ್ - 20½
ತಥೇತಿ ಚ ಪ್ರತಿಜ್ಞಾತೇ ವಚನಾತ್ಸಮನಂತರಮ್ ॥
ಅಭವನ್ ಪಾದಪಾಸ್ತತ್ರ ಸ್ವರ್ಗಪಾದಪಸನ್ನಿಭಾಃ ।
ಅನುವಾದ
ಭರಧ್ವಾಜರು ‘ಹಾಗೆಯೇ ಆಗಲಿ’ ಎಂದು ಹೇಳುತ್ತಲೇ ತತ್ಕಾಲ ಅಲ್ಲಿಯ ಎಲ್ಲ ವೃಕ್ಷಗಳು ಸ್ವರ್ಗೀಯ ವೃಕ್ಷಗಳಂತೆ ಆಗಿ ಹೋದುವು.॥20½॥
ಮೂಲಮ್ - 21
ನಿಷ್ಫಲಾಃ ಫಲಿನಶ್ಚಾಸನ್ವಿಪುಷ್ಪಾಃ ಪುಷ್ಪಶಾಲಿನಃ ॥
ಮೂಲಮ್ - 22
ಶುಷ್ಕಾಃ ಸಮಗ್ರಪತ್ರಾಸ್ತೇ ನಗಾಶ್ಚೈವ ಮಧುಸ್ರವಾಃ ।
ಸರ್ವತೋ ಯೋಜನಾಸ್ತಿಸ್ರೋ ಗಚ್ಛತಾಮಭವಂ ಸ್ತದಾ ॥
ಅನುವಾದ
ಫಲಗಳಿಲ್ಲದ ಮರಗಳಲ್ಲಿ ಫಲಗಳು ಉಂಟಾದವು. ಹೂವುಗಳಿದವುಗಳಲ್ಲಿ ಹೂ ಬಿಟ್ಟವು. ಒಣಗಿ ಹೋದ ಮರಗಳೂ ಹಸಿರು ಎಲೆಗಳಿಂದ ಚಿಗುರಿಕೊಂಡವು. ಅವೆಲ್ಲ ವೃಕ್ಷಗಳು ಮಧುವಿನ ಧಾರೆ ಹರಿಸತೊಡಗಿದವು. ಅಯೋಧ್ಯೆಗೆ ಹೋಗುವ ದಾರಿಯ ಅಕ್ಕಪಕ್ಕಗಳಲ್ಲಿ ಮೂರು ಯೋಜನಗಳವರೆಗೆ ಮರಗಳು ಹೀಗೆ ಆದುವು.॥21-22॥
ಮೂಲಮ್ - 23
ತತಃ ಪ್ರಹೃಷ್ಟಾಃ ಪ್ಲವಗರ್ಷಭಾಸ್ತೇ
ಬಹೂನಿ ದಿವ್ಯಾನಿ ಫಲಾನಿ ಚೈವ ।
ಕಾಮಾದುಪಾಶ್ನಂತಿ ಸಹಸ್ರಶಸ್ತೇ
ಮುದಾನ್ವಿತಾಃ ಸ್ವರ್ಗಜಿತೋ ಯಥೈವ ॥
ಅನುವಾದ
ಮತ್ತೆ ಆ ಸಾವಿರಾರು ಶ್ರೇಷ್ಠ ವಾನರರು ಹರ್ಷಗೊಂಡು ಸ್ವರ್ಗವಾಸಿ ದೇವತೆಗಳಂತೆ ತಮ್ಮ ರುಚಿಗನುಸಾರ ಸಂತೋಷದಿಂದ ಆ ಅನಂತದಿವ್ಯ ಫಲಗಳ ಆಸ್ವಾದ ಪಡೆಯ ತೊಡಗಿದರು.॥23॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ನೂರ ಇಪ್ಪತ್ತನಾಲ್ಕನೆಯ ಸರ್ಗ ಪೂರ್ಣವಾಯಿತು.॥124॥